ದೆಹಲಿಯೊಳಗೇ ಇದ್ದೂ ಇದು ದೆಹಲಿಯಲ್ಲ ಎನ್ನಿಸುವಂಥ ತಮ್ಮ ಸುಂದರ ‘ಸಂಸ್ಕೃತಿ ಗ್ರಾಮ’ ದಲಿ ಈ ಪುಟ್ಟ ಮಿತ್ರಕೂಟವನ್ನು ಏರ್ಪಡಿಸಿ ಓಂಪ್ರಕಾಶ್ಜಿಯವರು ನನಗೆ ಅಪೂರ್ವವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಋಣಿ. ಯಾವ ಸಾಂಪ್ರದಾಯಿಕತೆಯಿಲ್ಲದೆ ಇಲ್ಲಿ ನಾವು ವಿರಾಮವಾಗಿ ಮಾತುಕತೆಯಾಡಬಹುದೆಂದೂ ಮಾತುಕತೆಗೆ ಚಾಲನೆ ಕೊಡಲಿಕ್ಕಾಗಿ ಪ್ರಾರಂಭದಲ್ಲಿ ನಾನು ಒಂದು ಟಿಪ್ಪಣಿಯನ್ನು ಮಂಡಿಸಬೇಕೆಂದೂ ಅವರು ಸೂಚಿಸಿದರು. ಒಪ್ಪಿಕೊಂಡೆ. ತಟ್ಟನೆ, ‘ಕನ್ನಡದ ಬಗ್ಗೆಯೇ ಮಾತಾಡುತ್ತೇನೆ’ ಅಂತಲೂ ಹೇಳಿದೆ. ‘ಕನ್ನಡ’ದ ವಿಷಯವಾಗಿ ಮಾತಾಡುತ್ತೇನೆಂದು ತಟ್ಟನೆ ಅನೈಚ್ಚಿಕವಾಗಿ ಹೇಳಲು ಅದಾವ ನನ್ನ ಒಳಗೈನ ಒತ್ತಡ ಕಾರಣವಿದ್ದೀತು ಅಂತ ಯೋಚಿಸುತ್ತೇನೆ. ನನಗೆ ಸಲೀಸಾಗಿ ಬರುವ ಭಾಷೆ ಇದೊಂದೇ ಆಗಿರುವ ಕಾರಣ ಕನ್ನಡದಲ್ಲಿ ಮಾತಾಡಲು ಸಾಧ್ಯವಿಲ್ಲವಾಗಿದ್ದ ಕಾರಣ ಕನ್ನಡದ ಬಗ್ಗೆಯಾದರೂ ಮಾತಾಡಬದುದಲ್ಲ, ಅಂತ ನನಗೆ ಅನ್ನಿಸಿರಬೇಕು, ಆಥವಾ ಏನೇ ಮಾತಾಡಲಿ ಯಾವುದೇ ಭಾಷೆಯಲ್ಲಿ ಮಾತನಾಡಲಿ, ವಾಸ್ತವಾವಾಗಿ ನಾನು ಮಾತಾಡುವುದೆಲ್ಲಾ ಕನ್ನಡದಲಿಯೇ ಮತ್ತು ಕನ್ನಡದ ಬಗ್ಗೆಯೇ ಎಂದರೂ ತಪ್ಪಾಗಲಿಕ್ಕಿಲ್ಲ.
ಅಚಾನಕವಾಗಿ ಈ ಜಗತ್ತಿಗೆ ನಾನು ಬಂದುಬಿದ್ದಾಗ, ನನ್ನ ತಾಯಿ ಮತ್ತು ಬಳಿ ಬಳಗದವರು ನನ್ನ ತುಟಿಗಳೊಳಕ್ಕೆ ಕನ್ನಡ ಶಬ್ದಗಳ ಮೂಲಕವೇ ನನ್ನ ಮನಸ್ಸು ನಿಧಾನವಾಗಿ ಈ ಜಗತ್ತನ್ನು ಗ್ರಹಿಸುವ ಹಾಗೆ ಮಾಡಿದರು.ಶಬ್ದಗಳು ನನಗೆ ಹೆಸರುಗಳನ್ನು ಕೊಟ್ಟವು; ಹೆಸರುಗಳು ಆಕಾರಗಳನ್ನು ಮೂಡಿಸಿದವು; ಈ ಆಕೃತಿಗಳೇ, ಈ ಆಕೃತಿಗಳನ್ನು ಕಲ್ಪಿಸಿದ ಕನ್ನಡದ ಶಬ್ದಗಳೇ ನನ್ನ ಪ್ರಪಂಚ, ಇವೊತ್ತಿಗೂ. ಈ ಶಬ್ದಗಳಿಲ್ಲದಿದ್ದರೆ ಗ್ರಹಿಕೆಯೇ ಇಲ್ಲವಲ್ಲ? ಪ್ರತಿಕ್ರಿಯೆಯೆಂಬುದೇ ಇಲ್ಲವಲ್ಲ? ಆಗ ನಾನು ಕಿವುಡ, ಕುರುಡ, ಮೂಕ, ಒಂದು ಕಲ್ಲು ಅಷ್ಟೇ. ಆಗ ಜಗತ್ತು ಎನ್ನುವುದೇ ಇಲ್ಲ.
ದೆಹಲಿಯ ಈ ದೂರದಿಂದ ಅಥವಾ ಭೂಮಿಯ ಇನ್ನೂ ದೂರದ ಇನ್ನಿತರ ನೆಲೆಗಳಿಂದ ನಿಂತು ನೋಡುವಾಗ ನನ್ನ ಕನ್ನಡದ ನೆಲ, ನನ್ನ ಕನ್ನಡದ ಭಾಷೆ ಮುಂತಾದವು ಅದೆಷ್ಟು ಸಣ್ಣದಾಗಿ, ನಗಣ್ಯವಾಗಿಕೂಡಾ ಕಂಡೀತು ಅಂತ ನಾನು ಊಹಿಸಬಲ್ಲೆ. ಭೂಮಿಗೋಲದ ಮೇಲೆ ಗುರುತಿಸಲು ಹೋದರೆ, ಫುಟ್ಬಾಲ್ ಚೆಂಡಿನ ಮೇಲೆ ಅಂಟಿಸಿರುವ ಒಂದು ಕಿರು ಅವರೆಬೇಳೆಯ ಹಾಗೆ ಕಾಣಿಸುತ್ತದೆ ನನ್ನ ಕರ್ನಾಟಕ. ಪ್ರಪಂಚದ ಹಲವಾರು ನೂರು ಭಾಷೆಗಳಲ್ಲಿ ಇದೂ ಒಂದು ಕಿರು ಭಾಷೆ ಅಷ್ಟೇ. ಈ ದೇಶದಲ್ಲೆ ನೋಡುವುದಾದರೂ ಇದರ ಹಾಗೆ ಬೆಳೆದು ನಿಂತಿರುವ ಹದಿನೈದಿಪ್ಪತ್ತು ಇನ್ನಿತರ ಭಾಷೆಗಳು ಕಾಣ ಸಿಗುತ್ತವೆ. ಪ್ರಾಯಶಃ, ಇತ್ತೀಚಿನ ತನಕ ದೆಹಲಿಯಲ್ಲಿರುವ ಬಹುಜನರಿಗೆ ಕನ್ನಡವೆಂಬ ನುಡಿ ಮತ್ತು ನೆಲ ಇದೆಯೆನ್ನುವುದೂ ಗೊತ್ತಿರಲಿಲ್ಲ. ವಿಂಧ್ಯದ ದಕ್ಷಿಣಕ್ಕೆ ಕೆಳಗಿರುವ ಜನರಾಶಿಯಷ್ಟೂ ‘ಮದ್ರಾಸಿ’ ಯೆಂದೇ ಅವರ ತಿಳಿವಳಿಕೆಯಾಗಿತ್ತು.
