ಸ್ವರ್‍ಣಪಕ್ಷಿ

ಬ್ರಹ್ಮಾಂಡದ ಬಿರುಮೊಟ್ಟೆಯನೊಡೆದು
ಪಿಂಡಾಂಡದ ತನಿಗೆಂಡವ ಪಡೆದು
ಇರುಳಿನ ಕಬ್ಬಿಣ ಪಂಜರ ಮುರಿದು
ಹಾರಿತು ಸ್ವರ್‍ಣಾರುಣ ಪಕ್ಷಿ!
ಮೂಡಣ ಬಾನಿನ ಉಷೆ ಸಾಕ್ಷಿ!

ಮೇಘಮಂಡಲದ ಬಾಗಿಲ ತೆರೆದು
ಜಗದಗಲವ ಮುಗಿಲಗಲವನಳೆದು
ತಾರಾಲೋಕದ ಕಣ್ಣನು ಸೆಳೆದು
ಸಾರಿತು ಸ್ವರ್‍ಗ ಸಮೀಪದಲಿ!
ಚೀರಿತು ಮಾಯಾ ಲೋಕದಲಿ.

ಏನಾಯಿತು ಏಕಾಯಿತು ಎಂದು
ಅಸಮಾಧಾನಕೆ ಪೂರವು ಬಂದು
ಜಗದ ಕಣ್ಣಿನಲಿ ಕಂಬನಿ ನಿಂದು
ಹುಡುಕಿರೆ ಬೆಳ್ಳಂಬೆಳಕಿನಲಿ
ಬಾನಿಗೆ ಬಾನೇ ಬೆರಗಿನಲಿ-

ಹೃದಯ ಸಮುದ್ರವ ತೊತ್ತಳದುಳಿದು
ಯಾ ಸೌಭಾಗ್ಯಕೊ ಯಾರೋ ಕಡೆದು
ವಿಷವನು ಕಡೆಯಲಿ ನೀನೇ ಕುಡಿದು
ನಿಂತಿಹೆ ಮಾನವ ಕೋಟಿಯಲಿ!
(ಹಾಡಿತೆ ಹಕ್ಕಿಯು ವ್ಯಂಗ್ಯದಲಿ?)

ಹಗಲುರುಳಿತು ಇರುಳಾಯಿತು, ಮರೆತೆ;
ಪಡುವಣ ಬಾನೊಳಗೇತರ ಕೊರತೆ?
ತುಂಬಿ ತುಳುಕೆ ಸುರಗಾನದ ಒರತೆ
ಇಳಿಯಿತಗೋ ಹೊಂಬಣ್ಣದ ಪಕ್ಷಿ
ಸಂಧ್ಯಾಸುಂದರಿ ಹಿರಿಸಾಕ್ಷಿ!
*****