ತೂಫಾನ್ ಮೇಲ್

“ಮಾ ನನ್ನನ್ನು ನಸುಕಿಗೇ ಎಬ್ಬಿಸುತ್ತಿದ್ದಳು. ಸದ್ದು ಮಾಡದೆ ಮುಖ ತೊಳೆಸುತ್ತಿದ್ದಳು. ನಂತರ ಖೋಲಿಯ ಬಾಗಿಲು ಮುಚ್ಚಿ ಕತ್ತಲಲ್ಲೆ ಬೀಗ ಹಾಕಿ, ನನ್ನ ಮತ್ತು ಅವಳ ಪ್ಲಾಸ್ಟಿಕ್ ಚಪ್ಪಲಿಗಳನ್ನು ಕೈಲಿ ಹಿಡಿದುಕೊಂಡು ತೇಲಿಗಲ್ಲಿಯ ಕೊನೆತನಕ ಸದ್ದಾಗದಂತೆ ನಡೆದು, ಮುಖ್ಯರಸ್ತೆ ಸೇರುವಲ್ಲಿ ನಿಂತು ಚಪ್ಪಲಿ ಹಾಕಿಕೊಂಡು ದಾಪುಗಾಲಲ್ಲಿ ಸನಿಹದ ಅಂಧೇರಿ ಸ್ಟೇಶನ್ನಿಗೆ ಓಡುತ್ತಿದ್ದೆವು. ಅಲ್ಲಿ ಟಿಕೆಟ್ಟು ತಗೊಂಡು ಮೊದಲ ಲೋಕಲ್ ಹಿಡಿದು ಧೈಸರ್ ಸ್ಟೇಷನ್ನಿನಲ್ಲಿಳಿಯುತ್ತಿದ್ದೆವು. ನಾನು ಅಪ್ಪನನ್ನು ಕಾಣುವ ವಿಚಿತ್ರವಾದ ಕಂಗಾಲು ಖುಷಿಯಲ್ಲಿರುತ್ತಿದ್ದೆ. ಮಾ ಮಾತ್ರ ನಾನು ಮಾತನಾಡದಿದ್ದರೂ ಪದೇ ಪದೇ ಶ್‌ಶ್ ಎಂದು ಸುಮ್ಮನಿರಿಸುತ್ತಿದ್ದಳು. ಅವಳ ಈ ಶ್‌ಶ್ ಕೇಳಿಯೇ ಸುಮ್ಮಗಾದಂತೆ ಇಡೀ ವಿಶ್ವ ಆ ನಸುಕಿನಲ್ಲಿ ನಿಶ್ಯಬ್ದವಾಗಿರುತ್ತಿತ್ತು ಮತ್ತು ಆ ನಿಶ್ಯಬ್ದದಲ್ಲಿ ಶ್‌ಶ್ ಇನ್ನೂ ದೊಡ್ಡದಾಗಿ ಭಾಸವಾಗುತ್ತಿತ್ತು. ನಸುಕಿನ ನಾಲ್ಕೂಕಾಲು ಆಗಲು ಬಂದಂತೆ ಇಬ್ಬರೂ ಅಧೀರರಾಗುತ್ತಿದ್ದೆವು. ಏಕೆಂದರೆ ಇನ್ನೇನು ಉತ್ತರದಿಂದ ಬರುವ ತೂಫಾನ್ ಮೇಲ್ ಶರವೇಗದಲ್ಲಿ ಬರುತ್ತದೆ. ಈ ನಿರ್ಜನ ನಿಲ್ದಾಣದ ಕಸಕಡ್ಡಿ ಧೂಳನ್ನೆಲ್ಲ ಸುಂಟರಗಾಳಿಯಂತೆ ಎಬ್ಬಿಸಿ ಭೋರೆಂದು ಅರ್ಧ ನಿಮಿಷದಲ್ಲಿ ಹಾದು ಹೋಗಿಬಿಡುತ್ತದೆ. ಇಲ್ಲಿ ನಿಲ್ಲುವುದಿಲ್ಲ. ಆದರೆ ಅದರಿಂದ ನನ್ನ ಅಪ್ಪ ಜಿಗಿಯುತ್ತಾನೆ. ಬರೇ ಜಿಗಿಯುವುದಿಲ್ಲ. ಹೊಟ್ಟೆಗೊಂದು ಪೊಟ್ಟಣವನ್ನು ಕಟ್ಟಿಕೊಂಡು ಪ್ರಾಣಾಂತಿಕವಾಗಿ ಉರುಳಿ ಏನೇನೋ ಭಂಗಿಯಲ್ಲಿ ಬಿದ್ದು. ತೂಫಾನ್ ಮೇಲು ಎಬ್ಬಿಸಿದ ಧೂಳಿನ ಮೋಡ ಆರುವುದರೊಳಗೇ ಎದ್ದು ಕುಂಟುತ್ತ ಕೈಲಿದ್ದ ಚೀಲವನ್ನು ನಮ್ಮೆಡೆಗೆ ಎಸೆದು ಹೊಟ್ಟೆಗೆ ಬಿಗಿದ ಪೊಟ್ಟಣದೊಂದಿಗೆ, ಪ್ಲಾಟಫಾರ್ಮಿನ ಕೊನೆಯಲ್ಲಿ ಕಾದಿದ್ದ ಇಬ್ಬರನ್ನು ಸೇರಿ ಹೊರಗೆ ಹೋಗಿಬಿಡುತ್ತಾನೆ. ಅದೊಂದೇ ಕ್ಷಣ ನಾವಿಬ್ಬರೂ ಅವನನ್ನು ನೋಡೋದು. ಅವನು ಬಿದ್ದಾಗ ನಾವು ಸಮೀಪ ಓಡುವಂತಿಲ್ಲ. ತೂಫಾನ್ ಮೇಲ್‌ನ ದೂರದಲ್ಲಿ ಹಿಂದಿನ ಕೆಂಪು ದೀಪ ಮರೆಯಾಗುವುದರೊಳಗೆ ಆತ ತೆವಳುತ್ತ ಎದ್ದು ಚೀಲ ನಮ್ಮತ್ತ ಎಸೆದು, ಒಂದು ಬಗೆಯಲ್ಲಿ ನಮ್ಮಿಬ್ಬರನ್ನು ನೋಡಿ ಕೈ ಬೀಸಿ ಮರೆಯಾಗುವವರೆಗೆ ನಾವು ವಿಗ್ರಹದಂತೆ ನಿಂತು ನೋಡುತ್ತಿದ್ದೆವು. ನಂತರ ಮಾ ಓಡಿ ಚೀಲ ಎತ್ತಿಕೊಂಡು ಬರುತ್ತಿದ್ದಳು. ನಾನು ಬಾಯ್ ತೆರೆದರೆ ಶ್‌ಶ್ ಎನ್ನುತ್ತಿದ್ದಳು. ನಾವು ಮನೆ ತಲುಪುವಾಗ ತೇಲಿಗಲ್ಲಿ ಆಗಷ್ಟೇ ಏಳುತ್ತಿರುತ್ತದೆ. ಬಾಗಿಲು ತೆರೆದು ಲಗುಬಗನೆ ಚೀಲದಿಂದ ಮಾ ಹೊಸಬಟ್ಟೆ, ತಿಂಡಿ ತಿನಿಸು, ತಗಡಿನ ಆಟಿಕೆ ತೆಗೆಯುತ್ತಿದ್ದಳು. ಪ್ಲಾಸ್ಟಿಕ್‌ನಲ್ಲಿ ಇಟ್ಟು ದಾರದಿಂದ ಸುತ್ತಿದ ಹಣವೂ ಇರುತ್ತಿತ್ತು. ಅದನ್ನು ತಕ್ಷಣ ಟ್ರಂಕಿನಲ್ಲಿಡುತ್ತಿದ್ದಳು, ನಂತರ ಯಾವಾಗ ಎಣಿಸುತ್ತಿದ್ದಳೋ ಏನೋ. ಖುಷಿಯಾದರೂ ಆಗದವಳಂತೆ ಇರುತ್ತಿದ್ದಳು. ನೆರೆಹೊರೆಯಿಂದ ಏನನ್ನೋ ಬಚ್ಚಿಡದಂತೇ ಇರುತ್ತಿದ್ದಳು. ಅಪ್ಪ ಯಾಕೆ ಮನೆಗೆ ಬರುವುದಿಲ್ಲ? ಅವನು ಎದೆಗೆ ಅವಚಿಕೊಂಡಿದ್ದ ಪೊಟ್ಟಣ ಏನು? ಅವನು ಯಾರ ಜೊತೆಗೆ ಹೋದ? ಅವನು ತೂಫಾನ ಮೇಲ್ ನಿಲ್ಲುವ ದಾದರ್ ಸ್ಟೇಷನ್ನಿನ್ನಲ್ಲಿ ಇತರ ಪ್ರಯಾಣಿಕರ ಜತೆ ಇಳಿಯದೆ, ಈ ನಿರ್ಜನ ಧೈಸರ್ ಸ್ಟೇಷನ್ನಿನ್ನಲ್ಲೇ ಯಾಕೆ ಹೀಗೆ ಅಪಾಯಕಾರಿಯಾಗಿ ಜಿಗಿಯಬೇಕು? ಇಂಥ ಪ್ರಶ್ನೆಗಳನ್ನೆಲ್ಲ ಮಾ ಕೇವಲ ಶ್‌ಶ್ ಗಳಿಂದಲೇ ನಿಭಾಯಿಸುತ್ತಿದ್ದಳು. ಆ ಅರ್ಧನಿಮಿಷದಲ್ಲಿ ನಮ್ಮತ್ತ ನೋಡಿ ಕುಂಟುತ್ತ ಎದ್ದು ಕೈಬೀಸಿ ತೆವಳಿದ ಅಪ್ಪನ ಮುಖ ಎಷ್ಟೋ ದಿನಗಳ ಕಾಲ ಮಾಸದೆ ಮನಸ್ಸಿನಲ್ಲುಳಿಯುತ್ತಿತ್ತು. ಆ ಮುಖದಲ್ಲಿ ನಗುವೇ ಇರಲಿಲ್ಲ ಎಂಬುದನ್ನು ನೆನೆದರೆ ಭಯವಾಗುತ್ತಿತ್ತು. ಹೀಗೆ ಈ ಅಪವೇಳೆಯಲ್ಲಿ ಆರೇಳು ಸಲ ಅರೆಗನಸಿನಂತೆ ಕಂಡ ಅಪ್ಪ ಮನೆಗೆ ಮತ್ತೆಂದೂ ಬರಲೇ ಇಲ್ಲ. ಕಣ್ಣಾಚೆಗೇ ಅವನು ಅವನು ಅಳಿದುಹೋದ. ವಾರಕ್ಕೊಮ್ಮೆ ತೂಫಾನ್ ಮೇಲ್ ಬರುತ್ತಲೇ ಇತ್ತು. ತಿಂಗಳಿಗೊಮ್ಮೆ ನಿಗದಿತ ದಿನ ಹೋಗುತ್ತಿದ್ದ ಮಾ ನಂತರ ಪ್ರತಿವಾರ ಒಬ್ಬಳೇ ಹೋಗಿ ಬರಿಗೈಲಿ ಮರಳುತ್ತಿದ್ದಳು. ಮಣಭಾರದ ಲೋಹದ ತೂಫಾನ್ ಮೇಲ್, ಶರವೇಗದಲ್ಲಿ ಧೂಳಿನ ಸುಂಟರಗಾಳಿಯನ್ನೆಬ್ಬಿಸಿ ಹೋಗುತ್ತಿತ್ತು. ಅದರಿಂದ ಯಾವ ಆಕೃತಿಯೂ ಹೊರಗೆ ಜಿಗಿಯುತ್ತಿರಲಿಲ್ಲ. ಕೊನೆಕೊನೆಗೆ ರೈಲಿನಿಂದ ಚೀಲವಾದರೂ ಹೊರಗೆಸೆಯಲ್ಪಟ್ಟಿದೆಯೋ ಎಂಬಂತೆ ಇಡೀ ಪ್ಲಾಟಫಾರ್ಮನ್ನು ನೋಡಿ ಬರುತ್ತಿದ್ದಳಂತೆ. ವರುಷಗಟ್ಟಲೆ ಕಾದುಕಾದು ಅವಳೂ ಇಲ್ಲವಾದಳು. ಆದರೆ ತೂಫಾನ ಮೇಲ್ ಮಾತ್ರ ನಿಗೂಢವಾಗಿ ನಸುಕನ್ನು ಸೀಳಿ ಹೋಗುತ್ತಲೇ ಇತ್ತು. ಒಂದು ದಿನ ಮುನ್ನಾ ಅಂತಿದ್ದ ನನ್ನ ಹೆಸರನ್ನು ತೂಫಾನ ಅಂತ ಬದಲಿಸಿಕೊಂಡು ಬಿಟ್ಟೆ. ಆ ಮೂಲಕ ನನ್ನ ನಸುಕಿನ ಲೋಕದ ಅಸೀಮ ಸಾಹಸಿ ಅಪ್ಪ ಮತ್ತು ನಿರ್ಭೀತಿಯಿಂದ ನನ್ನನ್ನು ಬೆಳೆಸಿದ ಮಾ ಇವರಿಬ್ಬರೂ ನನ್ನ ಜತೆಗಿದ್ದಾರೆ ಅಂತನಿಸುತ್ತದೆ.”- ಎಂದು ದಂಡೆಯಿಂದ ಹತ್ತಾರು ಅಡಿ ದೂರದಲ್ಲಿದ್ದ ಹಡಗಿನಲ್ಲಿ ಬೃಹತ್ ಗಾಜಿನ ಪುಟ್ಟ ಸೆಟ್ ಒಂದನ್ನು ಆಣಿಗೊಳಿಸುತ್ತಿದ್ದ ಯೂನಿಟ್ ಹುಡುಗರನ್ನೇ ನೋಡುತ್ತ ಸ್ಟಂಟ್ ಕಲಾವಿದ ತೂಫಾನ್, ಮಾತು ನಿಲ್ಲಿಸಿದ. ಆಸಕ್ತಿಯಿಂದ ಆಲಿಸುತ್ತಿದ್ದ ಮಧುವಂತಿ ಆತನ ಮುಖವನ್ನು ನೋಡದೇ ತಾನೂ ಆ ಹಡಗನ್ನೇ ನೋಡುತ್ತಿದ್ದಳು.

