ಜರ್ಮನರ ವ್ಯಕ್ತಿತ್ವವನ್ನು ‘ಡೈನಮೊ’-ಕ್ಕೆ ಹೋಲಿಸಿ ಯಾರೋ ವರ್ಣಿಸಿದ್ದು ನೆನಪಾಗುತ್ತದೆ. ಆ ಹೋಲಿಕೆ ನನಗೆ ನಿಜವಾಗಿ ಅನುಭವವಾದ್ದು – ಆತ ರಂಗದ ಮೇಲೆ ನಿಂತು ತಾಲೀಮು ನಡೆಸುವ ಸಂಭ್ರಮ ಕಂಡಾಗ.
ಹದವಾದ ಮೈಕಟ್ಟು, ಶಸ್ತ್ರಚಿಕಿತ್ಸೆಯಿಂದ ಇಡೀ ಪುನರ್ರಚಿಸಿ ಆಕಾರ ಬದಲಿದ್ದರೂ ಆಕರ್ಷಕವೆನಿಸುವ ದುಂಡು ಮುಖ, ಉಳಿದಿರುವ ಒಂದೇ ಕಣ್ಣಿನಲ್ಲಿ ಕಾರಂಜಿಯ ಹಾಗೆ ಉಕ್ಕುವ ತೇಜಸ್ಸು – ಬಿಳಿಗೂದಲಿನ ಅರುವತ್ತರ ಹರಯದ ಈ ವ್ಯಕ್ತಿ ತಾಲೀಮು ಮಾಡಿಸುತ್ತ ರಂಗದ ಮೇಲೆ ಚಕಚಕ ಚಲಿಸುವುದನ್ನು ಕಾಣುವುದು ಒಂದು ಅಪರೂಪದ ಅನುಭವ.
ನಾಟಕದ ಒಂದೊಂದೂ ಪದಕ್ಕಿರುವ ಅರ್ಥಪರಂಪರೆಯನ್ನು ವಿವರಿಸುತ್ತಾರೆ. ಅವುಗಳಿಂದ ಹರಳುಗಟ್ಟುವ ಪಾತ್ರಸ್ವರೂಪವನ್ನು ಬಣ್ಣಿಸಿ ಕಾಡುತ್ತಾರೆ. ಬೇರೆ ನಾಟಕಗಳಿಂದ, ನೇರ ಜೀವನದಿಂದ ಉದಾಹರಣೆ ಕೊಟ್ಟು ಖಚಿತಗೊಳಿಸುತ್ತಾರೆ. ಯಾವನೋ ನಟನ ಅಭಿನಯವನ್ನು ಎತ್ತಿ ಹೇಳಿ, ಆ ಒಂದು ವಿಶಿಷ್ಟ ’ಅಭಿನಯ ಮುದ್ರೆ’-ಯಲ್ಲಿ ಪಾತ್ರ ಪರಿಸರಗಳನ್ನು ಆತ ಹೇಗೆ ತಟಕ್ಕನೆ ಮಿಂಚಿಸಿಬಿಡುತ್ತಾನೆ ಎಂಬುದನ್ನು (ಅಥವಾ ಹೇಗೆ ಸೋತುಹೋಗುತ್ತಾನೆ ಎಂಬುದನ್ನು) ವಿಶ್ಲೇಷಿಸಿ ಹೇಳುತ್ತಾರೆ. ಹಾಗೆ ಹೇಳುವಲ್ಲಿ ಜೀವನ-ನಾಟಕಗಳ ಸಂಬಂಧವನ್ನೂ ಹೊಳೆಯಿಸಿಕೊಡುತ್ತಾರೆ.
ಆಮೇಲೆ, ನಟರ ಚಲನೆ ವಿನ್ಯಾಸ ರಂಗಕ್ರಿಯೆ ಮಾತು ಅಭಿನಯಗಳನ್ನು ರೂಪಿಸತೊಡಗುತ್ತಾರೆ. ತಾನೇ ನಟಿಸಿ, ಮಾತಾಡಿ ತೋರಿಸುತ್ತಾರೆ. ಜತೆಗೆ – ನಾನು ಭಾರೀ ಉತ್ಪ್ರೇಕ್ಷೆ ಮಾಡಿ ತೋರಿಸುತ್ತೇನೆ. ಇದರಿಂದ ಸಂದರ್ಭ ಮಾತ್ರ ಗ್ರಹಿಸಿಕೊಂಡು ಆಮೇಲೆ ನೀವು ನಿಮ್ಮದೇ ರೀತಿಯಲ್ಲಿ ನಟಿಸಿ, ಮಾತಾಡಿ…ತೋರಿಸುವಾಗ ನಾನು ಭಾರೀ ಉತ್ಪ್ರೇಕ್ಷೆ ಮಾಡಲು ಎರಡು ಕಾರಣಗಳಿವೆ. ಒಂದು – ತಟ್ಟನೆ ನಿಮಗೆ ಸ್ಪಷ್ಟವಾಗಲಿಕ್ಕಾಗಿ. ಇನ್ನೊಂದು – ನನ್ನ ಭಯಂಕರ ನಟನೆ ಕಂಡು ಯಾವತ್ತೂ ಅದನ್ನು ಅನುಕರಿಸಬಾರದು ಎಂಬ ಜುಗುಪ್ಸೆ ನಿಮ್ಮಲ್ಲಿ ಹುಟ್ಟಬೇಕು, ಅದಕ್ಕಾಗಿ’ ಎಂದು ವಿವರಿಸಿ ನಗುತ್ತಾರೆ. ಸಂಬಂಧಿಸಿದ ಒಬ್ಬ ನಟನಲ್ಲ, ಇಡೀ ಗುಂಪು ಆ ಸನ್ನಿವೇಶವನ್ನು ಗ್ರಹಿಸಿಕೊಳ್ಳುವ ತನಕ ಹತ್ತು ಸಲ ತಾನೇ ಮಾಡಿ ತೋರಿಸುತ್ತಾರೆ. ಮತ್ತೆ ಅವನಿಂದ ಹತ್ತು ಸಲ ಮಾಡಿಸುತ್ತಾರೆ, ಎಲ್ಲರೂ ಗ್ರಹಿಸಿದ್ದಾರೆಂಬುದು ಖಚಿತವಾಗುವ ತನಕ.
ಉಚ್ಚ ಸ್ವರದಲ್ಲಿ ಸ್ಪಷ್ಟ ಉಚ್ಚಾರಣೆ ಮಾಡಿ ಸಂಭಾಷಿಸಿರುವುದನ್ನು ತೋರಿಸುತ್ತಾರೆ. ನಟರನ್ನು ತೊಡಗಿಸುತ್ತ ಅವರ ಜೊತೆ ತಾವೂ ಚಲಿಸುತ್ತಾರೆ, ಕುಣಿಯುತ್ತಾರೆ, ಕುಪ್ಪಳಿಸುತ್ತಾರೆ, ಹಾರುತ್ತಾರೆ, ಕೂರುತ್ತಾರೆ, ಹಾಡು ಗುಣುಗುಣಿಸುತ್ತಾರೆ, ತಾಳ ಕುಟ್ಟುತ್ತಾರೆ. ’ರ ರ ರ ರ ರ…’ ಎನ್ನುತ್ತ ಆ ತಾತ್ಕಾರದಲ್ಲಿ ಸನ್ನಿವೇಶದ ಲಯ ನಿರ್ದೇಶಿಸುತ್ತಾರೆ. ನಟರನ್ನು ತಮಾಷೆ ಮಾಡುತ್ತಾರೆ. ತನ್ನನ್ನೇ ಗೇಲಿ ಮಾಡಿಕೊಳ್ಳುತ್ತಾರೆ, ನೋಡುತ್ತ ಕೂತವರ ಕಡೆ ಒಂದು ಚಟಾಕಿ ಹಾರಿಸಿ ಜಿಗುಪು ಕಳೆದುಕೊಳ್ಳುತ್ತಾರೆ, ನಟರನ್ನು ಹೊಗಳುತ್ತಾರೆ, ಪುಸಲಾಯಿಸುತ್ತಾರೆ, ಅಸಹನೆ ನಟಿಸಿ ಛಲ ತರಿಸುತ್ತಾರೆ. ಹೀಗೆ ತಾನೇ ಅಲ್ಲಿ ಸಂಬಂಧ ಅಸಂಬದ್ಧ ಚೆಲ್ಲುನಾಟಕವಾಡುತ್ತ, ನಟರನ್ನು ಜೀವಜ್ವಾಲೆಗಳಾಗಿಸಿ, ನಿಧಾನವಾಗಿ, ಮೊದಲು ಸ್ಪಷ್ಟವಾಗಿ, ಗಂಭೀರ ರಂಗಾನುಭವವೊಂದರ ನಿರ್ಮಿತಿಯನ್ನು ಸಾಧಿಸುತ್ತಾರೆ.
ಹತ್ತು ಜನರ ಗುಂಪಿಗೆ ಈತ ತಾಲೀಮು ಮಾಡಿಸಿದರೆ, ಆ ಅವಧಿಯಲ್ಲಿ, ಆ ಹತ್ತೂ ಜನರ ಜುಮ್ಲಾ ಶ್ರಮದ ಹತ್ತರಷ್ಟನ್ನು ಇವರೇ ಪಟ್ಟಿರುತ್ತಾರೆ. (ನೋಡುತ್ತಿರುವಾಗ ನಮಗೆ, ಶಿವರಾಮ ಕಾರಂತರ ತಾಲೀಮಿನ ನೆನಪಾಗುತ್ತಿತ್ತು.)
’ಚಾಕ್‌ಸರ್ಕಲ್’-ನ ಮೊದಲ ದೃಶ್ಯ ರೂಪಿಸುವಾಗ ಅದರಲ್ಲಿ ಕಾಣಿಸಿಕೊಳ್ಳುವ ಕೈಗಳಾನ್ನು ಕುರಿತು ಅವರು ಹೇಳಿದ್ದು ಮರೆಯುವಂಥದ್ದಲ್ಲ.
ಮುಷ್ಟಿಯಲ್ಲಿ ಪಿತ್ರಾರ್ಜಿತ ಅಧಿಕಾರ ಹಿಡಿದಿದ್ದೇನೆಂಬ ಸಂತೃಪ್ತಿಯಲ್ಲಿ ಬೀಗಿದ ರಾಜನ ಕೈ, ಬೆರಳಿನ ಚಂದವನ್ನೂ ಅಲಂಕಾರಗಳ ಪ್ರತಿಷ್ಠೆಯನ್ನೂ ಮೆರೆಸಿ ಪ್ರದರ್ಶಿಸಲಿಕ್ಕೇ ಇರುವಂಥ ರಾಣಿಯ ಕೈ, ರಾಜನಿಗಾಗಿ ಹಿಡಿದ ದಂಡ ತನ್ನದೇ ಎಂಬ ಭ್ರಾಂತಿಗೊಳಗಾಗಿ ಸೊಕ್ಕು ಮೆರೆಸುವ ಭದ್ರಮುಷ್ಟಿಯ ದಂಡಾಧಿಕಾರಿಯ ಕೈ, ಭಿಕ್ಷಿಕರಿಗೆ ನಾಣ್ಯ ತೋರುವ ದುರಹಂಕಾರದ ಕೈ, ರಾಜಶಿಶುವನ್ನು ಜನಕ್ಕೆ ಎತ್ತಿ ಕಾಣಿಸುವ ಅಂತಸ್ತಿಗೆ ಅಂಟಿ ಯಂತ್ರದಂತಾಡುವ ಮರಗೈ, ಬೀದಿಯ ಧೂಳಲ್ಲಿ ಬಿದ್ದ ನಾಣ್ಯ ಹೆರಕಿಕೊಳ್ಳಲು ಹಾತೊರೆದು ಹದ್ದಿನಂತೆ ಹಪಹಪಿಸುವ ಕೈ, ಆರಿಸುವ ಮತ್ತೊಂದು ಕೈಯನ್ನು ಒತ್ತಿ ತಡೆದು ಹೋರಾಡಿ ಹಿಂಸಿಸುವ ರಿಕ್ತತೆಗೆ ರೋಸಿದ ಕೈ – ಇತ್ಯಾದಿಯಾಗಿ ಆ ದೃಶ್ಯದ ’ಹಸ್ತನಾಟಕ’ವನ್ನು ಅವರು ಬಣ್ಣಿಸಿದರು.
