ಗೋದಾವರಿ ಪದಾ ಹೇಳೆ

(ಚಿತ್ತಾಲರ ೫೦ನೇ ಕಥೆ)

ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ ಮಗಳ ಜೊತೆಗೆ ಚಹಕ್ಕೆ ಬರಲಿದ್ದಾಳೆ. ನಾಳೆ ಊರಿಗೆ ಹೊರಟಿದ್ದಾಳಂತೆ. ಸದ್ಯ ಬಂದದ್ದು ದಿಲ್ಲಿಯಿಂದಂತೆ. ಊರಿಗೆ ಹೋಗುವ ಮೊದಲು ನಿಮ್ಮನ್ನೊಮ್ಮೆ ನೋಡುವ ಆಸೆಯಂತೆ. ನಾನು ಊಟಕ್ಕೇ ಬನ್ನಿ ಎಂದೆ. ಬೇಡವೆಂದಳು.”

ಕೆಲಸದ ಹೊತ್ತಿಗೆ ಆಫೀಸ್ಗೆ ಪೋನ್ ಮಾಡಕೂಡದೆಂದು ನಾನು ಹಲವು ಸಾರೆ ಬಜಾಯಿಸಿ ಹೇಳಿದ್ದೆನಾದ್ದರಿಂದ ತಿಳಿಸಬೇಕಾದ್ದನ್ನು ಸಂಕ್ಷಿಪ್ತವಾಗಿ ತಿಳಿಸಿ ಹೆಂಡತಿ ಫೋನ್ ಕೆಳಗಿಟ್ಟುಬಿಟ್ಟಿದ್ದಳು. ಹಾಗೆ ಕೆಳಗಿಡುವಾಗ ಒಳಗೊಳಗೇ ಖುಕ್ ಎಂದು ನಕ್ಕದ್ದು ಕೇಳಿಸಿದಂತಾಗಿ ನಾನು ಗೊಂದಲಗೆಟ್ಟೆ.

ಗೋದಾವರಿ ಪದಾ ಹೇಳೆ ಎಂಬ ವಿಚಿತ್ರ ಹೆಸರಿನ ಹುಡುಗಿ ಈ ಧರಣಿ ಮಂಡಲದ ಮೇಲೆ ನಿಜಕ್ಕೂ ಇದ್ದಾಳೆ ಎಂದು ಗೊತ್ತಾದದ್ದು ಒಂದು ದಿನ ನಸುಕಿನಲ್ಲಿ ರವಕಿ-ಕಿರುಗಣೆ ತೊಟ್ಟು, ತಲೆಗೆ ಕೆಂಪು ರಿಬ್ಬನ್ ಕಟ್ಟಿದ ಎರಡು ಜಡೆಗಳನ್ನು ಹಾಕಿಕೊಂಡು ತನ್ನ ಅಮ್ಮನ ಕೈಹಿಡಿದು ಅವಳು ನಮ್ಮ ಅಂಗಳದಲ್ಲಿ ಪ್ರಕಟಗೊಂಡಮೇಲೇ.

ಇದು ನಡೆದದ್ದು ಇಪ್ಪತ್ತೆರಡು ವರ್ಷಗಳ ಹಿಂದೆ. ಅದಾಗ ಎರಡು ದಿನಗಳ ಮೇಲೆ ನಡೆಯಲಿದ್ದ ಅಕ್ಕನ ಮದುವೆಗೆ ಪರ ಊರಿನ ನೆಂಟರಿಷ್ಟರೆಲ್ಲ ನೆರೆಯ ತೊಡಗಿದ್ದರು. ಅಂಗಳಕ್ಕೆ ದೊಡ್ಡ ಚಪ್ಪರ ಹಾಕಿದ್ದರು. ಪ್ರವೇಶದ್ವಾರಕ್ಕೆ ಬಾಳೆ, ಮಾವಿನ ಎಲೆಗಳ ತೋರಣ ಕಟ್ಟಿದ್ದರು. ಮಡಿವಾಳ ಮಾದೇವ ಚಪ್ಪರದ ಮಾಡಿಗೆ ತಟ್ಟಿಗಳಿಗೆ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಅಚ್ಛಾದಿಸಿದ ಬಿಳಿಯ ಬಟ್ಟೆಯಿಂದಾಗಿ ಚಪ್ಪರಕ್ಕೆ ಚಪ್ಪರವೇ ಶುಭ್ರ ಶೋಭೆಯಿಂದ ಬೆಳಗಿತ್ತು. ಚಪ್ಪರದ ಒಂದು ಕೊನೆಯಲ್ಲಿ ಬಣ್ಣದ ಕಾಗದಗಳಿಂದ, ಝಗಝಗಿಸುವ ಬೇಗಡೆಯಿಂದ ಅಲಂಕೃತವಾದ ಲಗ್ನಮಂಟಪ ನಿಂತಿತ್ತು. ಸರಿಮಧ್ಯದಲ್ಲಿ ತುಳಸಿ ವೃಂದಾವನ. ಓಲಗದವರು ಬೆಳಿಗಿಗೇ ಒಮ್ಮೆ ಬಂದು ಪಂಚವಾದ್ಯ ಬಾರಿಸಿ, ಮದುವೆಯ ಶುಭ ಸಮಾಚಾರವನ್ನು ಕೇರಿಗೆಲ್ಲ ಸಾರಿ, ಅಂದು ಮನೆಯಲ್ಲಿದ್ದ ದೇವಕಾರ್ಯಕ್ಕೆ ಶುಭ ಕೋರಿ ಹೋಗಿದ್ದರು. ತುಳಸಿ ವೃಂದಾವನದಿಂದ ಹಿಡಿದು ಹಿತ್ತಲ ದಣಪೆಯವರೆಗೆ ವಾತಾವರಣವೆಲ್ಲ ಉತ್ಸಾಹದಿಂದ ದುಮುಗುಡುತ್ತಿತ್ತು. ಆದರೆ ಇದೀಗ ಅಂಗಳದಲ್ಲಿ ಅದೇ ಕಾಲಿಡುತ್ತಿದ್ದ ಆಗಂತುಕರಿಬ್ಬರನ್ನು ಬರಮಾಡಿಕೊಂಡ ಉತ್ಸಾಹ ನನ್ನ ಮನಸ್ಸಿನಲ್ಲಿ ಬೇರೆಯಾಗಿ ನಿಂತಿತು-

“ಅದೋ! ಕಾವೇರಕ್ಕ ಬಂದಳು. ಗೋದಾವರಿ ಪದಾ ಹೇಳೆ ಬಂದಳು” ಎಂದು ಕುಣಿಯುತ್ತ ಅಕ್ಕ ಆಡಿದ ಮಾತುಗಳು ಅಂಗಳದಲ್ಲಿನ್ನೂ ನಿನದಿಸುತ್ತಿರುವಾಗಲೇ ಒಳಗೆಲ್ಲೋ ಕೆಲಸದಲ್ಲಿದ್ದ ಅಮ್ಮ ಸೋದರತ್ತೆ ಕೂಡಿಯೇ ಜಗಲಿಗೆ ಬಂದು-

“ಕಾವೇರಕ್ಕಾ, ಸೀದಾ ಬಚ್ಚಲಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಅಡುಗೆಮನೆಗೇ ಬನ್ನಿ. ತಿಂಡಿ, ಅಸರಿ ಮುಗಿಸಿಯೇ ಕೆಲಸಕ್ಕೆ ಕೈ ಹಚ್ಚುವಿರಂತೆ” ಎಂದು ಅಮ್ಮನೂ, “ಸ್ನಾನವಾಗಬೇಕಾದರೆ ಹಂಡೆಯಲ್ಲಿ ನೀರು ಕಾದದ್ದೇ ಇದೆ” ಎಂದು ಸೋದರತ್ತೆಯೂ ಬಂದವರಿಗಿತ್ತ ಸ್ವಾಗತದ ಸಂಭ್ರಮ ನೋಡಿ ನಮ್ಮ ಕುಟುಂಬದಲ್ಲಿ ಅವರಿಗೆ ವಿಶೇಷ ಸ್ಥಾನವಿದೆಯೆಂದು ಆಗಲೇ ಹೊಳೆದಿತ್ತು.

ಕಾವೇರಕ್ಕ ನಮ್ಮ ಸಾಂತಯ್ಯ ಬಾಪ್ಪಾನ ತಂಗಿಯೆಂದೂ ಸಾಣೀಕಟ್ಟೆಯಲ್ಲಿ ಚಾ ದುಕಾನು ಇರಿಸಿದ್ದ ಅವಳ ಗಂಡ ನೀಲಕಂಠ ಹಾವು ಕಚ್ಚಿ ಸತ್ತ ಮೇಲೆ ಅವರಿವರಲ್ಲಿ ಅಡುಗೆಯ ಕೆಲಸಕ್ಕೂ ನಿಲ್ಲಬೇಕಾದ ಪರಿಸ್ಥಿತಿ ಉಂಟಾಯಿತೆಂದೂ ಹಿಂದಿನಿಂದ ಗೊತ್ತಾಯಿತು. ಈಗ ಬಂದದ್ದು ನಮ್ಮ ಮನೆಯವರಿಗೆಲ್ಲ ಬೇಕಾಗಿದ್ದ ಆಪ್ತರಾಗಿ. ಅಮ್ಮನಿಗೆ ಮದುವೆಯ ಕೆಲಸದಲ್ಲಿ ನೆರವಾಗಲು.

