ಪ್ರೇಕ್ಷಕಾಂಗಣದ ಮೂಲೆಯಿಂದ..

ಕರ್ನಾಟಕ ರಂಗಭೂಮಿಯ ಬೆಳವಣಿಗೆಯ ಅಥವಾ ಪರಿಸ್ಥಿತಿಯ ಕುರಿತು ನಾನೀಗ ಹೇಳಲು ಹೊರಟಿಲ್ಲ. ಹಾಗೇನಾದರೂ ಹೊರಟೆನೆಂದರೆ ನಾಲ್ಕು ಪುಸ್ತಕ ಓದಿಕೊಂಡು ನನ್ನ ಶಬ್ದಗಳಿಂದ ಅದರ ಸಾರವನ್ನು ಹೇಳಬಲ್ಲೆನೆ ಹೊರತು ನನ್ನ ಅನುಭವಗಳಿಂದಲ್ಲ. ಬಹುಶಃ ನಾನಿಲ್ಲಿ ಹೇಳಬಹುದಾದದ್ದು ಸ್ವಾತಂತ್ರ್ಯೋತ್ತರ ಪ್ರೇಕ್ಷಕ ವರ್ಗದಲ್ಲಿ ಸೇರಿಕೊಂಡಿರುವ ನನ್ನದೇ ಕೆಲವು ಮಾತುಗಳನ್ನು ಮಾತ್ರ. ಸ್ವಾತಂತ್ರ್ಯೋತ್ತರದ ಖಾಲಿಯುಗದಲ್ಲಿ ಪ್ರೇಕ್ಷಕ ವರ್ಗದ ಚಡಪಡಿಕೆಯನ್ನು ಹೇಳುವಾಗ ನಾನು ಸೋತರೆ ಅದಕ್ಕೂ ನಾನು ಪೂರ್ಣ ಹೊಣೆಗಾರಳಾಗುವುದಿಲ್ಲ. ಕಾರಣ ಪ್ರದರ್ಶನ ಕಲೆಗಳಿಗೆ ಶಿಷ್ಟ ಮನೆಗಳಿಂದ ಹೆಣ್ಣುಮಕ್ಕಳು ಹೊರಬಂದು ಬಟ್ಟಬಯಲಿನಲ್ಲಿ ಕುಳಿತು ನೋಡುವುದು, ಯಕ್ಷಗಾನವನ್ನೂ – ಆಗ ಸಾಮಾನ್ಯವಾಗಿರಲಿಲ್ಲ.

ಕರ್ನಾಟಕ ರಂಗಭೂಮಿಯ, ಬಹುಶಃ ಭಾರತೀಯ ರಂಗಭೂಮಿಯ ಕುರಿತು ಮಾತನಾಡುವಾಗಲೆಲ್ಲ ಪ್ರೇಕ್ಷಕ ವರ್ಗದ ಅರ್ಧ ಭಾಗ ಮನೆಯೊಳಗೇ “ನೋಡುವ ರೋಮಾಂಚ” ಹತ್ತಿಕ್ಕಿಕೊಂಡು ಬಳಲಿತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡವರು. ಎಂದರೆ ಈ ಅರ್ಧಜನ ಏನನ್ನೂ ನೋಡಲೇ ಇಲ್ಲವೆಂದೇನೂ ಅಲ್ಲ. ಹೆಣ್ಣುಮಕ್ಕಳು ರಂಗದ ಮೇಲೆ ಬರುವುದಕ್ಕೂ ಸೂಳೆಗಾರಿಕೆಗೂ ಹೆಚ್ಚು ವ್ಯತ್ಯಾಸ ಕಾಣದ ಆ ಕಾಲದಲ್ಲಿ ಬಹುಶಃ ಆಕೆ ಪ್ರೇಕ್ಷಕಿಯಾಗಿಯೂ ಬಿಡುಬೀಸಾಗಿ ಕುಳಿತುಕೊಂಡಿರಲಾರದವಳು. ತಮ್ಮ ಮನೆಯೆದುರಿನ ಗದ್ದೆಯಲ್ಲಿಯೇ ಆಟ ನಡೆಯುತ್ತಿದ್ದರೂ “ಒಳಗೇ ಇರಬೇಕಾದ” ಮಂದಿ ನೋಡುತ್ತಿದ್ದುದು ಉಪ್ಪರಿಗೆಯ ಕಿಂಡಿಯ ಮೂಲಕ.

