ಸಿಂಬಲಿಸ್ಟ್ ಕಾವ್ಯ

-ವೆರ್ಲೆನ್

ಮುಖ್ಯವಾದ್ದು ನಾದ
ನಯವಾಗದಂತೆ ವಕ್ರ ಬಳಕುವ ಲಯ
ಗಾಳಿಯಂತೆ ನಿರಾಧಾರ, ದ್ರವ್ಯವಲ್ಲ ದ್ರಾವಣ
ಘನವಾಗದ ಚಂಚಲ

ಬಣ್ಣ ಖಂಡಿತ ಅಲ್ಲ, ಅದರ ನೆರಳು ಮಾತ್ರ
ಇಂಗಿತದ ಸೂಕ್ಷ್ಮ,

ಮಾತಿಗೆ ದಕ್ಕದಂತೆ ಮಿಗುವ ಮೌನ
ಈ ಸಂಗೀತವೇ
ಅರ್ಥದ ಛಾಯೆ

ಆಮೇಲೆ ಉಳಿದದ್ದು
ಸಾಹಿತ್ಯ

(ಇದು ಫ್ರೆಂಚ್ ಕವಿ, ವೆರ್ಲೆನ್ ಬರೆದ ಪದ್ಯವೊಂದರ ಸಂಕ್ಷಿಪ್ತ ರೂಪ. ವೆರ್ಲೆನ್‌ನ ಕಾಲ ೧೮೪೪-೧೮೯೬. ಈತ ಇನ್ನೊಬ್ಬ ದೊಡ್ಡ ಕವಿ ರಿಂಬೊ ಜೊತೆ ಪ್ರೀತಿ ದ್ವೇಷಗಳ ಸಂಬಂಧ ಇದ್ದವ; ರಿಂಬೊನನ್ನ ಕೊಲ್ಲಲು ಯತ್ನಿಸಿ, ಗಾಯಗೊಳಿಸಿ, ಜೈಲಿಗೆ ಹೋದವ… ಕುಡುಕ, ಸಿಡುಕ, ಮುಗ್ಧ, ಕಟುಕ ಎಲ್ಲವೂ ಆಗಿ ಸ್ಲಮ್ಮುಗಳಲ್ಲಿ ಸೂಳೆಯರ ಜೊತೆ ಬಾಳಿದ ಈ ವೆರ್ಲೆನ್ ಒಬ್ಬ ಹುಡುಗಿಯನ್ನು ಪ್ರೀತಿಸಿ, ತೊರೆದು, ಪ್ರೀತಿಸಿ ಈ ಬಾಳಿನಲ್ಲೇ ನರಕವೂ ಇದೆ, ಸ್ವರ್ಗವೂ ಇದೆ ಎಂಬುದನ್ನು ಕಂಡವನಾದ; ಶೋಫನೋರ್‌ ಎಂಬ ತತ್ವಜ್ಞಾನಿಯಿಂದ ಪ್ರಭಾವಿತನಾದ ಇವನು ಇದಕ್ಕೆ ವಿರುದ್ಧವಾಗಿ ಜೈಲಿನಲ್ಲಿ ಕ್ಯಾಥೊಲಿಕ್ ಆಗಿ ದೈವ ಶ್ರದ್ಧೆಯನ್ನು ಕವನಗಳನ್ನು ಬರೆದು ಮತ್ತೆ ರಿಂಬೋನ ಹೀಯಾಳಿಕೆಯ ಕಣ್ಣಲ್ಲಿ ಪತಿತನಾದ. ರೋಗಿಷ್ಟನಾಗಿ, ಕಡುಬಡವನಾಗಿ ಸತ್ತ ಪರಮ ವ್ಯಸನಿಯೂ, ವ್ಯಾಮೋಹಿಯೂ ಆದ ಈ ಕವಿಯನ್ನು ಫ್ರೆಂಚ್ ಜನ ಅದೆಷ್ಟು