ಮನೆ ಎದುರಿನ ಮರ

ನಮ್ಮ ಮನೆ ಎದುರಿನ ಮರ
ಶಿಶಿರದಲ್ಲಿ ಉದುರಿ
ನಾಚಿಕೆಯೇ ಇಲ್ಲದೆ
ಬೆತ್ತಲೆ ನಿಂತು
ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ
ಬೆಳಗಿನ ಚುಮು ಚುಮು ಚಳಿಗೆ
ಮೈಯೊಡ್ಡಿ ನಿಂತು
ಹದಗೊಳ್ಳುತ್ತದೆ.

ಮತ್ತೆ ವಸಂತದಲ್ಲಿ
ನವವಧುವಿನಂತೆ
ಮತ್ತೆ ಹಸೆಮಣೆ ಏರಿ
ಮತ್ತೆ ಪ್ರಸ್ತದ ಕೋಣೆ ಸೇರಿ
ನೀರು ಬೆಳಕು ಗಂದಗಳ
ಸಾವಿರಕ್ಕೆ ಮತ್ತೆ ತಾಯಾಗಿ
ಮತ್ತೆ ತನ್ನವರನ್ನೆಲ್ಲಾ ತಬ್ಬಿ ನಿಲ್ಲುತ್ತದೆ.

ನಾವು,
ಕತ್ತಲೆಯು ಕರಗುವುದರೊಳಗೆ
ಉದುರಿ ಬೆತ್ತಲಾಗಿ,
ಬೆತ್ತಲಾದದ್ದಕ್ಕೆ ನಾಚಿ
ಹೆದರಿ
ಹೆದರಿದ್ದಕ್ಕೆ ಹೆರಲು ಹೊರಟಾಗ
ತೆರೆದು ಕೊಂಡದ್ದು ಮಾತ್ರಾ
ಬೆತ್ತಲಾಳದಿಂದ ಕತ್ತಲಿಗೆ ಕರಗುವ
ಮುನ್ನ ಉಳಿದ
ಕಾಮಕೇಳಿಗೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