ಇದ್ದಾಗ ಇದ್ಧಾಂಗ

“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ.

ಈ ಪಬ್ಬೂ ಅಂದರೆ ಪ್ರಭಾಕರ ದಂಡೂ ಹರಿಕಾಂತ. ನಾಲ್ಕನೇಯತ್ತೆಯಿಂದ ಆರನೇಯತ್ತೆವರೆಗೆ ನನ್ನ ಕ್ಲಾಸ್‌ಮೇಟ್ ಆಗಿದ್ದ. ಆದರೂ ಇದಕ್ಕೂ ಜಾಸ್ತಿ ನಮ್ಮ ದೋಸ್ತಿ ಇತ್ತು. ಮಾಂಶಿ ಗೋಕುಲಾಷ್ಟಮಿ, ರಾಮನವಮಿ ಅಂತ ಸಿಹಿ ಪ್ರಸಾದ ಕಜ್ಜಾಯ ಮಾಡಿದಾಗ “ಪಬ್ಬೂನ ಕರಿ” ಅಂದಾಗ ನಾನು ಅವನನ್ನು ಮನೆಗೆ ಕರೆತರುತ್ತಿದ್ದೆ. ಅವನು ಮೋದಕವನ್ನೋ ಉಂಡೆಯನ್ನೋ ಚೂರುಚೂರಾಗೇ ಮೆಲ್ಲುತ್ತ ನನ್ನ ತಾಳ್ಮೆ ಮೀರುವಂತೆ ಒಂದು ತಾಸು ಮಾಡಿ ತಿನ್ನುತ್ತಿದ್ದಾಗ ಸಿಟ್ಟು ಬಂದರೂ ಮಾಂಶಿ ಯಾವಾಗಲೋ ಮಾತಿನ ಮಧ್ಯ “ಅವರು ಬಡವರು” ಅಂದಿದ್ದು ನೆನಪಾಗಿ ಅವನ ಮೇಲೆ ವಿಶೇಷ ಮೆಹರ್ಬಾನ್ ಮಾಡಿದವನಂತೆ ಬೀಗುತ್ತ ಕೂರುತ್ತಿದ್ದೆ. ಆ ನಂತರ ಅವನು ಯಾಕೋ ಏನೋ ಶಾಲೆಯನ್ನೇ ಬಿಟ್ಟ. ಆಗಲೂ ನಮ್ಮ ಮನೆಗೆ ಆಗಾಗ ಬಂದು ಹೋಗುವುದು, ಸೀಯಾಳ ಕಾಯಿಗೀಯಿ ಏನಾದರೂ ತೆಗೆಸಿಕೊಡುವುದು, ಬಸಳೆ ಬಳ್ಳಿಗೆ ಚಪ್ಪರ ಕಟ್ಟಿಕೊಡುವುದು, ಮೊಗೆ ವಳಿಗೆ ಬೆಲಗು ಮಾಡಿಕೊಡುವುದು, ನಂತರ ಮಾಂಶಿ ಬೆಳಿಗ್ಗೆ ಮನೆಯಲ್ಲಿ ಆಸರಿಗೆಂದು ಮಾಡಿದ್ದ ತಿಂಡಿಯನ್ನು ಕಾಗದದಲ್ಲಿ ಪೊಟ್ಟಣ ಮಾಡಿ ಕೊಟ್ಟಾಗ ತಕೊಂಡು ಹೋಗುವುದು ಮಾಡುತ್ತಿದ್ದ. ಇದೇ ವೇಳೆಯಲ್ಲಿ ನಮ್ಮ ಶಾಲೆಯ ಮಾಸ್ತರ್ರು ಯಾವುದೋ ಹಬ್ಬದ ದಿನ ನಮ್ಮ ಮನೆಗೆ ಬಂದವರು ನಮ್ಮ ಮನೆಯ ತಿಂಡಿ ತಿಂದ ತಪ್ಪಿಗೆ ಕೃತಜ್ಞತೆ ಸೂಸುವ ನೆಪದಲ್ಲಿ ತಮ್ಮ ಪಕ್ಕಾ ಮಾಸ್ತರೀ ಭಾಷೆಯಲ್ಲಿ “ಆ ಪಬ್ಬು ಉಡಾಳ ಹುಡುಗ. ಅವನ ಸಂಗ್ತಿಗೆ ಸೇರಿ ನಿಮ್ಮ ಆನಂದನೂ ಹಾಳಾಗಬಹುದು. ಸಂಗತೀ ಸಂಗ ದೋಷ….” ಅಂತ ಏನೇನೋ ಬುಡಬುಡುಕಿ ಹಾಕಿ ನನಗೂ ಎಚ್ಚರಿಕೆ ನೀಡಿ ಅಂತೂ ಇಂತೂ ಅವ ನಮ್ಮ ಮನೆಗೆ ಬರುವುದು ನಿಂತೇ ಹೋಯ್ತು. ಇದರ ನಂತರ ನನಗೆ ವೇಳೆ ಕಳೆಯುವುದೆ ಕಷ್ಟವಾಗಿಬಿಟ್ಟಿತ್ತು.

ಹಾಗಂತ ನಾನೇನೂ ಅವನನ್ನು ಭೇಟಿಯೇ ಆಗುತ್ತಿದ್ದಿಲ್ಲವೆಂದಲ್ಲ. ಸಂಜೆ ಧಕ್ಕೆಯ ಮೇಲೆ, ಮೂಲೆಕೇರಿಯ ಮಾಂಕಾಳಮ್ಮನ ದೇವಸ್ಥಾನದ ಪೌಳಿಯ ಮೇಲೆ ಅಥವಾ ಅಶ್ವತ್ಥಕಟ್ಟೆಯ ಹತ್ತಿರ ಯಾವಾಗಿನಿಂದಲೋ ಹಾಳು ಬಿದ್ದಿರುತ್ತಿದ್ದ ಒಂದು ಮುರುಕು ಎತ್ತಿನ ಗಾಡಿಯ ಮೇಲೆ ನಾನು ಮತ್ತು ಪಬ್ಬು ಕೂಡಿ ಬಹಳ ಹೊತ್ತು ಮಾತನಾಡುತ್ತಿದ್ದೆವು. ಆದರೂ ಅಂಥ ವಿಶೇಷ ಹೇಳುವಂಥ ಸುದ್ದಿಗಳೇನೂ ನಮ್ಮಲ್ಲಿರುತ್ತಿರಲಿಲ್ಲ. ನಾಲ್ಕನೇಯತ್ತೆಯ ತನಕ ಸ್ವಂತ ಊರಾದ ಗೇರುಸೊಪ್ಪೆಯಲ್ಲೇ ಕಲಿತ ನನ್ನನ್ನು ಪುಂಡತನ ಮಾಡ್ತೇನಂತ ನನ್ನ ಬಾಪ್ಪಾ ಮುಂದೆ ಕಲಿಯೂದಕ್ಕ ಅಂತ ಇಲ್ಲಿ ದೀವಗಿಯಲ್ಲಿ ಮಾಂಶಿ ಮನೆಯಲ್ಲಿ ಬಿಟ್ಟಿದ್ದು, ಮಾಂಶಿ ಬಹಳ ಹಿಂದೆ ಮಾಸ್ತರಿಣಿ ಇದ್ದಳಂತೆ-ನಂತರ ಗಂಡ ಸತ್ತ ನಂತರ ಮನೆಯಲ್ಲೇ ಉಳಿದಿದ್ದಾಳಂತೆ-ಮಾಂಶಿ ಚಲೋವಳು-ಈಗ ಇಡೀ ದೊಡ್ಡ ಮನೆಯಲ್ಲಿ ನಾನು ಮತ್ತು ಮಾಂಶಿ ಇಬ್ಬರೇ ಇದ್ದರೂ ನನಗೆ ಮನೆ ನೆನಪೇ ಆಗೂದಿಲ್ಲ- ಇಂಥದ್ದು-ಇವು ನನ್ನ ಮಾತಿನ ಕಚ್ಚಾ ವಸ್ತುಗಳು. ಒಮ್ಮೆಯಂತೂ ಗೇರುಸೊಪ್ಪೆಯ ಧಬಧಬೆಯ ಬಗ್ಗೆ ಹೇಳುತ್ತಾ- “ನೂರು ತೆಂಗಿನ ಮರದಷ್ಟು ಎತ್ತರದಿಂದ ಬೀಳುತ್ತದೆ”-ಎಂದು ಸರಾಗವಾಗಿ ಪೊಕಳೆ ಹೊಡೆದು ಅವನನ್ನು ಅಚ್ಚರಿಗೊಳಿಸಿಬಿಟ್ಟಿದ್ದೆ. ಆದರೂ ನನ್ನವೇ ಆದ ಖಾಸಗೀ, ಪಕ್ಕಾ ಕೊಂಕಣೀಮಯ ಸುದ್ದಿಗಳು ಕೌತುಕಗಳು ಅವನಲ್ಲಿ ಅಷ್ಟು ಪರಿಣಾಮ ಬೀರುತ್ತಿರಲಿಲ್ಲ.

ಅವನಿಗೆ ದಿನಾಲು ಬರಹೋಗುವ ಲಾಂಚುಗಳು, ಶಿರಸಿ ಕಾರವಾರ ಕಡೆಯಿಂದ ಬಂದು ಇಲ್ಲಿಯ ಧಕ್ಕೆಯಲ್ಲಿ ಜನರನ್ನು ಇಳಿಸಿ ಹೋಗುವ ಬಸ್ಸುಗಳು, ನದಿಯ ಆ ಕಡೆ ದಂಡೆಯಲ್ಲಿಯೂ ಜನರನ್ನು ಇಳಿಸಿ ಹೋಗಲು ಬಂದ ಕೆಂಪು ಬಸ್ಸುಗಳು, ಬಸ್ಸುಗಳನ್ನು ಕಾರುಗಳನ್ನು ಹೊತ್ತುಕೊಂಡು ಹೋಗುವ ಜಂಗಲ್ಲುಗಳು ಎಳೆಯುವ ಲಾಂಚುಗಳ ಶಬ್ದ, ಖಾಕೀ ಡ್ರೈವರುಗಳು ಕಂಡಕ್ಟರುಗಳು (ಅವನು ಇವರಿಗೆ “ಕಿಲಿಂಡರ್” ಅನ್ನುತ್ತಿದ್ದ)-ಅವರು ಬೀಡಿ ಸಿಗರೇಟು ಸೇದುವ ಸ್ಟೈಲು, ಧಕ್ಕೆಯಲ್ಲಿಯ ಚಾ ಅಂಗಡಿಯಲ್ಲಿ ಪ್ರಯಾಣಿಕರು ಕೂತು ಚಾ ಕುಡಿಯುವ ಗತ್ತು, ಜಂಗಲ್ಲಿನಲ್ಲಿ ವಾಹನಗಳು ಹತ್ತಿಯಾದ ಕೂಡಲೇ ಅವನ ಅಪ್ಪ(ಅವನು ಜಂಗಲ್ಲಿನಲ್ಲಿ ಕೆಲಸ ಮಾಡುತ್ತಿದ್ದ) ಹಗ್ಗವನ್ನು ಲಾಂಚಿಗೆ ಎಸೆಯುವ ಚಾಕಚಕ್ಯತೆ-ಇವೆಲ್ಲ ಅವನ ಆಸಕ್ತಿಯಾಗಿದ್ದವು. ಮಾಂಶಿ ನನಗೆ ಬಹಳ ಮುದ್ದು ಮಾಡ್ತಾಳೆ ಎಂದರೆ ಅವನಿಗೆ ಅರ್ಥವೇ ಆಗುತ್ತಿರಲಿಲ್ಲ. ಡ್ರೈವರುಗಳ ಹೆಸರುಗಳು, ಕುಮಟೆಯಲ್ಲೋ ಶಿರಸಿಯಲ್ಲೋ ನಡೆಯುತ್ತಿರುವ ಸಿನೇಮಾ ಹೆಸರುಗಳು ತಕ್ಷಣದಲ್ಲಿ ಅವನ ನಾಲಿಗೆಯ ತುದಿಯಲ್ಲಿರುತ್ತಿದ್ದವು. ಹೀಗಾಗಿ ನನಗಿಂತ ಅವ ಬೇರೆಯೇ ಅನಿಸಿಬಿಡುತ್ತಿದ್ದ. ಎಲ್ಲಾದರೂ ಅವ ನನ್ನನ್ನು “ನೀನು ಪುಕ್ಕ ನಿನಗೆ ಈಜಲು ಬರುವುದೇ ಇಲ್ಲ”-ಅನ್ನುತ್ತಿದ್ದ-ಆಗೆಲ್ಲ ನಾನು “ಗೇರುಸೊಪ್ಪೆಯ ನನ್ನ ಮನೆಯಲ್ಲಿ ಸೈಕಲ್ ಇದೆ. ಒಳಪ್ಯಾಡ್ಲು ಹೊಡೆಯಲು ನನಗೆ ಬರುತ್ತದೆ. ನಿನಗೆ ಬರೂದೇ ಇಲ್ಲ” ಅಂತ ಹೇಳುತ್ತಿದ್ದೆ. ಇದು ಸ್ವಭಾವದ ಭೇಧವಾಗಿದ್ದರೂ ಮಾಂಶಿ ನನ್ನ ತಲೆಯಲ್ಲಿ ಹಾಕಿದ್ದ ಬಡವ-ಶ್ರೀಮಂತ, ಜಾತಿ ಭೇದ-ಈ ನಿಟ್ಟಿನಿಂದಲೇ ನಾನು ಅವನ ಭಿನ್ನತೆ ಅಳೆಯುತ್ತಿದ್ದೆ. ಹೀಗಾಗಿ ಅಪ್ಪಂತನಂತೆ “ನಿನಗದು ತಿಳಿಯುವುದಿಲ್ಲ” ಅಂತ ಪದೇ ಪದೇ ಹೇಳುತ್ತಿದ್ದೆ. ಅವನೂ ವಿಧೇಯನಂತೆ ಒಮ್ಮೊಮ್ಮೆ ಒಪ್ಪಿಕೊಂಡುಬಿಡುತ್ತಿದ್ದ.

ನನ್ನನ್ನು ಅವನು ಒಮ್ಮೆಯೂ ತನ್ನ ಮನೆಗೆ ಕರೆದೊಯ್ದಿರಲಿಲ್ಲ. ಒಮ್ಮೊಮ್ಮೆ “ನಿನ್ನೆ ರಾತ್ರಿ ನಾನು ಮನೆಗೆ ತಡಮಾಡಿ ಹೋದೆ. ಹೀಗಾಗಿ ನನಗೆ ಊಟ ಹಾಕಲಿಲ್ಲ” ಅಂತ ಅವನು ಅಂದಾಗ ಆಶ್ಚರ್ಯವೆನಿಸುತ್ತಿತ್ತು. ಆಗಲೇ ದೀವಿಗೆಯಿಂದ ತುಸು ದೂರದಲ್ಲಿ ನದಿಗೆ ಬ್ರಿಜ್ಜು ಕಟ್ಟುವ ಕೆಲಸ ಶುರು ಆಗಿತ್ತು. ಸಿಮೆಂಟು ಕಂಬಗಳನ್ನೂ ಮಾಡುತ್ತಾರೆ ಹಾಗೆ ಹೀಗೆ ಅಂತ ಪಬ್ಬು ಸೇತುವೆ ನಿರ್ಮಾಣದ ಕುರಿತು ಏನೇನೂ ಹೇಳುತ್ತಿದ್ದ.

