ಆತನ ಹೆಸರು ಡಿಸೋಜ. ಆಗಾಗ ಇಂಗ್ಲಿಷ್ ಬಳಸಿದರೂ ಅಪ್ಪಟ ಕನ್ನಡಿಗ. ನಿರುದ್ಯೋಗಿಯಾದ ಆತ ಮೊನ್ನೆಯ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ. ಹೀಗಾಗಿ ಅವನಿಗೆ ನೂರಾರು ಜನ ಆರೆಸೆಸ್ ವ್ಯಕ್ತಿಗಳ ಪರಿಚಯವಿತ್ತು. ಈ ಆರೆಸೆಸ್‌ಗಳ ಬಗ್ಗೆ ಯಾರೇ ಏನೇ ಹೇಳಿದರೂ ಡಿಸೋಜನ ಪಾಲಿಗೆ ಮಾತ್ರ ಅವರು ಒಂದು ಬಗೆಯ ಮುಗ್ಧ ದೇಶಪ್ರೇಮಿಗಳಾಗಿದ್ದರು. ಖಾಕಿ ಚೆಡ್ಡಿ ಹಾಕುವುದು ಆರೆಸೆಸ್‌ಗಳ ಶಿಸ್ತನ್ನು ಹೆಚ್ಚಿಸುತ್ತದಾದರೂ ಅವರು ದೊಣ್ಣೆ ಹಿಡಿದು ಕವಾಯಿತು ಮಾಡುವುದು ಅವನಿಗೆ ನಗೆ ತರಿಸುತ್ತಿತ್ತು. ಆದರೆ ಅವರ ಉತ್ಸಾಹಕ್ಕೆ ಭಂಗ ತರಬಾರದೆಂದು ಆತ ನಗುತ್ತಿರಲಿಲ್ಲ. ಇದು ಡಿಸೋಜ ಮತ್ತು ಆರೆಸೆಸ್‌ಗಳ ಸಂಬಂಧ ಕುರಿತ ಮಾತಾಯಿತು. ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ಆತ ಬೆಂಬಲಿಸಿ ಪ್ರಚಾರ ಮಾಡಿದ ಅಭ್ಯರ್ಥಿ ಗೆದ್ದಿದ್ದ. ಆದರೆ ಆ ಅಭ್ಯರ್ಥಿಯ ಗೆಲುವಾಗಲಿ, ಆತನ ವಿಜಯೋತ್ಸವವಾಗಲಿ ಡಿಸೋಜನ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿರಲಿಲ್ಲ. ತನ್ನಂತೆಯೇ ಬೇರೆ ಪಕ್ಷಗಳಿಗೆ ಕೆಲಸ ಮಾಡಿದವರೂ ಹಾಗೇ ಇದ್ದರು; ಅವರಲ್ಲಿ ಕೆಲವರು ಹಿಂದುಳಿದ ಸೆಲ್, ಯುವಕರ ಸೆಲ್ ಇತ್ಯಾದಿಯನ್ನು ಸೇರಿಕೊಂಡು ನೆಮ್ಮದಿಯಾಗಿರುವಂತೆ ಕಾಣುತ್ತಿದ್ದರೂ ಡಿಸೋಜನಿಗೆ ಅವರ ಬಗ್ಗೆ ಅಸೂಯೆಯಾಗಿರಲಿಲ್ಲ. ಅನಗತ್ಯವಾಗಿ ರಾಜಕಾರಣಿಗಳೊಂದಿಗೆ ಇದ್ದು ಅರ್ಥಹೀನವಾಗಿ ಮಾತಾಡುವುದು, ವರ್ತಿಸುವುದು ನಾಚಿಕೆಗೇಡು ಎಂದು ಅವನಿಗೆ ಅನ್ನಿಸಿತ್ತು; ಅಂಥ ಚಟುವಟಿಕೆಗಳಿಗೆ ಭಂಡತನ ಬೇಕಾಗುತ್ತದೆ ಎಂದು ಅವನಿಗೆ ಅನ್ನಿಸಿತ್ತು. ಆದರೆ ಕಿತ್ತುತಿನ್ನುವ ಬಡತನ. ಅದನ್ನು ಹೇಗೋ ಮುಚ್ಚಿಕೊಳ್ಳಲು ಮುಗುಳ್ನಗೆ. ತನ್ನ ಮಾತು, ಕತೆ ಯಾವುದರಲ್ಲೂ ಡಿಸೋಜ ತನ್ನ ಅಸಹಾಯಕತೆಯನ್ನು ತೋರಿಸುತ್ತಿರಲಿಲ್ಲ. ಆದರೂ ಆರೆಸೆಸ್ ಮುಖ್ಯ ಸಂಚಾಲಕ ಶೇಷಗಿರಿ ಅವರಿಗೆ ತನ್ನ ಗೋಳುಗಳೆಲ್ಲ ಗೊತ್ತಾಗಿರುವುದಾಗಿ ಡಿಸೋಜನಿಗೆ ಅನುಮಾನವಿತ್ತು. ಅದಕ್ಕೆ ಸರಿಯಾಗಿ ಶೇಷಗಿರಿಯವರು ಒಂದು ಬೆಳಗ್ಗೆ, “ಜಾನ್ ಡಿಸೋಜ, ನೀನು ನನ್ನ ತಮ್ಮನ ತರಹ. ನನಗೀಗ ಅರವತ್ತು ವರ್ಷ. ಭಾರತವನ್ನು ರಾಮರಾಜ್ಯವನ್ನಾಗಿಸುವ ಕನಸು ನನ್ನ ವೃದ್ಧಾಪ್ಯದಲ್ಲಿ ಈಡೇರುವಂತಿದೆ. ನೀನು ಬೆಳಗ್ಗೆ ನಮ್ಮ ಆರೆಸೆಸ್ ತಂಡದ ಮುಂಚೂಣಿಯಲ್ಲಿದ್ದು ಮಂತ್ರ, ಹಾಡು, ವ್ಯಾಯಾಮ ಕಲಿಸುವುದರಲ್ಲಿ ನೆರವಾಗುವುದಾದರೆ ನಿನಗೆ ಐನೂರು ರೂಪಾಯಿ ಸಂಬಳ ಗೊತ್ತುಮಾಡತ್ತೇನೆ. ನೀನು ದಯವಿಟ್ಟು ಆಗುವುದಿಲ್ಲ ಅನ್ನಬೇಡ” ಎಂದು ಕಂಬನಿ ತುಂಬಿದ ಕಣ್ಣಿನಿಂದ ನೋಡುತ್ತಾ ಕೇಳಿದರು. ಡಿಸೋಜ ಅವರ ಕಾಲು ಮುಟ್ಟಿ ನಮಸ್ಕರಿಸಿ ‘ಆಮೇಲೆ ಹೇಳ್ತೀನಿ’ ಎಂದು ಬಂದುಬಿಟ್ಟ.
