ಗೆಳೆತನ

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು;
ಜೀವನದನಂತ ದುರ್‍ಭರ ಬವಣೆ ನೋವುಗಳ
ಕಾವುಗಳ ಮೌನದಲಿ ನುಂಗಿರುವೆನು.
ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು – ಜೀವನ್ಮೃತ!

ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು
ತನ್ನಿಚ್ಛೆ ಪೂರೈಸುವವರ ಛಲವು
ಎಳ್ಳಿನೇಳನಿತಾದರೂ ಸ್ವಾರ್‍ಥ ಹೊಂದಿಹವು
ಎತ್ತಿ ಕಟ್ಟುವರದಕೆ ಮಮತೆ-ತೊಡವು.
ಗೆಳೆತನದ ಒಳತಿರುಳ ಬಲ್ಲ ಧರ್‍ಮಿ
ಕೇಳು: ನಿಜ ಗೆಳೆಯ ನಿಷ್ಕಾಮಕರ್‍ಮಿ!

ಇಲ್ಲಿ ವಂಚನೆಯಿಲ್ಲ, ಚಂಚಲತೆಯಿನಿತಿಲ್ಲ
ಮೇಲು ಕೀಳುಗಳೆಂಬ ಭೇದವಿಲ್ಲ;
ಅಹಮಿಕೆಯ ನೆವಮಿಲ್ಲ, ದ್ವೇಷ ಗುಣಮಣಮಿಲ್ಲ
ಸಣ್ಣತನ ಸಂಕೋಚ ಮೊದಲಿಗಿಲ್ಲ.
ಮನವು ಬಾನಗಲ, ಎದ ತಿಳಿಗೊಳದೊಲು
ಭಾವ ಶುದ್ಧ ಸ್ಫಟಿಕ – ಬೆಳದಿಂಗಳು!

ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು
ಇಲ್ಲೆಂಬ ಗಾದೆ ನುಡಿ ಕೇಳಿರುವೆನು,
ಗೆಳೆತನದ ಶುಚಿ ರುಚಿಯು ಇದಕು ಮಿಗಿಲಾಗಿಹುದು
ಎಂಬ ಸಾಹಸ ಮಾಡೆ ದೋಷವೇನು?
ಕಂಡಕಂಡವರೇನು ಬಲ್ಲರಿದನು
ಉಂಡವನು ಕಂಡಿಹನು ಇದರ ಹದನು.

ಹೇಗೊ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್‍ಪು
ಆಗು ಹೋಗುಗಳಿಂಗೆ ಬಾಗದಂತೆ,
ಸುಖಕೆ ಸಂತಸಬಟ್ಟು, ದುಃಖದಲಿ ಸಹಭಾಗಿ-
ಯಾಗೆ ಜೀವನ ರಸದ ಪಾಕದಂತೆ-
ಸರಸ ವಿರಸವನೆಲ್ಲ ಅಪ್ಪುಕಯ್ದು
ಬಾಳುವರು ಗಂಧದೊಲು ಜೀವ ತೆಯ್ದು!

ಬಾಳ ಪಾರಾವಾರದಲ್ಲಿ ಸಾರಾಸಾರ
ಸುವಿಚಾರ ದೋಣಿಯಲಿ ಯಾನಗೈದು
ತತ್ತ್ವನಿವಹದ ದ್ವೀಪ-ದೀಪಮಾಲೆಗಳಂತೆ
ಕಳೆಯರೊಲವಿನ ಬೆಳಕು ಸೂರೆಗೈದು
ಸೂಳ್ನುಡಿಯ ಸೈಪಿನಲಿ ಕರುಣೆಯೆರೆದು
ಹಿತವ ಕೋರುವರಂತರಂಗ ತೆರೆದು.

ಇನಿವಿರಿದು ಗೆಳೆತನದ ಗುಟ್ಟಿಹುದು ನಲ್ ಗೆಳೆಯ
ಬಿನ್ನಣದ ನುಡಿಯಲ್ಲ, ಎದೆಯ ಮೀಟಿ
ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ
ಚತುರಂಗ ಬಲವಿದಕೆ ಯಾವ ಸಾಟಿ?
ಗಳೆತನವೆ ಚಿರಬಾಳ ಸಂಜೀವಿನಿ
ವಿಶ್ವದಂತಃಕರಣ ಮಂದಾಕಿನಿ!

ಮೆಲುಪು ತಣ್ಪಿನ ಕಂಪು ಮಲ್ಲಿಗೆಯ ಮೆಲ್ಲೆದೆಗೆ
ಒಲವು ರೇಶಿಮೆಯಳೆಯ ಪೋಣಿಸಿಹವು;
ಎನ್ನಿನಿಯ ಗೆಳೆಯರೆದೆ ಶೂನ್ಯ ಸಿಂಹಾಸನದಿ
ಬೆರಸಿ ಬೇರಿಲ್ಲದಿಹುದೊಂದ ಸೊಗವು-
ಹಿಂದುಮುಂದಿನ ಎಣಿಕೆ ಬೇರೆ ಇರಲಿ
ಇಂದಿಗಿದೆ ಸಿದ್ಧಾಂತ ಜೀವನದಲಿ.
*****