ನನಗೆ ಚೆನ್ನಾಗಿ ನೆನಪಿದೆ. ಒಂದು ದಿನ ನಾವು ಮಾಂಕಾಳಮ್ಮನ ಗುಡಿಯಲ್ಲಿ ಬಹಳ ಹೊತ್ತು ಮಾತನಾಡಿದೆವು. ಆ ದಿನ ಆತ ಲವ್ವು ಅಂತೇನೇನೋ ಹೇಳಿ ನನ್ನನ್ನು ರೋಮಾಂಚಿತನನ್ನಾಗಿ ಮಾಡಿದ್ದ. ಭಟ್ಕಳದಲ್ಲಿ ತನ್ನ ಸಂಬಂಧಿಕರ ಮನೆ ಉಂಟು. ಅಲ್ಲಿ ಒಬ್ಬಳು ಚೆಂದದ ಹುಡಿಗಿ ಇದ್ದಾಳೆ “ಮುಮ್ತಾಜ್” ಅಂತ-ಅಂದಾಗ ನಾನು ‘ಅಲ್ವೋ ಅದು ಮುಸಲ್ಮಾನ ಹೆಸರು”-ಎಂದೆ. ಅದಕ್ಕವ ತಕ್ಷಣ “ಇಲ್ಲ ಹಾಗೇನಿಲ್ಲ. ಯಾರೂ ಆ ಹೆಸರಿಡಬಹುದು”-ಎಂದು ಸಾರಿಬಿಟ್ಟಿದ್ದ. ನಾನು ತೆಪ್ಪಗೆ ಕೇಳುತ್ತಿದ್ದೆ. ನಾನು ಮುಮ್ತಾಜಳನ್ನು ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ನಮ್ಮದು ಸಾಮಾನ್ಯ ಪ್ರೀತಿಯಲ್ಲ. ಅದು ಲವ್ವು. ನಾನು ಅವಳ ಲಾಡಿ ಎಳೆದು ಅವಳದನ್ನು ನೋಡಿದ್ದೇನೆ. ನಾನು ಅವಳ ಜತೆಗೆ ಮಾತಾಡಿದ್ದೇನೆ. ಅಂತೇನೇನೋ ಹೇಳಿ ನನ್ನನ್ನು ಪುಳಕಗೊಳಿಸಿಬಿಟ್ಟಿದ್ದ. ಆ ದಿವಸ ಅವನು ಏನೇನು ಹೇಳಿದನೋ, ನಾನು ಏನೇನು ಕೇಳಿದೆನೋ-ಇಷ್ಟು ಮಾತ್ರ ಖರೆ, ಮಾತು ಮುಗಿಸಿದಾಗ ಭಯಂಕರ ಕತ್ತಲೆಯಾಗಿಬಿಟ್ಟಿತ್ತು. ಅವನ ಮಾತಿನ ಪ್ರಭಾವದಿಂದ ನನಗೆ ಮನೆಯ ಕಡೆಗೆ ಓಡಲೂ ಕಷ್ಟವಾಯಿತು. ಮನೆಗೆ ಹೋದಾಗ ಮಾಂಶಿ ದೇವರ ಕೋಣೆಯಲ್ಲಿ “ಲಂಬೋದರ ಗಿರಿಜಾ ನಂದನಾ….” ಎಂದು ಭಜನೆ ಮಾಡುತ್ತಿದ್ದಳು. ನಾನು ಬಂದದ್ದು ಗೊತ್ತಾಯಿತು. “ಓಂವಾಳು ಆರತೀ…” ಮುಗಿಸಿ ಬಂದವಳೇ ಏನು ಎಂತು ಕೇಳದೆ ರಪ್ ರಪ್ ಎಂದು ಬಾರಿಸಿಬಿಟ್ಟಳು. ಮನೆ ಹೊಕ್ಕುವ ಮೊದಲೇ ನಾನು ಉಚ್ಚೆ ಹೊಯ್ದಿರದಿದ್ದರೆ ಖಂಡಿತ ಆಗ ಮಾಡಿಕೊಳ್ಳುತ್ತಿದ್ದೆ. “ನಿನ್ನನ್ನು ನಿನ್ನ ಬಾಪ್ಪಾ ಇಲ್ಲಿ ದೀವಗಿಯಲ್ಲಿ ಇಟ್ಟಿದ್ದು ಯಾಕೆ? ಶಾಲೆ ಕಲೀಲಿಕ್ಕೋ ಅಥವಾ ಆ ಹರಕಂತ್ರ ಪಬ್ಬೂ ಸಂಗ್ತೀಗೆ ಮೂರ್ ಸಂಜೀವರೆಗೆ ತಿರುಗಲಿಕ್ಕೋ?” ಎಂದಳು. ಊಟಕ್ಕೆ ಬಡಿಸುವಾಗಲೂ ಫಡಫಡ ಮಾಡಿದಳು. ನಂತರ ನಾನು ಬಾಪ್ಪಾ ಅಮ್ಮಾ…”ಅಂತ ರಾಗ ಎಳೆದು ಅಳುತ್ತ ಮಲಗಿದಾಗ ಬಂದು “ನೀನು ಬುದವಂತ ಹುಡುಗ ಅಲ್ಲಾ? ಅಂಥವರ ಜತೆ ಸೇರಬಾರದು” ಅಂತ ಚಲೋ ಮುದ್ದು ಮಾಡಿ ನನ್ನನ್ನೂ ಬಳಸಿಕೊಂಡೇ ಮಲಗಿದಳು. ಆ ಕ್ಷಣದಲ್ಲಂತೂ ನನಗೆ “ಮಾಂಶಿ ಎಷ್ಟು ಒಳ್ಳೆಯವಳು” ಅನಿಸಿಬಿಡ್ತು. “ಪಬ್ಬು ದರಿದ್ರದವ” ಅಂತ ನಿರ್ಧಾರ ತಗೊಂಡು ನಿಶ್ಚಿಂತ ಮಲಗಿದೆ.

ಮರುದಿನದಿಂದ ನಾನು(ವಿನಾಕಾರಣ)ಪಬ್ಬೂನ ದೋಸ್ತಿ ಬಿಟ್ಟೆ ಮತ್ತು ಬುದವಂತ ವಿದ್ಯಾರ್ಥಿ ಆದೆ. ಮಾಂಶಿ ಪಬ್ಬೂನ ಸುದ್ದಿ ಮಾತಾಡಿದ್ದು ಅದೇ ಕೊನೆಯಾಯಿತು. ಅದೇ ವರುಷವೇ ಕುಮಟೇ ತೇರಿಗೆ ಹೋಗುವಾಗ ಲಾಂಚಿನಲ್ಲಿ ಜಾಗ ಇರದಿದ್ದರಿಂದ ಜಂಗಲ್‌ನಲ್ಲೇ ಮಾಂಶಿಯ ಜತೆ ನಿಂತಿದ್ದಾಗ ಉದ್ದ ಬಿದುರಿನ ಶಮೆಕೋಲು ಹಿಡಿದು ಹುಟ್ಟು ಹಾಕುತ್ತಿದ್ದ ಪಬ್ಬೂನ ಅಪ್ಪ ದಂಡು ಕಂಡಿದ್ದ. ಮಾಂಶಿಯನ್ನು ಕುರಿತು “ಅಮ್ಮಾ, ತೇರಿಗೋ?” ಎಂದ. ಅವನೇ ನಂತರ “ನಮ್ಮ ಪಬ್ಬೂ ಈಗ ಬ್ರಿಜ್ ಕಟ್ಟುವಲ್ಲಿ ಸಿಮೆಂಟ್ ಕೆಲಸಕ್ಕೆ ಹೋಗ್ತಾನೆ” ಎಂದ. ದೂರದಲ್ಲಿ ಒಂದು ಕಂಬ ನೀರಿನಿಂದ ಮಾತ್ರ ತೆಲೆಯೆತ್ತಿ ನಿಲ್ಲುವ ಯತ್ನ ಮಾಡುತ್ತಿತ್ತು. ಬ್ರಿಜ್ ಕೆಲಸಕ್ಕೆ ಹೋಗುವುದೆಂದರೇ ಒಂದು ಅತಿ ಹೊಸ ಸುದ್ದಿ ಆಗ ಊರಿನಲ್ಲಿ. ದೀವಗೆಯಿಂದ ತುಸು ದೂರವೇ ಆಗಲಿದ್ದ ಆ ಸೇತುವೆಗಾಗಿ ನಡೆಯುತ್ತಿದ್ದ ಕಾಮಗಾರಿ ನೋಡಲು ನಾನೂ ಒಮ್ಮೆ ಹೋಗಿದ್ದೆ. ಖಡಿ, ಸಿಮೆಂಟು, ಪೈಪುಗಳು, ಚಕಚಕ ಎಂದು ಹೊಗೆಯೊಂದಿಗೆ ನೀರನ್ನೂ ಉಗುಳುತ್ತಿದ್ದ ಪಂಪುಗಳು, ಸರಸರ ಓಡಾಡುವ ದೀವಗೆಯವರೇ ಆದ ಕೂಲಿಗಳು, ಡುಂಯ್ ಎಂದು ತುಂಬಿಕೊಂಡು ಬಂದ ಬಂಡೆಕಲ್ಲುಗಳನ್ನು ಕುಂಡೆ ಎತ್ತಿ ಹೊಯ್ಯುವ-ಹೊಸ ನಮೂನೆಯ ಲಾರಿಗಳು, ಬೈಯುವ ಮಲೆಯಾಳೀ ಮೇಸ್ತ್ರಿಗಳು-ಇವನ್ನೆಲ್ಲ ನೋಡಿ ಚಕಿತನಾಗಿದ್ದೆ. ಆದರೆ ಒಂದು ದಿನ ಮಾಂಶಿಯೇ “ಬ್ರಿಜ್ಜು ಕಟ್ಟುವಲ್ಲಿ ಹೋಗಬಾರದು. ಬ್ರಿಜ್ಜು ಬಲಿಷ್ಠವಾಗಲಿ ಅಂತ ಮನುಷ್ಯರನ್ನು ಬಲಿಕೊಡುತ್ತಾರೆ”ಅಂತ ಹೆದರಿಸಿದ್ದಳು.ಅಂತೂ ಈಗ ಪಬ್ಬೂ ಅಲ್ಲಿ ಕೆಲಸಕ್ಕೆ ಹೋಗ್ತಾನೆ ಅನ್ನುವ ವಿಷ್ಯ ತಿಳಿದು ಮೋಜೆನಿಸಿತು. ತಯಾರಾದ ಸೇತುವೆಯ ಕಂಬಗಳ ಮೇಲೆ ನಿಂತರೆ ಮಜಾ ಆದೀತು ಎನಿಸಿತು. ಆದರೂ ಪಬ್ಬೂನ್ನೇನಾದರೂ ಆ ಸುಟ್ಟ ಮಲಯಾಳೀ ಮೇಸ್ತ್ರಿಗಳು ಬಲಿಕೊಟ್ಟರೆ!-ಅಂತ ಆತಂಕವಾಯಿತು.

ಆ ದಿವಸ ತೇರಿನಲ್ಲಿ ಮೂರ್ ಕಟ್ಟೆಯ ಹತ್ತಿರ ಒಂದು ಶರಬತ್ ಅಂಗಡಿಯಲ್ಲಿ ಕೆಂಪು ಅಂಗಿ ಹಾಕಿಕೊಂಡು ತನ್ನಂಥದೇ ಮತ್ತೆರಡು ಮೂರು ಲಕಲಕ ಹೊಳೆಯುವವರ ಜತೆಗೆ ಬಣ್ಣದ ಶರಬತ್ತು ಕುಡಿಯುತ್ತಿದ್ದ ಪಬ್ಬುವನ್ನು ಕಂಡೆ. ಅವನೇ ನನ್ನನ್ನು ನೋಡಿ ನಗಲು ಯತ್ನಿಸಿದ. ಆದರೆ “ಅದೆಲ್ಲ ರಾಡಿಯ ನೀರು. ಅಂಥದ್ದನ್ನು ಕುಡೀಬಾರ್ದು” ಅಂತ ಮಾಂಶಿ ನನ್ನ ರೆಟ್ಟೆ ಹಿಡಿದು ಎಳೆದು ಗುಂಪಿನಲ್ಲೆಲ್ಲೋ ನಿಂತಳು. ಇಬ್ಬರೂ ತೇರಿಗೆ ಬಾಳೆಹಣ್ಣು ಹೊಡೆದೆವು. ಪಬ್ಬೂ ನಕ್ಕನಲ್ಲ. ನಾನೂ ನಗಬಹುದಿತ್ತು- ಅಂತ ಹಳಹಳಿ ಆಯಿತು. ಆಮೇಲೆ ನೆಲ್ಲಿಕೇರಿಯಲ್ಲಿ ಯಾವುದೋ ಸಂಬಂಧಿಕರ ಮನೆಗೆ ಹೋಗಿ ಮತ್ತೆ ಮಣಕಿಗೆ ಬಂದು ಲಾಂಚು ಹತ್ತಿ ದೀವಗಿಗೆ ಬರುವಷ್ಟರಲ್ಲಿ ಬಹಳ ರಾತ್ರಿಯಾಗಿಬಿಟ್ಟಿತ್ತು. ದೀಪ ಹಚ್ಚಿ ಒಂದೇ ಪದದಲ್ಲಿ ಭಜನೆ ಮುಗಿಸಿ ಊಟಮಾಡಿ ಮಲಗಿದೆವು. ಸುಮಾರು ನಡುರಾತ್ರೆಯಲ್ಲಿ ಧಡ್ಧಡ ಬಾಗಿಲು ತಟ್ಟಿ ಯಾರೋ “ಅಮ್ಮೋ ಅಮ್ಮೋ” ಕೂಗಿದಂತೆ. ಮಾಂಶಿ ಹೋಗಿ ಬಾಗಿಲು ತೆಗೆದು ಏನೋ ಮಾತನಾಡಿ ಬಂದಂತೆ ಅರ್ಧ ನಿದ್ರೆಯಲ್ಲಿ ಅನಿಸಿತು.

ಬೆಳಿಗ್ಗೆ ಚಾ ಕುಡಿಯಲು ಕೂತಾಗ ಮಾಂಶಿ “ನೋಡು ನಿನ್ನ ಪಬ್ಬೂನ ಕತೆ. ನಿನ್ನೆ ತೇರಿಗೆ ಹೋದವನು ಇನ್ನೂ ಬರಲಿಲ್ಲವಂತೆ. ಇಲ್ಲಿ ಬಂದಾನೇನೋ ಅಂತ ಚೌಕಶಿ ಮಾಡಲು ದಂಡು ಬಂದಿದ್ದ”-ಅಂದಳು. ನನಗಾಗ ಏನೂ ಅನಿಸಲಿಲ್ಲ. ಸತ್ತವ ಭಟ್ಕಳಕ್ಕೆ ಹೋದನೋ ಏನೋ ಮುಮ್ತಾಜಳ ಸಂಗತಿ ನೋಡಲಿಕ್ಕೆ ಮಾಡಲಿಕ್ಕೆ ಅಂತ ಹೊಟ್ಟೆಕಿಚ್ಚು ಆಯಿತು. ನಂತರ ಸುಮಾರು ಹತ್ತುಗಂಟೆ ಹೊತ್ತಿಗೆ ನನ್ನದೇ ವಯಸ್ಸಿನ ಪೋರಿಯೊಬ್ಬಳು ಬಂದು ಮತ್ತೆ ಮಾಂಶಿಯ ಬಳಿ “ಪಬ್ಬಣ್ಣ ಬಂದಿದ್ದಾನೋ?” ಅಂತ ಕೇಳಿದಳು. ಅತ್ತಳು. ಅವಳು ಅವನ ತಂಗಿ ಗಂಗೆಯಂತೆ. ಅವನು ಒಂದಿಷ್ಟು ಬ್ರಿಜ್ಜಿನ ಕೆಲಸಗಾರರ ಜತೆಗೇ ತೇರಿಗೆ ಹೋದವನೆಂದೂ ಅವರೇ ಏನೋ ಆಶೆ ತೋರಿಸಿ ಅವನನ್ನು ತಮ್ಮ ಜತೆಗೆ ಹಾರಿಸಿಕೊಂಡು ಹೋಗಿರಬೇಕೆಂದೂ-ಬಹಳ ಜನ ಹೇಳುತ್ತಾರೆ ಅಂತ ಅಳುತ್ತ ಹೇಳಿದಳು. ಮಾಂಶಿ “ಪಾಪ ಪಾಪ ಪ್ಚ್… ಪ್ಚ್…” ಮಾಡಿ “ಬರಬಹುದು ಪೋಲೀಸರಿಗೆ ಹೇಳಿದರೆ ಚಲೋದು” ಅಂತೆಲ್ಲ ಹೇಳಿ ಬೆಳಿಗ್ಗೆ ಮಾಡಿದ್ದ ಬಟಾಟೆ ಬಜೆ ಅವಳ ಕೈಗೆ ಕೊಟ್ಟು ಕಳಿಸಿದಳು. ಬಜೆಯನ್ನು ನೋಡಿ ಕಣ್ಣರಳಿಸಿ ಗಂಗೆ ಓಡುತ್ತ ಹೋದಳು. ಪಬ್ಬೂನದೇ ಮುಖ ಅವಳದು. ಅವನನ್ನೇ ಕಂಡ ಹಾಗೆ ಆಗಿತ್ತು. “ಈ ಹಾಳು ಬ್ರಿಜ್‌ನ ನೆವದಿಂದ ಮತ್ತೇನೇನು ಆಗುವುದುಂಟೋ” ಅಂತ ಹೇಳಿ ಮಾಂಶಿ ನನ್ನ ತಲೆಗೆ ಎಣ್ಣೆ ತಿಕ್ಕಿದಳು. “ನೋಡಿದೆಯಾ-ಮತ್ತೆ ನೀನು ಅವನ ಸಂತಿಗೆ ಕುಣೀತಿದ್ದೆಯಲ್ಲ!”-ಎಂದಳು. ಈ ಮಾತು ಸಂಬಂಧವಿಲ್ಲದ್ದು ಎಂದು ಆಗಲೇ ನನಗೆ ಅನಿಸಿತ್ತು.

