ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು- ಅಂತರ್ಜಾಲ ಆವೃತಿ: ಭಾಗ ಒಂದು

– ೧ –
ಸಹಸ್ರಮಾನದ ಹೊರಸುತ್ತು

‘ಕವಿರಾಜ ಮಾರ್ಗ’ವು ಮೊದಲು ಮುದ್ರಣಗೊಂಡು ಪ್ರಕಟವಾದದ್ದು ೧೮೯೭ರಲ್ಲಿ. ಆಗ, ಆ ತನಕ ದೊರಕಿದ್ದ ಹಳಗನ್ನಡ ಗ್ರಂಥಗಳಲ್ಲಿ ಅದೇ ಅತ್ಯಂತ ಪ್ರಾಚೀನವಾದ್ದಾಗಿ (ಕ್ರಿ.ಶ.೮೧೪-೮೭೭) ಕನ್ನಡ ವಾಙ್ಮಯದ ಪ್ರಥಮ ಉಪಲಬ್ಧ ಗ್ರಂಥವೆಂದು ಹೆಸರುಗೊಂಡಿತ್ತು. ಈಗ ನೂರು ವರ್ಷಗಳು ಕಳೆದ ಮೇಲೂ ಅದು ಹಾಗೇ ಪ್ರಥಮವಾಗಿಯೇ ಉಳಿದುಕೊಂಡಿದೆ. ಇದಕ್ಕೆ ಹಿಂದೆಯೂ ಹಲವಾರು ಕನ್ನಡ ಗ್ರಂಥಗಳು ರಚಿತವಾಗಿದ್ದುವೆಂಬುದು ನಿಶ್ಚಿತವಾಗಿ ತಿಳಿಯುತ್ತದಾದರೂ ಅವಾವುದೂ ಈತನಕ ದೊರಕಿಲ್ಲ. ಆಧ್ಯತೆಯೆನ್ನುವುದೊಂದೇ ಅಲ್ಲದೆ ಈ ಕೃತಿಗೆ ಇನ್ನೂ ಅನೇಕ ಹೆಚ್ಚಳಗಳಿವೆ. ಈ ಕಾರಣದಿಂದ ಈ ಶತಮಾನದ ಪ್ರಮುಖ ಕನ್ನಡ ವಿದ್ವಾಂಸರೆಲ್ಲರೂ ‘ಕವಿರಾಜ ಮಾರ್ಗ’ದ ಬಗ್ಗೆ ವ್ಯಾಪಕವಾಗಿ ಸಂಶೋಧನೆ-ವಿಶ್ಲೇಷಣೆ-ವಿಮರ್ಶೆಗಳನ್ನು ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ಈ ಗ್ರಂಥದ ಐದು ಆವೃತ್ತಿಗಳು ಪ್ರಕಟವಾಗಿವೆ; ಅವುಗಳಲ್ಲಿ ಕ್ರಮವಾಗಿ, ಪಾಠಗಳನ್ನು ಪರಿಷ್ಕರಿಸಲಾಗಿದೆ ಮತ್ತು ಹೊಸಹೊಸ ಅಂಶಗಳನ್ನು ಸಂಶೋಧಿಸಿ ಮಡಿಸಲಾಗಿದೆ. ಕೊನೆಯ ಆವೃತ್ತಿಯು ಗ್ರಂಥದ ಹೊಸಗನ್ನಡ ಅನುವಾದವನ್ನೂ ಒಳಗೊಂಡಿದೆ. ‘ಕವಿರಾಜ ಮಾರ್ಗ’ವನ್ನು ಕುರಿತು ನಾಲ್ಕು ಸ್ವತಂತ್ರ ಗ್ರಂಥಗಳೂ ವಿಪುಲ ಸಂಖ್ಯೆಯ ಲೇಖನಗಳೂ ಪ್ರಕಟವಾಗಿವೆ.

(ಆವೃತ್ತಿಗಳು: ೧. ಕೆ.ಬಿ.ಪಾಠಕ್ ಸಂಪಾದಿಸಿದ್ದು-೧೮೯೭; ೨.ಎ.ವೆಂಕಟರಾವ್ ಮತ್ತು ಸಂ.ಎಚ್.ಶೇಷ ಅಯ್ಯಂಗಾರ್ ಸಂಪಾದಿಸಿದ್ದು- ೧೯೩೦; ೩.ಎಂ.ವಿ.ಸೀತಾರಾಮಯ್ಯನವರು ಸಂಪಾದಿಸಿದ್ದು- ೧೯೬೮; ೪. ಅದರದೇ ಮರುಮುದ್ರಣ, ವಿದ್ಯಾರ್ಥಿಗಳಿಗೆ- ೧೯೭೩; ೫. ಡ.ಕೆ. ಕೃಷ್ಣಮೂರ್ತಿ ಅವರ ಸಂಪಾದನೆ ಹೊಸಗನ್ನಡ ಅನುವಾದಸಮೇತ- ೧೯೮೩. ಗ್ರಂಥಗಳು: ೧. ಕವಿರಾಜಮಾರ್ಗ ವಿವೇಕ- ಪಂ.ಮುಳಿಯ ತಿಮ್ಮಪ್ಪಯ್ಯ ಮೊದಲ ಭಾಗ- ೧೯೪೮- ಪೂರ್ತಾ. ೧೯೭೩;೨. ಕವಿರಾಜಮಾರ್ಗ- ಸಂ.ವಿ. ಸೀತಾರಾಮಯ್ಯ; ೨. ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಡಾ|| ಎಂ.ಎಂ.ಕಲಬುರ್ಗಿ- ೧೯೭೩; ೪. ಕವಿರಾಜಮಾರ್ಗ ಪ್ರಶಸ್ತಿ- ಭೀಮರಾವ್ ಚಿಟಗುಪ್ಪಿ- ೧೯೭೨, ವಿವರಗಳಿಗೆ ಅನುಬಂಧ ನೋಡಿ.)

ಹಿಂದಿನ ಶತಮಾನದ ತುದಿ ಮತ್ತು ಈ ಶತಮಾನದ ಐದಾರು ದಶಕಗಳಲ್ಲಿ ಅದೆಷ್ಟು ಜನ ಸಂಶೋಧಕರು ಮತ್ತು ವಿದ್ವಾಂಸರು ಅದೆಷ್ಟು ವ್ಯಾಪಕವಾಗಿ ಹಳೆಯ ಕನ್ನಡ ಸಾಹಿತ್ಯದ ಬಗ್ಗೆ ಕೆಲಸಮಾಡಿದರು ಎನ್ನುವುದನ್ನು ಪರಿಗಣಿಸಿದರೆ ಆಶ್ಚರ್ಯವಾಗುತ್ತದೆ. ಅವರೆಲ್ಲರಿಗೂ ಕೃತಜ್ಞರಾಗದೆ ಇವತ್ತು ನಾವು ನಮ್ಮ ಹಳೆಯ ಸಾಹಿತ್ಯದ ಬಗ್ಗೆ ಒಂದು ವಾಕ್ಯವನ್ನೂ ಬರೆಯಲಾರೆವು. ‘ಕವಿರಾಜ ಮಾರ್ಗ’ದ ಬಗ್ಗೆ ಬರೆಯಲು ತೊಡಗುತ್ತಿರುವಾಗ ಮೊದಲಿಗೆ ನನ್ನಲ್ಲಿ ಉಂಟಾಗುತ್ತಿರುವುದು ಈ ಗಾಢವಾದ ಕೃತಜ್ಞತೆಯ ಭಾವನೆಯೇ.

ಆಗಿನ ಸಂಶೋಧನೆಯ ಹುರುಪು ಮತ್ತು ಪಾಂಡಿತ್ಯವು ಈಚಿನ ಮೂರು ದಶಕಗಳಲ್ಲಿ ಕಾಣದಂತಾಗಿದೆ. ಇದು ಕೊಂಚ ಖೇದದ ಸಂಗತಿ. ಈಗ ಪುನಃ ನಮ್ಮಲ್ಲಿ ಸಂಶೋಧನ ಪಾಂಡಿತ್ಯಗಳ ಪ್ರಯತ್ನಗಳು ಮುಂದುವರಿಯಬೇಕು ಎನ್ನುವುದರ ಜೊತೆಗೆ, ಅದು ಹಿಂದಿನವರದ್ದಕ್ಕಿಂತ ಸೃಜನಶೀಲ ಸಾಹಸವಾಗಬೇಕು ಅಂತಲೂ ನವು ಹಾರೈಸಿಕೊಳ್ಳಬೇಕು.

ಕವಿರಾಜ ಮಾರ್ಗದ ಸ್ವರೂಪ

‘ಕವಿರಾಜಮಾರ್ಗ’ ದ ನಿಶ್ಚಿತ ಕರ್ತೃ ಮತ್ತು ನಿಶ್ಚಿತ ಕಾಲದ ಬಗ್ಗೆ ಬೇಕೆನ್ನುವಷ್ಟು ವಿದ್ವತ್ ವ್ಯಾಯಾಮಗಳು ನಡೆದಿವೆ. ಅವೆಲ್ಲವುಗಳ ಮೊತ್ತದಿಂದ ಬಹುಮತದ ಅಭಿಪ್ರಾಯವನ್ನು ಶೋಧಿಸಿ ಹೀಗೆ ಹೇಳಬಹುದು: ‘ಕ್ರಿ.ಶ. ೮೧೪-೮೭೭ರ ಅವಧಿಯಲ್ಲಿ ರಾಷ್ಟ್ರಕೂಟರ ಪ್ರಮುಖ ದೊರೆಯಾದ ಅಮೋಘವರ್ಷ ನೃಪತುಂಗನು, ಮಾನ್ಯಖೇಟ (ಈಗಿನ ಮಳಖೇಡ)ದ ರಾಜಧಾನಿಯಿಂದ ಕಾವೇರಿ-ಗೋದವರಿಗಳ ನಡುವಣ ವಿಶಾಲವಾದ ರಾಜ್ಯವನ್ನಾಳುತ್ತಿದ್ದ. ಆತನ ಸಭಾಸದನಾಗಿದ್ದ ಕವಿ ಶ್ರೀ ವಿಜಯನೆಂಬವನು ಕ್ರಿ.ಶ. ೮೭೦ರ ಸುಮಾರಿಗೆ ಈ ಕೃತಿಯನ್ನು ರಚಿಸಿರಬೇಕು; ಹಾಗಿದ್ದರೂ ಈ ಕೃತಿಯು ಮುಖ್ಯವಾಗಿ ನೃಪತುಂಗನ ಆಕಾಂಕ್ಷೆ-ಅಭಿಮತ-ಮಾರ್ಗದರ್ಶನಗಳನ್ನವಲಂಬಿಸಿ, ಆತನ ಅಂತಿಮ ಮುದ್ರಯನ್ನು ಪಡೆದು ಹೊರಬಂದಿದೆ. ಅಂದರೆ, ಪಠ್ಯರಚನೆಯು ಶ್ರೀ ವಿಜಯನದೇ ಆಗಿದ್ದರೂ ಕೃತಿಯ ಹೊಣೆಗಾರಿಕೆ ಇಬ್ಬರದ್ದೂ ಮತ್ತು ಅಂತಿಮ ಅಧಿಕೃತ ಮುದ್ರೆಯು ರಾಜಾ ನೃಪತುಂಗನದು’. ಪಂಡಿತರ ನಿರ್ಣಯಗಳಿರಲಿ, ಗ್ರಂಥವನ್ನು ನಾವು ನೇರವಾಗಿ ಓದಿಕೊಂಡಾಗ ಸರಳರೀತಿಯಲ್ಲಿ, ನಮಗೆ ಇದೇ ಕಲ್ಪನೆಯುಂಟಾಗುತ್ತದೆಯಾದ ಕಾರಣ, ನಾನೂ ಮೇಲಿನ ಸಂಗತಿಗಳನ್ನೇ ನಂಬಿಕೊಂಡಿದ್ದೇನೆ.

‘ಕವಿರಾಜಮಾರ್ಗ’ದ ‘ಸ್ವರೂಪ’ವಾದರೂ ಅಶ್ಟು ನಿಕೃಷ್ಟ-ಖಚಿತವಾದ್ದಲ್ಲ ಎನ್ನುವುದು ವಿದ್ವಾಂಸರಿಗೆ ಕಂಡಿದೆ. ಹಲವರು ಅದನ್ನು ದಾಕ್ಷಿಣಾತ್ಯನಾದ ದಂಡಿ(ಸು.ಕ್ರಿ.ಶ.೭ನೇ ಶ.)ಯ ‘ಕಾವ್ಯಾದರ್ಶ’ಮತ್ತು ಭಾಮಹ (ಸು.ಕ್ರಿ.ಶ.೭ನೇ ಶ.)ನ ‘ಕಾವ್ಯಾಲಂಕಾರ’ ವೆಂಬ ಸಂಸ್ಕೃತ ಕಾವ್ಯಾಲಂಕಾರ ಗ್ರಂಥಗಳಿಂದ ಆಯ್ದು ಅನುಮಾದಿಸಿ ಸಂಕಲಿಸಿರುವ ‘ಅನುವಾದ ಗ್ರಂಥ’ವೆಂದು ಭಾವಿಸುತ್ತಾರೆ. ಲಕ್ಷಣಕ್ಕೆ ಸಂಬಂಧಿಸಿದ ‘ಕವಿರಾಜಮಾರ್ಗ’ವು ಹಾಗೆ ಅನೇಕ ಪದ್ಯಗಳನ್ನು ಆಯ್ದು ಅನುವಾದಿಸಿಕೊಂಡಿರುವುದು ನಿಜವೇ. ಆದರೆ ಲಕ್ಷ್ಯಪದ್ಯಗಳಲ್ಲಿ ಕೆಲವೇ ಮಾತ್ರವನ್ನು ಬಿಟ್ಟರೆ, ಉಳಿದವು ಪೂರ್ತಾ ಸ್ವತಂತ್ರ ರಚನೆಗಳು. ಯಾವುದೇ ಶಾಸ್ತ್ರಗ್ರಂಥವೂ ಪರಿಭಾಷೆ-ಲಕ್ಷಣಗಳನ್ನು ಸ್ವಯಂ ಸೃಷ್ಟಿಸಿಕೊಳ್ಳಲಾರದು; ಹಳೆಯ ಗ್ರಂಥಗಳನ್ನು ಆಧರಿಸಲೇಬೇಕು. ಹಾಗೆ ನೋಡಿದರೆ, ಸಂಸ್ಕೃತದ ಯಾವುದೇ ಅಲಂಕಾರ ಗ್ರಂಥವನ್ನೂ ಅದಕ್ಕೆ ಹಿಂದಿನ ಗ್ರಂಥಗಳ ಅನುಕರಣ-ಅನುವಾದವೆಂದು ತಿಳಿಯಬೇಕಾಗುತ್ತದೆ, ಅಲ್ಲದೆ, ‘ಕವಿರಾಜಮಾರ್ಗ’ದ ಒಟ್ಟೂ ೫೭೬ (ಅಥವಾ ೫೪೧)ಪದ್ಯಗಳ ಮೊತ್ತದಲ್ಲಿ, ಸುಮಾರು ಶೇ. ೭೦ ಭಾಗ ಸ್ವತಂತ್ರವಾದವೂ ಶೇ. ೩೦ಮಾತ್ರ ಅನುವಾದಗಳಾಗಿ ತೋರುವಂಥವೂ ಇವೆ. ಈ ಕಾರಣದಿಂದ ಇದನ್ನು ‘ಅನುವಾದಗ್ರಂಥ’ವೆಂದು ಹೇಳಲಿಕ್ಕೆ ಬರುವುದಿಲ್ಲ.

ಅನುವಾದವೆನ್ನುವವರನ್ನು ಬಿಟ್ಟರೆ ಉಳಿದವರೆಲ್ಲರೂ ಇದನ್ನು ಬಹುಮಟ್ಟಿಗೆ ಸ್ವತಂತ್ರವಾದ ‘ಅಲಂಕಾರಗ್ರಂಥ’ವೆಂದು ಪರಿಗಣಿಸುತ್ತಾರೆ. ಈ ಗ್ರಂಥದ ಎರಡು-ಮೂರನೇ ಪರಿಚ್ಛೇದಗಳು ಅರ್ಥಾಲಂಕಾರ-ಶಬ್ದಾಲಂಕಾರಗಳನ್ನೇ ಕುರುತವು; ಮೊದಲನೆಯದರಲ್ಲಿ ‘ಕಾವ್ಯದೋಷ’ ಗಳ ವಿವರಣೆಯಿದೆ; ಗ್ರಂಥ ಸಮಾಪ್ತಿಯ ಚೂಲಿಕೆಯಲ್ಲಿ ‘ಕವಿರಾಜ ಮಾರ್ಗಾಲಂಕಾರಂ ಸಮಾಪ್ತಂ’ ಎಂಬ ನಿರ್ದೇಶನವಿದೆ. ಒಟ್ಟಿನಲ್ಲಿ, ಇದೊಂದು ಅಲಂಕಾರ ಗ್ರಂಥವೆಂದು ಪರಿಗಣಿಸಲು ಗ್ರಂಥದ ತುಂಬ ಸಮರ್ಥನೆಗಳಿವೆ. ಹಾಗಿದ್ದರೂ ಈ ಗ್ರಂಥದಲ್ಲಿ ಅಲಂಕಾರಶಾಸ್ತ್ರಕ್ಕೆ ನೇರವಾಗಿ ಸಂಬಂಧಪಡದ ಹಲವಾರು ವಿಷಯಗಳಿವೆ. ವ್ಯಾಕರಣ-ಭಾಷಾಶಾಸ್ತ್ರ-ಛಂದಶ್ಯಾಸ್ತ್ರ ಇತ್ಯಾದಿ ವಿಷಯಗಳಿವೆ; ಗ್ರಂಥದ ಪ್ರಾರಂಭದಲ್ಲಿ, ತುದಿಯಲ್ಲಿ ಮತ್ತು ನಡುನಡುವೆ ಕೂಡಾ ಕನ್ನಡನಾಡು-ನುಡಿ-ಸಮುದಾಯ, ಕನ್ನಡ ಸಂಸ್ಕೃತಿ-ರಾಜಕಾರಣ ಇತ್ಯಾದಿ ವಿಷಯಗಳೂ ಪ್ರಸ್ತಾಪಿತವಾಗಿವೆ. ಇದಲ್ಲದೆ, ಲಕ್ಷಣಗಳಿಗೆ ಲಕ್ಷ್ಯವಾಗಿ ರಚಿತವಾಗಿರುವ ಅನೇಕ ಪದ್ಯಗಳಲ್ಲಿ ಈ ಕೃತಿಯ ದೇಶ-ಕಾಲಗಳಿಗೆ ಸಂಬಂಧಿಸಿದ ಅನೇಕ ಸಂಗತಿಗಳು ಪ್ರಕಟಗೊಂಡಿವೆ. ಈ ಕೃತಿಗೆ ಹಿಂದಿನವಾಗಿದ್ದ ದಂಡಿ-ಭಾಮಹ-ಉದ್ಭಟ-ವಾಮನ (ಸು.ಕ್ರಿ.ಶ. ೭೭೬-೮೦೭) ಮುಂತಾದವರ ಕೃತಿಗಳೊಡನೆ ಹೋಲಿಸಿದರೆ, ಆ ಬಗೆಯ ಖಚಿತ ಸ್ವರೂಪವು ಇಲ್ಲಿ ಕಾಣುವುದಿಲ್ಲ. ಅಥವಾ ಈ ಕೃತಿಯ ಆನಂತರ ಬಂದ ನಮ್ಮ ನಾಗವರ್ಮ (ಕಾವ್ಯಾವಲೋಕನ-ಛಂದಸ್;ಸು.ಕ್ರಿ.ಶ. ೧೧೫೦) ಕೇಶೀರಾಜ (ಶಬ್ದಮಣಿದರ್ಪಣ-ವ್ಯಾಕರಣ; ಸು.ಕ್ರಿ.ಶ.೧೨೭೫) ಮುಂತಾದವರ ಗ್ರಂಥಗಳೊಡನೆ ಹೋಲಿಸಿ ನೋಡಿದರೂ ಈ ಕೃತಿಯ ಸ್ವರೂಪ ಶಿಥಿಲತೆಯು ಎದ್ದು ಕಾಣಿಸುತ್ತದೆ. ಇವೆಲ್ಲವನ್ನೂ ಗಮನಿಸಿರುವ ನಮ್ಮ ವಿಧ್ವಾಂಸರುಗಳು, ಒಟ್ಟಿನಲ್ಲಿ ಇದೊಂದು ‘ಅಲಂಕಾರ ಗ್ರಂಥ’ ವೇ ಎಂದೂ ಆದರೆ ಅನುಷಂಗಿಕವಾಗಿ ಹಲವು ಸಂಗತಿಗಳನ್ನೂ ಇದರಲ್ಲಿ ಸೇರಿಸಲಾಗಿದೆಯೆಂದೂ ತಿಳಿಯುತ್ತಾರೆ. ಗ್ರಂಥದ ಸ್ವರೂಪ ಶಿಥಿಲತೆಯ ಬಗ್ಗೆ ಕೊಂಚ ಆತಂಕವಿರುವವರೂ ಕೂಡಿ ಎಲ್ಲರೂ ಒಟ್ಟಿನಲ್ಲಿ, ಪ್ರಕ್ಷೇಪಿತವಾಗಿರುವ ಇತರ ಸಂಗತಿಗಳು ನಮಗೆ ಐತಿಹಾಸಿಕವಾಗಿ ತುಂಬ ಉಪಯುಕ್ತವಾಗಿವೆ ಎಂದು ಸಂತೋಷಿಸುತ್ತಾರೆ.

‘ಕವಿರಾಜಮಾರ್ಗ’ವನ್ನು ನಾನು ವಿದ್ವಾಂಸರ ಶ್ರಮದ ನೆರವಿನಿಂದ ಓದುತ್ತ ಬಂದದ್ದಲ್ಲದೆ, ಅವರದಕ್ಕೆ ಕೂಡಿಸಬಹುದಾದ ಹೊಸ ಪಾಂಡಿತ್ಯ ಸಂಶೋಧನೆಗಳು ನನ್ನಲ್ಲಿಲ್ಲ. ಅದರೆ ಹಲವು ದಶಕಗಳ ಓದಿನಲ್ಲಿ ನನಗೆ ಈ ಗ್ರಂಥದ ಸ್ವರೂಪವು ತುಂಬ ಭಿನ್ನವಾಗಿ ಮತ್ತು ಆ ಕಾರಣದಿಂದ ಈ ಗ್ರಂಥವು ಈತನಕ ತಿಳಿದದ್ದಕ್ಕೆ ಎಷ್ಟೋ ಪಾಲು ಹೆಚ್ಚು ಮಹತ್ವದ್ದಾಗಿ ಕಂಡಿದೆ. ಅದನ್ನೇ ನಾನಿಲ್ಲಿ ಹೇಳಿಕೊಳ್ಳಲು ತೊಡಗಿದ್ದೇನೆ.

ಪೂರ್ವದ ರಾಜ್ಯ ಪರಂಪರೆ

ಒಬ್ಬ ಕೆಮರಾಮನ್ ಯಾವುದೋ ಒಂದು ವಸ್ತುವನ್ನು ಪ್ರಸ್ತುತಕ್ಕೆ ಅತ್ಯುಪಯುಕ್ತವಾಗುವಂತೆ ಹಾಗೂ ಅತ್ಯಂತ ಧ್ವನಿಪೂರ್ಣ ಸೃಜನಶೀಲ ಚಿತ್ರವಾಗುವಂತೆ ಗ್ರಹಿಸಬೇಕೆಂದರೆ ಆತನು, ೧. ಆ ವಸ್ತುವನ್ನು ಯಾವ ಹಿನ್ನೆಲೆಯ ಪರಿಪ್ರೇಕ್ಷ್ಯದಲ್ಲಿಟ್ಟು ನೋಡಿಕೊಳ್ಳಬೇಕೆಂಬುದನ್ನು ಮತ್ತು ೨. ಕೆಮರಾವನ್ನು ಯಾವ ನೆಲೆಯ ಯಾವ ಬಿಂದುವಿನಲ್ಲಿಟ್ಟುಕೊಂಡು ಗ್ರಹಿಸಬೇಕೆಂಬುದನ್ನು ಮೊದಲಿಗೆ ನಿರ್ಧರಿಸಿಕೊಳ್ಳಬೇಕಾಗುತ್ತದೆ. ಈಯೆರಡು ಅಂಶಗಳನ್ನಾಧರಿಸಿಯೇ ಒಂದು ಚಿತ್ರದ ಅರ್ಥವಂತಿಕೆಯು ನಿರ್ಮಾಣಗೊಳ್ಳುತ್ತದೆ. ಸ್ಥೂಲ ಉದಾಹರಣೆ ಹೇಳುವುದಾದರೆ-ಒಂದು ಹೆಣ್ಣು, ಗೋರಿಯ ಎದುರು ಶೋಕಭರಿತಳಾಗಿ ಕೂತಿರುವ ಸಮೀಪಚಿತ್ರವು ನಮ್ಮಲ್ಲಿ ಹುಟ್ಟಿಸುವ ಅರ್ಥವೇ ಬೇರೆ ಮತ್ತು ಈ ಚಿತ್ರದ ಹಿನ್ನೆಲೆಯಲ್ಲಿ ವಿಶಾಲಬಯಲು, ಅನೇಕ ಗೋರಿಗಳು, ಅಲ್ಲಲ್ಲಿ ಮಂಡಿಯೂರಿ ಕೂತಿರುವ ಮನುಷ್ಯಾಕೃತಿಗಳು ಇತ್ಯಾದಿ ಕಾಣಿಸುವಂತೆ ಅದರದ್ದೇ ದೂರಚಿತ್ರವನ್ನು ಮೂಡಿಸಿದರೆ ಅದು ಹುಟ್ಟಿಸುವ ಅರ್ಥವೇ ಬೇರೆ. ಇದೇ ರೀತಿ, ಒಂದು ಚಿತ್ರವನ್ನು ಬೇರೆ ಬೇರೆ ನೆಲೆಗಳಿಂದ ನಿಂತು ನೋಡಿದಾಗಲೂ ಅದರ ಅರ್ಥವು ಬದಲಾಗುತ್ತ ಹೋಗಬಹುದು. ಈ ಮಾತು ಪ್ರಾಯಃ, ಒಂದು ಕೃತಿಗೂ ಅನ್ವಯಿಸುತ್ತದೆ. ‘ಕವಿರಾಜಮಾರ್ಗ’ದ ಆಕೃತಿಯು ನಮಗೆ ಸ್ಪಷ್ಟವಾಗಬೇಕೆಂದರೆ, ಮೊದಲನೆಯದಾಗಿ ಅದನ್ನು ಅದಕ್ಕೆ ಹಿಂದಿನ ಕನಿಷ್ಠ ಒಂದು ಸಾವಿರ ವರ್ಷಗಳ ಕನ್ನಡ-ಭಾರತ-ದಕ್ಷಿಣಭಾರತಗಳ ಇತಿಹಾಸದ ಹಿನ್ನೆಲೆಯಲ್ಲಿಟ್ಟು ನೋಡಬೇಕಾಗುತ್ತದೆ.

ಭಾರತದ ಒಟ್ಟು ಭೂಭಾಗದಲ್ಲಿ ಅತ್ಯಂತ ಪ್ರಾಚೀನವೂ ಬಹು ಸ್ಥಿರವೂ ಆದ ದಖ್ಖನ್ ಪ್ರಸ್ಥಭೂಮಿಯ ಭದ್ರಪೀಠದ ಮೆಲೆ ನಿಂತಿರುವ ಈ ಕರ್ನಾಟಕವೆಂಬ ಭೂಭಾಗವು, ಕನಿಷ್ಠ ಐದು ಲಕ್ಷ ವರ್ಷಗಳಷ್ಟು ಹಿಂದಿನಿಂದಲೂ ಮಾನವವಸತಿಯನ್ನುಳ್ಳದ್ದಾಗಿತ್ತು. ಇತಿಹಾಸದ ಮಾತಿಗೆ ಬಂದರೆ, ಭಾರತದ ಇತಿಹಾಸಕಾಲವು ಮಗಧ ರಾಜ್ಯದ ಉದಯ (ಕ್ರಿ.ಪೂ.೬೦೦)ದಿಂದ ಪ್ರಾರಂಭವಾಗುತ್ತದೆಂದೂ ಕರ್ನಾಟಕಭಾಗದ ಇತಿಹಾಸವು ಕ್ರಿ.ಪೂ. ೪ನೇ ಶತಮಾನದಿಂದ ಆರಂಭವಾಗುತ್ತದೆಂದೂ ಸಾಮಾನ್ಯವಾಗಿ ಗಣಿಸುತ್ತಾರೆ. ಕರ್ನಾಟಕಭಾಗದಲ್ಲಿ ಮೊದಲಿಗೆ ಉತ್ತರಭಾರತದ ನಂದವಂಶದವರು (ಕ್ರಿ.ಪೂ. ೩೬೨-೩೨೧)ಆಳ್ವಿಕೆ ನಡೆಸುತ್ತಿದ್ದರೆಂದು ತೋರುತ್ತದೆ. ಈ ಮಾತಿಗೆ ಆಧಾರವೆಂದರೆ, ಮುಂದೆ ಎಷ್ಟೋ ಶತಮಾನಗಳ ಆನಂತರದ ಶಾಸನಗಳಲ್ಲಿ ಹಾಗೂ ಕಾವ್ಯಗಳಲ್ಲಿ ದಾಖಲಾಗಿರುವ ಐತಿಹ್ಯಗಳು ಹಾಗೂ ನಮ್ಮ ಕಾಲದಲ್ಲಿ ಅಲ್ಲಲ್ಲಿ ದೊರಕಿರುವ ಆಕಾಲದಲ್ಲಿ ಹಳೆಯ ನಾಣ್ಯಗಳು.

ಆಮೇಲೆ ಕ್ರಿ.ಪೂ.೩-೨ನೇ ಶತಮಾನಗಳಲ್ಲಿ, ಅದೇ ಮೂಲದ ಮೌರ್‍ಯರು ಇಲ್ಲಿ ಆದಳಿತ ನಡೆಸಿದ್ದಿರಬೇಕು. ಇದಕ್ಕೆ ಆಧಾರವೆಂದರೆ, ಕ್ರಿ.ಶ.೭ನೇ ಶತಮಾನದ ಶ್ರವಣಬೆಳಗೊಳ ಶಾಸನ ಮುಂತಾದವುಗಳಲ್ಲಿ ದಾಖಲಾಗಿರುವ ಪೂರ್ವ ಐತಿಹ್ಯ. ಐತಿಹ್ಯದ ಪ್ರಕಾರ, ಚಂದ್ರಗುಪ್ತನು (ಈತನು ೧ನೇ ಚಂದ್ರಗುಪ್ತನಲ್ಲದೆ ಅವನ ಮೊಮ್ಮಗ ಸಂಪ್ರತಿ ಚಂದ್ರಗುಪ್ತನಿರಬೇಕು ಎಂಬ ಸೂಚನೆಯೂ ಇದೆ) ತನ್ನ ಗುರು ಭದ್ರಬಾಹು ಮತ್ತು ಇತರ ಕೇವಲಿಗಳೊಡನೆ ಶ್ರವಣಬೆಳಗೊಳಕ್ಕೆ ಬಂದು, ಇಲ್ಲೇ ಸಲ್ಲೇಖನ ವ್ರತದಿಂದ ಜೀವತ್ಯಾಗ ಮಾಡಿದ. ಅದಾದ ಮೇಲೆ ಮೌರ್‍ಯ ಅಶೋಕನು (ಕ್ರಿ.ಪೂ. ೨೬೮-೨೩೧) ಇಲ್ಲಿ ಆಳಿದ ಎನ್ನುವುದಂತೂ ಇಲ್ಲಿರುವ (ರಾಯಚೂರು ಜಿಲ್ಲೆಯ ಫಲ್ಕಿಗುಂಡ, ಗವಿಮಠ, ಮಸ್ಕಿ ಮತ್ತು ಚಿತ್ರದುರ್ಗ ಜಿಲ್ಲೆಯ ಜಟಿಂಗ ರಾಮೇಶ್ವರ, ಸಿದ್ದಾಪುರ. ಬ್ರಹ್ಮಗಿರಿ ಇ.,ಸ್ಥಳಗಳಲ್ಲಿರುವ) ಪ್ರಾಕೃತ ಭಾಷೆಯ ಬಂಡೆಗಲ್ಲು ‘ಧರ್ಮಶಾಸನ’ಗಳ ಮೂಲಕ ಸ್ಪಷ್ಟವಾಗುತ್ತದೆ.

ಈತನಕದ್ದು ಒಂದು ಹಂತವಾದರೆ ಮುಂದಿನ ಹಂತದಲ್ಲಿ, ಸ್ಥಳೀಯರಾದವರೇ ಈ ಭೂಭಾಗವನ್ನು ಆಳತೊಡಗಿದ್ದನ್ನು ಕಾಣುತ್ತೇವೆ. ಇವರಲ್ಲಿ ಮೊದಲಿನವರು ಮತ್ತು ಮುಖ್ಯರಾದವರು, ಸಾತವಾಹನರು; ಕ್ರಿಸ್ತಶಕಕ್ಕಿಂತ ಸ್ವಲ್ಪ ಮೊದಲಿನಿಂದ ಕ್ರಿ.ಶ.ಸು.೨೦೩ ರ ತನಕ ಈ ಭಾಗವನ್ನಾಳಿದವರು. ಇವರು ಇಲ್ಲಿನವರೇ ಎನ್ನುತ್ತಾರೆ; ಉತ್ತರದಿಂದ ಬಂದು ನೆಲೆಸಿದವರು ಅಂತಲೂ ಅನೇಕರು ಹೇಳುತ್ತಾರೆ. ಹೇಗೂ ಇವರು ದಕ್ಷಿಣಸ್ಥರಾಗಿಕೊಂಡು ಇಲ್ಲಿ ಆಳಿದರು. ಇವರಿಗೆ ‘ಆಂದ್ರ’, ‘ಆಂದ್ರಭೃತ್ಯ’, ಎಂಬ ಹೆಸರಿದ್ದಿತಾದರೂ ಆ ಹೆಸರು, ಮುಂದೆ ಎಷ್ಟೋ ಶತಮಾನಗಳ ಆನಂತರ ರೂಪುಗೊಂಡ ತೆಲಗು ಭಾಷಿಕ ರಾಜ್ಯವನ್ನು ಸೂಚಿಸುವಂಥದಲ್ಲ. ಆಗ ‘ಆಂಧ್ರ’ವೆಂಬುದು, ಒಂದು ಜನಪದ ಅಥವಾ ಕುಲವನ್ನು ಸೂಚಿಸುವುದಾಗಿತ್ತು. ಸಾತವಾಹನರ ಆನಂತರ ಇಲ್ಲಿ ಕೆಲವು ಕಾಲ ಚುಟು ವಂಶದವರು ಆಡಳಿತ ನಡೆಸಿದಂತೆ ಮತ್ತು ಸ್ವಲ್ಪ ಕಾಲ ದಕ್ಷಿಣದ ಪಲ್ಲವರು ಆಕ್ರಮಿಸಿಕೊಂಡಿದ್ದಂತೆ ತೋರುತ್ತದೆ.

ಸುಮಾರು ಕ್ರಿ.ಶ. ೨೫೦ರಿಂದ ೫೫೦ರ ತನಕ ಎರದು ಶತಮಾನಗಳ ಕಾಲ, ಕರ್ನಾಟಕದವರೇ ಎನಿಸಿಕೊಂಡ ಕದಂಬರು (ಮಧ್ಯಪಶ್ಚಿಮ ಬನವಾಸಿ ಪ್ರದೇಶದಲ್ಲಿ) ಹಾಗೂ ಗಂಗರು(ಕೋಲಾರ, ತಲಕಾಡು, ಇ.,ದಕ್ಷಿಣ ಭಾಗದಲ್ಲಿ)ಆಳ್ವಿಕೆ ನಡೆಸಿದರು. ಇದಾದಮೇಲೆ ಮುಂದೆ ಪ್ರಮುಖವಾಗಿ ಆಳಿದವರು, ಅಯೋಧ್ಯೆಯಿಂದ ಬಂದವರಿರಬಹುದಾದರೂ ಈ ಭಾಗದಲ್ಲಿ ನೆಲೆಸಿ ಸ್ಥಳೀಯರೆನಿಸಿಕೊಂಡ ಬಾದಾಮಿ ಚಲುಕ್ಯರು(ಕ್ರಿ.ಶ. ೫೪೦-೭೫೩). (ಇವರ ಶಾಸನಗಳು ಹೆಚ್ಚಾಗಿ ಇವರನ್ನು ‘ಚಲುಕ್ಯ’ರೆಂದೇ ಹೆಸರಿಸುತ್ತದೆ ಮತ್ತು ಮುಂದೆ ೧೦ನೇ ಶತಮಾನದ ಅನಂತರ ಕಲ್ಯಾಣಿಯಲ್ಲಿ ನಿಂತು ರಾಜ್ಯಭಾರ ನಡೆಸಿದ ಇದೇ ಕುಲದವರು ತಮ್ಮನ್ನು ‘ಚಾಲುಕ್ಯ’ರೆಂದು ಕರೆದುಕೊಂಡಿದ್ದಾರೆ.) ಈ ಚಲುಕ್ಯರ ಕಾಲದಲ್ಲಿ ಗಂಗರೂ ಕದಂಬರೂ ಇವರ ಮಾಂಡಲಿಕರಾಗಿ ಆಳ್ವಿಕೆ ನಡೆಸಿದಂತೆ ತೋರುತ್ತದೆ. ದಕ್ಷಿಣದ ಭೂಭಾಗಗಳೂ ಸೇರಿ ಸಮಗ್ರ ಕರ್ನಾಟಕ ಭೂಭಾಗವನ್ನು ಒಗ್ಗೂಡಿಸಿ ಆಳಿದ ಮೊದಲ ಸ್ಥಳಿಕ ರಾಜವಂಶವು ಚಲುಕ್ಯರದ್ದೇ ಎನ್ನಬಹುದು. ಇವರ ರಾಜ್ಯವು ಉತ್ತರದಲ್ಲಿ ನರ್ಮದಾ ನದಿಯತನಕ ವಿಸ್ತರಿಸಿತ್ತು ಮತ್ತು ಕೆಲವೊಮ್ಮೆ ಈಗಿನ ಮಹಾರಾಷ್ಟ್ರ, ಗುಜರಾತ್, ಮದ್ಯಪ್ರದೇಶ, ಆಂಧ್ರ, ಒರಿಸ್ಸಾ, ತಮಿಳುನಾಡಿನ ಕೆಲವು ಭಾಗ-ಇತ್ಯಾದಿಗಳೂ ಕೂಡಿದಂತೆ ವಿಶಾಲ ಭೂಭಾಗವನ್ನು ಒಳಗೊಂಡಿತ್ತು.

ಬಾದಾಮಿ ಚಲುಕ್ಯರನ್ನು ಸೋಲಿಸಿ ಮುಂದೆ ರಾಜ್ಯವಾಳಿದವರು ರಾಷ್ಟ್ರಕೂಟರು. ಇವರು ಸು.ಕ್ರಿ.ಶ. ೭೫೩ರಿಂದ ತೊಡಗಿ, ಹತ್ತನೇ ಶತಮಾನದ ಕೊನೆಯಲ್ಲಿ ಕಲ್ಯಾಣಿ ಚಾಲುಕ್ಯರಿಂದ ಪರಾಜಿತರಾಗುವತನಕ. ಎರಡು ಶತಮಾನಗಳಿಗೂ ಮಿಕ್ಕು ರಾಜ್ಯವಾಳಿದರು. ಇವರ ಮೂಲದ ಬಗ್ಗೆಯೂ ವಾದವಿವಾದಗಳಿದ್ದು, ಒಟ್ಟಿನಲ್ಲಿ ಇವರು ಇಲ್ಲಿಯೇ ನೆಲೆಸಿ ಬೆಳೆದವರಾಗಿ ಕರ್ನಾಟಕಸ್ಥರೆಂದು ಪರಿಗಣಿತರಾಗಿದ್ದರು. ಇವರೂ ಚಲುಕ್ಯರ ಹಾಗೆಯೇ ಈಗಿನ ಕರ್ನಾಟಕ ಭೂಭಾಗವಲ್ಲದೆ ಉತ್ತರದ ವಿಶಾಲಭಾಗಗಳನ್ನೂ ಕಾಲಕಾಲಕ್ಕೆ ಆಕ್ರಮಿಸಿಕೊಳ್ಳುತ್ತ ಚಕ್ರವರ್ತಿಗಳೆನ್ನಿಸಿಕೊಂಡಿದ್ದರು. ಈ ವಂಶದ ಅಮೋಘವರ್ಷ ನೃಪತುಂಗನು(ಕ್ರಿ.ಶ.೮೧೪-೮೭೭) ತನ್ನ ಹದಿನಾಲ್ಕನೇ ವಯಸ್ಸಿನ ಬಾಲ್ಯದಲ್ಲೇ ಪಟ್ಟವನ್ನೇರಿ, ಅನೇಕಾನೇಕ ಆತಂಕ-ಬಂಡಾಯ-ಆಕ್ರಮಣಗಳ ನಡುವೆಯೂ ೬೩ವರ್ಷಗಳ ದೀರ್ಘಕಾಲ ರಾಜ್ಯವನ್ನಾಳಿದ. ‘ಕವಿರಾಜಮಾರ್ಗ’ವು ಈ ಕಾಲದ ಸೃಷ್ಟಿ.

ಕನ್ನಡ ಜನಪದವಾಹಿನಿ

ನದಿಮೂಲವನ್ನು ಕೆದಕಬಾರದು ಎನ್ನುತ್ತಾರೆ. ಕೆದಕಿ ಅದನ್ನು ಕಂಡುಹಿಡಿಯುವುದು ಕಷ್ಟದ ಕೆಲಸ ಎಂಬುದಂತೂ ನಿಜ. ಹರಿವಿಗೆ ನದಿಯ ಚಹರೆಯು ಮೂಡಿ ಅದಕ್ಕೊಂದು ಹೆಸರು ಹುಟ್ಟಿಕೊಳ್ಳುವ ಮೊದಲು, ಹಲವಾರು ಒರತೆಗಳು ಕೂಡಿ ತೊರೆಗಳಾಗಿ ತೊರೆಗಳು ಕೂಡಿ ನದಿಯ ರೂಪಾಗಬೇಕು. ಆ ಮೊದಲಿನ ಒರತೆ ತೊರೆಗಳಲ್ಲಿ ಮೂಲ ಯಾವುದು ಅಂತ ನಿರ್ಧರಿಸುವುದು ಸುಲಭವಲ್ಲ. ನೃಪತುಂಗನ ಕಾಲಕ್ಕೆ ಕನ್ನಡವೆಂಬುದು ನಾಮರೂಪನಿಶ್ಚಿತವಾದ ಒಂದು ನದಿಯಂತೆ ಕಾಣುತ್ತಿದ್ದರೆ, ಅದಕ್ಕೆ ಹಿಂದೆ ಹಲವಾರು ಕಿರುವಾಹಿನಿಗಳು ಬಂದು ಕೂಡಿಕೊಳ್ಳುತ್ತಿರುವ ಹಿನ್ನೆಲೆಯ ದೃಶ್ಯವಿದೆ. ಅಂಥ ಕಿರುವಾಹಿನಿಗಳನ್ನು ಒಂದೊಂದಾಗಿ ನೋಡಬೇಕು.

