ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ ಯಶವಂತ ಚಿತ್ತಾಲರ ಜೊತೆ ಹನೇಹಳ್ಳಿಗೆ ಹೋಗುವ ಅವಕಾಶ ನನಗೆ ದೊರಕಿತ್ತು. ಆಗ ತಾನೇ ಅವರ ಎಲ್ಲ ಕಥೆ ಕಾದಂಬರಿಗಳನ್ನು ಓದಿದ್ದೆ. ಆ ಕಥನಲೋಕದ ಕೇಂದ್ರಸ್ಥಳವಾದ ಹನೇಹಳ್ಳಿಯ ಬಗ್ಗೆ ನನ್ನದೇ ಆದ ಚಿತ್ರವೊಂದು ಮನಸ್ಸಿನಲ್ಲಿ ರೂಪಗೊಂಡಿತ್ತು. ಅವರ ಜೊತೆ ಹನೇಹಳ್ಳಿಯನ್ನು ನೋಡುವ ಕುತೂಹಲ ಮತ್ತು ಉತ್ಸಾಹದಲ್ಲಿದ್ದೆ. ಅಂಕೋಲೆಯಿಂದ ಹೊರಟ ನಾವು ಹನೇಹಳ್ಳಿಯನ್ನು ತಲುಪುವಾಗ ಸುಮಾರು ಹನ್ನೊಂದು ಗಂಟೆಯಾಗಿತ್ತು. ಬೇಸಿಗೆಯ ಬಿಸಿಲು, ಬೆವರು, ಧೂಳು ಕಡೆಗಣಿಸಿ ಊರೊಳಗೆ ನಮ್ಮ ಪಾದಯಾತ್ರೆ ಆರಂಭವಾಯಿತು.
ಹನೇಹಳ್ಳಿ ಅಲ್ಲಿ ನಿಜದಲ್ಲಿ ಇತ್ತು. ಚಿತ್ತಾಲರ ಕತೆಗಳಲ್ಲಿ ಹಸಿರು ಹೊದ್ದು ಕಂಗೊಳಿಸುತ್ತ, ಸಂಜೆಯ ಚೆಂಬೆಳಕಲ್ಲಿ ಅಪೂರ್ವ ಕಾಂತಿಯಿಂದ ಹೊಳೆಯುವ ಬೇಲಿಗಳು, ಧೂಳು ತುಂಬಿಕೊಂಡ ಜಿಗ್ಗುಗಳಾಗಿದ್ದವು. ಆಬೋಲೀನಳ ಮುಗ್ಧತೆಯ ಶೋಷಣೆಗೆ ಸಾಕ್ಷಿಯಾದ ದೇವಸ್ಥಾನ ಪಾಳುಗುಡಿಯಂತಿತ್ತು. ಭಾರವಾದ ಹೃದಯದಿಂದ ಕೈತಾನ ಹತ್ತಿ ಬಂದ ಇಗರ್ಜಿಯ ಮೆಟ್ಟಿಲುಗಳು, ಅವನು ದುಃಖತಪ್ತನಾಗಿ ಹತ್ತಿ ಬರುವಾಗ ಅಸಂಖ್ಯವೆನಿಸುವ ಮೆಟ್ಟಿಲುಗಳು ಕೇವಲ ನಾಲ್ಕಾರೇ ಇದ್ದವು. ಧಾರಾಕಾರ ಮಳೆ ಬಂದ ರಾತ್ರಿ ಝಲ್ಲನೆ ಹೊಳೆವ ಮಿಂಚಿನ ಬೆಳಕಲ್ಲಿ, ಬುಡಣಸಾಬರು ಊರಿನ ಆ ಕಡೆಯಿಂದ ಈ ಕಡೆಯವರೆಗೂ ನಡೆದ ದಾರಿಯನ್ನು ನಿಮಿಷಗಳಲ್ಲಿ ಕ್ರಮಿಸಿದೆವು. ಚಿತ್ತಾಲರ ಕಥೆ ಕಾದಂಬರಿಗಳಲ್ಲಿ ಮುಖ್ಯ ರೂಪಕಗಳಾಗಿ ಬರುವ ನಿಗೂಢ ತಿರುವುಗಳು ಮತ್ತು ತಿರುವಿನಾಚೆ ‘ಧುತ್ತನೆ’ ಎದುರಾಗುವ ಬೆರಗುಗಳು – ಇಲ್ಲಿ ನಿಜದಲ್ಲಿ ಸಣ್ಣ ತಿರುವಿನ ಕಾಲುದಾರಿಗಳಾಗಿದ್ದವು. ಅಗಾಧ ಸೇತುವೆಯೇನೋ ಎಂಬಂತೆ ವರ್ಣಿತವಾಗಿರುವ ಸಂಕ ಹತ್ತು ಅಡಿ ಉದ್ದವಿತ್ತು. ಇದು ಬೊಮ್ಮಿ ವೋಮೂ ಪರಮೇಶ್ವರಿ ಉತ್ತುಮಿ ದೇವಿ ಪಾರೂ ಗಿರಿಯಣ್ಣ ಓಡಾಡಿದ ನೆಲವೆಂದು ನನಗೆ ನಾನೇ ಭಾವುಕನಾಗಿ ಹೇಳಿಕೊಂಡು, ನನ್ನ ಉತ್ಸಾಹವನ್ನು ಹೆಚ್ಚಿಸಿಕೊಳ್ಳಲು ನೋಡಿದೆ. ಅಗಾಧವಾಗಿ ಹರಿಯುವ ನದಿಯ ಮೂಲವನ್ನು ಹುಡುಕಲು ಹೊರಟು, ಅದರ ಉಗಮ ಸ್ಥಾನವನ್ನು ನೋಡಿ ಪೆಚ್ಚಾಗಿ ನಿಂತ ಹಾಗೆ ಆಯಿತು.
ಚಿತ್ತಾಲರು ಉತ್ಸಾಹದಿಂದಿದ್ದರು. ಇದೋ ಸಂಕ, ಇದೋ ಇಗರ್ಜಿ, ಇದೇ ಬುಡಣಸಾಬರು ನಡೆದ ದಾರಿ ಎಂದು ತೋರಿಸುವಾಗ ಅವರು ತಮ್ಮ ಕಥಾಪ್ರಪಂಚದ ಹನೇಹಳ್ಳಿಯನ್ನು ತೋರಿಸುತ್ತಿದ್ದರೇ ವಿನಃ ಕಣ್ಣೆದುರಿಗಿನ ವಾಸ್ತವದ ಹನೇಹಳ್ಳಿಯನ್ನಲ್ಲ ಎಂದು ತಿಳಿಯಲು ನನಗೆ ಕೆಲವು ಗಳಿಗೆಗಳೇ ಬೇಕಾದವು. ಒಮ್ಮೆ ಇದನ್ನು ಒಪ್ಪಿಕೊಂಡದ್ದೇ ನನಗೂ ಆ ಜಗತ್ತು ಕಾಣಿಸತೊಡಗಿತು. ಗೋಟಕೀ, ದಾಸಾಳ, ಕರವೀರ, ನಿತ್ಯಪುಷ್ಪ, ಮಲ್ಲಿಗೆ, ಆಬೋಲಿ – ಎಲ್ಲವೂ ನಳನಳಿಸತೊಡಗಿದವು. ಪಾಗಾರಗಳು, ದಣಪೆಗಳು, ಸೋಗೆಯ ಮನೆಗಳು, ಅಂಗಡಿಯ ಕಟ್ಟೆಗಳು, ಅಂಗಳ, ಹಿತ್ತಿಲು, ಚಪ್ಪರಗಳು, ಕೊಟ್ಟಿಗೆಗಳು, ಚಕ್ರಖಂಡೇಶ್ವರ – ಎಲ್ಲವೂ ಕಂಡವು. ಇಡೀ ಜೀವಮಾನವನ್ನೇ ಆ ಸ್ವಲ್ಪ ಸಮಯದಲ್ಲಿ ಕ್ರಮಿಸಿದರೇನೋ ಎಂಬ ಭಾವನೆ ಕೊಡುವಂತೆ ಬುಡಣಸಾಬರು ನಡೆದ ಹಾದಿ ನನಗೂ ಮುಗಿಯದ ನಿಗೂಢ ಹಾದಿಯಾಗಿ ಕಂಡಿತು. ಆಗ ತಾನೇ ಮೊದಲ ಕತೆಯನ್ನು ಬರೆದಿದ್ದ ನನಗೆ ಇದೊಂದು ಪಾಠವಾಯಿತು. ಸಾಹಿತ್ಯದ ಈ ರೂಪಕ ಜಗತ್ತಿನ ಸಂಕೀರ್ಣತೆ, ಶಕ್ತಿ, ಭಿನ್ನತೆ ಮೊಟ್ಟಮೊದಲ ಬಾರಿ ಸ್ಪಷ್ಟವಾಗಿ ಅರಿವಿಗೆ ಬರತೊಡಗಿತು.
