ಅಲೀಬಾಬಾ ಮಾದರಿ ಮರೆಯದಿರಿ (ಕುದುರೆಮುಖ ಗಣಿಗಾರಿಕೆ ಕುರಿತಂತೆ)

ಹೇಗಿದೆಯೆಂದರೆ,
ಜವಾಬ್ದಾರಿ ಹೊತ್ತ ಮಂದಿ ಏನೋ ವಹಿವಾಟು ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ದೃಢವಾಗಿ ನಂಬಿಕೊಂಡು ನಾವು ಮನೆಮಂದಿ ನಮ್ಮ ನಮ್ಮ ಕೆಲಸ ಕಾರ್ಯ ಕಷ್ಟ ಸುಖ ಹಸಿವೆ ಊಟ ಹಾಡು ಹಸೆ ಕಂಬನಿ ನಗೆ ಮಾತುಕತೆಗಳಲ್ಲಿ ನಮ್ಮಷ್ಟಕ್ಕೆ ಮರೆತುಕೊಂಡಿರುವ ಹೊತ್ತಿಗೆ ಅವ್ಯವಹಾರ ವಹಿವಾಟು ನಡೆಸುವ ಮಂದಿ ಹಣದ, ಅಭಿವೃದ್ಧಿಯ ಹುಚ್ಚು ಹಂಬಲದಲ್ಲಿ ಇಡೀ ಇಡೀ ಮನೆ ಆಸ್ತಿ ಪಾಸ್ತಿ ಸರ್ವಸ್ವವನ್ನೂ ಅಡವಿಟ್ಟ ಸುದ್ದಿ ಬಂದು ಕವಿಯುವ ಕನ್ನೆತ್ತರು ಕಟ್ಟಿದಂತಹ ಮೌನದ ಹಾಗೆ. ಅಂಥ ಸಮಯದಲ್ಲಿ ಕೂಗೂ ಅಲ್ಲಿಯೇ ಕಂತುತ್ತದೆ – ಗೊತ್ತಷ್ಟೇ? ಒಡಲಿಗೆ ಬೆಂಕಿ ಬಿದ್ದಂತಹ ಏನು ಮಾತು ಹೇಗೆ ಮಾತು ತೋಚದ ಆಘಾತಗಳು ಇವೆಲ್ಲ. ಒಂದಲ್ಲ ಎರಡಲ್ಲ ಸಾಲು ಸಾಲು…. ನರ್ಮದಾ ತೇಹರಿ…. ಈಗ ತುಂಗಾ ಭದ್ರಾ….

ಕುದುರೆಮುಖ ಗಣಿಗಾರಿಕೆ ಮುಂದುವರಿದರೆ ತುಂಗ – ಭದ್ರಾ ನದೀ ಮೂಲವೇ ಒಣಗುತ್ತದೆ ಎಂಬುದು ಕೇವಲ ಭಾವುಕ ಚೀತ್ಕಾರವಲ್ಲ. ಅಮಾಯಕ ಕಲ್ಪನೆಯಲ್ಲ. ವಿಜ್ಞಾನ ಸಂಸ್ಥೆಗಳೇ ಅಧ್ಯಯನ ಆಧಾರ ಸಹಿತ ನುಡಿದ ಭವಿಷ್ಯ. ತುಂಗ – ಭದ್ರಾ ನದೀ ಪಾತ್ರಗಳು ಜಲಹೀನವಾಗುವುದನ್ನು ಸುಮ್ಮನೆ ಒಮ್ಮೆ ಊಹಿಸಿಕೊಳ್ಳಿ….