ನಟರು ತಮ್ಮ ಕೈಗಳನ್ನು ಸರಿಯಾಗಿ ಬಳಸುತ್ತಿಲ್ಲವೆಂದು ಆಕ್ಷೇಪಿಸುತ್ತ, ’ಹಸ್ತಮುದ್ರೆಗಳಲ್ಲೇ ಖಚಿತರಂಗಭಾಷೆಯೊಂದನ್ನು ನಿರ್ಮಿಸಿರುವ ಏಕೈಕ ಸಂಶ್ಕೃತಿ ಇಂಡಿಯಾದ್ದು ಎನ್ನುವುದನ್ನೇ ಮರೆತುಬಿಡಬೇಡಿ’ ಎಂದರು.
ಕೆಲವು ನಿರ್ದೇಶಕರು ಸಾಹಿತ್ಯ-ಸಂಭಾಷಣೆಗಳ ಬಗ್ಗೆ ಒತ್ತು ಕೊಟ್ಟು ಕೆಲಸ ಮಾಡುತ್ತಾರೆ; ಕೆಲವರು ರಂಗ ಸಾಧ್ಯತೆಗಳ ಬಗ್ಗೆಯೇ ಹೆಚ್ಚಿನ ಗಮನಕೊಡುತ್ತಾರೆ. ಆದರೆ ಎರಡನ್ನೂ ಗುಲಗಂಜಿ ಹೆಚ್ಚುಕಡಿಮೆಯಾಗದ ತುಲನೆಯಲ್ಲಿ ಏಕತ್ರ ಗ್ರಹಿಸಿ ನಿರ್ವಹಿಸುವ ಈ ನಿರ್ದೇಶಕ ಆ ಕಾರಣಕ್ಕಾಗಿ ಅಸಾಧಾರಣವೆನಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲ – ಆತನಿಗೆ ನಾಟಕವೇ ಅಂತಿಮವಾದ್ದಲ್ಲ. ಆತ್ಯಂತಿಕವಾಗಿ ಲಕ್ಷ್ಯ ಬದುಕು, ಮಾನವೀಯ ಸಂಬಂಧಗಳು ಕುಡಿಯೊಡೆದುಕೊಳ್ಳುತ್ತ ಹಬ್ಬಿಕೊಳ್ಳುತ್ತ ಹಂದರವಾಗುವ ಬದುಕು, ನಮ್ಮ ವಿಶಾಲ ಜೀವನದ ಅನೇಕಾನೇಕ ಗಂಭೀರ ಕ್ರಿಯೆಗಳಲ್ಲಿ ರಂಗಭೂಮಿಯು ಒಂದು – ಎಂಬ ಮೂಲಭೂತ ನಂಬಿಕೆಯಿರುವ ಕಾರಣ ಈತ, ಮಹತ್ವದ ನಿರ್ದೇಶಕ ಎನ್ನಿಸುವಷ್ಟೇ ಮಹತ್ವದ ಮನುಷ್ಯ ಎನ್ನಿಸುತ್ತಾರೆ.
ಈಚೆ, ಜರ್ಮನಿಯಲ್ಲಿ ಹಲವಾರು ನಾಟಕಗಳನ್ನು ಸ್ವತಃ ಕಂಡು, ಅವುಗಳಲ್ಲಿ ಸಾಕಷ್ಟು ಕಳಪೆಯವೂ ಇದ್ದವು ಎಂದು ಟೀಕಿಸಿದ ಪ್ರಸನ್ನ, ಫ಼್ರಿಟ್ಜ್ ಮಾಡಿಸಿದ ’ಫ಼ೌಸ್ಟ್’ (ಗಯಟೆ) ನಾಟಕ ’ಅದ್ಭುತ’ವಿತ್ತೆಂದು ಕೊಂಡಾಡಿದರು. ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಮತ್ತು ಭೋಪಾಲ ರಂಗಮಂಡಲದ ಅವರ ಪ್ರಯೋಗಗಳು (ಕರ್ನಾಟಕದಲ್ಲಿ ಕೂಡ) ಅಪಾರ ಮೆಚ್ಚುಗೆಗಳಿಸಿವೆ. ಹಾಗಿದ್ದೂ – ಅವರ ತಾಲೀಮುಗಳು ಪ್ರಯೋಗಗಳಿಗಿಂತ ಹೆಚ್ಚು ಆಕರ್ಷಕ ಎನ್ನಿಸಬಹುದು. ರಂಗ ವಿದ್ಯಾರ್ಥಿಗಳಿಗೆ ಫ಼್ರಿಟ್ಜ್ ಒಂದು ದೊಡ್ಡ ನಿಧಿಯೇ, ನಿಜವಾಗಿ.
