ಜಗದ ದುಃಖದ ಕಡಲ ಕಡೆಯಲೊಗೆತಂದ ಶಶಿ
ಕಳೆಯಂತೆ, ಬೆಳುದಿಂಗಳಿನ ಶಾಂತಿ ಮಡುಗಟ್ಟಿ
ಹರಿದಂತೆ, ಮೌನ ಗಂಭೀರತೆಯೆ ಕೆನಗಟ್ಟಿ
ನಿಂದಂತೆ ಬುದ್ಧಸ್ಮಿತಂ! ಕರುಣೆ ನಳನಳಿಸಿ
ದಳದಳವನರೆತೆರೆದಂತೆ ಕಣ್ಮಲರ ಕಾಂತಿ!
ಹಿಂಸಾರತಿಯ ಕೆಸರ ತೊಳೆವ ಬಿತ್ತರದ ಹಣೆ
ನಿಜದ ನೇರಕೆ ಕರೆವ ನನೆಬಾಗು ಮೂಗುತೆನೆ
ತುಟಿಗಳೆರಡೂ ಪರವ ಸೆರೆಗೈದಿರುವ ದಾಂತಿ!
ನಿದ್ದೆಯಿಂದೆದ್ದ ಮೊಗದುದ್ಭುದ್ದ ಕಳೆಯಂತೆ
ಮುಗ್ಧ ಮಾನವ ಕೋಟಿ ಅದ ಮೊದಲು ಕಂಡಿರುವ
ಅಮಲ ತೇಜೋವಲಯ! ಸಿಂಪಿನಿಂದೊಗೆತರುವ
ಹೊಸತು ತತ್ತ್ವದ ಮುತ್ತು ಮನುಜ ಪುತ್ಥಳಿಯಂತೆ
ಕಂಗೊಳಿಸೆ ಬೋಧಿ ವೃಕ್ಷದಡಿ ಬುದ್ಧೋದಯಂ
ಬ್ರಹ್ಮಾಂಡಕೀಯುತಿದೆ ಶಾಂತಿ ನವನೀತಮಂ.
*****