ಈ ಭೂಭಾಗವು ಯಾವಾಗ ‘ಕರ್ನಾಟಕ’ವೆಂಬ ಹೆಸರು ಪಡೆಯಿತು ಮತ್ತು ಯಾವಾಗ ಕನ್ನಡ ಭಾಷೆ ಬರವಣಿಗೆಗಳು ರೂಪುಗೊಂಡವು ಮುಂತಾದ ವಿವರಗಳನ್ನು ಖಚಿತವಾಗಿ ನಿಶ್ಚಯಿಸಿಕೊಳ್ಳುವುದು ಕಷ್ಟವೇ. ‘ಕರ್ನಾಟಕ’ವೆಂಬ ಹೆಸರಿನ ಉಲ್ಲೇಖವು ಮೊತ್ತಮೊದಲಿಗೆ ‘ಮಹಾಭಾರತ”ದಲ್ಲಿ (ಕ್ರಿ.ಪೂ. ೧೫೦?) ಸಿಗುತ್ತದೆಯೆನ್ನುವುದುಂಟು. ಆದರೆ ‘ಮಹಾಭಾರತ’ದ ಕೆಲವು ಪಾಠಗಳಲ್ಲಿ ಇದಕ್ಕೆ ಬದಲು ‘ಉನ್ನತ್ಯಕ’ವೆಂಬ ಹೆಸರು ಕಾಣಿಸುತ್ತದಂತೆ. ಪುಣೆಯ ಭಂಡಾರ್ಕರ್ ಸಂಶೋಧನ ಸಂಸ್ಥೆಯವರ ಪರಿಷ್ಕೃತ-ಅಧಿಕೃತ ಆವೃತ್ತಿಯಲ್ಲಿ ‘ಉನ್ನತ್ಯಕ’ವೆಂಬ ಪಾಠವನ್ನೇ ಸ್ವೀಕರಿಸಲಾಗಿದೆ. ಇದಲ್ಲದೆ, ‘ಮೃಚ್ಛಕಟಿಕ’ ನಾಟಕ, ‘ಮಾರ್ಕಂಡೇಯ ಪುರಾಣ’, ‘ಭಾಗವತ’, ‘ಬೃಹತ್‌ಸಂಹಿತಾ’, ‘ಕಾಮಸೂತ್ರ’ ಇತ್ಯಾದಿ ಗ್ರಂಥಗಳಲ್ಲಿ ಕರ್ನಾಟಕದ ಉಲ್ಲೇಖವಿದೆ. ಆದರೆ ಈ ಗ್ರಂಥಗಳಲ್ಲಿ ಯಾವುದೂ ನಿಶ್ಚಿತ ಕಾಲನಿರ್ಣಯಕ್ಕೆ ಸಿಗುವಂಥದ್ದಲ್ಲ ಹೇಗೂ ಈ ಎಲ್ಲಾ ಗ್ರಂಥಗಳೂ ಬಹುಶಃ, ಕ್ರಿ.ಶ. ೨-೩ನೇ ಶತಮಾನಗಳಿಂದ ಹಿಂದಕ್ಕೆ ಹೋಗುವುದಿಲ್ಲ. ‘ಮಹಾಭಾರತ’ದ ಕೆಲವು ಪಾಠಗಳಲ್ಲಾದರೂ ‘ಕರ್ನಾಟಕ’ವೆಂಬ ಉಲ್ಲೇಖವಿರುವ ಕಾರಣ, ಸುಮಾರಾಗಿ ಕ್ರಿ.ಶ. ಒಂದೆರಡನೆಯ ಶತಮಾನದ ವೇಳೆಗಾದರೂ ಈ ‘ಕರ್ನಾಟ-’(ಕರ್ನಾಟಕ)ವೆಂಬ ಹೆಸರು ಬಳಕೆಯಾಗತೊಡಗಿರಬಹುದು ಅಂತ ಭಾವಿಸಲು ಸಾಧ್ಯ.

‘ಕರ್ನಾಟಕ’ವೆಂಬ ಉಲ್ಲೇಖವಲ್ಲದೆಯೇ ಕರ್ನಾಟಕದ ವಿವಿಧ ‘ಪ್ರಾಂತ’ ಅಥವಾ ಅದಕ್ಕಿಂತ ಹೆಚ್ಚಾಗಿ ‘ಜನಪದ’ಗಳಾದ ದಂಡಕ-ಕುಂತಲ-ಉನ್ನತ್ಯಕ-ಪುನ್ನಾಟ-ವನವಾಸಿಕಾ-ವೈಜಯಂತ-ರಠ್ಠಿಕ-ಪಿಠನಿಕ-ಮಹಿಷಕ ಮುಂತಾದವುಗಳ ಮತ್ತು ಇಲ್ಲಿನ ರಾಜ್ಯಕೇಂದ್ರಗಳ ಹೆಸರುಗಳು, ಬೌದ್ಧಗ್ರಂಥಗಳು-ರಾಮಾಯಣ-ಮಹಾಭಾರತದ ಕಾಲದಿಂದಲೂ(ಸು.ಕ್ರಿ.ಪೂ ೩-೨ನೇ ಶತಮಾನಗಳಿಂದ)ಉಲ್ಲೇಖಗೊಳ್ಳುತ್ತ ಬಂದಿವೆ. ಇನ್ನು, ಕ್ರಿ.ಶ. ೨ನೇ ಶತಮಾನದ ಗ್ರೀಕ್ ಭೋಗೋಲ ಲೇಖಕ ಟಾಲೆಮಿ ಎಂಬವನು ಕರ್ನಾಟಕ ಭಾಗದ ಅನೇಕ ಊರುಗಳನ್ನು ಹೆಸರಿಸಿದ್ದಾನೆ. ಇದೇ ಶತಮಾನದ ಗ್ರೀಕ್ ಪ್ರಹಸನವೊಂದರಲ್ಲಿ ಬಂದಿರುವ ಮಾತುಗಳು ಕನ್ನಡದ ಮಾತುಗಳೇ ಎಂಬುದಾಗಿ ದಿ.ಗೋವಿಂದ ಪೈ ಅವರು ಕಾಣಿಸಲೆತ್ನಿಸಿದ್ದಾರಾದರೂ ಅದು ಸರ್ವತ್ರ ಒಪ್ಪಿತವಾಗಿಲ್ಲ.

ಇಲ್ಲಿ ಗಮನಿಸಬೇಕಾದ ಅತ್ಯಂತ ಮುಖ್ಯ ಸಂಗತಿಯೆಂದರೆ, ‘ಕರ್ನಾಟಕ’,ವೆಂಬುದಾಗಲೀ ಅಥವಾ ಇದರಲ್ಲಿನ ಸಂಡಕ-ಕುಂತಲ-ಉನ್ನತ್ಯಕ-ಪುನ್ನಾಟ-ವನವಾಸಿಕಾ-ಇತ್ಯಾದಿ ಹೆಸರುಗಳಾಗಲೀ ಬಹಳಕಾಲದ ತನಕವೂ ಬಹುಶಃ, ‘ರಾಜ್ಯ’ಗಳನ್ನು ಸೂಚಿಸುವ ಹೆಸರುಗಳಾಗಿರದೆ ‘ಜನಪದ’ವನ್ನು ಸೂಚಿಸುವಂಥವಾಗಿದ್ದವು. ಸ್ಥೂಲವಾಗಿ ಹೇಳುವುದಾದರೆ, ‘ಜನಪದ’ಗಳೆಂಬವು ‘ಸಮುದಾಯ’ (ಸಾಮುದಾಯಿಕ ನಂಬಿಕೆ, ನಡಾವಳಿ, ಆಚರಣೆ, ಕಟ್ಟುಕಟ್ಟಳೆಗಳು ಇತ್ಯಾದಿ) ಕೇಂದ್ರಿತವಾದವು. ಚಕ್ರಾಧಿಪತ್ಯವೋ ರಾಜ್ಯವೋ ಅವುಗಳಮೇಲೆ ರಾಜ್ಯಾಡಳಿತವನ್ನು ಹೇರಿರುವ ಸಂದರ್ಭಗಳಲ್ಲಿಯೂ ಅವು, ರಾಜ್ಯಾಡಳಿತದ ಹೊರಕವಚದಿಂದ ಅಷ್ಟಾಗಿ ನಿಯಂತ್ರಣ ಬಯಸದೆ ತಮ್ಮದೇ ಸಾಮುದಾಯಿಕ ನಂಬಿಕೆ ಕಟ್ಟುಕಟ್ಟಳೆಗಳ ನಿಯಂತ್ರಣದಲ್ಲಿ ಬದುಕು ಸಾಗಿಸಿಕೊಂಡು ಹೋಗುತ್ತಿದ್ದವು. ಇದಕ್ಕೆ ಮುಂದಿನ ಬೆಳವಣಿಗೆಯೆಂದರೆ, ‘ಸಮುದಾಯ’ಗಳು ಕ್ರಮೇಣ ‘ರಾಜ್ಯ’ಗಳಾಗಿ ಪರಿವರ್ತನೆಗೊಳ್ಳತೊಡಗಿದ್ದು.

ನಮ್ಮಲ್ಲಿ ನಡೆದಿರಬಹುದಾದ ಈ ಪರಿವರ್ತನಕ್ರಿಯೆಯು ಸ್ಪಷ್ಟಗೊಳ್ಳಲಿಕ್ಕೆ ಉತ್ತರ ಭಾರತದ ಪೂರ್ವೇತಿಹಾಸವನ್ನು ಕೊಂಚ ಗಮನಿಸಬೇಕು. ಉತ್ತರ ಭಾರತದಲ್ಲಿ, ಮಗಧ ರಾಜ್ಯವು ಉದಯಿಸುವುದಕ್ಕೆ ಮುಂಚೆ, ಎಲ್ಲ ಕಡೆ ಹೆಚ್ಚಾಗಿ ಇಂಥವೇ ‘ಜನಪದ’ಗಳು, ತಮ್ಮದೇ ಕಟ್ಟುಕಟ್ಟಳೆಗಳಲ್ಲಿ ಸ್ವಯಂಪೂರ್ಣವೆನ್ನುವಂತೆ ಬಾಳಿಕೊಂಡಿದ್ದವು. ಇವುಗಳಲ್ಲಿ, ಮಗಧ- ಕೋಸಲ-ವತ್ಸ ಇ.,ಮಹಾಜನಪದಗಳೂ ಪಾಂಚಾಲ-ಸೂರಸೇನ-ಕಾಶೀ-ಮಿಥಿಲಾ-ಕುರು-ಅಂಗ-ವಂಗ-ಕಲಿಂಗ-ಅಶ್ಮಕ-ಗಾಂಧಾರ-ಕಾಂಬೋಜ-ಮತ್ಸ್ಯ-ಕುಶೂಲ-ಕುಲ್ಯ-ಕೋಸಲ-ಅರ್ಬುದ-ಪುಲಿಂದ-ವಜ್ಜಿ-ಮಲ್ಲ-ಚೇದಿ-ವಂಶ-ಶಾಕ್ಯ ಇ., ಕಿರುಜನಪದಗಳೂ ಪ್ರಸಿದ್ಧವಾದುವು. ಈ ಜನಪದಗಳ ಅಡಳಿತ ವ್ಯವಸ್ಥೆಯು ಎರಡು ರೀತಿಯಾಗಿದ್ದಂತೆ ತೋರುತ್ತದೆ: ಒಂದು, ‘ರಾಜ;ರ ನಿಯಂತ್ರಣದಲ್ಲಿದ್ದ ‘ರಾಜ್ಯ’ಗಳು; ಎರಡು, ರಾಜನಿಲ್ಲದೆಯೇ ಸಾಂಘಿಕವಾಗಿ ನಿರ್ವಹಣೆಗೊಳ್ಳುತ್ತಿದ್ದ ‘ಸಂಘ’ಗಳು ಮತ್ತು ‘ಗಣ’ಗಳು. ಮುಂದೆ, ವ್ಯಾಪಾರ ಸಂಪರ್ಕ ಇತ್ಯಾದಿ ಬೆಳೆದ ಅಗತ್ಯಗಳಿಂದಾಗಿ ಮತ್ತು ಹೊರಗಿನ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲಿಕ್ಕಾಗಿ ಈ ಕಿರುರಾಜ್ಯಗಳು ಹೆಚ್ಚು ಆಡಳಿತಾಧಿಕಾರವುಳ್ಳ ಮತ್ತು ಹೆಚ್ಚು ವಿಶಲವಾದ ‘ರಾಜ್ಯ’ಗಳಾಗಿ ಪರಿವರ್ತನೆಗೊಳ್ಳತೊಡಗಿದವು. ಇಂಥ ಪ್ರಕ್ರಿಯೆಯಲ್ಲೇ ಬಹುಶಃ ಮೊತ್ತಮೊದಲನೆಯದಾಗಿ ಮಗಧ ಸಾಮ್ರಾಜ್ಯವು ಉದಯವಾಯಿತೆಂದು (ಕ್ರಿ.ಪೂ. ೬೦೦) ತೋರುತ್ತದೆ. ಬುದ್ಧ ಬದುಕಿದ್ದುದು(ಕ್ರಿ.ಪೂ. ೫೬೬-೪೮೬) ಇಂಥ ಪರಿವರ್ತನೆಯ ಕಾಲದಲ್ಲಿ. ಆತನು ಶಾಕ್ಯ ಗಣಸಮುದಾಯದಲ್ಲಿದ್ದವನು; ಮಗಧಸಾಮ್ರಾಜ್ಯವು ತನ್ನೆದುರಿನಲ್ಲೇ ಕಿರು ಸಂಘ-ಗಣ ಸಮುದಾಯಗಳನ್ನು ಆಕ್ರಮಿಸಿ ಒಳಗೊಳಿಸಿಕೊಳ್ಳುತ್ತ ವಿಸ್ತಾರಗೊಳ್ಳುತ್ತ ನಡೆದದ್ದನ್ನು ಕಾಣುತ್ತಲಿದ್ದವನು. ಉತ್ತರದ ಈ ಪ್ರಕ್ರಿಯೆಯು ದಕ್ಷಿಣಭಾರತದಲ್ಲೂ ಕೊಂಚ ತಡವಾಗಿ ಕ್ರಿಸ್ತಶಕದ ಆನಂತರದ ಕಾಲದಲ್ಲಿ-ನಡೆದಂತೆ ತೋರುತ್ತದೆ.

ಕರ್ನಾಟಕ ಭೂಭಗದಲ್ಲಿ ಸ್ಥಳಿಕರೆನ್ನಿಸಿಕೊಂದವರೇ ರಾಜ್ಯವಾಳಲು ತೊಡಗಿದ್ದು ಸಾತವಾಹನರ-ಕ್ರಿಸ್ತಪೂರ್ವಕ್ಕೆ ಸ್ವಲ್ಪ ಮೊದಲಿನ-ಕಾಲದಿಂದ ಎಂಬುದನ್ನು ಗಮನಿಸಿದ್ದೇವೆ. ಆತನಕ ಈ ಭೂಭಾಗವು ಹಲವು‘ಜನಪದ’ಗಳಾಗಿ ಹಂಚಿಕೊಂಡಿದ್ದಿರಬಹುದೆಂದೂ ಮತ್ತು ಆಗಿನ ನಂದ-ಮೌರ್‍ಯರ ಚಕ್ರವರ್ತಿತ್ವವೆನ್ನುವುದು ಈ ಜನಪದಗಳ ಮೇಲೆ ಹೊರಗಿನಿಂದ ಹೊದಿಸಿದ ಹೊದಿಕೆಯಷ್ಟೇ ಅಗಿದ್ದಿರಬಹುದೆಂದೂ ಊಹಿಸಬಹುದು. ಆಮೇಲೆ ಸ್ಥಳಿಕರಾದ ಸಾತವಹನರು ಇಲ್ಲಿ ಅಡಲಿತವನ್ನು ಪ್ರಾರಂಭಿಸಿದಂದು ಈ ಭಾಗವು ‘ರಾಜ್ಯ’ವಾಗಿ ಪರಿವರ್ತನಗೊಳ್ಳುವಲ್ಲಿ ಮೊದಲ ಹೆಜ್ಜೆಯಿಟ್ಟಿತೆಂದು ಭಾವಿಸಬಹುದು.

ಈಗ ಪುನಃ ‘ಕರ್ನಟಕ’ವೆನ್ನುವ ಹೆಸರಿಗೆ ಮರಳಿ, ಸಾತವಾಹನರ ಮುಂದಕ್ಕಾದರೂ ಈ ಹೆಸರು ರಾಜ್ಯಸ್ವರೂಪದಲ್ಲಿ ಉಲ್ಲೇಖಗೊಂಡ ದಾಕಲೆ ಸಿಗುತ್ತದೆಯೆ ಅಂತ ಪರಿಶೀಲಿಸಿದರೆ, ಅದು ಕೂಡಾ ದೀರ್ಘಾವಧಿಯ ತನಕ ಕಾಣಲು ಸಿಕ್ಕುವುದಿಲ್ಲ. ಸು.ಕ್ರಿ.ಶ. ೪೬೦ಕ್ಕೆ ಪೂರ್ವದ್ದೆನ್ನುವ, ಕದಂಬ ವಿಷ್ಣುಶರ್ಮನೆಂಬುವನ ಬೀರೂರು ತಾಮ್ರಪಟ ಶಾಸನದಲ್ಲಿ, ಕದಂಬರನ್ನು ‘ಸಮಗ್ರ ಕರ್ಣಾಟದೇಶ ಭೂವರ್ಗಭರ್ತಾರಕುಂತಲಾಧೀಶ’ರೆಂದು ಹೆಸರಿಸಿಕೊಂಡಿದ್ದಿದೆ. ಆದರೆ ಈ ಶಾಸನದ ಲಿಪಿಯು ಕ್ರಿ.ಶ. ೮ನೇ ಶತಮಾನದ್ದಾಗಿದ್ದು(ಇದು ಮೂಲ ಶಾಸನವನ್ನು ಪ್ರತಿಮಾಡಿ ಬರೆಸಿದ್ದೂ ಇದ್ದೀತು) ಸಂದೇಹಾಸ್ಪದವಾಗಿದೆಯೆನ್ನುತ್ತಾರೆ. ತಲಕಾಡು ಗಂಗರ ಭೂವಿಕ್ರಮನ ಒಂದು ತಮ್ರಶಾಸನದಲ್ಲಿ (ಕ್ರಿ.ಶ.೬೩೩) ‘ಅಸ್ಯಸೀಮಾಃ ಕನ್ನಾಟಕೇ’ಎನ್ನುವ ಉಲ್ಲೇಖವಿದೆಯಂತೆ. ರಾಷ್ಟ್ರಕೂಟ ದಂತಿದುರ್ಗನ ಒಂದು ತಾಮ್ರಶಾಸನದಲ್ಲಿ (ಕ್ರಿ.ಶ. ೭೫೩) ‘ಕರ್ಣಾಟಕಂ ಬಲಂ ಅಚಿಂತ್ಯ ಮಜೇಯ ಮನ್ಯೈ’ಎಂದಿದೆ. ಪಾಂಡ್ಯರಾಜ ಪಡೈಯನ್ ಪರಾಂತಕನೆಂಬವನ ವೇಳ್ಯಕುಡಿ ತಾಮ್ರಶಾಸನ(ಕ್ರಿ.ಶ.೭೫೩) ದಲ್ಲಿ ‘ಕರುನಾಡಗನ್’ ಎಂಬ ಉಲ್ಲೇಖವಿದೆಯೆಂದೂ ಅದಲ್ಲದೆ ಮತ್ತೂ ಕೆಲವು ತಮಿಳು ಶಾಸನಗಳಲ್ಲಿ ‘ಕನ್ನಾಟ-ಕನ್ನಾಟಕ-ಕನ್ನಡಗರು’ ಮುಂತಾದ ಉಲ್ಲೇಖಗಳಿವೆಯೆಂದೂ ಹೇಳುತ್ತಾರೆ. ಶಾಸನಗಳನ್ನು ಬಿಟ್ಟರೆ, ಚಲುಕ್ಯರಾಜವಂಶದ ಚಂದ್ರಾಧಿತ್ಯನೆಂಬವನ ಮಹಾದೇವಿ, ಸಂಸ್ಕೃತ ಕವಯತ್ರಿ ವಿಜಯಾಂಬಿಕಾ ಅಥವಾ ವಿಜಯಾಂಕಾ ಅಥವಾ ವಿಜ್ಜುಕ ಎಂಬಾಕೆಯು ತನ್ನನ್ನು ‘ಕರ್ಣಾಟರಾಜಪ್ರಿಯಾ’ ಎಂದು ಕರೆದುಕೊಂಡಿರುವ ಉಲ್ಲೇಖವಿದೆ ಎನ್ನುತ್ತಾರೆ. ಒಟ್ಟಿನಲ್ಲಿ, ಕ್ರಿಸ್ತಶಕದ ಮೊದಲಿಂದ ‘ಕವಿರಾಜಮಾರ್ಗ’ದ ತನಕವೂ ನಮಗೆ ಸಿಗುವ ‘ಕರ್ಣಾಟಕ’ವೆಂಬ ಉಲ್ಲೇಖಗಳು ಬೆರಳೆಣಿಕೆಯವು.

ಇನ್ನು, ಈ ‘ಕರ್ಣಾಟಕ’ವೆಂಬುದಾದರೂ ಈ ಜನಪದ ಅಥವಾ ರಾಜ್ಯದ ಮೂಲ ಹೆಸರಾಗಿರುವಂತೆ ಕಣುವುದಿಲ್ಲ. ಅದು ಮೂಲ ಹೆಸರಿನ ಸಂಸ್ಕೃತ ಭಾಷಾರೂಪವಿದ್ದಿರಬೇಕು ಎಂಬುದು ಎಲ್ಲರ ಅನುಮಾನ. ತಮಿಳು ಶಾಸನಗಳಲ್ಲಿನಂತೆ ಪ್ರಾಚೀನ ತಮಿಳು ಕಾವ್ಯ ‘ಶಿಲಪ್ಪದಿಗಾರಂ’ ಇತ್ಯಾದಿಗಳಲ್ಲಿಯೂ ‘ಕರುನಾಡರ್’, ‘ಕರುನಾಡಗರ್’,‘ಕರುನಾಟರ್’ ಮುಂತಾದ ಹೆಸರುಗಳು ಬಂದಿವೆಯೆನ್ನುತ್ತಾರೆ. (ಮೇಲಿನ ಗ್ರಂಥಗಳ ಕಾಲವು ಅತ್ಯಂತ ವಿವಾದಾಸ್ಪದವಾದ್ದು; ಸ್ಥೂಲವಾಗಿ, ಕ್ರಿ.ಶ.೬-೭ನೇ ಶತಮಾನಕ್ಕೆ ಸೇರಿದ್ದಿರಬಹುದು.) ಇದು ಸಂಸ್ಕೃತೇತರ ಮತ್ತು ಬದಿಯ ದೇಶಿಭಾಷೆಯಲ್ಲಿನ ಉಲ್ಲೇಖವಾದ್ದರಿಂದ ಇದಕ್ಕೆ ಬಹುಶಃ, ಕೊಂಚ ಹೆಚ್ಚಿನ ಆಧಿಕೃತತೆ ಇದೆ. ಹೇಗೂ ‘ಕರ್ನಾಟ’-‘ಕರ್ನಾಟಕ’ವೆಂಬುದರ ದೇಶೀ ಮೂಲರೂಪವೆಂದು ಗಣಿಸಬಹುದಾದ ‘ಕನ್ನಡ’ ಎಂಬ ಹೆಸರು, ಮೊತ್ತ ಮೊದಲಿಗೆ ನಮ್ಮದೇ ಭಾಷೆಯಲ್ಲಿ ದಾಖಲಾಗಿದ್ದು ದೊರಕುವುದು ಕವಿರಾಜಮಾರ್ಗದಲ್ಲಿಯೇ.

ಈ ‘ಕನ್ನಡ’ವೆಂಬ ಪದದ ವ್ಯುತ್ಪತ್ತಿಯ ಬಗ್ಗೆ ವಿಪುಲವಾದ ಊಹೆ-ವಾದ-ಚರ್ಚೆಗಳು ನಡೆದಿವೆ. ಮೊಹೆಂಜೊದಾರೊದ ಪ್ರಾಚ್ಯಶೋಧದಲ್ಲಿ ಒಂದು ಮೃಣ್‌ಮುದ್ರೆಯಲ್ಲಿ (ಕಾಲ-ಸು.ಕ್ರಿ.ಪೂ.೨೫೦೦)ಒಂದು ಕಣ್ಣಿನ ಚಿತ್ರವೂ ಅದರ ಮೇಲ್ಭಾಗದಲ್ಲಿ ಒಂದು ಬಿಂದುವೂ ಇರುವುದನ್ನು ಸೂಚಿಸಿದ ರೆ|| ಫಾ|| ಹೆರಸ್ ಅವರು, ಇದರ ಅರ್ಥವು ‘ಕಣ್+ನೀರ್’ಇರಬೇಕೆಂದೂ ಅದು ಕನ್ನಡಿಗ ಜನಾಂಗವನ್ನು ಸೂಚಿಸುತ್ತದೆಂದೂ ಊಹಿಸಿದರು. ಅಲ್ಲಿಂದ ಹಿಡಿದು, ‘ಕನ್ನಡ’ವೆಂದರೆ ಕರು (ಎತ್ತರ,ವಿಶಾಲ) +ನಾಡು, ಕಳ್ ಅಥವಾ ಕಣ್ (ವೇದಕಾಲದಿಂದ ಬಂದ ಒಂದು ಜನಾಂಗ) +ನಾಡು,ಕಮ್ಮಿತು+ನಾಡು-ಇತ್ಯಾದಿ ಇತ್ಯಾದಿಯಾಗಿ ವಿದ್ವಾಂಸರು ಊಹಿಸುತ್ತ ಬಂದಿದ್ದಾರೆ. ಈ ಶಬ್ದದ ವ್ಯುತ್ಪತ್ತಿ ಏನೇ ಇರಲಿ, ‘ಕವಿರಾಜಮಾರ್ಗ’ದಿಂದ ಮುಂದಕ್ಕಂತೂ ಕನ್ನಡ-ಕರ್ನಾಟ-ಕರ್ನಾಟಕಗಳೆಂಬವು ಪ್ರಚುರವಾಗಿ ಬಳಕೆಯಾಗುತ್ತ ಬಂದಿವೆ. ಇದು ಕನ್ನಡದ ಜನವಾಹಿನಿ ಎನ್ನೋಣ.

ಭಾಷಾವಾಹಿನಿ-ಲಿಪಿ ಶಾಸನಗಳು

ಕರ್ನಾಟಕ (ಕನ್ನಡ)ವೆಂಬ ಸ್ವಲ್ಪ ಅಮೂರ್ತವಾದ ಸಂಗತಿಯಿರಲಿ, ಕನ್ನಡ ಭಾಷೆ-ಬರವಣಿಗೆ ಮುಂತಾದುವು ಬೆಳೆದುಬಂದ ಬಗೆಯನ್ನು ಕೊಂಚ ಗಮನಿಸಬೇಕು. ಇತಿಹಾಸವನ್ನು ಜಾಹೀರುಗೊಳಿಸಲಿಕ್ಕಿರುವ ಶಾಸನಗಳು ತಾವೇ ಸ್ವತಃ ಭಾಷೆ ಮತ್ತು ಬರವಣಿಗೆಗಳ ಇತಿಹಾಸವಾಗುತ್ತವಷ್ಟೆ? ಆಕಾರಣ ಒಮ್ಮೆ ಶಾಸನಪ್ರಪಂಚವನ್ನು ಪರಿಶೀಲಿಸಿ ನೋಡಬಹುದು.

ಭಾರತದಲ್ಲಿ ಮೊತ್ತಮೊದಲು ಸಿಗುವ ಶಾಸನಗಳು ಚಕ್ರವರ್ತಿ ಅಶೋಕನವು. ಅವು ಕರ್ನಾಟಕದಲ್ಲೂ ದೊರೆಯುತ್ತವೆಯಾದ್ದರಿಂದ ಭಾರತದಲ್ಲಿ ಶಾಸನಯುಗವು ಪ್ರಾರಂಭವಾದಾಗಲೇ ಕರ್ನಾಟಕ ಭಾಗದಲ್ಲೂ ಆಯಿತು ಎನ್ನಬಹುದು. ಅಶೋಕನ ಶಾಸನಗಳೆಲ್ಲವೂ ಪ್ರಾಕೃತ ಭಾಷೆಯಲ್ಲಿವೆ ಮತ್ತು ಅವುಗಳ ಲಿಪಿಯು ಬಹುಪಾಲು ‘ಬ್ರಾಹ್ಮೀ’ ಲಿಪಿಯೇ. (ವಾಯುವ್ಯ ಭಾರತದ ಗಡಿನಾಡುಗಳಲ್ಲಿ ಮಾತ್ರ ಖರೋಷ್ಠಿ ಲಿಪಿಯನ್ನು ಬಳಸಲಾಗಿದೆ.) ಮುಂದೆ ಭಾರತದಾದ್ಯಂತ ಮಾತ್ರವಲ್ಲ, ದಕ್ಷಿಣ ಏಸ್ಯಾದ ವಿಶಾಲ ಭೂಭಾಗದಲ್ಲೆಲ್ಲೆಡೆಯೂ ಶಾಸನಗಳ ಭಾಷೆ ಪ್ರಾಕೃತ ಮತ್ತು ಲಿಪಿ ಬ್ರಾಹ್ಮೀ ಎನ್ನುವಂಥ ವ್ಯವಸ್ಥೆಯು ನಡೆದುಕೊಂಡು ಬಂದಿತು. ಆಮೇಲೆ ಕೆಲವು ಶತಮಾನಗಳ ಆನಂತರ ಭಾರತ ಮತ್ತು ದಕ್ಷಿಣ ಏಸ್ಯಾದ ಶಾಸನಗಳ ಭಾಷೆಯು ಸಂಸ್ಕೃತಕ್ಕೆ ಪರಿವರ್ತನಗೊಂಡರೂ ಲಿಪಿಯಾಗಿ ಬ್ರಾಹ್ಮಿಯೇ ಮುಂದುವರಿದುಬಂತು. ಈ ಬ್ರಾಹ್ಮೀ ಲಿಪಿಯೇ ಮುಂದೆ ಕ್ರಮೇಣ, ಕಾಲದಿಂದ ಕಾಲಕ್ಕೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತ ಭಾರತ ಮತ್ತು ದಕ್ಷಿಣ ಏಸ್ಯಾದ ಅಸಂಖ್ಯಾತ ಭಿನ್ನಭಿನ್ನ ಭಾಷೆಗಳ ಭಿನ್ನಭಿನ್ನ ಲಿಪಿಗಳಾಗಿ ರೂಪುಗೊಂಡಿತು.

ಉತ್ತರ ಭಾರತದಲ್ಲಿ ಶಾಸನ ಭಾಷೆಯು ಪ್ರಾಕೃತದಿಂದ ಸಂಸ್ಕೃತಕ್ಕೆ ಬದಲಾಗತೊಡಗಿದ್ದು ಸು.ಕ್ರಿ.ಶ೨ನೇ ಶತಮಾನದ ಹೊತ್ತಿಗೆ. ರುದ್ರದಮನನೆಂಬವನ ಸು.ಕ್ರಿ.ಶ.೧೫೦ರ ಶಾಸನವೇ ಭಾರತದಲ್ಲಿ ದೊರಕಿರುವ ಮೊತ್ತಮೊದಲ ಸಂಸ್ಕೃತ ಶಾಸನ.(ಹೊರಗಿನಿಂದ ಭಾರತಕ್ಕೆ ಬಂದ ಶಕರವನಾದ ಈತನು ಶಾಸನ ಭಾಷೆಯಾಗಿ ಪ್ರಾಕೃತಕ್ಕೆ ಬದಲು ಸಂಸ್ಕೃತವನ್ನು ರೂಢಿಗೊಳಿಸಿದನೆಂಬುದು ಕುತೂಹಲಕರವಾಗಿದೆ.)ಸಂಸ್ಕೃತವು ಒಮ್ಮೆ ಶಾಸನಭಾಷೆಯಾಗಿ ಪ್ರವೇಶಿಸಿದ್ದೇ ಪ್ರಾಕೃತವು ಹಿಂದೆ ಸರಿದು ಶಾಸನಲೀಕದಿಂದ ಅದೃಶ್ಯವಾದದ್ದನ್ನೂ ಮತ್ತು ಅದಕ್ಕೆ ಬದಲಾಗಿ ಕ್ರಮೇಣ ದೇಶಭಾಷೆಗಳು ಸಂಸ್ಕೃತದ ಜೊತೆಗೆ ಶಾಸನಭಾಷೆಗಳಾಗಿ ಪ್ರವೇಶಪಡೆದದ್ದನ್ನೂ ಕಾಣುತ್ತೇವೆ.

ದಕ್ಷಿಣ ಭಾರತದಲ್ಲಿ ಶಾಸನಭಾಷೆಯು ಪ್ರಾಕೃತದಿಂದ ಸಂಸ್ಕೃತಕ್ಕೆ ಬದಲಾದದ್ದು ಬಹುಶಃ, ಕೊಂಚ ತಡವಾಗಿ. ಕರ್ನಾಟಕದಲ್ಲಿ ಸು.ಕ್ರಿ.ಶ. ೪೫೦ರ ತನಕವೂ ಪ್ರಾಕೃತಶಾಸನ ಯುಗವೇ ಮುಂದುವರಿದಂತೆ ತೋರುತ್ತದೆ. ಇಲ್ಲಿ ಅಶೋಕನ ಶಾಸನಗಳ (ಸು.ಕ್ರಿ.ಪೂ. ೨೫೦) ಅನಂತರ ಸುಮಾರು ೩೦೦-೩೫೦ ವ‌ಎಷಗಳಲ್ಲಿ ಸಿಗುವ ಶಾಸನಗಳೆಂದರೆ-ಬೆಳಗಾವಿ ಜಿಲ್ಲೆ (ವಡಗಾಂವ್-ಮಾಧವಪುರ) ಮತ್ತು ಚಿಕ್ಕಮಗಳೂರು ಜಿಲ್ಲೆ (ಹಿರೇ ಮಗಳೂರು)ಗಳಲ್ಲಿನ ಎರಡು ಶಾಸನಗಳು ಮಾತ್ರ. ಇವೆರಡೂ ಪ್ರಾಕೃತ ಯೂಪಶಾಸನ(ಯಜ್ಞನಡೆಸಿದ ದಖಲೆ) ಗಳಾಗಿದ್ದು ಮೊದಲನೆಯದರ ಕಾಲ ಸು.ಕ್ರಿ.ಪೂ. ೧ನೇ ಶತಮಾನ ಮತ್ತು ಎರಡನೆಯರದ್ದು ಸು.ಕ್ರಿ.ಶ.೧ನೆ ಶತಮಾನ. ಇದಕ್ಕೆ ಮುಂದಿನ ಸು.೩೦೦-೩೫೦ ವರ್ಷಗಳ ಅವಧಿಯಲ್ಲಿ (ಸು.ಕ್ರಿ.ಶ.೨ರಿಂದ ೫ನೇ ಶ.ದ ತನಕ)ಕೂಡಾ ಇಲ್ಲಿ ಸಿಗುವ ಶಾಸನಗಳ ಸಂಖ್ಯೆ ಕಡಿಮೆಯೇ. ೧೯೬೦ರ ದಶಕದಲ್ಲಿ ಗುಲ್ಬರ್ಗ ಜಿಲ್ಲೆಯ ಸನ್ನತಿ ಎಂಬಲ್ಲಿ, ಬೌದ್ಧ ಅವಶೇಷಗಳ ನಡುವೆ, ಮೂವತ್ತಕ್ಕೂ ಮಿಕ್ಕು ಸವೆದುಹೋದ ಕಿರುಗಾತ್ರದ ಬೌದ್ಧ ಶಾಸನಗಳನ್ನು ಶೋಧಿಸಲಾಯಿತು. ಅವಲ್ಲದೆ ಈ ಅವಧಿಯಲ್ಲಿ ಸಿಗುವ ಶಾಸನಗಳೆಂದರೆ-

ಚುಟುವಂಶದ ಮಳವಳ್ಳಿ ಶಾಸನ, ಕದಂಬರ ಮಳವಳ್ಳಿ ಶಾಸನ, ಸಾತವಾಹನರ ಮ್ಯಾಕೆದೋಣಿ ಶಾಸನ, ಚುಟುಗಳ ಬನವಾಸಿ ಶಾಸನ, ಕದಂಬರ ಬನವಾಸಿ ಶಾಸನ, ಪಲ್ಲವರ ಹಿರೇಹಡಗಲಿ ಶಾಸನ-ಮುಂತಾದ ಕೆಲವೇ ಎನ್ನುತ್ತಾರೆ. ಮೇಲಿನ ಪ್ರಾಕೃತ ಶಾಸನಗಳಲ್ಲಿ ಕೊನೊಕೊನೆಯವು, ಪ್ರಾರಂಭ-ಉಪಸಂಹಾರಗಳಲ್ಲಿ ಸಂಸ್ಕೃತವನ್ನೊಳಗೊಂಡಿದ್ದು, ಇವು ಮುಂದಿನ ಪರಿವರ್ತನೆಗೆ ಕೊಂಡಿಗೊಟ್ಟಿರುವಂತೆ ಕಾಣಿಸುತ್ತದೆ.

ಕರ್ನಾಟಕದಲ್ಲಿ ಸಂಸ್ಕೃತಭಾಷಾ ಶಾಸನಗಳ ಯುಗವು, ಈಗ ತಿಳಿದಿರುವಂತೆ, ಸು.ಕ್ರಿ.ಶ.೪೫೦(ಕದಂಬರ ತಾಳಗುಂದ ಶಾಸನ) ದಿಂದ ಮೊದಲಾಗುತ್ತದೆ. ಇಲ್ಲೂ ಶಾಸನಗಳಲ್ಲಿ ಸಂಸ್ಕೃತದ ಪ್ರವೇಶವಾಗುತ್ತಿದ್ದಂತೆ ಪ್ರಾಕೃತವು ಅದೃಶ್ಯವಾದದ್ದು ಕಂಡುಬರುತ್ತದೆ. ಮುಂದೆ ಎಲ್ಲೋ ಒಂದೆರಡು ಕಡೆಗಳಲ್ಲಿ, ಶಾಸನಮಧ್ಯದಲ್ಲಿ ಪ್ರಾಕೃತವು ಅವಶೇಷರೂಪವಾಗಿ ಉಳಿದಿರುವುದನ್ನು ಕಾಣಬಹುದು.

ಕುತೂಹಲದ ಸಂಗತಿಯೆಂದರೆ, ಇಲ್ಲಿ ಸಂಸ್ಕೃತ ಶಾಸನಯುಗವು ಪ್ರಾರಂಭವಾಗುತ್ತಿದ್ದಂತೆ ಜೊತೆಜೊತೆಯಲ್ಲೇ ಕನ್ನಡ ಶಾಸನಯುಗವೂ ಪ್ರಾರಂಭಗೊಂಡಿತೆನ್ನುವುದು. ಈಗ ಶೋಧವಾಗಿರುವ ಪ್ರಕಾರ, ನಮ್ಮ ಮೊತ್ತಮೊದಲ ಸಂಸ್ಕೃತ(ತಾಳಗುಂದ)ಶಾಸನದ ಕಾಲದಲ್ಲೇ ನಮ್ಮ ಮೊತ್ತಮೊದಲ ಕನ್ನಡ ಶಾಸನವೂ(ಕದಂಬ-ಹಲ್ಮಿಡಿ ಶಾಸನ ಸು.ಕ್ರಿ.ಶ. ೪೫೦)ನೆಟ್ಟುನಿಂತುಕೊಂಡಿತ್ತು. ಇಲ್ಲಿಂದ ಮುಂದೆ ಕರಾಮಾದ ತನಕ ಸು.೪೦೦ ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಸ್ಥಾಪಿತವಾದ ಸಂಸ್ಕೃತ ಮತ್ತು ಕನ್ನಡ ಶಾಸನಗಳ ಸಂಖ್ಯೆ ಗಣನೀಯವಿದ್ದು ಈಗ ಶೋಧವಾಗಿರುವಂಥವೇ ೭೦೦ನ್ನು ಮಿಕ್ಕುತ್ತವೆ ಎನ್ನುತ್ತಾರೆ. ಮತ್ತು, ಈ ಅವಧಿಯಲ್ಲಿ ಕ್ರಮೇಣ ಸಂಸ್ಕೃತ ಶಾಸನಗಳ ಸಂಖ್ಯೆ ತಗ್ಗುತ್ತ ಕನ್ನಡ ಶಾಸನಗಳ ಸಂಖ್ಯೆ ಏರುತ್ತ ಹೋಗುವುದನ್ನು ಕಾಣುತ್ತೇವೆ.

ಈ ಶಾಸನಗಳ ಲಿಪಿಯ ಬಗ್ಗೆ ಕೊಂಚ ಗಮನಿಸಬೇಕು. ಸಂಸ್ಕೃತ-ಕನ್ನಡಗಳೆರಡರ ಲಿಪಿಯೂ ಬ್ರಾಹ್ಮಿಯಿಂದಲೇ ರೂಪುಗೊಂದದ್ದಾದರು ನಮ್ಮ ಮೊದಲ ಸಂಸ್ಕೃತ-ಕನ್ನಡ(ತಾಳಗುಂದ-ಹಲ್ಮಿಡಿ) ಶಾಸನಗಳ ಕಾಲಕ್ಕೇ ಇವೆರಡು ಭಾಷೆಯ ಲಿಪಿಗಳು ಭಿನ್ನವಾಗಿರುವುದನ್ನು ಆ ಶಾಸನಗಳೇ ಕಾಣಿಸುತ್ತವೆ ಎನ್ನುತ್ತಾರೆ. ಮೊದಲಿಗೆ ತಮಿಳರು ತಮ್ಮ ಲಿಪಿಯನ್ನು ವೃತ್ತಾಕಾರವಾಗಿಸಿಕೊಳ್ಳುತ್ತ ಅದನ್ನು ‘ವಟ್ಟೆಳುತ್ತು’(ದುಂಡು ಬರಹ)ಎಂದು ಕರೆದುಕೊಂಡರು. ಮುಂದೆ ೧೦ನೇ ಶ.ಸುಮಾರಿಗೆ ಅವರು ಹೊಸ ‘ಪಲ್ಲವ ಗ್ರಂಥಲಿಪಿ’ಯನ್ನು ಆಧರಿಸಿ ಬದಲಿಸಿಕೊಂದರಾದರೂ ಲಿಪಿಯ ದುಂಡುತನ ಮುದುವರಿಯಿತು. ಬರವಣಿಗೆಯ ಸಾಧನಗಳ (ಉತ್ತರದಲ್ಲಿ ಭೂರ್ಜಪತ್ರ ಇ., ಮತ್ತು ದಕ್ಷಿಣದಲ್ಲಿ ತಾಡವೋಲೆ) ಭಿನ್ನತೆಯಿಂದಾಗಿ ಉತ್ತರದ ಲಿಪಿಗಳು ಚೌಕಾಕಾರವಾಗಿ ಬೆಳೆದವು. ತಮಿಳು ಮಲೆಯಾಳಮ್‌ಗಳಲ್ಲಿ ಅದನ್ನು ‘ಕೋಲೆಳುತ್ತು’(ಗೀರು ಬರಹ)ಎಂದೂ ಇದನ್ನು ‘ವಟೆಳುತ್ತು’ಎಂದೂ ಗುರುತಿಸುವುದುಂಟು.

ನಮ್ಮ ಲಿಪಿಗೆ ಸಂಬಂಧಿಸಿದ ಈ ತನಕವೂ ಬಹುಮಟ್ಟಿಗೆ ಗಮನಿಸದೆ ಹೋಗಿರುವ, ಆದರೆ ಅವಧಾರಣೆಯೊಂದಿಗೆ ಗುರುತಿಸಿಕೊಳ್ಳಲೇ ಬೇಕಾದ ಒಂದು ಸಂಗತಿಯನ್ನು ಈ ಎಡೆಯಲ್ಲೇ ಹೇಳಿಬಿಡುತ್ತೇನೆ. ಕ್ರಿಸ್ತಪೂರ್ವ ಒಂದೆರಡು ಶತಮಾನಗಳ ಹಿಂದೆ ತಮಿಳು ಭಾಷೆಯು ಬ್ರಾಹ್ಮೀ ಲಿಪಿಯಿಂದ ತನ್ನ ಲಿಪಿಮಾಲೆಯನ್ನು ರೂಪಿಸಿಕೊಳ್ಳುವಾಗ, ತನ್ನ ಭಾಷೆಯ ಉಚ್ಚಾರಣೆಗಳಿಗೆ ಎಷ್ಟು ಅಕ್ಷರಗಳು ಕರಾರುವಾಕ್ಕಾಗಿ ಅಗತ್ಯವೋ ಅಷ್ಟನ್ನೇ ಇಟ್ಟುಕೊಳ್ಳಲು ನಿರ್ಧರಿಸಿ ಬ್ರಾಹ್ಮಿಯಲ್ಲಿನ ಐವತ್ತಕ್ಕೂ ಮಿಕ್ಕಿದ ಲಿಪಿಗಳಲ್ಲಿ ಸುಮಾರು ಇಪ್ಪತ್ತಾರನ್ನು-ಸುಮಾರು ಅರ್ಧಭಾಗ-ಮಾತ್ರವೇ ಆಯ್ದುಕೊಂಡಿತು. ಅದಾಗಿ ಒಂದೆರಡು ಶತಮಾನಗಳ ಅನಂತರ ಕನ್ನಡವು ತನ್ನ ಲಿಪಿಮಾಲೆಯನ್ನು ಆಯ್ದುಕೊಳ್ಳುವಾಗ, ತತ್ಕಾಲಕ್ಕೆ ತನ್ನ ಭಾಷರೂಪಕ್ಕೆ ಅಷ್ಟು ಅಗತ್ಯವಿಲ್ಲದಿದ್ದಗ್ಯೂ ಬ್ರಾಹ್ಮಿಯ ಬಹುತೇಕ ಅಷ್ಟೂ ಲಿಪಿಗಳನ್ನೂ(ಆರನ್ನು ಕಳೆದು, ಐದನ್ನು ಕೂಡಿಸಿ, ಸುಮಾರು ಐವತ್ತನ್ನು)ಇರಲಿ ಅಂತ ಉಳಿಸಿಕೊಂಡಿತು. ಈ ಉದಾರ ನಿರ್ಧಾರದಿಂದಾಗಿ ಕನ್ನದವು ಯಾವತ್ಕಾಲಕ್ಕೂ ಅನ್ಯಭಾಷೆಗಳ ಪ್ರವೇಶ-ಅನುಸಂಧಾನಕ್ಕೆ ಒಂದಿಷ್ಟು ತೆರಪನ್ನು ಕಾಯ್ದಿರಿಸಿಕೊಂಡಿತು.

