ಶುಭಾಶಯ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ನಿನಗೆ ತಲುಪಲಿ ಎಂದು ನಿನ್ನೆ ದಿನ ನಕ್ಷತ್ರ
ವೊಂದಕ್ಕೆ ಹೀಗೆ ಹೇಳಿದೆ: ಚಂದ್ರಮುಖಕ್ಕೆ ನನ್ನ ಶುಭಾಶಯ

ಮತ್ತೆ ಶರಣಾಗಿ ಹೀಗೆಂದ – ಯಾವ ಸೂರ್‍ಯ
ಸ್ಪರ್ಶದಿಂದ ಕಗ್ಗಲ್ಲು ಚಿನ್ನವೊ ಅವನಿಗೆ ಶುಭಾಶಯ

ಹೃದಯದ ಗಾಯ ತೋರಿಸಿ ಆ ನಕ್ಷತ್ರಕ್ಕೆ ಪ್ರಾರ್ಥಿಸಿದೆ
ರಕ್ತಪಾನೀ ರೋಮಾಂಚಕನಿಗೆ ನನ್ನ ಮೊರೆ ಎಂದೆ

ನನ್ನ ಹೃದಯದ ಹಸುಗೂಸು ಸುಮ್ಮನಿರಲೆಂದು
ಜೋ ಜೋ ಜೋಗುಳ ಹಾಡಿದೆ

ಸಮಾಗಮವೆಂಬ ನಗರವೇ ಹೃದಯದ ವಾಸಸ್ಥಾನ
ಎಷ್ಟು ಕಾಲ ಪರದೇಶಿಯಾಗಿಡುತ್ತಿ ಈ ಅಲೆಮಾರಿ ಹೃದಯವನ್ನ

ಮಾತು ಬಿಟ್ಟು ಮೌನಿಯಾಗಿದ್ದೇನೆ, ಒತ್ತಿಬಂದ
ಯಗಟು ತೊಲಗಲಿ ನಿನ್ನ ಉನ್ಮತ್ತ ದೃಷ್ಟಿಯಿಂದ ಸಖ
*****