ಕುಲಾಬಾದ ಹಳೆಯ ಪಾಳುಬಿದ್ದ ಮಿಲ್ ಕಾಂಪೌಂಡಿನಲ್ಲಿ ಸಮುದ್ರದ ದಂಡೆಯ ಮೇಲೆ ‘ಧಕ್ಕಾದ’ ಮೇಲೆ ಫೈಟಿಂಗ್ ದೃಶ್ಯದ ಚಿತ್ರೀಕರಣವಿದ್ದರೆ, ಇನ್ನೊಂದು ಬದಿಗೆ ಸಮೂಹ ನೃತ್ಯದ ದೃಶ್ಯವಿತ್ತು. ನೃತ್ಯ ತಂಡದಲ್ಲಿ ಒಬ್ಬಳಾಗಿದ್ದ ಮಧುವಂತಿಗೆ ರಿಹರ್ಸಲ್ ನಡುವೆ, ತೂಫಾನ್‌ನ ಬೈಕ್ ಜಂಪ್ ಮತ್ತು ಗ್ಲಾಸ್‌ಬ್ರೆಕ್ ಇದೆ ಎಂದು ತಿಳಿದದ್ದೇ ಓಡಿ ಬಂದಿದ್ದಳು. ಆರೇಳು ವರುಷಗಳ ಹಿಂದೆ ಅವಳ ಮತ್ತು ಫೈಟರ್ ತೇಜಬಲಿಯ ಪ್ರೇಮವಿವಾಹಕ್ಕೆ ಮುಖ್ಯ ಸಪೋರ್ಟು ಕೊಟ್ಟವನೇ ತೂಫಾನ್. ಹೀಗಾಗಿ ಶೂಟಿಂಗ್ ಸಂದರ್ಭದಲ್ಲಿ ಹೇಗೆ ಅಚಾನಕ್ ಆಗಿ ಒಂದೇ ಲೊಕೇಶನ್‌ನಲ್ಲಿ ಸಿಕ್ಕಾಗೆಲ್ಲ ಬಂದು ತನ್ನ ಸಂಸಾರದ ಚಿಲ್ಲರೆ ಸುಖದುಃಖ ಬೆಳವಣಿಗೆ ಎಲ್ಲಾ ಮಾತಾಡಿ ಹೋಗುತ್ತಿದ್ದಳು. ಈವತ್ತೂ ಹಾಗೇ ಏನೋ ಮುಖ್ಯವಾದದ್ದು ಹೇಳಲೆಂಬಂತೆ ಬಂದವಳು ಇಂದಿನ ಗ್ಲಾಸ್‌ಬ್ರೆಕ್ ದೃಶ್ಯ ಎಂದರೆ ಆಳೆತ್ತರದ ಗಾಜಿನ ಮೂಲಕ ಬೈಕ್‌ನಿಂದ ಜಿಗಿಯುವುದು. ತೂಫಾನ್ ಈಚಿನ ವರ್ಷಗಳಲ್ಲಿ ಗ್ಲಾಸ್‌ಬ್ರೆಕ್ ಪ್ರವೀಣನೆನಿಸಿಕೊಂಡಿದ್ದ. ಇಂದಿನ ದೃಶ್ಯದಲ್ಲಿ ಅವನು ಹಡಗಿನಲ್ಲಿಯೇ ಬೈಕ್ ಓಡಿಸಿಕೊಂಡು ಬಂದು ಅಲ್ಲಿಯ ಪುಟ್ಟ ಗ್ಲಾಸ್ ಸೆಟ್ಟಿನ ಗಾಜು ಮುರಿದು ಜಿಗಿದು ಹತ್ತು ಅಡಿ ಸಮುದ್ರಲಂಘಿಸಿ ದಂಡೆಯಲ್ಲಿ ಬೈಕಿನೊಂದಿಗೆ ಲ್ಯಾಂಡ್ ಆಗಬೇಕಿತ್ತು. ಹಡಗು ಮತ್ತು ದಂಡೆಯ ನಡುವೆ ಅಲೆಗಳನ್ನೆಬ್ಬಿಸುತ್ತಿದ್ದ ಸಮುದ್ರ ಕಳವಳ ಉಕ್ಕಿಸುತ್ತಿತ್ತು. ಹೀಗಾಗಿ ಏನೋ ಹೇಳಲು ಬಂದವಳು ಅನುಮಾನದಲ್ಲಿ ನಿಂತಾಗ ತೂಫಾನ್‌ನೇ ಮುಂದಾಗಿ – “ಏನೇ ಮಧು. ಪ್ರತಿ ಸಲವೂ ನನ್ನ ಹೆಸರು ತೂಫಾನ್ ಹೇಗೆ ಬಂತು ಅಂತ ಕೇಳ್ತಿದ್ದೆಯಲ್ಲ. ತಗೋ ಹೇಳ್ತೇನೆ ಕೇಳು” ಎಂದು, ಎಂದೂ ಮಾತಾಡದವನಂತೆ, ಈಗ ಬಿಟ್ಟರೆ ಮತ್ತೆಂದೂ ಸಮಯ ಸಿಗದವನಂತೆ, ಈ ಬಚ್ಚಿಟ್ಟ ಗಾಯದಂತಿದ್ದ ತೂಫಾನ್‌ಮೇಲ್‌ನ ಸಂಗತಿಯನ್ನು ಹೇಳಿ ಮುಗಿಸಿದ್ದ.ಮುಂಚಿತವಾಗೇ ತೋಳು ತೊಡೆ ಭುಜ ಎಲ್ಲ ಕಡೆ ರಕ್ಷಣೆಯ ಕವಚ ತೊಟ್ಟುಕೊಂಡು ಯಂತ್ರ ಮಾನವನಂತೆ ಕೂತಿದ್ದ ತೂಫಾನ್ – ತನ್ನ ಕಥೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಬ್ಬಿಬ್ಬಾಗಿರುವಂತಿದ್ದ ಮಧುವಂತಿಯನ್ನು “ಹೋಗು ಹೋಗು… ಡಾನ್ಸ್ ಮಾಸ್ಟರ್ ಸೀಟಿ ಹೊಡೀತಿದಾಳೆ ನೋಡು. ನಿಮ್ಮ ಹೀರೋಯಿನ್ ಬರೋತನಕ ವನ್ ಟೂ ಥ್ರೀ ಫೋರ್ ವನ್ ಟೂ ಥ್ರೀ ಫೋರ್… ಎಂದು ಡ್ರಿಲ್ ಮಾಡ್ತಾನೇ ಇರಿ. ಹೋಗು ಹೋಗು” ಎಂದು ನಗುತ್ತ ಬೆನ್ನು ತಟ್ಟಿದ. ಮಧುವಂತಿ “ನಿನ್ನ ದೋಸ್ತ್ ತೇಜ್‌ಬಲಿ ನನ್ನ ಜೀವಾ ತಿಂತಿದಾನೆ. ಅದನ್ನೆಲ್ಲಾ ಆಮೇಲೆ ಹೇಳ್ತೇನೆ. ಸುನೀಲ್ ಶೆಟ್ಟಿಯ ಚಿತ್ರಗಳೆಲ್ಲಾ ಗೋತಾ ಹೊಡೀತಿವೆಯಲ್ಲಾ. ಎಲ್ಲಾ ಲವ್‌ಸ್ಟೋರಿಗಳೇ ಈಗ. ಫೈಟಿಂಗ್ ಇರೋದೇ ಕಡಿಮೆ, ಹೀಗಿದ್ದಾಗ ಕೆಲಸ ಬಂದ್ರೂ – ಇಲ್ಲಾ ಮಾಡೋದಿಲ್ಲ – ಅಂತಾನೆ. ಇನ್‌ಶೂರೆನ್ಸ್ ಇಲ್ಲ, ಮೆಡಿಕಲ್ ಇಲ್ಲ, ಸುಮ್ನೆ ಯಾಕೆ ಜೀವ ಜೋಖಂ ಮಾಡೋದು ಅಂತ ಮನೇಲೆ ಕೂತಿರ್ತಾನೆ. ಇರಲಿ ಆಮೇಲೆ ಹೇಳ್ತೇನೆ” ಎಂದಳು. “ಲಂಚಲ್ಲಿ ನಾನ್‌ವೆಜ್ ತಗೋ. ಹಾಂ? ನೀನು ತಿನ್ನೋದಿಲ್ಲ ಗೊತ್ತು. ಆದರೆ ನಾನು ಪ್ಯಾಕ್ ಮಾಡ್ಕೊಂಡು ಹೋಗ್ತೇನೆ. ಸೋನಿಗೆ ಯೂನಿಟ್‌ನ ನಾನ್‌ವೆಜ್ ಅಂದ್ರೆ ಪಂಚಪ್ರಾಣ” – ಎಂದು ಎದ್ದು ನಿಂತಳು.