ಎಲ್ಲಿತ್ತು ಸಮೃದ್ಧಿ

ಇವೆಲ್ಲ ಬಹಳ ನಿಧಾನವಾಗಿ ಮೂಸುತ್ತಿದ್ದ ಕಾಲದಲ್ಲಿ ನಮ್ಮ ಕಣ್ಣು ತೆರೆದಿದ್ದರೂ ವಾತಾವರಣವೇನೂ ನಿಚ್ಚಳವಾಗಿರಲಿಲ್ಲ. ಮುಂದೆ ಕಾಲ ಸರಿದಂತೆ ಕರ್ನಾಟಕದ ರಂಗಭೂಮಿಯ ಹೆಚ್ಚಿನ ಪಾಲು ಮರಗಟ್ಟುತ್ತ ಬಂದಿತ್ತು. ಹಳೇ ನಾಟಕ ಕಂಪೆನಿಗಳ ಕುರಿತು ಕೇಳುತ್ತ ವರ್ಷೇ ವರ್ಷೇ ಸ್ಕೂಲ್‌ಡೇ ನಾಟಕಗಳನ್ನು ನೋಡುತ್ತ ಬೆಳೇದು ಬಂದವಳು ನಾನು. ಎಲ್ಲಾದರೂ ಒಂದೊಂದು ಇತರ ಸಂಘ ಸಂಸ್ಥೆಗಳ ನಾಟಕಗಳನ್ನು ಅವುಗಳಲ್ಲಿ ಐತಿಹಾಸಿಕಗಳೇ ಹೆಚ್ಚು ನೋಡಿದ್ದಿರಬಹುದು. ಇವೆಲ್ಲವುಗಳ ಮೇಲೆ ಕಂಪೆನಿ ನಾಟಕಗಳ ಪ್ರಭಾವ ಸೊರಗು ರೂಪದಲ್ಲಿ ಒರಗಿತ್ತು ಎಂದೇ ಅನಿಸುತ್ತದೆ. ಅವನ್ನು ಈಗ ನೆನೆದರೆ ಬಾಯಿಪಾಠ ಒಪ್ಪಿಸುವ ಮಕ್ಕಳ ನೆನಪಾಗುತ್ತದೆ. ಮುಂದೆ ನಡೆಯಲಾಗದೆ ದೊಪ್ಪನೆ ಕುಳಿತ ಅಜ್ಜನ ನೆನಪಾಗುತ್ತದೆ. ಆದರೆ ಅಂದಿಗೆ ಅದೇ ಸುಖ ತಾನೆ? ನಾಟಕವೆಂದರೆ ಹೀಗೇ. ಇಳಿಯುವ ಎಳೆಯುವ ಪರದೆಗಳು, ಸೀನುಗಳು, ಹಾಡುಗಳು, ಒನ್ಸ್‌ಮೋರ್‌ಗಳು-ನಾಟಕದ ಸಂಭಾಷಣೆಯೆಂದರೆ ಆ ಮಟ್ಟು ಬೇರೆಯೇ ಎಂದೇ ತಿಳುವಳಿಕೆಯಾಗಿತ್ತು.

