ಎಷ್ಟು ದಿನಗಳ ನಂತರ ರಾಜಿ ಮನೆಗೆ ಹೋಗಿದ್ದೆ. ಮೂರು ವರ್ಷವೇ ಕಳೆದಿತ್ತು. ಅವಳ ಮದುವೆಯಲ್ಲಿ ನೋಡಿದ್ದು. ಬೆಂಗಳೂರಿನ ಬಿಜಿ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಬೇಟಿಯೂ ಕಷ್ಟವಾಗಿತ್ತು. ಕಾಲೇಜು ದಿನಗಳಲ್ಲಿ ನಾವಿಬ್ಬರೂ ಅಗಲಿದ್ದೇ ಇಲ್ಲ. ಕಾಲೇಜು ಪತ್ರಿಕೆಗೆ ನಾನು ಚಿತ್ರಗಳನ್ನು ಬಿಡಿಸಿ ಕೊಟ್ಟರೆ, ರಾಜಿ ಕತೆ ಬರೆಯುತ್ತಿದ್ದಳು. ಅದೇ ಹಿಂದಿನ ಆತ್ಮೀಯತೆ ನಿರೀಕ್ಷಿಸಿ ಹೋಗಿದ್ದೆ. ಆದರೆ ನನ್ನ-ರಾಜಿಯ ನಡುವೆ ಈ ಮೂರು ವರ್ಷಗಳು ಎಂಥಹುದೋ ಕಂದರ ತೋಡಿದ್ದೆವು.
“ನಿನಗೆ ಗೊತ್ತಿಲ್ಲ ಶಶಿ, ನಮ್ಮ ರವಿ ಆರೇ ತಿಂಗಳಿಗೆ ಮಾತನಾಡೋಕೆ ಪ್ರಯತ್ನಿಸುತ್ತಾ ಇದ್ದ. ಎಂಟು ತಿಂಗಳಿಗೆ ನಡೆಯೋಕೆ ಶುರುಮಾಡಿದ. ನನಗಂತೂ ಒಂದು ರೀತಿ ಭಯವೇ ಆಗುತ್ತೆ. ಇವ ತೀರಾನೇ ಬುದ್ಧಿವಂತ. ಎಲ್ಲಾನೂ ಬಹಳ ಬೇಗ ಕಲೀತಾನೆ. ಅಲ್ಲಿ ನೋಡು ಅಲ್ಲಿ. ಹೇಗೆ ಕಿಟಕಿ ಮೇಲೆ ಹತ್ತಿ ನಿಲ್ಲೋಕೆ ಪ್ರಯತ್ನ ಮಾಡುತ್ತಾ ಇದ್ದಾನೆ…..” ರಾಜಿ ಒಂದೇ ಉಸಿರಲ್ಲಿ ಹೇಳುತ್ತಾ ಹೊರಟಳು. ಈ ಹುಡುಗಿಯರೇಕೆ ತಾಯಾದ ತಕ್ಷಣ ಇಷ್ಟು ಎಕ್ಸೈಟ್ ಆಗ್ತಾರೆ ಅಂತ ಗೊಣಗಿಕೊಂಡೇ, ಒಳಗೆ ಬೋರು ಹೊಡೆಯುತ್ತಿದ್ದರೂ ಅವಳ ಮಗನ ಪ್ರತಾಪವನ್ನು ಬಹಳ ಆಸ್ಥೆ ಇದ್ದಂತೆ “ಹೌದಾ…..? ಆಹಾ….” ಎಂದು ಉದ್ಗರಿಸಿ ಕೇಳಿದೆ.
“ಏನು ಹೇಳಿದರು ತಟ್ಟನೆ ಅರ್ಥ ಆಗುತ್ತೆ, ಎಲ್ಲಿ ಮರಿ, ಆಂಟಿಗೆ ನಮಸ್ತೆ ಮಾಡು….” ತನ್ನ ಪಾಡಿಗೆ ತಾನು ಡಬ್ಬ ಮುಚ್ಚಳ ಇಟ್ಟುಕೊಂಡು ಆಡುತ್ತಿದ್ದ ಮಗುವನ್ನು ಎತ್ತಿ ಹಿಪ್ಪೆ ಮಾಡಿ ಬಲವಂತಿಸಿದಳು. ಸ್ವಲ್ಪವೂ ಆಸಕ್ತಿ ತೋರದೆ ಮಗು ಕೊಸರಿಕೊಂಡು ಕೆಳಗೆ ಇಳಿದು, ಮತ್ತೆ ಡಬ್ಬದ ಮೇಲೆ ಚಮಚ ಬಡಿಯತೊಡಗಿದ.
“ಅವನಿಗೆ ಮೂಡ್ ಬರಬೇಕು…. ಆಗಲೇ ‘ಎ ಬಿ ಸಿ ಡಿ, ಅಂತೆಲ್ಲ ಹೇಳೋಕೆ ಕಲಿತಿದ್ದಾನೆ…..” ಅವಳ ಪ್ರವರ ಮುಗಿಯುವಂತೆ ಕಾಣಲಿಲ್ಲ. ನಡುವೆ ಬಾಯಿ ತೂರಿಸಿ ಕೇಳಿದೆ-
“ಅದಿರಲಿ ಇತ್ತೀಚೆಗೇನಾದರೂ ಬರೆದೆಯಾ”
“ಓಹ್ ಒಂದು ನಿಮಿಷಾನೂ ಕೈ ಬಿಡುವಾಗೋಲ್ಲ. ಇನ್ನೂ ಇವ ದೊಡ್ಡವನಾಗಬೇಕು….”
“ಅತ್ತೆ ನಾದಿನಿ ಇಬ್ಬರೂ ಇದ್ದಾರಲ್ಲೆ…..?”
“ಓಹ್, ನನಗೆ ಇವ ಯಾವಾಗಲೂ ಕಣ್ಮುಂದೇ ಇರಬೇಕು ಶಶಿ. ಬಿಟ್ಟು ಬರೆಯೋ ಮನಸ್ಸೇ ಆಗೋಲ್ಲ. ಎಲ್ಲಿ ಬಿದ್ದು ಏನು ಮಾಡಿಕೊಳ್ಳುತ್ತಾನೋ ಅಂತ ಆತಂಕ. ಅಲ್ಲಿ ನೋಡು ತುಂಟ ಹೇಗೆ ನಗುತ್ತಾ ಇದ್ದಾನೆ. ಅವನನ್ನು ಹೀಗೆಲ್ಲ ನೋಡುವಾಗ ಬರೆಯೋದು ಎಲ್ಲ ಏಕೆ ಅನಿಸುತ್ತೆ” ಮಗನನ್ನು ಎತ್ತಿ ಲೊಚಲೊಚನೆ ಮುತ್ತಿಕ್ಕಿದಳು. ಸಂತಸದ ಸಂತೃಪ್ತಿಯಿಂದ ಬೀಗಿದ ಅವಳ ಮುಖವನ್ನೇ ಬೆರಗಿನಿಂದ ನೋಡಿದೆ. ತಾಯ್ತನ ಲೋಕವನ್ನೇ ಮರೆಸುತ್ತದೆಯೆ ? ಈ ಹೆಣ್ಣುಗಳೇಕೆ ತಾಯ್ತನಕ್ಕೆ ಇಷ್ಟೊಂದು ಆತುಕೊಳ್ಳುತ್ತಾರೆ ? ತಂದೆಯಾದ ಗಂಡು ಬಹುಶಃ ತನ್ನ ಪಿತೃತ್ವವನ್ನು ಇಷ್ಟು ಬಗೆಯಲ್ಲಿ ಹಚ್ಚಿಕೊಳ್ಳುವುದಿಲ್ಲ. ನನಗೇಕೆ ಎಂದೂ ಇಂಥ ಅತೀವ ಆಸೆಗಳು ಮೊಳೆತಿರಲಿಲ್ಲ. ಮಗು ಇರಲಿ ಎಂದು ಹೊರಟಾಗಲೂ ತಾಯ್ತನವನ್ನೇನೂ ಇಷ್ಟೊಂದು ತೀವ್ರವಾಗಿ ಬಯಸಿರಲಿಲ್ಲ.
ಅಂದು ಸಂಜೆ ಮನೆಗೆ ಬಂದಾಗ ಬಣ್ಣಕ್ಕದ್ದಿದ ನನ್ನ ಕುಂಚ ಕ್ಯಾನ್‌ವಾಸ್ ತುಂಬಾ ರಚಿಸಿದ್ದು ಪುಟ್ಟ ಪುಟ್ಟ ಮಕ್ಕಳನ್ನು. ತಂಗಿಯ ಮಗು, ಇವರ ಅಕ್ಕನ ಮಗು…. ಎಷ್ಟು ಮಕ್ಕಳನ್ನು ನೋಡಲು ಹೋಗಿದ್ದೆ ? ಆಗಷ್ಟೇ ಹುಟ್ಟಿದ ಹಸಿಹಸಿ ಮೈಯಿನ, ಬೋಳು ತಲೆಯ ಕೆಂಪು ಕೆಂಪು ಮಕ್ಕಳು!
ಆದರೆ ಕುಂಚ ಹಿಡಿದು ಈಗ ಆರು ತಿಂಗಳುಗಳೇ ಆಯಿತಲ್ಲ. ಏನು ಬಿಡಸಲು ಹೊರಟರೂ ಕೊನೆಗೆ ಕ್ಯಾನ್‌ವಾಸ್ ತುಂಬಾ ಮಗುವಿನ ಮುಖ ಕಂಡಂತೆ ಭಾಸವಾಗಿ ಮನಸ್ಸು ಖಾಲಿ ಖಾಲಿ.
ಒಂದೊಂದೇ ಚಿತ್ರಗಳನ್ನು ನೆನಪ ಗಾಳದಿಂದ ಹೆಕ್ಕಿ ಹೆಕ್ಕಿ ಹೊರ ತೆಗೆದೆ.
ಮೂರು ವರ್ಷಗಳ ಹಿಂದೆ….
ಒಂದರ ಬಗಲಿಗೊಂದು ತುರುಕಿ ಕಟ್ಟಿದ ಬೆಂಗಳೂರಿನ ಮನೆಗಳು, ನಮ್ಮ ಮನೆಯ ಕಿಡಕಿ ಗೂಡಿಗೆ, ಹತ್ತಿ ಕೆಳಗೆ ಧುಮುಕುವ ಆಟ, ಪಕ್ಕದ ಎರಡೂ ಮನೆಯ ಹುಡುಗರಿಗೆ, ಹೇಳಿದ್ದು, ಗದರಿದ್ದು ಎಲ್ಲಾ ಮುಗಿದ ಮೇಲೆ ಜೋರಾಗಿಯೇ ದಬಾಯಿಸಿದ್ದೆ. ದಿನವೆಲ್ಲ ಮನೆಯಲ್ಲೇ ಇರುವ ನನಗೆ ನಿಶ್ಚಿಂತೆಯಿಂದ ಎರಡು ನಿಮಿಷ ಮಲಗುವಂತಿಲ್ಲ. ಚಿತ್ರ ಬಿಡಿಸುವಂತಿಲ್ಲ. ಬೇಸಿಗೆಯ ರಜೆ ಹುಡುಗರಿಗೆ, ಬೀದಿಗೋ ಬಯಲಿಗೋ ಹೋಗಿ ಆಡಬಾರದೆ ? ಇರುವ ಕಿಷ್ಕಿಂದೆಯಂಥಾ ಮನೆಯಲ್ಲಿ ಮತ್ತೊಂದು ಕೋಣೆಯೂ ಇಲ್ಲ. ಪಕ್ಕದ ಮನೆಯಾಕೆ ಅಬ್ಬರಿಸಿ ಜಗಳಕ್ಕೆ ನಿಂತೇ ಬಿಟ್ಟಳು-
“ಮಕ್ಕಳು ಗಲಾಟೆ ಮಾಡದೆ, ನಾವು ಮಾಡುತ್ತೇವೇನ್ರೀ ?”
