ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ ಮಗಳು ಹೇಳಿದ್ದು. ಏನು ಎತ್ತ ಹೇಗೆ ಎಂಬುದನ್ನೆಲ್ಲ ಸುನೀತ ಕೇಳುವುದರೊಳಗೆ ಫೋನ್ ಇಟ್ಟೇ ಬಿಟ್ಟಿದ್ದಳು ಸ್ನೇಹಾಳ ಮಗಳು. ಹಾಗೆ ಚೂರುಪಾರು ಹೇಳಿ, ಮಾತಾಡದೇ ಇಡುವ ಹುಡುಗಿಯೇ ಅಲ್ಲ ಅದು. ತುಂಬ ಆತ್ಮೀಯವಾಗಿ ಒಳ್ಳೆಯ ಮಾತಾಡುವ ಹುಡುಗಿ.
ಮೊಮ್ಮಗು ಮಲಗಿತ್ತು. ಮನೆ ತುಂಬ ಆವರಿಸಿದ ಗಾಢ ಮೌನ, ಗೆಳತಿಯ ಅಗಲುವಿಕೆಯ ನೋವನ್ನು ಹೆಚ್ಚಿಸುತ್ತ, ಇರುವ ಮನೆಯೇ ಮಸಣವೇನೋ ಎಂಬ ಭಾವನೆ ಬರಿಸಿತು. ಕೆಲಸದವಳು ತೊಳೆದಿಟ್ಟು ಹೋಗಿದ್ದ ರಾಶಿ ಪಾತ್ರೆಗಳು ತಮ್ಮ ಜಾಗಕ್ಕೆ ಎತ್ತಿಡುವಂತೆ ಕರೆಯುತ್ತಿದ್ದರೂ ಸುನೀತಾಗೆ ಮೇಲೇಳಲಾಗಲಿಲ್ಲ. ಇನ್ನೂ ನಲವತ್ತೈದೂ ಆಗದ ಸ್ನೇಹ ಸತ್ತೇ ಹೋದಳು ಎಂಬ ಸುದ್ದಿ ಮೈ ಪೂರ್ತಿ ಆವರಿಸಿದ್ದರೂ, ಇನ್ನೂ ನಂಬಲಾಗುತ್ತಿಲ್ಲ ಅವಳಿಗೆ. ಹೋಗಬೇಕು ಅವಳ ಆ ಸತ್ತ ದೇಹವನ್ನು ನೋಡಿಯೇ ಖಚಿತಗೊಳಿಸಿಕೊಳ್ಳಬೇಕು. ಆದರೆ ಸುದ್ದಿ ಕೇಳಿದೊಡನೆ, ಚಪ್ಪಲಿ ಸಿಕ್ಕಿಸಿ ದಡದಡನೆ ಮೆಟ್ಟಿಲಿಳಿದು ಬಿಡಲು, ಅವಳು ಗಂಡಸಿನಷ್ಟು ಸ್ವತಂತ್ರಳಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಅವಳನ್ನು ಮನೆಗೆ ಬಂಧಿಸಿದ ಮೊಮ್ಮಗುವಿನ ಜವಾಬ್ದಾರಿಯ ಹಗ್ಗ ಬಿಗಿದಿದೆ. ಹನ್ನೆರಡಕ್ಕೆ ಊಟಕ್ಕೆ ಬಂದು ಎರಡು ಘಂಟೆ ವಿಶ್ರಾಂತಿ ತೆಗೆದುಕೊಂಡು ಪುನಃ ಕಛೇರಿಗೆ ಹೋಗುವ ಗಂಡನಿಗೆ ಅಡುಗೆ ಮಾಡುವ ಕೆಲಸವಿದೆ. ಒಳ ರೂಮಿನಲ್ಲಿ ಇನ್ನೊಂದು ವಾರ್ಡ್‌ರೋಬ್ ಹಾಕಲೆಂದು ಈ ದಿನವೇ ಬಡಗಿಯೊಬ್ಬ ಬರುವವನಿದ್ದಾನೆ. ಅವನಿಗೆ ನಾಳೆ ಬಾ ಎಂದು ಹೇಳಿ ಕಳಿಸಬೇಕು. ಗಂಡನ ಸ್ನೇಹಿತ ಊರಿಂದ ಬಂದು ಇಳಿಯುವ ಸಾಧ್ಯತೆ ಇದೆ. ಒಂದೊಂದಾಗಿ ಬಿಡಿಸಿಕೊಂಡು ಮಧ್ಯಾಹ್ನದ ಹೊತ್ತಿಗಾದರೂ ಸ್ನೇಹಳನ್ನು ಅರೆ ಘಳಿಗೆಯಾದರೂ ನೋಡಿ ಬರಬೇಕು. ಕೇವಲ ಹತ್ತು ನಿಮಿಷಗಳ ಕಾಲವಾದರೂ ಅವಳ ಮಕ್ಕಳ ಜೊತೆ ಇದ್ದು ಬಂದರೆ ಏನೋ ಸಮಾಧಾನ ಸಿಕ್ಕೀತು. ಆದರೆ ಮಲಗಿರುವ ಪಾಪುಗೆ ಜ್ವರ ಬೇರೆ ಇರುವುದರಿಂದ ಅದನ್ನು ನೋಡಿಕೊಳ್ಳಲೊಬ್ಬರು ಮನೆಗೆ ಬರುವ ತನಕ ಬಾಗಿಲು ದಾಟುವಂತಿಲ್ಲ.
ಮಿದುಳ ಗಂಟಿನಲ್ಲಿ ಕಟ್ಟಿಟ್ಟಿದ್ದ ನೆನಪುಗಳೆಲ್ಲ ಸ್ನೇಹಳ ಸಾವಿನ ಸುದ್ದಿಯ ಕತ್ತರಿಯಿ೦ದ ಕತ್ತರಿಸಿಕೊಂಡು ಉಂಡೆ ಉಂಡೆಯಾಗಿ ಉರುಳತೊಡಗಿದವು. “ಪ್ರಪಂಚವೆಂದರೆ ಬರೀ ಮನೆಯಷ್ಟೇ ಅಲ್ಲ. ಅದು ಅಗಾಧವಾದದ್ದು. ಎಷ್ಟು ತಿಳಿದರೂ ಸಾಯುವವರೆಗೆ ಏನೂ ತಿಳಿದಿಲ್ಲವೆನ್ನಿಸುವಂಥದು. ಇಷ್ಟನ್ನು ತಿಳಿಯಲಾದರೂ ಮನೆ ಬಿಟ್ಟು ಹೊರಗೆ ಬಾ. ಬರಬೇಕೆಂದು ನೀನು ಮನಸ್ಸು ಮಾಡಿದರೆ, ಬರುವುದಕ್ಕೆ ದಾರಿ ತಾನಾಗಿ ಕಾಣಿಸುತ್ತದೆ. ಅದು ಬೇರೆಯವರು ಮಾಡಿಕೊಡುವುದಲ್ಲ. ನೀನೇ ಮಾಡಿಕೊಳ್ಳಬೇಕಾಗಿರೋದು”, ಎಂದು ಸ್ನೇಹ ಎಷ್ಟೋ ವರ್ಷಗಳಿಂದ ಎಚ್ಚರಿಸುತ್ತಲೇ ಬಂದಿದ್ದಳು. ಆದರೆ ಸುನೀತಾಗೆ ಜೀವನವೆಂದರೆ ಮನೆ, ಗಂಡ ಮತ್ತು ಮಕ್ಕಳು ಅಷ್ಟೇ ಎನ್ನುವಂತಾಗಿದೆ. ರಾಜಕೀಯ, ಸಾಹಿತ್ಯ, ಸಿನಿಮಾ, ನಾಟಕ, ಕಂಪ್ಯೂಟರ್, ಸಂಶೋಧನೆ ಇತ್ಯಾದಿ ಯಾವುದರ ಇತಿಹಾಸವಾಗಲೀ, ವರ್ತಮಾನ ಮತ್ತು ಭವಿಷ್ಯಗಳಾಗಲೀ ಒಂದೂ ಗೊತ್ತಿಲ್ಲ. ಗೊತ್ತಿಲ್ಲವೆಂಬ ಹಿಂಜರಿಕೆ, ಕೀಳರಿಮೆಗಳು ಮಾತ್ರ ಇರುವುದರಿಂದಾಗಿ, ವಿದ್ವತ್ ಸಮಾರಂಭಗಳಿರಲಿ, ಮದುವೆ ಸಮಾರಂಭಗಳಿಗೆ ಹೋದರೂ ಹೆದರಿ ಹಿ೦ಜರಿದು ಇನ್ನಷ್ಟು ಹಿಂದುಳಿದವಳಾಗುತ್ತಿದ್ದಾಳೆ.
ಸ್ನೇಹಳ ಸಾವಿಗೆ ಕಾರಣ ಏನಿದ್ದೀತು ಎಂದು ತಿಳಿಯಲು ಅವಳ ಮನೆಗೆ ಎಷ್ಟು ಸಲ ಟ್ರೈ ಮಾಡಿದರೂ ಕನೆಕ್ಷನ್ನೇ ಸಿಗುತ್ತಿಲ್ಲ ಸುನೀತಾಗೆ. ಮೊನ್ನೆ ತಾನೇ ಊರಿನ ಸುದ್ದಿ ಹೇಳಲು ಫೋನ್ ಮಾಡಿದ್ದಳು. ಆರೋಗ್ಯವಾಗಿದ್ದವಳು ಇವೊತ್ತು ಆಗಲೇ ಇಲ್ಲವಾಗಿದ್ದಾಳೆ ಎಂದರೆ ಹಾರ್ಟ್ ಫೇಲೇ ಇರಬಹುದು. ಇವೊತ್ತಾದರೂ ಅವಳ ಮನೆಗೆ ಹೋಗಲೇ ಬೇಕು. ಪ್ರೌಢ ಶಾಲೆಯಲ್ಲಿ ಸಹಪಾಠಿಯಾಗಿದ್ದವಳು, ಮೂರು ವರ್ಷಗಳ ಹಿಂದೆ ಈ ಊರಿಗೆ ಬಂದು ತನ್ನ ಏಕೈಕ ಸ್ನೇಹಿತೆಯಾಗಿರುವವಳು ತೀರಿಕೊಂಡಾಗಲೂ ಮನೆಗೆ ಹೋಗದಿದ್ದರೆ ಸಮಾಧಾನವಿದ್ದೀತೆ”? ಯೋಚಿಸುತ್ತಲೇ ಮನವನ್ನು ಎಳೆದಾಡುತ್ತ ಎದ್ದು, ಪಾತ್ರೆಗಳನ್ನೆಲ್ಲ ತೆಗೆದು ಒರೆಸಿಟ್ಟಳು. ತನಗಿಂತ ಮೂರು ವರ್ಷ ಚಿಕ್ಕವಳಾದ ಸ್ನೇಹ ಯಾವ ಯಾವುದೋ ಸಂಘ, ಸಂಸ್ಥೆಗಳಿಗೆ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ, ಚಮತ್ಕಾರದ ಮತ್ತು ಬುದ್ಧಿವಂತಿಕೆಯ ಮಾತುಗಳಲ್ಲಿ ಜನಮನ ಗೆದ್ದ ವ್ಯಕ್ತಿಯಾಗಿ, ಒಳ್ಳೆಯ ಅಧ್ಯಾಪಕಿಯಾಗಿ, ಸಮಾಜದಲ್ಲಿ ಸಮಾನತೆ ತರಲು ಹೋರಾಡುವ ಸಮಾಜವಾದಿಯಾಗಿ, ಹೆಸರು ಗಳಿಸಿದವಳು, ದುಡಿದವಳು, ಇವೊತ್ತು ಎಲ್ಲ ಬಿಟ್ಟು ಹೊರಟೇ ಹೋದಳೇ? ಅದು ಹೇಗೆ ಮಾಡುತ್ತಿದ್ದಳೋ. ಯಾವಾಗ ಯಾವುದಕ್ಕೆ ಎಲ್ಲಿಂದ ಸಮಯ ಒದಗಿಸಿಕೊಳ್ಳುತ್ತಿದ್ದಳೋ? ಕೇಳಿದರೆ, “ಮನಸ್ಸಿದ್ದರೆ ಯಾವುದಕ್ಕೂ ಸಮಯ ಸಿಗುತ್ತದೆ. ಸಿಗದಿದ್ದರೆ ರಾತ್ರಿಯನ್ನು ಎಷ್ಟು ಬೇಕೋ ಅಷ್ಟಕ್ಕೆ ಹಗಲು ಮಾಡಿಕೊಂಡರಾಯ್ತು. ಅಷ್ಟೆ. ಹುಂ ಒಂದೆಂದರೆ ಹಾಗೆ ದುಡಿಯಲು ಸಾಮಾನ್ಯರಿಗಿಂತ ಒಂದಿಷ್ಟು ಹೆಚ್ಚು ಸಾಮರ್ಥ್ಯವಿರಬೇಕಾಗುತ್ತದೆನ್ನು”, ಎನ್ನುತ್ತಿದ್ದಳಲ್ಲ. ಈಗ ಅವಳ ಈ ಕೆಲಸಗಳನ್ನು ಯಾರು ಮಾಡುತ್ತಾರೆ.?