ಈಗ ಶಾಸನಗಳಿಗೆ ಮರಳಿದರೆ, ‘ಕವಿರಾಜಮಾರ್ಗ’ದ ನೆಲೆಯಲ್ಲಿ ನಮ್ಮ ಶಾಸನಪರಂಪರೆಯ ಒಟ್ಟೂ ಚಿತ್ರವು ಹೇಗೆ ಕಾಣಿಸುತ್ತದೆಂಬುದನ್ನು ಡಾ||ಕಲ್ಬುರ್ಗಿ ಅವರು (ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ-೧೯೭೩-ಪು.೧೩೮-೧೩೯)ಹೀಗೆ ರೇಖಿಸಿದ್ದಾರೆ:

“……….ಶಾಸನ ಪ್ರಪಂಚವನ್ನು ನಿರೀಕ್ಷಿಸಿದರೆ……….ನೃಪತುಂಗನ ಪಟ್ಟಬಂಧದೊಂದಿಗೆ ಕೆಳಗಣ ವಿಶಿಷ್ಟ ಬದಲಾವಣೆಗಳು ಒಡೆದು ಕಾಣುತ್ತವೆ:
೧. ಶಾಸನ ಸಂಖ್ಯೆಯಲ್ಲಿ ಕನ್ನಡ-ಸಂಸ್ಕೃತಗಳ ೧:೩ ಪ್ರಮಾಣ ನೀಗಿ ೨:೨ ಪ್ರಮಾಣ ಕಂಡುಬರಹತ್ತಿದೆ.
೨. ದಿಗ್ವಿಜಯ, ಮಹಾದಾನ, ರಾಜಪ್ರಶಸ್ತಿಗಳೆಂಬ ಮಹತ್ವಪೂರ್ಣ ವಿಷಯಗಳಿಗೆ ಸಂಸ್ಕೃತದಂತೆ ಕನ್ನಡವೂ ಬಳಕೆಯಾಗಲಾರಂಭಿಸಿದೆ.
೩. ಶುಷ್ಕ ನಿರೂಪಣೆ ಕಡಿಮೆಯಾಗಿ ಸಾಹಿತ್ಯಗುಣ ಸಂವರ್ಧಿಸುತ್ತ ನಡೆದಿದೆ.
೪. ಗದ್ಯವನ್ನು ಹಿಂದುಹಾಕಿ ಪದ್ಯ ಪ್ರಗತಿ ಹೊಂದುತ್ತಲಿದೆ.
೫. ಸಣ್ಣ ಆಕಾರಕ್ಕೆ ಬದಲು ದೊಡ್ಡ ಆಕಾರ, ಒರಟು ಬಂಡೆಗೆ ಬದಲು ನುಣುಪು ಫಲಕ, ಫಲಕದ ಮೇಲೆ ಶುದ್ಧಭಾಷೆ, ಸುಂದರ ಲಿಪಿಗಳು ಎದ್ದು ಕಾಣುತ್ತವೆ.

ಇದರಿಂದ ನೃಪತುಂಗನ ಉದಯವೆಂದರೆ ಕನ್ನಡ ಸಾಹಿತ್ಯದ ನವೋದಯ ಎಂಬ ಭಾವನೆ ಹುಟ್ಟುತ್ತದೆ. ಈ ತೀವ್ರ ಬದಲಾವಣೆ ನೃಪತುಂಗನ ಸಮಯದಲ್ಲಿ ಒಮ್ಮೆಲೇ ಮಹಾಪೂರದಂತೆ ಏರಿ ಬಂದಿದೆ.”

ಇದು ಭಾಷಾ-ಲಿಪಿವಾಹಿನಿಯ ಸ್ಥೂಲರೇಖೆ.

ಒಟ್ಟಿನಲ್ಲಿ ಹೇಳುವುದಾದರೆ, ‘ಕವಿರಾಜಮಾರ್ಗ’ತನಕದ ಹತ್ತಾರು ಶತಮಾನಗಳ ಪೂರ್ವೇತಿಹಾಸದಲ್ಲಿ ಕನ್ನಡ ಜನಪದ ಮತ್ತು ಕನ್ನಡ ಭಾಷೆಗಳು ಒಂದರೊಡನೊಂದು ಹೊಂದಿ ಒಂದನ್ನೊಂದು ಬಲಗೊಳಿಸುತ್ತ ಕ್ರಮೇಣ, ಜನಪದ-ಭಾಷೆಗಳೆರಡೂ ಬೆಸೆದುಕೊಂಡು ‘ಕನ್ನಡ’ವೆನ್ನುವ‘ಭಾಷಾಜನಪದ’ವಾಗಿ ರೂಪುಗೊಂಡವು ಎನ್ನಬಹುದು. ಈ ಪ್ರಕ್ರಿಯೆಯಲ್ಲಿ ಭಾಷೆಯು ಲಿಪಿಯುಕ್ತವಾಗಿ ಬೆಳೆದಿತಲ್ಲದೆ ಆಡಳಿತ ಶಾಸನಗಳಿಗೂ ಬಳಕೆಯಾಗುತ್ತ ಅಧಿಕೃತಗೊಳ್ಳಲು ಹವಣಿಸಿತು. ಅದಲ್ಲದೆ ಇನ್ನೊಂದು ಬೆಳವಣಿಗೆಯೆಂದರೆ ಭಾಷೆಯಲ್ಲಾದ ವಾಙ್ಮಯ ನಿರ್ಮಾಣ.

ಭಾಷಾವಾಹಿನಿ-ವಾಙ್ಮಯ, ಕಾವ್ಯ

ಕನ್ನಡ ವಾಙ್ಮಯವು ನಿರ್ಮಾಣವಾಗತೊಡಗಿದಾಗ ಅದಕ್ಕೆ ತನ್ನನ್ನು ತಿದ್ದಿಕೊಳ್ಳಲು ದೊರೆತ ಮೊದಲ ಮೇಲ್ಪಂಕ್ತಿಗಳೆಂದರೆ ಮಾರ್ಗಭಾಷೆ ಸಂಸ್ಕೃತದ ಹಾಗೂ ಪ್ರಚಲಿತವಿದ್ದ ಪ್ರಾಕೃತ-ಅಪಭ್ರಂಶ-ಪೈಶಾಚಿ-ಮತ್ತಿತರ ದೇಶಭಾಶೆಗಳ ವಾಙ್ಮಯಗಳು. ಸಂಸ್ಕೃತದಲ್ಲಿ ವೆದಾದಿಗಳಲ್ಲದೆ ಶಾಸ್ತ್ರಗಳಿದ್ದವು, ಪುರಾಣಗಳಿದ್ದವು, ಮತ್ತು ಪ್ರಾಯಶಃ, ಬೌದ್ಧರಿಂದ(ಅಶ್ವಘೋಷ; ಕ್ರಿ.ಪೂ.೧ನೇ ಶ.?)ಮೊದಲಾಗಿ, ‘ಕಾವ್ಯ’ವೆಂಬ ಹೊಸ ಪ್ರಕಾರವೂ ರೂಢಿಗೊಂಡಿತ್ತು. ಉಳಿದ ಭಾಷೆಗಳೂ ಸಂಸ್ಕೃತದ ಮಾದರಿಗಳನ್ನು ಗಮನಿಸುತ್ತ ಬೆಳೆದುಕೊಳ್ಳುತ್ತಿದ್ದವು. ಸಂಸ್ಕೃತವು ಕ್ರಮೇಣ ಕಾವ್ಯ-ನಾಟಕ ಪ್ರಕಾರಗಳನ್ನು ವಿಶೇಷವಾಗಿ ಬೆಳೆಸಿಕೊಳ್ಳುತ್ತ ನಡೆದರೆ, ಪ್ರಾಕೃತಾದಿ ಭಾಷೆಗಳು ಶಾಸ್ತ್ರ ಸಾಹಿತ್ಯಕ್ಕೆ ಪ್ರಾಧಾನ್ಯಕೊಟ್ಟುಕೊಂಡು ಜತೆಗೆ ಪುರಾಣಗಳನ್ನೂ ತಮ್ಮದೇ ವೈಶಿಷ್ಟ್ಯವೆನ್ನುವಂಥ ಗದ್ಯ ಕಥಾಸಾಹಿತ್ಯವನ್ನೂ ಬೆಳೆಸಿಕೊಳ್ಳುತ್ತ ಹೋದವು. ಪ್ರಾಕೃತದ ಉಪಲಬ್ಧ ಆಧ್ಯಗ್ರಂಥಗಳಲ್ಲೊಂದೆನಿಸಿದ ಕನ್ನಡ ಕುಂತಲಾಧಿಪತಿ ಸಾತಕರ್ಣಿ ಹಾಲರಾಜನ(ಸು.ಕ್ರಿ.ಶ. ೧ನೇಶ.)‘ಗಾಥಾಸಪ್ತಶತಿ’ಯು ಹಲವು ರೀತಿಗಳಲ್ಲಿ ಗಣನೀಯವಾದ್ದು. ಅದು ಬಹುಶಃ, ಆ ಕಾಲದಲ್ಲಿ ಅಲ್ಲಿನ ಜನಪದಗಳಲ್ಲಿ ಮೌಖಿಕವಾಗಿ ಸಂಚಲನಗೊಳ್ಳುತ್ತಿದ್ದ ಸ್ಥಳಭಾಷೆಗಳ ಕವಿತಾಮುಕ್ತಕಗಳನ್ನು ಪ್ರಾಕೃತಭಾಷೆಗೆ ಪರಿವರ್ತಿಸಿ ಸಂಕಲಿಸಿರುವಂಥದು. ಇದನ್ನು ಹಿಂಬಾಲಿಸಿ ತಮಿಳುಭಾಷೆಯಲ್ಲಿ ಈ ಮಾದರಿಯ ಬೃಹತ್‌ಪ್ರಯತ್ನಗಳು ನಡೆದಂತೆ ತೋರುತ್ತದೆ. ‘ಸಂಗಂ’ ಎಂದು ಹೆಸರಾಗಿರುವ, ಬಹುಶಃ ಕವಿ-ರಸಿಕ-ರಾಜಗೋಷ್ಠಿಗಳು ಕಾಲಕಾಲಕ್ಕೆ(ಕ್ರಿ.ಶ. ೩ನೇ ಶ. ದಿಂದ ೬ರ ತನಕ ಇದ್ದೀತು)ತಮಿಳು ಬಹುಸಂಖ್ಯೆಯಲ್ಲಿದ್ದಿರಬಹುದಾದ ಈ ಸಂಕಲನಗಳಲ್ಲಿ ಈಗ ಎಂಟು ಸಂಕಲನಗಳು(ಮತ್ತು ಹತ್ತು ದೀರ್ಘಪದ್ಯಗಳು)ಮಾತ್ರವೇ ದೊರೆತಿವೆ. ಈ ಕವಿತಾರಾಶಿಯು ತಮಿಳು ಭಾಷೆಯ ಸಮಸ್ತವಾಙ್ಮಯದಲ್ಲೇ ಉತ್ಕೃಷ್ಟವಾದವೆಂದು ಪರಿಗಣಿತವಾಗಿವೆ. ಈ ಸಂಕಲನಗಳು ಮತ್ತು ಅವುಗಳ ತುದಿಯಲ್ಲಿ ಬಂದ ‘ಮಣಿಮೇಖಲೈ’ (ಬೌದ್ಧ) ಹಾಗೂ ‘ಶಿಲಪ್ಪದಿಗಾರಂ’ಗಳನ್ನು ಹಿಂಬಾಲಿಸಿ ‘ತೋಳ್ಕಾಪ್ಪಿಯಂ’(ಭಾಷಾ-ಕಾವ್ಯ ಶಾಸ್ತ್ರ)ರಚಿತವಾಗಿರಬಹುದೆಂದು ತೋರುತ್ತದೆ.

ಕನ್ನಡಕ್ಕೆ ಬಂದರೆ, ‘ಕವಿರಾಜಮಾರ್ಗ’ದ ತನಕ ಯಾವುದೇ ಕನ್ನಡ ಗ್ರಂಥವು ಉಪಲಬ್ಧವಾಗಿಲ್ಲದ ಕಾರಣ ಅವಶೇಷಗಳ ಅಧಾರದ ಮೇಲೆಯೇ ನಾವು ಆ ಕಾಲದ ಸಾಹಿತ್ಯೇತಿಹಾಸವನ್ನು ಗುರುತಿಸಬೇಕು. ಮೊದಲನೆಯದಾಗಿ-ಸಾತವಾಹನ ಹಾಲರಾಜನ ಪ್ರಾಕೃತ ಕವಿತಾ ಮುಕ್ತಕ ಸಂಕಲನ ‘ಗಾಥಾ ಸಪ್ತಶತಿ’ಯಲ್ಲಿ ಹಲವು ಕನ್ನಡ ಪ್ದಗಳು ನುಸುಳಿಕೊಂಡಿವೆಯೆನ್ನುವುದು ಕುತೂಹಲ ಹುಟ್ಟಿಸುತ್ತದೆ. ಆತನು ಕನ್ನಡದ ನಡುವಣ ಕುಂತಲವನ್ನು ಆಳುತ್ತಿದ್ದವನಾದ್ದರಿಂದ, ಕನ್ನಡದ ಆಕಾಲದ ಮೌಖಿಕ ಜಾನಪದ ಹಾಡುಗಳನ್ನು ಪ್ರಾಕೃತಕ್ಕೆ ಪರಿವರ್ತಿಸಿ ಸಂಕಲಿಸಿರುವುದು ಸಾಧ್ಯ. ಹಾಗೆ, ‘ಗಾಥಾ ಸಪ್ತಶತಿ’ಯು ಕನ್ನಡದ ಆದಿಮ ಮೌಖಿಕ ಕವಿತೆಗಳ ಅಂಕುರಗಳನ್ನು ಕಾಣಿಸೀತು. ಎರಡನೆಯದಾಗಿ-ಶಾಸನಗಳು ಕೊಡುವ ಶಿಲಾಸಾಕ್ಷಿಯೆಂದರೆ, ಈ ಅವಧಿಯಲ್ಲಿ ಕನ್ನಡ ಗದ್ಯ-ಪದ್ಯಗಳೆರಡೂ ಸಾಹಿತ್ಯ ಕ್ಷಮತ್ವವನ್ನು ರೂಢಿಸಿಕೊಳ್ಳುತ್ತ ಕ್ರಮೇಣ ಪ್ರೌಢತೆಯ ಹಂತಕ್ಕೆ ತಲುಪಿದವು ಎನ್ನುವುದು. ಆಗಿನ ಶಾಸನಕವಿತೆಗಳು ಸಂಸ್ಕೃತ ಪ್ರಾಕೃತ ದತ್ತವಾದ ಅಕ್ಷರವೃತ್ತ ಮಾತ್ರಾ ವೃತ್ತಗಳಲ್ಲದೆ ದೇಶೀ ಬಂಧಗಳಾದ ತ್ರಿಪದಿ, ಅಕ್ಕರಗಳನ್ನೂ ಬಳಸಿದ್ದನ್ನು ಕಾಣುತ್ತೇವೆ. ಮೇಲಿನ ಮಾತುಗಳಿಗೆ ಉದಾಹರಣೆಯಾಗಿ ಎರಡು ಶಾಸನಪದ್ಯಗಳನ್ನು ನೋಡಬಹುದು:

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ಮಂಜುವೋಲ್ ತೋರಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ ನಿಲ್ಲದಾರ್ಗಂ
ಪರಮಾರ್ಥಂ ಮೆಚ್ಚೆ ನಾನೀ ಧರಣಿಯನುಳಿವಾನೆಂದು ಸನ್ಯಾಸನಂ ಗೆ-ಯ್ದುರು ಸತ್ವನ್ನಂದಿಸೇನ ಪ್ರವರ ಮುನಿವರನ್ದೇವಲೋಕಕೆ ಸಂದಾನ್|”
(ವೃತ್ತ: ಶ್ರವಣಬೆಳುಗೊಳ-ಸು.ಕ್ರಿ.ಶ.೭೦೦)

“ಸಾಧುಗೆ ಸಾಧು ಮಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ-ವಿಪರೀತನ್
ಮಾಧವನೀತನ್ ಪೆಱನಲ್ಲ”
(ತ್ರಿಪದಿ: ಕಪ್ಪೆ‌ಆರಭಟ್ಟನ ಶಾಸನ-ಬಾದಾಮಿ ಸು.ಕ್ರಿ.ಶ.೭ನೇ ಶ.)

ಮೂರನೆಯದಾಗಿ-‘ಕವಿರಾಜಮಾರ್ಗ’ಸ್ವತಃ ಕೆಲವು ಗ್ರಂಥಕರ್ತರನ್ನುಲ್ಲೇಖಿಸುತ್ತ ಅವರಲ್ಲಿ, ವಿಮಲ-ಉದಯ(ಅಥವಾ ವಿಮಲೋದಯ)-ನಾಗಾರ್ಜುನ-ಜಯಬಂಧು-ದುರ್ವಿನೀತರನ್ನು ಗದ್ಯ ಕವಿಗಳೆಂದೂ ಶ್ರೀ ವಿಜಯ-ಕವೀಶ್ವರ-ಪಂಡಿತ-ಚಂದ್ರ(ಅಥವಾ ಪಂಡಿತಚಂದ್ರ)ಲೋಕಪಾಲಕರನ್ನು ಪದ್ಯಕವಿಗಳೆಂದೂ ಪಟ್ಟಿ ಕೊಡುತ್ತದೆ. ಅಲ್ಲದೆ, ಕಾವ್ಯ-ಗದ್ಯಕಥೆ-ಬೆದಂಡೆ-ಚತ್ತಾಣ-ಹಗರಣ ಮುಂತಾದ ಪ್ರಕಾರಗಳು ಕನ್ನಡದಲ್ಲಿರುವುದನ್ನೂ ಇದು ದಾಖಲಿಸುತ್ತದೆ. ಜತೆಗೆ ‘ಕವಿರಾಜಮಾರ್ಗ’ದ ಒಟ್ಟೂ ಓದಿನಲ್ಲಿ ನಮಗೆ, ಕನ್ನಡದಲ್ಲಿ ಆ ಕಾಲಕ್ಕೆ ಸಾಕಷ್ಟು ಗಾತ್ರದ ವಿವಿಧ ರೀತಿಯ ವಾಙ್ಮಯರಾಶಿಯಿದ್ದಿತೆಂಬ ಭಾವನೆಯುಂಟಾಗುತ್ತದೆ.

ನಾಲ್ಕನೆಯದಾಗಿ- ಮುಂದಿನ ಕಾಲದಲ್ಲಿ ಬಂದ ಕಾವ್ಯಾಲೋಕನ(ನಾಗವರ್ಮ), ಶಬ್ದಮಣಿದರ್ಪಣ(ಕೇಶಿರಾಜ), ಸೂಕ್ತಿಸುಧಾರ್ಣವ(ಮಲ್ಲಿಕಾರ್ಜುನ-ಪದ್ಯಸಂಕಲನ ಸು.ಕ್ರಿ.ಶ.೧೨೫೦) ಇ. ಗಳಲ್ಲಿ ಉದಾಹೃತವಾಗಿರುವ ಪದ್ಯಗಳು ಮತ್ತು ಕವಿತೆಗಳ ಹೆಸರುಗಳಲ್ಲಿ ಹಲವರು ‘ಕವಿರಜಮಾರ್ಗ’ಕ್ಕೆ ಪೂರ್ವಕಾಲದಲ್ಲಿದ್ದವರೆಂದು ತೋರುತ್ತದೆ. ಹಾಗೇ, ಅದಕ್ಕೂ ಮುಂದೆ ಬಂದ ಕೃತಿಗಳಲ್ಲಿ ಪೂರ್ವಕವಿಗಳ ಸ್ಮರಣೆಮಾಡುವಾಗ ಹಲವಾರು ಹೆಸರುಗಳು ಉಲ್ಲೇಖಗೊಂಡಿದ್ದು ಅವುಗಳಲ್ಲಿ ಕೂಡಾ ಕೆಲವು ‘ಕವಿರಾಜಮಾರ್ಗ’ ಪೂರ್ವದ ಗ್ರಂಥಕಾರರಿದ್ದಿರಬೇಕೆಂದು ಊಹಿಸಲಾಗಿದೆ.

ಈಯೆಲ್ಲ ಅವಶೇಷಗಳ ಶೋಧನೆಯಿಂದ ಸಂಶೋಧಕ ವಿದ್ವಾಂಸರು ವ್ಯಕ್ತಗೊಳಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಹೀಗೆ ಹೇಳಬಹುದು: ‘ಕವಿರಾಜಮಾರ್ಗ’ ಪೂರ್ವದ ಕನ್ನಡದಲ್ಲಿ, ಶಾಸ್ತ್ರವಿಷಯವೂ ಕೂಡಿ ನೂರಾರು ಗ್ರಂಥಗಳು ರಚನೆಯಾಗಿದ್ದಿರಬೇಕು ಮತ್ತು ಅವುಗಳಲ್ಲಿ ನಾಲ್ಕಾರಾದರೂ ಉತ್ತಮದರ್ಜೆಯ ‘ಮಾರ್ಗಕಾವ್ಯ’ಗಳಿದ್ದಿರಬೇಕು. ‘ಕವಿರಾಜಮಾರ್ಗ’ ಅನಂತರದ ಒಂದು ಶತಮನದೊಳಗೆ ಪ್ರಕಟಗೊಂಡ ಪಂಪನ ಕೃತಿಗಳು ಮತ್ತು ‘ಕವಿರಾಜಮಾರ್ಗ’ದ ಹಿಂದೆಯೋ ಮುಂದೆಯೋ ಪ್ರಕಟವಾಗಿರಬಹುದಾದ ‘ವಡ್ಡಾರಾಧನೆ’(ಗದ್ಯಕಥೆ)ಇವುಗಳನ್ನು ನೋಡಿದರೂ ಸಕು, ಆ ಕಾಲಕ್ಕೆ ಕನ್ನಡ ಭಾಷೆಯು ಕಾವ್ಯನಿರ್ವಹಣೆಗೆ ತಕ್ಕುದಾದ ಪ್ರೌಢಿಮೆಯನ್ನು ಗಳಿಸಿಕೊಂಡಿತ್ತೆನ್ನುವುದು ಅರಿವಾಗುತ್ತದೆ.

ಕಲಾವಾಹಿನಿ-ಚಿತ್ರವಾಸ್ತಿಶಿಲ್ಪ

ಯಾವುದೇ ನಾಗರಿಕ ಸಮುದಾಯಕ್ಕೆ ಸ್ವಂತಿಕೆಯ ಚಹರೆಯನ್ನು ಮೂಡಿಸಿಕೊಡುವ ಸಾಧನೆಗಳಲ್ಲಿ ಭಾಷೆ-ಲಿಪಿ-ವಾಙ್ಮಯ-ಸಾಹಿತ್ಯಗಳ ಜತೆಗೆ ಕಲಾಮಾಧ್ಯಮಗಳೂ ಸೇರಿಕೊಳ್ಳುತ್ತವೆ. ಹೀಗೆ ಕನ್ನಡಕ್ಕೆ ಸ್ವಂತಿಕೆಯ ಚಹರೆ ಮೂಡಿಸಿಕೊಟ್ಟ ಕಲಾಮಾಧ್ಯಮಗಳಲ್ಲಿ, ಕೊಂಚ ಆಧಾರಸಮೇತ ಹೇಳಬಹುದಾದ ಚಿತ್ರ-ಶಿಲ್ಪ-ವಾಸ್ತುಕಲೆಗಳನ್ನು ಪ್ರಾತಿನಿಧಿಕವೆಂದು ಭಾವಿಸಿ, ಅವುಗಳ ಇತಿಹಾಸ ಘಟ್ಟಗಳನ್ನು ಗಮನಿಸಬಹುದು. ಪ್ರಾಗೈತಿಹಾಸಿಕ ಅವಶೇಷಗಳ ಮೂಲಕ್ಕೆ ಹೋದರೆ, ಭಾರತದಲ್ಲಿ ಮಧ್ಯಪ್ರದೇಶದ ಭೀಮ್‌ಟೇಕಾ ಮುಂತಾದಲ್ಲಿ ಸು.ಕ್ರಿ.ಪೂ. ೧೦-೧೨ ಸಾವಿರ ವರ್ಷಗಳಷ್ಟದರೂ ಹಿಂದಿನ ಗುಹಾಚಿತ್ರಗಳು ದೊರಕುತ್ತವೆ. ಅದೇರೀತಿ ಕರ್ಣಾಟಕದ ರಾಯಚೂರು ಜಿಲ್ಲೆಯ ಹಿರೇಬೆಣಕಲ್, ಪಿಕಳಿಹಾಳ ಮುಂತಾದಲ್ಲಿ ಸು.ಕ್ರಿ.ಪೂ.೬-೮ ಸಾವಿರ ವರ್ಷಗಳಷ್ಟು ಹಿಂದಿನ ಗುಹಾಚಿತ್ರಗಳು (ರೇಖಾಚಿತ್ರ-ಏಕವರ್ಣಚಿತ್ರಗಳು) ದೊರಕುತ್ತವೆ.

ಇತಿಹಾಸಕಾಲಕ್ಕೆ ಬಂದರೆ, ಭಾರತದ ಕಲಾವಸ್ತುಗಳ(ಮುಖವಾಗಿ ಸ್ತೂಪ-ಚೈತ್ಯ-ವಿಹಾರ-ದೇವಾಲಯ ಇ.,)ಪ್ರಾರಂಭವು ಬಹುಮಟ್ಟಿಗೆ ಬೌದ್ಧರಿಂದ ಆದಂತೆ ತೋರುತ್ತದೆ. ಆರಂಭದ ಮಾದರಿಗಳಲ್ಲಿ ಅತ್ಯಂತ ಗಣನೀಯವಾದುವೆಂದರೆ, ಸು.ಕ್ರಿ.ಪೂ.ಎರಡನೇ ಶತಮಾನದ ಸಾಂಚಿ, ಭಾರ್ಹೂತ್. ಮುಂತಾದಲ್ಲಿನ ಬೃಹತ್ ಸ್ತೂಪಗಳು. ಇವು ಇಟ್ಟಿಗೆಗಳಲ್ಲಿ ಕಟ್ಟಿದಂಥವು. ಇವುಗಳ ಜೊತೆಜೊತೆಗೇ ಪ್ರಾಯಃ, ಭಾರೀ ಬಂಡೆಗಳನ್ನು ಕೊರೆದು ಗುಹಾಲಯಗಳನ್ನು ರೂಪಿಸುವ ಯತ್ನಗಳು ನಡೆದವು. ಈ ಗುಹಾಲಯಗಳು ಭಾರತದ ಅನೇಕ ಕಡೆಗಳಲ್ಲಿ ಕಾಣಿಸುತ್ತವಾದರೂ ದಖ್ಖನ್‌ನ ಪಶ್ಚಿಮ ಸೆರಗಿನಲ್ಲಿ ಮತ್ತು ಈಗಿನ ಆಂಧ್ರದ ಅಮರಾವತಿ-ನಾಗಾರ್ಜುನ ಕೊಂಡಗಳಲ್ಲಿ ನಿರ್ಮಾಣಗೊಂಡ ಗುಹೆ-ಗುಹಾಲಯ ಸರಣಿಗಳು ಅಸಾಧಾರಣ ಕೌಶಲಗಳಿಂದ ಕೂಡಿ ಇಡೀ ಜಗತ್ತಿನ ಗಮನವನ್ನು ಸೆಳೆದಿವೆ. ಸು.ಕ್ರಿ.ಪೂ. ೨ನೇ ಶತಮಾನದಿಂದ ಪ್ರಾರಂಭವಾಗಿ ಸು.ಕ್ರಿ.ಶ.೨ನೇ ದಶಕದ ತನಕ ನಿರ್ಮಾಣಗೊಂಡ ಅಜಂತಾದ ಗುಹೆಗಳಲ್ಲಿನ(೨೭ಗುಹೆಗಳು)ವಾಸ್ತು ಮತ್ತು ವರ್ಣಚಿತ್ರಕಲೆ ಹಾಗೂ ಎಲ್ಲೋರಾದ ಗುಹೆಗಳಲ್ಲಿನ(೩೪ಗುಹೆಗಳು) ವಾಸ್ತು-ಪ್ರತಿಮಾಶಿಲ್ಪಗಳು ಬಹು ಪ್ರಸಿದ್ದವಾಗಿವೆ. ಬೌದ್ಧ ವಾಸ್ತುಗಳನ್ನು ಹಿಂಬಾಲಿಸಿ ಬಹುಶಃ ವೈದಿಕ ದೇವಾಲಯಗಳು ನಿರ್ಮಾಣಗೊಳ್ಳತೊಡಗಿದವು. ಈ ಅವಧಿಯಲ್ಲಿ, ಒಂದು ಕಡೆ ಶಾಬ್ದಿಕ ಭಾಷೆಗಳು ಅದ್ಭುತಪುರಾಣಗಳನ್ನು ಸೃಷ್ಟಿಸುವುದರಲ್ಲಿ ಮಗ್ನವಾಗಿದ್ದಾಗ ಹಾಗೆ ಇನ್ನೊಂದು ಕಡೆ ಅದಕ್ಕೆ ಸಮಾನಾಂತರವಾಗಿ ಪುರಾಣಶಿಲ್ಪಗಳ ಸೃಷ್ಟಿಯೂ ನದೆಯಿತೆನ್ನುವುದು ಗಮನಾರ್ಹವಾಗಿದೆ.

ಈ ಅವಧಿಯಲ್ಲೇ ಆಗ ಕರ್ಣಾಟಕ ಭೂಭಗವನ್ನಾಳುತ್ತಿದ್ದ ಸಾತವಾಹನರು ಭಾರೀ ಉತ್ಸಾಹದಿಂದ ಗುಹಾಲಯ ನಿರ್ಮಾಣದಲ್ಲಿ ತೊಡಗಿಕೊಂಡರು. ಇವರು ಪಶ್ಚಿಮ ಸೆರಗಿನ ಬೇಡ್ಸೆ, ಕಾರ್ಲೆ, ಕನ್ಹೇರಿ, ಜುನ್ನರ್, ಪನ್ನಾಳಾ, ಕೊಂಡಾಣೆ, ನಾಸಿಕ, ಇ. ಸ್ಥಳಗಳಲ್ಲಿ ಹಾಗೂ ಈಗಿನ ಆಂಧ್ರದ ಅಮರಾವತಿ, ನಾಗಾರ್ಜುನಕೊಂಡಗಳಲ್ಲೂ ಚೈತ್ಯ-ವಿಹಾರ-ಸ್ತೂಪಗಳನ್ನು ನಿರ್ಮಿಸಿದರು. ಇವುಗಳಲ್ಲಿ ಕಾರ್ಲೆಯ ಚೈತ್ಯಾಲಯವು ಬೃಹದಾಕಾರದ್ದಿದ್ದು(೩೨೪ಅ.ಉದ್ದ, ೪೬೧ಅ.ಅಗಲ,೪೫ಅ.ಎತ್ತರ)ಆ ಕಾಲದ ವಾಸ್ತುಕಲೆಯ ಶಿಖರ ಸಾಧನೆಯೆನ್ನಿಸಿಕೊಂಡಿದೆ. ಅಜಂತಾದಲ್ಲಿನ ಎರಡು ಗುಹೆಗಳು ಇವರ ಕಾಲದಲ್ಲೇ ನಿರ್ಮಿತವಾದವು.

ಸಾತವಾಹನರ ಅನಂತರ, ಅಪ್ಪಟ ಕರ್ಣಾಟಕದವರೆಂದೇ ಹೇಳಬಹುದಾದ ಕದಂಬರು ಮತ್ತು ಗಂಗರು ಸರಳವಾದ ವೈದಿಕ ದೇವಾಲಯ-ಜೈನ ಬಸದಿಗಳನ್ನು ನಿರ್ಮಿಸಲಿಕ್ಕೆ ತೊಡಗಿದರು. ಈ ಮೂಲರೂಪದಲ್ಲಿ ಉಳಿದಿಲ್ಲದ ತಾಳಗುಂದದ ಪ್ರಣವೇಶ್ವರ ದೇವಾಲಯವೇ(ಕದಂಬರದ್ದು)ಬಹುಶಃ ಕರ್ಣಾಟಕದಲ್ಲಿ ಕಾಣಸಿಗುವ ಮೊತ್ತಮೊದಲ ದೇವಾಲಯ. ಗಂಗರ ಆ ಕಾಲದ ನಿರ್ಮಾಣಗಳು, ಅಷ್ಟರಲ್ಲಾಗಲೇ ತಮಿಳುನಾಡಿನಲ್ಲಿ ರೂಪುಗೊಳ್ಳತೊಡಗಿದ ‘ಪಲ್ಲವಶೈಲಿ’ ಯಿಂದ ಪ್ರಭಾವಿತಗೊಂಡಂತಿವೆ ಎನ್ನುತ್ತಾರೆ. ಈ ತನಕದ ಬೆಳವಣಿಗೆಯನ್ನು ‘ದಖ್ಖನ್ ವಾಸ್ತು’ವೆಂಬ ಅಂಕಿತದಲ್ಲಿ ಗುರುತಿಸಬಹುದಲ್ಲದೆ ಕನ್ನಡದ್ದು ಅಂತ ಖಚಿತವಾಗಿ ಹೇಳಲಿಕ್ಕೆ ಬರುವುದಿಲ್ಲ. ಅಲ್ಲದೆ, ಕನ್ನಡವೆಂಬುದು ಇನ್ನೂ ಇಡಿಯಾಗಿ ಒಡಮೂಡಿಕೊಂಡಿರದ ಕಾಲ ಅದು.

ಇದಾದ ಮೇಲೆ, ಕ್ರಿ.ಶ. ೫೪೩ರಲ್ಲಿ ೧ನೆ ಪುಲಿಕೇಶಿಯು ಕನ್ನಡದ ನಡುನೆಲವಾದ ಬಾದಾಮಿ (ವಾತಾಪಿ) ಯನ್ನು ರಾಜಾಧಾನಿಯನ್ನಾಗಿ ಮಾಡಿಕೊಂಡು ಚಲುಕ್ಯರಾಜ್ಯವನ್ನು ಸ್ಥಾಪಿಸಿದ ಮತ್ತು ಅಲ್ಲಿಂದ ಸು. ೨೦೦ ವರ್ಷಗಳ ಕಾಲ ಚಲುಕ್ಯವಂಶವು ಕರ್ನಾಟಕವನ್ನೊಳಗೊಂಡ ನರ್ಮದೆಯ ತನಕ ಮತ್ತು ಅದರಾಚೆಗೂ ವಿಸ್ತರಿಸಿ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ‌ಆಳಿತು. ಈ ಪುಲಿಕೇಶಿಯು ಮೊದಲಿಗೆ ಬಾದಾಮಿಯಲ್ಲಿ ಒಂದು ಕೋಟೆಯನ್ನು ಕಟ್ಟಿಸಿದ. ಮರಳುಗಲ್ಲಿನ ಬಂಡೆಗಳು ವಿಪುಲವಾಗಿದ್ದ ಆ ಪರಿಸರದಲ್ಲಿ ಇದಕ್ಕೂ ಮೊದಲೇ ಗುಹಾಲಯಗಳ ನಿರ್ಮಾಣವು ತೊಡಗಿದ್ದಿರಬೇಕು. ಅಲ್ಲಿ ಚಲುಕ್ಯರು ಕ್ರಮೇಣ, ವಾಸ್ತು-ಶಿಲ್ಪ ನಿರ್ಮಾಣದ ಒಂದು ಬೃಹತ್ ಕ್ಷೇತ್ರವನ್ನೇ ನಿರ್ಮಿಸಿದರು. ಬಾದಾಮಿ ಹಾಗೂ ಅದರ ಬಳ್ಯ ಐಹೊಳೆ (ವಿಶೇಷವಾಗಿ ವಣಿಜರ ನೆಲೆಯಾಗಿದ್ದ ಊರು), ಪಟ್ಟದಕಲ್ಲು (ಕಿಸವೊಳಲು ಎಂಬ ಹೆಸರಿದ್ದ, ಮುಂದೆ ರಾಜರ ಪಟ್ಟಾಭಿಷೇಕ ನಡೆಯುತ್ತಿದ್ದ ಊರು) ಹಾಗೂ ಮಹಾಕೂಟಗಳಲ್ಲಿ ಈ ಕ್ಷೇತ್ರವು ವಿಸ್ತರಿಸಿಕೊಮ್ಡಿತು. ನಿವೇಶನ ಸಂಕೀರ್ಣಗಳ ಈಕ್ಷೇತ್ರವನ್ನೇ ಈಗ, ಚಾಲುಕ್ಯ (ಅಥವಾ ಕರ್ನಾಟಕ) ವಾಸ್ತು-ಶಿಲ್ಪಕಲೆಯ ‘ತೊಟ್ಟಿಲು’ ಎಂದೂ ‘ಬೃಹತ್ ಪ್ರಯೋಗಶಾಲೆ’ಯೆಂದೂ ಭಾವಿಸಲಾಗುತ್ತಿದೆ.

ಬಾದಾಮಿಯಲ್ಲಿನ ವೈಷ್ಣವ-ಶೈವ-ಜೈನ ಇ., ನಾಲ್ಕು ಗುಹಾಲಯಗಳು, ಗುಹೆಗಳಲ್ಲಿ ಕೊರೆಯಾಗಿರುವ ಹದಿನೆಂಟು ಕೈಗಳ ನಟರಾಜ, ನರ್ತನಗಣಪತಿ, ಮಹಿಷಾಸುರಮರ್ಧಿನಿ, ಕಾರ್ತಿಕೇಯ, ಹರಿಹರ,ಅರ್ಧನಾರೀಶ್ವರ, ಭೂವರಾಹ, ನರಸಿಂಹ, ವಿಷ್ಣು, ತ್ರಿವಿಕ್ರಮ,ಇ., ಉಬ್ಬುಶಿಲ್ಪಗಳು; ಮಾಲೆಗಿತ್ತಿದೇವಾಲಯ, ಮೇಲಿನದೇವಾಲಯ, ಜಂಬುಲಿಂಗದೇವಾಲಯ, ಭೂತನಾಥದೇವಾಲಯ ಮುಂತಾದ ಕಲ್ಲಿನಲಿ ನಿರ್ಮಿಸಿದ ವಾಸ್ತುಗಳು ಮತ್ತು ಅವುಗಳೊಳಗಿನ ಶಿಲ್ಪಗಳು; ಐಹೊಳೆಯಲ್ಲಿನ ಮೂರು ಬೌದ್ಧ, ವೈದಿಕ, ಜೈನ-ಗುಹಾಲಯಗಳು, ಗೌಡರಗುಡಿ, ಲಾಡಖಾನ್ ದುರ್ಗಾದೇವಾಲಯಗಳು, ಕೋತಿಗುಂಡಿ, ಮೆಗುತಿ ದೇವಾಲಯ ಮುಂತಾಗಿ ೧೨೫ಕ್ಕೂ ಮಿಕ್ಕು ದೇವಾಲಯಗಳು ಮತ್ತು ಅವುಗಳೊಳಗಿನ ಉಬ್ಬು ಶಿಲ್ಪ-ಕೊರೆದಶಿಲ್ಪಗಳು; ಪಟ್ಟದಕಲ್ಲಿನಲಿರುವ ಅತಿ ಸರಳದಿಂದ ಅತಿ ಸಂಕೀರ್ಣವಾದ ವಾಸ್ತುವುಳ್ಳ ಅನೇಕ ದೇವಾಲಯಗಳ ಸರಣೆ ಮತ್ತು ಅವುಗಳಲ್ಲಿನ ಶಿಲ್ಪಗಳು, ಮಹಾಕೂಟದಲ್ಲಿನ ದೆವಾಲಯ-ಶಿಲ್ಪಗಳು-ಇತ್ಯಾದಿ ಇತ್ಯಾದಿಯಾಗಿ ವಾಸ್ತುಶಿಲ್ಪದ ಒಂದು ಪುರಾಣಜಗತ್ತೇ ಇಲ್ಲಿ ನಿರ್ಮಾಣಗೊಂಡಿದೆ.

ಆ ಕಾಲಕ್ಕೆ ಉತ್ತರ ಭಾರತದಲ್ಲೂ ದಕ್ಷಿಣ ತಮಿಳು ಪ್ರದೇಶದಲ್ಲೂ ವಾಸ್ತು-ಶಿಲ್ಪ ನಿರ್ಮಾಣ ಭರದಿಂದ ತೊಡಗಿತ್ತಾದ ಕಾರಣ, ಚಲುಕ್ಯರು ಉತ್ತರ ದಕ್ಷಿಣಗಲಿಂದ ಕುಶಲ ಕರ್ಮಿಗಳನ್ನು ಕರೆಸಿಕೊಂಡಿರಬೇಕು. ಮತ್ತೆ ಜೊತೆಗೆ ಕನ್ನಡ ಸಮುದಾಯದ ವಸ್ತು-ಶಿಲ್ಪ ಕುಶಲಿಗಳ ದೊಡ್ಡ ಪಡೆಯೇ ಅಲ್ಲಿ ಕೂಡಿದ್ದಿರಬೇಕು. ವಾಸ್ತು-ಶಿಲ್ಪ ಶಾಸ್ತ್ರವೆಂಬುದು ಆಗಿನ್ನು ಅಷ್ಟಾಗಿ ಬೆಳೆದಿರಲಿಲ್ಲ, ಅದರಿಂದ ಶಾಸ್ತ್ರದ ವಿದಿ-ನಿಷೇಧ-ಕಟ್ಟು-ಕಟ್ಟಳೆಗಳ ಬಂಧನದಲ್ಲಿ ಅಷ್ಟಾಗಿ ಸಿಲುಕಿಕೊಳ್ಳದೆ, ಅಂದಿನ ಅ ಕುಶಲಕರ್ಮಿಗಳು ಮುಕ್ತ ವಾತಾವರಣದಲ್ಲಿ ನವೋತ್ಸಾಹದಿಂದ ತಮ್ಮ ಸೃಜನಶೀಲತೆಯನ್ನು ಸ್ವತಂತ್ರವಾಗಿ ಹರಿಯಗೊಟ್ಟರು. ಈ ಕಾರಣದಿಂದ ಪ್ರಾಯಃ, ಮುಖ್ಯವಾಗಿ ಅಲ್ಲಿನ ಶಿಲ್ಪಕೃತಿಗಳು ಕರ್ನಾಟಕದ ಒಟ್ಟೂ ಶಿಲ್ಪಪರಂಪರೆಯಲ್ಲೇ ಅಸಾಧಾರಣ ಸತ್ವವುಳ್ಳವೂ ತಾಜಾತನವುಳ್ಳವೂ ಆಗಿ ರೂಪುಗೊಂಡವು. ಮುಂದಕ್ಕೆ ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ವಿಜಯನಗರ ರಾಜರು ಮುಂತಾದವರ ಕಾಲದಲ್ಲಿ, ಹೆಚ್ಚಾಗಿ ತರ್ಕ ಲೆಕ್ಕಾಚಾರಗಳನ್ನಾಧರಿಸುವ ವಾಸ್ತುಕೌಶಲವು ಬೆಳೆಯಿತಾದರೂ ಮುಕ್ತ ಸೃಜನಶೀಲತೆಯನ್ನು ಬಯಸುವ ಮೂರ್ತಿಶಿಲ್ಪವು ಈ ಮೊದಲ ಮಾದರಿಗಳನ್ನು ಮೀರಿಸಿ ಬೆಳೆಯಲಿಕ್ಕಾಗಲಿಲ್ಲ ಎನ್ನಿಸುತ್ತದೆ. ಈ ಚಲುಕ್ಯ ಶಿಲ್ಪ ಪರಂಪರೆಯ ಅತ್ಯ್ನ್ನತಿಯು ಸಾಧಿಸಿದ್ದು ೧೦ನೇ ಶತಮಾನದ ಶ್ರವಣಬೆಳುಗೊಳದ ಗೊಮ್ಮಟ ಶಿಲ್ಪದಲ್ಲಿ.