ಯಾಕೋ ಪಬ್ಬೂನ ಹೋಲುವ ಅವನ ತಂಗಿಯನ್ನು ನೋಡಿದ್ದೇ ಪಬ್ಬೂನ ನನ್ನ ದೋಸ್ತಿಯ ನೆನಪು ತೀವ್ರವಾಗಿಬಿಟ್ಟಿತು. ಆ ಸಂಜೆಯೇ ಕುತೂಹಲ ತಾಳಲಾರದೆ ಪಬ್ಬೂ ನನ್ನಿಂದ ಒಯ್ದು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ನನ್ನ “ಭಟ್ಟಿ ವಿಕ್ರಮಾದಿತ್ಯ” ಮುಂತಾದ ಪುಸ್ತಕ ತರುತ್ತೇನೆಂದು ಮಾಂಶಿಯ ಹತ್ತಿರ ಹೇಳಿ ಅವನ ಮನೆಗೆ ಹೋಗಿಬಿಟ್ಟೆ. ಆ ಮನೆಯಲ್ಲಿ ಅಂಥದ್ದೇನೂ ದುಃಖ ಆವರಿಸಿದ್ದಂತೆ ನನಗೆ ಕಂಡುಬರಲಿಲ್ಲ. ಮೂರು ವರ್ಷ ದೀವಗಿಯಲ್ಲಿದ್ದರೂ ಪಬ್ಬೂನ ದೋಸ್ತನಾಗಿದ್ದರೂ ಮೊದಲ ಬಾರಿಗೆ ಅವನ ಮನೆಗೆ ಹೋಗಿದೆ. ವಿಶಾಲವಾದ ತೆಣೆ, ತಟ್ಟಿ, ಹೊರಗೆ ತೆಂಗಿನ ಮರದಡಿಗೊಂದು ಮಡಕೆಯ ಹಂಡೆ, ಜಟಕದೇವರು, ದಾಸವಾಳದ ಗಿಡಗಳು, ಕೋಳಿಗಳು-ಇದ್ದವು. ಗಂಗೆ ಅನವಶ್ಯಕ ನಾಚಿ ನಾಚಿ ಮನೆ ಹಿಂಭಾಗಕ್ಕೆ ಓಡುತ್ತಿದ್ದಂತೆ ಅನಿಸಿತು. ಪಬ್ಬೂನ ತಾಯಿ ಬಾಯಿಗೆ ಸೆರಗೊತ್ತಿ ಧಳಾ ಧಳಾ ಅಳುತ್ತಿದ್ದಳು.. ಪಾಪ ಅನಿಸಿತು. ಬ್ರಿಜ್ಜಿಗೆ ಬಲಿಕೊಡಬೇಕಲ್ಲ-ಅದಕ್ಕೇ ಪಬ್ಬೂನ ಬಲಿಕೊಟ್ಟಿದ್ದಾರೆ ಅಂತ ಊರೆಲ್ಲ ಸುದ್ದಿಯಂತೆ ಅಂದು “ದ್ಯಾವ್ರೇ” ಎಂದು ಅತ್ತಳು. ಹಿರಿಯನಂತೆ-“ಇರಲಿಕ್ಕಿಲ್ಲ. ಭಟ್ಕಳಕ್ಕೆ ಹೋಗಿದ್ದಾನೋ ಏನೋ. ನಿಮ್ಮ ಸಂಬಂಧಿಕರ ಮನೆ ಉಂಟಂತಲ್ಲಾ” ಅಂದೆ. “ಇಲ್ಲ ಇಲ್ಲ, ಅಲ್ಲಿ ಯಾವ ಸಂಬಂಧಿಕರ ಮನೆಯೂ ಇಲ್ಲ” ಅಂತ ನನ್ನನ್ನು ಭಾರಿ ನಿರಾಸೆ ಮಾಡಿಬಿಟ್ಟಳು. ಅವನು ಸುಳ್ಳು ಹೇಳಿದ ಎನ್ನೋದಕ್ಕಿಂತಲೂ-ಅವನ ಮುಮ್ತಾಜಳ ಪ್ರಕರಣ ಸುಳ್ಳಾಯಿತಲ್ಲ ಎಂಬುದೇ ನನಗೆ ಬಹಳ ಬೇಜಾರಾಯಿತು. “ಕೆಳಗಿನ ಮನೆ ಬೀರಣ್ಣನ ಮಗನೂ ಇಲ್ಲಂತೆ, ಕುರ್ಲೆ ಅರ್ಜುನನ ತಮ್ಮನೂ ಇಲ್ಲಂತೆ. ಮತ್ತೂ ಐದಾರು ಮಂದಿ ಇಲ್ಲಂತೆ” ಅಂತ ಗಂಗೆ ಹೇಳಿದಳು. ಅಳುವ ತಾಯಿಯನ್ನು ನೋಡಿ ನೋಡಿ ಅವಳೂ ಅಳಲು ಶುರುಮಾಡಿಬಿಟ್ಟಳು. ಪುಸ್ತಕ ಕೇಳಲು ಮರೆತೆನೋ ಅಥವ ಕೇಳುವ ಮನಸ್ಸಾಗಲಿಲ್ಲವೋ ಒಟ್ಟೂ ಹಾಗೇ ಮನೆಗೆ ಓಡಿ ಬಂದಿದ್ದೆ.

ಆ ದಿನ ಸಂಜೆ ಚಾ ಕುಡಿಯಲು ಬಂದ ಮಾಸ್ತರು-“ನೋಡಿದೆಯೋ, ಪಬ್ಬೂ ಓಡಿ ಹೋದ. ಮತ್ತೂ ಬಹಳ ತರುಣರು ಓಡಿ ಹೋಗಿದ್ದಾರಂತೆ” ಅಂದರು ವಿಚಿತ್ರ ಉತ್ಸಾಹದಲ್ಲಿ. ಅದೇ ವೇಳೆಯಲ್ಲಿ ಬ್ರಿಜ್ಜು ನಿರ್ಮಾಣದ ಜಾಗದಲ್ಲಿ, ಊರಿನ ಆ ಕಾಲದ ಸ್ವಲ್ಪ ಸುಂದರೀ ಕಲಾವಂತೆಯಾಗಿದ್ದ ಗುಲಾಬಿಯು ಸತ್ತು ಬಿದ್ದದ್ದೂ ಊರಿಡೀ ಗೌಜಾಯಿತು. ಅವಳು ದುಂಡಗೆ ಬಿದ್ದಿದ್ದಳಂತೆ. ಅವಳ ಒಂದು ಮೊಲೆ ಹರಿದಿತ್ತಂತೆ. ಇಂಥ ಸುದ್ದಿಗಳು ಹಬ್ಬಿ ನನ್ನ ಕಿವಿಗಳನ್ನು ಚುರುಕುಗೊಳಿಸುತ್ತಿದ್ದವು.
ಅದೇ ವೇಳೆಗೆ ನನ್ನ ಮುಲ್ಕೀಪರೀಕ್ಷೆ ಬಂತು. ಅಭ್ಯಾಸ, ನಿದ್ರೆ, ಬೀಳಬಹುದಾದ ಪ್ರಶ್ನೆಗಳು, ಪರೀಕ್ಷೆಗೆ ಕುಮಟೆ ಸೆಂಟರ್‌ಗೆ ಹೋಗುವುದು, ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ, ನಾಳೆ ಕೊನೇ ಪೇಪರು-ಅಂತ ಪರೀಕ್ಷೆ ಮುಗಿಯಿತು.
ರಜೆಯಲ್ಲಿ ದೀವಗಿಯಲ್ಲೇ ಉಳಿದೆ. ಬಸ್ಸು ನಿಲ್ಲುತ್ತಿದ್ದರಿಂದ ಚಾ ಅಂಗಡಿಗಳು ಚಲೋ ನಡೀತಿದ್ದವು. ದಾಮೋದರ ಪ್ರಭುಗಳ ವ್ಯಾಪಾರ ಭರ್ಜರಿ ಆಗಿತ್ತು. ಸಣ್ತಮ್ಮನಾಯ್ಕನ ಸೀಯಾಳದಂಗಡಿ ಜೋರಾಗಿ ನಡೆಯುತ್ತಿತ್ತು. ಜಂಗಲ್‌ಗಳು ಹೋಗುತ್ತಿದ್ದವು. ಧಕ್ಕೆಯಲ್ಲಿ “ಕುಹೂಯ್” ಕೂಗುಗಳು ಧ್ವನಿಸುತ್ತಲೇ ಇದ್ದವು.

ರಿಸಲ್ಟು ಆಗಿ ನಾನು ಹೈಸ್ಕೂಲಿಗೆ ಶಿರಸಿಗೆ ದೊಡ್ಡಪ್ಪನ ಮನೆಗೆ ಹೋದವ ಅಲ್ಲೇ ಆಗಿಬಿಟ್ಟೆ. ಎಲ್ಲೋ ಮಧ್ಯದಲ್ಲಿ ಒಂದೆರಡು ಸಲ ಬಂದು ಹೋದರೂ ಮಾಂಶಿಯ ವಿಶೇಷ ಅಡುಗೆ ಉಪಚಾರ, ಒಂದೊಂದೇ ತಲೆ ಎತ್ತುತ್ತಿದ್ದ ಸೇತುವೆ ಕಂಬಗಳನ್ನು ನೋಡುವದು ಇಷ್ಟರಲ್ಲೇ ಮರಳುತ್ತಿದ್ದೆ. ಬಿ.ಎ. ಮುಗಿಸಿದ ನಂತರ ಬಪ್ಪಾ ನನ್ನನ್ನು ಮಾಂಶಿಯ ಆಸ್ತಿಯ ಮನೆಯ ಉಸ್ತುವಾರಿ ನೋಡಿಕೋ ಅಂತ ಹೇಳಿದಮೇಲೆ ಶಾಶ್ವತವಾಗಿ ದೀವಗಿಯಲ್ಲೇ ಉಳಿಯುವುದೆಂತ ನಿರ್ಧಾರ ಮಾಡಿದ ಮೇಲೆ ಇಲ್ಲಿ ಬಂದುಳಿದು ಈಗ ಎರಡು ತಿಂಗಳೇ ಆಗುತ್ತಾ ಬಂದಿದ್ದರೂ ಒಂದು ರೀತಿಯಲ್ಲಿ ಮಂದವಾಗೇ ಬದುಕುತ್ತಿದ್ದೆ. ಬರೇ ಹಿತ್ತಲಿಗೆ ಪಂಪ್‌ಸೆಟ್ ಹಚ್ಚಿ ನೀರು ಹರಿಸುವುದು, ಮರ್ಕುಂಡಿ ಬಂದರೆ ತೆಂಗಿನಕಾಯಿ ಕೊಯ್ಯಿಸುವುದು, ಎಲ್ಲಾದರೂ ಅಪರೂಪಕ್ಕೆ ಲಾಂಚಿನಲ್ಲಿ ಆಚೆ ಬದಿ ಮಣಕಿಗೆ ಹೋಗಿ ಅಲ್ಲಿಂದ ಕುಮಟೆ ಬಜಾರಿಗೆ ಹೋಗಿ ಬರುವುದು, ಸಂಜೆ ಧಕ್ಕೆಯ ಬಳಿ ಅಥವಾ ದಾಮೋದರ ಪ್ರಭುನ ಅಂಗಡಿಯಲ್ಲಿ ಕೂತು ಸಂಪೂರ್ಣವಾಗಿ ನೀರಿನಲ್ಲಿ ತಲೆಯೆತ್ತಿ ನಿಂತು ನೋಡುತ್ತಿದ್ದ ದೂರದ ಕಂಬಗಳನ್ನು ನೋಡುವುದು-ಹೀಗೇ ತೆವಳುತ್ತಿದ್ದ ನನಗೆ ಈವತ್ತು ಮಾಂಶಿ “ಪಬ್ಬೂ ಬಂದಾನಂತೋ?” ಎಂದಿದ್ದು ಒಂದು ರೀತಿಯ ಕೀಲಿ ಕೊಟ್ಟಂತಾಯ್ತು. ಪಬ್ಬೂ ಸತ್ತನೆಂದೋ, ಬಲಿಯಾದನೆಂದೋ ಅಥವಾ ಓಡಿಯೇ ಹೋದನೆಂದೋ-ಏನೇ ಆಗಿದ್ದರೂ ನನ್ನ ಮನಸ್ಸಿನಿಂದ ಅವನು ನಿವೃತ್ತಿ ತಗೊಂಡು ಬಹಳಕಾಲವಾಗಿತ್ತು. ಇಷ್ಟರಮಟ್ಟಿಗೆ ಎಂದರೆ ಧಕ್ಕೆಯಲ್ಲಿ ಜೋರಾಗಿ ಜಂಗಲ್ ನೂಕುತ್ತಿದ್ದ ಅವನಪ್ಪ ದಂಡುವನ್ನು ನೋಡಿದರೂ ನನಗೆ ಪಬ್ಬೂ ಇಷ್ಟು ತೀಕ್ಷ್ಣವಾಗಿ ನೆನಪಿನಲ್ಲಿ ಉಕ್ಕುತ್ತಿರಲಿಲ್ಲ. ಈವತ್ತು ಮುಂಜಾನೆ ತೋಟದಲ್ಲಿ ಮರ್ಕುಂಡಿ ಪಬ್ಬು ಪಬ್ಬು ಅಂತ ಏನೋ ಉಳಿದವರ ಹತ್ತಿರ ಹೇಳುತ್ತಿದ್ದುದು ಇದೇ ಅಂತ ಈಗ ತಿಳಿಯಿತು.

ಮಾಂಶಿ ಊಟಕ್ಕೆ ಕರೆದಾಗಲೂ ಗುಂಗು ಬಿಡಲಿಲ್ಲ. ಏನೋ ಕುತೂಹಲ. ನನ್ನಲ್ಲೇ ಸ್ಥಗಿತಗೊಳ್ಳುತ್ತಿದ್ದ ನನಗೆ ಸಂಪರ್ಕಕ್ಕೆ ಈಗ ಹೊಸದೊಂದು ಆಯಾಮ ಸಿಕ್ಕೀತೆನ್ನುವ ತವಕ. ಏನೊ ಒಂದು ರೀತಿಯ ಉದ್ವೇಗದಲ್ಲಿ ಊಟವೂ ಸರಿಯಾಗಿ ಸಾಗಲಿಲ್ಲ.

