ಗಂಗೊಳ್ಳಿಯಲ್ಲಿ ರಂಗರಾತ್ರಿ

ಕರಾವಳಿಯಲ್ಲಿನ ಕುಂದಾಪುರದ ಊರ ಸೆರಗಿನಲ್ಲೇ ಐದು ನದಿಗಳು ಬಂದು ಸಮುದ್ರ ಸೇರಿಕೊಳ್ಳುತ್ತವೆ. ದೋಣಿಯಲ್ಲೋ ಲಾಂಚ್ನಲ್ಲೋ ಸಮುದ್ರ ಮುಟ್ಟಿಕೊಳ್ಳುತ್ತಲೇ ನದಿ ದಾಟಿ ಉತ್ತರದ ದಡ ಸೇರಿದರೆ – ಅದೇ ಗಂಗೊಳ್ಳಿ. ಮೀನುಗಾರಿಕೆಯೇ ಮುಖ್ಯವಾಗಿರುವ ಚಿಕ್ಕಹಳ್ಳಿ. ಮಳೆಗಾಲದ ನೆಗಸಿನಲ್ಲಿ ಆ ಹಳ್ಳಿ ನಿರ್ಜನವಾಗುತ್ತದೆ. ಮಳೆ ಕಳೆದರೆ, ಊರಿನ ಒಂದು ಕಿರುಬೀದಿ ಸಣ್ಣಪುಟ್ಟ ಅಂಗಡಿಗಳಿಂದ ತುಂಬಿಕೊಂದು ಪಟ್ಟಣದ ಗತ್ತಿನಲ್ಲೇ ಬೀಗುತ್ತಿರುತ್ತದೆ. ಕರಾವಳಿಯ ಮರಳ ಹಾಸು; ಹಸಿರು ಕೊಡೆಗಳ ಜಾತ್ರೆಯಂತೆ ಇಡಿಕಿರಿದುಕೊಂಡ ತೆಂಗಿನ ಮರಗಳು; ಅವುಗಳ ನೆರಳಲ್ಲಿ ಯಾಯಾವುದೆ ದಿಕ್ಕಿಗೆ ಮುಖಮಾಡಿಕೊಂಡು ತಮಗೆ ತಾವೇ ಎಂಬಂತಿರುವ ಗುಡಿಸಲುಗಳ ಗುಂಪು ಗುಂಪು; ಇವೆಲ್ಲವುಗಳ ನಡುವೆ ಲಾಳಿಯಾಡಿ ಜೀವೋತ್ಸಾಹ ಹೆಣೆಯುವ ದಿಗಂಬರ ಮಕ್ಕಳು – ಕರಾವಳಿ ಹಳ್ಳಿಯ ಅದೇ ಸಾಮಾನ್ಯ ಚಿತ್ರ ಗಂಗೊಳ್ಳಿ ಕೂಡ.

ಈ ವರ್ಷ (೧೯೮೩) ಮೇ ತಿಂಗಳಲ್ಲಿ ಒಂದು ಸಂಜೆ ಕುಂದಾಪುರದಿಂದ ದೋಣಿಯಲ್ಲಿ ಹೊಳೇದಾಟಿ ಗಂಗೊಳ್ಳಿಗೆ ಹೋದದ್ದು, ಅಲ್ಲಿ ತೀರಾ ಅಪರೂಪವಾಗಿ ನಡೆದ ಕಾರ್ಯಕ್ರಮವೊಂದನ್ನು ಸಾಕ್ಷಿ ಕಂಡು ಉತ್ತೇಜಿತಗೊಂಡದ್ದು ಯಾವತ್ತೂ ಮರೆಯುವುದಿಲ್ಲ.