ಎರಡು ಶತಮಾನಗಳ ಕಲ ಕ್ರಮೇಣ ಅರಳಿಕೊಳ್ಳುತ್ತ ಬಂದ ಈ ‘ಚಲುಕ್ಯ ವಾಸ್ತು-ಶಿಲ್ಪ ಪ್ರಯೋಗಕ್ಷೇತ್ರ’ದಲ್ಲಿ ಗುಹಾಲಯ ನಿರ್ಮಾಣದಿಂದ ಕಲ್ಲುಕಟ್ಟಡ ನಿರ್ಮಾಣಕ್ಕೆ, ಪರಿವರ್ತನಗೊಂಡ ಇತಿಹಾಸವೂ ಅತ್ಯಂತ ಸರಳವಾದ ವಾಸ್ತುವಿನಿಂದ ಬಹುಸಂಕೀರ್ಣವಾದ ವಾಸ್ತುವಿನ ತನಕದ ಬೆಳವಣಿಗೆಯ ಇತಿಹಾಸವೂ ಕಾಣಲಿಕ್ಕೆ ಸಿಗುತ್ತದೆ. ಇಲ್ಲಿ ಆಗಿನ್ನೂ ನಿಶ್ಚಿತವಾಗಿ ರೂಪುಗೊಂಡಿರದ ದಕ್ಷಿಣದ ದ್ರಾವಿಡ ಶೈಲಿಯ ಪ್ರಭಾವಗಳೂ ಉತ್ತರದ ನಾಗರಶೈಲಿಯ ಪ್ರಭಾವಗಳೂ ಕಾಣಿಸುತ್ತವಲ್ಲದೆ, ಅವುಗಳ ಅಂಶಗಳನ್ನು ಮೇಳವಿಸಿಕೊಳ್ಳುತ್ತಲೂ ಅವಕ್ಕಿಂತ ಭಿನ್ನವಾದ ಹೊಸ ಸ್ವತಂತ್ರ ‘ಚಲುಕ್ಯ(ಕರ್ಣಾಟಕ)ಶೈಲಿ’ಯು ರೂಪುಗೊಂಡಿರುವುದು ಕಾಣಿಸುತ್ತದೆ. ಒಟ್ಟಿನಲ್ಲಿ ಈ ‘ಪ್ರಯೋಗಕ್ಷೇತ್ರ’ವು ‘ಕನ್ನಡ ವಾಸ್ತುಶಿಲ್ಪ’ವೆಂಬುದರ ಮೊದಲ ಘಟ್ಟದ ಇತಿಹಾಸವನ್ನೇ ಕಲ್ಲಿನಲ್ಲಿ ಕಥಿಸಿ ಹೇಳುತ್ತದೆ. ಇದಲ್ಲದೆ, ಚಲುಕ್ಯರ ಆ ಕಾಲದ ನಿರ್ಮಾಣಗಳು ಅಮರಾವತಿ, ನಾಗಾರ್ಜುನಕೊಂಡಗಳಲ್ಲೂ ಕರ್ಣಾಟಕದ ಬೆರೆ ಹಲವು ನೆಲೆಗಳಲ್ಲೂ ಕಾಣಸಿಗುತ್ತದೆ.

ಚಲುಕ್ಯರ ಅನಂತರ ಬಂದವರು ರಾಷ್ಟ್ರಕೂಟರು. ಮೊದಲಿಗೆ ಚಲುಕ್ಯಸೈನ್ಯವನ್ನು ‘ಅಜೇಯವಾದ ಕರ್ಣಾಟಕ ಬಲ’ವೆಂದು ಕರೆದ ಇವರು, ಚಲುಕ್ಯರನ್ನು ಸೋಲಿಸಿ ಇಲ್ಲಿ ಆಳಲು ತೊಡಗಿದಾಗ ತಮ್ಮನ್ನು ಕರ್ಣಾಟಕರಾಜರೆಂದೇ ಗುರುತಿಸಿಕೊಂಡರು; ಕನ್ನಡ ಭಾಷೆ-ಲಿಪಿಗಳನ್ನು ಅಧಿಕೃತವಾಗಿ ಬಳಸಿದರು. ಇವರ ಕಾಲದ ವಾಸ್ತು-ಶಿಲ್ಪಗಳು ಕರ್ಣಾಟಕದಲ್ಲಿ ಅಲ್ಲಲ್ಲಿ ಕಾಣಿಸುತ್ತವಾದರೂ ಅವು ಬಹುಸಂಖ್ಯೆಯಲ್ಲಿ ಗೋಚರವಾಗುವುದಿಲ್ಲ. ಆದರೆ, ಇವರು ಎಲ್ಲೋರಾದಲ್ಲಿ ನಿರ್ಮಿಸಿರುವ ಬೃಹತ್ತಾದ ಕೈಲಾಸನಾಥ ಗುಹಾಂತರ್ದೇವಾಲಯ ಮತ್ತು ಎಲಿಫೆಂಟಾದಲ್ಲಿ ನಿರ್ಮಿಸಿರುವ ಗುಹೆಗಳು ಗುಹಾಶಿಲ್ಪಗಳು ಭಾರತೀಯ ನೆಲೆಯಲ್ಲಿ ಕೂಡಾ ಅಸಾಧಾರಣವೆನಿಸಿಕೊಂಡಿರುವ ಗಣ್ಯ ಸಾಧನೆಗಳು.

ಶಿಲ್ಪ ವಾಸ್ತುಗಳಲ್ಲದೆ ಸಂಗೀತ ಕಲೆಗೆ ಸಂಬಂಧಿಸಿಯೂ ಕೆಲವು ಮಾತುಗಳನ್ನು ಹೇಳಬಹುದು. ಪ್ರಸ್ತುತ ದಕ್ಷಿಣಭಾರತದಲ್ಲಿ ಪ್ರಚಲಿತವಿರುವ ಮಾರ್ಗ ಸಂಗೀತಕ್ಕೆ ‘ಕರ್ನಾಟಕಸಂಗೀತ’ವೆಂಬ ಹೆಸರಿದೆಯಲ್ಲ? ಈ ಹೆಸರು ಆರೆಂಟು ಶತಮಾನಗಳಿಂದ ರೂಢಿಯಿರುವಂತೆ ತೋರುತ್ತದೆ. ಈ ಸಹಸ್ರಮಾನದಲ್ಲಿ ಮುಖ್ಯವಾಗಿ, ಚಾಲುಕ್ಯ, ಸೋಮೇಶ್ವರ, ಶಾರ್ಙ್ಗದೇವ, ವಿದ್ಯಾರಣ್ಯ, ಪುರಂದರದಾಸ, ವೆಂಕಟಮುಖಿ ಮುಂತಾದ ಕರ್ನಾಟಕ ಮೂಲದವರ ಅಥವಾ ಕರ್ನಾಟಿಕಸ್ಥರ ಮೂಲಕ ಇದು ಬೆಳೆದುಬಂದಿತು. ಇದೇ ಮುಂದೆ ಹುಟ್ಟಿಕೊಂಡ ಔತ್ತರೇಯ ಮಾರ್ಗಸಂಗೀತಕ್ಕೂ ಮೂಲಸ್ರೋತವಾಯಿತು. ಇದನ್ನು ಗಮನಿಸುವಾಗ, ಈ ಪರಂಪರೆಗೆ ಮೂಲವಾಗಿ ಕನ್ನಡದ್ದೆಂಬ ಸಂಗೀತಪರಂಪರೆಯು ಮೊದಲ ಸಹಸ್ರಮಾನದಲ್ಲೇ ಒಂದು ಸತತವಾಹಿನಿಯಾಗಿ ಬೆಳೆದುಬಂದಿತು ಎಂಬ ಸಂಗತಿಯನ್ನೂ ಗಮನಿಸಬೇಕು. ತಮಿಳಿನ ‘ಶಿಲಪ್ಪದಿಗಾರಂ’ನಲ್ಲಿ, ಈ ನಾಡಿನಿಂದ ಹೋದ ಸಂಗೀತಗಾರರು ಮತ್ತು ನರ್ತಕರು ಚೇರದೊರೆ ಸಂಗಟ್ಟುವಾನ್‌ನ ಸಮ್ಮುಖದಲ್ಲಿ ಪ್ರದರ್ಶನಗಳನ್ನು ನಡೆಸಿಕೊಟ್ಟರು ಎಂಬ ಉಲ್ಲೇಖವಿದೆಯಂತೆ. ಇದಲ್ಲದೆ ಬಹುಮುಖ್ಯವಾದ ಸಾಕ್ಷ್ಯವೆಂದರೆ, ಭಾರತೀಯ ಸಂಗೀತಗ್ರಂಥಗಳಲ್ಲಿ ಮೊತ್ತಮೊದಲನೆಯ ಗಣ್ಯ ಬೃಹತ್‌ಗ್ರಂಥವಾದ ‘ಬೃಹದ್ದೇಶಿ’ಯು, ಬಹುಶಃ ಕನ್ನಡಿಗನಾದ ಮತ್ತು ಹಂಪಿಯ ಬಳಿಯಿದ್ದ ಮತಂಗನೆಂಬವನಿಂದ ರಚಿತವಾದದ್ದು. ಇದರ ಕಾಲವು ಸುಮಾರಾಗಿ ಕ್ರಿ.ಶ.೫ನೆಯ ಶತಮಾನವಿರಬೇಕು-ಎನ್ನುತ್ತಾರೆ. ಭಾರತೀಯ ಸಂಗೀತದ ಬಹುಮುಖ್ಯ ಆಧಾರಗ್ರಂಥವೆಂದು ಇವತ್ತಿಗೂ ಪರಿಗಣಿತವಾಗುವ ಈ ಗ್ರಂಥದಲ್ಲಿ ಕನ್ನಡ ಭಾಷಾ ಪ್ರಬಂಧಗಳ ಬಗ್ಗೆ ವಿಶೇಷ ಉಲ್ಲೇಖವಿದೆ, ಹೀಗೆ ‘ಕವಿರಾಜಮಾರ್ಗ’ ಪೂರ್ವದ ಕನ್ನಡ ಕಲಾವಾಹಿನಿಯು ಸಂಗೀತಕಲೆಯನ್ನೂ ಒಳಗೊಂಡದ್ದೆಂದು ಭಾವಿಸಬಹುದು.

ಪ್ರಭುತ್ವ ವಾಹಿನಿ

ಈತನಕ ಗಮನಿಸಿದ ಹಾಗೆ, ಕನ್ನಡ ಭಾಷೆ-ಲಿಪಿ-ವಾಙ್ಮಯ-ಸಾಹಿತ್ಯ ಹಾಗೂ ಕಲಾವಾಹಿನಿಗಳು, ನೃಪತುಂಗಪೂರ್ವದ ಎಂಟು ಹತ್ತು ಶತಮಾನಗಳುದ್ದವೂ ಕನ್ನಡದ ಛಾಯೆ ಚಹರೆಗಳನ್ನೊಡಮೂಡಿಸಿಕೊಳ್ಳುತ್ತ ಒಂದರೊಡನೂಂದು ಬೆರೆತುಕೊಳ್ಳುತ್ತ ಬಂದವು ಮತ್ತು ಪರ್ಯಾಯವಾಗಿ, ಯಾವುದೇ ಸುಸಂಸ್ಕೃತ ಮಾನವಸಮುದಾಯಕ್ಕೂ ತಾನು ಸಮನೆಂದುಕೊಳ್ಳಬಹುದಾದ ಕನ್ನಡ ಸಮುದಾಯವಾಹಿನಿಯನ್ನು ರೂಪಿಸಿದವು. ಇದಾದಮೇಲೆ ಈ ಸಮುದಾಯಕ್ಕೆ ಅಗತ್ಯವಿದ್ದ ಕೊನೆಯ ಸಂಗತಿಯೆಂದರೆ, ಏಕಾದಳಿತ, ಏಕರಾಜ್ಯ. ಅದುವೇ ಈ ಸಮುದಾಯದ ಸ್ವಂತಿಕೆಯ ಚಹರೆಯನ್ನು ಸಾರ್ವಭೌಮತ್ವದ ಮುದ್ರೆಯೊತ್ತಿ ಅಧಿಕೃತಗೊಳಿಸುವಂಥದಾಗಿತ್ತು. ಇತರ ವಾಹಿನಿಗಳ ಜೊತೆಗೆ ಬೆಳೆಯುತ್ತ ಬಂದು ಕೊನೆಯಲ್ಲಿ ಇಲ್ಲಿ ಕೂಡಿಕೊಂಡ ಪ್ರಭುತ್ವವಾಹಿನಿಯನ್ನು ಈಗ ಗಮನಿಸಬೇಕಾಗಿದೆ.

ಕ್ರಿಸ್ತಪೂರ್ವದಿಂದ ಮೊದಲಾಗಿ ಇಲ್ಲಿ ಬಂದ ಸಾತವಾಹನ-ಕದಂಬ-ಗಂಗ-ಚಲುಕ್ಯ-ರಾಷ್ಟ್ರಕೂಟ ರಾಜರುಗಳೆಲ್ಲರಿಗೂ ಮೇಲ್ಪಂಕ್ತಿಯಾಗಿದ್ದುದು ಉತ್ತರಾಪಥದ ಮೌರ್ಯ-ಗುಪ್ತವಂಶಗಳ ರಾಜಕಾರಣವೇ. ಅವರ ಹಾಗೆ ಇವರೂ ರಾಜ್ಯವನ್ನು ಶಕ್ಯನುಸಾರ ವಿಸ್ತರಿಸುವುದು ತಮ್ಮ ಬಹುಮುಖ್ಯ ಕರ್ತವ್ಯಗಳಲ್ಲೊಂದು ಅಂತ ನಂಬಿಕೊಂಡಿದ್ದರು. ಈ ಹಂಬಲದಲ್ಲಿ ಇಲ್ಲಿನ ರಾಜರು, ಸಿಂಹಳ ದ್ವೀಪವನ್ನೂ ಕೂಡಿ ದಕ್ಷಿಣಾಪಥದ ಬಹುಭಾಗಗಳನ್ನೂ ಉತ್ತರಾಪಥದ ಅನೇಕ ಭಾಗಗಳನ್ನೂ ಪರಾಕ್ರಮದಿಂದ ಆಕ್ರಮಿಸಿ ರಾಜ್ಯವನ್ನು ವಿಸ್ತರಿಸಿಕೊಂದದ್ದುಂಟು. ಉದಾಹರಣೆಗೆ, ಸಾತವಾಹನರಲ್ಲಿ ಶೂರನಾದ ಗೌತಮೀಪುತ್ರನು(ಕ್ರಿ.ಶ.೧೦೬-೧೩೦) ಇಡೀ ದಕ್ಷಿಣವನ್ನಾಕ್ರಮಿಸಿ ತನ್ನನ್ನು ‘ತ್ರಿಸಮುದ್ರತೋಯ ಪೀತವಾಹನ’ (ಮೂರು ಕಡಲುಗಳ ನೀರು ಕುಡಿದ ಕುದುರೆಗಳುಳ್ಳವ)ಅಂತ ಕರೆದುಕೊಂಡಿದ್ದ. ಆಮೇಲೆ ಚಲುಕ್ಯ ಚಕ್ರವರ್ತಿಯೆನಿಸಿಕೊಂಡ ೨ನೇ ಪುಲಕೇಶಿಯು(ಕ್ರಿ.ಶ.೬೦೯-೬೪೨) ಕಾವೇರಿಯಿಂದ ನರ್ಮದೆಯ ತನಕ ನೆಲವನ್ನಲ್ಲದೆ, ಲಾಟ-ಗುರ್ಜರ-ಮಾಳವ-ಕೋಸಲ ದೇಶಗಳನ್ನೂ ಗೆದ್ದುಕೊಂಡಿದ್ದನಂತೆ. ಕನೌಜಿನ ಚಕ್ರವರ್ತಿ ಶ್ರೀಹರ್ಷನನ್ನು ಹಿಮ್ಮೆಟ್ಟಿಸಿದ ಪರಾಕ್ರಮ ಈತನದು. ರಾಷ್ಟ್ರಕೂಟ ೩ನೇ ಗೋವಿಂದನ ಉತ್ತರಾಪಥದ ಜೈತ್ರಯಾತ್ರೆಯು ಪ್ರಸಿದ್ಧವಾದದ್ದು. ‘ಹಿಮವತ್ಪರ್ವತ ನಿರ್ಝರಾಂಬುತುರಗೈಃಪೀತಂ ಚ ಗಾಂಗಂ ಗಜೈಃ’(ತನ್ನ ಕುದುರೆಗಳು ಹಿಮವತ್ ಪರ್ವತದ ಝರಿಗಳ ನೀರನ್ನೂ ಆನೆಗಳು ಗಂಗಾನದಿಯ ನೀರನ್ನೂ ಕುಡಿದವು) ಎಂಬುದು ಈತನ ಹೆಗ್ಗಳಿಕೆ.

ಈ ಬಗೆಯ ಆಕ್ರಮಣ-ವಿಸ್ತರಣ ರಾಜಕಾರಣವು ಹಾಗೇ ನಡೆಯುತ್ತ ಹೋಗಿದ್ದರೆ ಬಹುಶಃ, ಕನ್ನಡ ರಾಜ್ಯವೆಂಬುದೊಂದು ನಿಶ್ಚಿತವಾಗಿ ರೂಪುಗೊಳ್ಳಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂಥ ಉನ್ಮುಕ್ತರಾಜಕಾರಣವು ಯಾವತ್ಕಾಲವೂ ಮುಂದುವರಿಯುವುದು ಅಸಾಧ್ಯ ಎನ್ನುವುದನ್ನು ಇತಿಹಾಸವೇ ತೋರಿಸಿಕೊಡುತ್ತ ಬಂದಿತ್ತು ಕೂಡಾ. ಆಕ್ರಮಣವು ಪ್ರತ್ಯಾಕ್ರಮಣವನ್ನು ಎದುರಿಸಲೇಬೇಕಾಗಿತ್ತು. ದಿನದಿನಕ್ಕೆ ಬದಲಾಯಿಸುತ್ತ ಹೋಗುವ ಅನಿಶ್ಚಿತ ಮೇರೆಯುಳ್ಳ ರಾಜ್ಯವನ್ನು ನಿಭಾಯಿಸುವುದು ರಾಜರಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆಯನ್ನು ತತ್ಕಾಲಕ್ಕಾದರೂ ಪರಿಹರಿಸಿಕೊಳ್ಳಬೇಕಾದ ತುರ್ತಿನಲ್ಲಿ ಅವರು ಹಲವು ಉಪಾಯಗಳನ್ನು ರೂಢಿಸಿಕೊಂಡದ್ದುಂಟು. ಕೆಲವೊಮ್ಮೆ ಗೆದ್ದ ರಾಜ್ಯವನ್ನು ಅವರಿಗೇ ವಾಪಸುಕೊಟ್ಟು ಅವರಿಂದ ಅಷ್ಟಿಷ್ಟು ಕಪ್ಪಕಾಣಿಕೆಗಳನ್ನು ಪಡೆದು ತೃಪ್ತರಾಗುತ್ತಿದ್ದರು. ಎಷ್ಟೋ ಸಲ, ವೈರಿ ರಾಜರೊಡನೆ ವೈವಾಹಿಕ ಸಂಬಂಧ ಬೆಳೆಸಿಕೊಂಡು ಆಕ್ರಮಣವನ್ನು ಶಮನಗೊಳಿಸುತ್ತಿದರು. ಇಂಥ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ನಿಶ್ಚಿತವಾಗಿ ದೊರಕುತ್ತವೆ. ಇದಲ್ಲದೆ, ವಿಸ್ತರಣ ರಾಜಕೀಯದಿಂದ ಹುಟ್ಟಿಕೊಳ್ಳುತ್ತಿದ್ದ ನಿತ್ಯ ಅನಿಶ್ಚಿತತೆಯು ಪ್ರಜಾಸಮುದಾಯದಲ್ಲಿ ಭಾರೀ ಅತೃಪ್ತಿ ಆತಂಕ ಭಯ ತಲ್ಲಣಗಳನ್ನು ಹುಟ್ಟಿಸುತ್ತಿತ್ತು. ಈ ಸ್ಥಿತಿಯಲ್ಲಿ, ನಿಶ್ಚಿತತೆ-ಭರವಸೆ-ಭದ್ರತೆಗಳನ್ನು ಹಂಬಲಿಸುವ ಪ್ರಜಾಸಮುದಾಯದ ತೀವ್ರ ಆಕಾಂಕ್ಷೆ-ಅದೆಷ್ಟೇ ಮೂಕವಾಗಿದ್ದರೂ-ನಿಷ್ಫಲವಾಗದೆ ಪ್ರಭುತ್ವದ ಮೆಲೆ ಒತ್ತಡ ತರುತ್ತಿದ್ದಿರಬೇಕು.

ವಿಸ್ತರಣದ ರಾಜಕಾರಣದಿಂದ ಇಂಥ ಬೆಳವಣಿಗೆಯು ಒಂದು ನಿರ್ಣಾಯಕ ಹಂತವನ್ನು ತಲುಪಿದ್ದು ಪ್ರಾಯಶಃ, ನೃಪತುಂಗನ ಕಾಲದಲ್ಲಿ. ಈತನ ತಂದೆಯಾದ ೩ನೇ ಗೋವಿಂದನು ಮಹಾವಿಜಿಗೀಷು. ಈತನು ರಾಷ್ಟ್ರಕೂಟರಲ್ಲಿ ಇನ್ನೆಲ್ಲರಿಗಿಂತಲೂ ಹೆಚ್ಚು ವಿಸ್ತಾರವಾದ ರಾಜ್ಯವನ್ನು ಕಟ್ಟಿ ಆಳಿದವನು. ಆತನು ತೀರಿಕೊಂಡಿದ್ದೇ ಇನ್ನೂ ಹದಿನಾಲ್ಕು ವರ್ಷದ ಬಾಲಕನಾಗಿದ್ದ ನೃಪತುಂಗನು ಪಟ್ಟವೇರಬೇಕಾಯಿತು. ಪಟ್ಟವೇರುತ್ತಿದ್ದ ಹಾಗೇ ಅನೇಕ ಬಂಡಾಯಗಳು ಪ್ರಾರಂಭವಾಗವು. ಈತನ ದಾಯಾದಿ ಚಿಕ್ಕಪ್ಪನಾದ ಸುವರ್ಣವರ್ಷ ಕರ್ಕನೆಂಬುವನು ರಕ್ಷಕನಾಗಿ ನಿಂತು ಆ ಕಾಲದ ಬಂಡಾಯಗಳನ್ನು ಅಡಗಿಸಿದ ಎನ್ನುತ್ತಾರೆ. ಆಮೇಲೆ ಕೂಡಾ ೬೩ವರ್ಷಗಳ ತನ್ನ ಅತಿ ದೀರ್ಘವಾದ ಆಡಳಿತದಲ್ಲಿ ಬಹುಭಾಗ ಈತನು ಯುದ್ಧ ಬಂಡಾಯಗಳನ್ನೆದುರಿಸುತ್ತಲೇ ಕಳೆಯಬೇಕಾಯಿತು. ಒಂದು ಸಂದಂಭದಲ್ಲಿ ಬಹುಶಃ, ಈತನ ಮಗನೇ ಶತ್ರುಗಳ ಜೊತೆ ಸೇರಿ ಬಂಡಾಯ ಹೂಡಿದ. ಅಲ್ಲದೆ ಈತನು ಒಮ್ಮೆಯಲ್ಲ ಹಲವುಸಲ ರಾಜ್ಯಚ್ಯುತನೂ ಆಗಿದ್ದನೆಂಬ ಸೂಚನೆಗಳಿವೆ. (‘ಯೇನಾ ತ್ಯಾಜಿ ತನುಃ ಸ್ವರಾಜ್ಯ ಮಸಕೃದ್’ -ತನ್ನ ದೇಹ ರಾಜ್ಯಗಳನ್ನು ಹಲವುಸಲ ತ್ಯಜಿಸಿದವನು’- ಸಂಜಾನ ಶಾಸನ; ‘ವಿವೇಕಾತ್ತ್ಯಕ್ತ ರಾಜ್ಯೇನ…..’ ‘ವಿವೇಕದಿಂದ ರಾಜ್ಯವನ್ನು ತ್ಯಜಿಸಿದವನು”-ಪ್ರಶ್ನೋತ್ತರ ಮಾಲಿಕಾ.) ಅಂತಿಮವಾಗಿ ನೃಪತುಂಗನು ಎಲ್ಲಾ ಕಂಟಕ ಆತಂಕಗಳನ್ನು ಪರಿಹರಿಸಿಕೊಂಡು ‘ಕಾವೇರಿಯಿಂದ ಗೋದಾವರಿ’ ತನಕದ ಕನ್ನಡ ಭಾಷಾರಾಜ್ಯವನ್ನು ಕಟ್ಟಿ ನಿಲ್ಲಿಸುವುದರಲ್ಲಿ ಯಶಸ್ವಿಯಾದ.

ಇತಿಹಾಸಕಾರರಿಗೆ ನೃಪತುಂಗನ ಬಗ್ಗೆ ಭಾರೀ ಗೌರವಭಾವನೆಯಿದೆ. ಆದರೆ ಅತನನ್ನು ಕುರಿತು ವಿಸ್ತಾರವಾಗಿ ಬರೆಯಲಿಕ್ಕೆ ರಾಜಪರಾಕ್ರಮದ ಹೆಚ್ಚು ಘಟನೆಗಳು ಸಿಕ್ಕುವುದಿಲ್ಲ. ಆತನಕದ ಇಲ್ಲಿನ ರಾಜರುಗಳ ಜತೆ ಹೋಲಿಸಿದರೆ ಈತನು ತುಂಬ ಭಿನ್ನನಾಗಿ ಕಾಣಿಸುತ್ತಾನೆ. ಕಳಿಂಗ ಯುದ್ಧದಿಂದ ಪರಿವರ್ತಿತನಾಗಿ ಬೌದ್ಧಧರ್ಮದ ಪ್ರಭಾವಕ್ಕೊಳಗಾದ ಪ್ರಸಿದ್ಧ ಚಕ್ರವತ್ರಿ ಅಶೋಕನ ಜೊತೆ ಈತನನ್ನು ಹೋಲಿಸಿರುವುದುಂಟು. ಈತನು ಜೈನಧರ್ಮದಿಂದ ಪ್ರಭಾವಿತನಾಗಿದ್ದುದೂ ಕಾಣುತ್ತದೆ. ಆದರೆ ಇವನು ಅಸೋಕನ ಹಾಗೆ ಒಂದು ನಿರ್ಧಷ್ಟ ಘಟನೆಯಿಂದಾಗಿ ತಟ್ಟನೆ ಬದಲುಗೊಂಡವನಲ್ಲ; ಮೊದಲಿನಿಂದ ಕೊನೆಯತನಕವೂ ‘ಧರ್ಮೈಕನಿಷ್ಠ’ನಾಗಿದ್ದವನು. ಜೊತೆಗೆ, ಧಾರ್ಮಿಕ ಚಿಂತನೆಗಳಲ್ಲಿ, ಭಾಷೆ-ಶಾಸ್ತ್ರ- ಸಾಹಿತ್ಯ-ಕಲೆಗಳಲ್ಲಿ ಆಸಕ್ತನಾಗಿದ್ದವನು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಚಿಂತಕ-ಪ್ರಜಾಹಿತಕಾರಿಯಾಗಿದ್ದವನು. ಒಮ್ಮೆ ರಾಜ್ಯದಲ್ಲಿ ಕ್ಷಮವು ತಲೆದೋರಿದಾಗ, ಅದರ ಪರಿಹಾರಾರ್ಥವಾಗಿ ಈತನು ಕೊಲ್ಲಾಪುರದ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿ ತನ್ನ ಎಡಗೈ ಹೆಬ್ಬೆರಳನ್ನು ಕತ್ತರಿಸಿ ಅರ್ಪಿಸಿದನಂತೆ. (‘ತೇಪ್ಯೇಕೈಕಮತರ್ಪಯನ್ ಕಿಲ ಮಹಾಲಕ್ಷ್ಮ್ಯಾಸ್ವವಾಮಾಂಗುಲಿಂ’-ಸಂಜಾನ ಶಾಸನ.)

ಈತನು ಅನಿವಾರ್ಯವಾಗಿ ಹಲವು ಬಂಡಾಯ ಯುದ್ಧಗಳನ್ನು ಎದುರಿಸಿದನಾದರೂ ಕಾಳಗಕ್ಕಿಂತ ಹೆಚ್ಚಾಗಿ ಸಾಮಸಂಧಾನಗಳಿಗೇ ಗಮನಕೊಟ್ಟಂತೆ ತೋರುತ್ತದೆ. ಚಲುಕ್ಯರ ಜೊತೆ ಮೊದಲು ಸಾಕಷ್ಟು ಹೋರಾಡಿದರೂ ಮುಂದೆ, ರಾಷ್ಟ್ರಕೂಟ ಕನ್ಯೆಯೊಬ್ಬಳನ್ನು ಚಲುಕ್ಯ ವಿಷ್ಣುವರ್ಧನನಿಗೆ ಮದುವೆ ಮಾಡಿಸಿ ಸ್ನೇಹ ಗಳಿಸಿಕೊಂಡ; ಗಂಗವಾಡಿಯೊಡನೆ ಮೈತ್ರಿಯನ್ನು ಕುದುರಿಸಿಕೊಳ್ಳಲಿಕ್ಕಾಗಿ ತನ್ನ ಮಗಳಾದ ಚಂದ್ರೋಬಲಬ್ಬೆಯನ್ನು ಗಂಗರಾಕುಮಾರ ಬೂತುಗನಿಗೆ ಕೊಟ್ಟು ವಿವಾಹ ವಿವಾಹಮಾಡಿದ(ಕ್ರಿ.ಶ. ೮೬೦);ತನ್ನ ಇನ್ನೊಬ್ಬಳು ಮಗಳು ಶಂಖಾ ಎಂಬುವವಳನ್ನು ಪಲ್ಲವರ ನರಸಿಂಹವರ್ಮನಿಗೆ ಕೊಟ್ಟು ವಿವಾಹ ಮಾಡಿದ ಎನ್ನುವ ಸೂಚನೆಗಳೂ ಸಿಗುತ್ತವೆ.

ನೃಪತುಂಗನ ಇಂಥ ಅಸಾಧಾರಣ ವ್ಯಕ್ತಿತ್ವವು ಕೂಡಾ ಆಗಿನ ನಿರ್ಣಾಯಕ ಘಟ್ಟದಲ್ಲಿ ಹೊಸ ರಾಜಕೀಯ ಸೂತ್ರವೊಂದನ್ನು ಸ್ಫುರಣಗೊಳಿಸಿಕೊಳ್ಳಲು ಸಹಾಯಕವಾಯಿತು. ಆತನು ಕನ್ನಡ ರಾಜ್ಯವನ್ನು ಕಟ್ಟಿದನೆಂಬುದಷ್ಟೇ ಅಲ್ಲ; ಆಮೂಲಕ, ಭಾರತೀಯ ರಾಜಕಾರಣದಲ್ಲಿ ಅದುವರೆಗೆ ಸಾಮಾನ್ಯಸೂತ್ರವಾಗಿದ್ದ ‘ಪರಾಕ್ರಮದ ಸಾರ್ವಭೌಮತ್ವ’ವೆಂಬುದಕ್ಕೆ ಪ್ರತಿಯಾಗಿ ‘ಭಾಷಾಜನಪದದ ಸಾರ್ವಭೌಮತ್ವ’ವೆಂಬ ಹೊಸ ಸೂತ್ರವೊಂದನ್ನು ಆವಿಷ್ಕಾರಗೊಳಿಸಿದ. ಇದರ ಮಹತ್ವವನ್ನು ಕುರಿತು ಮುಂದೆ ಪ್ರಸ್ತಾಪಿಸುತ್ತೇನೆ.

ಅಂತಿಮವಾಗಿ ಕನ್ನಡ ಕೂಡಲ ಸಂಗಮವು ಸಿದ್ಧಿಸುವ ತನಕ, ಹಲವು ವಾಹಿನಿಗಳಲ್ಲಿ ಇದು ತುಂಬಿಕೊಳ್ಳುತ್ತ ಬಂದಿತಲ್ಲ, ಆ ಸಹಸ್ರಮಾನದ ವಿಶಾಲಕ್ಷೇತ್ರವನ್ನು ಕವಿರಾಜಮಾರ್ಗದ ಅವಿಚ್ಛಿನ್ನ ಹಿನ್ನೆಲೆಯೆಂದು ನಾನು ಸೂಚಿಸುತ್ತೇನೆ.

ವರ್ತಮಾನದಲ್ಲಿ ನೋಟದ ನೆಲೆ

ಇನ್ನು ಈ ಇಡೀ ಹಿನ್ನೆಲೆ ಚಿತ್ರವನ್ನು ಯಾವ ನಿರ್ಧಿಷ್ಟ ನಿರ್ಧಿಷ್ಟ ಬಿಂದುವಿನಲ್ಲಿ ನಾನು ನೋಡುತ್ತಿದ್ದೇನೆ ಎಂಬುದನ್ನು ಹೇಳಬೇಕು.

೧೯೫೨ರ ಸಮಯದಲ್ಲಿ ಗುರುಗಳಾದ ಎಸ್.ವಿ.ಪರಮೇಶ್ವರಭಟ್ಟರು ನಾಲ್ಕಾರು ದಿನ ನನ್ನನ್ನು ಕೂರಿಸಿಕೊಂಡು ‘ಕವಿರಾಜಮಾರ್ಗ’ವನ್ನು ಓದಿಹೇಳಿದ್ದರು. ಆಮೇಲೆ ಆಗಾಗ ನಾನು ಅದನ್ನು ಓದುತ್ತಿದ್ದುದುಂಟು. ಆದರೆ ಈ ಗ್ರಂಥವು ನನ್ನಲ್ಲಿ ನಿಜವಾಗಿ ಸ್ಫೋಟಿಸಿದ್ದು ೧೯೮೦ರ ದಶಕದಲ್ಲಿ. ಗೋಕಾಕ್ ವರದಿಯ ಪರವಾದ ಚಳುವಳಿಯು ಆಗ ಪ್ರಾರಂಭವಾಗಿತ್ತು. ಅಥವಾ ಅದು ಮುಗಿದಿತ್ತು ಅಂತ ನೆನಪು. ಆಗ ಓದುವಾಗ ‘ಕವಿರಾಜಮಾರ್ಗ’ದ ಪಠ್ಯವು ಹಿಂದೆ ಓದಿದ್ದಕ್ಕಿಂತ ಭಿನ್ನವಾದ ಬೇರೆಯೇ ಹೊಸ ಗ್ರಂಥವೆನ್ನುವಂತೆ ಕಂಡಿತು. ಬಹುಪಾಲು ನನ್ನೆದುರೇ ನಡೆದಿದ್ದ ನಮ್ಮ ಈಚಿನ ಇತಿಹಾಸವಾಹಿನಿಯ ಮೇಲೆ ಅದು ಬೆಳಕು ಚೆಲ್ಲಿ ಬೆಳಗಿಸುತ್ತಿರುವಂತೆ ಭಾಸವಾಯಿತು. ಅದಂರೆ-

ಸ್ವಾತಂತ್ರಪೂರ್ವದ ಸುಮಾರು ಒಂದು ಶತಮಾನದುದ್ದವೂ ಭಾರತವು ರೂಪಿಸಿಕೊಂಡು ಬಂದ, ಸ್ವಾಯತ್ತ ಭಾಷಾರಾಜ್ಯಗಳು ಮತ್ತು ಅವುಗಳ ಒಕ್ಕೂತವಾದ ಸ್ವತಂತ್ರ-ಅಖಂಡ-ವಿಕೇಂದ್ರೀಕೃತ ಪ್ರಜಾತಂತ್ರಾತ್ಮಕ ಭಾರತ ಭಾರೀ ಕನಸು; ಮತ್ತು ಸ್ವಾತಂತ್ರ್ಯ ಪ್ರಾಪ್ತಿಯಾಗುತ್ತಿರುವಾಗಲೇ ಧರ್ಮ ಭೇದದ ನೆಪದಿಂದಾಗಿ ನಡೆದ ಭಾರತದ ದೇಹಚ್ಛೇದ;

ಅನಂತರ ನಡೆದ ಭಾಷಾರಾಜ್ಯ ಹೋರಾಟಗಳು; ಆಂಧ್ರದ ಪೊಟ್ಟಿ ಶ್ರೀರಾಮುಲು ಅವರ ಆಮರಣ ಉಪವಾಸ ಮತ್ತು ಸಾವು; ಅದರ ಪರಿಣಾಮವಾಗಿ ಭಾಷಾರಾಜ್ಯಗಳ ಉದಯ; ೧೯೫೬ರಲ್ಲಿ ಕರ್ನಾಟಕ(ವಿಶಾಲ ಮೈಸೂರು)ರಾಜ್ಯದ ಸ್ಥಾಪನೆ;

ಈ ಮಧ್ಯದ ತಮಿಳುನಾಡಿನ ದ್ರಾವಿಡ ಚಳಿವಳಿ; ಪ್ರತ್ಯೇಕ ದ್ರಾವಿಡರಾಷ್ಟ್ರವನ್ನು ನಿರ್ಮಿಸುವ ಬೆದರಿಕೆ; ಅಕಾಲಿಕಗಳ ಪ್ರತ್ಯೇಕತೆಯ ಚಳುವಳಿ; ಕಾಶ್ಮೀರದ ಆಕ್ರಮಣ ಮತ್ತು ಅದು ಇಬ್ಭಾಗವಾಗುವ ಭಯ;

ಈ ಹಿನ್ನೆಲೆಯಲ್ಲಿ ಭಾಷಾರಾಜ್ಯಗ್ಳ ನಿರ್ಮಾಣಕ್ಕೆ ತೀವ್ರ ವಿರೋಧ; ಜನಾಂಗ-ಧರ್ಮ-ಜಾತಿಗಳ ಹಾಗೆಯೇ ಭಾಷೆಯೂ ಛಿದ್ರೀಕರಣಕ್ಕೆ ದಾರಿ ಮಾಡೀತು ಎನ್ನುವ ವಾದ; ಭಾಷಾರಾಜ್ಯ ನಿರ್ಮಾಣ ಕುರಿತು ನೆಹರು ಅವರ ಅಸಮಧಾನ, ಅಸಮ್ಮತಿ; ಕರ್ಣಾಟಕ ಏಕೀಕರಣಕ್ಕೆ ಒಳಗಿನಿಂದಲೇ ಭಿನ್ನಾಭಿಪ್ರಾಯಗಳು, ವಿರೋಧಗಳು; ಐದು ಕರ್ಣಾಟಕಗಳಿರಲಿ ಎಂಬ ಡಿ.ವಿ.ಜಿ. ಅವರ ವಾದ;

ಭಾಷಾರಾಜ್ಯಗಳು ಉದಯವಾದ ಮೇಲಿನ ಗಡಿವಿವಾದ ಜಗಳಗಳು; ಬೆಳಗಾವಿ, ಬಳ್ಳಾರಿ, ಬೆಂಗಳೂರು, ದಕ್ಷಿಣಕನ್ನಡ ಮುಂತಾಗಿ ನಾಲ್ಕು ಮೂಲೆಗಳಲ್ಲಿ ಕನ್ನಡದ ನೆಲವು ಕತ್ತರಿಸಿ ಹೋದದ್ದು; ನದಿವಿವಾದಗಳು, ವಲಸೆ ವಿವಾದಗಳು, ಈ ಸಂಬಂಧ ಚಳುವಳಿಗಳು, ಹಿಂಸೆಯ ಘಟನೆಗಳು;

ಕಾಶ್ಮೀರ, ಪಂಜಾಬ್, ಅಸ್ಸಾಂ ಮತ್ತು ಪೂರ್ವಾಂಚಲ ರಾಜ್ಯಗಳಲ್ಲಿನ ಪ್ರತ್ಯೇಕತಾ ಚಳುವಳಿಗಳು ಮತ್ತು ಅದಕ್ಕೆ ವಿದೇಶಗಳಿಂದ ಕುಮ್ಮಕ್ಕು; ಸೈನ್ಯ ಕಾರ್ಯಾಚರಣೆಗಳು ಪಂಜಾಬ್‌ನ ಅಮೃತಸರದಲ್ಲಿ ನಡೆದ ಹತ್ಯಾಕಾಂಡ ಮತ್ತು ಅದರ ಪರಿಣಾಮವಾಗಿ ದೆಹಲಿಯಲ್ಲಿ ನಡೆದ ಕರಾಳ ಹಿಂಸೆ ಹತ್ಯೆಗಳು; ಮಹಾರಾಷ್ಟ್ರರದಲ್ಲಿ ಶಿವಸೇನೆಯು ಹುಟ್ಟಿ ಬೆಳೆದು ಅಲ್ಲಿ ಬೆಳೆಸಿದ ಭಯೋತ್ಪಾದಕ ಚಳುವಳಿಗಳು; ಬಾಂಗ್ಲಾದೇಶವು ಪಾಕಿಸ್ತಾನದಿಂದ ವಿಭಜನೆಗೊಂಡದ್ದು ಮತ್ತು ಅದರಲ್ಲಿ ಭಾರತದ ಕಿಂಚಿತ್ ಕುಮ್ಮಕ್ಕು;

ಕರ್ನಾಟಕದಲ್ಲಿನ ಕನ್ನಡ ಚಳುವಳಿಗಳು;ಗೋಕಾಕ್, ಸರೋಜಿನಿ ಮಹಿಷಿ ಆಯೋಗ ವರದಿಗಳು ಮತ್ತು ಅವುಗಳ ಪರ ವಿರೋಧ ಚಳುವಳಿಗಳು; ಜಾತಿ ಪ್ರಾತಿನಿಧ್ಯ ಕುರಿತ ಚಳುವಳಿಗಳು; ತಮಿಳು ವಲಸೆಗಾರರ ವಿರುದ್ಧ, ಕಾವೇರಿ ವಿವಾದಕ್ಕೆ ಸಂಬಂಧಿಸಿ ಚಳುವಳಿಗಳು; ಹಿಂಸಾತ್ಮಕ ಘಟನೆಗಳು; ಗೋಕಾಕ್ ವರದಿ ವಿರುದ್ಧ ಬರೆದ ಡೆಕ್ಕನ್ ಹೆರಾಲ್ಡ್ ಸಂಪಾದಕೀಯಕ್ಕೆ ಪ್ರತಿಭಟನೆ; ಬೆಂಗಳೂರಲ್ಲಿ ಬೆಳೆದ ಕನ್ನಡ ಚಳುವಳಿ ಪರಂಪರೆ;

ಇವನ್ನು ಹಿಂಬಾಲಿಸಿದ ಇತ್ತೀಚಿನ ಕೊಡಗು, ಉತ್ತರ ಕರ್ನಾಟಕ, ಹೈದರಬಾದು ಕರ್ಣಾಟಕ, ತಮಿಳುನಾಡು, ಮಲೆನಾಡು ಕರಾವಳಿ ಪ್ರಾಂತ ಮುಂತಾದ ಪ್ರತ್ಯೇಕತೆಯ ಕೂಗುಗಳು ಇತ್ಯಾದಿ ಇತ್ಯಾದಿ.

-ಹೀಗೆ ನಡೆದಿರುವ ಇತಿಹಾಸ ಸರಣಿಯಲ್ಲಿ ನಾವು ಯಾಯಾವ ಸಮಸ್ಯೆ ಸವಾಲುಗಳನ್ನು ಎದುರಿಸುತ್ತ ಕಂಗೆಟ್ಟಿದ್ದೆವೋ ಕಳವಳಗೊಂಡಿದ್ದೆವೋ ಅಂಥ ಸಮಸ್ಯೆಗಳ ಮೂಲವನ್ನು ಎಂದರೆ ಪ್ರಾಯಃ, ಕನ್ನಡತನದ ತಾತ್ತ್ವಿಕತೆ ಮತ್ತು ಅನುಷ್ಠಾನದ ಸಮಸ್ಯೆಗಳನ್ನು ಸಂಬೋಧಿಸಿಯೇ ‘ಕವಿರಾಜಮಾರ್ಗ’ಮಾತಾಡುತ್ತಿದೆ ಹಾಗೂ ಈ ಸಮಸ್ಯೆಗಳ ಜೊತೆ ಅನುಸಂಧಾನಕ್ಕೆ ಬೇಕಾದ ವಿವೇಕ-ಉಪಾಯಗಳ ಬಗ್ಗೆ ಚಿಂತಿಸಿದೆ ಅಂತ ಕಂಡಿತು.