ಗೋದಾವರಿ ಪದಾ ಹೇಳೆಯನ್ನು ನಾನು ಈ ಮದುವೆಯ ನಂತರ ಮತ್ತೆ ನೋಡಿರಲಿಲ್ಲ. ನೋಡಿದ್ದು ಅಂದು ಅವಳು ತನ್ನ ಗಂಡ ಹಾಗೂ ಮಗಳ ಜೊತೆಗೆ ನಮ್ಮ ಮುಂಬಯಿಯ ಈ ಮನೆಗೆ ಭೇಟಿಯಿತ್ತಮೇಲೇ. ಈ ನಡುವಿನ ಇಪ್ಪತ್ತೆರಡು ವರ್ಷಗಳಲ್ಲಿ ಅವಳು ಏನಾದಳು? ಎಲ್ಲಿಗೆ ಹೋದಳು? ನನಗೆ ತಿಳಿಯುವ ಉಪಾಯವಿರಲಿಲ್ಲ. ಈ ಕಾಲದಲ್ಲಿ ನಾವೂ ಊರು ಬಿಟ್ಟು ಧಾರವಾಡದಲ್ಲಿ ನೆಲೆಸಿದ್ದೆವು. ಅಪ್ಪ-ಅಮ್ಮ ತೀರಿಕೊಂಡ ಮೇಲೆ ನಾನು ಧಾರವಾಡವನ್ನೂ ಬಿಟ್ಟು ಮುಂಬಯಿಯಲ್ಲಿ ಅಣ್ಣನ ಮನೆಗೆ ಬಂದೆ. ಬಂದು ಎಂಜಿನಿಯರಿಂಗ್ ಮುಗಿಸಿ ನೌಕರಿ ಹಿಡಿದೆ. ಎಂಟು ವರ್ಷಗಳ ಹಿಂದಷ್ಟೇ ಮದುವೆಯಾದ ಮೇಲೆ ಹೆಂಡತಿಯೊಡನೆ ಈಗಿನ ಮನೆಯಲ್ಲಿ ಬಿಡಾರ ಹೂಡಿದೆ.

ಮದುವೆಯಾದ ಹೊಸತರಲ್ಲಿ ಒಂದು ರಾತ್ರಿ, ನಾನು ಹೆಂಡತಿ ತುಂಬಾ ಉಲ್ಲಾಸದ ಮೂಡಿನಲ್ಲಿದ್ದಾಗ, ಇದ್ದಕ್ಕಿದ್ದ ಹಾಗೆ ನನಗೆ ಗೋದಾವರಿ ಪದಾ ಹೇಳೆಯ ಬಗ್ಗೆ, ನಮ್ಮ ಮೊದಲ ಭೇಟಿಯಲ್ಲಿ ನಡೆದ ಒಂದು ಚಿಕ್ಕ ಘಟನೆಯ ಬಗ್ಗೆ ಹೇಳುವ ಮನಸ್ಸಾಯಿತು. ಘಟನೆ ನಡೆದ ಹೊತ್ತಿಗೆ ನಾವಿಬ್ಬರೂ ಚಿಕ್ಕವರು. ನಾನು ಹನ್ನೆರಡು-ಹದಿಮೂರು ವರ್ಷದವನಿರಬೇಕು. ಅವಳು ಒಂದೆರಡು ವರ್ಷಗಳಿಂದ ಚಿಕ್ಕವಳು. ನಡೆದದ್ದರ ಬಗ್ಗೆ ಹೇಳೆಂದು ಯಾರೂ ಒತ್ತಾಯಿಸಿರಲಿಲ್ಲ. ನಾನಾಗಿ ಹೇಳಲು ಹೊರಟಿದ್ದೆ. ಆದರೂ ಆರಂಭ ಮಾಡುವ ಮೊದಲೇ ಹೆಂಡತಿಗೆ ಇದು ಬಹಳ ಹಿಂದೆ ನಡೆದದ್ದೆಂದೂ, ವಿಚಾರ ಮಾಡಿ ನೋಡಿದರೆ ಅಂಥ ವಿಶೇಷ ಸಂಗತಿಯೇನಲ್ಲವೆಂದೂ ವಿವರಣೆ ನೀಡುವ ಗರಜು ಏಕೆ ಭಾಸವಾಯಿತೋ! ಅಂದೇ ಹೇಳುವ ಹುಕ್ಕಿ ಏಕೆ ಬಂತೋ! ನನ್ನ ಉಲ್ಲಾಸದ್ದೇ ಕಿತಾಪತಿ ಇದ್ದೀತು. ಅಂತೂ ನಾನು ಹೇಳಿ ಮುಗಿಸಿದ್ದೇ ಹೆಂಡತಿ, ಮೊದಲು ಜೋರಾಗಿ ನಕ್ಕುಬಿಟ್ಟಳು; ಆ ಮೇಲೆ ಒಮ್ಮೆಲೇ ಗಂಭೀರವಾದಳು. ನಾನೂ ಮೊದಲು ನಕ್ಕೆ; ಆಮೇಲೆ ತುಸು ಪೆಚ್ಚಾದೆ. ಆಮೇಲೆ ಗೋದಾವರಿ ಪದಾ ಹೇಳೆ ಮತ್ತೆಂದೂ ನಮ್ಮ ಮಾತಿನಲ್ಲಿ ಬರಲಿಲ್ಲ. ಮುಂದೆ ಯಥಾಕಾಲದಲ್ಲಿ ನಮಗೆ ಇಬ್ಬರು ಮಕ್ಕಳಾದುವು-ಒಂದು ಗಂಡು, ಒಂದು ಹೆಣ್ಣು. ನಮ್ಮ ಕಟ್ಟಡದಲ್ಲಿ ವಾಸಿಸುತ್ತಿದ್ದ ಹಲವರಿಂದ ಸುಖದ ಸಂಸಾರವೆನ್ನುವ ಸರ್ಟಿಫಿಕೇಟೂ ನಮಗೆ ದೊರಕಿತು.

ಹೀಗಿರುವಾಗ, ಈಗ ಇದ್ದಕ್ಕಿದ್ದಹಾಗೆ ಹೆಂಡತಿ, ಗೋದಾವರಿ ಪದಾ ಹೇಳೆ ನಮ್ಮ ಮನೆಗೆ ಬರಲಿದ್ದ ಸುದ್ದಿ ಕೊಡುತ್ತ ‘ಖುಕ್’ ಎಂದು ನಕ್ಕಂತೆ ಕೇಳಿಸಿದಾಗ, ಇವಳಿಗೆ ಗೋದಾವರಿ ಪದಾ ಹೇಳೆಯ ಬಗ್ಗೆ ಹೇಳಿದ್ದೇ ತಪ್ಪಾಯಿತೇನೋ ಅನ್ನಿಸಿತು. ಹೆಣ್ಣು ಗಂಡು ಸಣ್ಣ ಪ್ರಾಯದವರಾದರೇನಂತೆ ಹೆಣ್ಣು-ಗಂಡುಗಳೇ ತಾನೇ!

ನಿಜ ಒಪ್ಪುವುದಾದರೆ, ಹೆಂಡತಿ ನಕ್ಕುದರ ಪರಿಣಾಮ ಹೆಚ್ಚು ಹೊತ್ತು ಬಾಳಲಿಲ್ಲ. ಇಪ್ಪತ್ತೆರಡು ವರ್ಷಗಳ ಹಿಂದೆ ನೋಡಿದವಳನ್ನು ಇನ್ನೊಮ್ಮೆ ನೋಡುವ ಈ ಅವಕಾಶಕ್ಕೆ ನಾನು ಪುಲಕಗೊಂಡಿದ್ದೆ ಎನ್ನುವ ತರಹ ಬಾಸ್ನನ್ನು ಕಂಡು, ಒಂದು ಅರ್ಧ ಗಂಟೆ ಮೊದಲೇ ಆಫೀಸು ಬಿಡುವುದಕ್ಕೆ ಪರವಾನಗಿ ಪಡೆದೆ. ಒಮ್ಮೆ ಪರವಾನಗಿ ಪಡೆದ ಮೇಲೆ ಅರ್ಧ ಗಂಟೆಯೇನು, ಮುಕ್ಕಾಲು ಗಂಟೆಯೇನು-ಕೇಳುವವರಿರಲಿಲ್ಲ. ಈಗ ಆದದ್ದೂ ಹಾಗೆಯೇ. ಎಂದಿಗಿಂತ ಒಂದು ಗಂಟೆ ಮೊದಲೇ ಮನೆಗೆ ಬಂದವನನ್ನು ನಗುನಗುತ್ತ ಸ್ವಾಗತಿಸಿದ ಹೆಂಡತಿ, “ನಿಮ್ಮನ್ನು ನೋಡಲು ಬರುವವರು ಇಷ್ಟರಲ್ಲೇ ಬಂದಾರು. ಕೈಕಾಲು ಮೋರೆ ತೊಳೆದುಕೊಂಡು ಫ್ರೆಶ್ ಆಗಿರಿ. ಇನ್ನೊಮ್ಮೆ ಸ್ನಾನಮಾಡಿಯೇ ಬರುತ್ತೀರೋ ನೋಡಿ. ಮಲಗುವ ಕೋಣೆಯಲ್ಲಿ ಮಂಚದ ಮೇಲೆ ನಿಮ್ಮ ಮೆಚ್ಚುಗೆಯ ಜರ್ಸೀ-ಪ್ಯಾಂಟು ಇರಿಸಿದ್ದೇನೆ. ಇವತ್ತೇ ಲಾಂಡ್ರಿಯಿಂದ ಬಂದಿವೆ. ಅವನ್ನು ತೊಟ್ಟುಕೊಳ್ಳಿ. ಅವುಗಳಲ್ಲಿ ನೀವು ಏಕದಮ್ ಎದ್ದು ಕಾಣಿಸುತ್ತೀರಿ” ಎಂದು ಪುಸಲಾಯಿಸುವಂತೆ ಹೇಳಿ, ಟೆಲಿಫೋನ್ ಮೇಲೆ ನಕ್ಕ ರೀತಿಯಲ್ಲೇ ಇನ್ನೊಮ್ಮೆ ನಕ್ಕಳು. ತುಸು ತಡೆದು, “ಅಂದಹಾಗೆ ಮದುವೆಯ ನಂತರದ ಅವಳ ಹೆಸರು ಶಾರದಾ ಅಂತೆ. ನಿಮಗೆ ತಾನು ಯಾರೆಂದು ಗೊತ್ತಾಗಲಿ ಎಂದಷ್ಟೇ ಗೋದಾವರಿ ಪದಾ ಹೇಳೆ ಎಂದು ಕರೆದುಕೊಂಡದ್ದಂತೆ. ಮಾತನಾಡುವಾಗ ಕಾಳಜಿ ತೆಗೆದುಕೊಳ್ಳಿ” ಎಂದಳು.
*
*
*
*
ಗೋದಾವರಿ ಪದಾ ಹೇಳೆ ಎನ್ನುವ, ಎಲ್ಲೂ ಕೇಳಿ ಗೊತ್ತಿರದ ಹೆಸರು, ಯಾರೋ ಚೇಷ್ಟೆಖೋರರು ಬರೇ ಪ್ರಾಸಕ್ಕೆಂದೇ ರಚಿಸಿರಬಹುದಾದರೆ ಈ ರಚಿಸಿದ ಹೆಸರೇ ಎಲ್ಲರ ಬಾಯಲ್ಲಿ ಏಕೆ ನಿಂತಿತು? ನನಗೆ ತಿಳಿಯದಾಯಿತು. ಅವಳು ನಮ್ಮಲ್ಲಿದ್ದ ನಾಲ್ಕು ದಿನಗಳಲ್ಲಿ ಯಾರೂ ತಪ್ಪಿ ಕೂಡ ಅವಳನ್ನು ಗೋದಾವರಿಯೆಂದು ಕರೆದದ್ದು ನಾನು ಕೇಳಲಿಲ್ಲ. ಅವಳ ಮೋರೆ ನೋಡಿದರಂತೂ ಪದಾ ಹೇಳುವವಳಂತೆ ತೋರಲಿಲ್ಲ, ಯಾರೂ ಅವಳಿಂದ ಹಾಡಿಸಲಿಲ್ಲ. ಮತ್ತೆ ಯಾರಿಗೆ ಗೊತ್ತು, ಎಲ್ಲರೂ ತೋರುವಂತೆ ಇರಲಾರರೇನೋ. ಗೋದಾವರಿ ಪದಾ ಹೇಳೆಯಂತೂ ಖಂಡಿತ ಇರಲಿಲ್ಲ.

