ಪಾಠ ಒಂದು.. ಎರಡು.. ಮೂರು..

“ಅಗೋ, ಆಕಾಶ, ಅಲ್ಲಿ ಮೇಲೆ!
ಅದರಡಿಗೆ ಭೂಮಿ,
ನೀನು ಭೂಮಿ ನಾನು ಆಕಾಶ”

ಆ….. ಹಾ…..!
ಎಂತ ಮಾತು!!

ದೇವರೇ, ಹೊಟ್ಟೆ ತುಂಬ ಊಟ ಕೊಡು
ನಿದ್ದೆ ತುಂಬ ಕನಸನಿಡು.

ಕೊಡುವವರು ಯಾರು, ಪಡೆವವರು ಯಾರು
ಎರಡು ಕ್ರಿಯೆಗಳ ಮೇಲೆ ದಿನನಿತ್ಯ ವಹಿವಾಟು.
‘ಅವನು’ ದೇವರು, ‘ಅವಳು’ ಅವನ ದಾಸಿ
ಕೃತಾರ್ಥವಾಗಬೇಕು ಹೀಗೆ ಜೀವ
ನಿಮ್ಮ ಚರಣಕಮಲಕ್ಕೆರಗಿ

ಬಾಷೆ ಚಪಾತಿ ಹಿಟ್ಟಿನ ಹಾಗೆ
ಲಟ್ಟಿಸಿದರೆ, ಗುಂಡಗಿರಬೇಕು
ಅಥವ ಮೂರು ಮೂಲೆ,
ಬೇರೆ ಆಕಾರವೇ ಬಾರದು ಅದಕೆ.

ಹೆಜ್ಜೆ ಪಾಡಿಗೆ ಹಜ್ಜೆ
ಆಲೋಚನೆಯ ಧಾಟಿ
ಹಾದಿ ಬಿಟ್ಟು ಹೊರಟಿತ್ತು.

ನಡೆಯುತ್ತಾ ಹೋದರೆ ಮುಂಬಾಲಿಸುತ್ತದೆ
ಹೊಸಾ ದಿಕ್ಕಿಗೊಂದು ಕಾಲುದಾರಿ.

(ಹೊಸ ಮಾತು ನಮ್ಮೊಳಗೆ!
ಇಷ್ಟು ದಿನ ಎಲ್ಲಿ ಅಡಗಿತ್ತು
ಅಡಿಗೆ ಮನೆ ಸಿಂಕಿನ ಬದಿ
ಮುಸುರೆಯುಜ್ಜುತ್ತಾ!)
ಕೂತಲ್ಲೇ ಜೀಕುಹಾಕುವ ತೂಕಡಿಕೆ.

ನಮ್ಮದು ಹೊಸಲೋಕ
ಅಲ್ಲಿ ದೇವರಿಲ್ಲ
ಕೊಡುವವರಿಲ್ಲ
ಕೊಳ್ಳುವವರೂ ಇಲ್ಲ
ಅಲ್ಲಿ ಭಾಷೆಗೆ ಮಾತಿಲ್ಲ
ಮಾತಿಗೆ ಅಹಂಕಾರವಿಲ್ಲ…..

ಕನಸನ್ನಾದರೂ ಕಾಣಬೇಕು ಇಂಥದ್ದೊಂದು
*****