ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ ದಿನ ಬೇಚೈನುಗೊಳಿಸಿತು.
ಗಿರಿಯಣ್ಣ ನಮ್ಮ ಊರಿನ ಯಃಕಶ್ಚಿತ್ ವ್ಯಕ್ತಿ. ಅವನು ಕಳುವು ಮಾಡುತ್ತಾನೆ ಎನ್ನುವ ಮಾತು ಸಣ್ಣ ಮಗುವಿಗೂ ಗೊತ್ತು. ಅವನನ್ನು ಉಳಿದ ಅನೇಕ ಗಿರಿಯಣ್ಣರಿಂದ ಬೇರ್ಪಡಿಸಲು ‘ಕಳ್ಳ ಗಿರಿಯಣ್ಣ’ ನೆನ್ನುವುದೇ ಪರಿಪಾಠ. ಅವನು ಸತ್ತಾಗ ಸ್ವತಃ ಅವನ ಹೆಂಡತಿ ಮಕ್ಕಳು ಅತ್ತರೋ ಇಲ್ಲವೋ ಎಂದು ಸಂಶಯ ಪಟ್ಟರೆ ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಆದರೂ ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತಿನ ಅತೀವ ಸಹಜತೆ, ನಿರ್ವಿಕಾರತೆಗಳು ನನ್ನನ್ನು ಇಡೀ ದಿನ ಕಾಡಿದವು. ಉದಾಸೀನಗೊಳಿಸಿದವು. ಇದಕ್ಕೆ ಕಾರಣ ನಾನು ಗಿರಿಯಣ್ಣನನ್ನು ನೋಡದೇ ಅನೇಕ ವರುಷಗಳಾದುದೇ ಇರಬೇಕು. ದೂರ ಭೂತಕಾಲದಲ್ಲಿ ಮರೆಯಾಗುತ್ತಲಿರುವ ಅನೇಕ ಸಂಗತಿಗಳ ಬಗ್ಗೆ ನಮಗೆ ಇದೇ ಬಗೆಯ ಅನುಭವವೊಂದು ಬರದೆ ಇರದು. ಅಂದಿನ ಅತಿ ಕ್ಷುಲ್ಲಕ ಘಟನೆಗಳೂ ಒಂದು ರಮ್ಯತೆಯ ಬಣ್ಣ ತಾಳುತ್ತವೆ. ನಮ್ಮ ಕಡು ವೈರಿಗಳ ವಿಷಯದಲ್ಲಿಯೂ ಸಹಾನುಭೂತಿ ಮೊಳೆಯುತ್ತದೆ.
ಗಿರಿಯಣ್ಣನ ಕಳುವಿನ ರೀತಿ ನೋಡಿದರೆ ‘ಕಳ್ಳ’ ನೆಂಬ ಬಿರುದು ಧರಿಸಲೂ ಅವನು ಯೋಗ್ಯನಲ್ಲ ಎನಿಸುವುದು. ನೋಡಲಿಕ್ಕೇನೋ ಆರು ಫೂಟಿನ ಆಜಾನುಬಾಹು. ಕಪ್ಪು ಬಣ್ಣ, ಮೀಸೆ ನೋಡಿದರೇ ಹೆದರಿಕೆ ಬರಬೇಕು. ತಲೆಯ ಮೇಲೆ ಗೋಪಾದದಷ್ಟು ಚಂಡಿಕೆ. ಸೊಂಟಕ್ಕೆ ಬೆಳ್ಳಿಯ (ಬಿಳಿಯವೆಲ್ಲವೂ ಬೆಳ್ಳಿಯಲ್ಲವೇನೋ!)ನೇವಾಳ. ಅದುವೆ ಆಧಾರ- ಮೈಮೇಲಿನ ಒಂದೇ ಒಂದು ಅರಿವೆಯಾದ ಕಚ್ಚೆಗೆ. ಆದರೆ ನಮ್ಮ ಊರಿನಲ್ಲಾಗಲೀ ಸುತ್ತಲಿನ ಹಳ್ಳಿಗಳಲ್ಲಾಗಲೀ ಆದ ದೊಡ್ಡ ದೊಡ್ಡ ಕಳವುಗಳಲ್ಲಿ ಗಿರಿಯಣ್ಣನ ಭಾಗವಿಲ್ಲವೆನ್ನುವುದು ಸರ್ವವಿದಿತವಾದುದು. ಕನ್ನಹೊಡೆದಾಗಲೀ ಯಾರ ಜೀವಕ್ಕೆ ಹಾನಿಮಾಡಿಯಾಗಲೀ ಗಿರಿಯಣ್ಣನಿಗೆ ಗೊತ್ತೇ ಇರಲಿಲ್ಲ. ಎಂತಲೇ ಕಳ್ಳನೆಂದು ಖ್ಯಾತನಿದ್ದೂ ಪೋಲೀಸ್ ಚೌಕಿಯನ್ನು ಒಮ್ಮೆಯೂ ಕಾಣಲಿಲ್ಲ.
ಗಿರಿಯಣ್ಣನ ಕಳವಿಗೆ ಎರವಾದ ವಸ್ತುಗಳೆಂದರೆ ಹಳ್ಳಿಯ ತೆಂಗು, ಅಡಿಕೆ, ಬಾಳೆ ಗೊನೆಗಳು ಹಲಸು, ಬೇಣದ ಮೇಲಿನ ಮೊಗೆಯೋಳಿಯೊಳಗಿನ ಮೊಗೆಕಾಯಿಗಳು, ಮಳೆಗಾಲದಲ್ಲಿ ಅಂಗಳದಲ್ಲಿ ಹಾಕಿದ ಸವತೆಕಾಯಿ, ಕುಂಬಳಕಾಯಿ ಮೊದಲಾದವುಗಳು.
ಈ ಕಳವಿನಲ್ಲಿಯ ಅವನ ಪ್ರಾವೀಣ್ಯ ಮಾತ್ರ ಅಚ್ಚರಿಗೊಳಿಸುವಂತಹುದು. ಏಳೆಂಟು ಆಳೆತ್ತರದ ತೆಂಗಿನ ಮರಗಳನ್ನು ಕತ್ತಲಲ್ಲೇ ಏರಿ ಐದಾರು ಕಾಯಿಗಳ ಹಿಂಡಿಗೆಯನ್ನು ಕೈಯಲ್ಲೇ ಹಿಡಿದು ಇಳಿಯುತ್ತಿದ್ದ. ಪ್ರತ್ಯಕ್ಷ ಯಾರೂ ನೋಡಿರದಿದ್ದರೂ ತೆಂಗಿನಕಾಯಿಗಳನ್ನು ಕಳುವಾಗ ಒಮ್ಮೆಯೂ ಸಿಕ್ಕಿಬೀಳದಿರಲಿಕ್ಕೆ ಇದೇ ಕಾರಣವೆಂದು ಅನೇಕರ ಊಹೆ. ಇಲ್ಲದಿದ್ದರೆ ಅಷ್ಟು ಎತ್ತರದ ಮೇಲಿನಿಂದ ಕಾಯಿ ಬಿದ್ದ ಆವಾಜಿಗೆ ಜಗಲಿಯ ಮೇಲೆ ಮಲಗಿದವರೂ ಎಚ್ಚರವಾಗಬೇಡವೆಂದರೆ! ಅಡಿಕೆಯ ವಿಷಯವೂ ಅದೇ. ಬಾಳೆಯ ಗೊನೆಗಳು ಮಾತ್ರ ನೀವು ನಾಳೆ ಕೊಯ್ಯಬೇಕೆಂದಿದ್ದರೆ ಸರಿಯಾಗಿ ಅವು ಇಂದೇ ಕಣ್ಮರೆಯಾಗುತ್ತಿದ್ದವು. ಯಾವ ಹಿತ್ತಲಲ್ಲಿ ಯಾವ ದಿನ ದಾಳಿ ಮಾಡಬೇಕು ಎನ್ನುವುದರ ಯೋಜನೆ ತಿಂಗಳ ಆರಂಭದಲ್ಲಿಯೇ ನಿಶ್ಚಯಿಸಿದಂತೆ ಇರುತ್ತಿತ್ತು. ತನ್ನ ಭಕ್ಷ್ಯಗಳ ಖಾನೇಸುಮಾರಿಯನ್ನು ಅವನು ಹೇಗೆ ಯಾವಾಗ ಮಾಡುತ್ತಿದ್ದನೆಂದು ದೇವರೇ ಬಲ್ಲ. ಏಕೆಂದರೆ ದಿನವಿಡೀ ಅವನು ತನ್ನ ಮನೆಗೆಲಸದಲ್ಲೇ ನಿರತನಾದುದನ್ನು ಕಾಣಬಹುದಿತ್ತು.
