ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಒಂದು

(ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ)

ಮಂಥನ -ಭಾಗ ೧
ವಿಶದಮಾದೊಂದು ಜೀವನಧರ್ಮದರ್ಶನವ |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನು || ಮಂ ||

ಹಗ್ಗವನ್ನು ನಾಲ್ಕಾರು ಎಳೆಗಳಿಂದ ಹೊಸೆದಾಗ ಗಟ್ಟಿಮುಟ್ಟಿಯಾದ ಹಗ್ಗವು ಆಗುತ್ತದೆ. ಅದರಂತೆಯೇ ಗುಂಡಪ್ಪನವರು ತಮ್ಮ ಜೀವನದ ರಸಪಾಕವನ್ನು ಈ ಕಗ್ಗದಲ್ಲಿ ಹೊಸೆದಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿ, ಅವರು ಕಷ್ಟನಷ್ಟ ನೋವು ಬೇನೆ ಇವುಗಳಿಂದ ಹೊರಗೆ ಬಂದು ತಮ್ಮ ಅನುಭವದ ಮಾತನ್ನೇ ಇಲ್ಲಿ ಹೇಳಿದ್ದಾರೆ.

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ |
ಅವನರವಿಗೆಟುಕುವವೊಲೊಂದಾತ್ಮ ನಯವ ||
ಹವಣಿಸಿದನಿದನು ಪಾಮರಜನದ ಮಾತಿನಲಿ |
ಕವನ ನೆನಪಿಗೆ ಸುಲಭ || ಮಂ ||

ಗುಂಡಪ್ಪನವರಿಗೆ ಅಹಂಕಾರವಿಲ್ಲ. ಹಾಡುವ ಹಾಗೆ ಏಕೆ ಬರೆದದ್ದು? ಎಂದರೆ ಕವನ ನೆನೆಪಿಗೆ ಸುಲಭ, ಮನಸ್ಸಿಗೆ ಸುಲಭವಾಗಿ ನೆನಪಿಗೆ ಬರುವಂತಾಗಲಿ, ಸ್ಮರಣೆಯಲ್ಲಿ ಉಳಿಯಲಿ, ಎಂದು ಕವನ ರೂಪದಲ್ಲಿ ಬರೆದಿದ್ದಾರೆಂದು ತಿಳಿಸಿದ್ದಾರೆ. ಇದು ನಿತ್ಯ ಪಾರಾಯಣ ಗ್ರಂಥ.

ಈ ಕಗ್ಗದಲ್ಲಿ ಗುಂಡಪ್ಪನವರು ತಮಗೆ ಬಂಡ ಸಂಶಯಗಳನ್ನು ಪ್ರಶ್ನರೂಪದಲ್ಲಿ ಕೇಳಿದ್ದಾರೆ. ಅವು ಅವರಿಗೆ ಬಂದ ಸಂಶಯಗಳಷ್ಟೇ ಅಲ್ಲ, ಎಲ್ಲ ಮಾನವರಿಗೆ ಬರುವ ಸಂಶಯಗಳು. ಈ ಹೊರ ಪ್ರಪಂಚವನ್ನು ನಾವು ನೋಡುತ್ತೇವೆ. ಇಂದ್ರಿಯಗಳಿಂದ ಅದರ ಅನುಭವ ಪಡೆಯುತ್ತೇವೆ. ಈ ಹೊರ ಜಗತ್ತು ನಮಗೆ ತಿಳಿಯುತ್ತದೆ. ಆದರೆ ಇದರ ಹಿಂದೆ ಏನಾದರೂ ಇದೆಯೇ ಎಂಬ ಪ್ರಶ್ನೆಯನ್ನು ಗುಂಡಪ್ಪನವರು ಬಿಡಿಸಿ ಹೇಳಿದ್ದಾರೆ.

ಏನು ಜೀವನದರ್ಥ? ಏನು ಪ್ರಪಂಚಾರ್ಥ? |
ಏನು ಜೀವಪ್ರಪಂಚಗಳ ಸಂಬಂಧ? ||
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? |
ಜ್ಞಾನ ಪ್ರಮಾಣವೇಂ || ಮಂ ||

ದೇವ ನಮಗೆ ಇಂದ್ರಿಯಗಳನ್ನು ಹೊರಮುಖವಾಗಿ ಸೃಷ್ಟಿಸಿರುತ್ತಾನೆ. ಇಂದಂತಿ, ಜಾನಂತಿ, ಇತಿ ಇಂದ್ರಿಯಾಣಿ. ಇಂದ್ರಿಯಗಳು ಹೊರಗಿನ ಪ್ರಪಂಚದ ಎಲ್ಲ ಅನುಭವಗಳನ್ನು ತಿಳಿಸುತ್ತವೆ. ಅಂದರೆ ಕಣ್ಣಿಗೆ ಕಾಣಿಸುವ, ಕಿವಿಗೆ ಕೇಳಿಸುವ, ನಾಲಿಗೆಗೆ ರುಚಿಸುವ, ಮೂಗಿಗೆ ವಾಸನೆ ಬರುವ, ಎಲ್ಲ ಅನುಭವಗಳನ್ನು ಸವಿಸ್ಟಾರವಾಗಿ ತಿಳಿಸುತ್ತವೆ. ಈ ಹೊರಗಿನ ಪ್ರಪಂಚದ ಅನುಭವಗಳನ್ನು ಪಡೆಯುವುಡಷ್ಟೇ ನಮ್ಮ ಜನ್ಮದ ಉದ್ದೇಶವಲ್ಲ. ಈ ಹೊರ ಪ್ರಪಂಚ ಇಂದ್ರಿಯ ಗೋಚರ. ಇಂದ್ರಿಯ, ಮನಸ್ಸು, ಬುದ್ಧಿಗೆ ಆಗೋಚರವಾದುದನ್ನು ತಿಳಿಯುವುದಕ್ಕೆ ಯಾವ ಪ್ರಮಾಣ?

ಪ್ರಪಂಚದ ಅರಿವು, ಪರಮಾತ್ಮನ ಅರಿವು ಆಗಬೇಕಾದರೆ ಜ್ಞಾನ ಸಾಧನೆಯನ್ನು ಮಾಡಬೇಕು, ಶಾಸ್ತ್ರಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು, ಇಲ್ಲವೆ ಗುರುಗಳಿಗೆ ಶರಣಾಗಬೇಕು.

ಒಬ್ಬದಾರಿಕಾರನು ಬಿಸಿಲಲ್ಲಿ ನಡೆದು ದಣಿದು ಬೆಂಡಾಗಿ ಆಲದ ಮರದ ನೆರಳಲ್ಲಿ ವಿಶ್ರಮಿಸಿದ, ಸ್ವಲ್ಪ ಸಮಯದ ನಂತರ ಮೇಲೆ ನೋಡುತ್ತಾನೆ. ಆಲದ ಮರದಲ್ಲಿಯ ಚಿಕ್ಕ ಚಿಕ್ಕ ಕಾಯಿಗಳು ದೃಷ್ಟಿಗೆ ಬೀಳುತ್ತವೆ. ಆ ಕಾಯಿಗಳನ್ನು ನೋಡಿ ಅವನಿಗೆ ಬಹಳ ವಿಚಿತ್ರವೆನಿಸುತ್ತಡೆ. ಆಲದ ಮರಕ್ಕೂ ಕಾಯಿಗೂ ಸಂಬಂಧವೇ ಇಲ್ಲ. ಎಲ್ಲಿ ಆಲದ ಮರ? ಎಲ್ಲಿ ಅದರ ಕಾಯಿ? ಒಂದು ಕಡೆ ಹೀಗಿದ್ದರೆ ಇನ್ನೊಂದು ಕಡೆ ಕುಂಬಳ ಬಳ್ಳಿ ಅವನ ನೆನಪಿಗೆ ಬಂತು. ಕುಂಬಳ ಬಳ್ಳಿ ಅತೀ ಕೋಮಲ, ಅದರ ಕಾಯಿ ಯಮ ಗಾತ್ರ. ಏನಿದು ಸೃಷ್ಠಿ? ಎಂದು ವಿಚಾರ ಮಗ್ನನಾದ. ಅದೇ ವೇಳೆಗೆ ಅವನಿಗೆ ತಲೆಯ ಮೇಲೆ ನಾಲ್ಕಾರು ಆಲದ ಕಾಯಿಗಳು ಉದುರಿದವು. ತಕ್ಷಣ ಅವನಿಗೆ ಜ್ಞಾನೋದಯವಾಯಿತು. ಭಗವಂತನು ದಯಾಮಯ ದಣಿದು ಬಂದವರ ಆಶ್ರಯಕ್ಕಾಗಿಯೇ ಆಲದ ಮರವನ್ನು ಸೃಷ್ಟಿಸಿದ್ದಾನೆ. ಒಂದು ವೇಳೆ ಯಮ ಗಾತ್ರಡ ಕಾಯಿಗಳು ತಲೆಯ ಮೇಲೆ ಉದುರಿದ್ದರೆ ಏನಾಗುತ್ತಿತ್ತು?

ಭಗವಂತನ ಹಾಗೂ ಸೃಷ್ಟಿಯ ಅರಿವು ಮೂಡಬೇಕಾದರೆ ಜ್ಞಾನಸಾಧನೆಯನ್ನು ಮಾಡಬೇಕು.
ಏನು ಪ್ರಪಂಚವಿದು! ಏನು ದಾಳಾದಾಳಿ!
ಏನದ್ಭುತಾಪಾರ ಶಕ್ತಿ ನಿರ್ಘಾತ!
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?
ಏನರ್ಥವಿದಕೆಲ್ಲ || ಮಂ ||

ಕಣ್ಣಿಗೆ ಕಾಣುವ ಪರಮಾತ್ಮನ ಅದ್ಭುತವಾದ ಸೃಷ್ಟಿ ಎಲ್ಲರಿಗೂ ಅರ್ಥವಾಗುತ್ತದೆ. ಇದನ್ನು ಏತಕ್ಕಾಗಿ ಸೃಷ್ಟಿಸಿದ? ಎಂಬುದರ ಗೂಢಾರ್ತ ಅಷ್ಟು ಸುಲಭವಾಗಿ ತಿಳಿಯಲಾರದು. ಅದರಂತೆಯೇ ಮಾನವನು ಜನ್ಮ ತಾಳಿದ್ದು ಏತಕ್ಕೆ? ಅವನು ಗಳಿಸಬೇಕಾದ ಮುಖ್ಯ ಧ್ಯೇಯ ಯಾವುದು? ಇವೆಲ್ಲವನ್ನು ಅರಿತುಕೊಳ್ಳಬೇಕಾದರೆ, ಶಾಸ್ತ್ರಗಳನ್ನು, ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಇಲ್ಲವೆ ಸತ್ಸಂಗದಲ್ಲಿರಬೇಕು. ಸತ್ಸಂಗ ಸಿಗುವುದು ಬಹಳ ದುರ್ಲಭ.
ಸತ್ಸಂಗತ್ವೇ, ನಿಸಃಗತ್ವಂ, ನಿಸ್ಸಂಗತ್ವೇ, ಜೀವನ್ಮುಕ್ತಿ:

ನಮ್ಮ ಎಲ್ಲ ಪ್ರಶ್ನೆಗಳಿಗಾಗಲಿ ಸಂಶಯಗಳಿಗಾಗಲಿ ಇದೇ ಉತ್ತರ.

ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೇ ಗಾಳಿಯನುಸಿರ್ವ ನರಜಾತಿಯೊಳಗಿಂತು |
ಬಂದದೀ ವೈಷಮ್ಯ || ಮಂ ||

ಪ್ರಪಂಚದಲ್ಲಿರುವ ಎಲ್ಲ ಮಾನವರಿಗೂ ಆಕಾಶವು ಒಂದೇ ರೀತಿಯಾಗಿ ಕಾಣಿಸುತ್ತದೆ. ಭೂಮಿ ತಾಯಿ ಎಲ್ಲರಿಗೂ ಆಹಾರವನ್ನು ಒದಗಿಸುತ್ತಾಳೆ. ವಾಯುವು ಒಂದೇ ಸಮನಾಗಿ ಬೀಸುತ್ತಾನೆ. ಗಂಗಾ ಮಾತೆಯು ಎಲ್ಲರಿಗೂ ನೀರನ್ನು ಹರಿಸುತ್ತಾಳೆ. ಇವೆಲ್ಲವು ಒಂದೇ ತೆರವಾಗಿದ್ದರೂ ಇದೇ ಪ್ರಪಂಚದಲ್ಲಿರುವ ಮಾನವ ಕುಲವನ್ನು ನೋಡಿದರೆ ಒಬ್ಬರಂತೊಬ್ಬರಿಲ್ಲ ಇದೊಂದು ಅಘಾದ ಸೃಷ್ಟಿ.
ಪ್ರಪಂಚದ ವಿಷಯ ಬಿಟ್ಟು, ಒಂದೇ ತಾಯಿಯ ಮಕ್ಕಳನ್ನು ತೆಗೆದುಕೊಂಡರೆ ಅವರೂ ಒಬ್ಬರಂತೆ ಒಬ್ಬರಿಲ್ಲ. ಅವರಿಗೆ ಜನ್ಮ ಕೊಟ್ಟ ತಾಯಿ ಒಬ್ಬಳೇ, ಹಾಲುಣಿಸಿದವಳು ಒಬ್ಬಳೇ, ಆದರೂ ಈ ವೈಷಮ್ಯ ಏಕೆ?
ಅಡನ್ನೂ ಬಿಟ್ಟು ನಮ್ಮ ದೇಹವನ್ನೇ ತೆಗೆಡುಕೊಂಡರೆ ನಮ್ಮ ಕೈಬೆರಳುಗಳೇ ಒಂದರಂತೆ ಒಂದು ಇಲ್ಲ. ನಮ್ಮ ಎಡಗಾಲು ಎಡಗೈ ಕನಿಷ್ಟ, ಬಲಗಾಲು ಬಲಗೈ ಶ್ರೇಷ್ಟ, ಎಡಕಣ್ಣು ಹಾರಿದರೆ ಅಶುಭ, ಬಲಗಣ್ಣು ಹಾರಿದರೆ ಶುಭ, ನಮ್ಮ ಶರೀರದ ಇಂದ್ರಿಯಗಳಲ್ಲೇ ಇಷ್ಟು ಭೇದವಿದೆ.

ಮನಸ್ಸನ್ನು ನಿರೀಕ್ಷಣೆ ಮಾಡಿದರೆ ಅದರ ರೀತಿಯೇ ವಿಚಿತ್ರ. ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ.
ಬೆಡಕಾಟ ಬದುಕೆಲ್ಲ; ಕ್ಷಣಕ್ಷಣವು ಹೊಸಹಸಿವು |
ಅದಕಾಗಿ ಇದಕಾಗಿ ಮತ್ತೊಂದಕ್ಕಾಗಿ ||
ಅಧಿಕಾರ ಸಿರಿಸೊಗಸು ಕೀರ್ತಿಗಳ ನೆನೆದು ಮನ |
ಕುಡಿಯುತಿಹುದಾವಗಂ || ಮಂ ||
ಈ ಪ್ರಪಂಚದಲ್ಲಿ ಎಲ್ಲರೂ ಬೆಳಗಿನಿಂದ ಸಾಯಂಕಾಲದವರೆಗೆ ಶ್ರಮ ಪಡುವುದು ಹೊಟ್ಟೆ, ಬಟ್ಟೆ, ವಸತಿಗಾಗಿ ಎಂದು ತಿಳಿದಿದ್ದಾರೆ. ಇದು ಮೊದಲಿನ ಹೆಜ್ಜೆ. ಹೊಟ್ಟೆ ತುಂಬಿದ ನಂತರ ಈ ಹೊರಗಿನ ಪ್ರಪಂಚದಲ್ಲಿ ಆಂತಃಕರಣ, ಮನಸ್ಸು, ಬುದ್ಧಿಯಿಂದ, ಮನುಷ್ಯನು ತನ್ನ ಸುಖಕ್ಕಾಗಿ ಅಲೆದಾಡುವ ರೀತಿ ಅಷ್ಟಿಷ್ಟಲ್ಲ.

ಬೆದಕಾಟ ಬದುಕೆಲ್ಲ ಕ್ಷಣಕ್ಷಣವು ಹೊಸ ಹಸಿವು.

ನಾವು ಹೊರ ಪ್ರಪಂಚದಲ್ಲಿ ನಮ್ಮ ಸುಖಕ್ಕಾಗಿ ಕಾಲಿಟ್ಟೆವೋ ಕ್ಷಣಕ್ಷಣಕ್ಕೂ ಹೊಸ ಆಶೆಗಳು ಪ್ರಾರಂಭವಾಗುತ್ತವೆ. ಒಂದು ಇಚ್ಛೆಯನ್ನು ಪೂರೈಸುವುದರೊಳಗೆ ಮತ್ತೊಂಡು ಇಚ್ಛೆ ಆ ಸ್ಥಾನವನ್ನು ತುಂಬಿಯೇ ಬಿಟ್ಟಿರುತ್ತದೆ. ಎಲ್ಲರಿಗೂ ಅಧಿಕಾರ, ದುಡ್ಡು ಕೀರ್ತಿ, ಇವುಗಳ ಆಶೆ ಇದ್ದೇ ಇರುತ್ತದೆ. ಎಲ್ಲಕ್ಕೂ ಹಿರಿದಾದ ಆಶೆಯೆಂದರೆ ಸಮಾಜದಲ್ಲಿ ತನಗೆ ಗೌರವ ದೊರಕಬೇಕೆಂಬುದು. ಆಶೆಗಳಿಗೆ ಕೊನೆಯೇ ಇಲ್ಲ.

ನಾವೇ ಚಿಕ್ಕವರಿದ್ದಾಗ ಈ ಆಶೆಗಳು ಇನ್ನೂ ಹುಟ್ಟದೇ ಇರುವಾಗ ಆನಂದವಾಗಿದ್ದೆವು. ಅಮ್ಮನು ಹಸಿವೆ ಎಂದಾಗ ಬೇಡಿದ್ದನ್ನು ಕೊಡುತ್ತಿದ್ದಳು. ಹೊಟ್ಟೆ ತುಂಬಿದರೆ ಆನಂದವಾಗಿ ಇರುತ್ತಿದ್ದೆವು. ಚಿಕ್ಕವರಿದ್ದಾಗ ಹಸಿವೆ ಮಾತ್ರ ಇತ್ತು.

ಹಸಿವೆ ಮಾತ್ರ ಚಿಂತೆಗೆ ಕಾರಣವಲ್ಲ.

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ ? ಚಿಂತಿಸೆಲೊ || ಮಂ ||

ನಾವು ಚಿಕ್ಕವರಿದ್ದಾಗ ಸುಖವಾಗಿದ್ದೆವು. ಯಾಕೆಂದರೆ ಮನಸ್ಸಿನಲ್ಲಿ ಇಚ್ಛೆಗಳೇ ಇರಲಿಲ್ಲ. ಬುದ್ಧಿಯೂ ಬೆಳೆದಿರಲಿಲ್ಲ. ನಾವು ಬೆಳೆದಂತೆ ಬುದ್ಧಿ, ಮನಸ್ಸು, ಇಚ್ಛೆಗಳೂ ಬೆಳೆದವು. ಇಚ್ಛೆಗಳಿಗೆ ಕಾರಣ ಇಂದ್ರಿಯಗಳು. ಇಂದ್ರಿಯಗಳೆಂದರೆ ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚೆ. ಇವು ಹೊರಮುಖವಾಗಿ ಸದಾಕಾಲ ಹೊರಗೆ ಕಣ್ಣಿಗೆ ಕಾಣುವ ಪ್ರಪಂಚದೊಳಗೆ ಸುಖವನ್ನು ಅರಸುತ್ತಿರುತ್ತವೆ. ಈ ಹೊರ ಪ್ರಪಂಚದೊಳಗೆ ಸುಖವಿದೆ ಹೋಗು ಎಂದು ಯಾವ ತಂಡೆ ತಾಯಿಯೂ ಮಕ್ಕಳನ್ನು ಕಳಿಸಿಲ್ಲ. ಶಾಲೆಯಲ್ಲಿ ಗುರುಗಳು ಮಕ್ಕಳಿಗೆ ಹೊರ ಪ್ರಪಂಚದಲ್ಲಿ ಸುಖವಿದೆ ಎಂದು ಪಾಠ ಹೇಳಿಕೊಟ್ಟಿಲ್ಲ.

ನಮ್ಮ ಮನಸ್ಸೇ ನಮಗೆ ಗುರು.

