“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?”
“ಐದಾಣೆಗೆ ಆಗೋದಾದರೆ ತರ್ತೆನೋಡೀ.”
“……”
“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ ಚೂಳೀನೂ ಇಲ್ಲ ಮಗುವೆ…ಒಂದಾಣೆಗೆ ಹಾಕು..ಒಂದಾಣೆಗೂ ಬೇಡಾ ಅದು, ಆದರೂ…”
“ಹೊದ್ರಾ ಅಮ್ಮಾ. ಅದಕ್ಕೇ ನಾ ಬರೋದೇ ಇಲ್ಲಾ ಇಲ್ಲಿ. ನೋಡ್ರಾ, ಅಡ್ಡಿ ನೋಡ್ರಾ, ಹುಲ್ಲಾದರೂ ನೋಡಿ ಮಾತಾಡಬೇಕರಾ. ಎಂಥಾ ಎಳೇ ಪಕಳೇ ಹುಲ್ಲು- ಆಣೆಗೆ ಯಾರಾದರೂ ಹಾಕೂರುರಾ?”
“……”
“ಓ ಸಣ್ತಂಗಿ ಮಗುವೆ, ಓ ಬೊಮ್ಮಿ…ಇಲ್ಲಿ ಬಾರೆ. ನಿಮ್ಮವ್ವಿ ಹೀಗಿರಲಿಲ್ಲಲ್ವೆ. ಹಾಗೇನು ಹರ್ಕೊಂಡು ಹೋಗ್ತೀಯೆ? ನಿಮ್ಮವ್ವಿ ಬಂದರೆ ಯಾವಾಗಲೂ ನಮ್ಮಲ್ಲೇ ಕೊಟ್ಟು ಹೋಗ್ತಿದ್ಲು..ಹೌದೇ, ನಿಮ್ಮವ್ವಿಗೆ ಹ್ಯಾಗೆ ಅದೆಯೆ ಈಗ?”
“ಹಾಗೇ ಅದೇರಾ…”
“ಮದ್ದು ಯಾರ್ದು ಮಾಡೀರಿ?”
“ಮದ್ದು ಏನ್ಮಾಡ್ತದ್ರಾ? ಸಾಯಲಿಕ್ಕೆ ಈ ಕುಂಟನ್ಮನೆ ಬೀರಾ ದೆವ್ವಾ ಮಾಡಿ ಹಾಕಿನ್ಕಂಡಾ. ನಿನ್ನೆ ಮುರ್ಕುಂಡಿ ದೇವ್ರ ಹೇಳ್ಕೆಯಾಯ್ತು.”
“ಹೊದೋ ನಿಮ್ಮವ್ವಿ ಗನಾ ಮನ್ಸ್ತಿ- ಯಾವಾಗ್ಲೂ ನಾವಂದ್ರೆ ಆಗಿತ್ತು. ಒಂದು ಹೇಳಿದ್ರೆ ಅಲ್ಲಾ ಅನ್ತಿದ್ದಿಲ್ಲ. ದೇವರು ಬಿಡಲಿಕ್ಕಿಲ್ಲವೇ ಆ ಬೀರನಿಗೆ.”
“ಅಮ್ಮಾ, ಹೋಗ್ತೇನ್ರಾ- ಹೊತ್ತು ಬಂತು.”
“ಅಮ್ಮಾ ತಡಿಯೇ- ಹಾಗೇನು ಮಾಡ್ತೀಯೆ? ಹೌದೆ, ನಿಮ್ಮಣ್ಣನಿಗೆ ಕಡೆಗೆ ಮದ್ವಿ ಆಯ್ತೆ?”
“ಇಲ್ಲರಾ-ಅವ್ವಿ ಒಬ್ಬಳಿಗೆ ಹಾಗೆ…”
“ನಿನಗಾದರೂ ಸರೀ ಮಾಡಿ ನೋಡ್ತ್ನಲ್ಲವೆ ಈಗ ನಿನ್ನ ಗಂಡ.”
‘…..”