ಒಳಗಿನ ಆ ತೂಕಕ್ಕೆ ಸಹಜವಾಗಿ ಫ಼್ರಿಟ್ಜ್, ಹೊರಗೆ ಸಾದಾ ಸರಳ ಮುಗ್ಧ ವ್ಯಕ್ತಿ. ’ಇಲ್ಲಿರುವಾಗ ನಾನು ಇಲ್ಲಿನವರ ಹಾಗೆ ಇರಬೇಕು, ಇವರು ತಿನ್ನುವುದನ್ನು ತಿಂದು ಎಲ್ಲರಲ್ಲಿ ಒಬ್ಬನಾಗಿ ಇರುತ್ತೇನೆ’ ಎಂದು ಬಂದ ಮೊದಲಿಗೇ ಸೂಚನೆ ಕೊಟ್ಟರು. ’ನನಗಾಗಿ ಏನೊಂದೂ ವಿಶೇಷ ಕೂಡದು’ ಎಂದು ಕಟ್ಟಪ್ಪಣೆ ಮಾಡಿದರು. ಹಾಗೇ ಇದ್ದರು – ನಮ್ಮ ಜೊತೆ ಅನ್ನ ಸಾರು ಉಪ್ಪಿನಕಾಯಿ ತಿಂದುಕೊಂಡು. ಇಂಡಿಯಾದಲ್ಲಿರುವಾಗ ಅವರು ಕೇವಲ ಸಸ್ಯಾಹಾರಿ. ತನ್ನ ದೇಶದಲ್ಲಿರುವಾಗಲೂ ಸಸ್ಯಾಹಾರ ತನಗೆ ಇಷ್ಟ ಎನ್ನುತ್ತಿದ್ದರು. ಎಂದೋ ಒಮ್ಮೆ ಜಾಸ್ತಿ ಕುಡಿದು ನಡವಳಿಕೆ ತಪ್ಪಿದೆ ಎನ್ನಿಸಿದಾಗ, ಆವತ್ತಿನಿಂದ ಕುಡಿಯುವುದನ್ನೇ ಸಂಪೂರ್ಣ ಬಿಟ್ಟುಬಿಟ್ಟರಂತೆ.
ಫ಼್ರಿಟ್ಜ್ ವಾಚಾಳಿ. ಮಾತಿಗೆ ತೊಡಗಿದರೆಂದರೆ ಕೊಂಡಿಗೆ ಕೊಂಡಿ ಹೆಣೆದು ಮಾತಾಡುತ್ತಲೇ ಹೋಗುತ್ತಾರೆ. ಎದುರಿನವರಿಗೆ ಬಾಯಿ ಹಾಕಲು ತೆರಪು ಸಿಗದ ಹಾಗೆ. ಆದರೆ ಗಂಭೀರ ಚರ್ಚೆ ನಡೆದಾಗ – ಇಲ್ಲಿ, ವಿದೇಶೀ ನಾಟಕಗಳನ್ನು ಅನುವಾದಿಸಿಕೊಂಡು ಪ್ರಯೋಗಿಸುವುದು ಒಳ್ಳೆಯದೇ ಅಥವಾ ನಮ್ಮಲಿಗೆ ಅಳಾವಡಿಸಿಕೊಂಡು ಪ್ರಯೋಗಿಸಿವುದು ಒಳ್ಳೇಯದೇ ಮುಂತಾದ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಸತೀಶ್ ಬಹಾದುರ್, ಕಾರ್ನಾಡ್, ಕಂಬಾರ್, ನಾಗರಾಜ್, ರಾಮಚಂದ್ರ ಶರ್ಮಾ, ಅಶೋಕ್, ಶೂದ್ರ ಶ್ರೀನಿವಾಸ್ ಮುಂತಾದವರ ಕೂಟದಲ್ಲಿ – ಅಲ್ಲಿ ಆತ. ಎಲ್ಲರ ಮಾತು ಆಲಿಸುತ್ತ ಹೆಚ್ಚಾಗಿ ಮೌನವಾಗಿ ಕೂತಿದ್ದರು. ತನ್ನ ಅಭಿಪ್ರಾಯ ಖಚಿತವಾಗಿ ಮಂಡಿಸಿದರು. ಆದರೆ ಅದಕ್ಕಿಂತ, ನಿಮ್ಮ ಅಭಿಪ್ರಾಯ ತಿಳಿಯುವುದು ಮುಖ್ಯ ಎನ್ನುವ ಹಾಗೆ ಬಹುಪಾಲು ಆಸಕ್ತಿಯಿಂದ ಕಿವಿಗೊಟ್ಟು ಸಂಗ್ರಹಿಸಿಕೊಳ್ಳುತ್ತಿದ್ದರು.
ಡಾಕ್ಟರ್ ಲೋಹಿಯಾರ ಬರವಣಿಗೆ ಕೊಟ್ಟಾಗ ಅವರು ಅದನ್ನು ಕೂತು ಅತ್ಯಾಸಕ್ತಿಯಿಂದ ಪೂರ್ತಿ ಓದಿದರು. ಇಂಡಿಯಾದ ಈ ’ಹೊಸ ಸಮಾಜವಾದಿ’-ಯ ಅಭಿಪ್ರಾಯಗಳು ಒಂದೆರಡು ಕಡೆ ತನಗೆ ಸಮ್ಮತವಾಗಲಿಲ್ಲವೆನ್ನುವುದನ್ನು ಮರೆಮಾಚದೆ ಸ್ಪಷ್ಟ ಹೇಳಿದರು. ಉಳಿದಂತೆ ಅವರ ಬರವಣಿಗೆಯನ್ನಿ ಬಹು ಮೆಚ್ಚುಗೆಯಿಂದ ಚರ್ಚಿಸಿದರು. ಓದಿ ತನಗೆ ಲಾಭವಾಯಿತೆಂದರು.