ಊತ ಮಾಡಿದವನೇ ಧಕ್ಕೆಗೆ ಹೋದೆ. ಜೆಟ್ಟಿಗೆ ಕಟ್ಟಿದ ಲಾಂಚು ದೋಣಿ ಜಂಗಲ್ಲುಗಳ ನೀರಿನ ಅಲೆಗೆ ನಡುಗುತ್ತಿದ್ದವು. ದೂರದ ಸೇತುವೆಯ ಕಂಬಗಳು ಅವುಗಳನ್ನು ಹೆದರಿಸುತ್ತಿದ್ದಂತೆ ನನಗನಿಸಿತು. ನಾನು ಕಲಿತೆ-ಒಂದಿಷ್ಟು ವರ್ಷ ಶಿರಸಿಯಲ್ಲಿ ಕಳೆದೆ. ಆದರೂ ನನ್ನ ನೆನಪಿನ ಕೇಂದ್ರಗಳನ್ನು ಇಷ್ಟು ಜಗ್ಗುವ ಪಬ್ಬೂನ ತಲೆಯಲ್ಲಿ ನಾನು ಇದ್ದೇನೆಯೇ?-ಸೇತುವೆಯ ಮೇಲೆ ಕಂಬಗಳ ನಡುವೆ ಒಂದೊಂದೇ ಸ್ಲ್ಯಾಬುಗಳನ್ನು ಹಾಕುತ್ತಿದ್ದರು. ಇನ್ನೊಂದೆರಡು ತಿಂಗಳಲ್ಲಿ ಸೇತುವೆ ಪೂರ್ಣವಾದೀತೇನೋ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.
“ರಾಯರೇ”- ಅಂತ ಕರೆದಂತಾಯಿತು.
ದಂಡು ಅಪರೂಪಕ್ಕೆ ಮಾತನಾಡಿದ್ದ. ಆ ಪಟ್ಟ ನನಗೆ ಸೇರಲಿಲ್ಲ.
“ನಮ್ಮ ಪಬ್ಬೂ ಬಂದಾನೆ ನಿನ್ನೆ ರಾತ್ರಿ. ನಿಮಗೆ ಸಿಕ್ಕಿದ್ದನೋ?” ಅಂದ. “ಇಲ್ಲವಲ್ಲ ಹೌದೆ?”-ಅಂತ ಪಕ್ಕಾ ‘ರಾಯ’ನಂತೆ ಹೇಳಿ “ಅವನಿಗೆ ನಮ್ಮ ಮನೆಗೆ ಬರಲಿಕ್ಕೆ ಹೇಳು” ಅಂದೆ. “ನೀನು ಆರಾಮೋ?”-ಎಂದೆ. “ಏನೋ ನಡದದೆ. ಬ್ರಿಜ್‌ನಲ್ಲಿ ಸಿಮೆಂಟು ಕಲಸೋ ಮಶಿನ್ನಿನಲ್ಲಿ ಕೆಲಸಕ್ಕೆ ಹೋಗುತ್ತೇನೆ”-ಎಂದ.

ಮನೆಗೆ ಬಂದಾಗ ನನ್ನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಪಬ್ಬೂ-ಅರ್ಥಾತ್ ಪ್ರಭಾಕರ ದಂಡೂ ಹರಿಕಾತ್-ನನ್ನ ಕೋಣೆಯಲ್ಲಿ ಕೂತಿದ್ದ. ಇಷ್ಟು ಬೇಗ ಅವ ಬಂದನು ಅಂತ ನಾನೆಣಿಸಿರಲಿಲ್ಲವಾದ್ದರಿಂದ ಅವನನ್ನು ಎದುರಿಸುವ ಯಾವ ಮನೋಸಿದ್ಧತೆಯಲ್ಲೂ ನಾನಿರಲಿಲ್ಲ. ಹೀಗಾಗಿ- “ಬಂದೆ” ಅಂತ ಹೇಳಿ ಸೀದ ಒಳಗೆ ಹೋದೆ. ದೇವರ ಕೋಣೆಯಲ್ಲಿ ಊದುಬತ್ತಿ ಹಚ್ಚುತ್ತಿದ್ದ ಮಾಂಶಿ “ನೋಡು ಹೊರಗೆ ಬಂದಿದ್ದಾನೆ ಮಹಾಶಯ” ಅನ್ನೋ ರೀತಿ ಮುಖಚರ್ಯೆ ಸನ್ನೆ ಮಾಡಿದ್ದು ನನಗೆ ಸರಿ ಕಾಣಲಿಲ್ಲ. “ಚಾ ಮಾಡು” ಅಂತ ಹೇಳಿ ಹೊರಬಂದೆ.
“ನೆನಪುಂಟೋ ಆನಂದ್, ನಾನು ಪಿ.ಡಿ. ಹರಿಕಾಂತ್”-ಬೆವರಿನ ವಾಸನೆ ಹೊಡೆಯುವ ಹಳದಿ ಟೆರಿಲೀನ್ ಅಂಗಿ, ಪ್ಯಾಂಟ್‌ನಲ್ಲಿ ಪಬ್ಬೂ ಬಾಯ್ತುಂಬ ನಕ್ಕು ನುಡಿದ. ನನಗೆ ಸಂತೋಷವಾಯಿತು. “ಅರೆರೆರೆ ಏನು ಮಾರಾಯಾ ಏನು ಕಥೆ?”- ಎಂದೆ. “ನೀವೇ ಹೇಳಬೇಕು”-ಎಂದು ಬಹುವಚನದೊಂದಿಗೆ ಕಸಿವಿಸಿಗೊಳಿಸಿದ. ಒಂದಿಷ್ಟು ಹೊತ್ತು ಮೌನ. ನಂತರ “ನಾನು ಇಷ್ಟು ದಿವಸ ಎಲ್ಲಿ ಓಡಿ ಹೋಗಿದ್ದೆ ಅಂತ ನೀವು ಕೇಳಲೇ ಇಲ್ಲವಲ್ಲ. ಹೆದರಿಕೆಯ?” ಅಂದ.ಈ ಸರಣಿಗೆ ತಡವರಿಸಿ “ಅರೆ ಹೌದಲ್ಲ-ಏನು ನಿನ್ನ ಕಾರಬಾರು?”- ಎಂದೆ. ಎಷ್ಟು ಬಹುವಚನ ಕೊಡಬೇಕೆಂದುಕೊಂಡರೂ ತುಟಿಯಿಂದ ಜಾರುವುದರೊಳಗೆ ನನ್ನನ್ನೂ ಮೀರಿ ಅದು ಏಕವಚನವಾಯಿತು.

ಅವನು ಇಲ್ಲಿಂದ ಹೊನ್ನಾವರ ತೇರಿಗೆ ಹೋದವನಂತೆ-ಬ್ರಿಜ್ಜಿನಲ್ಲಿ ಮೇಸ್ತ್ರಿಯಾಗಿದ್ದ ಕುರುಯನ್ ಎಂಬವ ಇವನಿಗೂ ಇವನ ಜತೆಗಿನ ಸುಮಾರು ಏಳೆಂಟು ಇಲ್ಲಿಯದೇ ದೀವಗಿ ಮಣಕಿ ಆಸುಪಾಸಿನ ಹುಡುಗರಿಗೂ-ಚಲೋ ನೌಕರಿ ಕೊಡಿಸುತ್ತೇನೆ ಅಂತ ಹೇಳಿ ಬಾಂಬೇಗೆ ಕರಕೊಂಡು ಹೋದನಂತೆ. (ತೇರಿಗೆ ಹೋಗುವ ಮೊದಲೇ ಎಲ್ಲರಿಗೂ ಇಂತಿಂಥ ಜಾಗದಲ್ಲಿ ಸಿಕ್ಕಬೇಕು ಎಂದಿದ್ದನಂತೆ. ತೇರಿನಲ್ಲಿ ಪಬ್ಬೂ ನನ್ನನ್ನೂ ಮಾಂಶಿಯನ್ನೂ ನೋಡಿದ್ದನಂತೆ. ನನಗೆ ಹೇಳಬೇಕು ಅಂದುಕೊಂಡಿದ್ದನಂತೆ.) ಬಾಂಬೇದಲ್ಲಿ ಯಾವುದೋ ಕಂಪನಿಯಲ್ಲಿ ಕಳವು ಮಾಲುಗಳನ್ನು ಮಾರುವ ಏಜೆಂಟರಾಗಿ ಇಟ್ಟುಕೊಂಡರಂತೆ. ಹೊಟ್ಟೆಗೂ ಸರಿ ಕೊಡುತ್ತಿರಲಿಲ್ಲ. ಮೇಲಾಗಿ ಪೋಲೀಸರ ಕೈಯಲ್ಲಿ ಪದೇ ಪದೇ ಪೆಟ್ಟು ತಿನ್ನಬೇಕಾಗುತ್ತಿತ್ತು. ಒಮ್ಮೆ ತಪ್ಪಿಸಿಕೊಂಡು ಓಡಿಹೋಗಿ ಯಾವುದೋ ಮರಾಠಿಗರ ಮನೆಯಲ್ಲಿ ಚಪಾತಿ ಮಾಡುವುದು, ಮಸಾಲೆ ಅರೆಯುವುದು, ಭಾಂಡಿ ತೊಳೆಯುವುದು ಕೆಲಸಕ್ಕೆ ಸೇರಿಕೊಂಡನಂತೆ. ತುಂಬ ಒಳ್ಳೆಯವರಿದ್ದರು. ಗಂಡ ಹೆಂಡತಿ ಪರಸ್ಪರ ಸರಿ ಇರಲಿಲ್ಲ. ಒಂದು ಮಗು ಇತ್ತು. ಅದನ್ನೂ ಅವ ಆಡಿಸುತ್ತಿದ್ದ. ಒಂದು ದಿನ ಮಗು ಹಾಲಿಗಾಗಿ ಅಳುತ್ತಿತ್ತು. ಇವನೆದುರಿಗೇ ತಾಯಿ ಬಂದು ಪೋಲಾಕು ಎತ್ತಿ ಹಾಲುಣಿಸಿ ನಂತರ ತಕ್ಷಣ ಮಗುವನ್ನು ಬದಿಗಿಟ್ಟು “ತುಲಾ ಪಾಯಜೆ ಕಾ?” ಅಂತ ಇವನ ಮುಖವನ್ನು ಎದೆಗೊತ್ತಿಸಿಕೊಂಡು ಗಟ್ಟಿ ಅಪ್ಪಿ ಉರುಳಾಡಿಸಿ ಮುತ್ತಿಟ್ಟಳಂತೆ. ಅವತ್ತಿನಿಂದ ಅದೇ ಅಭ್ಯಾಸ ಆಯಿತಂತೆ. ಒಂದು ದಿನ ಯಜಮಾನ ನೋಡಿ ಇವನನ್ನು ಚೆನ್ನಾಗಿ ಹೊಡೆದು ಮನೆಯಿಂದ ಹೊರಹಾಕಿದನಂತೆ. ಅಲ್ಲಿಂದ ನಂತರ ಬೇರೆ ಬೇರೆ “ಬಿಸಿನೆಸ್” ಮಾಡಿದನಂತೆ. ಆದರೂ ಹೆಂಗಸರ ಹುಚ್ಚು ಹಿಡಿಯಿತಂತೆ.

ಈ ಹುಚ್ಚಿನ ಶಮನದ ವರ್ಣನೆ ಮಾಡಿಯಾನು ಅಂತ ಹೆದರಿ ನಾನು ವಿಷಯ ಬದಲಿಸಲು ಯತ್ನಿಸುತ್ತಿದ್ದು ಅವನಿಗೆ ತಿಳಿಯಿತು “ನಿನಗೆ ಹಲ್ಕಟ್ ವಿಷಯಗಳು ಹಿಡಿಸುವುದಿಲ್ಲ ಅಥವಾ ನಿನಗೆ ಚಲೋ ಹಿಡಿಸುತ್ತದೆ ನಿನ್ನ ಮಾಂಶಿಗೆ ಹಿಡಿಸುವುದಿಲ್ಲ ಅಲ್ಲವೆ?” ಅಂದ. ಮಾಂಶಿ ಒಳಬಾಗಿಲಲ್ಲಿ ಕೆಮ್ಮಿದಾಗ ಚಾ ತಂದು ಇವನಿಗೆ ಕೊಟ್ಟೆ. “ಇಲ್ಲೇ, ನಿನ್ನ ಮಾಂಶಿಯ ತೋಟ ಕಾಯುವ ಗತಿ ಬಂತಂತಲ್ಲ ನಿನಗೆ”-ಅಂದ. “ಕ್ಯಾರ್‌ಫ್ರೀ” ರೀತಿಯಲ್ಲಿ ಅವನು ಮಾತನಾಡುತ್ತಿದ್ದ. ಬಾಲ್ಯದ ಪಬ್ಬು ನನಗೆ ಅವನ ಮಾತಿನಲ್ಲಿ ಸಿಕ್ಕುವುದು ತುಂಬಾ ದುಸ್ತರವಾಯಿತು. “ನಾನೀಗ ಬಿಸಿನೆಸ್ ಮೇಲೆ ಬಂದಿದ್ದೇನೆ ಅಂತಿಟ್ಕೋ”- ಎಂದ. ಹಠಾತ್ತನೆ ಈಗ ದೀವಗಿಗೆ ಬಂದ ಕಾರಣ ಏನು ಅಂತ ಕೊನೆಗೂ ನನಗೆ ತಿಳಿಯಲಿಲ್ಲ. ಚಾ ತಣಿದ ಮೇಲೆ ಒಂದೇ ಉಸಿರಿಗೆ ಗಟಗಟ ಕುಡಿದು ಕೆಳಗಿಟ್ಟ. “ಲೋಟ ತೊಳೆದಿಟ್ಟು ಹೋಗಲು ಹೇಳು” ಅಂತ ಮಾಂಶಿ ಬಾಗಿಲಲ್ಲಿ ಗೊಣಗಿದಳು. ಅವನಿಗದು ಕೇಳಿಸಲಿಲ್ಲ. ನನಗೆ ತುಂಬಾ ದುಃಖವಾಯಿತು. ಪಬ್ಬು ಎದ್ದು “ನಿನ್ನ ಹತ್ತಿರ ಬಹಳ ಮುಖ್ಯವಾದ ವಿಚಾರ ಮಾತನಾಡಬೇಕು. ನಾಳೆ ಬೆಳಿಗ್ಗೆ ಧಕ್ಕೆಯ ಹತ್ತಿರ ಸಿಗು ಅಥವಾ…” ಅನ್ನುವಷ್ಟರಲ್ಲೇ “ನಾನು ನಿಮ್ಮ ಮನೆಗೇ ಬರ್ತೇನೆ” ಅಂತ ಹೇಳಿದೆ. ಹೊರಟು ನಿಂತವ, “ಲೋಟ ತೊಳೆಯಲೆ?”-ಎಂದ. ಈ ಪ್ರಶ್ನೆಯ ಹಿಂದಿನ ಪಬ್ಬುವಿನ ಬಗ್ಗೆ ಕನಿಕರ ಎನಿಸಿತು. “ಛೆ, ಛೆ, ಹಾಗೇನಿಲ್ಲ. ಹೋಗು”-ಅಂದೆ. ‘ನಿನ್ನ ಮಾಂಶಿಗೆ ಹೇಳು” ಅಂತ ಹೇಳಿ ಹೋದ. ಮಾಂಶಿಯ ನಡವಳಿಕೆಯಿಂದ ನನಗಾದ ನೋವಿನ ಬಗ್ಗೆ ಪ್ರತಿಭಟನೆ ಸೂಚಿಸಿದರೆ ಅದರ ಪರಿಣಾಮ ಅವಳ ಮೇಲೆ ಆಗುವುದೂ ಇಲ್ಲ ಅನಿಸಿ ಲೋಟವನ್ನು ನಾನೇ ತೊಳೆದು ಒಳಬಂದು ಇಟ್ಟು ‘ಅವನೇ ತೊಳೆದ’ಅಂತ ಒತ್ತಿ ಹೇಳಿದೆ.

ಮಲಗುವ ಮುನ್ನ ಮಾಂಶಿ ಉದ್ದೇಶಪೂರ್ವಕವಾಗಿಯೇ ಎಂಬಂತೆ “ಆನಂದೂ, ಈ ಪಬ್ಬೂನ ತಂಗಿ ಗಂಗೆ ಈಗ ಇಲ್ಲಿ ಭಾರಿ ಧಂದೆ ಮಾಡ್ತಾಳಂತೆ” ಅಂತ ಹೇಳಿದಳು. ಅವಳು ಯಾಕೆ ಹಾಗೆ ಹೇಳಿದಳೋ ಅಂತ ನನಗೆ ತಿಳಿಯಲಿಲ್ಲ. ಸ್ವಲ್ಪ ವಿಚಾರ ತರ್ಕ ಮಾಡಿದರೂ ತಿಳಿಯುವ ಸಾಧ್ಯತೆ ಇದ್ದರೂ ಅದನ್ನು ತಿಳಿಯಬೇಕೆಂಬ ಛಲ ನನ್ನಲ್ಲಿ ಇರಲಿಲ್ಲ. ಗಂಗೆಯ ಬೆಳೆದಿರಬಹುದಾದ ದೇಹ ನಿದ್ದೆಗೆ ಮುನ್ನ ಕೆಲ ಹೊತ್ತು ನನ್ನನ್ನು ಸತಾಯಿಸಿತು.