ಅಲ್ಲದೆ, ಅದು ಕಾಕತಾಳಿಯವೆಂದರೂ ಸರಿಯೆ, ನಮಗೂ ‘ಕವಿರಾಜಮಾರ್ಗ’ಕ್ಕೂ ನಡುವೆ ಬಲು ಕುತೂಹಲದ ಕೊಂಡಿಯೊಂದಿದೆ ಎಂಬುದನ್ನು ಗಮನಿಸಬೇಕು. ಆ ಕಾಲದಲ್ಲಿ ನೃಪತುಂಗನು ಕಟ್ಟಿದ ಕಾವೇರಿ-ಗೋದಾವರಿ ಮೇರೆಯ ಸಮಗ್ರ ಕನ್ನಡ ರಾಜ್ಯವೆಂಬುದು ಅವನ ಅನಂತರ ಮತ್ತೆ ಕಾಣದಂತೆ ಮಾಯವಾಗಿ ಬಿಟ್ಟಿತು. ಮತ್ತು, ಈ ನಕಾಶೆಯ ಸಮಗ್ರ ಕನ್ನಡವು ಇನ್ನೊಮ್ಮೆ ಸುಮಾರಾಗಿಯಾದರೂ-ಗೋದಾವರಿಯಲ್ಲದಿದ್ದರೆ ಕೃಶ್ಣೆಯಿಂದ, ಕಾವೇರಿತನಕ-ಅದೇ ಆಕೃತಿಯ ಭಾಷಾರಾಜ್ಯವಾಗಿ ಅಸ್ತಿತ್ವ ಕಂಡದ್ದು, ಹನ್ನೊಂದು ಶತಮಾನಗಳ ಅನಂತರ ೧೯೫೬ರಲ್ಲಿ, ನಮ್ಮ ಕಾಲದಲ್ಲಿಯೇ.

ಭಾಷೆ ಮತ್ತು ರಾಜ್ಯಗಳ ಬಂಧ-ಸಂಬಂಧ

ನಮ್ಮ ಇವತ್ತಿನ ಕನ್ನಡದ ವಿಶಿಷ್ಟ ಸಂದರ್ಭಬಿಂದುವಿನಲ್ಲಿ ನಿಂತು, ಆಗಿನ ಸಹಸ್ರಮಾನದ ಹಿನ್ನೆಲೆಯಲ್ಲಿ ನೃಪತುಂಗನನ್ನೋ ಅಥವಾ ಮತ್ತೇನನ್ನೋ ಗುರಿಯಿಟ್ಟು ಲಕ್ಷಿಸುವ ಬದಲಿಗೆ ‘ಕವಿರಾಜಮಾರ್ಗ’ಗ್ರಂಥವನ್ನು ಕೇಂದ್ರಚಿತ್ರವಾಗಿ ಕಾಣುತ್ತಿದ್ದೇನಲ್ಲ, ಯಾಕೆ?

ನೆಬ್ರಿಜಾ ಎಂಬವನ ಕಥೆ ಹೇಳುತ್ತಾರೆ. ಆಂಟೋನಿಯೊ ನೆಬ್ರಿಜಾ(ಕ್ರಿ.ಶ. ೧೪೪೪-೧೫೨೨) ಸ್ಪೆಯಿನ್‌ನಲ್ಲಿ ಖ್ಯಾತ ರಾಣಿ ಇಸಾಬೆಲ್ಲಾಳ ಆಳ್ವಿಕೆಯ ಕಾಲದಲ್ಲಿದ್ದವನು. ಆ ರಾಣಿಯು ಸ್ಪೆಯಿನ್ ರಾಜ್ಯವನ್ನು ವಿಸ್ತರಿಸುವುದರಲ್ಲಿ ಆಸಕ್ತಳಾಗಿದ್ದವಳು. ಕೊಲಂಬಸ್ ಅದೇ ಕಾಲದವನು. ಕೊಲಂಬಸ್‌ನು ಖಂಡಾಂತರ ಸಮುದ್ರಯಾನ ಸಾಹಸದ ಯೋಜನೆ ಹಾಕಿ ಅದಕ್ಕೆ ರಾಣಿಯ ಆಶ್ರಯ ಸಹಾಯಗಳನ್ನು ಪಡೆದುಕೊಂಡು ಯಾತ್ರೆ ಹೊರಟಿದ್ದ ಕಾಲದಲ್ಲೇ ನೆಬ್ರಿಜಾ ತನ್ನದೊಂದು ಯೋಜನೆಯನ್ನು ರಾಣಿಯ ಮುಂದಿಟ್ಟು ಅದಕ್ಕೆ ಆಶ್ರಯ ಸಹಾಯಗಳನ್ನು ಬೇಡಿದ್ದ. ನೆಬ್ರಿಜಾ ಅಷ್ಟರಲ್ಲಾಗಲೇ ಒಂದು ಒಳ್ಳೆಯ ಲ್ಯಾಟಿನ್ ವ್ಯಾಕರಣ ಗ್ರಂಥವನ್ನು ಬರೆದಿದ್ದ. ಯೂರೋಪಿನಲ್ಲಿ ಆಗಷ್ಟೇ ಮುದ್ರಣತಂತ್ರವು ಕಾಲಿಡುತ್ತಿದ್ದು, ಈತನ ಗ್ರಂಥವು ಮೊತ್ತಮೊದಲಿನ ಮುದ್ರಿತಗ್ರಂಥಗಳಲ್ಲೊಂದಾಗಿ ಪ್ರಕಟವಾಗಿತ್ತು.

ನೆಬ್ರಿಜಾನ ಮನವಿಯ ಸಾರಾಂಶ ಇದು: ‘ಸ್ಪೆಯಿನ್ ಪ್ರಜೆಗಳು ಬಳಸುತ್ತಿರುವ ಕಾಸ್ಟಲಿನ್ ಭಾಷೆಯು ಈಗ ಯಾವುದೇ ನಿಯಂತ್ರಣವಿಲ್ಲದೆ, ಸ್ಥಳಸ್ಥಳಕ್ಕೂ ಭಿನ್ನವಾಗಿಹೋಗಿದೆ; ನೂರಾರು ‘ಗ್ರಾಮ್ಯ’ಗಳಲ್ಲಿ ಛಿದ್ರವಾಗಿ ಹೋಗಿದೆ. ಮತ್ತು, ಹಿಡಿತವಿಲ್ಲದೆ ಇದು ದಿನದಿನವೂ ಬದಲಾಗುತ್ತಹೋಗುತ್ತಿದೆ. ಹೀಗೆ ಭಾಷೆಯು ಛಿದ್ರೀಕರಣವಾಗಿರುವುದರಿಂದ ನಮ್ಮ ಸಾಮ್ರಾಜ್ಯವೇ ಛಿದ್ರವಾಗಿದೆ. ಮತ್ತು, ಇವತ್ತಿನ ಭಾಷೆಯಲ್ಲಿ ಬರೆದಿಟ್ಟ ರಾಣಿಯ ವೈಭವದ ಇತಿಹಾಸವು ಮುಂದಿನ ಜನಕ್ಕೆ ತಲುಪದೆ ವ್ಯರ್ಥವಾಗುವಷ್ಟು ಇದು ತ್ವರೆಯಲ್ಲಿ ಬದಲುಗೊಳ್ಳುತ್ತಿದೆ. ಒಂದು ಸಾಮ್ರಾಜ್ಯವನ್ನು ಮತ್ತು ಇತಿಹಾಸವನ್ನು ನಿರ್ಮಿಸಬೇಕೆಂದರೆ ಅದಕ್ಕೆ ತಕ್ಕುದಾದ ಒಂದು ಸ್ಥಿರ(-ಪ್ರಮಾಣ)ಭಾಷೆಯನ್ನು ನಿರ್ಮಿಸಿಕೊಳ್ಳಬೇಕು. ರಾಣಿಯ ಅಧಿಕೃತ ಮುದ್ರೆಯುಳ್ಳ ಪ್ರಮಾಣ-ರಾಜಭಾಷೆಯೊಂದು ಈಗ ಅತ್ಯಗತ್ಯವಾಗಿದೆ. ನಾನೀಗ ಈ ಛಿದ್ರಭಾಷೆಯನ್ನು ಶುದ್ಧಗೊಳಿಸಿ ಸಂಕಲಿಸಿ ಅದಕ್ಕೊಂದು ವ್ಯಾಕರಣವನ್ನು ರಚಿಸುತ್ತೇನೆ ಮತ್ತು ಆ ಮೂಲಕ ಪ್ರಮಾಣ ರಾಜ್ಯಭಾಷೆಯನ್ನು ನಿರ್ಮಿಸುತ್ತೇನೆ. ಅದಕ್ಕೆ ರಾಣಿಯ ಸಮ್ಮತಿ ಸಹಾಯಗಳನ್ನು ಬೇಡುತ್ತೇನೆ’, ಅಲ್ಲದೆ, ಆತನು ಭಾಷೆ-ಸಾಮ್ರಾಜ್ಯಗಳ ಸಂಬಂಧವನ್ನು ಸೂತ್ರೀಕರಿಸಿ ವಿವರಿಸುತ್ತಾನೆ: ‘ಭಾಷೆಯೆನ್ನುವುದು ಯಾವೊತ್ತೂ ಸಾಮ್ರಾಜ್ಯದ ಸಂಗಾತಿ, ಶಾಶ್ವತ ಸಹಚರಿ.’

ಕೊಲಂಬಸ್‌ನ ಸಾಹಸಯಾತ್ರೆಯು ತನ್ನ ರಾಜ್ಯವಿಸ್ತರಣೆಗೆ ಹೇಗೆ ಸಹಾಯಕವಾದೀತು ಎಂಬುದೇ ಅರ್ಥವಾಗದೆ, ಮೊದಲಿಗೆ ಅದನ್ನು ನಿರಾಕರಿಸಿದ್ದ ರಾಣಿ ಇಸಾಬೆಲ್ಲಾಳಿಗೆ ನೆಬ್ರಿಜಾನ ಯೋಜನೆ ಹೇಗೆ ಅರ್ಥವಾದೀತು? ಆದರೆ ಕೊಲಂಬಸ್‌ನ ಹಾಗೇ ನೆಬ್ರಿಜಾನೂ ಹಲವು ವಶೀಲಿಗಳ ಮೂಲಕ ಕಡೆಗೂ ರಾಣಿಯನ್ನೊಪ್ಪಿಸಿದ; ರಾಣಿಯ ನೆರವು ಪಡೆದು ಮೊತ್ತಮೊದಲ ಸ್ಪಾನಿಶ್ ವ್ಯಾಕರಣವನ್ನು ರಚಿಸಿ ಪ್ರಕಟಿಸಿದ. ಇದೇ ಐರೋಪ್ಯ ಪ್ರಾಂತಭಾಷೆಗಳಲ್ಲಿ ಬಂದ ಮೊತ್ತಮೊದಲ ವ್ಯಾಕರಣ ಗ್ರಂಥ ಅಂತಲೂ ಇವೊತ್ತಿಗೂ ತನ್ನ ಶ್ರೇಷ್ಠತೆಯನ್ನುಳಿಸಿಕೊಂಡಿರುವಂಥದು ಅಂತಲೂ ಹೇಳುತ್ತಾರೆ.

ಒಂದು ರಾಜ್ಯ ಅಥವಾ ಸಾಮ್ರಾಜ್ಯದ ನಿರ್ಮಾಣಕ್ಕೆ ಮೊದಲು ಭಾಷೆಯ ನಿರ್ಮಾಣವಾಗಬೇಕು ಹಾಗೂ ಭಾಷೆಯಲ್ಲಿ ಭಾವೀ ರಾಜ್ಯದ ಅಸ್ತಿವಾರನಕ್ಷೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎನ್ನುವಂಥ ಆಲೋಚನೆ ಅರಿವುಗಳು ನೆಬ್ರಿಜಾನಿಗಿಂತ ತುಂಬಾ ಹಳೆಯದೇ. ನೆಬ್ರಿಜಾನಿಗೂ ಸುಮಾರು ಎರಡು ಸಹಸ್ರವರ್ಷಗಳಷ್ಟು ಹಿಂದೆಯೇ, ಭಾರತದ ಬಹುಶಃ ಮೊತ್ತಮೊದಲನೆಯ ಸಾಮ್ರಾಜ್ಯವನ್ನು ನಿರ್ಮಿಸಲು ನಂದರು ಪ್ರಯತ್ನತೊಡಗಿದಾಗ, ಅದಕ್ಕೆ ಬುನಾದಿಯಾಗಿ ‘ಅರ್ಥಶಾಸ್ತ್ರ’ವು(ಅಲ್ಲಿ ‘ಅರ್ಥಶಾಸ್ತ್ರ’ವೆಂದರೆ, ರಾಜ್ಯಶಾಸ್ತ್ರ ಮತ್ತು ಆಡಳಿತ ಶಾಸ್ತ್ರ) ರಚನೆಯಾಯಿತು. ಆಮೇಲೆ ಅಶೋಕ ಚಕ್ರವರ್ತಿಯ ಕಾಲಕ್ಕೆ- ‘ಸಾಮ್ರಾಜ್ಯ ನಿರ್ಮಾಣದ ಬುನಾದಿಯೆಂದರೆ ಕೇವಲ ರಾಜ್ಯಶಾಸ್ತ್ರ-ಆದಳಿತಶಾಸ್ತ್ರಗಳಿಂದ ಅಧಿಕಾರಿಗಳಿಂದ ಸಜ್ಜುಗೊಳಿಸಿಕೊಳ್ಳುವುದಷ್ಟೇ ಅಲ್ಲ, ಅಷ್ಟೇ ಮುಖ್ಯವಾಗಿ ಸಮರ್ಥವದ ಭಾಷೆಯ ಮೂಲಕ ಪ್ರಜಾಜನರ ಮನಸ್ಸನ್ನು ಆಕರ್ಶಿಸಿ ಆದೇಶಿಸಿ ಸಂಸ್ಕಾರಗೊಳಿಸಬೇಕಾದ್ದೂ ಅಗತ್ಯ’ ಎಂಬ ತಿಳಿವು ಹೊಳೆದಿರಬೇಕು. ಅದಕ್ಕಾಗಿಯೇ ಅಶೋಕನ ಧರ್ಮಶಾಸನ-ಉಪದೇಶ ಶಾಸನಗಳು ದೇಶಾದ್ಯಂತ ಸ್ಥಾಪನೆಗೊಂಡವು. ಈ ಪ್ರಕ್ರಿಯೆಯಲ್ಲಿಯೇ ನಮ್ಮಲ್ಲಿ ‘ಲಿಪಿ’ಗಳ ವ್ಯಾಪಕ ಬಳಕೆಯು ತೊಡಗಿತೆಂದು ತೋರುತ್ತದೆ. ಈಗಲೂ ಕಾಣಸಿಗುವ ನಮ್ಮ ಅತ್ಯಂತ ಪ್ರಾಚೀನ ಲಿಪಿಲಿಖಿತಗಳೆಂದರೆ ಈ ಕಾಲದವೇ. ಇದಕ್ಕೂ ಮುಂದೆ ಬಂದ ಗುಪ್ತರು, ತಮ್ಮ ಬೃಹತ್ ಸಾಮ್ರಾಜ್ಯ ನಿರ್ಮಾಣದ ಜೊತೆಜೊತೆಗೆ, ಅದಕ್ಕೆ ಅಸ್ತಿವಾರವೆನ್ನುವಂತೆ, ಒಂದು ಮಹಾ ವಾಙ್ಮಯ ಸಾಮ್ರಾಜ್ಯವನ್ನು ನಿರ್ಮಿಸುವ ಬೃಹತ್ ಸಾಹಸವನ್ನು ಕೈಗೊಂಡರು. ಪ್ರಭುತ್ವವರ್ಗದ ಆಡಳಿತಶಿಕ್ಷಣ ಮತ್ತು ಪ್ರಜಾವರ್ಗದ ಸೀಮಿತ ಶಾಸನಶಿಕ್ಷಣ ಗಳಷ್ಟೇ ಅಲ್ಲದೆ, ಇಡೀ ಉಪಖಂಡವನ್ನು ವ್ಯಾಪಿಸಿದ ಸಮಾನವಾದೊಂದು ಸಂಭಾವಿತ ಸಂಸ್ಕೃತಿಯನ್ನು, ಅರ್ಥಾತ್ ಸಾಮ್ರಾಜ್ಯಕ್ಕೆ ಅಡಿಪಾಯವಾಗುವ ಜನಮನೋಭೂಮಿಕೆಯನ್ನು ನಿರ್ಮಿಸುವ ಸಲುವಾಗಿ ಅವರು, ಅಷ್ಟದಶಪುರಾಣ-ಪುಣ್ಯಕಥೆಗಳಿಂದ ತೊಡಗಿ ಗಣಿತ-ಜ್ಯೋತಿಷ-ಕಾವ್ಯ-ನಾಟ್ಯ-ಕಾಮಶಾಸ್ತ್ರಗಳ ತನಕವೂ ಗ್ರಂಥರಾಶಿಗಳ ತನಕವೂ ಗ್ರಂಥರಾಶಿಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿದರು. ಭಾಷೆ-ಸಾಮ್ರಾಜ್ಯಗಳ ಸಂಬಂಧದ ಈ ಹಿನ್ನೆಲೆಯಲ್ಲಿ ಕರಾಮಾ ಗ್ರಂಥವು ಆಕಾಲದ ಕನ್ನಡರಾಜ್ಯ ನಿರ್ಮಾಣ ಪ್ರಯತ್ನದ ಕೇಂದ್ರಬಿಂದುವಾಗಿ ನನಗೆ ಕಾಣಿಸುತ್ತಿದೆ.

‘ಕವಿರಾಜಮಾರ್ಗ’ವೆಂಬ ಹೆಸರಿನ ಬಗ್ಗೆ ಎಲ್ಲರೂ ವಿವರಣೆಗಳನ್ನು ಕೊಟ್ಟಿದ್ದಾರೆ. ಆ ಪ್ರಕಾರ ಈ ತನಕ ಕಲ್ಪಿತವಾಗಿರುವ ಅರ್ಥಗಳು ಎರಡು: ೧. ಕವಿಯ ಅಥವಾ ಕವಿಗಳ ರಾಜಮಾರ್ಗ(ಕವಿ+ರಾಜಮಾರ್ಗ); ೨. ಕವಿಗಳ ರಾಜನಂತಿರುವನು(ರು) ಸಮೆದ ಮಾರ್ಗ(ಕವಿರಾಜ+ಮಾರ್ಗ). ಆದರೆ ಈ ಗ್ರಂಥದ ಸಂದರ್ಭದಲ್ಲಿ ‘ಕವಿರಾಜಮಾರ್ಗ’ ಎಂಬುದಕ್ಕೆ ಸರಳವಾಗಿ ನೇರವಾಗಿ ಹೊರಡಬೇಕಾದ ಮುಖ್ಯಾರ್ಥವೆಂದರೆ- ‘ಕವಿ(ಮತ್ತು)ರಾಜ(ಕೂಡಿ ನಿರ್ಮಿಸಿದ) ಮಾರ್ಹ’ ಎನ್ನುವುದೇ. ಯಾಕೆಂದರೆ, ಅದು ವಾಸ್ತವವಾದದ್ದು. ಶೀವಿಜಯ ಮತ್ತು ನೃಪತುಂಗರು ಇದರ ಜಂಟಿ ಕರ್ತೃತ್ವದ ವಿಷಯವನ್ನು ಗ್ರಂಥದ ಉದ್ದಕ್ಕೂ ಅನೇಕ ಕಡೆಗಳಲ್ಲಿ ಮತ್ತೆ ಮತ್ತೆ ಖಚಿತಗೊಳಿಸಿ ಹೇಳಲಾಗಿದೆ ಹಾಗೂ ಅದನ್ನೇ ಗ್ರಂಥಶೀರ್ಷಿಕೆಯಲ್ಲಿ ಕೂಡಾ ದೃಢೀಕರಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ‘ಕವಿರಾಜ’ ಎನ್ನುವ ನುಡಿಗಟ್ಟಾಗಲಿ ಅಥವಾ ‘ರಾಜಮಾರ್ಗ’ ಎನ್ನುವ ನುಡಿಗಟ್ಟಾಗಲಿ ಈ ಗ್ರಂಥದ ಕಾಲಕ್ಕೆ ಅಥವಾ ಹಿಂದೆ, ಕನ್ನಡ-ಸಂಸ್ಕೃತ ವಾಙ್ಮಯಗಳಲ್ಲಿ ಪ್ರಚುರವಾಗಿದ್ದಂತೆ ಕಂಡುಬರುವುದಿಲ್ಲ. ಈ ಕೃತಿಯ ಒಳಗೆ ನೋಡಿದರೆ, ಕವೀಂದ್ರ-ಕವೀಶ-ಕವೀಶ್ವರ-ಕವಿವೃಷಭ-ಕವಿಪ್ರಧಾನ ಇತ್ಯಾದಿ ಬಗೆಬಗೆಯ ಮಾತುಗಳಿದ್ದರೂ ಕವಿರಾಜ ಎಂಬುದಾಗಲಿ ಅಥವಾ ರಾಜಮಾರ್ಗ ಎಂಬುದಾಗಲಿ ಕಾಣಸಿಗುವುದಿಲ್ಲ. ಇದೊಂದು ಅಲಂಕಾರ ಗ್ರಂಥವೆಂಬ ನಿಶ್ಚಿತಿಯಷ್ಟೇ ಎಲ್ಲರ ಮನಸ್ಸಲ್ಲೂ ನಟ್ಟುಕೊಂಡದ್ದರಿಂದ ಮತ್ತು ಈ ಗ್ರಂಥವನ್ನು ವಿವಿಕ್ತವಾಗಿ ಅಥವಾ ಸೀಮಿತ ಹಿನ್ನೆಲೆಯಲ್ಲಿಟ್ಟು ನೋಡುತ್ತ ಬಂದದ್ದರಿಂದ ಈ ತನಕವೂ ನಾವು ಶೀರ್ಷಿಕೆಯ ಮುಖ್ಯಾರ್ಥವನ್ನು ಗ್ರಹಿಸಲಿಕ್ಕಾಗದೆ ಕಳೆದುಕೊಂಡುಬಿಟ್ಟಿದ್ದೇವೆ.

ಹಾಗಂತ, ಈತನಕ ನಾವು ಕೊಟ್ಟುಕೊಂಡಿರುವ ಎರದು ಅರ್ಥಗಳನ್ನು ನಾನು ನಿರಾಕರಿಸಲಾರೆ. ಶಬ್ದಗಳು ಏನೇನನ್ನು ಧವನಿಸಿ ಕೊದಬಲ್ಲವೋ ಅವೆಲ್ಲವನ್ನೂ ಭಾವಿಸಿ ಗ್ರಹಿಸಿ ಸಮಸ್ತವನ್ನೂ ಕೈಯೊಡ್ಡಿ ಸ್ವೀಕರಿಸಬೇಕಾದ್ದು ಸಹೃದಯತ್ವದ ಮೊದಲ ಲಕ್ಷಣ. ಈಗ ಇರುವ, ೧. ಕವಿ+ರಾಜಮಾರ್ಗ; ೨. ಕವಿರಾಜ+ಮಾರ್ಗ ಎಂಬ ಅರ್ಥಗಳ ಜೊತೆಗೆ ಇನ್ನೆರಡು ಅರ್ಥಗಳನ್ನು ನಾನು ಸೂಚಿಸುತ್ತೇನೆ: ೩. ಕವಿ(ಮತ್ತು)ರಾಜ(ಜಂಟಿಯಾಗಿ ನಿರ್ಮಿಸಿದ)ಮಾರ್ಗ; ೪. ಸ್ವತಃ ಕವಿಯಾಗಿರುವ ರಾಜ(ಕವಿರಾಜ)ನು ನಿರ್ಮಿಸಿದ ಮಾರ್ಗ. ಇವುಗಳಲ್ಲಿ ‘ಕವಿ ಮತ್ತು ರಾಜ ಜಂಟಿಯಾಗಿ ನಿರ್ಮಿಸಿದ ಮಾರ್ಗ’ ಎನ್ನುವುದನ್ನು ಮುಖ್ಯಾರ್ಥವಾಗಿಯೂ ಉಳಿದವನ್ನು ಅದರ ಉಪಾರ್ಥ-ಧ್ವನಿಗಳಾಗಿಯೂ ಗ್ರಹಿಸಬೇಕು ಎನ್ನುವುದು ನನ್ನ ಸೂಚನೆ. ಶೀರ್ಷಿಕೆಯು ಈ ಹಲವು ಅರ್ಥಗಳನ್ನು ಧ್ವನಿಸುತ್ತವೆಂಬುದು ತಿಳಿದೇ ಶ್ರೀವಿಜಯನು ಅದನ್ನು ಆಯ್ಕೆಮಾಡಿಕೊಂಡ ಎಂಬುದರಲ್ಲಿ ಸಂದೆಹವಿಲ್ಲ. ಅಲ್ಲದೆ. ‘ಕವಿಯಾಗಿರುವ ರಾಜನು ನಿರ್ಮಿಸಿದ್ದು’ ಎಂಬ ಧ್ವನಿಯು ತನ್ನ ಪ್ರೀತಿಯ ರಾಜನಿಗೆ ಪ್ರಿಯವಾದೀತು ಅಂತಲೂ ಆತ ಸಂತೋಷಗೊಂಡಿರಬೇಕು.

ಪ್ರಧಾನ ಅರ್ಥವೆಂದು ನಾನು ಸೂಚಿಸಿರುವುದು ಪಠ್ಯದಿಂದಲೇ ದೊರಕುವ ನೇರ ಸೂಚನೆ ಎನ್ನುವುದಷ್ಟೇ ಅಲ್ಲದೆ, ಈ ಅರ್ಥವು ಗ್ರಂಥವನ್ನೋದುವ ಇವತ್ತಿನ ನಮಗೆ ಗ್ರಂಥದ ಅರ್ಥವಂತಿಕೆಯನ್ನು ಕಾಣಿಸಲಿಕ್ಕೂ ಸಹಾಯಕವಾಗುತ್ತದೆ ಎಂದು ನನ್ನ ಭಾವನೆ. ಈ ಅರ್ಥವು ಕವಿ ಕಾಯಕ ಮತ್ತು ರಾಜಕಾಯಕಗಳ, ಅರ್ಥಾತ್ ಕಾವ್ಯ(ಭಾಷೆ) ಮತ್ತು ಪ್ರಭುತ್ವಗಳ ಶಕ್ತಿಯುತ ಸಂಬಂಧವನ್ನು ಸೂಚಿಸುವಂತೆ ಉದ್ಭೋಧಕವಾಗಿದೆ. ಕವಿಕಾಯವು ‘ಭಾವ’ದ ಸೂಕ್ಷ್ಮಸ್ತರಕ್ಕೆ ಸಂಬಂಧಿಸಿದು ಮತ್ತು ಪ್ರಭುತ್ವ ಕಾಯಕವು ‘ಭವ’ದ ಮೂರ್ತಸ್ತರಕ್ಕೆ ಸಂಬಂಧಿಸಿದ್ದು. ಮೊದಲ ‘ಭಾವಲೋಕ’ದ ನಿರ್ಮಾಣವಾಗಿ ಅನಂತರ ಅದರ ಅಸ್ತಿವಾರ ನಕ್ಷೆಯ ಮೇಲೆ ‘ಭವಲೋಕ’ವು ನಿರ್ಮಾಣಗೊಳ್ಳುತ್ತದೆ. ಭಾವದಲ್ಲಿ ಸ್ಫುರಿಸಿ ಭಾಶೆಯಲ್ಲಿ ನಾಮರೂಪಗಳಾಗಿ ಚಿತ್ರಗೊಳ್ಳದೆ ಯಾವುದೇ ಕ್ರಿಯೆಯೂ ಘಟಿಸಲಾರದಷ್ಟೆ? ಕವಿಯೂ ರಾಜನೂ ಕೂಡಿಕೊಂಡು ಭಾವಕನ್ನಡ ಭವಕನ್ನಡಗಳ ಸಂಯುಕ್ತ ಸೃಷ್ಟಿಗೆ ಕೈಚಾಚಿರುವುದನ್ನು ದಾಖಲಿಸುವ ‘ಕವಿರಾಜಮಾರ್ಗ’ವು ಆ ಕಾರಣದಿಂದ, ಅಸಾಧಾರಣ ಅನನ್ಯವಾಗಿದೆ.

ಮೊದಲಿಗೆ ಶ್ರೀವಿಜಯನು ‘ಕವಿಮಾರ್ಗ’ವೆಂಬ ಗ್ರಂಥವನ್ನು ರಚಿಸಿದ್ದು ಆಮೆಲೆ ನೃಪತುಂಗನ ಸಹಭಾಗಿತ್ವದೊಂದಿಗೆ ಅದನ್ನು ವಿಸ್ತರಿಸಿ ‘ಕವಿರಾಜಮಾರ್ಗ’ವಾಗಿ ಪುನರ್ರೂಪಿಸಿರಬೇಕು ಅಂತ ಕೆಲವರು ಊಹಿಸಿದ್ದಾರೆ. ಗಟ್ಟಿಯಾದ ಅಧಾರವಿಲ್ಲದ ಆ ಊಹೆಯನ್ನು, ಅದು ನಿಜವೇ ಅಂತಲ್ಲದಿದ್ದರೂ, ಕವಿಯ ನುಡಿ-ಪ್ರಯತ್ನಕ್ಕೆ ರಾಜನ ನಾದು-ಪ್ರಯತ್ನವು ಒಗ್ಗೂಡಿಕೊಂಡಿತು ಎಂಬುದರ ‘ಐತಿಹ್ಯ’ವಾಗಿ ಒಪ್ಪಿಕೊಳ್ಳುತ್ತೇನೆ.

ಇಲ್ಲಿ ಪುನಃ, ಭಾಷೆ-ಪ್ರಭುತ್ವಗಳ ಸಂಬಂಧವನ್ನು ಕುರಿತ ನೆಬ್ರಿಜಾನ ಮಾತು ನೆನಪಾಗುತ್ತದೆ. ತತ್ತ್ವಾಧಾರಿತ ಮೇರೆಗಳುಳ್ಳ ಹೊಸಬಗೆಯದೊಂದು ‘ಸಾರ್ವಭೌಮತ್ವ’ ನಿರ್ಮಾಣಕ್ಕಾಗಿ ಭಾಷಾಪ್ರಯತ್ನ-ಪ್ರಭುತ್ವ ಪ್ರಯತ್ನಗಳು ಹೀಗೆ ಒಗ್ಗೂಡಿಕೊಂಡು ಒಂದು ಪಠ್ಯವನ್ನು ಸೃಷ್ಟಿಸಿರುವ ಉದಾಹರಣೆಯು ಜಗತ್ತಿನ ವಾಙ್ಮಯದಲ್ಲಿ ಇನ್ನೊಂದು ಸಿಕ್ಕಲಿಕ್ಕಿಲ್ಲ.

ಈಗ ನಾವು ಕವಿರಾಜಮಾರ್ಗದ ಒಳಾಂಗಣಕ್ಕಿಳಿದುಕೊಳ್ಳಬೇಕು. ಈ ತನಕ ಹೇಳಿದುದೆಲ್ಲವನ್ನೂ ಗ್ರಂಥದೊಳಗಿನ ಮಿಂಚುಗಳೇ ಹೊಳೆಯಿಸಿದವಾದ್ದರಿಂದ ಅದನ್ನೇ ನಾನು ಮೊದಲು ಪ್ರಸ್ತಾಪಿಸಬೇಕಿತ್ತಾದರೂ ಕಥನದ ಸೌಕರ್ಯಕ್ಕಾಗಿ ಹಿಂದುಮುಂದು ಮಾದಿಕೊಂಡೆ. ಅದೀಗ ಎರಡು ಮೂರನೆಯ ಭಾಗವಾಗುತ್ತಿದೆ.

– ೨ –
ಪಠ್ಯ ವಾಸ್ತುವಿನ ಒಳಸುತ್ತು (ಪೀಠಿಕಾಗರ್ಭ)

‘ಕವಿರಾಜಮಾರ್ಗ’ದ ಇಡೀ ಪಠ್ಯವನ್ನು ಸ್ಥೂಲವಾಗಿ ಒಮ್ಮೆ ನೆನಪಿಸಿಕೊಳ್ಳೋಣ: ಗ್ರಂಥವು ಪದ್ಯಗಳಲ್ಲಿ ರಚಿತವಾಗಿದ್ದು ಮೂರು ಪರಿಚ್ಛೇದಗಳಾಗಿ ವಿಭಾಗಗೊಂಡಿದೆ; ಒಟ್ಟೂ ಕೂಡಿ ಇದರಲ್ಲಿ ೫೩೬ (ಅಥವಾ ೫೪೧) ಪದ್ಯಗಳಿವೆ;(೧ರಲ್ಲಿ ೧೫೦, ೨ರಲ್ಲಿ ೧೫೫, ೩ರಲ್ಲಿ ೨೩೨(ಅಥವಾ ೨೩೭); ಪದ್ಯಗಳಲ್ಲಿ ಬಹುಪಾಲು(೪೧೩) ಕಂದಪದ್ಯಗಳಿದ್ದು ಉಳಿದವು ವೃತ್ತ ಶೋಕ ಗೀತಿಕೆಗಳಾಗಿವೆ. ೧ನೇ ಪರಿಚ್ಛೇದವು, ‘ದೋಷಾದೋಷನಿರ್ಣಯ’,೨ನೆಯದು, ‘ಶಬ್ದಾಲಂಕಾರ’,೩ನೆಯದು, ‘ಅರ್ಥಾಲಂಕಾರ’-ಎಂದು ವಿಷಯ ವಿಭಜನೆಯಿದೆ. ವಿಷಯಾನುಕ್ರಮವು ಸ್ಥೂಲವಾಗಿ ಹೀಗೆ:

ಪರಿಚ್ಛೇದ ೧: ಪೀಠಿಕೆ(ಪದ್ಯ ೧ರಿಂದ೪೨);ದೋಷಗಳ ಬಗ್ಗೆ ಎಚ್ಚರಿಕೆ, ದೇಸಿಯಲ್ಲಿನ ಹಲವು ಕನ್ನಡಗಳಿಂದಾಗಿ ಮತ್ತು ‘ಪಳಗನ್ನದ’ದ ಅನುಸರಣೆಯಿಂದಾಗಿ ಒದಗುವ ದೋಷಬಾಹುಳ್ಯ(೪೩-೫೦); ಕನ್ನಡ ಸಸ್ಕೃತಗಳ ಬೆರಕೆ ಹೊಂದಾಣಿಕೆಗಳಲ್ಲಿನ ದೋಷ ಅದೋಷಗಳು(೫೧-೬೧); ಸೃತಿದುಷ್ತಾದಿ ನಾಲ್ಕು, ಯತಿಭಂಗಾದಿ ಹದಿನಾರು ದೋಷಗಳು ಮತ್ತು ಕಾರಕಾದಿ ದೋಷಗಳು(ಇವು ಸಂಸ್ಕೃತದ ಶಾಸ್ತ್ರದಲ್ಲಿ ಹೇಳಿದವೇ ಆಗಿದ್ದರೂ ಅವುಗಳನ್ನು ಕನ್ನಡಕ್ಕೆ ಅನ್ವಯಿಸಿ ವಿಶಿಷ್ಟವಾಗಿಯೇ ಲಕ್ಷಿಸಲಾಗಿದೆ) (೬೨-೧೪೬); ಇವುಗಳ ಪ್ರಾರಂಭದಲ್ಲೇ ಕನ್ನದದಲ್ಲಿ ರೂಢಿಗೊಂಡಿರುವ ‘ಯತಿವಿಲಂಘನ’ದ ವೈಶಿಷ್ಟ್ಯದ ನಿರೂಪಣೆ (೭೫-೭೬); ಉಪಸಂಹಾರ (೧೪೭-೧೫೦).

ಪರಿಚ್ಛೇದ ೨. ಅಲಂಕಾರ, ಅರ್ಥಾಲಂಕಾರ-ಶಬ್ದಾಲಂಕಾರಗಳ ನಿರೂಪಣೆ(೧-೩); ಪುನಃ, ಶಬ್ದಾರ್ಥ ದೋಷಗಳ ವಿವರಣೆ(೪-೨೯); ಕನ್ನಡಕ್ಕೆ ಅತಿಶಯವಾದ ‘ಪ್ರಾಸ’ದ ವಿಚಾರ, ಪ್ರಾಸಭೇದಗಳು(೩೦-೪೫); ಉತ್ತರಮಾರ್ಗ-ದಕ್ಷಿಣಮಾರ್ಗ ಮತ್ತು ತತ್ಸಂಬಂಧಿ ಗುಣಗಳು(ಕನ್ನದದಲ್ಲಿಯೂ ಮಾರ್ಗಭೇದಗಳ ಸ್ಥಾಪನೆ)(೪೯-೧೧೧); ದುಷ್ಕರ ಅಥವಾ ಚಿತ್ರಕಾವ್ಯಗಳ ನಿರೂಪಣೆ(೧೧೨-೧೫೨); ಉಪಸಂಹಾರ(೨೫೩-೨೫೫).

ಪರಿಚ್ಛೇದ ೩. ಅರ್ಥಾಲಂಕಾರಗಳು, ಪೂರ್ವ ಸಂಸ್ಕೃತಶಾಸ್ತ್ರಗಳಲ್ಲಿನ ೩೫ಅಲಂಕಾರಗಳು(೧-೨೦೮); ೩೬ನೆಯದಾಗಿ ‘ಧ್ವನಿ’ ಯೆಂಬ ಅಲಂಕಾರದ ನಿರೂಪಣೆ(೨೦೯); ಮಹಾಕಾವ್ಯಲಕ್ಷಣ(೨೧೦-೨೧೮); ನೃಪತುಂಗ ಸಭಾಸದನ ವರ್ಣನೆ(೨೧೯-೨೩೧); ಸಮಾಪ್ತಿ ವಾಕ್ಯ(೨೩೨); ಪ್ರಾಸದ ವಿಶೇಷ ವಿಚಾರ(ಪ್ರಕ್ಷಿಪ್ತ?) ೫ ಪದ್ಯಗಳು.
ಈ ಎಲ್ಲಾ ಪರಿಚ್ಛೇದಗಳಲ್ಲೂ ಗುಣದೋಷ ಅಲಂಕಾರಗಳನ್ನು ಲಕ್ಷಿಸುವ ಲಕ್ಷಣಪದ್ಯಗಳ ಜೊತೆಗೆ, ಪ್ರಾಯಃ ಕೃತಿಕಾರನೇ ರಚಿಸಿಕೊಟ್ಟಿರುವ ಲಕ್ಷ್ಯಪದ್ಯಗಳಿವೆ.

ಹೀಗೆ ವಿಷಯಾನುಕ್ರಮಣಿಯನ್ನು ಗಮನಿಸಿದಾಗ, ಇದು ಸಂಸ್ಕೃತ ಅಲಂಕಾರ ಗ್ರಂಥಗಳನ್ನನುಸರಿಸಿದ ಕಾವ್ಯಾಲಂಕಾರಗ್ರಂಥವೆಂದು ತಟ್ಟನೆ ಕಾಣಿಸಿಕೊಳ್ಳುತ್ತದೆ. ಆದರೆ ಹಾಗೆ ನಿರ್ಣಯಿಸುವ ಮೊದಲು ಪೀಠಿಕಾಭಾಗವನ್ನು ಎಚ್ಚರ ಏಕಾಗ್ರತೆಗಳಿಂದ ಗಮನಿಸಬೇಕು ಎಂಬುದು ನನ್ನ ಅಪೇಕ್ಷೆ. ಈ ಭಾಗವನ್ನು ಈತನಕ ಯಾರೂ ಗಮನಿಸಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಈ ೪೨ಪದ್ಯಗಳಲ್ಲಿ ಹೆಚ್ಚಿನವನ್ನು ಎಲ್ಲರೂ ಸಾಮಾನ್ಯವೆಂಬಂತೆ ಮತ್ತೆ ಮತ್ತೆ ಉದ್ದರಿಸಿದ್ದಾರೆ, ವಿವೇಚಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ. ಆದರೆ- ೧. ಈ ಪದ್ಯಗಳು ಕೂಡ ಒಂದು ಸುಬದ್ಧ ಅರ್ಥಖಂಡ(ಪೀಠಿಕಾಕಂಡ ಎನ್ನೋಣ)ವನ್ನು ನಿರ್ಮಿಸಿವೆ ಎನ್ನುವುದನ್ನು ಮತ್ತು, ೨. ಈ ಅರ್ಥಖಂಡಕ್ಕೂ ಇನ್ನುಳಿದ ಪಠ್ಯಭಾಗಕ್ಕೂ ಒಂದು ಸಾವಯವ ಆವಿನಾ-ಸಂಬಂಧವಿದೆ ಎನ್ನುವುದನ್ನು ನಾವು ಈತನಕ ಸರಿಯಾಗಿ ಮನಗಂಡುಕೊಂಡಿಲ್ಲ.
ಎಂದರೆ, ಈ ಪೀಠಿಕೆಯ ಪದ್ಯಗಳು ಅವುಗಳ ಚೆಲುವಿಗಾಗಿ ಹಾಗೂ ಅವು ಪ್ರಕಟಿಸುವ ತಿಮುಖ್ಯ ಸಂಗತಿಗಳ ತುಣುಕುಗಳಿಗಾಗಿ ಬಹು ಆಕರ್ಷಕವೆನಿಸಿ ಎಲ್ಲರಿಂದ ಪ್ರಶಂಸೆಗೊಂಡಿವೆಯಾದರೂ ತಾತ್ಪರ್ಯದಲ್ಲಿ, ಗ್ರಂಥಾರಂಭದ ವಿವಿಕತ ಉದ್ಗಾರಗಳೆಂಬಂತೆ, ತೂಗಾಡುತ್ತಿರುವ ಬಿಡಿ ಪದ್ಯಗಳೆಂಬಂತೆ ಪರಿಗಣಿತವಾಗಿಬಿಟ್ಟಿವೆ. ಹೀಗಾಗಲಿಕ್ಕೆ ಬಹುಶಃ, ಎರಡು ಮುಖ್ಯ ಕಾರಣಗಳಿವೆ: ೧. ಇಂದೊಂದು ಅಲಂಕಾರ ಗ್ರಂಥವೆಂಬ ಪೂರ್ವನಿಶ್ಚಯ ಮತ್ತು, ೨. ಈ ಪದ್ಯಗಳಲ್ಲೇ ಇರುವ ಸುಲಭಾನ್ವಯದ ಕೊರತೆ. ವಾಸ್ತವವಾಗಿ ಈ ಗ್ರಂಥವು, ಅದರಲ್ಲೂ ಪೀಠಿಕಾಭಾಗವು, ಸ್ಪುಟಾರ್ಥವುಳ್ಲ, ‘ಕೇವಲ ಶಾಸ್ತ್ರ’ವೋ ಅಥವಾ ತರ್ಕಬದ್ಧವಾದ ಖಚಿತ ವಾದಮಂಡನೆಯೋ ಆಗಿರದೆ ಬಹುಮಟ್ಟಿಗೆ, ‘ಕಾವ್ಯ’ವಾಗಿದೆ; ಎಂದರೆ, ಸಹೃದಯ ಪ್ರತಿಭೆಯಲ್ಲಿ ಧ್ವನಿಗಳು ಅನುರಣಿಸಿ ಆಧ್ಯಾಹೃತಗಳು ಪೂರಣಗೊಂಡು ಪುನಃ ಸೃಷ್ಟಿಸಿಗೊಳ್ಳಬೇಕಾದ ‘ಸೃಜನಶೀಲ ರಚನೆ’ಯಾಗಿದೆ. ಶ್ರೀವಿಜಯನು ಬಹುತೇಕ ‘ಕವಿ’; ವಿಲ್ಲಾ ಕಡೆ ತನ್ನನ್ನು ‘ಕವಿ’ಯೆಂದೇ ಕರೆದುಕೊಂಡು ಹೆಮ್ಮೆಪಟ್ಟುಕೊಂಡಿದ್ದಾನೆ. ‘ಪೇಳ್ದನ್-ಇಂತು-ಉರು-ಕಾವ್ಯಮಂ’(೩-೨೨೪) ಎಂದು, ಈ ಗ್ರಂಥವನ್ನು ‘ಕಾವ್ಯ’ವೆಂದೇ ಅವನು ಸ್ಪಷ್ಟವಾಗಿ ಸೂಚಿಸಿದ್ದಾನೆ. ಸೂಕ್ಷ್ಮವಾದ ಈ ಅಂಶವನ್ನು ಅದ್ಯಂತ ನೆನಪಿಟ್ಟುಕೊಂಡೇ ನಾವು ಈ ಗ್ರಂಥವನ್ನು ಪರಿಶೀಲಿಸಬೇಕು. ಹಾಗಲ್ಲದಿದ್ದರೆ ಇಲ್ಲಿನ ಹಲವು ದ್ವಂದಾರ್ಥ-ಬಹ್ವರ್ಥಗಳ ಸಂದಿಗ್ಧ ಅಸ್ಪಷ್ಟ ಶಿಥಿಲ ನಿರೂಪಣೆಗಳು ನಮ್ಮನ್ನು ಕಂಗೆಡಿಸಿಬಿಡುತ್ತವೆ.