“ನನಗೆ ಮನೆಗೆಲಸದಿಂದ ಒಂದೇ ಒಂದು ಘಂಟೆಯ ಬಿಡುವು ಸಿಕ್ಕರೆ ಸಾಕು, ಅದನ್ನು ನನ್ನ ಹವ್ಯಾಸದ ಕೆಲಸಕ್ಕೆ ಬಳಸಿಕೊಂಡು ತೃಪ್ತಿ ಪಡೆಯುತ್ತೇನೆ. ಸ್ತೀ ಜಗತ್ತಿನಲ್ಲಿ ಬದಲಾವಣೆ ತರಬೇಕಾದರೆ, ಒಂದಿಷ್ಟು ಸಂಘರ್ಷ ಮತ್ತೊಂದಷ್ಟು ಶ್ರಮ ಹಾಗೂ ಸಾಧನೆಗಳಿಂದಲೇ ಸಾಧ್ಯ ಅಲ್ವಾ? ನಾವು ಈಗ ಕಷ್ಟ ಪಟ್ಟರೆ ಮುಂದಿನ ತಲೆಮಾರಿನ ಸ್ತೀಯರಿಗೆ ಸ್ವಲ್ಪ ಸಹಾಯವಾಗಲೂಬಹುದು ಎಂಬುದು ಭ್ರಮೆಯೊ ನಿಜವೊ ಗೊತ್ತಿಲ್ಲ” ಎಂದು” ಸ್ನೇಹ ಈಗ ತಾನೇ ಹೇಳಿದಂತೆನಿಸುತ್ತಿದೆ.
ಫೋನ್ ಟ್ರಿಣಗುಟ್ಟಿದಾಗ ಅತ್ತ ನಡೆದಳು ಸುನೀತ. ಹರಿದ್ವಾರ, ಗಯಾ, ಪ್ರಯಾಗಗಳಿಗೆಲ್ಲ ಹೋಗುವ ಟೂರ್ ಪ್ಯಾಕೇಜೊಂದರ ಬಗ್ಗೆ ವಿವರಣೆ ನೀಡಿದ ಅವಳ ಅಣ್ಣ, “ಬರುತ್ತೀಯ ಸುನೀತ. ಇನ್ನು ನಾಲ್ಕು ಸೀಟುಗಳಿವೆ. ನೀನು ಬರುವುದಾದರೆ ಬೇರೆ ಯಾರಿಗೂ ಹೇಳುವುದಿಲ್ಲ” ಎಂದ. ಹುಂ ಎನ್ನಲು ಅವಕಾಶವೇ ಇಲ್ಲದ ಸುನೀತ, “ಇಲ್ಲ ಅಣ್ಣ. ದೀಪ್ತಿಗೆ ರಜೆಯೇ ಇಲ್ಲವಂತೆ. ರವೀಗೆ ಈಗ ಕಾಲೇಜ್ ಶುರುವಾಗಿದೆ. ಇನ್ನು… ’..” ಬರುವುದಿಲ್ಲ ಎಂಬುದಕ್ಕೆ ಹಲವಾರು ಕಾರಣಗಳನ್ನು ನೀಡಿದಳು ಅವಳು. ಇದುವರೆಗೆ ತಾನು ಮನೆ ಬಿಟ್ಟು ಹೋಗಿರುವುದೆಂದರೆ ಒಂದು ತವರಿಗೆ ಇನ್ನೊಂದು ನಾದಿನಿ ಮತ್ತು ಅತ್ತಿಗೆಯರ ಊರುಗಳಿಗೆ. ಅದು ಬಿಟ್ಟು ಬೇರೆಲ್ಲಿಗೇ ಹೋಗಲೂ ಸಾಧ್ಯವೇ ಆಗಿಲ್ಲ. “ಸಾಯುವುದರೊಳಗೆ ಒಂದಿಷ್ಟು ತೀರ್ಥಯಾತ್ರೆ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಕೊಂಡಿದ್ದೆ. ಅತ್ತೆ ಮತ್ತು ನಾದಿನಿಯ ಹೊಣೆ, ಅವರಾದ ಮೇಲೆ ಮಕ್ಕಳ ಓದು, ಆನಂತರ ಮಗಳ ಮದುವೆ, ಎಲ್ಲ ಮುಗಿಯಿತು ಇನ್ನಾದರೂ ಎಲ್ಲಿಯಾದರೂ ಹೋಗಬೇಕು ಎಂದುಕೊಂಡರೆ, ಮಗಳ ಮಗುವನ್ನು ನೋಡಿಕೊಳ್ಳುವ ಜವಾಬುದಾರಿಯನ್ನೂ, ಏನೇನೋ ಕಾರಣಗಳಿಂದಾಗಿ ತಾನೇ ವಹಿಸಿಕೊಳ್ಳಬೇಕಾಯ್ತು. ಸ್ನೇಹ, ನನಗೆ ಮನೆ ಬಿಟ್ಟು ಹೋಗುವ ಅವಕಾಶ ಈ ಜನ್ಮದಲ್ಲಿ ಇಲ್ಲವೆಂದು ಕಾಣುತ್ತದೆ. ಎಷ್ಟು ಪಾಪ ಮಾಡಿದ್ದೇನೋ. ದೇವರ ಸೇವೆ ಮಾಡಿ ನಿವಾರಿಸಿಕೊಳ್ಳಲೂ ಆಗುತ್ತಿಲ್ಲ”, ಎಂದು ಕೊರಗಿ, ಅದನ್ನು ಮನಗೆ ಬಂದ ಸ್ನೇಹಾ ಮುಂದೆ ಹೇಳಿ ಅತ್ತಿದ್ದಳು ಸುನೀತ, ಹಿಂದೊಮ್ಮೆ.
ಅದಕ್ಕೆ ಅವಳು ಎಷ್ಟು ಒಳ್ಳೆಯ ಮಾತು ಹೇಳಿದ್ದಳಲ್ಲ.. “ಸರ್ವಜ್ಙ ಹೇಳಿರುವಂತೆ ಆ ದೇವರು ‘ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಮೊನೆಯಲ್ಲಿ ಎಲ್ಲಿ ನೋಡಿದರಲ್ಲಿ ಶಿವನಿರ್ಪ ಅವ ನಿನ್ನಲ್ಲಿಯೇ ಇರುವ” ಎಂಬುದನ್ನು ತಿಳಿದವರಿಗೆ ದೇವಸ್ಥಾನ, ತೀರ್ಥ ಯಾತ್ರೆ ಮಾಡುವುದೇಕೆ, ಕಲ್ಲು, ಮಣ್ಣು, ಲೋಹಗಳಿಗೆ ದೇವರ ಸ್ವರೂಪ ಕೊಟ್ಟು ಪೂಜಿಸುವ ಅಗತ್ಯವೂ ಬರುವುದಿಲ್ಲ. ಮನದೊಳಗೇ ಪೂಜಿಸಬಹುದು. ತೀರ್ಥ ಯಾತ್ರೆ ಮಾಡಬೇಕಾಗಿರೋದು ದೇವರ ಕೃಪೆ ಅಥವಾ ಸೇವೆಗಾಗಿ ಅಲ್ಲ ಸುನೀತ, ದೂರದ ಜನ, ಕಲೆ, ಕಲಾವಿದರ ಬಗ್ಗೆ ನಿನ್ನ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ, ನಿನ್ನ ಕುಟುಂಬದ ಸದಸ್ಯರೆಲ್ಲರಿಗೆ ಈ ನೆವಗಳಲ್ಲಿ ಅವರವರ ಜವಾಬ್ದಾರಿಗಳೇನು ಎಂಬುದನ್ನು ತಿಳಿಸುವುದಕ್ಕೆ, ನಿನ್ನ ಮೇಲೆ ಅವರು ಸಂಪೂರ್ಣ ಅವಲಂಬಿಸದಂತೆ ಎಚ್ಚರ ವಹಿಸುವುದಕ್ಕೆ””, ಎಂದಿದ್ದಳು ಆ ದಿನ ಇಲ್ಲೇ ಈ ಸೋಫಾ ಮೇಲೆ ಕುಳಿತು. ಅವಳ ಮಾತು ಕಾಶಿಗೆ ಹೋಗಿ ಬಂದಷ್ಟೇ ಸಮಾಧಾನ ಕೊಟ್ಟಿತ್ತು ಸುನೀತಾಗೆ ಆ ದಿನ. ಅಂಥ ಸಮಾಧಾನದ ದಾರಿ ತೋರುವ ಗೆಳತಿ ಅವಳಿಗೆ ಇನ್ನೊಬ್ಬಳಿಲ್ಲ.
ಹತ್ತು ತಿಂಗಳ ಪಾಪು ತೊಟ್ಟಿಲಲ್ಲೇ, ಅಳುವಿಗೆ ಶೃತಿ ತೆಗೆದುಕೊಳ್ಳುವಂತೆ ಕುಸುಕುಸು ಶಬ್ದ ಮಾಡುತ್ತಿರುವುದು ಕೇಳಿಸಿದಂತಾಗಿ ದಡಕ್ಕನೆ ಎದ್ದು ಓಡಿದಳು ಸುನೀತ. ಅರೆ ಈಗ ತಾನೇ ತೂಗಿದ ಹಗ್ಗ ಕೈ ಬಿಟ್ಟು ಬಂದಿದ್ದೇನಷ್ಟೆ. ಆಗಲೇ ಎದ್ದೇ ಬಿಟ್ಟಿತಾ ಈ ಮಗು. ಹುಂ. ಇದು ಎದ್ದಿತೆಂದರೆ ತನ್ನ ಯಾವ ಕೆಲಸವೂ ಮುಂದುವರಿಯುವುದಿಲ್ಲ. ಜ್ವರ ಬೇರೆ ಇರುವುದರಿಂದ ಸೊಂಟದಿಂದ ಕೆಳಗೇ ಇಳಿಯುವುದಿಲ್ಲ ಮಗು. ಇನ್ನೂ ರವಿಯ ಬಟ್ಟೆ ಇಸ್ತೀ ಮಾಡಬೇಕು. ದೀಪ್ತಿಯ ಕುರ್ತಾಗಳನ್ನು ಮಡಿಸಿಡಬೇಕು. ಕೆಲಸದವಳು ಒಗೆದ ಬಟ್ಟೆ ಹಿಂಡಿ ಹರವಬೇಕು, ಅಡಿಗೆ ಮಾಡಬೇಕು. ಪಾಪುಗೆ ರಾಗಿ ಅರಳ್ಹಿಟ್ಟು ತಯಾರಿಸಲು ರಾಗಿ ಹುರಿಯ ಬೇಕು. ಕೆಲಸ ಮುಗಿಯದಿದ್ದರೆ, ಗಂಡ ಮಕ್ಕಳು ಮನೆಯಲ್ಲಿರುತ್ತೇವೆಂದರೂ ತನಗೆ ಸ್ನೇಹಳ ಮನೆಗೆ ಹೋಗಲಾಗುವುದಿಲ್ಲ. ಹೇಗೆಂದರೆ ಹಾಗೆ ಮನೆಯನ್ನು ಬಿಟ್ಟು ಹೋಗುವುದು ತನ್ನ ಮನಸ್ಸಿಗೆ ಒಗ್ಗುವುದೇ ಇಲ್ಲ. ಅದಕ್ಕೇ ಅಲ್ಲವೇ ಸ್ನೇಹ ಹೇಳುತ್ತಿದ್ದುದು, “ಒಗ್ಗಿಸಿಕೊಳ್ಳಬೇಕು ಸುನೀ. ಯಾವಾಗ ಯಾವುದು ಮುಖ್ಯವೋ ಅದನ್ನು ಮೊದಲು ಮಾಡಬೇಕು. ಎಷ್ಟು ಅಗತ್ಯವೋ ಅಷ್ಟು ಮಾತ್ರ ಹಚ್ಚಿಕೊಳ್ಳಬೇಕು. ಉಳಿದವರಿಗೂ ಕೆಲಸ ಹೇಳಿ ಕೊಡಬೇಕು. ಮಕ್ಕಳಿಗೆ ಅನಾಥತನಕ್ಕೆ, ಗಂಡನಿಗೆ ವಿಧುರತನಕ್ಕೆ ಸಿದ್ಧಗೊಳಿಸುವ ಮಟ್ಟಕ್ಕೆ ಹೆಗುವುದು ಬೇಡ, ಕಡೆಯ ಪಕ್ಷ ಒಂದೆರಡು ದಿನ ಮನೆಯಲ್ಲಿ ನೀನಿಲ್ಲದಿದ್ದಾಗಲಾದರೂ ಅವರು ಸಮಸ್ಯೆ ಇಲ್ಲದೆ ಬದುಕು ನಡೆಸುವಷ್ಟಾದರೂ ಕಲಿಯ ಬೇಡವೇ? ಅಷ್ಟೇ ಬರದಿದ್ದರೆ ಜೀವನದ ಕಷ್ಟ-ನಷ್ಟಗಳನ್ನು ಎದುರಿಸಲು ಅವರು ಹೇಗೆ ಸಮರ್ಥರಾಗಬಲ್ಲರು ಹೇಳು? ಅಷ್ಟಿದ್ದರೆ ಹೇಗೆಂದರೆ ಹಾಗೆ ನೀನು ಮನೆಯನ್ನು ಬಿಟ್ಟು ಬಂದಿದ್ದರೂ, ನೀನು ಮತ್ತೆ ಮನೆಗೆ ಹಿಂತಿರುಗುವ ಹೊತ್ತಿಗೆ ನಿನ್ನಂತೆಯೇ ಮನೆಯನ್ನು ಅಂದವಾಗಿ ಇಡಬಲ್ಲರು”, ಎಂದು.
