ಪ್ರವಾಹದ ಒಂದು ಅಲೆ

ಹಸಲರ ಕಲ್ಲಜ್ಜ ಕುಳಿತುಕೊಂಡೇ ಅಂಗಳದ ತುದಿಗೆ ಬಂದು ದಣಿಪೆಯಾಚೆಗೆ ದೃಷ್ಟಿ ಬೀರಿದ. ಕರಡದ ಬ್ಯಾಣದಾಚೆಗೆ ಸೊಪ್ಪಿನ ಬೆಟ್ಟ, ಕೆಳಗೆ ದಂಡೆ ಯುದ್ದಕ್ಕೂ ಬಯಲು. ಅಲ್ಲಿ ಲಾಗಾಯ್ತಿನಿಂದ ಜಂಬಿಟ್ಟಿಗೆ ತೆಗೆಯುತ್ತಿದ್ದುದರಿಂದ ಚೌಕಾಕಾರದ ಹಳ್ಳಗಳು. ಈ ಹಳ್ಳಗಳಿಗೆ ಅಂಟಿಕೊಂಡಂತೆ ಒಂದು ಮನೆ ಎದ್ದಿದೆ. ಮಣ್ಣಿನ ಇಟ್ಟಿಗೆ ಗೋಡೆ, ಮೇಲೆ ಅಡಿಕೆ ದಬ್ಬೆ ಹಾಸಿ ಹಂಚು ಹೊಂದಿಸಿದೆ. ಈಗ ಬಾಗಿಲ ಕೆಲಸ ನಡೆದಂತಿದೆ. ಕಲ್ಲಜ್ಜ ಹಂಬ್ಬು ಬಗ್ಗಿಸಿ ದೃಷ್ಟಿ ಮಸೆದು ನೋಡಿದ.
“ಮೂರು ದಿನದಾಗೆ ಮನೆ ಎದ್ ಬುಡ್ತಲ್ಲ….”
ಆತ ಲೊಚಗುಟ್ಟಿದ.
“ಹೆಗ್ಡೇರು ಮನ್ಸ್ ಮಾಡಿದ್ರೆ ಮೂರ್ ದಿನ ಯಾಕೆ? ಒಂದ ದಿನ ಸಾಕಲ್ವ? ಕೈಯಾಗೆ ಕಾಸು ಆಳು ಇದ್ರೆ ಮನೆಕಟ್ಟಾದು ಎಷ್ಟೊತ್ತು. ಚಿಟಿಕಿ ಹೊಡೆಯಾಷ್ಟರಲ್ಲಿ. ಅಕೋ ಮನೆ…. ಅಲ್ವ….”
ಆತ ಒಬ್ಬನೇ ಮಾತನಾಡಿಕೊಂಡ.
“ಕನ್ನನ ಮಗ ಸಿಂಗ ಹಿಂದೊಮ್ಮೆ ಬಂದಾಗ ಒಂದು ಮಾತ್ತು ಹೇಳಿದ್ದ-
“ಅಜ್ಜೋ…. ನಾವೆಲ್ಲ ಒಂದ್ ಜಾಗಕ್ಕೆ ಅರ್ಜಿ ಹಾಕ್ಕೊಂಡಿದೀವಿ….”
“ಅರ್ಜಿ? ಎಂತಾಕೆ?”
“ಮನೆಕಟ್ಟಾಕೆ…. ಎಷ್ಟದಿನ ಒಡೇರ ಮನೆ ತೋಟದ ದರೆಮ್ಯಾಲೆ ಗುಡ್ಲು ಹಾಕ್ಕೊಂದು ಇರಾದು ಹೇಳು. ಹಸ್ಲರವ ಅಲ್ಲೊಬ್ಬ ಇಲ್ಲೊಬ್ಬ ಇರೋದ್ರಿಂದಾನೆ ಒಡೇರ ಕೈ ಮೇಲಾಗಿರೋದು…. ಎಲ್ಲ ಒಂದೇತಾವ ಇರುವ ಅಂತ….”