ಕಾವ್ಯಪ್ರಿಯರು ಎಂದರೆ ಅವನ ಕಾಲದಲ್ಲೇ ಬಹಳ ಮೆಚ್ಚಿಕೊಂಡರು. ಈತ ಅವರ ಪಾಲಿಗೆ ಕಾವ್ಯದ ರಾಜಕುಮಾರ. ಸಿಂಬಲಿಸ್ಟ್ ಸಂಪ್ರದಾಯದ ಕವಿಗಳಿಗೆ ಈ ಪದ್ಯ ಒಂದು ಮ್ಯಾನಿಫೆಸ್ಟೋ. ಸಭ್ಯ ಸಾಮಾಜಿಕರ ಆತ್ಮವಂಚನೆಗೆ ಸವಾಲಾಗುವ ಈ ಬಗೆಯ ಸಿಂಬಲಿಸ್ಟ್ ಕಾವ್ಯವು ಆ ಕಾಲದ ಪ್ರತಿರೋಧವಾಗಿತ್ತು ಎನ್ನಬಹುದು. ಏಕಕಾಲದಲ್ಲಿ ಮುಗ್ಧನಂತೆಯೂ ಪಾತಕಿಯಂತೆಯೂ ಕಾಣುವ ವೆರ್ಲೆನ್‌ನ ನಿಲುವು ಡಿಕಡೆಂಟ್, ಅಂದರೆ ಸಾಹಿತ್ಯಲೋಕದ ಅವಸಾನದ ಲಕ್ಷಣಗಳು ಅನ್ನುವವರು ಇದ್ದಾರೆ. ‘ಆಮೇಲೆ ಉಳಿದದ್ದು?’ ಎನ್ನುವ ಪ್ರಶ್ನೆ ಕೇಳಿ ಉತ್ತರವಾಗಿ ‘ಸಾಹಿತ್ಯ’ ಅನ್ನುವ ಈ ಪದ್ಯ ನಾವು ವಿಶ್ಲೇಷಣೆಗೆ ಎತ್ತಿಕೊಳ್ಳಲು ತವಕಿಸುವ ಕೃತಿಯ ‘ಸಾಹಿತ್ಯ’ ಎನ್ನಿಸಿಕೊಳ್ಳುವ ‘ಅಭಿಪ್ರಾಯಗಳ’ ಭಾಗವನ್ನು ಕ್ಷುಲ್ಲಕವೆಂಬಂತೆ ಕಾಣುತ್ತದೆ. ವೆರ್ಲೆನ್, ರಿಲ್ಕೆ, ಬ್ರೆಕ್ಟ್-ಇವರ ನಡುವಿನ ಭಿನ್ನತೆ ಸಾಮ್ಯತೆಗಳು (ಮುಖ್ಯವಾಗಿ ಬ್ರೆಕ್ಟ್, ಕವಿಯ ಭಿನ್ನತೆ) ಐರೋಪ್ಯ ಕಾವ್ಯದ ಅಂತರಂಗದಲ್ಲಿ ಇರುವ ಸೆಳೆತಗಳಿಗೆ ದ್ಯೋತಕವಾಗಿದೆ. ತಮ್ಮ ಒಳಬಾಳನ್ನು ನಿರ್ದಯವಾಗಿ ನಿರ್ಮಮವಾಗಿ ಶೋಧಿಸುವ ಇಂಥವರು ಮಧ್ಯಮವರ್ಗದ ಸಭ್ಯರು ತಮ್ಮ ಲೌಕಿಕ ಹಿತಕ್ಕಾಗಿ ಮನಸ್ಸಿನ ಅಗತ್ಯವಾದ ನೆಮ್ಮದಿಗಾಗಿ ಆತುಕೊಳ್ಳುವ ವ್ಯವಸ್ಥೆಯನ್ನು ಬುಡಮೇಲು ಮಾಡಿಬಿಡುತ್ತಾರೆ.)
*****