ಬೆಳಿಗ್ಗೆ ಅವನ ಮನೆಗೆ ಹೊರಟಾಗ ನಡುದಾರಿಯಲ್ಲೇ ಪಬ್ಬು ಒಂದಿಷ್ಟು ಜನರ ಜತೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದ. “ನಾವೆಲ್ಲ ಹೋರಾಡಬೇಕು, ಇಲ್ಲವಾದರೆ ಊರು ಹಾಳಾಗುತ್ತದೆ”-ಅಂತ ಹೇಳುತ್ತಿದ್ದ. ‘ಆನಂದ್, ಮನೆಗೆ ಹೋಗುವಾ” ಅಂತ ಹೇಳಿ ನನ್ನೊಡನೆ ಹೊರಟ. ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅವನನ್ನು ಇಷ್ಟು ಗಂಭೀರ ನಿಲುವಿನಲ್ಲಿ ನೋಡುತ್ತಿದ್ದೆ. “ನೋಡಿ, ನೀವೀಗ ಒಂದು ಅರ್ಜಿ ಬರೆದುಕೊಡಬೇಕು. ಈಗ ಆಗಲಿರುವ ಬ್ರಿಜ್ಜು ದೀವಗಿಯನ್ನು ಮೂಸಿ ಕೂಡ ನೋಡುವುದಿಲ್ಲ. ಆ ರಾಷ್ಟ್ರೀಯ ಹೆದ್ದಾರಿ ಅನ್ನೋದು ಆ ಕಡೆಯೇ ಹೋಗುತ್ತದೆ. ಇಷ್ಟು ದಿನ ಇಲ್ಲಿ ನಿಲ್ಲುವ ಬಸ್ಸುಗಳು ಅವುಗಳ ಪ್ರಯಾಣಿಕರು ಇವರನ್ನೆಲ್ಲ ನಂಬಿಕೊಂಡು ಬದುಕಿದ ಇಲ್ಲಿ ಜನಗಳಿಗೇನಾಗಬೇಕು? ಜಂಗಲ್‌ಗಳನ್ನು ನೂಕಿದ, ಲಾಂಚುಗಳನ್ನು ನಡೆಸಿದ, ಅಲ್ಲಿ ಸೋಡಾ ಮಾರಿದ-ಜನಗಳ ಗತಿ ಏನು? ಇದೇ ಜನ ಬೇವರ್ಸಿ ಜನ ನಾಳೆಯ ಕಲ್ಪನೆ ಇಲ್ಲದವರು-ಅಲ್ಲಿ ಬ್ರಿಜ್ಜು ಬ್ರಿಜ್ಜು ಎಂದು ಸಾಯಲು ಹೋಗುತ್ತವೆ ಗೇಯುತ್ತವೆ. ನನ್ನ ಅಪ್ಪ ದಂಡೂ ಸಹ ಅಲ್ಲಿ ಸಿಮೆಂಟು ಹೊರಲು ಹೋಗ್ತಾನೆ. ದಮ್ಮಿನ ಮುದುಕ ಪುರುಷೋತ್ತಮ ಅಲ್ಲಿ ಗೇಯಲು ಹೋಗುತ್ತಾನೆ. ಅಲ್ಲಾ-ಇವರನ್ನೆಲ್ಲಾ, ಬ್ರಿಜ್ಜು ಸಂಪೂರ್ಣ ಆದಮೇಲೆ ಯಾರು ಕೇಳುತ್ತಾರೆ? ಆಮೇಲೆ ಇವರ ಕೂಳಿಗೆ ಗತಿಯೇನು?”

ನದಿಯ ಅಗಲಕ್ಕೂ ಕಾವಲುಗಾರನಂತೆ ನಿಂತ ದೂರದ ದೊಡ್ಡ ದೊಡ್ಡ ಸೇತುವೆ ಕಂಬಗಳನ್ನು ನೋಡುತ್ತ ನಡೆಯುತ್ತಿದ್ದ ನನಗೆ ಒಮ್ಮೆಗೇ ಪಬ್ಬೂನ ಈ ಹೊಸ ಖರೇ ಮಾತುಗಳಿಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಪಬ್ಬೂ ನಿಜವಾದ ಅಪಾಯವೊಂದನ್ನು ಹೇಳುತ್ತಿದ್ದಾನೆ ಅನಿಸಿದರೂ ಇಷ್ಟು ದಿನದ ನನ್ನ ಮನಸ್ಸಿನಲ್ಲಿಯ ಅವನ ಸ್ವರೂಪದ ಪ್ರಭಾವವೋ ಏನೋ ಅವನನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಳ್ಳಲು ನನಗೆ ತುಸು ಕಷ್ಟವಾಯಿತು.

ಅವನ ಮನೆ ತಲುಪಿದಾಗಂತೂ ನನ್ನ ಎದೆಯೇ ಒಡೆದಂತಾಯಿತು. ಹಿಂದೆ ಪಬ್ಬೂ ಓಡಿ ಹೋದ ದಿವಸ ಪುಸ್ತಕ ತಗೊಂಡು ಹೋಗಲು ನಾನು ಬಂದಾಗಿನ ಮನೆಯೇ ಒಮ್ಮೆಲೇ ಚಿಕ್ಕದಾದಂತೆ ಕಂಡಿತು. ಹರಕು ಛಾವಣಿ-ಬಗ್ಗಿ ಒಳಹೊಕ್ಕೆ. ಕತ್ತಲೆ ಬಿಕೋ ವಾಸನೆ ಹೊಡೆಯುತ್ತಿತ್ತು. ಒಳಗೆ ಸಿಂಗಾರಿ ಅಂದರೆ ಪಬ್ಬೂನ ತಾಯಿ ಏನೋ ಸ್ವಗತದಲ್ಲಿ ಬಡಬಡಿಸುತ್ತಿದ್ದಳು. ಬಹುಶಃ ಪಬ್ಬು ಒಳಗೆ ಹೋಗಿ ನಾನು ಬಂದ ಬಗ್ಗೆ ಹೇಳಿದ. ಆಕೆ ಒಮ್ಮೆಗೇ “ನಾನೇನು ಮಾಡಲಿ? ಅಂವಾ ಬಂದ್ರೆ ನಾ ಏನ್ ಮಾಡ್ಲಿ?” ಎಂದು ಎತ್ತರ ಸ್ವರದಲ್ಲಿ ಬಡಬಡಿಸಿದಳು. ಪಬ್ಬು ಒಳಗಿಂದ ಮಣ್ಣಾದ ಮಾಸಲು ಬಿಳೀ ಕಾಗದ, ಒಂದು ಎಣ್ಣೆ ಹಿಡಿದ ಪೆನ್ಸಿಲ್ ಕೊಟ್ಟು-“ಒಂದು ಅರ್ಜಿ ಬರೆದುಕೊಡು ಇಂಗ್ಲೀಷಿನಲ್ಲಿ” ಎಂದ. “ಇಲ್ಲಿಯ ಜಂಗಲ್‌ದಾರರಿಗೆ, ದೋಣಿ ಹಾಕುವವರಿಗೆ, ಲಾಂಚಿನವರಿಗೆ, ಚಾ ಅಂಗಡಿಯವರಿಗೆ, ಧಕ್ಕೆಯಲ್ಲಿ ಬಿಕ್ಕೆ ಬೇಡುತ್ತಿದ್ದವರಿಗೆ-ಬೇರೆ ಉದ್ಯೋಗ ಕೊಡಬೇಕು”-ಅಂದ. ಇಷ್ಟರಲ್ಲಿ ಅನಿರೀಕ್ಷಿತವಾಗಿ ಗಂಗೆ ಮನೆ ಹಿಂದುಗಡೆಯಿಂದ ಓಡಿ ಬಂದಳು. ಜತೆಗೆ ಒಂದಿಷ್ಟು ಪ್ರಾಯದ ಹುಡುಗೀರು ಇದ್ದರು. ಪಬ್ಬೂ ಎದುರಿಗೆ ಅವರೆಲ್ಲರನ್ನೂ ನೋಡಲು ನನಗ್ಯಾಕೆ ಹಿಂದೇಟಾಗಬೇಕೆಂದು ನನಗೇ ಅರ್ಥವಾಗಲಿಲ್ಲ. ಗಂಗೆ ಮಾಸಲು ಸೀರೆಯೊಳಗೆ ನೀಲಿ ಕಿರಗಣಿ ಹಾಕಿದ್ದಳು. ಅವಳ ಪಲಕಿ ಅವಳ ಕೊಬ್ಬಿನೊಂದಿಗೆ ಸೆಣಸುತ್ತಿತ್ತು. ಉಳಿದವರೂ ಅಷ್ಟೇ. “ಅಣ್ಣೋ-ಇವರು ನಿನ್ನ ಆನಂದ ಅಲ್ವೇನೋ” ಅಂತ ರಾಸೋರಾಸಾಗಿ ಅಂದು ಕಿಸಿಕಿಸಿ ನೆಗಾಡಿದಳು. “ನೀವು ಅರ್ಜಿ ಬರೆದು ನಾಳೆ ಬೆಳಗಾ ಮುಂಚೆ ಕೊಡಿ” ಅಂದ. ಎಲ್ಲಾ ನಾಳೆಯೇ ನಿರ್ಧಾರ ಆಗಿ ಕ್ರಾಂತಿ ಮುಂದುವರೆಸುವವನಂತೆ ಕಂಡ. ಅಂಗಳದಲ್ಲೇ ನಿಂತಿದ್ದ ಗಂಗೆ ವೈಯ್ಯಾರದ ನಗೆಯಲ್ಲಿ ನುಂಗುವಂತೆ ನೋಡುತ್ತಿದ್ದಾಗ ಧಂದೆಯವಳಂತೆ ಕಾಣುವುದೇನೋ ಹೌದಾಗಿತ್ತು. ಪಬ್ಬು ಚೇರಮನ್ ಪ್ರಯೋಜನ ಇಲ್ಲ-ಹಾಗೆ-ಹೀಗೆ-ಅಂತ ಏನೇನೋ ಹೇಳುತ್ತಿರುವಾಗ ಗಂಗೆ ಉಳಿದವರನ್ನು ಕಳಿಸಿ ಒಳಬಂದು ಏನೋ ಲಲ್ಲಾಲ ಮಾಡುತ್ತ ಕೂದಲು ಬಾಚಿಕೊಳ್ಳಲಾರಂಭಿಸಿದಳು. ನನ್ನೆದುರಿಗೇ, ಬೇಕಂತಲೇ ಒಮ್ಮೆ ಬಾಚಣಿಗೆ ಕೆಳಗೆ ಬೀಳಿಸಿ ಬಳಕ್ಕನೆ ಬಗ್ಗಿ ಅಲ್ಲಾಡಿ ಎತ್ತಿಕೊಂಡಾಗಲಂತೂ ನನ್ನ ಗುಂಡಿಗೆ ಬಾಯಿಗೇ ಬಂತು. ಕನಸುಗಾರಿಕೆಯಲ್ಲೇ ಇರುತ್ತಿದ್ದ ನಾನು ಎದುರಿನ ದೃಶ್ಯವನ್ನು ನೋಡಲೂ ಹೆದರುವಷ್ಟು ಪುಕ್ಕನಾಗಿದ್ದೆ.

ಇದೆಲ್ಲ ನಡೆದಾಗಲೂ ಪಬ್ಬೂವಿನ ಮಾತು ನಡೆದಾಗಲೂ ಮನೆಯೊಳಗಿನಿಂದ ಅವನ ತಾಯಿಯ ನಿರಂತರ ರಂಡೆ, ನೀಚ, ಭೋಸಡೀಕೇ ಮುಂತಾದ ಮಾತುಗಳು ನಡೆದೇ ಇದ್ದವು. “ನಿನ್ನ ತಾಯಿಗೆ ಆರಾಮವಿಲ್ಲವೆ?”-ಎಂದೆ. ಪಬ್ಬು ತೀರಾ ನಿರ್ವಿಕಾರನಾಗಿ “ಹೌದು ಹಿಂದಿನ ಮೇಸ್ತ್ರಿಯೇನೋ ಊಟಕ್ಕೆ ಬರ್ತಿದ್ದ. ಸೀರೆಗೀರೆ ಏನೂ ಕೊಡದೇ ಹೋದನಂತೆ. ಅಪ್ಪ ಪ್ರತೀದಿನವೂ ಹೊಡೀತಿದ್ದ. ಮಳ್ಳು ಹಿಡಿದೇ ಮತ್ತೇನಾಗೂದು?” ಎಂದ. ಇದಕ್ಕೆ ಪೂರಕವೆಂಬಂತೆ ಗಂಗೆ ಹಿಹಿಹಿ ನೆಗಾಡಿದಳು. ಎದೆ ಧಸ್ಸೆಂದಿತು. ಇದನ್ನೆಲ್ಲ ಒಪ್ಪಿಕೊಳ್ಳುವುದೇ ಕಷ್ಟವಾಯಿತು. ಪಬ್ಬು ಯಾಕೋ ಎದ್ದು ಒಳಹೋದ. ಎದುರಿಗಿದ ಗಂಗೆ ಕೆಂಪು ತುಟಿಯಲ್ಲಿ ವಿಚಿತ್ರ ನಕ್ಕು ಬಾ ಅನ್ನುವಂತೆ ಸನ್ನೆ ಮಾಡಿ ಕಣ್ಣು ಹೊಡೆದಳು. ಮೈಯೆಲ್ಲ ಹೆದರಿಕೆಯಿಂದ ಕಂಪಿಸಿ ಚೆಪ್ಪೆನಗು ನಕ್ಕು “ಪಬ್ಬೂ ಬರ್ತೇನೊ” ಅಂತ ತೊದಲಿ ಹೇಳಿ ಎದ್ದು ಸರಸರ ಬಂದುಬಿಟ್ಟೆ.

ಮನೆಗೆ ಬಂದರೂ ಕನಸೋ ಅನಿಸುವಂಥ ಅವನ ಮನೆಯ ವಿಚಿತ್ರ ವಾತಾವರಣ, ಗಂಗೆ, ಅವನ ತಾಯಿ ಇವುಗಳ ವಿಚಿತ್ರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಊಟ ಮುಗಿಸಿ ಮಲಗಿದಾಗಲೂ ಆ ಗಂಗೆಯ ಅಮಾಯಕ ಹಿಡಿತದ ಕಣ್ಣು, ಹೆಣ್ಣು ಗಂಡಿನ ಮಧುರ ಬಾಂಧವ್ಯದ ಸಿಹಿಯನ್ನೇ ಸುಳ್ಳಾಗಿಸುವಂತೆ ಅವಳು ಬಗ್ಗಿ ಪ್ರದರ್ಶಿಸಿದ ನುಗ್ಗಿನುಗ್ಗಿ ಬರುವ ಮೊಲೆಗಳು-ಕಣ್ಣಿಗೆ ಬಂದು ಬಂದು ಅಪ್ಪಳಿಸಿದವು.

ಬೆಳಿಗ್ಗೆ ಉರಿಯುವ ಕಣ್ಣುಗಳಲ್ಲಿ ಚಾ ಕುಡಿಯುವಾಗ ಮಾಂಶಿ “ಪಬ್ಬು ಕುಡಿಯುವುದನ್ನು ಕಲಿತಿದ್ದಾನಂತೋ. ಬೊಂಬಾಯಿಯಲ್ಲಿ ಇಲ್ಲದ ಚಾಳಿಯೂ ಇತ್ತಂತೆ” ಅಂತ “ಅವನ ಜಾಸ್ತಿ ವೈವಾಟು ನಿನಗೆ ಬೇಡ” ಅನ್ನೋ ಧ್ವನಿಯಲ್ಲಿ ಹೇಳಿದಳು. ಸುಮ್ಮನೆ ಇದ್ದೆ. ಈ ಮಾಂಶಿಯ ಸಂಕಷ್ಟಿ ಏಕಾದಶಿ, ಹೊಸೆಯುವ ಬತ್ತಿ, ಭಜನೆ, ಗೇರುಸೊಪ್ಪೆಯ ನನ್ನ ಅಮ್ಮ, ಅವಳ ವಟಸಾವಿತ್ರೀ ವ್ರತ, ಮಕ್ಕಳನ್ನು ಪಡೆದ ಧನ್ಯತೆ, ಮನೆ ಕೊಟ್ಟಿಗೆ, ಹಾಲು ಹುಣ್ಣಿಮೆ, ತುಳಸೀ ಹಬ್ಬ, ಅವಲಕ್ಕಿ ಕಾಯ್‌ಬಾಗ, ಹರಕೆ ನಿದ್ದೆ, ಆಶಿರ್ವಾದಗಳಿಗೆ ಮತ್ತು ಪಬ್ಬೂನ ತಾಯಿ, ಮೇಸ್ತ್ರಿ, ಗಂಗೆ, ಧಂದೆ, ಪಬ್ಬೂನೇ ಅವನ್ನೆಲ್ಲ ಹೇಳುವದು-ಇವುಗಳಿಗೆ ತಾಳೆಗೂಡದೆ ಒದ್ದಾಡಿದೆ.