ನಿಜಕ್ಕೂ ಹನೇಹಳ್ಳಿಯೊಂದು ಜಗತ್ತು. ಅಲ್ಲಿ ಎಲ್ಲವೂ ಇದೆ. ಸಾಂಸ್ಕೃತಿಕ ಸಾಮಾಜಿಕ ಪಲ್ಲಟಗಳು, ಆಧುನಿಕತೆಯನ್ನು ಎದುರಿಸುವ ಮತ್ತು ಅದರ ಜೊತೆ ಬಾಳುವ ಅನಿವಾರ್ಯತೆಗಳು, ತಲೆಮಾರಿನ ಸಂಘರ್ಷಗಳು, ಇಂದಿನ ಮನಸ್ಸಿನ ಕಳವಳಗಳು ಮತ್ತು ತೀರದ ಅರ್ಥ ಪಿಪಾಸೆಗಳು – ಹೀಗೆ ಈ ಕಾಲದ ಅತಿ ಮುಖ್ಯ ಕಾಳಜಿಗಳನ್ನು, ಇಲ್ಲಿಯ ಪಾತ್ರ ಮತ್ತು ಸನ್ನಿವೇಶಗಳ ಮೂಲಕ ಚಿತ್ತಾಲರು ನಿರ್ವಹಿಸಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಅವರು ಹನೇಹಳ್ಳಿಯೆಂಬ ಈ ಜಗತ್ತನ್ನು ಅತ್ಯಂತ ಪ್ರೀತಿಯಿಂದ ಕಾಳಜಿಯಿಂದ ಕಟ್ಟಿ ಕನ್ನಡಕ್ಕೆ ಕೊಟ್ಟಿದ್ದಾರೆ. ಮುಂಬೈಯಲ್ಲಿ ಜರುಗುವ ಅವರ ಕಥೆಗಳ ನಾಯಕರಿಗೂ ಸ್ಥಿರವಾಗಿ ನಿಲ್ಲಲು ಹನೇಹಳ್ಳಿಯ ನೆಲ ಮತ್ತು ಬೇರುಗಳು ಬೇಕು. ಇದೇ ಅವರ ಭಾವಜಗತ್ತಿನ ಕೇಂದ್ರ. ಒಡೆಯದ ಲಕೋಟೆಗಳು, ಓದದೇ ಉಳಿದ ಪತ್ರಗಳು, ನಸುಕಿನಲ್ಲಿ ಬಂದು ಬಾಗಿಲು ತಟ್ಟುವ ಪಾತ್ರಗಳು, ಸಂಜೆಯ ಬಂಗಾರದ ಬಣ್ಣದ ಸಂತ ಬಿಸಿಲಿನಲ್ಲಿ ಹೊಳೆಯುವ ಮೋರೆಗಳು, ಪೊತ್ತೆ ಮೀಸೆಯ ಯಮಕಿಂಕರರು, ದುಡ್ಡನ್ನು ಬೇಡ ಅನ್ನುವವನೇ ಈ ಕಾಲದ ನಿಜವಾದ ಹೀರೋ ಎಂದು ಸಾರುವ ಪುರುಷೋತ್ತಮರು ತಮ್ಮ ಜೀವಸ್ರೋತವನ್ನು ಇಲ್ಲಿಂದಲೇ ಪಡೆದವರು. ಮೂರು ದಾರಿಗಳು ಕಾದಂಬರಿಯ ಮುಗ್ಧ ನಿರ್ಮಲೆಯ ಹಟ, ಪದ್ದಕ್ಕನ ಛಲ, ವಲ್ಲೀಗದ್ದೆ ಸುಬ್ಬನ ಕುರೂಪ ದರ್ಶನ – ಇಲ್ಲಿಯೇ ಹುಟ್ಟಿದ್ದು. ಬೊಮ್ಮಿಯ ಹುಲ್ಲು ಹೊರೆಯ ಚೌಕಾಶಿಯಿಂದ ಶುರುವಾದ ಈ ಪಯಣ ತನ್ನ ದಾರಿಗುಂಟ ಕನ್ನಡ ಸಾಹಿತ್ಯಕ್ಕೆ ಹಲವು ಮುಖ್ಯ ಕೃತಿಗಳನ್ನು ನೀಡುತ್ತ ಮುಂದುವರಿದಿದೆ.