ನಾನು ಅರುಹಲು ಹೊರಟಿದ್ದ ಘಟನೆ ನಡೆದದ್ದು ಅಕ್ಕನ ಮದುವೆಯ ದಿವಸ. ಅಭಿಜಿನ್ಮುಹೂರ್ತದ ಮದುವೆ. ಮೂಹೂರ್ತಕ್ಕೆ ಇನ್ನೇನು ಒಂದು ಗಂಟೆಯಿದೆ ಎನ್ನುವಾಗಲೇ ಚಪ್ಪರ ಜನರಿಂದ ಕಕ್ಕಿರಿದಿದೆ. ಶಹನಾಯಿಯ ಮಧುರ ಸ್ವರ, ಭಟ್ಟರ ಮಂತ್ರಘೋಷ. ಹೆಂಗಸರ ಮಕ್ಕಳ ಉಮೇದು ಹುಟ್ಟಿಸಿದ ಗದ್ದಲ-ಎಲ್ಲವೂ ಮದುವೆಯ ಸಂಭ್ರಮಕ್ಕೆ ವಿಶೇಷ ಕಳೆ ತಂದಿವೆ. ನಾನು ಮದುವೆಗಾಗಿಯೇ ಹೊಲಿಸಿದ ಚಡ್ಡಿ ಪೈರಣ ತೊಟ್ಟು, ತಲೆಗೂದಲನ್ನು ಸುಂದರವಾಗಿ ಬೈತಲೆ ತೆಗೆದು ಬಾಚಿಕೊಂಡು ಇಷ್ಟರಲ್ಲೇ ಬರಬೇಕಾಗಿದ್ದ ನನ್ನ ಗೆಳೆಯರ ಹಾದಿ ಕಾಯುತ್ತ ಚಪ್ಪರದ ಪ್ರವೇಶದ್ವಾರದಲ್ಲಿ ನಿಂತು ಕೊಂಡಿದ್ದೆನಷ್ಟೇ. ಎಲ್ಲಿಂದಲೋ ಓಡೋಡುತ್ತ ಬಂದಂತೆ ಬಂದ ಗೋದಾವರಿ ಪದಾ ಹೇಳೆ ಗಪ್ಪನೆ ನನ್ನ ಕೈರಟ್ಟೆ ಹಿಡಿದು, “ಏ ಹುಡುಗಾ, ನಿಮ್ಮ ಹಿತ್ತಿಲಲ್ಲಿ ಬಿಂಬಲೀ ಮರವಿದೆಯಂತೆ. ನನಗೆ ತೋರಿಸುತ್ತೀಯಾ?” ಎಂದು ಕೇಳಿದವಳು, ನನಗೆ ವಿಚಾರಮಾಡಲೂ ಸಮಯ ಕೊಡದೇ ಬಾವೀಕಟ್ಟೆಯ ಬಳಿಯ ನೀರಹಲಸಿನ ಮರದ ಕಡೆಗೆ ಎಳೆದೊಯ್ದಳು. ಇವಳು ಏನು ಮಾಡಲು ಹೊರಟಿದ್ದಾಳೆ ಎಂದು ಗೊತ್ತಾಗುವ ಮೊದಲೇ ನನ್ನ ಮೋರೆಯನ್ನು ತನ್ನ ಬೊಗಸೆಯಲ್ಲಿ ಹಿಡಿದು, ತುಟಿಗಳನ್ನು ತುಟಿಗೊತ್ತಿ, ನನ್ನನ್ನು ಗಟ್ಟಿಯಾಗಿ ಮುದ್ದಿಸಿದವಳೇ ಅಲ್ಲಿಂದ ಓಟ ಕಿತ್ತಳು. ಇಡೀ ಘಟನೆ ಎಷ್ಟೊಂದು ವೇಗದಲ್ಲಿ ನಡೆದುಹೋಗಿತ್ತೆಂದರೆ ನಡೆದದ್ದರ ಅರ್ಥವನ್ನು ನಾನು ಕೂಡಲೇ ಗ್ರಹಿಸದಾದೆ. ನಾನು ನೀರಹಲಸಿನ ಮರದ ಕೆಳಗೆ ನಿಂತಲ್ಲೇ ಕಲ್ಲುಕಂಬವಾಗಿಬಿಟ್ಟಿದ್ದೆ. ಭಟ್ಟರು ದೊಡ್ಡ ದನಿಯಲ್ಲಿ, “ಓಲಗದವರು ವಾದ್ಯಾ ಬಾರಿಸಿರೋ” ಎಂದದ್ದು ಕೇಳಿಸಿರದಿದ್ದರೆ ಅದೆಷ್ಟು ಹೊತ್ತು ನಿಂತಲ್ಲೆ ನಿಂತಿರುತ್ತಿದ್ದೆನೋ!

ಪರಿಸ್ಥಿತಿಯ ಅರಿವು ಮೂಡಿದ್ದೇ ನನ್ನನ್ನು ನಾನು ಸಾವರಿಸಿಕೊಳ್ಳುತ್ತ ಚಪ್ಪರದತ್ತ ಧಾವಿಸಿ ಚಪ್ಪರದ ಬಾಗಿಲ್ಲಲಿ ನನ್ನ ಹಾದಿ ಕಾಯುತ್ತ ನಿಂತಿದ್ದ ಗೆಳೆಯರನ್ನು ಕೂಡಿಕೊಂಡೆ.

ಗೋದಾವರಿ ಪದಾ ಹೇಳೆ ಆಮೇಲೆ ಮತ್ತೆ ನನ್ನ ಕಣ್ಣಿಗೆ ಬೀಳಲಿಲ್ಲ. ಅವಳೇ ನನ್ನ ಕಣ್ಣು ತಪ್ಪಿಸುತ್ತಿದ್ದಳೋ, ನಾನು ಅವಳಿಂದ ಅಡಗಿರುತ್ತಿದ್ದೆನೋ-ಪರಿಣಾಮ ಮಾತ್ರ ಒಂದೇ ಆಗಿತ್ತು. ಮದುವೆಯ ನಂತರವೂ ಅವಳು, ಕಾವೇರಕ್ಕ ನಮ್ಮ ಮನೆಯಲ್ಲಿ ಮೂರು ದಿನ ಇದ್ದದ್ದು ಅಮ್ಮನಿಂದ ತಿಳಿಯಿತು. ಅವರು ಹೊರಟುಹೋದದ್ದು ತಿಳಿದಮೇಲೇ ಗೋದಾವರಿ ಪದಾ ಹೇಳೆ ಆ ದಿನ ಉಟ್ಟ ಉಡುಪು, ಮಾಡಿಕೊಂಡ ಶೃಂಗಾರ ಅರಿವಿನಲ್ಲಿ ಮೂಡಹತ್ತಿದುವು. ಆದರೆ ಅವಳ ರೂಪ ಮಾತ್ರ ಸುತರಾಮ್ ಕಣ್ಣೆದುರು ನಿಲ್ಲದಾಯಿತು. ಅವಳು ಕಾಣಲು ಸುಂದರಳೋ ಅಲ್ಲವೋ ಎನ್ನುವುದು ಕೂಡ ನೆನಪಾಗದಾಯಿತು, ನನಗೆ ಮುತ್ತು ಕೊಟ್ಟ ಮೊಟ್ಟಮೊದಲ ಹುಡುಗಿ ಎನ್ನುವ ಕಾರಣಕ್ಕೋ ಏನೋ ಅವಳು ಸುಂದರಳೇ ಎನ್ನುವ ಕಲ್ಪನೆ ಮಾಡಿಕೊಳ್ಳುತ್ತ ಅವಳ ರೂಪಕ್ಕೆ ನಾನೇ ವಿವರ ಮೂಡಿಸಿದೆ: ನೀಳವಾದ ಮೂಗು, ದೊಡ್ಡ ದೊಡ್ಡ ದುಂಡಗಿನ ಕಣ್ಣುಗಳು, ತಿದ್ದಿ ತೀಡಿದಂಥ ಕಮಾನಿನ ಆಕೃತಿಯ ಹುಬ್ಬುಗಳು, ಬೇಕಷ್ಟು ಹದವಾದ ಸುಂದರ ಹಣೆ, ಇತ್ಯಾದಿ. ಎಷ್ಟೊಂದು ಪ್ರಯತ್ನಪಟ್ಟರೂ ನನ್ನ ಮೈಮರೆವಿಗೆ ಕಾರಣವಾದ ಅವಳ ತುಟಿಗಳನ್ನು ಕಲ್ಪಿಸುವುದು ಸಾಧ್ಯವಾಗಲಿಲ್ಲ ಅವುಗಳ ಸ್ಪರ್ಶವಷ್ಟೇ ಕೆಲವು ದಿನ ನೆನಪಿನಲ್ಲಿ ಸುಳಿದಾಡಿ ಆಮೇಲೆ ಮಾಯವಾಯಿತು. ಗೋದಾವರಿ ಪದಾ ಹೇಳೆ ನನ್ನೆದುರು ಕಾಣಿಸಿಕೊಂಡಷ್ಟೇ ವೇಗದಿಂದ ಅದೃಶ್ಯಳಾಗಿದ್ದಳು-ಅವ್ ಜಾವ್ ಫೊಕ್! ಇಲ್ಲ, ಅದೃಶ್ಯಳಾಗಿರಲಿಲ್ಲವೇನೋ. ಇಲ್ಲವಾದರೆ ಅಂದು-ಇದೆಲ್ಲ ನಡೆದು ಹದಿನಾಲ್ಕು ವರ್ಷಗಳ ಮೇಲೆ-ಎಲ್ಲರನ್ನು ಬಿಟ್ಟು ಕೈಹಿಡಿದ ಹೆಂಡತಿಯ ಎದುರು ಈ ಘಟನೆಯನ್ನು ಹೇಳುವ ತಲಬು ಬರುತ್ತಿರಲಿಲ್ಲ!