“ನೋಡಿ ಇಲ್ಲಿ, ಕಿಟಕಿ ಹತ್ತಿರ ಕಿರುಚಬೇಡಿ ಅಂತ ಹೇಳಿ, ಒಂದು ನಿಮಿಷ ನಿಶ್ಯಬ್ಧವಾಗಿರಲ್ಲ. ನಿದ್ದೆ ಮಾಡೋ ಹಾಗಿಲ್ಲ. ಕೆಲಸ ನಡೆಯೋ ಹಾಗಿಲ್ಲ. ಬೀದಿಗೆ ಹೋಗಿ ಆಡೋಕೆ ಹೇಳಿ.”
“ಚಿಕ್ಕ ಮಕ್ಕಳನ್ನು ಬೀದಿಗೆ ಬಿಡೋಲ್ರೀ. ಮಕ್ಕಳ ಆಟ-ಪಾಠ ನೋಡಿ ಖುಶಿಪಡಬೇಕು, ಅದು ಬಿಟ್ಟು….” ಇತ್ತ ಮನೆಯವಳು ಉದ್ಗರಿಸಿದರೆ,
“ಅವರಿಗೆ ಮಕ್ಕಳ ಗದ್ದಲ ಗೊತ್ತಿಲ್ಲ ನೋಡಿ ಪಾಪ….”ಅತ್ತ ಮನೆಯ ಮೂರು ಹೆತ್ತ ಸೌಭಾಗ್ಯವತಿ ಹೆಮ್ಮೆಯಿಂದ ಬಾಯಿ ತೂರಿಸಿದಳು. ಬಾಯಿ-ಬಾಯಿ ಗುದ್ದಾಟ, ನಂತರ ಮಾತಿಲ್ಲದ ಬಿಗಿ ಮೌನ.
“ಅಲ್ಲ ಮಕ್ಕಳಿಲ್ಲದೋರು, ಮಕ್ಕಳು ಅಂದರೆ ಪ್ರಾಣ ಬಿಡಬೇಕು. ಅದು ಬಿಟ್ಟು ಹೀಗೆ ಗದರೋದೆ…..?”
“ಅದಕ್ಕೇ ಆಗಿಲ್ಲ ಬಿಡಿ….” ಈ ಬೆಂಗಳೂರಿನ ವಠಾರಗಳಲ್ಲಿ ಬೇಡವೆಂದರೂ ಗೋಡೆಯಾಚೆ ಅಂದದ್ದೂ, ಹೂಸಿದ್ದೂ ಕೇಳಿಸುತ್ತದೆ.
ಇಂದು ಜಯನಗರದ ಫ್ಲಾಟ್ ಒಂದರಲ್ಲಿ ನೆಮ್ಮದಿಯಿಂದಿದ್ದೇನೆ. ಅಕ್ಕಪಕ್ಕ ಕಿಕ್ಕಿರಿದ ಮನೆಗಳ ಗದ್ದಲವಿಲ್ಲ. ಕಿಟಕಿಯಾಚೆ ತೆರೆದೆ ನೀಲಿ ಆಕಾಶ. ಆದರೂ ನನ್ನ ಕಿವಿಯಲ್ಲಿ ಪದೇ ಪದೇ ಆ ಮಾತುಗಳು ಗಸ್ತು ಹೊಡೆಯುತ್ತವೆ. ನಿಂತಾಗ, ಕುಳಿತಾಗ, ಬಾಲ್ಕನಿಯಲ್ಲಿ ದಿಗಂತವನ್ನು ಕಂಡಾಗ, ಕಪ್ಪು ರಾತ್ರಿಗಳಲ್ಲಿ ಚುಕ್ಕಿ ಎಣಿಸುವಾಗ, ಇವನೆದೆಗೆ ಒರಗಿದಾಗ…. “ಅವರಿಗೆ ಮಕ್ಕಳ ಗದ್ದಲ ಗೊತ್ತಿಲ್ಲ….” ಅಬ್ಬ, ಎಂಥ ಹೆಮ್ಮೆ ಇತ್ತು ಆ ಕಂಠದಲ್ಲಿ, ಹೆತ್ತ ಹೆಮ್ಮೆ !
ಹಾಗೆ ನೋಡಿದರೆ, ಆಗಿನ್ನೂ ನಮಗೆ ಮದುವೆ ಆಗಿ ನಾಲ್ಕು ವರ್ಷ, ನನಗೆ ಮಕ್ಕಳು ಬೇಕು ಅನ್ನಿಸಿರಲಿಲ್ಲ. ರಮೇಶನ ಕೆಲಸ ಅವನನ್ನು ದಿನದ ಹದಿನಾಲ್ಕು ಗಂಟೆ ಹಿಡಿದಿಡುತ್ತಿತ್ತು. ಒಂದರ ನಂತರ ಒಂದರಂತೆ ನನ್ನ ಕಲಾಪ್ರದರ್ಶನ . ಹಗಲಿರುಳು ಬಣ್ಣಗಳ ಒಡನಾಟ, ಸ್ಫೂರ್ತಿಗದ್ದಿದ ಕುಂಚ, ಪ್ರದರ್ಶನಗಳು, ಪತ್ರಿಕೆಗಳು, ಪ್ರಶಂಸೆ, ವಿಮರ್ಶೆ, ಬಿಡುವಿಲ್ಲದ ಬದುಕಿನಲ್ಲಿ ಮಗುವಿನ ಕೊರತೆ ಕಂಡಿತ್ತೆ? ಮೂರು ವರ್ಷಕ್ಕೆ ಚಿಕ್ಕವಳಾದ ದೊಡ್ಡಮ್ಮನ ಮಗಳು ವಿಜಿ ಕೂಡ ಉಪದೇಶ ಕೊಟ್ಟಿದ್ದಳಲ್ಲ!
“ಈ ಹಾಳು ಪೇಂಟಿಂಗು, ಪ್ರದರ್ಶನ ಅಂತ ಎಷ್ಟು ದಿನ ಮುಂದೂಡ್ತೀಯೆ ?”
“ನನಗೆ ಇನ್ನೂ ಮಗು ಬೇಕು ಅನಿಸಿಲ್ಲವೆ. ಸದ್ಯಕ್ಕಂತೂ ಬದುಕು ಭರ್ತಿಯಾಗಿದೆ. ಏನೂ ಹೆದರಬೇಡ. ನನಗೆ ಮೂವತ್ತು ಆಗುವುದರೊಳಗೆ ಒಂದು ಕೂಸು ಹೆತ್ತಿರುತ್ತೇನೆ…..” ಎಂದು ನಕ್ಕಿದ್ದೆ.
“ಬೇಗ ಒಂದು ಮಾಡಿಕೊಂಡು ಬಿಡು. ಇಷ್ಟು ತಡವಾಗಬಾರದು. ಮಕ್ಕಳಿಲ್ಲದ ಬದುಕು ಬರೀ ಬಂಜರು. ತಾಯ್ತನಕ್ಕಿಂತ ದೊಡ್ಡ ಸಾಧನೆ ಯಾವುದೂ ಇಲ್ಲ. ಮದುವೆಯಾದ ಒಂದೆರಡು ವರ್ಷದಲ್ಲೆ ಆದರೆ ಚೆನ್ನ…..”
ವಿಜಿ ಮದುವೆಯಾದ ಒಂಭತ್ತೂವರೆ ತಿಂಗಳಿಗೇ ರಶ್ಮಿ ಜನಿಸಿದ್ದಳು. ಹೊಸದಾಗಿ ಉತ್ಸಾಹದಿಂದ ಗಂಡನ ಮನೆಗೆ ಬೀಗುತ್ತ ಹೋದ ವಿಜಿ, ಮದುವೆಯಾದ ಮೇಲೆ ಮುಟ್ಟಾಗಲಿಲ್ಲ. ಏನಾದರೂ ‘ಎಚ್ಚರಿಕೆ’ ತಗೋಬೇಕು ಅನ್ನುವಷ್ಟರಲ್ಲಿ ರಶ್ಮಿ ಆಕಸ್ಮಿಕವಾಗಿ ಅವತರಿಸಿದ್ದಳು. ಇನ್ನೂ ಇಪ್ಪತ್ತರ ಹರೆಯ, ಕುಣಿವ ಹಾರುವ ಆಸೆ. ಗರ್ಭಾವಸ್ಥೆಯಲ್ಲಿ ಬಂಧಿಯಾದಾಗ ಚಡಪಡಿಸಿದಳು. ‘ಈಗಲೇ ಯಾರಿಗೆ ಬೇಕಿತ್ತು ಈ ಕಾಟ. ಒಂದು ವರ್ಷ ಆದರೂ ಹಾಯಾಗಿರಲಿಲ್ಲ’ ಎಂದು ಗೊಣಗುತ್ತಲೇ ಬಸಿರು ಅನುಭವಿಸಿದಳು. ಹುಟ್ಟಿದಾಗ ಕೆಂಪು ಕೆಂಪನೆ ಮೆತ್ತೆ ಮೈಯಿ, ಹಣೆ ಅಗಲ, ತುಂಬಾ ಕೂದಲು, ಕಡ್ಡಿಯಂಥ ಕೈಗಳು, ಪೊರೆ ಸುಲಿಯುತ್ತಿದ್ದ ದೇಹ, ಬ್ಯಾಂಡೇಜು ಕಟ್ಟಿದ್ದ ಹೊಕ್ಕಳು…. ಮುದ್ದೇನೂ ತರಿಸಿರಲಿಲ್ಲ. ಎರಡು-ಮೂರು ತಿಂಗಳಿಗೆ ರಶ್ಮಿ ಗುಂಡುಗುಂಡಾದ ಕೂಸಾದಾಗ, ಸಹಜವಾಗಿಯೇ ಎತ್ತಿ ಮುತ್ತಿಕ್ಕಿದರೂ, ಗಂಟೆ ಗಂಟೆಗೆ ಒದ್ದೆ ಮಾಡಿಕೊಂಡು, ಸ್ವಲ್ಪ ಹೊಟ್ಟೆ ಅಮುಕಿದರೂ ಹಾಲೆಲ್ಲ ಬಾಯಿಂದ ಸುರಿಸುತ್ತಾ, ಕುಡಿಸಿ ಒರೆಸಿ ತೊಳೆವ ಬದುಕು, ಬಂಧಿಸಿಡುವಂತಿತ್ತು. ‘ಅದು ಯಾರು ಈ ತಾಯ್ತನವನ್ನು ಬಯಸಿ ಬಯಸಿ ಬರಮಾಡಿಕೊಳ್ಳುತ್ತಾರೆ’ ಎಂದೆಲ್ಲ ಹಾರಾಡಿದ್ದಳು. ಮಗು ಹಾಲು ಬಿಡಿಸಿದಾಗಿನಿಂದ ಬೆಳೆದದ್ದು ದೊಡ್ಡಮ್ಮನ ಮನೆಯಲ್ಲೆ. ವಿಜಿ ಹೊತ್ತದ್ದು ಆಕಸ್ಮಿಕವಾಗಿ, ಹೆತ್ತದ್ದು ಹಾಲೂಡಿಸಿದ್ದು ಅನಿವಾರ್ಯವಾಗಿ, ಸಮಯ ಸರಿದಂತೆ ಅವೆಲ್ಲವನ್ನು ಆದರ್ಶೀಕರಿಸಿ, ಹೆಗ್ಗಳಿಕೆಯಾಗಿಸಿ ಹೇಳಿಕೊಂಡಳಲ್ಲ!
