ಎಷ್ಟೋ ಪ್ರೆಸ್ ಮೀಟ್‌ಗಳು, ಮುಹೂರ್ತಗಳು ಫಸ್ಟ್ ಕ್ಲಾಸ್ ಆಗಿ ನಡೆಯುತ್ತವೆ. ಅನುಭವಿ ನಿರ್ಮಾಪಕ- ನಿರ್ದೆಶಕರಾದ್ರೆ ಎಲ್ಲಾ ಲೆಕ್ಕಾಚಾರವಾಗಿ ಮಾಡಿರ್ತಾರೆ. ಅಂಥ ಸಮಾರಂಭ ಹೂವೆತ್ತಿದ ಹಾಗೆ ನಡೆಯುತ್ತೆ. ಅದಿಲ್ಲಾಂದ್ರೆ ಕಾರ್ಯಕ್ರಮ ಕಲ್ಲುಬಂಡೆ ಎತ್ತಿದ ಹಾಗಿರುತ್ತೆ.
ಏನೂ ಹೋಮ್ನರ್ಕೆ ಮಾಡಿಲ್ದೇ ಇರೋ ಮುಹೂರ್ತಗಳಲ್ಲಿ ಅತಿಥಿ-ಅಭ್ಯಾಗತರಿಗೆ ಮಣಭಾರದ ಹಾರ ಹಾಕಿ ಹೊಸ ಹೀರೋ-ಹಿರೋಯಿನ್‌ಗಳ ಜತೆ ಫೋಟೋಗಳು ತೆಗೆಸಿಕೊಂಡದ್ದಷ್ಟೇ ಲಭ್ಯ. ಶುಕ್ರವಾರ ಆ ಸುದ್ದಿ ಪ್ರಿಂಟ್ ಆಗೋ ಹೊತ್ತೆ ನಾಯಕ-ನಾಯಕಿ- ನಿರ್ದೆಶಕ ಎಲ್ಲರಿಗೂ ಗೇಟ್ ಪಾಸ್ ಕೊಟ್ಟಿದ್ದಾನೆ ನಿರ್ಮಾಪಕ.
ಇನ್ನೂ ಕೆಲವು ಮುಹೂರ್ತಗಳು ಅಚ್ಚುಕಟ್ಟಾಗಿ ನಡೆಯುತ್ತೆ. ಹಲವು ಪ್ರೆಸ್‌ಮೀಟ್ ತೋಪಾಗಿರುತ್ತೆ. ಕೋಳಿ ಕಾಳು ಕೆದಕಿದ ಹಾಗೆ ಕೆದಕ್ತಾ ಹೋದರೆ ನಿರ್ದೆಶಕ ಬಾಯಿ ಬಿಡ್ತಾ ಹೋಗ್ತಾನೆ.
‘ಕತೆ ಬಗ್ಗೆ ಹೇಳಿ’
‘ಅದೊಂದು ವಿಷಯ ಬಿಟ್ಟು ಏನು ಬೇಕಾದ್ರೂ ಕೇಳಿ. ಚಿತ್ರ ನೋಡಿದಾಗ ಕಥೆ ನಿಮಗೇ ಅರ್ಥವಾಗುತ್ತೆ’
“ಇದೊಂದು ತ್ರಿಕೋನ ಪ್ರೇಮ ಕಥೆಯಾ?”
‘ಕೋನಗಳು ನಾನು ಲೆಕ್ಕ ಹಾಕಿಲ್ಲ. ಅದು ಚತುಷ್ಕೋನ ಅಷ್ಟಕೋನ ಕಥೆ ಅನ್ಕೊಳ್ಳಿ’
‘ಈ ಚಿತ್ರದ ನಾಯಕಿ ಯಾರು?’
‘ಹುಡುಕ್ತಿದೀವಿ-ನಾಳೆ ನಾಡಿದ್ದರಲ್ಲಿ ಗೊತ್ತಾಗುತ್ತೆ. ಆಕೆ ನಾಯಕಿ, ಗಾಯಕಿ, ನರ್ತಕಿ, ಇಂಪ್ರೊವೈಸೇಶನ್ ತುಂಬಾ ಇರೋದ್ರಿಂದ ಆಕೆ ಚಿಂತಕಿಯೂ ಆಗಿದ್ದಾಳೆ’
‘ಅಷ್ಟು ಪ್ರತಿಭಾವಂತೆ ನಖರಾ ಮಾಡಿದರೆ?’