ಒಂದೇ ಮನೆಯವರು ಅವನ ಕಳವಿನಿಂದ ಒಮ್ಮೆಲೇ ಎರಡು ಸಲ ಹಾನಿಗೊಳಗಾದುದು ಅಪರೂಪ. ಮೊದಲ ಹಾನಿಯ ದುಃಖ, ಸಿಟ್ಟು ಪೂರ್ಣ ಮರೆತಾಗಲೇ ಎರಡನೇ ಹಾನಿಯ ಆಗಮನ. ಅದರಂತೆಯೇ ಅವನ ಕಳವಿಗೆ ಎರವಾಗದ ಮನೆಯೇ ಆ ಊರಿನಲ್ಲಿಲ್ಲ ಎನ್ನುವುದೂ ಸತ್ಯ. ಅವನ ಕಳವಿನ ಬಾಧೆಯ ಭಾರವನ್ನು ಇಡೀ ಹಳ್ಳಿಯೇ ಹಂಚಿಕೊಂಡಿತ್ತು-ಎನ್ನಿರಲ್ಲ ಬೇಕಾದರೆ. ಎಂತಲೇ ಅವನನ್ನು ಶಿಕ್ಷಿಸಬೇಕು ಎನ್ನುವ ವಿಚಾರವನ್ನು ಯಾರೂ ಅಷ್ಟು ಕಳಕಳಿಯಿಂದ ಮಾಡಿದಂತಿರಲಿಲ್ಲ.
ಕಳವಿನ ಹಾನಿಯಂತೆ ಅದರ ಲಾಭದಲ್ಲಿಯೂ ಆ ಹಳ್ಳಿಯವರಿಗೆ ಸಮಪಾಲು ಇದ್ದತಿಂತ್ತು. ಕಳವಿನ ವಸ್ತುಗಳು ಗಿರಿಯಣ್ಣನ ಸ್ವಂತ ಉಪಯೋಗಕ್ಕಿರದೇ ಮಾರಾಟದ ಸಲುವಾಗಿ ಇದ್ದುದರಿಂದ ಅವು ಒಬ್ಬರ ಕೈಬಿಟ್ಟು ಇನ್ನೊಬ್ಬರ ಕೈ ಸೇರುತ್ತಿದ್ದವು ಅಷ್ಟೇ. ತಿಂಗಳುಗಟ್ಟಲೆ ನೀರು, ಗೊಬ್ಬರ ಹಾಕಿ ಬೆಳೆಸಿದ ರಸಬಾಳೆ ಗಿಡದ ಮೊದಲ ಗೊನೆಯನ್ನೇ ಕಳಕೊಂಡು ಹಳಹಳಿಸುವ ಸುಬ್ರಾಯ ಶಾನುಭಾಗರ ಪಾಲಿಗೆ ಸಣ್ಣಪ್ಪನಾಯ್ಕರ ಹಿತ್ತಲದ ಅತ್ಯಂತ ರುಚಿಕರವೆಂದು ಪ್ರಸಿದ್ಧವಿದ್ದ ಅವರ ‘ದಣಪೇ ಮರ’ದ ಹಲಸಿನ ಹಣ್ಣು ಸಿಗುತ್ತಿತ್ತು. ಎರಡು ರೂಪಾಯಿ ಕೊಟ್ಟರೂ ಸಿಗದ ಹಣ್ಣು ಎಂಟು ಆಣೆಗೆ! ಪುರುಷ ಗುನಗನ ಅಂಗಳದಲ್ಲಿಯ ಕೆಂದಾಳೇ ಮರದ ತೆಂಗಿನಕಾಯಿಯ ಹಿಂಡು ರಾಮ ಪೈಗಳ ಪಾಲಿಗೆ. ರಾಮ ಪೈಗಳ ಬೇಣದ ಮೊಗೇಕಾಯಿಗಳು ಸಾಂತಯ್ಯ ಕಾಮತರ ಜಗಲಿಯ ಮೇಲೆ ತೂಗುತ್ತಿದ್ದವು. ಒಮ್ಮೊಮ್ಮೆ ದೊಡ್ಡ ಕಳವಾದರೆ ಕಳವಿನ ಒಡವೆ ಸೀಮೋಲ್ಲಂಘನ ಮಾಡುತ್ತಿತ್ತು.
ಈ ಕಳವಿಗೆ ಕಾರಣ? ಗಿರಿಯಣ್ಣನ ಮನೆಯ ಸ್ಥಿತಿಯಂತೂ ಅಷ್ಟು ಕೆಟ್ಟದ್ದಿರಲಿಲ್ಲ. ನಮ್ಮ ಕೇರಿಯ ಕೊನೆಯಲ್ಲೇ ಅವನ ಮನೆ. ಸಣ್ಣದಾದ ಹೊಲ ಹಾಗೂ ಹಿತ್ತಲು ಮೂಲಗೇಣಿಗಿವೆ. ಹಿಂಡುವ ಎರಡು ಎಮ್ಮೆಗಳಿವೆ. ಊರಿನಲ್ಲಿ ಹಾಲಿನ ಉಚಾಪತಿಯಿದೆ.