ಹೊರಗಿನವರ ಮಾತಿರಲಿ, ಜಾಗತೀಕರಣ- ಜಗತ್ಗ್ರಾಮಗಳೆಂಬ ಬಣ್ಣಬಣ್ಣದ ಚಿಟ್ಟೆಮಾತುಗಳು ತಲೆಯಮೇಲೇ ದಟ್ಟಯಿಸಿ ಹಾರಾಡುತ್ತಿರುವ ಇವತ್ತಿನ ಸಂದರ್ಭದಲ್ಲಿ, ನಮ್ಮವರೇ ಆದ ಹೊಸ ಯುವಕರು ಅಮೆರಿಕವೊ ಮತ್ತೊಂದೋ ಮಿಟಿಮಿಟಿ ಸ್ವರ್ಗದ ಕಣಸು ಕನಸುಗಳನ್ನು ಕಣ್ಕಿವಿಗಳಲ್ಲಿ ತುಂಬಿಕೊಂಡು, ಕನ್ನಡವೆನ್ನುವ ಕಿರುತನದ ಮಾತು ಕೇಳಿದರೇ ಮುಜುಗರಗೊಳ್ಳುತ್ತಾರೆ. ಕನ್ನಡವೆಂಬ ಕಿರುಕೂಪದ ಕನ್ನಡಿಯಲ್ಲಿ ತಮ್ಮ ಚಹರೆಯ ಬಿಂಬವನ್ನು ಗುರುತಿಸಿಕೊಳ್ಳಲು ಬೆಚ್ಚುತ್ತಾರೆ.
ಕನ್ನಡವು ಚಿಕ್ಕದು, ನಿಜ. ಜಗತ್ತಿನ ತುಂಬ ಇರುವ ಕನ್ನಡದಂಥ ಅಸಂಖ್ಯಾತ ಸ್ಥಳ ಭಾಷೆಗಳು ಚಿಕ್ಕವೇ. ಹಾಗಿದ್ದರೂ ಜಗತ್ತಿನ ತುಂಬ ಇರುವ ಇಂಥ ಕಿರುನೆಲ-ಕಿರುಭಾಷೆ-ಕಿರು ಸಮುದಾಯಗಳು ತಮ್ಮ ಕಿರುತನವನ್ನು ಎಂತೋ ಮೀರಿಕೊಂಡು, ತಮ್ಮ ಕಿರುಕೂಪದಲ್ಲೂ ತಮ್ಮ ಸುತ್ತ ಜಗದಗಲ ಅನಂತ ವಿಶ್ವಾಕಾಶವನ್ನು ಸೃಜಿಸಿಕೊಂಡು ಬಾಳಿಬಂದಿದ್ದಾರೆ. ಇದನ್ನು ಮರೆಯಬಾರದು.
ಕನ್ನಡಕ್ಕೇ ಬಂದರೆ, ಕರ್ಣಾಟಕವೆಂದು ಈಗ ನಾವು ಗುರುತಿಸುವ ಈ ನಾಡು, ಭಾರತದ ಒಟ್ಟೂ ಭೂಭಾಗದಲ್ಲಿ ಅತ್ಯಂತ ಪ್ರಾಚೀನವೂ ಬಹು ಸ್ಥಿರವೂ ಆದ ದಖನ್ ಪ್ರಸ್ಥಭೂಮಿಯ ಭದ್ರಪೀಠದ ಮೇಲೆ ದೃಡವಾಗಿ ನಿಂತಿದೆ. ‘ಪೃಥಿವ್ಯಾ ಮಾನದಂಡ ಇವ’ ‘ನಗಾಧಿರಾಜಃ’ ಅಂತೆಲ್ಲ ಕಾಲಿದಾಸನು ಬಣ್ಣಿಸುವ ಜಗತ್ತಿನ ಉನ್ನತೋನ್ನತ ಪರ್ವತವಾದ ಹಿಮಾಲಯವು ನಮ್ಮ ಪ್ರಸ್ಥಭೂಮಿಗೆ ಹೋಲಿಸಿದರೆ ಇನ್ನೂ ಪ್ರಾಯಬಂದಿಲ್ಲದ ಹಸುಳೆ. ಹಿಮಾಲಯದಲ್ಲಿ ಗ್ರಾನೈಟ್ ಶಿಲೆಯು ಸಿಕ್ಕುವುದಿಲ್ಲ. ಗ್ರಾನೈಟ್ ಬೆಳೆದು ಹರಳುಗಟ್ಟಿಕೊಳ್ಳಲಿಕ್ಕೆ ಬೇಕಾಗುವ ಎಷ್ಟೋ ಕೋಟಿ ಕೋಟಿ ವರ್ಷಗಳ ಪ್ರೌಢಿಮೆಗೆ ಅದಿನ್ನೂ ಕಾಯಬೇಕು. ಈ ನಾಡಿನ ಪಶ್ಚಿಮದಲ್ಲಿ ಸಮುದ್ರವೂ ಉದ್ದನೆಯ ಕರಾವಳಿ ಪ್ರದೇಶವೂ ಲಗತ್ತಾಗಿಕೊಂಡಿದೆ. ವಿಂಧ್ಯಾಂತವಾದ ಉತ್ತರ ಭಾರತಕ್ಕೆ ಹೊಸತಿಲೆನ್ನುವ ಹಾಗೆ, ಉತ್ತರಾಪಥ-ದಕ್ಷಿಣಾಪಥಗಳ ನಡುವಿನ ಸೇತುವೆಯೆನ್ನುವ ಹಾಗಿದೆ, ಈ ಭೂಭಾಗ. ಇಲ್ಲಿ ಕನಿಷ್ಠ ಐದು ವರ್ಷಗಳಿಂದಲೂ ಮಾನವ ವಸತಿಯಿದ್ದಿತೆನ್ನುವುದನ್ನು ಪುರಾತತ್ತ್ವಶೋಧಗಳು ಖಚಿತಪಡಿಸಿವೆ. ಉತ್ತರ-ದಕ್ಷಿಣಗಳ ಸಂಚಾರ-ಪ್ರತಿಸಂಚಾರಗಳಿಗೆ ಸೇತುವೆಯಾಗಿರುವುದು, ಪಶ್ಚಿಮದ ಸಪಾಟು ಸಮುದ್ರದ ಮೂಲಕ ಪಶ್ಚಿಮ ಭೂಖಂಡಗಳಿಗೆ ಮುಕ್ತವಾಗಿ ತೆರೆದುಕೊಂಡಿರುವುದು ಮತ್ತು ಲಕ್ಷಾಂತರ ವರ್ಷಗಳ ಜನವಸತಿಯ ದೀರ್ಘದಾಖಲೆ-ಈ ಮುಂತಾದ ವೈಶಿಷ್ಟ್ಯಗಳಿಂದಾಗಿ ಈ ಭೂಭಾಗದಲ್ಲಿ ದೀರ್ಘಕಾಲದಿಂದಲೂ ಅನೇಕಾನೇಕ ಜನಾಂಗ-ಬುಡಕಟ್ಟು-ಧರ್ಮ-ಭಾಷೆಗಳ ಸಂಕರ-ಸಮನ್ವಯಗಳು ನಡೆಯುತ್ತಲೇ ಬಂದಿವೆ. ಇದರಿಂದಾಗಿ ಇವತ್ತಿನ ಕನ್ನಡ ಜನಪದದಲ್ಲಿ ಇಡೀ ಜಗತ್ತಿನ ಅನೇಕಾನೇಕ ಜನಾಂಗ-ಕುಲ-ಬುಡಕಟ್ಟುಗಳೂ ಧರ್ಮ-ಸಂಸ್ಕೃತಿಗಳೂ ಅರಗಿಕೊಂಡಿವೆ.
