ಕುರಿಗಳು, ಸಾರ್, ಕುರಿಗಳು

ಕುರಿಗಳು, ಸಾರ್, ಕುರಿಗಳು

ಕುರಿಗಳು, ಸಾರ್, ಕುರಿಗಳು
ಕುರಿಗಳು, ಸಾರ್, ಕುರಿಗಳು:
ಸಾಗಿದ್ದೇ
ಗುರಿಗಳು.
ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ
ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು, ನೀವು,
ಕುರಿಗಳು, ಸಾರ್, ಕುರಿಗಳು;
ನಮಗೊ ನೂರು ಗುರಿಗಳು.

ಎಡದಿಕ್ಕಿಗೆ, ಬಲದಿಕ್ಕೆಗೆ, ಒಮ್ಮೆ ದಿಕ್ಕುಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೋ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬರಲು ಹಾಯದ
ಅವರು, ಇವರು, ನಾವುಗಳು
ಕುರಿಗಳು, ಸಾರ್, ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೇ ಸ್ವರ್ಗ ಮುಂದೆ;
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆ ಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ,
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು, ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?
ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು,
ಶಾನುಭೋಗ ಗೀಚಿದಕ್ಕೆ ಹೆಬ್ಬೆಟ್ಟನು ಒತ್ತುವವರು,
ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚ ಹಿರಿದಿ ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನಡಿಗೆ ಬೆಣ್ಣೆ ಹಚ್ಚುವವರು.

ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು
ಮಾತುಗಳ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು,
ಬೆಟ್ಟ ದಾಟಿ ಕಿರುಬ ನುಗ್ಗಿ, ನಮ್ಮೊಳಿಬ್ಬರನ್ನ ಮುಗಿಸಿ
ನಾವು ‘ಬ್ಯಾ, ಬ್ಯಾ’ ಎಂದು ಬಾಯಿಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತ್ತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ;
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿ ಕೂಡ ನಮ್ಮದೇನೆ;
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪು ಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆ ವಾಸನೆ,
ಇರಿಯುತಿಹುದು ಮೂಗನೆ!

ಕೊಬ್ಬಿರುವೀ ಮಬ್ಬುನಲಿ, ಮೈ ನಾತದ ಗಬ್ಬಿನಲಿ
ಇದರ ಉಸಿರು ಅದು, ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮ ನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಂಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು, ಸಾರ್, ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ
ಕಣ್ಣುಕುಕ್ಕಿ, ಸೊಕ್ಕಿರುವ; ಹೋಗಿಹೋಗಿ ನೆಕ್ಕಿರುವ;
ಕತ್ತನದಕೆ ತಿಕ್ಕಿರುವ,
ನಾವು, ನೀವು, ಅವರು, ಇವರು
ಕುರಿಗಳು, ಸಾರ್, ಕುರಿಗಳು!
ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳದ ಕಿಚ್ಚಿನಲ್ಲಿ
ಮನೆ ಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!

ಕುರಿಗಳು, ಸಾರ್, ಕುರಿಗಳು…..
*****
ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.