ಬಾಳಿನ ಬೀಳಿದು, ಕೂಳಿನ ಗೋಳಿದು
ಸಾವಿನ ಸಂತೆಯು ನೆರೆಯುತಿದೆ;
ವೇದ ಪುರಾಣದ ವಾದಕೆ ಸಿಲುಕದ
ವೇದನೆಯೊಂದಿದು ಕೊರೆಯುತಿದೆ.
ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ
ಕಣ್ಣಿಗೆ ಕತ್ತಲೆಗಟ್ಟುತಿದೆ;
ಬಡತನ ಶಾಪಕೆ, ಒಡಲುರಿ ತಾಪಕೆ
ಮಸ್ತಕ ಚಿಣ್ ಚಿಟಲೆನ್ನುತಿದೆ.
ಚಿಂತೆಯ ಕಾಡಿನ ಎಲುವಿನ ಗೂಡಿನ
ಜೀವನ ಹಕ್ಕಿಯು ನರಳುತಿದೆ;
ಹಾರುತ ಹೋರುತ ಮೇಲಕ್ಕೇರುತ
ಪಕ್ಕ ಸೋತು ನೆಲಕುರುಳುತಿದೆ.
ಎಲುವಿನ ಹಂದರ ಜೀವನ ಮಂದಿರ
ಅದುರಿ ಮುದುರಿ ಕುಪ್ಪರಿಸುತಿದೆ;
ನಾಡಿಯು ಸತ್ತಿಹ ನೆತ್ತರು ಬತ್ತಿಹ
ತೊಗಲುದೇಹವಪ್ಪಳಿಸುತ್ತಿದೆ.
ತಾಳದೆ ಬಾಳದೆ ಬೀಳದೆ ಏಳದೆ
ತೆಕ್ಕಿಮುಕ್ಕಿ ಹೊರಳಾಡುತಿದೆ;
ಕಂಡೂ ಕಾಣದೆ, ಕಂಡರು ಕೇಳದೆ
ಬಿಕ್ಕಿ ಬಿಕ್ಕಿ ತೊಳಲಾಡುತ್ತಿದೆ.
ಚೀರಲು ಹಲುಬಲು ಬೊಬ್ಬೆಯ ಹೊಡೆಯಲು
ಕರುಳ ಸುರುಳಿ ಹೊಡಮರಳುತಿದೆ;
ಅಕ್ಕಟಕ್ಕಟಾ! ಪ್ರಾಣದ ಸಂಕಟ
ಧೀಂಕಿಟ ಧುಮುದುಮುಗುಟ್ಟುತಿದೆ.
*****