ನನ್ನ ಮಾತು ಮುಗಿಯುತ್ತಲೇ ದೊಡ್ಡಕ್ಕೆ ನಕ್ಕುಬಿಟ್ಟ ಹೆಂಡತಿ ಬರೇ ನಕ್ಕಿರಲಿಲ್ಲ. ನಗುವಿನ ಕೊನೆಯಲ್ಲಿ, “ಅಯ್ಯೋ ನನ್ನ ಕರ್ಮವೇ! ಇದು ನಿಜಕ್ಕೂ ನಡೆದದ್ದೇನರಿ? ಅವಳು ಚೆಂದಳಿದ್ದಳೇನರಿ? ನನಗಿಂತ ಚೆಂದಳೇನರಿ? ಆ ಮೇಲೆ ಮತ್ತೆ ಭೇಟಿಯಾಗಿಲ್ಲವೆಂದರೆ ಯಾರೂ ನಂಬುವ ಮಾತೇನರಿ?” ಎಂದು ಕೇಳಿದ್ದಳು. ರೀ ರೀ ಎಂದು ಕೊನೆಗೊಂಡ ಪ್ರಶ್ನೆಗಳಲ್ಲಿ ಮಸ್ಕರಿಯಿದ್ದದ್ದು ಗೊತ್ತಿದ್ದೂ ನಾನು ಪೆದ್ದನಂತೆ, “ಹದಿನಾಲ್ಕು ವರ್ಷಗಳ ಹಿಂದೆ ನಡೆದ ಪ್ರಸಂಗವಿದು. ಆಗವಳು ಬರೇ ಹನ್ನೊಂದೋ ಹನ್ನೆರಡೋ ವರ್ಷದವಳು” ಎಂದೆ. ಹೆಂಡತಿ ತನ್ನ ಪಟ್ಟುಬಿಡದೆ, “ಚಿಕ್ಕವಳಾದರೇನು, ಹೆಣ್ಣು ಹೆಣ್ಣೇ ಅಲ್ಲವೆ?” ಎಂದು ಚುಡಾಯಿಸಿದಳು. ಅವಳ ಮಾತಿನಲ್ಲೀಗ ರೀ ರೀ ಇಲ್ಲದ್ದು ನೋಡಿ ಧೈರ್ಯ ಕುದುರಿದವನ ಹಾಗೆ, “ಅಷ್ಟೊಂದು ಸುಂದರಳಲ್ಲ. ಹಳ್ಳಿಯ ಗುಗ್ಗು, ಮೇಲಾಗಿ” ಎಂದೆ. ಹಾಗೇಕೆ ಅಂದೆನೋ ಗೊತ್ತಾಗದೇ ಇನ್ನಷ್ಟು ಪೆದ್ದನಾದೆ. ಈ ಮಾತಿಗೂ ಈಗ ಏಳು ವರ್ಷಗಳ ಮೇಲಾಗಿದೆ.

ಸುಂದರಳೋ ಕುರೂಪಳೇ-ಇಷ್ಟು ವರ್ಷ ಬರೇ ಒಂದು ನೆನಪಾಗಿ ಉಳಿದವಳು ಇನ್ನು ಕೆಲಹೊತ್ತಿನಲ್ಲಿ ನಮ್ಮೆದುರು ಪ್ರತ್ಯಕ್ಷಳಾಗಲಿದ್ದಾಳೆ. ನಾನು, ಹೆಂಡತಿ ಅವಳ ಬರವನ್ನೇ ಕಾಯುತ್ತಿದ್ದೇವೆ. ಕಾಯುತ್ತಿದ್ದಂತೆ ಕೇವಲ ಆಟಕ್ಕೆಂಬಂತೆ ಹುಟ್ಟಿ ಬಂದ ಪ್ರಶ್ನೆಯೊಂದು ತಲೆಯಲ್ಲಿ ಸುತ್ತತೊಡಗಿತು: ಅವಳು ಹೇಗಿದ್ದರೆ ಒಳ್ಳೆಯದು-ಸುಂದರಳೋ? ಕುರೂಪಳೊ? ಹೆಂಡತಿಯ ಭಾವನೆಗಳ ದೃಷ್ಟಿಯಿಂದ ಒಳ್ಳೆಯದೆಂದು ತೋರಿದ್ದು ನನಗೆ ಕೊಟ್ಟ ಮುತ್ತಿನ ಸಾರ್ಥಕತೆಯ ದೃಷ್ಟಿಯಿಂದ ಅಲ್ಲವೆನ್ನಿಸಿತು.

“ರಾಯರು ಅದೆಂಥ ವಿಚಾರದಲ್ಲಿ ಮುಳುಗಿದ್ದಾರೆ?” ಹೆಂಡತಿ ಕೇಳಿದ ಪ್ರಶ್ನೆಗೆ ನನ್ನ ಬಾಯಿಂದ ತಟಕ್ಕನೆ ಹೊರಟ ಉತ್ತರದಿಂದ ನಾನು ಚಕಿತನಾದೆ- “ನಾನು ನಿನಗೆ ಹೇಳಿದ್ದನ್ನು ಇವಳೂ ತನ್ನ ಗಂಡನಿಗೆ ಹೇಳಿರಬಹುದೆ?” “ನಿಮ್ಮಷ್ಟೇ ವಿನೋದಬುದ್ಧಿಯವಳಾದರೆ ಹೇಳಿರಬೇಕು” ಎಂದಳು ಹೆಂಡತಿ. ಇದರಲ್ಲಿ ವಿನೋದಬುದ್ಧಿ ಎಲ್ಲಿ ಬಂತು ಎಂದು ಸರಿಯಾಗಿ ತಿಳಿಯದಿದ್ದರೂ ಇದು ನನ್ನ ಪ್ರಶಂಸೆಯೆಂದು ತಿಳಿದು ಖುಶಿಪಡುವಷ್ಟರಲ್ಲಿ, “ಮತ್ತೆ ಯಾರಿಗೆ ಗೊತ್ತು! ಹೇಳಿರಲಾರಳು. ನೀವು ಕೂಡ ಯಾರಿಗೂ ಹೇಳಿರಲಾರಿರಿ ಎಂದೇ ತಿಳಿದಿರಬಹುದು, ಹಾಗೆ ಸಹಜಾಸಹಜೀ ಹೇಳುವ ಸಂಗತಿಗಳೇ ಇಂಥವು! ಮುತ್ತು ಕೊಟ್ಟವಳು ಸಣ್ಣವಳಾದರೇನಂತೆ- ಮುತ್ತು ಮುತ್ತೇ!”