ಹಳ್ಳಿಯ ಐದಾರು ಮನೆಗಳಿಗೆ ಪ್ರತಿದಿನವೂ ಬೆಳಿಗ್ಗೆ ಸಂಜೆಗೆ ಹಾಲು ಕೊಟ್ಟು ಬರುವ ಕೆಲಸ ಗಿರಿಯಣ್ಣನಿಗೇ ಸಂದುದಾದರೂ ತಿಂಗಳ ಕೊನೆಗೆ ಹಣದ ವಸೂಲಿಗೆ ಬರುವುದು ಗಿರಿಯಣ್ಣನ ಹೆಂಡತಿಯೇ. “ಈ ಕೋಣನ ಕೈಯಲ್ಲಿ ರೊಕ್ಕ ಉಳಿದರಲ್ಲವೇ? ಆ ಹೆಂಗಸೆಂದು ಅವನ ಸಂಸಾರ. ಇಲ್ಲವಾದರೆ ಆ ಬಡ ಮಕ್ಕಳಿಗೆ ದೇವರೇ ಗತಿ.” ಗಿರಿಯಣ್ಣನಿಗೆ ದೇವರು ಕೊಟ್ಟ ಐದಾರು ಸಣ್ಣ ಸಣ್ಣ ಮಕ್ಕಳಿವೆ. ಇಷ್ಟೆಲ್ಲ ಮಕ್ಕಳ ಸಂಸಾರ “ಸುರಳೀತ” ಸಾಗಿಸಿಕೊಂಡು ಹೋಗುವ ಭಾರವೆಲ್ಲ ಗಿರಿಯಣ್ಣನ ಹೆಂಡತಿಯ ಮೇಲೆಯೇ. ಸಂಸಾರ ಸಾಗಿಸಿಕೊಂಡು ಹೋಗುವ ಲಕ್ಷಣವೇ ಗಿರಿಯಣ್ಣನಿಗಿರಲಿಲ್ಲ. ಕೈಯಲ್ಲಿ ಬಂದ ನಾಲ್ಕು ಕಾಸನ್ನು ಎಲ್ಲಿಯಾದರೂ ಒಬ್ಬ ಚಾ ಅಂಗಡಿಯವನ ಎದೆಯ ಮೇಲೆ ಹಾಕಿಯಾನೇ ಹೊರತು ಸಂಸಾರದ ಭಾರಕ್ಕೆ ಹೆಗಲೊಡ್ಡುವ ತಲೆಯೇ ಅವನಿಗಿರಲಿಲ್ಲ. ಹೊಲವೆಂದೋ ಮನೆಮಾರೆಂದೋ ಎಲ್ಲವನ್ನೂ ಹೆಂಡತಿಯೇ ನೋಡಿಕೊಳ್ಳಬೇಕು. ಎಂತಲೇ ಗಿರಿಯಣ್ಣನ ಹೆಂಡತಿಯ ವಿಷಯವಾಗಿ ಅನೇಕರಿಗೆ ಸಹಾನುಭೂತಿಯೂ ಅವಳ ಚಾತುರ್ಯದ ಬಗ್ಗೆ ಕೌತುಕವೂ ಎನಿಸುತ್ತಿದ್ದವು. ಹಲವು ಬಾರಿ ಕಳವು ಮಾಡುವಾಗ ಸಿಕ್ಕುಬಿದ್ದರೂ ಪಟೇಲರು ಬರಿಗೈಯಿಂದ ಎರಡು ಹೊಡೆತ ಕೊಟ್ಟು, ಇಲ್ಲವೇ ಪೋಲೀಸ್ ಠಾಣೆಗೆ ಕಳಿಸುವೆನೆಂದು ಬೆದರಿಸಿ ಬಿಟ್ಟುಕೊಟ್ಟಿದ್ದರು, ಅವನ ಹೆಂಡತಿಯನ್ನೋ ಮಕ್ಕಳ ಮೋರೆಯನ್ನೋ ನೋಡಿ. “ಆ ಕತ್ತೆ ಸೂ….ಮಗನಿಗೆ ಬುದ್ಧಿಯಿದ್ದರಲ್ಲವೇ? ನಾಯಿಯ ಬಾಲ ನಳಿಗೆಯಲ್ಲಿ ಹಾಕಿದಷ್ಟೇ ಹೊತ್ತು” ಎಂದು ತಿಳಿದು. ಒಟ್ಟಿನಲ್ಲಿ ಇದೆಲ್ಲದರ ಪರಿಣಾಮವಾಗಿ ಚಹಾ ಕುಡಿಯಲೂ ಗಿರಿಯಣ್ಣನ ಕೈಯಲ್ಲಿ ರೊಕ್ಕ ಉಳಿಯುತ್ತಿರಲಿಲ್ಲ. ‘ರಂಗವಿಲಾಸ’ದೊಳಗಿನ ಬಿಸ್ಕೂಟು ಅಂಬೋಡೆಯ ಜೊತೆ ಒಂದು ಕಪ್ಪು ಚಹಾ ಹಾಗೂ ದಿನಕ್ಕೊಂದು ಕಟ್ಟು ಬೀಡಿ ಇದ್ದ ಹೊರತು ಗಿರಿಯಣ್ಣನಿಂದ ಬದುಕಿ ಉಳಿಯುವುದು ಶಕ್ಯವೇ ಇರಲಿಲ್ಲ. ಅಂತೂ ಅವನ ಬಾಯ ರುಚಿಯೇ ಈ ಕಳವಿನ ಹಿಂದಿನ ಸ್ಪೂರ್ತಿಯೆಂದು ನಮ್ಮ ಊರಿನ ಅನೇಕರ ಮತ.
ತನಗೆ ಬುದ್ಧಿಯಿಲ್ಲ, ಈ ಸಂಸಾರ ಸಾಗಿಸಿಕೊಂಡು ಹೋಗಲು ತಾನು ಅಯೋಗ್ಯ ಎಂಬುದನ್ನು ಗಿರಿಯಣ್ಣನೂ ಒಪ್ಪಿಕೊಂಡಂತಿತ್ತು. ಎನ್ನುವುದಕ್ಕೆ ಅವನ ಮತ್ತು ಅವನ ಹೆಂಡತಿಯ ನಡುವೆ ಜಗಳ ನಡೆದಾಗಿನ ಅವನ ನಡತೆಯೇ ಸಾಕ್ಷಿ.
ಗಿರಿಯಣ್ಣನ ಹೆಂಡತಿ ಅಂತಿಂತಹ ಹೆಂಗಸಲ್ಲ. ಮಹಾಕಾಳಿಯ ಅವತಾರವೇ! ಮಾತಿನಲ್ಲಿ ಜಗಂಜಾಲಿ! ಅವಳ ‘ಬಾಯಲ್ಲಿ ಬೀಳುವ’ ಧೈರ್ಯ ಸಾಮಾನ್ಯರಿಗೆ ಇಲ್ಲವೇ ಇಲ್ಲ. ಅಂತಹ ಸಾಹಸಕ್ಕೆ ಬೀಳುವವರು ತಮ್ಮ ನಾಚಿಕೆ ಎಂಬುದನ್ನು ಮನೆಯ ಜಗುಲಿಯ ಮೇಲೆ ಇಟ್ಟೇ ಹೋಗಬೇಕು.
ಆ ಕೇರಿಯ ಮಕ್ಕಳಿಗೆ ತಾಯಿ, ಅಜ್ಜಿಯರು ಹೇಳುವ ಕತೆಗಳಲ್ಲಿ “ಕಾಕಣ್ಣ-ಗುಬ್ಬಕ್ಕ”ರ ಕತೆಗಿಂತ ಗಿರಿಯಣ್ಣ-ಹೆಂಡತಿಯರ ಜಗಳವೇ ಹೆಚ್ಚು ಬಾಲಪ್ರಿಯವಾಗಿತ್ತೆಂದರೆ ಅತಿಶಯೋಕ್ತಿ ಆಗಲಾರದು. ಅಳುವ ಮಕ್ಕಳನ್ನು ಸುಮ್ಮಗೊಳಿಸಲೋ ಕಾಡುವ ಮಕ್ಕಳನ್ನು ಜಗುಲಿಯಿಂದ ಓಡಿಸಲೋ ಆ ಕೇರಿಯ ತಾಯಂದಿರಿಗೆ ಈ ಜಗಳ ಅತ್ಯಂತ ಸುಲಭ ಸಾಧನವಾಗಿತ್ತು. ಪಾಗಾರವನ್ನೋ ದಣಪೆಯನ್ನೋ ಏರಿ ಕೂತು ಈ ಜಗಳವನ್ನು ನೋಡುವುದೆಂದರೆ ಮಕ್ಕಳಾದ ನಮಗೆ ತುಂಬ ಹುರುಪು. ಗಂಡನನ್ನು “ಕೋತಿ” ಎಂದೋ, “ನಿನ್ನ ಮುಸುಡಿಗೆ ಬೆಂಕಿ ಹಚ್ಚುತ್ತೇನೆ” ಎಂದೋ ಬೈಯುವ ಆ ಚಂಡಿಯ ಮುಂದೆ ಗಿರಿಯಣ್ಣ ಸುಮ್ಮನೇ ಕುರಿಯಂತೆ ನಿಲ್ಲುತ್ತಿದ್ದ-ಶುದ್ಧ ಧಡ್ಡ, ತಲೆಯೇ ಇಲ್ಲ.