“ನಾಚಿಕೊಳ್ತೀಯಲ್ಲವೆ, ಅಲ್ಲವೆ ಈ ದಿವಸ ನಿನ್ನಪ್ಪ ಬಂದಾಗ ಹೇಳ್ತಿದ್ದ: ಹುಡುಗ ಗುಣದಿಂದ ಬಹಳ ಚಲೋಂವ; ಕೇರಿಯ ಮೇಲಿನವರು ಚಾಡಿ ಹೇಳಿ ತಲೆ ಕೆಡ್ಸಿದ್ದರು; ಈಗ ಚಲೋ ಬುದ್ದಿ ಬಂದಿದೆ ಎಂದು. ನಂಗೆಲ್ಲಾ ಗೊತ್ತು ಮಗುವೆ- ನಮ್ಮ ನಿಮ್ಮ ಗುರುತು ಈಗಿನದಲ್ಲವೇ. ನಿಮ್ಮಜ್ಜಾ ಈ ಮನೆಯಲ್ಲೇ ಕೆಲಸಕ್ಕಿದ್ದ ನನ್ನ ತಂದಾಗ, ಉಂಬೋದು, ಮಲಗೋದು ಎಲ್ಲಾ ಇಲ್ಲೇ. ನಿನ್ನಪ್ಪ ಆ ಶಂಕರರಾಯ್ರ ಒಕ್ಕಲು. ಆದಂದಿನಿಂದ ನೀವೆಲ್ಲ ನಮಗೆ ದೂರಾದ್ರಿ. ನಿಮ್ಮಣ್ಣಾ ಚಲೋವ್ನೆ. ಆಗಲಿ, ಚಲೋ ರೊಕ್ಯಾ ಮಾಡೀನ್ಕಂಡಾ ಅಲ್ಲವೆ? ಆ ಶಂಕರರಾಯರು ನಿಮ್ಮಪ್ಪನ್ನ ಫಸಾಯಿಸಿದರೂ ದೇವರು ನಿಮ್ಮ ಕೈ ಬಿಡಲಿಲ್ಲ. ಈಗ ಎಲ್ಲಾ ಸುಳ್ಳಾದರೂ ಅವನೊಬ್ಬ ಇದ್ದಾನಲ್ಲ ಸತ್ಯವಂತ!…ಅಯ್ಯೋ, ಹೊತ್ತಾಯ್ತು…ಹೊದೇ, ನನ್ನ ಮಾತು ಕೇಳು ಮಗುವೆ, ಒಂದು ದಮಡಿ ಹೆಚ್ಚು ಮಾಡ್ತೇ- ಇಲ್ಲೇ ಹಾಕಿ ಹೋಗು, ಸುಮ್ಮನೆ ಅಲ್ಲಿ ಇಲ್ಲಿ ತಿರ್ಗಾಡಬೇಡ ಬಿಸಿಲೊಳಗೆ.”
“…..”
ಏನು ಮಾಡ್ತೀ?..ನಾನೇನು ನಿನ್ನ ಫಸಲಾಯಿಸಕ್ಕೆ ಹೇಳ್ತೇನೆ …ನೋಡು? ಹಾಕೂದಾದರೆ ಓ ಅಲ್ಲಿ, ಜಗುಲಿಯ ಮೇಲೆ ಹಾಕಿ ಹೋಗು.”
“ಸಾಯ್ಲ್ರಾ -ನೀವು ಆಷ್ಟು ಮಾಡಿ ಹೇಳಿದ್ಮೇಲೆ ಮಾತು ಮುರೀಲಿಕ್ಕೆ ಮನಸಾಗೋದಿಲ್ಲ. ಎಲ್ಲಿ ಹಾಕ ಹೇಳಿದ್ರಿರಿ?”
“ಇಲ್ಲಿ ಬಾ..ಓ ಅಲ್ಲಿ ಹಾಕಿಬಿಡು…ಏ ಏ ಏ ಮೇಲೆ ಅರಿವಿಗೆ ಮುಟ್ಟಿದ್ದೀ-ಸ್ವಲ್ಪ ಬಗ್ಗಿ ಹೋಗು..ಹುಂ ಅಲ್ಲೇ ಹಾಕಿಬಿಡು…”
“ಈಗ ಎಲ್ಲಿ ಹೋಗ್ತೀಯೇ?”
“ಇಲ್ಲೇ ಪೇಂಟೆ ಕಡೆ ಹೋಗ್ತೇನರಾ.”
“ಏನಾದರೂ ಹಸಿದು ಬಂದಿತ್ಕಂಡ್ವೆ?”
“ಇಲ್ಲರಾ, ನಿನ್ನೆ ಬಹಳ ಬಂದಿತ್ಕಂಡಾ. ನನಗೆ ಹೋಗಲಿಕ್ಕೆ ಆಗಲೇ ಇಲ್ಲಾ. ಇಂದೇನಾದರೂ ಒಣಗಿದ್ದು ತಗೊಂಡು ಹೋಗ್ತೆ.”