ಕನ್ನಡವು ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ್ದೆಂದು ಭಾಷಾಶಾಸ್ತಜ್ಞರು ನಿರ್ಣಯಿಸಿದ್ದಾರೆ. ಈ ದ್ರಾವಿಡ ಭಾಷಾ ಕುಟುಂಬವೆಂಬುದು ಮೂಲತಃ, ಫಿನ್ಲೆಂಡ್ನಿಂದ ಮಧ್ಯಮಂಗೊಲಿಯ ತನಕ ಹಬ್ಬಿರುವ ಫಿನ್ನೊ-ಉಗ್ರಿಯನ್ ಭಾಷಾವರ್ಗಕ್ಕೆ ಸೇರಿದ್ದಿರಬೇಕೆಂದು ಹಲವು ಭಾಷಾಶಾಸ್ತಜ್ಞರು ಊಹಿಸಿ ಪ್ರತಿಪಾದಿಸಿದ್ದಾರೆ. ಅಂದರೆ, ಈ ಭಾಷಾ ಮೂಲದ ಒಂದು ಶಾಖೆಯು ಹಲವು ಸಹಸ್ರಮಾನದ ಭೂತಕಾಲದಲ್ಲಿ ಎಂದೋ ಸಂಚಲನೆ ತೊಡಗಿ ಯುರೋಪಿನ ಉದ್ದಗಲಗಳಲ್ಲಿ ಅಲೆಯುತ್ತ ಕ್ರಮೇಣ ಆಫ್ಘಾನಿಸ್ತಾನಕ್ಕೆ ಬಂದಿತು; ಅಲ್ಲಿಂದ ಮತ್ತೆ ಸಂಚಾರ ಹೊರಟು ಭಾರತದ ಮಧ್ಯಪ್ರದೇಶಕ್ಕೆ ಬಂದು ಅಲ್ಲಿ ಕೆಲಕಾಲ ತಂಗಿ ಅಲ್ಲಿಂದ ಪುನಃ ದಕ್ಷಿಣದ ಯಾತ್ರೆಯನ್ನಾರಂಭಿಸಿ ದಖನ್ನ್ನು ಪ್ರವೇಶಿಸಿತು; ಅಂತಿಮವಾಗಿ ಈ ದಕ್ಷಿಣ ಪರ್ಯಾಯ ದ್ವೀಪದಲ್ಲಿ ನೆಲೆಸಿತು. ಎಷ್ಟೋ ಸಹಸ್ರ ವರ್ಷಗಳಲ್ಲಿ ನಡೆದಿರಬಹುದಾದ ಈ ಯುಗಯುಗ ಯಾತ್ರೆಯು ಇವತ್ತು ಯೋಚಿಸಿದರೆ ವಿಸ್ಮಯ ಹುಟ್ಟಿಸುತ್ತದೆ. ಈ ದೀರ್ಘಯಾತ್ರೆಯಲ್ಲಿ ಆ ಮೂಲಭಾಷಾಶಾಖೆಯು ಅದೆಷ್ಟು ಭಾಷಾ ಸಮುದಾಯಗಳಲ್ಲಿ ಹೊಕ್ಕು ನೆಲೆಸಿ ಬಳಸಿ ಆ ಭಾಷೆಗಳ ಸಾಹಚರ್ಯ-ಸಂಘರ್ಷ-ಸಂಧಾನಗಳಲ್ಲಿ ಅವುಗಳ ಶಬ್ದ-ವ್ಯಾಕರಣ ಸಾರಗಳನ್ನು ಅರಗಿಸಿಕೊಳ್ಳುತ್ತ ಬದಲಾಗುತ್ತ ಬೆಳೆದುಕೊಳ್ಳುತ್ತ ಬಂದಿತೋ ದೇವರೇ ಬಲ್ಲ. ಹೀಗೆ ಪ್ರಾಯಃ ಕ್ರಿಸ್ತನಿಗಿಂತ ಮೊದಲು ಸಾವಿರ ವರ್ಷಗಳಿಗಿಂತ ಹಿಂದೆಯೇ ಇಲ್ಲಿ ಬಂದು ನೆಲೆಸಿ ‘ದ್ರಮಿಳ’ ದ್ರಾವಿಡ ಇತ್ಯಾದಿ ಹೆಸರುಗೊಂಡು ಈ ಭಾಷೆಯು ಕ್ರಿಸ್ತಪೂರ್ವದ ಎರಡುಮೂರು ಶತಮಾನಗಳಲ್ಲಿ ಒಡೆದುಕೊಳ್ಳತೊಡಗಿತು ಮತ್ತು ಮೊದಲಿಗೆ ತಮಿಳು ಹಾಗೂ ಅನಂತರ ಕನ್ನಡವು ಪ್ರತ್ಯೇಕ ಭಾಷೆಯಾಗಿ ಅಸ್ತಿತ್ವ ಕಂಡುಕೊಂಡಿತು. ವಿಭಜನೆಗೆ ಹಿಂದಿನ ಸಾವಿರಾರು ವರ್ಷ ಮಿಕ್ಕಿದ ಇಲ್ಲಿನ ವಾಸ್ತವ್ಯದಲ್ಲಿ ಹಾಗೂ ಆಮೇಲೆ ಕನ್ನಡಭಾಷೆಯು ಕನ್ನಡ ದೇಶವೆನಿಸಿ ಭಾಷೆ-ಸಂಸ್ಕೃತಿ-ಸಮುದಾಯ, ಭೌಗೋಲಿಕ ರಾಜ್ಯಗಳೆಲ್ಲದರ ಏಕೀಕೃತ ಸಾವಯವ ಘಟಕವಾಗಿ ಹರಳುಗಟ್ಟಿಕೊಳ್ಳುವತನಕ ಎಂಟೊಂಬತ್ತು ಶತಮಾನಗಳಲ್ಲಿ ಕೂಡಾ ಈ ಭಾಷೆಯು, ‘ಮಾರ್ಗಭಾಷೆ’ ಯೆನ್ನುವಂತಿದ್ದ ಸಂಸ್ಕೃತದೊಡನೆಯೂ ಪ್ರಾಕೃತ ಮತ್ತು ಪೈಶಾಚಿ ಅಪಭ್ರಂಶ ಇತ್ಯಾದಿ ಇನ್ನಿತರ ದೇಶಿಭಾಷೆಗಳೊಡನೆಯೂ ಒಡನಾಡಿಕೊಳ್ಳುತ್ತ, ಕೊಳು ಕೊಡುಗೆಯ ಅನುಸಂಧಾನದಲ್ಲಿ ಬೆಳೆದುಕೊಳ್ಳುತ್ತ ಬಂದಿತು. ಅಲ್ಲಿಂದ ಮುಂದಿನ ಈ ತನಕದ ಸಹಸ್ರಮಾನದಲ್ಲಿ ಕೂಡಾ ಅರಬ್ಬಿ-ಫಾರ್ಸಿ-ಪೋರ್ತುಗೀಸ್-ಇಂಗ್ಲಿಷ್ಗಳು ಯಜಮಾನಿಕೆಯಲ್ಲಿ ಹೆಗಲೇರಿ ಕೂತಿದ್ದಾಗಲೂ ಕನ್ನಡವು ಎದೆಗುಂದಿ ಕುಗ್ಗದೆ ಆ ಭಾಷೆಗಳಿಂದ ಸಾಧ್ಯವಾದ ಲಾಭಗಳನ್ನೆಲ್ಲ ಪಡೆದುಕೊಂಡಿತು.
ಸಮುದಾಯಗಳಲ್ಲಿ ಭಿನ್ನತೆಯನ್ನು ಕಲ್ಪಿಸುವ ಇನ್ನೊಂದು ಸಂಗತಿಯೆಂದರೆ, ‘ಧರ್ಮ’. ಕ್ರಿಸ್ತಪೂರ್ವದ ಸಹಸ್ರಮಾನವನ್ನು ಪರಿಗಣಿಸಿದರೆ ಈ ಭಾಗದ ಜನಸಮುದಾಯವು, ಸ್ಥಳೀಯವಾಗಿದ್ದಿರಬಹುದಾದ ಹತ್ತು ಹಲವು ಧಾರ್ಮಿಕ ಪಂಥಗಳ ಜತೆಗೆ ವೈದಿಕೋತ್ತರ ಧರ್ಮದಿಂದಲೂ ಬೌದ್ಧ ಧರ್ಮದಿಂದಲೂ ಪ್ರಭಾವಗೊಂಡಿರಬೇಕು. ಕ್ರಿಶ್ಟನ ಅನಂತರ ಸಹಸ್ರಮಾನದಲ್ಲಿ ಬೌದ್ಧ-ಜೈನ-ಶೈವ-ಸ್ಮಾರ್ತ-ವೈಷ್ಣವ-ತಾಂತ್ರಿಕ ಇತ್ಯಾದಿ ಧರ್ಮಗಳು ಇಲ್ಲಿ ಪ್ರಭಾವಕಾರಿಯಾಗಿದ್ದವು. ಈ ಅವಧಿಯಲ್ಲಿ ಬಹಳ ಕಾಲ ಜೈನ ಧರ್ಮವು ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ನಿರ್ಮಾಣದ ಹೊಣೆ ಹೊತ್ತು ನಿಂತಿತ್ತು. ಈ ಎರಡನೇ ಸಹಸ್ರಮಾನದಲ್ಲಿ ನಮ್ಮ ಕನ್ನಡ ಜನಪದವು ಹಿಂದಿನ ಧರ್ಮಗಳಲ್ಲದೆ ಶೈವ-ವೀರಶೈವ-ತಾಂತ್ರಿಕ-ಭಕ್ತಿಪಂಥಗಳಿಂದಲೂ ಅದಕ್ಕೆ ಮುಂದೆ ಇಸ್ಲಾಮ್-ಸೂಫಿ-ಕ್ರೈಸ್ತ ಮುಂತಾದ ವಿದೇಶಿ ಧರ್ಮಗಳಿಂದಲೂ ಗಾಢವಾಗಿ ಪ್ರಭಾವಗೊಂಡಿತು. ಇತಿಹಾಸದ ಈ ಸಂಗತಿಗಳನ್ನೆಲ್ಲಾ ಗಮನಿಸಿದಾಗ ಇವತ್ತಿನ ನಾವು ಕನ್ನಡಿಗರು ಜಗತ್ತಿನ ಬಹುತೇಕ ಎಲ್ಲಾ ಜನ-ಜನಾಂಗ-ಬುಡಕಟ್ಟು-ಧರ್ಮ-ಜಾತಿಗಳನ್ನೂ ಅರಗಿಸಿಕೊಂಡಿರುವ ವಿಶ್ವಮಾನವರುಮತ್ತು ನಮ್ಮ ಕನ್ನಡವು ಜಗತ್ತಿನ ಅಸಂಖ್ಯ ಭಾಷೆಗಳನ್ನು ಅರಗಿಸಿಕೊಂಡಿರುವ ವಿಶ್ವಭಾಷೆ. ಹಾಗೆ ನಮ್ಮದು ಕನ್ನಡ ಕೂಪವಲ್ಲ, ಕನ್ನಡ ವಿಶ್ವ, ಕನ್ನಡ ಬ್ರಹ್ಮಾಂಡ.
