ನಡೆದದ್ದು

ಹಾಗೇ ಕಾಲು…..
ಹೆಜ್ಜೆ ಮುಂದೊಂದು ಹೆಜ್ಜೆ
ದೂರ…. ದೂರದ ತನಕ
ತನ್ನ ಪಾಡಿಗೆ ತಾನು,
ಅಕ್ಕ ಪಕ್ಕದ ಗಿಡಮರಗಳೆಲ್ಲಾ
ಮುಂದು ಮುಂದಕ್ಕೆ ಸಾಗಿದಹಾಗೆ,
ನಡೆದಷ್ಟೂ ಸುಮ್ಮನೆ ನಡೆಸುತ್ತದೆ
ದಿಕ್ಕಿಲ್ಲದ ಮನಸ್ಸು.

ಹಾದಿಯಂಚಿಗೆ ಗುಡ್ಡಗಾಡು
ಸರಿದು ಹೋಗಿರಬೇಕು.
ಮನಸ್ಸಿಗಂಟಿದ ಮೋಡದ ಹಾಗೆ
ಆಕಾಶಕ್ಕೆಲ್ಲ ಮೆತ್ತುಕೊಂಡಿದೆ ಮಬ್ಬು
ಎಷ್ಟು ದೂರ ಬಂದಿದ್ದೇನೆ ಹೀಗೆ
ಸುಮ್ಮನೆ ನಡೆದು.

ಬೀಸೊ ಗಾಳಿ ಬೀಸುತ್ತದೆ.
ಕ್ಷಣಗಳನ್ನೇ ಮರೆತುಹೋದಂತೆ ಕಾಲ,
ಸ್ತಬ್ಧವಾಗಿತ್ತು ಸಮಯ.
ನಾಡಿಮಿಡಿಯುತ್ತಿತ್ತೋ
ಹೃದಯ ಬಡಿಯುತ್ತಿತ್ತೋ
ಕಿವಿಗಂತೂ ಏನೂ ಕೇಳಿಸಲಿಲ್ಲ.

ಅಂಕು-ಡೊಂಕಿಲ್ಲದ ರಸ್ತೆಯಲ್ಲಿ
ಒಂಟಿಯಾಗಿ
ಹಾಗೇ……….
ಹೆಜ್ಜೆ ಮುಂದೊಂದು ಹೆಜ್ಜೆ……..
*****