ಎದ್ದು ನಿಂತಾಗ ರಾಜಸ್ತಾನಿ ಘಾಗ್ರಾ ಚೋಲಿಯಲ್ಲಿ ಅವಳ ಹೊಟ್ಟೆ ದೊಡ್ಡದಾಗಿ ಕಂಡು – “ಏನೇ, ಪ್ರೊಡಕ್ಷನ್ ನಂಬರ್ ಟೂನಾ? ಫೈಟಿಂಗ್ ಬಿಟ್ಟು ತೇಜ್‌ಬಲಿ ಮನೇಲಿ ಬೆಡ್‌ರೂಂ ಸೀನ್ ಶುರುಮಾಡಿದಾನೇನೆ?” – ಎಂದ. ತೂಫಾನ್‌ನನ್ನು ತಿವಿದು – “ಥೂ, ಬೇರೆ ಕೆಲಸ ಇಲ್ವಾ ನನಗೆ? ಇರೋ ಒಂದು ಮರೀನ ಬೆಳೆಸೋಕೆ ಈ ಮಧ್ಯವಯಸ್ಸಿನಲ್ಲಿ ಈ ಬಿಸಿಲಿನಲ್ಲಿ ಈ ಹಗಲುವೇಷ ಹಾಕ್ಕೊಂಡು ದಿನಕ್ಕೊಂದು ಸೊಲ್ಲಿಗೆ ನೂರು ಸಲ ಕುಂಡೆ ಅಲ್ಲಾಡಿಸ್ತಿದೀನಿ” – ಎಂದು ನಕ್ಕೂ “ಎಲ್ಲಿ ತನಕ ಅಲ್ಲಾಡೋಕೆ ಆಗುತ್ತೋ ಅಲ್ಲಿ ತನಕಾ ನಡೀಲಿ. ಊಟಿ ಗೀಟಿ ಔಟ್‌ಡೋರ್ ಇದ್ರೂ ಈಗ ರೆಡಿ ನಾನು. ತೇಜ್‌ಬಲಿ ಮನೆ ನೋಡ್ಕೊಳ್ಳಲಿ. ಸೋನಿಗೆ ಇಂಗ್ಲಿಷ್ ಮೀಡಿಯಂಗೆ ಹಾಕಬೇಕು…” – ಎಂದು ಕುಪ್ಪಳಿಸುತ್ತ ಇಳಿದು ಮಧುವಂತಿ ನೃತ್ಯದ ಫೀಲ್ಡಿಗೆ ಓಡಿದಳು. ಅವಳ ಆ ಬಲವಂತದ ಚಿಮ್ಮುವಿಕೆಯಲ್ಲಿ ತನ್ನ ವಯಸ್ಸನ್ನು ಕಡಿಮೆ ಗೊಳಿಸುವ, ನೃತ್ಯವೃತ್ತಿಯಲ್ಲಿ ಉಳಿಯುವ ಹತಾಶೆ ಯತ್ನ ಕಂಡಂತಾಗಿ ತೂಫಾನ್‌ಗೆ ಬೇಜಾರಾಯಿತು. ಭಾರವಾಗಿ ಓಡುತ್ತ ಮಧುವಂತಿ ಡಾನ್ಸ್ ಮಾಸ್ಟರ್ ಸೀಟಿಗೆ ಅಲ್ಲಾಡುತ್ತಿದ್ದ ಐವತ್ತು ನರ್ತಕಿಯರ ಸಾಲನ್ನು ಸೇರಿಕೊಂಡಳು.

ತನ್ನ ಶಾಟ್‌ಗೆ ಮೊದಲು ಒಂದು ಲಿಂಬು ಸೋಡಾ ಕುಡಿಯುವ ಪರಿಪಾಠವಿದ್ದ ತೂಫಾನ್‌ಗೆ ಯೂನಿಟ್ ಹುಡುಗ “ಬಾಸ್, ಸೋಡಾ ಒಡೆಯಲೇ?” – “ಬೇಡ, ತುಸು ತಾಳು” – ಎಂದ ತೂಫಾನ್‌ನ ಕವಿಯಲ್ಲಿ ಮೇಕಪ್ ಮಹಾಲೆ “ತೂಫಾನ್, ಗ್ಲಾಸ್‌ಬ್ರೇಕ್‌ಗೆ ಎಷ್ಟು ಮಾತಾಡಿದ್ದೀ. ಎಂದಿನಂತೆ ಬರೇ ಇಪ್ಪತ್ತು ಸಾವಿರವೇ? ಇದು ಬರೀ ಗ್ಲಾಸ್‌ಬ್ರೇಕ್ ಅಲ್ಲಪ್ಪಾ ನೀರ ಮೇಲಿಂದ ಜಂಪ್ ಸಹಾ ಉಂಟಲ್ಲಾ, ಡಬಲ್ ಕೇಳಬೇಕು ನೀನು. ಹೆಚ್ಚು ಕಡಿಮೆ ಆದರೆ ಈ ಇಪ್ಪತ್ತು ಸಾವಿರವೂ ಆಸ್ಪತ್ರೆಗೇ ಅರ್ಪಿಸುತ್ತೀ ತಾನೆ? ಆಮೇಲೆ ಬ್ಯಾಂಡೇಜು ಬಿಗಿದುಕೊಂಡು, ಪ್ಲಾಸ್ಟರ್ ಹಾಕಿಕೊಂಡು ವಾರಗಟ್ಟಲೆ ಆಸ್ಪತ್ರೆಯ ಬ್ರೆಡ್ಡು ತಿನ್ನುತ್ತೀ. ಕೇಳು. ಡಬಲ್ ಕೇಳು. ಈಗಲೂ ವೇಳೆ ಮಿಂಚಿಲ್ಲ. ನಿನ್ನನ್ನು ಬಿಟ್ಟರೆ ಗ್ಲಾಸ್‌ಬ್ರೇಕ್‌ಗೆ ಮತ್ತ್ಯಾರೂ ಈಗ ಸಿಗುವಂತಿಲ್ಲ. ಕೇಳು. ಮೂವತ್ತಾದರೂ ಕೇಳು… ಹೂಂ…” ಎಂದು ಪುಸಲಾಯಿಸತೊಡಗಿದಂತೆ – ರೇಗಿ – ತೂಫಾನ್ “ಚುಪ್‌ರೇ. ತಲೆ ತಿನ್ನಬೇಡ. ನಾನೇನು ಮೈಮುಟ್ಟಿದ ಮೇಲೆ ರೇಟು ಹೆಚ್ಚು ಮಾಡುವ ಕೆನಡಿ ಬ್ರಿಜ್ಜಿನ ಹುಡುಗಿ ಅಂದುಕೊಂಡೆಯಾ? ಮಾತು ಆದ ಮೇಲೆ ಮುಗೀತು. ಅಷ್ಟೂ ನೀಯತ್ತು ಇಲ್ಲದಿದ್ರೆ ಹ್ಯಾಗೆ?” – ಎಂದು ಎರಡೂ ಕೈಗಳನ್ನು ಗಾಳಿಯಲ್ಲಿ ಗೋಲಾಕಾರವಾಗಿ ತಿರುಗಿಸುತ್ತ ಭುಜದ ಸ್ನಾಯುಗಳನ್ನು ಸಡಿಲು ಮಾಡಿಕೊಳ್ಳತೊಡಗಿದ.