ಪೀಠಿಕೆಯ ವಿಷಯ – ಅನುಕ್ರಮ

ಗ್ರಂಥದ ಪೀಠಿಕಾ ಭಾಗವನ್ನು ಈಗ ಕೊಂಚ ವಿವರವಾಗಿ ಪರಿಶೀಲಿಸೋಣ. ಅದರ ವಿಷಯಾನುಕ್ರಮ ಹೀಗಿದೆ:
ದೈವ(ವಿಷ್ಣು) ಸ್ತುತಿಯ ನೆಪದಲ್ಲಿ, ‘ನೀತಿನ್ರಂತರ’, ‘ಉದಾರ’, ‘ಅತಿಶಯಧವಳ’ ಇತ್ಯಾದಿ ಬಿರುದುಗಳುಳ್ಳ ರಾಜಾ ನೃಪತುಂಗನ ಸ್ತುತಿ (ಪ್.೧-೨); ಸರಸ್ವತೀ ಪ್ರಾರ್ಥನೆ(ಪ್ರಾಯಃ, ಜೈನಧರ್ಮಕ್ಕೆ ಹೊಂದದಿರುವ ‘ಚತುರ್ಮುಖ’ನ ಉಲ್ಲೇಖವನ್ನು ಕೈಬಿಟ್ಟು, ದಂಡಿಯಿಂದ ಮಾಡಿಕೊಂಡಿರುವ ಅನುವಾದ- ೩) ಪೂರ್ವ ಕವಿ ನಮನ (೪); ನೃಪತುಂಗ ಸಭಾಸದರ ಪ್ರಶಂಸೆ; ‘ವಿದಗ್ಧನಲ್ಲದವನು ಅಲ್ಲಿಗೇತಕ್ಕೆ ಬಂದಾನು?’(೫-೬);
‘ಮೃಗ ಪಶು ಪಕ್ಷಿಗಳಿಗೂ ಭಾಷೆಯಿದೆ; ಹಾಗೇ ಮನುಷ್ಯರಲ್ಲೂ ವಚನ (ಭಾಷಾ) ಪ್ರವೃತ್ತಿ ಸಹಜ; ಆದರೆ ಬಹುತೇಕ ಅದು ಪ್ರಾಣೆಪಕ್ಷಿಗಳಲ್ಲಿರುವ ಹಾಗೇ ಮುಗ್ಧವಾದ್ದು (೭-೮); ಕೃತಿರಚನೆ ಮಾಡುವವನು ಪೂರ್ವದ ಕಾವ್ಯ ಮತ್ತು ಶಾಸ್ತ್ರಗಳನ್ನು ಕಲಿತಿರಬೇಕು; ಹಾಗಂತ, ಜಡರಾದವರು ಗುರುಮುಖದಿಂದ ಕಲಿತಗೂ ಕಲಿತಷನ್ನೇ ಹೇಳುವಂಥ ಗಿಳಿಗಳಾಗಿಬಿಡಬಹುದು; ಅವರಿಗೆ ನುಡಿಯ ಬಲ್ಮೆ ಸಿದ್ಧಿಸುವುದಿಲ್ಲ’ (೯-೧೦) (ಇವು ಸಾಮಾನ್ಯವಾಗಿ ಸಂಸ್ಕೃತದಲ್ಲಿ ಹೇಳಿದಂಥವೇ);
‘ಹೇಳಬೇಕಾದ್ದನ್ನು ಉದ್ದೇಶಿಸಿದ ಪ್ರಕಾರವೇ ಇನ್ನೊಬನಿಗೆ ತಿಳಿಸಬಲ್ಲವನು ಮಾತು ಅರಿತವನು; ಅದನ್ನೇ ಕಿರಿದರಲ್ಲಿ ಹಿರಿಯ ಅರ್ಥ ಬರುವಂತೆ ಅಡಕಮಾಡಿ ಹೇಳಬಲ್ಲವನು ಜಾಣ; ಮಾತುಗಳನ್ನು ಛಂದಸ್ಸಿನಲ್ಲಿ ಅವಳವಡಿಸಿ ಹೇಳಬಲ್ಲವನು ಅವನಿಗಿಂತ ಜಾಣ; ತಡೆಯಿಲ್ಲದೆ ಮಾರ್ಗ ಮಹಾಕೃತಿಗಳನ್ನು ರಚಿಸಬಲ್ಲವನು ಎಲ್ಲರಿಗಿಂತ ಹೆಚ್ಚಿನವನು(ಹೀಗೆ ೪ಸ್ತರಗಳು);ಒಟ್ಟಿನಲ್ಲಿ ಮಾತು ಬಲ್ಲವರು ಕೆಲವರು ಮತ್ತು ಅವರಲ್ಲಿ ನೀತಿ(ಮಾರ್ಗ)ಯನ್ನೂ ಕಾವ್ಯನೀತಿಯನ್ನೂ ಅರಿತ ಪರಮ ಕವಿವೃಷಭರು(ಬಹುಮೇಲಿನ ೪ನ್೩ಯ ಸ್ತರದವರು) ಅತ್ಯಲ್ಪ(೧೫-೧೭);ಅಂಥ ಕವಿಪ್ರಧಾನರ ಕಾವ್ಯಗಳು ಪಾಪ-ಪುಣ್ಯ, ಹಿತ-ಅಹಿತ, ಸುಖ-ದುಃಖ, ಈ ದ್ವಂದ್ವಗಳನ್ನು ಅರಿವಿಗೊಳಿಸುತ್ತವೆ ಮತ್ತು ಲೋಕ-ಶಾಸ್ತ್ರ ವಿವೇಕ, ಅಭ್ಯುದಯ, ಮೋಕ್ಷ ಮುಂತಾದುವು ಇಂಥ ಕಾವ್ಯಗಳಲ್ಲಿ ಪ್ರಕಟಗೊಳ್ಳುತ್ತವೆ; ಇವೇ ಸಮಸ್ತಲೋಕಕ್ಕೆ ಹಿತವನ್ನುಂಟುಮಾದುವಂಥವು(೧೮-೨೦);ಹೋಗೆ ಕಾವ್ಯರಚನೆ ಮಾಡಿದವನು ಅನಂತಕೀರ್ತಿಯನ್ನು ಪಡೆಯುತ್ತಾನೆ’(೨೧);(೧೮-೨೦ಈ ಭಾಗವು ಈ ಗ್ರಂಥದ ಸ್ವಂತಿಕೆಯ ಹೇಳಿಕೆ);

‘ಬಗೆಬಗೆಯ ಅರ್ಥಗಳನ್ನು ಪ್ರಕಟಿಸುವಂತೆ ವಿಶೇಷ ಶಬ್ದರಚನೆ-ಅಲಂಕಾರಗಳುಳ್ಳದ್ದಾಗಿ ಸೂಕ್ತ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಕವಿಭಾವವೇ ಕಾವ್ಯ; ನರಲೋಕಚಂದ್ರ ನೃಪತುಂಗನ ಅಭಿಪ್ರಾಯದಂತೆ, ಕಾವ್ಯ ವಸ್ತು ಪುರುಷ-ನಿಗೆ ಆತನ ಶರೀರ ಮತ್ತು ಆತನ ಅಲಂಕಾರ ಎಂಬ ಎರಡು ಭಾಗಗಳು; ಈ ಎರಡರಲ್ಲಿ ಪುನಃ ಅನೇಕ ಭೇಧಗಳಿವೆ; ಅತಿಶಯಧವಳನ ಕ್ರಮದಲ್ಲಿ ಮತ್ತು ಪೂರ್ವ ಪ್ರಯೋಗಗಳ ಪ್ರಕಾರ ಗದ್ಯ-ಪದ್ಯಗಳೆಂಬ ಎರಡು ಭೇದಗಳು; ಅವೆರಡರಲ್ಲಿ ಪುನಃ ಉಪಭೇದಗಳಿವೆ’(೨೨-೨೫)

‘ಚೊಕ್ಕಟವಾದ ಸಂಸ್ಕೃತದಲ್ಲಿ ಹರ್ಷಚರಿತ, ಕಾದಂಬರಿ ಇ., ಗದ್ಯಕೃತಿಗಳು ಪ್ರಖ್ಯಾತವಾಗಿವೆ; ಕನ್ನಡದಲ್ಲಿ ವಿಶೇಷವಾಗಿ(ಗದ್ಯಪದ್ಯಗಳೆರಡಲ್ಲದೆ)ಗದ್ಯಪದ್ಯ ಮಿಶ್ರಿತವಾದ್ದೂ ಇದ್ದು ಅದನ್ನು ಗದ್ಯಕಥೆ-ಯೆನ್ನುತ್ತಾರೆ; ಎಲ್ಲಾ ಕಲೆ ಭಾಷೆಗಳಲ್ಲಿ, ಲೌಕಿಕ-ಸಾಮಯಿಕಗಳಲ್ಲಿ ವ್ಯಾಪಕ ವಿಷಯಗಳಲ್ಲಿ ತಿಳಿವಿಲ್ಲದವನು ಇದನ್ನು ಬರೆಯಲಾರ; ಕನ್ನಡದಲ್ಲಿ ಇದನ್ನು ಬರೆದು ಗದ್ಯಾಶ್ರಮಗುರು-ಗಳೆಂದು ಪ್ರಸಿದ್ಧರಾದವರು, ವಿಮಲೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮುಂತಾದವರು’(೨೬-೨೯);

‘ಎಲ್ಲರಿಗೂ ಹೃದ್ಯವಾಗುವ ಪದ್ಯಕಾವ್ಯವೆಂಬುದು ಛಂದೋಬದ್ಧವಾಗಿ ವೃತ್ತ, ಜಾತಿ ಮುಂತಾದ ಬಂಧಗಳಲ್ಲಿರುವಂಥದು, ವಿದ್ಯಾಪರಿಣಿತಿಯುಳ್ಳದ್ದು; ಖ್ಯಾತರಾದ ಗುಣಸೂರಿ, ನಾರಾಯಣ, ಭಾರವಿ, ಕಾಳಿದಾಸ, ಮಾಘ ಮುಂತಾದವರು(ಸಂಸ್ಕೃತದಲ್ಲಿ)ಮಹಾಕಾವ್ಯಗಳನ್ನು ರಚಿಸಿರುವ ಕವಿ ವೃಷಭರು; ಕನ್ನಡದಲ್ಲಿ, ಶ್ರೀವಿಜಯ, ಕವೀಶ್ವರ, ಪಂಡಿತಚಂದ್ರ, ಲೋಕಪಾಲ ಮುಂತಾದವರ ನಿರತಿಶಯ ವಸ್ತುವಿಸ್ತರ-ಕಾವ್ಯಗಳು ಆದ್ಯಕಾವ್ಯಗಳು’(೩೦-೩೨);

‘ಕನ್ನಡನಾದಿನಲ್ಲಿ ಪೂರ್ವಕವಿಗಳು ಚತ್ತಾಣ ಮತ್ತು ಬೆದಂಡೆಯೆಂಬ ಪ್ರಕಾರಗಳನ್ನು ರೂಢಿಗೊಳಿಸಿದ್ದಾರೆ ಮತ್ತು ಇವು ಉಳಿದ ಎಲ್ಲಾ ಭಾಷೆಗಳಲ್ಲಿ ಇರುವಂಥವಲ್ಲ(೩೩); ಕಂದವೃತ್ತಗಳೂ ಒಂದೊಂದು ಕಡೆ ಜಾತಿ ಛಂದಸ್ಸೂ ಕೂಡಿ ಸುಂದರವಾಗಿರುವ ರಚನೆಯು ಬೆದಂಡೆ(೩೪); ಹಲವು ಕಂದಗಳು, ಚೆಲುವಾದ ವೃತ್ತಗಳು, ಅಕ್ಕರ-ಗೀತಿಕ-ಚೌಪದಿ-ತ್ರಿಪದಿ ಇ.ಗಳ ಚಂದಮಿಶ್ರಣದಿಂದ ರಚಿತವಾದ್ದು ಚತ್ತಾಣ’(೩೫)

‘ಕಾವೆರಿಯಿಂದಂ-ಅ-ಗೋದಾವರಿವರಮ್-ಇರ್ದ-ನಾಡು-ಅದು-ಆ-ಕನ್ನದದೊಳ್-ಭಾವಿಸಿದ-ಜನಪದಂ; (ಇದು) ವಸುಧಾ-ವಲಯ-ವಿಲೀನ, ವಿಶದ,-ವಿಷಯ-ವಿಶೇಷಂ.(೩೯೯೯೬); ಇದರಲ್ಲಿ ಕಿಸವೊಳಲು-ಕೊಣಪ-ಪುಲಿಗೆರೆ-ಒಂಕುಂದ ಈ ಊರುಗಳ ನದುವಣ ಪ್ರದೇಶವು ಕನ್ನಡದ ತಿರುಳು’(೩೭);

‘ಈ ನಾಡಿನವರು ಹದವರಿತು ಹೇಳಲು, ಹೇಳಿದುದನ್ನು ಅರಿತು ಲಾಲಿಸಿಕೊಳ್ಳಲು ಶಕ್ತರು; ನಿಜವಾಗಿ ಚದುರರು; ಕುರಿತು ಓದಿಕೊಳ್ಳದಿರುವವರೂ ಕಾವ್ಯಪ್ರಯೋಗ ಪರಿಣಿತಮತಿಗಳು; ಕುರಿತು ಓದಿಕೊಳ್ಳದ ಇಂಥವರಲ್ಲೂ ಎಲ್ಲರೂ ತಮ್ಮ ತಮ್ಮ ನುಡಿಗಳಲ್ಲಿ ಜಾಣರು; ಚಿಕ್ಕ ಮಕ್ಕಳೂ ಮಹಾ ಮೂಕರೂ ಕೂಡಾ ವಿವೇಕದ ಮಾತುಗಳನ್ನಾದಬಲ್ಲವರೇ; ಅಷ್ಟು ಜಾಣರಲ್ಲದವರೂ ಛಲವುಳ್ಳವರಾಗಿ, ಕೃತಿಯಲ್ಲಿ ಅವಗುಣ ಕಂಡಿತೆಂದರೆ ತಜ್ಞತೆಯಿಲ್ಲದಿದ್ದರೂ ತಜ್ಞರ ಹಾಗೇ ಅವಗುಣವನ್ನು ಹಿಡಿದು ದೂಷಿಸುತ್ತಾರೆ’(೩೮-೪೦);

‘ಸಂಸ್ಕೃತ ಪ್ರಾಕೃತಗಳಲ್ಲಿ ಲಕ್ಷ್ಯಲಕ್ಷಣಗಳು ಖಚಿತವಾಗಿ ನಿರೂಪಿತವಾಗಿದ್ದು ದೊರಕುತ್ತವೆಯಾಗಿ ಕಾವ್ಯರಚನೆ ಅಷ್ಟು ಕಷ್ಟದ್ದಲ್ಲ;ಕನ್ನಡದಲ್ಲಿ, ಸಿಗುವ ಚಿಂದಿಚಿಂದಿಗಳನ್ನು ತಿರಿದುತಂದು ಅದರಿಂದ ಎಲ್ಲರಿಗೂ ತಿಳಿವಹಾಗೆ ಶಾಸ್ತ್ರವನ್ನು ರಚಿಸುತ್ತೇನೆನ್ನುವುದು ಯಾರಿಗೂ ಸಾಧ್ಯವಿಲ್ಲ; ಕನ್ನಡಕ್ಕೆ ಈ ನಾಡಿನವರೇ ಗುರುಗಳು; ಅವರಿಗೆ ಸಂಸ್ಕೃತಾದಿಗಳ ಪರಮಾಚಾರ್ಯರ ಹಾಗೆ ಶಾಸ್ತ್ರವನ್ನು ಸರಳವಾಗಿ ಹೇಳಲು ಸಾಧ್ಯವಾಗದು’(೪೧-೪೨);

‘ಕಾವ್ಯದಲ್ಲಿ ಒಂದೇ ಅವಗುಣವಿದ್ದರೂ ಅದು ಚೆಲುವಾದ ಕಣ್ಣಿನಲ್ಲಿ ತೊಡರಿದ ಕಸದಹಾಗೆ ದೂರಲು ಕಾರಣವಾಗುತ್ತದೆ; ಆದ್ದರಿಂದ ಆಲಸ್ಯವಿಲ್ಲದೆ, ಅಸಾದ್ಯಕ್ಕೆ ಹಂಬಲಿಸದೆ, ಸರಿಯಾಗಿ ವಿವೇಚಿಸಿ ದೋಷವನ್ನು ಹೋಗಲಾಡಿಸಿ, ಉದಾರ ನೃಪತುಂಗದೇವನು ಹೇಳುವ ಕ್ರಮದಲ್ಲಿ ರಚನೆ ಮಾದಬೇಕಾದ್ದು ‘ಆಗಮ’(೪೩-೪೪);ಈಯೆರಡು ಪದ್ಯಗಳನ್ನು ಪೀಠಿಕೆಗೂ-ಅಲಂಕಾರಪಠ್ಯಕ್ಕೂ ಕೊಂಡಿಯೆಂದು ಇಟ್ಟುಕೊಳ್ಳಬಹುದು).

ಇದಲ್ಲದೆ ಈ ಪೀಠಿಕಾ ಪ್ರಕರಣದ ಭಾಗವಾಗಿ ಕೂದಿಸಿ ಓದಿಕೊಳ್ಳಬೇಕಾದ ಕೆಲವು ಪದ್ಯಗಳು ಒಳಗೂ ಇವೆ;ಅವು ಮುಂದೆ ಗ್ರಂಥದಲ್ಲಿ ಬಂದಿರುವ ಲಕ್ಷ್ಯಪದ್ಯಗಳಲ್ಲಿ ಸಿಗುವಂಥವು.

‘ಕವಿರಾಜಮಾರ್ಗ’ದಲ್ಲಿ ಲಕ್ಷಣಗಳಿಗೆ ಲಕ್ಷ್ಯವಾಗಿ ಬಂದಿರುವ ಪದ್ಯಗಳ ಮೊತ್ತ ದೊಡ್ಡದು. ಇದರಲ್ಲಿ ೨೧೫ ಲಕ್ಷಣಪದ್ಯಗಳಿದ್ದರೆ ಅವಕ್ಕಿಂತ ಹೆಚ್ಚು, ಅಂದರೆ ೨೫೬ಲಕ್ಷ್ಯಪದ್ಯಗಳಿವೆ. ಈಗಾಗಲೇ ಎಲ್ಲರೂ ಗಮನಿಸಿರುವ ಹಾಗೆ, ಈ ಪದ್ಯಗಳಲ್ಲಿ ನೃಪತುಂಗನನ್ನು ಕುರಿತು ಮತ್ತು ಅನಿರ್ಧಿಷ್ಟ ರಾಜ ಮತ್ತು ರಾಜತ್ವವನ್ನು ಕುರಿತು ಗಣನೀಯ ಸಂಖ್ಯೆಯ ಪದಗಳಿವೆ. (ಲೆಕ್ಕ ಹಾಕಿದರೆ, ನೇರವಾಗಿ ನೃಪತುಂಗನನ್ನು ಕುರಿತವು ಸು. ೨೨ ಮತ್ತು ರಾಜ-ತತ್ವವನ್ನು ಕುರಿತವು ೬೨.) ಇವುಗಳಲ್ಲದೆ ಉಳಿದ ಲಕ್ಷ್ಯಪದ್ಯಗಳಲ್ಲಿ ಮುಖ್ಯವಾಗಿ ಎರಡು, ಎಲ್ಲ ವಿದ್ವಾಂಸರ ಅಧ್ಯಯನಕಾರರ ಗಮನವನ್ನು ಸೆಳೆದಿವೆ; ಮೇಲಿಂದಮೇಲೆ ಉದ್ಧೃತಗೊಂಡಿವೆ.

ಅವುಗಳಲ್ಲಿ ಮೊದಲನೆಯದು: ‘ಸುಭಟರ್ಕಳ್-ಕವಿಗಳ್-ಸುಪ್ರಭುಗಳ್-ಚೆಲ್ವರ್ಕಗಳ್-ಅಭಿಜನರ್ಕಳ್-ಗುಣಿಗಳ್-ಅಭಿಮಾನಿಗಳ್-ಅತ್ಯುಗ್ರರ್-ಗಭೀರಚಿತ್ತರ್-ವಿವೇಕಿಗಳ್-ನಾಡವರ್ಗಳ್-’(೨ಃ೨೮)ಎನ್ನುವುದು. ಈ ‘ನಾಡವರು’ಗಳೆಂದರೆ ‘ಕನ್ನಡ ನಾಡಿನವರೇ’ ಎಂದು ಎಲ್ಲರೂ ನಂಬಿದ್ದಾರೆ; ಅದನ್ನು ಸಂದೇಹಿಸಲಿಕ್ಕೆ ಯಾವ ಅವಕಾಶವೂ ಇಲ್ಲ. (ಈ ಪದ್ಯವು-‘ಬಹುವಿಶೇಷಣದೋಷ’ವೆಂಬಲ್ಲಿ, ಕೆಲವೊಮ್ಮೆ ಅದು ದೋಷವಾಗದೆ ಗುಣವೇ ಆಗುತ್ತದೆ-ಎನ್ನುವಾಗ ಉದಾಹರಣೆಯಾಗಿ ಬಂದಿದೆ.)

ಎರಡನೆಯ ಪದ್ಯ: ‘ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮಂ ಪರಧರ್ಮಮುಂ-ಕಸವರ-ಮೇನ್ ಕಸಮೇನ್-ಉಬ್ಬಸಮಂ-ಬಸಮಲ್ಲದಿರ್ದು ಮಾಡುವುದೆಲ್ಲಂ’ ೩:೧೭೭)ಅದರ ಅನುವಾದ: ‘ಬಂಗಾರವೆಂದರೆ(ಯಾವುದು?); ಅನ್ಯವಾದ ವಿಚಾರವನ್ನು ಮತ್ತು ಅನ್ಯಧರ್ಮವನ್ನು ಸೈರಿಸಲಿಕ್ಕಾದರೆ(ಅದೇ ಬಂಗಾರ);(ತನ್ನ ಮನಸ್ಸಿನ ಸೈರಣೆಯು ತನ್ನ)ಹಿಡಿತದಲ್ಲಿಲ್ಲದಿದ್ದರೆ,(ಅಂಥವರ ವಿಷಯದಲ್ಲಿ)ಕಸವಾದರೇನು, ಬಂಗಾರವಾದರೇನು-ಎಲ್ಲ(ವಸ್ತು)ಗಳೂ ಉಬ್ಬಸ(=ಕಷ್ಟ)ವನ್ನೇ ಉಂಟುಮಾಡುತ್ತವೆ.’
(ಈ ಪದ್ಯವು‘ಉದಾತ್ತ’ಎಂಬ ಅರ್ಥಾಲಂಕಾರದ ಲಕ್ಷಣಕ್ಕೆ ಲಕ್ಷ್ಯವಾಗಿ ಬಂದಿದೆ.)

ಲಕ್ಷ್ಯಪದ್ಯಗಳಲ್ಲಿ ರಾಶಿಯಲ್ಲಿ ಬರುವ ಮೇಲಿನ ಕೆಲವು ಪದ್ಯಗಳು, ಅವುಗಳಲ್ಲೂ ಮುಖ್ಯವಾಗಿ ಮೆಲೆ ಉಲ್ಲೇಖಿಸಿರುವ ಎರಡು, ಓದುಗರೆಲ್ಲರ ಗಮನವನ್ನು ತಪ್ಪದೆ ಸೆಳೆದುಕೊಂಡಿವೆ. ರಚನೆಯ ವಿಶಿಷ್ಟತೆಯಿಂದಾಗಿ ಇವು ತಮ್ಮ ವಲಯದಿಂದ ಮೇಲಕ್ಕೆದ್ದು ಹೊರಗೆ ಮಿಂಚುವಂತಾಗಿರುವುದು ಗ್ರಂಥಕಾರನ ಕವಿಕೌಶಲದಿಂದ; ಇವನ್ನು ಸೂಕ್ಷ್ಮವಾಗಿ ಅನ್ವಯಿಸಿ ಅರ್ಥಮಾಡಿಕೊಳ್ಳಬೇಕಾದ್ದು ಸಹೃದಯನ ಕರ್ತವ್ಯ.

ಮೇಲಿನ ಪದ್ಯಗಳಲ್ಲಿ ಮೊದಲಿನವುಗಳನ್ನು ಪೀಠಿಕಾವಿಭಾಗದ ರಾಜ-ಪ್ರಸ್ತಾಪದ ಜೊತೆಗೂ ಬಹುವಿಶೇಷಣ ಪದ್ಯವನ್ನು ಕನ್ನಡದ ಜನರ ಪ್ರಸ್ತಾಪದ ಜೊತೆಗೂ ಅನ್ವಯಿಸಿ ಕೊಡಿಸಿಕೊಳ್ಳಬೇಕು. ಇನ್ನುಳಿದ ‘ಕಸವೆಂಬುದು…’ಪದ್ಯದ ಬಗ್ಗೆ ಮುಂದೆ ಪ್ರಸ್ತಾಪಿಸುತ್ತೇನೆ.

ಭಾಷಾ-ಜನ-ರಾಜತ್ರಯೀ ಸೂತ್ರ

‘ಕವಿರಾಜಮಾರ್ಗ’ವು ದಂಡಿಯ ‘ಕಾವ್ಯಾದರ್ಶ’ವನ್ನು ಆಧರಿಸಿರುವುದರಿಂದ, ಮೆಲಿನ ಪೀಠಿಕಾ ಭಾಗವನ್ನು ದಂಡಿಯ ಗ್ರಂಥದ ‘ಭೂಮಿಕೆ’ಯೊಡನೆ ಹೋಲಿಸಿ ನೋಡಿದರೆ ಕೆಲವು ಅಂಶಗಳು ಸ್ಪಷ್ಟವಾಗಬಹುದು.

ದಂಡಿಯು ಸರಸ್ವತೀ ಪ್ರಾರ್ಥನೆಯಿಂದ ಪ್ರಾರಂಭಿಸಿದರೆ, ಶ್ರೀವಿಜಯನು ಅದಕ್ಕೆ ಮೊದಲು, ಮೊದಲ ಪದ್ಯದಲ್ಲೇ ರಾಜನನ್ನು ಸ್ತುತಿಸುತ್ತಾನೆ. ಇಲ್ಲಿ ವಿಷ್ಣುಪರವಾದ ಅನ್ವಯವು ನಿಸ್ಸಂದಿಗ್ಧವಿದ್ದರೂ ರಾಜಪರವಾದ್ದೇ ಹೆಚ್ಚು ಮುಖ್ಯ; ರಾಜನ ಬಿರುದಾವಳಿಗಳೇ ಇಲ್ಲಿ ಬಂದಿದ್ದು ಅನಂತರ ಅವನ್ನು ವಿಷ್ಣುವಿಗೆ ಅನ್ವಯಗೊಳಿಸಲಾಗಿದೆ. ವೈದಿಕ ದಂಡಿಯ ಹಾಗೆ ಜೈನನಾದ ಶ್ರೀವಿಜಯನಿಗೆ ‘ದೇವರ’ಲ್ಲಿ ನಂಬಿಕೆಯಿಲ್ಲ; ಆತನಿಗೆ ರಾಜನೇ ದೇವರು. ವಿಷ್ಣುವನ್ನು ಮಾತ್ರವಲ್ಲದೆ ಸರಸ್ವತಿಯನ್ನೂ ಈತನು ಅಮೂರ್ತ ಛಾಯೆಯಾಗಿಸಿದ್ದಾನೆ. ಇನ್ನು, ಆಸ್ಥಾನದ ಪಂಡಿತನೊಬ್ಬ ಪ್ರೀತಿಗಾಗಿಯೋ ಲಾಭಕ್ಕಾಗಿಯೋ ತನ್ನ ಗ್ರಂಥವನ್ನು ರಾಜನಿಗೆ ಅರ್ಪಿಸುವುದು ಅಥವಾ ಅದಕ್ಕೆ ರಾಜನ ಅಂಕಿತವನ್ನೇ ಟಂಕಿಸುವುದು ಅಪರೂಪವೇನಲ್ಲ. ಧಾವಕನೆಂಬವನೊಬ್ಬನು ನಾಟಕಗಳನ್ನು ಬರೆದು ಚಕ್ರವರ್ತಿ ಶ್ರೀಹರ್ಷನ ಅಂಕಿತದಲ್ಲಿ ಪ್ರಕಟಗೊಳಿಸಿದ ಎಂಬ ಐತಿಹ್ಯವಿದೆ. ಆದರೆ ಶ್ರೀವಿಜಯನ ರಾಜಪ್ರಸ್ತಾಪವು ಹಾಗೆ ಔಪಚಾರಿಕವಾದ್ದಷ್ಟೇ ಅಲ್ಲ ಎನ್ನುವುದನ್ನು ಗಮನಿಸಬೇಕು. ದಂಡಿಯು ಪಲ್ಲವರ ಇಮ್ಮಡಿ ನರಸಿಂಹವರ್ಮನ(ಸು.ಕ್ರಿ.ಶ.೬೮೮-೭೨೨) ಆಸ್ಥಾನದಲ್ಲಿದ್ದಿರಬೇಕು ಎಂಬ ಊಹೆಯಿದೆ; ಅದು ನಿಜವಿದ್ದು ಆತನಿಗೆ ಆಸಕ್ತಿಯಿದ್ದಿದ್ದರೆ, ಅವನೂ ದೈವಸ್ತುತಿಯ ಅನಂತರ ರಾಜಸ್ತುತಿಯನ್ನು ಸೆರಿಸಬಹುದಿತ್ತು ಮತ್ತು ಹಾಗೆ ಸೇರಿಸಿದ್ದಾಗ್ಯೂ ಅದು ಔಪಚಾರಿಕವಾಗಿ ಗ್ರಂಥದ ಆರಂಭ-ಅಂತ್ಯಗಳಲ್ಲಿ ಮಾತ್ರ ಇರುತ್ತಿತ್ತು. ಇಲ್ಲಿ ಹಾಗಿಲ್ಲ. ಈಗಾಗಲೇ ನಾವು ನೋಡಿರುವ ಹಾಗೆ, ರಾಜನು ಉದ್ದಕ್ಕೂ ಮತ್ತೆ ಮತ್ತೆ ಪ್ರಸ್ತಾಪಿತನಾಗುತ್ತಾನಷ್ಟೇ ಅಲ್ಲದೆ, ಇಲ್ಲಿನ ಅಭಿಪ್ರಾಯಗಲು ಆತನ ಆಜ್ಞೆ-ಅನುಮತ-ಸೂಚನೆ ಇತ್ಯಾದಿಗಳ ಮೂಲಕ ಅಧಿಕೃತವಾಗಿದೆಯೆಂಬುದನ್ನು ಎಡೆಯೆಡೆಯಲ್ಲೂ ಸ್ಪಷ್ಟವಾಗಿಯೇ ಹೇಳಲಾಗಿದೆ. ಲೇಖಕನಷ್ಟೇ ರಾಜನೂ ಈ ಗ್ರಂಥದ ಅವಿಭಾಜ್ಯ ಅವಯವವಾಗಿದ್ದಾನೆ;ಎಷ್ಟೆಂದರೆ, ರಾಜಾ ನೃಪತುಂಗನೇ ಈ ಗ್ರಂಥದ ಕರ್ತೃವೆಂದು ಸಂದೇಹಿಸಬಹುದಾದಷ್ಟು.

ಸ್ತುತಿಯ ಅನಂತರ ಎರಡೂ ಗ್ರಂಥಗಳೂ ಭಾಷೆ-ಕಾವ್ಯ-ಭಾಷಾಶಿಕ್ಷೆ-ಕಾವ್ಯಶಿಕ್ಷೆ ಇ.ಗಳನ್ನು ಪ್ರಸ್ತಾಪಿಸುತ್ತವೆ. ಭಾಮಹನ ಗ್ರಂಥವೂ ಇದೇ ಕ್ರಮದಲ್ಲಿದೆ. ಕವಿರಾಜಮಾರ್ಗವು ತದನಂತರ, ಮೊದಲಿಗೆ ಸಂಸ್ಕೃತ(ಕಾವ್ಯ)ವನ್ನೂ ಆಮೇಲೆ ಕನ್ನಡ(ಕಾವ್ಯ)ವನ್ನೂಕುರಿತು ಸಮಸಮವಾಗಿ ಪ್ರಸ್ತಾಪಿಸುತ್ತದೆ. ಈ ಎಡೆಯಲ್ಲಿ ಕವಿರಾಜಮಾರ್ಗವು ಆ ದಾರಿಯಿಂದ ಅಗಚಿ ಹೋಗಬೇಕಾಗುತ್ತದೆ. ದಂಡಿ ಭಾಮಹರಿಗೂ ಲೋಕದಲ್ಲಿ ಮತ್ತು ತಮ್ಮ ಸ್ಥಳದಲ್ಲಿ ಕೂಡಾ ಸಂಸ್ಕೃತವಲ್ಲದೆ ಬೆರೆ ಭಾಷೆಗಳಿವೆಯೆಂಬುದು ಗೊತ್ತು. ಅವರು ‘ಪ್ರಾಕೃತ’ ‘ಅಪಭ್ರಂಶ’ ‘ತದ್ಭವ’ ‘ತತ್ಸಮ’ ‘ದೇಶೀ’ ಮುಂತಾಗಿ ಹಲವು ಭಾಷೆಗಳನ್ನು ಪ್ರಸ್ತಾಪಿಸಿ ದಾಖಲಿಸುತ್ತಾರೆ. ಆದರೆ ಮುಂದಕ್ಕೆ ಅವರಿಗೆ ಅವುಗಳಲ್ಲಿ ಆಸಕ್ತಿಯಿಲ್ಲ. ‘ದೈವೀವಾಕ್’ ಆದ ಸಂಸ್ಕೃತಕ್ಕೆ ಮಾತ್ರವೇ ಅವರ ಮುಂದಿನ ಗಮನ; ಅದಕ್ಕೆ ಅನ್ವಯಿಸುವ ಅಲಂಕಾರೇತ್ಯಾದಿಗಳು ಉಳಿದವಕ್ಕೂ ಸಾಮಾನ್ಯವಾಗಿ ಅನ್ವಯಿಸುತ್ತದೆ ಎಂಬ ನಂಬಿಕೆಯೂ ಅವರಿಗೆ ಇದ್ದಿರಬಹುದು.

ಕವಿರಾಜಮಾರ್ಗಕ್ಕಾದರೋ-ನಿರ್ಧಿಷ್ಟ ಲಕ್ಷ್ಯ ಲಕ್ಷಣಗಳ ಸುನಿಶ್ಚಿತ ಶಾಸ್ತ್ರವೊಂದನ್ನು ಈಗಾಗಲೇ ಕೈವಶದಲ್ಲಿಟ್ಟುಕೊಂಡಿರುವ ಸಂಸ್ಕೃತದ ಎದುರು, ಇನ್ನೂ ಅದಿಲ್ಲದ ಕನ್ನದಕ್ಕೆ ಆ ಬಗೆಯ ‘ಮಾರ್ಗ’ವೊಂದನ್ನು ಹೊಸದಾಗಿ ಸಮೆದುಕೊಡಬೇಕಾಗಿದೆ; ಮತ್ತು ಹಾಗಾಗಿ ಈ ಗ್ರಂಥವು ಸಂಸ್ಕೃತ ಪ್ರಾಕೃತಾದಿ ಭಾಷೆಗಳ ಸತತಪ್ರಜ್ಞೆಯಲ್ಲೇ ಕನ್ನಡದ ಬಗ್ಗೆ ಚಿಂತಿಸಬೇಕಾಗಿದೆ. ಹಲವುಗಳ ಮಧ್ಯೆ ತಾನೂ ಒಂದು ಸಮಾನಸ್ಕಂಧ ಅಸ್ತಿತ್ವವಾಗಿ ತನ್ನ ಸ್ವಂತಿಕೆಯನ್ನು ತಾಳಿನಿಲ್ಲಬೇಕಾದ ಕನ್ನಡದ ಆ ಹಲವುಗಳ ಸಹಬಾಳ್ವೆಯನ್ನು ಮೊದಲು ಒಪ್ಪಿಕೊಳ್ಳಬೇಕಾಗಿದೆ ಮತ್ತು ಅನಂತರ ಅವುಗಳ ಜೊತೆಗಿನ ತನ್ನ ಸಂಬಂಧವನ್ನು ನಿಶ್ಚಿತಗೊಳಿಸಬೇಕಾಗಿದೆ. ಹೀಗೆ, ಸಂಸ್ಕೃತ ಗ್ರಂಥಗಳಿಗೆ ‘ಭಾಷೆ’ಯೆನ್ನುವುದು ಹೆಚ್ಚಾಗಿ ‘ಏಕವಚನ’ (ಸಂಸ್ಕೃತ)ವಾಗಿ ಕಂಡರೆ ಕವಿರಾಜಮಾರ್ಗಕ್ಕೆ ಅದು, ಏಕವಚನ-ಬಹುವಚನಗಳೆರಡೂ ಆಗಿ(ಕನ್ನಡವಾಗಿ ಮತ್ತು ಹಲವು ಭಿನ್ನಭಾಷೆಗಳ ಒಂದು ಭಾಷಾಜಾತಿಯಾಗಿ)ಕಾಣಿಸುತ್ತಿದೆ.

ಭಾಷೆಯನ್ನು ಪ್ರಸ್ತಾಪಿಸುವಾಗ ಕವಿರಾಜಮಾರ್ಗವು ಸಂಸ್ಕೃತ ಇ.ಗಳನ್ನು ಹೇಳಿ ಜೊತೆಯಲ್ಲೇ ಕನ್ನಡವನ್ನು ಮತ್ತು ಕನ್ನಡದ ಭಿನ್ನತೆ ಅರ್ಥಾತ್ ಸ್ವತಿಕೆಯನ್ನು ಎತ್ತಿ ಹೇಳುತ್ತದೆ; ‘ಗದ್ಯಕಥೆ’ ‘ಬೆದಂಡೆ’ ‘ಚತ್ತಾಣ’ಗಳೆಂಬ ಕನ್ನಡದ ವಿಶೇಷ ಪ್ರಕಾರಗಳನ್ನು ದಾಖಲಿಸುತ್ತದೆ(೨೫-೩೫). ‘ಭಾಷೆ’ (ಕನ್ನಡ) ಮತ್ತು ‘ಭಾಷೆಗಳ’ (ಸಂಸ್ಕೃತಾದಿ) ಏಕತೆ-ಭಿನ್ನತೆಯೆಂಬ ದ್ವಂದ್ವವನ್ನು ಗಣಿಸಲು ತೊಡಗಿದಾಗ ಈ ಗ್ರಂಥದ ದಾರಿಯು ಕವಲೊಡೆಯುತ್ತದೆ.

ಅಲ್ಲದೆ, ಈ ಗ್ರಂಥವು ಸಂಸ್ಕೃತದ ಆ ಗ್ರಂಥಗಲ ಹಾಗೆ ಭಾಷೆಯೊಂದನ್ನೇ ಲಕ್ಷ್ಯವಾಗಿಟ್ಟುಕೊಂಡು ಮುಂದುವರಿಯಲಾರದು. ಪ್ರಬುದ್ಧ ಸಂಸ್ಕೃತವು ಭಾರತದ ಉತ್ತರಾಪಥ ದಕ್ಷಿಣಾಪಥಗಳಲ್ಲಷ್ಟೇ ಅಲ್ಲದೆ ದಕ್ಷಿಣ ಏಸ್ಯಾದ ತುಂಬಾ, ಅದಕ್ಕೂ ಆಚೆಗೆ ಕೂಡ ಹಬ್ಬಿಕೊಂಡಿದ್ದ ಉಚ್ಛ್ರಾಯದ ಕಾಲ ಅದು. ಇಂಥ ಸಂದರ್ಭದಲ್ಲಿ ದಂಡಿ ಭಾಮಹ ಮುಂತಾದವರಿಗೆ, ಸಂಸ್ಕೃತವು ಯಾವುದೇ ನಿರ್ಧಿಷ್ಟ ದೇಶ-ಪ್ರದೇಶಕ್ಕೆ ಬದ್ಧವಾಗದೆ ‘ಲೋಕಭಾಷೆ’ಯಾಗಿ ಕಂಡದ್ದು ಸಹಜವೇ. ಆದರೆ ಕವಿರಾಜಮಾರ್ಗವು ಕುರಿತಿರುವಂಥ ಕನ್ನಡವು ಆಥರದ್ದಲ್ಲ. ಇದು ಒಂದು ಭೌಗೋಲಿಕ ಸಾಮುದಾಯಿಕ ಮಿತಿಯಲ್ಲಿ ಮಾತ್ರವೇ ಅಸ್ತಿತ್ವವುಳ್ಳ ಭಾಷೆ; ಮತ್ತು, ತನ್ನ ಈ ಮಿತಿಗಳಲ್ಲಾದರೂ ಅಧಿಕೃತತೆ-ಸಾರ್ವಭೌಮತೆಗಳನ್ನು ಪಡೆದುಕೊಳ್ಳಲು ಆ ಕಾಲದಲ್ಲಿ ಹೆಣಗುತ್ತಿದ್ದ ಭಾಷೆ. ಕನ್ನಡ ಎಂಬ ನುಡಿಯ ಬಗ್ಗೆ ಪ್ರಸ್ತಾಪಿಸ ಹೊರಟರೆ ಅದು ಒಂದು ನಾಡಿನ ಜೊತೆ ಕುಣಿಕಗೊಂಡದ್ದು, ಅತ್ತ ಗಮನ ಸೆಳೆಯುತ್ತದೆ; ನಾಡು ಎನ್ನುವಾಗ ಅದರ ಜೀವರೂಪವಾದ ಜನಪದ(ನಾಡವರು)ವನ್ನು ಗಮನಿಸಬೇಕಾಗುತ್ತದೆ; ಅದನ್ನು ಅಧಿಕೃತಗೊಳಿಸುವ ರಾಜನನ್ನು ಅಥವಾ ಪ್ರಭುತ್ವವನ್ನು ಕೇಂದ್ರದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಭಾಷೆಯ ಪ್ರಸ್ತಾಪದ ಅನಂತರ ಬರುವ ಪದ್ಯಗಳು(೩೬ರಿಂದ ೪೪) ಹೀಗೆ ಮುಂದುವರಿಯುತ್ತವೆ.