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು |
ಬೇಕೆನುತ ಬೊಬ್ಬಿಡುತಲಿಹ ಘಟವನಿದನು ||
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ |
ಸಾಕೆನಿಪುದೆಂದಿಗೆಲೊ || ಮಂ ||

ಮನುಷ್ಯನು ಬೆಳೆದ ಹಾಗೆ ಅವನ ಜೊತೆಗೆ ಅವನ ಬುದ್ಧಿ ಹಾಗೂ ಮನಸ್ಸೂ ಬೆಳೆಯುತ್ತಡೆ. ಇವು ಬೆಳೆದಂತೆ ಇದರ ಜೊತೆಗೆ ಇಚ್ಛೆಗಳೂ ಬೆಳೆಯುತ್ತವೆ. ಇಚ್ಛೆಗಳನ್ನು ಪೂರೈಸಲು ಅವನು ಹಗಲೂ ಇರುಳೂ ಪರಿಶ್ರಮ ಪಡುತ್ತಾನೆ. ಸಾಕಷ್ಟು ಸಂಪಾದನೆಯನ್ನು ಮಾಡಿ ಕೂಡಿಡುತ್ತಾನೆ. ಇನ್ನೇನು ಹಾಯಾಗಿ ಸುಖಿಯಾಗಿರೋಣ ಎನ್ನುವ ವೇಳೆಗೆ ಪ್ರಕೃತಿ ನಾಜೂಕಾಗುತ್ತಡೆ. ಆಗ ವೈದ್ಯರು ಸಕ್ಕರೆ ತಿನ್ನಕೂಡದು ಹಾಗೂ ಅನ್ನ ಮುಟ್ಟಕೂಡದೆಂದು ಕಟ್ಟಪ್ಪಣೆ ಮಾಡುತ್ತಾರೆ. ಅವನು ಪರಿಶ್ರಮ ಪಟ್ಟು ದುಡಿದದ್ದು ಏಕೆ? ಒಂದಿಲ್ಲ ಒಂದು ದಿವಸ ತನಗೆ ಸುಖ ಸಿಕ್ಕೇ ಸಿಗುತ್ತಡೆಂಬ ಆಸೆಯಿಂದ. ಆದರೆ ಗುಂಡಪ್ಪನವರು ಹೇಳುವದು, ಸುಖ ಶಾಂತಿ ಸಮಾದಾನ ಹೊರಗಡೆ ಸಿಗುವಂತ ವಸ್ತು ಅಲ್ಲ.

ನಮ್ಮ ಸುಖಕ್ಕೂ ದುಃಖಕ್ಕೂ ನಮ್ಮ ಮನಸ್ಸೇ ಕಾರಣ

ನಮ್ಮ ಮನಸ್ಸಿನ ಅಶಾಂತಿಗೆ ಬೇಕು ಬೇಕು ಅನ್ನುವಂತಹ ಇಚ್ಛೆಗಳೇ ಕಾರಣ. ನಮಗೇ ಅರಿವಿಲ್ಲದಂತೆ ಚಿಕ್ಕಂದಿನಿಂದ ಒಂದು ಜಪವನ್ನು ಕಲಿತಿರುತ್ತೇವೆ. ಯಾವುದೇ ಸುಂದರವಾದ ವಸ್ತು ಕಣ್ಣಿಗೆ ಬಿದ್ದರೆ ಅದು ತನಗೆ ಬೇಕು ಎನ್ನುವ ಜಪ. ಈ ಜಪ ನಮಗೆ ಯಾರೂ ಕಲಿಸಿದ್ದಲ್ಲ. ಅದಕ್ಕೆ ಯಾರನ್ನು ಜರೆಯುವುದು ಬೇಡ. ನಮಗೆ ಏನು ಬೇಕು ಎಂಬುದರ ಅರಿವು ಇಲ್ಲ.

ಒಬ್ಬನು ಕಠೋರವಾದ ತಪಸ್ಸು ಮಾಡಿದ. ಅವನ ತಪಸ್ಸಿಗೆ ದೇವರು ಮೆಚ್ಚಿ “ನಿನಗೆ ಇಷ್ಟವಾದ ಮೂರು ವರಗಳನ್ನು ಕೇಳಿಕೊ” ಎಂದ. ಅವನಿಗೆ ಬಹಳ ಸಂತೋಷವಾಯಿತು. ಮೊದಲನೆಯ ವರ – ಅವನು ತನ್ನ ಹೆಂಡತಿ ಅಪ್ರತಿಮ ಸುಂದರಿಯಾಗಿರಬೇಕೆಂದು ಕೇಳಿಕೊಂಡ. ತಕ್ಷಣ ಅವನ ಹೆಂಡತಿ ರೂಪವತಿಯಾದಳು. ಅವಳು ಎಂದಿನಂತೆ ಊರ ಹೊರಗಡೆ, ಬಾವಿಯ ನೀರು ತರಲು ಹೊರಟಳು. ಅದೇ ಕಾಲಕ್ಕೆ ಸರಿಯಾಗಿ ರಾಜನೂ ತನ್ನ ಪರಿವಾರದೊಂದಿಗೆ ಹೊರಟ. ಬೀದಿಯಲ್ಲಿ ಇವಳನ್ನು ನೋಡಿ ಬೆರಗಾದ, ಇವಳು ಅಪ್ಸರೆಯೋ, ಮೇನಕೆಯೋ ರಾಜನಿಗೆ ತಿಳಿಯಡೇ ಹೋಯಿತು. ಅವಳನ್ನು ತನ್ನ ಅರಮನೆಗೆ ಕರೆದುಕೊಂಡು ಬರಲು ಸೇವಕರಿಗೆ ಆಜ್ಞೆ ಇತ್ತ. ರಾಜನ ಆಜ್ಞೆಯಂತೆ ಅವರು ಅವಳನ್ನು ಅರಮನೆಗೆ ಕೊಂಡೊಯ್ದರು.

ಇತ್ತ ತಪಸ್ವಿ ನೀರಿಗಾಗಿ ಕಾಯ್ದು ಬೇಸತ್ತು ಮನೆಯಿಂದ ಹೊರಟ. ಅಷ್ಟರಲ್ಲಿ ರಾಜದೂತರು ಅವನ ಹೆಂಡತಿಯನ್ನು ಅರಮನೆಗೆ ಕೊಂಡೊಯ್ದ ಸಮಾಚಾರ ಅವನಿಗೆ ತಿಳಿಯಿತು.

ತಕ್ಷಣ ಅವನು ಎರಡನೆಯ ವರ – ತನ್ನ ಹೆಂಡತಿ ಎಲ್ಲಿ ಇದ್ದಲ್ಲಿಯೇ ಕೋತಿಯಾಗಲಿ ಎಂದು ಕೇಳಿಕೊಂಡ. ಅದರಂತೆಯೇ ಅವಳು ಕೋತಿಯಾದಳು. ರಾಜನು ಬಂದು ನೋಡುತ್ತಾನೆ ಕೋತಿ, ಆಶ್ಚರ್ಯಚಕಿತನಾದ. ಇವಳೇನು ಯಕ್ಷಿಣಿ ಇರಬಹುದೇ ಎಂದು ವಿಚಾರಮಗ್ನನಾಗಿ ರಾಜದೂತರಿಗೆ ಆ ಕೋತಿಯನ್ನು ಬಾವಿಯ ಸನಿಹದಲ್ಲಿ ಬಿಟ್ಟು ಬರಲು ಆಜ್ಞೆ ಇತ್ತ. ಅದರಂತೆ ಕೋತಿಯನ್ನು ಬಾವಿಯ ಸನಿಹಕ್ಕೆ ಬಿಟ್ಟು ಬಂದರು. ಅಲ್ಲಿಂದ ಆ ಕೋತಿ ತನ್ನ ಮನೆಯ ಹತ್ತಿರ ಬಂದಿತು. ತಪಸ್ವಿ ಆ ಕೋತಿಯನ್ನು ಗುರುಟಿಸಿದ. ತಕ್ಷಣ ಮೂರನೆಯ ವರ – ತನ್ನ ಹೆಂಡತಿ ಮೊದಲು ಹೇಗಿದ್ದಳೋ ಹಾಗೆಯೇ ಆಗಲಿ ಎಂದು ಕೇಳಿಕೊಂಡ.

ಪರಮಾತ್ಮನು ಎಲ್ಲರಿಗೂ ಒಳ್ಳೆಯದನ್ನೇ ಕರುಣಿಸಿದರೂ ನಮಗೆ ಅದರ ಅರಿವಾಗುವುದಿಲ್ಲ. ನಮಗೆ ಸರಿಯಾಗಿ ಏನು ಬೇಕು ಎಂಬುದರ ಅರಿವಿಲ್ಲ. ಒಟ್ಟಿನಲ್ಲಿ ಬೇಕು ಅನ್ನುವ ಜಪ ಅಷ್ಟೇ.

ಅದೇ ನಮಗೆ ಗುರುಗಳು, ಮಹಾತ್ಮರು ಪ್ರತಿ ದಿವಸವೂ ಜಪದ ಸಾಧನೆ ಮಾಡಿರಿ. ಅಂದರೆ ಮನಸ್ಸಿಗೆ ಸ್ವಲ್ಪ ಮಟ್ಟಿಗಾದರೂ ಸಮಾಧಾನ ಶಾಂತಿ ಸಿಗುತ್ತದೆ ಎಂದು ಉಪದೇಶ ಮಾಡಿದರೆ, ನಾವು ಅವರಿಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತೇವೆ. ನಮ್ಮ ಮೊದಲನೆಯ ಪ್ರಶ್ನೆಯೇ ಯಾವ ಜಪ ಮಾಡಬೇಕು? ಕೃಷ್ಣನದೋ? ರಾಮನದೋ? ಶಿವನದೋ? ಲಕ್ಷ್ಮಿಯದೋ? ನಮ್ಮ ಆಸನ ಯಾವುದಿರಬೇಕು? ಯಾವದಿಕ್ಕಿಗೆ ಮುಖ ಮಾಡಬೇಕು? ಬೆಳಿಗ್ಗೆಯೋ ಇಲ್ಲವೇ ಸಾಯಂಕಾಲವೋ? ಅಂತು ಪ್ರಶ್ನೆಗಳ ಸುರಿಮಳೆಯಲ್ಲಿಯೇ ನಮ್ಮ ಜಪ ಮುಗಿಸಿಬಿಡುತ್ತೇವೆ.

ಗುರುಗಳೂ, ಮಹಾತ್ಮರೂ ಹೇಳುವರು, ಶಾಂತಿ ಸಮಾಧಾನ ಮನಸ್ಸಿನೊಳಗೇ ಇದೆ ವಿನಹಃ ಹೊರಗಡೆ ಇಲ್ಲ.

ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ |
ಕಾಣಿಸುವರನ್ನವನು? ಹಸಿವವರ ಗುರುವು ||
ಮಾನವನುಮಂತುದರಶಿಷ್ಯನವನಾ ರಸನೆ |
ನಾನಾವಯವಗಳಲಿ || ಮಂ ||

ನಾವು ಸಿಹಿ ಪದಾರ್ಥಗಳನ್ನು ಎಷ್ಟೇ ದಕ್ಷತೆಯಿಂದ ಕಾಯ್ದಿಟ್ಟರೂ, ಸ್ವಲ್ಪ ಅವಕಾಶ ದೊರಕಿದರೆ, ಇರುವೆಗಳು ಸಾಲುಸಾಲಾಗಿ ಬಂದು ಸಿಹಿ ಪದಾರ್ಥಕ್ಕೆ ಮುತ್ತಿಗೆ ಹಾಕುತ್ತವೆ. ಅವು ಎಲ್ಲಿಂದ ಬರುತ್ತವೆ? ಹೇಗೆ ಬರುತ್ತವೆ? ಎಂಬುದು ತಿಳಿಯಲಸಾದ್ಯ. ಉಸುಕಿನಲ್ಲಿ ಸಕ್ಕರೆಯನ್ನು ಬೆರೆಯಿಸಿ ಇಟ್ಟರೂ ಇರುವೆಗಳು ಸಕ್ಕರೆಯನ್ನು ಗುರುತಿಸುತ್ತವೆ.

ಇದರಂತೆಯೇ ಕಾಗೆಗಳು ಮೇಲಕ್ಕೆ ಆಕಾಶದಲ್ಲಿ ಹಾರಾಡುಟ್ಟಿದ್ದರೂ ಭೂಮಿಯ ಮೇಲಿನ ಅನ್ನವನ್ನು ಕಂಡು ಹಿಡಿಯುತ್ತವೆ. ಈ ವಿದ್ಯೆಯನ್ನು ಇರುವೆಗಾಗಲೀ ಕಾಗೆಗಾಗಲೀ ಯಾರೂ ಕಲಿಸಿದ್ದಲ್ಲ. ಅವು ತಮ್ಮ ಹೊಟ್ಟೆಯ ಪಾಡಿಗಾಗಿ ತಾವೇ ಕಲಿತದ್ದು.

ನಾನಾ ರೀತಿಯ ಪಶು ಪಕ್ಷಿಗಳಿಗೆಲ್ಲ ಹಸಿವೆಯ ಚಿಂತೆ ಮಾತ್ರ. ಹಸಿವೇ ಅವುಗಳ ಗುರು.

ದಾಸರೋ ನಾವೆಲ್ಲ ಶುನಕನಂದದಿ ಜಗದ |
ವಾಸನೆಗಳೆಳೆತಕ್ಕೆ, ದಿಕ್ಕುದಿಕ್ಕಿನಲಿ ||
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು |
ವಾಸನಾ ಕ್ಷಯಮೋಕ್ಷ || ಮಂ ||
ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ-|
ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ ||
ಏನೊ ವಾಸನೆ ಬೀಸಲದು ಹಾರಿ ಧುಮುಕುವುದು |
ಮಾನವನ ಮನಸಂತು || ಮಂ ||

ನಾವು ಚಿಕ್ಕವರಿದ್ದಾಗ, ಆಶೆಗಳು ಇಲ್ಲದಿದ್ದಾಗ ಆನಂದವಾಗಿದ್ದೆವು. ನಾವು ಬೆಳೆದ ಹಾಗೆ ನಮ್ಮ ಜೊತೆಗೆ ಆಶೆಗಳೂ ಬೆಳೆದವು. ಈ ಆಶೆಗಳನ್ನು ಪೂರೈಸಲು ಹಗಲೂ ಇರುಳೂ ಕಷ್ಟಪಟ್ಟು ಅವುಗಳ ಹಿಂದೆ ಓಡಿ ಓಡಿ ದಣಿದು ಆಶಾಂತಿ, ದುಃಖದಿಂದ ಕಳವಳ ಪಡುಟ್ಟಿದ್ದೇವೆ. ಈ ನಮ್ಮ ಆಶಾಂತಿಗೆ ಕಾರಣವಾದರೂ ಏನು? ಈ ಹೊರ ಪ್ರಪಂಚದ ಆಕರ್ಷಕ ವಸ್ತುಗಳು ನಮ್ಮನ್ನು ತಮ್ಮ ಕಡೆಗೆ ಸೆಳೆದುಕೊಂಡಿಲ್ಲ. ಆ ವಸ್ತುಗಳಿಗಾಗಿ ಇರುವ ನಮ್ಮ ಇಚ್ಛೆಗಳೇ ನಮಗೆ ಪಾಶಗಳಾಗಿವೆ.

ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗೆ.

ನಮ್ಮ ಇಚ್ಛೆಗಳೇ ನಮ್ಮನ್ನು ಕಟ್ಟಿಹಾಕಿರುತ್ತವೆ. ಈ ಇಚ್ಛೆಗಳು ಇರುವವರೆಗೆ ಮನುಷ್ಯನ ಹರಿದಾಟ ತಪ್ಪಿದ್ದಲ್ಲ.

ದಾಸರೋ ನಾವೆಲ್ಲ ಶುನಕನಂದದಿ ಜಗದ ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ.

ತಿಪ್ಪೆಯ ಮೇಲೆ ನಾಯಿ ಮಲಗಿಕೊಂಡು ಇರುತ್ತಡೆ. ಆ ಡಾರಿಯಿಂಡ ಯಾರಾದರೊಬ್ಬರು ಮಾಂಸವನ್ನು ಇಲ್ಲವೆ ಸುವಾಸನೆಯ ತಿನ್ನುವ ಪದಾರ್ಥವನ್ನು ತೆಗೆಡುಕೊಂಡು ಹೋದರೆ ಸಾಕು. ತಕ್ಷಣ ಮಲಗಿದ ನಾಯಿ ಎದ್ದು ಅವರ ಬೆನ್ನು ಹತ್ತುತ್ತಡೆ. ನಾಯಿಯ ಮೂಗು ಬಹು ತೀಕ್ಷ್ಣ. ಅದ್ದರಿಂದ ವಾಸನೆಯ ಸೆಳೆತಕ್ಕೆ ಅವರ ಬೆನ್ನು ಹಟ್ಟಿ ಬಹುದೂರ ಹೋಯಿತು. ಆದರೆ ಅವರಿಂದ ಏನಾದರೂ ತಿನ್ನಲು ದೊರೆಯಿತೇ? ಬರೀ ನಿರಾಶೆ, ವ್ಯರ್ಥ ಶ್ರಮ. ಮತ್ತೆಮೊದಲಿನ ಸ್ಥಳಕ್ಕೆ ಬಂದು ಮೂರು ಸುತ್ತು ತಿರುಗಿ ಮಲಗಿಕೊಂಡಿತು.

ಹೊರಗಿನ ಪ್ರಪಂಚದ ವಸ್ತುಗಳೇ, ಅವುಗಳ ಇಚ್ಛೆಗಳೇ ನಮ್ಮನ್ನು ಸೆಳೆದೊಯ್ಯುತ್ತವೆ.

ಅನ್ನದಾತುರಕಿಂತ ಚಿನ್ನದಾಟುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ಣೂಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದಾತ್ಮವನೆ || ಮಂ ||

ಅನ್ನದಾನ ಶ್ರೇಷ್ಠವಾದದ್ದು. ಹೊಟ್ಟೆ ತುಂಬಿತೆಂದರೆ ಅದರಿಂದ ಮನಸ್ಸಿಗೆ ತೃಪ್ತಿ, ಆನಂದ, ದೇಹಕ್ಕೆ ಪುಷ್ಟಿಸಿಗುತ್ತದೆ. ನಮಗೆ ಸಾಕು ಎನ್ನುವ ಶಬ್ದ ಊಟದಲ್ಲಿ ಮಾತ್ರ ಕೇಳಲು ಸಿಗುತ್ತದೆ.

ಚಿನ್ನದ ಒಡವೆಗಳ ಮೋಹ ಇದಕ್ಕೂ ಹೆಚ್ಚಿನದು. ನಾಲ್ಕಾರು ಆಭರಣಗಳು ಇರುವಾಗ ಸಾಕು ಎಂದು ಎನಿಸಬಹುದು. ಆದರೆ ಅದು ಕ್ಷಣಿಕ. ಹೊಸ ಆಭರಣಗಳು ದೃಷ್ಟಿಗೆ ಬಿದ್ದರೆ ಅವು ತನಗೂ ಬೇಕು ಎಂಬ ಇಚ್ಛೆ ಪ್ರಬಲವಾಗುತ್ತದೆ.

ಇನ್ನು ಹಣದಿಂದ ಯಾರಿಗೂ ತೃಪ್ತಿ ದೊರೆತಿಲ್ಲ.ಧನದ ಆಶೆ ಪಿಶಾಚಿಯ ಹಾಗೆ ಬೆನ್ನು ಹತ್ತುತ್ತಡೆ. ಅಡಕ್ಕೇ ಅದು ಧನಪಿಶಾಚಿ.

ಹೊರ ಪ್ರಪಂಚದಲ್ಲಿ ಸುಖವಿದೆ ಎನ್ನುವದೇ ಪಿಶಾಚಿ. ಮಾನವನ ಶರೀರ ಬೆಳೆದಂತೆ ಗಂಡು-ಹೆಣ್ಣು-ಮದುವೆ, ಸಂಸಾರ ಇವೆಲ್ಲ ಇರುವಂತವೇ.

ಅದೇ ಒಂದು ಆಕಳು ಇದ್ದರೆ? ಅದಕ್ಕೆ ತನ್ನ ಸ್ವಂತ ಜ್ಞಾನ ತಿಳುವಳಿಕೆ ಇರುವುದಿಲ್ಲ. ತಾನು ಒಳ್ಳೆಯ ಜಾತಿಯ ಆಕಳು, ಇಲ್ಲವೆ ಹಾಲು ಬಹಳ ಕೊಡುತ್ತೇನೆಂಬ ಜಂಭ ಅದಕ್ಕಿರುವುದಿಲ್ಲ. ಅನ್ನ ಅದರ ಚಿಂತೆ.

ಮಾನವರಿಗೆ ಜ್ಞಾನವಿದೆ. ಹಿರಿಯರು ಪ್ರಪಂಚದ ವಿಷಯಗಳೆಲ್ಲ ಬೆಂಕಿ ಇದ್ದ ಹಾಗೆ, ಕೈ ಹಾಕಿದರೆ ಸುಡುತ್ತದೆ, ಕಾರಣ ಬೆಂಕಿಯನ್ನು ಉಪಯೋಗ ಮಾಡಿಕೊಳ್ಳಿರಿ, ಕೈ ಹಾಕಬೇಡಿ ಎಂದು ಎಚ್ಚರಿಸಿದ್ದಾರೆ. ಅದು ಯಾರಿಗೂ ಕೇಳಿಸುವುದೇ ಇಲ್ಲ.

