ಕಾಯುತ್ತೇವೆ

ನಾವು ಹುಂಬರು,
ಕಣ್ಣು ತುಂಬಿದ ಕನಸುಗಳಿಗೆ
ಸೂರ್ಯನ ಫಳಫಳ ಬೆಳಕನ್ನ ಸಿಂಪಡಿಸಿ
ರಂಗೇರಿಸಿ ರಂಗಪಂಚಮಿಯಾಡುತ್ತಾ ಆಡುತ್ತಾ
ಈ ಸಿಟಿಗೆ ಬಂದಾಗ-

ನಮ್ಮ ಜೊತೆ ಬಂದ ಸೂರ್ಯ ತಪ್ಪಿಸಿಕೊಂಡ.
ಅತ್ತಿತ್ತ ನೋಡುತ್ತ ಎತ್ತೆತ್ತರ ಹಾರಿ
ಮಿತ್ರಾ ಎನ್ನುತ್ತಾ ಕೂಗಿ, ಕರೆದು ಹುಡುಕುತ್ತಾ

ಸಿಕ್ಕದ್ದಕ್ಕೆ ಸತ್ತನೋ ಎಂದು
ಆತನ ಗುಣಗಾನ ಮಾಡಿ ಅತ್ತೆವು.

ನಮ್ಮ ಹುಂಬತನಕ್ಕೆ ಇಡೀ ಸಿಟಿ ಹಲ್ಲು ಕಿರಿದಂತೆ
ಸಾಲುದೀಪ ಝಗ್ಗಂತ ಉರಿದವು.

ಅಷ್ಟರಲ್ಲಿ ಯಾರೋ-ಸಿಟಿಯವನಂತೆ-
ಧಡೂತಿ ಕುಳ ಬಂದು ನಿಂತ.
ಹೇಳಕೇಳುವ ದಿಕ್ಕಿಲ್ಲದ ಕಕವಾಗಳೆಂದು
ಕಾಕು ಮಾಡಿ ಪಕಪಕ ನಕ್ಕ.
ನಾವು ಹುಂಬರು ಹೆದರಿ ಫಕ್ಕನೆ ತಕ್ಕೈಸಿದೆವು.
ತಪ್ಪು ಮಾಡಿದೆವೆಂದು ಒಪ್ಪೊಕೋ ಎಂದು
ಗಕ್ಕನೆ ಹಿಡಿದ.

ಒದರುವ ನಮ್ಮ ಬಾಯಿ ಕಿತ್ತ
ಖೆಕ್ಕರಿಸುವ ಕಣ್ಣು ಕಿತ್ತ
ಒದ್ದಾಡುವ ನರ ಕಿತ್ತ
ಕಿತ್ತು ಒತ್ತೊತ್ತಿ ಹಿಸುಕಿದ;
ಕಚಪಚ ತುಳಿದು ತೆಳ್ಳಗೆ ಕಾಗದ ಮಾಡಿದ.
ತನ್ನ ಗಂಜಲದಿಂದ ಥರಾವರಿ ನೋಟುಗಳ
ಚಿತ್ರ ಬರೆದು
ಅಚಿತ್ರೋ ವಿಚಿತ್ರ
ಪೋಸ್ಟರ್ ಮಾಡಿ
ಎತ್ತರದ ಗೋಡೆಗಂಟಿಸಿದ.

ಮಳೆಗಾಳಿ ಬೀಸಿ, ಪೋಸ್ಟರಿನ ಅಂಚು ಹರಿದಾಗ
ಆಗೀಗ ನಮ್ಮೊಳಗಿನ ಹಳದಿ ಆತ್ಮ
ಕಾಣಿಸಿಕೊಳ್ಳುವುದುಂಟು, ಕಳೆದ ಸೂರ್ಯನ್ನ
ಹುಡುಕುವುದುಂಟು.
ಗೋಡೆಯಂಚಿನ ಕಪ್ಪು ಕಿಟಿಕಿಗಪ್ಪಳಿಸಿ
ತಡಕಾಡುವುದುಂಟು ಉಸಿರಿಗಾಗಿ. ಆಗ ಆ ಧಡೂತಿ ಸಿಟಿಯವ
ಬಂದು ತಿರುಗಾ ನಮ್ಮ ಅಂಟಿಸುವ.

ಮತ್ತೆ ಮಳೆಗಾಳಿ ಬಂದೀತಂತ
ಕಾಯುತ್ತ ಕಾಯುತ್ತ,
ಕಾಯುತ್ತೇವೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