ಮಹಾಲೆ ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಪ್ರತಿ ಗ್ಲಾಸ್‌ಬ್ರೆಕ್ ನಂತರವೂ ಆಂಬ್ಯುಲೆನ್ಸು, ಸ್ಟ್ರೆಚರು, ಗಾಯ, ಆಸ್ಪತ್ರೆ ಅಂತ ಮಲಗುವ ಕಾಲ ಒಂದಿಷ್ಟು ಇದ್ದೇ ಇರುತ್ತಿತ್ತು. ‘ಬಾದ್‌ಶಾಹ್’ದಲ್ಲಿ ಶಾಹ್‌ರುಖ್‌ನ ಡಬಲ್ ಆಗಿ ಮೂಳೆ ಮುರಿದುಕೊಂಡಿದ್ದಾಗ, ತೇಲಿಗಲ್ಲಿಯ ಆ ಖೋಲಿಯಲ್ಲಿ ಮಲಗಿದ್ದ ತೂಫಾನ್‌ನ ಯೋಗಕ್ಷೇಮ ಕೇಳಲು ಒಂದು ನಡುರಾತ್ರಿ ಗಪ್‌ಚುಪ್ ಆಗಿ ಶಾಹ್‌ರುಖ್ ಮಾರುವೇಷದ ರಾಜನಂತೆ ಬಂದು ಹೋದದ್ದು ಬಿಟ್ಟರೆ – ಉದ್ಯಮದ ಯಾರೂ ಅವನ ಕಡೆ ತಪ್ಪಿಯೂ ನೋಡಲು ಬಂದಿರಲಿಲ್ಲ. ಈ ಲೈನಿನ ಮಜವೇ ಅದು. ಒಂದು ಅದ್ಭುತ ಗ್ಲಾಸ್‌ಬ್ರೆಕ್. ನಂತರ ಅಜ್ಞಾತವಾಸ. ತೂಫಾನ್ ಮತ್ತೆ ಮತ್ತೆ ಯೋಚಿಸಿದ್ದಿದೆ. ಈ ಬೈಕ್ ಸ್ಟಂಟಿನ ನಿಜವಾದ ಮಜಾ, ಅಸಲೀ ಮಜಾ ಇರೋದು ಎಲ್ಲಿ? ಶಾಟ್‌ಗೆ ಮುನ್ನವೇ ಮನಸ್ಸನ್ನು ಕವಿಯುವ ವಿಚಿತ್ರ ಶೂನ್ಯವಿದೆಯಲ್ಲ, ಅದೆ? ಅಥವಾ ನಂತರದ ಹಗುರೇ? ಅಥವಾ ಯೋಚನೆಯಿಲ್ಲದೆ ಆಗಿಹೋಗುವ ಸ್ಟಂಟ್‌ನ ಕ್ಷಣವೆ? ಅಸಲೀ ಮಜಾ ಯಾವುದು? ಮಧುವಂತಿಯ ಗಂಡ ಫೈಟರ್ ತೇಜ್‌ಬಲಿಯ ಅಭಿಪ್ರಾಯವೇ ಬೇರೆ. ಅವನ ಪ್ರಕಾರ ಬಚಾವಾಗುಳಿಯುವುದೇ ಅಸಲಿ ಮಜಾ! ಬಚಾವಾದೆ ಅನ್ನೋದು ಮನಸಿಗೆ ತಿಳಿಯೋದಕ್ಕಿಂತ ಮೊದಲು ದೇಹಕ್ಕೆ ತಿಳಿದು ಹೋಗುತ್ತದೆಯಲ್ಲ, ಅದು, ಅದು ಅಸಲೀ ಮಜಾ ಎನ್ನುತ್ತಾನೆ ಈತ. ಅವನು ಹಾಗೆಂದಾಗೆಲ್ಲ ತೂಫಾನ್ ಮೇಲ್ ತನ್ನ ಮೈಯಿಂದ ಹಾದು ಹೋದ ಹಾಗೆ ಭಾಸವಾಗುತ್ತಿತ್ತು. ಅದು ಕಣ್ಣಿಂದ ಮರೆಯಾಗುವುದರೊಳಗೆ, ತನ್ನ ಕರ್ತವ್ಯದಲ್ಲಿ ಕಿಂಚಿದೂನವೂ ಆಗದ ಘನತೆಯಲ್ಲಿ ಬಿದ್ದಲ್ಲಿಂದ ತೆವಳುತ್ತ ಎದ್ದ ಅಪ್ಪನ ಆಕೃತಿ ಮೆಲ್ಲಗೆ ಮೂಡುತ್ತಿತ್ತು.

ಹಡಗು ಮತ್ತು ದಂಡೆಯ ಅಂತರವನ್ನು ತದೇಕಚಿತ್ತನಾಗಿ ನೋಡುತ್ತಿದ್ದ ತೂಫಾನ್‌ನ ಗಮನ ಸೆಳೆಯುವಂತೆ ದೂರದಲ್ಲೊಂದು ಗಲಾಟೆ ಕೇಳಿಬಂತು. ಹೊರಳಿ ನೋಡಿದರೆ ನೃತ್ಯದ ಫೀಲ್ಡಿನ ಕಡೆಯಿಂದ ಮಧುವಂತಿ ಜೋರಾಗಿ ಕೂಗಿಕೊಂಡು ದೃಶ್ಯವೊಂದರ ತಾಲೀಮಿನಂತೆ ಈ ಕಡೆ ಓಡಿ ಬರುತ್ತಿದ್ದಳು. ಅವಳನ್ನು ಅಟ್ಟಿಸಿಕೊಂಡು, ಏನನ್ನೋ ದೊಡ್ಡಕ್ಕೆ ಅರಚುತ್ತ ಒಬ್ಬ ಬರುತ್ತಿದ್ದ. ಇದ್ಯಾವ ದೃಶ್ಯವಪ್ಪ ಎಂದು ಕುತೂಹಲವಾಗುತ್ತಿದ್ದಂತೆ ಜನ ತಮ್ಮತಮ್ಮ ಕೆಲಸಬಿಟ್ಟು ಅವರಿಬ್ಬರ ಹಿಂದೆಯೇ ತಮಾಷಾ ನೋಡುವವರಂತೆ ಗುಂಪಾಗಿ ಚದುರುತ್ತ ಓಡಿ ಬರತೊಡಗಿದರು. ಅರೇ ಅವನು ತೇಜಬಲಿಯಲ್ಲವೆ? ರಿಸ್ಕೇ ಬೇಡವೆಂದು ಮೈಗಳ್ಳನಾಗಿ ಮನೇಲಿ ಕುಳಿತವನು, ಇಲ್ಯಾಕೆ ಬಂದ? ಇದೆಂಥ ಧಾಂದಲೆ ಎಬ್ಬಿಸಿದ್ದಾನೆ. ಗಂಡ ಹೆಂಡಿರ ಈ ಬಹಿರಂಗ ನಾಟಕ ತನ್ನೆಡೆಗೇ ಬರುತ್ತಿದೆಯಲ್ಲ ಎನಿಸಿ ಎದ್ದು ನಿಲ್ಲುವುದರೊಳಗೆ ಓಡುವ ಪ್ರೇಕ್ಷಕ ವೃಂದವನ್ನು ಬೆನ್ನಿಗೆ ಕಟ್ಟಿಕೊಂಡೇ ಏದುಸಿರುಬಿಡುತ್ತ ಇಬ್ಬರೂ ಎದುರು ನಿಂತು ಬಿಟ್ಟರು.

“ಹೇಳು, ಹೇಳು. ಮಾತು ಮಾತಿಗೆ ತೂಫಾನ್‌ಗೆ ಹೇಳ್ತೇನೆ ಅಂತೀಯಲ್ಲ. ಏನ್ ಹೇಳ್ತೀಯೋ ಹೇಳು. ಇಲ್ಲೇ ನನ್ನ ಸಮ್ಮುಖದಲ್ಲೇ ಎಲ್ಲ ಆಗಿಹೋಗಲಿ,” ಎಂದು ಕೂಗುತ್ತಾ ತೇಜಬಲಿ ಒಂದು ಕೈಯಿಂದ ‘ಮಾತಾಡು’ ಅನ್ನುವಂತೆ ಅವಳನ್ನು ನೂಕಿದ. ಯಂತ್ರಮಾನವನ ದಿರಿಸಿನಲ್ಲಿ ವಿಚಿತ್ರವಾಗಿ ನಿಂತಿದ್ದ ತೂಫಾನ್ – “ಅರೆ… ಅರೆ… ಶ್‌ಶ್ ಮೆಲ್ಲಗೆ. ಏನಿದು ತಮಾಷಾ – ಎಲ್ಲರೆದುರು… ಶ್‌ಶ್” ಎಂದು ಎರಡೂ ಕೈಗಳಿಂದ ದನಿ ತಗ್ಗಿಸುವಂತೆ ಕೋರಿ, ನೆರೆದವರಿಗೆ “ನಾನು ನೋಡಿಕೊಳ್ಳುತ್ತೇನೆ, ನೀವೆಲ್ಲ ನಿಮ್ಮ ನಿಮ್ಮ ಕೆಲಸಕ್ಕೆ ಹೋಗಿ” – ಎನ್ನುವಂತೆ ಹುಬ್ಬು ಹಾರಿಸಿದ.

