– ೧ –
ನಮ್ಮದೊಂದು ಮನೆ ವಿನಾ
ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ
ಮುಂಜಾನೆ ರಂಗವಲ್ಲಿ;
ಕಿಲಿಕಿಲಿಸಿದಂತೆ ಇಡಿ ಗಲ್ಲಿ.
ಹಾಲಿಗೆ ಹೊರಟಾಗ ಹೊತ್ತಾರೆ
ಚಿತ್ತಾಪಹಾರಿ ಚಿತ್ತಾರ
ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ
ತೆರೆದು, ತುಂಬುವುದೆಂಥ ಭಾವಾವೇಗ!
ಈ ಡಿಸೈನಿನ ಹಾಗೆ ಅದಿಲ್ಲ,
ಜ್ಯಾಮಿತಿಯ ಗಡಸು, ಜಟಿಲ ಸೂತ್ರಗಳಿಗೆಲ್ಲ
ದಕ್ಕಿರುವುದಿಲ್ಲ ಮಿಗಿಲರ್ಥ,
ಮೃದು ಬೆರಳ ಪರಿಹಾರ;
ಕಾಲೇಜು ಕಲಿಯದ ಸುಮಂಗಲೆ
ರಂಗೋಲಿ ನೆವದಿಂದ ನೀಡಿದ್ದಾಳೆ
ಪ್ರತಿದಿನವೂ ಸೂತ್ರಗಳಿಗಾಕಾರ.
ಕೋನ ರೇಖೆಗಳೇನು! ಚೌಕ ವೃತ್ತಗಳೇನು!
ಸ್ವಸ್ತಿಕ, ಮಂಡಲ, ಚುಕ್ಕೆ;
ಯಾವುದೋ ಆರ್ಷ ಮಂತ್ರಕ್ಕೆ
ಒಡಮೂಡಿದೆ ಕಲೆಗಾರಿಕೆಯ ರೆಕ್ಕೆ.
– ೨ –
ರಂಗವಲ್ಲಿ
ನನ್ನೆದೆಯ ಕದ್ದದ್ದು ಚಿಕ್ಕಂದಿನಲ್ಲಿ,
ಇದರ ಶುರು ಮತ್ತೆ ಕೊನೆಯೆಲ್ಲಿ ಎಂದು
ಗೊತ್ತಾಗದೆ ನೊಂದು
ತಲೆ ಕೆಡಿಸಿಕೊಂಡಿದ್ದೇನೆ ಸಲಸಲಕ್ಕು;
ಈ ಬೆಳ್ಳನೆಯ ಕಗ್ಗಾಡ ಕಣ್ಣಿಂದ ಹೊಕ್ಕು.
ನೆರೆಯಾಕೆ ಬಾಗಿ
ಚಣದಲ್ಲಿ ಬಿಡಿಸಿದ ವಿಚಿತ್ರಕ್ಕೆ ಬೆರಗಾಗಿ
ಚಾಕ್‌ಪೀಸು ಪುಡಿಯಿಂದ ನಮ್ಮ ಪಡಸಾಲೆಯಲಿ
ನಕಲಿಸಲು ಹೋಗಿ ಸಲಸಲವು ಸೋತಿದ್ದೆ;
ಕಾಫರನ ಬಿರುದು ಹೆತ್ತವಳಿಂದ ಹೊತ್ತಿದ್ದೆ.
ಪಕ್ಕದ ಮನೆ ಅಯ್ಯಂಗಾರರ ವೇದವಲ್ಲಿ
ಬಿಡಿಸಿದ್ದರೊಮ್ಮೆ ತೊಡಕಾದ ರಂಗವಲ್ಲಿ.
ನೆಟ್ಟಕಣ್ಣಿನ ನನ್ನ ಕೌತುಕಕ್ಕೆ
ಮೆರೆಸಿ ತಮ್ಮೆಲ್ಲ ಹಲ್ಲ-
“ಸಾಬರು ಯಾಕೊ ರಂಗೋಲಿ ಇಡೊಲ್ಲ?”
-ದೇವರೇ, ಜವಾಬು ಗೊತ್ತಿದ್ದರೆ!
ನಾಚಿ ನೀರಾಗಿದ್ದೆ.
ನಮ್ಮ ಔಟ್‌ಹೌಸಿನ ಜನ
ಹೊಸ್ತಿಲ ಬಳಿ ರಂಗೋಲಿ ಬಿಡಿಸಿದ ಹೊತ್ತು
ಅಜ್ಜಿ ತೋರಿರಲು ಬಿರು ನುಡಿಯ ದೌಲತ್ತು
ಅಬ್ಬ! ನನಗೆಂಥ ನೋವಾಗಿತ್ತು.