೧೯೬೦-ರ ನಂತರದ ವರ್ಷಗಳಲ್ಲಿ ಕಂಪೆನಿಗಳ ಹೆಸರು ಕೇಳಿಸುವುದೇ ವಿರಳವಾಯಿತು. ಕಾರಣಗಳು ಅನೇಕವಿರಬಹುದು. ಅದು ಬೇರೆಯೇ ಒಂದು ವಿವರದ್ದು. ಅಂತೂ ಈ ಅವಧಿಯಲ್ಲಿ ಪರ್ಯಾಯವಾಗಿ ಹವ್ಯಾಸಿ ತಂಡಗಳು ಹುಟ್ಟಿಕೊಂಡವಷ್ಟೇ? ಇವುಗಳಲ್ಲಿ ಕೆಲವು ಪ್ರಾಯೋಗಿಕ ನಾಟಕಗಳನ್ನೂ ನೀಡಿದುವು. ಆದರೆ ಸಮಗ್ರತೆಯ ದೃಷ್ಟಿಯಿಂದ ನೋಡಿದರೆ ಸಮಸ್ತ ಪ್ರೇಕ್ಷಕ ವರ್ಗವನ್ನು ಮನಸ್ಸಿನಲ್ಲಿಟ್ಟುಕೊಂಡು ನಾಟಕವಾಗುವ ಕ್ರಿಯೆಗೆ ತಮ್ಮನ್ನು ಒಡ್ಡಿಕೊಂಡ ಹಾಗೂ ಆ ಮೂಲಕ ಸಂವಾದಿಸುವ ಶ್ರದ್ಧೆಯಿಂದ ಹುಟ್ಟಿಕೊಂಡ ತಂಡಗಳೆಷ್ಟು? ಮೊದಲ ಹುರುಪನ್ನು ದೀರ್ಘ ಕಾಲದವೆರೆಗೆ ಉಳಿಸಿಕೊಂಡು ಕಾಲಕ್ಕೆ ಸ್ಪಂದಿಸುತ್ತಾ ತನ್ನ ಜನರನ್ನು ಕೂಡಿಕೊಂಡೇ ಬೆಳೆದವುಗಳು ಎಷ್ಟು? ಒಟ್ಟಾರೆ, ನೋಡುವಿಕೆಯೆಂಬುದೇ ನೀಡಲು ಅನನ್ಯ ಅನುಭವಕ್ಕಾಗಿ ನಾಟಕವೆಂದೊಡನೆ ಖುಷಿ-ಆಸಕ್ತಿಯಿಂದ ನೋಡಲು ತೆರಳುತ್ತಿದ್ದ ಪ್ರೇಕ್ಷಕವರ್ಗ ತನಗೇ ಅರಿಯದಂತೆ ಖಂಡಿತವಾಗಿಯೂ ಬಳಲಿರಬೇಕು. (ಅಥವಾ ನಾನು ಹಾಗೆ ಬಳಲಿದ್ದರಿಂದ ಇಡೀ ಪ್ರೇಕ್ಷಕವರ್ಗವೇ ಬಳಲಿದಂತೆ ನನಗೆ ಕಾಣಿಸುತ್ತಿದೆಯೋ) ಕೆಲವರು ಹಳೆಯ ರೀತಿಯ ಭರ್ಜರಿ ರಂಗಸಜ್ಜಿಕೆಯ ಅಬ್ಬರದ ಮಾತುಗಳ ನಾಟಕಗಳೇ ಚೆಂದ ಎಂದರೆ ಕೆಲವರು ಪ್ರಾಯೋಗಿಕ ನಾಟಕಗಳೇ ಪರವಾಗಿಲ್ಲ – ಎಂಬಿತ್ಯಾದಿ ಚರ್ಚೆಗಳಲ್ಲಿ ಬಳಲಿಕೆಯನ್ನು ಅಡಗಿಸಿಟ್ಟು ತಬ್ಬಲಿಗಳಂತಿದ್ದರೆ, ನಾಟಕ ಭಾಷೆಯೆಂಬ ಪದವೇ ಅರ್ಥವಾಗದ ಅವಸ್ಥೆಯಲ್ಲಿ ನಾಟಕವೆಂಬುದು ಬದುಕಿಗೆ ತೀರ ಹತ್ತಿರದ್ದಾಗಿದ್ದೂ ಎಲ್ಲೋ ದೂರದ ಸಂಬಂಧಿಯಂತೆ ಕಾಣುವ ಹಣೆಬರಹ ನಮ್ಮದಾಗಿತ್ತು.

ಹೊಸತಿಗಾಗಿ ಹಂಬಲವಿದ್ದೂ ಇದ್ದುದರಲ್ಲಿಯೇ ರುಚಿ ಕಾಣುತ್ತಾ ಇರಬೇಕಾದ ಈ ಕಾಲದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಹೊಸ ಹೊಸ ಪ್ರಯೋಗಗಳು ಆಗುತ್ತಿದ್ದವು. ಅವುಗಳ ಕುರಿತು ಪತ್ರಿಕೆಗಳಲ್ಲಿ ವಿಮರ್ಶೆಗಳೂ ಚಿತ್ರಗಳೂ ಬಂದಾಗ ಓದುವ ಅಭ್ಯಾಸದ ಅಕ್ಷರಸ್ಥರಿಗೆ “ಇರದುದದ ಕಡೆಗೆ” ತುಡಿತ ಹೆಚ್ಚಾದರೂ ಇವೆಲ್ಲ ಅಲ್ಲಿ ಮಾತ್ರ ಲಭ್ಯವೆಂಬ ನಿರಾಸೆ. ಪತ್ರಿಕೆಯೋದುವ ಅಭ್ಯಾಸವಿಲ್ಲದ ಅಕ್ಷರಸ್ಥರು ಹಾಗೂ ಅನಕ್ಷರಸ್ಥರಂತೂ ತಮಗದೆಲ್ಲ ನೋಡಲು ಸಿಗುವಂತಹುದಲ್ಲ ಎಂಬ ಮಾತಿಗೆ ಆಸೆ ಮುರಿದುಕೊಂಡರು. ಗ್ರಾಮೀಣ ಪ್ರೇಕ್ಷಕರು ಇಷ್ಟೊಂಡು ನಿರ್ಲ್ಕಷ್ಯಕ್ಕೆ ಒಳಗಾದ ಕಾಲ ಉಂಟೆ?

ಕಾರಂತರ ನಾಟಕಗಳು ಬೆಂಗಳೂರು ಅಲ್ಲದೆ ಇತೆರೆಡೆ ಪ್ರದರ್ಶನಗೊಂಡರೂ ಎಷ್ಟು ಮಂದಿ ಗ್ರಾಮೀಣ ಪ್ರೇಕ್ಷಕರು ಅವುಗಳನ್ನು ನೋಡಿದ್ದಾರೆ? ಅವು ಆಯ್ದ ನಗರ ಹಾಗೂ ಪಟ್ಟಣಗಳಲ್ಲಿ ಮಾತ್ರ ನಡೆದವಲ್ಲವೆ? ಈ ಅವಧಿಯಲ್ಲಿ ಬಂದ ಇತರ ನಾಟಕಗಳಿಗೆ ತೆರೆದುಕೊಳ್ಳುವ ಅವಕಾಶ ಸಿಕ್ಕಿದ ಪ್ರೇಕ್ಷಕರಾದರೂ ಎಷ್ಟು ಮಂದಿ? ಪ್ರಜಾಪ್ರಭುತ್ವವಿರುವ ಯಾವುದೇ ರಾಷ್ಟ್ರದಲ್ಲಾಗಲೀ “ಕೆಲವೇ ಮಂದಿಗೆ ಮಾತ್ರ” ಎಂಬುದು ಎಂದಿಗೂ ಒಪ್ಪುವ ಮಾತಲ್ಲ. ಇವತ್ತಿಗೂ ಕರ್ನಾಟಕ ರಂಗಭೂಮಿಗೆ ಸಂಬಂಧಪಟ್ಟಂತೆ ವಿಚಾರ ಸಂಕಿರಣಗಳಾಗುವಾಗ ಹಾಗೂ ಲೇಖನ ಪುಸ್ತಕ ಇತ್ಯಾದಿಗಳಲ್ಲಿ ಪೂರ್‍ತಿ ಎಪ್ಪತ್ತರ ದಶಕವನ್ನು “ಸಮೃದ್ಧ ಕಾಲ”ವನ್ನಾಗಿ ಪ್ರಾಜ್ಞರು ವರ್ಣಿಸುವಾಗ ನನ್ನೊಳಗಿನ ಪ್ರೇಕ್ಷಕಿಗೆ ಪೂರ್ತಿ ಹೌದೆನ್ನಲು ಸಾಧ್ಯವಾಗುವುದಿಲ್ಲ. ಪ್ರೇಕ್ಷಕರನ್ನು ಬಿಟ್ಟ ರಂಗಭೂಮಿಯ ಸಾಧನೆಗಳೇನೇ ಇರಲಿ – ಯಾವುದೇ ಪ್ರದರ್ಶನ ಕಲೆಯ ಸಾಧನೆಗಳಿರಲಿ-ಅವು ಎಂದಿಗೂ ಸಮಗ್ರವಾಗಲಾರದಷ್ಟೆ?