ರಾಜ್ಯ ನಾಟಕ ಅಕಾಡಮಿ ಆಶ್ರಯದಲ್ಲಿ ನಮ್ಮ ನೀನಾಸಂ ರಂಗ ಶಿಕ್ಷಣ ಕೇಂದ್ರ, ಗಂಗೊಳ್ಳಿಯ ಖಾರ್ವಿ (ಮೀನುಗಾರ) ಯುವಕರಿಗೆ ಒಂದು ನಾಟಕ ತರಬೇತಿ ಶಿಬಿರ ಏರ್ಪಡಿಸಿತ್ತು. ಇದನ್ನು ಮೊದಲಿಗೆ ಸೂಚಿಸಿದವರು ರಾಜೇಂದ್ರ ಉಡುಪರು. ಕುಂದಾಪುರದ ’ಸಮುದಾಯ’ ಘಟಕ ಸ್ಥಳೀಯ ವ್ಯವಸ್ಥೆಗೆ ಮುಂದಾಗಿ ಬಂದಿತ್ತು. ನಮ್ಮ ರಂಗ ಶಿಕ್ಷಣ ಕೇಂದ್ರದ ಮುಖ್ಯರಾದ ಚಿದಂಬರ ರಾವ್ ಜಂಬೆ, ನಾಲ್ಕೈದು ವಾರಗಳ ಕಾಲ ದಿನವೂ ಸಂಜೆ ರಂಗ ತರಬೇತಿ, ನಾಟಕ ತಯಾರಿ ನಡೆಸಿಕೊಟ್ಟರು. ನೀನಾಸಂ ಬಳಗದ ಅ.ರಾ. ಚಂದ್ರಶೇಖರ್ ಅವರಿಗೆ ಸಹಾಯಕರಾಗಿದ್ದರು. ಪುರುಶೋತ್ತಮ ರಂಗವ್ಯವಸ್ಥೆಯೇ ಮೊದಲಾದ ಹಿನ್ನೆಲೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕೆ.ಎಲ್.ಸತ್ಯನಾರಾಯಣರಾವ್ ಹಾಡುಗಳನ್ನು ಯೋಜಿಸಿದ್ದರು. ಯುವನಾಟಕಕಾರ ನಿಸರ್ಗಪ್ರಿಯ ಅವರ ’ಮಾತಾಯಿ’ ನಾಟಕವನ್ನು ಪ್ರದರ್ಶನಕ್ಕಾಗಿ ಸಿದ್ಧಗೊಳಿಸಲಾಗಿತ್ತು.

ಶಿಬಿರದ ಅವಧಿಯಲ್ಲಿ ಪ್ರಸನ್ನ, ಜಯತೀರ್ಥ ಜೋಶಿ, ಗಂಗಾಧರ ಸ್ವಾಮಿ, ಅಶೋಕ ಮುಂತಾದವರು ಭೇಟಿ ಕೊಟ್ಟು ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದರು. ಅವರ ಜೊತೆ ಚರ್ಚೆ ನಡೆಸಿದ್ದರು.