ಆದರೆ “ಊಹು ಸ್ನೇಹ ತನ್ನಂತಲ್ಲ. ಮಕ್ಕಳನ್ನು ತನ್ನಷ್ಟು ಮುದ್ದಿಸುವುದಿಲ್ಲ. ಅವುಗಳ ಕಡೆ ತಾನು ಕೊಡುವಷ್ಟು ಗಮನ ಕೊಡುವುದಿಲ್ಲ. ಮನೆಯಲ್ಲಿ ಯಾರಿಗೂ ತೊ೦ದರೆಯಾಗಲೀ ನೋವಾಗಲೀ ಕೊಡುವುದು ತನಗಿಷ್ಟವಿಲ್ಲ”” ಎಂದು ಸುನೀತಳ ಭಾವನೆ ಇದ್ದುದರಿಂದಲೋ ಏನೋ ಅವಳು ಸ್ನೇಹಳ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಅವಳ ಎರಡೂ ಮಕ್ಕಳೂ ಸುನೀತಳ ಮಕ್ಕಳಿಗಿಂತ ಒಂದೆರಡು ವರ್ಷ ಚಿಕ್ಕವೇ. “ಈಗ ಏನು ಮಾಡುತ್ತವೋ ಏನೋ ಪಾಪ. ಅವುಗಳನ್ನು ಸಂತೈಸಿ ಒಂದೆರಡು ಸಮಾಧಾನದ ಮಾತುಗಳನ್ನಾಡಿಯಾದರೂ ಬರಬೇಕು”, ಯೋಚಿಸುತ್ತಲೇ ತೊಟ್ಟಿಲು ತೂಗಿ, ಮಗುವಿಗೆ ಚೆನ್ನಾಗಿ ನಿದ್ದೆ ಹತ್ತಿದೆ ಎಂಬುದನ್ನು ಧೃಢ ಪಡಿಸಿಕೊಂಡು, ರವಿಯೊ ಅಥವಾ ಗಂಡನೋ ಬರುವದರೊಳಗೆ ಅಡುಗೆ ಮುಗಿಸಿ, ತಯಾರಾಗಿ ಕುಳಿತುಬಿಡಬೇಕೆಂದುಕೊಳ್ಳುತ್ತ, ತರಕಾರಿಗಳನ್ನು ಮುಂದೆ ಹಾಕಿಕೊಂಡಳು. ಈರುಳ್ಳಿ ಹುಳಿ ಮಾಡಿ, ತಿಳಿ ಸಾರು ಮಾಡಿಬಿಡುವುದೆಂದು, ಸರಸರನೆ ಈರುಳ್ಳಿ ಮತ್ತು ಸಾರಿಗೆ ಟೊಮ್ಯಾಟೊ ಹೆಚ್ಚಿ ಕುಕ್ಕರ್‌ಗೆ ಅಣಿ ಮಾಡಿಕೊಂಡಳು. ಸ್ನೇಹಾಳ ಶವವನ್ನು ಎಷ್ಟು ಹೊತ್ತಿಗೆ ತೆಗೆಯುತ್ತಾರೋ ಕೇಳಿಯೇ ಬಿಟ್ಟರೆ ಅಷ್ಟರೊಳಗೆ ಹೋಗಬಹುದೆನಿಸಿ, ಸ್ನೇಹಳ ಮನೆಗೆ ಫೋನ್ ಮಾಡಿದಳು. ಆದರೆ ನಾಲ್ಕು ಸಲ ಮಾಡಿದರೂ ಫೋನ್ ಎಂಗೇಜ್ ಇದ್ದುದರಿಂದ, ಸಹನೆ ಸಮಯ ಎರಡೂ ಇಲ್ಲದ ಅವಳು, ತನ್ನ ಕೆಲಸಗಳನ್ನು ಬೇಗ ಬೇಗನೆ ಮುಗಿಸುವ ಸಲುವಾಗಿ ಕೆಲಸದ ಕೈಗಳಿಗೆ ವೇಗ ತುಂಬಿದಳು. ಅಡುಗೆ ಮುಗಿಯುವ ಹಂತಕ್ಕೆ ಬಂದಾಗ ಹನ್ನೆರಡೂವರೆ ಆಗಿತ್ತು. ಪ್ರತಿದಿನ ಹನ್ನೆರಡಕ್ಕೇ ಬರುವ ಕಿರಿಮಗ ರವಿ ಕಾಲೇಜಿನಿಂದ ಇನ್ನೂ ಬರಲಿಲ್ಲವಲ್ಲ ಎಂದು ತಳಮಳಿಸಿದಳು. ಕೆನೆಯ ಮೇಲಿನ ಇರುವೆಯಂತೆ ದಾರಿ ತೋರದೇ ಚಡಪಡಿಸುತ್ತ ಬಾಗಿಲಿಗೆ ಬಂದು ಕಾಯುತ್ತ ನಿಂತಾಗ ಆ ದೂರದಲ್ಲಿ ಇಬ್ಬರು ಗೆಳೆಯರೊಂದಿಗೆ ರವಿಯ ಮುಖ ಕಾಣಿಸಿತು. ಒಳಗಿನ ತಳಮಳ ಜರ್ರನೆ ಇಳಿದು ಉಸಿರು ನಿರಾಳಗೊಂಡಿತು. ಸೀರೆ ಬದಲಿಸಲೆಂದು ಒಳಗೆ ಹೋದರೆ, ಮಲಗಿದ ಮಗು ಮತ್ತೆ ಎದ್ದಿತ್ತು. ಎದ್ದಿದ್ದೇನೆ ಎಂಬುದನ್ನು ತಾರಕ ಮಟ್ಟದ ತನ್ನ ಅಳುವಿನಲ್ಲಿ ತಿಳಿಸತೊಡಗಿತ್ತು. ಅದರ ಪುಟ್ಟ ಹೊಟ್ಟೆಗಾಗಿ ಸಿರಿಲ್ಯಾಕ್ ಬೆರೆಸುತ್ತ, ಮನೆಯೊಳಗೆ ಕಾಲಿಟ್ಟ ರವಿಗೆ ಆತುರದಲ್ಲಿ ಹೇಳಿದಳು ಸುನೀತ, “ರವೀ ಯಾಕೋ ಲೇಟ್ ಇವೊತ್ತು? ಸ್ನೇಹಾ ಆಂಟಿ ಹೋಗಿ ಬಿಟ್ರಂತೆ. ನಾನೊಂದರ್ಧ ಘಂಟೆ ಅವರ ಮನೆಗೆ ಹೋಗಿ ಬರಣಾಂತ ನಿಂಗೇ ಕಾಯ್ತಾ ಇದ್ದೆ”. ರವಿಯ ಮೌನಕ್ಕೆ ಅವಕಾಶ ಕೊಟ್ಟು ಮುಂದುವರಿಸಿದಳು ಅವಳು. “ಪಾಪು ಹೊಟ್ಟೆ ತುಂಬಿದರೆ ಹೆಚ್ಚು ಗಲಾಟೆ ಮಾಡಲಾರದು. ನಾನು ಬರುವವರೆಗೂ ಒಂಚೂರು ನೋಡಿಕೊಂಡಿರ್ತೀಯ””?
ರವಿಯ ಉತ್ತರ ಸಿಟ್ಟಿನಲ್ಲಿ ಸಿಡಿಯಿತು. “ಅಂದ್ರೆ ನೀನು ಪಾಪುನ್ನ ಕರ್ಕೊಂಡ್ ಹೋಗಲ್ವ? ನಾನು ಮನೆಯಲ್ಲಿರಲ್ಲಮ್ಮ. ನಂಗೆ ಕ್ರಿಕೆಟ್ ಮ್ಯಾಚ್‌ಗೆ ಪ್ರಾಕ್ಟೀಸ್ ಇದೆ. ಆಮೇಲೆ ಟೂರ್ನಮೆಂಟ್‌ಗಾಗಿ ಸೆಲೆಕ್ಷನ್ಸೂ ಇದೆ ಇವೊತ್ತು. ನಾನೀಗ ಊಟ ಮಾಡಿದ್ದೇ ಕಾಲೇಜ್‌ಗೆ ಹೋಗ್ಬೇಕು. ನಂದು ಸ್ಪೋರ್ಟ್ಸ್ ನಿಕ್ಕರ್ ಇಸ್ತಿ ಮಾಡಿದ್ಯಾ? ನನ್ನ ಸಾಕ್ಸ್ ಯಾವೊತ್ತು ಒಗೆಯಕ್ಕೆ ಹಾಕಿದ್ದು? ಇವೊತ್ತೊ ನಿನ್ನೇನೋ”?”
“ಇಲ್ಲ. ಬೆಳಿಗ್ಗೆಯಿಂದ ಮನಸ್ಸಿಗೇ ಸರಿ ಇಲ್ಲ. ಏನೂ ಮಾಡಿಲ್ಲ ನಾನು. ನೀನು ಈಗ ಪ್ರಾಕ್ಟೀಸ್‌ಗೆ ಹೋಗ್ಬೇಡ. ಸೆಲೆಕ್ಷನ್ ಟೈಂಗೆ ಹೋಗುವಿಯಂತೆ. ನೀನು ಊಟ ಮಾಡಿ ರೆಡಿ ಆಗೋದ್ರೊಳಗೆ ನಾನು ಬಂದು ಬಿಡ್ತೀನಿ ರವಿ”, ಎಂದು ನಾಲ್ಕು ಸಲ ಸುನೀತ ಮೆಲು ಮಾತಿನಲ್ಲಿ ಗೋಗರೆದಿದ್ದರೂ ಕೇಳಿಸಿಕೊಳ್ಳಲೂ ಇಚ್ಛಿಸದ ರವಿ ಸಿಡುಕಿ ತಿರಸ್ಕರಿಸಿದ್ದ. “ಎಲ್ರ ಮನೇಲಿ ಅಮ್ಮಂದಿರು ಮಕ್ಳಿಗೆ ಎಷ್ಟು ಎನ್ಕರೇಜ್ ಮಾಡ್ತಾರೆ. ನೀನು ಶುದ್ದ ಹಳ್ಳಿ. ಕ್ರಿಕೆಟ್‌ನ ಇಂಪಾರ್ಟೆಂಸೇ ಗೊತ್ತಿಲ್ಲ ನಿಂಗೆ. ಅಡುಗೆಮನೆ ಬಿಟ್ರೆ ಬೇರೆ ಪ್ರಪಂಚನೇ ಇಲ್ಲ ನಿಂಗೆ. ಹೋಗಿ ಹೋಗಿ ನಿನ್ನ ಮುಂದೆ ಹೇಳ್ತೀನಲ್ಲ ನಾನು”, ಎಂದು ಊಟವೂ ಮಾಡದೇ ಕಾಲು ದಪದಪನೆ ಬಡಿಯುತ್ತ ಹೊರಟೇ ಹೋದ.