‘ಕಂಟಕಿ ಅಂತ ಕಿತ್ತು ಹಾಕ್ತಿವಿ’
ಎಂದು ನಿರ್ದೇಶಕ ‘ಹಹಹ’ ಎಂದು ತನ್ನ ಜೋಕ್‌ಗೆ ತಾನೇ ನಕ್ಕ.
‘ಎಲ್ಲೆಲ್ಲಿರುತ್ತೆ ಶೂಟಿಂಗ್’
‘ಇನ್‌ಡೋರ್‌ನಲ್ಲಿ ಔಟ್‌ಡೋರ್‌ನಲ್ಲಿ ‘ಇನ್‌ಡೋರ್ ಅಂದ್ರೆ ಮನೆಯಾ-ಅರಮನೆಯಾ, ರೆಸಾರ್ಟಾ, ಆಶ್ರಮವಾ, ಹೊಟೇಲಾ’
ಅದು ಹೇಳಿದರೆ ಕಥೆ ಹೇಳಿದ ಹಾಗೆ ಆಗುತ್ತೆ’
‘ಹೀಗಂದ್ರೆ ನಾವು ಏನು ಬರೀಬೇಕು?’
‘ಮನೆಮಂದಿ ಎಲ್ಲ ಕೂತು ನೋಡಬಹುದಾದ ಸೊಗಸಾದ ಕಥೆ ಚಿತ್ರ ಮಾಡ್ತಿದಾರೆ ಅಂತ ಬರೀರಿ’
‘ಹಾಡು ಎಷ್ಟಿರುತ್ತೆ?’
‘೬ ಹಾಡಿರುತ್ತೆ. ಅದರ ಶೂಟಿಂಗ್ ಎಲ್ಲೆಲ್ಲಿ ಅಂತ ಕೇಳಬೇಡಿ’
‘ಹೀಗೆ ಏನೊಂದು ವಿವರವೂ ನೀಡದೆ ಪ್ರೆಸ್‌ಮೀಟ್ ಮುಗಿಸಿದಾಗ ತಲೆ ಚಿಟ್ಟು ಹಿಡಿದಿರುತ್ತೆ.
ಅಂತದೇ ಇನ್ನೊಂದು ಪ್ರೆಸ್‌ಮೀಟ್ ‘4th ಕ್ರಾಸ್’
ಬಾಲ್ಡಿ ಬಾಲಕೃಷ್ಣನ ಆಹ್ವಾನ ಮನ್ನಿಸಿ ಪ್ರೆಸ್ ಕ್ಲಬ್ಬಿನ ಸಂತೋಷಕೂಟಕ್ಕೆ ಹಾಜರಿದ್ದರು ಎಲ್ಲ. ಸಾಧಾರಣವಾಗಿ ಮೊಗಂ ಅಗಿ ಕೂತಿರುತ್ತಿದ್ದ ಸತೀಶ್ ಅಂದು ಕೇಳಿದ
‘ನಿಮ್ಮ ಹಳೇ ಚಿತ್ರ ಅರ್ಧಕ್ಕೆ ನಿಂತಿದೆಯಲ್ಲ-ಆ ಬಗ್ಗೆ ಸ್ವಲ್ಪ ಹೇಳಿ’
`4th ಕ್ರಾಸ್’ ಚಿತ್ರದ ಬಗ್ಗೆ ಮಾತ್ರ ಮಾತಾಡೋಣ ಇಲ್ಲಿ ಹಳೇದೆಲ್ಲ ಒಂದು ಕೆಟ್ಟ ಕನಸು ಅಂತ ಮರ್ತಿದೀನಿ’ ಎಂದ ಗಂಬೀರನಾದ ಬಾಲ್ಡಿ.
‘ಸರಿ… 4th ಕ್ರಾಸ್‌ಗೆ Mr X ನಾಯಕ ಅಂತಿದ್ರಿ, ಅವರು ಜನಪ್ರಿಯ ನಟ. ಈಗ ನೀವು ನಿಮ್ಮ ಚಿತ್ರದ ನಾಯಕ ಮಿಸ್ಟರ್ y ಅಂತ ಹೇಳ್ಕೊಂಡು ತಿರುಗ್ತಿದೀರಂತೆ’ ಎಂದ ಸತೀಶ್ ಆವೇಶದಿಂದ.