ಗಂಡಹೆಂಡಿರಿಬ್ಬರಿಗೂ ನನ್ನ ತಾಯಿಯವರಲ್ಲಿ ತುಂಬ ಶ್ರದ್ಧೆ, ಆದರ. ಅವನ ಹೆಂಡತಿ ನಮ್ಮಲ್ಲಿ ಆಗಾಗ ಬಂದು ಹೋಗುವುದು ಹೆಚ್ಚು. ಮನೆಯಲ್ಲಿ ಯಾರಿಗಾದರೂ ಬೇನೆ ಬೇಸರಿಕೆಗಳಾದರೆ, ಇಲ್ಲವೇ ಉಳಿದ ಸಣ್ಣ ಪುಟ್ಟ ಅಡಚಣೆಗಳಿಗೆ ತಾಯಿಯವರೇ ನೆರವಾಗುತ್ತಿದ್ದರು. ನಮ್ಮ ಊರಲ್ಲಿ ಆಗ ದವಾಖಾನೆಗಳಿರಲಿಲ್ಲ. ಪ್ರಸಂಗ ಬಂದಾಗ ಗೋಕರ್ಣಕ್ಕೇ ಓಡಬೇಕು ಡಾಕ್ಟರನ್ನು ಕರೆಯಲು. ಸಣ್ಣಪುಟ್ಟ ಬೇನೆ ಬೇಸರಿಕೆಗಳಿಗೆ ಅಲ್ಲಿಯ ಹೆಂಗಸರು ತಮ್ಮ ಅತ್ತೆಯವರಿಂದಲೋ ತವರಿನಿಂದಲೋ ಕಲಿತುಕೊಂಡ ಗಾಂವಠೀ ಔಷಧಗಳಿಗೇ ಮೊರೆಹೋಗಬೇಕು. ಇಂತಹ ಕಷಾಯವನ್ನೋ ಕಾಧೆಯನ್ನೋ ತಯಾರಿಸುವುದರಲ್ಲಿ ನಮ್ಮ ತಾಯಿಯವರ ಕೈಗುಣ ಚೆನ್ನಾಗಿದೆಯೆಂದು ಆ ಕೇರಿಯಲ್ಲಿ ಪ್ರತೀತಿ. ಅದಕ್ಕೆಂತಲೋ ಏನೋ ಗಿರಿಯಣ್ಣ ನಮ್ಮ ಮನೆಯಲ್ಲಿನ್ನೂ ಕಳವು ಮಾಡಿರಲಿಲ್ಲ.
ಪ್ರತಿ ವರುಷದಂತೆ ಆ ವರುಷವೂ ನಮ್ಮ ಮನೆಯ ಅಂಗಳದಲ್ಲಿ ಐದಾರು ಸವತೆಯ ಓಳಿಗಳನ್ನೂ, ಎರಡು ಹಾಲುಗುಂಬಳದ ಓಳಿಗಳನ್ನೂ, ಬೆಂಡೆಕಾಯಿ ಮೊದಲಾದುವುಗಳ ಹಲವು ಓಳಿಗಳನ್ನೂ, ಸಾಗುಮಾಡಿದ್ದೆವು. ಎಲ್ಲರಿಗೆ ಅಚ್ಚರಿಗೊಳಿಸಿದ್ದೆಂದರೆ ಆ ವರುಷದ ನಮ್ಮ ಬಳ್ಳಿಯೊಳಗಿನ ಹಾಲುಗುಂಬಳಗಳು. ಕಂಡವರೆಲ್ಲರೂ ಅಷ್ಟು ದೊಡ್ಡ ಕುಂಬಳಕಾಯಿಗಳನ್ನು ತಾವು ಎಂದೂ ನೋಡಿರಲಿಲ್ಲವೆನ್ನುತ್ತಿದ್ದರು. ನಮ್ಮ ಬಳಗದವರ, ಗುರುತಿನವರ ಮನೆಗಳಲ್ಲಿ ಅದರ ಪಾಯಸವನ್ನೋ, ಹಲವಾನೋ ಮಾಡಿ ತಿಂದವರೆಲ್ಲ ಅದರ ಬೀಜದ ಬಗ್ಗೆ ಮೊದಲೇ ಹೇಳಿಟ್ಟಿದ್ದರು. ಬಳ್ಳಿಯ ಬುಡಕ್ಕೆ ಗೊಬ್ಬರ ಹಾಕಲೋ ಚಪ್ಪರ ಕಟ್ಟಲೋ ನಾನೇ ಸಾಕಷ್ಟು ಮೆಹನತ್ತು ಮಾಡಿದ್ದರಿಂದ ಇಂತಹ ಕಾಯಿಗಳನ್ನು ತಿನ್ನುವಾಗ ಹೆಮ್ಮೆ ಅನಿಸುವುದು ಸಹಜವಿತ್ತು.
ಮಳೆಗಾಲ ತೀರುತ್ತ ಬಂದಿತ್ತು. ಅರ್ಥಾತ್ ಕುಂಬಳ ಹಂಗಾಮೂ ತೀರಿತ್ತು. ಕೊನೆಗೆ ಇದ್ದವುಗಳಲ್ಲಿ ಅತಿ ದೊಡ್ಡದಾದ ಕಾಯಿಗಳೆರಡನ್ನು ಒಂದು ಬೀಜಕ್ಕೆಂದು, ಇನ್ನೊಂದು ದೇವರಿಗೆಂದು ಬಿಟ್ಟಿದ್ದೆವು. ದಿನವೂ ಒಮ್ಮೆ ಕಾಯಿಗಳ ಸುರಕ್ಷಿತತೆಯ ಖಾತ್ರಿಯ ಸಲುವಾಗಿ ಚಪ್ಪರದ ಹತ್ತಿರ ಹೋಗಿಬರುವುದು ನಮ್ಮೆಲ್ಲರ ವಾಡಿಕೆ. ಅವುಗಳ ಆಕಾರ ನೋಡಿಯೇ ಹಿಗ್ಗುತ್ತಿದ್ದೆವು.
ದೇವರಿಗೆ ಬಿಟ್ಟ ಕಾಯಿ, ಇನ್ನೇನು ಎರಡು ದಿನಗಳಲ್ಲಿ ಕೊಯ್ಯಬೇಕು ಎನ್ನುವಷ್ಟರಲ್ಲಿ ಒಂದು ದಿನ ಬೆಳಿಗ್ಗೆ ನೋಡಿದಾಗ ಬಳ್ಳಿಯಿಂದ ಮಾಯವಾಗಿತ್ತು. ನಮಗಾದ ದುಃಖ ಹೇಳಲಾಸಲ್ಲ. ಕಳವಾದ ವಸ್ತುವೇನು ಬಹಳ ಮಹತ್ವದ್ದಲ್ಲ. ಎಷ್ಟು ದೊಡ್ಡದಾದರೇನು, ಕುಂಬಳ ಕುಂಬಳವೇ. ಆದರೂ ತಿಂಗಳುಗಟ್ಟಲೆ ದಾರಿನೋಡಿ ಕೊಯ್ಯಬೇಕೆನ್ನುವ ಎರಡೇ ದಿನಗಳ ಪೂರ್ವ ಮಾಯವಾದ ನೆಚ್ಚಿನ ವಸ್ತುವಾದ್ದರಿಂದ ಅತ್ಯಂತ ಕುಪಿತರಾಗಿದ್ದರು. ಕಳ್ಳ ಯಾರೆನ್ನುವುದು ಗೊತ್ತೇ ಇತ್ತು. ಗಿರಿಯಣ್ಣನ ಹೊರತು ಇಂತಹ ಕ್ಷುಲ್ಲಕ ಕಳವಿಗೆ ಕೈಹಾಕುವವರು ಬೇರೆ ಯಾರಿರಬೇಕು! ಸೋದರತ್ತೆ ಹಾಗು ತಂದೆಯವರು ಬಾಯಿಗೆ ಬಂದಂತೆ ಗಿರಿಯಣ್ಣನನ್ನು ಬೈದುಕೊಂಡರು. ನಾನೂ ಅತ್ತಿತ್ತ ಹಾರಾಡಿದೆ, ಬೈದೆ. ಅದಕ್ಕಿಂತಲೂ ಹೆಚ್ಚು ಏನು ಮಾಡಬಹುದಿತ್ತು?