ಸುನೀತ ಅಸಹಾಯಳಾಗಿ ಕುಸಿದು ಕುಳಿತಳು. “ಸುನೀ, ನೀನು ಅವರ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತ ಹೋಗುವವರೆಗೆ ಅವರ ಕೆಲಸಗಳನ್ನು ನೀನು ಮಾಡುತ್ತಿರುವೆ ಎನ್ನಿಸುವುದಿಲ್ಲ. ಬದಲಿಗೆ ಅದು ನಿನ್ನದೇ ಜವಾಬ್ದಾರಿ ಮತ್ತು ಕರ್ತವ್ಯ ಎನಿಸುತ್ತದೆ ಅವರಿಗೆ. ನಿನ್ನ ಉಸಿರೊಳಗೂ ಆಸೆ ಇದೆ. ನಿನ್ನ ಅಸ್ತಿತ್ವಕ್ಕೂ ಸಾರ್ಥಕತೆಯ ತೃಪ್ತಿ ಪಡೆವ ದಾರಿ ಬೇಕಿದೆ. ನಿನ್ನ ಇರುವಿಕೆ ಬರೀ ಇನ್ನೊಬ್ಬರಿಗಾಗಿಯೇ ಅಲ್ಲ ಎನ್ನುವುದನ್ನು ನಿನ್ನ ಕುಟುಂಬದ ಇತರರೆಲ್ಲರಿಗೂ ತಿಳಿಸಿಕೊಡಬೇಕು ನೀನು. ನಿನ್ನ ಆಸೆಯೊಂದಿಗೇ ಅವರ ಆಸೆಗಳನ್ನು ಬೆಳೆಸಬೇಕು. ನಿನ್ನ ಸಾಧನೆ-ಸೋಲುಗಳೊಂದಿಗೆ ಅವರ ಸಿದ್ಧಿ-ಸಾಧನೆಗಳನ್ನು ಬೆ೦ಬಲಿಸಬೇಕು. ಅವರದೆಲ್ಲವನ್ನೂ ನಿನ್ನದಾಗಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ ಸುನೀ”, ಸ್ನೇಹ ಕಳೆದ ವರ್ಷ ಬಂದಿದ್ದಾಗ ಇಂಥದೇ ಒಂದು ಪ್ರಸಂಗವನ್ನು ಕಣ್ಣಾರೆ ಕಂಡಾಗ, ತನಗೆ ಅನಿಸಿದ್ದನ್ನು ಹಲವಾರು ರೀತಿಯಲ್ಲಿ ಉಪದೇಶಿಸಿದ್ದಳು. ‘ಟ್ರಿಣ್ ‘ಟಿಣ್” ಕರೆಗಂಟೆ ಕೂಗಿತು. ’ ಕಾಗೆಗಳಂತೆ ತಲೆ ಕುಕ್ಕುತ್ತಿದ್ದ ಅನಿಸಿಕೆಗಳೆಲ್ಲ ಕರೆಗಂಟೆಯ ಸದ್ದಿಗೆ ಭರ್ರನೆ ಹಾರಿ ಹೋದವು.
ಮುಂಬಾಗಿಲಲ್ಲಿ ನಿಂತ ಜನಗಳ ಒಂದು ಪುಟ್ಟ ದಂಡು, ಅದರ ನಡುವೆ ಒಬ್ಬ ಧಡೂತಿ ವ್ಯಕ್ತಿಯನ್ನು ಕಂಡಿದ್ದೇ, ಯಾರು, ಯಾಕೆ ಬಂದಿದ್ದಾರೆ ಏನು ಎತ್ತ ಎಂಬುದೊಂದೂ ಅರ್ಥವಾಗದೆ ಅವಳ ಭಯ, ಝಲ್ಲನೆ ಮುಖಕ್ಕೇರಿ ಕಣ್ಣ ಮೂಲಕ ಹೊರ ಬರುವ ಮೊದಲೇ, ಅವರಲ್ಲೊಬ್ಬ ಮುಂದೆ ಬಂದು ಪಾಂಪ್ಲೆಟ್ ಒಂದನ್ನು ಇವಳ ಕೈಗಿಟ್ಟು ಹೇಳಿದ, “ದಯವಿಟ್ಟು ಇವರಿಗೇ, ಈ ಈಶ್ವರಪ್ಪನವರಿಗೇ ಓಟ್ ಮಾಡಬೇಕು ಮೇಡಂ. ನಿಮ್ಮ ಮನೆಯವರಿಗೆಲ್ಲ ಹೇಳಿ, ಅಂದಾಗ ಝಲ್ಲನೇರಿದ್ದ ಭಯ ಸೊರ್ರನೆ ಇಳಿದಿತ್ತು. “ದಯವಿಟ್ಟು ನಿಮ್ಮ ಓಟು ನಮಗೇ ಕೊಡಬೇಕು, ಬಂದ ಸ್ಪರ್ಧಿಯೂ ಕೈ ಮುಗಿದು ಇನ್ನೊಂದೆರಡು ಮಾತಾಡಿ ತನ್ನ ಹಿಂಬಾಲಕರೊಂದಿಗೆ ಮುನ್ನಡೆದ. ಅವರೆಲ್ಲ ಅತ್ತ ಹೋದ ಮೇಲೆ ತಲೆಯಲ್ಲಿ ಅಲೋಚನೆಗಳು ಝೇಂಕರಿಸಿದವು. “ಈಗ ಚುನಾವಣೆ ನಡೆಯಲಿದೆಯೇ? ಯಾವುದಕ್ಕೆ? ಮನೆಯಲ್ಲಿ ಗಂಡ-ಮಕ್ಕಳು ಯಾರೂ ಈ ಬಗ್ಗೆ ಮಾತಾಡಿದ್ಡೇ ಕೇಳಲಿಲ್ಲವಲ್ಲ. ಮೊಮ್ಮಗುವಿನ ಜವಾಬುದಾರಿಯೂ ಹೆಗಲೇರಿದ ಮೇಲೆ ಪೇಪರ್ ಓದುವುದೇ ಅಪರೂಪ ಆಗಿಬಿಟ್ಟಿದೆ. ತಿಂಗಳಲ್ಲಿ ಸರಾಸರಿ ನಾಲ್ಕು ದಿನವೂ ಆಗದ ಓದು. ವಿವರ ತಿಳಿಯಲು ಪಾಂಪ್ಲೆಟ್ ಮೇಲೆ ಕಣ್ಣಾಡಿಸಿದಳು.
ಮತ್ತೆ ಸ್ನೇಹಳ ಹಳೆಯ ಮಾತುಗಳ ಮೆರವಣಿಗೆ. “ ಇದು ಮಹಿಳಾ ಸಬಲೀಕರಣ ವರ್ಷ. ಗೊತ್ತಿದೆಯಾ ನಿನಗೆ? ಇಲ್ಲ. ಮಹಿಳೆಯರ ಪ್ರಗತಿಗಾಗಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಆ ಮೂಲಕ ದೇಶದ ಮುನ್ನಡೆಗಾಗಿ ಇಡೀ ಜಗತ್ತು ಸಜ್ಜುಗೊಳ್ಳುತ್ತಿದೆ. ನಾಟಕವೊ ನಿಜವೊ, ಸಮಾನತೆಗೆ ಸಮಂಜಸ ದಾರಿಗಳನ್ನು ಹುಡುಕುವ ಯೋಜನೆಗಳ೦ತೂ ತಲೆ ಎತ್ತುತ್ತಿವೆ. ಆದರೆ ನಿನ್ನಂಥ ಮಹಿಳೆಯರು, ನಿಮ್ಮ ಇಕ್ಕೆಲಕ್ಕೂ ರೆಕ್ಕೆಗಳನ್ನು ಹಚ್ಚಿದರೂ ತೆವಳುತ್ತ ಮನೆಯನ್ನೇ ತಬ್ಬಿಕೊಂಡಿರುತ್ತಿದ್ದರೆ ಯಾವುದೇ ಯೋಜನೆಗಳ ಸಫಲತೆ ಹೇಗೆ ಸಾಧ್ಯವೇ ಸುನೀ? ಸಮಾನತೆ ಮತ್ತು ಸ್ತೀ ಸ್ವಾತಂತ್ರ್ಯವನ್ನು ಇಡೀ ಸಮಾಜದಲ್ಲಿ ತರುವುದಕ್ಕಾಗಿ ಸೆಣಸುತ್ತಿರುವ ಸ್ತೀಯರಿಗೆ ನಿಮ್ಮಗಳ ಬೆಂಬಲವಾದರೂ ಬೇಡವೆ? ಇಲ್ಲವಾದರೆ ಅವರು ಮಾಡುವುದೆಲ್ಲ ಸಮಾಧಿಯೊಳಗಿನ ಚಟುವಟಿಕೆಗಳಂತೆಯೆ ಸರಿ”.
“ಸುನೀ. ಅಡುಗೆ ಏನು ಮಾಡಿದೀಯ? ಆಗಿದೆಯಾ ಇನ್ನೂ ಇಲ್ವಾ? ಎಂದಿಗಿಂತ ಬೇಗ ಮನೆಗೆ ಹಿಂತಿರುಗಿದ ಸುನೀತಳ ಗಂಡ, ಬಿಟ್ಟ ರೆಪ್ಪೆಯಲ್ಲಿ ಬಾಗಿಲತ್ತ ನೋಡುತ್ತಿದ್ದ ಸುನೀತಳನ್ನು ಕೇಳುತ್ತಲೇ ಒಳ ಬಂದ. ‘ಹಂ? ಎಚ್ಚರಗೊಳ್ಳಲು ಕೆಲಕ್ಷಣ ತೆಗೆದುಕೊಂಡು, ತಡವರಿಕೆಯ ಉತ್ತರ ಜೋಡಿಸಿದಳು. “ಸೊಪ್ಪಿನ ಹುಳಿ. ಮತ್ತೆ ಸಾರು.