ಹಾಗೆ ನೋಡಿದರೆ ಮಗು ಬೇಕು ಎಂದು ಹೊರಟಿದ್ದು ಯಾವಾಗ?
ಆ ಬಾರಿ ತೌರಿಗೆ ಹೋದಾಗ ತಂಗಿ ಮೂರನೆ ಹೆರಿಗೆಗೆ ಬಂದಿದ್ದಳು. ಅಮ್ಮ ಆಗಲೆ ತನ್ನ ಬತ್ತಳಿಕೆಯಿಂದ ಅಶ್ರು ಅಸ್ತ್ರ ಹರಿತಗೊಳಿಸಿ ಬಿಕ್ಕಳಿಸಿದಳು. “ಹಿರೀ ಮಗಳು, ನಿನ್ನದೊಂದು ಬಾಣಂತನ ಮಾಡಿ ಕಣ್ಣು ಮುಚ್ಚುತ್ತೇನೆ…..” ರೇಜಿಗೆಯಾಗಿತ್ತು. ಅತ್ತೆ ಕೂಡ ಸಾಕಷ್ಟು ಬಾರಿ ಅಂದು ತೋರಿಸಿದ್ದರು. ಕಡೆಗೆ ಇವರ ಅಕ್ಕನ ಆ ಪತ್ರ-‘ಮಕ್ಕಳಿಲ್ಲದ ಮೇಲೆ ಬದುಕಿಗೇನು ಅರ್ಥ ? ನೀವಿಬ್ಬರೂ ಕೈತುಂಬಾ ದುಡಿಯೋದು ಯಾರಿಗಾಗಿ ? ಶಶೀನ ಡಾಕ್ಟರಿಗೆ ತೋರಿಸಬಾರದೆ, ಏನು ಹೆಚ್ಚು ಕಮ್ಮಿ ಇದೆಯೋ, ನೀನೇನು ಯೋಚಿಸಿದ್ದೀಯಾ ?’
ತಟ್ಟನೆ ಎದೆಗೆ ನಾಟಿತ್ತು, ಚೂಪಾದ ಕತ್ತಾಳಿ ಮುಳ್ಳಿನಂತೆ!
ಅಂದು ರಾತ್ರಿ ರಮೇಶನಿಗೆ ಹೇಳಿದ್ದೆ-
“ಇನ್ನು ಒಂದು ಮಗು ಮಾಡಿಕೊಳ್ಳೋಣ….”
“ನಿನ್ನ ಬಾಂಬೆ ಪ್ರದರ್ಶನ ಮುಗಿದುಬಿಡಲಿ ಶಶಿ. ಆರ್ಟ್ ಗ್ಯಾಲರೀನ ಬುಕ್ ಮಾಡಿದ್ದೂ ಆಗಿದೆ….”
“ನನಗೀಗ ಯಾವ ಪ್ರದರ್ಶನದಲ್ಲೂ ಆಸಕ್ತಿ ಇಲ್ಲ…..”
“ಇದೇನು ಇದ್ದಕ್ಕಿದ್ದಂತೆ….” ಎಂದವನು ನನ್ನ ಕೈಲಿದ್ದ ಅಕ್ಕನ ಪತ್ರ ನೋಡಿ ದೊಡ್ಡದಾಗಿ ನಕ್ಕ.
“ಅಬ್ಬ, ನಿನ್ನಲ್ಲಿ ಎಲ್ಲ ಸರಿ ಇದೆ ಎಂದು ಸಾಬೀತು ಮಾಡುವ ಹುಮ್ಮಸ್ಸೋ?”
ಒಂದು ಕ್ಷಣ ನನ್ನ ಬಾಲಿಶ ವರ್ತನೆಗೆ ನಾಚಿದೆ. ಸುಮ್ಮನೆ ನಕ್ಕುಬಿಟ್ಟೆ. ಅವರಿವರ ಬಾಯಿಗೆ ಬಿರಡೆಯಾಗಿ ನನ್ನ ಮಗು ಬರಬೇಕಿಲ್ಲ. ನಾನದನ್ನು ಸ್ವಾಗತಿಸಲು ಸಿದ್ಧವಾಗಿರಬೇಕು, ಅಂದುಕೊಂಡೆ. ನನ್ನ ಪ್ರದರ್ಶನದತ್ತ ಗಮನ ಹರಿಸಿದೆ. ಅದಾದ ಆರು ತಿಂಗಳಿಗೆ ಏನೊಂದೂ ಸಂಭವಿಸದಾದಾಗ ಇಷ್ಟು ಬೇಗ ಹೆದರಬೇಕಿಲ್ಲ ಎಂದು ಗಾಬರಿಯಾಗದಿದ್ದರೂ ‘ಇರಲಿ, ಒಮ್ಮೆ ಚೆಕ್ ಮಾಡಿಸೋಣ’ ಎಂದು ಹೊರಟೆ.
ಡಾಕ್ಟರ್ ಪರೀಕ್ಷೆಯ ನಂತರ ರಮೇಶನಿಗೆ ಹೇಳಿದರು….. ‘ನಿನ್ನಲ್ಲಿ ಏನೂ ದೋಷವಿಲ್ಲ, ಆದರೆ ಸಾರಿ, ನಿಮ್ಮ ಮಿಸೆಸ್‌ಗೆ ಗರ್ಭಕೋಶ ಬೆಳೆದಿಲ್ಲ. ಮಕ್ಕಳ ಸಂಭವ ಕಡಿಮೆ.” ಒಂದು ಕ್ಷಣ ನನ್ನ ಕಿವಿಗಳನ್ನು ನಾ ನಂಬಿರಲಿಲ್ಲ!
ರಮೇಶ ಅಗಾಧ ಸಂಯಮದಿಂದ ಕೇಳಿದ, ವಿಷಕಂಠನಂತೆ ಒಂದೇ ಬೊಗಸೆಗೆ ನಿರಾಶೆಯನ್ನು ನುಂಗಿಕೊಂಡ, ಮೃದುವಾಗಿ ನನ್ನ ಭುಜ ಅಮುಕಿ ಹೊರಗೆ ಕರೆತಂದ. ಆದರೆ ನಾನು ? ನಾವೇ ಬೇಡ ಎಂದು ತಡೆಯುವುದಕ್ಕೂ, ‘ಆಗುವುದಿಲ್ಲ’ ಎಂಬುದಕ್ಕೂ ಪರಿಣಾಮ ಒಂದೇ ಇದ್ದರೂ ಎಷ್ಟೊಂದು ವ್ಯತ್ಯಾಸ ! ನನಗೆ ಮಗು ಆಗುವುದಿಲ್ಲ ಎಂದು ತಿಳಿದೊಡನೆ ಎಂಥಾ ನಿರಾಶೆಯಾಗಿತ್ತು. ಹೇಗಾದರೂ ತಾಯಾಗುವ ಛಲಕ್ಕೆ ಕಂಡಕಂಡ ಡಾಕ್ಟರುಗಳಿಗೆ, ಹೋಮಿಯೋಪತಿ, ಅಲೋಪತಿ, ಆಯುರ್ವೇದ, ಕೊನೆಗೆ ಬೀದಿಬೀದಿಯ ಅಳಲೆಕಾಯಿ ಪಂಡಿತರನ್ನೂ ಕಂಡುಬಂದಿದ್ದೆ. ಬುದ್ಧಿ ಹತೋಟಿ ಮೀರಿ, ಮನಸ್ಸು ಗೂಟ ಕಿತ್ತ ಎತ್ತಿನಂತೆ ಓಡಿತ್ತು.
ಹಿಂದೆಲ್ಲ ಗಮನಕ್ಕೇ ಬಾರದ, ಗಮನಿಸಿದರೂ ಕೊಡವಿ ಹಾಕುತ್ತಿದ್ದ ಅವರಿವರ ಸಣ್ಣಪುಟ್ಟ ಮಾತುಗಳೂ ರೆಕಾರ್ಡ್ ಹಾಕಿದಂತೆ ಕಿವಿಯಲ್ಲಿ ಮೊರೆದವು. ಬೇಡವೆಂದರೂ ಹೆತ್ತ ಹಿರಿತನದ ಹಲವು ಮುಖಗಳು ಗೋಡೆಗಂಟಿಸಿದ ಸ್ಥಿರಚಿತ್ರಗಳಂತೆ ಕಣ್ಣಿಗೆ ರಾಚಿ ನಿಂತವು.
ಕಳೆದ ಬೇಸಗೆಯಲ್ಲಿ ರಮೇಶನ ಅಕ್ಕನ ಮನೆಗೆ ಹೋದಾಗ, ಇಬ್ಬರು ಮಕ್ಕಳೂ ರಮೇಶನಿಗೆ ಮುಗಿಬಿದ್ದಿದ್ದ ಆ ಚಿತ್ರ, “ಮಾಮಾ ಬಿಸ್ಕತ್ತು ಕೊಡಿಸು, ಮಾಮಾ ಚಾಕಲೇಟು….”ಅವರ ಬೇಡಿಕೆಗಳಿಗೆ ಕೊನೆಯೇ ಇರಲಿಲ್ಲ. ಕಡೆಗೆ ಆ ಪುಟ್ಟ ಕಾರು, ಸ್ಟೀರಿಂಗ್ ತಿರುಗಿಸಿದರೆ ಮುಂದಕ್ಕೆ ಹೋಗುವಂಥದ್ದು, ಎರಡು ಪುಟ್ಟ ಸೆಲ್ ತೂರಿಸಿದರೆ ಹೆಡ್‌ಲೈಟ್ ಮಿಟುಕಿಸುವಂಥದ್ದು, ಐನೂರು ಬೆಲೆಯದ್ದು_ಹಟ ಹಿಡಿದು ರಾಜು ತೆಗೆಸಿಕೊಂಡಾಗ ಅಕ್ಕನ ಗಂಡ ಸ್ವಲ್ಪ ಸಂಕೋಚದಿಂದ “ಛೆ ರಮೇಶ್, ಇಷ್ಟೆಲ್ಲ ಏಕೆ ಖರ್ಚು ಮಾಡಿದ್ದು ?” ಎಂದು ಆಕ್ಷೇಪಿಸುತ್ತಿದ್ದಂತೆ, ಅಕ್ಕ ಆರಾಮವಾಗಿ “ಮಾಡಲಿ ಬಿಡಿ, ಅವನು ತಾನೆ ಇನ್ಯಾರಿಗೆ ಮಾಡಬೇಕು ?” ಎಂದುಬಿಟ್ಟಿದ್ದಳು. ಅವಳ ಮಕ್ಕಳ ಮೇಲೆ ಖರ್ಚು ಮಾಡಲು ಅನುಮತಿ ನೀಡಿ ಉಪಕರಿಸಿದಂತಿತ್ತು ಅವಳ ಧೋರಣೆ! ಆ ಮುಖಭಾವ…. ಉಪೇಕ್ಷೆಯೆ? ತಿರಸ್ಕಾರವೆ? ಯಾವ ಭಾವ ನನ್ನ ಕಣ್ಣ ಮುಂದೆ ಅಚ್ಚೊತ್ತಿದಂತೆ ನಿಂತಿದೆ?