ಒಬ್ಬ ಹುಡುಗ ಹುಟ್ಟು ಕುರುಡ. ಹುಡುಗ ಬೆಳೆದು ದೊಡ್ಡವನಾದ. ಅದೇ ಊರಿಗೆ ಒಬ್ಬ ಪ್ರಸಿದ್ಧ ಕಣ್ಣಿನ ಡಾಕ್ಟರರು ಬರುತ್ತಾರೆ. ಡಾಕ್ಟರರು ಆ ಹುಡುಗನನ್ನು ಪರೀಕ್ಷಿಸಿ ಖಂಡಿತವಾಗಿ ದೃಷ್ಟಿ ಬರುತ್ತದೆ ಎಂದು ಹೇಳುತ್ತಾರೆ. ಅದೇ ಭರವಸೆಯಿಂದ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಮಾಡುತ್ತಾರೆ. ಕಣ್ಣಿನ ಪಟ್ಟಿ ಬಿಚ್ಚುವ ದಿನವೂ ಬಂತು. ಡಾಕ್ಟರರು ಹುಡುಗನಿಗೆ – ನಿನ್ನ ಕಣ್ಣಿನ ಪಟ್ಟಿ ಬಿಚ್ಚುತ್ತೇವೆ. ಕಣ್ಣು ತೆರೆ. ನಿನಗೆ ದೃಷ್ಟಿ ಬಂದಿದೆ. ಎಲ್ಲವೂ ಕಾಣಿಸುತ್ತಡೆ ಎಂದು ಹೇಳುತ್ತಾರೆ. ಆ ಹುಡುಗನಿಗೆ ಕಣ್ಣು ತೆರೆಯುವ ಧೈರ್ಯವಿಲ್ಲ. ಒಂದು ವೇಳೆ ಕಣ್ಣು ಕಾಣದೆ ಇದ್ದರೆ ಎಂಬ ನಿರಾಶೆ ಬೇರೆ.

ಅಂದ ಮೇಲೆ ಕಣ್ಣು ಯಾರು ತೆರೆಯಬೇಕು? ಅವನೇ, ಮಹಾತ್ಮರು ಹೊರಗಿನ ಕಣ್ಣು ಅಷ್ಟೇ ಅಲ್ಲ ಒಳಗಿನ ಕಣ್ಣು ತೆರೆಯಿರಿ ಎಂದು ಎಷ್ಟೇ ಹೇಳಿದರೂ ಅದು ನಮಗೆ ಕೇಳಿಸುವುದಿಲ್ಲ.

ಯಾರು ಒಳ ಕಣ್ಣು ತೆರೆದು ತಮ್ಮ ಮನಸ್ಸನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಳ್ಳುತ್ತಾರೋ ಅವರೇ ಸಾಧಕರು.

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ |
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಲ್ ||
ಹೊಟ್ಟೆ ತುಂಬಿದ ತೋಲ ಮಲಗೀತು; ನೀಂ ಪೆರರ |
ದಿಟ್ಟಿಸುತ ಕರಬುವೆಯೊ || ಮಂ ||

ಪ್ರಪಂಚದಲ್ಲಿಯ ಪಶುಪಕ್ಷಿಗಳಿಗೆಲ್ಲ ಹಸಿವೆಯ ಚಿಂತೆ ಮಾತ್ರ. ಎಮ್ಮೆ, ಆಕಳೆಗೆ, ಮೇವು ಹಾಕಿ ಸಾಕಬಹುದು. ನಾಯಿಗೆ ಆಹಾರ ಕೊಟ್ಟು ಸಾಕಬಹುದು. ಅವು ತಮ್ಮ ಋಣವನ್ನು ತೀರಿಸುತ್ತವೆ. ಆದರೆ, ಹೊಟ್ಟೆಗೆ ಇಲ್ಲದ ಮನುಷ್ಯನನ್ನು ಕರೆತೆಂದು ಅನ್ನಸಾಕಿ ಸಲುಹಿದರೆ ಅವನು ಸುಮ್ಮನೆ ಬಿಡುತ್ತಾನೆಯೇ? ಅನ್ನವಿಕ್ಕಿದ ಮನೆಗೆ ಕನ್ನವಿಕ್ಕುತ್ತಾನೆ, ಯಾಕೆ? ಅವನಲ್ಲಿಯೂ ಹೊಸ ಹೊಸ ಆಸೆಗಳು ಉದ್ಭವಿಸುತ್ತವೆ. ತನಗೆ ಇಲ್ಲ, ಅವರಿಗಿದೆ, ಎಂಬ ಮತ್ಸರ, ಕೆಟ್ಟ ವಿಚಾರಗಳನ್ನು ಅವನಲ್ಲಿ ಮೂಡಿಸುತ್ತದೆ. ಈ ಮತ್ಸರ ಯಾರಿಗಿಲ್ಲ.

ಗೋವಿಂದ, ಗೋಪಾಲ, ಇಬ್ಬರೂ ಗೆಳೆಯರು. ಅವರು ತಪಸ್ಸು ಮಾಡಲು ನಿರ್ಧರಿಸಿ ಬೇರೆ ಬೇರೆ ಸ್ಥಳಗಳನ್ನು ಆಯ್ದುಕೊಂಡು ತಪಸ್ಸಿಗೆ ಕುಳಿತರು. ಇವರ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದ. ಮೊದಲು ಗೋಪಾಲನಿಗೆ – “ನಿನ್ನತಪಸ್ಸಿಗೆ ಮೆಚ್ಚಿದ್ದೇನೆ, ನಿನಗೆ ಏನು ವರ ಬೇಕು ಕೇಳು” ಎಂದ.

ತಕ್ಷಣ ಅವನು ತನ್ನ ಗೆಳೆಯ ಗೋವಿಂದ ಏನು ವರ ಕೇಳಿದ ಎಂದು ಪ್ರಶ್ನಿಸಿದ. ದೇವರು – ಅವನ ಬಳಿಗೆ ಇನ್ನೂ ಹೋಗಿಲ್ಲ ಎಂದ. ಹಾಗಾದರೆ ಗೋವಿಂದನು ಏನು ವರ ಕೇಳುತ್ತಾನೆ ಅದರ ಎರಡು ಪಟ್ಟು ನನಗೆ ಕೊಡು ಎಂದು ವರ ಕೇಳಿಕೊಂಡ. ಆಗಲಿ ಎಂದು ಹರಸಿ ದೇವರು ಗೋವಿಂದನ ಬಳಿಗೆ ಬಂದು “ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ ಏನು ವರ ಬೇಕು ಕೇಳು” ಎಂದ. ಗೋವಿಂದನೂ ತಕ್ಷಣ ಕುತೂಹಲದಿಂದ ತನ್ನ ಗೆಳೆಯ ಗೋಪಾಲ ಏನು ವರ ಕೇಳಿದ ಎಂದು ಪ್ರಶ್ನಿಸಿದ. ಅದಕ್ಕೆ ದೇವರು “ನೀನು ಏನು ವರ ಕೇಳುವಿಯೋ ಅದರ ಎರಡು ಪಟ್ಟು ಅವನಿಗೆ ಬೇಕಂತೆ” ಎಂದ. ಗೋವಿಂದನಿಗೆ ಇದು ಗೂಢವಾದ ಪ್ರಶ್ನೆಯಾಯಿತು. ಅವನು ತನ್ನ ಗೆಳೆಯನಿಗೆ ಒಳ್ಳೇ ಪಾಠ ಕಲಿಸಬೇಕೆಂದು, ತನ್ನ ಒಂದು ಕಣ್ಣುಹೋಗಲಿ ಎಂದು ವರ ಕೇಳಿದ. ಇದರಿಂದ ಏನಾಯಿತು? ಗೋಪಾಲನ ಎರಡೂ ಕಣ್ಣುಗಳು ಇಂಗಿಹೋದವು.

ಪಶು, ಪಕ್ಷಿ, ಪ್ರಾಣಿಗಳಿಗೆ ಈ ಬುದ್ಧಿ ಇರುವುದಿಲ್ಲ. ಹೊಟ್ಟೆ ತುಂಬಿದ ತೋಳ ಮಲಗೀತು. ಅದಕ್ಕೆ ನಾಳೆಯ ಚಿಂತೆಯಿಲ್ಲ. ನಿನ್ನೆಯ ವಿಚಾರವಿಲ್ಲ. ಹೊಟ್ಟೆ ತುಂಬಿದರೆ ಆನಂದದಿಂದ ಮಲಗುತ್ತದೆ. ಮಾನವನ ಮನಸ್ಸೇ ಬೇರೆ.

ಮನಸ್ಸನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವ ಮಹತ್ತರ ಸಾಧನೆ. ಅದು ಸುಲಭವಾಗಿ ಸಾಧಿಸುವುದಲ್ಲ.

ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು |
ಗುಪ್ತದಲಿ ಕೊಳೆಯುತ್ತೆ ವಿಷ ಬೀಜವಾಗಿ ||
ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ |
ಸುಪ್ತವಹುದೆಂತಿಚ್ಛೆ || ಮಂ ||

ಹೊರಗಿನ ಪ್ರಪಂಚ ಆಕರ್ಷಕ ವಸ್ತುಗಳಿಂದ ತುಂಬಿದೆ. ಆ ವಸ್ತುಗಳ ಆನಂದವನ್ನು ಪಡೆಯಲು ಇಂದ್ರಿಯಗಳು ಇವೆ. ವಿವೇಚನೆ ಇಲ್ಲದೆ ಎಲ್ಲ ವಸ್ತುಗಳನ್ನು ಬಯಸುವುದು ಅಪರಾಧ. ಈ ಬಾಹ್ಯ ವಸ್ತುಗಳಲ್ಲಿ ಸುಖವಿದೆ, ಆನಂದವಿದೆ ಎಂದು ತಿಳಿಯುವುದು ಮಹಾಪರಾಧ. ಬಯಸಿದ್ದೆಲ್ಲವೂ ಈಡೇರಲು ಸಾಧ್ಯವಿಲ್ಲ. ಅಪೂರ್ಣವಾದ ಇಚ್ಛೆಗಳು ಸುಪ್ತಮನಸ್ಸಿನಲ್ಲಿ ಹುದುಗಿಕೊಂಡಿರುತ್ತವೆ. ಈ ಅಪೂರ್ಣವಾದ ಬಯಕೆಗಳೇ ಸಂದರ್ಭಕ್ಕೆ ಅನುಸಾರವಾಗಿ ವಿವಿಧ ರೂಪಗಳಲ್ಲಿ ಜ್ವಾಲಮುಖಿಯಂತೆ ಹೊರಬೀಳುತ್ತವೆ. ಕನಸಿನಲ್ಲಿ ರೂಪದಲ್ಲಿ ಪ್ರಕಟವಾಗುವದಂತೂ ಎಲ್ಲರಿಗೂ ಗೊತ್ತು.

ತಿರುಕನಿಗೆ ರಾಜನಾಗುವ ಕನಸು.

ತಿರುಕ-ತಾನಿರುವುದು. ಮುರುಕು ಧರ್ಮಶಾಲೆ. ಅವನಿಗೆ ಒಂದು ಕನಸು ಬಿತ್ತು. ತಾನು ರಾಜಕುಮಾರಿಯನ್ನು ವಿವಾಹವಾದ ಹಾಗೆ, ಮಕ್ಕಳಾದ ಹಾಗೆ, ಒಂದು ದಿವಸ ಮಕ್ಕಳು ತನ್ನ ಮಕ್ಕಳು ತನ್ನ ಮಾತು ಕೇಳಲಿಲ್ಲವೆಂದು ಅವಕ್ಕೆ ಝಾಡಿಸಿ ಒದ್ದ. ಅವನು ಒದ್ದ ರಭಸಕ್ಕೆ ಏನಾಯಿತು? ಪಾಪ ಅವನ ಮರುದಿನದ ರೊಟ್ಟಿಯ ಹಿಟ್ಟೂ ನೆಲದ ಪಾಲಾಯಿತು.

ನಾವು ಸೇವಿಸುವ ಆಹಾರ ಮನಸ್ಸಿಗೆ ತೃಪ್ತಿಯನ್ನು, ಅದೇ ಆಹಾರ ಜೀರ್ಣವಾಗಿ ರಕ್ತವಾದಾಗ ದೇಹಕ್ಕೆ ಪುಷ್ಟಿಯನ್ನು ಕೊಡುತ್ತದೆ. ಅದೇ ಆಹಾರ ಅಜೀರ್ಣವಾದರೆ, ವಾಂತಿ, ಜ್ವರ, ಯಾವುದಾದರೊಂದು ರೂಪದಿಂದ ಹೊರಗೆ ಬರುತ್ತದೆ. ಇದರಂತೆಯೇ ಹೊರಗಿನ ಪ್ರಪಂಚದ ವಸ್ತುಗಳು ನಮಗೆ ದೊರೆಯದಿದ್ದಾಗ, ನಮ್ಮ ಮನಸ್ಸೇ ನಮ್ಮನ್ನು ತೊಂದರೆಗೆ ಈಡು ಮಾಡುತ್ತದೆ. ನಮ್ಮ ಮನಸ್ಸೇ ನಮಗೆ ತೊಂದರೆ ಕೊಡುತ್ತದೆಂಬುದರ ಅರಿವು ನಮಗೆ ಇಲ್ಲ. ನಮ್ಮ ಮನಸ್ಸು ನಮಗೆ ಹಿತಕರವಾದ ಹಾಗೂ ಅಹಿತಕರವಾದ ಘಟನೆಗಳನ್ನು ಸುಖ, ಸಂತೋಷಗಳ, ಸಂದರ್ಭಗಳನ್ನು ಹೃದಯದ ಆಲದಲ್ಲಿ ಚಿರಸ್ಮರಣೀಯವಾಗಿ ಹುದುಗಿಸಿಕೊಂಡಿದೆ. ನಮ್ಮ ಮನಸ್ಸು ಈ ವೈಜ್ಞಾನಿಕ ಯುಗದ ಟೇಪ್‌ರೆಕಾರ್ಡರ್‌ಕ್ಕಿಂತಲೂ ಪ್ರಾಬಲ್ಯವಾಗಿದೆ. ಅದು ಹಿಂದೆ ಸಂಭವಿಸಿದ ಘಟನೆಗಳನ್ನು ಸಂದರ್ಭಕ್ಕೆ ಅನುಸಾರವಾಗಿ ವೇಳೆ-ವಾರ-ತಿಥಿ ಸಹಿತ ಸ್ಮರಣೆಗೆ ತಂದುಕೊಡುತ್ತದೆ. ಇಷ್ಟೇ ಅಲ್ಲ ಘಟನೆ ನಡೆದಾಗ ಅಲ್ಲಿ ಉಪಸ್ಥಿತರಿದ್ದವರ ಚಿತ್ರಗಳನ್ನು ಅಚ್ಚಳಿಯದೆ ಚಿತ್ರಿಸಿ ಇಟ್ಟುರುತ್ತದೆ. ಕೇವಲ ದುಃಖದಾಯಕ ಚಿತ್ರಗಳನ್ನಷ್ಟೇ ಚಿತ್ರಿಸಿದ್ದರೆ ಆ ಟೇಪನ್ನು ಹರಿದು ಹಾಕಬಹುದಿತ್ತು. ಆದರೆ, ಮಧ್ಯ, ಮಧ್ಯದಲ್ಲಿ ಒಳ್ಳೆಯ ಘಟನೆಗಳನ್ನೂ ಚಿತ್ರಿಸಿಟ್ಟಿರುತ್ತದೆ. ಹೀಗಾಗಿ ಹಿಂದಿನ ಘಟನೆಗಳನ್ನು ಮರೆಯಲೂ ಸಾಧ್ಯವಿಲ್ಲ.

ಒಬ್ಬ ತಾಯಿಗೆ- ತನ್ನ ಮಗನು ಚಿಕ್ಕವನಿರುವಾಗ ಮೂರು ಚಕ್ರದ ಸೈಕಲ್ ಕೇಳಿದ್ದ. ಅವನ ಇಚ್ಛೆ ಪೂರೈಸಲು ಅವಳಿಗೆ ಸಾಧ್ಯವಾಗಿರಲಿಲ್ಲ. ಈಗ ಮಗನು ಬೆಳೆದು ದೊಡ್ಡವನಾಗಿ ಮೂರು ಏಕೆ ನಾಲ್ಕು ಗಾಲಿಯ ವಾಹನವಿಟ್ಟಿದ್ದರೂ, ಅವಳು ಸಂದರ್ಭ ದೊರೆತಾಗ ತನ್ನ ಮಗನು ಚಿಕ್ಕವನಿದ್ದಾಗಿನ ಇಚ್ಛೆಯನ್ನು ಪೂರೈಸಲಿಲ್ಲ ಎಂದು ಹೇಳುವುದನ್ನು ಮರೆಯುವುದಿಲ್ಲ. ಈ ಘಟನೆ ನಡೆದು ೨೫ವರ್ಷ ಕಳೆದರೂ ಅದು ಒಳಗೇ ಕುಳಿತು ಕೊಳೆಯುತ್ತದೆಯೇ ವಿನಹ ಮರೆಯುವುದಿಲ್ಲ.

ನಮ್ಮ ಮನಸ್ಸಿನ ಇಚ್ಛೆಯಾದರೂ ಏನು? ಅದನ್ನು ವಿಚಾರ ಮಾಡಬೇಕು. ಮನಸ್ಸಿಗೆ ಹೊರಗಿನ ಪ್ರಪಂಚದ ವಸ್ತುಗಳು ಬೇಕೋ ಅಥವಾ ಶಾಂತಿ ಆನಂದ, ಸಮಾಧಾನ ಬೇಕೋ. ಯಾಕೆಂದರೆ?

ನಮ್ಮ ಮನಸ್ಸೇ ನಮ್ಮ ಶತ್ರು. ನಮ್ಮ ಮನಸ್ಸೇ ನಮ್ಮ ಮಿತ್ರ.

ಸಿಮಾತ್ರಕೇನಲ್ಲ, ಪೆಣ್‌ಮಾತ್ರಕೆನಲ್ಲ |
ಕರುಬಿ ಜನ ಕೆಸರುದಾರಿಯಲಿ ಸಾಗುತಿಹುದು ||
ಬಿರುದು ಗಳಿಸಲಿಕೆಸಪ, ಹೆಸರ ಪಸರಿಸಲೆಸಪ |
ದುರಿತಗಳ್ಗೆಣಿಯಿಂಟೆ || ಮಂ ||

ಎಲ್ಲರೂ ಜೀವನದಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಜೀವನದುದ್ದಕ್ಕೂ ಹೋರಾಡಿ ದಣಿಯುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ.ಆದರೆ? ಮಾನವರ ಮನಸ್ಸಿನಲ್ಲಿ ನಡೆಯುವ ನಾನಾ ತರಹದ ಆಟಗಳನ್ನು ನಿರೀಕ್ಷಿಸಿದವರು ಹೇಳುವ ರೀತಿಯೇ ಬೇರೆ. ನಮ್ಮ ದುಡಿಮೆ ಕೇವಲ ಹೆಣ್ಣಿಗಾಗಿ ಅಲ್ಲ, ಐಶ್ವರ್ಯಕ್ಕಾಗಿ ಅಲ್ಲಂ ಪೆಣ್ ಮಾತ್ರಕೇನಲ್ಲ ಸಿರಿ ಮಾತ್ರಕೇನಲ್ಲ. ಇನ್ನೂ ಒಂದು ಮಹಾ ಶತ್ರುವಿದೆ. ಅದು ಬಿರುದು, ಕೀರ್ತಿ ಬಿರುದು ಗಳಿಸಲಿಕೆಸಪ ಹೆಸರು ಪಸರಿಸಲೆಸಪ.

ಪ್ರತಿಯೊಬ್ಬರಿಗೂ ಸಮಾಜದಲ್ಲಿ ತನಗೆ ಗೌರವ ಸ್ಥಾನ ದೊರಕಬೇಕೆಂಬ ಆಶೆ ಇದ್ದೇ ಇರುತ್ತದೆ. ಅದಕ್ಕಾಗಿ ಜೀವನದಲ್ಲಿ ಹೋರಾಡುತ್ತಾನೆ. ಅದು ದೊರಕದೆ ಇದ್ದಾಗ, ಮನಸ್ಸಿಗೆ, ಅಶಾಂತಿ, ದುಃಖ, ಕಳವಳ ಪ್ರಾರಂಭವಾಗುತ್ತದೆ.

ಮನಸ್ಸಿಗೆ ಅಶಾಂತಿಗೆ ನೂರೆಂಟು ಕಾರಣಗಳು.