“ಬಾತ್ ಯಾಕೆ ಮಾಡ್ಲಿಲ್ಲ? ಮೆಂತ್ಯೆಸೊಪ್ಪು-ಬಟಾಣಿ ಬಾತ್ ಮಾಡೂ೦ತ, ನಿನ್ನೆ ಅದಕ್ಕಾಗಿ ಆಪಿಸ್‌ನಿಂದ ಬಂದವನೇ ಮಾರ್ಕೆಟ್‌ಗೆ ಹೋಗಿ ಡೊಣ್ಣೆ ಮೆಣಸಿನಕಾಯಿ, ಆಲೂಗಡ್ಡೆ, ಸೊಪ್ಪು, ಎಲ್ಲ ತಂದಿದೀನಿ. ಅಂದ್ರೂ ಅದೇನು ಸೋಮಾರಿತನವೊ”, ಎಂದವನು, ಸ್ನೇಹಾಳ ಸಾವಿನ ಸುದ್ದಿ ತಿಳಿದು ಶಾಕ್ ಆಗಿ ಕೆಲವು ಕ್ಷಣಗಳ ಮೌನದ ನಂತರ “ಸ್ನೇಹಾ ಮನೆಗೆ ಇನ್ನೂ ಹೋಗಕ್ಕಾಗಿಲ್ವ? ಆದ್ರೆ ಹೇಗಿದ್ರೂ ಬೆಳಿಗ್ಗೆಯಿಂದ ಮನೇಲೆ ಕೂತಿದೀಯ, ಎಲ್ಲೂ ಹೋಗಿಲ್ಲ, ಬಾತ್ ಮಾಡಿದ್ದರೆ ಇಷ್ಟುಹೊತ್ತಿಗೆ ಆಗಿಯೇ ಹೋಗೋದಾ? ನಂಗೆ ಆ ಸಾರು, ಹುಳಿಗಳೆಲ್ಲ ಬೇಜಾರು”, ಎಂದು ಸ್ನೇಹಾ ಮತ್ತು ಸುನೀತಳ ಗೆಳೆತನದ ಗಾಢತೆ ಅರಿಯದ ಗಂಡ ಕೈಕಾಲು ತೊಳೆಯುತ್ತಲೇ ತನ್ನ ಅಸಮಾಧಾನವನ್ನು ನಿಧಾನದ ಪದಗಳಲ್ಲಿ ಬೇಸರದ ರಾಗದಲ್ಲಿ ಅವಳ ಮುಂದೆ ಸುರಿದ. “ಹೋಗಲಿ ರಾಯಿತ ಮಾಡಿ, ಸಂಡಿಗೆ ಕರಿದು ಬಿಡು. ಅದಕ್ಕೆಷ್ಟು ಮಹಾ ಟೈ೦ ಆಗತ್ತೆ ಅಲ್ವಾ? ನಾನೂ ಹೆಲ್ಪ್ ಮಾಡ್ತೀನಿ”, ಎಂದು ಒಳ್ಳೆಯ ಮಾತಿನಲ್ಲಿ ಕೇಳಿದಾಗ, ಈ ವರೆಗೆ ನೆನಪಿನ ಅಂಗಳದಿ೦ದ ಮೆರೆದುಹೋದ ಸ್ನೇಹಾಳ ಎಲ್ಲ ಮಾರ್ಗಸೂಚಿಗಳನ್ನು ಒಂದೆಡೆಗೆ ತಳ್ಳಿ, ಗ೦ಡ ಮಕ್ಕಳಿಗೆ ತೃಪ್ತಿ ಪಡಿಸಿ ಮನೆಯಲ್ಲಿ ನೆಮ್ಮದಿಯಾಗಿರುವುದೇ ಮುಖ್ಯವೆನಿಸಿ, ಗಂಡ ಹೇಳಿದುದನ್ನು ತಯಾರಿಸಲು ತೊಡಗಿದಳು ಸುನೀತ. ಈಗ ಅವನು ತೃಪ್ತಿಯಿಂದ ಸ್ನೇಹಾಳ ಸಾವಿನ ಸುದ್ದಿಯ ಹಿಂದುಮುಂದಿನ ವಿವರಗಳನ್ನೆಲ್ಲ ಕೇಳುತ್ತ ಅವಳಿಗೆ ಸಹಾಯ ಮಾಡಲೆಂದು ಎಣ್ಣೆಯನ್ನು ಕವರಿನಿಂದ ಬಾಂಡಲೆಗೆ ಸುರಿಯಲು ಹೋದ. ಸರಿಯಾಗಿ ಬರದೇ ಅರ್ಧ ನೆಲಕ್ಕೆ ಚೆಲ್ಲಿದ. ರಾಯಿತಕ್ಕೆ ಹಾಕಬೇಕಾದ ಸಾಮಗ್ರಿಗಳ ಬಗ್ಗೆ ಕೇಳಿ ಉಪ್ಪಿನ ಬದಲು ಸಕ್ಕರೆ ಹಾಕಿ ಲೊಚಗುಟ್ಟಿದ. ಕಾಯಿ ತುರಿದು ಕೊಟ್ಟು, “ನೋಡು ನಿಂಗೆ ಅಗತ್ಯವಿದ್ದಾಗ ತಿಳಿದುಕೊಂಡು ಹೀಗೆ ಹೆಲ್ಪ್ ಮಾಡುವಂಥ ಮನುಷ್ಯ ಸಿಕ್ಕಿದೀನಲ್ಲ ನಾನು, ಅದಿಕ್ಕೆ ಸಂತೋಷ ಪಟ್ಟುಕೋಬೇಕು ನೀನು”, ಎಂದವನು “ಚೆಲ್ಲಿದ್ದನೆಲ್ಲ ಸ್ನೇಹಾ ಮನೆಯಿಂದ ಬಂದ್ಮೇಲೆ ಕ್ಲೀನ್ ಮಾಡು” ಎಂದು ಬಹಳ ಉಪಕಾರದ ಮಾತೆಂಬಂತಹ ಶೈಲಿಯಲ್ಲಿ ಹೇಳಿದ. ‘ಗಂಡಸು ಒಂದೇ ಒಂದು ದಿನ ಮನೆಯಲ್ಲಿ ಒಂದು ಸಣ್ಣ ಕೆಲಸ ಮಾಡಿದರೆ ಗುಡ್ಡ ಒಡೆದನೆಂಬಂತೆ ಹೆಂಗಸರಾದ ನಾವು ಕೊಚ್ಚಿಕೊಳ್ಳುತ್ತೇವೆ. ಅದೇ ನಾವು ಗುಡ್ಡವೇ ಕೊರೆದರೂ, ಅದೇನು ಮಹಾ ದೊಡ್ಡ ಕೆಲಸ ಎನ್ನುತ್ತಾರೆ ಅವರುಗಳು. ಅವರು ಅನ್ನುವುದು, ಮಾಡುವುದು ಎಲ್ಲವೂ ದೊಡ್ಡದು ಎಂಬಂತೆ ನಾವು ಭಾವಿಸುತ್ತೇವೆ. ಅವರ ಸಹಾಯಕ್ಕಿಂತ ತೊಂದರೆಯೇ ಹೆಚ್ಚಾಗುತ್ತದೆ ಕೆಲವು ಸಲ. ನಾವೂ ತಿಳಿಯಪಡಿಸಿದರೆ ತಾನೇ ಪ್ರತಿ ದಿನದ ನಮ್ಮ ಕೆಲಸ ಎಷ್ಟು ಮಹತ್ವದ್ದು ಎಂಬುದು ಯಾರಿಗಾದರೂ ಗೊತ್ತಾಗುವುದು”? ಎಂದ ಸ್ನೇಹಳ ಮಾತು ಹಾರಿ ಬಂದು, ಚೆಲ್ಲಿದ ಎಣ್ಣೆಯನ್ನು ನೋಡುತ್ತಿದ್ದವಳ ಕಿವಿಯಲ್ಲಿ ಕುಳಿತಿತು.
ಎಲ್ಲ ಮುಗಿದು, ಅವಳ ಗಂಡ ತಟ್ಟೆಯಲ್ಲಿ ಬಡಿಸಿಕೊಂಡ ಮೇಲೆ ದುಗುಡದೊಂದಿಗೇ ಆಟೋಕ್ಕಾಗಿ ಅರಸುತ್ತ ಮೆಟ್ಟಿಲಿಳಿದಳು ಅವಳು. “ಸ್ನೇಹಾಗೆ ಹಾರ್ಟ್ ಅಟ್ಯಾಕ್ ಅಷ್ಟೊಂದು ಜೋರಾಗಿತ್ತೇ? ಪಾಪ! ಅಲ್ಲಿ ಇಲ್ಲಿ ಸಂಶೋಧನೆ ಮಾಡುವುದರಲ್ಲೇ ದಡಗುಟ್ಟುವ ದಿನಗಳನ್ನು ಕಳೆದಳು. ಅರೆ ಬರೆ ಅಡುಗೆ, ಅರೆ ಬರೆ ಮಾತು. ಒತ್ತಡದಲ್ಲೇ ಸದಾ ಕೆಲಸ. ಒಂದಿಷ್ಟು ನೆಮ್ಮದಿ ಇಲ್ಲ. ತೃಪ್ತಿ-ಸಂತಸಗಳ ಮಾತಿಲ್ಲ. ಯಾಕಷ್ಟು ಒದ್ದಾಡಬೇಕೋ. ಮುದಿಯಾದ ಮೇಲೆ ಬರೀ ಮನೆಯೇ ತಾನೇ ಎನ್ನುತ್ತಿದ್ದವಳು, ಮುದಿತನದ ಮೊದಲ ಮೆಟ್ಟಲ ಮೇಲೆ ನಿಲ್ಲುವಾಗಲೇ ಕುಸಿದೇ ಬಿಟ್ಟಳಲ್ಲ”.. ಆಟೋ ಒಂದು ಸರ್ರನೆ ಕಣ್ಣ ಮುಂದೋಡಿದಾಗ, ಎಚ್ಚರಗೊಂಡು ಕೈ ಅಡ್ಡ ಹಿಡಿದಳು. ಎಲ್ಲಿಗೆ ಹೋಗಬೇಕಾಗಿದೆ ಎಂದು ಇವಳು ಹೇಳುವ ಮುನ್ನವೇ ಅವನೇ ಹೇಳಿದ. “ಬಸವೇಶ್ವರ ನಗರ ಬರ್ತೀರಾ”? ಅವಳು ಅಲ್ಲ ಎಂಬಂತೆ ಅಡ್ಡ ತಲೆ ಆಡಿಸಿದೊಡನೆ ಏನೂ ಹೇಳದೆ ಅಟೋ ಓಡಿಸಿದ ಅವನು.
“ಸುನೀ. ಪಾಪು ತಿಂದಿದ್ದೆಲ್ಲ ವಾಂತಿ ಮಾಡಿಕೊಂಡಿದೆ. ಹಾಸಿದ್ದು, ತೊಟ್ಟಿದ್ದು ಎಲ್ಲ ಒದ್ದೆ ಆಗಿದೆ. ನಂಗೆ ಕ್ಲೀನ್ ಮಾಡಕ್ಕೆ ಬರಲ್ಲ. ನೀನೇ ಮಾಡಿ ಹೋಗು ಬಾ”. ಮಗುವನ್ನು ಮನೆಯಲ್ಲೇ ಬಿಟ್ಟು, ಹಾರು ಹೊಡೆದ ಬಾಗಿಲನ್ನು ತೆರೆದಂತೆಯೇ ಬಿಟ್ಟು, ಸುನೀತ ನಿಂತಿದ್ದಲ್ಲಿಯೇ ಬಂದು ಕರೆದ ಅವಳ ಗಂಡ. “ಮಾಡಲ್ಲ ಅಥವಾ ಮಾಡಲು ಮನಸ್ಸಿಲ್ಲ, ಎನ್ನುವ ಬದಲು ಉಪಯೋಗಿಸುವ ಪದವೇ ‘ಬರಲ್ಲ’ ಎಂಬುದು””, ಎಂದು ಸ್ನೇಹ ಎಂದೋ ಹೇಳಿದ ಮಾತು, ಅವಳೊಂದಿಗೆ ಮನೆಯವರೆಗೂ ಹಿಂದೆ ಬಂದಿತು. “ಹೆಣ್ಣಿಗೆ ಹತ್ತಾದ ಕೂಡಲೇ ಹೆಜ್ಜೆ ಹೆಜ್ಜೆಗೆ ತಲೆಗೆ ಮಟ್ಟಿ ಮಾಡಿಸುವಂತೆಯೇ ಗಂಡಿಗೂ ಮಾಡಿಸಿದರೆ, ಅವರೂ ಮನೆಗೆಲಸದ ವಿಷಯಕ್ಕೆ ಸ್ವಾವಲಂಬಿಯಾದಾರು. ಹೆಂಗಸರ ಸಾಧನೆಗೂ ಅದು ನೆರವಾದೀತು” ಎನ್ನುತ್ತಿದ್ದ ಸ್ನೇಹಾಳ ಮಾತು ಮೊಟ್ಟ ಮೊದಲ ಬಾರಿಗೆ ನಿಜವೆನ್ನಿಸಿತು. ಮನೆಗೊಮ್ಮೆ ಅಂಟಿಬಿಟ್ಟರೆ ಬಿಡುಗಡೆಯೂ ಇಲ್ಲ, ನೆಮ್ಮದಿಯೂ ಇಲ್ಲ, ಎನ್ನುವುದೂ ಇಂದಿನ ಪರಿಸ್ಥಿತಿ ತಿಳಿಸಿತ್ತು.