‘ಅದು ಹೇಳೋಕೆ ನಾನು ವಿಶೇಷ ಪ್ರೆಸ್ ಮೀಟ್ ಕರೆದಿರೋದು. ಈಗ ನನ್ನ ಫಿಲಂಗೆ `5th ಕ್ರಾಸ್’ ಅಂತ ಹೆಸರು ಬದಲಾಯಿಸಿದೀನಿ, ಮಿಸ್ಟರ್ Yನ ನಾಯಕನಾಗಿ ಆರಿಸಿದೀನಿ’
‘ಯಾಕೆ ಈ ಬದಲಾವಣೆ?’
‘ಮಿಸ್ಟರ್ ಎಕ್ಸ್‌ಗೆ ಫುಲ್ ಡಿಮ್ಯಾಂಡ್ ಇತ್ತು ಮುಂಚೆ. ಏನು ಮಾಡ್ತೀರಿ? ಹೂವು ಬಾಡೋ ಹಾಗೆ ಆತನ ನೇಮು, ಫೇಮು ಎಲ್ಲ ಬಾಡಿ ಬಸವಳಿದಿದೆ. ಕಾಲ್‌ಷೀಟ್ ‘ಕೋ’ ಅಂತಾರೆ ಅಂತ ಕೈಚಾಚಿ ‘ತಾ’ ಅಂತ ಹೋಗ್ತಿದ್ದೆ. ಈಗ ಅವರೇ ಕೈಚಾಚಿ ‘ಚಾನ್ಸ್’ ಅಂದ್ರೂ ನಾನು ‘ಕೋ’ ಅನ್ನಲ್ಲ ಈರೋ ರೋಲ್.
‘ನೀವೇನು ನ್ಯಾಷನಲ್ ಫೇಮ್ ಡೈರಕ್ಟರ್ ಅನ್ಕೊಂಡಿದೀರಾ?’
‘ಹಾಗಂತ ಲೆಟರ್ ಹೆಡ್ಡಲ್ಲಿ ಪ್ರಿಂಟ್ ಮಾಡಿಸೋದು ಮಹಾ ಕಷ್ಟವಾ’
Ms. ಎಕ್ಸ್ ವಿಷಯ ನೀವು ಹೇಳಿದ ಹಾಗೆ ಪ್ರಿಂಟ್ ಮಾಡಿದ್ರೆ ನಿಮ್ಮ ಅಡ್ರೆಸ್ ಇರಲ್ಲ’ ‘ಯಾಕೆ ಇರಲ್ಲ, ನಾನು ಮನೆ Change ಮಾಡಿಲ್ಲ. ನಂದು ಅದೇ ಅಡ್ರೆಸ್’
‘ಮಿಸ್ಟರ್ ಎಕ್ಸ್ ಅಭಿಮಾನಿಗಳು ಹೊಡೆಯೋಕೆ ಬಂದ್ರೆ ಏನು ಮಾಡ್ತೀರಿ? ಮಿಸ್ಟರ್ ಬಾಲ್ಡಿ’
‘ನಾನು ಹಾಗೆ ಹೇಳೇ ಇಲ್ಲ ಅಂತೀನಿ’
‘ಹೇಳಿದಿರಿ ನೀವು ಅಂತ ಪ್ರೆಸ್‌ಮೀಟಲ್ಲಿ ನಾನು ಹೇಳಿಕೆ ಕೊಡ್ತೀನಿ’
‘ನಾನು ಪ್ರೆಸ್ ಮೀಟ್ ಕರೆಯೋದೆ ಇಲ್ಲ… ಹಹಹ ಎಂದು ನಕ್ಕ’ ‘ನಾನೇ ಕರೀತೀನಿ ಪ್ರೆಸ್‌ಮಿಟ್’ ಎಂದು ಅಬ್ಬರಿಸಿದ ಸತೀಶ್
‘ಖರ್ಚು ನಿಮ್ಮ ತಲೆ ಮೇಲೆ ಬೀಳುತ್ತೆ’
‘ಖರ್ಚು ಆದ್ರೇನಂತೆ. ಪತ್ರಕರ್ತನಿಗೆ ಮಾನ ಮುಖ್ಯ ಮರ್ಯಾದೆ ಮುಖ್ಯ’.