ಪ್ರತಿಯೊಂದು ಸರಕಾರ ಬಂದಾಗಲೂ ಜನ ಅಳಿದುಳಿದ ಆಸೆಗಳನ್ನು ಒಗ್ಗೂಡಿಸುತ್ತಾರೆ. ನಿರೀಕ್ಷೆ ಅವಾಹಿಸಿಕೊಂಡು ಸರಕಾರದತ್ತ ಮುಖವೆತ್ತುತ್ತಾರೆ. ಪ್ರತಿಸಲವೂ ಆಸೆಗಣ್ಣಿಗೆ ಮಣ್ಣು ಬೀಳುತ್ತದೆ. ಸರಾಕಾರಗಳ ಸ್ವಾರ್ಥ ಯಾವತ್ತೂ ನೋವಿಗೆ ಸತ್ಯಕ್ಕೆ ಸಹಜಕ್ಕೆ ಸ್ಪಂದಿಸುವುದಿಲ್ಲ. ಬದಲು, ಮಾಡಿದ ಕಾನೂನುಗಳನ್ನು ಸ್ವತಃ ತಾವೇ ಮುರಿಯುತ್ತವೆ. ಸಂವಿಧಾನವನ್ನೇ ತಿದ್ದಲು ಮುಂದಾಗುತ್ತವೆ. ಅಪರಾಧ ಮಾಡುತ್ತ ಸಮರ್ಥಿಸಿಕೊಳ್ಳುತ್ತವೆ. ಕಂಪನಿಗಳೊಂದಿಗೆ ಕೂಡಿ ವಾಣಿಜ್ಯ ಲಾಭಕ್ಕಾಗಿ ಪುಂಖಾನುಪುಂಖ ಜುಜುಬಿ ಸಮಸ್ಯೆಗಳನ್ನೇ ಭೂತಗನ್ನಡಿಯಲ್ಲಿ ತೋರಿಸುತ್ತ ತಮ್ಮನ್ನು ತಾವೇ ಸಂಮೋಹಿಸಿಕೊಳ್ಳುತ್ತವೆ. ಎದುರು, ನಂಬಿ ಅಧಿಕಾರ ಕೊಟ್ಟು ನಿಂತಿರುವ ಜನತೆ. ಮೊದಲೇ ನಾಳೆ ಹೇಗೋ ಏನೋ ಎಂಬ ವಿಚಿತ್ರ ತಲ್ಲಣದಲ್ಲಿ ಇದನ್ನು ಕಳೆಯುತ್ತಿದ್ದೇವೆ. ಇಂದಿರುವ ಈ ಗಿಡ ನಾಳೆಗಿಲ್ಲ, ಈ ಹೂವು ನಾಳೆಗಿಲ್ಲ. ಈ ಚಿಟ್ಟೆ ಈ ಹಕ್ಕಿ ಕೀಟ ಕೆರೆ ಕೊಳ್ಳ ನಾಳೆಗಿಲ್ಲ – ಎಂಬ ತಲ್ಲಣವೇ ಸಾಕಿತ್ತು. ಈಗ ನೋಡಿದರೆ ಈ ಗುಡ್ಡವಿಲ್ಲ. ಈ ನದಿಯೇ ಇರಲಿಕ್ಕಿಲ್ಲ…. ಎಂಬ ಪರಿಸ್ಥಿತಿ! ಕೆರೆ ಕೊಳ್ಳ ಕಟ್ಟಿಸಿದವರ ಕತೆ ಕೇಳಿದ್ದೇವೆ (ಕೆರೆ ಬತ್ತಿಸಿದವರ ಮುಚ್ಚಿಸಿದವರ ಕತೆಗಳನ್ನೂ ಓದುತ್ತಿದ್ದೇವೆ) ನದಿ ಸೃಷ್ಟಿಸಿದ ಮನುಷ್ಯರ ಕುರಿತು ಕೇಳಿದ್ದುಂಟೆ? ಅದು ಸಂಪೂರ್ಣ ಪ್ರಕೃತಿದತ್ತ. ತನ್ನ ತಾನೇ ಶೋಧಿಸಿಕೊಂಡು ಪ್ರವಹಿಸುವ ಪಾತ್ರ. ಭೂಮಿಯೊಡಲ ಸಂಜೀವಿನಿ. ಎಲ್ಲ ಗೊತ್ತಿದ್ದೂ ಅರಿವು ತಳ್ಳಿಕೊಂಡು ಜೀವಜಾಲದ ಮೂಲಕ್ಕೇ ಕೈ ಹಾಕ ಹೊರಟಿರುವ ಸರಕಾರದ ವರ್ತನೆ ಹಿಂದೆಂದಿಗಿಂದಲೂ ಹೆಚ್ಚು ನಿರ್ಲಕ್ಷ್ಯವಾಗಿ ಭ್ರಷ್ಟವಾಗಿ ಕಾಣುತ್ತಿದೆ.

ದೇಶದ ಉದ್ಯಮಗಳನೇಕವು ಆರ್ಥಿಕ ಸಂಕಟದಲ್ಲಿ ಮುಚ್ಚುವ ಪರಿಸ್ಥಿತಿಯಲ್ಲಿರುವಾಗ ಇರುವ ಉದ್ಯಮಗಳಾದರೂ ಉಳಿಯಲಿ ಎಂಬುದು ಸರಕಾರದ ಬಯಕೆಯೆಂದು ಕೇಳಿದೆ. ಜೀವ – ಜೀವನಗಳನ್ನು ಬಲಿಕೊಟ್ಟಾದರೂ ಉದ್ಯಮಗಳು ಉಳಿಯಬೇಕೆ? ಯಾರಿಗಾಗಿ? ಜನಪರ ಕಾಳಜಿ ಇರುವ ಯಾವುದೇ ರಾಜಕಾರಣಿಯಾದರೂ ಈ ಜಲಮೂಲ ಒಣಗಿ ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ – ಇರುವ ಜಲಮೂಲಗಳಾದರೂ ಉಳಿಯಲಿ. ನದಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲದ ನಾವು ಕೊನೇ ಪಕ್ಷ ಅವುಗಳ ನಾಶ ಮಾಡುವುದು ಬೇಡ ಎಂಬ ಧೋರಣೆ ತಳೆಯಬೇಕಿತ್ತು. ಇಂದು ಸರಕಾರದೆದುರು ಜನಮನ ಗೆಲ್ಲುವ ಒಂದು ಅಪೂರ್ವ ಅವಕಾಶವಿದೆ. ಅವಿವೇಕಕ್ಕೆ ಹುಚ್ಚು ಅಮಲಿಗೆ ಬಲಿಯಾಗದೆ ನದಿ ಉಳಿಸುವ ಮೂಲಕ ಚರಾಚರ ಜೀವಿಗಳ ಬದುಕುವ ಹಕ್ಕಿಗೆ ಸ್ಪಂದಿಸುವ ಜನಮತಕ್ಕೆ ಸ್ಪಂದಿಸುವ ಸುವರ್ಣ ಅವಕಾಶವಿದು. ನೋವಿಗೆ ಬದುಕಿಗೆ ಸ್ಪಂದಿಸುವ ಸರಕಾರಗಳಿಗೆ ಯಾವತ್ತೂ ಸೋಲಿಲ್ಲವೆಂಬುದನ್ನು ಮನಗಂಡು ತಕ್ಷಣವೇ ಅದು ಕಾರ್ಯೋನ್ಮುಖವಾಗಬೇಕು.

