ಮಳೆ

“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ”

ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. ಓದುವ ನಟನೆ ಮಾಡುತ್ತಿದ್ದ ಅವಳ ಕಣ್ಣುಗಳು ಕಿಡಕಿಯ ಹೊರಗಿನ ಕತ್ತಲೆಯೆಡೆಗೆ ಹೊರಳಿದವು. ಹಣೆ ಗಂಟಿಕ್ಕಿಕೊಂಡಿತು. ಹೊರಗಿನ ಗುಡುಗಿನ ಸಪ್ಪಳದೊಡನೆ ಥಟ್ಟನೆ ಅವಳಿಂದ ದನಿ ಹೊರಟಿತು.
“ಇನ್ನೂ ನಿದ್ದೆ ಬಂದಿಲ್ಲ ನನಗೆ. ನೀವು ಸುಮ್ಮನೆ ಮಲಕೊಳ್ಳಿರಿ ನೋಡೋಣ. ನನಗೆ ನಿದ್ದೆ ಬಂದಾಗ ನಾನು ಮಲಕೊಳ್ಳತೀನಿ. ನನ್ನ ಕಾಳಜಿ ಬೇಡ ನಿಮಗ.”
ಒಂದು ಬಗೆಯ ಕಾಠಿಣ್ಯ ಆ ಧ್ವನಿಯಲ್ಲಿ ಹೆಣಕಿ ಹಾಕುತ್ತಿತ್ತು. ಶ್ಯಾಮನಿಗೆ ಅದರ ಅರಿವಾಯಿತೋ ಇಲ್ಲವೋ, ಆತ ಅವಳೆಡೆಗೆ ಒಂದು ತೀಕ್ಷ್ಣವಾದ ನೋಟ ಬೀರಿ, ಮುಖ ಕಿವುಚಿ, ಮಗ್ಗಲು ಹೊರಳಿಸಿ ಮಲಗಿದ. ಮಗ್ಗಲು ಹೊರಳಿಸಿವಾಗ ಆದ ಸಣ್ಣ ಸದ್ದನ್ನು ಕೇಳಿ ಸುಶೀಲೆ ಅತ್ತ ದೃಷ್ಟಿ ಹೊರಳಿಸಿದಳು. ಅವಳ ದೃಷ್ಟಿಯಲ್ಲಿ ತಿರಸ್ಕಾರದ ಕಹಿ ಬೆರೆತಿತ್ತು. ಒಮ್ಮೆಲೆ ಅವಳ ತಲೆಯ ಮೂಲೆಯೊಂದರಲ್ಲಿ ಒಂದು ವಿಚಾರ ಮಿಂಚಾಡಿತು.

‘ಈಗಲೇ ಹೋಗಿ ಇವನ ಬೆನ್ನಲ್ಲಿ ಚಾಕುವಿನಿಂದ ಇರಿದರೆ ಹೇಗೆ?’

ಬೆಚ್ಚಿ ಬಿದ್ದಳು ಸುಶೀಲೆ, ಅವಳ ವಿಚಾರದ ಮೊನೆ ಅವಳಿಗೇ ತಿವಿದಂತೆ! ‘ಅಯ್ಯೋ, ನನ್ನ ತಲೆಯಲ್ಲಿ ಇಂಥ ಕೆಟ್ಟ ಕೆಟ್ಟ ವಿಚಾರಗಳೇಕೆ ಬರುತ್ತಿವೆ ಇಂದು!’ ಮರಳಿ ಕಿಡಕಿಯ ಹೊರಗೆ ದೃಷ್ಟಿ ನೆಲೆಸಿದಳು. ಹೊರಗೆ ಸಣ್ಣಾಗಿ ಮಳೆ ಬೀಳುತ್ತಲೇ ಇತ್ತು. ಆದಿನ ಮುಂಜಾನೆ ಪ್ರಾರಂಭವಾದ ಮಳೆ ರಾತ್ರೆಯಾದರೂ ನಿಂತಿರಲಿಲ್ಲ. ಆಗಾಗ್ಗೆ ಝಗ್ಗೆನ್ನುವ ಮಿಂಚಿನಾಟ ರುದ್ರರಮ್ಯವಾಗಿ ತೋರಿತು ಸುಶೀಲೆಗೆ. ‘ಇಲ್ಲ, ನಾನೇ ಓಡಿಹೋಗಬೇಕು-ಈ ಮನೆಯಿಂದ ದೂರ, ಹೊರಗೆ-ಮಳೆಯಲ್ಲಿ, ಮಿಂಚಿನ ಬೆಳಕಿನಲ್ಲಿ, ಕತ್ತಲಲ್ಲಿ, ಅಲ್ಲಿ ಸಿಡಿಲಿನ ಹೊಡೆತಕ್ಕೆ ಸಿಕ್ಕು ಸಾಯಬೇಕು, ಎಂಥ ಹುಚ್ಚು ವಿಚಾರಗಳು. ಅಯ್ಯೋ, ಈ ಮಿದುಳುಯಂತ್ರ ಹೇಗೆ ನಿಲ್ಲಿಸಲಿ?’