“ಅಲ್ಲವೇ ಇಷ್ಟು ಅಕ್ಕಿ ಬೀಸಿಕೊಡ್ತೀಯೋ ಏನು ಅಂತ ಕೇಳಬೇಕೆಂದು ಮಾಡಿದ್ದೆ. ಗನಾಕಿಷ್ಟು ಅನ್ನಾ, ನಿನ್ನೆಯ ಹಸಿ ಬಂಗಡೇ ‘ಆಸೆ’ ಉಂಟು. ಬೀಸಿಕೊಟ್ಟು ಊಟ ಮಾಡಿಕೊಂಡು ಹೋಗೀಯಂತೆ.”
“ಈಗ ಹೊತ್ತು ಬಂತ್ರಾ. ನಾಳೆ ಬಂದು ಬೇಕಾದರೆ ಬೀಸಿಕೊಡ್ತಿದ್ದೆ…”
“ನಾಳೆಗಾದರೆ ಆ ಪರಮೇಶ್ವರಿ ಬೀಸಿಕೊಡ್ತೇ ಹೇಳ್ಯದೆ.”
“ಎಷ್ಟದೆರಾ ಅಕ್ಕಿ.”
“ಒಂದು ಕೊಳಗ-ಕೊಳಗಾನೂ ಪೂರಾ ಇಲ್ಲ.”
“ರೊಕ್ಕ ಏನು ಕೊಡ್ತೀರಿ?”
“ಮತ್ತೇನು ರೊಕ್ಕವೆ?-ಅನ್ನಾ ಏನು ಪುಕ್ಸಾಟ ಬರ್ತದೆಯೆ? ಗನಾ ಇಷ್ಟು ಇದೆ. ಚಲೋ ಉಪ್ಪಿನಕಾಯಿ ಕೊಡ್ತೆ.”
“ಒಂದಾಣೆ ಆದರೂ ಹೆಚ್ಚಿನದು ಕೊಡಿ. ಕೊಳಗಕ್ಕೆ ನಾಲ್ಕಾಣೆ ಆಗ್ತದೆ. ಸುಮ್ಮನೆ ಚೌಕಶಿ ಮಾಡಬೇಡಿ.”
“ಇಲ್ಲಾ ನೋಡು, ಆ ಪರಮೇಶ್ವರಿಗೆ ಕೊಡ್ತೆ ಹೇಳಿದ್ದೆ. ಯಾಕೆ ಮತ್ತೆ ಅದಕ್ಕೆ ಕೊಡೋದು, ಅಪರೂಪ ಬಾಗಿಲಿಗೆ ಬಂದಿದ್ದೀ, ಉಂಡುಕೊಂಡು ಹೋಗಲಿ ಅಂತ ಹೇಳಿದೆ. ‘ಆಸೆ’ ಚಲೋ ಆಗಿದೆ-ಇಂದು ಇವರು ಯಾರಿಗೂ ಕೊಡಬೇಡ ಎಂತ ಹೇಳಿದ್ದರು. ಆದರೂ ಬರಿಯೇ ಒಣ ಅನ್ನ ಹೇಗೆ ಉಣ್ತಿ ಎಂದು ‘ಆಸೆ’ ಕೊಡ್ತೆ ಹೇಳಿದೆ.”
“ಹುಂ, ಕೊಡ್ರಾ-ನಿಮ್ಮ ಮಾತು ಮುರೀಲಿಕೆ ಬರೋದಿಲ್ಲ.”
“ಬೀಸ್ಕೊಟ್ಟೇ ಊಟ ಮಾಡು-ನೀವು ಒಕ್ಕಲ ಜಾತಿ ಉಂಡ ಮೇಲೆ ಅಳಸಿ, ಅದು ದೇವರ ಕೆಲಸಕ್ಕೆ. ನಿನ್ನ ಎಂಜಲ ಗಿಂಜಲ ಸಿಡಿಸಬೇಡ…ಮತ್ತೆ ಇದ್ನೋಡು- ಹೇಳ್ತೇ ಅಂತ ಸಿಟ್ಟಾಗಬೇಡ. ನಿನಗೆ ಬೇಕಾದರೆ ನುಚ್ಚುಗಿಚ್ಚು ಕೊಡೋಣ. ಆದರೆ ಅದ್ರಾಗಿಂದ ಮಾತ್ರ ಮಡಲಿಗೆ ಹಾಕ್ಕೋ ಬೇಡ.ನೀನು ಕದೀತಿ ಅಂತ ಅಲ್ಲವೆ-ಆದರೂ ಮನುಷ್ಯರಿಗೆ ಆಶೆ ಅಂದರೆ ದೊಡ್ಡದು. ನಾವಾಗ್ಲೀ ನೀವಾಗ್ಲೀ. ಹೀಗೇ ಆದರೆ ಏನೂ ಹೇಳ್ತಿದ್ದಿಲ್ಲ. ದೇವರ ಕಾರ್ಯಕ್ಕೆಂದು-ಮೇಲಾಗಿ ನಿನ್ನವ್ವಿಗೆ ಬೇರೆ ದೆವ್ವಾ…”
“ಇಲ್ಲರಾ ಅಮ್ಮಾ, ಅಂಥಾ ಕೆಲಸ ನನ್ನ ಕಡೆಯಿಂದ ಸಾಧ್ಯ ಇಲ್ಲರಾ.”