ಹೆಂಡತಿಯ ಏರುತಗ್ಗುಗಳಿಲ್ಲದ ಮಾತಿನ ಪಲ್ಲವಿ ಕೇಳುತ್ತಿದ್ದಂತೆ ತಲೆ ಚಿಟ್ಟು ಹಿಡಿಯುತ್ತಿರುವ ಭಾವನೆಯಾಯಿತು. ಸಂದರ್ಭವನ್ನು ನೆನೆದು ಸೈರಿಸಿಕೊಂಡೆ: ಇನ್ನು ಕೆಲ ಹೊತ್ತಿನಲ್ಲಿ ಕಣ್ಣೆದುರು ಪ್ರತ್ಯಕ್ಷವಾಗಲಿದ್ದವಳು ಹನ್ನೊಂದು ವರ್ಷದ ಬಾಲೆಯಲ್ಲ, ಒಬ್ಬ ಗಂಡನ ಹೆಂಡತಿ. ಒಂದು ಮಗುವಿನ ತಾಯಿ. ಮುವ್ವತ್ತು ದಾಟಿದ ಹರೆಯದ ಹೆಣ್ಣು. ತಾನಾಗಿಯೇ ನನ್ನನ್ನು ನೋಡುವ ಆಸೆ ಪ್ರಕಟಿಸಿದ್ದಾಳೆ-ಸಣ್ಣ ಸಂಗತಿಯೆ!
*
*
*
*
ಬರಬೇಕಾದವರು ಕೊನೆಗೂ ಬಂದು ಕದದ ಕರೆಗಂಟೆ ಬಾರಿಸಿದ್ದೇ ಹತ್ತಿದ ತಂದ್ರಿಯಿಂದ ಎಚ್ಚೆತ್ತೆ. ಎದ್ದುಹೋಗಿ ಕದ ತೆಗೆದು ಬಂದವರನ್ನು ಒಳಗೆ ಬಿಡುತ್ತ, “ನೀನು ನೀನಲ್ಲವೆ?” ಎಂದು ಕೇಳಿದೆ ನನ್ನ ಪ್ರಶ್ನೆಯೊಳಗಿನ ಮಳ್ಳತನಕ್ಕೆ ನಾನು ಮುಜುಗರಪಡುತ್ತಿದ್ದಂತೆ “ಹೌದು ನಾನು ನಾನೇ-ನಿನ್ನ ಗೋದಾವರಿ ಪದಾ ಹೇಳೆ, ಇವರ ಶರದೆ. ಇವರು ನನ್ನ ಪತಿ, ಶರದ್. ಇವಳು ವೀಣಾ, ನಮ್ಮ ಮುದ್ದಿನ ಮಗಳು.” ಮುಂಬಾಗಿಲಿನಿಂದ ಹಾಲಿಗೆ ಬರುವ ಕಿರುದಾರಿಯ ನಸುಗತ್ತಲೆಯಲ್ಲಿ ಪರಿಚಯದ ಮಾತುಗಳು ಕಿವಿಯ ಮೇಲೆ ಬೀಳುತ್ತಿದ್ದುವೇ ಹೊರತು ಅವುಗಳಿಗೆ ಒಳಪಟ್ಟವರ ಮೋರೆಗಳು ಸರಿಯಾಗಿ ಕಾಣುತ್ತಿರಲಿಲ್ಲ. ಹಾಲಿನೊಳಗಿನ ಬೆಳಕಿಗೆ ಬಂದಾಗ ಹೆಂಡತಿಯ ಎದುರು ಪರಿಚಯದ ಕಾರ್ಯಕ್ರಮ ಇನ್ನೊಮ್ಮೆ ನಡೆದು ನಾವೆಲ್ಲ ಸೋಫಾಗಳಲ್ಲಿ ತಂಗಿದೆವು. ಪರಸ್ಪರರ ಬಗ್ಗೆ ಮಾಡಿಕೊಂಡ ಎಷ್ಟೆಲ್ಲ ಕಲ್ಪನೆಗಳು ಈಗ ಮಾತಿನಲ್ಲಿ ಆಸ್ಫೋಟಗೊಳ್ಳುತ್ತವೆ ಎನ್ನು ನಿರೀಕ್ಷೆಯಲ್ಲಿದ್ದಾಗಲೇ ನಾವೆಲ್ಲ ಐನು ಗಳಿಗೆಯಲ್ಲಿ ಬಾಯಿ ಕಟ್ಟಿದವರಂತೆ ಮೌನ ಧರಿಸಿ ಕುಳಿತುಬಿಟ್ಟೆವು. ಕಲ್ಪಿಸಿಕೊಂಡಿದ್ದಕ್ಕೂ ಕಣ್ಣೆದುರಿನ ಪ್ರತ್ಯಕ್ಷಕ್ಕೂ ನಡುವೆ ಬಾಯ್ದೆರೆದ ಭಯಾನಕ ಕಂದರ ಈ ಬಾಯ್ಕಟ್ಟಿಗೆ ಕಾರಣವಾದದ್ದು ಸ್ಪಷ್ಟವಿತ್ತು.

ನನ್ನ ಹೆಂಡತಿಯ ಲಕ್ಷ್ಯವೆಲ್ಲ ಶಾರದೆಯ ಮೇಲೆ ಅವಳ ಅಸಾಧಾರಣ ಸೌಂದರ್ಯಕ್ಕೆ ಇವಳು ಮಾರುಹೋದದ್ದು ಇವಳ ಮೋರೆಯೇ ಸಾರುತ್ತಿತ್ತು. ನನಗಂತೂ ಕಣ್ಣೆದುರು ಪ್ರಕಟಗೊಂಡ ರೂಪಕ್ಕೆ ಗೋದಾವರಿ ಪದಾ ಹೇಳೆ-ಈ ಹೆಸರನ್ನು ಆರೋಪಿಸುವುದೇ ಅಸಾಧ್ಯವಾಯಿತು. ಮೋರೆಯ ಮೇಲೆ ವಿಚಿತ್ರ ಭಾವನೆಯನ್ನು ಮೂಡಿಸಿ ನನ್ನ ಮಗ್ಗುಲಲ್ಲಿ ಹೆಂಡತಿ ಇದ್ದಾಳೆ ಎನ್ನುವುದರ ಪರವೆ ಮಾಡದೇ ನನ್ನ ಮೋರೆಯನ್ನೇ ನೆಟ್ಟ ನೋಟದಿಂದ ನೋಡುತ್ತಿದ್ದ ಶಾರದೆಯನ್ನು ನೇರವಾಗಿ ನೋಡುವುದೇ ಅಸಾಧ್ಯವಾಗಿ, ನಾನು ಅವಳ ಗಂಡನತ್ತ ತಿರುಗಿ, “ಮುಂಬಯಿಗೆ ಬರುವುದು ಇದೇ ಮೊದಲೊ?” ಎಂದು ಕೇಳಿದೆ. ಅವರೂ ಮುಗುಳ್ನಗುತ್ತ ಉತ್ತರ ಕೊಡಲು ಮುಂದಾದರು. ನನ್ನ ಮನಸ್ಸು ಮಾತ್ರ, ಕೆಲವೇ ಕ್ಷಣಗಳ ಮಟ್ಟಿಗೆ ಪೂರ್ಣ ದೃಷ್ಟಿಗೆ ಬಿದ್ದೂ ಈಗ ಕುಡಿನೋಟಕ್ಕಷ್ಟೇ ಹೊಳೆಯುತ್ತಿದ್ದ ಶರದೆಯ ಕಣ್ಣು, ಮೂಗು, ತುಟಿಗಳಿಂದಾಗಿ, ವ್ಯಗ್ರಗೊಂಡಿತ್ತು. ಇಪ್ಪತ್ತೆರಡು ವರ್ಷಗಳ ಹಿಂದೆ ಬಿಂಬಲೀ ಮರ ನೋಡುವುದನ್ನೇ ನೆಪಮಾಡಿ ಹಿತ್ತಿಲಿಗೆ ಎಳೆದೊಯ್ದ ಹೆಣ್ಣು ಇವಳೇನೆ? ನಾನು ಕುಳಿತಲ್ಲೇ ಬಿಗಿಗೊಳ್ಳತೊಡಗಿದೆ. ಒಂದು ಕಡೆಗೆ ಶಾರದೆಯನ್ನು ಎವೆಯಿಕ್ಕದ ಕಣ್ಣುಗಳಿಂದ ನೋಡುತ್ತಿದ್ದ ಹೆಂಡತಿ. ಇನ್ನೊಂದು ಕಡೆಗೆ ನನ್ನನ್ನು ಅವಲೋಕಿಸುತ್ತಿದ್ದ ಶಾರದೆ. ನನಗೆ ಅತ್ತಿತ್ತ ತಿರುಗಲು ಆಗದೇ ಕತ್ತು ನೋಯಹತ್ತಿತ್ತು.

ನಾನು ಕೇಳಿದ ಪ್ರಶ್ನೆಗೆ ಉತ್ತರಕೊಟ್ಟು ಮುಗಿಸಿದ ಶರದರು ನನ್ನ ಮುಂದಿನ ಪ್ರಶ್ನೆಗೆ ಕಾದಿರಬೇಕು. ಅದು ಬಾರದೇ ಹೋದಾಗ ತಾವೇ ಅದನ್ನು ಊಹಿಸಿಕೊಂಡವರ ಹಾಗೆ-

