ಅವನಮ್ಮ ಅವನನ್ನು ಬೆಳೆಸಿದ್ದೇ ಹಾಗೆ, ದುಡುಂ ದುಡುಂ ಧುಮುಕುವ, ಸ್ವಲ್ಪ ಹೊತ್ತು ಈಜುವ ಸಾಹಸ ಮಾಡಿದಂತೆ ಮಾಡಿ, ಓಡುವ ಪ್ರವೃತ್ತಿಯನ್ನು ಅವ ಇನ್ನೆಲ್ಲಿಯಿಂದಾದರೂ ಕಲಿಯಬೇಕಿತ್ತು? ಯಾಕೋ ಏನೋ ಯಾವುದರಲ್ಲಿಯೂ ನೆಲೆ ನಿಲ್ಲದವ, ಎಲ್ಲವನ್ನೂ ತನ್ನದು ಎಂದು ಅವಲತ್ತುಕೊಂಡಷ್ಟೇ ವೇಗವಾಗಿ, ಅವುಗಳಿಂದ ವಿಮುಕ್ತನಾಗ ಬಯಸುವ ದ್ವಂದ್ವದವ. ಹುಟ್ಟಿಸಿದ ಅಪ್ಪ ಎಂದಿನಿಂದ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡನೋ, ಅಂದಿನಿಂದ ಇವನಿಗೆ ಹೇಳುವವರು ಕೇಳುವವರೂ ಇಲ್ಲದೆ, ಸುತ್ತಲಿನದರಲ್ಲಿ ’ಎಲ್ಲವೂ ಸರಿ’ ಎಂದು ಒಪ್ಪಿಕೊಳ್ಳುವ ಹುಟ್ಟುಬುದ್ಧಿ ಇವನನ್ನು ಗತ್ತಿನಿಂದ ಹಿಡಿದುಕೊಂಡಿತ್ತು. ಅದಿಲ್ಲವೆಂದಾಗಿದ್ದರೆ ಮದುವೆಯ ಮನೆಯಲ್ಲಿ ಬಾಳೆ ಎಲೆಯಲ್ಲಿ ಪಾಯಸ ಉಂಡವನಿಗೆ ಬಿಸಿ ಪಾಯಸ ಎಲೆಯ ಮಧ್ಯದಲ್ಲಿ ಕಂದಿದಂತೆ ಮಾಡಿ, ಇವ “ಅಮ್ಮಾ, ಬಾಳೆಎಲೇಲಿ ಹೃದಯಾ ಬಿದ್ದಿತ್ತು!” ಎಂದು ಕೂಗಿಕೊಂಡು ಬಂದು ವರದಿ ಒಪ್ಪಿಸುತ್ತಿದ್ದನೇ? ಇವನಮ್ಮ “ಅದೆಂತದಲೇ ಹೃದಯ ಬಿದ್ದಿದ್ದು?” ಎಂದರೆ “ಅದೇ ಅಮ್ಮಾ, ಬಾಳೆ ಎಲೆ ಮಧ್ಯ ಸಣ್ಣಗೆ ಕಪ್ಪಾಗಿತ್ತಲ್ಲ?” ಎಂದುದನ್ನು ನೆನಸಿಕೊಂಡು ಇವನಮ್ಮ ಇವತ್ತಿಗೂ ತನ್ನೆಲ್ಲಾ ಕಪ್ಪು ಹಲ್ಲು ಪ್ರದರ್ಶಿಸಿ ನಗುತ್ತಾಳೆ. “ಭೇಕೂಫ ನನ್ಮಗ, ಎಲೆ ಮಧ್ಯ ಬಿಸಿ ಪಾಯಸದಿಂದ ಸೀದು ಹೋದರೆ, ಅದನ್ನೇ ಹೃದಯಾ ಬಿತ್ತು ಅಂತ ಗೋಗರಿಯುವವ” ಎಂದು ಛೇಡಿಸುತ್ತಾಳೆ. ಹಂಗಂತ ಇವನಮ್ಮನೇನು ಕಡಿಮೆಯಿಲ್ಲ – ಅವಳು ಪುಡಿ ಅವಲಕ್ಕಿಯನ್ನು ಇವತ್ತಿಗೂ ಯಾವ ಗಂಡು ಮಕ್ಕಳಿಗೂ ಕೊಡುವುದಿಲ್ಲ, ಹಂಗೆ ಕೊಡೋದರಿಂದ ಪುಡಿ ಅವಲಕ್ಕಿ ಅಥವಾ ಅದರಲ್ಲಿನ ಕಲ್ಲು ಕಿಡ್ನಿಯಲ್ಲಿ ಗಂಡು ಮಕ್ಕಳಿಗೆ ಸಿಕಿಕೊಳ್ತದೆ ಎಂಬುದು ಅವಳ ಭ್ರಾಂತಿ. ಇವನೂ ಇಂತವುಗಳನ್ನು ಆಡಿಕೊಳ್ತಾನೆ. ಕೆಲವೊಮ್ಮೆ ಇವನವ್ವ “ಯಾವ್ದುನ್ನಾದ್ರು ತಡಿಬೈದು, ಕಿವಿ ಪಕ್ಕ ಗುಯ್ ಗುಡೋ ಈ ಹಾಳು ಸೊಳ್ಳೆಕಾಟ ತಡೀಲಾರ್‍ನೆ, ಅದ್ಯಾಕಲೇ ಈ ಸೊಳ್ಳಿಗಳು ನಮ್ ಕಿವಿತಾಕ್ಕೆ ಬಂದು ಗುಯ್ ಅನ್ನದು?” ಅಂತ ಜಿಜ್ಞಾಸೆಯಲ್ಲಿ ತೊಡಗಿದ್ದರೆ, ಇವ ಅದಕ್ಕೆ “ಅವ್ವ, ಗುಯ್ ಅನ್ನೋ ಸಬ್ದ ಅದ್ರ ರೆಕ್ಕಿನಿಂದ ಬರ್‍ತತಿ, ಅದು ನಿನ್ ಕಿವಿ ಹತಾಕ್ ಬಂದಾಗೆಲ್ಲಾ ಕೇಳ್ತತಿ” ಎಂದು ತನ್ನ ವಿದ್ವತ್ ಪ್ರದರ್ಶನ ಮಾಡುವವ. ಅದ್ಯಾವುದೋ ಸಿನಿಮಾದಲ್ಲಿ ಲಕ್ಷ್ಮಿ ಯಾರಿಗೋ ತನ್ನ ಕಿಡ್ನಿ ದಾನ ಮಾಡಿದ್ದನ್ನು ನೋಡಿದ ಇವನವ್ವ ಅದು ಅರ್ಥವಾಗದೇ “ಅದೆಂಗಲೇ, ಹೆಂಗಸರು ಕಿಡ್ನಿ ಕೊಡಕಾದೀತು?” ಅಂತ ಇವನೆಡೆ ನೋಡಿ ವಿಶೇಷವಾಗಿ ನಕ್ಕಿದ್ದಕ್ಕೆ “ಅವ್ವಾಲೇ, ಕಿಡ್ನಿ ಎಂಬ ಅಂಗ ಎಲ್ಲರತಾವನೂ ಇರತೈತಬೇ” ಎಂದು ಹೈಸ್ಕೂಲು ಮೆಟ್ಟಿದ ತಾನೇ ಮಹಾಶಾಣ್ಯಾನ ಹಾಗೆ ಏನೂ ಓದದ ತನ್ನಮ್ಮನನ್ನೇ ಆಡಿಕೊಂಡು ಹಲ್ಲುಕಿರಿಯುವುದು ಸರಿಯಾ?
