ಕುಂತಗೋಡು ವಿಭೂತಿ ಸುಬ್ಬಣ್ಣ (೧೯೩೨-೨೦೦೫)

ಪ್ರಕಾಶ್ ಬೆಳವಾಡಿ (ಕನ್ನಡಕ್ಕೆ : ಜಿ ವಿ ಶಿವಕುಮಾರ್)

ಪ್ರತಿ ಸಂಜೆ ಹೆಗ್ಗೋಡಿನ ನೀನಾಸಂ ಕಾರ್ಯಾಲಯದೆದುರಿನ ಬೆಂಚಿನ ಮೇಲೆ ಸುಬ್ಬಣ್ಣ, ಕೆ.ವಿ.ಸುಬ್ಬಣ್ಣ ಒಂದು ನಿಜವಾದ ಗ್ರಾಮ ಸಭೆಯನ್ನು ನಡೆಸುತ್ತಿರುವಂತಿತ್ತು. ಹೆಗ್ಗೋಡಿನ ಹಳ್ಳಿಗರು ಇಲ್ಲಿ ಅಸ್ಥಿರವಾದ ಮುಂಗಾರು, ದಿಢೀರ್ ವಿದ್ಯುತ್ ಕಡಿತಗಳು, ಈ ಬಾರಿಯ ಅಡಿಕೆ ಯೀಳ್ಡ್; ವಿಜ್ಞಾನ ಪತ್ರಿಕೋದ್ಯಮದ ಗುಣಮಟ್ಟದ ಅವನತಿ, ಬೇಂದ್ರೆ ಕಾವ್ಯದ ಅದ್ಭುತತೆ, ಬರ್ಗ್ಮನ್-ನ ವಲ್ಡ್ ಸ್ಟ್ರಾಬೆರೀಸ್, ವೀಣಾಪಾಣಿ ಚಾವ್ಲಾ-ರ ಬೃಹನ್ನಲಾ ಇತ್ಯಾದಿ ವಿಷಯಗಳ ಕುರಿತು ಚರ್ಚಿಸುತ್ತಿದ್ದರು.

ಸುಬ್ಬಣ್ಣ ಒಬ್ಬ ಕೃಷಿಕರು, ಸಮಾಜಿಕ ಕಾರ್ಯಕರ್ತರು, ಪರಿಸರವಾದಿ, ಅನೇಕ ಸಂಸ್ಥೆಗಳನ್ನು ಅದ್ಭುತವಾಗಿ ಸ್ಥಾಪಿಸಿ ನಡೆಸಿದವರು. ವ್ಯಾವಹಾರಿಕ ಕೌಶಲದಿಂದ ಮತ್ತು ಸಮೂಹವನ್ನು ನೇತೃತ್ವಕ್ಕೆ ಪ್ರಚುರಪಡಿಸುವ ವಿಶೇಷ ಗುಣದಿಂದ – ಸುಬ್ಬಣ್ಣ ನೀನಾಸಂ ಸಂಸ್ಥೆಯನ್ನು ಕಟ್ಟಿ ಉಳಿಸಿ…. ಸುಬ್ಬಣ್ಣರಿಗೆ ಮನಿಲಾದಲ್ಲಿ ಸಂದ ೧೯೯೧ ಮ್ಯಾಗ್ಸೆಸೆ ಪ್ರಶಸ್ತಿ ಪತ್ರದ ಒಕ್ಕಣೆ ಈ ಮುಂತಾಗಿ ಸಾಗುತ್ತದೆ.