ಎಲ್ಲ ಬೈಗಳ ತಿರುಳು ಒಂದೇ ಇತ್ತು: ಅದು ದೇವರಿಗೆ ಬಿಟ್ಟ ಕಾಯಿಯಾದ್ದರಿಂದ ಕದ್ದವನ ಒಳಿತಾಗಲಿಕ್ಕಿಲ್ಲ ಎಂದು. ಅತ್ತೆಯವರಂತೂ “ಅವನ ಕೈಗೆ ಹುಳ ಬಿದ್ದು ಸಾಯುವ” ಎಂದರು. ಬೈಯುವ ಕಲೆ ಅವರಿಗೆ ಚೆನ್ನಾಗಿ ಸಾಧಿಸಿದಂತಿತ್ತು. ಬೈಯುವುದರಲ್ಲಿ ತಮ್ಮನ್ನೇ ಮರೆತ ಅವರು ಕೊನೆಗೆ “ಅವನ ಮಕ್ಕಳು ಮರಿಗಳಿಗೂ ಬರ್ಕತ್ತಾಗಲಿಕ್ಕಿಲ್ಲ” ಎನ್ನುವಷ್ಟರಮಟ್ಟಿಗೆ ಮುಟ್ಟಿದರು. (ಅವರಿಗೆ ಮಕ್ಕಳೇ ಇರಲಿಲ್ಲ!) ಅದುವರೆಗೂ ಸುಮ್ಮನಿದ್ದ ತಾಯಿಯವರಿಂದ ಈಗ ಮಾತ್ರ ತಡೆಯಲಾಗಲಿಲ್ಲ. “ಅತ್ತಿಗೇ, ಅತ್ತಿಗೇ, ಸುಮ್ಮನೇ ಹಾಗೆ ಬಯ್ಯಬೇಡಿ; ನನ್ನ ಕೊರಳಾಣೆ ಇದೆ” ಎಂದರು. ಮುಂದೆ ಅವರಿಗೆ ಮಾತೇ ಹೊರಡಲಿಲ್ಲ. ಅವರು ಒಳಗೆ ಅಡುಗೆ ಮನೆಗೆ ನಡೆದುಬಿಟ್ಟರು.
ನನಗೂ ಆ ಕ್ಷಣಕ್ಕೆ ತಾಯಿಯವರ ಗಿರಿಯಣ್ಣನ ವಿಷಯದ ಸಹಾನುಭೂತಿ ಸರಿದೋರಲಿಲ್ಲ. ಅವರು ಯಾವಾಗಲೂ ಹೀಗೆಯೇ! ತೀರ ಮೃದು ಮನಸ್ಸಿನ, ಭಾವುಕ ಸ್ವಭಾವದ ಹೆಂಗಸು. ಅವರಿಗೆ ವಸ್ತುವಿನ ಕಳುವಿನ ದುಃಖಕ್ಕಿಂತ ಕಳವಾದ ವಸ್ತು ದೇವರಿಗೆ ಬಿಟ್ಟಿದ್ದಾಗಿತ್ತಲ್ಲ ಎಂಬ ಅಳುಕು ಹೆಚ್ಚು. ಅದನ್ನು ಯಾರಾದರೂ ತಿಂದು ಕೆಡಕು ಆದರೆ ಎಂದು ಅವರ ಕಳವಳ. ಮೇಲೆ ಅತ್ತೆಯವರ ಸಿಕ್ಕಾಪಟ್ಟೆ ಬೈಗಳ. ಅವರು ಇಡೀ ದಿನ ಅಸ್ವಸ್ಥಗೊಂಡರು. ಕೊನೆಗೆ ನನ್ನನ್ನು ಹತ್ತಿರ ಕರೆದು “ಸ್ವಲ್ಪ ಗಿರಿಯಣ್ಣನಿಗೆ ನಾನು ಕರೆದಿದ್ದೇನೆ ಎಂದು ಹೇಳಿಬರುವೆಯಾ?” ಎಂದರು. ಇದು ಹೇಗೋ ತಂದೆಯವರ ಕಿವಿಗೆ ಬಿತ್ತು. ಅವರು ಕಿಡಿಕಿಡಿಯಾದರು. “ಏ ಏ! ನಿನ್ನ ಈ ಬುದ್ಧಿವಾದ, ಉಪದೇಶ ಬದಿಗಿಡು ಅಂದೆ. ಅಲ್ಲ ಆ ಮಗುವಿಗೆ ಇದ್ದ ಬುದ್ಧಿ ಸಹ ನಿನಗಿಲ್ಲವಲ್ಲ. ಕಳ್ಳನಿಗೆ ಉಪದೇಶಮಾಡಿ ಬದಲಿಸುವುದು ಸಾಧ್ಯವಿದೆಯೇ? ನಿನ್ನ ಮಾತಿನ ಕಿಮ್ಮತ್ತು ಅವನಿಗಿದ್ದುದಾದರೆ ಅವನು ಇಲ್ಲಿ ಕಳುವು ಮಾಡುತ್ತಿದ್ದನೆ? ಅವನ ಬಂದೋಬಸ್ತಿಯ ವ್ಯವಸ್ಥೆ ನಾನು ಮಾಡುತ್ತೇನೆ. ಆ ಸಣ್ಣತಮ್ಮ ನಾಯ್ಕನಿಗೆ (ಊರ ಪಟೇಲರು) ಹೇಳಿಕಳಿಸಿದ್ದೇನೆ” ಎಂದರು.
ಬಂದೋಬಸ್ತಿಯ ವಿಷಯವಾಗಿ ತಂದೆಯವರು ತೆಗೆದ ಉದ್ಗಾರಳೇನು ಹೊಸವಲ್ಲ. ಕಳವಿನ ಹಾನಿಗೊಳಗಾದ ಪ್ರತಿಯೊಬ್ಬರೂ ಮಾತನಾಡುವಂತೆಯೇ ಆಡಿದ್ದರು ಅಷ್ಟೆ! ಆದರೆ ತಾಯಿಯವರು ಮಾತ್ರ ತಮ್ಮ ಹಟ ಬಿಟ್ಟಂತೆ ತೋರಲಿಲ್ಲ. ಬೆಳೆಗ್ಗೆ ಗಣಪಯ್ಯ ಸೆಟ್ಟರ ಮನೆಯಲ್ಲಿ ಹಾಲು ಕೊಡುವಾಗ ಗಿರಿಯಣ್ಣ ನಮ್ಮ ಮನೆಯ ಮುಂದಿನ ಓಣಿಯಿಂದಲೇ ಹೋಗಬೇಕು. ಓಣಿಯ ಬಳಿಯಲ್ಲಿಯೇ ನಮ್ಮ ದನಗಳ ಕೊಟ್ಟಿಗೆ. ಹಾಲು ಕರೆಯಲು ಹೋದಾಗ ತಾಯಿಯವರು ನನ್ನನ್ನು ಕರೆದು “ಮಗೂ ಹಾಗೆ ಸುಮ್ಮನೆ ಬಯ್ಯಬಾರದು. ಆ ಕಪಿಗೇನು ಬುದ್ಧಿಯಿದೆಯೇ? ಅದು ಅವನ ಹುಟ್ಟು ಗುಣ… ಅದು ದೇವರಿಗೆ ಹೇಳಿಕೊಂಡ ಕಾಯಿ ಎಂದು ನನ್ನ ಭೀತಿ. ಸಣ್ಣ ಸಣ್ಣ ಮಕ್ಕಳ ತಂದೆಯವ. ನೀನು ಸ್ವಲ್ಪ ದಣಪೆಯ ಹತ್ತಿರ ನಿಲ್ಲು. ಅವನು ಕಂಡರೆ ನನ್ನ ಕರೆ” ಎಂದರು. ನನಗೆ ತಾಯಿಯವರ ಈ ರೀತಿ ಅಷ್ಟು ಸಮಂಜಸ ತೋರಲಿಲ್ಲ. ಆದರೂ ಅವರ ಮಾತನ್ನು ಅಲ್ಲಗಳೆದು ಅವರ ಮನಸ್ಸು ನೋಯಿಸುವ ಧೈರ್ಯವಾಗಲಿಲ್ಲ.