ಚಿತ್ತಾಲರ ಕಥಾಪ್ರಪಂಚ ಉತ್ತರ ಕನ್ನಡದ ಲೇಖಕರಿಗೆ ಒಂದು ಶಾಪವಿದ್ದಂತೆ ಎಂದು ಹೇಳುವವರಿದ್ದಾರೆ. ಅವರ ಸಾಹಿತ್ಯದಲ್ಲಿ ಪ್ರಕಟಗೊಂಡ ಈ ಜಿಲ್ಲೆಯ ದಟ್ಟವಾದ ವಿವರಗಳ ಬಗ್ಗೆ ಇರುವ ಮೆಚ್ಚುಗೆಯ ಮಾತಿದು. ಹೊಸದಾಗಿ ಬರೆಯತೊಡಗುವ ಲೇಖಕನಿಗೆ ಅವರ ಕಣ್ಣಿನಿಂದಲ್ಲದೇ, ಉತ್ತರ ಕನ್ನಡವನ್ನು ಬೇರೆಯಾಗಿ ನೋಡುವುದು ಸುಲಭವಲ್ಲ. ಆದರೆ ಅನುಕರಣೆಯನ್ನು ಮೀರಬಲ್ಲ, ತನ್ನ ಒಳಗನ್ನು ಮುಟ್ಟಿ ಬರೆಯಬಲ್ಲ, ರೂಪಕ ಜಗತ್ತಿನ ಶಕ್ತಿಯ ಅರಿವಿರುವ ಲೇಖಕನಿಗೆ ಅವರು ಹೊರೆಯಲ್ಲ. ಈ ಜಿಲ್ಲೆಯ ಪ್ರತಿ ಲೇಖಕನ ಒಳಗೂ ಒಂದು ವಿಶಿಷ್ಟ ಉತ್ತರ ಕನ್ನಡವಿರಲು ಸಾಧ್ಯವಿದೆ. ಮತ್ತು ಇದನ್ನು ಇಲ್ಲಿಯ ಅನೇಕ ಪ್ರತಿಭಾವಂತರು ತೋರಿಸಿದ್ದಾರೆ ಕೂಡ. ಚಿತ್ತಾಲರು ತಮ್ಮ ಸೃಜನಕಲೆಯ ಬಗ್ಗೆ ಬರೆಯುತ್ತ ‘ಉತ್ತರ ಕನ್ನಡ ಜಿಲ್ಲೆ, ಅದರಲ್ಲೂ ನನ್ನ ಹುಟ್ಟೂರಾದ ಹನೇಹಳ್ಳಿ ಇವು ನನ್ನ ಮಟ್ಟಿಗೆ ಬರೇ ನೆಲದ ಹೆಸರುಗಳಲ್ಲ. ಬದಲಾಗಿ ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ, ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆಯಾಗಿ ನಿಂತ ಪ್ರೇರಕ ಶಕ್ತಿಗಳೂ ಆಗಿವೆಯೆಂದು ನಾನು ನಂಬಿದ್ದೇನೆ.’ ಎಂದು ಹೇಳಿದ್ದಾರೆ. ಚಿತ್ತಾಲರ ಕತೆಗಳಲ್ಲಿ ಬರುವಂಥ ಹನೇಹಳ್ಳಿ ವಾಸ್ತವದಲ್ಲಿ ಇದೆಯೋ, ಇತ್ತೋ ಎಂಬಂಥ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ. ಹಾಗೆ ಹುಡುಕ ಹೊರಟರೆ ಸಿಗುವುದು ಉತ್ತರ ಕನ್ನಡದ ಬೇರೆ ಯಾವ ಹಳ್ಳಿಗಿಂತ ಬೇರೆಯಾಗಿರದ, ನಾನು ಆ ದಿನ ಬೇಸಿಗೆಯ ಬಿಸಿಲಿನಲ್ಲಿ ಕಂಡಂಥ ಒಂದು ಸಾಧಾರಣ ಹಳ್ಳಿ. ಆದರೆ ಅವರ ಕಥಾಜಗತ್ತಲ್ಲಿ ಅದನ್ನು ನೋಡಿದಾಗ, ಅವರ ಓದುಗರ ಭಾವಜಗತ್ತಲ್ಲಿ ಕಂಡಾಗ, ಅಲ್ಲಿ ತನ್ನ ಸೌಂದರ್ಯ ಮತ್ತು ಸಂಕೀರ್ಣತೆಯನ್ನು ತುಂಬಿಕೊಂಡ ಹನೇಹಳ್ಳಿಯಿದೆ. ಅಲ್ಲಿಯ ಜನರಿದ್ದಾರೆ. ಛಲ, ಭೀತಿ, ಪ್ರೀತಿ, ಬಂಡಾಯಗಳಿವೆ. ನಿಷ್ಪಾಪ ಜೀವಿಯ ಆಕ್ರಂದನಗಳಿವೆ.