“ಶಾರದೆಯನ್ನು ನೋಡಿದ್ದು ನಿಮಗೆ ನೆನಪಿದೆಯೋ ಇಲ್ಲವೋ, ತೀರ ಚಿಕ್ಕಂದಿನಲ್ಲೊಮ್ಮೆ ಯಾರದೋ ಮದುವೆಯ ಗದ್ದಲದಲ್ಲಿ ಪರಸ್ಪರರನ್ನು ನೋಡಿದ್ದಂತೆ, ಆಗ ಅವಳಿಗಿದ್ದ ಹೆಸರೂ ವಿಚಿತ್ರವಾಗಿತ್ತಲ್ಲವೆ? ಮದುವೆಯ ನಂತರ ನಾನು ಮೊದಲು ಮಾಡಿದ ಕೆಲಸವೆಂದರೆ ಇವಳ ಹೆಸರನ್ನು ಬದಲಿಸಿದ್ದು. ನಿಮ್ಮನ್ನವಳು ನೋಡಿದ್ದು ಒಂದೇ ಒಂದು ಸಲವಾದರೂ ಆ ಭೇಟಿ ಅವಳ ಮೇಲೆ ಜಬರ್ದಸ್ತು ಪರಿಣಾಮ ಮಾಡಿರಬೇಕು. ಅವಳೇ ನನಗೆ ಹೇಳಿದ ಪ್ರಕಾರ ನೀವು ಇನ್ನೊಮ್ಮೆ ಕಣ್ಣಿಗೆ ಬೀಳದೇ ತಾನು ಮದುವೆ ಆಗ ಲಾರಳೆಂದು ನಿಶ್ಚಯಿಸಿದ್ದಳಂತೆ-ನಂಬುವಿರಾ? ಆ ಭೇಟಿಯ ನಂತರ ನೀವಂತೂ ಕಣ್ಣಿಗೆ ಬೀಳಲಿಲ್ಲ. ನೀವು ಮುಂದೆ ಎಲ್ಲಿಗೆ ಹೋದಿರಿ-ಅದು ಕೂಡ ತಿಳಿಯಲಿಲ್ಲ. ತಿಳಿಯದಿದ್ದದ್ದು ಒಳ್ಳೆಯದಾಯಿತು. ಅದಕ್ಕೆ ಮೊದಲೇ ನಾನಿವಳ ಕಣ್ಣಿಗೆ ಬಿದ್ದೆ. ನಾನಿವಳನ್ನು ನೋಡಿ ಪಸಂದು ಮಾಡಿದ ಹೊತ್ತಿಗೆ ಕುಮಟೆಯ ಸಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ನಾನು ಮೂಲತಃ ಹೆರವಟ್ಟೆಯ ಹುಡುಗ. ಇವಳನ್ನು ನೋಡಿದ ಮೇಲೆ ಮಾತ್ರ ಇವಳು ನನ್ನನ್ನು ಒಪ್ಪಿದರೆ ಸಾಕು ಎಂದು ಸಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಹರಕೆ ಹೊತ್ತಿದ್ದೆ-ಈಗ ನಿಮ್ಮೆಲರ ಎದುರು ಒಪ್ಪಿಕೊಳ್ಳುತ್ತಿದ್ದೇನೆ. ಇಷ್ಟು ದಿನ ಇವಳಿಗೂ ಗೊತ್ತಿರಲಿಲ್ಲ. ಮುಂದೆ, ನಮಗೆ ಮೊದಲ ಮಗು ಹುಟ್ಟಿದ ಮೇಲೆ, ಒಂದು ದಿನ ರಾತ್ರಿ ನಾವಿಬ್ಬರೂ ತುಂಬಾ ಖುಶಿಯಲ್ಲಿದ್ದಾಗ ಈ ಸುರಸುಂರಿ ನನ್ನನ್ನು ಸಹಜವಾಗಿ ಒಪ್ಪಿಕೊಂಡದ್ದಕ್ಕೆ ಕಾರಣ ತಿಳಿಸಿದಳು-‘ನಾನು ಚಿಕ್ಕಂದಿನಲ್ಲಿ ತುಂಬಾ ಮೆಚ್ಚಿಕೊಂಡ ಹುಡುಗನ ಬಗ್ಗೆ ಹಿಂದೊಮ್ಮೆ ಹೇಳಿದ್ದೆನಲ್ಲ, ಅವನು ಹುಬೇಹೂಬ್ ನಿಮ್ಮ ಹಾಗೇ ಇದ್ದ!’ ಹಾಗಾದರೆ ಅವನನ್ನು ಹುಡುಕಿ ತಗೆಯಲೇಬೇಕಾಯಿತಪ್ಪಾ ಎಂದು ಚೇಷ್ಟೆ ಮಾಡಿದ್ದೆ. ನಿನ್ನೆ ರಾತ್ರಿಯಷ್ಟೇ ನಮ್ಮಿಬ್ಬರನ್ನೂ ಬಲ್ಲ ಗೆಳೆಯರೊಬ್ಬರಿಂದ ನೀವು ಮುಂಬಯಿಯಲ್ಲಿ ಇದ್ದದ್ದು ಗೊತ್ತಾಗಿ ಈಗ ಕರಕೊಂಡು ಬಂದೆ. ನಂಬುವಿರಾ?-ಈ ಹೊತ್ತೇ ಬಸ್ಸಿನಿಂದ ಕುಮಟೆಗೆ ಹೊರಡಬೇಕಿತ್ತು. ಇಲ್ಲಿಗೆ ಬರುವುದು ನಕ್ಕಿಯಾಗುತ್ತಲೇ ಬಸ್ ಟಿಕೆಟ್ಟುಗಳು ಕ್ಯಾನ್ಸಲ್! ನಾನು ನೌಕರಿ ಮಾಡುತ್ತಿದ್ದದ್ದು ಬರೋಡಾದಲ್ಲಿ. ಈಗ ಬಂದದ್ದು ದಿಲ್ಲಿ-ಆಗ್ರಾಗಳ ಪ್ರವಾಸ ಮುಗಿಸಿ. ಇಲ್ಲಿಗೆ ಬರಲು ಸಾಧ್ಯವಾದದ್ದು ಇವಳಿಗೆ ತಾಜ್ಮಹಲ್ ನೋಡಿ ಬಂದದ್ದಕ್ಕಿಂತ ಹೆಚ್ಚಿನ ಖೂಶಿ ಕೊಟ್ಟಿದೆ. ಆ ಖುಶಿಯಲ್ಲೇ ಇಲ್ಲಿಗೆ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗ ಇನ್ನೊಂದು ನಿರ್ಧಾರಕ್ಕೆ ಬಂದಿದ್ದಾಳೆ. ಈ ಬಾರಿ ಊರಿಗೆ ಹೋದಾಗ ನಿಮ್ಮ ಹಳ್ಳಿಗೂ ಹೋಗಿ ನಿಮ್ಮ ಹಿತ್ತಿಲಲ್ಲಿಯ ಬಿಂಬಲೀ ಮರವನ್ನು ಇನ್ನೊಮ್ಮೆ ನೋಡುವ ಆಸೆಯಾಗಿದೆಯಂತೆ. ನಿಮ್ಮಿಬ್ಬರ ಮೊದಲ ಭೇಟಿ ಈ ಮರದ ಕೆಳಗೇ ಆಗಿರಬೇಕೆಂದು ನನ್ನ ಊಹೆ. ಹಿಂದೆಯೂ ಒಂದೆರಡು ಬಾರಿ ಈ ಮರವನ್ನು ನೆನದಿದ್ದಳು. ಆ ಮರದ ಕೆಳಗೆ ಮತ್ತೆ ಏನೇನು ಭಾನಗಡಿ ನಡೆಯಿತು-ನಿಮ್ಮಲ್ಲೊಬ್ಬರು ಹೇಳಿದರೆ ತಾನೇ ಗೊತ್ತಾಗಬೇಕು? ನಿಮ್ಮನ್ನು ನೋಡಿ ಬಹಳ ಖುಶಯಾಯಿತು ಮಾರಾಯರೇ. ಬಾಲ್ಯದ ನೆನಪುಗಳಷ್ಟು ಸಿಹಿಯಾದ ಸಂಗತಿ ಇನ್ನೊಂದಿಲ್ಲ.” ಎಂದವರೇ ಸಿಹಿಯಾಗಿ ನಗುತ್ತ ನಮ್ಮ ಮನೆಯ ಬಾಲ್ಕನಿ, ಅದರ ಎದುರಿನ ಸಮುದ್ರ ಇವುಗಳ ಪ್ರಶಂಸೆಗೆ ತೊಡಗಿದರು.

ಶರದರ ಮಾತಿನಲ್ಲಿ ಆರೋಗ್ಯಕರವಾದ ವಿನೋದವಿತ್ತು, ನಾಟಕ ಮಾಡುವ ತಲಬು ಇತ್ತು. ಸಂತೃಪ್ತ ವಿವಾಹಿತನ ಅಪಾರ ಖುಶಿಯಿತ್ತು. ಖುಶಿಯಿಂದಾಗಿಯೇ ಹುಟ್ಟಿದ ಔದಾರ್ಯವಿತ್ತು. ಮೊದಲ ಭೇಟಿಯಲ್ಲೇ ಶರದರು ನನಗೆ ಮೆಚ್ಚುಗೆಯಾದರು. ನನ್ನ ಹೆಂಡತಿ ಕೂಡ ಅವರು ಹರಟುಹೋದ ಮೇಲೆ ನನ್ನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುವ ಹಾಗೆ ಅವರ ತಾರೀಫು ಮಾಡುತ್ತಾಳೆ ಎನ್ನುವ ಬಗ್ಗೆ ನನಗೆ ಸಂಶಯವಿರಲಿಲ್ಲ.

ತಾಮಾಷೆಯೆಂದರೆ, ಇತ್ತ ಈ ಇಡೀ ನಾಟಕಕ್ಕೆ ಮುಖ್ಯಪಾತ್ರವಾದವಳೇ ವಿಚಿತ್ರ ಸಂಕಟಕ್ಕೆ ಒಳಪಟ್ಟವಳಂತೆ ಕಂಡಳು. ಆಗಿನಿಂದಲೂ ನನ್ನನ್ನು ತದೇಕ ಚಿತ್ತಿದಿಂದ ನೋಡುತ್ತಿದ್ದವಳ ಕಣ್ಣುಗಳಲ್ಲಿ ನಿಗ್ರಹಿಸಿದ ಅಳುವಿದ್ದ ಗುಮಾನಿಯಾಯಿತು. ಚಕಾರವೆತ್ತದೇ ಬಾಯಿ ಕಟ್ಟಿದವಳಂತೆ ಕುಳಿತುಬಿಟ್ಟವಳ ಗಂಟಲಲ್ಲಿ ತಡೆಹಿಡಿದ ಬಿಕ್ಕಳಿಕೆ ಇದ್ದದ್ದು ಲಕ್ಷ್ಯಕ್ಕೆ ಬಂದಿತು. ಹೆಂಡತಿ, ಎಲ್ಲರಿಗೆ ಚಹಕ್ಕಿಟ್ಟು ಬರುತ್ತೇನೆಂದು ಹೇಳಿ ಒಳಗೆ ಹೋಗಲು ಏಳುತ್ತಲೇ ತಾನೂ ಎದ್ದು ನಿಂತ ಶಾರದೆ ಅವಳನ್ನು ಹಿಂಬಾಲಿಸಿದಳು. ಹಾಲ್ನಲ್ಲಿ ನಾನು, ಶರದ್, ಇಬ್ಬರೇ. ಶರದ್ ತಮ್ಮ ನೌಕರಿಯ ಬಗ್ಗೆ, ಇದೀಗ ಮುಗಿಸಿ ಬಂದ ಉತ್ತರ ಹಿಂದುಸ್ತಾನದ ಪ್ರವಾಸದ ಬಗ್ಗೆ ಮಾತನಾಡಿದರು. ಒಳಗೆ ಶಾರದೆ, ಹೆಂಡತಿ ಮಾತಿನಲ್ಲಿ ತೊಡಗಿದ್ದು ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಕೇಳುತ್ತಿದ್ದಂತೆ ಇಪ್ಪತ್ತೆರಡು ವರ್ಷಗಳ ಹಿಂದೆ ನಮ್ಮ ಹಿತ್ತಿಲಲ್ಲಿ ಕಂಡ ನೀರ ಹಲಸಿನ ಮರಕ್ಕೀಗ ಬೇರೆಯೇ ಒಂದು-ಅಲೌಕಿಕ ಎನ್ನಬಹುದಾದ-ಪ್ರಭೆ ಬಂದದ್ದು ನೋಡಿ ಮನಸ್ಸು ಮುದಗೊಂಡಿತು. ಆದರೆ ಶಾರದೆಯನ್ನು ಅಷ್ಟೊಂದು ಭಾವುಕಗೊಳಿಸಿದ ಬಿಂಬಲೀ ಮರ ಮಾತ್ರ ಕಣ್ಣೆದುರು ನಿಲ್ಲದಾಯಿತು. ಅಂಥ ಮರ ನಮ್ಮ ಹಿತ್ತಿಲಲ್ಲಿತ್ತು ಎನ್ನುವ ಬಗೆಗೇ ಖಾತ್ರಿಯಾಗದಾಯಿತು.

