ಒಳದನಿ

ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ
ಚಿಲಿಪಿಲಿಸುತಿಹುದಾವ ನಿಮಿಷದಲ್ಲು;
ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ
ದನಿಗೂಡಿ ಹಾಡುತಿದೆ ಕನಸಿನಲ್ಲು!

ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು
ನೋವು ನರಳಾಟಗಳ ವಿಷಮ ಬಿಂದು;
ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ
ಹುಡುಕುತಿಹುದಾವುದನೊ ಮರೆಗೆ ನಿಂದು.

ಎದೆಗುದಿಯೊ, ಹದಗೆಟ್ಟ ಮುದಗೆಟ್ಟ ದನಿಯೊ
ಒಲವಿನಲೆಯಲೆಯಿಂದ ತೂರ್ವ ಸೀರ್ಪನಿಯೊ
ಹಲವಾರು ಕೊರತೆ-ಕೊರಕಲಿನ ಸೀಳ್ದನಿಯೊ
ಒಳದನಿಯೆ ಇವಕ್ಕೆಲ್ಲ ಉಸಿರಾದುದೇನೊ.
*****