ತೇಜಬಲಿ ಅವರೆಲ್ಲ ಚದುರಿ ಹೋಗುವುದನ್ನು ಕಾಯದೆ ಮಧುವಂತಿಯನ್ನು “ಹೇಳು, ಹೇಳು” ಎಂದು ಅಲ್ಲಾಡಿಸಿದ. ಮಧುವಂತಿ “ತೂಫಾನ್, ದಿನಾ ಮನೆಯಲ್ಲಿ ನನ್ನ ಜೀವ ತಿಂತಿದ್ದವನು ಈಗ ನೋಡು, ಹೇಗೆ ಇಲ್ಲಿ ಬಂದು ಯೂನಿಟ್ಟಿನವರೆದುರು ನನ್ನನ್ನು ಹರಾಜಿಗೆ ಹಾಕ್ತಿದಾನೆ. ಮಾತು ಮಾತಿಗೆ ಬೇಶರಮ್ ಲಜ್ಜೆಗೆಟ್ಟವಳೇ ಎಂದು ಕೂಗುವುದನ್ನು ಕೇಳಿಕೊಂಡೇ ಬಂದಿದ್ದೀನಿ. ಆದರೆ ನಿನ್ನೆ, ನಿನ್ನೆ ರಾತ್ರೆ ಏನಾಯ್ತು ಗೊತ್ತೆ. ನನ್ನ ಐದು ವರ್ಷದ ಸೋನಿ ‘ಮಮ್ಮೀ ಶರಮ್ ಅಂದರೆ ಏನು? ನಿನಗ್ಯಾಕೆ ಶರಮ್ ಇಲ್ಲ?’ ಎಂದು ಕೇಳಿದಳು ಗೊತ್ತೆ? ಅವಳಿಗೆ ಏನು ಹೇಳಬೇಕು ನಾನು? ಅವಳೆದುರು ನನ್ನನ್ನು ಹೀಗೆ…” – ಎಂದು ಬಿಕ್ಕತೊಡಗಿದಳು. ಇದಕ್ಕೇ ಕಾಯ್ತಿದ್ದವನಂತೆ ತೇಜಬಲಿ “ಇದೇ… ಇದೇ… ನಾನು ಹೇಳಿದ್ದು. ನೋಡು ತೂಫಾನ್ ಹೇಗೆ ಎಲ್ಲರೆದುರು ಬೇಶರಮ್ ಆಗಿ ಅಳ್ತಿದಾಳೆ ನೋಡು. ಲಜ್ಜೆ ಅನ್ನೋದೇ ಇಲ್ಲ. ಇದೇ, ಇದೇ…” ಎಂದು ಸಣ್ಣದನಿಯಲ್ಲಿ ಹಲ್ಲು ಕಚ್ಚಿದ. ತೂಫಾನ್ “ಬಸ್ ಚುಪ್” ಎಂದ. ಅವಳ ಅಳು ಮತ್ತು ಅವನ ಅಟ್ಟಹಾಸ ಎರಡೂ ಒಮ್ಮೆಗೇ ಮಂದವಾದವು.

ಮಧುವಂತಿ ಈಗ ಸ್ಪಷ್ಟವಾಗಿ ಮಾತನಾಡತೊಡಗಿದಳು. “ಸಾರಿ ತೂಫಾನ್, ನನಗೆ ನಿನ್ನದೇ ಜೀವನ್ಮರಣದ ಜಂಪ್ ಇದೆ. ಈಗ ನಿನ್ನ ತಲೆ ಹಾಳಮಾಡಬಾರ್ದು ನಾವು. ಆದರೆ ಈ ಮುಠ್ಠಾಳ ನನ್ನ ಡಾನ್ಸ್ ರಿಹರ್ಸಲ್ಲನ್ನು ಅಲ್ಲಿ ಅಡಗಿ ಕೂತು ನೋಡುತ್ತಿದ್ದ. ಹೇಳು ಕಳ್ಳತನಾ ಮಾಡ್ತಿದೀನಾ ಇಲ್ಲಿ ನಾನು ಹೀಗೆ ಅವನು ಕದ್ದು ಹೊಂಚು ಹಾಕಿ ನನ್ನ ಮೇಲೆ ನಿಗಾ ಇಡಲಿಕ್ಕೆ? ಛೇ….ಈಗ ಬೇಡ ತೇಜ್‌ಬಲಿ. ಆಮೇಲೆ ಮಾತಾಡೋಣ. ಗ್ಲಾಸ್‌ಬೈಕ್ ಮುಗೀಲಿ ಪ್ಲೀಸ್….” ಇಷ್ಟು ಅಂದವಳೇ ಹೊರಳಿ ಹೊರಡಲನುವಾದಳು. ತೇಜ್‌ಬಲಿ “ಸಾಕು ನಿಲ್ಲೆ” ಎಂದದ್ದೇ ನಿಂತುಬಿಟ್ಟಳು. “ತೂಫಾನ್…ನಿನಗೆ ಗೊತ್ತಿಲ್ಲ. ಪ್ರತಿ ದಿನ ನಾಟಕ ಆಡ್ತಾಳೆ ಅವಳು. ನಾನು ಇವಳನ್ನು ಮುಟ್ಟಿ ಸಮೀಪ ಎಳಕೊಂಡರೆ ನಾಚಿದಂತೆ ಮಾಡ್ತಾಳೆ. ಹೇಗೆ ನಾಚಿದಂತೆ ಮಾಡ್ತಾಳೆ ಅಂತಿ. ಪಿಕ್ಚರಲ್ಲಿ ಪ್ರಥಮರಾತ್ರಿ ತಲೆಯ ಮೇಲಿನ ಸೆರಗನ್ನು ಹೀರೋ ಸರಿಸಿದಾಗ ಹೀರೋಯಿನ್ ಲಜ್ಜೆಯಿಂದ ಕಣ್ಮುಚ್ತಾಳಲ್ಲ ಹಾಗೆ. ಸುಳ್ಳು. ಎಲ್ಲಾ ಸುಳ್ಳು. ನನಗೇನೂ ತಿಳಿಯೋದಿಲ್ಲ ಅಂದ್‌ಕೊಂಡಿದಾಳೆ. ಸುಳ್ಳು ಲಜ್ಜೆ ಅದು. ಹೀರೋಯಿನ್ ಆಗೋ ಕನಸು ಅದು. ಮತ್ತೆ ಮತ್ತೆ ಆ ಸೀನನ್ನು ಅಭಿನಯಿಸುತ್ತಾಳೆ. ಹೀರೋಯಿನ್ ಆಗೋದಂತೂ ಹಣೇಲಿ ಬರೆದಿಲ್ಲಾ. ಮೂರು ಕಾಸಿನ ಎಕ್‌ಸ್ಟ್ರಾ ಆಗಿದಾಳೆ. ಗಂಡನ ಕಣ್ಣಿಗೇ ಮಣ್ಣೆರಚ್ತಾಳೆ, ನಾಚ್ತಾಳೆ….”ಮಧುವಂತಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಕೂತಳು. ಅವಳನ್ನು ನೋಡುವುದಿರಲಿ, ಅಲ್ಲಿ ಕಣ್ತೆರೆದಿರುವುದೂ ದುಸ್ಸಾಧ್ಯವಾಗಿ ತೂಫಾನ ಮುಖ ತಪ್ಪಿಸಿ ದೂರದ ನಿಶ್ಯಬ್ದ ನಿರ್ಜನ ಹಡಗುಗಳನ್ನು ನೋಡಿದ. ಅದನ್ನೂ ತಪ್ಪಿಸಿ ತನ್ನ ಕಾಲಿನ ಲೋಹದ ಪಾದರಕ್ಷೆಯ ನಟ್ಟುಬೋಲ್ಟುಗಳನ್ನು ಸವರಿ ಬಿಗಿ ಮಾಡತೊಡಗಿದ. ಖಾಸಗಿ ಸಂಕಟವನ್ನು ಬಹಿರಂಗವಾಗಿ ಹೇಳಿಕೊಂಡೇ ಅಧಿಕೃತಗೊಳಿಸುತ್ತಿದ್ದ ತೇಜಬಲಿಯ ಆವೇಶವನ್ನು ಮೆಲ್ಲಗೆ ಸುಸಂಗತಗೊಳಿಸುವಂಥ ಮೌನ ಅಲ್ಲಿತ್ತು. ಈ ಮೌನದ ಮೇಲಿನ ಹಿಡಿತವೆಲ್ಲಿ ತಪ್ಪಿ ಹೋದೀತೋ ಎಂಬಂತೆ ಮತ್ತೆ ಬಾಯ್ಬಿಟ್ಟ-

