ದೀಪಾವಳಿ ದಿಲ್ಲಿಯ ರಸ್ತೆಗಳಲ್ಲಿ ಬಣ್ಣದ ಪಾರದರ್ಶಕ ಕಾಗದದಡಿ ತಿಂಡಿಗಳು ಕಂಗೊಳಿಸುತ್ತವೆ. ಒಣಹಣ್ಣುಗಳು ಠೇಂಕಾರದಿಂದ ಯಾರದೋ ಮನೆಗಾಗಿ ಸಾಗಲು ತಮ್ಮ ಗಾಡಿ ಕಾದು ಕುಳಿತಿವೆ. ಉದ್ದಾನುದ್ದಕ್ಕೂ ಜರಿಯ ತೋರಣ. ಬಣ್ಣದ ಬೆಳಕು. ಕತ್ತಲನ್ನು ಹೊಂಡ ತೋಡಿ ಹುಗಿದಂತೆ. ವ್ಯಾಪಾರ, ರಿಯಾಯತಿ ದರ, ಕೂಗಾಟ. ಉದ್ದಕ್ಕೂ ಒಬ್ಬರೇ ಸುತ್ತಬೇಕು, ಸಂಗಡ ಯಾರೂ ಇರಬಾರದು, ಸಿಗಲಾರದ ಯಾವುದನ್ನೋ ಹುಡುಕುತ್ತ ಹೊರಟಂತೆ. ದುಡ್ಡು ಎಲ್ಲಿಂದಲೋ ಬರುತ್ತದೆ. ಎಲ್ಲಿಗೋ ಹೋಗುತ್ತದೆ – ಅಗೋಚರವಾಗಿದ್ದು ಕೊಂಡೇ. ಎಲ್ಲುಂಟು ಬಡತನ ಇಂಡಿಯಾದಲ್ಲಿ? ಈ ಮಾಯಾನಗರಿಯಲ್ಲಿ ನಿಜ ಯಾವುದು, ಸುಳ್ಳು ಯಾವುದು? ದಾರಿ ಸಾಗುತ್ತಲೇ ಇರುತ್ತದೆ, ಇದೆಲ್ಲ ತಿಳಿಯಬೇಕಾದ್ದೇ ಇಲ್ಲವೆಂಬಂತೆ.! “ಒಬ್ಬಳೇ ಹಾಗೆಲ್ಲ ತಿರುಗಬೇಡ. ಇದು ದೆಹಲಿ!” ಎಂದು ಒಬ್ಬರೆಂದರೆ “ಪರವಾಗಿಲ್ಲ ಒಬ್ಬಳೇ ತಿರುಗು. ಯಾಕೆಂದರೆ ಇದು ದೆಹಲಿ!” ಎಂದರು ಮತ್ತೊಬ್ಬರು!! ಸಿಹಿ ಅಂಗಡಿಗಳು “ಆರ್ಡರ್ಸ್”ಗಳಲ್ಲಿ ತಲೆ ತೂರಿಸಿಕೊಂಡಿವೆ. ಒಂದೇ ಸಮನೆ ಪೊಟ್ಟಣಗಳು ಸಿದ್ಧಗೊಳ್ಳುತ್ತಿವೆ. ದೀಪಾವಳಿ ಇಲ್ಲೆಲ್ಲ ಇದೆಯೇ, ಹೀಗೆಲ್ಲ! ಬಹುಶಃ ಅವರಿಗೆ ಈ ರೀತಿ ಪಾರದರ್ಶಕ ಕಾಗದದಡಿಯ ತಿಂಡಿಗಳು ಸದ್ದಿಲ್ಲದೆ ಮಾಡುವ ಭಾವನಾತ್ಮಕ ಅನಾಹುತಗಳು ತಿಳಿದಿಲ್ಲ. ಆ ಮೂಲಕವೇ ಒಬ್ಬ ದರಿದ್ರ ಜೀವಿ ತನ್ನ ಕನಸುಗಳನ್ನು ಕಟ್ಟಬಲ್ಲ ಶಕ್ತಿಯನ್ನು ಪಡೆಯುತ್ತಾನೆ ಎಂದರಲ್ಲ ಮತ್ತೆ! ಅವನಿಗೆ ಸಾಲ ಪಡೆಯುವ ಆಸೆ ಹುಟ್ಟುತ್ತದೆ. ಸಾಲ ತೀರಿಸುವ ಶಕ್ತಿಯೂ ಅಂತೆಲ್ಲ ಮುಂದೆ ಸೇರಿಸುತ್ತಾರೆ. ದೆಹಲಿಯಲ್ಲಿ ಎಲ್ಲರೂ ಮಾತಾಡುವುದು ಒಂದೇ ರೀತಿ ಎಂದು ನನಗೆ ಸಂಶಯ. ದೊಡ್ಡ ಪಟ್ಟಣಗಳಲ್ಲೆಲ್ಲ ಹಾಗೇ, ಓಡುವುದು, ನಡೆಯುವುದು. ತಿನ್ನುವುದು, ಉಣ್ಣುವುದು, ಮಾತಾಡುವುದು ಎಲ್ಲ…. ಎಲ್ಲ…. ಒಂದೇ ರೀತಿ? ದೀಪಾವಳಿಯೆಂದರೆ ದೀಪ ಮತ್ತು ಉಡುಗೊರೆ ಒಟ್ಟೊಟ್ಟಿಗೇ ಇರುತ್ತದೆ. ದೀಪವಿಲ್ಲದಲ್ಲಿ ಉಡುಗೊರೆಗಳೂ ಇರುವುದಿಲ್ಲ. ಈ `ಆಲ್ಬಂ’ ಹುಡುಗರು, `ಹ್ಯಾಂಕೀ’ ಹುಡುಗರು, ರಸ್ತೆಬದಿಯಲ್ಲಿ ಅಂಗಡಿ ಚೆಲ್ಲಿಕೊಂಡವರು – ಹೊರಟಿರುವುದೆಲ್ಲ ದೀಪದ ಸಂಪಾದನೆಗೆ ತಾನೆ? ಎಲ್ಲರೂ ವ್ಯಾಪಾರದಲ್ಲಿ ಮಗ್ನವಾಗಿದ್ದಾರೆ. ನೀವು ಗಮನ ಹರಿಸದಿದ್ದರೆ ಜಗ್ಗುತ್ತಾರೆ – ಎಚ್ಚರಿಸುತ್ತಾರೆ. ಅದು ಅವರ ದೀಪಾವಳಿ ಅಲ್ಲವಾದರೂ, ಹೌದಾದರೂ. ಯಾಕೆಂದರೆ ಅವರ ಮನೆಯಲ್ಲಿ ಹಚ್ಚುವ ದೀಪವೇ ಅವರ ಗುರಿ. ಅವರು ಯಾರಿಗೂ ಈ ಕ್ಷಣದಲ್ಲಿ ಸಿಹಿತಿಂಡಿಗಳ ಅಂಗಡಿಗಳ ಕಡೆ ಗಮನವಿಲ್ಲ. ಆದರೂ, ಅವರು ಕೂಗುವುದೆಲ್ಲ ನಾಳೆ ಈ ಅಂಗಡಿಯಲ್ಲಿ ನಾಲ್ಕು `ಆರ್ಡರ್’ ಮಾಡುವ ತಾಕತ್ತು ಬೆಳೆಸಿಕೊಳ್ಳುವ ಆಸೆಯಿಂದಷ್ಟೆ? ಆ ಆಸೆಯ ಮೊದಲ ಮೆಟ್ಟಿಲಲ್ಲಿ ನಿಂತು ಹುಡುಗ ಕೂಗುತ್ತಿರುತ್ತಾನೆ “ಆಲ್ಬಂ!” ಇಂಡಿಯಾದ ಆಲ್ಬಂ – ದೆಹಲಿ. ಎಷ್ಟೋ ಆಲ್ಬಂಗಳ ಹಾಗೆ ಇದೂ ಕೃತಕ ಪೋಸುಗಳಿಂದ ಕೂಡಿರುತ್ತದೆ – ಪೋಸು ಎಂಬುದು ಎಷ್ಟು ಅವಶ್ಯಕ ಪ್ರತಿಯೊಬ್ಬರಿಗೂ. ಇವತ್ತು ದೆಹಲಿ ಹೀಗಿರುವುದೂ ಅಷ್ಟೇ ಅವಶ್ಯಕ – ಎಂದರು ಯಾರೋ. ನಮ್ಮ ದುಡ್ಡೆಲ್ಲ ಇಲ್ಲಿನ ರಸ್ತೆಗಳ ಮೇಲೆಯೇ ಚೆಲ್ಲಿ ಹೋಗಿದೆಯೇ ಎಂದು ಸಖೇದ ಉದ್ಗರಿಸುವಷ್ಟು ಚಂದದ ರಾಜರಸ್ತೆಗಳ ನವದೆಹಲಿ. ಈ ಅಂಗಡಿಗಳೆಲ್ಲ ಸದಾ ತೆರೆದುಕೊಂಡೇ ಇರುತ್ತವೆ. – ಜನ ಸಂಚಾರ ರಾತ್ರಿಯಿಡೀ ಖಂಡಿತಾ ಹೀಗೆಯೇ ಗಲಗಲವಾಗಿ, ಇರುತ್ತದೆ – ಅಂತೆಲ್ಲ ಅನಿಸಿದರೂ, ರಾತ್ರಿ ಛಕ್ಕನೆ ಎಚ್ಚರವಾದಾಗ, ಅಲ್ಲಿ ಎಂತಹ ಮೌನವಿತ್ತು. ಮೌನದ ಸ್ವರೂಪವೇ ಮರೆತು ಹೋಗುವಂತೆ ಇದ್ದಲ್ಲಿ! ನಿದ್ದೆಬಾರದ ಕಣ್ಣುಗಳೆದುರು ವ್ಯಾಪಾರದ ಧೂಳು ಕವಿದಿದೆ. ರಸ್ತೆ ಕಾಣುವುದಿಲ್ಲ. ಮನುಷ್ಯನೂ ಇಲ್ಲ. ಕಿವಿಯಲ್ಲಿನ್ನೂ ಆ ಕೂಗಾಟಗಳು, ಬಾಜಾರಿನ ಗಲಭೆಗಳು…… ಬದುಕು ಧೂಳಿನಲ್ಲಿ ಸಿಕ್ಕಿ ಮಸುಕಾದಂತೆ. ಉಸಿರಿಗೆ ಚಡಪಡಿಸಿದಂತೆ…… ಗೆಳತಿ ಸಿಗುತ್ತಾಳೆ. ಈ ವರ್ಷ ತಮ್ಮ ಬಿಸಿನೆಸ್ ಗೆ ಫೈನಾನ್ಸ್ ಮಾಡಿದ ಬ್ಯಾಂಕುಗಳಿಗೆ ಗಿಫ್ಟ್ ಹಂಚಲಿಕ್ಕೆಂದೇ ಸಾವಿರ ಗಟ್ಟಲೆ ಖರ್ಚಾದದ್ದು – ವಿವರ ವಿವರ ಹೇಳುತ್ತಾಳೆ. ಅದು ಬೇಸರವೋ; ಅಥವಾ ಹೆಚ್ಚಳದ ದನಿಯೋ, ಹೇಗೆ ತಿಳಿದರೆ ಹಾಗೆ ಎಂಬಂತಹ ಮುಖ ಹೊತ್ತುಕೊಂಡು. ನಾನು ನಮ್ಮೂರಲ್ಲಿ ಹೀಗೆಲ್ಲ ಇಲ್ಲ ಎಂದು ಹೇಳಲಿಕ್ಕೆ ಹೋಗದೆ ಸುಮ್ಮನೆ ಕೇಳುತ್ತಿರುತ್ತೇನೆ. ಗೊತ್ತು ಅವಳಿಗೂ, ಅವರೇ ಒಡ್ಡಿಕೊಂಡ ಬಲೆಯಲ್ಲಿ ಅವರೇ ಸ್ವಇಚ್ಛೆಯಿಂದ ಸಿಕ್ಕಿಕೊಳ್ಳುತ್ತಿದ್ದಾರೆ ಅಂತ…… ಪ್ರಪಂಚವನ್ನು ಕೊಂಡುಕೊಳ್ಳಲು ಹೊರಟವರೆದುರು ಜಿಜ್ಞಾಸೆಗೆ ಜಾಗವಿಲ್ಲ. ಯಾವ ಮಾತೂ ಅವರಿಗೆ ಕೇಳಿಸುವುದಿಲ್ಲ. ಪೇಪರು ತುಂಬ ಸುದ್ದಿ – ಚುನಾವಣೆಯದು. ಹಲವು ಪೋಸುಗಳು, ಚಿತ್ರಗಳು. ಈ ಅಂಗೈಗಳು ಜನತೆಯೆದುರಲ್ಲಿ ಸದಾಕಾಲ ಹಾಗೆ ಜೋಡಿಸಿಕೊಂಡೇ ನಿಂತಿರುತ್ತವೆಯೇ ಎಂಬ ಹಾಗೆ. ತಮಾಷೆಯೆಂಬಂತೆ ಒಬ್ಬರು ತಾವೇ ನಗುತ್ತ ಹೇಳುತ್ತಾರೆ: ಗುಡಿಸಿದಷ್ಟೂ ಗುಡಿಸಬಹುದಾದ ದೇಶ ಇಂಡಿಯಾ ಒಂದೇ. ಎಂತಲೇ ಪೂರ್ತಿ ಗುಡಿಸುವವರೆಗೂ ಎಲ್ಲವೂ ನಡೆಯುತ್ತಲೇ ಇರುತ್ತದೆ. ಮುಂದೆ? ಪೂರಾ ಕತ್ತಲಾಗುತ್ತದೆ. ಮೌನ ಆವರಿಸುತ್ತದೆ…… ಕಗ್ಗತ್ತಲಲ್ಲಿ ಇಂಡಿಯಾ ಆಕಾರ ಕಳೆದಿರುತ್ತದೆ – ದೀಪ ಹಚ್ಚುವವರಾರು? ನಂದದೆ ಧೈರ್ಯದಿಂದ ನಿಲ್ಲುವ ಚಿಮಿಣಿ ದೀಪ ಯಾರ ಮನೆ ಅಟ್ಟದಲ್ಲಿದೆ?
*****
೦೧-೦೨-೨೦೦೨