ಹೀಗಿದ್ದಾಗ ಒಂದು ದಿನ ಡಿಸೋಜಾನ ರೂಮಿನೆದುರು ಮುದಿ ವ್ಯಕ್ತಿಯೊಬ್ಬ ಎರಡು ಬುಟ್ಟಿಯಲ್ಲಿ ಹೂ ಹಿಡಿದು ಕೂಗುತ್ತಾ ಹೋಗುತ್ತಿದ್ದ. “ಗುಲಾಭಿ, ಸ್ಯಾವಂತ್ಗೆ, ಚಂಪಿಗೆ ಹೂವೂ” ಎಂದು ಕೂಗುವ ಆ ವ್ಯಕ್ತಿಯನ್ನು ಮಾತಾಡಿಸಬೇಕೆಂದು ಡಿಸೋಜಾಗೆ ಆಶೆಯಾಯಿತು. ಅವನು ರೂಮಿನಿಂದ ಹೊರಬಂದು ಆ ಮುದುಕನಿದ್ದಲ್ಲಿಗೆ ಬರುವಷ್ಟರಲ್ಲಿ ನಾಲ್ಕಾರು ಜನ ಹೆಂಗಸರು, ಹುಡುಗಿಯರು ಮುತ್ತಿಕೊಂಡು ಹೂವು ಕೊಳ್ಳುತ್ತಿದ್ದರು. ಚೌಕಾಶಿಯನ್ನು ಕೂಡ ಆತ ತಪ್ಪು ಕನ್ನಡದಲ್ಲಿ ಮಾಡುತ್ತಿದ್ದಂತೆ ಡಿಸೋಜಾಗೆ ಅನ್ನಿಸಿತು. ಆತ ಅಲ್ಲಿದ್ದವರಿಗೆ ಹೂವು ಮಾರಿ ಚಿಲ್ಲರೆ, ನೋಟುಗಳನ್ನು ಭದ್ರವಾಗಿ ಅಡ್ಡಪಂಚೆಯ ಒಳಗಿನ ಜೇಬಿಗೆ ತುರುಕಿಕೊಂಡು ಹೊರಟೊಡನೆ ಡಿಸೋಜಾ, ‘ಅಣ್ಣ, ನನಗೆ ಒಂದು ಡಜನ್ ಹೂವು ಕೊಡು’ ಎಂದು ಎರಡು ರೂಪಾಯಿ ಕೊಟ್ಟು ಗುಲಾಬಿ ಹೂಗಳನ್ನು ತೋರಿಸಿದ. ‘ಅವಕ್ಕೆ ಡಜನ್‌ಗೆ ಆರು ರೂಪಾಯಿ ಆಗ್ತದೆ’ ಎಂದು ಮುದುಕ ಹೇಳಿದೊಡನೆ ‘ಅರ್ಧ ಡಜನ್ ಕೊಡು’ ಎಂದು ಇನ್ನೊಂದು ರೂಪಾಯಿ ಸೇರಿಸಿ ಕೊಟ್ಟ. ಆ ಮುದುಕ ಹೊರಡುವುದಕ್ಕೆ ಮುಂಚೆ, “ಅಣ್ಣ, ನಿನಗೆ ದಿನಕ್ಕೆ ಎಷ್ಟು ಹಣ ಉಳೀತದೆ?” ಅಂದ.
“ಯಾಕೆ ತಮ್ಮಯ್ಯ?” ಎಂದ ಮುದುಕ.
“ಸುಮ್ನೆ ಕೇಳಿದೆ, ತೊಂದರೆ ಆದರೆ ಹೇಳಬೇಡ” ಅಂದ ಡಿಸೋಜ. ಅವನ ಧ್ವನಿಯ ಕಾತರ, ನಿರಾಶೆ ಮುದುಕನಿಗೆ ತಲುಪಿರಬೇಕು, “ಅದ್ಕೇನು ಸ್ವಾಮಿ, ಹೇಳ್ತೀನಿ. ನಿತ್ಯ ನನ್ನ ಮಗ ಅರವತ್ತು ರೂಪಾಯಿ ತರ್ತಾನೆ. ಇವತ್ತು ಅವನಿಗೆ ಜಡ್ಡು. ನಾನು ನಲವತ್ತು ಮಾಡಿದರೆ ಹೆಚ್ಚು. ವಯಸ್ಸಾತು” ಎಂದು ಆತ ಬುಟ್ಟಿ ಹಿಡಿದುಕೊಂಡು ಮುಂಚಿನಂತೆಯೇ ಕೂಗುತ್ತಾ ಹೊರಟುಹೋದ.