ಕಲ್ಲಜ್ಜ ಅಚ್ಚರಿಯಿಂದ ಸಿಂಗನ ಮುಖ ನೋಡಿದ. ಹಸಲರ ಮಕ್ಕಳಲ್ಲಿ ಬರಾ ಹುಡುಗನೆಂದರೆ ಸಿಂಗ ಒಬ್ಬನೇ. ಅದೂ ಸಾಗರ ಪೇಟೆಯಲ್ಲಿ ಅಂಗಡಿ ಕೆಲಸ ಮಾಡಿಕೊಂಡು ಈ ಹುಡುಗ ಓದುತ್ತಿದ್ದಾನೆ. ಇವನ ಮಾತು ವಿಚಾರಗಳು ಕೊಂಚ ಹಸಲರಿಗೆ ಹೊಸವು. ರಜೆ ಬಂತೆಂದರೆ ಸಿಂಗ ಹಸಲರ ಮನೆಗಳಿಗೆಲ್ಲ ಬರುತ್ತಾನೆ. ಅಂಗಳದಲ್ಲೋ, ಜಗಲಿಯ ಮೇಲೋ ಬಂದು ಕೂರುತ್ತಾನೆ. ಮನೆ ಗಂಡಸನ್ನೋ ಹೆಂಗಸನ್ನೋ ಕೂಗಿ ಕರೆಯುತ್ತಾನೆ. ಇಲ್ಲ ಅಲ್ಲಿಯೇ ಗೋಡೆಗೆ ಒರಗಿ ಕುಳಿತ ಮುದುಕ ಮುದುಕಿಯರನ್ನು ಮಾತಿಗೆ ಎಳೆಯುತ್ತಾನೆ.
“ಅಜ್ಜ-ನೀನು ಡೊಂಕ. ನಿನ ಮಗ ಕಾಳ. ನಿನ ಮೊಮ್ಮಗ ಎಡ್ಡ. ಮಗಳು ಕೆಂಪಿ…ಹಿಂಗ್ಯಾಕೆ? ಬ್ರಾಮ್ರು ಇಟಿಕೊಂಡಿರೋ ಹಾಗೆ ಯಾಕೆ ನಾವ್ಯಾರೂ ಹೆಸ್ರು ಇಟಕೊಂಡಿಲ್ಲ? ಹಾಲ, ತಿಪ್ಪ, ಕಾಳ, ರಾಚ, ಓಚ, ಕನ್ನ, ಬೆನವ ಈ ಹೆಸರು ನಮಗ್ಯಾಕೆ?”
ಎಂದು ಕೇಳುತ್ತಾನೆ. ಇಲ್ಲ-
“ಕಾಳಪ್ಪ….ಹೆಗ್ಡೇರನ್ನು ನೀವೆಲ್ಲ ಒಡೇರು ಎಂತಾಕೋ ಕರೆಯಾದು?”
ಎಂದು ಪ್ರಶ್ನಿಸುತ್ತಾನೆ.
“ಒಬ್‌ಹೆಗ್ಡೇರ ತೋಟದಾಗೆ ಕೆಲಸ ಮಾಡಾಕೆ ಮೂರು ನಾಲ್ಕು ಹಸಲರ ಕುಟುಂಬಗಳು ಅದಾವಲ್ಲ…. ನೀವು ಬೇರೆ ಕಡೆ ಕೆಲಸ ಯಾಕೆ ಮಾಡಬಾರದು?”
“ಎಲ್ಲ ಕಡೆ ಕೂಲಿ ಸಂಬಳ ಅಂತ ಕೊಡತಾರಲ್ಲ-ನೀವು ಹೆಗ್ಡೇರ ಮನೆ ಅಕ್ಕಿ ಹಳಸಿದ ಅನ್ನ ಹಳಸಿದ ಸಾರು….ವರ್ಷಕ್ಕೊಂದು ಸಾರಿ ಕೊಡ್ಸೋ ಸೀರೆ ಪಂಚೆ ಕಂಬಳಿಗಾಗಿ ಕೊಡೋ ಸಾಲಕ್ಕಾಗಿ ಕೆಲಸ ಮಾಡೋದ್ಯಾಕೆ?”
ಹೀಗೆಲ್ಲ ಪ್ರಶ್ನೆ ಕೇಳುತ್ತಾ ಹೋಗುತ್ತಾನೆ. ಬಂದ ಉತ್ತರಗಳನ್ನು ಕೆದಕುತ್ತಾನೆ. ಹಾಗಲ್ಲ ಹೀಗೆ ಎಂದು ಹೇಳುತ್ತಾನೆ.
“ಮಗಾ…ಇದು ಲಾಗಾಯ್ತಿನಿಂದ ಬಂದದ್ದಲ್ವ….ಕೆಳಗೆ ಹರಿಯೋ ನೀರು ಕೆಳಗೇ ಹರೀಬೇಕು….ಮೇಲೆ ಹರಿಯೋ ನೀರು ಮೇಲೆ ಹರೀಬೇಕು….ನಮ ಹಣೀಲಿ ಬರೆದದ್ದಲ್ವ….ಅವರು ಒಡೇರು ನಾವು ಆಳುಗಳು….ಅವರು ಬ್ರಾಂಬ್ರು….ನಾವು ಹಸಲರು. ಹಂದಿಪಂದಿ ತಿನ್ನೋ ಜನ ದೇವ್ರು ದಿಂಡ್ರ ಹೆಸ್ರು ಇಟಕೊಳ್ಳಾದ? ಹೆಗ್ಡೇರು ನಮ್ಮ ತಾತ ಮುತ್ತಾತಂದಿರನ್ನ ಸಾಕ್ತಾ ಬಂದವ್ರು….ನಮಗೂ ಅವರೇ ಆಸರೆ….ಇನ್ನು ಕೂಲಿ ಸಂಬಳ ಕೇಳಾಕೆ ಹೆಗ್ಡೇರು ನಮಗೇನು ಕಡಿಮೆ ಮಾಡಾರೆ? ಅಕ್ಕಿ ಕೊಡಲ್ವ? ಮೆಣಸಿನ ಕಾಯಿ ಉಪ್ಪು ಕೊಡಲ್ವ? ಜರಗಿರ ಬಂದ್ರೆ….ಮದುವೆಗಿದುವೆ ಸಾಲ ಕೊಡಲ್ವ? ಹಬ್ಬಕ್ಕೆ ನಮಗೆ ಮಕ್ಕಳಿಗೆಲ್ಲ ಹೊಸಬಟ್ಟೆ ಕೊಡಲ್ವ? ಮಳೆಗಾಲಕ್ಕೆ ಕಂಬಳಿ ಕೊಡಲ್ವ….ಇದು ಕೂಲಿ ಸಂಬಳಾನೇ ಅಲ್ವ?”

ಕೆಲಬಾರಿ ಕಲ್ಲಜ್ಜ ನಿಂಗನೊಡನೆ ಮಾತಿಗೆ ತೊಡಗುತ್ತಾನೆ. ಈ ಮಾತು ಕೇಳುತ್ತ ಸಿಂಗ ಕರಡದ ಬೆಂಕಿಯಂತೆ ಉರಿದೇಳುತ್ತಾನೆ. ಗಾದೆ ಶ್ಲೋಕ ಹೇಳಿ ಈ ಬ್ರಾಂಬ್ರು ನಿಮಗೆ ಮೋಸ ಮಾಡುತ್ತಿದ್ತಾರೆ ಅನ್ನುತ್ತಾನೆ. ಹಭೇಬರಹ ಅಂದ್ರೆ ಏನಜ್ಜ? ಅದನ್ನ ಬರೆದೋನು ಯಾರು? ಹೆಗ್ಡೇರು ಪರಮಾನ್ನ ಉಣ್ಣಬೇಕು. ಹಸಲರು ಹಳಸಲನ್ನ ಉಣ್ಣಬೇಕು ಅಂತ ಆತ ಯಾಕೆ ಹಣೇಲಿ ಬರೆದ? ತಿನ್ನೋ ಆಹಾರಕ್ಕೂ ಹೆಸರಿಗೂ ಏನು ಸಂಬಂಧ? ಇದೆಲ್ಲ ಮೋಸ ವಂಚನೆ. ನಿಮ್ಮಿಂದ ದುಡಿಸಿಕೊಳ್ಳಾಕೆ ಅವರು ಮಾಡಿರೋ ಉಪಾಯ ಎಂದೆಲ್ಲ ಸಿಂಗ ಕೂಗಾಡುತ್ತಾನೆ.
“….ಕಲ್ಲಜ್ಜ….ನಿನಗೆಷ್ಟ್ ವರ್ಷ?”
ದನಿ ತಗ್ಗಿಸಿ ಕೇಳುತ್ತಾನೆ.
“ನನಗೇನು ಗೊತ್ತು? ಜೋಗ ಪಾಲಿಸ್‌ಗೆ ಮಾರಾಜ್ರು ಬಂದಾಗ ನನಗೆ ಆರುವರ್ಷ. ಅಪ್ಪನ ಹೆಗಲ ಮೇಲೆ ಕುಂತು ತಾಳಗುಪ್ಪಕ್ಕೆ ಹೋಗಿದ್ದೆ ನಾನು…..”
“ಹುಂ…..ತೊಂಬತ್ತು….ನೀನು ಕಣ್ಣಾರೆ ಎಲ್ಲ ನೋಡಿದ್ದೀಯಾ ಅಲ್ವ?”
“ನೋಡಿದೀನಿ….”
“ಎದೆ ಮೇಲೆ ಕೈ ಇಟಕೊಂಡು ಹೇಳು….ಇಲ್ಲಿ ನಡೆಯೋದೆಲ್ಲ ನ್ಯಾಯಾನ?”
ಕಲ್ಲಜ್ಜ ಬೆಚ್ಚುತ್ತಾನೆ. ತಟ್ಟನೆ ಕಣ್ಣು ಕುಕ್ಕಿದ ಬೆಳಕು ಮುಖದ ಮೇಲೆ ಬಿದ್ದಂತಾಗುತ್ತದೆ.
“ಏನು ಯಾವ್ದು?”
ಕಲ್ಲಜ್ಜ ತೊದಲುತ್ತಾನೆ.
“ಒಡೇರು ಸುಖವಾಗಿರೋದು….ಆಳುಗಳು ಬಡವರಾಗಿರೋದು….”
“ಇದು….ಇದು….”
“ಹಣೆಬರಹ ಅನ್ನಬೇಡ….ಯೋಚನೆ ಮಾಡಿಹೇಳು….”
ಕಲ್ಲಜ್ಜ ಕುಟ್ಟಾಣ ಹತ್ತಿರ ಎಳೆದುಕೊಳ್ಳುತ್ತಾನೆ. ಒಣಗಿದ ಎಲೆ, ಅಡಕೆ, ಸುಣ್ಣ ಅದಕ್ಕೆ ಹಾಕಿ ಕುಟ್ಟುತ್ತ ಕೂರುತ್ತಾನೆ.

