(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.)
ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು ಮುದ್ದಿಸುತ್ತ ಮನವೇಲ “ಆಯಿತು. ಇನ್ನು ನೀನು ಬಸುರಿ” ಎಂದು ನಿಷ್ಕಾರುಣವಾಗಿ ವಿಚಿತ್ರವಾಗಿ ಹೆದರಿಸುತ್ತಿದ್ದಾನೆ.
ಮನೆ ಹಿತ್ತಿಲ ಬಾವಿಯ ಬಳಿ ಗೆಳತಿಯನ್ನು ಕರೆದು ಆಬೋಲೀನ ತನ್ನ ಕಿರಗಣೆ ಲಂಗ ಸಡಿಲಿಸಿ ತುಸು ಜಾರಿಸಿ ಗೆಳತಿಯ ಕೈ ಸೆಳೆದು ಕಿಬ್ಬೊಟ್ಟೆಗೆ ಹಿಡಿದು: ‘ಹೇಳೆ, ನಾನು ಬಸುರಿಯೇನೇ’ ಎಂದು ಆರ್ತವಾಗಿ ಕೇಳುತ್ತಿದ್ದಾಳೆ.
ಕಿಟಿಕಿಯಾಚೆ ರಸ್ತೆಯಲ್ಲಿ ಮರವೊಂದು ಭೋರೆಂದು ಅಡ್ಡ ಬಿದ್ದಿದೆ. ಇಡೀ ದಿನ ನಿಷ್ಕ್ರಿಯನಾಗಿ, ತನ್ನ ಕೋಣೆಯಿಂದ, ಈ ಅಡ್ಡಬಿದ್ದ ಮರದ ವಿಲೇವಾರಿಯನ್ನು ನೋಡುತ್ತಿರುವ, ವ್ಯಗ್ರ ತರುಣ ಪೀಜೀ(ಪೇಯಿಂಗ್ ಗೆಸ್ಟ್)ತನ್ನ ಕಾಮನೆಗಳ ಪ್ರಪಂಚದಲ್ಲಿ ವಿಹ್ವಲನಾಗುತ್ತಿದ್ದಾನೆ.
ಸಾವು ಬದುಕಿನ ನಡುವೆ ತುಯ್ಯುತ್ತ ಕಾಯಿಲೆಯಲ್ಲಿ ಮಲಗಿರುವವನ ಕಂಗಳಲ್ಲಿ ಮೇಲಿನ ಜಂತಿ ತೊಲೆಗಳು ವಿಲಕ್ಷಣ ಬಿಂಬಗಳನ್ನು ಮೂಡಿಸುತ್ತಿರುವಂತೆಯೇ: “ನೆರೆ ಮನೆಯ ಪೊಕ್ಕ ಬಂದಾನೋ” ಎಂದು ಕಿವಿ ತುಂಬಿದ ಕೂಗುವಿಚಿತ್ರ ಅದೃಷ್ಟದಬಾಗಿಲು ತೆರೆಯುತ್ತಿದೆ.“ಪಯಣ”ಕ್ಕೆ ಸ್ವಯಂ ಸಿದ್ಧನಾದ ನಾಯಕ ಸೂಟುಬೂಟಿನಲ್ಲಿ ಸೂಟಕೇಸನ್ನೂ ಕೈಲಿ ಹಿಡಿದು ಕೆರೆಗೆ ಕಾಯುತ್ತ ಮಂಚದ ಮೇಲೊರಗಿ ನಿದ್ದೆ ಹೋಗಿದ್ದಾನೆ.
ಜಡಿ ಮಳೆಯ ರಾತ್ರಿಯಲ್ಲಿ ಫಳೀರನೆ ಝಗ್ಗೆಂದು ಮಿಂಚಿಗೆ ಓಣಿ, ಅದರಲ್ಲಿ ನಿಂತ ಚಕ್ಕಡಿ ದೂರದಲ್ಲಿ ಸರಿದ ಕಂಬಳಿ ಕೊಪ್ಪೆ ಹೊದ್ದುಕೊಂಡವ ಎಲ್ಲ ಒಂದೇ ಚಣ ಕಂದು ಮತ್ತೆ ಕಗ್ಗತ್ತಲ್ಲಿ ಕರಗಿ ಹೋಗಿವೆ. “ಛಲದ ಅಮಾನುಷ ರೂಪದಂತಿರುವ ಪದ್ದಕ್ಕನ ಕೆಂಪು ಸೆರಗು ಸರಿದು ಅವಳ ಬೋಳಿಸಿದ ತಲೆಯ ಮೇಲಿನ ಕುರುಚುಲು ಕೂದಲು ವಿಕಾರವಾಗಿ ಕಣ್ಣುಕುಕ್ಕುತ್ತಿದೆ. ಮೈಯ್ಯಲ್ಲಿ ಪ್ರಾಯ ಮುಸುಗುಡುವ ದೇವಿ ಒಳಬರುತ್ತಲೇ ಹಿಂಬದಿಯಿಂದ ಬಾಗಿಲ ಚಿಲಕ ಹಾಕಿ ಕಣ್ಣ ಕಿಡಕಿಗಳನ್ನು ತೆರೆದು ಆಟಕ್ಕೆ ತೆರೆಯುತ್ತಿದ್ದಾಳೆ. ಕೋಟಿ ತೀರ್ಥದಲ್ಲಿ ಅಲೆಗಳೇಳುತ್ತಿವೆ. ಮೂರು ದಾರಿಗಳ ನಡುವೆ ನಿರ್ಮಲೆಯ ನಿಷ್ಕಳಂಕ ತಾರಿ ದೋಣಿ ತುಯ್ಯಿತ್ತಿದೆ.