*
*
*
ನಿಮ್ಮ ಸಂದರ್ಶನ ಮಾಡಬೇಕು ಎಂದಾಗ ಫ಼್ರಿಟ್ಜ್ ಅಳುಕಿದರು. ’ಸಂದರ್ಶನದಲ್ಲಿ ಯಾವತ್ತೂ ನಾನು ಚೆನ್ನಾಗಿ ಮಾತನಾಡುವುದಿಲ್ಲ’ ಎಂದು ಪರೀಕ್ಷೆಗೆ ಹೆದರಿದ ವಿದ್ಯಾರ್ಥಿಯಂತೆ ದೈನ್ಯ ಕಾಣಿಸಿದರು. ’ನಾನು ಮಾತಾಡುತ್ತಿರುತ್ತೇನಲ್ಲ, ಅದರಿಂದಲೇ ಸೂಕ್ತ ಕಂಡದ್ದನ್ನು ಎತ್ತಿಕೊಂಡು ಬರೆಯಬಹುದು, ಅದು ಸಾಕು’ ಎಂದರು. ಒಪ್ಪಿಕೊಂಡೆ. ಆಗಾಗ ಸಹಜ ಮಾತುಕತೆಗಳಲ್ಲಿ ನನ್ನ ಹಲವಾರು ಕುತೂಹಲಗಳಿಗೆ ಉತ್ತರ ಪಡೆದುಕೊಂಡೆ. ನನ್ನ ಒಂದು ಮುಖ್ಯವಾದ ಪ್ರಶ್ನೆ ಮತ್ತು ಅದಕ್ಕೆ ಪಡೆದುಕೊಂಡ ಉತ್ತರ – ಇಷ್ಟನ್ನೇ ಇಲ್ಲಿ ಸ್ಯಾಂಪಲ್ ಕೊಡುತ್ತಿದ್ದೇನೆ. ಅವರದೇ ಶಬ್ದ ಬಳಸದಿದ್ದರೂ ಅವರ ಧಾಟಿಯನ್ನು ಯಥಾವತ್ತಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ.
ಪ್ರಶ್ನೆ: ಇಂಡಿಯಾ, ಇಂಡಿಯಾದ ಜನ, ಇಂಡಿಯಾದ ನಟರು ಎಂದು ನೀವು ಮತ್ತೆ ಮತ್ತೆ ಎತ್ತಿ ಹೇಳುತ್ತಿರುತ್ತೀರಿ. ಇದು ಕೇವಲ ಸೌಜನ್ಯವಲ್ಲ ಎಂದುಕೊಳ್ಳುತ್ತೇನೆ.
ಫ಼್ರಿಟ್ಜ್: ನಿಶ್ಚಯವಾಗಿಯೂ ಅಲ್ಲ.
ಪ್ರಶ್ನೆ: ಹಾಗಾದರೆ – ನೀವು ಹಲವು ರಾಷ್ಟ್ರಗಳನ್ನೂ ಜನರನ್ನೂ ಕಂಡಿದ್ದೀರಿ, ಆ ಹಿನ್ನೆಲೆಯಲ್ಲಿ ’ಇಂಡಿಯನ್’ ಎಂಬ ನಿಮ್ಮ ಕಲ್ಪನೆಯನ್ನು ಸ್ಪಷ್ಟಗೊಳಿಸುತ್ತೀರಾ?
ಫ಼್ರಿಟ್ಜ್: ಸ್ವಲ್ಪ ಕಷ್ಟವೇ. ನಾನು ಈಗ ಅದನ್ನು ಹೊಸದಾಗಿ ಯೋಚಿಸಿಕೊಳ್ಳಬೇಕು, ಹುಡುಕಿಕೊಳ್ಳಬೇಕು……
೧೯೭೦-ರಲ್ಲಿ ನಾನು ಮೊದಲ ಸಲ ಇಂಡಿಯಾಕ್ಕೆ ಬಂದೆ. ಇಂಡಿಯಾದ ಬಗ್ಗೆ ಸಾಮಾನ್ಯ ಸಂಗತಿಗಳಷ್ಟೇ ನನಗೆ ಗೊತ್ತಿದ್ದದ್ದು. ದೆಹಲಿಯಲ್ಲಿ ನ್ಯಾಶನಲ್ ಸ್ಕೂಲ್ ಆಫ಼್ ಡ್ರಾಮಾದ ಅಲಾಜಿಯವರು ನನಗೆ ಊರು ತಿರುಗಿ ಜನಜೀವನದ ಪರಿಚಯ ಮಾಡಿಕೊಳ್ಳಲು ಸೂಚಿಸಿದರು. ನಾನು ದೆಹಲಿಯ ತುಂಬ ಒಬ್ಬನೇ ತಿರುಗಾಡತೊಡಗಿದೆ. ಒಂದು ಸಂಜೆ, ಒಂದು ರಸ್ತೆಯ ಬದಿಯಲ್ಲಿ ಒಬ್ಬ ಮುದುಕ ಕೂತಿದ್ದ. ಭಿಕ್ಷಿಕನಿರಬೇಕು ಎಂದುಕೊಂಡೆ. ಆಕರ್ಷಕನಾಗಿ ಕಂಡ ಅವನ ಜತೆ ಮಾತಾಡಬೇಕು ಅನ್ನಿಸಿತು. ಅವನ ಹತ್ತಿರ ಹೋಗಿ ಕೂತೆ. ಸುಮಾರು ಒಂದು ತಾಸು ಮಿಕ್ಕು ನಾವಿಬ್ಬರೂ ಪರಸ್ಪರ ಸಂಜ್ಞಾ-ಸಂಭಾಷಣೆ ನಡೆಸಿದೆವು. ಈ ಸಾಹಸ ಇಬ್ಬರಿಗೂ ಭಾರೀ ಖುಷಿಯೆನ್ನಿಸಿತ್ತು. ಅವನ ಸಹವಾಸದ ಆ ಪ್ರಸಂಗದಲ್ಲಿ ನಾನು ಮಾನವೀಯತೆಯ ಅರ್ಥವನ್ನು ಕಂಡುಕೊಂಡೆ ಎನ್ನಿಸಿತು. ದೇಶದೇಶಗಳ ಅಪಾರ ಭಿನ್ನತೆಗಳ ಮೂಲದಲ್ಲಿ ಮನುಷ್ಯತ್ವದ ಒಂದೇ ಸೆಲೆ ಇರುತ್ತದೆ ಎನ್ನುವುದಿಲ್ಲವೇ – ಅದನ್ನು ಸ್ಪಷ್ಟ ಕಂಡುಕೊಂಡೆ ಎನ್ನಿಸಿತು. ಹಳೆಯ ನನ್ನ ನಸಕು-ಮಸಕು ಮಾನವೀಯ ಅನುಭವಗಳನ್ನೆಲ್ಲ ಆಗ ಹರಳುಗಟ್ಟಿ ಖಚಿತವಾದಂತೆ ಭಾಸವಾಯಿತು.