ನಿಧಾನವಾದ ಗಟ್ಟಿ ಹೆಜ್ಜೆ

ಇಂತಹ ಕಾಲದಲ್ಲಿಯೇ ಸಮಕಾಲೀನ ನಾಟಕಗಳಾನ್ನು ಬಯಸುವ ಪ್ರೇಕ್ಷಕವರ್ಗಕ್ಕೆ ನೀನಾಸಂ ವಿಶಿಷ್ಟವಾಗಿ ಕಂದದ್ದು. ಅದರ ನಡಿಗೆ ಬೇರೆಯಲ್ಲ. ಗಡಿಯಾರದ ನಡಿಗೆ ಬೇರೆಯಲ್ಲ. ಯಃಕಶ್ಚಿತ್ ಹಳ್ಳಿ ಮೂಲೆಯೊಂದರಲ್ಲಿ ಈ ಶತಮಾನದ ಮಧ್ಯಭಾಗದಿಂದಲೇ ತನ್ನ ಜನರನ್ನು ರಂಗಭೂಮಿಯ ಪುಲಕಕ್ಕೆ ತೆರೆಯುತ್ತಾ ತಾನೂ ಅರಳುತ್ತಾ ನಿಧಾನವಾಗಿ ಕೇವಲ ತನ್ನೂರಿನವರನ್ನು ಮಾತ್ರವಲ್ಲ ಕರ್ನಾಟಕದ ಇತರ ಭಾಗಗಳ ಜನರನ್ನೂ ಹಲವಾರು ಪ್ರಯೋಗ, ನಾಟಕ ಶಿಬಿರ – ಇತ್ಯಾದಿಗಳಿಂದ ಒಗ್ಗೂಡಿಸಿಕೊಂಡು ಸಮಗ್ರತೆಯನ್ನು ಅತ್ಯಂತ ನಾಜೂಕಾಗಿ ಸಾಧಿಸಲು ಹೊರಟದ್ದು ನೀನಾಸಂ. ಏನೋ ಅದ್ಭುತವನ್ನು ಸಾಧಿಸುತ್ತಿದ್ದೇನೆ, ರಂಗಭೂಮಿಯಲ್ಲಿ ಕ್ರಾಂತಿ ಮಾಡುತ್ತೇನೆ ಎಂಬ ಯಾವುದೇ ಆಟಾಟೋಪವಿಲ್ಲದೆ, ತನ್ನ ಅಗತ್ಯಗಳಿಗೆ ಬೇಕಾದ್ದನ್ನು ಸಾಧ್ಯವಾದಷ್ಟೂ ತನ್ನೂರಲ್ಲಿಯೇ ಹುಟ್ಟಿಸಿಕೊಳ್ಳುತ್ತ ಫಲವನ್ನು ಎಲ್ಲರೊಡಾನೆಯೂ ಹಂಚಿಕೊಳ್ಳುವ ನೀನಾಸಂ ಕುರಿತು ಹೆಚ್ಚಿನ ವಿವರಣೆ ಇಂದು ಅಗತ್ಯವಿಲ್ಲ.