ಪೀಠಿಕಾ ಭಾಗದಲ್ಲಿ ಬರುವ ಕನ್ನಡ ನಾಡವರನ್ನು ಕುರಿತ ಪ್ರಶಂಸೆಯ ಪದ್ಯಗಳಿವೆಯಲ್ಲ ಅವುಗಳ ಜೊತೆಗೆ, ಲಕ್ಷಣಪಠ್ಯದೊಳಗೆ ಲಕ್ಷ್ಯವಾಗಿ ಬಂದಿರುವ‘ ಸುಭಟರ್ಕಳ್ ಕವಿಗಳ್…’ಇತ್ಯಾದಿ ಪದ್ಯವನ್ನೂ ಸೇರಿಸಿಕೊಳ್ಳಬೇಕು. ಇದು ಉದಾಹೃತವಾಗಿರುವ ಪರಿಯೂ ಹೀಗೆನ್ನುತ್ತದೆ: ‘ರೂಪಕಾಲಂಕಾರದಲ್ಲಿ ಮತ್ತು ವಿಶೇಷ ಉದ್ದೇಶವಿಟ್ಟುಕೊಂಡಿರುವ ಮಾತಿನ ಸಂದರ್ಭದಲ್ಲಿ ಮಾತ್ರವಲ್ಲದೆ, ಉಳಿದೆಡೆಯಲ್ಲಿ ಚಾಪಲ್ಯದಿಂದ ಬಹು ವಿಶೇಷಣಗಳನ್ನು ಪೇರಿಸಿ ವಿರಸವಾಗುವಂತೆ ಬಳಸಕೂಡದು’(೨:೨೭). ‘ಆದರೆ, ಸುಭಟರ್ಕಳ್…’ಎಂಬ ಪದ್ಯದಲ್ಲಿನಂತೆ, ಅಂಕಚಾರಣೆ(ವಿಶೇಷ ಪ್ರಶಂಸೆ)ಗಳಲ್ಲಿ ಅದನ್ನು ಬಳಸುವುದಾದರೆ, ಸತತವಾಗಿ ಬಳಸಲಿ ಎನ್ನುತ್ತಾನೆ, ಅತಿಶಯಧವಳ ನೃಪತುಂಗ’(೨:೨೯). ರಾಜಾನೃಪತುಂಗನು ತನ್ನ ನಾಡಿನ ಜನರ್ ಬಗ್ಗೆ ಅದೆಂಥ ಭರವಸೆ-ಅಭಿಮಾನ-ಪ್ರೀತಿಗಳನ್ನುಳ್ಳವನಾಗಿದ್ದಾನೆ ಎಂಬುದಕ್ಕೆ ಸಾಕ್ಷಿಯೆನ್ನುವ ಹಾಗೆ ಈ ಪದ್ಯವು ರಚಿತವಾಗಿ ವಿನ್ಯಸ್ತವಾಗಿದೆ. ಈ ಜನರ ಸದ್ಗುಣಮಾಣಿಕ್ಯವನ್ನು ನೃಪತುಂಗನ ಪ್ರೀತಿಯ ಕುಂದಣದಲ್ಲಿ ಹುದುವುಗೊಳಿಸಿದಂತಿರುವ ಈ ಪದ್ಯವು ಯಾವತ್ತೂ ಕನ್ನಡಿಗರನ್ನು ಆರ್ದ್ರಗೊಳಿಸುತ್ತದೆ.

ಕನ್ನಡ ಜನರನ್ನು ಕುರಿತ ಈ ಪ್ರಶಂದಾ ಪದ್ಯಗಳು ಆಪ್ಯಾಯಮಾನವೆನ್ನಿಸುವಷ್ಟೇ ಸೋಜಿಗವೆನ್ನಿಸುತ್ತದೆ. ಇದರ ರಚನೆಯಲ್ಲಿ ನಿರ್ವ್ಯಾಜ್ಯ ನಿರ್ಮಲ ಪ್ರೇಮವು ಮಳೆಗರೆದಿದೆಯಾದರೂ ಒಂದು ಶಾಸ್ತ್ರಗ್ರಂಥದಲ್ಲಿ ಇಂಥ ಪ್ರೇಮಾಲಾಪನದ ಔಚಿತ್ಯವೇನಿದ್ದೀತು ಅಂತ ಕುತೂಹಲವಾಗುತ್ತದೆ. ಯಾವುದೇ ಕಾಲದೇಶದ ಯಾವುದೇ ‘ಶಾಸ್ತ್ರಗ್ರಂಥ’ದಲ್ಲೂ ಇಂಥ ಅಪ್ರಸ್ತುತ ಮಾತುಗಳು ಸಿಗಲಿಕ್ಕಿಲ್ಲ. ಅದು ಬಿಟ್ಟು, ಈ ಸಾವಿರಾರು ವರ್ಷಗಳಲ್ಲಿ ಕನ್ನಡದ ಕವಿಗಳಾದರೂ ಹೀಗೆ ಕನ್ನಡಿಗರನ್ನು ಉನ್ಮುಕ್ತವಾಗಿ ಪ್ರಶಂಸಿಸಿರುವುದು ಅತಿ ವಿರಲ. ಕವಿ ಪಂಪನು ಬನವಾಸಿಯನ್ನು ಕುರಿತು ಕಡೆದಿಟ್ಟಿರುವ ಪ್ರೇಮಶಾಸನವು ಕೂಡಾ ಆತನ ರಾಜಕಾರಣ ಚಿಂತನೆಯ ಪ್ರತಿಮೆಯಾಗಿ ಬದಿದೆಯೆಂಬುದನ್ನು ನಾನು ಬೇರೊಂದೆಡೆ ಸೂಚಿಸಿದ್ದೇನೆ.

ಈ ಪೀಠಿಕೆಯಲ್ಲಿ ರಾಜಪ್ರಶಂಸೆಯು ಕೇವಲ ಔಪಚಾರಿಕವೋ ಅಭಿಮಾನ ರಸವರ್ಷವೋ ಆಗಿರದೆ ಪೀಠಿಕಾಪ್ರಮೇಯದ ಜೀವಭಾಗವಾಗಿದೆ ಎನ್ನುವುದನ್ನು ಈ ಮೊದಲು ಗ್ರಹಿಸಿದ್ದೇವೆ. ಅದರ ಹಾಗೆ ಈ ಜನ ಪ್ರಶಂಸೆಯೂ ಪೀಠಿಕಾಭಾಗದ ಪ್ರಮೇಯದ್ರವ್ಯವೆಂದು ಗಣಿಸಬೇಕು.

ಈ ಪ್ರಶಂಸೆಗಳಿಗೆ ಸಂಬಂಧಿಸಿದ ಒಂದು ಸೂಕ್ಷ್ಮವನ್ನು ಇಲ್ಲೇ ಗಮನಿಸಬಹುದು. ಪಠ್ಯದ ಅನುಕ್ರಮ ಹೀಗಿದೆ: ೧. ಕನ್ನಡ ನಾಡಿನ ವರ್ಣನೆ(ಪ.೩೬); ೨. ತಿರುಳ್ಗನ್ನಡನಾಡಿನ ವರ್ಣನೆ(ಪ.೩೭); ೩. ಜನಪ್ರಶಂಸೆ. ಅರ್ಥಯಿಸುವಾಗ ಈ ಪ್ರಶಂಸೆಯು ಸಮಸ್ತ ಕನ್ನಡಿಗರಿಗೆ ಅನ್ವಯಿಸುವಂಥದೆ ಅಥವಾ ತಿರುಳ್ಗನ್ನಡ ನಾಡಿನವರಿಗೆ ಮಾತ್ರ ಅನ್ವಯಿಸುವಂಥದೆ ಎಂಬ ಸಂದೇಹವು ಸಹಜವಾಗಿ ಉಂಟಾಗುತ್ತದೆ. ಇದನ್ನು ನಿರ್ಣಯಿಸಿಕೊಳ್ಳುವ ಸೃಜನಶೀಲ ಕಸರತ್ತಿನಲ್ಲಿ ಅನೇಕ ‘ಧ್ವನಿ’ಗಳು ಹುಟ್ಟಿಕೊಳ್ಳುತ್ತವೆ: ‘ಇದು ಸಮಸ್ತ ಕನ್ನಡಿಗರಿಗೂ ಅನ್ವಯಿಸುವಂಥದು’-‘ತಿರುಳ್ಗನ್ನಡ ನಾದವರಿಗೆ ಅನ್ವಯಿಸುವಂಥದು’ಎಂಬುದಷ್ಟೇ ಅಲ್ಲದೆ ‘ಇದು ವಾಸ್ತವವಾದ ಗುಣನಿರೂಪಣೆ’-‘ಇದು ಆದರ್ಶ ಪೂರ್ಣವಾದ ಕವಿಕಲ್ಪನೆ’ ಇತ್ಯಾದಿ ಸಹೃದಯನಾದವನು ಈಯೆಲ್ಲ ಧ್ವನಿಗಳನ್ನೂ ಒಟ್ಟಾಗಿಯೇ ಸ್ವೀಕರಿಸಿ, ಅನೇಕ ಧ್ವನಿಗಳ ಸಂಕಿರಣದಲ್ಲಿ ತನ್ನದೇ ಆದ ‘ಕನ್ನಡ ಕನ’ದ ಕಲ್ಪನೆಯನ್ನು ನಿರ್ಮಿಸಿಕೊಳ್ಳಬೇಕು. ಮತ್ತು ಹೀಗೆ ಓದುಗನು ಅಂತಿಮವಾಗಿ ಸೃಷ್ಟಿಸಿಕೊಳ್ಳುವ ಪ್ರತಿಭಾಚಿತ್ರವು ಆಕಾಲದ-ಈ ಕಾಲದ- ಭವಿಷ್ಯತ್ಕಾಲದ ‘ಕನ್ನಡಿಗನ ಚಿತ್ರ’ವಾಗಿ, ವಾಸ್ತವ ಚಿತ್ರ-ಆದರ್ಶಚಿತ್ರವಾಗಿ, ಮೂರ್ತಚಿತ್ರ ಅಮೂರ್ತಚಿತ್ರವಾಗಿ ವ್ಯಾಪಿಸಿ ವಿಜೃಂಭಿಸುತ್ತದೆ. ಇಂಥಲ್ಲೆಲ್ಲಾ ಈ ಗ್ರಂಥವು ‘ಶಾಸ್ತ್ರ’ವಾಗದೆ ‘ಕಾವ್ಯ’ವಾಗುತ್ತದೆ.

ಭಾಷೆಯ ಬಗ್ಗೆ ಹೇಳಹೊರಟ ಕವಿರಾಜಮಾರ್ಗವು ಜನಪದ-ರಾಜ್ಯ-ರಾಜ ಹೀಗೆ ಕೊಂಡಿಗೊಂಡ ಒಂದು ಜಾಲದಲ್ಲಿ ಸಿಲುಕಿಕೊಳ್ಳುತ್ತದೆ ಮತ್ತು ಈ ಸಂಗತಿಗಳನ್ನೆಲ್ಲ ಕ್ರಮವಾಗಿ ಅನ್ವಯಗೊಳಿಸಿಕೊಳ್ಳದೆ ಅದು ಮುಂದುವರಿಯಲಾರದು. ‘ಕಾವೇರಿಯಿಂದ…..’(೩೬) ಎಂಬ ಪದ್ಯದಲ್ಲಿ ಈ ಅನ್ವಯಪ್ರಯತ್ನವು ನಡೆದಿದೆ.ಈ ನುಡಿ-ಜನಪದ-ನಾಡುಗಳಿಗೆ ಮೊದಲು ಯಾವ ಹೆಸರಿದ್ದಿತೋ ನಮಗೆ ಸ್ಪಷ್ಟವಿಲ್ಲ. ಆದರೆ ಪ್ರಾಯಃ ಮೊತ್ತ ಮೊದಲ ಬಾರಿಗೆ ( ಈಗ ತಿಳಿದಿರುವಂತೆ) ಕವಿರಾಜಮಾರ್ಗವು ‘ನುಡಿ’ ‘ನಾಡು’ ‘ಜನಪದ’ ಈ ಮೂರಕ್ಕೂ ‘ಕನ್ನಡ’ ವೆಂಬ ಒಂದೇ ಅಂಕಿತವನ್ನು (ಕನ್ನಡನುಡಿ, ಕನ್ನಡನಾಡು, ಕನ್ನಡಜನಪದ)ಹೆಚ್ಚುತ್ತದೆ; ಅಶ್ಟೇ ಅಲ್ಲ, ಈ ಮೂರೂ ‘ಕನ್ನಡ’ದೊಳ್ ಭಾವಿಸಿದ್ದು ಎನ್ನುತ್ತದೆ; ಅಂದರೆ, ‘ಕನ್ನಡ’ವೆಂಬುದು ಈ ಮೂರಕ್ಕೂ ಒಂದೇ ಆಗಿರುವ ‘ವಿಶೇಷಣ’, ಮಾತ್ರವಲ್ಲ, ಈ ಮೂರನ್ನೂ ಒಳಗೊಂಡು ಇವನ್ನು ಮೀರಿರುವ ‘ಇನ್ನೊಂದು’ (ಒಂದು ಮಹತ್ ತತ್ತ್ವ ಎನ್ನೋಣ)ಎನ್ನುತ್ತದೆ.

(‘ನಾಡು-ಅದು-ಆ-ಕನ್ನಡದೊಳ್ ಭಾವಿಸಿದ ಜನಪದಂ’ ಎಂಬುದರಲ್ಲಿಯ ‘ಭಾವಿಸಿದ’ ಎಂಬ ಪದವನ್ನು ‘ಭವಿಸಿದ’ ಎನ್ನುವ ಪದಮಾದರಿಯನ್ನನುಸರಿಸಿ ಅರ್ಥವಿಸುವುದು ಸರಿಯಾದೀತು. ಅಂದರೆ-ಈ ಜನಪದವು ಕರ್ನಾಟಕ ಪ್ರದೇಶದಲ್ಲಿ ಭವಿಸಿದ್ದು ಮತ್ತು ಕನ್ನದತ್ವದಲ್ಲಿ ಭಾವಿಸಿದ್ದು ಎನ್ನಬಹುದು. ಇನ್ನು, ಹೀಗೆ ಅರ್ಥವಿಸುವುದಕ್ಕೆ ಒಂದು ಆಕ್ಷೇಪಣೆ ಬರಬಹುದು. ‘ಕನ್ನಡ ಹೆಸರುಳ್ಳದ್ದು’ ಎನ್ನುವ ಸರಳವಾದ ಹೇಳಿಕೆಯನ್ನು ಗ್ರಂಥಕರ್ತೃವು ಛಂದಸ್ಸಿನ ಮಿತಿಗೊಳಗಾಗಿ ‘ಕನ್ನಡದೊಳ್ ಭಾವಿಸಿದ’ ಎಂದಿದ್ದಾನೆ; ಇದಕ್ಕೆ ವಿಶೇಷ ಅರ್ಥ ಹಚ್ಚಬೇಕಿಲ್ಲ-ಎಂದು ಆಕ್ಷೇಪಿಸುವರಿರಬಹುದು. ಆದರೆ, ಗ್ರಂಥದ ಆದ್ಯಂತ ಭಾಷೆ-ಶಬ್ದಾರ್ಥಗಳ ಬಗ್ಗೆ ಸೂಕ್ಷ್ಮ ಸಂವೇದನೆ ಜವಾಬ್ದಾರಿಕೆಗಳನ್ನೂ ಛಂದಸ್ಸಿನ ಪ್ರಯೋಗದಲ್ಲಿ ಪ್ರಬುದ್ಧ ಕೌಶಲವನ್ನೂ ಕಾಣಿಸುವ ಗ್ರಂಥಕರ್ತೃವು, ಗ್ರಂಥದ ಕೇಂದ್ರಸೂತ್ರವಾದ ಈ ಪದ್ಯದಲ್ಲಿ ಶೈಥಿಲ್ಯಕ್ಕೆ ಬಲಿಯಾಗಿದ್ದಾನೆಂದು ಆಕ್ಷೇಪಿಸುವುದು ನಿಷ್ಕಾರಣ ಆರೋಪವಾಗುತ್ತದೆ. ಅಲ್ಲದೆ, ಛಂದಸ್ಸು-ಪ್ರಾಸಗಳ ಮಾತಿಗೆ ಬಂದರೆ, ‘ಕ್ನಾಡದಾ ಕನ್ನದದೊಳ್ ಭಾವಿಸಿದ…’ಎನ್ನುವ ಬದಲು ಸಲೀಸಾಗಿ ‘ನಾಡದಾ ಕನ್ನಡಮೆಂ|ಬಾವೆಸರಿನ ಜನಪದಂ…’ಎನ್ನಬಹುದಿತ್ತು).

ಈ ಹಂತದಲ್ಲಿ ಒಂದು ಸಂಗತಿಯನ್ನು ನಿಚ್ಚಳವಾಗಿ ಮನಗಾಣಬಹುದು: ಅಲಂಕಾರ-ಕಾವ್ಯ-ಭಾಷೆ ಅಂತ ಆಲೋಚಿಸ ಹೊರಟ ಈ ಗ್ರಂಥವು, ತಳುಕುಗೊಂಡು ಬಂದ ರಾಜ್ಯ-ರಾಜ-ರಾಜಕಾರಣ ಇತ್ಯಾದಿ ಸಮಸ್ಯೆಗಳು ಧುತ್ತೆಂದು ಎದುರಾದರೂ ಎದೆಗೆಡದೆ ಅವನ್ನು ನಿರ್ವಹಿಸಿತಲ್ಲ, ಹೇಗೆ? ಈ ಗ್ರಂಥದ ಸೃಷ್ಟಿಯಲ್ಲಿ ಕವಿ ಮತ್ತು ರಾಜ ಈಯಿಬ್ಬರೂ ಕೂಡಿಕೊಂಡಿರುವುದರ ಔಚಿತ್ಯ ಅರ್ಥವಂತಿಕೆಗಳೂ ಅನಿವಾರ್ಯತೆಯೂ ಇಲ್ಲಿ ನಮಗೆ ಮನವರಿಕೆಯಾಗುತ್ತದೆ.

ಪುನಃ ಪೀಠಿಕಾಭಾಗಕ್ಕೆ ಮರಳಿ ಗಮನಿಸೋಣ: ದಂಡ್ಯಾದಿಗಳು ಭಾಷೆ (ಸಂಸ್ಕೃತ ಭಾಷೆ-ವಾಙ್ಮಯ-ಕಾವ್ಯ ಇ.)ಯೊಂದನ್ನು ಮಾತ್ರ ಪ್ರಸ್ತಾಪಿಸಿ ಮುಂದುವರಿಯುತ್ತಾರಾದರೆ, ಕವಿರಾಜಮಾರ್ಗವು ಈ ಮೂರು ಪ್ರಮೇಯ ದ್ರವ್ಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತದೆ: ೧.ಭಾಷೆ(ಭಾಷೆಗಳು-ಸಂಸ್ಕೃತ-ಕನ್ನಡ-ವಾಙ್ಮಯ-ಕಾವ್ಯ ಇ.); ೨.(ಅದನ್ನಾಡುವ) ಜನ (ಅರ್ಥಾತ್ ಜನಪದ); ೩.(ಜನಪದವನ್ನು ರಾಜ್ಯವಾಗಿಸಿ ಆಳುವ) ರಾಜ ಅಥವಾ ಪ್ರಭುತ್ವ.(ಭಾಷೆ-ಜನ-ರಾಜ). ಇಲ್ಲಿ ಕೌಟಿಲ್ಯನ ‘ಅರ್ಥಶಾಶ್ತ್ರ’ದ ಆರನೇ ಅಧೀಕರಣ(ಮಂಡಲಯೋನಿ)ದಲ್ಲಿ ಬರುವ ಒಂದು ಸಂಗತಿಯು ನೆನಪಾಗಿ ಕುತೂಹಲವುಂಟಾಗುತ್ತದೆ. ಅಲ್ಲಿ, ಮೊದಲಿಗೆ ಆತನು, ‘ಸ್ವಾಮಿ-ಅಮಾತ್ಯ-ಜನಪದ-ದುರ್ಗ-ಕೋಶ-ದಂಡ-ಮಿತ್ರತ್ವ’ಈ ಏಳನ್ನು ‘ರಾಜ್ಯ’ದ ‘ಪ್ರಕೃತಿ’ಗಳೆಂದು ಲಕ್ಷಿಸುತ್ತಾನೆ ಮತ್ತು ಮುಂದಕ್ಕೆ, ‘ರಾಜ್ಯ’ದ ‘ಶಕ್ತಿ’ಗಳಾವುವೆಂಬುದನ್ನು ಹೀಗೆ ಸೂತ್ರಗೊಳಿಸುತ್ತಾನೆ: “ಬಲಂ ಶಕ್ತಿಃ…..ಶಕ್ತಿ ಸ್ತ್ರಿವಿಧಾ-ಜ್ಞಾನಬಲಂ ಮಂತ್ರಶಕ್ತಿಃ ಕೋಶದಂಡಬಲಂ ಪ್ರಭುಶಕ್ತಿಃ-ವಿಕ್ರಮಬಲಮುತ್ಸಾಹ ಶಕ್ತಿಃ” ಅವನು ಹೇಳುವಂತೆ, ‘ರಾಜ್ಯ’ವೆಂಬುದು ‘ಮಂತ್ರಶಕ್ತಿ-ಪ್ರಭುಶಕ್ತಿ-ಉತ್ಸಾಹ ಅಥವಾ‘ವೀರಶಕ್ತಿ’ಗಳ ತ್ರಿಕೂಟ.

ಒಂದು ವಿಶಿಷ್ಟಕಾಲ-ಸಂದರ್ಭದಲ್ಲಿ ಕೌಟಿಲ್ಯನು ರಚಿಸಿದ ಈ ‘ಮಂತ್ರಿ-ಪ್ರಭು-ವೀರಶಕ್ತಿ’ಯೆಂಬ ರಾಜ್ಯಸೂತ್ರಕ್ಕೆ ಪ್ರಕೃತಿಯಾಗಿ, ಇನ್ನೊಂದೇ ವಿಶಿಷ್ಟಕಾಲ-ಸಂದರ್ಭದಲ್ಲಿ ಕವಿರಾಜಮಾರ್ಗವು,’ಭಾಷಾಶಕ್ತಿ-ಜನಶಕ್ತಿ-ರಾಜಶಕ್ತಿ’ಯೆಂಬ ಬೇರೆಯೇ ಹೊಸ ಸೂತ್ರವನ್ನು ಮಂಡಿಸುತ್ತದೆಯೋ ಅಂತ ಸೋಜಿಗವಾಗುತ್ತದೆ.

ಪೀಠಿಕಾವಿಭಾಗದಲ್ಲಿ ನೃಪತುಂಗ ಸಭಾಸದರೆಂಬ ವಿದ್ವನ್ಮಂಡಲಿಯ ಪ್ರಸ್ತಾಪವಿದೆಯಷ್ಟೆ? ಜನ ಮತ್ತು ಪ್ರಭುತ್ವಗಳ ಬಂಧವಾಗಿ ಭಾಷೆಯಿದ್ದರೆ, ಅಂಥ ಭಾಷೆಯನ್ನು ಸಂಪನ್ನಗೊಳಿಸುವ ಮತ್ತು ಆ ಮೂಲಕ ಜನ-ಪ್ರಭುತ್ವಗಳ ನಡುವೆ ಸಂಪರ್ಕ ಸೇತುವಾಗುವ ಘಟಕವಾಗಿ ಇದು ಕಲ್ಪಿತವಾಗಿದೆ. ಅಪಾರ ಪಾಂಡಿತ್ಯ ಮತ್ತು ವಿಶುದ್ಧ ಚಾರಿತ್ರ್ಯಗಳೆರಡನ್ನೂ ಸಾಧಿಸಿಕೊಂಡಿರುವ ವಿದ್ವಾಂಸರುಗಳ ಮಂಡಳಿ ಇದು. ‘ಕವಿರಾಜಮಾರ್ಗ’ವು ಇವರ ಗುಣಗಳನ್ನು ಗ್ರಂಥದ ಮೊದಲಲ್ಲೂ ತುದಿಯಲ್ಲೂ ವಿಸ್ತಾರವಾಗಿ ಬಣ್ಣಿಸಿದೆ. ಅದಕ್ಕಿಂತ ಹೆಚ್ಚಾಗಿ, ಗ್ರಂಥದ ಲೇಖಕನಾದ ಶ್ರೀವಿಜಯನು ಅಂಥ ವಿದ್ವಾಂಸರಿಗೆ ಅತ್ಯುತ್ತಮ ಮಾದರಿಯಾಗಿ ಪ್ರಕಟಗೊಳ್ಳುತ್ತಾನೆ. ಅಂಥ ವಿದ್ವಾಂಸರು ಜನರಲ್ಲಿ ಭರವಸೆ ಮತ್ತು ನಿರ್ಮಲ ಪ್ರೀತಿಯುಳ್ಳವರಾಗಿದ್ದು ಅವರ ವಿವೇಕವನ್ನು ಶೋಧಿಸಿ, ಆ ಅವರ ವಿವೇಕದ್ರವ್ಯದಿಂದಲೇ ಭಾಷೆಯಲ್ಲಿ ಅವರಿಗೆ ಉತ್ತರೋತ್ತರ ಉಪಯುಕ್ತವಾಗುವ ಮತ್ತು ಅವರ ಸುಪ್ತ ವಿವೇಕಗಳನ್ನು ಎಚ್ಚರಿಸುವ ಹೊಸಹೊಸ ಲೋಕಾಕೃತಿಗಳನ್ನು-ಅರ್ಥಾತ್, ವಾಙ್ಮಯ ಕಾವ್ಯಗಳನ್ನು-ನಿರ್ಮಿಸಿ ಕೊಡುವಂಥವರಾಗಿರಬೇಕು. ಈ ಘಟಕವು ಜನ-ಭಾಷಾ-ಪ್ರಭುತ್ವ ಸಂವಿಧಾನದ ಅನುಬಂಧವೆನ್ನಬಹುದಾದ್ದು.

‘ಭಾಷಾ-ಜನ-ರಾಜತ್ರಯೀ’ಎಂಬ ಸೂತ್ರವು ‘ಕವಿರಾಜಮಾರ್ಗ’ದಲ್ಲಿ ಎಲ್ಲೂ ಪ್ರಕಟವಾಗಿ ಬಂದಿಲ್ಲ. ಅಲ್ಲದೆ, ಕೌಟಿಲ್ಯನಂಥ ಮಹಾಶಾಸ್ತ್ರಕಾರನಿಗೆ ಪ್ರತಿಯಾಗಿ ಹೊಸ ‘ರಾಜಸೂತ್ರ’ವನ್ನು ಇಲ್ಲಿ ಮಂಡಿಸುತ್ತಿದ್ದೇವೆ ಎಂಬ ಅರಿವು, ಗ್ರಂಥಕರ(ಣ)ರಾದ ಕವಿ-ರಾಜರಿಗೇ ಸ್ವತಃ ಸ್ಪಷ್ಟವಾಗಿತ್ತೋ ಇಲ್ಲವೋ . ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ ಈ ಗ್ರಂಥದ,ಅದರಲ್ಲೂ ಪೀಠಿಕಾಭಾಗದ ಮಾತುಗಳು ಕವಿಯ-ರಾಜನ ಸ್ವಂತ ಮಾತುಗಳಷ್ಟೇ ಅಲ್ಲ; ಅದಕ್ಕಿಂತ ಹೆಚ್ಚಾಗಿ, ಕನ್ನಡದ ಸಹಸ್ರಾರು ವರ್ಷಗಳ ಇತಿಹಾಸವು ಇವರ ಇಚ್ಛೆ ಅನಿಚ್ಛೆ ಸಮ್ಮತಿ-ಅಸಮ್ಮತಿಗಳಿಗಾಗಿ ಕಾಯದೆಯೇ ಒತ್ತಿ ಬಂದು ಇವರ ನಾಲಗೆಯಲ್ಲಾಡಿಸಿರುವ ಮಾತುಗಳು. ಪ್ರಾಯಃ, ಸಹಸ್ರಾರು ವರ್ಷಗಳ ಕನ್ನಡ ಇತಿಹಾಸದ ಒತ್ತಡದಲ್ಲಿ ಆ ಕಾಲಕ್ಕೆ, ತಾನೇ ಹರಳುಗಟ್ಟಿಕೊಂಡ ಕನ್ನಡ ರಾಜ್ಯಸೂತ್ರ ಇದು.

ಕನ್ನಡ ತಾತ್ತ್ವಿಕತೆ

ಕನ್ನಡ ಭಾಷೆ-ಅದನ್ನಾಡುವ ಜನ- ಆ ಜನಪದಕ್ಕೆ ಸಾರ್ವಭೌಮತ್ವವನ್ನು ಸಾಧಿಸಿಕೊಡುವ ಪ್ರಭುತ್ವ. ಈ ಮೂರರ ಭೌತಿಕ ಸಂಬಂಧ-ಸಮೀಕರಣಗಳು ಸುಲಭವಾಗಿ ತಿಳಿಯುವಂಥವು. ಇವುಗಳ ತಾತ್ತ್ವಿಕ ಸಮೀಕರಣದ ಬಗ್ಗೆ ಕೊಂಚ ಯೋಚಿಸಬೇಕು. ಈಗಾಗಲೇ ಗಮನಿಸಿರುವ ಹಾಗೆ, ಇಲ್ಲಿನ ‘ಕಾವೇರಿಯಿಂದ….’ಪದ್ಯವು ಈ ನುಡಿ-ನಾಡು-ಜನಪದಗಳನ್ನು ಕನ್ನಡವೆಂಬ ಹೆಸರಿನವು ಎನ್ನದೆ, ‘ಕನ್ನಡದೊಳ್ ಭಾವಿಸಿದ’ಎನ್ನುತ್ತದೆ. ಈ ಗ್ರಂಥವು ‘ಭಾವ’ ಎನ್ನುವ ಪಾರಿಭಾಷಿಕ ಪದವನ್ನು ಕೆಲವೇ ಕಡೆಗಳಲ್ಲಿ ಮತ್ತು ವಿಶಿಷ್ಟ ಅರ್ಥದಲ್ಲಿ ಬಳಸಿರುವಂತೆ ತೋರುತ್ತದೆ. ರಸಗಳನ್ನು ಹೇಳುವಾಗ ಕೂಡಾ ಈ ಗ್ರಂಥವು ‘ಭಾವಗಳ’ ಸುದ್ದಿಯನ್ನೇ ಎತ್ತುವುದಿಲ್ಲ. ಇನ್ನು ಕಾವ್ಯದ ಲಕ್ಷಣವನ್ನು ಹೇಳುವಾಗ ಇದು, ಸಂಸ್ಕೃತ ಆಲಂಕಾರಿಕರು ಸಾಮಾನ್ಯವಾಗಿ ನಿರ್ವಾಚಿಸುವಂತೆ ‘ಕವಿಕೃತ’(ಕರ್ವೇಃಕರ್ಮಂಕಾವ್ಯಂ)ಎನ್ನದೆ, ‘ಕವಿಭಾವಕೃತ’ವೆನ್ನುತ್ತದೆ; ‘ಭಾವಿಕಾಲಂಕಾರ’ವನ್ನು ಹೇಳುವಾಗ ಮತ್ತೆ, ‘ಭಾವಮೆಂಬುದು-ಅದು-ಕವಿಗಳ್-ಅ-ಭಾವಿಸಿ-ಮನದ ಬಗೆಯೊಂದಿದ ಅರ್ಥಂ’(೩-೨೦೮)ಎನ್ನುತ್ತದೆ. ಹೀಗೆ ‘ಕವಿರಾಜಮಾರ್ಗ’ದಲ್ಲಿ ‘ಭಾವ’ ಎಂಬ ಶಬ್ದಕ್ಕಿರುವ ಬಹು ವಿಶಿಷ್ಟವಾದ ಅರ್ಥವನ್ನು ನೆನಪಿಟ್ಟುಕೊಂಡರೆ, ಅದು ನಮ್ಮ ತಾತ್ತ್ವಿಕ ಅವಲೋಕನಕ್ಕೆ ಕೀಲಿಕೈಯಾಗಬಹುದು.

ಮನುಷ್ಯರ ಪಾಲಿಗಂತೂ ಜಗತ್ತು ಎಂದರೆ, ಮನುಷ್ಯಚಿತ್ತವು ಏನೇನನ್ನು ಗ್ರಹಿಸುತ್ತದೋ ಮತ್ತು ಅದಕ್ಕೆ ಹೇಗೆಹೇಗೆ ಸ್ಪಂದಿಸುತ್ತದೋ ಅದೇ. ಗ್ರಹಿಕೆಯೆನ್ನುವುದು ಕೂಡಾ ಚಿತ್ರಸ್ಪಂದನವೇ ಆಗಿರುವುದರಿಂದ, ಜಗತ್ತು ಎನ್ನುವುದು ನಮ್ಮ ಪಾಲಿಗೆ ಚಿತ್ ಮೂಲವಾದದ್ದು. ಅಂದರೆ, ಜಗತ್ತು ಮತ್ತು ಜಗತ್ತಿನ ವ್ಯಾಪಾರವೆಂಬುದಷ್ಟೂ ‘ಸ್ಪಂದನ’ವೇ. ಇಂಥ ‘ಸ್ಪಂದನ’ದ ಪ್ರಥಮಾವಸ್ಥೆಯನ್ನೇ ನಾವು ‘ಭಾವ’ ಎನ್ನುತ್ತೇವೆ. ಭಾವವು ಅಮೂರ್ತವಾಗಿದ್ದು ಅದು ಮೂರ್ತಗೊಳ್ಳುವುದು ನಾಮರೂಪಗಳ ಮೂಲಕ, ಅರ್ಥಾತ್ ಭಾಷೆಯ ಮೂಲಕ. ಭಾಷೆಯಲ್ಲಿ ‘ಭಾವ’ವನ್ನು ಪ್ರಕಟಿಸಿಕೊಳ್ಳುವ ಮನಸ್ಸು, ಅದರ ಮುಂದಿನ ಹಂತವಾಗಿ ಭೌತಿಕ ಕ್ರಿಯೆಯನ್ನು ಪ್ರಚೋದಿಸುತ್ತದೆ. ಆ ದಾರಿ ಹೀಗೆ: ಚಿತ್ ಅಥವಾ ಮನಸ್ಸು>ಭಾವ>ಭಾಷೆ>ಕ್ರಿಯೆ. ನಿರ್ಧಿಷ್ಟವಾದ ಒಂದು ಬಾಹ್ಯ-ಭೌತೊಕ ಬದುಕನ್ನು ನಿರ್ಮಿಸಬೇಕೆಂದರೆ ಅದಕ್ಕೆ ಮೊದಲು ಭಾವನಿರ್ಮಾಣ-ಭಾಷಾನಿರ್ಮಾಣಗಳನ್ನು ಸಾಧಿಸಿಕೊಳ್ಳಬೇಕಾಗುತ್ತದೆ. ಕನ್ನಡ ಜನಪದದ ಕನ್ನಡ ರಾಜ್ಯವೊಂದನ್ನು ಕಟ್ಟಬೇಕೆಂದರೆ ಅದಕ್ಕೆ ಮೊದಲು, ಅಸ್ತಿವಾರವಾಗಿ, ಕನ್ನಡ-ಭಾವ ಕನ್ನಡ-ಭಾಷೆಗಳನ್ನು ಹಾಗೆ ಸೃಜಿಸಿಕೊಳ್ಳಬೇಕಾಗುತ್ತದೆ.

ಕವಿರಾಜಮಾರ್ಗವು ಇಂಥದೊಂದು ತಾತ್ತ್ವಿಕತೆಯನ್ನು ಗ್ರಹಿಸಿರುವ ಕಾರಣಕ್ಕಾಗಿಯೇ, ಮುಂದೆ ಮುಖ್ಯವಾಗಿ ಕಾವ್ಯಾಲಂಕಾರಗಳ ಬಗ್ಗೆ -ಅರ್ಥಾತ್, ಕಾವ್ಯರಚಿಸುವಾತನು ತನ್ನ ನುಡಿಯನ್ನು ಸಮರ್ಥಗೊಳಿಸಿಕೊಳ್ಳಲು ಬೇಕಾದ ಪ್ರಾಥಮಿಕ ಭಾಷಾವ್ಯಾಯಾಮಗಳ ಬಗ್ಗೆ ಹೇಳುತ್ತದಾದರೂ ಭೂಮಿಕೆಯಲ್ಲಿ ಮೊದಲಿಗೇ ತನ್ನ ಯುಗದ ಮಹತ್ತರ ಅಪೇಕ್ಷೆ ಸಂಕಲ್ಪಗಳನ್ನು ಹರಳುಗಟ್ಟಿಸಿಕೊಡುತ್ತದೆ. ಅಲಂಕಾರ-ಕಾವ್ಯ-ಭಾಷೆ-ಜನ-ರಾಜ್ಯ ಇವಕ್ಕೆಲ್ಲ ಆಧಾರಭೂತವಾದ ಒಂದು ಸಾಮುದಾಯಿಕ ಮನಸ್ಸನ್ನು, ಸಾಮುದಾಯಿಕ ಭಾವವನ್ನು(‘ಕನ್ನಡಭಾವ’ಎನ್ನಿ)ದೃಢಘನವಾಗಿ ಸೃಜಿಸಿ ಸ್ಥಾಪಿಸುವುದು ಈ ಗ್ರಂಥಭೂಮಿಕೆಯ ಏಕಾಗ್ರ ಪ್ರಯತ್ನವಾಗಿದೆ. ಭಾಷೆ-ಅಲಂಕಾರ. ಕಾವ್ಯ-ಭಾವ ಇತ್ಯಾದಿ ಆರೋಹಣ ಮತ್ತು ಪ್ರತಿಯಾಗಿ, ಭಾವ-ಕಾವ್ಯ-ಭಾಷೆ-ಭವ(ಭೌತಿಕ ಸಮುದಾಯ, ರಾಜ್ಯ)ಇತ್ಯಾದಿ ಅವರೋಹಣ-ಇಂಥ ಚಕ್ರಾಕೃತಿಯ ನಿರ್ಮಾಣ ಪ್ರಕ್ರಿಯೆಯನ್ನು ಪ್ರತ್ಯಕ್ಷ ಗಮನದಲ್ಲಿಟ್ಟುಕೊಳ್ಳಬೇಕಾದ್ದು (ಅರ್ಥತ್, ಕನ್ನಡ ಭಾವ-ಭವಗಳೆರಡನ್ನೂ ನಿರ್ಮಿಸಿ ಅನಂತರ ಅವು ಬೀಜವೃಕ್ಷನ್ಯಾಯದಂತೆ ಪರಸ್ಪರ ಒಂದನ್ನೊಂದು ನಿರ್ಮಿಸುತ್ತ ಹೋಗುವಂತೆ ಮಾಡಬೇಕಾದ್ದು ಆಗಿನ ಕನ್ನಡದ ಸಂದರ್ಭದಲ್ಲಿ ‘ಕವಿರಾಜಮಾರ್ಗ’ಕ್ಕೆ ಅತ್ಯಗತ್ಯವಾಗಿತ್ತು. ಆದರೆ ಸಂಸ್ಕೃತ ಅಲಂಕಾರ ಶಾಸ್ತ್ರಗಳಿಗೆ, ಅವುಗಳ ಸಂದರ್ಭದಲ್ಲಿ ಅದು ಬಹು ಅಗತ್ಯವಾದ್ದಾಗಿರಲಿಲ್ಲ.

ಕಾವ್ಯಪ್ರಯೋಜನವನ್ನು ಹೇಳುವಾಗ ಭಾಮಹನು ಲೀಕದ ಮಾತನ್ನು ಎತ್ತುವುದಿಲ್ಲ. ದಂಡಿಯ ಕಾವ್ಯದ ‘ಲೋಕರಂಜನ’ ಗುಣವನ್ನು ಸೂಚಿಸುತ್ತಾನೆ. ‘ಕವಿರಾಜಮಾರ್ಗ’ವಾದರೋ, ತನ್ನ ಸಂದರ್ಭದಲ್ಲಿ, ಅದನ್ನು ‘ಲೋಕೋಪಕಾರ-ಉದಿತ-ಪರಮ ಗುಣೈಕ್ಯ-ಉದಾರ-ಧೀರಾಕಾರಂ’(೩:೨೧೦)ಎಂದು ಬಣ್ಣಿಸುತ್ತದೆ; ಪರಮಕವಿಪ್ರಧಾನದ ಕಾವ್ಯಗಳು, ‘ಪಾಪ-ಪುಣ್ಯ, ಹಿತ-ಅಹಿತ, ಸುಖ-ದುಃಖಗಳ ಪರಿಯನ್ನು ಅರಿವುಗೊಳೀಸುತ್ತವೆ.(೧:೧೮)ಎಂಬುದನ್ನು ಅವಧಾರಣೆಯೊಂದಿಗೆ ಘೋಷಿಸುತ್ತದೆ.

ಕನ್ನಡದ ಬೀಜಮಂತ್ರ

‘ಕಾವೇರಿಯಿಂದಂ……’ಎಂಬ ಪದ್ಯವು ‘ಕವಿರಾಜಮಾರ್ಗ’ಭೂಮಿಕೆಯ ಬೀಜಮಂತ್ರವೆನ್ನುವಂತಿದೆ. ಪದ್ಯದ ಪೂರ್ವಾರ್ಧವು ಕನ್ನಡ ಜನಪದ-ರಾಜ್ಯದ ಭೌತಿಕ ಮೇರೆಯನ್ನು ದಾಖಲಿಸುತ್ತದೆ ಮತ್ತು ಅದಕ್ಕೆ ರಾಜನ ಅಧಿಕೃತ ಸಮ್ಮತಿ ಮುದ್ರೆಯೂ ಬಿದ್ದಂತಾಗಿದೆ. ಆ ಹಿಂದೆ ನಮ್ಮಲ್ಲಿ ‘ಅಸೇತು ಹಿಮಾಚಲ’ವೆನ್ನುವಂಥ ವ್ಯಾಪಕಕಲ್ಪನೆಗಳಿದ್ದುವಾದರೂ ‘ಕಾವೇರಿಯಿಂದಮಾ ಗೋದಾವರಿವರಮ್’ಎಂದು ನದಿಗಳ ನಿಶ್ಚಲ ರೇಖೆಗಳಲ್ಲಿ ಒಂದು ರಾಜ್ಯದ ನಕಾಶೆಯನ್ನು ನಿಶ್ಚಿತವಾಗಿ ದಾಖಲಿಸಿರುವ ಕ್ರಮವು ‘ಕವಿರಾಜಮಾರ್ಗ’ಕ್ಕೆ ಹಿಂದೆ ಎಲ್ಲಿಯೂ-ಸಂಸ್ಕೃತ ವಾಙ್ಮಯದಲ್ಲಿ ಕೂಡಾ-ಪ್ರಾಯಃ, ಕಾಣಿಸುವುದಿಲ್ಲ. ಇಲ್ಲಿ ನಿಶ್ಚಲ ನದೀ ರೇಖೆಗಳ ನಿಶ್ಚಿತಿಯಿರುವ ಹಾಗೆ, ಈ ನುಡಿಗಟ್ಟಿನ ಧಾಟಿಯಲ್ಲೇ ಕೆಲಮಟ್ಟಿನ ಅನಿಶ್ಚಯಕ್ಕೂ ಅವಕಾಶವಿದೆಯೆಂಬುದನ್ನು ಗಮನಿಸಬೇಕು. ಕಾವೇರಿಯು ಸುನಿಶ್ಚಿತವಾದ ಪ್ರಾರಂಭಬಿಂದು. ಇಲ್ಲಿ ನಿಂತು, ‘ಆ ಗೋದಾವರಿವರಂ’ಎನ್ನುವಾಗ ಆ ಮಾತು ಉತ್ತರದಲ್ಲಿ ಕೆಲಮಟ್ಟಿನ ಹಿಗ್ಗುಕುಗ್ಗಿಗೂ ಎಡೆಯಿಟ್ಟಿಕೊಳ್ಳುತ್ತದೆ. ಆ ಕಾಲಕ್ಕೆ, ಉತ್ತರ ಭಾಗದಲ್ಲಿ ಒಂದು ಕಡೆ ತೆಲುಗು ಭಾಷಾಪ್ರದೇಶವು ಅದೇತಾನೇ ರೂಪುಗೋಳ್ಳತೊಡಗಿತ್ತು; ಮತ್ತು‌ಇನ್ನೊಂದು ಕಡೆ, ಇನ್ನೂ ಗರ್ಭಸ್ಥವಷ್ಟೇ ಆಗಿದ್ದ ಮರಾಠಿ ಭಾಷಾಸಮುದಾಯವು ದೂರಭವಿಷ್ಯದಲ್ಲಾದರೂ ಮೈದಾಳಿಕೊಳ್ಳಲಿರುವ ಸೂಚನೆ ಕಾಣಿಸುತ್ತಿದ್ದಿರಬೇಕು. ಉತ್ತರದಲ್ಲಿನ ಇಂಥ ಅನಿಶ್ಚಿತ ಸ್ಥಿತಿಯನ್ನು ಈ ಪದ್ಯವು ಗುರುತಿಸುತ್ತಿದ್ದಿರಬಹುದು.