ಅವರ ಬಹುಮುಖ ವ್ಯಕ್ತಿತ್ವದ ಸಮಗ್ರತೆಯನ್ನು ಮನ್ನಣೆಗಾಗಿ ಪ್ರತ್ಯೇಕಿಸುವಾಗಿನ ಕಷ್ಟವನ್ನು ಈ ಒಕ್ಕಣಿಕೆ ಗುರುತಿಸುತ್ತದೆ. ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸೃಜನಶೀಲ ಸಂವಹನ ಕಲೆಗಳಿಗಾಗಿ ೧೯೯೧-ರ ಮ್ಯಾಗ್ಸೆಸೆ ಪ್ರಶಸ್ತಿಗೆ ಕೆ.ಸುಬ್ಬಣ್ಣನವರನ್ನು ಆರಿಸುವಲ್ಲಿ ಮಂಡಳಿಯು ಪ್ರಪಂಚದ ಶ್ರೇಷ್ಠ ಚಲನಚಿತ್ರಗಳಿಂದ ಮತ್ತು ಜೀವಂತ ರಂಗಭೂಮಿಯ ಭವ್ಯ ಕೌತುಕಗಳಿಂದ ಗ್ರಾಮೀಣ ಕರ್ನಾಟಕವನ್ನು ಸಂಪದ್ಭರಿತಗೊಳಿಸಿದ ಸುಬ್ಬಣ್ಣನವರ ಕೊಡುಗೆಯನ್ನು ಮನ್ನಿಸುತ್ತದೆ ಎಂದು ಆ ಒಕ್ಕಣಿಕೆ ಪೂರ್ತಿಯಾಗುತ್ತದೆ.

ಸುಬ್ಬಣ್ಣ ಒಂದು ಊರಾಗಿದ್ದರು

ಸುಬ್ಬಣ್ಣನವರನ್ನು ಅವರ ವ್ಯಕ್ತಿತ್ವದಿಂದ ಪ್ರತ್ಯೇಕಗೊಳಿಸಿ ಕೇವಲ ಕಲಾವಿದರನ್ನಾಗಿ ಗಮನಿಸುವುದು ಅಸಾಧ್ಯವಾದ ಕೆಲಸ. ಹೆಗ್ಗೋಡಿನ ಹಿನ್ನೆಲೆಯಿಂದಲ್ಲದೇ ಬೇರೆ ಹೇಗೂ ಅವರನ್ನು ಗುರುತಿಸುವುದು ಅವರ ಸಾಧ್ಯತೆಯನ್ನೇ ನಿರಾಕರಿಸಿದಂತೆ. ಬಹುವರ್ಷಗಳ ಅವರ ಗೆಳೆಯರಾದ ಮತ್ತು ಸಮಕಾಲೀನ ಚಿಂತಕರಾದ ಬರಹಗಾರ ಯು.ಆರ್. ಅನಂತಮೂರ್ತಿ ಸುಬ್ಬಣ್ಣನವರಿಗೆ ಗೌರವವನ್ನರ್ಪಿಸುತ್ತಾ ಸುಬ್ಬಣ್ಣ ಕೇವಲ ರಂಗಭೂಮಿಗೆ ಸಂಬಂಧ ಪಟ್ಟವನಾಗಿರಲಿಲ್ಲ. ಅವನೇ ಒಂದು ಊರು. ಸುಬ್ಬಣ್ಣ ಒಂದು ಸಮುದಾಯವೇ ಆಗಿದ್ದರು, ಒಂದಿಡೀ ಜೀವನ ಶೈಲಿಯ ಪ್ರತಿನಿಧಿ.

ಸುಬ್ಬಣ್ಣ ಮತ್ತವರ ಜೀವನ ನಮ್ಮ ಮುಂದೆ ಒಂದು ಮುಖ್ಯವಾದ ಜಿಜ್ಞಾಸೆಯನ್ನೆತ್ತಿದೆ. \\\’ವೃತ್ತಿಪರ ಕಲಾವಿದ\\\’ ಎಂಬೊಂದು ಪರಿಕಲ್ಪನೆಯ ಸತ್ಯವೆಷ್ಟು? ಸ್ವತಃ ಸುಬ್ಬಣ್ಣ ಈ ಪರಿಕಲ್ಪನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿರಲಿಲ್ಲ. ತಮ್ಮ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಾಗ, ದೂರದರ್ಶನದಲ್ಲಿನ ಸಂವಾದದಲ್ಲಿ ಸಮಸ್ಯೆಯೊಂದನ್ನೆತ್ತಿದರು. ನೋಡಿ, ಬರೆಯುವ ಕಾಯಕಕ್ಕೆ ಬದ್ಧನಾಗಿರುವುದನ್ನು ನಾನೆಂದೋ ತ್ಯಜಿಸಿದ್ದೇನೆ. ಆದರೆ, ಈ ಕಾಯಕಕ್ಕೆ ಬದ್ಧರಾಗಿರುವ ಅನೇಕ ಬರಹಗಾರರಿರುವುದು ನನಗೆ ಗೊತ್ತಿದೆ. ಆ ಅರ್ಥದಲ್ಲಿ, ಅವರು ಪೂರ್ತಿ ಬರಹಗಾರರು. ಪ್ರಾಯಶಃ, ಈ ಪ್ರಶಸ್ತಿಗಳಿಗೆ ಅವರೇ ನಿಜವಾದ ಅರ್ಹರು…ಆದರೆ, ನನ್ನೀ ಕೃತಿಯ ಬರಹಗಾರನಾಗಿ ನನ್ನ ಮಹತ್ವವನ್ನು ನಾನು ಕಡಿಮೆಗೊಳಿಸಲಾರೆ….

ಆತ್ಮವಿಶ್ವಾಸದ ವ್ಯಕ್ತಿಯಾಗಿದ್ದ ಸುಬ್ಬಣ್ಣ ತಮ್ಮ ಸ್ವಮೌಲ್ಯವನ್ನು ಕುಂಠಿತಗೊಳಿಸಿಕೊಳ್ಳುವಂಥವರಲ್ಲವೇ ಅಲ್ಲ. ಸಾಹಿತಿಯಾಗಿ ತಾವು ಎಂತಹ ಮಹತ್ವದವರು ಎನ್ನುವದು ಅವರಿಗೆ ಗೊತ್ತಿರುವದಕ್ಕೆ ಸುಸ್ಥಿರವಾದ ಕಾರಣಗಳಿವೆ. ಸಮಕಾಲೀನ ಸಾಂಸ್ಕೃತಿಕ ಪ್ರಪಂಚದ ಎಲ್ಲರೂ ಬರಹಗಾರರಾಗಿ ಸುಬ್ಬಣ್ಣನವರ ಮೇಲೆ ಅಪಾರ ಗೌರವವಿಟ್ಟುಕೊಂಡಿದ್ದರು. ಇದರಷ್ಟೇ ಮಹತ್ವದ್ದೆಂದರೆ, ಅವರಿಗೆ ೨೦೦೧-ರಲ್ಲಿ ಕಾಳಿದಾಸ ಸಮ್ಮಾನ್ ಮತ್ತು ಇತ್ತೀಚೆಗೆ ಪದ್ಮಶ್ರಿ ದೊರೆತಿದ್ದರೂ, ತಮ್ಮ ಸಾಹಿತ್ಯಕ, ರಂಗಕಲಾವಿದ, ಶಿಕ್ಷಣ ತಜ್ಞ, ಬೌದ್ಧಿಕ ಮಹತ್ತನ್ನು ಚರ್ಚಿಸುವ, ಒರೆಗೆ ಹಚ್ಚುವ ಕೆಲಸಕ್ಕೆ ಯಾರನ್ನೂ ಪ್ರಚುರಪಡಿಸಲಿಲ್ಲ.