ಖಾರ್ವೀ ಜನವರ್ಗ ಕರ್ನಾಟಕದ ಕರಾವಳಿ ಉದ್ದಕ್ಕೂ ಗೋವೆಯಿಂದ ಮಂಗಳೂರಿನ ತನಕ, ಹಬ್ಬಿಕೊಂಡಿದೆ. ಇವರು ನಿಜವಾಗಿ ಕಡಲ ಮಕ್ಕಳು. ಮೀನುಗಾರಿಕೆ ಇವರ ಏಕೈಕ ಜಾತಿ-ಉದ್ಯೋಗ. ಮೂಲತಃ ಈ ಜನ ಗೋವೆಯಲ್ಲಿದ್ದವರಂತೆ. ಹದಿನಾರನೇ ಶತಮಾನದಲ್ಲಿ ಅಲ್ಲಿ ಪೋರ್ಚುಗೀಸರು ಮತಾಂತರದ ಉಪದ್ವ್ಯಾಪ ತೊಡಗಿದಾಗ ಈ ಜನ ಅಲ್ಲಿಂದ ಕಿತ್ತು ಬಂದು ಕನ್ನಡದ ಕರಾವಳಿಗೆ ಹಬ್ಬಿಕೊಂಡರಂತೆ – ಹಾಗೆ ಇತಿಹಾಸ ಹೇಳುತ್ತಾರೆ. ಜಾತಿಯ ವಿಶಿಷ್ಟವಾದ ಪೂರ್ವಸಂಪ್ರದಾಯಗಳನ್ನು ಸಾಕಷ್ಟು ಉಳಿಸಿಕೊಂಡು ಬಂದಿರುವ ಈ ಜನ ಹಲವಾರು ದೇವರುಗಳನ್ನೂ ಕ್ಷುದ್ರದೇವತೆಗಳನ್ನೂ ಪೂಜಿಸುವ ಜೊತೆಗೆ ಸಮುದ್ರವನ್ನು ದೇವರಂತೆ ಪೂಜಿಸುತ್ತಾರಂತೆ. ವರ್ಷಕ್ಕೊಮ್ಮೆ ಜನಿವಾರ ಹಾಕಿಕೊಂಡು ಎಂಟು ಹತ್ತು ದಿನಗಳ ಅನಂತರ ಅದನ್ನು ತೆಗೆದುಹಾಕುವುದು, ಶೃಂಗೇರಿಯ ಗುರುಪೀಠಕ್ಕೆ ನಡೆದುಕೊಳ್ಳುವುದು – ಇವರ ಸಂಪ್ರದಾಯದ ವಿಶೇಷಗಳು. ಈ ಜನರ ಮನೆಮಾತು, ವಿಶಿಷ್ಟವಾದ ’ಖಾರ್ವೆ ಕೊಂಕಣಿ’.

ಹಗಲೆಲ್ಲಾ ಮೀನುದೋಣಿಗಳಲ್ಲಿ ಸಮುದ್ರದ ಜೊತೆ ಸೆಣೆಸುತ್ತ ಅಥವಾ ಕೆಲವೊಮ್ಮೆ ಹೆಂಚಿನ ಖಾರ್ಖಾನೆಗಳಲ್ಲಿ ಬೆವರು ಸುರಿಸುತ್ತ ದುಡಿಯುವ ಈ ಖಾರ್ವಿ ಯುವಕರು ಸಂಜೆ ಶಿಬಿರದಲ್ಲಿ ಅತ್ಯುತ್ಸಾಹದಿಂದ ಬಂದು ಪಾಲ್ಗೊಳ್ಳುತ್ತಿದ್ದಾರೆ; ಸ್ತ್ರೀ ಪಾತ್ರಗಳನ್ನು ನಿರ್ವಹಿಸಲಿಕ್ಕೆ ಹುಡುಗಿಯರು ಉಮೇದಿನಿಂದ ಮುಂದಾಗಿ ಬಂದಿದ್ದಾರೆ – ಮುಂತಾದ ವರದಿಗಳನ್ನು ಮೊದಲೇ ಕೇಳಿಕೊಂಡಿದ್ದ ನಮಗೆ ಆವತ್ತಿನ ಈ ಪ್ರದರ್ಶನದ ಬಗ್ಗೆ ಆಸೆ ಕುತೂಹಲಗಳು ಬೆಳೆದುಕೊಂಡಿದ್ದವು.