ಕಾವೇರಿ ಗೋದಾವರಿಗಳೆಂಬವು ನಿಶ್ಚಲ ಭೌತಿಕ ಮೇರೆಗಳು ಎನ್ನುವಂತೆಯೇ ಇನ್ನೊಂದು ರೀತಿಯಿಂದ, ಅವು ಭಾರತೀಯ ಸಮಷ್ಟಿಮನಸ್ಸಿನ ಭಾವವಾಸ್ಥವಗಳೂ ಆಗಿದ್ದಂಥವು. ‘ಗಂಗೇ ಚ ಯಮುನೇ ಚೈವ…..’ಎನ್ನುವ ಸಮಷ್ಟಿಮಂತ್ರದಲ್ಲಿ ಕಾವೇರಿ ಗೋದಾವರಿಗಳೂ ಕೂಡಿಕೊಂಡಿವೆ. ಹೀಗೆ ‘ಕವಿರಾಜಮಾರ್ಗ’ವು ರೂಪಿಸುವ ಮೇರೆಯು ಏಕಕಾಲಕ್ಕೆ ಭೌತ ಪ್ರತಿಮೆ-ಭಾವಪ್ರತಿಮೆಗಳೆರಡೂ ಆಗಿ ಧ್ವನಿಗೊಳ್ಳುತ್ತದೆ. ಇದಲ್ಲದೆ, ಈ ಕನ್ನಡ ನುಡಿ, ನಾಡು, ಜನಪದ ಎಂಬ ಮೂರೂ ‘ಕನ್ನಡ’ ವೆನ್ನುವ ಇನ್ನೊಂದೇ ಮಹತ್ ತತ್ತ್ವದಲ್ಲಿ ಅಳವಟ್ಟುಕೊಂಡಿರುವಂಥವು(ಕನ್ನಡದೊಳ್ ಭಾವಿತಮಾದ)ಎಂಬ ಇಲ್ಲಿನ ಸೂಚನೆಯನ್ನು ಈಗಾಗಲೇ ಗಮನಿಸಿದ್ದೇವೆ. ಕನ್ನಡವೆಂಬ ತತ್ತ್ವವು ಅಮೂರ್ತವಾದದ್ದು ಮತ್ತು ಅದರೊಳಗಿನ ನುಡಿ-ನಾಡು-ಜನಪದಗಳು ಏಕಕಾಲಕ್ಕೆ ಮೂರ್ತವೂ ಅಮೂರ್ತವೂ ಎರಡೂ ಆಗಿ ಇಲ್ಲಿ ಸೃಷ್ಟಿಗೊಂಡಿವೆ ಎಂಬುದನ್ನು ಗಮನಿಸಬೇಕು.

‘ಕನ್ನಡ’ದ ಗುಣಲಕ್ಷಣಗಳನ್ನು ಈ ಪದ್ಯದ ದ್ವಿತೀಯಾರ್ಧವು(ವಸುಧಾ-ವಲಯ-ವಿಲೀನ-ವಿಶದ-ವಿಷಯ-ವಿಶೇಷಂ)ಕನ್ನಡದ ವಿಶಿಷ್ಟತೆ-ಸ್ವಂತಿಕೆಯನ್ನು ಮತ್ತು ವಸುಧಾಸಾಮಾನ್ಯತೆಯನ್ನು ಒಟ್ಟೊಟ್ಟಿಗೇ ಗ್ರಹಿಸಿ ನಿರೂಪಿಸುತ್ತದೆ. ಇದು ‘ವಿಷಯ ವಿಶೇಷ’ವಾಗಿದ್ದೂ ‘ವಸುಧಾವಲಯ’ದಲ್ಲಿ ‘ವಿಲೀನ’ವಾಗಿ‘ಭಾವಿತ’ವಾಗಿರುವಂಥದು ಮತ್ತು ತನ್ನ ವಿಶೇಷತೆಯಲ್ಲಿ ‘ವಸುಧಾವಲಯ’ವನ್ನು ತನ್ನಲ್ಲಿ ‘ವಿಲೀನ’ಗೊಳಿಸಿಕೊಂಡು ತಾನೊಂದು ‘ವಿಶದ’ಜಗತ್ತಾಗಿ ‘ಭಾವಿತ’ವಾಗಿರುವಂಥದು.

ಜಗತ್ತಿನಲ್ಲಿ ವಿಲೀನಗೊಳ್ಳುವುದು ಮತ್ತು ಅದನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವುದು ಎನ್ನುವಾಗ ತಾನು ಮತ್ತು ಅನ್ಯ ಎಂಬೆರಡು ಸಂಗತಿಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಇಲ್ಲಿ ಮೊದಲನೆಯದಾಗಿ-‘ಸ್ವ’ ಮತ್ತು ‘ಅನ್ಯ’ಎಂಬೆರಡೂ ಅತ್ಯಂತ ಅಮೂರ್ತ-ತಾತ್ಕ್ಷಣಿಕ-ಚಿತ್ತಕಲ್ಪಿತ ಆಕೃತಿಗಳು ಎನ್ನುವುದನ್ನು ಗಮನಿಸಬೇಕು. ‘ಸ್ವ’ಎನ್ನುವುದು ಒಂದು ಕ್ಷಣದಲ್ಲಿ ವ್ಯಕ್ತಿಯಾದ ನನ್ನನ್ನು ಕುರಿತದ್ದಾದರೆ ಮರುಕ್ಷಣದಲ್ಲಿ ಅದು ನನ್ನ ಕುಟುಂಬವನ್ನು, ಮತ್ತೊಂದು ಕ್ಷಣದಲ್ಲಿ ನನ್ನ ಊರನ್ನು ಮತ್ತು ಹೀಗೆ ಜಿಲ್ಲೆ-ರಾಜ್ಯ-ರಾಷ್ಟ್ರ-ಭೂಪ್ರಪಂಚ ಇತ್ಯಾದಿಗಳನ್ನು ಕುರಿತದ್ದಾಗಿ ಪಲ್ಲಟಿಸಿರುತ್ತದೆ. ಒಂದು ಕ್ಷಣ ‘ಅನ್ಯ’ ವೆಂದದ್ದು ಮರುಕ್ಷಣದಲ್ಲಿ ‘ಸ್ವ’ದ್ದೇ ಭಾಗವಾಗಿಬಿಡಬಹುದು. ಎರಡನೆಯದಾಗಿ-‘ಸ್ವ’ ಮತ್ತು ‘ಅನ್ಯ’ಗಳ ಸಂಬಂಧವು, ಎರಡು ಭಿನ್ನ ಮನೋಧರ್ಮಗಳನ್ನವಲಂಬಿಸಿ, ಎರಡು ಬಗೆಯಲ್ಲಿ ಕಲ್ಪಿತವಾಗಲು ಸಾಧ್ಯ. ಒಂದು- ‘ಸ್ವ’ಮತ್ತು ಅದಕ್ಕೆ ಎದುರಾಗಿ, ಪ್ರತಿಯಾಗಿ ನಿಂತಿರುವ ‘ಅನ್ಯ’;ಇಂನ್ನೊಂದು-‘ಸ್ವ’ ಮತ್ತು ಅದಕ್ಕೆ ಜೊತೆಯಾಗಿ, ಸಹವಾಗಿ ನಿಂತಿರುವ ‘ಅನ್ಯ’. ಹೀಗೆ, ಅನ್ಯವನ್ನು, ಆಯಾ ಮನೋಧರ್ಮಕ್ಕೆ ತಕ್ಕಂತೆ, ‘ಪ್ರತಿ’ ಅಂತ ಭಾವಿಸುವುದುಂಟು ಅಥವಾ ‘ಸಹ’ ಅಂತ ಭಾವಿಸುವುದುಂಟು. ಮೊದಲನೆಯ ದೃಷ್ಟಿಯಲ್ಲಿ ‘ಸ್ವ’ ಎಂಬುದು, ಸ್ಪರ್ಧೆಯಲ್ಲಿ ಪೌರುಷ ಸಾಮರ್ಥ್ಯದಿಂದ ತನ್ನನ್ನು ಸ್ಥಾಪಿಸಿಕೊಳ್ಳಬೇಕಾಗುತ್ತದೆ; ಎರಡನೆಯ ದೃಷ್ಟಿಯಲ್ಲಿ ‘ಸ್ವ’ಎಂಬುದು ಒಡನಾಟದಲ್ಲಿ ಅನುಸಂಧಾನದಿಂದ ತನ್ನನ್ನು ಬಾಳಿಸಿಕೊಳ್ಳುತ್ತದೆ.

ಅನ್ಯದಲ್ಲಿ ತನ್ನ ವಿಲೀನ ಮತ್ತು ತನ್ನಲ್ಲಿ ಅನ್ಯದ ವಿಲೀನ ಎಂಬ ಕಲ್ಪನೆಯುಂಟಾಗುವುದು ‘ಸ್ವ’ ಮತ್ತು ‘ಅನ್ಯ’ಗಳನ್ನು ‘ಪ್ರತಿ’ಎಂದು ತಿಳಿಯದೆ, ‘ಸಹ’ಎಂದು ತಿಳಿದಾಗ ಮಾತ್ರವೇ. ‘ಅನ್ಯ’ವನ್ನು ‘ಸಹ’ ಎಂದು ಭಾವಿಸಿದಾಗ, ‘ಸಹನೆ’ಯು ತಾನಾಗಿಯೇ ಹುಟ್ಟುತ್ತದೆ. ಮುಂದೆ, ಸಹನೆಯು ಸಾಹಚರ್ಯಕ್ಕೂ ಸಮ್ಮಿಲನಕ್ಕೂ ದಾರಿ ಮಾಡಿಕೊಡುತ್ತದೆ. ಇಲ್ಲಿ ಸಹನೆ ಅಥವಾ ಸೈರಣೆಯೆನ್ನುವುದು ನಿಸರ್ಗ ನೀತಿಯಾಗಿ ಜೈವಿಕಧರ್ಮವಾಗಿ ಕಾನಿಸಿಕೊಳ್ಳುತ್ತದೆ. ಕಸವರಮೆಂಬುದು ನೆರೆ ಸೈರಿಸುವೊಡೆ ಪರಧರ್ಮಮಂ ಪರ ವಿಚಾರಮುಂ…..’ಎಂಬ ಲಕ್ಷ್ಯಪದ್ಯದ ಸಮಸ್ತನೀತಿಯ ಮೇಲೆ ಹೇಳಿದ ಜನ-ಭಾಷಾ-ರಾಜ್ಯಗಳ ಸಂದರ್ಭದಲ್ಲಿ ಜನನೀತಿ-ಭಾಷಾನೀತಿ-ರಾಜನೀತಿಗಳೂ ಆಗಿ, ಕಲ್ಪಿತ ಕನ್ನಡ ರಾಜಕಾರಣಕ್ಕೆ ಒಂದು ಕ್ರಿಯಾಶೀಲ ನೀತಿಸೂತ್ರವಾಗುತ್ತದೆ.

‘ಕವಿರಾಜಮಾರ್ಗ’ವು ಈ ನೀತಿಯನ್ನು ಪ್ರತ್ಯೇಕವಾಗಿ ಮಡಿಸಿ ಪ್ರತಿಪಾದಿಸಿ ಒತ್ತಾಯಿಸಿಲ್ಲ; ಎಲ್ಲೋ ಒಂದೆಡೆಯಲ್ಲಿ, ಉದ್ದೇಶಪೂರ್ವಕವಾದ್ದೆನ್ನಿಸದ ರೀತಿಯಲ್ಲಿ ತೇಲಿಸಿಬಿಟ್ಟಿದೆ-ಗಿಡದಲ್ಲಿ ಯಾವುದೋ ಮೂಲೆ ಟೊಂಗೆಯ ಕಾಣದ ಹೂವು ಪರಿಮಳವನ್ನು ತೇಲಿಸಿಬಿಟ್ಟಹಾಗೆ. ನಿಜವಾಗಿ, ಈ ಗ್ರಂಥವೇ ಅಂಥ ಸೈರಣೆಗೆ ಒಂದು ಸ್ಥಿರ ಅಕ್ಷರಸಾಕ್ಷಿಯಾಗಿ ನಿಂತಿದೆ. ‘ಕವಿರಾಜಮಾರ್ಗ’ದ ಕಾರಣ-ಕರ್ತೃಗಳಾದ ನೃಪತುಂಗ-ಶ್ರೀವಿಜಯರು ಭಿನ್ನವಾದ ವೈದಿಕ-ಜೈನಧರ್ಮಗಳಿಗೆ ಸೇರಿದವರು; ಈಯಿಬ್ಬರೂ ಧರ್ಮದಲ್ಲಿ ಪರಮನಿಷ್ಠೆಯಿದ್ದವರು ಎಂಬುದು ಕೂಡಾ ಗ್ರಂಥದಲ್ಲಿಯೇ ವ್ಯಕ್ತಗೊಳ್ಳುತ್ತದೆ; ಹಾಗಾದರೂ ಇಡೀ ಗ್ರಂಥದ ಯಾವುದೇ ಮೂಲೆಯಲ್ಲಿಯೂ ಇವರ ಧರ್ಮಭಿನ್ನತೆಯ ಸೂಚನೆ ಕೂಡಾ ಕಾಣಿಸಿಕೊಳ್ಳುವುದಿಲ್ಲ ಎಷ್ಟೆಂದರೆ, ಇವರಿಬ್ಬರ ಧರ್ಮಗಳ ಬಗ್ಗೆ ಇವತ್ತಿಗೂ ವಾದವಿವಾದ ಜಿಜ್ಞಾಸೆಗಳು ನಡೆದೇ ಇವೆ.

ಕನ್ನಡ ರಾಜ್ಯಸೂತ್ರವು ಹೇಗೋ ಹಾಗೆ, ಈ ಸಹನಸೂತ್ರ ಅಥವಾ ‘ಕಸವರಸೂತ್ರ’ವು ಇಲ್ಲಿನ ನೆಲದ ಸಹಸ್ರವರ್ಷಗಳ ಅನುಭವದ ಒತ್ತಡದಲ್ಲಿ ಉದ್ಭವಗೊಂಡದ್ದು ಎಂಬುದನ್ನು ಗಮನಿಸಬೇಕು. ‘ಕವಿರಾಜಮಾರ್ಗ’ದ ಕಾಲಕ್ಕೆ ಹಿಂದೆ-ಮುಂದೆ, ಪರಧರ್ಮ-ವಿಚಾರಗಳ ಸಹಿಷ್ಣುತೆಯು ಮತ್ತು ಜಾತಿಮತ ಧರ್ಮಗಳ ನಡುವೆ ಕೆಲಮಟ್ಟಿನ ಮುಕ್ತ ಚಲನೆಯು ಕೂಡಾ ವೃದ್ಧಿಗೊಂಡಿತ್ತೆಂಬುದನ್ನು ಇತಿಹಾಸವು ಸೂಚಿಸುತ್ತದೆ. ಕವಿ ಪಂಪನ ತಂದೆ ಅಭಿರಾಮ ದೇವರಾಯನು ವೈಧಿಕ ಧರ್ಮವನ್ನು ಬಿಟ್ಟು ಜೈನಧರ್ಮವನ್ನು ಸೇರಿಕೊಂಡದ್ದು, ೧ನೇ ನಾಗವರ್ಮನು ಹೊಸದಾಗಿ ಜೈನಧರ್ಮಕ್ಕೆ ಸೇರಿದ ‘ಜೈನಬ್ರಾಹ್ಮಣ’ನಾಗಿದ್ದುದು ತಿಳಿದ ವಿಷಯಗಳೇ.

ತಾತ್ಪರ್ಯವೆಂದರೆ- ‘ಕವಿರಾಜಮಾರ್ಗ’ವು ಪೀಠಿಕಾ ಭಾಗದಲ್ಲಿ ಭಾಷೆ-ಜನ-ರಾಜ್ಯಗಳೆಂಬ ಶಕ್ತಿತ್ರಿಕೂಟದ ‘ಕನ್ನಡ’ ತತ್ತ್ವವನ್ನು ನಿರೂಪಿಸುತ್ತದೆ ಮತ್ತು ‘ಕಾವೇರಿಯಿಂದಂ……’ಪದ್ಯದಲ್ಲಿ, ಈ ‘ಕನ್ನಡ’ವೆಂಬ ಸಮಸ್ತವನ್ನು (ಭಾಷೆ-ಜನ-ರಾಜ್ಯ)ಮೂರ್ತ-ಅಮೂರ್ತ, ಸಾಮಾನ್ಯ-ವಿಶಿಷ್ಟ, ಭೌತಿಕ-ಭಾವಕ ಎಂಬ ವಿರುದ್ಧ ದ್ವಂದ್ವಗಳಲ್ಲಿ ಏಕತ್ರ ಗ್ರಹಿಸಿ ಕಂಡರಿಸುತ್ತದೆ. ಆದ್ದರಿಂದ ಈ ಪೀಠಿಕೆಯನ್ನು ವಿವಿಕ್ತ ಉದ್ಗಾರಗಳೆಂದೋ ಸಾಮಾನ್ಯ ಪ್ರಸ್ತಾವನೆಯೆಂದೋ ತಿಳಿಯದೆ, ಕನ್ನಡ ತತ್ತ್ವದ ಭಧ್ರ ಭೂಮಿಕೆಯೆಂದು ಗ್ರಹಿಸಬೇಕು ಮತ್ತು ‘ಕಾವೇರಿಯಿಂದ…..’ಪದ್ಯವನ್ನು ಈ ಭಧ್ರಭೂಮಿಕೆಯ ಬೀಜಾಕ್ಷರಗಳೆಂದು ಗ್ರಹಿಸಬೇಕು. ಭೂಮುಕೆಯನ್ನು ಅರ್ಥೈಸಿಕೊಂಡಮೇಲೆ, ಆ ಭೂಮಿಕೆಯ ಬೆಳಕಿನಲ್ಲಿಯೇ ಇಡೀ ಪಠ್ಯವನ್ನು ಗ್ರಹಿಸಿಕೊಳ್ಳಬೇಕಾದ್ದು ಕೂಡಾ ಅತ್ಯಾವಶ್ಯಕ. ಹಾಗೆ ಮಾಡಿದಾಗ ಮಾತ್ರ ಇಡೀ ಪಠ್ಯದ ಅರ್ಥವಂತಿಕೆಯು ಅನಾವೃತಗೊಳ್ಳಬಹುದು.

– ೩ –
ಪಠ್ಯವಾಸ್ತುವಿನ ಒಳಸುತ್ತು(ಲಕ್ಷಣಾಂಗಣ)

‘ಕವಿರಾಜಮಾರ್ಗ’ದ ಮೊದಲ ಪರಿಚ್ಛೇದವು ‘ದೋಷಾದೋಷ ನಿರ್ಣಯ’ವನ್ನು ಕುರಿತದ್ದು. ಭಾಷೆ ಮತ್ತು ಕಾವ್ಯದಲ್ಲಿ ನುಸುಳಿಬರುವ ದೋಷಗಳ ಬಗ್ಗೆ ಈ ಗ್ರಂಥವು ಕೊಂಚ ಹೆಚ್ಚು ಆತಂಕಗೊಂಡಿರುವಂತ ತೋರುತ್ತದೆ. ಗ್ರಂಥದಲ್ಲಿ ಮೊದಲಿಗೇ(೧ಃ೪೩-೧೫೦)ದೋಷಗಳ ಬಗ್ಗೆ ವಿವರವಾದ ಪ್ರಸ್ತಾಪ ಬಂದಿದೆಯಲ್ಲದೆ ಎರಡನೇ ಪರಿಚ್ಛೆದ ಪ್ರಾರಂಭದಲ್ಲೂ(೨ಃ೪-೨೯)ಮತ್ತೆ ಅದರ ಪ್ರಸ್ತಾಪವಿದೆ. (ಸ್ಥೂಲವಾಗಿ-ಮೊದಲ ಪ್ರಸ್ತಾಪವು ಭಾಷೆಯ ಒಟ್ಟೂ ಶಬ್ದ ಅರ್ಥಗಳಿಗೆ ಸಂಬಂಧಿಸಿದ ಮತ್ತು ಎರಡನೆಯದು ಅಲಂಕಾರಗಳಿಗೆ ಸಂಬಂಧಿಸಿದ ದೋಷಗಳನ್ನು ಹೇಳುತ್ತದೆ.) ಭಾಷೆ-ಜನಪದ-ರಾಜ್ಯಗಳ ಸಮಷ್ಟಿಯು ಅದೇ ಮೊದಲ ಬಾರಿಗೆ ಉದಯಗೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಗ್ರಂಥವು ಹೀಗೆ ಭಾಷೆಯಲ್ಲಿನ ದೋಷಗಳ ಬಗ್ಗೆ ಹೆಚ್ಚು ಜಾಗೃತವಾಗಿದ್ದುದು ಸಹಜವಾದ್ದೇ. ಭಾವ-ಭಾಷೆ-ಭೌತಿಕಗಳ ತ್ರಿಕೂಟದಲ್ಲಿ ಒಂದೊಂದೂ ಶುದ್ಧವಾಗಿಕೊಂಡು ಇನ್ನೆರಡರ ಶುದ್ಧಿಗೂ ಕಾರಣವಾಗಿರುವಂತಿರಬೇಕು.

ದೋಷಗಳು ಮತ್ತು ಅವುಗಳ ಪರಿಹಾರ

ಆ ಕಾಲಕ್ಕಿನ್ನೂ ಕನ್ನಡದಲ್ಲಿ ಪ್ರಮಾಣಗ್ರಂಥವಿರಲಿಲ್ಲ ಎಂಬುದೇ ಅಲ್ಲದೆ ಬೇರೆ ವಿಶಿಷ್ಟ ಕಾರಣಗಳಿಂದಾಗಿಯೂ ಭಾಷೆಯಲ್ಲಿ ದೋಷಗಳು ಹೆಚ್ಚಿಕೊಂಡಿವೆ ಎನ್ನುವುದು ಗ್ರಂಥದ ಅಭಿಪ್ರಾಯ. ಆ ಕಾರಣಗಳೆಂದರೆ-೧. ಅಸಂಖ್ಯವಾದ ದೇಸಿ(ಉಪಭಾಷಾ)ಭಿನ್ನತೆಗಳು; ೨. ಪಳಗನ್ನಡದ ಬಳಕೆ; ೩.ಸಂಸ್ಕೃತದ ಸಹಯೋಗ. ಅವುಗಳನ್ನು ಹೀಗೆ ವಿವರಿಸಲಾಗಿದೆ:

ಅಸಂಖ್ಯ ದೇಸಿ: ‘ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ’(೪೬). ದೇಸಿ ಬೇರೆಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು.) ಹೀಗಿದ್ದರೂ ಸತತವಾಗಿ ಬಂದಿರುವ ಹಳೆಯ ಕಾವ್ಯಗಳನ್ನು ಪರಿಶೀಲಿಸಿ, ನನಗೆ ತಿಳಿದುವನ್ನು ಬುಧಜನಕ್ಕೆ ಹೇಳುತ್ತೇನೆ-ಎನ್ನುತ್ತದೆ ಮುಂದಿನ ಪದ್ಯ-೪೭)

ಪಳಗನ್ನಡ ಬಳಕೆ: ‘ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ ಎಂದೆ ಪಳಗನ್ನಡಮಂ ಪೊಲೆಗೆಡಿಸಿ ನುಡಿವರ್ ಆಗಮಬಲಹೀನರ್, ದೇಸಿಯಲ್ಲ ಇದು ಎಂದು ಅರಿದಿರ್ದು’(೪೮). ‘ದೊರೆಕೊಂಡಿರೆ ಸೊಗಯಿಸುಗುಂ ಪುರಾಣ-ಕಾವ್ಯ-ಪ್ರಯೋಗದೊಳ್ ತತ್ಕಾಲಂ, ವಿರಸಂ ಕರಮ್ ಅವು ದೇಸಿಗೆ, ಜರದ್ವಧೂ-ವಿಷಯ-ಸುರತ-ರಸ-ರಸಿಕತೆವೋಲ್’(೫೦). (ಪ್ರತಿಷ್ಠೆಗೊಂಡಿರುವ ಹಿಂದಿನ ಕಾವ್ಯಗಳೇ ಮುಂದಿನವಕ್ಕೆ ಮೇಲ್ಪಂಕ್ತಿಗಲು ಎಂದುಕೊಂಡು, ಶಾಸ್ತ್ರದ ಬಲವಿಲ್ಲದಂಥ ಜನರು, ‘ಪಳಗನ್ನಡ’ಮಾತುಗಳನ್ನೇ ಬಳಸಿ ಹೊಲೆಗೆಡಿಸುತ್ತಾರೆ, ಅದು ಪ್ರಚಲಿತವಾದ ದೇಸಿಯಲ್ಲವೆಂದು ತಿಳಿದಿದ್ದರೂ…. ಅಂಥ ಹಳೆಯ ಮಾತುಗಳು ಆ ಕಾಲದ ಹಳೆಯ ಕಾವ್ಯಗಳಲ್ಲಿ ಸೊಗಸಾಗಿಯೇ ಇರುತ್ತವೆ, ಆದರೆ ಹೊಸಕಾಲದ ದೇಸಿಯ ಜೊತೆ ಪ್ರಯೋಗಿಸಿದಾಗ ಮುಪ್ಪಾಗಿರುವ ವಧುವಿನ ಜೊತೆ ಸುರತವಾಡಿದಂತೆ ತುಂಬ ವಿರಸವೆನಿಸುತ್ತವೆ.)

ಸಂಸ್ಕೃತದ ಸಹಯೋಗ: ‘ಸಮಸಂಕೃತಂಗಳೊಳ್ ಸೈತು ಅಮರ್ದಿರೆ ಕನ್ನಡಮನ್ ಅರಿದು ಪೇಳ್ಗೆ….’(೫೧); ಅದನ್ನು ಬಿಟ್ಟು ಹೊಂದಿಕೆಯಾಗದ ರೀತಿಯಲ್ಲಿ) ‘ಬೆರೆಸಿರೆ ಕನ್ನಡದೊಳ್ ಬಂಧುರಮಾಗದು ಕಾವ್ಯರಚನೆ; ಪೇಳ್ದೊಡೆ ಪೀನಂ ಪುರುಷತರಂ ಅಕ್ಕು ಅದು, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳ ವೋಲ್’(೫೩); ‘ವಿದಿತ ಸಮ ಸಂಸ್ಕೃತೋದಿತ-ಪದಂಗಳೊಳ್ ಪುದಿದು ಬೆರೆಸಿ ಬರೆ ಕನ್ನಡದೊಳ್ ಮುದಮನ್ ಅವುತರ್ಕುಂ, ಅತಿಶಯ-ಮೃದಂಗ-ಸಂಗೀತಾದಿ ಮಧುರ-ರವಂಬೋಲ್’(೫೫); ‘ತರಿಸಂದು ಆಸಕ್ಕದಮುಮನ್ ಅರಿಯದೆ ಕನ್ನದಮುಮಂ ಸಮಾಸೋಕ್ತಿಗಳೊಳ್ ಕುರಿತು ಬೆರೆಸಿದೊಡೆ ವಿರಸಂ, ಮರುಗುವ ಪಾಲ್ಗೆ ಅಳೆಯ ಪನಿಗಳಂ ಬೆರೆಸಿದ ವೋಲ್’(೫೮); ‘……….ಸಮಾಸೋಕ್ತಿಯೊಳ್ ಒಂದಾಗಿರೆ ಸಕ್ಕದಂಗಳಂ ಕನ್ನದಮುಂ ಸುಂದರಮಕ್ಕುಂ ಕವಿಪದಮೊಂದಿದವೋಲ್ ಕನಕರಚನೆಯೊಳ್ ಮಣಿನಿಕರಂ’(೬೧). ಕನ್ನಡವು ಸಮಸಂಸ್ಕೃತ ಪದಗಳಲ್ಲಿ ಹೊಂದಿ ಅದನ್ನು ಅಪ್ಪಿಕೊಂಡಹಾಗೆ, ತಿಳಿದು ರಚಿಸಲಿ; ಅರಿವಿಲ್ಲದೆ ಬೆರೆಸಿದರೆ ಕನ್ನಡದ ಕಾವ್ಯ ರಚನೆ ಹಿತವಾಗದು ಮತ್ತು ಅದು ಒತ್ತು ಕರಡೆ ಮದ್ದಳೆಗಳ ಬಡಿತದ ಹಾಗೆ ತುಂಬ ಕರ್ಕಶವಾಗುತ್ತದೆ. ಸಮಸಂಸ್ಕೃತಪದಗಳಲ್ಲಿ ಹೊಂದಿ ಬಂದಾಗ ಅವು ಮೃದಂಗಾದಿ ಮೇಳವುಳ್ಳ ಮಧುರ ಸಂಗೀತದಂತೆ ಸಂತೋಷವನ್ನೇ ಕೊಡುತ್ತವೆ. ಅರಿವಿಲ್ಲದೆ ಹಟದಿಂದ ಸಂಸ್ಕೃತ ಕನ್ನಡಗಳನ್ನು ಸಮಾಸೋಕ್ತಿಗಳಲ್ಲಿ ಬೆರೆಸಿದರೆ, ಕುದಿಯುವ ಹಾಲಿಗೆ ಮಜ್ಜಿಗೆಯ ಹನಿಗಳನ್ನು ಬೆರೆಸಿದಂತೆ, ವಿರಸವುಂಟಾಗುತ್ತದೆ. ಸಮಾಸೋಕ್ತಿಗಳಲ್ಲಿ ಸಂಸ್ಕೃತ ಕನ್ನಡಗಳು ಹೊಂದು ಒಂದಾಗಿ ಬಂದರೆ, ಬಂಗಾರದ ಕುಸುರಿಯಲ್ಲಿ ಹೊಂದಿಕೊಂಡ ಮಣಿಗಳ ಹಾಗೆ, ಕವಿತ್ವವು ಸುಂದರವಾಗುತ್ತದೆ.)

ಮೇಲೆ ಹೇಳಿದ ಮೂರು ಕಾರಣಗಳು ಮತ್ತು ಆ ಸಮಸ್ಯೆಗಳು-ಇವುಗಳಲ್ಲಿ ಎರಡಕ್ಕೆ ಅಲ್ಲಲ್ಲಿ ಪರಿಹಾರವನ್ನು ಹೇಳಿ ವಿಧಿಸಲಾಗಿದೆ. ಹಳಗನ್ನಡ ಬಳಕೆಗೆ ಸಂಬಂಧಿಸಿ, ಆದಷ್ಟು ನಿಶ್ಚಿತವಾಗಿ ನಿರಾಕರಿಸಲಾಗಿದೆ; ಮತ್ತು, ಸಂಸ್ಕೃತದ ಸಹಯೋಗಕ್ಕೆ ಸಂಬಂಧಿಸಿ ಅನುಸರಿಸಬೇಕಾದ ಮಾರ್ಗಗಳನ್ನು ಸೂತ್ರರೂಪದಲ್ಲಿ ವಿಧಿಸಲಾಗಿದೆ. ಆದರೆ, ‘ದೇಸಿಗಳ ಅನೇಕತೆಯ ಬಗ್ಗೆ ಮಾತ್ರ, ಸಂದಿಗ್ಧತೆಯನ್ನು ಉಳಿಸಿಕೊಳ್ಳಲಾಗಿದೆ; ಅವುಗಳನ್ನೆಲ್ಲ ನಿರಾಕರಿಸಿ, ಒಂದೇ ಅಧಿಕೃತ ಏಕರೂಪಿ ಕನ್ನಡವನ್ನು(ರಾಜಗನ್ನಡ ಎನ್ನಿ) ರೂಪಿಸತಕ್ಕದ್ದು ಮತ್ತು ಒಪ್ಪಿಕೊಳ್ಳತಕ್ಕದ್ದು ಅಂತ ಹೇಳುವುದಿಲ್ಲ. ಅಲ್ಲದೆ, ಹಳಗನ್ನಡವನ್ನು ನಿರಾಕರಿಸುವಾಗ ಈ ಗ್ರಂಥವು, ಚಾಲ್ತಿಯಲ್ಲಿರುವ ಹೊಸ ಭಾಷೆಯನ್ನು ‘ದೇಸಿ’ ಎಂದೇ ನಿರ್ದೇಶಿಸುತ್ತದೆ ಮತ್ತು ಪ್ರಚಲಿತವಿರುವ ದೇಸಿಯನ್ನೇ ಬಳಸಬೇಕು ಎನ್ನುತ್ತದೆ. ರಾಜನ ನೇರ ಸಹಭಾಗಿತ್ವವಿರುವ ಈ ಗ್ರಂಥವು, ಪ್ರಭುತ್ವದಿಂದ ಅಧಿಕೃತಗೊಂಡ ಭಾಷಾರಾಜ್ಯವನ್ನು ಹೊಸದಾಗಿ ನಿರ್ಮಿಸಿಕೊಳ್ಳುತ್ತಿರುವ ಆಗಿನ ಸಂದರ್ಭದಲ್ಲೂ ‘ರಾಜಗನ್ನಡ’ವೊಂದನ್ನು ವಿಧಿಸಲು ತವಕಿಸದೆ, ಆ ಬಗ್ಗೆ ಕೆಲಮಟ್ಟಿನ ಸಂದಿಗ್ಧತೆಗೆ ಅವಕಾಶವನ್ನುಳಿಸಿ ಕೊಂಡಿರುವುದು ಗಮನಾರ್ಹ.

ಮೇಲೆ ಹೇಳಿದ ವಿಶಿಷ್ಟ ಕಾರಣಗಳು ಮತ್ತು ಇನ್ನಿತರ ಸಾಮಾನ್ಯ ಕಾರಣಗಳಿಂದಾಗಿ ಭಾಷೆ-ಕಾವ್ಯಗಳಲ್ಲಿ ಬರುವ ದೋಷಗಳನ್ನು ಪ.೬೨ರಿಂದ ಆರಂಭಿಸಿ ಪರಿಚ್ಛೇದದ ಕೊನೆಯ ತನಕ ಪರಿಶೀಲಿಸಲಾಗಿದೆ. ಶ್ರುತಿದುಷ್ಟ(ಉಚ್ಚರಿಸಿದಾಗ ಬೇರೆ ಅಶ್ಲೀಲಾದಿ ಧ್ವನಿಗಳು ಹೊರಡುವಂತಿರುವ ಮಾತುಗಳು ಇ.), ಅರ್ಥದುಷ್ಟ(ಉದ್ದೇಶಿತವಾದ್ದಲ್ಲದೆ ಬೇರೆ ದುಷ್ಟ ಅನಪೇಕ್ಷಿತವಾದ ಅರ್ಥಗಳು ಹೊರಡುವಂಥವು ಇ.), ಶೃತಕಷ್ಟ(ಉಚ್ಚರಿಸಲು, ಕೇಳಲು ಕಷ್ಟವಾಗುವಂಥವು ಇ.,), ಕಲ್ಪನೋಕ್ತಿ(ಅರ್ಥ) ಕಷ್ಟ(ಕಲ್ಪಿಸಲು ಕಷ್ಟವಾಗುವ ಅಸಂಬದ್ಧ ಇ.)-ಹೀಗೆ ನಾಲ್ಕು ದೋಷಗಳನ್ನು ಮೊದಲಿಗೆ ನಿರೂಪಿಸಲಾಗಿದೆ. ದುಷ್ಕರ(ಚಿತ್ರ) ಕಾವ್ಯಗಳಲ್ಲಿ ಮತ್ತು ಪ್ರಕರಣ(ನಾಟಕ)ಗಳಲ್ಲಿ ಇಂಥ ದೋಷಗಳು ಅಪೇಕ್ಷಣೀಯವಾಗಿ ಅದೋಷಗಳಾಗುತ್ತವೆ ಎಂಬುದನ್ನೂ ಇಲ್ಲಿ ಸೂಚಿಸಲಾಗಿದೆ.(೬೨-೬೮).

ಅದಾದಮೇಲೆ, ವ್ಯಾಕರಣ ಚಂದಸ್ಸುಗಳಿಗೆ ಸಂಬಂಧಿಸಿದ, ಹದಿನಾರು ದೋಷಗಳನ್ನು(ಯತಿಭಂಗ, ಅರ್ಥಶೂನ್ಯ, ವಿರುದ್ಧಾರ್ಥ, ಪುನರುಕ್ತ, ಚ್ಯುತಯಾಥಾಸಂಖ್ಯ, ವ್ಯವಹಿತ, ಅಚ್ಚಂದ, ವಿಸಂಧಿ, ನೆಯಾರ್ಥ, ಆಗಮ-ಸಮಯ-ನ್ಯಾಯ-ಕಲಾ-ಕಾಲ-ಲೋಕ-ದೇಶ-ವಿರೋಧಿ ದೋಷಗಳು)ಹೇಳಲಾಗಿದೆ. ಈ ಹದಿನಾರು ದೋಷಗಳು ಬಹುಮಟ್ಟಿಗೆ ಶಬ್ದಾರ್ಥಗಳ ಕಾಠಿಣ್ಯ ವಿಕಲ್ತ್ವಗಳಲ್ಲೇ ಒಳಗಾಗುವಂತಿರುವುದರಿಂದ, ಮೊದಲಿನ ಕಷ್ಟ-ದುಷ್ಟ ಚತುಷ್ಟಯದ ಅಂಗವಾಗಿಯೇ ಇವುಗಳನ್ನು ಪರಿಗಣಿಸಬಹುದು. ಇವೇ ಅಲ್ಲದೆ ಈ ಬಗೆಯ ದೋಷಗಳು ಅಸಂಖ್ಯವಿದ್ದು ಎಲ್ಲವನ್ನೂ ಹೇಳಲಿಕ್ಕಾಗದು ಎಂದು ಕೂಡ ಸೂಚಿಸಲಾಗಿದೆ (೬೯-೧೧೨). ಆಮೇಲೆ, ವ್ಯಾಕರಣ ಛಂದಸ್ಸುಗಳಿಗೇ ಸಂಬಂಧಪಡುವ ಕಾರಕಾದಿ (ಕಾರಕ-ವಚನ-ಗುರು-ಲಘು-ಸಮುಚ್ಚಯ-ವಿಕಲ್ಪ-ಅವಧಾರಣ-ವಿಶಂಕಾ ದೋಷಗಳು) ದೋಷಗಳನ್ನೂ ಅವುಗಳಿಗಿರುವ ‘ಅಪವಾದ’ಗಳನ್ನೂ ಹೇಳಲಾಗಿದೆ. (೧೧೨-೧೪೫). ಕೊನೆಯಲ್ಲಿ ‘ಉಪಮಾದೋಷ’ವನ್ನು ಲಕ್ಷಿಸಲಾಗಿದೆ(೧೪೩-೧೪೬).

ಈ ಭಾಗದಲ್ಲಿ ಮೊದಲು, ‘ಯತಿಭಂಗ’ದ ಬಗ್ಗೆ ಹೇಳುವಾಗ(೭೬-೭೭)ಕನ್ನಡದಲ್ಲಿ ಖಂಡಪ್ರಾಸ(ಪದ್ಯದಲ್ಲಿ ಪಾದಗಳ ದ್ವಿತೀಯಾಕ್ಷರ ಪ್ರಾಸ)ವನ್ನಿಟ್ಟುಕೊಂಡು ‘ಯತಿ’(ಪದ್ಯದ ಪದಗಳಲ್ಲಿ ನಿಯತವಾದ ನಿಲುಗಡೆ)ಯನ್ನು ಬಿಟ್ಟುಬಿಡುವ ರೂಢಿ ಬಂದಿದೆಯೆಂದೂ ಅದು ಕನ್ನಡದ ವಿಶಿಷ್ಟತೆಯೆಂದೂ ಹೇಳಲಾಗಿದೆ. ‘ದೋಸಮನೆ ಗುಣದವೋಲ್ ಉದ್ಭಾಸಿಸಿ ಕನ್ನಡದೊಳ್ ಒಲ್ದು ಪೂರ್ವಾಚಾರ್ಯರ್ ದೇಸಿಯನೆ ನಿರಿಸಿ ಖಂಡಪ್ರಾಸಮನ್ ಅತಿಶಯಂ ಇದು ಎಂದು ಯತಿಯಂ ಮಿಕ್ಕರ್’(೭೫). (ಕನ್ನಡದಲ್ಲಿ ಪೂರ್ವಾಚಾರ್ಯರು ದೇಸಿ ರೂಢಿಯನ್ನು ಒಪ್ಪಿ ಖಂಡಪ್ರಾಸವನ್ನು ಇಟ್ಟುಕೊಂಡು ಯತಿಯನ್ನು ಮೀರಿದರು ಮತ್ತು ಕನ್ನಡಕ್ಕೆ ವಿಶಿಷ್ಟವಾಗಿ, ಯತಿಭಂಗದೋಷವನ್ನು ಗುಣವಾಗಿಸಿ ಹೊಳೆಯಿಸಿದರು.)-ಎಂದಿರುವುದಲ್ಲದೆ, ಕನ್ನಡಕ್ಕೆ ವಿಶೇಷವಾಗಿ ಈ ಯತಿವಿಲಂಘನವೆನ್ನುವುದು, ‘ಜಘನ-ಸ್ತನ ಭಾರಗಳಿಂದ ಲೀಲಾಲಸವಾಗಿ ಚಲಿಸುವ ಸುವುಲಾಸಿನಿಯ ನಡೆಯಂತೆ’ ಬಹು ಅತಿಶಯವಾದ್ದು ಅಂತಲೂ ಬಣ್ಣಿಸಲಾಗಿದೆ(೭೬). ಜತೆಗೆ, ಆರ್ಯೆ-ಕಂದ-ವೃತ್ತಗಳ ಮಧ್ಯಭಾಗದ ಒಂದೆಡೆಯಲ್ಲಿ ಮಾತ್ರ, ಸಾಧ್ಯವಾದಮಟ್ಟಿಗೆ ಯತಿಯನ್ನುಳಿಸಿಕೊಳ್ಳಬೇಕು ಅಂತಲೂ ಸೂಚಿಸಿದೆ.

ಇನ್ನೊಂದು ಸಂಗತಿಯೆಂದರೆ-ಈ ಭಾಗದಲ್ಲಿ ಲಕ್ಷಿತವಾದ ದೋಷಗಳೆಂಬುವೆಲ್ಲವೂ ಸುಮಾರಾಗಿ ದಂಡಿ ಭಾಮಹಾದಿಗಳಲ್ಲಿ ಉಕ್ತವಾಗಿರುವಂಥವೇ. ಇವು ಬಹುಮಟ್ಟಿಗೆ ಎಲ್ಲಾ ಭಾಷೆಗಳಿಗೂ ಅನ್ವಯಿಸುವಂಥವು ಅಂತಲೂ ಹೇಳಬಹುದು. ಆದರೆ ದೋಷದ ರೀತಿ-ಮಾದರಿಗಳು ಒಂದೇ ಆದರೂ ಅವು ಭಿನ್ನಭಿನ್ನ ಭಾಷೆಗಳಲ್ಲಿ ಭಿನ್ನ ಭಿನ್ನ ಆಕೃತಿ ರೂಪಗಳಾಗಿ ಕಾಣಿಸಿಕೊಳ್ಳುತ್ತವಾದ್ದರಿಂದ ಒಂದೊದು ಭಾಷೆಯಲ್ಲೂ ಇವಕ್ಕೆ ಅದದೇ ಭಾಷೆಯ ಉದಾಹರಣೆಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಹಾಗೆ ಈ ಗ್ರಂಥದಲ್ಲಿ ಸಂಸ್ಕೃತ ಶಾಸ್ತ್ರದಲ್ಲಿನ ನಾಮಸಂಜ್ಞೆಗಳನ್ನು ಮತ್ತು ಅನೇಕ ಕಡೆ ಅದೇ ಲಕ್ಷಣಗಳನ್ನು ಕೂಡಾ ಇಟ್ಟುಕೊಂಡು ಕನ್ನಡಕ್ಕೆ ಹೊಂದುವ ಲಕ್ಷ್ಯಗಳನ್ನು ಹೊಸದಾಗಿ ರಚಿಸಿಕೊಡಲಾಗಿದೆ.

ಈ ಪರಿಚ್ಛೇದದಲ್ಲಿ ಗಮನಿಸಬೇಕಾದ್ದೆಂದು ನಾನು ಸೂಚಿಸುವ ಅಂಶಗಳು ಇವು:

ಅಸಂಖ್ಯ ದೇಸಿಗಳ ಬಗ್ಗೆ ಹೇಳಿರುವುದು ಮತ್ತು ಆ ಸಮಸ್ಯೆಯ ಬಗ್ಗೆ ಕೆಲಮಟ್ಟಿನ ಸಂದಿಗ್ಧತೆಯನ್ನುಳಿಸಿರುವುದು;

ಪಳಗನ್ನಡ ಬಳಕೆಯ ನಿರಾಕರಣೆ;

ಸಂಸ್ಕೃತ ಸಹಯೋಗದ ವಿಷಯದಲ್ಲಿ ನಿಯಮ ನಿರ್ದೇಶನ;

ಯತಿ ವಿಲಂಘನದ ಕನ್ನಡ ವೈಶಿಷ್ಟ್ಯವನ್ನು ಅಧಿಕೃತಗೊಳಿಸುವುದು;

ಸಂಸ್ಕೃತದಿಂದ ಪಾರಿಭಾಷಿಕ ಶಬ್ದಗಳನ್ನು ಮತ್ತು ಕೆಲಮಟ್ಟಿಗೆ ಲಕ್ಶಣಗಳನ್ನು ಕೂಡಾ ಹಾಗೇ ಸ್ವೀಕರಿಸುವುದು. (ಈ ಕ್ರಮವನ್ನು ಗ್ರಂಥದಲ್ಲಿ ಮುಂದೆಯೂ ಅನುಸರಿಸಲಾಗಿದೆ.)

ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.