ಇವನಪ್ಪನ ಶುದ್ಧ ಕುಡುಕ, ಸೊಂಬೇರಿ. ಸದಾ ಅತ್ತಿಂದಿತ್ತ ಅಂಡಲಿಯುವ ಬುದ್ಧಿಗೇಡಿ. ಎಲ್ಲೋ ಕೆಲಸಕ್ಕೆಂದು ಹೋಗಿ, ವಾರದ ಕೆಲಸ ಮುಗಿದು ಇನ್ನೂ ಬಟವಾಡೆ ಆಗೋದರಲ್ಲೇ ಇವನ ಕೈ ಎಲ್ಲವೂ ಖಾಲಿ, ಕೆಲವೊಮ್ಮೆ ಇನ್ನೂ ಕೈಲಿ ಕಾಸು ಬರುವ ಮೊದಲೇ ಸಾಲಗಾರರ ಜೊತೆ ಅಡ್ಜಸ್ಟ್ ಮಾಡಿಕೊಂಡ ಕಾರಣದಿಂದ ಮನೆಗೆ ಕಾಸು ಹರಿದು ಬರುತ್ತದೆಯೆನ್ನುವುದಕ್ಕಿಂತಲೂ ಮನೆಯಿಂದ ಹೊರಗೆ ಹರಿದು ಹೋಗುವುದೇ ಹೆಚ್ಚು. “ನನ ಸಿವನೇ, ಇಂತಾ ಕುಡುಕನ ಸವಾಸದಿಂದ ಉಪಾಸ ಇರಹಂಗಾತಲ್ಲ” ಅಂತ ಇವನಮ್ಮ ಎಷ್ಟೋ ಸತಿ ತಲೆ ಚಚ್ಚಿಕೊಂಡಿದ್ದನ್ನು ಇವ ನಡುಮನೆ ಕಂಬದ ತರ ಸಾಕ್ಷಿಗಾಗಿ ಎಂಬಂತೆ ನೋಡಿ ನಿಡುಸುಯ್ದಿದ್ದಾನೆ. ಇವನಪ್ಪ ಇವನಮ್ಮನ್ನ ಕೂದಲಿಡಿದು ಹೊಡೆಯೋ ದೃಶ್ಯವೂ, ಅವಳು ಅತ್ತು-ಕರೆದು ಊರು ಒಂದಾದ ಚಿತ್ರಣವೂ ಇವನ ಕನಸಿನಲ್ಲಿ ಹಲವಾರು ಬಾರಿ ಬಂದಿದ್ದಿದೆ. ಇವ ಇವನಮ್ಮನ ಎಂದೂ ತೊಟ್ಟಾಕ್ಕಂಡೇ ಮಲಗೋದು, ಆದರೆ ಬೆಳಗ ಮುಂಜಾನೆ ಇವ ಕಣ್ಣು ಬಿಡೋದು ಅವನಮ್ಮನ ಅಡಿಗೆ ಮನೆ ಪಾತ್ರೆಗಳ ಸದ್ದಿಗೇ. ಮಧ್ಯೆ ಏನಾದೀತೋ ಯಾರು ಬಲ್ಲರು? ಇವನ ನಿದ್ದೆಯಲ್ಲಿ ಆಗುವ-ಹೋಗುವ ವಿಷಯಗಳತ್ತ ಇವನ ಗಮನ ಅಷ್ಟಕಷ್ಟೇ.
“ಲೇ, ಜೋಕುಮಾರ! ನಡೀಲೆ ಒಳಕೆ, ಬಂದಾ ಇಲ್ಲಿ ಬಿಟಗಂಡು ದೊಡ್ಡದಾಗಿ!” ಅಂತಾ ಬೈಸಿಕೊಳ್ಳುವವರೆಗೂ ಇವ ಚಡ್ಡಿ ಹಾಕಿಕೊಂಡಾ ಆಸಾಮೀನೇ ಅಲ್ಲ. ಅದು ಒಂದು ಮಜವೇ ಇದ್ದಿರ ಬಹುದು – ಯಾರಿಗುಂಟು ಯಾರಿಗಿಲ್ಲ! ಅಷ್ಟೇ ಅಲ್ಲ, ಇವನಮ್ಮ ಇವನಿಗೆ ಕನಸು ಕಾಣುವುದನ್ನೂ ಹೇಳಿಕೂಟ್ಟಿದ್ದಾಳೋ, ಬಿಟ್ಟಿದ್ದಾಳೋ – ಕನಸು ಕಾಣುವುದರಲ್ಲಿ ಇವ ಮಹಾ ಮುಂದೆ. “ಬರೀ ಕರಿಂಡಿ ತಿನಬ್ಯಾಡಾ ಅಂತಾ ಎಸ್ಟ್ ಸತಿ ಹೇಳ್ಳಿಲ್ಲಾ, ಮೊಸರು ಹಾಕಿ ಕಲಸೋ ಮುಂಡೇದೇ” ಅಂತಾ ತಲೇಮೇಲೆ ಇವನಮ್ಮ ತಿವಿಯುವತನಕವೂ ಇವ ರೊಟ್ಟಿ ಒಂದು ಕಡೆ ತಾನು ಒಂದು ಕಡೆ ಎಂದು ಮುಗಿಸಿ ಏಳುವವ. ಅದು ಎಂತೆಂಥ ಕನಸು ಅಂದ್ರೆ – ದೊಡ್ಡ ಗವಾಸ್ಕರ್ ಆಗೋ ಕನಸು – ಸದಾ ಗೋಲಿಚೀಲ ಚಡ್ಡಿ ಜೇಬಲ್ಲಿ ಇಟ್ಟುಕೊಂಡು ತಿರುಗಿದ ಮಾತ್ರಕ್ಕೆ, ತನ್ನೆಲ್ಲ ಏಕಾಗ್ರತೆಯನ್ನು ಹಿಡಿದು ಗುರಿಯಿಟ್ಟು ಗೋಲಿ ಹೊಡೆದ ಮಾತ್ರಕ್ಕೆ ಕ್ರಿಕೆಟ್ಟಿನಲ್ಲಿ ಅದ್ಹೇಗೆ ಮುಂದೇ ಬಂದಾನು? ಅದು ಯಾರ್‍ಯಾರೋ ಕಿವಿಗೆ ರೇಡಿಯೋ ಆನಿಸಿಕೊಂಡು ಕಾಮೆಂಟ್ರಿ ಕೇಳೋರ್ ಹತ್ರ ಇವನದ್ದ್ಯಾವಾಗಲೂ ಒಂದೇ ಅಹವಾಲು: “ಆ ಗವಾಸ್ಕರ್ ಎಷ್ಟು ಹೊಡೆದ?” ಎಂದು. ತನ್ನ ತಂಡದವರೊಂದಿಗೆ ಹಾನಗಲ್ ತಂಕಾ ಸೈಕಲ್ ಮೇಲೆ ಹೋಗಿ ಇವ ಅಲ್ಲಿನವರ ಮೇಲೆ ಪಂದ್ಯ ಆಡಿ ಸೋತು ಬಂದದ್ದಿದೆ, ಯಾರು ಏನೇ ಹೇಳ್ಲಿ, “ಆ ಎರಡನೇ ಬ್ಯಾಟಿಂಗ್ ಮಾಡಿದ ಹುಡುಗ, ಭಾಳ ಛೊಲೋ ಆಡ್ತಾನ…”, ಅಂತ ಎಲ್ಲರಿಂದಲೂ ಅನ್ನಿಸಿಕೊಂಡಿದ್ದಿದೆ. ಇವ ಸೈಕಲ್ ನೀಕಿ ತುಳದೂ-ತುಳದೂ ಪ್ಯಾಂಟಿನ ಮುಕಳಿ ಹರಕೊಂಡು ಬಂದಿದ್ದು ಇರಲಿ, ರಾತ್ರೀಯೆಲ್ಲಾ ಕೈಗೆ ಕ್ರಿಕೆಟ್ಟಾಡೋ ಗ್ಲೌಸು ಹಾಕ್ಕೊಂಡು ಕನವರಿಸಿ-ಕನಸುಕಂಡು ಮಲಗಿ, ಬೆಳಕರಿಯೋತ್ಲು ದಡಕ್ಕನೆ ಎದ್ದು, ಮುಖಕ್ಕೆ ನೀರು ಹಾಕಿ ಇಪ್ಪತ್ತು ಮೈಲಿ ಸೈಕಲ್ ತುಳಕೊಂಡು ಹೋಗೋ ಇವನ ಪರಿ ಇವನಮ್ಮನಿಗೆ ಸೋಜಿಗ ಮೂಡಿಸಿದೆ. ಇವನಮ್ಮ ಇವನಿಗೆ ಹೈಸ್ಕೂಲು ವಿದ್ಯೆಯೇ ನೈವೇದ್ಯೆಯಾಗೋದನ್ನು ಕಂಡೂ-ಕಂಡೂ, “ನನಮಗನೇನಾದರೂ ಮುಂದೆ ಓದಿದ್ರೆ ಡೆಪ್ಟಿ ಕಲೆಟ್ರು ಆಗೋದಂತೂ ಗ್ಯಾರಂಟಿ” ಅಂತ ಪಕ್ಕದ ಮನೆ ಸರಸವ್ವನ ತಾವ ಹೇಳೋದನ್ನ ಇವ ಕೇಳದೇ ಇದ್ದರೂ ಕನಸು ಕಾಣುವ ಮಂಗ್ಯಾನಿಗೆ, ಗಾವಸ್ಕರ್ ಆಗಬಯಸುವವನಿಗೆ ಡೆಪ್ಟಿ ಕಲೆಟ್ರು ಆಗಲಾರನೆಂದು ಹೇಳೋರು ಯಾರು? ಹಂಗಂತ ಇವನಮ್ಮ ಬಿಟ್ಟಾಳೇ? ತೊಗರ್ಸಿ ಮಲ್ಲ್‌ಕಾರ್ಜುನನಿಗೆ ಮುಡಿಪು ಕಟ್ಟುವಳು, ದನದ ಆಸ್ಪತ್ರೆ ಹತ್ರದ ಚೌಡಮ್ಮನಿಗೆ ಕೋಳಿಯನ್ನೂ ಬಿಡುವಳು. ಆದರೆ ಈ ದರಬೇಸಿ ಹಾಳು ತಿರುಗುವುದನ್ನು ಇನ್ನೂ ಬಿಟ್ಟಿಲ್ಲ.
ಇವನಮ್ಮನಿಗೆ ಇವನ ಕಂಡರೆ ಅಗ್ದೀ ಜೋಪಾನ – “ಮಗಾ ಹೊಳೀ, ಕೆರೀ ಕಡಿಗಿ ಮಾತ್ರ ಹೋಗಬ್ಯಾಡಾ, ಅಲ್ಲಿ ಬಳ್ಳಿ ಕಾಲಿಗಿ ಕಟಗಂತಾವ, ಕೆಸರಿನೊಳ್ಗೆ ನೀ ಹೂತು ಹೋಗಿ, ಆ ಕುಂದಾಪುರದ ಸೇಸಯ್ಯ ಸತ್ತಂಗಾದೀ ಮತ್ತ” ಅಂತ ಯಾವುದೋ ಅವ್ಯಕ್ತ ಭಯವನ್ನು ಹೊರ ಹಾಕುವಳು. ಇವನು ಅಮ್ಮನ ಮಾತಿನ ಭಕ್ತ; ಹಂಗಂತ ಇವ ಎಲ್ಲೂ ಹೋಗಲ್ಲ, ಇವ ಎಲ್ಲೇ ಹೋಗೋದಿದ್ದರೂ ಅಮ್ಮನಿಗೆ ಹೇಳೇ ಹೋಗೋದೂ ಅಂತ ಏನೂ ಇಲ್ಲ! ಅಷ್ಟೂ ಅಲ್ಲದೇ ಇವ ಎಲ್ಲಾದರೂ ಹೊಕ್ಕಾನು – ಕರ್ನಾಟ್ಕ ಮಿಲ್ಲಿಗೆ ಹೋಗಿ, ಅಲ್ಲಿ ಇಮಾಮನ ಕಣ್ಣು ತಪ್ಪಿಸಿ, ಚಕ್ರಗಳೆಲ್ಲ ನಿಂತಿದ್ದು ಖಾತ್ರಿ ಮಾಡಿಕೊಂಡು ಸೇಂಗಾ ಸಿಪ್ಪೆ ತೆಗೆಯೋ ಮಿಷನ್ನಿಗೆ ಮೊಣಕೈ ಮುಣುಗೋ ತಂಕ ಕೈ ಹಾಕಿ, ಅಂಗಿ-ಚಡ್ಡಿ ಜೋಬುಗಳೆಲ್ಲವೂ ತುಂಬುವಷ್ಟು ಸೇಂಗಾ ತುಂಬಿಸಿಕೊಂಡು ಬರುವವ. ಇಲ್ಲಾ ಆ ಹಾಳು ಇಮಾಮ ಅಥವಾ ಅವನ ಜೊತೆಯ ಮಜೀದ ಇಬ್ಬರೊಲ್ಲೊಬ್ಬರಿದ್ದರೆಂದರೆ ಇವ ಸೀದಾ ಅವಲ್ಲಕ್ಕಿ ಮಾಡೋ ಶಿವಾನಂದಣ್ಣನ ಬಳಿಯೋ, ಅಕ್ಕಿ ಮಾಡೋ ಕೇಶವನ ಬಳಿಯೋ ಹೋಗಿ ನಿಂತು, ಇವನ ದರಬೇಸಿಯ ಪೋಸ್ ಕೊಟ್ಟು, ಒಂದ್ ಹಾಡ್ ಹೇಳಲೇ ಅನ್ನೋದೇ ಕಾಯ್ಕೊಂಡು “ಲವ್ ಮೀ ಆರ್ ಹೇಟ್ ಮೀ, ಕಿಸ್ ಮೀ ಆರ್ ಕಿಲ್ ಮೀ, ಓ ಡಾರ್ಲಿಂಗ್ ಪ್ಲೀಜ್ ಡೂ ಸಮ್‌ಥಿಂಗ್ ಟು ಮಿ! ಡುರ್‌ರ್‌ರ್ ಡುರ್‌ರ್‌ರ್ ಡುರ್‌ಓ” ಎಂದೋ ಅಥವಾ “ಚಿನ್ನಾ ಬಾಳಲ್ಲಿ ಈ ರಾತ್ರಿ ಬರದೂ ಇನ್ನೆಂದೂ ಕನಸೆಲ್ಲಾ ನನಸಾಗಿದೆ…” ಅಂದೋ, ಇನ್ಯಾವುದೋ ರಾಜ್‌ಕುಮಾರ್ ಹಾಡು ಹೇಳಿದನೆಂದರೆ ತೀರಿತು. ಇವನಿಗೆ ಮುಷ್ಟಿಗಟ್ಟಲೆ ತಾಜಾ ಅವಲಕ್ಕಿ ಸಿಕ್ಕೀತು. ಇವ ಹಿಟ್ಟು ಹಾಕಿಸಿಕೊಂಡು ಬರೋ ಮುಂದೆ ಆವಾಗಾವಗ ಸುಧಾ ಹೋಟ್ಲು ಕೋಟಿ ಸಿಕ್ತಾನೆ, ಅವ ತರೋದು ಏನು ಎಂದು ಇವನಿಗೆ ಮೊದಲೇ ಗೊತ್ತು – ಅವ ಒಳ್ಳೆ ಪುಟಾಣಿ ತರ್‍ತಾನೆ, ಎಲ್ಲರಿಗೂ ಅವನ ಚೀಲದ ಮೇಲೆ ಕಣ್ಣೇ, ’ಎಲ್ಲರೂ ಒಂದೊಂದು ಮುಷ್ಟಿ ತಗಂಡ್ರೂ ಕೋಟಿ ಏನು ಅನ್ನಲ್ಲ’ ಅನ್ನೊಷ್ಟರ ಮಟ್ಟಿಗೆ ಪಾಪದವ, ಅದರಲ್ಲೊಂದಿಷ್ಟು ಇವ ತಿಂದರೆ ಅವನಿಗೇನು ಕಮ್ಮಿ? ಪುಟಾಣಿ ತಿನ್ನಲು ಮುಂದೆ ಬರುವ ಜನ, ಅದೇ ಪುಟಾಣಿ ಹಿಟ್ಟು ಆದಮೇಲೆ ಹಿಟ್ಟನ್ಯಾಕೆ ಮುಕ್ಕಲಾರರು ಎಂಬುದು ಇವನಿಗೆ ಗೊತ್ತಾಗದ ವಿಚಾರ!
ಕಟ್ಟುಮಸ್ತಾಗಿ ಬೆಳೆದ ಇವನಮ್ಮನ ಮೇಲೆ ಊರಿನೋರೆಲ್ಲ ಕಣ್ಣ ಹಾಕೋದನ್ನು ಇವನು ಸಹಿಸಲಾರದ ಮಟ್ಟಿಗೆ ಬೆಳೆದಿದ್ದಾನೆ. ಈ ಹರಕಲು ನನ್ನ ಮಕ್ಕಳು ನಮ್ಮವ್ವನಿಗೆ ಏನೂ ಮಾಡಾಲಾರರು ಎಂದು ಇವನ ಗಟ್ಟಿ ನಂಬಿಕೆ. ಇಲ್ಲಾಂದ್ರೆ ಇವನಮ್ಮ ಮಂಜೂ-ಅಪ್ಪನಿಗೆ ಚಾಕೂ ಹಾಕೋಕ್ ಹೋದ ವಿಷಯ ಇಡೀ ಊರಿಗೆಲ್ಲ ತಿಳಿಯುತ್ತಿರಲಿಲ್ಲ. ಆದರೂ ಮೆಯಿನ್ ರೋಡಿನ ಹತ್ತಿರವೇ ಇರುವ ಇವನ ಮನೇ ಮುಂದೆ ತುಡುಗು ನಾಯಿಗಳಿಗೇನೂ ಕಡಿಮೆ ಇಲ್ಲ. ಹಂಗಂತಲೇ ಇವನಿಗೆ ಬಸ್ಸಿನ-ಲಾರಿಯ ಡ್ರೈವರ್ ಕಂಡಕ್ಟರ್‌ಗಳು ಗೊತ್ತು, ಮಿಲ್ಲಿನವರು ಗೊತ್ತು, ಮೇಷ್ಟ್ರುಗಳೂ ಗೊತ್ತು! ಈ ಊರಿನ ಕಚ್ಚೆಹರುಕ ನನ್-ಮಕ್ಕಳೆಲ್ಲರೂ ಒಂದು ರೀತಿಯಲ್ಲಿ ಇವನನ್ನು ಕಂಡು ಹಲ್ಲು ಗಿಂಜುವವರೇ. ಆದರೂ ಈ ಕಂಡ-ಕಂಡವರು ತರುವ ಸೀ-ಕಾರ ತಿಂಡಿಗೆ ಬಗ್ಗದ ಇವ ಅವರು ತಂದು ನಿಲ್ಲಿಸುವ ಸೈಕಲ್ಲಿಗೆ ಸಲಾಮು ಹೊಡೆದಿದ್ದಿದೆ. “ಏ, ಬೀಳ್ಸ್‌ಬ್ಯಾಡಲೇ”, ಅನ್ನೋದನ್ನೂ ಕೇಳದೇ ಇವ ಆಗಲೇ ಅದನ್ನು ಚಲಾಯಿಸಿ ಆಯ್ತು! ಇವನಪ್ಪ ಹೊಂಟೇ ಹೋದ, ಅತ್ಲಾಗ ನೆಗದುಬಿದ್ದಾದರೂ ಹೋಗಿದ್ರೆ ಇವನಮ್ಮ ಯಾರನ್ನಾದ್ರೂ ಸೀರುಡಿಕೆಯನ್ನಾದರೂ ಮಾಡಕಬಹುದಿತ್ತು. ಅವ ಎತ್ಲಗೋ ದೇಶಾಂತರ ಹೋಗವನೆ – ಒಂದಿನ “ಕಾಪಿ ಸೀಮಿಗಿ ಗುಳೆ ಹೋಬತ್ತೀನಮ್ಮಿ” ಅಂದವ, ಇನ್ನೂ ಬಂದಿಲ್ಲ ಎಂದು ಇವನಮ್ಮ ಬಿಕ್ಕುವುದನ್ನು ಇವನು ಎಷ್ಟೋ ಬಾರಿ ಕೇಳಿದ್ದಾನೆ. ಇವನದ್ದು ಯಾವಾಗಲೂ ಪಿಚ್ಚೆನಿಸುವ ಮುಖ – ಅನಾಥನಲ್ಲದಿದ್ದರೂ ’ನಾನು ಬೇವರಸಿ’ ಎಂದು ಹಣೆಮೇಲೆ ಬರೆಸಿಕೊಂಡಂತೆ ದರಿದ್ರ ಮುಖ ಹೊತ್ತು ಎಲ್ಲೆಲ್ಲೂ ತಿರುಗುತ್ತಾನೆ. ಒಂದು ಅರ್ಥದಲ್ಲಿ ಇವನು-ಇವನಮ್ಮನಿಗೆ ಯಾರೂ ಇಲ್ಲದಿದ್ದರೂ – ಕೆಲವೊಮ್ಮೆ ಎಲ್ಲರೂ ಇರುವಂತೆ ಭಾಸವಾಗೋದು – ಇವನಿಗೂ ಸಾಕಷ್ಟು ಗೊಂದಲ ಹುಟ್ಟಿಸಿದೆ. “ನಮ್ಮವ್ವ ಹೇಳೇತಿ, ಸಂತಿಗೆ ಹತ್ತು ರೂಪಾಯಿ ಕೊಡಬೇಕಂತೆ” ಅಂತ ಇವನೇನಾದರೂ ಯಾರಲ್ಲಿಯಾದರೂ ಇವನ ಪಿಚ್ಚು ಮುಖ ಹೊತ್ತು ಅಂದಿದ್ದೇ ಆದರೆ “ತಕಾ” ಎಂದು ಹತ್ತು ರೂಪಾಯಿ ಬಿದ್ದಂತೆಯೇ, ಇವ ಅದನ್ನು ದುರುಪಯೋಗ ಮಾಡದೇ ಅಮ್ಮನಿಗೆ ಬಂದು ಕೊಡುವವ, ಅವನಮ್ಮ ಇವನಿಗೆ “ಇಕಾ, ಹಿಂದ್ ಕೊಟ್ಟ್ ಬಾ” ಎಂದು ಯಾವತ್ತು ಹೇಳಿದ ನೆನಪಿಲ್ಲ. ಇಂತವೆಲ್ಲದರ ಸಲುವಾಗಿಯೇ ಇವನು ಇನ್ನೂ ಬಲವಾದ ಹಗಲುಗನಸುಗಳನ್ನು ಕಾಣುವುದು. ತಾನು ಗೋಲಿಯಾಟದಲ್ಲಿ ನೂರು ರೂಪಾಯಿ ಗೆದ್ದಂತೆ, ಅವ್ವನಿಗೆ ಕೊಟ್ಟಂತೆ, ಇತ್ಯಾದಿ. ಕೆಲವೊಮ್ಮೆ ರಾತ್ರಿ ಮಲಗಿರುವಾಗ ಅವ್ವ ದುಡ್ಡಿಲ್ಲದೆ ಇಲ್ಲಾ ಎಂದು ಹೇಳಿದ ಲೇಖಕ್ ನೋಟ್ ಬುಕ್‌ಗಳೂ ಗುಡ್ಡೆಯಾಗಿ ಬೀಳುವುದನ್ನು ನೆನೆಸಿ ಇವ ನಿದ್ದೆಯಲ್ಲಿ ನಕ್ಕಿದ್ದಿದೆ.
ಮಾತಿಗಿಳಿದರೆ ಇವನಮ್ಮ ಜೋರೆ: “ಒಳ್ಳೇ ಬಂಗಾರದಂತ ಕೋಳಿ ಹುಂಜಾ ತೆಗೆದೆಯೆಲ್ಲೋ, ನಿನಮನೆ ಕಾಯೋಗ” ಅಂತಾ ಲಾರಿಯವರ ಹತ್ತಿರ ಗಲಾಟೆ ಮಾಡಿ ಇಪ್ಪತ್ತೈದು ರೂಪಾಯಿ, ಕೋಳಿ ಸಮೇತ ತಂದವಳೇ! ತೋಟ ಕಾಯೋ ಹುಡುಗನ್ನೇ “ನಿನ್ನ ಅಡಿಕೆಮರ ತಿನ್ನಾಕೆ ಬಂದಿಲ್ಲೋ, ಒಂದಿಷ್ಟು ಅಡಿಕಿ ಹಾಳಿ ತಗೊಂಡರ ನಿನ್ನ ಮನೀದೇನು ಹೋತು ಅಂತೀನಿ” ಅಂದು ಒಂದು ಗಟ್ಟಿ ಹೊರೆ ಅಡಿಕೆ ಹಾಳೆ ತೆಗೆದು ಕುಬಟೂರು ಕೆರಿಗೆ ಬಟ್ಟಿ ಒಗೆಯಾಕೆ ಹೋದಾಗೆಲ್ಲ ಇವನ ತಲೀಮೇಲೆ ಹೊರಿಸಿ ಕಳಿಸವಳೆ. “ಎಲ್ಲಾರ ಮಿಕ-ಗಿಕ ಹೊಡದ್ರ ಒಂತುಂಡು ತಂದುಕೊಡೋ” ಎಂದು ಕೊರಚರ ನಾಗ್ಯಾನ ಜಾಡಿಸಿದವಳೇ. “ಎಲ್ಲಾರ ಹತ್ತ್‌ಮೀನು ಹೊಡದ್ರ, ಇತ್ಲಾಗೊಂದು ತಂದು ಹಾಕು ಎಂದು ಕೂಣಿ ಹೋರುವ ಮೈಲಾರಿಯನ್ನು ಅವಾಗಾವಾಗ ತಡಕುತ್ತಾಳೆ. ಜಗಳಕ್ಕಿಳಿದರಂತೂ ಎಲ್ಲರೂ ಹೆದರುವಂತೆ ಗುರ್ರ್ ಅನ್ನೋದನ್ನ ಕೇಳಿ “ನನ್ನಮ್ಮನಾ ಇವಳು!” ಎಂದು ಇವನು ಕುಮಟಿ ಹಾರಿದ್ದಿದೆ…ಇವಳ ಪರಾಕ್ರಮಗಳು ಇನ್ನೇನೇನೋ. ಇವಕ್ಕೆಲ್ಲ ತದ್ವಿರುದ್ಧವಾಗಿ ಇವ ಜೋಬದ್ರನಾಗಿ ಯಾರು ಏನೇ ಹೇಳಿದರೂ ತಲೆ ಆಡಿಸುವವ, ಇನ್ನೂ ಜೋರಾಗಿ ಮಾತಾಡಿದ್ರ ಕಣ್ಣಾಗ ನೀರು ಹಾಕುವ ಸೋಗಲಾಡಿಯಾಗಿ ಹುಡುಗಿಯ ಮನಸ್ಸಿನ ಹುಡುಗನಾಗಿ ಬೆಳೆದವ.