ಗಂಗೊಳ್ಳಿಯ ದಡಮುಟ್ಟಿ ಅಂಗಡಿಬೀದಿ ಹಾದು, ಸುಯ್‌ಎನ್ನುವ ತೆಂಗು ಚಾಮರಗಳ ಸಂತೆಯೊಳಕ್ಕೆ ಇಳಿದುಕೊಂಡು, ಅದರಡಿಯ ಗುಡಿಸಲುಗಳ ಮಂದೆಯಲ್ಲಿ – ಒಂದರ ಮುಂಬಾಗಿಲಲ್ಲಿ ಹಾದು ಇನ್ನೊಂದರ ಹಿಂಬಾಗಿಲು ಬಳಸಿ ಮತ್ತೊಂದರ ಬದಿಗೋಡೆಗೆ ಭುಜ ತಾಗಿಸಿಕೊಳ್ಳುತ್ತ – ಬೆತ್ತಲೆ ಮಕ್ಕಳ ಬಿಡುಗಣ್ಣು ಗೊಂಚಲುಗಳಿಗೆ ಮೈ ತಾಕಿ ತರಿದಿತೋ ಎಂದು ಗೊಂದಲಗೊಳ್ಳುತ್ತ ಅಂತೂ ನುಗ್ಗಿಕೊಂಡು ಮರಳು ತೀರದ ತೆರವಿಗೆ ಬಂದು ನಿಂತೆವು. ಮುಂದೆ ಉಬ್ಬಳಿದು ಹಾಸಿಕೊಂದ ಮರಳು ತೀರ. ಅದರಾಚೆ, ಸಂಜೆಯ ಬೆಂಕಿ ಓಕಳಿಯಲ್ಲಿ ಬಿದ್ದು ಬಡಿಸುಕೊಳ್ಳುತ್ತಿರುವ ಸಮುದ್ರ. ಇಲ್ಲಿ ನಾವು ನಿಂತಲ್ಲಿ, ಕಟ್ಟೆ ಕಟ್ಟಿರುವ ಒಂದು ಆಲದ ಮರ. ಮರ ತನ್ನ ನೆರಳು ಚೆಲ್ಲಿಕೊಳ್ಳುವಷ್ಟು ಹರಹಿಗೆ, ಅದರ ಕಟ್ಟೆಯನ್ನು ಒಳಗು ಮಾಡಿ ನಿರ್ಮಿಸಿದ ಸರಳ ವೇದಿಕೆ – ಅದೇ ರಂಗಭೂಮಿ.

ತಟ್ಟನೆ, ರಂಗಭೂಮಿ ಎಂದು ಗೊತ್ತಾಗುತ್ತಲೂ ಇರಲಿಲ್ಲ. ಆ ಊರವರು ತಮ್ಮದೇ ಯಾವುದೋ ಹಬ್ಬಕ್ಕೆ ಆ ಕಟ್ಟೆಯನ್ನು ಸೈಂಗರಿಸಿಕೊಂಡಿದ್ದಾರೇನೋ ಅನ್ನಿಸುವ ಹಾಗಿತ್ತು. ತೂಗುವ ಫ಼್ಲೆಡ್ ದೀಪದ ಗುಂಡು ತಟ್ಟೆಗಳು, ಮೈಕ್-ಸ್ಪೀಕರ್ಗಳು, ಗಳುಗಳಾ ಮೇಲೆ ಹಾದ ಕೇಬಲ್‌ಗಳು ಮುಂತಾದವು ಕೂಡ ಇವತ್ತಿನ ಕಾಲಕ್ಕೆ ಹಳ್ಳಿಗಳಲ್ಲಿ ಅಂಥಾ ಅಪರೂಪವಾದ್ದೇನಲ್ಲ.

ಸುತ್ತ ಹಾಸಿಯೇ ಇದ್ದ ಬಿಳಿಮರಳು; ಅದೇ ಪ್ರೇಕ್ಷಾಂಗಣ.

ಸಂಜೆಗೇ ಚಿಕ್ಕಮಕ್ಕಳು ಸಂತೆನೆರೆದು ಗದ್ದಲ ಹಬ್ಬಿಸಿದವು. ಕ್ರಮೇಣ ಕತ್ತಲಿಂದಿಳಿದು ಅವರ ಗದ್ದಲ ಮುಳುಗುತ್ತ ಬಂದಿತು. ರಾತ್ರಿಯಾಗುತ್ತಿದ್ದ ಹಾಗೆ ಊರಿನ ಗಂಡಸರು, ಹೆಂಗಸರು ತಂಡ ತಂಡವಾಗಿ ಬಂದು ಕೂಡಿಕೊಂಡರು. ಮಕ್ಕಳೂ ಜಾಗ ಹಿಡಿದು ಕುಳಿತಿದ್ದವು. ನಾಟಕಕ್ಕೆ ಬಂದವರಲ್ಲಿ, ಅವರ ಹಗಲು ದುಡಿಮೆಯ ದಣಿವನ್ನು ಕಳಾಚಿ ಮೈಮರೆಸಿದಂಥ ಸಮೂಹ ಸಂಬ್ರಮವೇನೂ ಕಾಣಿಸುತ್ತಿರಲಿಲ್ಲ. ಬದಲಾಗಿ, ಹಲವು ದಿನಗಳಿಂದ ಇಲ್ಲೇ ತಯಾರಿ ನಡೆದು ಇವತ್ತು ನಡೆಸುತ್ತಿರುವ ಈ ಪ್ರದರ್ಶನ ಏನಿದ್ದೀತು ಎಂದು ಕಂಡುಕೊಳ್ಳುವ ಸಂಶೋಧನ ಕುತೂಹಲ ಕಾಣಿಸುತ್ತಿತ್ತು.