ನೀನಾಸಂ-ನ ಪ್ರದರ್ಶನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂ ನೀಡಿತು. ಹೊಸ ಹೊಸ ಪ್ರಯೋಗಗಳ ಅನುಭವ ಕೊಟ್ಟಿತು. ನಾಟಕ ಭಾಷೆ ಪ್ರೇಕ್ಷಕರಿಗೆ ಸಂವಹಿಸಬೇಕಾದ ಹೊಣೆಗಾರಿಕೆಯಿಂದ ವರ್ತಿಸಿತು. ಪ್ರೇಕ್ಷಕರ ತತ್‌ಕ್ಷಣದ ಹಾ ಹೂ ಕಾರಗಳಿಗೆ, ಚಪ್ಪಾಳೆಗಳಿಗೆ ಹಪಹಪಿಸದೆ ಪ್ರತಿಕ್ರಿಯೆಯೆಂಬುದು ಎಂದೂ ಯಾವತ್ತೂ ಎಷ್ಟು ದೀರ್ಘಕಾಲದ ನಂತರವೂ ಯಾವುದೇ ರೂಪದಲ್ಲಿಯೂ ಪ್ರಕಟವಾಗಬಹುದಾದ ಅಥವಾ ಪ್ರಕಟವಾಗದೆಯೂ ಸುಪ್ತ ಪ್ರಜ್ಞೆಯೊಳಗೇ ಹುದುಗಿಕೊಂಡು ಒಟ್ಟಾರೆ ವ್ಯಕ್ತಿಯ ಮನೋಸಂಸ್ಕಾರದ ಮೇಲೆ ಪರಿಣಾಮ ಬೀರಬಲ್ಲ ಇನ್ನಿತರ ಅನೇಕ ಸಾಧ್ಯತೆಗಳ ಕುರಿತು ಯೋಚಿಸುವ ನೀನಾಸಂ ಎಂದಿಗೂ ಪ್ರೇಕ್ಷಕರನ್ನು ಬಿಟ್ಟು ಮಾತಾಡಿದ್ದಿಲ್ಲ. ೧೯೮೩-೮೪ ಈ ಎರಡು ವರ್ಷಗಳ ಕಾಲವಂತೂ ಈ ಸಂಸ್ಥೆ ತನ್ನ \’ಜನಸ್ಪಂದನ\’ ಯೋಜನೆಯಲ್ಲಿ ರಾಜ್ಯದ ಅಲಕ್ಷಿತ ಮೂಲೆಮೂಲೆಗಳಿಗೂ ತೆರಳಿ ನಾಟಕ ಶಿಬಿರ ನಡೆಸಿ ನಟ, ನಟಿ ಹಾಗೂ ಪ್ರೇಕ್ಷಕ ವರ್ಗವನ್ನು ಬೆಳೇಸಿ ರಂಗ ಚಳುವಳಿಯನ್ನು ತೀವ್ರಗೊಳಿಸಿದ ಪರಿಣಾಮವಾಗಿ ಹಿಂದೆಂದಿಗಿಂತಲೂ ಅರ್ಥಪೂರ್ಣವಾಗಿ ರಂಗವಾತಾವರಣ ಸಿದ್ಧಗೊಂಡಿತು. ನಾಟಕ ಚಟುವಟಿಕೆಯನ್ನು ಇನ್ನಷ್ಟು ಚುರುಕುಗೊಳಿಸಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಿತು. (ಇದನ್ನು ಬರೆಯುವಾಗ ಉತ್ತರಕನ್ನಡದ ಮಂಚಿಕೇರಿಯಲ್ಲಿ ಸಿದ್ಧಿ ಜನಾಂಗಕ್ಕಾಗಿ ನಡೆಸಿದ ರಂಗಶಿಬಿರದ ನೆನಪು, ಸಿದ್ಧಿ ಜನಾಂಗದ ಸ್ತ್ರೀಯರೂ ಪುರುಷರೂ ಸಮಾನವಾಗಿ ಭಾಗವಹಿಸಿ ಈ ಶಿಬಿರದಲ್ಲಿ ಅವರ ಶ್ರದ್ಧೆಯ ನೆನಪು, ಅವರ ನಾಟಕವಾಡುವ ಹಾಗೂ ನಾಟಕ ನಿರೀಕ್ಷೆಯ ಸಂಭ್ರಮದ ನೆನಪು).