ಮಗು ವಾಂತಿ ಮಾಡಿದೊಡನೆಯೇ ಏನು ಮಾಡಲೂ ತೋಚದ ಗಂಡ, ಅದನ್ನು ಇದ್ದಲ್ಲಿಯೇ ಬಿಟ್ಟು ರಸ್ತೆಗೆ ಓಡಿ ಬಂದಿದ್ದರಿಂದ ಅಳುತ್ತಲಿದ್ದ ಮಗು ಮ೦ಚದ ಅಂಚಿಗೆ ಬಂದು, ಸುನೀತ ಮನೆಯೊಳಗೆ ಕಾಲಿಡುವಾಗಲೇ ನೆಲಕ್ಕೆ ಬಿದ್ದಿತು. ಅದರ ಕಾಲಿಗೆ ಆದ ಗಾಯಕ್ಕೆ ಯಾವುದೋ ಎಣ್ಣೆ ಹಚ್ಚಿ, ಅದು ಅಳು ನಿಲ್ಲಿಸುವವರೆಗೆ ಅದನ್ನು ಸಮಾಧಾನಿಸಲು ಎತ್ತಿಕೊಂಡು ಮನೆತುಂಬ ಅಡ್ಡಾಡಿದಳು. ಆಗಲೇ ಎರಡು ಘಂಟೆಯಾಗಿತ್ತು. “ಸ್ನೇಹಾಗೆ ಹತ್ತಿರದ ಎಲ್ಲ ಸಂಬಂಧಿಗಳೂ ಇದೇ ಊರಲ್ಲಿರುವುದರಿಂದ ಶವ ಸಂಸ್ಕಾರಕ್ಕೆ ದೂರದಿಂದ ಯಾರನ್ನೂ ಕಾಯುವಂತಿಲ್ಲ. ತಾನು ಹೋಗುವುದರೊಳಗೆ ಮುಗಿದೇ ಹೋಗಬಹುದಾ”? ಯೋಚಿಸುತ್ತಲೆ, ಮಗುವನ್ನೂ, ಅದರ ಬಟ್ಟೆಗಳನ್ನೂ ಪೂರ್ತಿ ಸ್ವಚ್ಛಗೊಳಿಸಿ, ನೀರು ಕಾಯಿಸಿ ಬಿಸಿನೀರಿನಿಂದ ಮೈ ಒರೆಸಿ, ಆ ಬಟ್ಟೆಗಳನ್ನು ಒಂದು ಬಕೆಟ್‌ನಲ್ಲಿ ಒಗೆಯಲು ತುಂಬಿಟ್ಟು, ಮತ್ತೆ ಬಾಗಿಲಿಗೆ ಬಂದಾಗ ಮಗು ಅವಳ ಕೈ ಬಿಡದೆ ಅಳತೊಡಗಿತು. ಜ್ವರ ಬಂದ ಮಗು, ಅಜ್ಜಿಗೇ ಹೆಚ್ಚು ಅಂಟಿಕೊಂಡ ಮಗು ಅಜ್ಜನ ಹತ್ತಿರ ಹೋಗುವುದಕ್ಕೇ ಹಟ ಮಾಡಿತು. ಅವಳು ತನ್ನೆಲ್ಲ ಶಕ್ತಿಯನ್ನೂ, ಮಿದುಳನ್ನೂ ಉಪಯೋಗಿಸಿ, ಅದನ್ನು ಮತ್ತೊಮ್ಮೆ ನಿದ್ದೆಗೆ ಕೆಡಹುವ ಹೊತ್ತಿಗೆ ಅವನಿಗೆ ಕಛೇರಿಗೆ ಹೊರಡುವ ಹೊತ್ತಾಗಿತ್ತು. “ದೀಪ್ತಿಗೆ ಬೇಗ ಮನೆಗೆ ಬರೋದಕ್ಕೆ ಹೇಳು ಸುನೀ. ಅವಳು ಬಂದ ತಕ್ಷಣ ನೀನು ಹೊರಟು ಬಿಡು. ಸಂಜೆ ನಾನು ಫ್ರೆಂಡ್ಸ್ ಜೊತೆ ಯಾವುದೋ ಕಾರ್ಯಕ್ರಮಕ್ಕೆ ಹೋಗ್ಬೇಕಾಗಿರೋದ್ರಿ೦ದ ಬರೋದು ತಡವಾಗತ್ತೆ”, ಎಂದ ಅವನು ಹೋಗುವುದನ್ನೇ ನೊಡುತ್ತ ಮತ್ತೊಮ್ಮೆ ಕುಸಿದು ಕುಳಿತಳು. ಕೈಲಿದ್ದ ಮಗು ಜ್ವರದಿಂದ ಮುಲುಗುತ್ತಿತ್ತು. ಅವಳ ಮನಸ್ಸು ದುಗುಡದಿಂದ ತಳಮಳಿಸುತ್ತಿತ್ತು. “ಆಸೆ ಎಂದರೆ ಆಕಾಶಕ್ಕೆ ಹಾರುವುದು ಅಂತೇನಲ್ಲ ಸುನೀ. ಹಾಗೇನೆ ಸಾಧನೆ ಎಂದ ಕೂಡಲೇ ‘ನಕ್ಷತ್ರ ಕಿತ್ತು ತರುವುದೇ ಎಂದರ್ಥವಲ್ಲ. ನೀನು ಬಯಸಿದ ನೆಲದಲ್ಲಿ ಒಂದರ್ಧ ಘಂಟೆ ಓಡಾಡಿ ಬರಬೇಕೆಂಬುದೂ ಆಸೆಯೇ. ನಿನ್ನಿಷ್ಟದಂತೆ ಅರ್ಧ ತಾಸನ್ನು ನಿನ್ನ ಹಿಡಿತಕ್ಕೆ ತೆಗೆದುಕೊಳ್ಳುವುದೂ ಸಾಧನೆಯೇ”. ಸ್ನೇಹಾಳ ಎಷ್ಟೊಂದು ಮಾತುಗಳು ನೆನಪಿನ ಮನೆಯಿಂದ ಒಂದೊಂದಾಗಿ ಹೊರಬಂದು ಅವಳೊಳಗೇ ಓಡಾಡುತ್ತಿತ್ತು.
ಮಗುವನ್ನು ಬೆನ್ನಿನ ಮೇಲೆ ಹಾಕಿಕೊಂಡು ತಟ್ಟುತ್ತಲೇ ಮಗಳಿಗೆ ಫೋನ್ ಮಾಡಿದಳು. “ಅವಳು ಸೀಟಲ್ಲಿಲ್ಲ ಆಂಟೀ. ಇವೊತ್ತು ನಮ್ಮ ಕಲೀಗ್ ಒಬ್ಬರದು ವೆಡ್ಡಿಂಗ್ ಆನ್ನಿವರ್ಸರಿ. ಊಟಕ್ಕೇ೦ತ ಎಲ್ರೂ ಹೋಟೆಲ್‌ಗೆ ಹೋಗಿದಾರೆ. ಇನ್ನೂ ಬಂದಿಲ್ಲ. ನನಗೆ ಕಾಲು ನೋವಿರುವುದರಿಂದ ಉಳಿದಿದೀನಿ. ಆಫೀಸ್ ತುಂಬ ನಾನೊಬ್ಬಳೇ ಇರೋದು”, ಎಂದಿತು ಅತ್ತ ಕಡೆಯ ಬಾಯಿಯೊಂದು.
ಸುನೀತಳ ಚಡಪಡಿಕೆಯಲ್ಲಿ ಸಿಟ್ಟೂ ಶಾಮೀಲುಗೊಂಡಿತು ಈಗ. ಅರ್ಧ ಘಂಟೆ ಕಾದು ಮತ್ತೆ ಮಗಳಿಗೆ ಫೋನ್ ಮಾಡಿದಾಗ, ಆಗ ತಾನೆ ಸೀಟಿಗೆ ಬಂದಿದ್ದ ಮಗಳು “ಏನಮ್ಮ ಪಾಪು ಆರಾಮಾಗಿದೆ ತಾನೇ? ಯಾಕೆ ಮೇಲಿಂದ ಮೇಲೆ ಫೋನ್ ಮಾಡಿದ್ದು”? ಎಂದು ಕೇಳಿ, ಸ್ನೇಹಳ ಸಾವಿನ ಸುದ್ದಿ ತಿಳಿಯುವುದರ ಜೊತೆಗೆ, ‘ಮನೇಲಿ ಯಾರೂ ಇಲ್ಲಾಂತ ಪಾಪುನ್ನ ಆ ಸತ್ತಮನೆಗೆ ಕರ್ಕೊಂಡ್ ಹೋಗ್ಬೇಡಮ್ಮ. ನಾನು ಬಂದ್….‘ , ಎ೦ದು ಇನ್ನೂ ಫೂರ್ತಿ ಹೇಳುವ ಮೊದಲೇ ಕಟ್ಟಿಕೊಂಡ ಸಿಟ್ಟನ್ನ ಫೋನಿನಲ್ಲೇ ಸುರಿದಳು ಸುನೀತ. “ನೀವೆಲ್ಲ ಆರಾಮಾಗಿ ಆನ್ನಿವರ್ಸರಿ ಪಾರ್ಟಿ, ಕ್ರಿಕೆಟ್ಟು, ಕಾರ್ಯಕ್ರಮಾಂತ ಮಜಾ ಮಾಡ್ತಾ ಇರಿ. ನಾನು ಇಲ್ಲಿ ಸತ್ತವಳೊಬ್ಬಳನ್ನು ನೋಡಲೂ ಹೋಗಲಾಗದೆ ಮನೇಲೆ ಬಿದ್ದಿರ್ತೀನಿ. ನೀವೆಲ್ಲ ನನ್ನ ಏನು ಅಂದ್ಕೊಂಡಿದೀರಿ. ನೀನು ರಜಾ ಹಾಕಿಯಾದ್ರೂ ಸರಿ ಈಗ್ಲೇ ಮನೆಗೆ ಬಾ”.
ಆ ಕ್ಷಣ ಅವಳೊಳಗಿನ ದುಃಖ ಬೇಸರ ಮತ್ತು ಅಸಹಾಯಕತೆಗಳು ಅಳುವಾಗಿ ಹೊರ ಹರಿಯಲು ದಾರಿ ಹುಡುಕುತ್ತಿದ್ದವು. ಮಗು ಕೈಯ್ಯಲ್ಲೇ ನಿದ್ದೆ ಹೋದಾಗ, ಮನೆ ತುಂಬ ತುಂಬಿದ ಒಂಟಿತನ, ಒಳಗಿನ ಅಳುವನ್ನು ಹೊರಗೆಳೆಯಿತು. ಚಿಕ್ಕವಳಿದ್ದಾಗಿನಿಂದಲೂ ಅವಳಿಗೆ ತುಂಬ ಆಪ್ತನಾದವನೆಂದರೆ ಅವಳು ನಂಬಿ ನಿರ್ಮಿಸಿಕೊಂಡ ಅವಳ ದೇವರು. ಅವಳ ಒಳಗಿನ ತುಮುಲಗಳನ್ನು, ಅವ್ಯಕ್ತ ಭಾವನೆಗಳನ್ನು ಮೌನದಿಂದ ಆಲಿಸುವ ಏಕೈಕ ಶ್ರೋತೃ. ಅವಳ ಅಂತರಂಗದ ಆಪ್ತವ್ಯಕ್ತಿ. ದೇವರ ಪಟದ ಮುಂದೆ ಕುಳಿತು ಜೋರಾಗಿ ಅತ್ತಳು. ದುಃಖದ ದೊಡ್ಡ ಮೊತ್ತ ಅಳುವಾಗಿ ಹೊರ ಹರಿದು ಹಗುರವಾದಂತೆನಿಸಿದರೂ, ಅರ್ಥವಾಗದ ತಳಮಳವೊಂದು ಅಂತರ೦ಗದಲ್ಲೇ ಉಳಿದಿತ್ತು. ಅವಳಿಗೆ ಗೊತ್ತು, ಸ್ನೇಹಳ ಮನೆಗೆ ಹೋಗಿ ಅವಳ ಶವವನ್ನು ನೋಡುವವರೆಗೆ ಆ ತಳಮಳ ಕರಗುವುದಿಲ್ಲ. ಕಣ್ಣೀರು ಬತ್ತುವುದಿಲ್ಲ ಎಂದು.
ಪುನಃ ಮನೆಯ ಕರೆಘಂಟೆ ಯಾರೋ ಬಂದರೆಂಬುದನ್ನು ಹೇಳಿತು. ಸ್ನೇಹಾಳ ಮನೆಯಲ್ಲೇ ಬೆಳೆಯುತ್ತಿದ್ದ, ಅವಳ ತಂಗಿಯ ಮಗ ಭುವಿ ಬಾಗಿಲಲ್ಲಿ ನಿಂತಿದ್ದ. “ಆಂಟೀ ನೀವು ನಮ್ಮ ಮನೆಗೆ ಹೋಗಬೇಕಲ್ವ? ಹೋಗಿ ಬನ್ನಿ ನಾನು ನಿಮ್ಮ ಮನೆಯಲ್ಲಿರ್ತೀನಿ.”. ಬೇರೊಂದು ಮಾತು, ಪ್ರಶ್ನೆ, ಯಾವುದಕ್ಕೂ ಆಸ್ಪದ ಕೊಡದೆ, “ನೀವು ಮನೆಗೆ ಕೂಡಲೇ ಹೋಗಿ”, ಎಂದು ಅವಸರಿಸಿದ. “ಭುವೀ ನೀನು.. ನಿನಗೆ ಸಣ್ಣ ಮಗುವನ್ನು ಎತ್ತಿಕೊಳ್ಳಲಾದರೂ ಬರುತ್ತಾ”? ಸ್ನೇಹಳ ಬಳಿಗೆ ಓಡುವ ಆತುರದಲ್ಲಿದ್ದ ಅವಳು ಕೇಳಿದಳು.