ಇದು ಕನ್ನಡಕ್ಕೆ ಮಾತ್ರವೇ ಅನ್ವಯಿಸುತ್ತದೆ ಅಂತಲೂ ಅಲ್ಲ. ಜಗತ್ತಿನ ಎಲ್ಲ ಜನ ಸಮುದಾಯಗಳೂ ಎಲ್ಲಭಾಷೆಗಳೂ ವಾಸ್ತವವಾಗಿ ಇಂಥ ಪ್ರಕ್ರಿಯೆಯಲ್ಲಿಯೇ ರೂಪುಗೊಂಡವು ಮತ್ತು ಅವೆಲ್ಲವೂ ವಿಶ್ವಜನ-ವಿಶ್ವಭಾಷೆಗಳೇ. ಕನ್ನಡ ಭಾಷೆಯ ಮೂಲದ ಮೂಲವು ‘ಫಿನ್ನೊ-ಉಗ್ರಿಯನ್’ ಎಂದೆನ್ನುವ ಊಹೆಯು ನಿಲ್ಲದೆ ಹೋಗಬಹುದು; ಅದು ಸುಳ್ಳೆಂದು ಮುಂದೆ ಯಾರಾದರೂ ಸಂಶೋಧನೆಯಿಂದ ಸಾಬೀತುಗೊಳಿಸಬಹುದು. ಅದೇನಾದರೂ ನನಗೆ ಚಿಂತೆಯಿಲ್ಲ. ಯಾಕೆಂದರೆ, ವಾಸ್ತವ ಸತ್ಯದ ‘ಇತಿಹಾಸ’ ವಾಗಿಯಲ್ಲದ ಸಂಭಾವ್ಯ ಸತ್ಯದ ‘ಐತಿಹ್ಯ’ ವಾಗಿ ನಾನಿದನ್ನು ಒಪ್ಪಿಕೊಂಡಿದ್ದೇನೆ. ಎಲ್ಲಾ ಭಾಷೆಗಳ ಬೆಳವಣಿಗೆಯ ಪ್ರಕ್ರಿಯೆಯೂ ಹೀಗೇ ಆಗಬೇಕಲ್ಲದೆ ಬೇರೆ ಪರ್ಯಾಯವೇ ಇಲ್ಲ. ಅದ್ಯಯನ ಸೌಲಭ್ಯಕ್ಕಾಗಿ ಶಾಸ್ತಜ್ಞರು ಜನಗಳಲ್ಲಿ ಮತ್ತು ಭಾಷೆಗಳಲ್ಲಿ ಅನೇಕ ವರ್ಗ ಉಪವರ್ಗಗಳನ್ನು ಕಲ್ಪಿಸಿರುತ್ತಾರೆ. ಅವೆಲ್ಲ‘ಕೇವಲ’ವೆಂದು ಅಥವಾ‘ವಾಸ್ತವ’ವೆಂದು ನಂಬಿ ಮೋಸ ಹೋಗಬಾರದು. ‘ಕೇವಲಸ್ವಂತಿಕೆ’ ಯ ಶುದ್ಧ ಜನವಾಗಲೀ ಶುದ್ಧ ಭಾಷೆಯಾಗಲೀ ಜಗತ್ತಿನಲ್ಲಿ ಇಲ್ಲವೇ ಇಲ್ಲ.
ಇದಾದ ಮೇಲೆ, ಒಂದೊಂದು ಜನವರ್ಗ-ಭಾಷಾವರ್ಗ ಇವೂ ಕಾಲಕಾಲಕ್ಕೆ ತನ್ನದೆಂಬ ಸ್ವಂತಿಕೆಯ ಬಣ್ಣಗಳನ್ನು ಹೊರಗೊಳಿಸಿಕೊಳ್ಳುತ್ತ ಹೋಗುತ್ತವೆ. ಆಯಾ ಸಮುದಾಯಗಳು ಬಾಳಿಕೊಳ್ಳುತ್ತಿರುವ ನೆಲ-ಜಲ, ಬಯಲು ಬೆಟ್ಟ ಕಾಡುಮೇಡುಗಳು ಮತ್ತು ಹೊಳೆ ನದಿ ಸರೋವರ ಸಮುದ್ರಗಳು ಹಾಗೂ ಅಲ್ಲಿ ಅರಳಿಕೊಳ್ಳುವ ವಿಶಿಷ್ಟ ಜನಪ್ರಜ್ಞೆ ಮುಂತಾದವು ಪ್ರಾಯಃ, ಸ್ವಂತಿಕೆಗಳನ್ನೂ ಭಿನ್ನತೆಗಳನ್ನೂ ಸೃಷ್ಟಿಸುತ್ತ ಹೋಗುತ್ತವೆ.
ದಕ್ಷಿಣ ಭಾರತದಲ್ಲಿ ಗಣ್ಯಸ್ಥಾನವನ್ನು ಗಳಿಸಿಕೊಳ್ಳಲು ಮೊದಲು ಹವಣಿಸಿದ ಎರಡು ದ್ರಾವಿಡ ಭಾಷೆಗಳೆಂದರೆ, ತಮಿಳು ಮತ್ತು ಕನ್ನಡ. ತಮಿಳಿನ ನೆಲವು ಪರ್ಯಾಯದ್ವೀಪದ ತುದಿ ತ್ರಿಕೋನದಲ್ಲಿ, ಮೂರು ಕಡೆ ಸಮುದ್ರ ಮತ್ತು ಇನ್ನೊಂದುಕಡೆ ಕಾವೇರಿಯ ಪ್ರಾಕೃತಿಕ ರಕ್ಷಣೆಯಲ್ಲಿದ್ದುದು; ಹೊರಗಿನ ಜನರ ಆಕ್ರಮಣ-ಸಂಚಾರ-ಸಂಕರಗಳು ಕಡಿಮೆಯಿದ್ದುದರಿಂದ ಅಲ್ಲಿನ ಜನಪದವು ಹೆಚ್ಚಿನ ನೆಮ್ಮದಿಯಲ್ಲಿ ಉದ್ದಕ್ಕೂ ತನಗೆ ತಾನೆನ್ನುವಂತೆಬಾಳಿಕೊಂಡಿತು. ಇದಕ್ಕಿಂತ ಭಿನ್ನವಾದ ಕನ್ನಡದ ಮಧ್ಯಸ್ಥಳ-ಸೇತುಭೂಮಿಯಾಗಿ ಮೇಲಿಂದ ಮೇಲೆ ಕ್ಷೆಭೆಗಳನ್ನೆದುರಿಸುತ್ತಲೇ ಬಂದುದರಿಂದ, ಅದು ಉದ್ದಕ್ಕೂ ಅನ್ಯ-ಅನುಸಂಧಾನದ ತಂತ್ರಗಳನ್ನಳವಡಿಸಿಕೊಳ್ಳುತ್ತ ಬಾಳುವಂತಾಯಿತು. ಈ ಪ್ರಕ್ರಿಯೆಯಲ್ಲಿ ಈಯೆರಡು ಭಾಷೆಗಳ ಭಿನ್ನತೆಗಳು ಮೈದಾಳಿಕೊಂಡವು.