ಇಲ್ಲ. ಇದೆಲ್ಲ ನ್ಯಾಯವಲ್ಲ ಎನಿಸಿದೆ. ಅದಕೆ ತೋಟದಲ್ಲಿ ದುಡಿಯುವ ಆಳು ದಟ್ಟದರಿದ್ರ. ಏನೂ ಮಾಡದೆ ಮಾಲಿಕನಾಗಿ ಕುಳಿತಿರುವವ ಶ್ರೀಮಂತ. ಆದರೆ ಹಿಗೆಂದು ಏನು ಮಾಡಲು ಸಾಧ್ಯ? ಹಸಲರು ಹೀಗಲ್ಲ ಹಾಗೆ ಎಂದರೆ ಒಡೆಯರು ಬಗನಿಗೂಟ, ಕಾಲಲ್ಲಿಯ ಚಪ್ಪಲಿ, ಸೊಂಟದ ಪಟ್ಟಿ ಬಿಚ್ಚಿಕೊಂಡು ಹೊಡೆದಾರು. ಯಾರಾದರೂ ಅವರಿಗೆ ಎದುರಾಡಲುಂಟೆ? ತಿರುಗಿ ಜವಾಬು ನೀಡಲುಂಟೆ? ಆ ಶಕ್ತಿ, ಗಂದಸುತನ ಯಾರಿಗಿದೆ? ಸುತ್ತಮುತ್ತಲ ಹಳ್ಳಿಗಳಲ್ಲಿ ಒಡೆಯರು ಎಷ್ಟೊಂದು ಜನ ಹಸಲರನ್ನು ಕೊಂದಿಲ್ಲ. ಕೈಕಾಲು ಮುರಿದಿಲ್ಲ. ಆಳುಗಳ ಹೆಂಡಿರನ್ನು ಹಿಡಿದು ಭೋಗಿಸಿಲ್ಲ, ಅಪ್ಪಿತಪ್ಪಿ ಚಾಚು ಅಂದವರಿಗೆ ಅಪಾಯವಾಗಿದೆ. ಒಡೆಯರಿಗಲ್ಲ. ಇದು ನಡೆಯ ಬೇಕಿದ್ದೇ ಹೀಗೆ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಅದಕ್ಕೆ ಹೊಂದಿ ಕೊಂಡಿದ್ದಾರೆ. ಇಲ್ಲಿ ನ್ಯಾಯ ಅನ್ಯಾಯದ ಪ್ರಶ್ನೆಯೇ ಇಲ್ಲ. ಒಡೆಯರು ಇಟ್ಟಂತೆ ನೋಡಿಕೊಂಡಂತೆ ಇರುವುದಷ್ಟೆ….
“ಸಿಂಗಣ್ಣ”
ಎಂದ ಕಲ್ಲಜ್ಜ ಕುಟ್ಟುದುದನ್ನು ದವಡೆಗೆ ನೂಕಿ.
“ಸರಿ…ತಪ್ಪು ಅಂತ ಬೊಟ್‌ಮಾಡಿ ತೋರ್ಸಿದ್ರೆ ಏನಾದ್ರೂ ಪ್ರಯೋಜನ ಆದೀತ?”
“ಸರಿ ತಪ್ಪು…ಈ ಎರಡನ್ನು ಕಾಣೋ ಕಣ್ಣಿದ್ರೆ…ಈವತ್ತಲ್ಲ ನಾಳೆ ಖಂಡಿತ ಪ್ರಯೋಜನ ಆಗುತ್ತೆ….”
ಹುರುಪಿನಿಂದ ನುಡಿದ ಸಿಂಗ
“ನನ್ ಕಾಲ ಆತು….ಈಗ ನಿನ ಕಾಲ, ಅದೇನು ಮಾಡ್ತೀಯೋ ಮಾಡು….”

ಕಲ್ಲಜ್ಜ ಸಿಂಗನ ಬೆನ್ನು ಚಪ್ಪರಿಸುತ್ತಿದ್ದ ಹೀಗೆ. ಈ ಹುಡುಗ ಏನೋ ಒಂದನ್ನು ಮಾಡುತ್ತಾನೆ ಎಂದೆನಿಸದೇ ಇರಲಿಲ್ಲ. ಅಲ್ಲಿ ಇಲ್ಲಿ ಸಿಗುತ್ತಿದ್ದವರು ಸಿಂಗನ ಒಳ್ಳೆ ಕೆಲಸಗಳ ಬಗ್ಗೆ ಹೇಳಿದುದನ್ನು ಕೇರಿಯ ಜನ ತನ್ನಲ್ಲಿಗೆ ಬಂದು ಹೇಳಿದಾಗಲೂ ಕಲ್ಲಜ್ಜನಿಗೆ ಸಂತೋಷವಾಗದೇ ಇರಲಿಲ್ಲ. ಜೊತೆಗೇನೇ ಕಲ್ಲಜ್ಜನಿಗೆ ದಿಗಿಲು. ಈ ಹುಡುಗ ಇಲ್ಲಸಲ್ಲದ್ದಕ್ಕೆಲ್ಲ ಕೈಹಾಕಿ ಏನಾದರೂ ಅಪಾಯ ಮಾಡಿಕೊಂಡರೆ? ಅಪಾಯದ ವಿಷಯ ಒತ್ತಟ್ಟಿಗಿರಲಿ, ಈ ಹುಡುಗ ನ ಮಾತು ನಡೆದೀತೆ?