ಮತ್ತೊಂದು ಬಾರಿ ಗೌರಿ ಹಬ್ಬಕ್ಕೆಂದು ತಂಗಿಗೆ ಒಂಭೈನೂರು ರೂಪಾಯಿಯ ಮೈಸೂರು ಜಾರ್ಜೆಟ್ ಕೊಡಿಸಿದ್ದೆ. ಹಿಗ್ಗಿ, ಖುಶಿಪಡಬಹುದು ಎಂದು ನಿರೀಕ್ಷಿಸಿದರೆ ತಂಗಿಯಿಂದ ಹರ್ಷದ ಒಂದು ಉದ್ಗಾರವೂ ಹೊರ ಬಂದಿರಲಿಲ್ಲ. ಅಮ್ಮ “ಈಗೇಕೆ ಇಷ್ಟು ಭಾರೀ ಸೀರೆ ಕೊಡಿಸಲು ಹೋದೆ?” ಅಂದರೆ ತಂಗಿ_“ಅವಳಿಗೇನಮ್ಮ ಒಂದು ಪೇಂಟಿಂಗ್ ಮಾರಿದರೆ ಸಾವಿರಗಟ್ಟಲೆ ಬರುತ್ತೆ, ಭಾವಂಗೂ ಕೈತುಂಬಾ ಸಂಬಳ. ಗಂಡ-ಹೆಂಡತಿ ಜುಮ್ ಅಂತ ಇದ್ದಾರೆ….” ಅವಳ ಕಂಠದಲ್ಲಿ ಸ್ವಲ್ಪ ಅಸೂಯೆಯೂ ಇತ್ತಲ್ಲ. ನನ್ನ ಪ್ರತಿ ಪೇಂಟಿಂಗ್ ಸಾವಿರಗಟ್ಟಲೆ ತರುವುದಕ್ಕೆ ನಾನೇನು ಪಿಕಾಸೋನಾ, ಎಂ.ಎಫ್. ಹುಸೇನೋ? ಅದು ಯಾವ ಭಾವ, ತಂಗಿಯ ಮುಖದಲ್ಲಿ ಕಂಡದ್ದು? ಅಸೂಯೆ? ಅಸಮಾಧಾನದಲ್ಲೂ ಬೆರೆತ ಮಕ್ಕಳಾದ ತೃಪ್ತಿಯೆ ? ಹೆಮ್ಮೆಯೆ, ಕುಹಕವೆ, ಯಾವ ಭಾವ? ಆ ಬಾರಿಯ ನನ್ನ ಪ್ರದರ್ಶನದಲ್ಲಿ ಭಾವಚಿತ್ರಗಳೇ ಹೆಚ್ಚಿದ್ದವಲ್ಲ ನಿರೀಕ್ಷೆ ಹೊತ್ತ ಅಮ್ಮ, ಉದ್ದಕ್ಕೆ ಉಪದೇಶಿಸಿದ ವಿಜಿ, ಬೇಸಗೆ ಬಿಸಿಯಲ್ಲೂ ಕಿವಿಗೆ ಹತ್ತಿ ತುರುಕಿಕೊಂಡು ಮಫ್ಲರ್ ಕಟ್ಟಿದ್ದ ಬಾಣಂತಿ ತಂಗಿ, ಎರಡು ಹೆತ್ತ ನೆಪದಲ್ಲಿ ಆನೆಯಂತಾದ ರಮೇಶನ ಅಕ್ಕ…. ಎಷ್ಟು ಮುಖಗಳು, ವ್ಯಕ್ತಿಗಳಲ್ಲ ಬರೀ ಮುಖಗಳು. ಅವರು ಹೊತ್ತ ಭಾವಗಳ ಚಿತ್ರ ನನ್ನ ಬಂಜೆತನದ ಹತ್ತು ಹಲವು ಬಗೆಯಲ್ಲಿ ಪ್ರತಿಫಲಿಸಿದ್ದವು. ಆ ಬಾರಿಯ ಪ್ರದರ್ಶನಕ್ಕೆ ನಿರೀಕ್ಷೆಗೆ ಮೀರಿದ ಮೆಚ್ಚುಗೆ ದೊರೆತದ್ದು ಹೇಗೆ? ನನ್ನ ಚಿತ್ರಗಳು ಬರೀ ಚಿತ್ತಾರವಾಗದೆ ಅವರಿವರ ಭಾವಗಳನ್ನು ಹೊತ್ತು ಜೀವಂತವಾಗಿದ್ದವಲ್ಲವೆ? ಮೊಟ್ಟಮೊದಲ ಬಾರಿಗೆ ಅನುಭವವಾಗಿತ್ತು_ಕಲಾವಿದೆಯ ಜೀವನದಲ್ಲಿ ಯಾವ ಅನುಭವವೂ ವ್ಯರ್ಥವಲ್ಲ, ಕಡೆಗೆ ಕಹಿ ಅನುಭವಗಳೂ ಕೂಡ!
ಹೊಸ ಉತ್ಸಾಹದಲ್ಲಿ ಪೇಂಟಿಂಗ್ ಮುಂದುವರಿಸಿದೆ, ನನ್ನ ದೈಹಿಕ ಕೊರತೆಯನ್ನು ಮರೆಯಲೆತ್ನಿಸಿದೆ. ಆದರೆ ನನ್ನ ಸುತ್ತು ಜನ ಅದನ್ನು ಮರೆಯಲು ಸುಲಭವಾಗಿ ಬಿಟ್ಟಿರಲಿಲ್ಲ. ದೈನಂದಿನ ಸಹಜ ಮಾತುಕತೆಯಲ್ಲೂ ನನ್ನ ಬಂಜೆತನ ಅವರಿವರ ನಾಲಿಗೆಯಲ್ಲಿ ಹೊರಳಾಡುತ್ತಿತ್ತು. ಗೋಪು ಮದುವೆಯಲ್ಲಿ ಸೋದರತ್ತೆಯ ಮಗಳು ಲಲ್ಲಿ ಸಿಕ್ಕಿದ್ದಳು.
“ಹೇಗಿದ್ದೀಯಾ?” ಕೇಳಿದ್ದೆ.
“ಹೂಂ ಇದ್ದೇನೆ….” ಎಂದೇನೋ ಹೇಳಿದಳು.
“ಮಕ್ಕಳೆಲ್ಲಿ?” ಒಬ್ಬಳೇ ಬಂದ ಅವಳನ್ನು ಕೇಳಿದಾಗ,
“ಅಯ್ಯೋ ದೊಡ್ಡೋಳಿಗೆ ಮೊನ್ನೆ ಭೇದಿ ಆಗಿತ್ತು. ಮದುವೆ ಊಟ ಬೇಡ ಅಂತ ಬಿಟ್ಟು ಬಂದೆ. ಚಿಕ್ಕದಕ್ಕೆ ನೆಗಡಿ ಇನ್ನೂ ಹೋಗೇ ಇಲ್ಲ.”
“ಮಕ್ಕಳು ಅಂದರೆ ಇವೆಲ್ಲ ಇದ್ದದ್ದೆ, ಹುಷಾರಾಗ್ತಾರೆ ಬಿಡು” ಸಮಾಧಾನ ಮಾಡುವಂತೆ ಹೇಳಿದ್ದೆ.
“ನೀನೇ ಪುಣ್ಯವಂತಳು. ಮಕ್ಕಳಿಲ್ಲ ಅನ್ನೋದು ಬಿಟ್ಟರೆ ಬೇರೆ ಚಿಂತೆ ಇಲ್ಲ….” ಆಕೆ ಹಾಗೆ ಹೇಳಿದರೂ ಅವಳ ಕಂಠದಲ್ಲಿ ಎರಡು ಹೆತ್ತ ಹೆಮ್ಮೆ ಇಣುಕಿತ್ತು. ನನ್ನ ಬಂಜೆತನಕ್ಕೆ ಬೆರಳಿಟ್ಟ ಅಪಹಾಸ್ಯವಿತ್ತು. ಅಥವಾ ಇದೆಲ್ಲ ಕೇವಲ ನನ್ನ ಕಲ್ಪನೆಯೆ?
“ಮತ್ತೆ ಏಕೆ ಮಾಡಿಕೊಳ್ಳಲು ಹೋದೆ, ಒಂದಲ್ಲ ಎಂದರೆ ಎರಡು?” ಎಂದುಬಿಟ್ಟೆ. ನನ್ನ ಈ ಉತ್ತರ ನಿರೀಕ್ಷಿಸದ ಅವಳಿಗೆ ತಬ್ಬಿಬ್ಬು. ಮುಖ ಸೊಟ್ಟಗೆ ಮಾಡಿಕೊಂಡು ಹೋದವಳು ಬಳಗದಲ್ಲೆಲ್ಲ ಗುಸುಗುಸು ಎಬ್ಬಿಸಿದಳು.
ಅಂದು ಶ್ಯಾಮ್‌ಲಾಲ್ ಪಾರ್ಟಿಯಲ್ಲೂ ಅಂಥದ್ದೇ ಘಟನೆ. ಅಡಿಯಿಂದ ಮುಡಿಯವರೆಗೆ ಸಿಂಗರಿಸಿಕೊಂಡು ಸರಬರ ಓಡಾಡುತ್ತಿದ್ದ ತಮ್ಮ ಪತ್ನಿ ಶೀಲಾಗೆ ತನ್ನ ಪರಿಚಯಿಸಿದ್ದ_
“ಇವರು ಶ್ರೀಮತಿ ಶಶಿ, ಬಹಳ ಒಳ್ಳೇ ಕಲಾವಿದೆ….” ಎಂದು ನಾನು ಅದೂ ಇದೂ ಮಾತಿನ ಮಧ್ಯೆ ಕೇಳಿದ್ದೆ_
“ನಿಮ್ಮ ಹವ್ಯಾಸಗಳೇನು?”
“ಏನೂ ಇಲ್ಲ, ಊಟ-ತಿಂಡಿ-ನಿದ್ದೆ….” ಆಕೆಯ ಗಂಡ ಕಿಚಾಯಿಸಿ ಉತ್ತರಿಸಿದಾಗ, ಒಂದು ಕ್ಷಣ ಅಪಮಾನದಿಂದ ಕೆಂಪಾಗಿ ಮುಖ ಮಾಡಿದರೂ ತನ್ನ ಸಂಪೂರ್ಣ ಖಾಲಿ ಬದುಕಿನ ಸಮರ್ಥನೆಗೆಂಬಂತೆ_
“ಕಾಲೇಜಿನಲ್ಲಿ ಡ್ಯಾನ್ಸ್ ಮಾಡುತ್ತಾ ಇದ್ದೆ. ಎಲ್ಲಾ ಕಾರ್ಯಕ್ರಮದಲ್ಲೂ ನನ್ನ ನೃತ್ಯ ಇರಲೇಬೇಕು. ಮದುವೆ ಮಕ್ಕಳು, ಎಲ್ಲಾ ಆದ ಮೇಲೆ, ಎಲ್ಲಿ ಸಾಧ್ಯ ಹೇಳಿ?” ಖಾಲಿ ವರ್ತಮಾನವನ್ನು ತುಂಬಲು ಗತವೈಭವವನ್ನೇನೋ ಎಳೆದು ತಂದಳು. “ನಾನೇನೋ ಡ್ಯಾನ್ಸ್ ಬಿಟ್ಟೆ, ನನ್ನ ಮಗಳನ್ನು ಮಾತ್ರ ದೊಡ್ಡ ಕಲಾವಿದೆಯನ್ನಾಗಿ ಮಾಡ್ತೀನಿ…..”ಎಂದು ಐದು ವರ್ಷದ ಮಗಳನ್ನು ಮಡಿಲಿಗೆ ಎಳೆದುಕೊಂಡು ತಲೆ ನೇವರಿಸಿದಳು.