ರೆಪರ್ಟರಿ ತಂಡ ತಿರುಗಾಟ

ನೀನಾಸಂ ಅದನ್ನಲ್ಲಿಗೆ ಬಿಡದೆ ಜವಾಬ್ದಾರಿಯಿಂದ ಸೂತ್ರವನ್ನು ಕೈಗೆತ್ತಿಕೊಂಡದ್ದು “ನೀನಾಸಂ ನಾಟಕ ಶಾಲೆ” ಯ ಪದವೀಧರರ ರೆಪರ್ಟರಿ ತಂಡ ಕಟ್ಟಿ ನಾಡಿನಾದ್ಯಂತ “ತಿರುಗಾಟ-೮೫” ಹೊರಟು ನಾಲ್ಕು ನಾಟಕಗಳನ್ನು ಪ್ರದರ್ಶಿಸಿದ್ದು. ಒಂದು ಮುಖ್ಯ ಘಟನೆಯಷ್ಟೇ! ಸಂಚಾರ ಮುಗಿದ ನಾಲ್ಕು ನಾಟಕಗಳನ್ನು ಪ್ರದರ್ಶಿಸಿದ್ದು – ಒಂದು ಮುಖ್ಯ ಘಟನೆಯಷ್ಟೇ! ಸಂಚಾರ ಮುಗಿದ ಮೇಲೆ ಪ್ರಕಟವಾದ “ತಿರುಗಾಟ ಹೀಗಿತ್ತು” ಎಂಬ ಕಿರುಪುಸ್ತಕ ಕೇವಲ ತಿರುಗಾಟ-೮೫-ರ ವರದಿಯಾಗಿದ್ದರೂ ಪ್ರೇಕ್ಷಕ ವರ್ಗದ ಮಟ್ಟಿಗೆ ಅದೊಂದು ಅತ್ಯುತ್ತಮ ದಾಖಲೆ. ಇಂಟಹ ಒಂದು ಚಟುವಟಿಕೆಗಾಗಿ ಕಾಲ ಎಷ್ಟು ಹಸನಾಗಿ ಹದವಾಗಿತ್ತು. ಪ್ರೇಕ್ಷಕ ವರ್ಗ ಎಷ್ಟು ಕಾದಿತ್ತು ಎಂಬುದಕ್ಕೂ ದಾಖಲೆ.

ಅಲ್ಲಿಗೆ ನಿಲ್ಲದೆ ಮತ್ತೆ ಹೊರಟಿದೆ “ನೀನಾಸಂ ತಿರುಗಾಟ-೮೬”. ಪರಿಚಯ ಪತ್ರದಲ್ಲಿ “ತಿರುಗಾಟ-೮೫-ಕ್ಕೆ ಪ್ರೇಕ್ಷಕರಿಂದ, ಸಂಘಟಕರಿಂದ ಮತ್ತು ವಿಮರ್ಶಕರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ತಿರುಗಾಟ-೮೬-ರ ನಾಟಕಗಳನ್ನು ಆಯ್ಕೆ ಮಾಡಲಾಗಿದೆ. ಈ ವರ್ಷ ಆರಿಸಿದ ನಾಟಕಗಳೆಲ್ಲ ಕಾಲ ಮತ್ತು ವಿಮರ್ಶೆಯ ಪರೀಕ್ಷೆಗೆ ಒಳಪಟ್ಟು ಉತ್ತಮವೆಂದು ನಿರ್ಣಾಯವಾಗಿರುವಂಥವು. ಜತೆಗೆ ಭಾರತದ ಪಶ್ಚಿಮದ ರಂಗಭೂಮಿ ಸ್ವೀಕರಿಸುತ್ತಿರುವ ಸವಾಲನ್ನು ಕಾಣಿಸುವಂಥವು”-ಎಂದು ಹೇಳಿದೆ. ಹೀಗೆ ಆಯ್ಕೆಯಾದ ನಾಟಕಗಳು ಶೂದ್ರಕನ “ಮೃಚ್ಚಕಟಿಕ” (“ಮಣ್ಣಿನ ಬಂಡಿ” ಅನುವಾದ: ಬನ್ನಂಜೆ ಗೋವಿಂದಾಚಾರ್ಯ) ಬ್ರೆಕ್ಟ್-ನ “ತ್ರೀ ಪೆನ್ನಿ ಅಪೇರಾ” (“ಮೂರು ಕಾಸಿನ ಸಂಗೀತ ನಾಟಕ” ಅನು: ಕೆ.ವಿ.ಸುಬ್ಬಣ್ಣ) ಹಾಗೂ ಸಂಸರ “ಬೆಟ್ಟದರಸು” ಮತ್ತು “ವಿಗಡ ವಿಕ್ರಮರಾಯ”ಗಳ ಸಂಯೋಜಿತ ರೂಪ “ವಿಗಡ ವಿಕ್ರಮ ಚರಿತೆ” ಸಂಯೋಜನೆ: ಕೆ.ವಿ. ಸುಬ್ಬಣ್ಣ). ಈ ಮೂರೂ ನಾಟಕಗಳೊಂದಿಗೆ “ನಾಳಿನ ಪ್ರೇಕ್ಷಕ”ರಾದ ಮಕ್ಕಳಿಗಾಗಿ ಕಂಬಾರರ “ಆಲಿಬಾಬಾ” ಅತುಲ್ ತಿವಾರಿ, ಕೆ.ವಿ.ಅಕ್ಷರ, ಚಿದಂಬರ ರಾವ್ ಜಂಬೆ ಮತ್ತು ಕೆ.ಜಿ.ಕೃಷ್ಣಮೂರ್ತಿ (ನಾಲ್ಕೂ ಜನರು ದೆಹಲಿ ನಾಟಕ ಶಾಲೆಯ ಪದವೀಧರರು) ಅನುಕ್ರಮವಾಗಿ ಈ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇದೇ ನವೆಂಬರ್ ೫-ರಿಂದ ಶಿವಮೊಗ್ಗೆಯಲ್ಲಿ ಪ್ರದರ್ಶನ ನೀಡುವುದರೊಂದಿಗೆ “ತಿರುಗಾಟ-೮೬” ತನ್ನ ಪರ್ಯಟನವನ್ನು ಆರಂಭಿಸಿದೆ. “ತಿರುಗಾಟ-೮೫” ನಾಲ್ಕು ತಿಂಗಳ ಕಾಲ ಸಂಚಾರ ಮಾಡಿದರೆ ಈ ಸಲ ಪ್ರದರ್ಶನದ ಬೇಡಿಕೆ ಹೆಚ್ಚಿದ್ದರಿಂದ ಆರು ತಿಂಗಳ ಕಾಲ ತಂಡ ಸಂಚರಿಸುತ್ತದೆ.