ಮರುದಿನ ಬೆಳಗ್ಗೆ ಪಾರ್ಕಿನಲ್ಲಿ ಹುಡುಗರಿಂದ ಹಾಡು ಹೇಳಿಸುತ್ತಾ, ಕಬಡ್ಡಿ ಆಡಿಸುತ್ತಿದ್ದ ಶೇಷಗಿರಿಯವರಿಗೆ ಕುತೂಹಲ ಹುಟ್ಟಿಸಿದ್ದು ಡಿಸೋಜನ ಹೊಸ ಅವತಾರ. ಹುಡುಗರನ್ನು ಅಲ್ಲೇ ಬಿಟ್ಟು ಪಾರ್ಕಿನ ಅಂಚಿಗೆ ಹೋಗಿ ಡಿಸೋಜಾಗೆ ಕಾಣಿಸದಂತೆ ಗಮನಿಸಿದರು. ಡಿಸೋಜ ಹೊಸದಾಗಿ ಇಸ್ತ್ರೀ ಮಾಡಿದ ಶರ್ಟು, ಶರಾಯಿ ಹಾಕಿಕೊಂಡು ಚೆನ್ನಾಗಿ ಕ್ರಾಪ್ ಬಾಚಿಕೊಂಡು ಸೈಕಲ್ ಮೇಲೆ ಎರಡು ಮಿಲಿಟರಿ ಬ್ಯಾಗ್‌ಗಳಲ್ಲಿ ಹೂವುಗಳನ್ನು ಇಟ್ಟುಕೊಂಡು, ‘ಜಾಸ್ಮಿನ್, ರೋಸ್, ಕ್ರಿಸಾಂತಿಮಮ್, ಎಕ್ಸಲೆಂಟ್ ರೋಸಸ್, ಮಲ್ಲಿಗೆ, ಕಾಕಡ’ ಎಂದು ಕೂಗುತ್ತಾ ಸೈಕಲ್ ನೂಕುತ್ತಿದ್ದ. ಶೇಷಗಿರಿಯವರಿಗೆ ಈತನನ್ನು ನೋಡಿ ಅಚ್ಚರಿಯಾದರೂ ಮಾತಾಡಿಸಲು ಹೋಗದೆ ಆರೆಸೆಸ್ ತಂಡವಿದ್ದಲ್ಲಿಗೆ ಹೋದರು. ಡಿಸೋಜ ಅವರನ್ನು ಗಮನಿಸಿರಲಿಲ್ಲ. ಸೈಕಲ್ ನೂಕುತ್ತಾ “ಜಾಸ್ಮಿನ್, ಮಲ್ಲಿಗೆ, ರೋಸಸ್, ಫ್ರೆಶ್ ಫ್ಲವರ್ಸ್” ಎಂದು ಕೂಗುತ್ತ ಹೋದ. ಅಲ್ಲಲ್ಲಿ ಹೆಂಗಸರು ಕುತೂಹಲದಿಂದ ಅವನನ್ನು ನಿಂತು ನೋಡಿದರೂ ಅವನ ಸೈಕಲ್ ನಿಲ್ಲಿಸಿ ಹೂವು ಕೊಳ್ಳುವ ಹಾಗೆ ಕಾಣಲಿಲ್ಲ. ಹುಡುಗಿಯರು ಏನೋ ವಿಚಿತ್ರ ಕಂಡಂತೆ ನಕ್ಕು ಹೋಗುತ್ತಿದ್ದರು. ತನ್ನಲ್ಲಿ ಯಾವುದು ವಿಚಿತ್ರ ಎಂದು ಡಿಸೋಜಾಗೆ ಹೊಳೆಯಲಿಲ್ಲ. ತುಂಬ ನಿಧಾನಸ್ಥ ಯುವಕನಾದ ಡಿಸೋಜಾಗೆ ಅಷ್ಟು ಬೇಗ ಕಾರಣ ಹೊಳೆಯುವುದೂ ಕಷ್ಟವಿತ್ತು. ನಾಲ್ಕಾರು ಮೈಲಿ ನಡೆದು ಬೇಸರಗೊಂಡ ಡಿಸೋಜಾ. ತರಕಾರಿ ಕೊಂಡು ಬ್ಯಾಗ್ ಹಿಡಿದು ಮನೆಯ ಗೇಟ್ ಅರಗು ಮಾಡಿ ಹೋಗುತ್ತಿದ್ದ ನಡುವಯಸ್ಸಿನ ಗೃಹಿಣಿಯೊಬ್ಬಳನ್ನು, “ಮೇಡಂ, ರೋಸಸ್ ತುಂಬ ಮಾರ್‍ವಲೆಸ್ ಆಗಿದೆ” ಅಂದ.