“ಅದು ನನಗೆ ಗೊತ್ತಿಲ್ಲವೇ? ನಿನ್ನವ್ವೀನೂ ಹಾಗೇ. ಮತ್ತು ಸುಳ್ಳು ಹೇಳಿ ಕದ್ದು ಎಷ್ಟು ದಿನ ಸಂಸಾರ ಮಾಡಬಹುದೇ?”
“ಓ ಪಾರ್ವತಮ್ಮನವರೂ…”
“ಯಾರೇ, ದೇವಿ-?”
“ದೇವೀ ಅಲ್ಲರಾ ನಾನು_ಪರಮೇಶ್ವರಿ.”
“ಏನೇ, ಅಕ್ಕಿ ಬೀಸಲಿಕ್ಕೆ ಬಂದಿದ್ದೆಯೇ?”
“ಇಲ್ಲರಾ ಅಮ್ಮಾ, ಇಂದಾಗೂದಿಲ್ಲರಾ. ರಟ್ಟೆಯೆಲ್ಲಾ ನೋಯ್ತದೆರಾ-ನಿನ್ನೆ ಅವರ ಮನೇಲಿ ಮೆಣಸಿನ ಹುಡಿ ಮಾಡಿದ್ದೆ. ಸಣ್ಣ ಜ್ವರ ಬಂದಾಂಗ ಆಗಿದೆ.”
“ಮತ್ತು ಅಕ್ಕಿನೂ ಇಲ್ಲ ಬೀಸೂದು. ಆ ಬೊಮ್ಮಿ ಬಂದಿತ್ತು. ಇದೇ ಈಗ ಬೀಸಿಕೊಟ್ಟು ಹೋಯ್ತು. ನನಗೆ ಮೊದಲೇ ಗೊತ್ತಿತ್ತು. ನಿನ್ನ ಕಡೆಯಿಂದ ಈ ಹೊತ್ತು ಆಗ್ಲಿಕ್ಕಿಲ್ಲ…ಆಗಬೇಕು ಹೇಗೆ? ಸಣ್ಣ ಮಕ್ಕಳ ತಾಯಿ ನೀನು. ನಿನ್ನೆ ಆ ಮೆಣಸು ಕುಟ್ಟುವಾಗಲೇ ಗೊತ್ತು, ನೀ ಶೀಕು ಬೀಳ್ತೀಯೆಂದು. ಮತ್ತು ಅವರಾದರೂ ಎಂಥವರೇ! ಸರಿಯಾಗಿ ಒಣಗಿಸಬೇಡಾ ಆ ಮೆಣಸನ್ನು?”
“ಎಲ್ಲಾ ಒಬ್ಬಳೇ ಬೀಸ್ತು? ಎಷ್ಟು ಒಂದೂವರೆ ಕೊಳಗ ಇತ್ತಲ್ಲರಾ? ಏನು ಕೊಟ್ಟಿರೀ?”
“ಎರಡಾಣೆ ಕೊಟ್ಟೆ. ಮೇಲೆ ಅನ್ನ, ‘ಆಸೆ’ ಇತ್ತು ಎಂದು ಹೇಳಿದ್ದೆನಲ್ಲ? ಎಲ್ಲ ಅದಕ್ಕೆ ಬಡಿಸಿದೆ. ತುಂಬ್ ಆಯ್ತು. ಪಾಪ ಬಡವಳು. ತಿಂದು ಹೋಗಲಿ ಎಂದು…ನಿನಗೆ ಕೊಡ್ತೆ ಅಂತ ಹೇಳಿದ್ದೆ-“
“ಇರಲಿರಾ ಬೊಮ್ಮಿ ಚಲೋವ್ಳು. ಕಳವು ಗಿಳವು ಮಾಡುವಾಕೀ ಅಲ್ಲ.”