ಪ್ರತಿ ವ್ಯಕ್ತಿಯೂ ವಿಶಿಷ್ಟ ಮತ್ತು ಸ್ವಾತಂತ್ರನಾಗಲು, ಮುಕ್ತನಾಗಲು ಸತತ ಪ್ರಯತ್ನಿಸುತ್ತಾನೆ, ಅಲ್ಲದೇ ಸಮುದಾಯಗಳು ಮತ್ತು ಪರಿಸರಗಳು ಇಂತಹ ವ್ಯಕ್ತಿಗಳ ನಡುವಿನ ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತಾ ಹೋಗುತ್ತವೆ ಎನ್ನುವುದು ಸುಬ್ಬಣ್ಣನವರ ಜೀವನ-ವ್ಯಕ್ತಿತ್ವಗಳ ಮೂಲ ಕಾಳಜಿಯಾಗಿತ್ತೆನ್ನಿಸುತ್ತದೆ. ಹೊರಗಿನ ಮತ್ಯಾರಿಂದಲೂ ಮಥ್ಯಾವುದರಿಂದಲೂ ಒಬ್ಬ ವ್ಯಕ್ತಿಯನ್ನು ವಿವರಿಸುವುದು ಅವಶ್ಯವಿಲ್ಲ. ಯಾವುದೇ ರೀತಿಯ ಮಾನವ್ಶಾಸ್ತ್ರಜ್ಞರು, ಅಬ್ಸರ್ವರ್ಗಳು, ಪರದೇಶದವರು ತಮಗನ್ಯವೆನಿಸಿದ ಜೀವನಶೈಲಿಗಳನ್ನು, ನಾಗರೀಕತೆಗಳನ್ನು ಅರ್ಥೈಸಲು, ವಿವರಿಸಲು ಯತ್ನಿಸಿದಾಗಲೆಲ್ಲಾ ಸುಬ್ಬಣ್ಣ ತೀಕ್ಷ್ಣವಾಗಿ ಪ್ರತಿಕ್ರಯಿಸುತ್ತಿದ್ದರು. ಪೀಟರ್ ಬ್ರೂಕ್ ಮಹಾಭಾರತದ ಖಚಿತ ವಿವರಣೆಗೆ ತಮ್ಮ ರಂಗಪ್ರಸ್ತುತಿಯಲ್ಲಿ ಯತ್ನಿಸಿದಾಗ ಅದು ಸಾಂಸ್ಕೃತಿಕ ಕೃತಿಚೌರ್ಯವೆಂದು ಸುಬ್ಬಣ್ಣ ನಂಬಿ ಪ್ರತಿಭಟಿಸಿದರು. ಯಾವುದೇ ಭೌಗೋಳಿಕ ಪ್ರದೇಶವನ್ನು ಮಿಡಲ್-ಈಸ್ಟ್ ಅಥವಾ ಫ಼ಾರ್-ಈಸ್ಟ್ ಎಂದು ಮುಂತಾಗಿ ಗುರುತಿಸಿದಾಗ ಅವರ ತಾತ್ವಿಕ ಪ್ರಶ್ನೆ ಯಾರ ದೃಷ್ಟಿಯಲ್ಲಿ? ಎಂದಾಗಿರುತ್ತಿತ್ತು.

ಹೆಗ್ಗೋಡನ್ನು ಮೂರನೇ ವಿಶ್ವದ ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಲ್ಲೋಕಿನ ಒಂದು ಹಳ್ಳಿಯಾಗಿ ಗುರುತಿಸುವ ಸಾಧ್ಯತೆಯಿರುವುದನ್ನು ಒಪ್ಪುವುದಕ್ಕೆ ಸುಬ್ಬಣ್ಣ ಸಿದ್ಧವಿರಲಿಲ್ಲ. ಅವರಿಗೆ, ಹೆಗ್ಗೋಡು ವಿಶ್ವದ ಕೇಂದ್ರವಾಗಿತ್ತು. ಮಿಕ್ಕ ಎಲ್ಲಾ ರೆಫ಼ರೆನ್ಸ್-ಗಳು ದೂರಗಳು ಅಲ್ಲಿಂದಲೇ ಮೊದಲಾಗುತ್ತಿದ್ದವು. ಕೊಡುಕೊಳ್ಳುವಿಕೆಯಿರುವ ಪ್ರಪಂಚದಲ್ಲಿ, ಆಲೋಛನೆಗಳು, ಪ್ರಶಸ್ತಿಗಳು ಪರಸ್ಪರ ಒಪ್ಪಿಗೆಯಿಂದ ಸಾಧ್ಯವಾಗುತ್ತದೆ. ಪ್ರಶಸ್ತಿಯೊಂದು ತನ್ನ ಪ್ರದಾನದೊಂದಿಗೆ ತನ್ನನ್ನು ತಾನೇ ಆದರಿಸಿಕೊಳ್ಳುತ್ತದೆ. ವ್ಯಕ್ತಿಗಳು ಒಳಗೊಳ್ಳುವಿಕೆಯಿಂದ ತಮ್ಮನ್ನು ತಾವೇ ಆದರಿಸಿಕೊಳ್ಳುತ್ತಾರೆ. ಹೆಗ್ಗೋಡನ್ನು ಒಳಗೊಂಡಿರುವುದರಿಂದ ಕರ್ನಾಟಕ ಹೆಮ್ಮೆಪಟ್ಟುಕೊಳ್ಳಬಹುದಾಗಿದೆ. ಅಲ್ಲದೇ ಸುಬ್ಬಣ್ಣ ಹೇಳಿದಂತೆ ಇಡೀ ವಿಶ್ವವನ್ನು ಪರಿಭಾವಿಸಲು ನನಗೆ ಸಾಧ್ಯವಾಗುವುದು ಕನ್ನಡದಿಂದ.