ಪ್ರಶ್ನೆ: ಕೊಂಚ ಮಿಸ್ಟಿಕ್ ಎನ್ನಿಸುವ ಹಾಗಿದೆ – ಇಂಡಿಯಾದ ಮತ್ತು ಪ್ರಾಯಶಃ ಜರ್ಮನಿಯದು ಕೂಡ, ಜಾಯಮಾನಕ್ಕೆ ಹೊಂದಿಕೊಳ್ಳುವ ಹಾಗೆ?
ಫ಼್ರಿಟ್ಜ್: (ನನ್ನ ಅಡ್ಡ ಮಾತಿಗೆ ಗಮನಕೊಡದೆ) ಆ ವರ್ಷ ನಮ್ಮ ಪ್ರಯೋಗಕ್ಕೆ ಭಾರೀ ಮೆಚ್ಚುಗೆಯೇ ದೊರಕಿತು. ಆದರೆ ನನಗೆ ನಿಜವಾಗಿ ತೃಪ್ತಿ ಸಿಕ್ಕಿದ್ದು, ಮುಂದೆ ನಾನು ಬ್ರೆಕ್ಟ್ ನಾಟಕಗಳ ದೇಶೀಯ ಅಳವಡಿಕೆಗಳನ್ನೇ ಇಟ್ಟುಕೊಂಡು ಕೆಲಸ ಮಾಡಿದಾಗ. ಮುಂದಕ್ಕೆ ನಾನು ಇಂಡಿಯಾದಲ್ಲಿ ಮಾಡಿಸಿದ ನಾಟಕಗಳೇಲ್ಲವೂ ಬರಿಯ ಅನುವಾದಗಳಾಗಿರದೆ, ಸ್ಥಳೀಯ ಪರಿಸರದಲ್ಲಿ ಅಳವಡಿಸಿಕೊಂಡಂಥವುಗಳಾಗಿದ್ದವು. ಇಂಥ ಪರಿಚಿತ ಪರಿಸರದ ನಾಟಕ ಸನ್ನಿವೇಶಗಳಲ್ಲಿ ಇಂಡಿಯಾದ ನಟನಟಿಯರು ಸುಲಭವಾಗಿ ತೆರೆದುಕೊಳ್ಳುತ್ತಿದ್ದರು. ನಾಟಕದಲ್ಲಿನ ಮಾನವೀಯ ಅಂಶಗಳನ್ನು ಹೊಸಹೊಸದಾಗಿ ಸೃಜಿಸಿ ಕಾಣಿಸುತ್ತಿದ್ದರು.
ಮಾನವೀಯತೆಯ ಮೂಲಸೆಲೆ ಇಂಡಿಯಾದ ಜನರ ’ನಡವಳಿಕೆಗಳಲ್ಲಿ ಇವತ್ತಿಗೂ ಅಷ್ಟು ಖಚಿತವಾಗಿ ಹೊರಹೊಮ್ಮುತ್ತಿರುತ್ತದೆ ಎನ್ನುವುದು ನಾನು ಕಂಡುಕೊಂಡಿರುವ ವಿಶೇಷ – ಹಾಗನ್ನಿಸುತ್ತದೆ ನನಗೆ. ಪಶ್ಚಿಮದ ನಕಲಲ್ಲಿ ಮುಚ್ಚಿ ಹೋಗಿರುವ ಫಿಲಿಪೈನ್ಸ್-ನಂಥ ರಾಷ್ಟ್ರದಲ್ಲೂ ಕಾಣದಿರುವಂಥದು – ಹಾಗೆಂದುಕೊಂಡಿದ್ದೇನೆ.