“ಆಗಿನಿಂದ ನೋಡ್ತಿದೇನೆ ಇಲ್ಲಿ. ಆ ಡುಮ್ಮಿ ಡಾನ್ಸ್ ಮಾಸ್ಟರ್ ರಿಪೀಟ್ ಎಂದು ಸೀಟಿ ಹೊಡೆದಾಗೆಲ್ಲ ಎಲ್ಲರ ಜತೆ ದುಪಟ್ಟಾ ಇಲ್ಲದ ಎದೆಯನ್ನಷ್ಟೇ ಹಿಂದು ಮುಂದು ಜೋರಾಗಿ ಕುಲುಕಿಸುತ್ತಿದ್ದೀ. ಸ್ಟಾಪ್ ಅಂದಾಗ ನಿಲ್ಲಿಸ್ತೀ. ಮತ್ತೆ ಸೀಟಿ ಹೊಡೆದದ್ದೇ ಮತ್ತೆ ವನ್ ಟೂ ಥ್ರೀ ಫೋರ್ ಎದೆ ಕುಲುಕೋದು. ‘ಇನ್ನೂ ಜೋರಾಗಿ’ ಅಂತ ಡುಮ್ಮಿ ಹೇಳಿದರೆ ಶ್ವಾಸ ಬಿಟ್ಟು ಬಿಟ್ಟು ಜೋರಾಗಿ ಕುಲುಕೋದು.”

ತಡೆಯಲಾಗದೆ ಮಧುವಂತಿ ಮುಖ ಮುಚ್ಚಿಕೊಂಡೇ “ಛೀ” ಎಂದು ಕೈ ತೆಗೆದು, ಅವನ ಕಣ್ಣಲ್ಲಿ ಕಣ್ಣಿಟ್ಟು “ನನ್ನ ಕೆಲಸಾ ಅದೂ ಕೆಲಸಾ!” ಎಂದು ಚೀರಿದಳು.

“ಹಾಗಾದ್ರೆ ಮನೇಲ್ಯಾಕೆ ನಾಚ್ತೀ, ಬೇಕ ಬೇಕೂಂತಲೇ, ಸುಳ್ಳು ಸುಳ್ಳೇ?” ಎನ್ನಲು ಹೊರಟ ತೇಜಬಲಿಗೆ ಹಠಾತ್ತನೆ ಹೇಳಬಯಸಿದ್ದನ್ನು ಹೇಳಲೇ ಆಗುತ್ತಿಲ್ಲವಲ್ಲ ಎಂಬಂಥ ಹತಾಶೆ ಉಕ್ಕಿ ಬಂದು, ಬಾಯಿ ನಿಲ್ಲಿಸಿ ಎರಡೂ ಕೈಯಿಂದ ಏನೋ ಹಾವಭಾವ ಮಾಡಿ ಅದೂ ಸಾಲದೆ ಉಮ್ಮಳ ಉಕ್ಕಿ ಬಿಕ್ಕತೊಡಗಿದ. “ಅರೇ… ಅರೇ… ತೇಜಬಲೀ… ತೇಜಬಲೀ… ಫೈಟರ್ ನೀನು ಹೀಗೆ ಇಮೋಶನಲ್ ಆದ್ರೆ ಹ್ಯಾಗೋ… ಛೀ” – ಎಂದ ತೂಫಾನ್‌ನ ಲೋಹ ಕವಚದ ಭುಜದ ಮೇಲೊರಗಿ ತೇಜಬಲಿ ಅಳತೊಡಗಿದ. ಲೈಟ್ ಹುಡುಗರೆಲ್ಲ “ತೇಜಬಲಿ ಅಳ್ತಿದಾನೆ… ತೇಜಬಲಿ ಅಳ್ತಿದಾನೆ” – ಎಂದು ಕೂಗುತ್ತಾ ಬಂದರು. ಒಂದು ಬಗೆಯ ಬಿಳಿಚಿಕೊಂಡ ನಗುವಿನಲ್ಲಿ ಮಧುವಂತಿ “ಹೆಂಡ್ತೀ ಮೇಲೆ ಕದ್ದು ನಿಗಾ ಇಡಲಿಕ್ಕೆ ಬಂದಿದ್ದ. ಗಂಡ್ಸಂತೆ ಗಂಡಸು. ಅಳ್ತಾನೆ ನೋಡು ಹೇಗೆ ಮೀನಾಕುಮಾರಿ ಥರಾ” ಎಂದು ಗೊಣಗುತ್ತ ತೇಜಬಲಿಯ ಕಿವಿಯ ಬಳಿ ಹೋಗಿ “ಪಬ್ಲಿಕ್‌ನಲ್ಲಾದರೂ ನಾಚ್ಕೆ ಇಟ್ಕೋ” – ಎಂದು ಪಿಸುಮಾತಿನಲ್ಲಿ ಚೀರಿ ಅವನನ್ನು ತೂಫಾನ್‌ನ ಬಾಹುನಿಂದ ದೂರ ಸರಿಸಿದಳು.

ನಾಲ್ಕು ಜನ ಬಂದು ತೇಜ್‌ಬಲಿಯನ್ನು ರಮಿಸುತ್ತ ಕ್ಯಾಂಟೀನ್ ಕಡೆಗೆ ಕರೆದೊಯ್ದರು. ಮಧುವಂತಿ ತನ್ನ ತನ್ನ ರಾಜಸ್ತಾನೀ ಘಾಗ್ರಾದ ನಿರಿಗೆಗಳನ್ನೆಲ್ಲ ಸರಿಪಡಿಸಿ ಕೊಡವಿಕೊಂಡು, “ತೂಫಾನ್, ಗುಡ್‌ಲಕ್,” – ಎಂದು ಕೈಕುಲುಕಿ “ಆಮೇಲೆ ಎಲ್ರೂ ಒಟ್ಟಿಗೆ ಖಿಮಾಪಾವ್ ತಿನ್ನುವಾ” – ಎಂದು ತನ್ನೆಲ್ಲಾ ಲವಲವಿಕೆಯನ್ನು ಅಮೂಲಾಗ್ರವಾಗಿ ತನ್ನೊಳಗೆ ತರಲು ಯತ್ನಿಸುತ್ತ ಲಂಗವನ್ನು ಎರಡೂ ಕೈಗಳಲ್ಲಿ ತುಸುವೇ ಎತ್ತಿ ಹಿಡಿದು ಭಾರವಾಗಿ ಚಿಮ್ಮುತ್ತ ತನ್ನ ತಂಡದ ಕಡೆಗೆ ಓಡಿದಳು.