ಹೆಂಡತಿ ಇವರೆಲ್ಲ ಬರುವ ಮೊದಲೇ ತಯಾರಿಸಿಟ್ಟ ತಿಂಡಿಯ ಸರಂಜಾಮನ್ನೂ ಶಾರದ ಚಹದ ಸರಂಜಾಮನ್ನೂ ಹೊತ್ತು ಹೊರಗೆ ಬಂದರು. ಶರದರು ಬದಿಯ ಕೋಣೆಗೆ ಹೋಗಿ ಆಡುವುದರಲ್ಲಿ ಮಗ್ನರಾಗಿದ್ದ ಮಕ್ಕಳನ್ನು ಕರೆದುಕೊಂಡು ಬಂದರು.

ತಿಂಡಿ ಚಹ ಸೇವಿಸುತ್ತಿದ್ದಾಗ ನಾವೆಲ್ಲ ಪರಸ್ಪರರತ್ತ ಯಾವ ಸಂಕೋಚವೂ ಇಲ್ಲದೇ ನೋಡುತ್ತ, ಎಷ್ಟೋ ವರ್ಷಗಳ ಮೇಲೆ ಒಂದೆಡೆ ಸೇರಿದ ಆತ್ಮೀಯ ಗೆಳೆಯರ ಹಾಗೆ ಉಮೇದಿನಿಂದ ಹರಟತೊಡಗಿದೆವು, ನಾನು, ಶಾರದೆ ಮೊದಲ ಬಾರಿಗೇ ಒಬ್ಬರನ್ನೊಬ್ಬರು ನೋಡಿ ಮುಗಳ್ನಕ್ಕೆವು. ಅವಳ ಗಂಟಲಲ್ಲೀಗ ತಡೆಹಿಡಿದ ಬಿಕ್ಕಳಿಕೆ ಇರಲಿಲ್ಲ. ಕಣ್ಣುಗಳಲ್ಲಿ ನಿಗ್ರಹಿಸಿದ ಕಂಬನಿಯಿರಲಿಲ್ಲ. ನನಗೆ ನಿರಂಬಳವಾಯಿತು. ನಾವು ಸಿಕ್ಕಿಕೊಂಡ ಪರಿಸ್ಥಿತಿಯ ಅರ್ಥ, ನನಗೆ ಎಂದೋ ನಿಚ್ಚಳವಾಗಿತ್ತು. ಹಾಗೆಂದೇ ಅವಳ ಕಣ್ಣು, ಮೂಗು, ತುಟಿಗಳನ್ನು ಭಿಡೆ ಬಿಟ್ಟು ನೋಡುತ್ತ, ಯಾವುದೇ ಬಗೆಯ ನಾಟಕೀಯತೆಗೆ ಎಡೆಯಾಗದ ಹಾಗೆ, ಸಹಜವಾದ ವಿನೋದಬುದ್ಧಿಯಿಂದ ಶಾರದೆಯನ್ನು ಉದ್ದೇಶಿಸಿ ಮಾತನಾಡುವುದು ಸಾಧ್ಯವಾಯಿತು-

“ನೋಡು ಶಾರದಾ, ಚಿಕ್ಕಂದಿನಲ್ಲಿ ನೋಡಿದ ನನ್ನ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಂಡು ಬಂದ ನಿನಗೆ ನನ್ನನ್ನಿಂದು ಖುದ್ದು ನೋಡಿದ ಮೇಲೆ ನಿರಾಸೆಯಾಗಿರುವುದು ಸಹಜವಿದೆ. ನಿನ್ನ ಕಣ್ಣಿಗೆ ಅಂದು ಹೊಳೆದ ನನ್ನ ರೂಪಕ್ಕೂ, ಇವತ್ತು ನೀನು ನೋಡುತ್ತಿದ್ದುದಕ್ಕೂ ತಾಳೆಯಾಗದ್ದಕ್ಕೆ ಕಾರಣವಿದೆ, ಹೆಂಡತಿಗೂ ಇದು ಗೊತ್ತಿಲ್ಲ. ನಿನ್ನ ಸಮಾಧಾನಕ್ಕೆಂದು ಈಗ ಹೇಳುತ್ತೇನೆ. ನಾನು ಕಾಲೇಜು ದಿನಗಳಿಂದಲೇ ದಾಡಿ ಮೀಸೆ ಬೆಳೆಸಿದ್ದರ ಹಿಂದಿನ ನಿಜವಾದ ಗುಟ್ಟು ನನ್ನ ಹೆಂಡತಿಗೆ ಈಗ ಗೊತ್ತಾದೇತು: ನನ್ನ ಬಲಗಲ್ಲದ ಮೇಲೆ ತುಂಬಾ ಅಸಹ್ಯ ಕಾಣಿಸುವ ಕಂತೆ ಗಾಯವಿದೆ. ನನ್ನ ಮೂಗು ಕೂಡ ಈಗ ಇದ್ದ ಹಾಗೆ ತುಸು ಚಪ್ಪಟೆಯಾಗಿರದೇ ನಿನ್ನ ಗಂಡನ ಮೂಗಿನ ಹಾಗೆ ಚೂಪಾಗಿದ್ದಿತ್ತು. ನನ್ನ ದುರ್ದೈವ. ಧಾರವಾಡದಲ್ಲಿ ಸಾಲೆ ಕಲುಯುತ್ತಿದ್ದಾಗ ನನಗಾದ ಒಂದು ಕೆಟ್ಟ ಅಪಘಾತದಲ್ಲಿ…”

ನನ್ನ ಮಾತು ಕೊನೆಗೊಳ್ಳುವ ಮೊದಲೇ ಶಾರದೆ ಸುಳ್ಳು ಮುನಿಸು ವ್ಯಕ್ತಪಡಿಸುತ್ತ, “ಸುಳ್ಳು ಸುಳ್ಳು ಸುಳ್ಳು! ತುಂಬಾ ದುಷ್ಟ ನೀನು. ಆಗ ಅಡುಗೆಮನೆಯಲ್ಲಿ ಯಾವುದೋ ಉದ್ವೇಗದ ಭರದಲ್ಲಿ ನಿನ್ನ ಹೆಂಡತಿಗೆ ಕೇಳಿದ ಪ್ರಶ್ನೆಯನ್ನು ಕೇಳಿಸಿಕೊಂಡು ಈಗ ನನ್ನನ್ನು ಸತಾಯಿಸುತ್ತೀ” ಎಂದು ಏರಿದ ದನಿಯಲ್ಲಿ ನನ್ನನ್ನು ತರಾಟೆಗೆ ತೆಗೆದುಕೊಂಡಳು. ಈಗಿವಳು ನಿಜಕ್ಕೂ ಅಳುತ್ತಾಳೆ ಎಂದು ಭಯಪಡುವಷ್ಟರಲ್ಲಿ ಫಳ್ಳೆಂದು ಮುತ್ತಿನಂಥ ಹಲ್ಲುಗಳ ಸಾಲು ತೋರಿಸುತ್ತ, “ನಿನ್ನ ಹೆಂಡತಿ ನನಗೆ ಎಲ್ಲ, ಎಲ್ಲ ಹೇಳಿದ್ದಾಳೆ. ನನ್ನನ್ನು ಪೂರ್ತಿಯಾಗಿ ಮರೆತೇ ಹೋಗಿರಬಹುದೆಂದು ತಿಳಿದಿದ್ದೆ. ಮರೆಯುವುದುಳಿಯಲಿ, ಬಿಂಬಲೀ ಮರದ ಕೆಳಗೆ ನಡೆದ ಭಾನಗಡಿಯನ್ನು ನಿನ್ನ ಹೆಂಡತಿಗೆ ಉಘಡಾ ಉಘಡೀ ಹೇಳಿದಿಯಂತೆ. ನಿನ್ನ ಧೈರ್ಯವಾದರೆ ಧೈರ್ಯವಪ್ಪಾ. ಏನೆಂದರೂ ಗಂಡಸಲ್ಲವೇ! ಇವರಿಗಿನ್ನೂ ಹೇಳಿರಲಿಲ್ಲ, ಇವತ್ತು ಹೇಳುತ್ತೇನೆ. ನೀನು ನನ್ನನ್ನು ಇವತ್ತು ನೋಡಿದ್ದೇ ಅದೆಲ್ಲದರ ನೆನಪಿದ್ದವನಂತೆ ತೋರಿಸಿಕೊಂಡಿದ್ದರೆ ಇಷ್ಟೆಲ್ಲ ರಾದ್ಧಾಂತವಾತ್ತಿರಲೇ ಇಲ್ಲ. ನನ್ನ ಗುರುತೂ ಹತ್ತದವನ ಹಾಗೆ ಮೋರೆ ತಿರುವಿಸಿ ಕುಳಿತರೆ ನನಗೆ ಹೇಗೆ ಅನ್ನಿಸಬೇಡ?”

ತನ್ನ ಆಗಿನ ವರ್ತನೆಯನ್ನು ಸಮರ್ಥಿಸಿಕೊಂಡ ರೀತಿಗೆ ನಗು ಬಂತು. ಅವಳ ಈಗಿನ ಮೂಡು ನೋಡಿ ನನಗೂ ಧೈರ್ಯ ಕುದುರಿತು-“ನಿಜ ಹೇಳಲೆ? ಚಿಕ್ಕಂದಿನಲ್ಲಿ ನೀನೂ ಈಗಿನಷ್ಟು ಸುಂದರಳಿರಲಿಲ್ಲ” ಎಂದೆ.