ಆಕೆ ಶಾಕ್ ಹೊಡೆದವಳಂತೆ ಕ್ಷಣ ನಿಂತು ಡಿಸೋಜಾನ ಮುಖ ನೋಡಿ, “ಬೇಡ, ಕ್ಷಮಿಸಿ” ಎಂದು ಮನೆ ಪ್ರವೇಶಿಸಲು ತಿರುಗಿದಳು. “ಮೇಡಂ, ತಮ್ಮ ಮಕ್ಕಳಿಗೆ ತುಂಬ ಇಷ್ಟವಾಗುತ್ತೆ. ದೆ ವಿಲ್ ರಿಯಲಿ ಲೈಕ್” ಅಂದ. ಆ ಗೃಹಿಣಿಯ ಮನಸ್ಸು ಕರಗಿದಂತೆ ಕಾಣಿಸಿತು. “ಏ ಬೇಬೀ, ಬೇಬೀ, ಬಾ ಇಲ್ಲಿ!” ಎಂದು ಮನೆಯೊಳಗಿದ್ದ ಬೇಬಿಯನ್ನು ಕರೆದಳು. ಬೇಬಿ ತನ್ನ ಪತಿಯೊಂದಿಗೆ ಬಂದಳು, “ಏನಮ್ಮ?” ಅಂದಳು.
“ನೋಡು ಈ ಹುಡುಗ ಹೂ ತುಂಬ ಚೆನ್ನಾಗಿದೆ ಅಂತಾನೆ, ಹೇಗಿದೆ ನೋಡು, ಬೇಕಾದ್ರೆ ತಗೋ” ಎಂದು ಹೇಳಿ ಡಿಸೋಜಾಗೆ, “ಮಲ್ಲಿಗೆ ಹೂವು ಇಲ್ಲವೇನಪ್ಪ?” ಎಂದು ಕೇಳಿದಳು.
“ಜಾಸ್ಮಿನ್ ಮೇಡಂ? ಪ್ಲೆಂಟಿ ಮೇಡಂ” ಎಂದು ಗಿರಾಕಿ ಸಿಕ್ಕ ಖುಷಿಗೆ ಡಿಸೋಜ ಹೂವುಗಳನ್ನು ಎತ್ತಿ ತೋರಿಸಿ, “ಹತ್ತು ಗ್ರಾಮ್‌ಗೆ ಎರಡು ರೂಪಾಯಿ” ಅಂದ.
ಬೇಬಿ ಮತ್ತು ಅವಳ ಪತಿ ಹೂವುಗಳನ್ನು ನೋಡುವುದಕ್ಕೆ ಬದಲು ಡಿಸೋಜಾನ ಡ್ರೆಸ್ಸು, ಸ್ಟೈಲ್ ಇಂಗ್ಲಿಷ್ ನುಡಿಕಟ್ಟು ಗಮನಿಸುತ್ತಿದ್ದರು. ಬೇಬಿ ಸ್ವಲ್ಪ ಹೆಚ್ಚು ಕುತೂಹಲದಿಂದ ನೋಡುತ್ತಿರುವುದನ್ನು ಗಮನಿಸಿದ ಅವಳ ಗಂಡ, “ನೋ ಗುಡ್. ಲೆಟ್ ಹಿಮ್ ಗೆಟ್ ಲಾಸ್ಟ್” ಎಂದು ಬೇಬಿಯ ಕೈ ಹಿಡಿದುಕೊಂಡು ಒಳಗೆ ಕರೆದುಕೊಂಡು ಹೋದ. ಅಷ್ಟರಲ್ಲಿ ಅವಳ ತಾಯಿ ಕೂಡ ಡಿಸೋಜಾನ ಸನ್ನಡತೆ, ಇಂಗ್ಲಿಷ್ ಮಾತಿಗೆ ದಂಗಾಗಿ “ಇವತ್ತು ಬೇಡ ಕಣಪ್ಪ, ಈಗ ಹೋಗು” ಎಂದು ಹೇಳಿ ಒಳಗೆ ಹೋಗಿಬಿಟ್ಟಳು.