ಒಂದು ಉದಾಹರಣೆಯನ್ನು ಕೊಡುತ್ತೇನೆ. ತಮಿಳು ಭಾಷೆಯು, ಸುಮಾರಾಗಿ ಕ್ರಿಸ್ತಪೂರ್ವ ಒಂದೆರಡು ಶತಮಾನಗಳ ಅವಧಿಯಲ್ಲಿ ತನ್ನ ಲಿಪಿವ್ಯವಸ್ಥೆಯನ್ನು ರೂಪಿಸಿಕೊಳ್ಳುವಾಗ, ಮೂಲ ಬ್ರಾಹ್ಮೀ ಲಿಪಿಯ ಐವತ್ತಕ್ಕೂ ಮಿಕ್ಕಿದ ಅಕ್ಷರಗಳ ಲಿಪಿಮಾಲೆಯಲ್ಲಿ ತನ್ನ ಉಚ್ಚಾರಣೆಗೆ ಬೇಕಾದ ಇಪ್ಪತ್ತಾರು ಅಕ್ಷರಗಳನ್ನಷ್ಟೇ ಕರಾರುವಕ್ಕಾಗಿ ಆಯ್ದುಕೊಂಡಿತು. ಅದಾಗಿ ಒಂದೆರಡು ಶತಮಾನಗಳ ಅನಂತರ ಕನ್ನಡವು ತನ್ನ ಲಿಪಿಮಾಲೆಯನ್ನು ರೂಪಿಸಿಕೊಳ್ಳುವಾಗ, ತನ್ನ ಉಚ್ಚಾರಣೆಗೆ ಅಗತ್ಯವಿಲ್ಲದಿದ್ದಾಗ್ಯೂ ಅದೇ ಬ್ರಾಹ್ಮಿಯ ಬಹುತೇಕ ಅಷ್ಟೂ ಅಕ್ಷರಗಳನ್ನೂ ಇರಲಿ ಅಂತ, ಉಳಿಸಿಕೊಂಡಿತು. ಈಮೂಲಕ ಕನ್ನಡವು ಅನ್ಯಭಾಷೆಗಳ ಶಬ್ದಾಕ್ಷರವ್ಯವಹಾರಗಳಿಗೂ ಯಾವತ್ಕಾಲಕ್ಕೂ ತೆರಪನ್ನು ಕಾದಿರಿಸಿಕೊಂಡಿತು. ಈಯೊಂದು ನಿರ್ಧಾರದ ಮೂಲಕ ಈ ಎರಡು ಭಾಷೆಗಳ ಅತ್ಯಂತ ಮೌಲಿಕ ಭಿನ್ನತೆಯೊಂದು ಸೃಷ್ಟಿಗೊಂಡಂತಾಯಿತು.
ತಮಿಳು ಭಾಷೆಯ ಮೊದಲ ಆಧಾರಗ್ರಂಥವೆನ್ನಬಹುದಾದ ‘ತೊಳ್ಕಾಪ್ಪಿಯಂ’(ಕ್ರಿ.ಶ.೪-೫ನೇ ಶತಮಾನ?)ಮತ್ತು ಅದೇ ಬಗೆಯಲ್ಲಿ ಕನ್ನಡಕ್ಕೆ ಆಧಾರಗ್ರಂಥವಾದ ‘ಕವಿರಾಜಮಾರ್ಗ’(ಸು.ಕ್ರಿ.ಶ.೮೬೦-೮೭೦)-ಈಎರಡು ಸಮಾನ ಗ್ರಂಥಗಳನ್ನು ಪರಸ್ಪರ ಹೋಲಿಸಿ ನೋಡಿದರೆ, ತಮಿಳು ಮತ್ತು ಕನ್ನಡ ಭಾಷೆಗಳು ಪ್ರತ್ಯೇಕ-ಸ್ವತಂತ್ರವಾಗಿ ಹರಳುಗಟ್ಟಿಕೊಳ್ಳುತ್ತಿದ್ದ ಸಂಧರ್ಭದಲ್ಲಿ ಯಾವಯಾವ ಬಗೆಯ ಸ್ವಂತಿಕೆಗಳನ್ನು ಸೃಷ್ಟಿಸಿಕೊಂಡವು ಮತ್ತು ಭಿನ್ನತೆಗಳನ್ನು ಹೊರಗೊಳಿಸಿಕೊಂಡವು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಒಂದು ಉದಾಹರಣೆಯನ್ನು ಹೇಳುತ್ತೇನೆ. ಸಂಸ್ಕೃತದಲ್ಲಿ ಆಗ ವಿಪುಲವಾಗಿ ಬೆಳೆದುಕೊಳ್ಳುತ್ತಿದ್ದ ‘ಕಾವ್ಯಮೀಮಾಂಸೆ’ಯು ತನಗೆ ಅ-ಪ್ರಸ್ತುತ ಅಥವಾ ಅಪರಿಚಿತ ಎನ್ನುವ ಹಾಗೆ‘ತೊಳ್ಕಾಪ್ಪೀಯಂ’ ,ತಮಿಳಿನದೇ ಆದ ಒಂದು ಸ್ವಂತ ಕಾವ್ಯಶಾಸ್ತವನ್ನು ರಚಿಸಿಕೊಳ್ಳಲು ಯತ್ನಿಸಿತು. ‘ಕವಿರಾಜಮಾರ್ಗ’ವು ಅದಕ್ಕೆ ಬದಲಾಗಿ, ಸಂಸ್ಕೃತ ಕಾವ್ಯಮೀಮಾಂಸೆಯನ್ನು ಆಧಾರಕ್ಕಿಟ್ಟುಕೊಂಡು ಅದರಲ್ಲಿ ಕನ್ನಡದ ಸ್ವಂತ ಚಿಂತನೆಗಳೇನೆಂಬುದನ್ನು ಖಚಿತವಾಗಿ ನಮೂದಿಸಿಕೊಳ್ಳುತ್ತ ಹೋಯಿತು. ಸಂಸ್ಕೃತದಲ್ಲಿ ‘ಶಾಂತರಸ’ದ ಬಗ್ಗೆ ಚರ್ಚೆಯ ಪ್ರಾರಂಭವಾದದ್ದೇ ಬಹುಶಃ, ಕನ್ನಡದ ವಿಶಿಷ್ಟ ಚಿಂತನೆಯ ಪರಿಣಾಮವಾಗಿ.
ಈ ಭಿನ್ನತೆ-ಏಕತೆಗಳ ಮಾತು ಅಷ್ಟು ಸರಳವಾದ್ದಲ್ಲ ಅಂತಲೂ ನಮಗೆ ಗೊತ್ತಿದೆ. ಒಂದು ಐತಿಹ್ಯವನ್ನು ಕೇಳಿದ್ದೇನೆ. ಕೇರಳದ ವೈಕಂ ಸತ್ಯಾಗ್ರಹದ ಸಂಧರ್ಭದಲ್ಲಿ ಗಾಂಧಿಜಿಯು ನಾರಾಯಣ ಗುರುಗಳನ್ನು ಭೆಟಿಯಾದಾಗ ನಡೆದ ಸಂಗತಿಯಂತೆ ಇದು. ಇಬ್ಬರೂ ಆಶ್ರಮದೆದುರು ವಿಶಾಲವಾದ ಮರದ ಕೆಳಗೆ ಕೂತು ಮಾತಾಡಿಕೊಳ್ಳುತ್ತಿದ್ದರಂತೆ. ನಾರಾಯಣ ಗುರು ಅಪ್ಪಟ ಅದ್ವೈತಿ ಮತ್ತು ಗಾಂಧಿ,‘ಅಹಂ ಬ್ರಹ್ಮಾಸ್ಮಿ’ ಅನ್ನಲಿಕ್ಕೆ ಅಂಜಿದವರು. ‘ಗುರುಜಿ, ನಮ್ಮ ತಲೆಯ ಮೇಲೆ ಚಪ್ಪರವಾಗಿರುವ ಈ ದೊಡ್ಡ ಮರದಲ್ಲಿ ಲಕ್ಷಾಂತರ ಎಲೆಗಳಿವೆ; ಇವುಗಳಲ್ಲಿ ಒಂದರಹಾಗೆ ಇನ್ನೊಂದು ಇಲ್ಲವೇ ಇಲ್ಲ, ಅಲ್ಲವೇ?’ ಅಂತ ಗಾಂಧಿ, ಮಾತಿನ ಮಧ್ಯೆ ಪ್ರಶ್ನೆ ಹಾಕಿದರು. ಅದಕ್ಕೆ ಗುರುಗಳ ಉತ್ತರ: ಹೌದು. ಆದರೆ ಬಾಯಲ್ಲಿಟ್ಟು ಜಗಿದು ನೋಡಿದರೆ ಎಲ್ಲವುಗಳ ರುಚಿಯೂ ಒಂದೇ ಅಲ್ಲವೇ?’ ಈ ಮಾತುಕತೆಯ ಸಂಗತಿ ಏನೇ ಇದ್ದರೂ ಗುರು-ಮಹಾತ್ಮರಿಬ್ಬರೂ ಇಂಥ ದ್ವಂದ್ವಹಳನ್ನು ನಿಚ್ಚಳವಾಗಿ ಅರಿತವರೇ ಎಂಬುದನ್ನು ನಾವು ಬಲ್ಲೆವು. ಇಂಥ ದ್ವಂದ್ವಗಳನ್ನು ಪ್ರಾಯಶಃ, ಬುದ್ಧನು ಹೇಳುವಹಾಗೆ, ‘ಮಾಧ್ಯಮಿಕ’ ದೃಷ್ಟಿಯಿಂದ ಒಮ್ಮೆಲೇ ಒಟ್ಟಿಗೆ, ಗ್ರಹಿಸುವ ಚಾತುರ್ಯ ಬೇಕು.