ಯಾವತ್ತೋ ಸ್ಕೂಲಿಗೆ ಹೋಗುವ ಇವನನ್ನ ಗೋಳು ಹೋಯ್ಕೊಳ್ಳೋರು ಯಾರು? ಇವನ ಗೋಳು ಹೊಯ್ಕೊಂಡವರಿಗೂ ಇವನು ಕಣ್ಣೀರು ಸುರಿಸಬಲ್ಲ ಪ್ರವೀಣ ಎಂದು ಗೊತ್ತಾಗಿಯೋ ಏನೋ ಹಾರಿ ಕುಣಿದಾಡುವ ಹುಡುಗರಿಗೆಲ್ಲಾ ಇವನೆಂದರೆ ಒಂದು ರೀತಿಯ ದೂರ. ಇನ್ನು ಇವನ ಮನೆ ಕೆಂಪು-ಬಿಳಿ ಹುಂಜವ ಕೂಡಿ ಐದಾರು ಕೋಳಿ ಮರಿಗಳು, ಯಾವಾಗ ನೋಡಿದರೂ ಇವನಂತೆಯೇ ಬಾಲವಾಡಿಸೋ ಒಂದು ನಾಯಿ, ಇವನ ಮನೆ, ಇವನ ಗೋಲಿಗಳು, ಕೊಳೆಯಾದ ಪಾಟಿ-ಪುಸ್ಕದ ಚೀಲ, ಮತ್ತೆ ಇವನಮ್ಮ ಇಷ್ಟನ್ನು ಬಿಟ್ಟರೆ ಇವನಿಗ್ಯಾರೂ ಇಲ್ಲ. ಗಾವಾಸ್ಕರ್ ಆಗೋ ಕನಸೇನಾದರೂ ಹೊತ್ತು ಇವ ದಿನವಿಡೀ ಕ್ರಿಕೆಟ್ ಅಂತಾ ನಿಂತನೋ “ಸಿಕ್ಕ-ಸಿಕ್ಕ ಹುಡ್ರು ಜೋಡಿ ಕ್ರಿಕೆಟ್ ಆಡಿ ಬಿಸಿಲಿನಲ್ಲಿ ಸಾಯ್‌ಬ್ಯಾಡಾ ಅಂತ ಎಷ್ಟ್ ಸತಿ ಹೇಳಿಲ್ಲಾ?” ಎಂದು ಅಪರೂಪಕ್ಕೊಮ್ಮೆ ಇವನಮ್ಮನ ಕೈಯಿಂದ ಇವ ಹೊಡೆತದ ರುಚಿ ನೋಡಿದ್ದೂ ಇದೆ! ಒಂದು ದಿನ ಜ್ಯೋತಿ ಮೇಷ್ಟ್ರು ಮತ್ತೆ ಯಲ್ಲಪ್ಪನಿಗೆ ಆದ ಸಂಭಾಷಣೆ ಇವನನ್ನು ಹೊಸ ಗುಂಗಿನಲ್ಲಿ ನಿಲ್ಲಿಸಿದೆ – “ನಿನ್ನೆ ಯಾಕೋ ರಾತ್ರಿ ಬರೆದಿಲ್ಲ?” ಅಂತಾ ಕೇಳಿದ ಪ್ರಶ್ನೆಗೆ “ಇನ್ನೊಂದ್ ಸರ್ತಿ ಸಿನಿಮಾಕ್ಕೆ ಹೋಗಿದ್ದೆ, ಸಾ…” ಎಂಬ ಎಲ್ಲಪ್ಪನ ದಿಟ್ಟ ಉತ್ತರಕ್ಕೆ, “ಅದರಾಗೆ ಏನ್ ನೋಡಾಕೆ ಹೋಗಿದ್ಯಪಾ, ಪದೇ-ಪದೇ ನೋಡಂತದ್ದೇನೇತಿ?” ಅಂದ್ರೆ “ಸಿಲ್ಕ್ ಸ್ಮಿತಾ ಮಲಿ ನೋಡಾಕ್ ಹೋಕವಿ!” ಎಂದಂದು ಕಿಸಕ್ಕನೆ ನಕ್ಕು ಅವನೇನೋ ಕಪಾಳ ಮೋಕ್ಷ ಮಾಡಿಸಿಕೊಂಡ, ಜೊತಿ ಹುಡುಗರೆಲ್ಲಾ “ಭಾಳ್ ಧೈರ್‍ಯಾಲೇ, ನಿಂಗ” ಅಂತ ಏನೋ ಅವನ್ನ ಹೊಗಳಿದರು, ಆದರೆ ಅಂದಿನಿಂದ ಇವನಿಗೂ ಏನೋ ತನ್ನೊಳಗೆ ಕಸಿವಿಸಿ ನಡೆಯುತ್ತಿದೆಯೆನಿಸಿ, ’ಯಲ್ಲಪ್ಪ ಏನಂದ’, ’ಯಾಕಾದ್ರೂ ಹಂಗಂದ’, ’ಅದರಗೇನೈತಿ’, ಅಂತ ಗಂಟೆಗಟ್ಟಲೆ ವಿವೇಚನೆ ಮಾಡಿದ್ದಿದೆ. ಹಿಂಗೇ ಒಂದ್ ಸತಿ ಅದ್ಯಾವುದೋ ಮಲಯಾಳೀ ಸಿನಿಮಾ ಸೆಕೆಂಡ್ ಶಿವುಗೆ ಇವ್ನೂ, ಯಲ್ಲಪ್ಪನೂ, ಶ್ರೀಕಾಂತನೂ ಹೋಗಿ, ಇವರು ನೆಲದಾಗ ಕುಂತು, ಅಲ್ಲಿಂದಲೇ ಕುರಚಿ ಸಾಲಿನಾಗ ಕುಂತ ಸೇಕರಪ್ಪ ಮೇಷ್ಟ್ರು, ಗುಬ್ಬಿ ಮೇಷ್ಟ್ರು ಕಂಡು, ನಾವು ಅವರಿಗೆಲ್ಲಿ ಕಂಡೇವೋ, ನಮ್ಮವ್ವಗೆಲ್ಲಿ ಹೇಳ್ತಾರೋ ಅಂತ ಎಷ್ಟೋ ಸತಿ ಬೆಚ್ಚಿ ಬಿದ್ದು, ಇನ್ಯಾವತ್ತೂ ಈ ನನ್ ಮಕ್ಳ ಸವಾಸ ಮಾಡಲ್ಲಪ ಅಂತ ಗಟ್ಟಿಯಾಗಿ ಹೇಳಿಕೊಂಡಿದ್ದೂ ಇದೆ. ಹಂಗೂ-ಹಿಂಗೂ ನಿಧಾನವಾಗಿ ಕೂದಲು ಮೂಡೋ ವಯಸ್ಸಿನಲ್ಲಿ ಬೆನ್ನು ಹುರಿಯಲ್ಲಿ ಮಿಣ್ಣಗೆ ಸುಖದ ಚಳಿಯ ಅನುಭವ ಅಪರೂಪಕ್ಕೆ ಆಗಿದ್ದೂ ಇದೆ.