ಹೆಗ್ಗೋಡಿನಲ್ಲಿ ಈ ನಾಟಕಗಳ ಪ್ರಾಯೋಗಿಕ ಪ್ರದರ್ಶನಗಳನ್ನು ನೋಡಿದ ನನ್ಗೆ ಅನಿಸುತ್ತಿರುವುದು ಇಷ್ಟೇ-ಮನೋರಂಜನೆ, ರಸಾನುಭವದ ಹಂಬಲದೊಂದಿಗೇ ಎಲ್ಲಿಯೂ ಮೈ ಮರೆಯದೆ ಸದಾ ಎಚ್ಚರದಿಂದ ವಿಚಾರವಂತಿಕೆಯಿಂದ ಇರಬೇಕಾದ ಯಾವುದೇ ಸ್ವತಂತ್ರ ದೇಶದಲ್ಲಿ. ಅದರಲ್ಲಿಯೂ ಕದಡಿಹೋದ ನಮ್ಮ ದೇಶದಂತಹ ವ್ಯವಸ್ಥೆಯಲ್ಲಿ ಇಂತಹ ನಾಟಕಗಳು ಪ್ರೇಕ್ಷಕರೆದುರು ಬರಬೇಕು…ತಕ್ಷಣದ ಉದ್ಗಾರಗಳಿಗಾಗಿ ಅಲ್ಲ! (ಅಂದರೆ ಉದ್ಗಾರಗಳು ತಪ್ಪೆಂದೂ ಅಲ್ಲ.)

“ಒಟ್ಟಿನಲ್ಲಿ ನಮ್ಮ ರಂಗಭೂಮಿ ಮೂಲೆ ಮೂಲೆಯ ಗ್ರಾಮೀಣ ಜನತೆಯನ್ನು ಒಳಗೊಂಡು ಸಮಗ್ರ ಕರ್ನಾಟಕದ ಜನಪದಕ್ಕೂ ಸಮಾನವಾಗಿ ನಿಲುಕುವ ಜನಪದದ ಅನುಭವ ಮಂಟಪವಾಗಬೇಕು – ಎನ್ನುವುದು ನೀನಾಸಂ ನಂಬಿಕೆ” ಶ್ರೀ ನೀಲಕಂಠೇಶ್ವರ ನಾಟ್ಯ ಸಂಘದ ಈ ಮಾತಿನಲ್ಲಿ ಪ್ರಜಾಪ್ರಭುತ್ವವಾದಿ ದೇಶದಲ್ಲಿನ ಯಾವುದೇ ಒಂದು ಪ್ರಾಮಾಣಿಕ ಸಂಘಟನೆ ದೇಶದ ಜನರನ್ನು ಒಳಗೊಳ್ಳಬೇಕಾದ ಮಾದರಿ ಇದೆಯೆಂದೇ ನನಗನಿಸುತ್ತಿದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.