ಒಮ್ಮೆ ಯಾವುದೋ ಚಿಂತೆಯಲಿ ಬಗೆ ನೆಟ್ಟು
ಮನೆಯೊಂದರ ರಂಗೋಲಿ ಮೇಲೆ ಅಡಿಯಿಟ್ಟು
ಸರಕ್ಕನೆಳೆದುಕೊಂಡಿದ್ದೆ ಕೆಂಡ ತುಳಿದವನಂತೆ;
ಜೊತೆಗೆ ಆ ಮನೆಯವರು ಕಂಡರೋ ಎಂಬ ಚಿಂತೆ.
– ೩ –
ಆರು ವರ್ಷದ ಹಿರಿಯ ಮಗ ಮೊನ್ನೆ
ಹಾಲು ತರಲು ಹೊರಟ ನನ್ನೊಡನೆ.
ರಂಗೋಲಿ ನೋಡುತ್ತ ನಡೆದಿದ್ದೆ;
ಗಮನಿಸಿದ ಅವನೆಂದ:
-ಯಾಕೆ ಬಿಡಿಸುತ್ತಾರೆ ಇವರು
ಹೀಗೆ ದಿನಾ ಚಕ್ರಬಂಧ?-
ವಿವರಣೆಯ ಗೆಣ್ಣು ಗಂಟುಗಳನ್ನೆಲ್ಲ
ಹೆರೆದು ಸಾಫುಗೊಳಿಸಿದ್ದೆ ಉತ್ತರದ ಗೆಲ್ಲ:
“ನಮ್ಮ ಪದ್ಧತಿಗೆ ಅದು ಸಲ್ಲ.”
ಮನದ ಗೊಂದಲ ತಿಳಿ ಮೊಗಕ್ಕೂ ಮುಸುಕಿ
ಯಾಕೆಂಬ ಮರುಪ್ರಶ್ನೆ ಮಿಂಚಿಸಿರಲು-
ತೆಪ್ಪಗಿರಿಸಲು ಮಗನ, ಪಲುಕಿದೆ ಹಳೆಯ ರಾಗ:
“ಖುರಾನ್, ಧರ್ಮಗ್ರಂಥಗಳಲ್ಲಿ ಹೇಳಿಲ್ಲ.”
ತೊರೆದು ಅರೆ ಗಳಿಗೆ ಮೌನದ ಹಕ್ಕೆ
ಹವ್ವನೆರಗಿತು ಮತ್ತೆ ಪ್ರಶ್ನೆ ಗರುಡನ ರೆಕ್ಕೆ;
-ಅಲ್ಲಿ ಹೇಳಿದ ಹಾಗೆ ಆಚರಿಸಬೇಕೆ?-
ಹೌದೆಂದೆ, ಪ್ರಶ್ನೆ ಸೋನೆಯ ಬೇಸರಕ್ಕೆ.
-ಮನೆಯ ಕಟ್ಟಿದ ಇಸ್ವಿ,
ನಿನ್ನ ಹೆಸರು, ಮನೆಯೆದುರಲ್ಲಿ
ಬರೆಸಿರುವೆಲ್ಲ, ಹೇಳಿದೆಯೆ ಖುರಾನಿನಲ್ಲಿ?
-ಆತ್ಮಸಾಕ್ಷಿಯ ಕತ್ತು ಹಿಚುಕಬಂದವನನ್ನ,
ಮಗುವೆನ್ನಬಹುದೆ ಇವನನ್ನ?
ಭೋಳೆ ಪ್ರಶ್ನೆ ಎಲ್ಲೆಲ್ಲಿಗೊ ಕೈಚಾಚಿ
ಪೇಚಿಗಿಡಿಸಿತು ನನ್ನ
ಆಚರಣೆ ನಂಬಿಕೆಗಳ ಮಡಿಕೆ ಮಡಿಕೆಯ ರಾಚಿ.
“ಕ್ಯೂ ಬೆಳೆಯುತ್ತೆ, ಹೆಜ್ಜೆ ಹಾಕೋ ಬೇಗ”
ಎಂದೆ ಎಚ್ಚೆತ್ತು.
ರಂಗೋಲಿ ಹಾಯಾಗಿತ್ತು ಯಾವತ್ತಿನಂತೆ:
ಬೆರಗು ಪ್ರಶ್ನೆಗಳವಳಿ ರೆಕ್ಕೆ
ಹರಡಿದ ಪುಟ್ಟ ಹಕ್ಕಿಯಂತೆ;
ಮನದ ತುಂಬಾ ನೆರೆಸಿ ಚಿಂತನೆಯ ಸಂತೆ.
*****
ಕೀಲಿಕರಣ: ಶ್ರೀನಿವಾಸ