“ನೀವು ಬಿಟ್ಟುಬಿಟ್ಟಂತೆ ಅವಳೂ ಒಂದು ಹೆತ್ತು ನೃತ್ಯ ಬಿಟ್ಟರೆ….?” ಸುಮ್ಮನಿರಲಾರದ ನನ್ನ ಬಾಯಿ ದುಡುಕಿ ಕೇಳಿಬಿಟ್ಟಿತು. ಒಂದು ಕ್ಷಣ ಕನಸು ಕತ್ತರಿಸಿದಂತೆ ಬೆಚ್ಚಿ, ಮರುಕ್ಷಣ ಸಂಬಂಧವೇ ಇಲ್ಲದಂತೆ-
“ನೀವು ಸರಿ ಬಿಡಿ. ಮಕ್ಕಳು ಮರಿ ಕಾಟವಿಲ್ಲ. ಹಾಯಾಗಿ ಪೇಂಟಿಂಗ್ ಮಾಡಿಕೊಂಡು, ಪ್ರಶಸ್ತಿ ಗಿಟ್ಟಿಸಿಕೊಂಡು ಇದ್ದುಬಿಟ್ಟಿದ್ದೀರಿ” ಎನ್ನುತ್ತಲೇ ನನ್ನ ತಪ್ಪಿನ ಅರಿವಾಗಿತ್ತು. ತಮ್ಮ ಕನಸುಗಳನ್ನು ತಮ್ಮ ಮಕ್ಕಳ ಹೆಗಲಿಗೆ ವರ್ಗಾಯಿಸಲು, ತಮ್ಮ ಅಪೂರ್ಣ ಆಸೆಗಳನ್ನು ಯಥಾರ್ಥವಾಗಿಸಲು, ತಮ್ಮ ಖಾಲಿ ಬದುಕಿನ ಸಮರ್ಥನೆಗೆಂಬಂತೆ ಈ ಮಕ್ಕಳು ಎನಿಸಿತ್ತು. ಹೊರ ಬರಲು ತವಕಿಸಿದ ಅನಿಸಿಕೆಗಳನ್ನು ಅದುಮಿಟ್ಟೆ.
ಕಡೆಗೆ ನನ್ನ ಆಪ್ತ ಸ್ನೇಹಿತೆ ಸುಧಾ ಕೂಡ ಮಗು ಆದ ವರ್ಷದೊಳಗೇ ‘ಗರ್ಭಪಾತ’ ಎಂದು ಹಾಕಿ ಒಂದೂವರೆ ತಿಂಗಳ ರಜೆ ಗಿಟ್ಟಿಸಿದ್ದು ಅಚ್ಚರಿ ತಂದಿತ್ತು. ಅದು ಯಾರೋ ಪರಿಚಯದ ಡಾಕ್ಟರ್ ಸುಳ್ಳು ಸರ್ಟಿಫಿಕೇಟ್ ಕೊಟ್ಟಿದ್ದು, ಮಗುವನ್ನು ಬಿಟ್ಟಿರಲಾರದೆ ಹಾಕಬೇಕಾಯಿತು ಎಂದೆಲ್ಲ ಹೇಳಿಕೊಂಡಾಗ ಪೂರ್ಣ ದಿಗ್ಭ್ರಮೆಯಾಗಿತ್ತು. ಸುಧಾ ನನಗೆ ತಿಳಿದ ಮಟ್ಟಿಗೆ ಎಷ್ಟೊಂದು ಗಂಭೀರ ಹುಡುಗಿ. ಆಶ್ರಮ, ಆಧ್ಯಾತ್ಮ, ಎಂದೆಲ್ಲ ಹಚ್ಚಿಕೊಂಡವಳು.
ಸುಧಾ, ನೀನೂ ಕೂಡ ಹೀಗೆ ಮಾಡೋದಾ?” ನೊಂದು ಕೇಳಿದ್ದೆ. “ನಿನಗೆ ಮಕ್ಕಳಾದರೆ ಗೊತ್ತಾಗುತ್ತೆ….” ಎಂದುಬಿಟ್ಟಿದ್ದಳು.
ಅಂದು ರಾತ್ರಿ ಹಾಸಿಗೆಯಲ್ಲಿ ಬಹಳ ಹೊತ್ತು ಹೊರಳಾಡಿದ್ದೆ.
ಮಗು…. ಮಗು…. ರಾಜಿ ಬರೆಯುವುದು ಬಿಟ್ಟಿದ್ದಕ್ಕೆ ಮಗು ಕಾರಣ, ಸುಧಾಳ ಸುಳ್ಳು ರಜೆಗೆ ಮಗು ಕಾರಣ, ಇವರಕ್ಕ ಗುಂಡಗೆ ಆನೆ ಮರಿ ಆದದ್ದಕ್ಕೆ ಮಗು ಕಾರಣ, ವಿಮಲ ವಾರದಲ್ಲಿ ಮೂರು ದಿನ ಸಹಿ ಹಾಕಿ ಹನ್ನೆರಡಕ್ಕೇ ಮನೆಗೆ ಓಡಿಹೋಗಲು ಮಗು ಕಾರಣ…. ಕಡೆಗೆ ನನ್ನೆಲ್ಲ ಸಾಧನೆಗಳಿಗೆ ನನ್ನ ಬಂಜೆತನವೇ ಕಾರಣ ಎಂಬಂತೆ ಇವರು ನಟಿಸುತ್ತಿದ್ದಾರಲ್ಲ!
ಇತ್ತೀಚೆಗೆ ನಾನು ನಾನಾಗಿರಲಿಲ್ಲ. ಒಳಗೊಳಗೇ ಹಬೆಯಾಡುವ ಅಸಮಾಧಾನ. ಯಾರೇ ಆಡುವ ಮಾತಿನಲ್ಲೂ ವ್ಯಂಗ್ಯದ ಮೊನಚಿನ ಅನುಭವ. ಅವರುಗಳೂ ನನ್ನ ಮನಸ್ಸಿಗೆ ನೋವಾಗಬಹುದೆಂದು ಎಚ್ಚರಿಕೆ ವಹಿಸಿದ್ದಿಲ್ಲ. ಮದುವೆಯಾಗಿ ಮಕ್ಕಳಾಗದ ನನ್ನನ್ನು ಅಪರಾಧಿಯ ಕಟಕಟೆಯಲ್ಲಿ ಎಳೆದು ನಿಲ್ಲಿಸಿದ್ದರು. ನಾನೊಬ್ಬ ಅಪೂರ್ಣ ಹೆಣ್ಣೆಂದು ಅನುಕಂಪದಿಂದ ಕಂಡಿದ್ದರು. ನಾನು ಸೌಜನ್ಯಕ್ಕೆ ಮಕ್ಕಳನ್ನು ಎತ್ತಿಕೊಂಡರೂ, ಮುತ್ತಿಕ್ಕಿದರೂ ‘ಕಣ್ಣು ಬಿದ್ದಿದೆ’ ಎಂದು ಪೊರಕೆ ಕಡ್ಡಿ ಹಚ್ಚಿಡುವರು. ಹಣೆಗೆ ಎರಡೂ ಕೈ ಒತ್ತಿ ಲಟ್ಟಗೆ ಮುರಿಯುವರು. ಎಂಥ ವಿಚಿತ್ರ ಪ್ರಪಂಚ! ಕೈಯೋ ಕಾಲೋ ಊನವಾದರೆ ತೋರಿಸಲು ನಾಚುವುದಿಲ್ಲ. ಯಾವ ಕಾರ್ಯದಲ್ಲೂ ಅಶುಭವಲ್ಲ. ಮತ್ತೆ ಯಾವುದಕ್ಕೂ ಅಡಚಣೆಯಾಗದ ನನ್ನ ಗರ್ಭದ ಊನ ಎಷ್ಟೊಂದು ಕೊಂಕು ಮಾತಿಗೆ ಕಾರಣ!
ಬೆಳಿಗ್ಗೆ ಎಂಟು ಗಂಟೆಯಾದರೂ ಇನ್ನೂ ಹಾಸಿಗೆಯಲ್ಲೇ ಇದ್ದ ನನ್ನನ್ನು ನೋಡಿ ರಮೇಶ ಹತ್ತಿರ ಬಂದ. ಹಣೆ ಮುಟ್ಟಿ ಮೃದುವಾಗಿ ಕೇಳಿದ_
“ಹುಷಾರಿದ್ದೀಯ ತಾನೆ.”
“ಹೂಂ….” ಎಂದೆ ಉದಾಸೀನವಾಗಿ.
“ಏಳೋ ಮನಸ್ಸಿಲ್ಲವೆ? ದಿಲ್ಲಿ ಕಲಾಮೇಳದಲ್ಲಿ ಭಾಗವಹಿಸೋದಿಲ್ಲವಾ?”
“ರಮೇಶ್, ನನಗೆ ಮೂಡೇ ಇಲ್ಲ” ಪಕ್ಕಕ್ಕೆ ಹೊರಳಿ ಹೇಳಿದೆ.
“ಶಶಿ, ನಾ ನೋಡುತ್ತಲೇ ಇದ್ದೇನೆ. ನೀನು ಇತ್ತೀಚೆಗೆ ತುಂಬಾ ನಾಜೂಕಾಗಿದ್ದೀಯಾ. ಯಾರ ಮೇಲಾದರೂ ರೇಗಿ ಬೀಳೋಕೆ ಕಾಯ್ತಾ ಇರುತ್ತೀಯಾ. ಯಾರು ಯಾವುದಕ್ಕೇ ಅಂದರೂ ನಿನಗೇ ಅನ್ವಯಿಸಿಕೊಂಡು ಕೊರಗುತ್ತೀಯಾ. ಏನಾಗಿದೆ ನಿನಗೆ?”
“ನನಗೆ ಒಂದು ಮಗು ಬೇಕು…..”
“ಒಳ್ಳೆ ಮಕ್ಕಳಂತೆ ಹಟ ಹಿಡೀತೀಯಲ್ಲ. ಡಾಕ್ಟರು ಹಾಗೆ ಹೇಳುವ ಮೊದಲು ಎಂದೂ ನಿನಗೆ ಮಕ್ಕಳ ಆಸೆ ಇಷ್ಟು ತೀವ್ರವಾಗಿ ಇರಲಿಲ್ಲ.”
“ಏಕೆ ನಿನಗೆ ಇಲ್ಲವೆ?” ಅವನನ್ನೇ ಕ್ರೂರವಾಗಿ ನೋಡುತ್ತಾ ಕೇಳಿದೆ.
“ಆಗದ ವಿಷಯವನ್ನೇ ಹಿಡಿದು ಜಗ್ಗಾಡುವುದರಲ್ಲಿ ಅರ್ಥವಿಲ್ಲ. ಮಗುವೇ ಮುಖ್ಯವಾದರೆ ದತ್ತು ತೆಗೆದುಕೊಳ್ಳೋಣ.” ಗಂಭೀರವಾಗಿ ಹೇಳಿದ.
“ಅದೆಲ್ಲ ಸುಳ್ಳು, ಪ್ರತಿಯೊಬ್ಬ ಗಂಡಸಿಗೂ ತನ್ನ ಮಗು ಬೇಕು, ಕಡೆಗೆ ತನ್ನ ಗಂಡಸುತನವನ್ನು ಸಮರ್ಥಿಸಿ ಸಂತೃಪ್ತನಾಗಬೇಕು.”