ನಾಟಕ ಪ್ರಾರಂಭವಾಗುವ ಹೊತ್ತಿಗೆ ಊರಿನ ಮುನ್ನೂರು ನಾನೂರು ಮಂದಿ ಬಂದು ಕೂಡಿದ್ದರು. ಕುಂದಾಪುರದಿಂದ ಮತ್ತು ಬೇರೆ ಬೇರೆ ಕಡೆಗಳಿಂದ ಬಂದ ಆಸಕ್ತರು ಪ್ರತ್ಯೇಕವೇ ಆಗಿ ಕಾಣಿಸುತ್ತಿದ್ದರು.

ಆ ಪ್ರೇಕ್ಷಕರಲ್ಲಿ ಹೆಚ್ಚಿನವರಿಗೆ ನಾಟಕ ಎನ್ನುವುದು ಅಪರಿಚಿತವೇ. ಯಕ್ಷಗಾನ ಅವರ ಆಪ್ತ ಮನೋರಂಜನೆ. ಸಂಭ್ರಪೂರ್ವಕವಾಗಿ ಬಂದು ಆಟದಲ್ಲಿ ಪೂರ್ವ ನಿರೀಕ್ಷಿತವಾದ ಪರಿಚಿತ ಬೆರಗುಗಳಾನ್ನೇ ತಮಗೆ ಗೊತ್ತೆನ್ನುವ ಸ್ಥೈರ್ಯದಿಂದ ಅನುಭವಿಸಿಕೊಳ್ಳುತ್ತ ಆಟದ ಮಧ್ಯೆ ಮಧ್ಯೆ ಅದೊಂದು ಸಮೂಹಕೂಟವೆನ್ನುವಂತೆ ಬೇಕಾದವರೊಡನೆ ಕುಶಲ ಸಂಧಾಷಣೆ ನಡೆಸಿಕೊಳ್ಳುತ್ತ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದ ಜನ ಅವರು. ಇಡೀ ರಾತ್ರಿ ಪ್ರದರ್ಶನದಲ್ಲಿದ್ದು ಮೈಮನಸ್ಸುಗಳೆರಡನ್ನೂ ಹಿತವಾಗಿ ಮರ್ದನಗೊಳಿಸಿಕೊಂಡು ಮುಂದೆ ಎರಡು ಮೂರು ದಿನಗಳಾದರೂ ಅದರ ಪರಿಣಾಮ ಉಳಿಸಿಕೊಳ್ಳುವ ಸ್ಮರಿಸಿಕೊಳ್ಳುವ ರೂಢಿಯವರು. ಅವರಿಗೆ ಈ ಪ್ರದರ್ಶನ ತೀರ ಹೊಸದಾಗಿತ್ತು.