“ಮತ್ತೆ ನಾ ಆದರೂ ಸುಮ್ಮನೆ ಬಿಡಲಿಲ್ಲ. ದೇವರ ಕೆಲಸಕ್ಕೆ ಎಂದು ಮೊದಲೇ ಸೂಚ್ನೆ ಕೊಟ್ಟೆ. ದೇವರು ಅಂದರೆ ಬಹಳ ಹೆದರ್ತತೆ ಆ ಜಾತಿ. ಮತ್ತೆ ಇದು ನೋಡು. ಬೆಳಿಗ್ಗೆ ನಿನಗೆ ಹೇಳಲಿಕ್ಕೆ ಹೇಳ್ದೆ: ನಿನ್ನದು ಅನ್ನ, ‘ಆಸೆ’ ಇದೆ, ತಗೊಂಡು ಹೋಗು ಎಂದು. ಆದರೆ ನನ್ನ ಮನಸ್ಸಿಗೇ ಸರಿಬರಲಿಲ್ಲ. ನಿನ್ನೆ ಏನಾಯ್ತು ಗೊತ್ತದೆ? ಇವರು ಊಟ ಮಾಡಿ ಹೋದರೋ ಇಲ್ಲವೋ ಇವರ ಬಟ್ಟಲಲ್ಲೇ ಬಡಿಸಿ ಊಟಕ್ಕೆ ಕೂಡ್ರುವವಳು. ಅಷ್ಟರಲ್ಲಿ ನಾಣಿಗೆ ಒಲೆಯಲ್ಲಿ ಬೆಲ್ಲ ಗೆಂಡೆ ಸುಡಲಿಕ್ಕೆ ಹಾಕಿದ್ದು ನೆನಪಾಯ್ತು. ಊಟ ಮಾಡಿ ಏಳುವ ತನಕ ಪೂರಾ ಸುಟ್ಟೇ ಹೋದಾವು ಎಂದು ಹಾಗೇ ತಗೊಂಡೇ ಬರೋಣ ಅಂತ ಹೋದೆ. ಸಾಯಲಿಕ್ಕೆ ಆ ಸಾಡೇಸಾತಿ ನಾಯಿ ಎಲ್ಲಿ ನೋಡ್ತಾ ಇತ್ತೋ ಏನೋ. ಬರುವುದರೊಳಗೆ ಬಟ್ಟಲಲ್ಲಿ ಬಾಯಿ ಹಾಕೇಬಿಟ್ಟಿತು. ಕಣ್ಣಾರೆ ನೋಡಿದ ಮೇಲೆ ಉಣ್ಣಲಿಕ್ಕೆ ಬರ್ತದೆಯೆ? ಹೊಸತಾಗಿ ಅನ್ನ ಮಾಡಿ ಊಟಮಾಡಿದೆ. ಚಲೋ ಅನ್ನ! ದನಕ್ಕೆ ಹಾಕಲಿಕ್ಕೂ ಮನಸ್ಸಾಗಲಿಲ್ಲ. ಹಾಗೆಯೇ ಮುಚ್ಚಿಟ್ಟುಬಿಟ್ಟೆ. ಆಗ ನಿನಗೆ ಹೇಳಲಿಕ್ಕೆ ಹೇಳ್ದೆ, ಅನ್ನ ‘ಆಸೆ’ ಇದೆ, ತಗೊಂಡು ಹೋಗು ಎಂದು. ಆದರೆ ನನಗೇ ಮನಸ್ಸಾಗಲಿಲ್ಲ. ಏನೆಂದರೂ ಬೊಮ್ಮಿ ಒಕ್ಕಲು ಜಾತಿಯವಳು. ಹೆಚ್ಚು ಕಡಿಮೆನೇ ಇಲ್ಲ. ನಾನೇ ನಾಯಿ ಬಾಯಿಹಾಕಿದ್ದು ಎಂದರೂ ಬೇಡ ಅಂತಿದ್ದಿಲ್ಲ. ಆದರೂ ಹೇಳಿ ಯಾಕೆ ಇದ್ಮಾಡೋದು ಎಂದು…ನೀವು ಹಾಗಲ್ಲ. ದಿನಾ ಇಲ್ಲೇ ಇರ್ತೀರಿ; ಮೇಲಾಗಿ ಮಾಸ್ತೀ ಪೂಜೆ ಮಾಡ್ತೀರಿ. ನೋಡಿ ನೋಡಿ ಹ್ಯಾಗೆ ಕೊಡಲೀ ಎಂದು… ಅಯ್ಯೋ ಅಂಗಡಿಯಿಂದ ಇವರು ಬಂದರು. ಹೊತ್ತಾಯ್ತು, ಸಂಜೆಗೆ ಬಾ…”
೧೯೪೯
ಕೀಲಿಕರಣ: ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