“ಇರಬಹುದು, ಆದರೆ ಎಲ್ಲಾ ಗಂಡಸರೊಡನೆ ನನ್ನನ್ನೂ ಗಂಟು ಕಟ್ಟಿಬಿಡಬೇಡ. ನಮಗೆ ಮಗುವಿನ ಕೊರತೆ ಎಂದಾದರು ಅಗಾಧವಾಗಿ ಕಂಡಿತ್ತೆ? ಈಗ ಆಗೊಲ್ಲ ಎಂದಾಗ ಛಲಕ್ಕೆ ನೀ ಬಯಸುತ್ತಾ ಇದ್ದೀಯ. ಶಶಿ ಮನಸ್ಸನ್ನು ಸ್ವಾಧೀನಕ್ಕೆ ತಗೋ. ಅವರಿವರಾಡೋ ಮಾತುಗಳಿಗೆ ಇಲ್ಲದ ಮೌಲ್ಯ ಅಂಟಿಸಬೇಡ. ಶೇಕಡಾ ತೊಂಬತ್ತು ಮಂದಿ ಹೆಂಗಸರು ಹೆರಬಲ್ಲರು, ಹೆರುತ್ತಾರೆ. ನಿನ್ನಂತೆ ಕುಂಚದ ಕೂಸುಗಳನ್ನು ಹೆರಬಲ್ಲವರು ಎಷ್ಟು ಜನ ಹೇಳು?” ಕೇಳಿದ. ನಾ ಮೆಲ್ಲನೆ ಭುಜಕ್ಕೆ ಒರಗಿ,
“ನಿಜ ಹೇಳು, ನಿನಗೆ ನಿನ್ನದೇ ಮಗು, ನಿನ್ನ ವಂಶದ ಕುಡಿ ಬೇಕು ಅನ್ನಿಸುತ್ತಿಲ್ಲವಾ? ನಾನು ನಿನಗೆ ನಿರಾಶೆ ಮಾಡಿದೆ.”
“ಹುಚ್ಚು ಹುಡುಗಿ, ನಮ್ಮದಾವ ಚಂದ್ರವಂಶ, ಸೂರ್ಯವಂಶ? ಇಲ್ಲೇನು ರತ್ನಖಚಿತ ಸಿಂಹಾಸನ ಕಾದು ಕುಳಿತಿದೆಯೇ ಉತ್ತರಾಧಿಕಾರಿ ಬೇಕು ಎಂದು? ನನ್ನ ಮಟ್ಟಿಗೆ ನೀನೇ ಹೆತ್ತರೂ, ನಿನ್ನ ನವಮಾಸಗಳ ಹೊರೆಯಿಂದ, ಹೆರುವ ನೋವಿನಿಂದ ನಾ ಹೊರಗೇ ಉಳಿದಿರುತ್ತೇನೆ. ಆ ಅರ್ಥದಲ್ಲಿ ಪ್ರತಿ ಗಂಡಸೂ ಬಂಜೆಯೆ. ನರ್ಸ್ ತಂದು ‘ನಿಮ್ಮ ಮಗು’ ಎಂದಾಗ ತಂದೆಯಾಗುವುದಕ್ಕೂ, ಅನಾಥಾಶ್ರಮದಲ್ಲಿ ಒಂದು ಮಗುವನ್ನೆತ್ತಿ ‘ನನ್ನದು’ ಎನ್ನುವುದಕ್ಕೂ ವ್ಯತ್ಯಾಸ ಇಲ್ಲ. ನೀನು ಸುಮ್ಮನೆ ಹುಚ್ಚುಚ್ಚಾಗಿ ಯೋಚಿಸಬೇಡ. ಇನ್ನು ನಾಲ್ಕು ತಿಂಗಳಿದೆ ಅಷ್ಟೆ. ದಿಲ್ಲಿ ಕಲಾಮೇಳಕ್ಕೆ ತಯಾರಿ ಮಾಡಿಕೋ. ಅದಾದ ನಂತರ ಮಗು ಬೇಕೆನಿಸಿದರೆ ದತ್ತು ತೆಗೆದುಕೊಳ್ಳೋಣ. ತಾಯ್ತನ ಹೆರುವ ಹೊರುವ ಕ್ರಿಯೆಯಲ್ಲಿ ಅಡಗಿಲ್ಲ. ” ಎಂದ. ನಾನು ಅಪನಂಬಿಕೆಯಿಂದ ಅವನನ್ನೇ ನೋಡಿದೆ. ಎಲ್ಲ ಗಂಡಸರು ಹೀಗಿರುವುದಿಲ್ಲ. ಬಹುಶಃ ದೇವರು ನನ್ನ ಬರಿದಾದ ಒಡಲಿನೊಂದಿಗೆ ರಮೇಶನಂಥಾ ಸಂಗಾತಿಯನ್ನು ಕೊಟ್ಟಿದ್ದು ಇದಕ್ಕೇ ಏನೊ. ನನ್ನ ಮನಸ್ಸಿನ ದೌರ್ಬಲ್ಯಕ್ಕೆ ನಾನು ನಾಚಬೇಕಿಲ್ಲ. ಗೆಲ್ಲಬೇಕು, ಎಂದುಕೊಂಡೆ.
ನನ್ನ ಮನಸ್ಸು ಗಟ್ಟಿಯಾಯಿತು. ನನ್ನೆಲ್ಲ ಹುಚ್ಚು ಯೋಚನೆಗಳಿಗೆ ಕಡಿವಾಣ ಹಾಕಿ, ಚಿಂತೆಗಳ ಕೊಡವಿ ಎದ್ದೆ. ಕನ್ನಡಿಯ ಮುಂದೆ ಅಲಂಕರಿಸಿಕೊಳ್ಳುವಾಗ, ಕುಂಚದಲ್ಲಿ ನವಿರಾದ ಭಾವಗಳನ್ನು ಬಣ್ಣಕ್ಕದ್ದುವಾಗ, ಇವನೆದೆಯಲ್ಲಿ ತಲೆಯಿಟ್ಟಾಗ, ನನಗೆ ನನ್ನ ಹೆಣ್ತನದಲ್ಲಿ ಯಾವ ಕೊರತೆಯೂ ಕಾಣಬರಲಿಲ್ಲ. ಚಿಂತೆ, ಸ್ವಯಂ ಮರುಕದಲ್ಲಿ ಸತ್ತ ನಿನ್ನೆಗಳನ್ನು ಸರಿಸಿಟ್ಟು, ಸಂಭ್ರಮದ ನಾಳೆಗೆ ಮುಖ ಮಾಡಿದೆ.
ದಿಲ್ಲಿ ಕಲಾಮೇಳದಲ್ಲಿ ಪರಿಚಯವಾದದ್ದು, ಅದಿತಿ ಗುಪ್ತಾ, ಬರೋಡಾದ ಕಲಾವಿದೆ. ಅದೂ ಇದೂ ಮಾತಿನ ಮಧ್ಯೆ ಕೇಳಿದ್ದಳು_
“ನಿಮಗೆಷ್ಟು ಮಕ್ಕಳು?” ಓಹ್ ಮತ್ತದೇ ಪ್ರಶ್ನೆ.
“ಇಲ್ಲ” ಎಂದೆ. ನನ್ನ ಸ್ವರಗಳಲ್ಲಿದ್ದ ಅಳುಕು ಗಮನಿಸಿದಳೇನೋ.
“ಬೇಕು ಅನಿಸಿದೆಯಾ?” ಕೇಳಿದಳು. ನಾ ಒಂದು ಕ್ಷಣ ಅವಳನ್ನೇ ನೋಡಿದೆ.
“ಅನ್ನಿಸಿರಲಿಲ್ಲ. ಆದರೆ ಒಂದಂತೂ ಮಾಡಿಕೊಳ್ಳುವ ಉದ್ದೇಶವಿತ್ತು. ಅಷ್ಟೆಲ್ಲ ಈ ಸೃಷ್ಟಿಕ್ರಿಯೆಯ ಬಗ್ಗೆ ಅವರಿವರ ಬಾಯಲ್ಲಿ ಕೇಳಿದ್ದು, ಕುತೂಹಲ ತರಿಸಿತ್ತು. ಹೇಗಿರಬಹುದು ಆ ಅನುಭವ ಎಂಬ ಕುತೂಹಲ…..”
“ನಿಜ ಹೇಳಲೇ ಶಶಿ…..” ಅದಿತಿ ನಗುತ್ತಾ ಹೇಳಿದಳು.
“ಏನು?”
“ಚಿತ್ರ ಬಿಡಿಸೋದು, ಕತೆ ಬರೆಯೋದು, ಯಾವುದೇ ಸೃಜನಹೀಲ ಕಾರ್ಯ ಹೆರುವ ಹೊರುವ ಕ್ರಿಯೆಯಂತೆಯೇ. ಹಾಗೆ ನೋಡಿದರೆ ನನ್ನ ಪ್ರೆಗ್ನೆನ್ಸಿಯಲ್ಲಿ ಸೃಜನಾತ್ಮಕ ಅದ್ಭುತವೇನೂ ಅನುಭವವಾಗಲಿಲ್ಲ. ಚೆನ್ನಾಗಿ ತಿನ್ನುವುದು ಬಿಟ್ಟರೆ ನಾನು ಮಾಡುವುದೇನಿತ್ತು? ಒಂದು ಮಗುವನ್ನು ಬೆಳೆಸಿ ದೊಡ್ಡದು ಮಾಡುವುದು ಮಹತ್ವದ ಕೆಲಸ ಒಪ್ಪುತ್ತೇನೆ. ಆದರೆ ನಮ್ಮಲ್ಲಿ ಹೆರುವುದಕ್ಕೆ ಕೊಡುವ ಪ್ರಾಮುಖ್ಯತೆಯೇ ಹೆಚ್ಚು. ಅದನ್ನು ಹೇಗೆ ಬೆಳೆಸುತ್ತೀ, ಕೇಳುವವರಾರು?” ನಾನು ಮೌನವಾಗಿ ಕೇಳಿದೆ, ಮತ್ತೆ ಅತಿದಿ ಮೆಲುದನಿಯಲ್ಲಿ,
“ಶಶಿ, ಮುಕ್ಕಾಲು ಪಾಲು ಸ್ತ್ರೀಯರು ಬದುಕಿನಲ್ಲಿ ಯಾವ ಕ್ರಿಯಾಶೀಲ ಕೆಲಸಕ್ಕೂ ಕೈ ಹಾಕಿದವರಲ್ಲ. ಮನೆ-ಗಂಡ ಕಸಮುಸುರೆ ಈ ಬಗೆಯ ಬದಲಿಲ್ಲದ ಬದುಕಿನ ಬೇಸರದಲ್ಲಿ ಮಕ್ಕಳು ಅದ್ಭುತ ಸೃಷ್ಟಿಯಾಗಿ ಕಾಣುತ್ತವೆ. ಆದರೆ ನನಗೂ-ನಿನಗೂ ಈ ಕಾರಣಗಳಿಗೆ ಮಕ್ಕಳು ಬೇಕಿಲ್ಲ ಬಿಡು. ಅದಿರಲಿ ಮತ್ತೂ ಒಂದು ಮಾತು ಹೇಳಲೆ?” ಕೇಳಿದಳು.
“ಹೇಳಿ” ಎಂದೆ.