ಅರವತ್ತರ ದಶಕದ ಈ ಅಚ್ಚಳಿಯದ ಚಿತ್ರಗಳನ್ನು ಮನದಲ್ಲಿ ಹೊತ್ತುಕೊಂಡು ನಾವು ಎಳೆಯರು, ನಾವು ಗೆಳೆಯರು, ಹೊಟ್ಟೆಪಾಡಿಗೆಂದು ಮುಂಬಯಿಗೆ ಬಂದಾಗ ಅದು ಎಪ್ಪತ್ತರ ದಶಕದ ಉತ್ತರಾರ್ಧ. ಬ್ಯಾಂಡ್ ಸ್ಟಾಂಡಿನ ಬಾಲ್ಕನಿಯ ಎದುರು ಅದೇ ಸಮುದ್ರ. ಹನೇ ಹಳ್ಳಿಯ ರೇವಗುಂದೆ ಇಲ್ಲಿ ಕಲ್ಲುಬಂಡೆಯಾಗಿದೆ. ಖೇತವಾಡಿಯ ಗಲ್ಲಿಗಳಲ್ಲಿ, ಕಾರ್ಪೊರೇಟ್ ಏಣಿಗಳಲ್ಲಿ, ಜನ ಅರಣ್ಯದ ಲಿಫ್ಟ್‌ಗಳಲ್ಲಿ ನರಬೇಟೆ, ಶಿಕಾರಿ. ಮನುಷ್ಯ ಮನುಷ್ಯನನ್ನು ಅಟ್ಟಿಸಿಕೊಂಡು ಹೋಗಿದ್ದಾನೆ. ಹತಾಶನಾಗಿ ಕೈ ಚೆಲ್ಲಿ ನಿಂತಿದ್ದಾನೆ.
ಗುಣವಾಗದ ಬೇನೆಗೆ ತುತ್ತಾಗುತ್ತಿರುವ ಹೊಟ್ಟೆಯ ಮಗಳು ಜಾನಕಿ ತನ್ನ ದುರಾದೃಷ್ಟದ ವಿವಿಧ ರೂಪಗಳಲ್ಲಿ ಕಲೆಗಾರನನ್ನು ಕಸುಬಿಗೆಳೆಸುತ್ತಿದ್ದಾಳೆ. ಸಮೂಹ ಬಲಾತ್ಕಾರಕ್ಕೊಳಗಾಗುತ್ತಾಳೆ, ಛಸ್ ನಾಲಾ ಗಣಿಯಲ್ಲಿ ಉಸಿರುಗಟ್ಟಿ ಸಾಯುತ್ತಾಳೆ. ಯಾವ ರೂಪದಲ್ಲಿ “ಆಕರ್ಷಕ ನೋವಾ”ಗ ಬಲ್ಲೆ ಎಂದು ಕತೆಗಾರನನ್ನು ಕೆಣಕುತ್ತ ಕತೆಯಾಗುತ್ತಾಳೆ ಹುಡುಗಿ. ಬೆಳಕನ್ನು ಕಟ್ಟಿ ಹಾಕಿ ‘ಓನ್’ ಮಾಡುವವರನ್ನೇ ನೋಡ್ತ ಬೇನ್ಯ ನಿಂತಿದ್ದಾನೆ. ಬಟ್ಟೆಯಲ್ಲಿ ಸುತ್ತಿಟ್ಟ ಹೆಣದಂತಿರುವ ಮೂಟೆಯನ್ನು ನಡುಗುವ ಕೈಗಳಿಂದ ಬಿಡಿಸಿದರೆ ಹೊರ ಬೀಳುತ್ತದೆ ಕಳುವಾದ ಆಳೆತ್ತರದ ದೇವತಾ ವಿಗ್ರಹ.