ಬಾಳ್ಕೆಯಲಿ ನೂರೆಂಟು ತೊಡಕು ತಿಣ್ಕುಗಳುಂಟು |
ಕೇಳ್ಕೆಮಾಣ್ಕೆಗಳಿಗವು. ಜಗ್ಗವೊಂದಿನಿಸುಂ ||
ಗೋಳ್ಕರೆದರೇನು ಫಲ? ಗುದ್ದಾಡಲೇನು ಫಲ? |
ಪಲ್ಕಿರಿದು ತಾಳಿಕೊಳೊ || ಮಂ ||
ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರ ಮನಸ್ಸೇ ಅವರಿಗೆ ಒಂದೊಂದು ತೆರನಾಗಿ ಶತ್ರುವಾಗಿರುತ್ತದೆ. ರಾವಣನಿಗೆ ಹೆಣ್ಣು ಶತ್ರುವಾದರೆ, ದುರ್ಯೋಧನನಿಗೆ ಮಣ್ಣು ಶತ್ರುವಾಯಿತು. ನಮ್ಮ ಮನಸ್ಸು ಯಾವ ರೀತಿಯಲ್ಲಿ ಶತ್ರುವಾಗಿ ನಿಂತಿದೆ. ನಾವೇ ನೋಡಿಕೊಳ್ಳಬೇಕು. ಪರೀಕ್ಷಿಸಿಕೊಳ್ಳಬೇಕು.

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು.

ಬಾಳಿನಲ್ಲಿ ನೂರಾರು ತೊಡಕುಗಳು ಅಡ್ಡವಾಗಿ ನಿಂತರೂ, ಆ ಮನಸ್ಸು ಯಾವುದಕ್ಕೂ ಅಣಿಯುವುದಿಲ್ಲ ಅಂದ ಮೇಲೆ.

ಗೋಳ್ಕರೆದರೇನು ಫಲ? ಗುದ್ದಾಡಲೇನು ಫಲ?

ಭಗವಂತನಿಗೆ ಈ ಪ್ರಪಂಚದಲ್ಲಿ ಒಳ್ಳೆಯವರು, ಕೆಟ್ಟವರು ಎಂಬ ತಾರತಮ್ಯವಿಲ್ಲ. ಅವರ ವೈಯಕ್ತಿಕ ಜೀವನ, ಅವರ ಪೂರ್ವ ಜನ್ಮದ ಕೃತಿಗಳನ್ನು ಅವಲಂಬಿಸಿರುತ್ತದೆ.

ಶಂಕರರು ದೇವರನ್ನು ಮಳೆಗೆ ಹೋಲಿಸಿದ್ದಾರೆ. ಮಳೆ ಭೂಮಿಯ ಮೇಲೆ ಒಂದೇ ತೆರನಾಗಿ ಬೀಳುತ್ತವೆ. ಆದರೆ, ಅದೇ ಭೂಮಿಯಲ್ಲಿ ನಾನಾ ತರಹದ ಸಸ್ಯಗಳು ಬೆಳೆಯುತ್ತವೆ. ಇದರೆ ಅರ್ಥವೇನು? ಮಳೆ ಬೀಳುವಲ್ಲಿ ತಾರತಮ್ಯವಿದೆ ಎಂದಲ್ಲ. ಭೂಮಿಯಲ್ಲಿ ಬಿದ್ದ ಬೀಜಗಳೂ ಬೇರೆ ಬೇರೆ. ದೇವರಿಗೆ ತಾರತಮ್ಯವಿಲ್ಲ. ಆದರೆ, ಮನುಷ್ಯನು ತನ್ನ ಜನ್ಮಜನ್ಮಾಂತರಗಳಿಂದ ಗಳಿಸಿಟ್ಟ ಕರ್ಮದ ಫಲಗಳನ್ನು ಅನುಭವಿಸುತ್ತಾನೆ.

ಚಿಕ್ಕರಿರುವಾಗ ಸುಖವಾಗಿದ್ದವರು ಈಗ ಏಕೆ ಇಲ್ಲ? ಇದು ಮಹಾತ್ಮರಿಗೆ ಪ್ರಶ್ನೆ ಹಾಕಿದ್ದು.

ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? |
ತನುವನುಗ್ರವ್ರತಗಳಿಂದೆ ದಂಡಿಸಲೇಂ? ||
ಬಿನದಗಲನರಸಿ ನೀನೂರೂರೊಲಲೆದೊಡೇಂ ? |
ಮನವ ತೊರೆದಿರಲಹುದೆ || ಮಂ ||

ಈ ಸಂಸಾರದಲ್ಲಿ ಬರುವ ದುಃಖ, ಕಳವಳ, ಅಶಾಂತಿ ಇವೆಲ್ಲ ತಾಪತ್ರಯಗಳಿಗೆ ಜಿಗುಪ್ಸೆಗೊಂಡು, ಸಂಸಾರ ತ್ಯಜಿಸಬಹುದು. ತಾನಿರುವ ತಾನವನ್ನೇ ತೊರೆದು ಹಿಮಾಲಯಕ್ಕೂ ಹೋಗಬಹುದು. ಪವಿತ್ರವಾದ ಗಂಗಾ ನದಿಯ ದಡದ ಮೇಲೆ ಪ್ರಶಾಂತವಾದಸ್ಥಳದಲ್ಲಿ ಆಶ್ರಮ ಕಟ್ಟಿಕೊಳ್ಳಬಹುದು. ಜೋಳಿಗೆ ಹಾಕಿ ಭಿಕ್ಷೆ ಬೇಡಬಹುದು. ನಾವು ತಿಳಿದಂತೆ ಯಾವ ಸಂಸಾರದ ಬಂಧನವಿಲ್ಲದೆ ಶಾಂತವಾಗಿ ಧ್ಯಾನಕ್ಕೆ ಇಲ್ಲವೆ ಜಪಕ್ಕೆ ಕುಳೆತುಕೊಳ್ಳಬಹುದು. ಆದರೆ, ಯಾವ ಮನಸ್ಸು ಸಂಸಾರದಲ್ಲಿದ್ದಾಗ ಶತ್ರುವಾಗಿತ್ತೋ ಅದೇ ಮನಸ್ಸು ಪೆಡಂಭೂತವಾಗಿ ಬೆನ್ನು ಹತ್ತಿದೆ. ಮನೆ ತೊರೆಯಬಹುದು. ಮನ ತೊರೆಯಲು ಸಾಧ್ಯವಿಲ್ಲ.

ನಮ್ಮ ಮನಸ್ಸೇ ನಮ್ಮ ಶತ್ರು, ನಮ್ಮ ಮನಸ್ಸು ನಮ್ಮ ಮಿತ್ರ ಎಂದು ಅರಿವು ಆಗುವವರೆಗೆ ಸಾಧನೆ ಸಾಧ್ಯವಿಲ್ಲ.

ವನದಿ ನಿರ್ಜನದಿ ಮೌನದಿ ತಪವನೆಸಗುವನ |
ನೆನೆಪಿನಲಿ ಪಿಂತಿನನುಭವವುಳಿಯದೇನು? ||
ಇನಿನೋಟ ಸವಿಯೂಟ, ಕಿನಿಸು ಕರುಬುಗಳಾಟ |
ಕನಲುತಿಹುವಾಳದಲಿ || ಮಂ ||

ಗಂಗಾನದಿಯ ಪ್ರಶಾಂತವಾದ ಸ್ಥಳದಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೆ ಎದ್ದು ಗಂಗಾನದಿಯ ತಣ್ಣನೆ ಕೊರೆಯುವ ನೀರಿನಲ್ಲಿ ಮೂರು ಮುಳುಗುಹಾಕಿ ಜಪಕ್ಕೋ, ಧ್ಯಾನಕ್ಕೋ ಕುಳಿತುಕೊಳ್ಳಬಹುದು. ಆದರೆ, ಮನದಿ ಹಿಂದಿನ ನೆನೆಪುಳಿಯದೇನೋ.

ಮನೆಯಲ್ಲಿರುವಾಗ ಯಾವ ಮನಸ್ಸು ಅಶಾಂತಿಯಿಂದ ತಾಂಡವವಾಗುತ್ತಿತ್ತೋ ಅದೇ ಮನಸ್ಸು ಹಿಂಬಾಲಿಸಿ ಬಂದಿದೆ.

ಪರಿಸರ ಬದಲಾಯಿಸಿದರೆ ಯಾವ ಪ್ರಯೋಜನವೂ ಇಲ್ಲ. ನಾವು ಇದ್ದದ್ದನ್ನು ಇದ್ದಹಾಗೆ ಒಪಿಕೊಳ್ಳಬೇಕು.

ಎಷ್ಟೋ ಸಲ ಪತ್ರಿಕೆಯಲ್ಲಿ ಓದುತ್ತೇವೆ. ಇಂಥವರು ಕಾಣೆಯಾಗಿದ್ದಾರೆ. ಕೆಲವು ದಿವಸಗಳನಂತರ ಅವರಿಂದಲೇ ಅವರ ಮನೆಗೆ ಕಾಗದ ಬರುತ್ತದೆ. ನನಗೆ ಜೀವನದಲ್ಲಿ ಜಿಗುಪ್ಸೆಯಾಗಿ ಹೃಷಿಕೇಶಕ್ಕೆ ಬಂದಿರುತ್ತೇನೆ. ಇನ್ನು ಎರಡುವಾರ ಕಳೆದು ಊರಿಗೆ ಬರುತ್ತೇನೆ.

ಮನೆಬಿಟ್ಟು ಅವನು ಹೋದದ್ದು ಯಾಕೆ? ತಿರುಗಿ ಬಂದದ್ದು ಯಾಕೆ? ಅದೇ ಗೊತ್ತಿಲ್ಲ. ಅದಕ್ಕೇ ಮಹಾತ್ಮರು ಜಗತ್ತನ್ನು ತಿಳಿಯುವ ಗೊಡವೆಗೆ ಹೋಗಲಿಲ್ಲ.
ಅವರು ತಮ್ಮ ನಿಜಸ್ವರೂಪವನ್ನು ಅರಿಯುವ ಸಾಹಸಕ್ಕೆ ಇಳಿದರು. ಮನುಷ್ಯರ ಅಂತರಂಗದಲ್ಲಿಳಿದು ನೋಡಿದರು. ಅಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ವಿವಿಧ ಇಚ್ಛೆಗಳಿಂದ ಕೂಡಿದ ಅದ್ಭುತ ಜಗತ್ತನ್ನು ಕಂಡರು. ಹೊರ ಪ್ರಪಂಚ ಅಷ್ಟು ತೀವ್ರ ಬದಲಾಗುವುದಿಲ್ಲ. ಇವತ್ತು ನೋಡಿದ ಮನೆ ನಾಳೆ ಹಾಗೆಯೇ ಇರುತ್ತದೆ. ಒಳ ಜಗತ್ತು ಹಾಗಲ್ಲ. ಅದು ಅಸ್ಥಿರ. ಒಂದು ಕ್ಷಣ ಪ್ರೇಮ ಉಕ್ಕಿದರೆ, ಇನ್ನೊಂದು ಕ್ಷಣಕ್ಕೆ ದ್ವೇಷಾಗ್ನಿ ಹೊತ್ತುತ್ತದೆ.

ಒಬ್ಬಸಾಧಕ, ಜ್ಞಾನ ಧ್ಯಾನ ಸಾಧನೆಗಾಗಿ ಮಾರ್ಗದರ್ಶನ ಪಡೆಯಲು, ಒಬ್ಬ ಶ್ರೇಷ್ಠಸಂತನ ಬಳಿಗೆ ಬಂದು, “ಮಹಾತ್ಮರೇ ಈ ದುಷ್ಟ ಮನಸ್ಸು ಸ್ಥಿರವಾಗಿರಲಾರದು ಏನಾದರೂ ಉಪಾಯ ಹೇಳಿರಿ” ಎಂದ. ಆಗ ಆ ಮನಸ್ಸು ಸುಮ್ಮನಿರುತ್ತದೆಯೇ? ಮನಸ್ಸೂ ಸಂತರಿಗೆ ವಿನಂತಿಸಿಕೊಂಡಿತು. ಮಹಾತ್ಮರೇ ಈತನು ನನಗೆ ಧ್ಯಾನ ಮಾಡು, ಜಪ ಮಾಡು, ಸ್ಥಿರವಾಗಿ ನಿಲ್ಲು, ಎಂದು ಹೇಳುತ್ತಾನೆ. ಆದರೆ, ನಾನು ಏನನ್ನು ಧ್ಯಾನಿಸಬೇಕು? ಯಾವಜಪ ಮಾಡಬೇಕು? ಎಲ್ಲಿ ಸ್ಥಿರವಾಗಿ ನಿಲ್ಲಬೇಕು? ಎನ್ನುವುದನ್ನೇ ಹೇಳುವುದಿಲ್ಲ. ತಪ್ಪು ಯಾರದು ನೀವೇ ಹೇಳಿ.

ನಮ್ಮಲ್ಲಿ ದೃಢವಾದ ಸಂಕಲ್ಪವಿರುವುದಿಲ್ಲ. ಅದಕ್ಕೇ ಮಹಾತ್ಮರು ಹೇಳುವುದು. ಹಿಂದಿನ ಘಟನೆಗಳನ್ನು ಮನದಲ್ಲಿ ಸ್ಮರಣೆಗೆ ತರದೆ, ಮುಂದಿನ ಯೋಚನೆ ಮಾಡದೆ, ಇವತ್ತು ಏನು ಇದೆಯೋ ಅದು ಭಗವಂತನ ಪ್ರಸಾದ ಎಂದು ತಿಳಿದು ಬಾಳುವುದೇ ಆಧ್ಯಾತ್ಮ ಸಾಧನೆ.

ಗೋಳಾಡಲುಂ ಬೇಡ ಲೋಲಾಪ್ತಿಯುಂ ಬೇಡ |
ಬಾಳು ಪರಚೇತನದ ಕೇಳಿಯೆಂದೆಣೆಸಿ ||
ಪಾಲಿಗನು ನೀನದರೊಳೆನಿಪಂತೆ ಬಾಳುತಿರು |
ಕೇಳಿಯುಂ ಧರ್ಮವೆಲೋ || ಮಂ ||

ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- |
ರೂಳಿಗವ ತಪ್ಪಿಸುವ ಜಾಣನೆಲ್ಲಿಹನು? ||
ಊಳಿಗವೊ ಕಾಳಗವೊ ಕೂಳ್ಕರೆಯೊ ಗೊಳ್ಕರೆಯೊ |
ಬಾಳು ಬಾಳದೆ ಬಿಡದು || ಮಂ ||

ಶುದ್ಧ ಹೃದಯದ ಮುಗ್ಧ ಮಕ್ಕಳನ್ನು ಎಲ್ಲರೂ ಪ್ರೀತಿಸುತ್ತಾರೆ. ಅವು, ಹೊಟ್ಟೆ ತುಂಬಿದರಾಯಿತು ನಗುನಗುತ್ತ ಇರುತ್ತವೆ. ತಮ್ಮ ನೋವನ್ನು ಬೇರಯವರಿಗೆ ಹೇಳುವುದಿಲ್ಲ. ನಾವು ನಮ್ಮ ಕಷ್ಟ, ನೋವು, ದುಃಖವನ್ನು ನಮ್ಮ ಸುತ್ತಲೂ ಇರುವವರಿಗೆ ಹಂಚುತ್ತೇವೆ. ದೇವರನ್ನೂ ಬಿಡುವುದಿಲ್ಲ. ಅವನಿಗೂ ಆರೋಪ ಹೊರಿಸುತ್ತೇವೆ. ಗೋಳಾಡಲುಂಬೇಡ ಲೋಲಾಪ್ತಿಯಂ ಬೇಡ ಗೋಳಾಡುವುದು ಬೇಡ. ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟನಷ್ಟ ಇದ್ದೇ ಇರುತ್ತದೆ. ಅಳುವುದು ಬೇಡ. ಯಾರನ್ನೂ ಬೈಯುವುದೂ ಬೇಡ.

ನಮ್ಮ ಮನಸ್ಸು ಅನ್ನುವುದೇ ಒಂದು ಮನೆ. ಇಂದ್ರಿಯಗಳು ಅದರ ಕಿಟಕಿಗಳು. ಕಿಟಕಿಗಳ ಮೂಲಕ ಧೂಳು ಬಂದು ಮನಸ್ಸೆಂಬ ಮನೆಯೊಳಗೆ ಬೀಳುತ್ತದೆ. ಮನೆಯ ಹೊರಗಿನ ಧೂಳು ಝಾಡಿಸಿದರೆ ಹೋಗುತ್ತದೆ. ಒಳಗಿನ ಧೂಳು, ಯಾವ ಧೂಳು? ಅಸಮಾಧಾನದ ಧೂಳು, ದ್ವೇಷ, ಮಾತ್ಸರ್ಯ, ದುರಾಶೆಗಳ ಧೂಳು. ಮನಸ್ಸಿನಲ್ಲಿ ಯಥೇಚ್ಛವಾಗಿ ಬಿದ್ದಿದೆ. ಈ ಧೂಳು ತನಗೂ ಮತ್ತು ಇತರರಿಗೂ ವಿನಾಶಕಾರಕ. ಬದುಕನ್ನು ಹಾಳು ಮಾಡುವ ಕಸ. ಈ ಕಸವನ್ನು ತೆಗೆಯಲಿಕ್ಕೆ ಪ್ರಯತ್ನ ಮಾಡು.

ನಮ್ಮ ನೋವು ಕಷ್ಟಗಳನ್ನು ಸಹಿಸಿಕೊಂಡು ಪ್ರಶಾಂತವಾಗಿರಲು ಕಲಿತರೆ ಅದು ಸಾಧನೆ.

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |
ಅರ್ಥವಹುದದು ನಿನಗೆ ಪುರ್ಣದರ್ಶನದಿಂ ||
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ ||
ಪೂರ್ತಿಯಿದನರಿಯೆ ಸೊಗ || ಮಂ ||

ನಾವು ಹುಟ್ಟಿದ್ದು ಕಷ್ಟಗಳನ್ನು ಸಹಿಸುವುದಕ್ಕಾಗಿಯೇ? ಸಹನೆಗೂ ಒಂದು ಮಿತಿ ಇದೆ. ಎಂಬ ಪ್ರಶ್ನೆಗೆ ಗುಂಡಪ್ಪನವರು ಸುಂದರವಾಗಿ ಉತ್ತರಿಸಿದ್ದಾರೆ.

ಅಪ್ಪಾ ಪರಮೇಶ್ವರನು ನಿನಗೆ ಜನ್ಮ ಕೊಟ್ಟದ್ದು ಪ್ರಪಂಚವನ್ನು ಅರಿತು ಕೊಳ್ಳುವುದಕ್ಕೇ ಗಾಬರಿಯಾಗಬೇಡ. ಅರ್ಥವಗುದದು ನಿನಗೆ ಪೂರ್ಣ ದರ್ಶನದಿ.

ಪ್ರಪಂಚದಲ್ಲಿ ಬರುವ ಕಷ್ಟನಷ್ಟ, ನೋವು ಬೇನೆ ಇವುಗಳನ್ನನುಭವುಸಿ, ಅವುಗಳಿಂದಾದ ಅನುಭವದಿಂದ ನಿನ್ನ ಜೀವನ ಪಕ್ವವಾದಾಗ ನಿನಗೇ ಅರ್ಥವಾಗುವುದು. ಆರಂಭದಲ್ಲಿ ಪ್ರಶ್ನೆ ಕೇಳಿದೆಯಲ್ಲ. ಏನು ಪ್ರಪಂಚವಿದು? ಎಂದು
ಪ್ರಪಂಚವನ್ನು ಅರಿತುಕೊಳ್ಳುವ ಸಾದನೆ ಮಾಡು, ಜ್ಞಾನವನ್ನು ಪಡೆ
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |
ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ |
ನೆದರು ನಿಲೆ ಬಿದಿಯೊಲಿವ || ಮಂ ||

ಶ್ರೀಕೃಷ್ಣನು ಗೀತೆಯಲ್ಲಿ ಸಾವು ನೋವುಗಳಿಗೆ ಅಂಜಿ ಬೆದರಿದ ಅರ್ಜುನನ್ನು ಚಾಟಿಯಿಂದ ಬಡಿದು ಎಬ್ಬಿಸಿದಂತೆ ಗುಂಡಪ್ಪನವರು ಜೀವನದಲ್ಲಿ ಕಷ್ಟನಷ್ಟಗಳಿಗೆ ಅಂಜಿದವರನ್ನು ಎಚ್ಚರಿಸಿದ್ದಾರೆ.

ಗುಂಡಪ್ಪನವರು, ಹೊರಗಿನ ಪ್ರಪಂಚವನ್ನು ಎದುರಿಸಬೇಕಾದರೆ ನಿನ್ನ ಕಾರ್ಯಗಳನ್ನು ಅಂತಃಕರಣ ಮನಸ್ಸು ಬುದ್ಧಿಯಿಂದ ಸರಿಯಾದ ರೀತಿಯಲ್ಲಿ ಕೆಲಸ ಮಾಡು. ಅಂದರೆ, ಎಂಥ ವಿಷಮ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ನಗುನಗುತ್ತ ಬಾಳಲು ಬರುತ್ತದೆ ಎಂದು ಹೇಳಿದ್ದಾರೆ.