-ಕೂಡಲೇ ಟೇಬಲ್ ಮೇಲಿನ ಮಾಸಿಕವನ್ನೆತ್ತಿಕೊಂಡು ಅದರ ಹಾಳಿಗಳನ್ನು ಭರಭರನೆ ತಿರುವತೊಡಗಿದಳು. ದೃಢನಿಶ್ಚಯದಿಂದ ಒಂದು ಕತೆ ಓದಲು ಪ್ರಾರಂಭಿಸಿದಳು. ಅದರ ತಲೆ ಬರಹ ಅವಳಿಗೆ ಸೇರಲಿಲ್ಲ. ‘ಪ್ರೇಮದಾಹ’… ‘ಸುಟ್ಟು ಬರಲಿ ಈ ಪ್ರೇಮಕ್ಕೆ!’ ಆದರೂ ಬೆರಳು ಮುಂದಿನ ಹಾಳಿಗಳನ್ನು ಅರ್ಧ ಎತ್ತಿದ್ದರೂ ಕಣ್ಣು ಆ ಕತೆಯನ್ನು ಓದಲು ತೊಡಗಿದ್ದವು. ಅದರ ಪ್ರಾರಂಭ ಓದಿ ಅವಳಿಗೆ ಸಿಟ್ಟು ಬಂದಿತು. ಅದರಲ್ಲಿ ಒಂದು ಸಂಜೆಯ ವರ್ಣನೆ ಇತ್ತು, ತೀರ ಕಾವ್ಯಮಯವಾದದ್ದು. ಆ ದಿವ್ಯ ಸಂಜೆಯ ಭವ್ಯ ವಾತಾವರಣದಲ್ಲಿ ಒಂದು ಪ್ರೇಮಿಯುಗಲ, ಪ್ರೇಮ, ಸರ್ಯ, ಜೀವನ, ಅನಂತತೆ ಎಂದೇನೋ ಕಾವ್ಯ ಮಯವಾಗಿ ಮಾತನಾಡುತ್ತಿತ್ತು. ಅದರ ರಸಭರಿತ ವರ್ಣನೆ ಸುಶೀಲೆಗೆ ಕೃತಕವೆನಿಸಿತು. ‘ಇಂಥ ಅಸಹ್ಯ ವರ್ಣನೆಯಿಲ್ಲದೆ ಇವರಿಗೆ ಕತೆ ಬರೆಯಲು ಬರುವುದಿಲ್ಲವೇನೋ?’ ಎಂಬ ಯೋಚನೆಯ ಜೊತೆಗೆ ಅವಳ ಬೆರಳುಗಳು ಆ ಪುಟವನ್ನು ತಿರುಗಿಸಿದವು. ಓದುವುದೇ ಬೇಡವೆನಿಸಿತು. ಮತ್ತೆ ಕಿಡಕಿಯ ಹೊರಗೆ ದೃಷ್ಟಿಹೋಯಿತು. ಕತ್ತಲೆಯಲ್ಲಿಯ ಮಳೆ ಅವಳಿಗೆ ತನ್ನ ಮನಸ್ಸಿನ ಪ್ರತಿಬಿಂಬದಂತೆ ತೋರಿರಬೇಕು! ಅಷ್ಟರಲ್ಲಿ ಒಂದು ಮಿಂಚು ಬೆಳಕು ಬೀರಿ ಸರ್ರನೆ ಮಾಯವಾಯಿತು.
‘ಅವನೆಲ್ಲಿರಬಹುದು? ಪುಣೆಯಲ್ಲಿಯ ಯಾವುದೋ ಕಾಲೇಜಿನಲ್ಲಿ ಪ್ರಾಧ್ಯಾಪಕನತೆ.’ ಅವಳ ಕಣ್ಣೆದುರಿಗೆ ತಾನು ಹಿಂದೆ ಮನಸ್ಸಿನಲ್ಲಿ ಆಗಾಗ್ಗೆ ಕಟ್ಟಿದ ಒಂದು ಕನಸು-ಚಿತ್ರ ಬಂದು ನಿಂತಿತು.
ಶ್ರೀಧರ ಟೇಬಲ್ ಹತ್ತಿರ ನಿಂತು ಎಫ್.ವಾಯ್.ಕ್ಲಾಸಿಗೆ ಇಂಗ್ಲೀಷು ಕಲಿಸುತ್ತಿದ್ದಾನೆ. ಯಾವುದೋ ಒಂದು ಕವಿತೆಯನ್ನು ಓದಿ ಅದರ ಅರ್ಥವನ್ನು ರಸಭರಿತವಾಗಿ ಹೇಳುತ್ತಿದ್ದಾನೆ. ತಾನು ಸುಶೀಲೆ ಕೌತುಕದಿಂದ ಆತನೆಡೆಗೆ ನಿಟ್ಟಿಸುತ್ತಿದ್ದಾಳೆ. ಶ್ರೀಧರನ ದೃಷ್ಟಿ ಮೇಲಿಂದ ಮೇಲೆ ಅವಳೆಡೆಗೆ ಹೊರಳುತ್ತದೆ. ಅ ದೃಷ್ಟಿಗೆ ಉತ್ತರವೆಂದು ಅವಳು ಮಂದಸ್ಮಿತ ಬೀರುತ್ತಾಳೆ.