ಕತೆಯಲ್ಲಿ ಬಂದ ವೋಮೂ ಈಗ ಮನೆಗೂ ಬಂದು ಕದ ತಟ್ಟುತ್ತಿದಾನೆ. ಅಮಾಯಕ ಬಾಲಕ ಮಲಗಿದಲ್ಲೆ ಮಂಚಕ್ಕೆ ಕಟ್ಟಲ್ಪಟ್ಟಿದ್ದಾನೆ. ಗಿಡಗಳೊಂದಿಗೆ ಮಾತಾಡುತ್ತಾನೆ. ಹಠಾತ್ತನೆ ಒಂದು ದಿನ ಬಾಲ್ಕನು ಸೋಫಾಗಳ ತನ್ನ ಸುರಕ್ಷಿತ ಕೋಟೆಯನ್ನು ಮುರಿದು ಹೊರಬಿದ್ದು ಕೊಲೆಗೊಂಡ ಕಾರ್ಮಿಕ ಮುಂದಾಳುವಿನ ಚಿತಾಭಸ್ಮವನ್ನು ಆತನ ತಂದೆತಾಯಿಗಳ ಕೈಗಿತ್ತು, ಅವರ ದೇಖರೇಖಗೆಂದು ಅವರೆಡೆಯೇ ಉಳಿದು ಬಿಡುತ್ತಾನೆ.
ಎಂಬತ್ತರ ದಶಕದಲ್ಲಿ ಇದೇ ಅನ್ವೇಷಣೆ, ‘ಡೇರಿಂಗ್ ಅಕ್ಟ್’ ನಲ್ಲೇ ನಿಜವಾಗುವ ಸಂಕಲ್ಪ, ತೊಟ್ಟಿಯಲ್ಲಿ ಯಾರೋ ಎಸೆದು ಹೋದ ನವಜಾತ ಶಿಶುವಿನ ಸುತ್ತ ನೆರೆದು ನಾಗರಿಕರು ಚರ್ಚಾಕೂಟ ನಡೆಸಿದಾಗ ಮೊದಲು ಅದನ್ನು ಎದೆಗೊತ್ತಿಕೊಂಡು ನೀರು ಹನಿಸಲು ಮುಂದಾದ ಶ್ರೀಮತಿ ಬಾಸ್ಲಾ. ನಾಪತ್ತೆಯಾದ ಮಗ ಎಂತೆಂಥ ನರಕ ಕೂಪಗಳಲ್ಲಿ ಹಾಯುತ್ತಿರುವನೋ ಎಂದು ನಿದ್ದೆಯಿಲ್ಲದೆ ಹೊರಳಾಡಿ ತಾನೂ ಆ ಪಾಡು ಪಡಬೇಕೆಂದು ಕೊಳಗೇರಿಯಲ್ಲಿರಲು ಹವಣಿಸುವ ತಂದೆ. ಬೇರ್ಪಟ್ಟು ಛೇಧಿಸಲ್ಪಟ್ಟ ಅಣ್ಣ ತಮ್ಮಂದಿರ ನಡುವಿನ ನಿಗೂಢ ಅಗೋಚರ ಅನುಬಂಧದ ಪ್ರತೀಕದಂತಿರುವ ಹಕ್ಕಿಯ ಒಂಟಿ ಗರಿ.
ಹನೇಹಳ್ಳಿಯ ಹಳೆ ಮಾವಿನಮರದ ಮೇಲೆ ಮತ್ತು ದಾದರ್ ಹಾರ್ನಿಮನ್ ಸರ್ಕಲ್ ಮೇಲೆ ಒಂದೇ ಥರ ಬೀಳುವ ಅದೇ ಅರಿಷಿಣ ಬಣ್ಣದ ಬಿಸಿಲು. ತೊಂಬತ್ತರ ದಶಕದ ಆರಂಭದಲ್ಲಿ ಹಣದಾಮಿಷಕ್ಕೆ ಬಲಿಯಾಗದ ಪುರುಷೋತ್ತಮ, ತನ್ನನ್ನು ತೊರೆದ ತಾಯಿ ನಿಜಕ್ಕೂ ಹೆತ್ತ ತಾಯಲ್ಲ ಎಂಬ ಮಾಹಿತಿ ತಿಳಿದ ತಕ್ಷಣ ಕಿಂಚಿತ್ತೂ ವಿಚಲಿತನಾಗದೆ ‘ಸೋ ವಾಟ್’? ಅಂದು ಅಂತಃಕರಣದ ಹಾದಿಯಲ್ಲಿ ಮುನ್ನಡೆಯುತ್ತಾನೆ.
