ಎಲ್ಲಿಂದ ಬಂದೆ ನೀ ನನ್ನ ಮುದ್ದಿನ ಹಕ್ಕಿ?
ಹದುಳವೆನ್ನುವ ಮೊದಲೆ ಹಾರಬೇಡ;
ಒಂದು ಚಣವಾದರೂ ನನ್ನ ಬಳಿಯಲಿ ಕುಳಿತು
ಕುಶಲ ವಾರ್‍ತೆಯ ನಾಲ್ಕು ಮಾತನಾಡ.
ಎಂದಾದರೊಂದು ದಿನ ಅಂದಚೆಂದಕ್ಕೆ ಬರುವೆ
ನೋಡನೋಡುತ ಪಕ್ಕ ಬೀಸಿ ಬಿಡುವೆ;
ನನ್ನ ಹೃದಯದ ಮಾತು ಹೃದಯದಲ್ಲಿಯೆ ಉಳಿಯೆ-
ಒಲವು ನಲವಿಗೆ ಸಂಚಕಾರ ಕೊಡುವೆ.
ನಿನ್ನ ಹಾಡಿನ ಮುಂದೆ ನನ್ನದೇತರ ಪಾಡು-
ನನ್ನ ಹಾಡಿಗು ನನಗು ಜನ್ಮಗಂಟು!
ನೀ ಕಂಡ ಬನದಲ್ಲಿ ಬಾನಿನಲಿ ಕಾನಿನಲಿ
ಇವಕು ಮೀರಿದ ಬೇರೆ ಭಾವವುಂಟು.
ನಿನ್ನ ಧ್ವನಿ ಸ್ವಚ್ಛಂದ ಆನಂದದುಕ್ಕಂದ
ಹೊಚ್ಚ ಹೊಸ ಮಳೆಯ ತನಿ ಸೆಳಕಿನಂತೆ;
ಹಚ್ಚ ಹಸುರಿನ ಬನದಿ ಗಿರಿಶಿಖರದಿಂದುರುಳಿ
ಹರಿವ ನದಿಯಲಿ ನಾದ ತುಳುಕಿದಂತೆ.
ಪುಟ್ಟ ಹಕ್ಕಿಯ ಇಂಥ ಪುಟ್ಟ ಎದೆಯೊಳದೆಂತು
ಗಾನಚಿಲುಮೆಯು ತಾನ ಚಿಮ್ಮುತಿಹುದೊ!
ಇಳೆಯ ಬಾಳಿನ ಸಾರಸರ್‍ವಸ್ವ ಸುಧೆಯೆಲ್ಲ
ಹಕ್ಕಿಕಂಠದೊಳಿಂತು ಹೊಮ್ಮುತಿಹುದೊ!
ಮೇಲೆ ನೀಲಾಂಬರದಿ ಮೋಡ ತೂಕಡಿಸುತಿವೆ
ನಿನ್ನ ಗಾಯನ ಸುರಾಪಾನದಲ್ಲಿ
ನಿನ್ನ ಧ್ವನಿ ‘ಗೋ’ಯೆಂದು, ‘ಆ’ ಯೆಂದು, ‘ಬಾ’ ಯೆಂದು
ದಿಕ್ಕು ಕರೆ ಕರೆದಿಹವು ತಮ್ಮೊಳಲ್ಲಿ!
ಮರದುದಿಗೆ ಹೊಂಬಿಸಲ ಬಾವುಟವು ತೂಗಿಹುದು-
ಸೃಷ್ಟಿ ತಲೆದೂಗಿರಲು ಹೆಚ್ಚಿಗೇಕೆ?
ನನ್ನೆದೆಯ ಮೌನದಲಿ ಕರಗಿ ನೀರಾಗಿರಲು
ಆರಿಗಾರೋ ಎಂದು ಹಾರಲೇಕೆ?
ಏನಾದರೂ ಇರಲಿ, ಹಾಡ ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು!
ನನ್ನೆದೆಯ ಕತ್ತಲೆಯ ಕಣ್ಣು ಕಪ್ಪಡಿ ಮತ್ತೆ
ಮೂಲೆ ಮೂಲೆಗೆ ಹೋಗಿ ಹಾಯಬಹುದು!
ಬದುಕು ಸೋಲಾದರೂ ಕಾಡು ಪಾಲಾದರೂ
ಹಾಡ ಬಿಟ್ಟುಳಿದವನ ಪಾಡು ಬೇಡ:
ನೀನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತುಬೇಡ.
*****