ಆ ಚಿತ್ರದ ಬೆಂಬತ್ತಿ ಇನ್ನೂ ಎಷ್ಟೋ ತುಣುಕು ಕನಸುಗಳು ಮಸುಮಸುಕಾಗಿ ಜಾರಿ ಹೋದವು. ಅಷ್ಟರಲ್ಲಿ ಶ್ಯಾಮನ ಗೊರಕೆ ಕೇಳಿಬಂತು. ಸುಶೀಲೆಯ ಕಣ್ಣುಗಳಲ್ಲಿ ನೀರಿನ ಪರದೆಯೊಂದು ತೂರಿ ಬಂತು.
ಇನ್ನೇಕ ಆ ಕನಸುಗಳು? ತನ್ನ ಬಾಳು ಇಲ್ಲಿ ಹುದುಗಿದಾಗ, ಇಲ್ಲಿಂದ ಬಿಡುಗಡೆಯ ದಾರಿಯೇ ಇಲ್ಲದಾಗ ಇನ್ನೇಕೆ ಆ ಕನಸುಗಳು?
ಮರಳಿ ಕೈಯಲ್ಲಿಯ ಮಾಸಿಕ ಪುಟಗಳನ್ನು ತಿರುವಹತ್ತಿದಳು. ಒಂದು ವ್ಯಂಗ್ಯಚಿತ್ರ ಕಣ್ಣಿಗೆ ಬಿತ್ತು. ಒಂದು ಗಾರ್ಡನ್ ಬೆಂಚಿನಮೇಲೆ ಒಂದು ತುದಿಗೆ ಒಂದು ಹೆಣ್ಣು, ಮತ್ತೊಂದು ತುದಿಗೆ ಒಂದು ಗಂಡು, ಆ ಹೆಣ್ಣು ಒಂದು ನಾಯಿಯ ಕುನ್ನಿಗೆ ಮುದ್ದು ಕೊಡುತ್ತಿರುವುದನ್ನು ಆ ಗಂಡು ಆಯೆಂದು ಬಾಯಿ ಬಿಟ್ಟು ತುದಿಗಣ್ಣಿನಿಂದ ನೋಡುತ್ತಿದ್ದಾನೆ.
ಸುಶೀಲೆಯ ಮೊಗದ ಮೇಲೆ ಹುಚ್ಚು ನಗೆ ಮೂಡಿಬಂತು. ಮಲಗಿದ ಗಂಡನ ಕಡೆಗೊಮ್ಮೆ ನೋಡಿದಳು. ಅವಳ ನೋಟದಲ್ಲಿ ತಿರಸ್ಕಾರದ ಅಲಗು ಮಿಂಚುತ್ತಿತ್ತು. ‘ಈತನಿಗೆ ಅಂದು ನಾನು ಮುದ್ದು ಕೊಟ್ಟೆ. ಮುದ್ದು ಕೊಟ್ಟು ದಾಸಿಯಾದೆ. ನನ್ನ ಹೃದಯವನ್ನು ಸುಟ್ಟು ಬೂದಿ ಮಾಡಿದೆ. ಅಯ್ಯೋ, ನನ್ನ ಹಾಳು ದೈವ! ಒಂದು ತಪ್ಪು ಮುಚ್ಚಲು ಇನ್ನೊಂದು ತಪ್ಪು! ನನ್ನನ್ನು ನಾನೇ ಕೊಂದೆ!’
ಅವಳ ಕಣ್ಣೆದುರಿಗೆ, ಹಿಂದೆ ಯಾವುದೋ ಚಿತ್ರಪಟದಲ್ಲಿ, ತನ್ನ ಎದೆಯಲ್ಲಿ ತಾನೇ ಚೂರಿ ಚುಚ್ಚುಕೊಂಡು, ರಕ್ತದ ಮಡುವಿನಲ್ಲಿ ಬಿದ್ದ ನರ್ಗೀಸಳ ಚಿತ್ರ ಹಾಯ್ದುಹೋಯಿತು. ಅದರಿಂದ ಒಂದು ಬಗೆಯ ವಿಲಕ್ಷಣ ಭಾವನೆಯಿಂದ ಅವಳ ಮೈ ಜುಮ್ಮೆಂದಿತು. ಹಿಂದೊಂದು ಸಲ ಶ್ರೀಧರನು, ‘ಇಂದೇ ಇದೇ ಗಳಿಗೆಗೆ, ಇದೇ ನಿಮಿಷಕ್ಕೆ ನನ್ನ ಪ್ರಾಣ ಹಾರಿ ಹೋದರೆ ಎಷ್ಟು ಚನ್ನು!’ ಎಂದು ಹೇಳಿ ಅವಳ ತುಟಿಗೆ ತುಟಿಯೊತ್ತಿದ ರಸನಿಮಿಷದ ನೆನಪಾಯಿತು…..
ಆ ನೆನಪಿನ ಅನುಭವದೊಂದಿಗೆ ಇನ್ನೊಂದು ಭಾವನೆ ಮನದೆದುರು ಬಂದಿತು-‘ಶ್ರೀಧರನು ನಿಜವಾಗಿ ನನ್ನನ್ನು ಪ್ರೀತಿಸುತ್ತಿದ್ದಿಲ್ಲ…ಇಲ್ಲಿ ಸೂಟಿಗೆ ಬಂದಾಗ ವೇಳೆ ಕಳಿಯಲು ನನ್ನೊಡನೆ ಚಲ್ಲಾಟವಾಡುತ್ತಿದ್ದ… ಅವನು ಎಂದೂ ಅಷ್ಟೊಂದು ಆಸ್ಥೆಯಿಂದ ಮನಬಿಚ್ಚಿ ಮಾತನಾಡದೆ ಬರಿಯ ಒಣ ನಗೆನಾಚಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದ…ಆತನ ಮುಖದಲ್ಲಿ ಎಂಥ ಮೋಹಕತೆ ಇತ್ತು!… ನನ್ನನ್ನೆಂದಿಗೂ ಮೋಸ ಮಾಡಲಾರ ಎಂದು ಬಗೆದಿದ್ದೆ. ಆದರೆ ಅವನದೇನು ತಪ್ಪು? ನಾನಾಗಿಯೇ ಅವನನ್ನು ಬಲೆಯಲ್ಲಿ ಹಾಕಲು ಯತ್ನಿಸಿದೆ. ಎಲ್ಲ ನನ್ನದೇ ತಪ್ಪು! ಅಯ್ಯೋ ಅವಲ ಸಲುವಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದೆ. ಅವನೊಡನೆ ಎಲ್ಲಿ ಬೇಕಲ್ಲಿ ಹೋಗಲು ಸಿದ್ಧಳಿದ್ದೆ-ಮಳೆಯಲ್ಲಿ, ಮಿಂಚಿನ ಬೆಳಕಿನಲ್ಲಿ, ಕತ್ತಲ್ಲಲ್ಲಿ.’
ಮಳೆಯ ಜೋರು ಕೊಂಚ ಹೆಚ್ಚಾಗಿತ್ತು. ಗಾಳಿಯೂ ಭರ್ರನೆ ಬೀಸುತ್ತಿತ್ತು. ಕಿಡಕಿಯ ಬಾಗಿಲು ಧಡ್ಡನೆ ಮುಚ್ಚಿ ತೆರೆಯಿತು. ಎದ್ದು ಹೋಗಿ ಅದನ್ನು ಮುಚ್ಚಿ ಬಂದಳು. ಬರುವಾಗ ಕಪಾಟಿನಲ್ಲಿಟ್ಟ ಶ್ರೀಧರನ ಅಂದೇ ಬಂದ ಪತ್ರವನ್ನು ಮತ್ತೊಮ್ಮೆ ಓದಬೇಕೆನಿಸಿತು. ‘ಶ್ರೀಧರನಿಗೆ ದುಂಬಾಲು ಬಿದ್ದು ಬೇಡಿಕೊಂಡಿದ್ದರೆ, ಅಥವಾ ಹಾಂ, ಬೆದರಿಕೆ ಹಾಕಿದ್ದರೆ, ಅವನು ಒಪ್ಪಬಹುದಾಗಿತ್ತೇನೋ… ಆದರೆ ನನ್ನ ಸ್ವಾಭಿಮಾನ… ನನ್ನನ್ನು ಮೋಸಗಾರ್ತಿ ಎಂದು ಆತ ನನ್ನ ಜೀವವಿರುವತನಕ ದೂಷಿಸದೆ ಬಿಡುತ್ತಿದ್ದಿಲ್ಲ… ಆದದ್ದು ಒಳ್ಳೆಯದಕ್ಕೆ ಆಗಿದೆಯೇನೋ!’ ಕಪಾಟಿನ ಮೂಲೆಯಲ್ಲಿಯ ಹರಕು ಪುಸ್ತಕವೊಂದರಲ್ಲಿ ತುರುಕಿದ ಆ ಪತ್ರವನ್ನು ತರಲು ಮೆಲ್ಲನೆ ಎದ್ದಳು. ಶ್ಯಾಮ ಇನ್ನೂ ಗೊರಕೆ ಹೊಡೆಯುತ್ತಲೇ ಇದ್ದ. ಅವನ ಮೇಲಿನ ಚಾದರ ಅಸ್ತವ್ಯಸ್ತವಾಗಿ ಅವನ ಕಾಲ್ಕೆಳಗೆ ಹೋಗಿ ಬಿದ್ದಿದ್ದಿತು.