ಶಿಷ್ಯನು ಮತ್ತೆ ಕೇಳುತ್ತಾನೆ- ಗುರುಗಳೇ ನನಗೆ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿ ಜೀವರೋಸಿ ಹೋಗಿದೆ. ಕಷ್ಟಗಳಿಂದ ಪಾರಾಗಬೇಕಾದರೆ, ಮುಕ್ತಿಹೊಂದಬೇಕಾದರೆ, ಆತ್ಮಹತ್ಯೆ ಒಂದೇ ಉಪಾಯ. ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮಾಡಿದ್ದೇನೆ.

ಗುರುಗಳು- ಶಿಷ್ಯನಿಗೆ, ನೀನು ಒಂದು ದಿನ ಆತ್ಮಹತ್ಯೆ ಖಂಡಿತವಾಗಿ ಮಾಡಿಕೊಳ್ಳುತ್ತೀ, ಏಕೆಂದರೆ ನೀನು ಅದನ್ನೇ ಮೇಲಿಂದ ಮೇಲೆ ಹೇಳುತ್ತೀ. ಇದನ್ನು ಬಿಟ್ಟು ಬಂದದ್ದೆಲ್ಲ ಬರಲಿ ಗೋವಿಂದನ ಕೃಪೆಯೊಂದಿರಲಿ ಎಂದು ವಿಷಮ ಪರಿಸ್ಥಿತಿಯಲ್ಲಿಯೂ ಹೆದರದೆ, ದೈವವನ್ನು ಎದುರಿಸಿದರೆ, ದೈವವು ತಾನೇ ನಿನಗೆ ಒಲಿಯುತ್ತದೆ ಎಂದು ಹೇಳುತ್ತಾರೆ.

ಶ್ರೀಕೃಷ್ಣನೂ, ರಾಮನೂ ಹಾಗೂ ನಳಚಕ್ರವರ್ತಿಯೂ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿದರು. ಅವರು ಆ ಕಷ್ಟಗಳನ್ನು ಹೇಗೆ ಸಮಾಧಾನದಿಂದ ಎದುರಿಸಿದರೆಂಬುದನ್ನು ಅರಿತುಕೊ. ನೀನು ಅದರಂತೆಯೇ ಇರಲು ಸಾಧನೆ ಮಾಡು. ಅಂತಃಕರಣ ಮನಸ್ಸು ಬುದ್ಧಿಗೆ ಸರಿಯಾದ ಜ್ಞಾನವನ್ನು ಕೊಡು. ಅದೇ ಜ್ಞಾನ ಹೊರಗಿನ ಪ್ರಪಂಚವನ್ನು ಎದುರಿಸಲು ಸಾಮರ್ಥ್ಯವನ್ನು ಕೊಡುತ್ತದೆ.

ಅಂತಃಕರಣ ಮನಸ್ಸು, ಬುದ್ಧಿಗೆ ಸರಿಯಾದ ಜ್ಞಾನವನ್ನು ಕೊಟ್ಟರೆ, ಆನಂದ ಖಂಡಿತವಾಗಿ ದೊರಕುತ್ತದೆ.

ಮನೆಯೆ ಮಠವೆಂದು ತಿಳಿ, ಬಂಧುಬಳಗವೆ ಗುರುವು |
ಅನವರತಪರಿಚರ್ಯೆಯವರೊರೆವ ಪಾಠ |
ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟಸಂಸ್ಕಾರ || ಮಂ ||

ಕಣ್ಣು, ಕಿವಿ, ಮುಗು, ಕೈ, ಕಾಲು, ಹೃದಯ ಇವು ಶರೀರದ ಅಂಗಗಳು. ಮನಸ್ಸು ಇವುಗಳ ಹಾಗೆ ಶರೀರದ ಅಂಗವಲ್ಲ. ಮನಸ್ಸು ನಮಲ್ಲಿರುವ ವಾಸನಾಗಳ, ಇಚ್ಛೆಗಳ ರಾಶಿ. ಈ ರಾಶಿ, ಅಹಂಕಾರ, ಪ್ರತಿಷ್ಠೆ, ಅಸೂಯೆ, ಶುರಾಶೆ, ದ್ವೇಷ ಹಾಗೂ ಉದ್ವೇಗದಿಂದ ಕೂಡಿರುತ್ತದೆ. ಶರೀರದ ಹೊರಭಾಗದ ಕೊಳೆಯನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆಯಲು ಬರುತ್ತದೆ. ಶರೀರದ ಒಳಗೆ ಹೃದಯದಲ್ಲಿ ಗುಪ್ತವಾಗಿರುವ ಮನಸ್ಸು ಕೊಳೆಯಾದರೆ ಅದನ್ನು ತೊಳೆಯುವುದಕ್ಕೆ ಸಂಸ್ಕಾರಬೇಕು. ಮನಸ್ಸನ್ನು ತಿದ್ದುವುದೆ ಸಂಸ್ಕಾರ. ನಮ್ಮ ಮನಸ್ಸನ್ನು ನಾವೇ ತಿದ್ದಿಕೊಳ್ಳಬೇಕು.

ಮನೆಯನ್ನು ತೊರೆದು ಯಾವ ಮಠವನ್ನೂ ಸೇರಬೇಡ. ಮನೆಯಲ್ಲಿಯೇ ಸಂಸಾರದಲ್ಲಿಯೇ, ನಿನ್ನವರೇ ಆದ ಗಂಡ, ಹೆಂಡತಿ, ಮಕ್ಕಳು, ಬಂಧು ಬಾಂಧವರೊಡನೆ ಆಡುವ ಒಡನಾಟ, ಗುದ್ದಾಟ, ಪ್ರೀತಿ, ಕಲಹ, ತ್ಯಾಗ, ಸೇವೆ ಇವುಗಳ ಸಂದರ್ಭಗಳೇ ನಿನಗೆ ಪಾಠ ಕಲಿಸುತ್ತವೆ. ಅವರೇ ನಿನ್ನ ಗುರುಗಳು.

ನೀನು ಮಾತ್ರ ಬಂಧು ಬಳಗಕ್ಕೆ ಇರಲಿ, ಬೇರೆಯವರಿಗೇ ಇರಲಿ ಪ್ರತಿ ಫಲಾಪೇಕ್ಷೆ ಇಲ್ಲದೆ ಸಹಾಯ ಮಾಡು.

ಎಂಥ ವಿಷಮ ಪರಿಸ್ಥಿತಿಯಲ್ಲಿಯೂ ಪ್ರಶಾಂತವಾಗಿರು. ಅದೇ ನಿನ್ನ ಸಂಸ್ಕಾರ.

ತತ್ವ ಸಾಕ್ಷಾತ್ಕಾರ ಚಿತ್ತ ಶುದ್ದಿಯಿನಹುದು |
ಚಿತ್ತಶೊಧನೆ ಮತಿಚಮತ್ಕಾರವಲ್ಲ ||
ಬಿತ್ತರದ ಲೋಕಪರಿಪಾಕದಿಂ ಸತ್ಕರ್ಮ |

ಸಕ್ತಿಯಿಂ ಶುದ್ಧತೆಯೊ || ಮಂ ||
ಎಲ್ಲರಿಗೂ ತಮ್ಮ ಮನಸ್ಸಿಗೆ ಯಾವ ಕಷ್ಟವಿಲ್ಲದೆ, ಶಾಂತಿ, ಸಮಾಧಾನ ದೊರಕಬೇಕೆಂಬ ಆಶೆ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಹೆಣಗಾಡುವುದು ಈ ಸಮಾಧಾನ, ಶಾಂತಿಗಾಗಿ. ಆದರೆ, ಅದು ಅಷ್ಟು ಸುಲಭವಾಗಿ ದೊರಕುವ ವಸ್ತು ಅಲ್ಲ.

ಈ ಶಾಂತಿ, ಆನಂದ ಎಲ್ಲಿದೆ? ಇದನ್ನು ಶೋಧ ಮಾಡಲು ಓದಿ ಓದಿ ಪುಸ್ತಕ ಹರಿದು ಹೋಗಿವೆ. ಪೂಜೆ ಮಾಡಿ ಮಾಡಿ ಮೂರ್ತಿ ಸವೆದಿದೆ. ತೀರ್ಥ ಕ್ಷೇತ್ರಗಳಿಗೆ ಅಲೆದಾಡಿ ಕಾಲು ಸವೆದಿವೆ. ಆದರೂ ಅದರ ಶೋಧವಾಗಿಲ್ಲ.

ಒಬ್ಬನು ತನ್ನ ಮನಸ್ಸಿನ ಸಮಾಧಾನಕ್ಕೆ ಕಾಶೀಯಾತ್ರೆಗೆ ಕೇವಲ ತಂಬಿಗೆ ಒಂದನ್ನೇ ತೆಗೆದುಕೊಂಡು ಹೊರಟನು. ಕಾಶಿಯನ್ನೂ ತಲುಪುತ್ತಾನೆ. ಪವಿತ್ರವಾದ ಗಂಗಾನದಿಯ ಸ್ನಾನಕ್ಕೆ ಬೆಳಗಿನ ಜಾವ ಬರುತ್ತಾನೆ. ಅವನ ಮನಸ್ಸಿಗೆ ಬಹಳ ಆನಂದವಾಗಿದೆ. ಗಂಗಾನದಿಯೊಳಗೆ ಮೂರು ಮುಳುಗು ಹಾಕಿದರೆ ತನ್ನ ಜನ್ಮ ಸಾರ್ಥಕವಾಯಿತು ಎಂದು ತಿಳಿದು ಗಂಗೆ ಭವ ಪಾಪ ಭಂಗೆ. ಅಂದು ಮುಳುಗು ಹಾಕುವಷ್ಟರಲ್ಲಿ ದಡದ ಮೇಲಿಟ್ಟಿರುವ ತಂಬಿಗೆಯ ನೆನಪಾಯಿತು. ಇದನ್ನೇ ಪುರಂದರದಾಸರು ಕಾಶಿಗೆ ಹೋದರೂ ಚಂಬುವಿನ ಚಿಂತೆ ಇತ್ತೇ ಹೊರತು ಶಂಭುವಿನ ಚಿಂತೆ ಬರಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮನಸ್ಸಿನ ಶಾಂತಿ ಸಮಾಧಾನ ಹೊರಗೆ ದೊರಕುವ ವಸ್ತು ಅಲ್ಲ.

ದ್ರಾಕ್ಷಿ ರಸವೇನಲ್ಲ ಜೀವನದ ತಿರುಳಾರ್ಗಮ್ |
ಇಕ್ಷು ದಂಡದವೊಲದು ಕಷ್ಟ ಭೋಜನವೆ ||
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |
ಮಾಕ್ಷಿಕರು ಮಿಕ್ಕೆಲ್ಲ || ಮಂ ||

ಕಷ್ಟವಿಲ್ಲದೆ ಜೀವಾದಲ್ಲಿ ಯಾರಿಗೂ ಸುಖವು ಸಿಗಲಾರದು. ಪ್ರತಿಯೊಬ್ಬರ ಪ್ರಾರಬ್ಧದಂತೆ ಕಷ್ಟ ಸುಖಗಳು ಬರುತ್ತವೆ. ಹೇಗೆ?

ಕಾಶಿಯೊಳಗೆ ಗಂಗಾನದಿಗೆ ಮಹಾಪೂರು ಬಂದಿದೆ. ಆದರೆ, ಕಾಶಿಯಲ್ಲಿ ಮಳೆಯೇ ಆಗಿಲ್ಲ. ಆ ಸಮಯಕ್ಕೆ ಅಲ್ಲಿದ್ದ ಜನರು ಏನು ಊಹಿಸುತ್ತಾರೆ? ಎಲ್ಲಿಯೋ ಮೇಲ್ಗಡೆ ಮಳೆಯಾಗಿರಬೇಕು ಎಂದು. ಇದರಂತೆಯೇ ಮನುಷ್ಯರ ಕಷ್ಟನಷ್ಟಗಳಿಗೆ ಕಾರಣ ದೊರಕದೆ ಇರುವಾಗ ಅವು ಅವರ ಪ್ರಾರಬ್ಧಕ್ಕನುಸಾರವಾಗಿ ಬರುತ್ತವೆ ಎಂದು ಮಹಾತ್ಮರು ಇದಕ್ಕೆ ಕರ್ಮವೆಂದು ಹೇಳಿದ್ದಾರೆ.

ಜೀವನದಲ್ಲಿ ಸುಖ ಮಾತ್ರ ಬೇಕು. ಕಷ್ಟ ಬೇಡವೆಂಬುದು ಎಲ್ಲ ಸಹಜವಾದ ಇಚ್ಛೆ. ದ್ರಾಕ್ಷಿರಸವೇನಲ್ಲ ಜೀವನ. ದ್ರಾಕ್ಷಿ ರಸವನ್ನು ಗುಟುಗರಿಸಿದ ಹಾಗೆ ಜೀವನ ಸರಳವಾಗಿಲ್ಲ. ಇಕ್ಷುದಂಡವೊಲದು ಕಷ್ಟ ಭೋಜನ ಜೀವನ ಕಬ್ಬಿನ ರಸ ತೆಗೆಯುವಷ್ಟು ಕಷ್ಟಕರವಾದುದು. ಕಬ್ಬಿನ ರಸವನ್ನು ಸವಿಯಬೇಕಾದರೆ ಮೊದಲು ಅದರ ಸಿಪ್ಪೆಯನ್ನು ಸುಲಿದು, ನಂತರ ತುಂಡುತುಂಡು ಮಾಡಿ, ಹಲ್ಲಿನಲ್ಲಿನುರಿಸ ಬೇಕಾಗುತ್ತದೆ.

ಇದರಂತೆಯೆ ಜೀವನದಲ್ಲಿ ಪೆಟ್ಟುಗಳು ಬೀಳುತ್ತವೆ, ಕಷ್ಟಗಳು ಆಗುತ್ತವೆ. ಇವುಗಳನ್ನು ಎದುರಿಸಿ ಹೊರಗೆ ಬರುವಾಗ ಆನಂದವೇ ನಿಜವಾದ ಆನಂದ. ಕಷ್ಟಗಳನ್ನು ಅನುಭವಿಸಿ ಹೊರಗೆ ಬರುವಾಗ ಅನುಭವಿಸುವ ಆನಂದವೇ ನಿಜವಾದ ಆನಂದ.

ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು || ಮಂ ||

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಹುದು || ಮಂ ||

ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು |
ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ||
ಹದವರಿದು ವಿಧಿ ತಾನೆ ಕುದುರಿಸುವನೆಲ್ಲವನು |
ಅದಟದಿರು ನೀನವನ || ಮಂ ||

ಈ ಮುರು ಶ್ಲೋಕಗಳಲ್ಲಿ ಗುಂಡಪ್ಪನವರು ವಿಧಿಯ ಕೈವಾಡವನ್ನು ಅನೇಕ ರೂಪಗಳಲ್ಲಿ ಬಣ್ಣಿಸಿದ್ದಾರೆ.

ಒಮ್ಮೆ ವಿಧಿರಾಯ ಯಾರಿಗೂ ಹೇಳದೆ ಕೇಳದೆ ಬರುವನು. ಒಮ್ಮೊಮ್ಮೆ ಮೆಲ್ಲಮೆಲ್ಲನೆ ಬಂದರೆ ಮತ್ತೊಮ್ಮೆ ರಭಸದಿಂದ ಬರುತ್ತಾನೆ. ಅಂದರೆ, ಜೀವನದಲ್ಲಿ ಕಷ್ಟ, ನಷ್ಟಗಳು ಕೆಲವು ಸಲ ಸಾಮಾನ್ಯವಾಗಿ ಬರುತ್ತವೆ. ಇನ್ನು ಕೆಲವು ಸಲ ದುಃಖ, ನಿರಾಶೆ, ಜೀವನದಲ್ಲಿ ಆಘಾತವನ್ನು ಉಂಟು ಮಾಡುತ್ತವೆ. ಹೀಗೆ ಪ್ರತಿಯೊಬ್ಬರ ಜೀವನವನ್ನು ಅವರವರ ಕರ್ಮಕ್ಕನುಸಾರವಾಗಿ ನಡೆಯಿಸುವವನು ವಿಧಿರಾಯ. ಮಾನವರು ಜೀವನದ ಅಧಿಕಾರಿಗಳು ಅಲ್ಲ.

ಇದನ್ನು ವಾಲ್ಮೀಕಿ ರಾಮಾಯಣ ಶ್ರೀರಾಮನ ಪಟ್ಟಾಭಿಷೇಕದ ದೃಷ್ಟಾಂತದಿಂದ ತಿಳಿಯಬಹುದು. ಶ್ರೀರಾಮನ ಪಟ್ಟಭಿಷೇಕದ ಮುಹೂರ್ತವನ್ನು ಮಹರ್ಷಿ ವಸಿಷ್ಠರೇ ಸ್ವತಃ ತೆಗೆದುಕೊಟ್ಟಿದ್ದರು. ಅಯೋಧ್ಯೆಯ ತುಂಬೆಲ್ಲ ಪಟ್ಟಾಭಿಷೇಕದ ಸಂಭ್ರಮ. ಆದರೆ, ಆದದ್ದೇನು? ಶ್ರೀರಾಮ ಪಟ್ಟಾಭಿಷೇಕಕ್ಕೆ ನೆರೆದ ಜನ ಅವನ ವನವಾಸದ ಸಮಾಚಾರವನ್ನು ಕೇಳಿ ಕುಗ್ಗಿಹೋದರು. ಅರಮನೆ ಶೂನ್ಯವಾಯಿತು. ಮಹರ್ಷಿಗಳ ವಾಕ್ಯ ನಿಜವಾಯಿತು. ಯಾವಾಗ? ಶ್ರೀರಾಮ ೧೪ ವರ್ಷ ವನವಾಸವನ್ನು ಅನುಭವಿಸಿದ ನಂತರ, ವಿಧಿ ನಿಯಮವನ್ನು ಯಾರೂ ತಪ್ಪಿಸಲಾರರು. ಆದ್ದರಿಂದ ಬಂದುದನ್ನೆಲ್ಲ ಶಾಂತ ಚಿತ್ತನಾಗಿ ಎದುರಿಸು. ನಿನ್ನ ಕರ್ಮಗಳಿಗೆ ನೀನೇ ಹೊಣೆಗಾರ. ಯಾರನ್ನೂ ತೆಗಳಬೇಡ.

ಗುಂಡಪ್ಪನವರು ಬದುಕು ಜಟಕಾ ಬಂಡಿ ಎಂದಿದ್ದಾರೆ. ನಮ್ಮ ಬದುಕು ಒಂದು ಬಂಡಿ. ಅದನ್ನು ನಡೆಸುವವನು ವಿಧಿರಾಯ. ಮಾನವರು ಕುದುರೆಗಳು ಮಾತ್ರ. ವಿಧಿರಾಯನ ಆಜ್ಞೆಯಂತೆ ಬಂಡಿ ಹೋಗುತ್ತದೆ. ವಿಧಿ ಲಿಖಿತದಂತೆ ಮಾನವರ ಬದುಕು, ಏಕೆಂದರೆ, ನಮ್ಮ ಜೀವನದ ಸೂತ್ರ ವಿಧಿ ಕೈಯಲ್ಲಿದೆ.

ಇದಕ್ಕೆ ಇಂದಿನ ಉದಾಹರಣೆ- ಆಟೋ. ಆಟೋ ಚಾಲಕ ಪ್ರಯಾಣಿಕ ಹೇಳಿದಂತೆ ಎಡಕ್ಕೆ, ಬಲಕ್ಕೆ ತಿರುಗಿಸುತ್ತ ಮುಂದೆ ವಾಹನ ನಡೆಸುತ್ತಾನೆ. ಆಟೋ ಚಾಲಕನಿಗೆ ಸ್ವಾತಂತ್ರ್ಯವಿಲ್ಲ. ಅವನು ಪ್ರಯಾಣಿಕನ ಆಜ್ಞೆಯ ಪಾಲಕ. ಇದರಂತೆಯೇ ನಮ್ಮ ಜೀವನದ ನಕ್ಷೆ, ಆಗು-ಹೋಗು ಎಲ್ಲಕ್ಕೂ ಒಡೆಯ ವಿಧಿರಾಯ.

ನಮಗೆ ಜೀವನದಲ್ಲಿ ಪತಿ, ಪತ್ನಿ, ಮಕ್ಕಳು ಎಲ್ಲರೂ ಒಳ್ಳೇ ಆದರ್ಶಪ್ರಾಯರಾಗಿರಬೇಕೆಂಬ ಇಚ್ಛೆ ಇರುವುದು ಸಹಜ. ಆದರೆ ನಡೆಯುವುದೆಲ್ಲವು ಹರಿಚಿತ್ತದಂತೆ. ಹರಿಚಿತ್ತಸತ್ಯ. ನರಚಿತ್ತಕೆ ಬಂದುದು ಲವಲೇಶ ನಡೆಯದು. ನಾವು ಎಣಿಸಿದ್ದೆಲ್ಲವೂ ನಡೆಯುವುದಿಲ್ಲ ಏಕೆಂದರೆ, ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ. ವಿಧಿನಿಯಮಕ್ಕೆ ತಲೆಬಾಗು.