ತಮ್ಮ ಸ್ವಮೌಲ್ಯವನ್ನು ಅರಿತವರಾಗಿರುವುದು ತಮ್ಮ ಆರ್ಥಿಕ ಸುಭದ್ರತೆಯಿಂದಾಗಿ ಸುಬ್ಬಣ್ಣನವರಿಗೆ ಸಾಧ್ಯವಾಗಿದೆ ಎಂದು ವಾದಿಸಬಹುದಾಗಿದೆ. ಅಡಿಕೆ ಕೃಷಿಕಾರರಾದ ಸ್ಥಿತಿವಂತರ ಮಕ್ಕಳಾಗಿ ಸುಬ್ಬಣ್ಣ ಜನಿಸಿದರು. ಆದರೆ ಈ ವಾದ ತೆಳುವೂ ಸ್ವಲ್ಪ ಮಟ್ಟಿಗೆ ಅಸಂಗತವೂ ಆಗಿದೆ. ಸಾಮಾನ್ಯ ಪ್ರಾಪಂಚಿಕ ನಡಾವಳಿಯೆಂದರೆ ಶ್ರೇಷ್ಟರ ಪಟ್ಟಿಯಲ್ಲಿ, ಅತಿ ದೊಡ್ಡ ವ್ಯಾವಹಾರಿಕ ಸಂಸ್ಥೆಗಳಲ್ಲಿ, ಸಾಮಾಜಿಕ ಶ್ರೇಣಿಯಲ್ಲಿ ಜಾಗಪಡೆಯುವುದು, ಗುರುತಿಸಿಕೊಳ್ಳುವುದು. ಸುಬ್ಬಣ್ಣನವರ ವಿಶ್ವದಲ್ಲಿ, ಅವರೂ ಅದಾಗಲೇ ಆಗಿಬಿಟ್ಟಿದ್ದರು.