“ಈಗಲಾದರೂ ಸುಂದರಳೆಂದು ಒಪ್ಪಿದೆಯೋ ಇಲ್ಲವೋ, ನಾನು ಧನ್ಯಳಾದೆ. ಹೆಂಡತಿಯ ಎದುರು ನನ್ನನ್ನು ಹಳ್ಳಿಯ ಗುಗ್ಗು ಎಂದು ಕರೆದಿಯಂತೆ…”

“ನನ್ನ ಹೆಂಡತಿ ಅದನ್ನೂ ಹೇಳಿದಳೆ? ಪಡ್ಚಾ!” ಎಂದು ಹೆಂಡತಿಯನ್ನು ದುರುಗುಟ್ಟಿ ನೋಡುತ್ತಿದ್ದಂತೆ ಆಗಿನಿಂದಲೂ ಮೌನ ಧರಿಸಿದ್ದ ಶರದರು, “ಈಗ ಜಗಳ ಬೇಡ. ಎಷ್ಟು ವರ್ಷಗಳ ಮೇಲೆ ಭೇಟಿಯಾಗಿದ್ದೀರಿ. ಈಗ ಬರೋಡಾಕ್ಕೊಮ್ಮೆ ಬನ್ನಿ, ನಮ್ಮ ಮನೆಗೆ-ನೀವೆಲ್ಲ. ಮನೆಯೆದುರು ಸಮುದ್ರವಿಲ್ಲ, ಆದರೆ ಮನೆಯ ಸುತ್ತಲೂ ಬಗೀಚಾ ಇದೆ. ಸುಂದರ ಗಿಡ ಮರಗಳಿವೆ. ಆದರೆ ಬಿಂಬಲೀ ಮರವಿಲ್ಲ. ಅದು ಎಂಥ ಮರವೆನ್ನುವುದು ಕೂಡ ನನಗೆ ಗೊತ್ತಿಲ್ಲ” ಎಂದು ಹೇಳಿ ಮನಸೋಕ್ತ ನಕ್ಕರು.

ಶಾರದೆ “ನಿನಗದು ಇನ್ನೂ ಅಷ್ಟು ಪ್ರಿಯವಾಗಿದ್ದರೆ ಈ ಬಾರಿ ಊರಿಗೆ ಹೋದಾಗ ಒಂದು ಸಸಿ ತಂದು ನೆಡುತ್ತೇನೆ. ಬಂದಾದರೂ ಬಾ” ಎನ್ನುತ್ತ ಸಣ್ಣಗೆ ಕಣ್ಣು ಮಿಟುಕಿಸಿದಳು. ಇವಳ ಧೈರ್ಯವಾದರೆ ಧೈರ್ಯವಪ್ಪಾ ಎಂದುಕೊಳ್ಳುತ್ತಿರುವಾಗ ಗಡ್ಡದ ಕೆಳಗೆ ನನ್ನ ಮೋರೆ ಕೆಂಪಗಾಗುತ್ತಿದ್ದ ಅನುಭವವಾಯಿತು.

ಮುಂದಿನ ಅರ್ಧ ಗಂಟೆಯವರೆಗೆ ಅದು ಇದು ಎಂದು ಎಷ್ಟೆಲ್ಲ ವಿಷಯಗಳ ಮೇಲೆ ಹರಟೆ ಕೊಚ್ಚಿದೆವು. ನನ್ನ ರೂಪದ ಬಗೆಗೆ ಈ ಮೊದಲು ಉಂಟಾದ ನಿರಾಶೆ ದೂರವಾದಹಾಗೆ ಶಾರದೆಯ ಸ್ವಭಾವಸಹಜವಾದ ಅದಮ್ಯ ಉತ್ಸಾಹ ಅವಳ ದೇಹದ ರಂಧ್ರರಂಧ್ರದಿಂದ ಹೊರಹೊಮ್ಮ ಹತ್ತಿತು. ನೋಡುತ್ತಿದ್ದಂತೆ ಈ ಉತ್ಸಾಹಕ್ಕೆ ಹಿಂದುಸ್ತಾನೀ ಸಂಗೀತದ ರಾಗವೊಂದರ ಆಕಾರವಿದ್ದ ಭಾಸವಾಗಹತ್ತಿತು. ಮುಸ್ಸಂಜೆಯ ಹೊತ್ತಾದ್ದರಿಂದ ಸಂಗೀತದ ಜ್ಞಾನವುಳ್ಳ ನನ್ನ ಅಣ್ಣ ಇದು ‘ಮಧುವಂತಿ’ಯೆಂದು ಗುರುತಿಸುತ್ತಿದ್ದನೇನೋ. “ಎಂಥ ಹಗಲುಗನಸಿನಲ್ಲಿ ಕಳೆದುಹೋಗಿದ್ದೀರಿ, ಅವರೆಲ್ಲ ಹೋಗಲು ಹೊರಟು ನಿಂತಿದ್ದಾರೆ” ಎಂದು ಹೆಂಡತಿ ಕಿವಿಯ ಹತ್ತಿರ ಪಿಸುಗುಟ್ಟಿದ ಮೇಲೇ ಭಾವಸಮಾಧಿಯಿಂದ ಹೊರಗೆ ಬಂದು, ಬಂದವರನ್ನು ಬಾಗಿಲವರೆಗೆ ಮುಟ್ಟಿಸಿ, ಯಥೋಪಚಾರ ಬೀಳ್ಕೊಟ್ಟು ಕದವಿಕ್ಕಿದೆ.

ಹಾಲಿಗೆ ಹಿಂತಿರುಗಿ ಬಂದದ್ದೇ ಹೆಂಡತಿಯನ್ನು ಚುಡಾಯಿಸುವ ಲಹರಿ ಬಂದವನ ಹಾಗೆ, “ನೀನು ಏನೇ ಹೇಳು, ಅವಳು ಈಗಲೂ ಸುಂದರಳಲ್ಲ. ಏನನ್ನುತ್ತೀ?” ಎಂದು ಕೇಳಿದೆ.

“ಗುಣಕ್ಕೆ ಮತ್ಸರವೇಕೆ? ಚಿಕ್ಕಂದಿನಲ್ಲಿ ನಿಮಗೆ ಮರುಳಾದ ಹುಡುಗಿ ಈಗಲೂ ಸುಂದರಳೇ ಅಪ್ಪಾ! ಹಳ್ಳಿಯ ಗುಗ್ಗು ಅಂತೂ ಅಲ್ಲವೇ ಅಲ್ಲ, ಗಂಡುಬೀರಿ. ಗೋದಾವರಿ ಪದಾ ಹೇಳೆ ಎನ್ನುವ ಹೆಸರಿಟ್ಟರೂ ಅಡ್ಡಿಯಿಲ್ಲ, ಶೋಭಿಸುತ್ತದೆ. ಬಿಂಬಲೀಕಾಯಿ ಸಸಿ ಮುಂಬಯಿಯಲ್ಲೇ ಎಲ್ಲಾದರೂ ಸಿಗುತ್ತದೆಯೋ ನೋಡಿ. ನಮ್ಮ ಬಾಲ್ಕನಿಯ ಕುಂಡವೊಂದರಲ್ಲಿ ಹಚ್ಚೋಣ” ಎಂದ ಹೆಂಡತಿಯ ಮಾತಿನಲ್ಲಿ ವಿನೋದವಿತ್ತು. ಆದರೆ ಮಾತು ಮುಗಿಯುವುದರೊಳಗೆ ಎಷ್ಟೊಂದು ಗಂಭೀರಳಾಗಿ ಕಂಡಳೆಂದರೆ, ‘ಅವಳು ನನ್ನನ್ನು ನಿಜಕ್ಕೂ ಕರೆದೊಯ್ದದ್ದು ನೀರಹಲಸಿನ ಗಿಡಕ್ಕೆ ಆಗಿತ್ತೇ ಹೊರತು ಬಿಂಬಲೀ ಮರಕ್ಕೆ ಅಲ್ಲ’ ಎಂದು ಹೇಳಬೇಕೆಂದುಕೊಂಡಿದ್ದ ಮಾತು ಸದ್ಯ ಬಾಯಲ್ಲೇ ಕರಗಿತು. ಮೇಲಾಗಿ ಬಿಂಬಲೀ ಮರದಲ್ಲಿದ್ದ ಕಾವ್ಯ ನೀರಹಲಸಿನ ಗಿಡದಲ್ಲಿಲ್ಲ. ಎಲ್ಲಕ್ಕೂ ಮಿಗಿಲಾಗಿ, ನೀರಹಲಸಿಗೆ ನಮ್ಮ ಬಾಲ್ಕನಿಯಲ್ಲಿ ಜಾಗವಿಲ್ಲ ಎಂದು ಮನಸ್ಸಿನಲ್ಲೇ ಅಡಿಕೊಂಡದ್ದನ್ನು ಕೇಳಿಸಿಕೊಂಡವಳ ಹಾಗೆ ಹೆಂಡತಿ, ತುಂಬಾ ಸುಂದರವಾಗಿ ನಗುತ್ತ, “ವಸಯಿಯಲ್ಲಿ ಇವೆಯಂತೆ, ಅಂಥ ಗಿಡಗಳು. ಒಂದು ದಿನ ನಾವಿಬ್ಬರೂ ಹೋಗಿ ಒಂದು ಸಸಿ ತರೋಣ” ಎಂದಳು. ತುಸು ತಡೆದು, “ಅದಕ್ಕಾಗಿ ಬರೋಡಾಕ್ಕೆ ಹೋಗಬೇಕೆಂದಿಲ್ಲ” ಎಂದು ಫರ್ಮಾನು ಹೊರಡಿಸಿದಳು. ನಾನು ತಕ್ಷಣ ತಲೆಬಾಗಿದೆ.
*****
೧೯೯೬

ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.