‘ಇಂದು ಅಲ್ಲಿ ಶ್ರೀಧರನಿದ್ದಿದ್ದರೆ ಆ ಚಾದರವನ್ನು ನಯವಾಗಿ ಪ್ರೀತಿಯಿಂದ ಅವನ ಮೈಮೇಲೆ ಹೊದ್ದಿಸುತ್ತಿದ್ದೆನಲ್ಲವೇ? ಹೊದ್ದಿಸುವಾಗ ಆತ ಒಮ್ಮೆಲೆ ಎಚ್ಚರಾಗಿ ನನ್ನನ್ನು ನೋಡಿ, ಸರ್ರನೆ ಜಗ್ಗಿ, ನನ್ನನ್ನು….ಮತ್ತೆ ಹಾಳು ಕನಸು!’
ಕಪಾಟಿನ ಬಾಗಿಲು ತೆರೆಯುವಾಗ ಸಪ್ಪಳಕ್ಕೆ ಗೊರಕೆ ಒಮ್ಮೆಲೆ ನಿಂತಿತು. ಸುಶೀಲೆ ಹಿಂದಿರುಗಿ ನೋಡಿ ಶ್ಯಾಮ ಎಚ್ಚೆತ್ತಿದ್ದ.
“ಏನೇ, ಎಷ್ಟು ಹೊತ್ತದು? ದೀಪಿದ್ದರ ನನಗ ನಿದ್ದೀನ ಛಲೋ ಹತ್ತೋದಿಲ್ಲ. ಮಲಕೊಳ್ಳಬಾರದ?… ಅಯ್ಯೊ, ಇನ್ನೂ ಕಪಾಟಿನಲ್ಲಿಯ ಪುಸ್ತಕ ಬ್ಯಾರೆ ಓದಬೇಕ?” ಎಂದು ಗೊಣಗುಟ್ಟಿದ ಸುಶೀಲೆ ತುಡುಗಿಯಂತೆ ಅಲ್ಲಿಯೇ ಸ್ತಂಭಿತಳಾಗಿ ನಿಂತಳು. ಅಷ್ಟರಲ್ಲಿ ಶ್ಯಾಮ ಸಂಪೂರ್ಣ ಎಚ್ಚೆತ್ತಿದ್ದ. ಎದ್ದು ಕುಳಿತ.
“ಕಾಲೇಜಿಗೆ ಹೋದರ ಎಷ್ಟು ಓದುತ್ತಿದ್ದಿಯೋ ಏನೋ? ಛಲೋ ಸ್ಕಾಲರಳಾಗಿ ಬಿಡತ್ತಿದ್ದಿಯಂತ ಕಣಿಸ್ತದ… ಹುಂ, ಸಾಕು ನಿನ್ನ ಓದು. ಬಂದಬೀಳಬಾರದ! ಓದಿಯಂತ-ನಾಳೆ!”… ಸಿಟ್ಟಿನ ಮೊನೆ ಆ ಮಾತಿನಲ್ಲಿ ಸ್ಪಷ್ಟವಾಗಿ ಕಾಣುತಿತ್ತು.
ಸುಶೀಲಳಿಗೂ ಮನೆ ಬಿಟ್ಟು ಓಡಿ ಹೋಗುವಷ್ಟು ಸಿಟ್ಟು ಬಂತು. ಕಪಾಟಿನ ಬಾಗಿಲನ್ನು ಧಡಕ್ಕನೆ ಮುಚ್ಚಿ ಜೋರಿನಿಂದ ಒದರಿದಳು:
“ಹೌದು, ನಾನೇನು ಕಾಲೇಜಿಗೆ ಹೋಗದೆ ಬಿಡತಿದ್ನೇನು? ನಿಮ್ಮನ್ನ ಕಟ್ಟಿಕೊಂಡು ಈ ಮೂಲೆಯಲ್ಲಿ ಕೊಳೀಬೇಕಾಗೇದ. ಈಗ ಅದೆಲ್ಲ ಬೇಡ. ಸುಮ್ನ ಮಲಕೊಳ್ಳಿರಿ ನೋಡೋಣೀಗ.”
“ಆಹ! ಹಾಂಗಾರ ನನ್ಯಾಕ ಲಗ್ನವಾದಿ?” ಕೆಣಕುವ ಧ್ವನಿಯಲ್ಲಿ ಶಾಮ ಕೇಳಿದ.
“ನಾಚಿಕೆ ಬರೋದಿಲ್ಲ ಕೇಳಾಕ? ಮಾಡೋದೆಲ್ಲ ಮಾಡಿ ಹ್ಯಾಂಗ ಕೇಳತಾರ ನೋಡ ಮತ್ತ?”
“ನಾಚಿಕ್ಯಾತರದು? ನಾ ಬೆನ್ನಹತ್ತಿದರೇನಾತು? ನೀನ ನನ್ನ ಕರೆಗೆ ಹುಂ ಅನ್ನಲಿಲ್ಲೇನು? ನಾನೇನು ಮೋಸಗೊಳಿಸಿದೆನೇನು? ಮಾಡಿದ ತಪ್ಪಿಗೆ ಲಗ್ನ ಆಗಾಕ ನಾನೇನು ಹಿಂಜರಿದ್ನೇನು? ನೀನ ಹೇಳು.”