“ನಿಜವಾಗಿ ನೀವು ಪ್ರೀತಿಸುವುದು ಮಕ್ಕಳನ್ನೇ ಆದರೆ, ನನ್ನವು-ನಿನ್ನವು ಎಂಬ ವ್ಯತ್ಯಾಸ ಉಂಟೆ? ಮದರ್ ಥೆರೇಸಾಗಿಂತ ದೊಡ್ಡ ತಾಯಿ ಬೇಕೆ?” ಎಂದಳು. ಹೌದು, ನನಗದು ತಿಳಿದಿತ್ತು. ಆದರೆ ಬುದ್ಧಿಯ ತರ್ಕಗಳಿಗೆ ಮನಸ್ಸು ಒಗ್ಗುತ್ತದೆಯೆ, ಬಗ್ಗುತ್ತದೆಯೆ? ಸತ್ಯದ ಸೂಕ್ಷ್ಮಗಳಿಗೂ ಮನಸ್ಸು ಮುಖ ತಿರುಗಿಸುತ್ತದೆ. ಈ ಕ್ಷಣದ ಭಾವುಕತೆ ಮತ್ತೆಲ್ಲವನ್ನೂ ಮಬ್ಬಾಗಿಸುತ್ತದೆ. ಅದಿತಿ ಹೇಳುವಂಥ ತಾಯ್ತನದ ತೀವ್ರತೆ ನನಗೆ ಅನುಭವವಾಗಿಲ್ಲ. ಅರ್ಧ ಹೆಣ್ಣು ಮಕ್ಕಳಿಗೆ ಆಗುವುದೋ ಇಲ್ಲವೋ ಗೊತ್ತಿಲ್ಲ. ಸಮಾಜ ಸಂಪ್ರದಾಯದ ಒತ್ತುಗಳಲ್ಲಿ, ಹೆಣ್ತನದ ಪರಿಪೂರ್ಣತೆ ತಾಯ್ತನದಲ್ಲೆಂಬ ಹುಚ್ಚು ವಾದಗಳಲ್ಲಿ ತಾಯಾಗುತ್ತಾರೆ. ವಿಜಿ ಮದುವೆಯಾದ ತಿಂಗಳಿಗೇ ಮುಟ್ಟು ತಪ್ಪಿತೆಂದು ಎಷ್ಟು ಒದ್ದಾಡಿದಳು. ಡಾಕ್ಟರ್ ಹತ್ತಿರ ತೆಗೆಸಲೂ ಪ್ರಯತ್ನಿಸಿದಳಲ್ಲ. ಮೊದಲನೆಯದೇ ಗರ್ಭಪಾತ ಒಳ್ಳೆಯದಲ್ಲ ಎಂಬೆಲ್ಲ ಬುದ್ಧಿವಾದದ ನಂತರ ಅಂತೂ ಬೇಸತ್ತು ಹೊತ್ತಳು, ಹೆತ್ತಳು. ಅದರಾಚೆ ನನಗೂ ಉಪದೇಶ ನೀಡಿದಳು! ಪಕ್ಕನ ಮನೆ ಶೀಲಾ ಅಂತೂ ಹೆಚ್ಚು ಯೋಚಿಸಿದವಳೇ ಅಲ್ಲ. ಮಗು ಮದುವೆಯ ನಂತರದ ಅನಿವಾರ್ಯ ಅಂಗ ಎಂದು ಸ್ವೀಕರಿಸಿದಳು. ಒಂದಾದ ಮೇಲೆ ಒಂದು, ಎರಡು ಹೆತ್ತು ಅತ್ತ ಆಪರೇಶನ್ ಮಾಡಿಸಿಕೊಂಡು ನಿಶ್ಚಿಂತಳಾದಳು. ನನ್ನ ತಂಗಿ ಮೂರು ಆದ ಮೇಲೂ ಹೆರುತ್ತಲೇ ಇದ್ದಾಳೆ. ಮೂರೂ ಹೆಣ್ಣಲ್ಲವೆ? ತಾಯ್ತನವೇ ಮುಖ್ಯವಾಗಿದ್ದರೆ ಗಂಡುಮಗುವಿಗೇ ತಾಯಾಗುವ ಹಂಬಲವೇಕೆ? ಸಮಾಜದ, ನಮ್ಮ ಪರಿಸರದ, ಒತ್ತುಗಳಿಗೆ ಅನಿಸಿಕೆಗಳಿಗೆ ನಮ್ಮನ್ನು ಮಾರಿಕೊಳ್ಳುವುದು, ಅವರೆಲ್ಲರ ನಿರೀಕ್ಷೆಗೆ ತಕ್ಕಂತೆ ನಮ್ಮ ಬದುಕು ರೂಪಿಸುವುದು ಸುಲಭ, ಆದರೆ ಅವಶ್ಯವೆ?
ನಾನು ಒದ್ದಾಡುತ್ತಿರುವಿದಾದರೂ ಏತಕ್ಕೆ? ಈ ಮಗು ಅತ್ತೆಯ ಕೊಂಕು ನುಡಿಗೆ, ಜೊತೆಯವರ ಅನುಕಂಪಕ್ಕೆ, ಅತ್ತಿಗೆಯ ನೇರ ಇರಿತಗಳಿಗೆ ತತ್‌ಕ್ಷಣದ ಉತ್ತರವಾಗುತ್ತದೆ ಎಂದಲ್ಲವೆ? ನನ್ನ ಫಲವತ್ತತೆಯನ್ನು, ಇವರ ಗಂಡಸುತನವನ್ನು ಜಗಜ್ಜಾಹೀರು ಮಾಡುವ ಏಕೈಕ ಬಗೆಯೆಂದಲ್ಲವೆ? ಬಹುಶಃ ಈ ಎಲ್ಲ ಒತ್ತಡಗಳಿಲ್ಲದೆ ಸಮಾಜದಲ್ಲಿ ಎಷ್ಟು ಮಂದಿ ಮಕ್ಕಳನ್ನು ಬಯಸಿಯಾರು? ಮಗುವೇ ಮುಖ್ಯವಾದರೆ ರಮೇಶ ಹೇಳಿದಂತೆ ದತ್ತು ಕಂದ ಏಕಾಗಬಾರದು?
ನಾ ಹೆತ್ತರೂ ಹೆರದಿದ್ದರೂ ನನ್ನ ಬದುಕು ಖಾಲಿಯಲ್ಲ. ಇಲ್ಲಿ ನಾ ಬಿತ್ತಿ ಬೆಳೆದ ಕಲೆಯ ಕೂಸುಗಳು ಒಂದಲ್ಲ ಎರಡಲ್ಲ. ಬದುಕು ಪೂರಾ ಬಣ್ಣ ತರಿಸಿ ನೂರು ಚಿತ್ತಾರಗಳಲ್ಲಿ ಅಲಂಕರಿಸಿರುವೆ. ಇಲ್ಲಿ ನೀರಸತೆಯಿಲ್ಲ. ಯಾಂತ್ರಿಕತೆಯಿಲ್ಲ. ನನ್ನ ಬದುಕಿನ ಸಾರ್ಥಕತೆಯನ್ನು ನನ್ನ ಮಕ್ಕಳಲ್ಲಿ ಹುಡುಕಬೇಕಿಲ್ಲ. ನಿಜಕ್ಕೂ ನಾ ಬಂಜೆಯೆ? ನನ್ನ ದೈಹಿಕ ಬಂಜೆತನವನ್ನಾದರೂ ಅರ್ಥಮಾಡಿಕೊಳ್ಳಬಹುದು, ಇವರೆಲ್ಲರ ಬೌದ್ಧಿಕ ಬಂಜೆತನ ನನಗೆ ಅರ್ಥವಾಗುತ್ತಿಲ್ಲ.
ದಿಲ್ಲಿಯಿಂದ ಬಂದ ಮೇಲೆ ನಾ ಪೂರ್ಣ ಬದಲಾಗಿದ್ದೆ. ಹದಿನೈದು ದಿನ ಕಲಾವಿದರ ಸತತ ಒಡನಾಟ, ಕುಂಚಕ್ಕಂಟಿದ ಬಣ್ಣಗಳ ಬೆರಗಿನ ಲೋಕವನ್ನು ನನ್ನೆದುರು ತೆರೆದಿಟ್ಟಿತ್ತು. ಪುಟಿವ ಉತ್ಸಾಹದಲ್ಲಿ ಬಂದಿಳಿದ ನನ್ನನ್ನು ರಮೇಶ ಅಚ್ಚರಿಯಿಂದ ನೋಡಿದ. “ಏನು ಇಷ್ಟು ಖುಷಿಯಾಗಿದ್ದೀಯಾ?” ಅಪನಂಬಿಕೆಯಿಂದ ಕೇಳಿದ. ನಾ ಉತ್ತರಿಸಲಿಲ್ಲ. ಸುಮ್ಮನೆ ನಕ್ಕೆ. ನನ್ನ ನಗುವಿನಲ್ಲಿ ಸಂಭ್ರಮವಿತ್ತು. ಆತ್ಮವಿಶ್ವಾಸವಿತ್ತು.
ಅಂದು ಸೋಮವಾರ. ರಮೇಶ ಎಂಟಕ್ಕೇ ಹೊರಟುಹೋಗಿದ್ದ. ನಾ ಕುಂಚ ಹಿಡಿದು ಮೈ ಮರೆತಿದ್ದೆ. ರಶ್ಮಿಯನ್ನು ಕಂಕುಳಲ್ಲಿ ಏರಿಸಿ ಬಂದ ವಿಜಿ ಬಾಗಿಲು ತಟ್ಟಿದಳು. ಮೈ ಕೈ ಎಲ್ಲಾ ಬಣ್ಣವಾಗಿದ್ದ ನನ್ನ ನೋಡಿ_
“ಓಹ್ ಪೇಂಟ್ ಮಾಡುತ್ತಾ ಇದ್ದೀಯಾ?” ಉದಾಸೀನದಿಂದ ಕೇಳಿದಳು.
“ಹೂಂ, ಮೊನ್ನೆ ದಿಲ್ಲಿ ಕಲಾಮೇಳದಲ್ಲಿ…..”ಎಂದೇನೋ ಉತ್ಸಾಹದಿಂದ ಹೇಳಹೊರಟೆ. ದೊಡ್ಡದಾಗಿ ಆಕಳಿಸಿದಳು. ನನ್ನಲ್ಲೆ ನಕ್ಕೆ. ನಾನೇಕೆ ಇವಳೆದುರು ಇದೆಲ್ಲ ಬಿಚ್ಚಿಡಲು ಹೊರಟೆ? ನಮ್ಮಿಬ್ಬರ ಸಾಧನೆಯ ರಂಗವೇ ಬೇರೆ ಬೇರೆ. ರಶ್ಮಿ ಆಗಲೇ ನನ್ನ ಒದ್ದೆ ಕ್ಯಾನ್ವಾಸ್ ಮೇಲೆ ಪುಟ್ಟ ಕೈ ಇಟ್ಟಿದ್ದಳು. ಗಾಬರಿಯಿಂದ_
“ಏಯ್ ಪುಟ್ಟೂ ಮುಟ್ಟಬಾರದಮ್ಮ…..” ಅಂತ ಓಡಿ ಹೋಗಿ ಅವಳನ್ನೆತ್ತಿಕೊಂಡು ದೊಡ್ಡದಾಗಿ ‘ವ್ಯಾ’ ಎಂದು ಚೀರಿದ ಅವಳನ್ನು ಅಡಿಗೆ ಮನೆಗೆ ಕರೆದೊಯ್ದೆ. ಡಬ್ಬಿಯಿಂದ ಬಿಸ್ಕೆಟ್ ತೆಗೆದು ಅವಳ ಕೈಗಿಟ್ಟು ಕೂರಿಸಿದೆ. ಮಗಳ ಬೊಬ್ಬೆ, ತುಂಟಾಟ ಎಲ್ಲವೂ ಮಾಮೂಲೆಂಬಂತೆ ನಿರ್ಲಕ್ಷ್ಯದಿಂದ ಕೂತ ವಿಜಿ, ಅದೂ ಇದೂ ಇವಳ ಅತ್ತೆ, ನಾದಿನಿ ಅಂತ ಅರ್ಧ ಗಂಟೆ ಕೊರೆದಳು.
“ಲೇ ಅಕ್ಕ, ಯಾರಾದರೂ ಡಾಕ್ಟರ್ ಹತ್ತಿರ ತೋರಿಸಿಕೊಳ್ಳಬಾರದೇನೆ?” ಮತ್ತೆ ಏಳು ತಿಂಗಳ ಒಡಲು ಹೊತ್ತ ವಿಜಿ ಕೇಳಿದಾಗ ಮೊದಲಿನಂತೆ ಇರಸು ಮುರುಸಾಗಲಿಲ್ಲ. ಕೈಯಲ್ಲಿದ್ದ ಕುಂಚವನ್ನು ಅಂಗೈ ಮೇಲೆ ಆಡಿಸುತ್ತಾ ಹೇಳಿದೆ.
“ತೋರಿಸಿಕೊಂಡೆ ವಿಜಿ…..”
