ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ
ಇರುಳ ಸವಿಗನಸಿನಾಮೋದದಲಿ ಮೈಮರೆದು
ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು
ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ
ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ
ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ
ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ,
ಚಿಗುರು ಚೆಂಗುಡಿಗಳಿಗೆ ಪನ್ನೀರ ಚಿಮುಕಿಸುತ
ಮೂಡಣದ ಹೊಸತಿಲಿಗೆ ಹೊಂಬಣ್ಣ ನೀರಿನಲಿ
ಸಾರಣೆಯ ಕಾರಣೆಯಗೈದು, ಕುಂಕುಮದಿಂದ
ಬೊಟ್ಟಿಟ್ಟು ತಳತ್ಥಳಿಸಿ, ಸಂತಸ ಶುಭೋದಯದ
ಝಣಿಝಣಿರು ಚಕಮಕಿತ ಭೂನಭೋರಂಗದಲಿ
ಉನ್ಮತ್ತರಾಗಿಣಿಯು, ಜಗದುದಯ ಕಾರಿಣಿಯು
ಚೆಲುವೆ, ಶುಭದರ್ಶಿನಿಯು-ಹೋ! ನರ್ತಿಸಿದಳುಷೆಯು.
*****