ಪ್ರಶ್ನೆ: ’ಮಾನವೀಯತೆ’ ಎಂದು ನೀವು ಹೇಳುತ್ತಿರುವುದರ ಅರ್ಥ ಇನ್ನೂ ನನಗೆ ಖಚಿತವಾಗಿ ಹೊಳೆದಿಲ್ಲವೋ ಎಂದು ನನ್ನ ಸಂದೇಹ…
ಫ಼್ರಿಟ್ಜ್: ಒಂದು ಘಟನೆ ಹೇಳುತ್ತೇನೆ: ಭೋಪಾಲ್ ರಂಗಮಂಡಲದಲ್ಲಿ ’ಚಾಕ್ ಸರ್ಕಲ್’ ಮಾಡಿಸುತ್ತಿರುವಾಗಿನ ಸಂದರ್ಭ. ಅರಮನೆಯ ಕೆಲಸದ ಹುಡುಗಿ ಗ್ರೂಶಾ, ರಾಣಿ ಬಿಟ್ಟುಹೋದ ಮಗುವನ್ನು ತಾನು ಹೊತ್ತು ತಿರುಗಬೇಕಾದ ಸನ್ನಿವೇಶ. ಈಗ ಮಗುವಿಗೆ ಹಾಲು ಬೇಕೇಬೇಕು. ಒಬ್ಬ ರೈತನಲ್ಲಿ ಹೋಗಿ ಹಾಲು ಅಷ್ಟು ತುಟ್ಟಿಯಾಗಿರುವ ಕಾರಣ ಅಸಮಾಧಾನಗೊಂಡು ಬೇಕಷ್ಟೆ ಚೌಕಾಸಿ ಮಾಡಿ ಅಂತೂ ಒಂದು ಲೋಟ ಹಾಲು ಕೊಂಡುತಂದಿದ್ದಾಳೆ. ಮುಂದಿನ ಭಾಗವನ್ನು ಇಮ್ಪ್ರೂವೈಸ್ ಮಾಡಲು ಅಲ್ಲಿದ್ದ ಎಲ್ಲರಿಗೂ ಸೂಚಿಸಿದೆ. ಒಬ್ಬ ನಟಿಯ ಇಂಪ್ರೂವೈಸೇಷನ್ ಹೀಗಿತ್ತು – ಆಕೆ ಹಾಲಿನ ಲೋಟದೊಳಕ್ಕೆ ಮೇಲಿರುವ ಕೆನೆಯನ್ನೆತ್ತಿ ತನ್ನ ಬಾಯಿಗಿಟ್ಟುಕೊಂಡಳು. ಆ ಮೇಲೆ ಮಗುವಿಗೆ ಕುಡಿಸಿದಳು, ತುದಿಯಲ್ಲಿ ಸ್ವಲ್ಪ ಉಳಿಸಿಕೊಂಡು ಅದನ್ನು ತಾನು ಕುಡಿದಳು. ಹಾಲನ್ನು ತಾನು ಮೊದಲು ಪರೀಕ್ಷಿಸಬೇಕು, ಆ ಚಿಕ್ಕ ಮಗುವಿಗೆ ಕೆನೆ ಜೀರ್ಣವಾಗುವುದಿಲ್ಲ ಮತ್ತು ಮಗು ಬದುಕಬೇಕು ಎಂಬ ಚಲವಿದ್ದರೆ ಅದಕ್ಕೆ ಮೊದಲು ತಾನು ಬದುಕಬೇಕು ತನಗೂ ಬದುಕುವಷ್ಟಾದರೂ ಆಹಾರ ಬೇಕು – ಮುಂತಾದ ಹೆಣ್ಣಿನ ಸಹಜ ವಿವೇಕ ಅಷ್ಟು ಮೂರ್ತವಾಗಿ ಸಹಜವಾಗಿ ಪ್ರಕಟವಾದ್ದು ಕಂಡು ನನಗೆ ’ಅದ್ಭುತ’ವೆನಿಸಿತು. ಈ ಉದಾಹರಣೆ: ’ಮಾನವೀಯತೆ’ ಎನ್ನುವ ನನ್ನ ಕಲ್ಪನೆಯನ್ನು ಸ್ವಲ್ಪ ಸ್ಪಷ್ಟಪಡಿಸಬಹುದು. ಮಾನವನೇ ಮುಖ್ಯ ಎನ್ನುವ ಅಸಮಗ್ರ ದೃಷ್ಟಿಯಾಗಲೀ ಕೇವಲ ಭಾವುಕವಾದ ಅನಿಸಿಕೆಯಾಗಲೀ ಅಲ್ಲ ಇದು, ಅಲ್ಲವೆ?…
ಪ್ರಶ್ನೆ: ಹೌದು, ಈಗ ನೋಡಿ, ಇಂಡಿಯಾದಲ್ಲಿ ಗ್ರಾಮಸಂಸ್ಕೃತಿಯಿಂದ ನಗರ ಸಂಸ್ಕೃತಿಗೆ ಪರಿವರ್ತನೆಯಾಗುತ್ತಿರುವ ಸಂಕ್ರಮಣ ಇದು. ಈ ಹಂತ ದಾಟಿದ ಮೇಲೆ ಇಲ್ಲಿನ ಜನ, ಪಶ್ಚಿಮದವರ ಹಾಗೇ ’ಮಾನವೀಯತೆ’ ಕಳೆದುಕೊಳ್ಳಬಹುದಲ್ಲ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಇಂಡಿಯಾ – ಮುಂದುವರೆಯದೆ ನಿಂತಲ್ಲೇ ನಿಂತಿರಲಿ ಎನ್ನಲಾರೆವು…..
ಫ಼್ರಿಟ್ಜ್: ಭೂತಕಾಲವನ್ನು ಅಥವಾ ಇತಿಹಾಸವನ್ನು ತನ್ನ ವರ್ತಮಾನದಲ್ಲಿ ಒಳಗೊಳ್ಳುವ ವಿಶಿಷ್ಟತೆ ಇಂಡಿಯಾಕ್ಕೆ ಸಾಧಿಸಿದೆ ಎಂದು ನನ್ನ ಅನಿಸಿಕೆ. ಅಂದರೆ, ಇಂಡಿಯನ್ನರು ಪಶ್ಚಿಮದ ಮನುಷ್ಯರಿಗಿಂತ ಭಿನ್ನರಾದವರು ಎಂದಲ್ಲ. ಇಲ್ಲಿಯ ಇತಿಹಾಸ ಭಿನ್ನ. ಇಲ್ಲಿನ ಇತಿಹಾಸವೇ ಈ ಜನಕ್ಕೆ ಆ ಕೌಶಲವನ್ನು ಕಲಿಸಿರಬಹುದು – ತನ್ನ ಇವತ್ತಿನ ಜೀವಂತ ರಕ್ತದಲ್ಲಿ ಪ್ರಾಚೀನ ಸಮಸ್ತದ ಕಣಕಣಗಳನ್ನೂ ಸಂಗೋಪಿಸಿ ಇಟ್ಟುಕೊಳ್ಳುವಂಥ ಕೌಶಲವನ್ನು…
*
*
*
ಫ಼್ರಿಟ್ಜ್, ನನ್ನ ಇನ್ನೂ ಹಲವಾರು ಪ್ರಶ್ನೆಗಳಿಗೆ ವಿವರಣೆ ವಿಶ್ಲೇಷಣೆಗಳೊಡನೆ ಸಮರ್ಥಿಸಿಕೊಳ್ಳುತ್ತ ಉತ್ತರ ಕೊಟ್ಟಿದ್ದರು:
ಬ್ರೆಕ್ಟ್-ನಲ್ಲಿ ವ್ಯಕ್ತವಾಗುವ ’ಮಾನವೀಯತೆ’ ತನಗೆ ತುಂಬ ಮಹತ್ವದ್ದೆನಿಸುತ್ತದೆ. ಇದರಲ್ಲಿ ಆತ ಶೇಕ್ಸ್‌ಪಿಯರ್‌ನನ್ನು ಹೋಲುತ್ತಾನೆ.