ಸಿಂಗನ ಯೋಚನೆ ಯೋಗ್ಯವೆ. ಹೆಗ್ಡೇರ ತೋಟಗಳಲ್ಲಿ ಕೆಲಸ ಮಾಡುವವರೆಲ್ಲ ಹಸಲರು. ತೋಟಕ್ಕೆ ನಾಲ್ಕು ಐದು ಕುಟುಂಬಗಳಿಗೆ. ಕಳೆ ಕೀಳು, ಸೊಪ್ಪು ಹಾಕು, ಔಷಧಿ ಹೊಡಿ, ಅಡಿಕೆ ಕೊಯ್ಯಿ ಎಂದು ತೋಟದ ಸಮಸ್ತ ಕೆಲಸ ಇವರ ಪಾಲಿಗೆ.ಈ ಆಳುಗಳು ತೋಟದ ಅಂಚಿನಲ್ಲಿ ಇರಲು ಅವರೇ ಕಟ್ಟಿಕೊಂಡ ಮನೆಗಳು. ಸುತ್ತ ಅಡಿಕೆ ಹಾಳೆ ಗೋಡೆ. ಮೇಲೆ ಅಡಿಕೆ ಮಡಿಲ ಹೊದಿಕೆ. ಬಿದಿರಗಳದ ಒಂದು ಬಾಗಿಲು. ಮಳೆ ಗಾಳಿಗೆ ಇದು ನಿಂತಿರುವುದೇ ಒಂದು ಅಚ್ಚರಿ. ಅಲ್ಲೊಂದು ಇಲ್ಲೊಂದು ಚದುರಿ ಬಿದ್ದಿರುವ ತೋಟಗಳು. ಜೊತೆಗೆ ಆಳುಗಳ ಮನೆಗಳು. ಆಳುಗಳಿಗೆ ಏನೇ ಆಗಲಿ ಅದು ಮತ್ತೊಬ್ಬರಿಗೆ ತಿಳಿಯದ ವಿಷಯ. ಆಳುಗಳದ್ದು ಏನೆಂದರೂ ಬೇರೆ ಬೇರೆ ದನಿ. ಬೇರೆ ಬೇರೆ ವಿಚಾರ. ಅವರೆಲ್ಲ ತಮ್ಮ ತಮ್ಮ ಹೆಗ್ಡೇರು ಹೇಳಿದ ಹಾಗೆ ಕೇಳುವವರು. ಅವರು ಒದ್ದರೆ ಒದೆಸಿಕೊಂಡು ಬೈದರೆ ಬೈಸಿಕೊಂಡು, ನೂಕಿದರೆ ನೂಕಿಸಿಕೊಂಡು ಬಾಯಿ ಬಿಗಿದುಕೊಂಡು ಸುಮ್ಮನಿರುವವರು. ಕಾನು ಮನೆ ಹಸಲರು ಏಟು ತಿಂದದ್ದು ಹೊಸ್ಮನೆಗೆ ಗೊತ್ತಾದದ್ದು ಮೂರು ದಿನಗಳ ನಂತರ. ಹೊಸಮನೆ ಕೆಂಗನ ಹಲ್ಲು ಉದುರಿದ್ದು ಕೆಳಮನೆ ಹಸಲರಿಗೆ ಗೊತ್ತಾದದ್ದು ಮೂರನೇ ದಿನ. ಸಿಂಗ ಇದನ್ನು ಗಮನಿಸಿದ. ಈ ಜನ ಚದುರಿ ಬಿದ್ದಿರುವುದೇ ಇವರ ದನಿ ಉಡುಗಿ ಹೋಗಲು ಕಾರಣವಿರಬಹುದು ಎನಿಸಿತು. ಮೊದ್ಲು ಇವರನ್ನು ಒಡೆಯರ ತೋಟಗಳ ಬಳಿಯಿಂದ ಕದಲಿಸಬೇಕು ಎಂದಾತ ಯೋಚಿಸಿದ. ಪೇಟೆಯ ತನ್ನ ಮಿತ್ರರ ಜತೆ ವಿಚಾರ ಮಾಡಿದ. ಎಲ್ಲ ಸೇರಿ ಒಂದು ಅರ್ಜಿ ಕೊಟ್ಟರೆ ಒಂದೆಡೆ ಜಾಗ ಸಿಗಬಹುದು ಎಂಬ ಬೆಳಕು ಗೋಚರಿಸಿತು. ಸರಕಾರದ ವತಿಯಿಂದಲೂ ಭರವಸೆಯ ಮಾತು ಕೇಳಿ ಬಂದಿತು. ಸರಿ. ಸಿಂಗ ಅರ್ಜಿಯೊಂದನ್ನು ಸಿದ್ಧಪಡಿಸಿದ. ಮೊದಲು ಕಲ್ಲಜ್ಜನ ಬಳಿ ಬಂದು ವಿಷಯ ತಿಳಿಸಿ ಕೀಲೆಣ್ಣೆಯ ಮುದ್ರೆಯೊತ್ತಿಸಿಕೊಂಡ. ನಂತರ ಅದೇ ಕೀಲೆಣ್ಣೆ ಮೆತ್ತಿಕೊಂಡ ಕೋಲನ್ನು ಹಿಡಿದುಕೊಂಡು ಹಳ್ಳಿ ಹಳ್ಳಿಗೆ ಹೋದ. ಕನ್ನ, ಡೊಂಕ, ಹಾಲ, ಮಂಜ, ಕೆಂಪ, ಕೊಲ್ಲ, ರಾಚ, ಎಂದು ಎಲ್ಲ ಹಸಲರ ಹೆಬ್ಬೆರಳಿಗೆ ಕೀಲೆಣ್ಣೆ ಸವರಿ ಕಾಜಗದ ಕೆಳಗೆ ಒಂದರ ನಂತರ ಒಂದು ಹೆಬ್ಬೆಟ್ಟು ಒತ್ತಿಸಿ ಈ ಎಹೆಗು ಇವರದ್ದು ಎಂದು ತಾನೇ ಬರೆದ, ಹಾಗೇ ಸಾಗರಕ್ಕೆ ಹೋಗಿ ಅರ್ಜಿ ಕೊಟ್ಟು ಬಂದ.