ನಾಟಕ ಪ್ರಾರಂಭವಾಗುವ ಮೊದಲಿಗೆ, ಹತ್ತು ಹದಿನೈದು ನಿಮಿಷಗಳ ಕಾಲ ಗೊಂದಲ ಗಲಿಬಿಲಿಗಳ ಪಿಸುಕಲಕಲ ಕೇಳಿಸುತ್ತಿತ್ತು. ಕ್ರಮೇಣ ಅದು ನಿಂತುಹೋಯಿತು. ಆಮೇಲೆ ಸ್ವಲ್ಪ ಹೊತ್ತು ಗಂಭೀರ ಮೌನ ಆವರಿಸಿಕೊಂಡಿತ್ತು. ಆ ಗಾಂಭೀರ್ಯದ ಬಿಗುಪಿನಲ್ಲಿ ಮಕ್ಕಳು ಕೂಡ, ಪ್ರಾಯಃ ಏನೂ ಮಾಡಲಿಕ್ಕೆ ತೋಚದೆ, ಹೆಪ್ಪುಗಟ್ಟಿಕೊಂಡಿದ್ದರು.

ನಾಟಕದ ಕಥೆ ಗ್ರಾಮೀಣ ಪರಿಸರದ್ದೇ. ಬಯಲುಸೀಮೆಯ ಹಳ್ಳಿಯ ಹಿನ್ನೆಲೆಯುಳ್ಳಾದ್ದು. ಈ ಪ್ರೇಕ್ಷಕರಿಗೆ ತೀರಾ ಅಪರಿಚಿತವೆನ್ನುವ ಹಾಗಿಲ್ಲದಿದ್ದರೂ ಆ ಭಾಷೆ ಬದುಕಿನ ವಿವರಗಳು ತೀರ ತಮ್ಮವೇ ಎನ್ನುವಂತಿರಲಿಲ್ಲ. ಗೌಡ, ಧರ್ಮಾಧಿಕಾರಿ, ಸೂಳೆಯಾಗಿ ಧರ್ಮಾಧಿಕಾರಿಯನ್ನು ಸೆರಗಿನಲ್ಲಿಟ್ಟುಕೊಂಡು ಅಲ್ಲಿನ ಘನವ್ಯವಸ್ಥೆಯ ಕೇಂದ್ರವಾಗಿದ್ದ ತಾಯವ್ವ; ಇದೆಕ್ಕೆದುರಾಗಿ ಹರಯದ ಹೆಣ್ಣು ಕರುಣ, ಹೊರಗಿನಿಂದ ಬಂದು ಊರಿನ ಸುಧಾರಣೆಗೆ ಉಮೇದು ತೋರಿಸುವ ಯುವಕ ಅರುಣ, ಅವನಿಗೆ ಗುಟ್ಟಾಗಿ ನೆರವಾಗುವ ಆನಂದಪ್ಪ; ಇಲ್ಲಿನ ವ್ಯವಸ್ಥೆಯ ಬಂಧನದಲ್ಲಿ ಶೋಷಿತರಾಗಿ ಬಾಳುವ ಜನಸಾಮಾನ್ಯರ ಸಮೂಹ – ಇತ್ಯಾದಿ ಪಾತ್ರವಿಸ್ತಾರ; ವ್ಯವಸ್ಥೆಗೆ ವಿರುದ್ಧ ಇವನ್ನೆಲ್ಲ ಜಾನಪದ ರಂಗಶಲಿಯಲ್ಲಿ ಹಾಡುಕುಣಿತಗಳೊಂದಿಗೆ ನಿರೂಪಿಸುವ ನಾಟಕ ಇದು.