“ಹಾಂ…. ಏನೆಂದರು?” ಉತ್ಸಾಹದಿಂದ ಬಾಯ್ತೆರೆದಳು.
“ನನಗೆ ಮಕ್ಕಳಾಗೋ ಸಂಭವ ಕಡಿಮೆ…..” ಯಾವುದೇ ಉದ್ವೇಗವಿಲ್ಲದೆ, ಶಾಂತವಾಗಿ ಹೇಳಿದೆ.
“ಅದು ಯಾವ ಡಾಕ್ಟರ್ ಹಾಗಂದಿದ್ದು? ನಿನ್ನ ಜಾತಕ ಮೂರು ನಾಲ್ಕು ಕಡೆ ತೋರಿಸಿದೆ. ಎಲ್ಲರೂ ಒಂದಲ್ಲ ಎಂದರೆ ಎರಡು ಫಲ ಇದೆ ಅಂದಿದ್ದಾರೆ. ನಾ ಎಷ್ಟು ಹೇಳಿದೆ. ಒಮ್ಮೆ ನಾಗರಪ್ರತಿಷ್ಟೆ ಮಾಡಿಸಿಬಿಡು ಅಂತ…..” ನಾನು ಸುಮ್ಮನೆ ನಕ್ಕು,
“ಇಲ್ಲ ವಿಜಿ, ನಾನು ರಮೇಶ ದತ್ತು ತೆಗೆದುಕೊಳ್ಳಬೇಕು ಅಂತ ಇದ್ದೇವೆ.”
“ಯಾರದೋ ಮಕ್ಕಳು ನಮ್ಮವಾಗುತ್ತೇನೇ?”
“ನಮ್ಮವಾದರೂ ನಮ್ಮವಾಗುವ ಗ್ಯಾರಂಟಿ ಇದೆಯಾ?” ಅವಳ ಪ್ರಶ್ನೆಗೊಂದು ಪ್ರಶ್ನೆ ಎಸೆದೆ. ಮತ್ತೆ ಮುಂದುವರಿಸಿದೆ_
“ವಿಜಿ, ರಾಜು ಮಾಮನ ನೋಡಿಲ್ಲವಾ? ಇಬ್ಬರು ಮಕ್ಕಳು ಪೋಲಿ ಬಿದ್ದು ಜೂಜು, ರೇಸು ಅಂತ ಮನೆ ಮಠ ಮಾರಿ ಬೀದಿಗಿಳಿಸಿದ್ದು ನೀನೇ ನೋಡಿಲ್ಲವಾ?”
“ಎಲ್ಲಾ ಮಕ್ಕಳೂ ಹಾಗೇಕೆ ಆಗುತ್ತಾರೆ?”
“ವಿಜಿ, ನಾ ಮಗೂನ ನನ್ನ ಭವಿಷ್ಯಕ್ಕೆ ಬಂಡವಾಳ ಅಂತ ಸಾಕೊಲ್ಲ. ಪಿಂಡ ಪ್ರಧಾನದ ಪುಣ್ಯ ಕಾರ್ಯಕ್ಕೆ ಅಂತಲೂ ಅಲ್ಲ, ವಂಶೋದ್ಧಾರಕ್ಕೂ ಅಲ್ಲವೇ ಅಲ್ಲ. ಆ ಅನುಭವಕ್ಕೆ ಅಷ್ಟೆ. ಒಂದು ಜೀವವನ್ನು ರೂಪಿಸುವ ಬೆಳೆಸುವ ಸಿಹಿ-ಕಹಿ ಅನುಭವಕ್ಕಾಗಿ, ಆ ಅನುಭವ ಕಲಾವಿದೆಯಾಗಿ ನನ್ನನ್ನು ಬೆಳೆಸಲೂಬಹುದು ಎಂಬ ಭರವಸೆಗೆ, ನನ್ನ ರಂಗಿನ ರಂಗವನ್ನು ಅಚ್ಚರಿಯ ಎಳೆಯ ಕಣ್ಣುಗಳಿಗೆ ತೆರೆದಿಡುವ ಸಂಭ್ರಮಕ್ಕೆ….ಅದೂ ಆ ಅನುಭವ ನನಗೆ ಬೇಕು ಅನಿಸಿದಾಗ….” ಅನ್ನುತ್ತಿದ್ದಂತೆ, ರಶ್ಮಿ ಬಿಸ್ಕತ್ತು ನೆಲದ ಮೇಲೆ ಎಸೆದು ಮತ್ತೆ ಕ್ಯಾನ್‌ವಾಸ್ ಬಳಿ, ಕೈಗೆಲ್ಲ ಬಣ್ಣ ಮೆತ್ತಿಕೊಳ್ಳುತ್ತಿದ್ದಳು. “ಪುಟ್ಟೂ…. ಪುಟ್ಟೂ…..” ಎಂದು ಓಡಿದೆ, ಒಂದು ಕ್ಷಣ ಸುಮ್ಮನೆ ಆರಾಮವಾಗಿ ಬಾಯಾಡಿಸುತ್ತಾ ಕುಳಿತೇ ಇದ್ದ ವಿಜಿ ಬಗ್ಗೆ ಕೋಪ ಬಂದರೂ ತಡಕೊಂಡೆ. “ಹಾಗೆಲ್ಲ ಮುಟ್ಟಬಾರದಮ್ಮ, ನಿನಗೆ ಬೇರೆ ಕಾಗದ ಕೊಡುತ್ತೀನಿ, ಇಲ್ಲಿ ಬರುತ್ತೀಯಾ?” ಅತಿ ತಾಳ್ಮೆಯಿಂದ ರಮಿಸಲು ಹೊರಟೆ. ರಶ್ಮಿ ಕೊಸರಿಕೊಂಡು ‘ಹೋ’ ಎಂದು ತಾರಕ ಸ್ವರದಲ್ಲಿ ಆರಂಭಿಸಿಯೇಬಿಟ್ಟಳು.
“ಇನ್ನಿವಳು ಬಾಯಿ ಮುಚ್ಚೋಲ್ವೆ ಅಕ್ಕ, ನಾನು ಬರ್ತೀನಿ. ಇವರ ತಮ್ಮನ ಮಗು ನಾಮಕರಣ, ಕರೆದುಹೋಗೋಣ ಅಂತ ಬಂದೆ” ಎಂದು ಹೇಳಿ ಹೊರಟಳು.
ಅವಳು ಗೇಟಿನಾಚೆ, ಏಳು ತಿಂಗಳ ಹೊಟ್ಟೆ ಹೊತ್ತುಕೊಂಡು, ಮೂರು ವರ್ಷದ ರಶ್ಮಿಯನ್ನು ಎಳಕೊಂಡು ರಸ್ತೆ ತಿರುವಿನಲ್ಲಿ ತಿರುಗುವವರೆಗೂ ನಿಂತೇ ಇದ್ದೆ.
ಎಷ್ಟೋ ಹೊತ್ತಿನ ನಂತರ ಒಳ ಬಂದು, ಕ್ಯಾನ್‌ವಾಸ್ ಮುಂದೆ ಕುಳಿತೆ. ರಶ್ಮಿ ಚಿತ್ರದ ಕೆಳಭಾಗವನ್ನೆಲ್ಲ ಕಲಸಿ ಕೆಡಿಸಿದ್ದಳು. ಪುಟ್ಟ ಪುಟ್ಟ ಕೈಗಳು ಅಚ್ಚೊತ್ತಿ ಕಲಸಿದ್ದ ಬಣ್ಣಗಳ ತಿದ್ದಲು ಕುಂಚ ಎತ್ತಿಕೊಂಡವಳು ಒಂದು ಕ್ಷಣ ತಡೆದೆ_
ವಿಜಿಯ ಏಳು ತಿಂಗಳ ಉಬ್ಬು ಹೊಟ್ಟೆ ಕಣ್ಣ ಮುಂದೆ ನಿಂತಿತು. ಬಯಸಿಯೋ ಬಯಸದೆಯೋ ಕೂಡುವ ನೂರಾರು ಮಿಲನ. ಅಲ್ಲಿ ಫಲ ಕುಳಿತು ನವಮಾಸಗಳು ಒಳಗೊಳಗೇ ಬೆಳೆದದ್ದು, ಪ್ರಯಾಸದಿಂದ ಹೊರ ಬಂದದ್ದು ಎಲ್ಲ ದೈಹಿಕ ಕ್ರಿಯೆ ಪ್ರಕ್ರಿಯೆಗಳು ಮಾತ್ರ. ಭಾವಗಳ ಹೊತ್ತೊತ್ತು ಅದೇ ಗಸ್ತು ಹೊಡೆದು ಮನದ ತುಂಬ ಗರ್ಭಕಟ್ಟಿದ್ದು, ಬಣ್ಣಗಳಾಗಿ ಅವನ್ನು ಪ್ರಸವಿಸಿದ್ದು, ಈ ಹಿತಯಾತನೆ, ನನ್ನ ಒಳಹೊರಗನ್ನು ಮೇಳವಿಸಲು ಈ ಅನುಭವದ ಸಿಹಿ ಕಡಿಮೆಯೆ?
ವಿಜಿ ಅಂದು ಕೇಳಿದ್ದಳಲ್ಲ_
“ಬೇಡವೆ ತಾಯ್ತನದ ಸುಂದರ ಅನುಭವ?”
“ಆದರೆ ಬದುಕಿನ ಮತ್ತೆಲ್ಲ ಸೌಂದರ್ಯಕ್ಕೆ ನಾ ತೆರೆದುಕೊಂಡಿರುವೆನೆ?”
“ಏಳು ತಿಂಗಳ ಗರ್ಭದಲ್ಲಿ ನಯವಾಗಿ ನುಣುಪಾಗಿ ಹೊರಳುವ ಪುಟ್ಟ ಕಂದನ ಪುಳಕ….”
‘ಬದುಕಿನೆಲ್ಲ ಅನುಭವಗಳಿಗೆ ತೆರೆದುಕೊಳ್ಳಲು ಸಾಧ್ಯವೆ? ಯಾವ ಅನುಭವವೂ ಅನಿವಾರ್ಯವಲ್ಲ. ವಿಜಿ ಪಿ.ಯು.ಸಿ.ಗೆ ಲಾಗ ಹಾಕಿ, ಮದುವೆಯಾಗಿ, ಊಟ-ತಿಂಡಿ-ನಿದ್ದೆ, ಊಟ- ತಿಂಡಿ-ನಿದ್ದೆ ಈ ಚಕ್ರದಲ್ಲಿ ಹಾಯಾಗಿ ವರ್ಷಗಳೇ ಕಳೆದುಬಿಟ್ಟಿದ್ದಾಳೆ. ಎಲ್ಲರೂ ಎಲ್ಲ ಅನುಭವಗಳಿಗೂ ಒಳಗಾಗುವಷ್ಟು ಬದುಕು ವಿಶಾಲವೆ?’
ತಟ್ಟನೆ ಮತ್ತೆಲ್ಲ ಯೋಚನೆಗಳನ್ನು ಕೊಡವಿ, ಕುಂಚವನ್ನು ನೀರಿಗದ್ದಿ ರಶ್ಮಿಯ ಪುಟ್ಟ ಕೈಗಳ ಗುರುತನ್ನು ಬಣ್ಣದಿಂದ ಮುಚ್ಚತೊಡಗಿದೆ. ಹೊರಗೆ ಸಂಜೆಯ ತಂಪು ಹರಡಿದ ಕ್ಯಾನ್‌ವಾಸ್‌ನಲ್ಲಿ ಕೆಂಪು ಸೂರ್ಯ ‘ಹಿಗ್ಗುತ್ತಾ’ ನೆಲಕ್ಕಿಳಿಯುತ್ತಿದ್ದ.
*****