ಶೇಕ್ಸ್‌ಪಿಯರ್ ಜಗತ್ತಿನಲ್ಲಿ ನಿಜವಾಗಿ ಅದ್ವಿತೀಯ. ಅವನ ಒಂದೊಂದು ಕೃತಿಯೂ ಇಂಡಿಯಾದ ಒಂದು ಸೃಷ್ಟಿ ಎನ್ನಿಸುತ್ತದೆ. ಬ್ರೆಕ್ಟ್‌ನಲ್ಲಿ ಕೆಲವೊಮ್ಮೆ ಕೆಲವು ಭಾಗಗಳು ಕಲ್ಪಿತ ಮಾಡಿದ್ದು ಎನ್ನಿಸಬಹುದು. ಬ್ರೆಕ್ಟ್ ಶೇಕ್ಸ್‌ಪಿಯರ್-ಗೆ ಸಮಾನ ಎನ್ನಲಾರೆ. ಬ್ರೆಕ್ಟ್ ನಾಟಕ ಸನ್ನಿವೇಶಗಳು ಇಲ್ಲಿನದೇ ಪರಿಸರದಲ್ಲಿ ಪ್ರಕಟವಾದಾಗ ಅದರಲ್ಲಿನ ಮಾನವೀಯ ಅಂಶಗಳ ಹೊಸ ಹೊಸ ಸೂಕ್ಷ್ಮಗಳು ಮಿಂಚಿಕಂಡಿವೆ – ನಟರಲ್ಲೂ ಪ್ರೇಕ್ಷಕರಲ್ಲೂ. ಅದನ್ನು ಕಣ್ಣಾರೆ ಕಂಡು ವಿಸ್ಮಿತನಾಗಿರುವುದರಿಂದ, ಬ್ರೆಕ್ಟ್ ಇವತ್ತು ಇಂಡಿಯಾಕ್ಕೆ ಎಷ್ಟು ರೆಲೆವೆಂಟ್ ಅಂಬ ಬಗ್ಗೆ ನನಗೆ ಸಂದೇಹವ ಇಲ್ಲವೇ ಇಲ್ಲ.
ಇಂಡಿಯಾದ ನಟರು ತೆರೆದುಕೊಳ್ಳುವುದಕ್ಕೆ ಸಾವಕಾಶ. ಒಮ್ಮೆ ತೆರೆದುಕೊಂಡರೆ ಅವರು ತೀರ ಸಹಜವಾದ ಸ್ಫೂರ್ತಿಯಿಂದ ಅಸಾಧಾರಣ ಸೂಕ್ಷ್ಮಗಳನ್ನು ಹೊಳೆಸಿಬಿಡುತ್ತಾರೆ.
– ಇತ್ಯಾದಿಯಾಗಿ ಅವರ ಉತ್ತರಗಳ ಸಾರಾಂಶವನ್ನಷ್ಟೇ ಇಲ್ಲಿ ನೆನಪಿಸಿಕೊಳ್ಳುತ್ತೇನೆ.
*
*
*
ಹತ್ತು ದಿನ ಕೆಲಸ ಮಾಡಿ ಫ಼್ರಿಟ್ಜ್ ವಾಪಸು ಹೊರಟಾಗ, ಬೀಳ್ಕೊಡಲು ಎಲ್ಲರೂ ಕೂಡಿಕೊಂಡ ಸಂದರ್ಭದಲ್ಲಿ ಹೀಗಂದರು – ’ಸಾಂಪ್ರದಾಯಿಕ ಸಭೆಯಾಗಿದ್ದರೆ ತೊಂದರೆಯಿರಲಿಲ್ಲ. ಇಂಥ ಕುಟುಂಬ ಕೂಟ ಏರ್ಪಡಿಸಿ ನನಗೆ ಕಷ್ಟ ಕೊಟ್ಟಿರಿ. ಅಗಲಿಕೆ ಯಾವತ್ತೂ ಕಷ್ಟ. ಮತ್ತೆ ಬರಬೇಕು ಎಂದಿದ್ದೀರಿ. ಕೃತಜ್ಞ. ಬರಲು ನನಗೂ ಆಸೆ. ಆದರೆ ನಿಶ್ಚಿತ ಬರುತ್ತೇನೆ, ಇಂಥ ದಿನ ಬರುತ್ತೇನೆ ಎಂದು ಹೇಳಲು ಸಾಧ್ಯವಿಲ್ಲದಾಗ ಆಶ್ವಾಸನೆ ಕೊಡಲಾರೆ. ಅಗಲಿಕೆ ಮಾತ್ರ ಯಾವತ್ತೂ ಕಷ್ಟ…’
*****