ವಿಧಿಯ ಕೈವಾಡವನ್ನು ಮತ್ತೆಮತ್ತೆ ವಿವರಿಸಿ ಹೇಳಿದ್ದಾರೆ. ಅದಟದಿರು ನೀನವನ. ವಿಧಿಯನ್ನು ನೀನು ಮರೆಯಬೇಡ. ಭಗವಂತನು ಅಂತರ್ಯಾಮಿ, ಸರ್ವವ್ಯಾಪಕ ಅವನಿಗೆ ಅರಿವಾಗದಿದ್ದುದು ಯಾವುದು? ಅವನಲ್ಲಿ ತಾರತಮ್ಯವಿಲ್ಲ.

ಇದನ್ನು ದಿನನಿತ್ಯದ ವ್ಯವಹಾರದಿಂದ ತಿಳಿಯಬಹುದು. ಒಬ್ಬ ತಾಯಿಗೆ ಎರಡು ಮಕ್ಕಳಿರುತ್ತಾರೆ. ಒಬ್ಬನಿಗೆ ಬಿಸಿ ಅನ್ನ ಬಡಿಸಿದರೆ, ಮತ್ತೊಬ್ಬನಿಗೆ ಆರಿದ ಅನ್ನ ಬಡಿಸುತ್ತಾಳೆ. ಅವಳಿಗೆ ಗೊತ್ತು. ಸಶಕ್ತ ಮಗ ತಂಗಳ ಅನ್ನ ಜೀರ್ಣಿಸಬಲ್ಲ. ಆದರೆ, ಅಶಕ್ತ ಮಗ ಜೀರ್ಣಿಸಲಾರ ಎಂದು. ಅವಳಿಗೆ ಮೋಸಗಾರ್ತಿ ಎಂದರೆ ಇಲ್ಲವೆ ಪರಮರಾಕ್ಷಸಿ ಎನ್ನಲು ಸಾಧ್ಯವೇ? ನಾವು ಹಾಗೆಯೇ ತಿಳಿದದ್ದಾದರೆ ನಮ ಮಾನಸಿಕ ಬೆಳವಣಿಗೆಯಾಗಿಲ್ಲ ಎಂದು ಅರ್ಥವಾಗುತ್ತದೆ.

ನಮ್ಮ ದೃಷ್ಟಿಗೆ ಕಾಣುವಂಥ ತಾಯಿಗೆ ಮಕ್ಕಳ ಭವಿಷ್ಯದ ಆಲೋಚನೆ ಹೇಗೆ ಇದೆಯೋ, ಹಾಗೆಯೇ ಜಗನ್ನಿಯಾಮಕನಿಗೆ ಇಡೀ ವಿಶ್ವದ ಆಲೋಚನೆ ಇದೆ. ಆದ್ದರಿಂದ ಅವನು ಬಯಸಿದ್ದೆಲ್ಲವನ್ನೂ ನೀಡಲಾರ.

ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |
ಬೇಡಲೊಳಿತಾವುದೆಂಬುದರರಿವುಮಿಲ್ಲ ||
ಕೂಡಿಬಂದುದನೆ ನೀನ್ ಅವನಿಚ್ಛೆ ಎಂದು ಕೊಳೆ |
ನೀಡುಗೆದೆಗಟ್ಟಿಯನು || ಮಂ ||

ಪರಮೇಶ್ವರನ ಇಚ್ಛೆಯಂತೆ ಎಲ್ಲವೂ ಘಟಿಸುತ್ತದೆ. ಅವನು ಜಗನ್ನಿಯಾಮಕ, ಕರುಣಾಮೂರ್ತಿ. ಪ್ರತಿಯೊಬ್ಬರ ಕರ್ಮಕ್ಕೆ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ. ನಮ್ಮ ಕರ್ಮಗಳಿಗೆ ನಾವೇ ಹೊಣೆಗಾರರು. ಎಲ್ಲವೂ ಅವನಿಚ್ಛೆ ಎಂದು ಪ್ರತಿಕ್ರಿಯೆರಹಿತವಾಗಿದ್ದರೆ ಮನಸ್ಸು ಶಾಂತವಾಗಿರುತ್ತದೆ.

ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು |
ಚರಿಕೆ ತಾಟಾಗ್ರಹಗಳಿಷ್ಟವೋದಂತೆ ||
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ |
ಸ್ಥಿರಚಿತ್ತ ನಿನಗಿರಲಿ || ಮಂ ||

ನಮ್ಮ ಜೀವನದಲ್ಲಿ ನಾನಾ ರೀತಿಯ ಕಷ್ಟಗಳು ಬರುತ್ತವೆ. ಪೆಟ್ಟುಗಳು ಬೀಳುತ್ತವೆ. ಇದೆಲ್ಲವೂ ನಮ್ಮ ಕರ್ಮದ ಫಲ. ವಿಧಿಯ ಇಚ್ಛೆಯಂತೆಯೇ ನಡೆಯುತ್ತದೆ. ಇದು ಜೀವನ.

ಎಲ್ಲ ವಿಷಮ ಪರಿಸ್ಥಿತಿಯಲ್ಲಿ ಅಂತಃಕರಣ ಮನಸ್ಸು ಬುದ್ಧಿಯನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವುದೇ ಸಾಧನೆ.

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||
ಸಹಿಸದಲ್ಲದೆ ಮುಗಿವ ದಾವದಶೆ ಬಂದೊಡಂ |
ಸಹನೆ ವಜ್ರದ ಕವಚ || ಮಂ ||

ಜೀವನ ಚಕ್ರವನ್ನು ತಿರುಗಿಸುವವ ವಿಧಿರಾಯ. ಗ್ರಹಗತಿಗಳು ತಮ್ಮ ಫಲಗಳನ್ನು ನೀಡುವವು. ಕರ್ಮಕ್ಕೇ ಇಷ್ಟು ಪರಿಹಾಸ ಮಾಡುವುದು?

ಇದಕ್ಕೆ ದೃಷ್ಟಾಂತಂ ಜೀವನದಲ್ಲಿ ಮಕ್ಕಳು ಮದುವೆ ಕಾಲಕ್ಕೆ ಸರಿಯಾಗಿ ಆಗದಿರುವಾಗ, ಮಕ್ಕಳಿಗೆ ಉದ್ಯೋಗ ಸಿಗದೆ ಇರುವಾಗ, ಮಕ್ಕಳು ಅನಾರೋಗ್ಯದಿಂದ ಬಳಲುವಾಗ ಇವುಗಳ ಪರಿಹಾರಕ್ಕೆ ದಿಕ್ಕು ತೋಚದೆ ಪ್ರಶ್ನೆ ಕೇಳುತ್ತಾರೆ. ಜೋಯಿಸರು ಗ್ರಹಗಳ ಶಾಂತಿ ಮಾಡಲು ಹೇಳುತ್ತಾರೆ. ಅರ್ಚಕರು ಪೂಜೆ ಹೇಳುತ್ತಾರೆ. ವೈದ್ಯರು ಔಷಧಿ ಹೇಳುತ್ತಾರೆ.

ಕಷ್ಟಕಾರ್ಪಣ್ಯಗಳಿಗೆ ಒಳಗಾದ ಮನಸ್ಸು ಎಲವನ್ನೂ ನಂಬಿ ಮಾಡುತ್ತದೆ. ಆದರೆ, ವಿಧಿ ಲಿಖಿತ ತಪ್ಪುವುದಿಲ್ಲ. ಅದಕ್ಕಾಗಿ ಎಲ್ಲವನ್ನೂ ಸಹಿಸು ಸಹನೆ ವಜ್ರದ ಕವಚ.

ಕಷ್ಟಗಳು ಬರುವಾಗ ತಾಳ್ಮೆ ಇರಲಿ. ಅಂತಃಕರಣ ಮನಸ್ಸು ಬುದ್ಧಿ ಪ್ರಾಶಾಂತವಾಗಿರಲಿ. ಇದೇ ಸಾಧನೆ.

ಮನವನಾಳ್ವುದು ಹಟದ ಮಗುವನಾಳುವ ನಯದೆ |
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ||
ಅನುಕೂಲಿಸದು ಬರಿಯ ಕೂಗು ಬದಿತಗಳಿದನು |
ಇನಿತಿತ್ತುಮರಸಿನಿತ || ಮಂ ||

ಮಗುವಿಗೆ ನೋವಾದಾಗ ಅಳುವುದು ಸಹಜ. ಶ್ರೀರಾಮನು ಚಂದ್ರನನ್ನು ಬೇಡಿ ಅತ್ತ ಹಾಗೆ ಮಕ್ಕಳು ಏನೇನೋ ಬೇಕು ಎಂದು ಸುಮ್ಮನೆ ಹಟ ಮಾಡುತ್ತದೆ. ಊಟ ಮಾಡುಸುವುದಂತೂ ತಾಯಿಗೆ ಅತೀ ದೊಡ್ಡ ಕೆಲಸ. ಮಗುವುಗೆ ಚಂದಪ್ಪನನ್ನು ತೋರಿಸಿ ಸವಿಯಾದ ಕಥೆಗಳನ್ನು ಹೇಳಿ ತಾಳ್ಮೆಯಿಂದ ರಮಿಸಿ ಉಣಿಸುತ್ತಾಳೆ.

ಮಗುವಿನ ಹಟದ ಹಾಗೆಯೇ ನಮ್ಮ ಮನಸ್ಸೂ ಚಂಚಲವಾಗಿದೆ. ಪತಂಜಲಿಯವರು ಹೇಳುತ್ತಾರೆ. ಮನಸ್ಸನ್ನೂ ವಿಕಾಸಗೊಳಿಸಲು ತಪಸ್ಸು ಬೇಕು. ತಪಸ್ಸೆಂದರೆ ಏನು? ಮನುಷ್ಯನಿಗೆ ವಿಘ್ನಗಳು, ಕಷ್ಟಗಳು ಬರುತ್ತವೆ. ಕೆಲವು ಸಲ ಕರ್ಣ ಕಠೋರವಾದ ಶಬ್ದಗಳು ಕಿವಿಗೆ ಬೀಳುತ್ತವೆ. ಇವೆಲ್ಲದರ ಮಧ್ಯ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದಕ್ಕೇ ತಪಸ್ಸು ಅನ್ನುತ್ತಾರೆ.

ಕತ್ತಿಯನ್ನು ಸಾಣೆ ಹಿಡಿದಾಗ ಫಳಫಳನೆ ಹೊಳೆಯುವಂತೆ, ಮನುಷ್ಯನೂ ಕೂಡ ಕಷ್ಟಕಾರ್ಪಣ್ಯಗಳಿಂದ ಹೊರಗೆ ಬಂದಾಗ, ಅವನ ಮನಸ್ಸೂ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತದೆ. ಅವನು ಸದಾನಂದದಲ್ಲಿರುತ್ತಾನೆ.

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ |
ತಳದ ಕಸ ತೇಲುತ್ತ ಬಗ್ಗಡವದಹುದು ||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ |
ತಿಳಿಯಹುದು ಶಾಂತಿಯಲಿ || ಮಂ ||

ಗುಂಡಪ್ಪನವರು ಮನಸ್ಸನ್ನು ಸರೋವರಕ್ಕೆ ಹೋಲಿಸಿದ್ದಾರೆ. ಬೆಳಗಿನ ಜಾವ ಸರೋವರದ ನೀರು ಪ್ರಶಾಂತವಾಗಿರುತ್ತದೆ. ಅಂಥ ನೀರಿಗೆ ಒಂದು ಕಲ್ಲು ಎಸೆದರೆ ತರಂಗಗಳು ಏಳುತ್ತವೆ. ನಾಲ್ಕಾರು ಕಲ್ಲುಗಳನ್ನು ಎಸೆದರಂತೂ ತಳದ ಕಸವೆಲ್ಲವೂ ಮೇಲಕ್ಕೆ ಬರುತ್ತವೆ.

ಇದರಂತೆಯೇ ನಮ್ಮ ಮನಸ್ಸು, ಮೇಲೆ ಶಾಂತವಾಗಿದ್ದರೂ ಒಳಗಡೆ ಹೃದಯದಾಳದಲ್ಲಿ ಸಾಗರದಾಳದಂತೆ ಅನೇಕ ಹಿತಕರ ಹಾಗೂ ಅಹಿತಕರ ಘಟನೆಗಳನ್ನು ಹುದುಗಿಸಿಟ್ಟುಕೊಂಡಿದೆ. ಅಹಿತಕರ ಘಟನೆಗಳು ಸಂಭವಿಸಿದಾಗ ಕಲ್ಲು ಎಸೆದಾಗ ನೀರಿನಲ್ಲಿ ತರಂಗಗಳು ಏಳುವಂತೆ, ಮನಸ್ಸಿನಲ್ಲಿ ಆ ಘಟನೆಗಳ ತರಂಗಗಳೆದ್ದು ಸ್ಪೋಟವಾಗುತ್ತವೆ.

ಶಿವರುದ್ರಪ್ಪನವರು – ಒಳಗಿನ ತಿಳಿಮನು ಕಲುಕದೆ ಇದ್ದರೆ ಅಮೃತದ ಸವಿ ಇದೆ ನಾಲಿಗೆಗೆ ಎಂದು ಹೇಳಿದ್ದಾರೆ. ಹೊದಲಕ್ಕೆ ಈಡು ಮಾಡುವ ಮನಸ್ಸು ನಮಗೆ ಶತ್ರುವಾಗಿ ನಿಲ್ಲುತ್ತದೆ. ಅದನ್ನು ಮೇಲಿಂದ ಮೆಲೆ ತಿದ್ದುತ್ತಿರಬೇಕು. ನಮ್ಮ ಮನಸ್ಸೇ ನಮ್ಮ ಮಿತ್ರ. ನಮ್ಮ ಮನಸ್ಸೇ ನಮ್ಮ ಶತ್ರು.

ಕುದಿ ಹೆಚ್ಚೆವೆಗಟಹುದು; ಕಡಿಮೆಯಿರೆ ಹಸಿನಾತ |
ಕದಡಲೊಡೆವುದ ಹಾಲು ; ಸೂಕ್ಷ್ಮವದರಹದ ||
ಅದರವೊಲೆ ಮನದ ಹದ, ಅದನೆಚ್ಚರದಿ ನೋಡು |
ಬದುಕು ಸೊಗಹದರಿಂದ || ಮಂ ||

ದೇವ ಮಂದಿರ ಭಜನೆ ಪೂಜೆ ಪ್ರಸಾದಗಳು |
ಜೀವನದಲಂಕಾರ, ಮನಸಿನುದ್ಧಾರ |
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- |
ದಾವುದಾದೊಡಮೊಳಿತು || ಮಂ ||

ಜೀವನದಲ್ಲಿ ಬದುಕು ಬಾಳುವ ರೀತಿಯನ್ನು ಹಾಲಿನ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ಹಾಲನ್ನು ಹೆಚ್ಚಾಗಿ ಕಾಯಿಸಿದರೆ ಉಕ್ಕುತ್ತದೆ ಹಾಗೂ ಸೀದಿ ಹೋಗುತ್ತದೆ. ಕಡಿಮೆ ಕಾಯಿಸಿದರೆ ಹಾಲು ಒಡೆದು ಕೆಟ್ಟುಹೋಗುತ್ತದೆ. ಹಾಲು ಬಹಳೇ ಸೂಕ್ಷ್ಮ.

ಮನಸ್ಸು ಕೂಡ ಹಾಲಿನಂತೆ ಸೂಕ್ಷ್ಮವಾಗಿದೆ. ವ್ಯವಹಾರದಲ್ಲಿ ದುಡುಕಿದರೆ, ಕೋಪಿಸಿದರೆ ಮನಸ್ಸು ಕದಡಿ ಹೋಗುತ್ತದೆ. ಅದರಿಂದ ಜೀವನದ ಹದವೇ ತಪ್ಪು ಹೋಗುತ್ತದೆ ಆದ್ದರಿಂದ ವಿಚಾರವಂತನಾಗಿ ಬಾಳು.

ವಾಸ ಮಾಡುವ ಮನೆ ಅರಮನೆಯಾಗಿದೆ. ಭವ್ಯವಾದ ಪೂಜಾ ಕೋಣೆ ಇದೆ. ಪೂಜೆಗೆ ಬೇಕಾಗುವ ಸಕಲ ಸಾಮಗ್ರಿಗಳೂ ಇವೆ. ಆದರೆ, ಪೂಜೆಗೆ ಕುಳಿತಾಗ ಮನಸ್ಸಿಗೆ ಏಕಾಗ್ರತೆ ಬರುವುದು ಕಠಿಣ. ಕ್ಷುಲ್ಲಕವಾದ ಮನಸ್ಸು ಶಾಂತವಾಗಿರಲು ಬಿಡುವುದಿಲ್ಲ. ಆ ಮನಸ್ಸು ಎಲ್ಲೇ ಇದ್ದರೂ, ಹಿಂದೆ ಸಂಭವಿಸಿದ ಘಟನೆಗಳನ್ನು ಸ್ಮರಿಸಿಕೊಂಡು ಮೆಲಕು ಹಾಡುತ್ತಲೇ ಇರುತ್ತದೆ, ಅವುಗಳನ್ನು ಮರೆಯುವುದು ಕಷ್ಟ.

ಹಿಂದೆ ಸಂಭವಿಸಿದ ಘಟನೆಗಳು ಕಸವಿದ್ದ ಹಾಗೆ, ಅವನ್ನು ಎತ್ತಿ ಬಿಸಾಕು. ಮುಂದಿನ ಬದುಕಿಗೆ ನಗುನಗುತ್ತ ಇರುವುದನ್ನು ಅಭ್ಯಾಸ ಮಾಡು.

ಅಂತಃಕರಣ, ಮನಸ್ಸು, ಬುದ್ಧಿಯಿಂದ ಆತ್ಮನಲ್ಲಿ ನಿಂತಾಗ ಆನಂದವಿದೆ. ಶರೀರದ ಮೂಲಕ ಎಲ್ಲವನ್ನೂ ಸಾಧಿಸು.

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು |
ಬ್ರಹ್ಮಪುರಿಯಿಂದದನು ಋಷಿಗಳೊರೆದಿಹರು ||
ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸೆ |
ನಮ್ಮ ಗುರಿಗೈದಿಪುದು || ಮಂ ||

ಈ ದೇಹವು ಮಣ್ಣಿನ ಬೊಂಬೆ. ಪಂಚಭೂತಗಳಿಂದಾಗಿ ಕೊನೆಗೆ ಅಲ್ಲಿಗೇ ಸೇರುವುದು ನಿಜ. ಈ ದೇಹವನ್ನು ಕಡೆಗಣಿಸಬೇಡ. ದೇಹ ಮಾಧ್ಯಮದಿಂದಲೇ ಇಹಪರಗಳನ್ನು ಸಾಧಿಸುವುದು. ದೃಢವಾದ ಶರೀರದಲ್ಲಿಯೇ ದೃಢವಾದ ಮನಸ್ಸಿದೆ. ದೇಹವನ್ನು ಸದೃಢವಾಗಿಡು ಎಂದಾಕ್ಷಣ ಉಂಡಾಡಿ ಗುಂಡನಾಗು ಎಂದು ಅರ್ಥವಲ್ಲ. ಕೊಬ್ಬಿದ ಶರೀರವು ವಾಸನಾಗಳಿಗೆ ಬಲಿಯಾಗುತ್ತದೆ. ಅದುದರಿಂದ, ಮನ ಬಂದಲ್ಲಿ ಬುದ್ಧಿಯನ್ನು ಹರಿಬಿಡಬೇಡ. ಇಂದ್ರಿಯಗಳನ್ನು ನಿಗ್ರಹಿಸಲು ಮನಸ್ಸಿಗೆ ಸರಿಯಾದ ತಿಳುವಳಿಕೆ ನೀಡು. ಶಿಕ್ಷಿಸಿದರೆ ಅದು ಕೇಳುವುದಿಲ್ಲ.

ಜ್ಞಾನವೆಂಬ ಚಾವಟಿಯಿಂದ ಮನಸ್ಸೆಂಬ ಮರ್ಕಟವನ್ನು ಪಳಗಿಸು.