ಜಗತ್ತಿನಲ್ಲಿ ಅತ್ಯಂತ ಎತ್ತರದ ಏಕಶಿಲಾವಿಗ್ರಹವಾದ ಶ್ರವಣಬೆಳುಗೊಳದ ಗೊಮ್ಮಟ ಪ್ರತಿಮೆಯು ಕನ್ನಡದ ಸೃಷ್ಟಿಯೇ. ಕನ್ನಡದ ಸ್ವಂತಿಕೆಯ ಶಿಲಾಸಾಕ್ಷಿ ಅದು. ಹಾಗಂತ, ಅದರಲ್ಲಿ ಕನ್ನಡದ್ದೆಂದು ಮೇಲಕ್ಕೆ ಕಾಣುವ ಚಹರೆಗಳಾವವೂ ಇಲ್ಲವೇ ಇಲ್ಲ. ಸ್ಥಳೀಯತೆಯನ್ನು ಕಾಣಿಸಬಹುದಾದ ಯಾವುದೇ ಒಡವೆಯಿಲ್ಲದ, ಕಡೆಗೆ ತುಂಡು ಬಟ್ಟೆಯೂ ಇಲ್ಲದ ನಗ್ನ ಮಾನವ ವಿಗ್ರಹ ಅದು. ಆದರೆ, ಪಂಪಕವಿಯ ಕೃತಿಯ ಸ್ಮೃತಿಯಿಂದ, ಮಾತ್ರವಲ್ಲ ಅದಕ್ಕೆ ಹಿಂದಿನ ಸಹಸ್ರವರ್ಷಗಳ ಕನ್ನಡದ ಸ್ಮೃತಿಯಿಂದ ದೀಪ್ತನಾಗಿರುವ ಕನ್ನಡಿಗನು ಮಾತ್ರವೇ ಆ ಗೊಮ್ಮಟ ಮುಖಚರ್ಯೆಯ ಅಸಂಖ್ಯ ಸೂಕ್ಷ್ಮಗಳನ್ನು ಅರಿವುಗೊಳಿಸಿಕೊಳ್ಳಬಲ್ಲ-ಇತಾಲಿಯನ್ನನೊಬ್ಬ ಅಥಾವಾ ಒಬ್ಬ ಕ್ರಿಶ್ಚಿಯನ್ ಮೊನಾಲಿಸಾಳ ನಿಗೂಢ ಹಾಸವನ್ನು ಅರಿವುಗೊಳಿಸಿಕೊಳ್ಳಬಹುದಾದಂತೆ. (ಗೊಮ್ಮಟನ ಮುಖಚರ್ಯೆಯನ್ನು ಹೊಳೆಯಿಸಿಕೊಂಡಿರುವ ಕನ್ನಡಿಗನೊಬ್ಬನಿಗೆ ಕ್ರಮೇಣ ಮೊನಾಲಿಸಾಳ ಮುಖಚರ್ಯೆ ಅರಿವುಗೊಂಡೀತು ಮತ್ತು ಹಾಗೇ ಇತಾಲಿಯನ್-ಕ್ರಿಶ್ಚಿಯನ್ಗೆ ಗೊಮ್ಮಟನ ಮುಖಚರ್ಯೆಯೂ ಅವಗತವಾದೀತು.)
‘ಕವಿರಾಜಮಾರ್ಗ’ ವೆಂಬ ಗ್ರಂಥದ ಮಾತು ಹೇಳಿದೆ. ಕವಿ ಶ್ರೀವಿಜಯ ಮತ್ತು ರಾಜಾ ನೃಪತುಂಗರಿಬ್ಬರೂ ಕೂಡಿ ರಚಿಸಿರುವ ಈ ಗ್ರಂಥವು, ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಹೇಗೆ ಸೃಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ‘ಕವಿರಾಜಮಾರ್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ಬಣ್ಣಿಸುತ್ತದೆ. ‘ಕಾವೇರಿಯಿಂದಂ-ಆ-ಗೋದಾವರಿವರಂ-ಇರ್ದ-ನಾಡು-ಅದು ಆ ಕನ್ನಡದೊಳ್ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು‘ಭಾವಿತ’ ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ-ಆ ಚಿಪ್ಪಿನ ಒಳಗೆ ಎನ್ನಿ-‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್-ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ-ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾಲಯ ವಿಲೀನ’ ಎಂಬುದರ ಇನ್ನೊಂದು ಅರ್ಥವನ್ನು(ವಸುಧಾಲಯವನ್ನು ತನ್ನೊಳಗೆ ಅರಗಿಸಿಕೊಂಡಿರುವಂಥದು ಎಂಬ ಅರ್ಥವನ್ನು) ಪರಿಭಾವಿಸಿಕೊಳ್ಳಬೇಕು. ವಸುಧೆಯ ಒಳಗಿನ ಒಂದು ಕಿರಣಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗ’ ವು ಕಂಡಿರಿಸಿಟ್ಟಿದೆ.
ಕನ್ನಡವು ವಸುಧಾಲಯವನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿರುವ ಪರಿಯನ್ನು ‘ಕವಿರಾಜಮಾರ್ಗ’ವು ಹೀಗೆ ಬಣ್ಣಿಸಿದ್ದರೆ, ರಾಜಾನೃಪತುಂಗನು ತನ್ನ ದೊಡ್ಡ ಸಾಮ್ರಾಜ್ಯವನ್ನು ತನ್ನ ಕಿರು ವ್ಯಕ್ತಿತ್ವದೊಳಗೆ ಭಾವಿಸಿಕೊಂಡಿದ್ದ ಪರಿಯನ್ನು ನೃಪತುಂಗನದೇ ಆದ ‘ಸಂಜಾನ ಶಾಸನ’(ಕ್ರಿ.ಶ.೮೭೧)ದ ಒಂದು ವೃತ್ತವು(ಪ.ಸಂ.೪೩)ಹೀಗೆ ಬಣ್ಣಿಸಿದೆ:
ರಾಜಾತ್ಮಾ ಮನ ಏವ ತಸ್ಯ ಸಚಿವಃ ಸಾಮಂತಚಕ್ರಂ ಪುನಃ
ತನ್ನಿತ್ಯೇಂದ್ರಿಯವರ್ಗ ಏಷ ವಿಧಿವದ್ವಾಗಾದಯಸ್ಸೇವಕಾಃ
ದೇಹಸ್ಥಾನಮಧಿಷ್ಠಿತಃ ಸ್ವವಿಷಯಂ ಭೋಕ್ತುಂ ಸ್ವತಂತ್ರಃ ಕ್ಷಮಃ
ತಸ್ಮಿನ್ ಭೋಕ್ತರಿ ಸನ್ನಿಪಾತವಿವಶೇ ಸರ್ವೇಪಿ ನಶ್ಯಂತಿ ತೇ
(ತನ್ನ ಆತ್ಮವೇ ರಾಜ, ತನ್ನ ಮನಸ್ಸೇ ಮಂತ್ರಿ, ತನ್ನ ಇಂದ್ರಿಯಗಳೇ ಸಾಮಂತವರ್ಗ, ತನ್ನಮಾತು ಮುಂತಾದವೇ ಸೇವಕರು-ಹೀಗೆ ತನ್ನ ದೇಹದಲ್ಲೇ ದೇಶವನ್ನು ಅಧಿಷ್ಠಾನಗೊಳಿಸಿಕೊಂಡಿರುವವನು ರಾಜ್ಯವನ್ನು ಸಂಪೂರ್ಣವಾಗಿ ಅನುಭವಿಸಲಿಕ್ಕೆ ತಕ್ಕ ಸಹನಾಶಕ್ತಿಯನ್ನೂ ಸ್ವಾತಂತ್ರ್ಯವನ್ನೂ ಪಡೆದಿರುತ್ತಾನೆ; ಹೀಗಿದ್ದಾಗ ರಾಜ್ಯದಲ್ಲಿ ಹುಟ್ಟಿಕೊಳ್ಳುವ ರೋಗಸನ್ನಿಪಾತಗಳು ಸಮಸ್ತವೂ ನಾಶವಾಗಿ ಹೋಗುತ್ತವೆ.)