ಮ್ಯಾಗ್ಸೆಸೆ ಪ್ರಶಸ್ತಿಯ ಒಕ್ಕಣಿಕೆ ಹೀ ಮೊದಲುಗೊಳ್ಳುತ್ತದೆ ಇತ್ತೀಚಿನ ವರ್ಷಗಳಲ್ಲಿ ಏಷಿಯಾದ ಸ್ಥಿತಿವಂತ ನಗರವಾಸಿಗಳು ತಮ್ಮ ಗ್ರಾಮೀಣ ಕಲೆಗಳತ್ತ ದೃಷ್ಟಿಹಾಯಿಸಿದ್ದಾರೆ. ಗ್ರಾಮೀಣ ಕೈಗಾರಿಕೆಗಳ, ಕಲಾಕೃತಿಗಳಿಂದ ತಮ್ಮ ಮನೆಗಳನ್ನು ಸಿಂಗರಿಸಿದ್ದಾರೆ. ಈ ಮಧ್ಯೆ, ಪಾಲೀಷ್ ಮಾಡಲಾದ ಗ್ರಾಮೀಣ ನೃತ್ಯ ಮತ್ತು ರಂಗಕೃತಿಗಳು ಟಿ.ವಿ. ಕಾರ್ಯಕ್ರಮಗಳಲ್ಲಿ ಮೂಡುತ್ತವೆ ಮತ್ತು ಅಧಿಕೃತ ವೈಭವೋಪೇತ ಕಾರ್ಯಕ್ರಮಗಳ್ಳಿ ಶೋಭಾಯಮಾನವಾಗಲಿ ತೊಡಗಿವೆ. ಆರೆ ನಗರಜೀವನದ ಅಯುತ್ತಮ ಅಂಶಗಳು ಗ್ರಾಮೀಣ ಪ್ರಪಂಚಕ್ಕೆ ಪರಿಚಯಗೊಳ್ಳುವುದು ಅತಿ ವಿರಳ. ಆಧುನಿಕ ನಾಟಕ ಮತ್ತು ಸಿನೆಮಾವನ್ನು ದಕ್ಷಿಣ ಭಾರತದ ಗ್ರಾಮೀಣ ಪ್ರಪಂಚಕ್ಕೆ ಪರಿಚಯಿಸುವುದರ ಮೂಲಕ ಕೆ.ವಿ. ಸುಬ್ಬಣ್ಣ ಕಲೆಯ ಸಾರ್ವತ್ರಿಕತೆಯ ಕುರಿತು ಮಹತ್ತರವಾದ ನಿದರ್ಶನವೊಂದನ್ನು ಸೃಷ್ಟಿಸಿದ್ದಾರೆ.

ಆಳವಾದ ಮಾತುಕತೆ
ಕೆಲನೂರು ಜನರಾಗಿರುವ ಹೆಗ್ಗೋಡಿನ ಗ್ರಾಮಸ್ಥರು ಅರಿಸ್ಟಾಟಲ್ ಮತ್ತು ಕುರೋಸವಾ-ನ ಕುರಿತು ಆಳವಾದ ಚರ್ಚೆ ನಡೆಸಲು ಸಮರ್ಥರಾಗಿರುವುದು ಒಂದು ಮಹತ್ವದ ಸಂಗತಿ ಎನ್ನುವುದೇನೋ ನಿಜ. ಅದಕ್ಕಿಂತ ಹೆಚ್ಚು ಮನಮುಟ್ಟುವ ವಿಷಯವೆಂದರೆ, ತಮ್ಮ ಗ್ರಾಮದ ಮತ್ತು ಅದರ ಜೀವನ ರೀತಿಯ ಕುರಿತು ಅವರಿಗಿರುವ ನಿಜ ಪ್ರೀತಿ, ಹೆಮ್ಮೆಗಳು. ಈ ಸಮುದಾಯಕ್ಕೆ, ಬೆಂಗಳೂರೇನೂ ಮರೀಚಿಕೆಯೆನ್ನಿಸುವ ಸಾಧ್ಯತೆಯಿಂದ ಉಂಟಾಗುವ ಆಕರ್ಷಣೆಯಲ್ಲ. ಪ್ರಪಂಚದ ನಗರಗಳು ತಮ್ಮದೇ ಶಿವರಾಮ ಕಾರಂತ ರಂಗಮಂದಿರದಲ್ಲಿ ನೋಡುವ ಅನೇಕ ಸಿನೆಮಾ ಮತ್ತು ನಾಟಕಗಳ ಮೂಲಕ ಅವರಿಗೆ ಹತ್ತಿರವಾಗಿವೆ. ಹೆಗ್ಗೋಡಿನಲ್ಲಿ ಜೀವಂತ ಒಡಾಡುವ ಈ ಜನರು ಸಮಾನವಾದ ಒಂದು ವೇದಿಕೆಯಿಂದ ಇನ್ನಿತರ ನಾಗರೀಕತೆಗಳು ಮತ್ತು ಜೀವನರೀತಿಗಳನ್ನು ಗಮನಿಸುತ್ತಾರೆ.