ಖೇತವಾಡಿಯ ಮೂವರು ಬಡ ಸೋದರಿಯರೂ ಗುಟ್ಟಾಗಿ ಒಬ್ಬನನ್ನೇ ಪ್ರೇಮಿಸತೊಡಗಿ ನಂತರ ಪರಸ್ಪರರಿಗಾಗಿ ತಂತಮ್ಮ ಪ್ರೇಮವನ್ನು ಹೊಸಕಿಕೊಳ್ಳುತ್ತಾರೆ. “ಆತ್ಮಹತ್ಯೆಯ ಚೀಟಿ” ಅಂತ ಎಲ್ಲರೂ ಅಂದುಕೊಂಡ ಒಡೆಯದ ಪತ್ರವೊಂದು ಅಂಚೆಗೆ ಹಾಕದ ಪ್ರೇಮ ಪತ್ರವಾಗಿತ್ತು ಎಂದು ತಿಳಿಯುವ ಹೊತ್ತಿಗೆ ಅಂತರಂಗದ ಕಿಟಕಿಗಳು ಹಾಳು ಬಿದ್ದುಹೋಗಿರುತ್ತವೆ. ಕೇಂದ್ರದ ವೃತ್ತಗಳೆಲ್ಲ ಊರ್ದ್ವಮುಖಿಯಾದ ಸ್ಪೈರಲ್ ಆಕಾರವನ್ನು ಪಡೆಯತೊಡಗುತ್ತವೆ.
ಕಳೆದ ಐವತ್ತು ವರ್ಷಗಳಿಂದ ತಮ್ಮ ಕಥೆ, ಕಾದಂಬರಿ, ಪ್ರಬಂಧಗಳ ಮೂಲಕ ಇಂಥ ಅಸಂಖ್ಯ ಸನ್ನಿವೇಶಗಳನ್ನು, ರೂಪಕ, ಪ್ರತಿಮೆಗಳನ್ನು ಕನ್ನಡ ಭಾಷೆಗೆ, ಮನಸ್ಸಿಗೆ ಕೊಡುತ್ತ ಬಂದಿರುವ ನಮ್ಮ ಪ್ರೀತಿಯ ಯಶವಂತ ಚಿತ್ತಾಲರಿಗೆ ಈ ಶ್ರಾವಣದಲ್ಲಿ ಎಪ್ಪತ್ತು ತುಂಬುತ್ತಿದೆ.
ಬಾಂದ್ರಾ ಸಮುದ್ರಕಿನಾರೆಯ ತಮ್ಮ ಎಂದಿನ ಅಚ್ಚುಕಟ್ಟಾದ ಪುಟ್ಟ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಕುಟುಂಬವತ್ಸಲ ಯಶವಂತ ಸದ್ದಿಲ್ಲದ ಆಗಸ್ಟ್ ೩ರಂದು ಎಪ್ಪತ್ತು ದಾಟುತ್ತಿದ್ದಾರೆ. ಹೇಗೆ ಆಚರಿಸುತ್ತಿದ್ದೀರಿ? ಅಂತ ಫೋನಿನಲ್ಲಿ ಕೇಳಿದರೆ “ಏನಿಲ್ಲ ಮನೆಮಂದಿಯೊಂದಿಗೆ ಬರೀತಾ ಇರೋ ಹೊಸ ಕತೆಯೊಂದಿಗೆ” ಎನ್ನುತ್ತಾರೆ. ವಿಜ್ಞಾನಿ, ಚಿಂತಕ, ಸಾಹಿತಿ, ಸೂಕ್ಷ್ಮಜ್ಞ, ಸ್ನೇಹಶೀಲ ಸಜ್ಜನ, ಶಿಸ್ತು ನೇಮನಿಷ್ಠೆಯ ಮಾನವತಾವಾದಿ, ಮುಂಬಯಿ ಕನ್ನಡ ಜೀವಿಗಳ ನೈತಿಕ ದೀಪಸ್ತಂಭದಂತಿರುವ ಪ್ರಿಯ ಯಶವಂತರಿಗೆ ಮಮತೆಯ ಅಭಿವಂದನೆಗಳು.
ಚಿತ್ತಾಲರ ಚಿತ್ತಲೋಕದ ಗಾಳಿ ಬೆಳಕು ಕನ್ನಡ ಸಂವೇದನೆಯನ್ನು ಹಸನುಗೊಳಿಸುತ್ತಿರಲಿ. ಅವರ ಕೃತಿಗಳ ಮಾನವೀಯ ತುಡಿತಗಳು ಮರಗಟ್ಟಿದ ಮನಗಳನ್ನು ಸ್ಪರ್ಶಿಸಲಿ. ಸುರಿಯುತ್ತಿರುವ ಈ ಎಪ್ಪತ್ತನೇ ಶ್ರಾವಣದ ಮಳೆ ಅವರ ಮುಂದಿನ ಕೃತಿಗಳ ಹಾದಿಗೆ ಹಸಿರು ನಿಶಾನೆ ಹಿಡಿಯಲಿ.
*****