ಕೊನೆಗೊಮ್ಮೆ ಗಿರಿಯಣ್ಣ ಭೆಟ್ಟಿಯಾದ. ತಾಯಿಯವರು ಎಂದಿನಂತೆಯೇ ತಮ್ಮ ಮೃದು ಮಾತಿನಲ್ಲಿ ಉಪದೇಶ ಮಾಡಿಯೇ ಮಾಡಿದರು. ಅದನ್ನು ಕೇಳುವಾಗ ನನ್ನ ಕಣ್ಣು ಒದ್ದೆಯಾದುವು. ನಾವು ಗಿರಿಯಣ್ಣನಿಗೆ ಬೈದುದರ ಬಗ್ಗೆ ಆ ಕ್ಷಣದ ಮಟ್ಟಿಗಾದರೂ ನಾಚಿಕೆಯೆನಿಸಿತು. ಆದರೆ ಆ ಕಳ್ಳನಿಗೆ ಎಳ್ಳಷ್ಟೂ ಕೆಡುಕೆನಿಸಿದಂತೆ ತೋರಲಿಲ್ಲ. ಎಲ್ಲವೂ ಭೋರ್ಗಲ್ಲ ಮೇಲೆ ನೀರು ಸುರಿದಂತೆ. ಮಾನವತೆಯ ತೇವು ಕೂಡ ಇಲ್ಲದ ಶುದ್ದ ಬಂಡೆಗಲ್ಲಿಗೆ ಮಾನವ ಅಂತಃಕರಣದ ಅರ್ಥ ಹೇಗಾಗಬೇಕು? ಸುಮ್ಮನೆ ಬಸವಣ್ಣನಂತೆ ತಲೆ ಕೆಳಗೆ ಹಾಕಿ ಕೇಳಿದ. ಕಳವು ತಾನೇ ಮಾಡಿದ್ದೇನೆಂದೂ ಒಪ್ಪಲಿಲ್ಲ. ಕೊನೆಗೆ ತಾಯಿಯವರು ಇನ್ನೊಮ್ಮೆ, “ಆ ಕಾಯಿಯ ಸಲುವಾಗಿ ನಮಗೆ ಕೆಡುಕೆನಿಸಲಿಲ್ಲ. ಅದು ದೇವರಿಗೆ ಬಿಟ್ಟ ಕಾಯಿ. ಯಾರಿಗೂ ಮಾರಬೇಡ. ನೀನೇ ಮುರ್ಕಂಡಿ ದೇವರಿಗೆ ಕೊಟ್ಟು ಕ್ಷಮೆ ಬೇಡಿ ಬಾ” ಎಂದು ಬೀಳ್ಕೊಟ್ಟರು. ಅವನಿಗೆ ಅಷ್ಟೆಲ್ಲ ಬುದ್ಧಿಯಿದ್ದರೆ ಅವನು ಕಳವು ಮಾಡುತ್ತಿದ್ದನೆ? ನನ್ನ ತಾಯಿಯವರ ಭೋಳೇ ಸ್ವಭಾವದ ಬಗ್ಗೆ ಕೆಡುಕೆನಿಸಿತು.
ಅಂದು ಸಂಜೆ ಕಮಟೆಯಿಂದ ನಮ್ಮ ಚಿಗಪ್ಪ ಬಂದರು. ಆಗ ನಮಗಾದ ಆನಂದ ಹೇಳತೀರದು. ಗಿರಿಯಣ್ಣನಿಗೆ ತಕ್ಕ ಶಿಕ್ಷೆಯಾಗಬೇಕಾದರೆ ಅವರೇ ಯೋಗ್ಯ. ಮೈಯಿಂದ ಒಳ್ಳೇ ಧಾಂಡಿಗ ಆಳು. ನಾವೆಲ್ಲರೂ ಎಷ್ಟೋ ಸಲ ಅವರನ್ನು ‘ಸೆಂಡೊ ಕಾಕಾ’ ಎನ್ನುತ್ತಿದ್ದೆವು. ಅತ್ತೆಯವರು ಕಳುವಿನ ವರ್ತಮಾನವನ್ನು ಉಪ್ಪು ಖಾರ ಹಚ್ಚಿ ವಿವರಿಸಿದರು. ಒಟ್ಟಿನಲ್ಲಿ ಈ ಕಳವಿಗೆ ತಕ್ಕ ಪ್ರಾಯಶ್ಚಿತ್ತವಾಗಲೇಬೇಕೆಂದು ಎಲ್ಲರೂ ತೀರ್ಮಾನಿಸಿದರು. ತಾಯಿಯವರು ಮಾತ್ರ ಈ ಯಾವ ಮಾತುಕತೆಯಲ್ಲೂ ಭಾಗವಹಿಸಲಿಲ್ಲ. ಉಳಿದವರಿಗೆ ಸೇರಲಿಕ್ಕಿಲ್ಲವೆಂದು ಬೆಳಿಗ್ಗೆ ತಾಯಿಯವರು ಗಿರಿಯಣ್ಣನಿಗೆ ಉಪದೇಶಿಸಿದ ಸುದ್ದಿಯನ್ನು ನಾನು ಯಾರಿಗೂ ತಿಳಿಸಲಿಲ್ಲ.
ಚಿಗಪ್ಪ ಕಳವು ಆದ ಬಳ್ಳಿಯ ಚಪ್ಪರಕ್ಕೆ ದರ್ಶನ ಕೊಟ್ಟರು. ಬೀಜಕ್ಕೆಂದು ಬಿಟ್ಟ ಕಾಯಿಯನ್ನು ನೋಡಿದ ಕೂಡಲೇ ಅವರ ಕೈ ಒಮ್ಮೆಲೇ ಬಾಯಿಗೆ ಹೋಯಿತು. ಎಷ್ಟೋ ಹೊತ್ತಿನ ತನಕ ಬಳ್ಳಿಯನ್ನು ಬಳ್ಳಿಯೊಳಗೆ ತೂಗುತ್ತಿದ್ದ ಅದ್ಭುತ ಕಾಯಿಯನ್ನೂ ಬಳ್ಳಿಯ ಸುತ್ತಲಿನ ಜಾಗವನ್ನೂ ಕೂಲಂಕುಷವಾಗಿ ಪರೀಕ್ಷಿಸಿ, ಕೆಲಹೊತ್ತು ತಮ್ಮಲ್ಲೇ ಚರ್ಚಿಸಿ ಕೊನೆಗೆ ಒಂದು ನಿಶ್ಚಯಕ್ಕೆ ಬಂದರು: ಪಟೇಲರಿಗೆ ಈ ಕಳವಿನ ಸುದ್ದಿ ಏನೂ ಕೊಡಬಾರದು. ಅದರಿಂದ ಗಿರಿಯಣ್ಣನಿಗೆ ನಾಲ್ಕು ಬೈಗಳ ಸಿಕ್ಕವೇ ಹೊರತು ತಕ್ಕ ಶಿಕ್ಷೆಯಾಗಲಿಕ್ಕಿಲ್ಲ. ಮೊದಲನೆಯ ಕಾಯಿಯ ರುಚಿ ಹತ್ತಿದ ಕಳ್ಳ ಈ ಎರಡನೆಯದನ್ನೂ ಬಿಡಲಿಕ್ಕಿಲ್ಲ. ಆದುದರಿಂದ ಈ ಎರಡು ದಿನ ನಾವು ದಿನವೂ ರಾತ್ರಿ ಕಾವಲಿನ ಮೇಲಿರಬೇಕು.