ಸಿಂಗ ಅರ್ಜಿ ಕೊಡಿಸಿದ್ದು ಹೊಂಬಾಳೆಗೆ ಹೋಗುವ ದಾರಿಯಲ್ಲಿ ಎದುರಾಗುವ ಸೊಪ್ಪಿನ ಬೆಟ್ಟದ ಕೆಳಗಿನ ಐದಾರು ಎಕರೆಗೆ. ಅಲ್ಲಿ ಯಾರೂ ವ್ಯವಸಾಯ ಮಾಡುತ್ತಿರಲಿಲ್ಲ. ಅದು ವ್ಯವಸಾಯಕ್ಕೂ ಯೋಗ್ಯವಾಗಿರಲಿಲ್ಲ. ಕೇವಲ ಕಲ್ಲು ನೆಲ. ಕೆಳಗೆಲ್ಲೋ ಹಳ್ಲ. ಹೊಂಬಾಳೆಗೆ ಹೋಗುವ ಕಾಲು ಹಾದಿ ಈ ಜಾಗದ ಮಧ್ಯೆ ಹಾದುಹೋಗುತ್ತದೆ ಅಲ್ಲದೆ ಈ ಜಾಗ ಬೇರಾವುದಕ್ಕೂ ಬಳಕೆಗೆ ಬಂದಂತಿರಲಿಲ್ಲ. ಹಿಂದೆ ಒಂದಿಷ್ಟು ಕಲ್ಲು ತೆಗೆದಿದ್ದರಿಂದ ಇಲ್ಲಿ ಹಳ್ಲಗಳು ಬಿದ್ದಿದ್ದವು. ಈ ಜಾಗ ಸಿಕ್ಕರೆ ಇಲ್ಲಿ ಎಲ್ಲ ಹಸಲರೂ ಮನೆಕಟ್ಟಿಸಿಕೊಳ್ಳಬಹುದು. ಎಲ್ಲ ಹಸಲರೂ ಒಂದೆಡೆ ನೆಲಸಬಹುದು-ಎಂದು ವಿಚಾರ ಮಾಡಿದ ಸಿಂಗ. ಹಸಲರು ಕೂಡ ಈ ಮಾತಿಗೆ ಒಪ್ಪಿಗೆ ನೀಡಿದರು. ಅರ್ಜಿಗೆ ಹೆಬ್ಬೆಟ್ಟು ಒತ್ತುತ್ತ ಅಲ್ಲಿ ಸಾಲಾಗಿ ಮನೆಗಳು ಎದ್ದು ನಿಂತುದನ್ನು ಕಲ್ಪಿಸಿಕೊಂಡು ಹಿಗ್ಗಿದರು.

ಕಲ್ಲಜ್ಜನಿಗೆ ಕೂಡ ಅಚ್ಚರಿಯಾದ ವಿಷಯವೆಂದರೆ ಸಿಂಗನ ಮಾತಿಗೆ ಎಲ್ಲರೂ ಒಪ್ಪಿದ್ದು. ಹೀಗೆ ಮಾಡೋಣ ಎಂದ ಕೂಡಲೇ ಒಡೆಯರನ್ನು ಕೇಳಿ ಅನಂತರವೇ ಹುಂ ಅನ್ನುತ್ತಿದ್ದ ಆಳುಗಳೆಲ್ಲ ಈ ಬಾರಿ ಸಿಂಗನ ಮಾತಿಗೆ ತಲೆದೂಗಿ ಮುದ್ರೆಯೊತ್ತಿದ್ದು ಸಂತಸದ ವಿಷಯ ಕೂಡ ಆಯಿತು.
ಆದರೆ ಈ ಕಡೆ ಕೆಲ ಮಾತುಗಳು ಕೇಳಿ ಬಂದುವು-
“ನಾಳೆ ಹೊಂಬಾಳೆ, ಹೊಸಗದ್ದೆ, ಬದನೆಕೊಪ್ಪಗಳಿಗೆ ಹೋಗಬೇಕಾದರೆ, ಹಸಲರ ಈ ಮನೆಗಳ ಮುಂದಿನಿಂದ ಅವರ ಮಕ್ಕಳ ಹೇಲು ಉಚ್ಚೆ ತುಳಿದುಕೊಂಡು, ಅವರು ತಿಂದು ಎಸೆದ ಮೂಳೆ ಮುಳ್ಳುಗಳಿಂದ ಮೈಲಿಗೆ ಮಾಡಿಕೊಂಡು, ತಿರುಗಾಡಬೇಕೆ….?”
“ಈ ಹಸಲರ ಮಕ್ಕಳು ಉತ್ತಮರ ಹಾಗೆ ಊರುಕೇರಿ ಕಟ್ಟಿಕೊಳ್ಳುವ ಮಟ್ಟಕ್ಕೆ ಬಂದರೆ?”
“ಆಳುಗಳಿಗೆ ಈಗ ಏನು ತೊಂದರೆಯಾಗಿದೆ?”
“ಆಳುಗಳಿಗೆಲ್ಲ ಒಡೆಯರ ಮೇಲೆ ಕತ್ತಿ ಮಸೆಯಲು ಹೊರಟಿದ್ದಾರೆಯೆ?”
ಅಲ್ಲಲ್ಲಿ ನಡೆದ ಮೀಟಿಂಗಿನಲ್ಲಿ ಮೇಲಿನ ಮಾತುಗಳು ಕೇಳಿ ಬಂದರೆ ಕೆಲಸಕ್ಕೆ ಹೋದ ಹಸಲರು ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು ಬೇರೆ.
“ಏನೋ ಬಚ್ಚ….ಮನೆ ಕಟ್ಟಾಕೆ ಅರ್ಜಿ ಕೊಟ್ಟಿಯಂತೆ…ಹೌದೇನೋ?”
ಹೊಂಬಾಳೆ ಒಡೆಯರು ಕೊಟ್ಟಿಗೆ ಬಾಚುತ್ತಿದ್ದ ಬಚ್ಚನಿಗೆ ಕೇಳಿದರು.
ಮನೆ ಹಿಂದೆ ಬಂದು, ಬಾಳೆ‌ಎಲೆ ಹಾಸಿಕೊಂಡು ರಾತ್ರಿಯ ಹಳಸಲಿಗೆ ಕಾದುನಿಂತ ಕೆಂಪಿಯನ್ನು ತಾಂಬೂಲ ಉಗಿಯಲು ಬಂದ ಬನದಗದ್ದೆ ಒಡೆಯರು ಕೇಳಿದರು.
“ಹೌದೇನೇ ಕೆಂಪಿ…ಎಲ್ಲ ಸೆರಿ ಮನೆ ಕಟ್ತೀರಂತೆ?”
“ಪೇಟ್ಯಾಗೆ ಬ್ರಾಂಬ್ರ ಕೇರಿ, ಲಿಂಗಾಯ್ತರ ಕೇರಿ ಆದ ಹಾಗೆ ನಿಂದೂ ಒಂದ ಕೇರಿ ಆಗತೈತೆ ಅಲ್ವ?”
“ನಿಂದೆ ಜಾಗ ಸಿಗತ್ತಲ್ಲ…ಒಂದೊದ ಮಹಡಿಮನೆ ಕಟ್ಟಿಸಿಬಿಡಿ….” ಆಳುಗಳು ಯಾರೂ ಮಾತಾಡಲಿಲ್ಲ. ಅರ್ಜಿಕೊಟ್ಟು ಮುಂದಿನ ಫಲಿತಾಂಶಕ್ಕಾಗಿ ಕಾದರು.
ಅಷ್ಟರಲ್ಲಿ….