ಈ ನನ ಮಗನ ಕಣ್ಣು ಛೊಲೋ ಇಲ್ಲ, ಇವನಮ್ಮ ಬಾಳ್ ಒಳ್ಳೇಕಿ, ಅಕಿ ಇವನ ಮುಂದೆ ಬಟ್ಟಿ ಬದಲಾಯಿಸಿದ್ರು, ಈ ನನಮಗ ಜೋಬದ್ರಗೇಡಿ ಹಿಂಗೆಲ್ಲಾ ಯೋಚಿಸ್ತಾನ ಅಂತ ಅಕಿಗ್ಹೆಂಗರ ಗೊತ್ತಾಗಬೇಕು? ಅಕಿನೂ ಶುದ್ಧ ಮನಸ್ಸಿನವಳೇ, ಸಿವನೇ ಅನ್ನುವವಳೇ. ಯಾಕೋ ನನಮಗ ಒಂದೇ ಸುಮ್ಕೆ ಕೂರ್‍ತದೆ ಅಂತಾ ಏನೂ ಮಾಡೋ ಮನಸ್ಸಿಲ್ಲಾಂತಲ್ಲ ಅಕಿಗೆ. ಅಕಿ ಕಷ್ಟ ಅಕಿಗೆ – ಬೆಳಗ್ಗಿಂದ ಸಂಜೀತನ ಕಳಿ ತೆಗೆದು, ರೊಕ್ಕ ತಂದು ಮನೀ ಕೆಲಸ ಮುಗುಸುದರಾಗ ಅಕಿಗೂ ಸಾಕಾಗಿ ಹೋಗಿರತದ, ಇನ್ನು ಅಕಿಗೆ ಈ ಚಿಗುರು ಮೀಸಿ ಮೂಡೋ ಜೋಬದ್ರಗೇಡಿದೆಲ್ಲಿ ಚಿಂತಿ? ಅಕಿ ಎರಡು ತುತ್ತು ತಿಂದು ಇವನಿಗೆರಡು ತುತ್ತು ಹಾಕಿ ಎಲ್ಲಾ ಒಪ್ಪಾ ಮಾಡಿ, ಉಸ್ಸಪ್ಪಾ ಅಂದು ಕಣ್ಣುಮುಚ್ಚೋದೊರೊಳಗ ಮತ್ತ ನಾಳಿನ ಚಿಂತೆ ಹತ್ತೋದು ಅಲ್ದ ಕೋಳಿ ಹುಂಜ ಕೂಗೋದೂ ತಡ ಇಲ್ದಂಗಾಗಿ ಮತ್ತ ಓಡಾಟ ತಪ್ಪಿದ್ದಲ್ಲಾ.
*
*
*
“ನಿಮ್ಮವ್ವ ಕುಬಟ್ರು ಕೆರಿ ತವ ಸತ್ತ್ ಬಿದ್ದತಿ…ಜನ ಎಲ್ಲ ಸೇರ್‍ಯಾರೇ, ಲೊಗು ಬಾ” ಎಂದು ಯಲ್ಲಪ್ಪ ಬಂದು ಕರೆದಾಗ ಇವನಿಗೆ ದಿಕ್ಕೇ ತಪ್ಪಿದಂತಾಯಿತು. ಹೋಗಿ ನೋಡುವುದರೊಳಗೆ ಎಲ್ಲ ಮುಗಿದು ಹೋಗಿತ್ತು, ಪೋಲೀಸಿನವರು ಬಂದು ಕೆಲ್ಸ ಶುರು ಹಚ್ಚಿಕೊಂಡಿದ್ದರು, ಸಂಗಣ್ಣನೋ ಇನ್ಯಾರೋ ಇವನನ್ನು “ಸಣ್ಣ ಹುಡುಗ್ ರೀ, ಗರ ಬಡದಾನು” ಅಂತ ಹತ್ತಿರವೂ ಬಿಡಲಿಲ್ಲ. ಮೊದಲೇ ಗೊಲ್ಲಿ ಈಗಂತೂ ಹಡದಾಳ ಎಂಬಂತೆ ಮೊದಲೇ ಮೌನಿಯಾದ ಇವ ಈಗ ಮಹಾಮೌನಿಯಾದ, ಅವ್ವ ಹಿಂಗೇಕೆ ಆದಳು ಎಂಬುದು ತಿಳಿಯಲಾರದ ನಿಗೂಢತೆಯಾಗಿ, ಯೋಚಿಸಿದಂತೆಲ್ಲ ಆಳವಾಗತೊಡಗಿತು. ಜನ ಮಾತಾಡಿಕೊಳ್ಳುವಂತೆ ಇವನ ಕಿವಿಗೆ ಬಿದ್ದಿದ್ದು ಇಷ್ಟು – “ಯಾರೋ ಬಡ್ದು ಹಾಕಿರಬೇಕು”, “ಇಲ್ಲಾದ್ದು ಮಾಡಬಾರ್‍ದ ಮಾಡಿ ಅಕಿನೇ ಜೀವ ಕಳಕಂಡಿರಬೇಕು, ನಮಗ್ಯಾಕೆ ಯಾರ್‍ದೋ ವಿಷಯ?…” ಎಂದೋ, ಇನ್ನೂ ಏನೇನೇನೋ. ಊರವರೆಲ್ಲ ಬಂದರು, ಇವನನ್ನು ಬೋನಿನ್ಯಾಗಿರೋ ಕರಡೀನ ನೋಡಿದಂತೆ ನೋಡಿದರು, “ಪಾಪ, ಛೇ” ಎಂದರು, “ಹುಡುಗ ಸಣ್ಣವನಾದರೂ, ಭಾಳಾ ಶ್ಯಾಣ್ಯಾ ರೀ” ಎಂದು ಹೊಗಳಿ ಕಕ್ಕುಲಾತಿ ತೋರಿಸಿದರು. ಎಲ್ಲಿದ್ದಳೋ ಇಷ್ಟು ದಿನ, ಚಿಗವ್ವ ತನ್ನ ಪರಿವಾರದೊಂದಿಗೆ ಬಂದು ಇವನನ್ನು ಕೂಡಿಕೊಂಡಳು. ಈಗ ಇವನಿಗೆ ತನ್ನವ್ವ ಬಿಟ್ಟು ಹೋದ ಜೋಪಡಿಯೊಂದಿಗೆ ಚಿಗವ್ವನ ಸಂಸಾರದ ಜೊತೆಯೂ ತಗ್ಗಿ-ಬಗ್ಗಿ ನಡೆಯುವಂತಾಯಿತು.