ಅದರಂತೆ ಕಾವಲಿನ ವ್ಯವಸ್ಥೆಯೂ ಆಯಿತು. ಜಗುಲಿಯ ಮೇಲಿದ್ದ ನಮ್ಮ ಅಜ್ಜನ ಮಂಚವನ್ನು ಅಂಗಳದಲ್ಲಿ ಹಾಕಿಸಿ, ಕಾಕಾ ಒಬ್ಬರೇ ಹೊರಗೆ ಮಲಗಿದರು. “ಸುಳ್ಳೇ ಆ ಮೂರ್ಖನ ಗೊಡವೆಗೆ ಹೋಗಬೇಡ. ಒಂದು ಯಕಶ್ಚಿತ್ ಕಾಯಿಯ ಸಲುವಾಗಿ ಜೀವಕ್ಕೆ ಅಪಾಯ ತಂದುಕೊಂಡೀಯಾ” ಎಂದು ತಂದೆಯವರು ಎಷ್ಟು ತಾಕೀತು ಮಾಡಿದರೂ ಕೇಳಲಿಲ್ಲ. ಒಬ್ಬರೇ ಅಂಗಳದಲ್ಲಿ ಮಲಗಿಕೊಂಡರು, ಕಳ್ಳನ ಮೇಲೆ ಕಾವಲಿಡಲು. ಆದರೆ ಅವರಿಗೆ ಹೆಚ್ಚು ದಿನ ಹೀಗೆ ಕಾವಲಿಡುವ ಪ್ರಸಂಗ ಬರಲಿಲ್ಲ. ಕಳ್ಳ ಅವರು ಅಪೇಕ್ಷಿಸಿದಂತೆ ಆ ದಿನ ರಾತ್ರಿಯೇ ತಿರುಗಿ ಬಂದ.
ಅಂದು ಬೆಳಿಗ್ಗೆ ನನಗೆ ಎಚ್ಚರವಾದಾಗ ನಮ್ಮ ಅಂಗಳದಲ್ಲಿ ಗೊಂದಲವೇ ಗೊಂದಲ. ಇನ್ನೂ ಕತ್ತಲೆ ಪೂರ್ಣ ಸರಿದಿರಲಿಲ್ಲ. ನಮ್ಮ ಮನೆಯವರೆಲ್ಲರೂ ಅಂಗಳದಲ್ಲಿ ನೆರೆದಿದ್ದಾರೆ. ನಮ್ಮ ಕಾಕಾ ಅವರು ಒಳ್ಳೆಯ ಆವೇಶದಿಂದ ಏನೇನೋ ಹೇಳುತ್ತಿದ್ದಾರೆ. ಅವರ ಮಾತಿನ ರೀತಿ, ಹಾವಭಾವ ನೋಡಿ ಕಳ್ಳ ಸಿಕ್ಕುಬಿದ್ದನೆಂಬ ಖಾತ್ರಿಯಿಂದ ಹೊರಗೆ ಬಂದೆ. ಆದರೆ ಕಳ್ಳ ಸಿಕ್ಕುಬಿದ್ದಿರಲಿಲ್ಲ, ಜಾರಿಕೊಂಡಿದ್ದ.
ಅದು ಹೀಗಾಯಿತು: ಅಂದು ರಾತ್ರಿ ಕಾಕಾ ಅವರು ಶತ ಪ್ರಯತ್ನದಿಂದ ಬೆಳಗ್ಗಿನ ೫ ಘಂಟೆಯವರೆಗೆ ಎಚ್ಚರ ಉಳಿದರು. (ಎಷ್ಟೋ ಸಲ ತಾನು ಒಂದು ಯಕಶ್ಚಿತ್ ಕುಂಬಳಕಾಯಿಯ ಕಳವಿನ ಸಲುವಾಗಿ ಎಚ್ಚರ ಕುಳಿತಿದ್ದೇನೆ ಎಂಬ ಅರಿವು ಬಂದು ನಕ್ಕಿದ್ದೂ ಉಂಟಂತೆ!) ಐದಾಯಿತು; ಐದೂವರೆಯಾಯಿತು. ಇನ್ನೇನು ಬರುವ ಎಂದು ಅದೇ ತಲೆದಿಂಬಿಗೆ ಒರಗಿದ್ದರಷ್ಟೆ. ಬಳ್ಳಿಯ ಹತ್ತಿರ ಸರಸರ ಅವಾಜು ಕೇಳಿಬಂತು. ಇವರು ಹೊದಿಕೆಯನ್ನು ತೆಗೆದು ನೋಡುವಷ್ಟರಲ್ಲಿ ಗಿರಿಯಣ್ಣ (ಮುಸುಕು ಬೆಳಕಿನಲ್ಲಿ ಸ್ಪಷ್ಟ ಕಾಣದಿದ್ದರೂ ಆಕಾರದಿಂದ ಊಹೆ!) ಬಳ್ಳಿ ಬಿಟ್ಟು ದಣಪೆಯತ್ತ ಸಾಗಿದ್ದ. ಇವರು ಒಮ್ಮೆಲೇ ಸಿದ್ಧ ಮಾಡಿಟ್ಟ ದೊಣ್ಣೆಯನ್ನೆತ್ತಿ ಅತ್ತ ಧಾವಿಸಿದರು. ಇವರ ಸುಳಿವು ಹತ್ತಿದ ಕೂಡಲೇ ಗಿರಿಯಣ್ಣ ಓಡಹತ್ತಿದ. ಆದರೆ ದಣಪೆ ದಾಟುವಷ್ಟರಲ್ಲಿ ‘ಇನ್ನೇನು ತಪ್ಪಿಸಿಕೊಂಡ’ ಎಂಬ ಹಳಹಳಿಯಲ್ಲಿ ಕೈಯಲ್ಲಿಯ ದೊಣ್ಣೆಯನ್ನು ಗುರಿಯಿಟ್ಟು ರಭಸದಿಂದ ಬೀಸಿಬಿಟ್ಟರು. ಗುರಿ ವ್ಯರ್ಥವಾಗಲಿಲ್ಲ. ಬಡಿಗೆ ಸರಿಯಾಗಿ ಗಿರಿಯಣ್ಣನ ಸೊಂಟಕ್ಕೆ ಬಡಿದು ಎರಡು ತುಂಡಾಯಿತು. ಗಿರಿಯಣ್ಣನ ಸೊಂಟದ ಕೀಲೇ ತಪ್ಪಿರಬೇಕು.