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ |
ಸತ್ರದಲಿ ನೇಮದಿಂದಿರಲಿಕೆಡೆಯುಂಟು ||
ರಾತ್ರಿ ಮೂರಾಯ್ತಿ ಹೊರಡೆನೆ ತೆರಳಿದೊಡೆಂ ಪಾರು- |
ಪತ್ಯದವ ಮೆಚ್ಚುವನು || ಮಂ ||

ಈ ಪ್ರಪಂಚವೆ ದಿವ್ಯ ಕ್ಷೇತ್ರ. ಈ ಕ್ಷೇತ್ರದಲ್ಲಿ ನಾಲ್ಕು ದಿವಸವಿರಲು ಬಂದ ಯಾತ್ರಿಕರು ನಾವು. ಮೊದಲು ಈ ಪ್ರಪಂಚಕ್ಕೆ ಬಂದದ್ದು ನಾವೊಬ್ಬರೇ. ನಾವು ಬೆಳೆದು ದೊಡ್ಡವರಾದಂತೆ ನಮ್ಮ ಸುತ್ತಲಿನ ಪ್ರಪಂಚವೂ ನಮ್ಮ ಜೊತೆಗೆ ಬೆಳೆಯುತ್ತದೆ. ಜನನಿ, ಜನಕರ ಮೋಹ, ಮಡದಿ ಮಕ್ಕಳ ಮೋಹ, ಧನ ಮೋಹ, ಪಶುಮೋಹ ಇವೆಲ್ಲದರ ಮೋಹಜಾಲದಲ್ಲಿ ನಾವು ಬಂಧಿತರಾಗುತ್ತೇವೆ. ನಾವು ಯಾತ್ರಿಕರು ಎಂಬುದನ್ನು ಮರೆಯಬಾರದು.

ಸಿದ್ಧಾರೂಢರು ಇದನ್ನೇ ಜನರಿಗೆ ಮನವರಿಕೆಯಾಗುವಂತೆ ತಿಳಿಸಿದ್ದಾರೆ. ಆರೂಢರು ತಮ್ಮ ಸಂಚಾರದಲ್ಲಿ ವಿಜಾಪೂರಕ್ಕೆ ಬರುತ್ತಾರೆ. ಅಲ್ಲಿ ಒಬ್ಬ ಶ್ರೀಮಂತನ ಮನೆಯ ಮುಂದೆ ನೆರಳಿಗೆ ಕುಳೆತುಕೊಳ್ಳುತ್ತಾರೆ. ಆ ಮನೆಯ ಆಳು ಅವರನ್ನು ನೋಡಿ “ಅಪ್ಪಣೆ ಇಲ್ಲದೆ ಒಳಗೆ ಏಕೆ ಬಂದೆ”? ಎಂದು ಗದರಿಸುತ್ತಾನೆ. ಆರೂಢರು ಶಾಂತಚಿತ್ತದಿಂದ ಇದೂ ಒಂದು ಧರ್ಮಶಾಲೆ ಇದರ ಒಳಗೆ ಬರಲು ಅಪ್ಪಣೆ ಯಾಕೆ ಬೇಕು ಎಂದು ಉತ್ತರಿಸುತ್ತಾರೆ. ಈ ಮಾತು ಒಳಗೆ ಕುಳಿತಿರುವ ಮನೆಯ ಒಡೆಯನೆಗೆ (ಮಾಲಿಕ) ಕೇಳಿಸುತ್ತದೆ. ಸಾಹುಕಾರನು ಹೊರಗೆ ಬಂದು, ಆರೂಢರನ್ನು ಕಂಡಾಕ್ಷಣ ಪೂಜ್ಯ ಭಾವನೆ ಬಂದು, ಸ್ವಾಮೀ, ಇದು ಧರ್ಮಶಾಲೆ ಅಂದದ್ದು ಯಾಕೆ? ಎಂದು ಕೇಳುತ್ತಾನೆ. ಆಗ ಆರೂಢರು ನಗುಮುಖದಿಂದ, ಅಪ್ಪಾ ಇದಕ್ಕೂ ಮೊದಲು ಈ ಮನೆಯಲ್ಲಿ ಯಾರಿದ್ದರು?

ಸಾಹುಕಾರ : ನಮ್ಮ ತಂದೆ
ಆರೂಢರು : ಅದಕ್ಕೂ ಮೊದಲು
ಸಾಹುಕಾರ : ನಮ್ಮ ಅಜ್ಜ
ಆರೂಢರು : ಅದಕ್ಕೂ ಮೊದಲು
ಸಾಹುಕಾರ : ನನ್ನ ಮುತ್ತಜ್ಜ
ಆರೂಢರು ಸಾಹುಕಾರನಿಗೆ: ಈಗ ನಿನ್ನ ಪ್ರಶ್ನೆಗೆ ನಿನಗೇ ಉತ್ತರ ದೊರೆಯಿತಲ್ಲವೇ? ಇದು ಎಲ್ಲರೂ ನಾಲ್ಕು ದಿನ ಇದ್ದು ಹೋಗುವ ಧರ್ಮಶಾಲೆ ಅಲ್ಲವೇ? ಶ್ರೀಮಂತನಿಗೆ ಜ್ಞಾನೋದಯವಾಗಿ ಸಾಷ್ಟಾಂಗ ನಮಸ್ಕಾರ ಮಾಡಿದ.

ಇದು ನಾಲ್ಕು ದಿನದ ಪ್ರಪಂಚ. ಇದನ್ನು ತಿಳಿದು ಗೋಳಿಡದೆ ಮಗುವಿನಂತೆ ಸುಖವಾಗಿರು.

ಹಾಗಾದರೆ ಪ್ರಪಂಚ ಕ್ಷಣಿಕವೆಂದು ತಿಳಿದು, ನಾಳಿನ ಚಿಂತೆ ಇಲ್ಲದೆ, ಕೆಲಸ-ಕಾರ್ಯಗಳನ್ನು ತೊರೆದು ಕುಳಿತರೆ ಪ್ರಪಂಚ ನಡೆಯುವುದು ಹೇಗೆ? ಎಂಬುದಕ್ಕೆ ಮುಂದಿನ ಶ್ಲೋಕದಲ್ಲಿ ಹೇಳಿದ್ದಾರೆ.

ಕರ್ತವ್ಯವನ್ನು ನಿಷ್ಠೆಯಿಂದ ಮಾಡು, ಹಿಂಜರಿಯಬೇಡ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆ ಬರಲ್ ಅಳದೆ || ಮಂ ||

ಗುಂಡಪ್ಪನವರು ಹೇಳುತ್ತಾರೆ. ನಾವು ಯಾತ್ರಿಕರು ನಿಜ. ಇರುವ ಅಲ್ಪ ಸಮಯದಲ್ಲಿಯೇ ಮಾಡತಕ್ಕ ಕರ್ತವ್ಯಗಳನ್ನು ಮಾಡು. ಯಾವುದೇ ಮೋಸ, ಹಿಂಸೆ, ಸುಳ್ಳು, ನಿಂದೆ, ದ್ವೇಷ, ಮೋಹ ಇವುಗಳಿಲ್ಲದೆ ಶುದ್ಧಭಾವದಿಂದ ಮಾಡತಕ್ಕ ಕೆಲಸಗಳನ್ನು ಮಾಡು. ಕರ್ಮಯೋಗಿಯಾಗು. ನಿನ್ನ ಕಾರ್ಯಗಳಲ್ಲಿಯೇ ಮನಸ್ಸಿನ ಸಮಾಧಾನ, ಶಾಂತಿಯನ್ನು ಪಡೆ. ಗೊಣಗಬೇಡ. ಅಂತಃಕರಣ, ಮನಸ್ಸು, ಬುದ್ಧಿಯ ಸರಿಯಾದ ತಿಳುವಳಿಕೆಯಿಂದ ಕಾರ್ಯಗಳನ್ನು ಮಾಡು. ಆ ಕಾರ್ಯದಿಂದ ಸುಖ, ದುಃಖ, ಇಷ್ಟವಾದ ಫಲ, ಇಲ್ಲವೇ ಅನಿಷ್ಠವಾದ ಫಲ ಯಾವುದೇ ಬಂದರೂ ಅದು ಭಗವಂತನ ಪ್ರಸಾದವೆಂದು ತಿಳಿ. ಪ್ರತೀಕಾರವಿಲ್ಲದೆ ಸ್ವೀಕಾರ ಮಾಡು.

ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ, ಲೌಕಿಕ ಪ್ರಪಂಚದೊಂದಿಗೆ ಪರಮಾರ್ಥವನ್ನು ಸಾಧಿಸು. ಇರುವ ಕೆಲಸವ ಮಾಡು ಕಿರಿದೆನದೆ ಮನಸಿಟ್ಟು. ನಿನಗೆ ದೊರೆತ ಕಾರ್ಯಗಳನ್ನು ಮೇಲು ಕೀಳು ಎಂಬ ಭಾವನೆ ಇಲ್ಲದೆ, ಶ್ರದ್ಧೆಯಿಂದ ಮನಸಿಟ್ಟು ಮಾಡು. ನಿನ್ನ ಅಂತಃಕರಣ ಮನಸ್ಸು ಬುದ್ಧಿಯನ್ನು ಯಾವುದೇ ಕಾರ್ಯ ಮಾಡುವ ಮೊದಲು, ಮಾಡುವಾಗ, ಮಾಡಿದ ನಂತರ ಪ್ರಶಾಂತವಾಗಿ ಇಟ್ಟುಕೋ. ಇದರಿಂದ ಖಂಡಿತ ಸಮಾಧಾನ, ಶಾಂತಿ ಸಿಗುತ್ತದೆ.

ಈ ಶಾಂತಿ ಸಮಾಧಾನವೇ ನಿನ್ನ ನಿಜಸ್ವರೂಪ.

ಖದ್ಯೋತನಂತೆ ಬಿಡುಗೊಳದೆ ಧರ್ಮವಚರಿಸು |
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ||
ಗೆದ್ದುದೇನೆಂದು ಕೇಳದೆ, ನಿನ್ನ ಕೈ ಮೀರೆ |
ಸದ್ದು ಮಾಡದೆ ಮುಡುಗು || ಮಂ ||

ಪ್ರಪಂಚದ ಎಲ್ಲ ಜೀವರಾಶಿಗಳಿಗೆ ಸೌರ್ಯನಾರಾಯಣನೇ ಆಧಾರ. ಈಡೀ ಪ್ರಪಂಚಕ್ಕೆ ಒಂದು ದಿನವೂ ಬಿಡುವಿಲ್ಲದೆ ಬೆಳಕನ್ನು ನೀಡುತ್ತಾನೆ. ಆದರೆ, ಅವನು ಮಾಡುವ ಕೆಲಸಕ್ಕೆ ಸುಂಕ ಕೇಳುವುದಿಲ್ಲ. ನಿಸರ್ಗಕ್ಕೆ ಯಾವ ಪ್ರತಿಫಲಾಪೇಕ್ಷೆ ಇಲ್ಲ. ಮರವಾಗಿ ಬಾಳು ಎನ್ನುತ್ತಾರೆ. ಅಂದರೆ, ಮರ ಎಲ್ಲ ಜೀವರಿಗೆ ನೆರಳಿನಾಶ್ರಯ ನೀಡುತ್ತದೆ. ತಿನ್ನಲು ಹಣ್ಣುಗಳನ್ನು ಕೊಡುತ್ತದೆ. ಮರಕ್ಕೇನಾದರೂ ಹಣ್ಣಿನ ರುಚಿ ಗೊತ್ತೆ? ಹರಿಯುವ ನದಿ ಬಾಯಾರಿದವರಿಗೆ ನೀರನು ಕೊಡುತ್ತದೆ. ಅದು ತಾನೇ ಕುಡಿಯುವುದಿಲ್ಲ. ಕೊಡುವುದಷ್ಟೇ ಅವುಗಲ ಧರ್ಮ ಇದರಂತೆಯೇ. ಪರೋಪಕಾರಾರ್ಥಂ – ಇದಂ ಶರೀರಂ. ಮಾನವರು ಇದ್ದ ಸ್ವಲ್ಪ ಸಮಯದಲ್ಲಿ ಪರೋಪಕಾರಿಯಾಗಬೇಕು. ಸೂರ್ಯಚಂದ್ರರಂತೆ ನಾಲ್ಕು ಜನರ ಉಪಕಾರಕ್ಕಾಗಿಯೇ ಪರಮಾತ್ಮ ಈ ಶರೀರವನ್ನು ಕೊಟ್ಟಿದ್ದಾನೆ ಎಂಬುದನ್ನು ಮನಸ್ಸಿಗೆ ಖಚಿತಪಡಿಸಿಕೊಳ್ಳಬೇಕು. ಅಂದರೆ, ಮನಸ್ಸು ಗೋಳಾಡುವುದಿಲ್ಲ. ನಾವು ಅಂತಃಕರಣ ಮನಸ್ಸು ಬುದ್ಧಿಯಿಂದ ಸರಿಯಾಗಿ ಕೆಲಸ ಮಾಡಿದರೆ ನಮಗೆ ಆನಂದ ಶಾಂತಿ ನಿಶ್ಚಿತವಾಗಿ ದೊರೆಯುತ್ತದೆ.

ಜಗದೀ ಜಗತ್ವವನು, ಮಾಯಾವಿಚಿತ್ರವನು |
ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||
ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು |
ಹೊಗಿಸಾ ಕಡೆಗೆ ಮತಿಯ || ಮಂ ||

ಇದು ಚಿತ್ರ-ವಿಚಿತ್ರವಾದ ಪ್ರಪಂಚ. ಇದು ಸುಂದರವಾದ ಆಶೆ, ಆಮಿಷಗಳಿಂದ ಕೂಡಿದೆ. ಆದ್ದರಿಂದ ಪ್ರತಿಯೊಬ್ಬರಲ್ಲಿ ಅಶಾಂತಿ, ಅಸಮಾಧಾನ, ಚಪಲತೆ ಇವುಗಳನ್ನು ಉಂಟು ಮಾಡುತ್ತದೆ. ಚಿಗರಿಯು ಮೃಗ ಜಲದ ಬೆನ್ನು ಹತ್ತುವಂತೆ, ಪ್ರಪಂಚದಲ್ಲಿ ಸುಖವಿದೆ ಎಂದು, ಅದರ ಬೆನ್ನು ಹತ್ತಿ‌ಓಡಬೇಡ.

ತಮ್ಮಾ ಈ ಹೊರಪ್ರಪಂಚಕ್ಕಿಂತಲೂ ಸುಂದರವಾದ ಇನ್ನೊಂದು ಒಳ ಪ್ರಪಂಚವಿದೆ. ರೂಪಾಖ್ಯೆಯೊಂದು ಮಿಲ್ಲದ ವಸ್ತು ಹೊಗಿಸಾಕಡೆಗೆ ಮತಿಯ. ಇಂದ್ರಿಯ, ಮನಸ್ಸು, ಬುದ್ಧಿಯನ್ನು ಬೆಳಗುವ ಶುದ್ಧ ಚೈತನ್ಯದ ಶಕ್ತಿ ಪ್ರತಿಯೊಬ್ಬರ ಹೃದಯದಾಳದಲ್ಲಿದೆ. ನಿನ್ನ ಮನಸ್ಸನ್ನು ಆ ಕಡೆಗೆ ಹೊರಳಿಸು. ಅಲ್ಲಿ ಸುಖ, ಸಮಾಧಾನ, ಶಾಂತಿ ಇದೆ.

ಅಂತಃಕರಣದಲ್ಲಿ ಇಷ್ಟು ಜ್ಞಾನವಿದ್ದರೆ ಸಾಕು.

ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ |
ನಿಜಕುಕ್ಷಿ ಚಿಂತೆಯೇಂ ಮೊದಲು ಮನೆತಾಯ್ಗೆ? ||
ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ |
ಭಜಿಸು ನೀನಾವ್ರತವ || ಮಂ ||
ಪ್ರಪಂಚದಲ್ಲಿ ಕರ್ಮ ಮಾಡುವಾಗ ದ್ವಂದ್ವಗಳು ಬಂದರೂ, ಅವುಗಳನ್ನು ಎದುರಿಸಿ ಸಮಾಧಾನದಿಂದ ಇರು. ನಿನ್ನ ನಿಜ ಸ್ವರೂಪವೇ ಶಾಂತಿ. ಆನಂದೋಹಂ ಇದನ್ನು ಕಳೆದುಕೊಳ್ಳಬೇಡ. ಶಾಂತಿಂ ಸಮಾಧಾನ ಹೊರಗಿನಿಂದ ಬರುವುದಲ್ಲ. ಇಲ್ಲವೆ ಬೇರೆಯವರು ತಂದು ಕೊಡುವುದೂ ಅಲ್ಲ. ಅದು ನಿನ್ನೊಳಗೇ ಇದೆ.

ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ಕರ್ಮ ಮಾಡುವ ಅಧಿಕಾರವಿಷ್ಟೇ ನಿನ್ನದು. ಆದರೆ, ಅದರಿಂದ ಬರುವ ಫಲಕ್ಕೆ ನೀನು ಅಧಿಕಾರಿ ಅಲ್ಲ. ಕರ್ಮ ಫಲ ತ್ಯಾಗ. ಅಂದರೆ, ಈ ಕರ್ಮಫಲತ್ಯಾಗ ಬಾಹ್ಯ ಪ್ರಪಂಚದಿಂದ ಬರುವುದಲ್ಲ. ಬಾಹ್ಯ ಪ್ರಪಂಚದಿಂದ ಬರುವುದಲ್ಲ ಬಾಹ್ಯ ಪ್ರಪಂಚದಿಂದ ಕರ್ಮ ಮಾಡುವಾಗ ಲಾಭ, ನಷ್ಟ, ಸುಖ ಇಲ್ಲವೆ ದುಃಖ ಇವು ಬಂದೇ ಬರುತ್ತವೆ. ಈ ದ್ವಂದ್ವಗಳು ಹತ್ತಿರ ಸುಳಿದಾಗ ಪ್ರತಿಕ್ರಿಯೆ ರಹಿತವಾಗಿರುವುದೇ ಧರ್ಮ. ಇದೇ ತ್ಯಾಗ. ಈ ಮನಸ್ಸಿನ ಪ್ರತಿಕ್ರಿಯೆಯನ್ನು ತ್ಯಾಗ ಮಾಡು.

ಮನಸ್ಸಿನ ತಳಮಳವನ್ನು ಬಿಡು ಇದು ವೇದಾಂತದ ಉಪದೇಶ.

ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ. ಈ ಜಗತ್ತಿಗೆ ಯಜಮಾನರು ಯಾರು? ಈ ಪ್ರಪಂಚದಲ್ಲಿ ಬರುವ ಎಲ್ಲ ದ್ವಂದ್ವಗಳನ್ನು ಎದುರಿಸಿ, ಅದರ ಫಲಾಪೇಕ್ಷೆ ಇಲ್ಲದೆ, ಶಾಂತಚಿತ್ತನಾಗಿ, ಸಮಾಧಾನದಿಂದ ಇರುವವನೇ ಜಗಕೆ ಯಜಮಾನ.

ಗುಂಡಪ್ಪನವರು ಇದನ್ನು ತಾಯಿಯ ಉದಾಹರಣೆಯೊಂದಿಗೆ ಸುಂದರವಾಗಿ ವರ್ಣಿಸಿದ್ದಾರೆ.

ತಾಯಿತನ್ನ ಮನೆಯಲ್ಲಿ ಗಂಡನಿಗೆ, ಮಕ್ಕಳೆಗೆ ಇಷ್ಟವಾದ ಅಡಿಗೆಯನ್ನು ತಯಾರಿಸುತ್ತಾಳೆ. ಪ್ರೀತಿಯಿಂದ ಉಣಲು ಬಡಿಸುತ್ತಾಳೆ. ಅದರೆ, ಮಾಡಿದ ಅಡಿಗೆಯನ್ನು ಮೊದಲು ತನಗಾಗಿ ಎಂದೂ ಎತ್ತಿ ಇಟ್ಟುಕೊಳ್ಳುವುದಿಲ್ಲ. ಮಿಕ್ಕಿದ್ದನ್ನು ಉಂಡು ತೃಪ್ತಿಪಡುತ್ತಾಳೆ. ಬೇರೆಯವರಿಗೆ ಉಣಿಸಿದ ಸಮಾಧಾನ ತೃಪ್ತಿ ಅವಳಿಗೆ ಸಿಗುತ್ತದೆ. ಇದು ಜೀವನ.

ಜೀವನದಲ್ಲಿ ಕಷ್ಟನಷ್ಟಗಳು ಬಂದರೆ, ಅವುಗಳನ್ನು ತ್ಯಜಿಸಿ. ಅಂದರೆ, ಮನಸ್ಸಿಗೆ ಹಚ್ಚಿಕೊಳ್ಳದೆ ಆಂತರಿಕ ಸಮಾಧಾನವನ್ನು ಯಾರು ಕಾಯ್ದುಕೊಳ್ಳುತ್ತಾರೋ ಅವರೇ ತಮ್ಮ ಮನಸ್ಸಿನ ಯಜಮಾನರು. ನೀನೂ ಅದೇ ವ್ರತ ಮಾಡು. ಭಜಿಸು ನೀನಾವ್ರತವ.