‘ಹಾಟ್ ಡ್ರಿಂಕ್ಸ್ ಪಾರ್ಟಿ ಕೊಡ್ತೀರೋ-ಸಾಫ್ಟ್ ಡ್ರಿಂಕ್ಸ್ ಪಾರ್ಟಿ ಕೊಡ್ತೀರೋ’
‘ಅದು ಯಾವುದೂ ಕೊಡಲ್ಲ-ಎಳನೀರು ಪಾರ್ಟಿ ಕೊಡ್ತೀನಿ’
‘ಹಾಟ್ ಡ್ರಿಂಕ್ಸ್ ಇದ್ರೆ ಪಾರ್ಟಿಗೆ ನಾನು ಬರೋದು’
‘ನಿನ್ನ ಯಾರು ಕೇರ್ ಮಾಡ್ತಾರೆ’ ಎಂದು ಕೆರಳಿ ಕೆಂಡವಾದ ಸತೀಶ್
‘ನಾನು ಪಾರ್ಟಿಗೂ ಬರಲ್ಲ-5th ಕ್ರಾಸ್ ಸಿನಿಮಾನೂ ತೆಗೆಯೊಲ್ಲ’
‘ಯಾಕೆ ತೆಗೆಯೊಲ್ಲ’
‘ಪ್ರೊಡ್ಯೂಸರ್ ಇನ್ನೂ ಹಣ ಕೊಟ್ಟಿಲ್ಲ ಅದಕ್ಕೆ ತೆಗೆಯೊಲ್ಲ ಸದ್ಯಕ್ಕೆ’
‘ಮುಂದಿನ ಪ್ಲಾನು’
‘ಹುಡುಕಾಟ’
‘ಅದು ಮುಂದಿನ ಚಿತ್ರದ ಟೈಟಲ್ಲಾ’
‘ಅದು ಟೈಟ್ಲೂ ಹೌದು. ಅದಕ್ಕೆ ಪ್ರೊಡ್ಯೂಸರ್ ಹುಡುಕ್ತಿರೋದು ಹೌದು’
‘ಅದರ ಹೀರೋ ಯಾರು?
‘ಯಾರು ಹಣ ಹಾಕ್ತಾರೋ ಅವರು’
`5th ಕ್ರಾಸ್‌ಗೆ Mr Y ಹೀರೋ ಮಾಡಿದ್ದು ಈ ಕಂಡೀಷನ್ ಮೇಲಾ?’
‘ಹಣ ಕೊಟ್ರೆ ಹೀರೋ ಇಲ್ಲಾ ನೀನು ಜ್ಹೀರೋ ಅಂತ ಹೇಳಿದ್ದೆ ಮುಂಚೇನೇ’
ಹೀಗೆ ಮಾತು ಎತ್ತೆತ್ತಲೋ ಹೊರಳಿ ಹಾದಿ ತಪ್ಪುತ್ತಿದ್ದಾಗ ‘ಮಿಸ್ಟರ್ X’ ಅಭಿಮಾನಿಗಳ ಒಂದು ದಂಡು ಅಬ್ಬರಿಸುತ್ತಾ ಪ್ರೆಸ್ ಕ್ಲಬ್‌ಗೆ ನುಗ್ಗಿದಾಗ ಬಾಲ್ಡಿ ಬಾಲಕೃಷ್ಣ ಮಾತ್ರವಲ್ಲ ಎಲ್ಲ ಪತ್ರಕರ್ತರೂ ಚೆದುರಿ ಚೆಲ್ಲಾಪಿಲ್ಲಿಯಾದರು… ‘ನಾನು ಪ್ರಶ್ನೆ ಕೇಳಿದಂದೆ ಹೀಗಾಯಿತಲ್ಲ’ ಎಂದು ಸತೀಶ್ ಗುಸುಗುಸು ಎನ್ನುತ್ತಿದ್ದಂತೆ ನಾನಂತೂ ಸ್ಟಾಪ್ ಬ್ಲಾಕಿನಲ್ಲಿ ಮಾಯವಾದೆ.
ಆನಂತರ ಏನಾಯಿತೋ ಪರಮಾತ್ಮನಿಗೇ ಗೊತ್ತು.
*****
(೦೫-೦೪-೨೦೦೨)