ಕ್ಲಾಸ್ಟ್ರೋಫೋಬಿಕ್

ಚೌಕಟ್ಟು
ಅಡಿಗೆ ಮನೆ, ಹಾಲು, ಮಲಗುವ ಕೋಣೆ
ನೀಟು
ಚೌಕಟ್ಟು
ಮಂಚ…ಹಾಸಿಗೆ…ಹೊದಿಕೆ.
ಚಚ್ಚೌಕ
ಓದುವ ಪುಸ್ತಕ
ಮೇಜು
ಕುರ್ಚಿ
….ಆಲೋಚನೆಯಧಾಟಿ!
ಎಲ್ಲಕ್ಕೂ ಒಂದೊಂದು ಚೌಕಟ್ಟು.

ಬಾಗಿಲು, ಸೂರು, ಗೋಡೆ….
ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು
ಕಡೆಗೆ,
ವೆಂಟಿಲೇಟರಿನ ತುಂಡು ಆಕಾಶಕ್ಕೂ
ನಾಲ್ಕೇ ಮೂಲೆ!

ಭೂಮಿ ಗುಂಡಗಿರುವುದೇ ಅನುಮಾನ.

ಶಬ್ದಗಳು
ಹಾಳೆಯಾಚೆಗೆ ಜಿಗಿದು
ಅರ್ಥಗಳ ಚೌಕಟ್ಟು ಮೀರಿದರೆ
(ನಿಃ)ಶಬ್ದ ಆಕಾರಗಳ ಪರಿಧಿ ಬೇರೆ
ಅವಕಾಶದ ಅರಿವು ಅದಲು ಬದಲು!
ವಿ ಶಾ ಲ……!!
(ಎಷ್ಟೊಂದು ಜಾಗ ಮೂರಕ್ಶರದಲ್ಲಿ!!!)

ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ
ತಿಳಿ’ ನೀರು ತಳ ಕಾಣುವಹಾಗೆ
ಝುಳು ಝುಳು’ ಅದರ ಸದ್ದು
ಚಿಮ್ಮುವ’ ಅಲೆ ’ತಣ್ಣಗೆ’ ಗಾಳಿ.

ನದಿಗೆ ನೆರಳು ದಡದ ಮರ,
ನೀರ ಜೊತೆ ನಿಂತಲ್ಲೇ ಹರಿವ
ಹೂವು, ಎಲೆ, ರೆಂಬೆ ಕೊಂಬೆಗಳು.
ಕಾಲಿಟ್ಟರೆ ಸುತ್ತ ತರಂಗಗಳು,
ನೀರಿಗಿಳಿದು
ಅಂಗಾತ
ಕೈ ಕಾಲು ಬಡಿದು
ಈಸಿದರೆ,
ಹಾಗೇ
ನೀರ ತಳಕ್ಕೆ ಮುಳುಗಿದರೆ….
ಖಾಲಿ ಹಾಳೆಯ ಮೇಲೆ
ಹರಿವ ನದಿಯಲ್ಲಿ
ನಾನು
ಮುಳುಗಿದರೆ ನದಿ, ಹಾಳೇಯ ತಳಕ್ಕೆ;
ನುಂಗಿ ನದಿಯ ಹಾಡು
ಮತ್ತೆ ಬಿಳಿ ಹಾಳೆ
ಖಾಲಿ!
ಏನೂ ಆಗದ ಹಾಗೆ…. ಬೆಳ್ಳಗೆ!
ನದಿಯ ನೆನಪಿಗೊಂದು
ಅಮೃತಶಿಲೆಯ ಸ್ಮಾರಕದ ಹಾಗೆ.

ಹೀಗೆ,
ಹಾಳೆಯ ಮೇಲೆ
’ಹಾಡು’
ಹಚ್ಚೆ ಹೊಯ್ದ ಚಿತ್ತಾರದ ಹಾಗೆ
ಹಾಡು
ಹಾಳೆಯಿಂದೆದ್ದು ಶಬ್ದ,
ಅದರ ಹಿಂದೊಂದು ಶಬ್ದ;
ಶಬ್ದ
ಶಬ್ದಗಳ
ಸರಣಿ
ಗಾಳಿಯಲಿ ತೇಲಿ ಬಿಟ್ಟರೆ……..ಹಾಡು!

ಈಗ
ಹಾಳೆಯ ಮೇಲೆ
ಹಾಡು – ಶಬ್ದ
ಹಾಡು – ನಿಃಶಬ್ದ.

ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ,
ನನ್ನ ಬೊಗಸೆಯಲ್ಲೊಂದು ನದಿ.

ಮೇಲೆರಚಿದರೆ ಹನಿಹನಿಯಾಗಿ
ಚೆಲ್ಲುವುದು ಮೈ ಮೇಲೆ
ನದಿ – ಆಕಾಶ – ಮೋಡ – ಸೂರ್ಯ.

ಬೊಗಸೆ ನೀರು ಕುಡಿದರೆ, ಕುಡಿದಂತೆ
ನದಿ – ಆಕಾಶ – ಮೋಡ – ಸೂರ್ಯರನ್ನ

ಅಡಕ ಯಾರು ಯಾರೊಳಗೆ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