ಸುಶೀಲೆಗೆ ಸಿಟ್ಟು ಉಕ್ಕೇರಿ ಬಂತು. ಎಷ್ಟೋ ದಿನಗಳಿಂದ ಹತ್ತಿಕ್ಕಿ ಇಟ್ಟ ಅವಳ ಕುದಿ ಹೊರಬಂತು.
“ನಾನಾಗಿಯೇ ಓ ಗೊಟ್ಟೆನೇ? ಅಯ್ಯೊ ಯಾವ ಬಾಯಿಂದ ಮಾತಾಡ್ತೀರಿ…ನನ್ನ ಅಜ್ಞಾನದ, ನನ್ನ ಕುತೂಹಲದ, ನನ್ನ ಮನಸ್ಸು ದುರ್ಬಲವಾದ ಕ್ಷಣದ ಲಾಭ ನೀವು ತೆಗೆದುಕೊಂಡು, ನನ್ನನ್ನು ಮೋಸ… ಅಲ್ಲ, ನನ್ನನ್ನು ಕೊಂದಿರಿ; ನನ್ನ ಹೃದಯಕ್ಕೇ ಬೆಂಕಿ ಹಚ್ಚಿದಿರಿ.”
ಶ್ಯಾಮನಿಗೆ ಸುಶೀಲಳ ಮಾತು ಹುಚ್ಚತನವೆಂದು ತೋರಿತು. ಒಮ್ಮೆಲೆ ಫಕ್ಕನೆ ನಕ್ಕುಬಿಟ್ಟ. ಸುಶೀಲೆಗೆ ಅವನ ಮುಖದ ಮೇಲೆ ಉಗಳಬೇಕೆನ್ನುವಷ್ಟು ತಿರಸ್ಕಾರವುಂಟಾಯಿತು. ಅವಳು ತುಟಿಕಚ್ಚಿ ಸುಮ್ಮನೆ ಸಿಂತುದನ್ನು ನೋಡಿ, ಕನಿಕರದಿಂದ ಅವಳನ್ನು ಸಂತೈಸುವವನಂತೆ ಶ್ಯಾಮ ಮಾತನಾಡತೊಡಗಿದ.
“ಆದದ್ದಾಯಿತು. ಇನ್ನೇನು ಮಾಡಲಿಕ್ಕಾಗುತ್ತದೆ? ನಿನ್ನನ್ನು ನಾನು ಪ್ರೀತಿಸೋದಿಲ್ಲಂತ ಎಲಿ ಹೇಳೀನಿ…?… ಬಾ.”
ಸುಶೀಲೆ ಸಿಡಿದು ಬಿದ್ದಳು. “ನಿಮ್ಮ ಪ್ರೀತಿಗೆ ಬೆಂಕಿ ಹತ್ತಿತು. ನಿಮ್ಮ ಸುಟ್ಟ ಪ್ರೀತಿ ಯಾರಿಗೆ ಬೇಕಾಗಿತ್ತು?”
“ಹಾಗಾದರೆ ಏನು ಬೇಕಾಗಿತ್ತು ನನ್ನಿಂದ?…ಹೇಳಲ್ಲ ಏನು ಬೇಕಾಗಿತ್ತು?” ಕೆಣಕುವ ತುಂಟ ಧ್ವನಿಯಲ್ಲಿ ಕೇಳಿದ.
“ಅಯ್ಯೋ, ನನ್ನ ಪೂರಾ ಕೊಂದೇಕೆ ಬಿಡುವದಿಲ್ಲ ನೀವು? ಹೌದು. ನಂದ ತಪ್ಪು, ನಾನೇ ಹಾಳು, ನಾನೇ ಕೆಟ್ಟವಳು, ನಾನಾಗೇ ನಿಮ್ಮ ಹತ್ತಿರ ಓಡಿ ಬಂದೆ, ಬೆನ್ನುಹತ್ತಿ ಬಂದೆ, ಆಯಿತಿಲ್ಲೋ?”
ಸುಶೀಲೆಗೆ ದುಃಖ ಏರಿಬಂತು. ಓಡಿಹೋಗಿ ಕುರ್ಚಿಯ ಮೇಲೆ ಕುಸಿದು ಬಿದ್ದು, ಟೇಬಲ್ ಮೇಲೆ ಮುಖ ಒರಗಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಶ್ಯಾಮನು ಅವಳೆಡೆಗೆ ಮುಖ ಕಿವುಚಿ ನೋಡಿ ಹೇಳಿದ:
“ಅಳು, ಬೇಕಾದಷ್ಟು ಅಳು. ನನಗೇನು?”