ಯಾರು ತಮ್ಮ ಮನಸ್ಸನ್ನು ಗೆಲ್ಲುತ್ತಾರೋ ಅವರು ಪ್ರಪಂಚವನ್ನೇ ಗೆಲ್ಲುತ್ತಾರೆ.

ಮುಳುಗದಿರು ; ಜೀವನದ ತೆರೆಯ ಮೇಲೀಜುತಿರು |
ಒಳಿತನಾಗುಸು, ಕೊಡುತ ಕೊಳುತ ಸಂತಸವ ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |
ಮಿಳಿತನಿರು ವಿಶ್ವದಲಿ || ಮಂ ||

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ |
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ||
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿಂದ || ಮಂ ||

ಜೀವನ ಎಂಬುದು ಒಂದು ವಿಚಿತ್ರವಾದ ನದಿ. ಇದರಲ್ಲಿ ಈಜುವದು ಬಹಳ ಕಷ್ಟ. ಈಜುವಾಗ ಕಷ್ಟ, ಕಾರ್ಪಣ್ಯಗಳ ಬಳ್ಳಿ ಕಾಲಿಗೆ ಸುತ್ತಿ ನಮ್ಮನ್ನು ಕಟ್ಟಿ, ನೀರಿನಲ್ಲಿ ಮುಳುಗಿಸುತ್ತದೆ. ಆದುದರಿಂದ ಸಂಸಾರದಲ್ಲಿ ಬರುವಂಥ ದುಃಖ, ದುಮ್ಮಾನಗಳಿಗೆ ಬೆದರದೆ, ಅದರಲ್ಲಿಯೇ ಇದ್ದು ಅದನ್ನು ಜಯಿಸು. ಸಂಸಾರ ಸಾಗರವನ್ನು ಧೀರತೆಯಿಂದ ಈಜಿ ಪಾರಾಗು. ಮೊಡು ಹಟದಿಂದ ಅದನ್ನು ಎದುರಿಸಬೇಡ. ಯಾರೊಂದಿಗೂ ವೈರ, ಹಗೆತನ ಮಾಡಬೇಡ. ಉದಾತ್ತ ವಿಚಾರಗಳಿಂದ ಬಾಳು.

ಉಪದೇಶ ಮಾಡುವುದು ಸುಲಭ. ಆಚರಣೆಗೆ ತರುವುದು ಕಷ್ಟ. ಒಂದು ಸಣ್ಣ ಮುಳ್ಳು ಕಾಲಿಗೆ ನೆಟ್ಟರೆ ಸಾಕು ಗೋಳಾಡುತ್ತೇವೆ. ಗೋಳಾಡುವುದು ಬೇಡ.

ಯಾರೇ ನಿನ್ನ ಬಳಿಗೆ ಬರಲಿ ಅವರಿಗೆ ಹಿತವನ್ನೇ ಬಯಸು. ಇದೇ ದೀಕ್ಷೆ. ಇದೇ ವ್ರತ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ |
ಎಲ್ಲರೊಳಗೊಂದಾಗು || ಮಂ ||

ಪರೋಪಕಾರದರ್ಥಮಿದಂ ಶರೀರಂ. ನಾಲ್ಕು ಜನರ ಉಪಕಾರಕ್ಕಾಗಿಯೆ ಈ ಜನ್ಮವಿದೆ. ಬೆಟ್ಟದಡಿಯ ಹುಲ್ಲಿನ ಹಾಗೆ ಪರರಿಗೆ ಉಪಕಾರಕ್ಕಾಗಿರಬೇಕು. ಮನೆಯಲ್ಲಿ ಮಲ್ಲಿಗೆಯ ಹೂವನ್ನು ಎಲ್ಲಿಯೇ ಇಡಲಿ ಅದರ ಸುವಾಸನೆ ಮನೆಯ ತುಂಬೆಲ್ಲ ಹರಡುತ್ತದೆ. ಮನೆಗೆ ಮಲ್ಲಿಗೆಯಾಗು. ಮಲ್ಲಿಗೆಯ ಹೂವಿನಂತೆ ಮನೆಗೆ ಪರಿಮಳವನ್ನು ಬೀರಿ, ಅಂದರೆ, ಮೃದುವಾದ ಮಾತು, ತ್ಯಾಗ, ಸೇವೆಗಳಿಂದ ಎಲ್ಲರ ಮನಸೆಳೆದು, ಅವರ ಪ್ರೀತಿಗೆ ಪಾತ್ರನಾಗು. ದೀನ, ದುರ್ಬಲರಿಗೆ ಬೆಲ್ಲ ಸಕ್ಕರೆಯಾಗು. ಅಂದರೆ ಬಡಬಗ್ಗರಿಗೆ ಸಹಾಯ ಮಾಡು. ದುರ್ಬಲರ ಸೇವೆ ಮಾಡು. ಕಷ್ಟಗಳು ಬಂದಾಗ ಧೃತಿಗೆಡಬೇಡ. ಧೈರ್ಯಗುಂದಬೇಡ. ಸಹನೆ ಇರಲಿ. ಸಹನಂ ಸರ್ವದುಃಖಾನಾಂ ಅಪ್ರತೀಕಾರ ಪುರ್ವಕಂ. ಸಹನೆಯೇ ವಜ್ರದ ಕವಚವಾಗಲಿ. ಮನಸ್ಸಿನ ಸಮಾಧಾನಕ್ಕೆ ಪೂಜೆ, ಭಜನೆ ಇಲ್ಲವೆ ಜಪ ಮಾಡು. ಪರರ ಹಿತಕ್ಕಾಗಿ ಸೆಣಸಾಡು.

ಇದಕ್ಕೆ ವ್ರತವೆನ್ನುತ್ತಾರೆ. ಇದನ್ನು ಪ್ರತಿದಿವಸವೂ ಸಾಧಿಸಬೇಕು.

ದಿವಸಂ ದಿವಸಕ್ಕೆ ನಿಮಿಷದಿಂದ ನಿಮಿಷಕ್ಕೆ |
ಭವಿಷಿಯವ ಚಿಂತಿಸದೆ ಬದುಕು ನೂಕುತಿರು ||
ವಿವರಗಳ ಜೋಡಿಸುವ ಯಜಮಾನ ಬೇರಿಹನು |
ಸವೆಸು ನೀಂ ಜನುಮವನು || ಮಂ ||

ಯಾವಾಗಲೂ ಭವಿಷ್ಯದ ಚಿಂತೆಯನ್ನು ಮಾಡಬೇಡ. ಭವಿಷ್ಯವು ನಮ್ಮ ಕೈಯಲ್ಲಿಲ್ಲ. ಅದರ ಒಡೆಯ ಬೇರೆ ಇರುತ್ತಾನೆ. ನೀನು ನಿನ್ನ ಇಂದಿನ ಸುಖವನ್ನು ನಾಳೆಗಾಗಿ ಹಾಳು ಮಾಡಿಕೊಳ್ಳಬೇಡ. ಯಾವಾಗಲೂ ಶುಭವನ್ನೇ ಹಾರೈಸು. ಕೆಡುಕನ್ನು ವಿಚಾರ ಮಾಡಬೇಡ. ನಾಳಿನ ಚಿಂತೆ ನಾರಾಯಣನಿಗೆ ಬಿಡು.

ಶರೀರ ಕುಗ್ಗುವುದು, ಸೊರಗುವುದು ನಿಜ. ಅದಕ್ಕಾಗಿ ಕೊರಗಬೇಡ. ಶಿಷ್ಯನ ಪ್ರಶ್ನೆ – ಮಹಾತ್ಮರಿಗೆ ಎಲ್ಲಿಂದ ಉತ್ಸಾಹ ಬರುತ್ತದೆ?

ಶರಣರು, ಸಂತರು, ದಾಸರು ಸಮಸ್ತ ವಿಶ್ವವನ್ನೇ ದೇವರ ಪ್ರಸಾದ ಎಂಬ ನಿರ್ಮಲ ಭಾವದಿಂದ ನೋಡಿದರು. ಅವರ ಇಂದ್ರಿಯಗಳು, ಮನಸ್ಸು ಪವಿತ್ರ ವಾದವುಗಳು. ಆದ ಕಾರಣ ಅವರ ಜೀವನ ಉಲ್ಲಾಸಮಯ.

ನಮ್ಮ ಮನಸ್ಸನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಜೀವನ.

ಹಿಂದಿನ ಘಟನೆಗಳನ್ನು ಮರೆತು, ಮುಂದಿನ ಆಲೋಚನೆ ಮಾಡದೆ ವರ್ತಮಾನದಲ್ಲಿ ಸುಖವಾಗಿರು.

ಮುಂದೇನೂ, ಮತ್ತೇನೊ, ಇಂದಿಗಾಮಾತೇಕೆ? |
ಸಂದರ್ಭ ಬರಲಿ, ಬಂದಾಗಳಾ ಚಿಂತೆ ||
ಹೊದಿಸುವನಾರೊ, ನಿನ್ನಾಳಲ್ಲ, ಬೇರಿಹನು |
ಇಂದಿಗಿಂದಿನ ಬದುಕು || ಮಂ ||

ಗುಂಡಪ್ಪನವರು ಮತ್ತೆ ಸಾರಿ ಸಾರಿ ಹೇಳುತ್ತಾರೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಬೇಡ. ಸುಖವಾಗಿರುವ ಸಂದರ್ಭ ದೊರೆತಾಗ ಸುಖದಿಂದ ಇರು. ಮುಂದಿನ ಭವಿಷ್ಯಕ್ಕಾಗಿ ಇಂದಿನ ಸುಖವನ್ನು ಹಾಳು ಮಾಡಿಕೊಳ್ಳಬೇಡ. ಕಷ್ಟಬರುವಾಗ, ದುಃಖವಾದಾಗ ಅದನ್ನು ನಿವಾರಿಸಲು ಪರಮಾತ್ಮನಿದ್ದಾನೆ. ಅವನು ನಿನ್ನ ಆಧೀನವಾಗಿಲ್ಲ. ಆದ್ದರಿಂದ ಅವನು ನೀನು ಹೇಳಿದಂತೆಯೇ ಕೇಳುವುದಿಲ್ಲ. ಅವನು ಜಗದೊಡೆಯ. ನಾಳೆಯ ಊಟಕ್ಕೆ ಇಂದೆಯೇ ಪಾಕ ಸಿದ್ಧಪಡಿಸಿಡಬೇಡ. ನಾಳಿನದನ್ನು ನಾಳೆಗೆ ಬಿಡು. ಇಂದಿನ ವರ್ತಮಾನದಲ್ಲಿ ಬದುಕು, ನಾಳಿನ ಚಿಂತೆ ಬೇಡ.

ಏನಾದೊಡೆಯು ಮುಪ್ಪುದುಂಟು, ಸಿದ್ದನಿರದಕೆ |
ಭಾನು ತಣುವಾದನು; ಸೋಮ ಸುತನು ||
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು|
ಮೌನದಲ್ಲಿ ಸಿದ್ದನಿರು || ಮಂ ||

ಪ್ರಪಂಚದಲ್ಲಿ ಸೂರ್ಯನು ಉದಯಿಸಿ ಜಗವನ್ನೆಲ್ಲ ಬಡೆದು ಎಬ್ಬಿಸುತ್ತಾನೆ. ಮಧ್ಯಾಹ್ನದಲ್ಲಿ ಪ್ರಖರನಾಗಿಮೆರೆದು, ಸಾಯಂಕಾಲಕ್ಕೆ, ಸೌಮ್ಯವಾದ ಕಿರಣಗಳನ್ನು ನೀಡಿ ಅಡಗುತ್ತಾನೆ.

ಇದರಂತೆಯೆ ಶರೀರಕ್ಕೆ ಮುರು ಅವಸ್ಥೆಗಳು ಇವೆ. ಬಾಲ್ಯ, ಯೌವನ, ಮುಪ್ಪು. ಸೂರ್ಯನು ಮಧ್ಯಾಹ್ನದಲ್ಲಿ ಪ್ರಖರನಾಗಿರುವಂತೆ. ಯೌವ್ವನದಲ್ಲಿ ನಿನಗೆ ಸಾದಿಸಬೇಕಾದುದ್ದನ್ನು ಸಾದಿಸಬಹುದು. ಸಾಯಂಕಾಲ ಸೂರ್ಯ ತಣಿಯುತ್ತಾನೆ. ಆದರೆ, ಅವನ ಕಾಂತಿ ಅವನಿಗೆ ಇದ್ದೇ ಇರುತ್ತದೆ.

ಪ್ರತಿಯೊಬ್ಬರಿಗೂ ಮುಪ್ಪು ತಪ್ಪಿದ್ದಲ್ಲ. ಮುಪ್ಪು ಬರುವಾಗ ಅನುಭವದ ಶಾಂತಿ ಮುಖವಾಡ ಧರಿಸು. ಮೌನದಲಿ ಬಂದುದ್ದನ್ನೆಲ್ಲ ಎದುರಿಸು. ಎನಾದೊದಂ ಮೌನದಲಿ ಸಿದ್ಧನಿರು. ನಿನ್ನ ಕಾರ್ಯಗಳನ್ನು ಸಾಧಿಸುವಾಗ ಏನೇ ದ್ವಂದ್ವಗಳು ಬಂದರೂ ಒಳಗಿನ ಮನಸ್ಸನ್ನು ಪ್ರಶಾಂಥವಾಗಿಟ್ಟುಕೊ.

ಗುಂಡಪ್ಪನವರು ಹೇಳುತ್ತಾರೆ – ಇವತ್ತು ಬಿಸಿಲನ್ನು ಕೊಡುವಂತ ಸೂರ್ಯನು ನಾಳಿಗೆ ತಣ್ಣಗಾದರೆ? ಆಗಲಿ. ಅದರಿಂದ ನಿನಗೇನು ನಷ್ಟ? ಸುಮ್ಮನೆ ವಿಚಾರ ಮಾಡಬೇಡ. ಬುದ್ಧಿಮಾತಿದು ನಿನಗೆ; ಸಿದ್ಧನಿರು ಎಲ್ಲಕುಂ. ನಾನಾ ತರಹದ ಕಷ್ಟಗಳು ಬರುವಾಗ ಸಮಾಧಾನದಿಂದ ಇರುವ ಧೀಕ್ಷೆ ನಿನಗಿರಲಿ.

ಈ ಸಮಾಧಾನ, ಪೂಜೆ, ಜಪ, ಭಜನೆ ಗುರುಗಳ ಆಶೀರ್ವಾದ, ಇಲ್ಲವೆ ಸಜ್ಜನರ ಸಹವಾಸದಿಂದ ಲಭಿಸುತ್ತದೆ.

ಎದರು ತೊದರೆನಲೇಕೆ? ಬಿದಿಸುಮತಿಗಾದನಿತ |
ದುದಿ ಕೈಯಿನಾದನಿತೌ; ಪದು ಬಂದ ಪಾದ ||
ಬಿದು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |
ಬಿದುಗದೆಗೆ ದಾರಿಯದು || ಮಂ ||

ಈ ಪ್ರಪಂಚದಲ್ಲಿ ಹೊರ ನೋಟಕ್ಕೆ ಎಲ್ಲರೂ ಸುಖಿಗಳೇ. ಆದರೆ, ಕಷ್ಟ ಯಾರಿಗೂ ತಪ್ಪಿಲ್ಲ. ದೇವಾನುದೇವತೆಗಳಿಗೆ, ದೈವಭಕ್ತರಿಗೆ ಕಷ್ಟ ತಪ್ಪಿತೇ? ಶ್ರೀರಾಮನಿಗೂ ೧೪ ವರ್ಷ ವನವಾಸ. ತುಕಾರಾಮರಿಗೆ ಎಲ್ಲಿಲ್ಲದ ಬಡತನ. ಜ್ಞಾನೇಶ್ವರರಿಗೆ, ಮೀರಾ ಬಾಯಿಗೆ, ಯಾರಿಗೆ ಸುಖವಿತ್ತು? ಆದರೆ, ಅವರು ಹೆದರಿದರೇ? ಇಲ್ಲ. ಅವರು ತಮ್ಮ ಆಂತರಿಕ ಶಾಂತಿಯನ್ನು ಕಳೆದುಕೊಳ್ಳದೆ, ಪರರ ಕಲ್ಯಾಣವನ್ನೇ ಬಯಸಿದರು. ಪ್ರಪಂಚವನ್ನೇ ಉದ್ಧಾರ ಮಾಡಿ ಅಮರರಾದರು.

ನಗು ಮನದಿ ಲೋಗರ ವಿಕಾರಂಗಳನು ನೋಡಿ |
ಬಿಗಿ ತುಟಿಯ ದುದಿವಂದು ನೋವಪದುವಂದು ||
ಪುಗು ವಿಶ್ವಜೀವನದ ಜೀವಾಂತರಂಗದಲಿ |
ನಗುನಗುತ ಬಾಳ್, ತೆರಳು || ಮಂ ||

ಜೀವನವು ಅನೇಕ ಸುಂದರ ಹಾಗೂ ಕುರೂಪ ವಿಕಾರಗಳಿಂದ ಕೂಡಿದ ನೀನು ಅವುಗಳಿಗೆ ಹೆದರದೆ ನಗುನಗುತ್ತ ಬಾಳು, ಪ್ರಶಾಂವಾಗಿರು. ಮನಸ್ಸು ಪ್ರಶಾಂತವಾಗಿರುವುದಕ್ಕೆ ಕಾರಣವನ್ನು ಹುಡುಕಬೇಡ. ಒಮ್ಮೆ ಮನಸ್ಸಿಗೆ ಪ್ರಶಾಂತತೆ ದೊರಕಿದರೆ ಸಾಕು. ಲೋಕದಲ್ಲಿಯ ವಿಕಾರಗಳನ್ನು ನೋಡಿ ನಿನಗೇ ನನ್ನ ಮನದಲ್ಲಿ ನಗೆ ಬರುತ್ತದೆ. ಇದನ್ನೇ ಪುರಂದರದಾಸರು ಹಾಡಿದ್ದಾರೆ. ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದೊಳಗಿನ ಮನುಜರೆಲ್ಲ ಹಗರಣ ಮಾಡುವುದು ಕಂದು.

ಹೊರ ಪ್ರಪಂಚದಲ್ಲಿ ಒಬ್ಬೊಬ್ಬರು ಒಂದೊಂದು ತರಹ. ನಮ್ಮ ರಕ್ಷಣೆ ಮಾಡುವವರು ಯಾರೂ ಇಲ್ಲ. ಗುಂಡಪ್ಪನವರು ಹೇಳುವುದು, ನಂಬಿದರೆ ದೇವರನ್ನು ನಂಬಿ. ಅವನನ್ನು ಬಿಟ್ಟು ಬೇರೆ ಯಾರನ್ನೂ ನಂಬಬೇಡ.

ಭಗವಂಥನನ್ನು ನಂಬಿದವರಿಗೆ ದ್ರೋಹವಿಲ್ಲ. ಪರಮಾತ್ಮನಲ್ಲಿ ಯಾರು ಮನಸ್ಸನ್ನು ನಿಲ್ಲಿಸುತ್ತಾರೋ ಅವರಿಗೆ ಆನಂದ ಖಂಡಿತ.

ತತ್ವ ಸಾಕ್ಷಾತ್ಕಾರ ಚಿತ್ತಶುಧ್ಧಿಯಿನಹುದು |
ಚಿತ್ತಶೋಧನೆ ಮತಿಚಮತ್ಕಾರವಲ್ಲ ||
ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ |
ಸಕ್ತಿಯಿಂ ಶುಧ್ಧತೆಯೊ || ಮಂ ||

ತತ್ವಸಾಕ್ಷಾತ್ಕಾರ, ಮೋಕ್ಷ, ನಿರ್ವಾಣ ಅನ್ನುವುದೆ ಆನಂದ ಪ್ರಾಪ್ತಿ. ಮನಸ್ಸನ್ನು ಶೋಧಿಸುವುದು ಚಮತ್ಕಾರವಲ್ಲ. ಪ್ರಪಂಚದಲ್ಲಿ ಪರಿಶುಧ್ಧವಾದ ಕರ್ಮಗಳನ್ನು ಆಸಕ್ತಿಯಿಂದ ಮಾದಿದರೆ ಮನಸ್ಸಿನ ಶುಧ್ಧತೆ ತಾನಾಗಿ ಬರುತ್ತದೆ. ಪರಮಾಥ್ಮ ಸ್ವರೂಪ. ಈ ಹೃದಯವೇ ನಮ್ಮ ಮನಸ್ಸು ಬುಧ್ಧಿಯ ಸ್ಥಾನ. ಈ ಮನಸ್ಸಿನಲ್ಲಿಯೇ ಒಳ್ಳೆಯದು, ಕೆಟ್ಟದ್ದುಂ ರೊಚ್ಚು, ಹೊಲಸು ಎಲ್ಲ ತುಂಬಿವೆ. ಮನದ ಕೊಳೆಯನ್ನು ತೊಳೆದು ಸ್ವಚ್ಛಮಾಡದೆ ಮೋಕ್ಷವಿಲ್ಲ.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.