ತೋಟಕ್ಕೆ ಬಂದ ಮರ್ಕುಂಡಿ, ಬ್ರಿಜ್ ಆದಮೇಲೆ ಶ್ರೀಧರ ಕಮ್ತೀರು ಚಾ ಅಂಗಡಿಯನ್ನು ಕುಮಟೆಗೇ ಒಯ್ಯುತ್ತಾರೆಂದೂ, ದಾಮೋದರ ಪ್ರಭುಗಳು ಶಿರಸಿಗೋ ಮತ್ತೆಲ್ಲಿಗೋ ಹೋಗುತ್ತಾರೆಂದೂ ಗೊಣಗೊಣ ಮಾಡಿದ. ಆದರೂ ಶೆರೆ ಅಂಗಡಿ ಶಕೂರ ಸ್ವಾಬ ಮಾತ್ರ ಇಲ್ಲಿಯೇ ಇರ್ತಾನಂತೆ-ಅಂತ ಧನ್ಯತೆಯಿಂದ ಹೇಳಿ ಕೃತಾರ್ಥನಾದ.

ಧಕ್ಕೆಗೆ ಹೋಗಿ ಸುಮ್ಮನೇ ನಿಂತಿದ್ದೆ. ಪಬ್ಬು ನಮ್ಮನೆಗೆ ಹೋಗಿದ್ದವ ನನ್ನನ್ನೂ ಕಾಣದೆ ಅವಸರವಸರದಿಂದ ಇಲ್ಲಿಗೇ ಬಂದ. ಧಾಪುಗಾಲಿನಲ್ಲಿ ಬಂದವನೇ “ಅರ್ಜಿ ಬರೆದಾಯ್ತೋ?” ಎಂದ. “ಇಲ್ಲವಲ್ಲ ಪಬ್ಬೂ, ಅದನ್ನ ಯಾರಿಗೆ ಅಂತ ಬರಿಯೂದು…” ಅಂತ ಹೇಳುವಷ್ಟರಲ್ಲೇ ತಾರಕ ಸ್ವರದಲ್ಲಿ “ನಿಮ್ಮ ಹಣೆಬರಹವೇ ಅಷ್ಟು. ನೀವು ಖಂಡಿತಾ ಅದನ್ನು ಬರೆಯುವುದಿಲ್ಲವೆಂದು ಗೊತ್ತಿತ್ತು.. ನಮ್ಮ ಕಷ್ಟ ಸುಖ ನಿಮಗೆ ಹೇಗೆ ತಿಳಿದೀತು?” ಅಂತ ಕೂಗಿದ. ಸಾರ್ವಜನಿಕ ಪ್ರದರ್ಶನವಾದೀತೆಂಬ ಭಯದಿಂದ ಅವನನ್ನು ತುರುಬಿಕೊಂಡು ಮನೆಯ ಕಡೆ ಹೊರಟೆ. ಸಮಾಧಾನ ಮಾಡಿದೆ. ತೀರ ಕೃತ್ರಿಮವಾಗಿ ರಾಜಕಾರಣಿಯಂತೆ ಮಾತನಾಡಬೇಡ. ದುಡುಕಬಾರದು ವಿಚಾರ ಮಾಡುವಾ-ಅಂತೆಲ್ಲ ಸಂತೈಸಿದೆ. ಮೆತ್ತಗಾಗಿ ಹುಡುಗನಂತೆ “ಸೊರಿ, ಹಂ?” ಅಂದ. ಆಮೇಲೆ ಡ್ರಿಂಕ್ ಮಾಡಿದ್ದೇನೆ” ಅಂದ. ನನ್ನ ಮಾತಿಗೆಲ್ಲ ಬೇಕಾದ್ದಕ್ಕಿಂತ ಜಾಸ್ತಿ ಮಹತ್ವ ಕೊಟ್ಟು “ಎಸ್, ಎಸ್” ಅನ್ನಲಾರಂಭಿಸಿದ. ಅವನ ಬಳಿ ಮಾತಿಗೆ ಇದು ಸಮಯವಲ್ಲ ಅನಿಸಿ ಅವನನ್ನು ಮನೆಗೆ ಕಳಿಸಿದೆ.

ಅವನ ದೇಹಕ್ಕೆ ಅವನ ಬಾಲ್ಯದ ಮುಖ, ಹೊಸದಾಗಿ ಮೊನ್ನೆ ನಮ್ಮ ಮನೆಗೆ ಬಂದಾಗಿನ ಮುಖ, ಕುಮಟೆ ತೇರಿನಲ್ಲಿ ಶರಬತ್ತು ಕುಡಿಯುತ್ತ ನನ್ನನ್ನು ನೋಡಿದ್ದ ಮುಖ, ನಿನ್ನೆಯ ಸಾಮಾಜಿಕ ಮುಖ ಇವತ್ತಿನ ಮುಖ ಎಲ್ಲ ಸೇರಿ ಒಂದೇ ಮುಖವಾದಂತೆನಿಸಿ ನನ್ನ ಯಾವುದೋ ಅಮೂರ್ತದಲ್ಲಿ ನನಗೆ ಹತ್ತಿರದವನಂತೆ ಅನಿಸಿದ.

ಅನಂತರ ಮೂರು ದಿನ ಪಬ್ಬೂನ ಪತ್ತೆಯೇ ಇರಲಿಲ್ಲ. ನಾನು ಅಷ್ಟು ಉತಾವಳಿ ಕಾಣಿಸಲಿಲ್ಲ. ನಾಲ್ಕನೇ ದಿನ ಬೆಳಿಗ್ಗೆ ಹಾಲು ತಂದ ಮಂಕಾಳಿ “ಸುದ್ದಿ ಗೊತ್ತಾಯ್ತೊ? ಸಿಂಗಾರಿ ಮಗಳು ಗಂಗೆ ಸತ್ತಳಂತೆ” ಅಂದಾಗ ಸ್ತಂಭೀಭೂತನಾದೆ. ಮಾಂಶಿಯೇ ಏನು ಎಂದು ಎಂದು ಚೌಕಾಶಿ ಮಾಡಿದಳು. ಹೊಟ್ಟೆ ತೆಗೆಸಲು ಯಾವುದೋ ಗಾಂವಟೀ ಮದ್ದು ಮಾಡಿದ್ದಳಂತೆ. ಮತ್ತೆ ಯಾವುದೋ ಆಸ್ಪತ್ರೆಗೂ ಹೋಗಿ ಬಂದಿದ್ದಳಂತೆ. ಮೊನ್ನೆ ಹೊಟ್ಟೆ ತುಂಬ ರಶಿಗಿ ಆಗಿ ಬೊಬ್ಬೇ ಹೊಡೆದು, ರಕ್ತ ಹೊರಕಡೆ ಮಾಡಿ ಮಾಡಿ ಕುಮಟೆ ಆಸ್ಪತ್ರೇಲಿ ಸತ್ತಳಂತೆ”-ಎಂದ. ‘ಬ್ರಿಜ್ಜು ಮೇಸ್ತ್ರಿಗಳು, ಮಪ್ಳೇರು-ಎಲ್ಲರದೂ ದೋಸ್ತಿ ಆದ ಮೇಲೆ ಮತ್ತೇನಾಗೂದು?”-ಅಂತ ನಿರ್ಣಯ ಕೊಟ್ಟು ಹೋದ. ಮಾಂಶಿ “ಪಾಪ ಮೊದಲೇ ಮದುವೆ ಮಾಡಿಬಿಟ್ಟಿದ್ದರೆ” ಅಂತೆಲ್ಲ ತನ್ನದೇ ನಮೂನೆಯಲ್ಲಿ ಲೊಚಗುಟ್ಟಿ ನನ್ನ ಮುಖ ಮಿಕಿಮಿಕಿ ನೋಡುತ್ತ ಒಳಹೋದಳು. ಮೊನ್ನೆ ಮೊನ್ನೆ ನಾ ಕಂಡ ಗಂಗೆಯ ನಗೆಯ ಹಿಂದೆ ಎಂಥ ದಿಕ್ಕೆಟ್ಟ ಪರದೇಶಿ ಸಾವು ಹೊಂಚು ಹಾಕಿತ್ತಲ್ಲ. ನಿನ್ನೆ ರಾತ್ರಿ ನನ್ನ ಕನಸಿಗೆ ತಿನಿಸಾಗುತ್ತಿದ್ದವಳೇ ಅಲ್ಲಿ ಸತ್ತೇ ಹೋದಳಲ್ಲ-ಪಾಪ ಅನಿಸಿತು. ಒಂದು ವೇಳೆ ಇದೇ ಒಂದು ಕಾರಣದಿಂದಲೇ ಪಬ್ಬು ಈ ಮೂರು ದಿನ ನನ್ನ ಬಳಿ ಬಂದಿರಲಿಲ್ಲ ಅನ್ನೋದು ಹೌದಾದರೆ-ಅನಿಸಿ ಅವನ ಬಗ್ಗೆ ಕನಿಕರ ಉಕ್ಕಿತು.

ಅದೇ ದಿವಸವೇ ಸಂಜೆ ಪಬ್ಬು ಬಂದ. ಹಿತ್ತಿಲಲ್ಲಿ ನಿಂತೇ “ಆನಂದಾ” ಅಂದ. ಇಬ್ಬರೂ ಕೂಡಿ ನಮ್ಮ ಪಂಪ್‌ಸೆಟ್ ಕಡೆ ಹೊರಟಾಗ “ಸಿದ್ದೀ ತಿಳೀತು. ಅದು ಹೇಗೆ ಹಾಗಾಯಿತು?” ಅಂದೆ. “ಯಾವ ಸುದ್ದಿ?” ಅನ್ನೂ ರೀತಿ ನೋಡಿ “ಓಹೋ ಗಂಗೆದೋ” ಅಂದು ಒಂದು ನಿಮಿಷ ಸುಮ್ಮನಾದ. ‘ಮತ್ತೇನಾದೀತು?”-ಅಂದ. ಆಮೇಲೆ “ಖರೇ ಹೇಳು, ಆ ದಿನ ನೀನು ನಮ್ಮನೇಗೆ ಬಂದಾಗ ನಾನು ಇಲ್ಲ, ಅವ್ವಿನೂ ಇಲ್ಲ. ಬರೀ ನೀನು ಗಂಗೆ ಇದ್ರಿ ಅಂತಿಟ್ಕೋ, ಆಗ ಏನು ಆಗುತ್ತಿತ್ತು?”-ಎಂದ. ನನ್ನ ಬಾಯಿ ಮುಚ್ಚಿತ್ತು. ಅವನೇ ಮುಂದುವರಿಸಿ “ಊರಲ್ಲೆಲ್ಲ ಏನು ಸುದ್ದಿ ಗೊತ್ತೊ-ನಾನು ಗಂಗೆಯ ಮೈಮೇಲೆ ಕೈ ಹಾಕಿದ್ನಂತೆ. ಅದಕ್ಕವಳು ‘ಅಣ್ಣನೇ ಮೈಮೇಲೆ ಕೈ ಹಾಕ್ದಾ’-ಅಂದು ವಿಷಾ ತಗಂಡು ಸತ್ತಳಂತೆ. ಅರೆ! ಎಂಥಾ ಮಜಾ ನೋಡು. ಇದು ಖರೇನೇ ಹೌದು ಅಂತಾದ್ರೂ ವಿಷ ತಗೊಂಡು ಸತ್ತರೆ ಅದು ಮಳ್ಳು ಅಂತ ನಿನಗನ್ಸೂದಿಲ್ವೆ?”-ಎಂದ. “ಡ್ರೈವರ್ ಡಿಸೋಜ ಆಗ್ತದೆ, ಪ್ರಭುಗಳು ಆಗ್ತದೆ, ನಾನು ಯಾಕೆ ಅವಳಿಗೆ ಆಗಬಾರದು? ಹಹ್ಹ…ಎಂಥ ಮಜ ನೋಡು, ಅಲ್ಲಾ, ಒಂದು ಮಾತಿಗೆಂದೆ”-ಅಂದ. ಅವನ ತಲೆಯಲ್ಲಿರುವ ಗಂಭೀರ ತರ್ಕವೊಂದನ್ನು ಸ್ಪಷ್ಟೀಕರಿಸಲು ಅವನ ತುಂಡು ತುಂಡು ಮಾತುಗಳು ಯತ್ನಿಸುತ್ತಿದ್ದವು.
“ಹೌದು”-ಅಂದೆ.
“ಸುಮ್ಮನೇ ಹೌದು ಅನ್ನಬೇಡ”-ಎಂದು ನಕ್ಕ.
ಹೆದರಿಕೆ ಹುಟ್ಟಿಸುವ ಅವನ ಈ ನಗೆ ಯಾಕೋ ಪ್ರಿಯವಾಯಿತು. ನನಗೆ ಗೊತ್ತಿಲ್ಲದೆ ಅವನ ಹೆಗಲ ಮೇಲೆ ನಾನು ಕೈ ಹಾಕಿದೆ.
“ನಾನು ನಾಳೆಯೇ ಊರು ಬಿಟ್ಟು ಹೋಗುವ ಪ್ಲೇನು ಮಾಡಿದ್ದೇನೆ. ನನಗೆ ಒಂದು ಐನೂರು ರೂಪಾಯಿ ಬೇಕು”-ಎಂದ.
“ಎಲ್ಲಿಗೆ ಹೋಗುತ್ತೀ?”-ಎಂದೆ.
“ತಿರುಗಿ ಬೊಂಬಾಯಿಗೆ ಹೋಗುತ್ತೇನೆ. ಒಬ್ಬನೇ ಅಲ್ಲ. ಇಲ್ಲಿಯ ಸುಮಾರು ಎಂಟ್ಹತ್ತು ಹುಡುಗೀರನ್ನು ತಗೊಂಡು ಹೋಗ್ತೇನೆ. ಅವರನ್ನು ಅಲ್ಲಿ ಮಾರುತ್ತೇನೆ. ಇಲ್ಲಿಗಿಂತ ಚಲೋದಾಗಿ ಅವರಲ್ಲಿ ಇರ್ತಾರೆ. ನಾನು ಬದುಕುತ್ತೇನೆ” ಅಂದ. ಸಾಮಾನ್ಯವಾಗಿ ಹೇಳುತ್ತಿದ್ದವ ಒಮ್ಮೆಗೇ ಗಂಭೀರನಾದ. ಆಮೇಲೆ “ನಿನಗೆ ಈಗ ನನ್ನ ಮೇಲೆ ತಿರಸ್ಕಾರ ಬಂದಿರಬೇಕಲ್ಲ. ದುಡ್ಡು ಕೊಡುವುದಿಲ್ಲ ಅನ್ನುತ್ತೀ ಅಲ್ಲವೆ?”-ಅಂದ. “ಇಲ್ಲ…ಇಲ್ಲ… ಸಂಜೆ ಬಾ”-ಎಂದೆ.