ಸಿಕ್ಕ ಮೂವರು ಗಿರಾಕಿಗಳೂ ಹೀಗೆ ಕಾಸುಬಿಚ್ಚದೆ ಒಳಗೆ ಹೋಗಿದ್ದಕ್ಕೆ ನಿರಾಶಗೊಂಡ ಡಿಸೋಜ ಪ್ರಯತ್ನಿಸಿದರೆ ಸರಿಹೋಗುತ್ತದೆ ಎಂದು ತಿಳಿದು ಸೈಕಲ್ ನೂಕಿಕೊಂಡು ಮುಂದೆ ಹೋದ. ಹತ್ತಾರು ಜನ ಹೆಂಗಸರು, ಗಂಡಸರನ್ನು ಬೇಡಿಕೊಂಡು, “ಮೇಡಂ, ಸರ್, ಮಿಸ್ಟರ್” ಎಲ್ಲ ಬಳಸಿದರೂ ಯಾರೂ ವ್ಯಾಪಾರ ಮಾಡುವಂತೆ ಕಾಣಲಿಲ್ಲ. ಇದೇಕೆ ಹೀಗೆ ಎಲ್ಲೆಲ್ಲೂ ತನಗೆ ಹತಾಶೆಯೇ ಕಾದಿರುತ್ತದೆ ಎಂದು ದುಗುಡಗೊಂಡ ಡಿಸೋಜನಿಗೆ ತಾನು ಈ ಹೂವುಗಳನ್ನು ಕೊಳ್ಳಲು, ತನ್ನ ಬಟ್ಟೆ ಇಸ್ತ್ರೀ ಮಾಡಿಸಲು, ತನ್ನ ಹಳೇ ಸೈಕಲ್ ರಿಪೇರಿ ಮಾಡಿಸಲು, ಎಲ್ಲರಿಗೂ ಹೂವುಗಳನ್ನು ಪ್ರದರ್ಶಿಸಬಲ್ಲ ಬ್ಯಾಗ್‌ಗಳನ್ನು ಕೊಳ್ಳಲು ನಾನೂರು ರೂಪಾಯಿ ಖರ್ಚಾಗಿದ್ದು ನೆನಪಾಯಿತು. ಈ ನಿರುದ್ಯೋಗ, ಬಡತನ, ಅಸಹಾಯಕತೆ, ರಾಜಕೀಯ ಭಂಡತನ ಮುಂತಾದವುಗಳಿಂದ ತನಗೆ ಮುಕ್ತಿಯೇ ಇಲ್ಲವೆಂದು ಚಡಪಡಿಸಿದ. ಭಾರವಾದ ಎದೆ, ಹಸಿದ ಹೊಟ್ಟೆ, ನಿರಾಶೆ ಎಲ್ಲದರಿಂದ ಡಿಸೋಜಾನ ನಡಿಗೆ ಕೂಡ ನಿಧಾನವಾಗಿತ್ತು; ಕಾಲುಗಳನ್ನು ಎಳೆದುಕೊಂಡು ಮುಂದುವರಿಯುತ್ತಿದ್ದಂತಿದ್ದ. ಅಷ್ಟರಲ್ಲಿ ಅವನಿಗೆ ಶೇಷಗಿರಿ ರಾಯರು ಕಾಣಿಸಿದರು. ಅವರು ಡಿಸೋಜಾಗಾಗಿಯೇ ಕಾಯುತ್ತಾ ನಿಂತಿರುವಂತಿತ್ತು. ಅವರು ತಮಾಷೆ ಮಾಡಬಹುದೆಂದು ಅವರ ಮುಖವನ್ನು ವಿವರವಾಗಿ ನೋಡಿದ. ಶೇಷಗಿರಿರಾಯರು ನಗುತ್ತಿರಲಿಲ್ಲ. ವ್ಯಂಗ್ಯದ ಕೊಂಕು ಮುಖದಲ್ಲಿರಲಿಲ್ಲ; ಅವರ ಕಣ್ಣುಗಳಲ್ಲಿ ಅಪಾರ ಸಹಾನುಭೂತಿ ಇದ್ದಂತಿತ್ತು. ಅವರ ಕೈಯಲ್ಲೊಂದು ಬ್ಯಾಗ್ ಇತ್ತು.