ನಾಟಕ ಮುಂದುವರೆದ ಹಾಗೆ, ಪ್ರೇಕ್ಷಕರು ಕ್ರಮೇಣ ಬಿಗುಪು ಕಳಾಚಿ ಸಡಿಲುಗೊಂಡರು. ಪ್ರಾರಂಭಕ್ಕೆ ಹಾಡು ಕುಣಿತಗಳ ಲಯಬದ್ಧತೆ ಅವರನ್ನು ಸೆಳೆದಿರಬಹುದು. ಅಥವಾ ಅದಕ್ಕೂ ಮುಖ್ಯವಾಗಿ, ತಮ್ಮ ಊರಿನ ಪರಿಚಿತ ಹುಡುಗರೇ – ಗುರುತು ಮರೆಸುವ ಭಾರೀ ವೇಷಗಳೇನೂ ಇಲ್ಲದೆ – ರಂಗದ ಮೇಲೆ ಚಟುವಟಿಕೆ ತೊಡಗಿದ್ದುದು ಅವರನ್ನು ಆಕರ್ಷಿಸಿಕೊಂಡಿದ್ದಿರಬಹುದು. ನಾಟಕದ ಮಧ್ಯೆ ಮಧ್ಯೆ ಎಲ್ಲೆಲ್ಲೋ ಮಿನುಗುವ ಚೂರುಚೂರುಗಳು ಅವರ ಸ್ವಂತದ ಅನುಭವಗಲನ್ನು ಮೀಟಿ ಕೊಟ್ಟಿರಬಹುದು. ಒಟ್ಟಿನಲ್ಲಿ, ಕ್ರಮೇಣ ಅವರು ನಾಟಕದೊಳಕ್ಕೆ ಹೇಗೋ ಸೆಳೆದುಹೋದರು. ಬಿಗುಪೆಲ್ಲ ಮಾಯವಾಗಿ ಸಲೀಸಾಗಿ ಉಸಿರಾಡತೊಡಗಿದರು. ಮೆಲ್ಲಮೆಲ್ಲಗೆ ಅವರ ಮುಕ್ತ ಪ್ರತಿಕ್ರಿಯೆಗಳು ಹೊರಬರತೊಡಗಿದವು. ಹುಡುಗರು ಸ್ವಚ್ಛಂದತೆಗೆ ಮರಳಿಕೊಂಡರು.

ಯಕ್ಷಗಾನ ಪ್ರದರ್ಶನವನ್ನು ನೋಡುವಾಗ ಇರಬಹುದಾಗಿದ್ದ ಗೊತ್ತೆನ್ನುವ ಸ್ಥೈರ್ಯದಿಂದಲ್ಲ, ಆದರೂ ನಾಟಕದ ದ್ವಿತೀಯಾರ್ಧದಲ್ಲಿ ಬಿಗುಪಿಲ್ಲದೆ ಸಡಿಲುಗೊಂಡು ಲವಲವಿಕೆ ತುಂಬಿ ನೋಡಿದರು. ಮುಕ್ತ ಪ್ರತಿಕ್ರಿಯೆ ಹೊರಬಂದಿತು. ಹಾಡು-ಕುಣಿತ-ಹಾಸ್ಯಗಳ ರಂಜನೆಗೆ ಹಾರ್ದಿಕವಾಗಿ ಖುಷಿಪಟ್ಟರು. ಎರಡು ತಾಸಿನ ನಾಟಕ ಮುಗಿಯುವ ಹೊತ್ತಿಗೆ, ರಂಗ ಪ್ರೇಕ್ಷಾಂಗಣಗಳ ನಡುವೆ ಸಮೂಹ ಸಂದಂಧ ಸ್ಥಾಪಿತವಾಗಿತ್ತು. ಎಲ್ಲ ಕೂಡಿ ಊರಿನ ಒಂದು ಉತ್ಸವ ನಡೆಸುವಂತಿತ್ತು.