ಜಗತ್ತಿಗೆ ತಾನು ವಿಸ್ತರಿಸಿಕೊಳ್ಳುವ ಮತ್ತು ಜಗತ್ತನ್ನು ತನ್ನಲ್ಲಿ ಒಳಗೊಳಿಸಿಕೊಳ್ಳುವ ಈ ಚೋದ್ಯದ ಪ್ರಕ್ರಿಯೆಗೆ ದೃಷ್ಟಾಂತವನ್ನು, ವ್ಯವಸಾಯಗಾರನಾಗಿ ನಾನು ನಿತ್ಯವೂ ಕಣ್ಣೆದುರೇ ಕಾಣುತ್ತೇನೆ. ನೆಲದಲ್ಲಿ ನೆಟ್ಟುಕೊಂಡ ಬೀಜವು ಅಲ್ಲೇ ಮೊಗ್ಗು ಮೊಗವಡೆದು ಮುನ್ನೂಕಿಕೊಂಡು ಕ್ರಮೇಣ ಬೃಹದಾಕಾರದ ಮರವಾಗಿ ಉಪಬೃಂಹಿತವಾಗಿ ಬೆಳೆಯುತ್ತದೆ, ಬನನ್ನು ತುಂಬುತ್ತದೆ; ಅನಂತರ ತನ್ನ ಬೃಹತ್ತನ್ನು ಕಿರುಬೀಜವೊಂದರಲ್ಲಿ ಮರಳಿ ಅಕುಂಚನಗೊಳಿಸಿ ಸಂಗೋಪಿಸಿಕೊಳ್ಳುತ್ತದೆ.
ಕನ್ನಡ ನಾಡು ಎಂಬ ಭಾಷಾಸಮುದಾಯವು ಏಕಘಟಕ ಬೌಗೋಲಿಕ ರಾಜ್ಯವೂ ಆಗಿದ್ದುದು ೯ನೇ ಶತಮಾನದಲ್ಲೊಮ್ಮೆ,ಕೆಲವುಕಾಲ ಮಾತ್ರ. ಮತ್ತೆ ಅದು ಅಸ್ತಿತ್ವಕ್ಕೆ ಬಂದು ಕಂಡದ್ದು ನಮ್ಮ ಕಾಲದಲ್ಲೇ; ೧೯೫೬ ರಲ್ಲಿ ಭಾರತದಲ್ಲಿ ಭಾಷಾರಜ್ಯಗಳ ನಿರ್ಮಾಣವಾದಾಗ. ಹಾಗಾದರೂ ‘ಕವಿರಾಜಮಾರ್ಗ’ ವು ಹರಳುಗಟ್ಟಿಸಿಟ್ಟ ಕನ್ನಡ ಭಾವರಾಜ್ಯವು ಸಹಸ್ರ ವರ್ಷಗಳಿಗೂ ಮಿಕ್ಕು ಮುಕ್ಕಾಗದೆ ಕನ್ನಡಿಗರ ಅಂತರಂಗದಲ್ಲಿ ತಾಳಿ ಬಾಳಿಕೊಂಡು ಬಂದಿದೆ.
ಅನಂತರದ ಒಬ್ಬ ಕವಿಯು (ದುರ್ಗಸಿಂಹ;ಕ್ರಿ.ಶ.೧೦೩೦) ‘ಕವಿರಾಜಮಾರ್ಗ’ ವನ್ನು ‘ಕನ್ನಡಿಯುಂ ಕೈದೀವಿಗೆಯುಂ’ ಅಂತ ಹೊಗಳಿದ. ಇದು ಬಹು ಮಾರ್ಮಿಕವಾದ ರೂಪಕ. ‘ಕವಿರಾಜಮಾರ್ಗ’ ವು ವಸುಧಾ ಜಗತ್ತನ್ನೂ ಅದರಲ್ಲಿನ ಕನ್ನಡದ ಸ್ವಂತಿಕೆಯ ಜಗತ್ತನ್ನೂ ವಾಸ್ತವವಾಗಿಯೇ ಕಾಣಿಸುವ ಕನ್ನಡಿ; ಮತ್ತು ಅದಕ್ಕಿಂತ ಮುಖ್ಯವಾಗಿ, ನವೋನವ ಜಾಯಮಾನ-ಸೃಜನಶೀಲತೆಯ ‘ಕನ್ನಡದರ್ಶನ’ ದ ಕೈದೀವಿಗೆ.
ಈ ಶತಮಾನದ ಪೂರ್ವಾರ್ಧವಿಡೀ ಕನ್ನಡಿಗರು ಕನ್ನಡ ರಾಜ್ಯ ಏಕೀಕರಣಕ್ಕಾಗಿ ಹಂಬಲಿಸಿ ಹೋರಾಡಿದ್ದರು. ಆಗ ರಚಿತವಾದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹಾಡು ಕನ್ನಡದ ರಾಷ್ಟ್ರಗೀತವೆನ್ನಿಸಿಕೊಂಡಿತು. ೧೯೫೬ ರಲ್ಲಿ ಕರ್ನಾಟಕ ಏಕೀಕರಣವಾದ ದಿನ ರಾಜಧಾನಿಯಲ್ಲಿ ನಡೆದ ಮಹಾಸಮಾರಂಭದಲ್ಲಿ ನಮ್ಮ ಪ್ರತಿಭಾವಂತ ಹಾಡುಗಾರ ಪಿ.ಕಾಳಿಂಗರಾಯರು, ‘ಉದಯವಾಗಲಿ’ ಎಂದಿದ್ದುದನ್ನು ಕೊಂಚ ಬದಲಿಸಿ, ‘ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು’ ಅಂತ ಹಾಡಿದರಂತೆ. ಆಗ, ಕನ್ನಡದ ಮಹತ್ತ್ವದ ಕವಿ ಬೇಂದ್ರೆಯವರು ಕೊಂಚ ಅಸಮಧಾನದಿಂದ, ‘ಹಾಂಗೆ ಬದಲಿಸಬಾರದಪಾ’ ಅಂದರಂತೆ. ಕವಿಯ ಮಾತು ಸಂಗೀತಗಾರನಿಗೆ ತಟ್ಟನೆ ಅರ್ಥವಾಗಲಿಲ್ಲ. ಅರ್ಥವೆಂದರೆ-‘ಕನ್ನಡದರ್ಶನ’ ಅಥವಾ ‘ಭಾವಕನ್ನಡ’ ವೆಂಬುದು ಪ್ರಾಯಃ ಯಾವತ್ತೂ ಉದಯವಾಗದ, ಆದರೆ ಯಾವದ್ಭವಿಷ್ಯವೂ ಅದರ ಪೂರ್ಣೋದಯಕ್ಕಾಗಿ ಹೊಸಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಹೋಗಲು ಸವಾಲು ಹಾಕಿ ಛಲ ಹುಟ್ಟಿಸುವ-ಮುಂಗೈಲಿದ್ದು ಅಂಗೈಗೆ ಬಾರದ-ಕನ್ನಡ ಜನಪದಚೈತನ್ಯವನ್ನು ಬೆಳಕುಬೀರಿ ಮುಂದುಮುಂದಕ್ಕೆ ನಡೆಸುವ ಮಾಯದ ಕೈದೀವಿಗೆ.