ಸಂಜೆ ತನಕವೂ ನಾನು ಮಕಾಗೇ ಇದ್ದೆ. ಮಾಂಶಿ “ಅಮೃತಾಂಜನ ತಿಕ್ಕಿಕೋ” ಅಂದಳು. “ಗಂಗೆ ಸತ್ತದ್ದು ಖರೆ ಹ್ಯಾಂಗಂತ ಗೊತ್ತೊ”-ಅಂದಳು. “ಈಗ ಆ ಸುದ್ದಿ ಬೇಡ”-ಎಂದು ಖಾರವಾಗಿ ಅಂದೆ. ಅವಳಿಗದು ಬೇಸರವಾಯಿತು. “ಮಾಂಶೀ, ಪಬ್ಬು ಬೊಂಬಾಯಿಗೆ ಹೋಗುತ್ತಾನಂತೆ. ಅವನಿಗೆ ಐನೂರು ರೂಪಾಯಿ ಬೇಕಂತೆ. ಕೊಡುತ್ತೇನೆ”-ಎಂದೆ. “ಅವನು ಬಹಳ ಮಂದಿಗೆ ಟೊಪ್ಪಿ ಹಾಕಿದ್ದಾನಂತೆ ದಗಾಕೋರನಂತೆ. ಪೋಲೀಸರು ಅವನ ಹಿಂದೆ ತಿರುಗುತ್ತಿದ್ದಾರಂತೆ” ಅಂತ ಹೇಳಿದಳು. “ಗೊತ್ತು” ಅಂದೆ.

ಸಂಜೆ ಪಬ್ಬೂ ಬಂದ. ನಾನು ರೂಪಾಯಿ ಕೊಟ್ಟೆ. ಅವನ ಕಣ್ಣಲ್ಲಿ ನೀರು ಬಂತು. “ನನಗೆ ನಿನ್ನ ಬಗ್ಗೆ ಪಾಪ ಅನಿಸುತ್ತದೆ ಆನಂದಾ” ಎಂದ. ಅವನ ಕೆಲ ದಿನಗಳ ಹಿಂದಿನ ಅರ್ಜಿ ವ್ಯಕ್ತಿತ್ವ ನೆನಪಿಸಿಕೊಳ್ಳುತ್ತಿದ್ದ ನಾನು ತಡವರಿಸಿದೆ. ನಂತರ “ನೀನು ತುಂಬಾ ಸಾಚಾ ಇದ್ದೀ. ನಿನಗೆ ಬಹಳ ವಿಷಯ ಗೊತ್ತಿಲ್ಲ”-ಎಂದು ಏನೋ ಹೇಳಬೇಕೆಂದು ಮಾಡಿದವ ನಿಲ್ಲಿಸಿ ಸ್ವಲ್ಪ ವಿಚಾರ ಮಾಡಿ “ನಾನು ಬರ್ತೇನೆ ಹಂ” ಎಂದು ಹೊರಟ. ನಿಷ್ಕಾರಣವಾಗಿ ಅವನು ನನ್ನನ್ನು ಎಳೆ ಮಗುವಿನಂತೆ ಸಂತೈಸುತ್ತಿರುವಂತೆ ಭಾಸವಾದರೂ ನನಗ್ಯಾಕೋ ಆ ಕ್ಷಣದಲ್ಲಿ ಅವನ ಬಗ್ಗೆ ಪ್ರೀತಿ ಉಕ್ಕಿ ಬಂತು.

ಸ್ವಲ್ಪ ದೂರ ದಣಪೆಯ ಬಳಿ ಹೋದವ ಮತ್ತೆ ನಿಂತು ಏನೋ ವಿಚಾರ ಮಾಡಿದ. ನನಗೆ ತಡೆಯಲಾಗಲಿಲ್ಲ. ಹೋಗಿ “ಏನಂತ ಹೇಳಿ ಬಿಡು. ಅಡ್ಡಿಲ್ಲ ನೀನು ಹೇಳಿದ ಯಾವದೂ ನನಗೆ ಬೇಸರವಾಗುವುದಿಲ್ಲ”-ಅಂದೆ. ನನಗೇ ಪತ್ತೆ ಹತ್ತದಂತಿರುವ ವಿಚಿತ್ರ ಧ್ವನಿಯಲ್ಲಿ. ಅದಕ್ಕವ “ಹೌದು, ನಿನಗೆ ಹೇಳಬಾರದೂಂತ ಮಾಡಿದ್ದೆ. ನಿನ್ನ ಮಾಂಶಿಯ ಬಗ್ಗೆ ನಿನಗೆ ಗೊತ್ತಿಲ್ಲದ್ದು ಬಹಳ ಉಂಟು ಆನಂದಾ. ಈಗಿರಲಿಕ್ಕಿಲ್ಲವೋ ಏನೋ-ಹಿಂದಂತೂ ಅವಳದು ಸೊಂಟದ ಕೆಳಗಿನ ವ್ಯವಹಾರ ಬಹಳ ಇದ್ದಿತ್ತು. ದೇವರಾಣೆಗೂ ಇದು ತಪ್ಪಲ್ಲ ಆನಂದಾ. ಇದನ್ನು ತಪ್ಪು ಎಂದರೆ ನನ್ನ ಬಾಯಲ್ಲಿ ಹುಳಾ ಬೀಳಲಿ. ನನ್ನ ತಂಗಿ ಗಂಗೆಯನ್ನು ಬೊಂಬಾಯಿಗೆ ಆ ಉಳಿದ ಹುಡುಗೀರ ಸಂತಿಗೆ ತಗೊಂಡು ಹೋಗಬೇಕು ಅಂತಿದ್ದವ ನಾನು. ನಿನ್ನ ಮಾಂಶಿಯದು ತಪ್ಪು ಅಂತ ಖಂಡಿತ ಹೇಳುವುದಿಲ್ಲ. ಆದರೆ ಅದರ ಪತ್ತೆಯೇ ಇಲ್ಲದೆ ನೀನು ಇರುವುದು ನನಗ್ಯಾಕೋ ಸಹನ ಆಗುವುದಿಲ್ಲ. ನೀನು ಮುದ್ದಿನಿಂದ ಬೆಳೆದವ. ನಿನಗೆ ಈ ಮಾತು ಸಹನ ಆಗಲಿಕ್ಕಿಲ್ಲ. ಆದರೆ ಯಾಕೋ ಆನಂದ, ನಿನಗೆ ಹೇಳದೇ ಹೋಗುವುದು ನನ್ನಿಂದ ಶಕ್ಯವೇ ಆಗಲಿಲ್ಲ. ಅದಕ್ಕೇ ಬಂದೆ.” ಇನ್ನೆಂದೂ ನನ್ನ ಹತ್ತಿರ ಮಾತಾಡಲೂ ಸಿಗುವುದೇ ಇಲ್ಲವೋ ಅನ್ನುವ ರೀತಿ ಆನಂದ ಆನಂದ ಎಂದು ಮಾತಿನ ಮಧ್ಯೆ ಪದೇ ಪದೇ ಅಂದ. ಮಿಕಿಮಿಕಿ ನೋಡುತ್ತ ನಾನು ನಿಂತಿದ್ದೆ. ಆಮೇಲೆ ಅವನೇ “ನಾನು ಈವತ್ತು ಡ್ರಿಂಕ್ ಮಾಡಿ ಬಂದಿಲ್ಲ. ಕುಡಿದು ಮಾತಾಡ್ತೇನೆ ಅಂತ ತಿಳಿಯಬೇಡ. ಮತ್ತೆ ನೀನು ನನಗೆ ರೂಪಾಯಿ ಕೊಟ್ಟೆ ಅಂತಲೂ ನಾನು ಮೆಚ್ಚಿಸಲು ಹೇಳುತ್ತಿಲ್ಲ. ನಿನ್ನ ಹತ್ತಿರ ನಾನು ಸುಳ್ಳು ಮಾತನಾಡಲಾರೆ” ಅಂತ ಹೇಳಿ ಹೋಗಿಬಿಟ್ಟ.

ಆ ರಾತ್ರಿ ಮೊಟ್ಟಮೊದಲ ಬಾರಿಗೆ ನನಗೆ ಒಂಟಿ ಅನಿಸತೊಡಗಿತು. ನನ್ನ ವ್ಯಕ್ತಿತ್ವದ ಒಂದು ತುಂಡೇ ಹೋದಂತೆನಿಸಿ ಅಳು ಬಂತು. ಇಷ್ಟು ದಿನ ಅಷ್ಟೇನೂ ಒಡನಾಟವಿರದ ನಮ್ಮೀರ್ವರ ವ್ಯಕ್ತಿತ್ವದ ಈ ಅಮೂರ್ತ ಅವಲಂಬನ ಅಂದೆಂಥದ್ದು ಎಂದು ಯೋಚಿಸಿದಷ್ಟೂ ಬಗೆಹರಿಯದೆ ಒಂಟಿತನ ಬಾಧಿಸಿತು. ತಡೆಯಲಾರದೆ “ಮಾಂಶಿ,-ಮಾಂಶಿ”-ಎಂದು ಬಿಕ್ಕಳಿಸಿದೆ. ಮಾಂಶಿಯೇ ಬಂದು “ತಲೆನೋವು ಜಾಸ್ತಿ ಆಯಿತೇ?” ಅಂದು ಅಮೃತಾಂಜನ ತಿಕ್ಕಿ ನನ್ನ ಬಳಿಯೇ ಕೂತಳು. ಅವಳ ಸಾಂತ್ವನದಲ್ಲಿ ನಿದ್ದೆಹೋದೆ.

ಮರುದಿನ ಏಕಾ‌ಏಕೀ ಅನೇಕ ಹುಡುಗಿಯರು ನಾಪತ್ತೆಯಾದ ಬಗ್ಗೆ ಊರು ಹೌಹಾರಿತು. ಎಲ್ಲ ಕಡೆ ಅದೇ ಪಂಚಾತಿ. ಪಬ್ಬೂನೂ ಇಲ್ಲ ಅಂತ ಗೊತ್ತಾಗಿ ಪೋಲೀಸರು ಧಪಧಪ ಊರಲ್ಲಿ ತಿರುಗಿದರು. ಗಾಡಿ ವೆಂಕಟ್ರಮಣನ ಮಗಳು ಸಿಂಗಾರಿ, ಶ್ರೀಧರ ಕಮ್ತೀರ ಮಗಳು ಸರೋಜ-ಕೂಡ ಇದ್ದಿದ್ದು ತುಂಬಾ ಕಳವಳ ಹಬ್ಬಿಸಿತ್ತು. ಅದೇ ಗಲಾಟೆಯಲ್ಲೇ ಶ್ರೀಧರ ಕಮ್ತೀರಿಗೆ ಹುಚ್ಚು ಹಿಡಿದಂತಾಗಿತ್ತಂತೆ. ಇದೇ ವೇಳೆಯಲ್ಲೇ ಬ್ರಿಜ್‌ನ ಸಿಮೆಂಟಿನ ಅಪರಾತಪರಾ ಆಯಿತು ಅಂತ ದಂಡೂನನ್ನೂ ಒಳಗೊಂಡು ಸುಮಾರು ನಾಲ್ಕೈದು ಕೆಲಸಗಾರರನ್ನೂ ಗಿರಫ್ತಾರ ಮಾಡಲಾಯಿತು. ದಾಮೋದರ ಪ್ರಭುಗಳು, ಪಾಂಡುಶೆಟ್ಟರೂ ಅದರಲ್ಲಿ ಇದ್ದರೆಂದೂ ಆದರೆ ಅವರು ಮತ್ತು ಸಂಬಂಧಪಟ್ಟ ಇಂಜಿನಿಯರು ಒಬ್ಬರು ಗನಾಕೆ ಲಂಚ ಕೊಟ್ಟು ಬಚಾವಾದರೆಂದೂ ಮುರ್ಕುಂಡಿ ಹೇಳುತ್ತಿದ್ದ. ದಂಡೂ ಮತ್ತು ಉಳಿದವರನ್ನು ಜೀವ ಹೋಗುವ ಹಾಗೆ ಪೋಲೀಸರು ಧಕ್ಕೆಯ ಮೇಲೆ ಲಾಠಿಯಿಂದ ಹೊಡೆದಿದ್ದ ಸುದ್ದಿಯೂ ಊರಿಡೀ ಥಣ್ಣಗಿನ ರಕ್ತದಂತೆ ಹಬ್ಬಿತ್ತು. ಈ ಗಡಿಬಿಡಿಯಲ್ಲಿ ಪಬ್ಬೂ ತಾಯಿ ಸಿಂಗಾರಿಯ ಕಥೆ ಏನಾಯ್ತು ತಿಳಿಯಲಿಲ್ಲ. ಪಬ್ಬೂಗೆ ಸಂಬಂಧಪಟ್ಟು ಅವನ ಜತೆ ಆಗಾಗ ಕಂಡಿದ್ದೆ ಎಂಬ ಗುಮಾನಿಯ ಮೇಲೆ ಒಂದು ದಿವಸ ಪೋಲೀಸರು ನನ್ನನ್ನು ವಿಚಾರಣೆಗೆ ಕರೆಸಿ ಒಂದಿಷ್ಟು ಕಿರಿಕಿರಿ ಮಾಡಿದರು. ಆಗಲೇ ಮಾಂಶಿಯ ಸಲಹೆಯ ಮೇರೆಗೆ ಧೈರ್ಯಕ್ಕೆಂದು ನಾನು ಕುಮಟೆಗೆ ಹೋಗಿ ವಕೀಲರನ್ನೂ ಕಂಡು ಬಂದಿದ್ದೆ. ಆದರೆ ಪೋಲೀಸರು ನನ್ನ ಪಾಡಿಗೆ ನನ್ನನ್ನೂ ಕೇಸಿನ ಪಾಡಿಗೆ ಕೇಸನ್ನೂ ಬಿಟ್ಟುಬಿಟ್ಟರು.

ಬ್ರಿಜ್ ಓಪನ್ ಆದ ಒಂದೆರಡು ತಿಂಗಳಲ್ಲೇ ಮಾಂಶಿಗೆ ಥ್ರೊಂಬೊಸಿಸ್ ಆಗಿ ಶಿರಸಿಯ ದವಾಖಾನೆಯಲ್ಲಿ ಸತ್ತಳು. ಬ್ರಿಜ್ ಆದದ್ದೇ ಗಿರಾಕಿಗಳೇ ಇರದೆ ಬೀಳಗಿಯ ಎಲ್ಲ ಚಾ ಅಂಗಡಿಗಳೂ ಕುಸಿದವು. ಧಕ್ಕೆ ಬೋಳಾಯಿತು. ಶೆರೆ ಅಂಗಡಿಯ ಕ್ಯಾಲೆಂಡರುಗಳು ಮಾಸಿದವು. ಮೊದಲೇ ಹುಚ್ಚು ಹಿಡಿದಿದ್ದ ಶ್ರೀಧರ ಕಮ್ತೀರು ಒಂದು ದಿನ ಬ್ರಿಜ್ಜಿನಿಂದ ಹಾರಿ ಸತ್ತದ್ದು ಒಂದು ಸಂಗತಿಯಾಯಿತು. ಆಗಲೇ ಬಾಪ್ಪಾನ ಸಲಹೆಯ ಮೇರೆಗೆ ನಾನು ತೋಟ ಮನೆ ಎಲ್ಲ, ಅಗ್ಗಕ್ಕೇ, ದಾಮೋದರ ಪ್ರಭುವಿನ ತಮ್ಮನಿಗೆ ಮಾರಿದೆ. ಬಾಂಬೇದಲ್ಲಿಯ ನನ್ನ ಚಿಕ್ಕಪ್ಪನ ವಶೀಲಿಯಿಂದ ಬೊಂಬಾಯಲ್ಲೇ ನನಗೆ ನೌಕರಿ ಸಿಕ್ಕಿತು. ನಾನು ಬಾಂಬೇಗೆ ಬಂದೆ. ಅಲ್ಲೇ ಕುಮುದಳೊಂದಿಗೆ ಮದುವೆ ಆಯಿತು.