*
*
*
ಇವನಪ್ಪ ಕಾಣೆಯಾಗಿ ಇಂದಿಗೆ ಎಷ್ಟೋ ವರುಷವೋ ಕಳೆದಿರಬಹುದು, ಅದು ಇವನಿಗೆ ಗೊತ್ತಿಲ್ಲ, ಆದರೆ ಇವನಮ್ಮ ಇಲ್ಲವಾದಾಗಿನಿಂದ ಇದು ನಾಲ್ಕನೇ ಸಲ ಊರಿನ ಜಾತ್ರೆ ಸೇರುತ್ತಿರುವುದುಂಬುದು ಇವನಿಗೆ ನಿಕ್ಕಿ ಜ್ಞಾಪಕಕ್ಕಿದೆ. “ವರುಸ ಇಪ್ಪತ್ತಾದರೂ, ಇದ್ಯಾಕಲೇ ಮಂಕನಂಗಿದ್ದೀಯಾ” ಎಂದು ಯಾರೋ ಹೇಳುವುದನ್ನು “ದಿಕ್ಕಿಲ್ಲದ ಹುಡುಗ ಬಿಡು” ಎನ್ನುವ ಅನುಕಂಪದ ನೆಲೆಯಲ್ಲಿ ಇವ ಕೇಳಿಸಿಕೊಳ್ಳುವುದೂ ಇಲ್ಲ. “ಒಂದು ಮದುವಿ ಮಾಡ್ರಿ, ಎಲ್ಲ ಸರಿ ಹೋಕಾನ” ಅಂತಾ ಯಾರೋ ಅಂದ್ರು ಅಂತ “ಮದುವಿಗೆ ನಾವೇ ಎಲ್ಲ ಸೇರಿಸಿ ಮಾಡುತೀವಿ, ಏನಾದರೂ ಹೇಳೋ” ಎಂಬ ಚಿಗವ್ವನ ಮಾತಿಗೆ ಇವ ಒಂದೇ ಸುಮ್ಕಿರುತ್ತಾನೆ, ಇಲ್ಲಾ ಅಲ್ಲಿಂದ ಕಾಲ್ತೆಗೆಯುತ್ತಾನೆ. ತನ್ನವ್ವನ ತೊಟ್ಟಾಕಿಕೊಂಡು ಮಲಗುತ್ತಿದ್ದ ದಿನಗಳು ಎಷ್ಟೊಂದು ಚಂದಿತ್ತು ಅಂತ ಈಗಲೂ ಹನಿಗಣ್ಣು ಮಾಡ್ಕ್ಯತಾನೆ. ಬಿಳಿ-ಕೆಂಪು ಹುಂಜ ಈಗ ಮುದಿಯಾಗಿದೆ – ಅದರ ಮರಿಗಳೂ ಅದರಷ್ಟೇ ಎತ್ತರ-ದೊಡ್ಡದಾಗಿವೆ, ಇವನ ಗೋಲಿ-ಬುಗರಿಗಳನ್ನು ಯಾರೋ ಕಂಡವರ ಮಕ್ಕಳು ಆಡಿಕೊಳ್ಳೋದು ಇವನಿಗೇನು ಕಿರಿ-ಕಿರಿ ಮಾಡಲ್ಲ. ಇವನ ಹರಕು ಪಾಟೀ-ಚೀಲ ಇವ ಯಾವ ಗೂಟಕ್ಕೆ ನೇತು ಹಾಕಿದ್ದನೋ ಅಲ್ಲಂತೂ ಇಲ್ಲ. ಇವ ಗುಡಿತಾವ ಇರೋ ಹಳ್ಳದ ದಂಡೇಲಿ ಸುಮ್ಕೆ ಕುಂತಾಗ ಅಲ್ಲಿ ಬಂದ ಶಂಕ್ರ “ನಿನ ಕೈಲಿ ಬರೀ ಚಿಂತಿ ಮಾಡಕ ಬರತ್ತ ನೋಡು, ಅದನ್ನೇನಾರ ಚಿಂತನೆ ಅಂತ ತಪ್ಪು ತಿಳಕೊಂಡಿ ಮತ್ತ” ಅಂತ ಕಿಚಾಯಿಸಿ ನಗುತ್ತಾನೆ, ಅವನ ನಗು ತಿಳಿನೀರಲಿ ಕಲ್ಲು ಬಿದ್ದು ಏಳಿಸಿದ ಅಲೆ ಮುಂದೆ ಹರಿದು ಮಂದ ಆಗುವಂತೆ ಮಾಯವಾಗುತ್ತದೆ. ಇವ ಗುಡಿಕಡೆ ಒಮ್ಮೆ ನೋಡಿ, ಇನ್ನೂ ಕತ್ತಲಾದರೆ ಚಿಗವ್ವ ಬೈತಾಳೆ, ಅಂತ ಕೈಲಿದ್ದ ಕೊನೇ ಕಲ್ಲನ್ನು ನೀರಿಗೆ ಎಸೆದು, ಅದರಿಂದೆದ್ದ ಅಲೆಗಳನ್ನು ನೋಡುತ್ತ ಮನೆಕಡೆಗೆ ಮುಖ ತಿರುಗಿಸುತ್ತಾನೆ.
*****