ಉದ್ದಮಾತು ಆಡುವ ಸಮಯವಲ್ಲವಿದು. ಕಾಲವೂ ಅಲ್ಲ. ಸಂಕ್ಷಿಪ್ತ ಹೇಳಬೇಕೆಂದರೆ – ಕುದುರೆಮುಖ ಗಣಿಗಾರಿಕೆ ಈ ಕ್ಷಣ ನಿಲ್ಲಬೇಕು.

ನದಿ ಬೇಕು ನಮಗೆ. ಜೀವನ ಬೇಕು. ನದಿ ಒಣಗಿದಲ್ಲಿ ಲೋಕ ಜೀವನ ಒಣಗುತ್ತದೆ. ಎಂತಲೇ ನದಿಗೆ, ನೀರಿಗೆ, ‘ಜೀವನ’ ಎಂಬ ಹೆಸರೂ ಇದೆ. ಎಷ್ಟು ಉಪಯೋಗ ಪಡೆಯಬೇಕೋ ಅಷ್ಟು ಪಡಕೊಳ್ಳೋಣ. ಪಡಕೊಂಡಿದ್ದೇವೆ. ಮಿತಿ ಮೀರುವುದು ಬೇಡ.

ಯಾವತ್ತೂ ನಮಗೆ ಆಲಿಬಾಬಾನೇ ಮಾದರಿಯಾಗಬೇಕು ಹೊರತು ಕಾಸಿಮನಲ್ಲ. ಹೋಗುತ್ತ ಹೋಗುತ್ತ ನಾವೀಗ ಮುಟ್ಟುತ್ತಿರುವುದು ಕಾಸಿಮ ಸಂಸ್ಕೃತಿಗೆ. ಇರುವುದಷ್ಟನ್ನೂ ಗೋಚುವ ಪಿಪಾಸೆಗೆ. ಅಷ್ಟನ್ನೂ ಗೋಚಿಕೊಳ್ಳುತ್ತೇವೆಂದು ಹೊರಟರೆ ಬಿಡುಗಡೆಯ ಮಂತ್ರವೇ ಮರೆತು ಹೋದೀತು!

ವೈಜ್ಞಾನಿಕ ಜ್ಞಾನದ ಜೊತೆ ಜೊತೆಗೆ ಚಂದ್ರನನ್ನು ಚಂದ್ರನನ್ನಾಗಿ ಕಾಣುವ, ನದಿಯನ್ನು ನದಿಯಾಗಿ, ಕಡಲು ಬೆಟ್ಟ ಗುಡ್ಡಗಳನ್ನು ಅವೆ ಅವೇ ಆಗಿ ಕಾಣುವ ಮುಗ್ಧತೆಯನ್ನು ಉಳಿಸಿಕೊಳ್ಳದೇ ಹೋದಲ್ಲಿ ದುರಂತ ಕಟ್ಟಿಟ್ಟ ಬುತ್ತಿ. ಕನಿಷ್ಟ ಇಷ್ಟು ಮುಗ್ಧತೆಯನ್ನಾದರೂ ಉಳಿಸಿಕೊಳ್ಳೋಣ. ಉಳಿಸಿಕೊಳ್ಳಬೇಕು; ಪ್ರಯತ್ನ ಪೂರ್ವಕವಾಗಿಯಾದರೂ.
ಇಲ್ಲವಾದಲ್ಲಿ –

ತಾಯಿಯ ಎದೆ ಕೊಯ್ದು ಮಾರಾಟಕ್ಕಿಡುವಷ್ಟು ಹೀನಾಯ, ಘೋರ ಕೃತ್ಯಕ್ಕೆ ಎಡೆ ಕೊಟ್ಟಂತಾದೀತು….
ಹೆಚ್ಚಿಗೇನು ಹೇಳಲಿ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.