ಕೊಂಚ ಹೊತ್ತು ನಿಃಶಬ್ದ. ಹೊರಗಿನ ಮಳೆಯ ಸಪ್ಪಳದಲ್ಲಿ ಅವಳ ಅಳುವ ಸಣ್ಣದನಿ ಮುಳುಗಿಹೋಯಿತು. ಶ್ಯಾಮನಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಎದ್ದು ಹೋಗಿ ಅವಳ ಬೆನ್ನಮೇಲೆ ಕೈಯಾಡಿಸತೊಡಗಿದ. ಸುಶೀಲೆಯು ತಿವಿಯಲ್ಪಟ್ಟ ಹಾವಿನಂತೆ ಹಾರಿಬಿದ್ದು, ಅವನನ್ನು ತನ್ನಿಂದ ದೂರ ನೂಕಿದಳು. ಶ್ಯಾಮನು ತನ್ನ ಸಿಟ್ಟನ್ನು ಬಿಗಿಹಿಡಿದು:
“ನಿನ್ನ ಸಿಟ್ಟು ಇಳಿದ ಮೇಲೆ ನೀನೇ ಹಾದಿಗೆ ಬರ್‍ತೀ” ಎಂದು ವೇದವಾಕ್ಯ ನುಡಿದು, ಮರಳಿ ಹೋಗಿ ಗೊಡೆಯ ಕಡೆಗೆ ಮುಖ ತಿರುಗಿಸಿ ಮಲಗಿದ….
ದೂರ ಗುಡುಗಿನ ಸದ್ದು ಸಿಡಿಲು ಬಿದ್ದಂತೆ ಭಾಸವಾಯಿತು ಸುಶೀಲಳಿಗೆ. ಅಳುವುದನ್ನು ನಿಲ್ಲಿಸಿ, ಸರ್ರನೆ ಒಂದು ಹಾಳಿಯನ್ನು ತೆಗೆದುಕೊಂಡು ಏನೇನೋ ಗೀಚತೊಡಗಿದಳು. ಅದು ಶ್ರೀಧರನಿಗೆ ಬರೆದ ಪತ್ರವಾಗಿತ್ತು.
“…ಶ್ರೀಧರ,
ನಾನು ನಿಮಗೆ ‘ಪ್ರಿಯ’ನೆಂದು ಸಂಬೋಧಿಸುವ ಹಕ್ಕನ್ನು ಕಳೆದುಕೊಂಡಿರುವೆ…ನಿಮ್ಮ ಅಭಿನಂದನೆ, ನಮ್ಮೀರ್ವರ ಜೀವನ ಸುಖಮಯವಾಗಲಿ ಎಂಬ ನಿಮ್ಮ ಹರಕೆ, ನನ್ನ ಹೃದಯದಲ್ಲಿ ಅವ್ಯಕ್ತ ವೇದನೆಯನ್ನುಂಟು ಮಾಡಿದವು. ನೀವೇಕೆ ಹಾಗೆ ಅಣಕಿನ ಮಾತು ಹೇಳಿ ನನ್ನನ್ನು ದುಃಖಿಯನ್ನಾಗಿ ಮಾಡುತ್ತಿದ್ದೀರೋ ನಾ ಕಾಣೆ. ಶ್ಯಾಮನ ಮೇಲೆ ನನ್ನ ಪ್ರೀತಿ ಎಳ್ಳಷ್ಟೂ ಇಲ್ಲ. ಇದು ನಿಮಗೆ ಗೊತ್ತಿದ್ದರೂ ನೀವು ಅಭಿನಂದನೆಗಳನ್ನು ಕಳಿಸಿರುವಿರಿ…ಪ್ರೀತಿ ಇಲ್ಲದಿದ್ದರೆ ಆತನನ್ನೇಕೆ ಲಗ್ನವಾದೆ ಎಂದು ಕೇಳಬಹುದು. ಅದರ ಉತ್ತರ ನಿಮಗಲ್ಲದೆ ಮತ್ತಾರಿಗೆ ಹೇಳಲಿ?
ನೀವು ಹೋದ ಮೇ ತಿಂಗಳ ಸೂಟಿಯಲ್ಲಿ ಬಂದಾಗ ನಾನು ನಿಮಗೆ ಪ್ರಶ್ನಿಸಿದುದು ನೆನಪಿದೆಯೇ?
‘ಇಷ್ಟೆಲ್ಲ ನನ್ನೊಡನೆ ರೋಮಾನ್ಸ ಮಾಡಿದಿರಿ, ಕೊನೆಗೆ ನನ್ನನ್ನು ಲಗ್ನವಾಗುವದು ನಿಜ ತಾನೇ?’
ಅದಕ್ಕೆ ನೀವು ನನ್ನನ್ನು ಬಿಗಿದಪ್ಪಿ, ‘ಆ ವಿಷಯ ಈಗಲೇ ಹೇಳುವದು ಹೇಗೆ? ನೀನಿನ್ನೂ ದೊಡ್ಡವಳಾಗಬೇಕು, ಕಾಲೇಜಿಗೆ ಹೋಗಿ ಕಲಿಯಬೇಕು. ಇಷ್ಟು ಬೇಗನೆ ವಿಚಾರ ಮಾಡುವ ವಿಷಯವಲ್ಲದು.’ ಎಂದು ಹೇಳಿದಿರಿ; ಹಾಗೂ ನಾನು ಮ್ಯಾಟ್ರಿಕ್ ಆದ ನಂತರ ಪುಣೆಯಲ್ಲಿಯ ನನ್ನ ಅತ್ತೆಯ ಮನೆಯಲ್ಲಿದ್ದು ನೀವಿದ್ದ ಕಾಲೇಜಿಗೆ ಬರಲು ನೀವೇ ಸೂಚಿಸಿದಿರಿ.