“ಡಿಸೋಜ, ನಾನು ಹೀಗೆ ಕೇಳಿದೆ ಅಂತ ಬೇಸರ ಪಡಬೇಡ. ನೀನು ನಿಜಕ್ಕೂ ಹೂವು ಮಾರುವವನಾಗಬೇಕು ಅಂತ ಇದ್ದೀಯಾ?” ಅಂದರು.
ಹೌದೆಂದು ಡಿಸೋಜ ಗೋಣು ಅಲ್ಲಾಡಿಸಿದ.
“ನೀನು ಮುಂಚಿನಿಂದಲೂ ಸ್ವತಂತ್ರ ಪ್ರವೃತ್ತಿಯ ಮನುಷ್ಯ. ನಿನಗೆ ನಮ್ಮ ಆರೆಸೆಸ್ ಹಿಡಿಸಲಿಕ್ಕಿಲ್ಲ. ಆದರೆ ನೀನು ಹೀಗೇ ಇದ್ದರೆ ಹೂ ಮಾರುವುದು ಕಷ್ಟ. ನಿನ್ನನ್ನು ಇವತ್ತೆಲ್ಲ ಹಿಂಬಾಲಿಸಿ ನೋಡಿದ್ದೇನೆ. ಒಂದು ಪೈಸೆಯ ವ್ಯಾಪಾರವೂ ಆಗಿಲ್ಲ.”
“ಹೌದು” ಅಂದ ಡಿಸೋಜ.
“ನಾನು ಹೇಳಿದಂತೆ ಕೇಳು. ವ್ಯಾಪಾರವಾಗುತ್ತೆ” ಅಂದರು.
ಡಿಸೋಜ ಕಾತರದಿಂದ, “ಹೇಳಿ ಸರ್” ಅಂದ.
“ಈ ಕಡೆಗೆ ಬಾ” ಎಂದು ಶೇಷಗಿರಿಯವರು ಡಿಸೋಜಾನನ್ನು ಫುಟ್‌ಪಾತ್ ಪಕ್ಕದಲ್ಲಿ ಲಂಟಾನ ಪೊದೆಯ ಮರೆಗೆ ಕರೆದುಕೊಂಡುಹೋಗಿ, “ಈ ಪಂಚೆ, ಟವಲು, ಅಂಗಿ ಹಾಕಿಕೋ. ನಿನ್ನ ಶರ್ಟು ಶರಾಯಿಯನ್ನೆಲ್ಲ ಬ್ಯಾಗಲ್ಲಿ ಇಟ್ಟುಕೋ. ಮಲ್ಗೇ ಹೂವು, ಮೊಲ್ಲಿಗೆ ಹೂವು, ಕಾಕಡಾ ಮೊಲ್ಗೆ ಎಂದು ಆದಷ್ಟೂ ಹಳ್ಳಿಯವರ ತರ ಸಾವಂತಿಗೆ, ಗುಲ್ಗಾಬೀ, ಗುಲ್ ಗುಲ್ ಗುಲಾಬೀ ಅಂತ ಕೂಗು. ಆಗಾಗ ತಳವಾರ ತಿಮ್ಮಣ್ಣನ ತೋಟದ ಕೆಂಡ್ಸಂಪಿಗೆ… ತಿಮ್ಮಣ್ಣನ ಮೊಮ್ಮಗನ ಕಾಕಡಾ ಅಂತ ತಿಮ್ಮಣ್ಣನ ಮೊಮ್ಮಗನಂತೆ ಕೂಗು….” ಅಂದರು ಶೇಷಗಿರಿ.