ಮೂರು ದಾರಿಗಳು ಕಾದಂಬರಿ ಆರಂಭವಾಗುವುದು ಹೀಗೆ: ಶನಿವಾರ. ರಾತ್ರಿಯ ಸಮಯ. ಸಾಣೆಕಟ್ಟೆಯಿಂದ ಕುಮಟೆಗೆ ಹೊರಡುವ ದೋಣಿ ಧಕ್ಕೆಯನ್ನು ಬಿಡುವ ಹೊತ್ತು. ಆಗ ಘಾಟಿಯ ಏರಿಯ ಆಚೆಯಿಂದ ‘ಕುಹೂ’ ಎಂಬ ಕೂಗು ಕೇಳಿಸುತ್ತದೆ. ತಾನು ಅತಿ ಸಮೀಪ ಇದ್ದೇನೆ, ದೋಣಿ ಬಿಡಬೇಡಿರಿ ಎಂಬುದರ ಸಂಕೇತವಾದ ಕೂಗದು. ಸ್ವಲ್ಪ ಸಮಯದಲ್ಲೇ ದೋಣಿ ತಪ್ಪೀತೆಂಬ ಆತಂಕದಲ್ಲಿ ಆ ಘಾಟಿಯನ್ನು ದಾಟಿ ಓಡೋಡುತ್ತ ಏದುಸಿರು ಬಿಡುತ್ತ ಬಂಧ ಗೃಹಸ್ಥರೊಬ್ಬರು ದೋಣಿಯನ್ನು ಹತ್ತುತ್ತಾರೆ. ನಾವು ಹನೇಹಳ್ಳಿಯ ಭೇಟಿಯನ್ನು ಮುಗಿಸಿ ಹಿಂತಿರುಗಿ ಬರುವಾಗ, ಸಾಣೆಕಟ್ಟೆಯ ಧಕ್ಕೆಯನ್ನೂ ಹಾದು ಬಂದೆವು. ಬೆಳಿಗ್ಗೆ ಅದೇ ದಾರಿಯಲ್ಲಿ ಹೋಗುವಾಗ ಧಕ್ಕೆಯ ಪಕ್ಕದ ಚಿಕ್ಕ ದಿಬ್ಬವಾಗಿ ಕಂಡದ್ದು, ಮರಳಿ ಬರುವಾಗ ದೊಡ್ಡ ಘಾಟಿಯಂತೆ ತೋರಿತು. ನಾನು ಹನೇಹಳ್ಳಿಯೆಂಬ ರೂಪಕ ಜಗತ್ತಿನಲ್ಲಿದ್ದೆ. ಕತ್ತಲಿನ ರಾತ್ರಿ, ಧಕ್ಕೆಯಿಂದ ಈ ಘಾಟಿಯತ್ತ ಕತ್ತೆತ್ತಿ ನೋಡಿದ ಅಂಬಿಗನಿಗೆ, ಆ ಗೃಹಸ್ಥರ ಧಾವಂತ, ಅವರ ಕೈಯ ಕಂದೀಲಿನ ಕ್ಷೀಣ ಬೆಳಕಿನ ಓಲಾಟದ ಮೂಲಕ ಅರ್ಥವಾದ ಬಗೆಯನ್ನು ಕಾಣಬಲ್ಲವನಾಗಿದ್ದೆ.
*****