ಹೊಂಬಾಳೆ ಹೊರೇ ಹೆಗ್ಡೇರು ಒಂದು ಪಿಲಾನ ಮಾಡಿದರು. ಸರಕಾರಿ ಕಛೇರಿಯಲ್ಲಿರುವವರೇ ಅವರಿಗೆ ಹೇಳಿಕೊಟ್ಟರು. ಬೇರೆ ಜನ ಕೂಡ ಬೆಂಬಲಕ್ಕೆ ನಿಂತರು. ಹೊಂಬಾಳೆಯವರು ಹಳೆಯ ತಾರೀಕು ಹಾಕಿ ಒಂದು ಅರ್ಜಿ ಕೊಟ್ಟರು. ಐದಾರು ದಿನಗಳಲ್ಲಿ ಸೊಪ್ಪಿನ ಬೆಟ್ಟದ ಕೆಳಗೆ ಏನೋ ಚಟುವಟಿಕೆ ಕಂಡು ಬಂದಿತು. ನೋಡ ನೋಡುತ್ತ ಪಾಯ ತೆಗೆದರು. ಗೋಡೆ ಎದ್ದಿತು; ಮಾಡು ತಲೆದೋರಿತು. ಹೆಂಚು ಹಾಕಿಸಿಬಿಟ್ಟರು.
ಹಸಲರ ಕಲ್ಲಜ್ಜ ನೋಡಿಯೇ ನೋಡಿದ.
“ಮುಗೀತು ಬಿಡು ಅತ್ಲಾಗೆ. ಇನ್ನು ಈ ಲೌಡಿಮಕ್ಳು ಮನೆಕಟ್ಟಿದ ಹಾಗೇನೆ”
-ಎಂದು ಕಲ್ಲಜ್ಜ ಕೊನೆಯ ವಾಕ್ಯ ನುಡಿದ. ಆತ ಅಂಗಳದ ತುದಿಯಲ್ಲಿ ಕುಳಿತಿದ್ದ ಹಾಗೆ ಕತ್ತಲಾಯಿತು. ಜೀರುಂಡೆಗಳು ಕತ್ತಲಲ್ಲಿ ಕಾಡಿನ ಮೈ ಪರಚತೊಡಗಿದವು.

ಯಾವತ್ತೂ ಇಷ್ಟೇ ಅಂದುಕೊಂಡ ಕಲ್ಲಜ್ಜ, ಕೆಳಗೆ ಹರಿಯೋ ನೀರು ಕೆಳಗೇನೆ. ಮೇಲೆ ಹರಿಯೋ ನೀರು ಮೇಲೇನೆ. ಕಲ್ಲಜ್ಜ ಕತ್ತಲಲ್ಲಿ ಕುಟ್ಟಾಣಿ ಹತ್ತಿರ ಎಳೆದುಕೊಂಡ. ಜಗಲಿಯ ಮೇಲೆ ಮಗ ಮಲಗಿದ್ದ. ಒಡೆಯರ ಅಡಿಕೆ ತೋಟಕ್ಕೆ ಔಷಧಿ ಹೊಡೆದು ಬಂದಿದ್ದ ಆತ ಅಯ್ಯಪ್ಪ ಎಂದು ಕ್ರಮಬದ್ಧವಾಗಿ ನರಳುತ್ತಿದ್ದ.

ಇರುಳು ದೀರ್ಘವಾಗಿತ್ತು. ಕೆಳಗೆ ಅಡಕೆ ತೋಟ. ಮೆಲೆ ನಾಲ್ಕು ಮನೆಗಳು. ಐದಾರು ನಾಯಿಗಳು. ಕೂಸುಗಳು ಅತ್ತ, ಇನ್ನಾರೋ ಕೆಮ್ಮಿದ, ನರಳಿದ ಸದ್ದು. ಜೊತೆಗೆ ತೋಟದ ಹಳ್ಲದಲ್ಲಿ ನೀರು ಹರಿಯುವ ಲಯಬದ್ಧ ದನಿ.
ಬೆಳಕು ಹರಿಯುತ್ತಿರುವಾಗಲೇ ಹೊಸಗದ್ದೆ ಕನ್ನನ ಮಗ ಸಿಂಗ ಅಂಗಳದಲ್ಲಿ ಕಾಣಿಸಿಕೊಂಡ.
“ಸಿಂಗಣ್ಣ ನೋಡಿದ್ಯ”
ಕಲ್ಲಜ್ಜ ಕಾಲನ್ನು ಇಳಿಬಿಟ್ಟುಕೊಂಡು ಜಗಲಿಯಿಂದ ಅಂಗಳಕ್ಕೆ ಇಳಿದ.
“ವಿಷಯ ತಿಳಿತು….ನೋಡಿಕೊಂಡು ಹೋಗಾಕೆ ಬಂದೆ….”
ಸಿಂಗ ದೃಷ್ಟಿ ಕೀಳದೆ ನಿಂತು ನೋಡುತ್ತಿದ್ದ.
“ಹೆಗ್ಡೇರೆಲ್ಲ ಸೇರಿ ಏನೋ ಪಿಳಾನಾ ಮಾಡಾರೆ ಅಲ್ವ?”
“ಹೌದು…ನಮಗೆ ಏಳಿಗೆ ಆಯ್ತು ಅಂದ್ರೆ ಅವರಿಗೆ ಕಷ್ಟ ಅಲ್ವ….”
“ಹಂಗಾರೆ ಮುಂದೆ….”
“ಹಿಂಗಾಯ್ತು ಅಂತ ಸುಮ್ಕೆ ಆಗೋದುಂಟ…ನೋಡುವ….ನಾನೇ ವಿಚಾರ ಮಾಡತೀನಿ.”
ಸಿಂಗ ಹೊರಟ.
“ಬಂದೋಗು ಒಳಗೆ.”
“ಇಲ್ಲ ಮತ್ತೆ ಎಂದಾರ ಬರತೀನಿ.”
ಸಿಂಗ ಹೊರಟು ಹೋದ. ಈ ಬದಿಯ ಕಾಲುದಾರಿ ಬ್ಯಾಣದ ನಟ್ಟನಡುವೆ ಬೀಸಿ ಎಸೆದ ಹಗ್ಗದ ಹಾಗೆ ಬಿದ್ದುಕೊಂಡಿತ್ತು. ಅದರ ಮೆಲೆ ನಡೆದುಕೊಂಡು ಸಿಂಗ ತುದಿಯ ಹಾಲುವಾಣದ ಮರದ ಬಳಿ ಮಾಯವಾದ. ಹುಡುಗ ಧೈರ್ಯದಿಂದಿದ್ದ. ಅವನ ಎದೆ ಬಾಗಿರಲಿಲ್ಲ. ತೋಳುಗಳನ್ನು ಬಿರುಸಾಗಿ ಬೀಸುತ್ತ ನಡೆಯುತ್ತಿದ್ದ.
ಸೂರ್ಯ ಅತ್ತ ಏರಿ ಇತ್ತ ಇಳಿದ.
ಸೊಸೆ ಒಡೆಯರ ಮನೆಯಿಂದ ಬಂದಳು.
“ಮಾವಯ್ಯ….ಅಕ್ಕಯ್ಯ ಆಸೆ ಕೊಟ್ಯಾರೆ…ಉಣ್ತೀರ?” ಎಂದು ಕೇಳಿದಳು.
ಕಲ್ಲಜ್ಜನ ಊಟ ಆಗಿತ್ತು. ಏಕೋ ಒಡೆಯರ ಮನೆ ಆಸೆ ಎಂದರೆ ನಾಲಿಗೆ ಹರಿದಾಡಲಿಲ್ಲ.
“ಬೇಡ….”
ಎಂದ ಗೋಡೆಗೆ ಬೆನ್ನು ಒತ್ತಿ ಕುಳಿತು.
ದನಕರುಗಳ ಹಿಂಡು ಒಡೆಯರ ಮನೆ ದಾರಿ ಹಿಡಿದವು. ಸೂರ್ಯ ಕೆಂಪಾಗಿ ಇಳಿದು ಹೋದ. ಮತ್ತೆ ಕತ್ತಲು ಆವರಿಸಿಕೊಂಡಿತು.
ಊಟ ಮುಗಿಸಿ ಮಗ ಎದ್ದ.
“ತಮ್ಮ….ಎಲ್ಲಿಗೆ…..ಬೇಟೆಗ?”
ಮಗ ಆಗಾಗ್ಗೆ ಮೊಲ, ಹಂದಿ, ನವಿಲಕ್ಕಿ ಬೇಟೆಗೆ ಹೋಗುವುದಿತ್ತು.
ಮಗ ಗಡುಸಾಗಿ ಆದರೆ ಅದೊಂದು ರೀತಿಯ ವ್ಯಂಗ್ಯಭರಿತ ದನಿಯಲ್ಲಿ ನುಡಿದ-
“ಹೌದು…ಬ್ಯಾಟಿಗೆ….!”