“ಮೊ…..ಲ್ಲೆಗೆ….. ಕಾಕಡಾ ಮೊಲ್ಗೆ…… ಸಾವಂತಿಗೆ ಊವು, ಊವು….” ಅಂತ ಡಿಸೋಜ ರಿಹರ್ಸಲ್ ಮಾಡಿಕೊಳ್ಳತೊಡಗಿದ. ಶೇಷಗಿರಿಯವರು ಮುಂದುವರಿಸಿದರು: “ವರ್ಣಕ್ಕೆ ತಕ್ಕಂತೆ, ವೃತ್ತಿಗೆ ತಕ್ಕಂತೆ ಭಾಷೆ, ಆಕಾರ, ನಡತೆ ಇರಬೇಕು ಬ್ರದರ್…….. ನಿನ್ನ ಇಂಗ್ಲೀಷೆಲ್ಲ ತಲೆಹರಟೆ. ನಾಳೆ ಎಷ್ಟು ವ್ಯಾಪಾರಾಯ್ತು ಅಂತ ನನಗೆ ಬಂದು ಹೇಳು….. ನೂರು ರೂಪಾಯಿಗಿಂತ ಹೆಚ್ಚು ಲಾಭ ಬಂದಿದ್ದರೆ ಒಂದು ಹತ್ತು ಗ್ರಾಂ ನಶ್ಯ ತಗೊಂಡು ಬಾ….” ಅಂದರು.
“ನಿಮ್ಮ ಮಾತು ನನಗೆ ಅರ್ಥವಾಗ್ತಿಲ್ಲ ಸಾರ್” ಎಂದು ಗೋಗರೆದ ಡಿಸೋಜ.
“ಅಲ್ಲಾ ತಮ್ಮ, ಹೂ ಮಾರುವವರು ಬಡ ಬೋರೇಗೌಡನಂತೆ ತಪ್ಪುತಪ್ಪಾಗಿ ಕೂಗಬೇಕು; ಹೂವಿಗೆ ಊವ, ಹಾಲಿಗೆ ಆಲು, ಟ್ಯಾಂಕಿಗೆ ತ್ಯಾಂಕಿ, ಹಸುವಿಗೆ ಅಸ ಅಂತ ತನ್ನ ಜಾತಿಪದ್ಧತಿಗೆ ತಕ್ಕ ಹಾಗಿದ್ದರೆ ನಮ್ಮ ಜನಕ್ಕೆ ವಿಶ್ವಾಸ ಬರೋದು…. ನಾಳೆ ಈ ವಿಶ್ವಾಸ ಮೂಡಿಸಿ ನೋಡು” ಅಂದರು.
ಹೊಸ ಹುಮ್ಮಸ್ಸಿನಿಂದ ಹೊರಟ ಡಿಸೋಜಾಗೆ ಕುತೂಹಲ ಕೆರಳಿದ್ದರೂ ತಾನು ಯಾವುದೋ ವಿಚಿತ್ರ ಯಂತ್ರಕ್ಕೆ ಸಿಕ್ಕಿಹಾಕಿಕೊಂಡ ನೋವು ಮಾತ್ರ ಇತ್ತು. ಮರುದಿನ ಶೇಷಗಿರಿಯವರಿಗೆ ಮಡ್ಡಿನಶ್ಯ ಕೊಟ್ಟು ‘ಥ್ಯಾಂಕ್ಸ್’ ಹೇಳಿದಾಗ ಆ ಭಾವನೆ ತೀವ್ರವಾಗಿತ್ತು.
*****
ಜೂನ್ ೩, ೧೯೯೮