“ನಮ್ಮ ಅಮ್ಮ ಅವಳ ಫ್ರೆಂಡ್ ಮಗುವನ್ನು ಕರ್ಕೊಂಡ್ ಬರ್ತಿತಾರೆ ಆಂಟೀ. ಅಭ್ಯಾಸ ಇದೆ ನನಗೆ. ಅಮ್ಮ ಹೇಳಿಕೊಡದ ಪಾಠವಿಲ್ಲ. ಮಾಡಿಸದ ಕೆಲಸವಿಲ್ಲ. ನಮಗೆ ಎಲ್ಲವನ್ನೂ ಕಲಿಸಿದ್ದಾರೆ. ಅಂಥ ಅಮ್ಮನ ಮನೆಯಲ್ಲಿರುವುದು ನಮ್ಮ ಪುಣ್ಯ. ನೀವು ಮನೆಗೆ ಹೋಗಿ ಬನ್ನಿ”. ಸ್ನೇಹಳನ್ನು ಅಮ್ಮ ಎಂದೇ ಕರೆಯುತ್ತಿದ್ದ ಭುವಿ ಕೈಲಿದ್ದ ಮಗುವನ್ನು ಎತ್ತಿಕೊಳ್ಳುತ್ತ ಉತ್ತರಿಸಿದ. ಅವನ ಕೈಗೆ ಕೊಟ್ಟು ದಡದಡನೆ ರಸ್ತೆಗಿಳಿದಳು ಸುನೀತ. ಅಲೊಚನೆಗಳು, ಅವಳೊಂದಿಗೆ ಹೆಜ್ಜೆ ಹಾಕಿದವು. “ತನ್ನ ಮಕ್ಕಳೂ ಕೇಳದ ಮಾತನ್ನು, ಸ್ನೇಹಳ ತಂಗಿಯ ಮಗ ಕೇಳುತ್ತಾನಲ್ಲ. ಶವ ಸಂಸ್ಕಾರಕ್ಕೆ ತಡವಾಗುತ್ತದೆಂದೇ, ಅಷ್ಟು ಅವಸರಿಸಿದನೇ? ಇರಬಹುದು ಎಂದಿತು, ಸುನೀತಳ ಮನಸ್ಸು.
ಮೌನ ಕವಿದ ಸ್ನೇಹಾಳ ಮನೆ ಸ್ಮಶಾನದಂತಿತ್ತು. ಸತ್ತ ಸ್ನೇಹಾಳ ಶವವನ್ನು ಒಳಗೇ ಹುಗಿದಿಟ್ಟುಕೊಂಡ೦ತಿತ್ತು. ಮಾತಿಲ್ಲ, ದನಿ ಇಲ್ಲ, ಯಾರ ಓಡಾಟವೂ ಇಲ್ಲ. ಉಳಿದ ಮಂದಿಯ ಉಸಿರಾಟವೂ ಇಲ್ಲ. ಇಡೀ ಮನೆ ವಿಚಿತ್ರವಾದ ನೀರವದೊಳಗೆ ಮುಳುಗಿದೆ. ಅಗಳಿ ಹಾಕದ ಬಾಗಿಲು ತಳ್ಳಿದರೆ ಒಳಗೆ ಯಾರೆಂದರೆ ಯಾರೂ ಇಲ್ಲ. ನೋಡಲೆಂದು ಬಂದಿರಬಹುದಾದ ಅವಳ ಅಣ್ಣ, ಅಮ್ಮ, ತಂಗಿ, ಎಲ್ಲರೂ ಶವ ಸಂಸ್ಕಾರಕ್ಕೆ೦ದು ಸ್ಮಶಾನಕ್ಕೆ ಹೋದರೇ? ತಾನು ಬಂದುದು ಛೆ ತುಂಬ ತಡವಾಯಿತು. ಗಾಢ ಮೌನ ತುಂಬಿದ ಮನೆಯಲ್ಲಿ ತಾನೊಬ್ಬಳೇ ಎಂಬ ಪ್ರಜ್ಙೆ ಮೂಡಿದಾಗ ಒಂದು ರೀತಿಯ ಭಯ ಆವರಿಸಿತು. ಸದ್ದಿಲ್ಲದ ಒಂದೊಂದೇ ಹೆಜ್ಜೆಗಳನ್ನು ಸರಿಸುತ್ತ, ಒಳಗಿನ ಮನೆ, ಅದರೊಳಗಿನ ಹಾಲು, ಅದರೊಳಗಿನ ರೂಮು ನೋಡುತ್ತ ಒಳಗೆ ಯಾರಿದ್ದಾರೆಂದು ಹುಡುಕುತ್ತ ಹೋದಳು. ಎಲ್ಲ ಎಷ್ಟು ಅಚ್ಚುಕಟ್ಟು. ತನ್ನ ಮನೆಯಷ್ಟೇ ಕ್ಲೀನಾಗಿದೆ.
ಪಕ್ಕದ ಮ೦ಚದ ಮೇಲೆ ಮಲಗಿದ್ದ ಒಂದು ದೇಹ ದುತ್ತನೆ ಅವಳ ದೃಷ್ಟಿಗೆ ಎಡವಿ ಜೋರಾಗಿ ಬೆಚ್ಚಿದಳು ಅವಳು. ಅವಳ ಹೃದಯ ಜೋರಾಗಿ ಬಡಿದುಕೊಳ್ಳುತ್ತ ಬಾಯಿಗೇ ಬಂದಿತು. ಉಫ್! ಸ್ನೇಹಳ ದೇಹ! ಇಲ್ಲೇ ಇದೆಯಲ್ಲ. ಇದು .. ಇಲ್ಲ.. ಇಲ್ಲ ಸಾಧ್ಯವೇ ಇಲ್ಲ. ಬೆಳಿಗ್ಗೆಯೇ ಸತ್ತು ಹೋದ ಅವಳ ದೇಹ ಹೀಗೆ ಅನಾಥವಾಗಿ ಹೇಳಕೇಳುವವರಿಲ್ಲದೆ ಮನೆಯ ತುಂಬ ತುಂಬಿಕೊ೦ಡಂತಿರಲು ಸಾಧ್ಯವೇ ಇಲ್ಲ. ಅವಳ ಮಕ್ಕಳು ಮತ್ತು ಗಂಡನಾದರೂ ಜೊತೆಗಿರುತ್ತಿದ್ದರು. ಆದರೆ ಅವರೆಲ್ಲ ಇವಳ ಭೌತಿಕ ದೇಹವನ್ನು ಮಣ್ಣಾಗಿಸಲು ಹೋಗಿದ್ದಾರೆ. ಇದು ಅವಳ ಅಂತರಾತ್ಮ? ಊಹೂ ಸುನೀತಳಿಂದ ಮುಂದೆ ಯೋಚಿಸಲಾಗಲಿಲ್ಲ. ಅವಳ ಶವವನ್ನು ನೋಡಲೆಂದೇ ಬಂದವಳು, ದೇಹದ ಮೇಲೆ ಬಿದ್ದು ಭೋರೆಂದು ಅತ್ತು ಹಗುರಾಗಲೆಂದು ಬಂದವಳು, ಅಳುವುದೇನು, ಉಸಿರನ್ನೂ ಕಟ್ಟಿ ಹಿಂತಿರುಗಿ ಓಡಬೇಕೆನಿಸಿದಂತೆ, ಪಟಪಟ ಹಾರುತ್ತಿರುವ ಹೃದಯವನ್ನು ಒತ್ತಿ ಹಿಡಿದು, ದಪದಪನೆ ಹೆಜ್ಜೆ ಹಾಕಿದಳು. ಎರಡೇ ಹೆಜ್ಜೆ. ಸ್ನೇಹಳ ತಲೆ ಬದಿಯಿಂದ ಕಾಲ ಬದಿಗೆ ಹಾರಿದ್ದಳಷ್ಟೆ. ಅವಳ ಕೈ, ಎದ್ದು ಎಳೆದುಕೊಂಡ ಸ್ನೇಹಳ ಕೈಯ್ಯಲ್ಲಿತ್ತು. ಆವ್! ಎಂಬ ಒ೦ದು ಸಣ್ಣ ಕಿರುಚಿನೊಂದಿಗೆ ಅವಳ ಉಸಿರಾಟ ನಿಂತೇ ಹೋಗಿತ್ತು. “ಯಾಕೆ ಸುನೀ, ಅಷ್ಟೊಂದು ಹೆದರಿಕೆ. ನನಗೆ ಗೊತ್ತಿತ್ತು. ಬೆಳಿಗ್ಗೆ ತಿಳಿಸಿದರೆ ನೀನು ಇಲ್ಲಿಗೆ ಬರೋದು ಮಧ್ಯಾಹ್ನವೇ ಅಂತ. ಮಧ್ಯಾಹ್ನ ದಾಟಿದ್ರೂ ನೀನು ಬರದೇ ಇದ್ದಿದ್ದು ನೋಡಿ ನಮ್ಮ ಭುವಿಯನ್ನ ಕಳಿಸ್ದೆ. ಎಷ್ಟೋ ವರ್ಷಗಳಿಂದ ನಾ ಹೇಳುತ್ತ ಬಂದ ಮಾತುಗಳಿಗೆ ಇವೊತ್ತು ಅರ್ಥ ಸಿಕ್ಕಿರಬೇಕಲ್ವ? ಆದರೂ ನೀನು ಸಿಡುಕಿಲ್ಲ ತಾನೇ? ಸಿಡುಕಬಾರ್‌ದು. ದೂರ ಸಿಡಿಯಲೂ ಬರದು. ಕುಟುಂಬದ ನಿರ್ವಹಣೆಯಲ್ಲಿ ನಿನ್ನ ಸ್ವಾತ೦ತ್ರವೂ ಒಂದಂಶವಾಗಬೇಕು. ನನ್ನ ಮನೆಯ ಅಚ್ಚುಕಟ್ಟು ನೋಡಿದೆಯಲ್ಲ? ಇದು ನನ್ನೊಬ್ಬಳಿಂದ ಆಗುವುದಲ್ಲ. ಎಲ್ಲರೂ ಸೇರಿ ಆಗಿಸುತ್ತಿರುವುದು. ಪ್ರತಿಯೊಬ್ಬರ ಮನೆಯೂ ಹೀಗೇ ಆಗಬೇಕು. ಅದು ನನ್ನ ಆಸೆ. ಕೂತ್ಕೊಳಲ್ವ ಸುನೀ. ಹುಂ. ಮೊಮ್ಮಗು ಅಳ್ತಾ ಇರುತ್ತೆ. ಅದನ್ನ ನೀನೇ ಸುಧಾರಿಸ್ಬೇಕು. ಕಿರೀ ಮಗ ಕಾಲೇಜಿನಿಂದ ಬರುವ ಹೊತ್ತಿಗೆ ತಿಂಡಿ ನೀನೇ ಮಾಡಬೇಕು. ಗಂಡ ಬರೋ ಹೊತ್ತಿಗೆ ತನು, ಮನೆ, ಮನಗಳನ್ನೆಲ್ಲ ಅಲಂಕರಿಸಿ ಅವರಲ್ಲಿ ಉತ್ಸಾಹ ತುಂಬಬೇಕು. ನಿನ್ನ್ನ ಜಗತ್ತಿನ ಆ ಸೇವಾಕ್ರಿಯೆಗಳಿಗೆ ತಡವಾಗಿ ಬಿಡುತ್ತೆ ಅಲ್ವ. ಹೋಗಿ ಬಾ. ಸದ್ಯ ಇಷ್ಟು ವರ್ಷಕ್ಕೆ ಒಮ್ಮೆಯಾದರೂ ಧಿಡೀರನೆ ಹೊರಟು ನಮ್ಮನೆಗೆ ಒಬ್ಬಳೇ ಬರುವ ಸ್ವಾತಂತ್ರ್ಯ ತೆಗೆದುಕೊಂಡೆಯಲ್ಲ. ನಾ ಹಾಕಿದ ಯೋಜನೆಗೆ ಅಷ್ಟು ಸಫಲತೆ ಸಾಕು. ಕತ್ತಲು ತುಂಬಿದ ನಿನ್ನ ದಾರಿಗೆ ಆರಂಭದ ಬೆಳಕಿಂಡಿ ಕಂಡಿದೆ. ಹೋಗಿ ಬಾ””. ಈ ಎಲ್ಲ ಮೆಲುಮಾತುಗಳು ಸ್ನೇಹಳ ಬಾಯಿಂದಲೇ ಬಂದವೇ. ಅಥವಾ ಅವಳ ಪರವಾಗಿ ತನ್ನದೇ ಮನದಿಂದೆದ್ದ ಅಲೋಚನೆಗಳೆ? ಇಲ್ಲ ಇಲ್ಲ. ಮಾತುಗಳು ಸ್ಪಷ್ಟವಾಗಿವೆ. ಸ್ನೇಹ ಕುಳಿತಿರುವುದು ಕಣ್ಣಿಗೆ ನಿಚ್ಚಳವಾಗಿದೆ. ಆದರೂ ಯಾಕೀ ಭಯ? ಸುರಿಯುತ್ತಿದ್ದ ಭಯದ ಬೆವರು, ಸುನೀತಳ ಪಾದಗಳನ್ನು ನೆಲಕ್ಕೆ ಅಂಟಿಸಿಬಿಟ್ಟಿತ್ತು. ಕಿತ್ತರೂ ಮೇಲೇಳದ ಹೆಜ್ಜೆ.