ಯಾಕೆ ಇದನ್ನು ಒತ್ತಿ ಹೇಳುತ್ತಿದ್ದೇನೆಂದರೆ, ಮೂಲನಿಷ್ಠಾವಾದ(ಫಂಡಮೆಂಟಲಿಸ್ಮ್)ವು ಗೂಡುಗಟ್ಟಬಹುದಾದ ಕೊಂಬೆಯೂ ಇದೇ. ಕನ್ನಡದ ಸ್ವರ್ಣ ಯುಗವೊಂದು ಹಿಂದಕ್ಕೆ ಇತ್ತು ಅಂತ ಭ್ರಾಂತಿಗೊಂಡಿರುವವನು ತನ್ನ ಭ್ರಮೆಯ ಆ ಪ್ರಾಚೀನ ಜಗತ್ತಿಗೆ ಮರಳಿಕೊಳ್ಳಲು ತವಕಿಸುತ್ತಾನೆ, ಮೂಲನಿಷ್ಠನಾಗುತ್ತಾನೆ. ನನಗೆ ಅಂಥ ಭ್ರಾಂತಿ ಇಲ್ಲವೇ ಇಲ್ಲ ಪೂರ್ವದ ಕನ್ನಡದ ಭವವು ಈಗಿನಷ್ಟೇ, ಅಥವಾ ಬಹುಶಃ ಈಗಿಗಿಂತಲೂ ಹೆಚ್ಚು ಕಲುಷಿತವಾದ್ದಿರಬೇಕು, ದುಷ್ಟವಾದ್ದಿರಬೇಕು ಅಂತ ನನ್ನ ಊಹೆ. ಆದರೆ ಪೂರ್ವದ ಯುಗಯುಗಗಳ ಭಾವಕನ್ನಡ-ಸ್ಮೃತಿಕನ್ನಡವು ಇವತ್ತಿಗೂ ನನಗೆ ಸಂಜೀವನಿಯಿರಬಹುದಾದ ಗಣಿ; ಅಗೆದಗೆದು ಅದನ್ನು ಶೋಧಿಸಿಕೊಳ್ಳಲು ಹಾರೈಸುತ್ತೇನೆ, ಹವಣಿಸುತ್ತೇನೆ.
ಪ್ರಾರಂಭದಲ್ಲಿ ನಾನು ಇವತ್ತಿನ ನಮ್ಮ ಆಕಾಶದಲ್ಲಿ ಹುಯ್ಯಲಿಡುತ್ತಿರುವ ಜಾಗತೀಕರಣ-ಜಗತ್ಗ್ರಾಮ ಜಾಹೀರುಗಳ ಬಗ್ಗೆ ಪ್ರಸ್ತಾಪಿಸಿದೆ. ಜಗತ್ತು ಎನ್ನುವ ಈ ಶಬ್ದವನ್ನು ಬಹು ಸಲೀಸಾಗಿ ಉಗ್ಗಡಿಸುತ್ತೇವಲ್ಲ? ಬೇರೆ ಬೇಡ, ಈ ಭೂಜಗತ್ತನ್ನೇ ತೆಗೆದುಕೊಳ್ಳಿ. ಅದು ಯಾವುದು? ಎಲ್ಲಿದೆ? ಭೂಗೋಲ ಭೂಭಾಗ ನಕಾಶೆಗಳೆಲ್ಲವೂ ನಮಗೆ ಗೊತ್ತು. ವಿಮಾನದಲ್ಲಿ ಸಂಚಾರ ಹೊರಟು ಹಲವಾರು ದೇಶಗಳ ರಾಜಧಾನಿಗಳಲ್ಲಿ ಮೊಕ್ಕಾಂ ಮಾಡಿ ತಂಗಿ ಅಲ್ಲಲ್ಲಿನ ವಿಶೇಷಗಳೆಲ್ಲವನ್ನೂ ಪರಿವೀಕ್ಷಿಸುತ್ತ ಭೂಮಂಡಲವನ್ನು ಸುತ್ತುವವರಿದ್ದಾರೆ. ಅಂಥವರಿಗೂ ಜಗತ್ತು ಎನ್ನುವ ಆ ಸಮಸ್ತವೂ ಅಂತಿಮವಾಗಿ ಉಳಿದುಕೊಳ್ಳುವುದು ಅವರ ಐದಾರಡಿ ಗಾತ್ರದ ದೇಹಪಂಜರದ ಒಳಗೇನೇ. ಅಂಥ ಚಾರಣಚಕ್ರವರ್ತಿಗಳಿಗೂ ಅಂತಿಮವಾಗಿ ಜಗತ್ತೆಂದರೆ-ಅವರ ಪಂಚೇಂದ್ರಿಯ-ಮನಸ್ಸು-ಬುದ್ಧಿಗಳು ಏನೇನನ್ನು ಹಿಡಿದು ಅವರ ಗಾತ್ರ ಪಂಜರದಲ್ಲಿ ಇಡಿದಿಟ್ಟಿರುತ್ತವೋ ಅಂಥ ಚಿತ್ರಗಳು-ಪ್ರತಿಮೆಗಳು ಮಾತ್ರವೇ. ಸೂರ್ಯ-ಚಂದ್ರ-ಗ್ರಹ-ನಕ್ಷತ್ರ ಸ್ಥಗಿತ ಸಮಸ್ತ ವಿಶ್ವಮಂಡಲವೂ ಚಿತ್ತಗತ ಚಿತ್ರವಷ್ಟೇ. ತನ್ನೊಳಗೆ ಅರಸಿ ಅಡಗಿಸಿಕೊಂಡದ್ದನ್ನು ಬಿಟ್ಟು ಹೊರಗಿನದೇನುಂಟು ನಮಗೆ?
ಪ್ರವಾಹದಲ್ಲಿ ಮುಳುಮುಳುಗಿ ತೇಲಿ ಹೋಗುತ್ತಿದ್ದ ಒಂದು ನರಿಯು, ‘ಹೋ,ಜಗತ್ತು ಮುಳುಗುತ್ತಿದೆ’ ಅಂತ ಅರಚಿಕೊಳ್ಳುತ್ತಿತ್ತಂತೆ. ಅದನ್ನೊಂದು ಪರಿಹಾಸದ ಕಥೆಯಾಗಿಹೇಳುವುದುಂಟು. ಪರಿಹಾಸವ್ಯಾತಕ್ಕೆ? ಅದೇ ವಾಸ್ತವ. ಜಗತ್ತು ಇರುವುದು ನಮ್ಮ ಒಳಗೇ ಮತ್ತು ನಾವು ಮುಳುಗಿದರೆ ಆ ನಮ್ಮ ಜಗತ್ತು ಮುಳುಗಿದಂತೇ ಅಲ್ಲವೇ? ‘ಅಲ್ಲ, ಜಗತ್ತು ನಮ್ಮ ಹೊರಗೆ ಆಚೆಗಿರುವಂಥದು’ ಅಂತ ಯಾರಾದರೂ ವಾದಿಸುವುದಾದರೆ, ‘ಹಾಗೆನ್ನುವ ಆ ನಂಬಿಕೆ ಕೂಡ ನಿಮ್ಮ ಒಳಗಿನದು, ಹೊರಗೆ ಇರುವಂಥದಲ್ಲ’ ಅನ್ನುತ್ತೇನೆ ನಾನು.
ಜಾಗತೀಕರಣವೆಂಬ ಇವತ್ತಿನ ನಮ್ಮ ಸಂಭ್ರಮಣವನ್ನು ಕಂಡು ಯಾಕೆ ನನಗೆ ಅಸಮಧಾನವಾಗುತ್ತದೆ ಮತ್ತು ಯಾಕೆ ಜಿಗುಪ್ಸೆ-ಭೀತಿಗಳಿಂದ ಮೈ ನಡುಗುತ್ತದೆ-ಅಂತ ಯೋಚಿಸುತ್ತೇನೆ. ‘ಜಾಗತೀಕರಣ’ ದ ನಿರ್ಭಿನ್ನ ಪ್ರತಿಮುಖವಾಗಿರುವ ‘ಸ್ಥಳೀಕರಣ’ ವನ್ನು ಮರೆತು ಅಥವಾ ಅವಗಣಿಸಿ ಅದೊಂದನ್ನೇ ವಿಜೃಂಬಿಸುವುದನ್ನು ಕಂಡು ಅಸಮಧಾನವಾಗುತ್ತದೆ. ಅದಕ್ಕಿಂತಲೂ-ಈ ಜಾಗತೀಕರಣವೆಂಬುದು ಪರರನ್ನು ವಂಚಿಸಿ ನಫೆ ಕಮಾಯಿಸಿಕೊಳ್ಳುವೆನೆಂಬ ಅಸಹ್ಯ ಅಮಾನುಷ ವಾಣಿಜ್ಯ ಶೋಷಣೆಯ ಘೋರ ದುಸ್ಸಾಹಸಕ್ಕೆ ಕೊಟ್ಟುಕೊಂಡಿರುವ ಹೊಸ ಹೆಸರು ಎಂಬುದರ ಅರಿವಾಗಿ ಜುಗುಪ್ಸೆ ಹುಟ್ಟುತ್ತದೆ, ಅಪಾರ ಭಯವಾಗುತ್ತದೆ.
ನಮಸ್ಕಾರ.
*****