ಹೆಗ್ಗೋಡೇನೂ ಎಲ್ಲದರಿಂದ ಪ್ರತ್ಯೇಕಗೊಂಡಿರುವ ದಂತಗೋಪುರವಲ್ಲ. ಅಕ್ಷರ ಪ್ರಕಾಶನ ಹೊಸ ಸಾಹಿತ್ಯಕ ಕೃತಿಗಳನ್ನು ಪರಿಚಯಿಸುತ್ತದೆ. ಅದರ ತಿರುಗಾಟ ರೆಪರ್ಟರಿ ಪ್ರತಿ ವರ್ಷವೂ ತನ್ನ ಹೊಸ ರಂಗಕೃತಿಗಳ ಪ್ರಸ್ತುತಿಗಾಗಿ ರಾಜ್ಯದ ಪ್ರತಿ ಜಿಲ್ಲೆಯನ್ನು ದರ್ಶಿಸಿ ಬರುತ್ತದೆ. ಸುಬ್ಬಣ್ಣನವರ ಮಗನಾದ ಕೆ.ವಿ.ಅಕ್ಷರ ನಮ್ಮೆಲ್ಲರ ಮೇಲೆ ಪರಿಣಾಮ ಬೀರುವ ಸಮಕಾಲೀನ ಮಹತ್ವದ ವಿಷಯಗಳ ಕುರಿತು ಬರೆಯುತ್ತಾರೆ, ಎಲ್ಲೆಡೆ ಪ್ರವಾಸ ಕೈಗೊಳ್ಳುತ್ತಾರೆ. ಸದಾಕಾಲ ಮರುಹುಟ್ಟು ಪಡೆಯುತ್ತಿರುವ ಒಂದು ಸೃಜನಶೀಲ ಪ್ರಕ್ರಿಯೆಯ ಭಾಗವಾಗಿ.

ಸುಬ್ಬಣ್ಣನವರ ನಿರ್ಗಮನದಿಂದ, ಒಂದು ಸಮುದಾಯ-ವ್ಯಕ್ತಿ-ಪ್ರತಿಭೆಯ ಇನ್ನಿಲ್ಲದಿರುವಿಕೆಯ ಖಾಲಿತನವನ್ನು ಕನ್ನಡ ಸಾಂಸ್ಕೃತಿಕ ಪ್ರಪಂಚ ಅನುಭವಿಸುವಂತಾಗಿದೆ. ನೋಡಲು ಸಣ್ಣಗೆ, ಚಿಕ್ಕದಾಗಿ ಕಾಣುತ್ತಿದ್ದ, ಕನ್ನಡಕಧಾರಿ, ಗಡ್ಡಧಾರಿ, ಸದಾ ಅಡಿಕೆ ಮತ್ತು ವೀಳ್ಯದೆಲೆಯುಳ್ಳ ಕೈಚೀಲದೊಂದಿಗೆ ಬಿಸಿಯಾಗಿರುತ್ತಿದ್ದ, ಹೊಸ ಪರಿಕಲ್ಪನೆಗಳ ಅಭಿವ್ಯಕ್ತಿಗಾಗಿ ಪದಸೃಷ್ಟಿಯಲ್ಲಿ ಸದಾ ತೊಡಗಿರುತ್ತಿದ್ದ, ಖಚಿತವಾದ ಅನಿಸಿಕೆಗಳುಳ್ಳ, ಅಸಹನೆ, ಸದಾ ಸಿದ್ಧವಿದ್ದ ಬಿಚ್ಚು ನಗು, ಕೌತುಕಗೊಳ್ಳುವ, ಅಂತಃಕರಣ…..ಅವರ ಅಗಲುವಿಕೆ ಸದಾ ನೆನಪಿನಲ್ಲಿರುತ್ತದೆ. ಇದು ಯಾವತ್ತಿಗೂ ದುಃಖವೇ, ನಾವೆಂದಿಗೂ ಮರೆಯಲಾರೆವು…
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.