ಇಷ್ಟು ಹೇಳಿ ಆತ ಅಂಗಳ ದಾಟಿ ಕತ್ತಲಲ್ಲಿ ಕರಗಿಹೋದ. ಅಜ್ಜ ಜಗಲಿಯ ಮೇಲೆ ಕುಳಿತ. ಅವನು ಕುಳಿತುಕೊಳ್ಳುವುದು ಮಲಗುವುದು ಅಲ್ಲಿಯೇ. ಈಗ ಇಪ್ಪತ್ತು ವರ್ಷಗಳಿಂದ ಆತ ಹಿಡಿದಿರುವ ಜಾಗ ಇದು. ಆಡಕೆ ಗೊನೆ ಕೀಳಲೆಂದು ಹತಿದ ಮರ ಮುರಿದು ಬೀಳುತ್ತದೆಂದು ಯಾರು ತಿಳಿದಿದ್ದರು? ಮರ ಮುರಿದು ಕಡುಕಿನ ಮಣಿಯ ಜೊತೆಗೆ ಕಲ್ಲಜ್ಜ ಬುಡಕ್ಕೆ ಬಂದು ಬಿದ್ದ. ಬಿದ್ದ ರಭಸಕ್ಕೆ ಕಾಲುಗಳು ಮುರುದವು. ಅವನ ಜೀವ ಉಳಿಯಿತು. ಆದರೆ ಏನು ಉಪಯೋಗ? ಜಗಲಿ ಅಂಗಳ ಇವೆರಡೇ ಅವನ ಪ್ರಪಂಚ ಈಗ. ತೋಟದ ಕೆಲಸ ಮಾಡುವಾಗ ತಾನು ಕಾಲು ಮುರಿದುಕೊಂಡೆ. ಒಡೆಯರು ನೂರೋ ನೂರೈವತ್ತು ರೂಪಾಯಿಯೋ ಖರ್ಚು ಮಾಡಿರಬಹುದಷ್ಟೆ. ಅಷ್ಟಕ್ಕೆ ಕೈ ತೊಳೆದುಕೊಂಡು ಅವರು ದೂರ ಸರಿದರು.
ಕಲ್ಲಜ್ಜ ಕತ್ತಲನ್ನು ಕೆದಕಿ ನೋಡಿದ.
ಹೌದು. ಕೆಲ ಕಪ್ಪು ಆಕೃತಿಗಳು ಮನೆ ಎದುರಿನಿಂದ ಹೊಂಬಾಳೆ ದಾರಿ ಹಿಡಿದಿವೆ. ಮಾತು ಕೇಳಿ ಬರುತ್ತಿದೆ. ಬಿರುಸು ನಡಿಗೆ ಗೋಚರಿಸುತ್ತದೆ.
ಒಬ್ಬರು.
ಇಬ್ಬರು.
ಹಲವರ ಗುಂಪು. ಹಲವು ಗುಂಪುಗಳು.
ರಭಸದಿಂದ ನುಗ್ಗಿ ಹೋದ ಹಾಗೆ….ಪ್ರವಾಹದ ಒಂದು ಅಲೆ ಅಪ್ಪಳಿಸಿದ ಹಾಗೆ….
“ಗುತ್ತೀ….ಯಾರೇ ಹೋಗ್ತಿರಾದು?”
ಒಳಗೆ ತಿರುಗಿ ಸೊಸೆಯನ್ನೇ ಕೇಳಿದ.
“ಎಲ್ಲ ನಮ್ಮೋರೆ….”
“ಎಲ್ಲಿಗೆ ಹೋಗ್ತಿರಾದು?”