ಅವಳನ್ನು ನೋಡುತ್ತಿರುವಂತೆ ತೂಫಾನ್‌ಗೆ, ನಸುಕಿನಲ್ಲಿ ತನ್ನನ್ನು ಎಬ್ಬಿಸಿ ಅಪ್ಪನ ಮಿಂಚಿನ ದರ್ಶನಕ್ಕೆ ಆಣಿಗೊಳಿಸಿ ಹೊರಡಿಸುತ್ತಿದ್ದ ಮಾ, ಆಗ, ಇದೇ ವಯಸ್ಸಿನವಳಿದ್ದಳು ಎಂದು ಹೊಳೆದುಹೋಯಿತು. ತೇಜಬಲಿಯ ಜೀವವನ್ನು ಹಿಂಡುತ್ತಿರುವ ಈ ಮಧುವಂತಿಯ ಲಜ್ಜೆ ಎಂಥದು? ತನಗೀಗ ಮನಸ್ಸಿನ ದೂರದಲ್ಲಿ ಹಿರೀಕಳಾಗಿ ತೋರುವ ಮಾ, ನಿಜಕ್ಕೂ ಈ ಮಧುವಂತಿಯಷ್ಟೇ ಇದ್ದಳಲ್ಲವೆ? ಅವಳ ಲಜ್ಜೆಯ ಹೋರಾಟ ಅದೆಂಥದಿತ್ತು? ಒಮ್ಮೊಮ್ಮೆ ಟೇಕ್‌ನಲ್ಲಿ ಬೈಕಿನ ಜಿಗಿತದ ಹದ ತಪ್ಪಿ ಕರ್ಕಶವಾಗಿ ನಾನು ಬೀಳುತ್ತೇನಲ್ಲ, ಆಗ ನಾನು ಮೆಲ್ಲಗೆ ಏಳುವಾಗ, ಉಳಿದವರು ಬಂದು ಬೈಕನ್ನು ಎತ್ತಿ ನಿಲ್ಲಿಸಿ ಕೊಡುತ್ತಾರಲ್ಲ, ಆ ಮೌನದಲ್ಲಿ ಯಾಕೆ ಲಜ್ಜೆ ಇರುವುದಿಲ್ಲ? ಮಧುವಂತಿಗೆ ಉರಿಯುವ ಬಿಸಿಲಲ್ಲಿ ಸಾವಿರ ಕಣ್ಣುಗಳೆದುರಿಗೆ ದಾವಣಿ ಇಲ್ಲದ ಬಿಗಿ ಕುಪ್ಪಸದ ಎದೆಯನ್ನು ಒಂದೇ ಸೊಲ್ಲಿಗೆ ನೂರು ಬಾರಿ ಕುಲುಕುವಾಗ ಆಗದ ಅಪಮಾನ, ತೇಜಬಲಿ ಸುಳಿವು ಕೊಡದೆ ಬಂದು ಕದ್ದು ನೋಡಿ ಆಯ್ದು ಮಾತನಾಡುವಾಗ ಯಾಕೆ ಆಗುತ್ತದೆ? ನನ್ನ ಏಕಾಂಗಿ ಮಾ ಮತ್ತೆ ಮತ್ತೆ ಉಸುರುತ್ತಿದ್ದ ಶ್‌ಶ್‌ಶ್, ಅವಳ ಲಜ್ಜೆಯ ಸ್ವರವಾಗಿತ್ತೆ? ಅದು ಅವಳದೇ ಲೋಕವನ್ನು ಸಂಭಾಳಿಸುತ್ತಿತ್ತೆ?

ಮೆಲ್ಲಗೆ ತೂಫಾನ್ ಅಂಚಿನ ಕಡೆ ಚಲಿಸ ತೊಡಗಿದ. ನಸುಕಿನಲ್ಲಿ ಆ ನಿರ್ಜನ ನಿಲ್ದಾಣಲ್ಲಿ ಶರವೇಗದ ರೈಲಿನಿಂದ ಉಪೇಕ್ಷಿತ, ವ್ಯಕ್ತ ಪ್ರಾಣಿಯಂತೆ ಬಿದ್ದು ಮೆಲ್ಲಗೆ ಏಳುವ ಅಪ್ಪನ ಭಂಗಿಯಲ್ಲಿ, ಎವೆಯಿಕ್ಕದೆ ನೋಡುತ್ತಿದ್ದ ನಮ್ಮಿಬ್ಬರ ಸ್ಥಿರ ನಿಲುವಿನಲ್ಲಿ ಲವಲೇಶವೂ ಅವಮಾನ ಇರಲಿಲ್ಲವಲ್ಲ. ಅದನ್ನು ತೂಫಾನ್ ಮೇಲ್ ಹಾರಿಸಿಕೊಂಡು ಹೋಯಿತೆ? ಅಥವಾ, ಉಳಿವಿಗಾಗಿ, ಕನಿಷ್ಠ ಅನ್ನಕ್ಕಾಗಿ ಆಯ್ದುಕೊಂಡ ವೃತ್ತಿಗೇ ತಂತಾನೆ ಒಂದು ಮಾನ ಪ್ರಾಪ್ತವಾಗುತ್ತದೆಯೇ?

“ಶಾಟ್ ರೆಡೀ” ಎಂಬ ಕೂಗು ಕೇಳಿತು. ಇಳಿ ಹಗಲಲ್ಲೂ ಬೃಹತ್ ದೀಪಗಳು ಬೆಳಗಿ ಕೊಂಡವು. ಯುದ್ಧೋಪಾದಿಯಲ್ಲಿ ಹುಡುಗರು ಹಿಂದೆ ಮುಂದೆ ಓಡಿದರು. ಆಂಬ್ಯುಲೆನ್ಸ್ ಮತ್ತು ಸ್ಟ್ರೆಚರ್‌ಗಳನ್ನು ಫೀಲ್ಡಿನ ಸಮೀಪ ನಿಲ್ಲಿಸಲಾಗಿತ್ತು. ಯೂನಿಟ್ ಹುಡುಗ ಬಂದು ಸೋಡಾ ಒಡೆದು, ಅದರಲ್ಲೇ ನಿಂಬೆಹಣ್ಣು ಹಿಂಡಿಕೊಟ್ಟ. ಅದನ್ನು ಕುಡಿದ ತೂಫಾನ್ ತಾತ್ಪೂರ್ತಿಕವಾಗಿ ಹಾಕಿದ್ದ ಪುಟ್ಟ ಹಲಗೆಯ ಮೇಲೆ ಕಟ್ ಕಟ್ ಎಂದು ಲೋಹದ ಹೆಜ್ಜೆಗಳನ್ನೂರುತ್ತ ನೀರನ್ನು ದಾಟಿ ಹಡಗಿನ ಡೆಕ್ಕನ್ನು ಸೇರಿದ.

ಹಲಗೆಯನ್ನು ತೆಗೆಯಲಾಯಿತು. ಬೈಕಿನ ಮೇಲೆ ಮೆಲ್ಲಗೆ ಕೂತುಕೊಂಡ. ‘ಧಕ್ಕಾ’ದ ಮೇಲೆ ಅವನು ಲ್ಯಾಂಡ್ ಮಾಡಬೇಕಾದ ಜಾಗದಲ್ಲಿ ಸುಣ್ಣದ ಹುಡಿಯನ್ನು ಹಾಕಿ ಗುರುತು ಮಾಡಲಾಗಿತ್ತು. ಒಂದು ಕಡೆಯಿಂದ ನೃತ್ಯದ ಹಾಡಿನ ಸೊಲ್ಲು ತೇಲಿ ತೇಲಿ ಬರುತ್ತಿತ್ತು. ಇನ್ನೊಂದು ಕಡೆ ಹತ್ತಾರು ಹಳದಿಬಣ್ಣದ ಜನರೇಟರುಗಳ ಅಶ್ವಶಕ್ತಿಯ ಸದ್ದು. ಹೆಲ್ಮೆಟ್ ಹಾಕಿಕೊಂಡ ತಕ್ಷಣ ಎಲ್ಲ ಸದ್ದುಗಳೂ ದೂರವಾದವು. ಎದುರು ದಂಡೆಯ ಎಂದಿನ ಆಪ್ತಲೋಕ, ಈಗ, ಈ ಕ್ಷಣದಲ್ಲಿ ಹಿಂದೆ ಸರಿದು, ಒಂದು ಲಜ್ಜೆಯಲ್ಲಿತ್ತು. ಜಿಗಿತಕ್ಕೆ ಬೇಕಿರುವ ವೇಗವನ್ನು ಗಳಿಸಿಕೊಳ್ಳಲು ಡೆಕ್ಕಿನ ಮೇಲೆ ತಾನು ಕ್ರಮಿಸಬೇಕಿರುವ ದಾರಿಯನ್ನೂ, ಭೇದಿಸಬೇಕಿರುವ ಗಾಜಿನ ಗೋಡೆಯನ್ನೂ ಒಮ್ಮೆ ನೋಡಿ, ಎದುರಿಂದ ಕೆಂಬಣ್ಣದ ಸಿಗ್ನಲ್ ಬಂದಿದ್ದೇ, ತುಸು ನೀಳವಾಗಿ ಮೇಲೆ ಜರುಗಿ ಬೈಕಿಗೆ ಕಿಕ್ ಕೊಟ್ಟ. ಒಮ್ಮೆಗೇ, ನೀರವವನ್ನು ನೀಗುತ್ತ, ನಸುಕಿನ ತೂಫಾನ್ ಮೇಲ್‌ನ ಸದ್ದು ಸಮೀಪಿಸತೊಡಗಿತು.
*****

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.