ರಾತ್ರಿಯೆಲ್ಲ ಇಷ್ಟೆಲ್ಲ ಜಾಗರೂಕತೆಯಿಂದ ಪಹರೆ ಇಟ್ಟರೂ ಕೈಗೆ ಬಂದ ಕಳ್ಳ ಸುಮ್ಮನೆ ಜಾರಿಕೊಂಡನಲ್ಲ ಎಂಬ ನಿರಾಶೆಯ ಸಂತಾಪವನ್ನು ‘ಮೊದಲನೆಯ ಕಾಯ’ ರುಚಿ ಹತ್ತಿದ ಕಳ್ಳ ಎರಡನೆಯ ಕಾಯಿಯನ್ನೂ ಕಳಲು ಬರುವ ಎಂಬ ತರ್ಕಪೂರ್ಣ ಸಿದ್ಧಾಂತ ಸುಳ್ಳಾಗಲಿಲ್ಲ ಎಂಬ ಜಂಭದಿಂದ ‘ಕಳ್ಳ ಜಾರಿಕೊಂಡರೂ ತಕ್ಕ ಶಿಕ್ಷೆ ಅನುಭವಿಸಿದ’ ಎಂಬ ಬೆನ್ನು ಚಪ್ಪರಿಕೆಯಿಂದ ನೀಗಿಕೊಳ್ಳುವ ಭರದಲ್ಲಿ ಕಾಕಾ ಅವರು ಗಿರಿಯಣ್ಣನಿಗಾದ ನೋವನ್ನು ಅನೇಕ ಪಟ್ಟು ಬೆಳಸಿ ಹೇಳಿದ್ದರೆಂದು ಹಿಂದಿನಿಂದ ತಿಳಿದು ಬಂದರೂ ಆ ಕ್ಷಣಕ್ಕೆ ಮಾತ್ರ ನಾವೆಲ್ಲ ಅದನ್ನು ನಂಬಿ ಅವರ ಶೌರ್ಯದ ಬಗ್ಗೆ ಮೆಚ್ಚಿಕೆಯನ್ನೂ ಗಿರಿಯಣ್ಣನ ದೇಹಕ್ಕೆ ಆದ ಹಾನಿಯ ಬಗ್ಗೆ ಚಿಂತೆಯನ್ನೂ ಒಂದೇ ಸಮಯಕ್ಕೆ ವ್ಯಕ್ತಗೊಳಿಸಿದೆವು. ಕಳ್ಳನನ್ನು ಹಿಡಿಯುವ ಹಟದಲ್ಲಿ ಬೀಜಕ್ಕೆ ಬಿಟ್ಟ ಕಾಯಿಯನ್ನೂ ಕಳಕೊಂಡೆವಲ್ಲ ಎಂದು ಹಳಹಳಿಸದೆಯೂ ಇರಲಿಲ್ಲ-ಹಾಗೂ ಆ ಹಳಹಳಿಯಲ್ಲಿ ಗಿರಿಯಣ್ಣನನ್ನು ಬಾಯಿಗೆ ಬಂದತೆ ಬೈಯದೆಯೂ ಇರಲಿಲ್ಲ. ಆದರೆ ಈಗಲೂ ಅತ್ತೆಯವರೇ ಎಲ್ಲರನ್ನೂ ಮೀರಿಸಿದರು. “ಬರಿಯೇ ಸೊಂಟದ ಕೀಲು ತಪ್ಪುವುದಲ್ಲ, ಬಿದ್ದಲ್ಲಿಂದ ಏಳಲೇಬಾರದಾಗಿತ್ತು” ಎಂದರು, ರುಚಿಯಿಂದ. ತಾಯಿಯವರ ಮನಸ್ಸು ಮಾತ್ರ ಬಹಳೇ ನೊಂದಿತ್ತು. “ಅವನ ನಶೀಬವೇ ಹಾಗಿದ್ದರೆ ಯಾರೇನು ಮಾಡುತ್ತಾರೆ. ಇಲ್ಲವಾದರೆ ಸಣ್ಣ ಮಗುವಿಗೆ ಹೇಳಿದ ಹಾಗೆ ಹೇಳಿದರೂ ಅವನಿಗೆ ಬುದ್ಧಿಯಿದ್ದರಲ್ಲವೆ?” ಎಂದೇನೋ ಗುಣಗುಣಿಸುತ್ತ ತಮ್ಮ ಕೆಲಸಕ್ಕೆ ನಡೆದರು.
ಆದರೆ ಈ ಎಲ್ಲ ಗೊಂದಲದಲ್ಲಿ ಬಳ್ಳಿಯ ಹತ್ತಿರ ಹೋಗಿ ಕಾಯಿ ನಿಜವಾಗಿ ಕಳವಾಗಿದೆಯೇ ಎಂದು ನೋಡುವ ಕುತೂಹಲವಾಗಲೀ ಗರಜಾಗಲೀ ಯಾರಿಗೂ ತೋರದಂತಿರಲಿಲ್ಲ. ನನಗೆ ಆ ವಿಚಾರ ಹೊಳೆದ ಕೂಡಲೇ ಬಳ್ಳಿಯ ಹತ್ತಿರ ಧಾವಿಸಿದೆ. ಅದಾಗ ಸ್ವಲ್ಪ ಬೆಳಕು ಮೂಡಿತ್ತು. ಕಾಕಾ ಅವರು ನಾನು ಓಡುವುದನ್ನು ಕಂಡು, “ಏ ಹಾಗೇಕೆ ಓಡುತ್ತೀಯೋ” ಎಂದರು-ಓಡುವ ಅವಶ್ಯಕತೆಯೇ ಇಲ್ಲವೆಂಬಂತೆ. “ಹುಡುಗನಿಗೆ ಪಾಪ ಇನ್ನೂ ಆಸೆ.” ಆದರೆ ಬಳ್ಳಿಯಲ್ಲಿ ತೂಗುತ್ತಿದ್ದ ಕಾಯಿಯನ್ನು ನೋಡಿ ನನಗಾದ ಆನಂದ, ಆನಂದಕ್ಕಿಂತಲೂ ಆಶ್ಚರ್ಯ ಹೇಳಲಾಸಲ್ಲ. “ಕಾಕಾ, ಕಾಯಿ ಇಲ್ಲೇ ಇದೆ” ಎಂದೆ, ಒದರಿ. “ಆಂ! ಕಾಯಿ ಅಲ್ಲೇ ಇದೆಯೇ?” ಎಂದರು, ‘ಕಳ್ಳ ಬರಲೇ ಇಲ್ಲವೇ?’ ಎಂಬ ಧಾಟಿಯಲ್ಲಿ ಆ ಧಾಟಿಯಲ್ಲಿ ಇದರಿಂದ ನಾವೆಲ್ಲರೂ ಅವರು ಆಗಿನಿಂದ ಹೇಳಿದ ಅದ್ಭುತ ಕತೆಯನ್ನು ಎಲ್ಲಿ ಸುಳ್ಳೇ ಎಂದು ಬಗೆಯುವೆವೋ ಎಂಬ ಅಳುಕು ಇತ್ತೇನೋ! ಎಲ್ಲರೂ ಬಳ್ಳಿಯ ಹತ್ತಿರ ಬಂದರು. ಕಾಯಿಯನ್ನು ಎಲ್ಲರೂ ಕಂಡರು. “ನಾನು ಸ್ವತಃ ನೋಡಿದ್ದೇನೆ. ನಾನು ಎದ್ದಾಗ ಅವನು ಇಲ್ಲಿಂದಲೇ ಹೊರಟಿದ್ದ….ಆದರೆ ನನಗೂ ಹೊಳೆಯಲಿಲ್ಲವಲ್ಲ, ಅವನು ಆ ಅದ್ಭುತ ಕಾಯಿಯನ್ನು ಹೊತ್ತು ಅಷ್ಟು ಸುಲಭವಾಗಿ ಹೇಗೆ ಓಡುತ್ತಿದ್ದ…” ಕಾಕಾ ಅವರು ಮಾತು ಪೂರ್ಣಗೊಳಿಸುವುದರೊಳಗೆ ನನ್ನ ಇನ್ನೊಂದು ಶೋಧ ಅವರನ್ನು ದಂಗುಬಡಿಸಿತ್ತು. ಮೊದಲನೆಯ ದಿನ ಕಳವಾದ ಕುಂಬಳಕಾಯಿ ಅಲ್ಲೇ ಕೆಳಗೆ ಬಿದ್ದಿದ್ದು ನಮ್ಮನ್ನೇ ಅಣಕಿಸುತ್ತಿತ್ತು. ‘ಹೇಗೆ ಕೊಟ್ಟೆ ಗಸ್ತು’ ಎಂದು! “ಆಂ! ಎಂದರೆ ಈ ಕಾಯಿಯನ್ನು ಇಡಲು ಬಂದಿದ್ದನೇ?!!” ಎಲ್ಲರೂ ಆಶ್ಚರ್ಯಪಟ್ಟರು. ಆದರೆ ಗಿರಿಯಣ್ಣನಂತಹ ಅತಿ ಸಾಮಾನ್ಯ ವ್ಯಕ್ತಿಯೊಬ್ಬನ ಈ ಆಶ್ಚರ್ಯ ಜನಕ ಕೃತಿಯ ಬಗ್ಗೆ ಇಡಿಯ ದಿನ ವಿಚಾರಿಸಿದರೂ ಅದರ ಗೂಢ ಮಾತ್ರ ಕೊನೆಗೂ ಯಾರಿಗೂ ತಿಳಿಯಲಿಲ್ಲ, ನಮ್ಮಿಬ್ಬರನ್ನುಳಿದು ನಾನು, ನನ್ನ ತಾಯಿ.
ಒಂದು ಸಣ್ಣ ಘಟನೆ. ಆದರೆ ಅದರ ನಿಜವಾದ ಅರ್ಥ ಮಾತ್ರ ನನಗೆ ಅಂದು ತಿಳಿದಿತ್ತು ಎಂದು ಹೇಳಲಾರೆ.
*****
೧೯೫೦/೫೧
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