ಕಲ್ಲಜ್ಜನ ಪ್ರಶ್ನೆಗೆ ಉತ್ತರ ಬಂದಿರಲಿಲ್ಲ. ಸೊಪ್ಪಿನ ಬೆಟ್ಟದ ಕೆಳಗಿನಿಂದ ನೂರು ಸ್ವರಗಳು ಕಾಡಿನ ಕಗ್ಗತ್ತಲನ್ನು ಭೇದಿಸಿ ಬಂದವು. ಹಿಂದೆಯೇ ಸಾವಿರ ಕಲ್ಲುಗಳು ಹಂಚುಗಳು ಮೇಲೆ ಬಿದ್ದವು.
ಕಲ್ಲಜ್ಜ ಅಂಗಳಕ್ಕೆ ಹಾರಿದ.
ಹುರುಪು ಉತ್ಸಾಹ ಹುಮ್ಮಸ್ಸು.
“ಗುತ್ತೀ ಕೇಳಿಸ್ತೇನೆ…ನಮ್ಮೋರೆಲ್ಲ ಒಂದಾಗಾರೆ”

ಸೊಪ್ಪಿನ ಬೆಟ್ಟದತ್ತ ನೋಡಿ ಮುದುಕ ಸಂತಸದಿಂದ ಕೂಗಿದ. ಆತನ ಕೂಗಿಗೆ ಪ್ರತ್ಯುತ್ತರ ಎಂಬಂತೆ ಹೊಂಬಾಳೆ ಹಿರೇ ಹೆಗ್ಡೇರು ಮೂರುದಿನಗಳಲ್ಲಿ ಕಟ್ಟಿದ ಮನೆ ದೊಸನೆಲ್ಲ ಮುರಿದು ಬಿದ್ದ ಸದ್ದಿಗೆ ಕಾಡಿನ ಮರ ಗಿಡಗಳ ಮೆಲೆ ಕುಳಿತೆಲ್ಲ ಹಕ್ಕಿಗಳು ರೆಕ್ಕೆ ಒದರಿ ಹಾರಿ ಕಿರುಚಿದವು.
“ನಮ್ಮೋರೆಲ್ಲ ಒಂದಾಗಾರೆ….ಒಂದಾಗಾರೆ….”
ತಾನೂ ಒಂದು ಹಕ್ಕಿಯಾಗಿ ಕೂಗಿದ ಕಲ್ಲಜ್ಜ.
*
*
*
“ಅಯ್ಯೋ ಸರ್ವನಾಶ….ಸರ್ವನಾಶ”
ಮನೆಗೆ ಅಷ್ಟು ದೂರದಲ್ಲಿ ನಿಂತು ಯಾರೋ ಕೂಗುತ್ತಿರುವುದು ಕೇಳಿಸಿತು. ಮಾತಿನ ರೀತಿ ದನಿಯಿಂದಾಗಿ ವ್ಯಕ್ತಿಯ ಗುರುತು ಹಿಡಿದ ಕಲ್ಲಜ್ಜ.
“ಯಾರು? ಒಡೆಯಾ?”
ಎಂದು ಕೇಳಿದ.
“ಹೌದು….ನಾನೇ….ಗಲಾಟೆ ಕೇಳಿ ಬಂದೆ….”
ಕಲ್ಲಜ್ಜನ ಸನಿ ಕೇಳಿ ಒಡೆಯ ಎರಡು ಹೆಜ್ಜೆ ಮುಂದೆ ಬಂದ. ತೋಟದ ಅಂಚಿಗೂ ಗಲಾಟೆ ಕೇಳಿಸಿದ್ದರಿಂದ ಆತ ಬಂದಿದ್ದ.
“ಈ ಪಾಪಿಮುಂಡೇವಕ್ಕೆ ಈ ಉಸಾಬಾರಿ ಯಾಕೆ ಬೇಕಿತ್ತು ಮಾರಾಯ…. ಆ ಹೆಗ್ಡೆ ಸುಮ್ನೆ ಇರ್‍ತಾನೆ? ಸಾಲಾಗಿ ಎಳಕೊಂಡು ಹೋಗಿ ಲಾತಾ ಹಾಕಿಸ್ತಾನೆ….ಸ್ಟೇಷನ್‌ಗೆ….ಹಸಲರ ಆಳುಗಳು ಹೀಗೆ ಪುಂಡಾಟ ಮಾಡೋದುಂಟ”?
“ಒಡೆಯಾ”
ಎಂದ ಕಲ್ಲಜ್ಜ ದನಿ ಎತ್ತರಿಸಿ, ತುಸು ಕಠಿಣವಾಗಿ.
“ಏನು?”
“ಅಲ್ಲ….ಹಿಂದೆ ಎಂದಾರ ಹಸಲರು ಒಂದಾಗಿ ಒಡೇರ ಮೇಲೆ ತಿರುಗಿ ಬಿದ್ದಿದ್ದು ಕಂಡಿದ್ರ?”
“ಇಲ್ಲ….ಇದೇ ಮೊದಲು….ಇದೇ ಆರಂಭವಾಗಿರೋದು.”
“ಆದರೆ ಒಡೆಯ ಇದು ಕೊನೆಯಲ್ಲ….ಇದು ಆರಂಭ….ನೀವು ಹೇಳೋ ಹಾಗೆ….ಆದರೆ ಒಳ್ಳೆ ಆರಂಭ….”
“ಹೌದಾ…ಆದರೆ….ಇದು ಒಳ್ಳೇದಕ್ಕಲ್ಲ ಬಿಡು….”
“ಹಾಗಲ್ಲ. ಹಸಲರೆಲ್ಲ ಒಂದಾಗಾರೆ….ಅವರ ಶಕ್ತಿ ಎಷ್ಟಂತ ಅವರಿಗೆ ಗೊತ್ತಾಗೇತ್ರಿ….ಮುಂದೆ ಅವರಿಗೆ ಅನುಕೂಲ ಇದೆ.”
“….ಆದರೆ ಸರಕಾರ….ಪೋಲೀಸು….”

ಒಡೆಯ ಏನೋ ಹೇಳಲು ಬಾಯಿತೆರೆದ. ಆದರೆ ಹೆಗ್ಡೆ ದುರುದ್ದೇಶದಿಂದ ಕಟ್ಟಿದ ಮನೆಯನ್ನು ಕ್ಷಣದಲ್ಲಿ ಕೆಡವಿ ಹಾಕಿದ ಜನ ದರೆ ಹತ್ತಿ ಮೇಲೆ ಬರತೊಡಗಿದ್ದನ್ನು ಗಮನಿಸಿ ಒಡೆಯ ನಿಂತಲ್ಲಿಂದ ಕಾಲುಕಿತ್ತ.
“….ಬರ್ರೋ….ಬರ್ರೋ ನಮಗೆ ಗೆಲುವಾಯ್ತು ಬನ್ನಿ”
ಎಂದು ಕುಳಿತಲ್ಲೇ ಕುಪ್ಪಲಿಸುತ್ತ ಕಲ್ಲಜ್ಜ ಕತ್ತಲಲ್ಲಿ ಬೆಳಕಿನ ಕಿಡಿಗಳಾಗಿ ಬರುತ್ತಿರುವ ತನ್ನ ಜನರನ್ನು ಸ್ವಾಗತಿಸತೊಡಗಿದ.
*****
[೧೯೮೬]

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.