ಅದಾಗಿ ಈಗ ಎಷ್ಟೋ ವರುಷಗಳು. ಬೊಂಬಾಯಿನ ನನ್ನ ನಿತ್ಯದಲ್ಲಿ ದೀವಗಿ ಎಲ್ಲೋ ಕಳೆಯುತ್ತಿತ್ತು. ಗೇರುಸೊಪ್ಪೆಗೂ ನಾನು ಹೋಗುತ್ತಿದ್ದಿರಲಿಲ್ಲ. ಬಾಪ್ಪಾ ಅಮ್ಮಾರೇ ಒಂದೆರಡು ಸಲ ಬಂದಿದ್ದರು. ಮಧ್ಯದಲ್ಲಿ ಯಾರೋ ದೀವಗಿಯಿಂದ ಬಂದವ ಭೆಟ್ಟಿ ಆಗಿ ಮಾತಾಡುವಾಗ ಪಬ್ಬೂನ ತಾಯಿ ಸಿಂಗಾರಿ ಹುಚ್ಚು ಅತಿಯಾಗಿ, ಮೈಮೇಲೆ ನೂಲಿನ ತುಂಡೂ ಇಲ್ಲದೆ ಕುಮಟೆ ಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಅಂತಲೂ, ದೀವಗಿಯ ಹತ್ತಿರದ ಒಂದು ಕೂರ್ವೆ ಮಳೆಗಾಲದಲ್ಲಿ ನೆರೆ ಬಂದು ಸಂಪೂರ್ಣ ಮುಳುಗಿ ಇಪ್ಪತ್ತು ಮನೆ ಹಾಳಾದವು ಅಂತಲೂ ಒಂದಿಷ್ಟು ಸುದ್ದಿ ಮುಟ್ಟಿಸಿ ಹೋಗಿದ್ದ. ಬಾಪ್ಪಾನೂ ಕಳೆದ ಸರ್ತಿ ಬಂದಾಗ ದೀವಗಿಯ ದೆಶೆಯೇ ಸಾಫ್ ಆಗಿಬಿಟ್ಟಿದೆ ಅಂತ ಹೇಳುತ್ತಿದ್ದ.

ಪಬ್ಬೂನ ಪತ್ತೆಯೇ ಇರಲಿಲ್ಲ. ಬೊಂಬಾಯಿಯಲ್ಲಿ ಎಲ್ಲಾದರೂ ಸಿಕ್ಕಬಹುದೇನೋ ಎಂದು ಒಂದಿಷ್ಟು ದಿವಸ ವಿಚಿತ್ರ ಆಶೆಯೊಂದಿತ್ತು. ಒಮ್ಮೆಯಂತೂ-ಅಚ್ಚರಿ ಅನಿಸುತ್ತದೆ ಈಗ-ಪಬ್ಬೂ ಸಿಗಬಹುದೇನೋ ಅಂತ ಬೊಂಬಾಯಿನ ಕೆಂಪು ದೀಪದ ಪ್ರದೇಶದಲ್ಲೂ ಹಾಯ್ದು ಬಂದುಬಿಟ್ಟಿದ್ದೆ! ಅದು ಹ್ಯಾಗೋ ಕುಮುದಳಿಗೂ ಗೊತ್ತಾಗಿ ಅವಳನ್ನು ಸಂತೈಸಿ ಕನ್‌ವಿನ್ಸ್ ಮಾಡಬೇಕಾದರಂತೂ ಸಾಕೋಸಾಕಾಗಿಬಿಟ್ಟಿತ್ತು. ನಾನು, ನೌಕರಿ, ಕುಮೂ, ಅವಳು ಮುಡಿಯುವ ಮೋಗರಿಯ ಪರಿಮಳ, ಆಯಾ ಸೀಜನ್ನಿನ ಆ ಆ ತರಕಾರಿಗಳು, ಹಣ್ಣುಗಳು, ಮಳೆ, ರಶ್ಯು, ಪಕ್ಕದ ಮನೆಯವರು, ಕೆಳಗಿನ ಮನೆಯವರು, ಮೇಲಿನ ಮನೆಯವರು, ಅವರ ರಾಜಕಾರಣ-ಇಂತಹ ವಿಚಿತ್ರ ಏಕತಾನದ ನಾಡಿ ನನ್ನನ್ನೂ ಅಂಟಿಸಿಕೊಂಡುಬಿಟ್ಟಿತು.

*
*
*

ನಮ್ಮ ಕಿಶೋರ ಹುಟ್ಟಿದಾಗ ವಿಪರೀತ ಅಳುತ್ತಿದ್ದ. ಒಂದೆರಡು ಮೂರು ತಿಂಗಳು ಅಳು ಬಹಳವಾಗಿತ್ತು. ಆಗ ಕುಮೂ ಶಿರಸಿಯ ಮಾರಿಕಾಂಬೆಗೆ ಹರಕೆ ಹೊತ್ತಿದ್ದಳಂತೆ. ಹೀಗಾಗಿ ಅವನಿಗೆ ಮೂರು ವರುಷ ತುಂಬಿದ ಮೇಲೆ ಈಗ ಕುಮೂಳ ಸಮಾಧಾನಕ್ಕೆಂದು ಒಂದು ತಿಂಗಳ ರಜೆ ಹಾಕಿ ಹೊರಟು ಬಂದಿದ್ದೆ. ಶಿರಸಿಯಿಂದ ಗೇರುಸೊಪ್ಪೆಗೂ ಹೋಗಿ ನಂತರ ಅಮ್ಮಳನ್ನೂ ಕರೆದುಕೊಂಡು ಧರ್ಮಸ್ಥಳಕ್ಕೂ ಹೋಗಿ ಅವಳನ್ನೂ ಕರಕೊಂಡೇ ಮುಂಬೈಗೆ ಹೋಗುವುದೆಂದು ನಿಶ್ಚಯಿಸಿ ಈಗ ಶಿರಸಿಯಿಂದ ಬಸ್ಸಿನಲ್ಲಿ ಹೊರಟಿದ್ದೆವು. ನಮ್ಮ ಬಸ್ಸು ದೀವಗಿ ಬ್ರಿಜ್‌ನ ಮೇಲೆ ಹಾದು ಹೋಗುತ್ತದೆ ಅಂತ ನೆನೆದೇ ವಿಚಿತ್ರ ರೀತಿಯಲ್ಲಿ ತಳಮಳಗೊಂಡೆ. ಸಾಮಾನ್ಯವಾಗಿ ಬಸ್ಸಿನಲ್ಲಿ ನಿದ್ದೆ ಮಾಡುವ ನಾನು ಕೂತಲ್ಲೇ ಉದ್ವೇಗದಿಂದ ಚಡಪಡಿಸಿದೆ. ಮತ್ತೆ ಮತ್ತೆ ಹಳೇ ನೆನಪುಗಳು ನಿನ್ನೆ ಮೊನ್ನೆಯವೆಂಬಂತೆ ಮುತ್ತಿಗೆ ಹಾಕಿದವು. ಆಗಿನ ಹಳೇ ಕೆಂಪು ರಸ್ತೆಗಳು, ಮೈತುಂಬ ಹಚ್ಚ ಹಸಿರು ಹೊತ್ತುಕೊಂಡಿರುತ್ತಿದ್ದ ಪಾಗಾರಗಳು, ಕುಮಟೆ ತೇರು, ಮಾಂಶಿ, ಬಣ್ಣದ ಶರಬತ್ತು, ಭಜನೆ, ಢೋಲಕ, ಗುಮಟೆ ಪಾಂಗಿನ ಪದಗಳು, ಮಳೆಗಾಲದಲ್ಲಿ ಕೆಂಪಾಗುತ್ತಿದ್ದ ನದೀ ನೀರು, ಅದರಲ್ಲಿ ತೇಲಿ ಬರುತ್ತಿದ್ದ ಸೌದಿಗಳು, ಮನೆ ಆಳುಗಳು ತಂಬಾಕು ತಿಂದು ಕವಳ ಹಾಕಿ ಹತ್ತಿರ ಮಾತಾಡುತ್ತಿರುವಾಗಿನ ವಿಚಿತ್ರ ವಾಸನೆ-ನೆನಪುಗಳು ಕಳವಳವಾಗಿ ಹೊತ್ತಿ ಉರಿಯಲಾರಂಭಿಸಿದವು. ಪಬ್ಬು, ದಂಡು, ಸಿಂಗಾರಿ, ಗಂಗೆ-ಉತ್ಕಟನಾಗಿ ನೆನೆನೆನೆದು ಕಾಯುತ್ತಿದ್ದಂತೆ ಬ್ರಿಜ್ಜು ಬಂದೇಬಿಟ್ಟಿತು. ಬಸ್ಸು ಝಮ್ಮಂತ ಬ್ರಿಜ್‌ನ ಮೇಲೇರಿ ಸಂಜೆಗೆಂಪಲ್ಲಿ ಗಾಳಿಯ ವೇಗದಲ್ಲಿ ನೇರ ಹೊರಟಾಗಂತೂ ರೋಮಾಂಚನವಾಯಿತು. ತಲೆಯನ್ನು ಕಿಟಕಿಯ ಹೊರಹಾಕಿ ನುಂಗುವಂತೆ ಉಸಿರಾಡಿದೆ. ಬಲಭಾಗದಲ್ಲಿ ದೂರದೂರ ಮಿಣಿಮಿಣಿ ಬೆಳಕಲ್ಲಿ ದೀವಗಿ- ನನ್ನ ದೀವಗಿ- ಮಾಸಲು ಬಿಕೋ ಹಳೇ ಅನಾಥ ಧಕ್ಕೆ-ಮಬ್ಬು ಮಬ್ಬು ತೋಟಗಳು-ಏನೆಲ್ಲ ಸಹಸ್ರಾರು ನೆನಪುಗಳು ಈ ಕ್ಷಣವಾಗಿ ಉಕ್ಕಿ ಗಂಟಲುಬ್ಬಿ ಬಂತು. ಗದ್ಗದಿತನಾದೆ. ಕಿಶೋರನಿಗೆ ಇದೇ ನನ್ನ ಬಾಲ್ಯದ ಊರು ಅಂತ ಹೇಳುವುದೂ ತುಂಬ ತ್ರಾಸವಾಯಿತು. ರಾಜಾರೋಷಾಗಿ ನನ್ನ ಕಣ್ಣೆದುರಿಗೇ ಬಸ್ಸು ದೀವಗಿಯನ್ನು ಅಲ್ಲಿಯೇ ಬಿಟ್ಟು ಹೈವೇಯಲ್ಲಿ ಮುಂದೆ ಹೋದಂತೆ ದುಃಖವಾಯಿತು. ಹಾಗೆಯೇ ಭಾರವಾದ ಎದೆಯಲ್ಲಿ ನಿದ್ರೆಯ ಗುಂಗಿಗೆ ನೆನಪುಗಳ ಅವಚಿ ಇಳಿದೆ.

ಅರೆಮರೆ ನಿದ್ರೆಯಲ್ಲಿ ಕುಮಟೆಯ ತೇರು ಧಡಧಡ ನನ್ನ ರಾಕ್ಷಸ ಗಾಲಿಗಳನ್ನುರುಳಿಸುತ್ತ ಹೋಹೋ ಎಂಬ ಗದ್ದಲದಲ್ಲಿ ಬ್ರಿಜ್ಜನ್ನೇರಿ ಜೋರಾಗಿ ಬಂತು. ನೂರಾರು ಗಂಗೆಯ ಹಾಗೆ ಕಾಣುವವರು ಬತ್ತಲೆಯಾಗಿ ತೇರಿನ ಪತಾಕೆಯಾಗಿ ಕೂತವರು ಧಡಧಡ ನೀರಿಗೆ ಬಿದ್ದರು. ಗಡಗಡ ಬ್ರಿಜ್ಜು ನಡುಗಲಾರಂಭಿಸಿತು. ಇಡೀ ದೀವಗಿಯೇ ಮೈವೆತ್ತು ಬಂದಂತೆ ಹಣೆ ತುಂಬ ಕುಂಕುಮ ರಾಚಿಕೊಂಡು ಬಂದ ಪಬ್ಬು ಓಡೋಡಿ ಬಂದ. ಬಂದವನೇ ನೋಡ ನೋಡುತ್ತ ಇದ್ದಂತೆಯೇ ತೇರಿನ ಆ ಬೃಹದಾಕಾರದ ಗಾಲಿಗೆ ಸಿಕ್ಕುಬಿಟ್ಟ.

ಧಕ್ ಅಂತ ಎಚ್ಚರವಾಯಿತು. ಕುಮೂ “ಏನು?”-ಎಂದಳು. “ಕುಮೂ ಇಲ್ಲೇ ಇದೇ ಊರಲ್ಲೇ ನನಗೊಬ್ಬ ಚಲೋ ದೋಸ್ತ ಇದ್ದ ಪಬ್ಬೂ ಅಂತ, ಪಾಪ” ಅಂದೆ. ನನಗೆ ಗೊತ್ತು. ಎಷ್ಟೋ ಸಲ ಹೇಳಿದ್ದಿರಿ ನೀವು” ಅಂದಳು. ನಾನು ಹೇಳುತ್ತಿದ್ದುದು ಉತ್ಪ್ರೇಕ್ಷೆ ಆಗುತ್ತದೆ ಅಂತನಿಸಿದರೂ “ಕುಮೂ ಆ ಬ್ರಿಜ್ಜಿಗೆ ಪಬ್ಬು-ಅವನ ಕುಟುಂಬ-ದೀವಗಿ-ಎಲ್ಲಾ ಬಲಿಯಾಯಿತು”-ಅಂದೆ. ಅದನ್ನು ಹೇಳಿದಾಗ ಏನೋ ಹಗುರಾದಂತೆನಿಸಿತು. ಆ ದಿನ ಮಾಂಶಿಯ ಬಗ್ಗೆ ಪಬ್ಬೂ ಅಲ್ಲದೆ ಬೇರೆ ಯಾರಾದರೂ ಹಾಗೆ ಹೇಳಿದ್ದಿದ್ದರೆ ನಾನು ಮಾಂಶಿಯನ್ನು ದ್ವೇಷಿಸುತ್ತಿದ್ದನಲ್ಲವೆ? ಮಾಂಶಿಯ ಮೇಲಿನ ನನ್ನ ಪ್ರೀತಿ ಸ್ವಲ್ಪವೂ ಕಡಿಮೆಯಾಗದಿದ್ದುದೇ ಪಬ್ಬೂನ ಗೆಳೆಯನಾಗಿದ್ದುದರ-ನಾಗಿರುವುದರ ಸಾರ್ಥಕತೆಯೆ? ನನ್ನ ಸ್ವಭಾವದ ಮತ್ತೊಂದು ತುದಿ ಪಬ್ಬು ಆಗಿರುವುದೇ ನಾನು ಅವನನ್ನು ಇಷ್ಟೊಂದು ಹಚ್ಚಿಕೊಳ್ಳಲು ಕಾರಣವೆ? ನಮ್ಮೀರ್ವರ ದೌರ್ಬಲ್ಯಗಳೂ ಗೆಳೆತನವಾಗಿ ವಿನಿಮಯಗೊಂಡು ವ್ಯಕ್ತಿತ್ವವಾದವೆ? ಯಾವಾಗಲೂ ನನ್ನನ್ನು ಕಾಡುವ ನನ್ನವೇ ಆದ ಈ ಪ್ರಶ್ನೆಗಳು ಮತ್ತೆ ನನ್ನ ಮನಸ್ಸಿನ ಮೂಲೆಯಲ್ಲಿ ಎದ್ದು ಕೂತವು.

ಏನೇ ಆಗಲಿ ಮುಂಬೈಗೆ ಹೋದ ಮೇಲೆ ಅವನನ್ನು ಹುಡುಕುವ ಮತ್ತೊಂದು ಚಾನ್ಸ್ ತಗೊಳ್ಳಬೇಕು-ಅಂತ ನಿರ್ಧರಿಸಿ ಹಾಗೆ ಹಗೂರ ಕುಮೂಳ ತೊಡೆಯ ಮೇಲೆ ಒರಗಿದೆ. ಮತ್ತೆಲ್ಲೋ ಎಚ್ಚರಾದಾಗ ಕುಮೂ ಮಲಗಿದ್ದಳು. ಕಿಶೋರನೂ ನನ್ನ ತೊಡೆಯ ಮೇಲೆ ಮಲಗಿಬಿಟ್ಟಿದ್ದ. ಬಸ್ಸು ಜೋರಾಗಿ ಓಡುತ್ತಿತ್ತು. ಕಿಟಿಕಿಯ ಗ್ಲಾಸು ಸರಿಸಿದೆ. ಗಾಳಿ ಹಿತವಾಗಿತ್ತು. ಆ ದಿನ ಪಬ್ಬೂಗೆ ರೂಪಾಯಿ ಕೊಟ್ಟು ಎಷ್ಟು ಚಲೋ ಕೆಲಸ ಮಾಡಿದೆನಲ್ಲಾ-ಅಂತ ಮತ್ತೆ ಮತ್ತೆ ಅಂದುಕೊಂಡೆ.
*****
೧೯೭೬ರ ಉದಯವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.