ಆದರೆ ನೀವು ಹೋದಮೇಲೆ ನಿಮ್ಮ ಪತ್ರದ ಹಾದಿಯನ್ನು ಕಾಯ್ದು ಬೇಸತ್ತೆ. ಆಗ ತಲೆಯಲ್ಲಿ ನೂರೆಂಟು ವಿಚಾರಗಳು. ನೀವು ನನ್ನ ಕೈಬಿಟ್ಟಿರುವಿರಿ ಎಂಬ ಭೀತಿ! ಅವೆಲ್ಲ ವಿಚಾರಗಳನ್ನು ಈಗ ಹೇಗೆ ಬರೆಯಲಿ? ಜೂನ ತಿಂಗಳಲ್ಲಿ ರಿಜಲ್ಟು ಆದಾಗ ನಾನು ನಾಪಾಸಾಗಿದ್ದೆ. ಅದಲ್ಲದೆ ಮುಟ್ಟಿ ನಿಂತಿತ್ತು…. ಮುಂದೆ ನಾನು ಬರೆದ ಎರಡು ಪತ್ರಗಳಿಗೆ ನೀವು ಯಾವ ಕಾರಣದಿಂದಲೇ ಉತ್ತರ ಬರೆಯಲಿಲ್ಲ. ನನ್ನ ಮನಸ್ಥಿತಿಯೇ ವಿಚಿತ್ರವಾಯಿತು. ಇದ್ದ ಸಂಗತಿಯನ್ನು ನಿಮಗೆ ತಿಳಿಸಿದ್ದರೆ ನಿಮ್ಮ ಕಣ್ಣು ತೆರೆಯುತ್ತಿದ್ದವೇನೋ…! ಮುಂದೆ ನನ್ನ ಕನಸುಗಳ ಮಂದಿರವೇ ಕುಸಿದು ಬಿದ್ದಂತಾಯಿತು ಆಗ ಹುಚ್ಚುಯಂತಿದ್ದೆ. ಆಗ…ಒಂದು ಉಪಾಯ ಹೊಳೆಯಿತು… ಮೊದಲಿನಿಂದಲೂ ನನ್ನ ಬೆನ್ನು ಹತ್ತಿದ್ದ ಶ್ಯಾಮ…ಅವನ ಜೊತೆಯಲ್ಲಿ… ನನ್ನ ದುರ್ದೈವ! ನನ್ನ ಕೊರಳಿಗೆ ನಾನೇ ನೇಣು ಹಾಕಿಕೊಂಡೆ… ನಿಮ್ಮ ವಿಚಾರವನ್ನೇ ಬಿಟ್ಟೆ. ಸ್ವಾಭಿಮಾನ ಬೇರೆ! ಶ್ಯಾಮ ಲಗ್ನವಾಗಲು ಸಿದ್ಧನೇ ಇದ್ದ….ನಮ್ಮ ಮನೆಯವರಿಗೂ ಶ್ಯಾಮ ಬೇಕಾದವ…ಆದರೆ ಈಗ ಎಲ್ಲವೂ ಶೂನ್ಯವಾಗಿದೆ. ಈ ಜೀವನವೇ ಬೇಡವಾಗಿದೆ. ನೀವಿಲ್ಲದೆ ನನ್ನ ಬಾಳು ಶೂನ್ಯ ಶೂನ್ಯ. ಮೇಲಾಗಿ ಇದು ಮೋಸದ ಬಾಳು…ನಿನ್ನ ಕೂಸು…”
ಮುಂದೆ ಬರೆಯುವದಾಗಲಿಲ್ಲ ಸುಶೀಲಳಿಗೆ…ದುಃಖ ಎದೆಯೊಳಗಿಂದ ಉಕ್ಕಿ ಬಂತು. ತನ್ನ ಎರಡೂ ಕೈಗಳಿಂದ ಮುಖಮುಚ್ಚಿಕೊಂಡು ಟೇಬಲ್ ಮೇಲೆ ಒರಗಿದಳು. ಮೊದಲೇ ಹನಿಗೂಡಿ ನಿಂತ ಕಣ್ಣುಗಳಿಂದ ನೀರು ಧಾರಾಳವಾಗಿ ಸುರಿಯತೊಡಗಿತು.
ಹೊರಗೆ ಮಳೆ ಬೀಳುತ್ತಲೇ ಇತ್ತು!
ಇತ್ತ ಶಾಮನ ಗೊರಕೆ ಸುರುವಾಗಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.