ನಾಟಕ ಮುಗಿದ ಮೇಲೆ ಅಹ್ತ್ತೆಂಟು ಪ್ರೇಕ್ಷಕರನ್ನು ಮಾತಾಡಿಸಿ ನಾಟಕದ ಬಗ್ಗೆ ಅಭಿಪ್ರಾಯ ಕೇಳಿದೆ. ಯಾರೂ ಸರಿಯಾಗಿ ಏನನ್ನೂ ಹೇಳಲೇ ಇಲ್ಲ. ಮುಜುಗರವಾಯಿತೋ, ನಾಚಿಕೊಂಡರೋ ಅಥವಾ ಮಾತಾಡಲು ಇನ್ನೂ ಮನಸ್ಸು ತಿಳಿಕೊಂಡಿರಲಿಲ್ಲವೋ – ಕೇಳಿದ್ದಕ್ಕೆ ಸರೀ ಉತ್ತರಿಸದೇ ತೊದಲಿದರು. ಲಾಯಕ್ಕಾಯಿತು – ಎಂಡರು. ಅದೆಂತದು ಅಂತ ತಿಳೀಲಿಲ್ಲ – ಅಂದರು. ನಮಗೆಲ್ಲಾ ಹೇಳೂಕೆ ಗೊತ್ತಾಗತ್ತಾ – ಎಂದು ಮರುಸವಾಲೆಸೆದರು. ಬಹುಪಾಲು ಗಲಿಬಿಲಿಗೊಂಡ ಹಾಗೆ ಮಾತಾಡಿದರು. ಅವರ ಆ ಗಲಿಬಿಲಿ ಆತಂಕಗಳಲ್ಲಿ ಈ ಪ್ರದರ್ಶನ ಎಲ್ಲೋ ಒಳಾಗೆ ಅವರನ್ನು ಕಲಕಿದೆ, ಅಲುಗಿಸಿಬಿಟ್ಟಿದೆ ಎಂಬುದು ಮಾತ್ರ ಸ್ಪಷ್ಟ ತಿಳಿಯುತ್ತಿತ್ತು.

’ಇಡೀ ಕನ್ನಡ ಪ್ರಾಂತ ತನ್ನ ನಗರ-ಪಟ್ಟಾಣ-ಗ್ರಾಂಅ-ವರ್ಗಸಮುದಾಯಗಳ ಮಧ್ಯೆ ರಂಗಭಾಷೆಯ ಇವತ್ತಿನ ಹೊಸ ನುಡಿಕಟ್ಟಿನಲ್ಲಿ ಮಾತಾಡಿಕೊಳ್ಳುವಂತೆ ಸಂಭಾಷಿಸಿಕೊಳ್ಳುವಂತೆ ಆಗಬೇಕು; ಅಂಥ ಉದ್ದೇಶದ ಅತಿ ಚಿಕ್ಕ ಆರಂಭ ಇದು’ – ಎಂದು ಸ್ರಣಸಂಚಿಕೆಯಲ್ಲಿ ಇಂಥ ಪ್ರಯತ್ನಗಳ ಉದ್ದೇಶ ಕುರಿತು ನಾನು ಬರೆದಿದ್ದೆ. ಆದರೆ ಬರೆಯುವ ಮಾತಿನ ತೂಕ ಬೇರೆ, ಅದೆಷ್ಟೇ ಅತ್ಯಲ್ಪವಾದ್ದಿರಲಿ ಜೀವಂತ ಮುಖಾಮುಖೀ ಅನುಭವದ ತೂಕವೇ ಬೇರೆ – ಅಲ್ಲವೇ?

ಈಗ ಇದನ್ನು ಬರೆಯುವಾಗ ನೆನಪಾಗುತ್ತದೆ – ಆವತ್ತು ನಡುರಾತ್ರಿಯ ಹೊತ್ತಿನಲ್ಲಿ ನಾವು ಗಂಗೊಳ್ಳಿಯ ದಡಬಿಟ್ಟು ದೋಣಿಯಲ್ಲಿ, ಆವರಿಸಿದ ಕತ್ತಲಲ್ಲಿ ಕಪ್ಪು ನೀರಿನ ಮೇಲೆ ತೇಲಿಕೊಂಡು ಕುಂದಾಪುರ ದಂಡೆಯ ಮಿನುಗುವ ದೀಪಗುಚ್ಛಗಳಿಗೆ ಅಭಿಮುಖವಾಗಿ ಹೊರಟಿದ್ದೆವು. ಎಲ್ಲರೂ ಮೌನವಾಗಿದ್ದರು. ತಮ್ಮಲ್ಲೇ ತಾವು ತುಂಬಿಕೊಂಡವರ ಹಾಗೆ. ಸಮುದ್ರದ ಗಾಳಿ ರಭಸದಿಂದ ಬಂದು ಅಪ್ಪಳಿಸುತ್ತಿದ್ದರೂ ಹಿತವಾಗಿತ್ತು. ಬೆಚ್ಚಗೆನ್ನಿಸುತ್ತಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.