ಮಂಚದಿಂದ ಕೆಳಗಿಳಿದ ದೇಹ ಫ್ಯಾನ್ ಹಾಕುತ್ತಿದೆ ಎ೦ದೆನಿಸಿದ ಮರು ಕ್ಷಣ ಸುನೀತ ಹೊರ ಅಂಗಳಕ್ಕೆ ಜಿಗಿದಿದ್ದಳು. ಬೀದಿಯ ಕೊನೆಯವರೆಗೆ ಓಡು ನಡಿಗೆ ಹಾಕಿದ ಅವಳು ತಾನಿನ್ನು ಕ್ಷೇಮವೆಂಬ ನಿರಾಳತೆಯಲ್ಲಿ ಹಿಂತಿರುಗಿ ನೋಡಿದಾಗ, ಸ್ನೇಹಳೇ ಬಾಗಿಲಲ್ಲಿ ನಿಂತಂತೆನಿಸಿತು. “ಸದ್ಯ ನಿಮ್ಮನೆಯನ್ನು ಬಿಟ್ಟು ನಮ್ಮನೆಯವರೆಗೂ ಒಬ್ಬಳೇ ಬಂದೆಯಲ್ಲ. ನಾ ಹಾಕಿದ ಯೋಜನೆಗೆ ಅಷ್ಟು ಸಫಲತೆ ಸಾಕು”, ಎನ್ನುವ ಮಾತು ಕಿವಿಯೊಳಗಿದ್ದದ್ದು, ಮಿದುಳೊಳಗೆ, ಮನದೊಳಗೆ ಓಡಾಡಿ ನಿಜ ಅರ್ಥಗಳನ್ನು ಹುಡುಕತೊಡಗಿತು. ಸ್ನೇಹಾ ಸತ್ತಿಲ್ಲವೆ? ಸತ್ತ ಸುದ್ದಿ ನಾಟಕವೆ? ಹಿಂತಿರುಗಿ ಹೋಗಿ ನೋಡಲೇ? ಸ್ನೇಹಳ ದೇಹ ಕಂಡಾಗ, ಎದ್ದು ಕುಳಿತಾಗ, ಮಾತಾಡಿದಾಗ, ಆದ ಭಯದ ಅನುಭವ, ಮತ್ತೆ ಆದಂತಾಗಿ ಕಾಲುಗಳು ನಿಂತಲ್ಲೇ ಕಚ್ಚಿಕೊಂಡವು. ಬೇಡ ಒಬ್ಬಳೇ ಅವಳನ್ನು ಎದುರಿಸಲಾರೆ ಎಂದಿತು ಅವಳೊಳಗು.
ಮನೆಗೆ ಹೋದಾಗ ಭುವಿ ಮನೆ ಬಿಟ್ಟಿದ್ದ. ಹಿರಿ ಮಗಳು ದೀಪ್ತಿ ಅವಳ ಮಗುವಿನ ಕೈಗೆ ಬಿದ್ದ ಏಟಿನ ಬಗ್ಗೆ ತಾಕೀತು ಮಾಡಿದಳು. “ ಅಮ್ಮಾ, ಇದೇನಮ್ಮ ಇದು ಪಾಪು ಕಾಲಿಗೆ ಗಾಯ? ನೀನಿರಲಿಲ್ವ? ಅಪ್ಪನಿಗೇನು ಗೊತ್ತಾಗತ್ತಮ್ಮ, ನೀನು ಅವರ ಹತ್ರ ಮಗುನ ಬಿಡಲೇ ಬೇಡ”.” ಯಾರದೇ ನಡೆ, ನುಡಿ, ನೋಟ ಎಲ್ಲದರಲ್ಲೂ ಸುಖಸ್ಪರ್ಷ ಮತ್ತು ಬೆಚ್ಚಗಿನ ಭಾವನೆಗಳನ್ನೇ ಬಯಸುತ್ತ ಅದಕ್ಕಾಗಿ ತನ್ನನ್ನೇ ತೇಯುತ್ತಿದ್ದವಳಿಗೆ ಮಗಳ ಈ ಒಂದು ಸಣ್ಣ ಮಾತೂ ಮನದ ಕಡಲಲ್ಲಿ ಭಾವನೆಗಳ ಕೋಲಾಹಲ ಎಬ್ಬಿಸಿತು. “ಬಾಯಿ ಬಿಟ್ಟು ಹೇಳದಿದ್ದರೆ ಸ್ವಂತದ ಕಷ್ಟ-ನಷ್ಟಗಳ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಸುನೀ. ಕುಟುಂಬವೆಂದರೆ ಯಾರಿಗೂ ಬ೦ಧನವಾಗಬಾರದು. ಜ್ಞಾನದ ನದಿ ಮನೆಮನೆಗೂ ತಾನಾಗಿ ಹರಿದು ಬಂದು ಪಾತ್ರೆಗಳನ್ನು ತುಂಬುವುದಿಲ್ಲ. ಅಗತ್ಯ ಇರುವವರು, ಅದಿರುವಲ್ಲಿಗೇ ಹೋಗಿ ತುಂಬಿಕೊಳ್ಳಬೇಕು. ನೀನೂ ನಿನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಪಡದ ಹೊರತು, ಮಕ್ಕಳು ಮತ್ತು ಪುರುಷರೂ ಸೇರಿದಂತೆ ಇಡೀ ಸಮಾಜ, ನಿನ್ನನ್ನು ಪ್ರೀತಿ, ಒಳ್ಳೆತನ, ತಾಯಿತನ ಇತ್ಯಾದಿಗಳ ಪಾಲಿಷ್ ಹಚ್ಚಿ ಕುಟುಂಬದ ಅಕ್ಟೋಪಸ್ ಹಿಡಿತದೊಳಗಿಟ್ಟು ನಿನ್ನನ್ನು ಅಪ್ರಧಾನಳಾಗಿಯೇ ಉಳಿಸಿಬಿಡುತ್ತದೆ”, ಎಂದು ಸ್ನೇಹ ಹಿಂದೆ ನಿ೦ತು ಹೇಳಿದಂತೆನಿಸಿತು.
ಮಗಳಿಗೆ ಉತ್ತರ ಕೊಡದೆ, ಪುನಃ ಮನೆಯಿಂದ ಹೊರ ಹೊರಟ ಸುನೀತ ಒಂದೆರಡು ಘಂಟೆಗಳ ನಂತರ ಹಿಂತಿರುಗಿ ಬಂದವಳು ಮಗಳಿಗೆ ಹೇಳಿದಳು. “ನಾಳೆಯಿಂದ ಒಬ್ಬ ಹುಡುಗಿಗೆ ಮಗುವನ್ನು ನೋಡಿಕೊಳ್ಳಲೆಂದು ನೇಮಿಸಿ ಬಂದೆ ದೀಪ್ತಿ. ಮನೆಯಲ್ಲೇ ಇರಲು ಒಪ್ಪಿಕೊಂಡಿದ್ದಾಳೆ. ನನಗೆ ಬೇಕೆನಿಸಿದಾಗ ಅವಳ ಮೇಲೆ ಮನೆ ಬಿಟ್ಟು ಎಲ್ಲಿಗೆ ಬೇಕಾದರೂ ಹೋಗಿ ಬರಲು ದಾರಿ ಮಾಡಿಕೊಂಡಿದ್ದೇನೆ. ಇವೊತ್ತು ಆದ ಹಾಗೆ ಯಾವೊತ್ತೂ ಆಗಬಾರದು”,”ಎಂದು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಲೇ ಇದ್ದಳು ದೀಪ್ತಿ.
ಬಾಗಿಲಲ್ಲಿ ಮಗನೊಡನೆ ಬಂದು ನಿಂತು, ಸುನೀತ ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದ ಗಂಡನಿಗೆ ಉದ್ದೇಶಿಸಿ, ಮುಂದುವರಿಸಿದಳು ಅವಳು, “ ಹ್ಞ. ನಿಮಗೆ ಇನ್ನೊಂದು ಮಾತು ಹೇಳಬೇಕು. ನಾನು ನಾಳೆಯಿಂದ ‘ಸಂಸ್ಕೃತ ಶ್ಲೋಕ ಝರಿ’ ತರಗತಿಗೆ ಸೇರಿಕೊಳ್ಳಲು ನಿರ್ಧರಿಸಿದ್ದೇನೆ. ಮಧ್ಯಾಹ್ನ ಹನ್ನೆರಡರಿಂದ ಮೂರರವರೆಗೆ ನಡೆಯುವ ಈ ತರಗತಿ, ನನ್ನ ಮನಸ್ಸಿಗೆ ಮುಖ್ಯವೆನಿಸಿದ ಶಾಖೆಯ ಜ್ಞಾನ ಸ೦ಪತ್ತನ್ನು ಹೆಚ್ಚಿಸಲು ನೆರವಾಗುತ್ತದೆ ನನಗೆ. ಅಡುಗೆ ಮುಗಿಸಿ ಹೋಗಿರುತ್ತೇನೆ. ನೀವು ಮತ್ತು ರವಿ ಬಡಿಸಿಕೊಂಡು ಊಟ ಮಾಡಿ, ಮೊದಲಿನಂತೆಯೇ ಕ್ಲೀನಾಗಿ ಮುಚ್ಚಿಟ್ಟು ಹೋಗಿ”.
“ನಮಗೆ ಬಡಿಸಿಕೊಂಡು ಅಭ್ಯಾಸವೇ ಇಲ್ಲವಲ್ಲ”, ಎಂದುಕೊಂಡರೂ ಸುನೀತಳ ಗಟ್ಟಿ ನಿರ್ಧಾರದ ಧೈರ್ಯ ಕಂಡು ಒಂದಿಷ್ಟು ತಬ್ಬಿಬ್ಬಾಗಿ ಸಾವರಿಸಿಕೊಂಡು, ‘ಹ್ಞ. ಹ್ಞ. ಅಭ್ಯಾಸವೇನು ಹುಟ್ಟಿನಿಂದ ಬರುವುದಲ್ಲವಲ್ಲ. ಯಾವತ್ತಾದರೂ ಒಂದು ಆರ೦ಭ ಮಾಡಲೇಬೇಕಲ್ಲ. ಹುಂ. ಮಾಡಿಕೊಳ್ಳುತ್ತೇವೆ ಬಿಡು”, ಎನ್ನುತ್ತ ಒಳಬಂದು ಹೆಂಡತಿಗೆ ಶುಭಾಶಯ ಕೋರಿದ ಅವಳ ಗಂಡ.
ಮತ್ತೊಮ್ಮೆ ಪ್ರಯತ್ನಿಸಿ, ಸ್ನೇಹಳ ಮನೆಗೆ ಫೋನ್ ಮಾಡಿ ನಿಜವಾದ ವಿವರ ತಿಳಿಯಲು, ರಿಸೀವರ್ ಕೈಗೆತ್ತಿಕೊಂಡಳು ಸುನೀತ.
*****
(ದಿನಾಂಕ ೧೬.೦೮.೨೦೦೧ರ ಸುಧಾ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾಗಿದೆ.)