ಕುಡಿಯುವ ಉದ್ದೇಶದಿಂದೇನೂ ಇಬ್ಬರೂ ಆ ಪಬ್ ಹೊಕ್ಕದ್ದಲ್ಲ. ಶೀಲಾಳಿಗೆ ತನಗೆ ಹೊರಗೆ ಕೊರೆಯುವ ಚಳಿಯಲ್ಲಿ ಇನ್ನು ನಿಂತು ಮಾತಾಡುವುದಾಗಿಲ್ಲ ಮತ್ತು ಮ್ಯಾಕ್, ಬರ್ಗರ್ ಕಿಂಗ್ ಸೇರಿದಂತೆ ಸುತ್ತಲಿನ ರೆಸ್ಟೋರೆಂಟ್‌ಗಳೆಲ್ಲ ಈಗಾಗಲೇ `ಕ್ಲೋಸ್ಡ್’ ಅಂತ ಬಿಲ್ಲೆ ತಗುಲಿಸಿಯಾಗಿದೆ ಅಂತ ಅವನನ್ನು ಒಳಗೆ ಎಳೆದುಕೊಂಡು ಬಂದದ್ದು. ಎಲ್ಲಾ ವಿಷಯಗಳಲ್ಲಿ ಶೀಲಾ ನನಗಿಂತ ಜೋರಲ್ಲವೇ ಅಂತ ಅಂದುಕೊಳ್ಳುತ್ತಾ ಒಳನಡೆದ ಶ್ರೀಧರ. ಶ್ರೀಧರ ಕುಡಿಯುವುದಿಲ್ಲಾ ಅಂತೇನೂ ಇಲ್ಲ, ಬಿಯರ್ ತನ್ನ ಅಂತಸ್ತಿಗೆ ಕಡಿಮೆ ಅಂತ ಬರೀ ವೈನ್ ಮಾತ್ರ ಕುಡಿಯುವುದು. ಒಬ್ಬಳೇ ಇದ್ದಾಗ ಶೀಲಾಳೆದುರು ಕುಡಿಯುವುದಿಲ್ಲ. ಮಂದ್ರ ದೀಪದಲ್ಲಿ ತಡಕಾಡಿ ಎತ್ತರ ಸೀಟುಗಳನ್ನೇರಿ ಅವರಿಬ್ಬರೂ ಕುಳಿತು ಫ್ರೈಸ್ ಆರ್ಡರ್ ಮಾಡಿದ್ದರು. ಗೋಣು ಬಗ್ಗಿಸಿ ವಿಧೇಯರೆಂಬಂತೆ ಸಾಲಾಗಿ ನಿಂತಿದ್ದ ಟೆಲಿವಿಜನ್ ಸೆಟ್‌ಗಳಲ್ಲಿ ಅವುಗಳಿಗೆ ತದ್ವಿರುದ್ಧವೆಂಬಂತೆ ಅಬ್ಬರದ ಫುಟ್ಬಾಲ್ ಪಂದ್ಯ ಬರುತ್ತಿತ್ತು. ಶ್ರೀಧರಶೀಲಾರಿಬ್ಬರೂ ತಮ್ಮ ಸಹಜ ಸ್ವಭಾವಕ್ಕೆ ವಿರುದ್ಧವಾಗಿ ಕಿರುಚಿ ಮಾತನಾಡ ಬೇಕಾಗುವಂತೆ, ಫುಟ್ಬಾಲ್ ಪಂದ್ಯದ ಕಾಮೆಂಟರಿಯನ್ನೂ ಮೀರಿ ಎತ್ತರದ ಸ್ಪೀಕರ್‌ಗಳಲ್ಲಿ ಬಾನ್‌ಜೋವಿ ಹಾಡುತ್ತಿದ್ದ. ಬಿಗಿಯಾದ ಕೆಂಪು ಮಿನಿ ತೊಟ್ಟ ಬ್ಲಾಂಡ್ ಒಬ್ಬಳು, ಬಾನ್ ಜೊವಿಯ ಲಯಕ್ಕೆ ತಕ್ಕಂತೆ ಮೈ ತೂಗಿಸುತ್ತಾ, ಅವಳಂತೆ ಕರಿ ಮಿನಿ ತೊಟ್ಟ ಇನ್ನೊಂದು ಹೆಣ್ಣಿನ ಸೊಂಟ ಬಳಸುತ್ತಾ, ಅವಳ ಮುಖಕ್ಕೆ ಮುಖ ಹತ್ತಿರ ತರುವುದನ್ನು ನೋಡಲಾರದೆ ಶ್ರೀಧರ, ಶೀಲಾ ಆ ಹುಡುಗಿಯರಿಗೆ ಬೆನ್ನು ಮಾಡಿರುವುದರಿಂದ ಅವಳಿಗೆ ಅವರು ಕಾಣುತ್ತಿಲ್ಲ ಎಂದು ಸಮಾಧಾನಪಟ್ಟುಕೊಳ್ಳುತ್ತಾ ಅವಳತ್ತ ಕಣ್ಣು ಹೊರಳಿಸಿದ.
ಇಷ್ಟಕ್ಕೂ ಶೀಲಾಳಿಗೆ ಅವನ ಮೇಲೆ ಸಿಟ್ಟು ಬಂದಿತ್ತು.
“ನೀನು ಇನ್ನು ಮೇಲಿಂದ ಯೊಗಾ ಮಾಡು, ಅದಕ್ಕೆ ನಿನಗೆ ಯಾವುದರಲ್ಲೂ ನಂಬಿಕೆ ಬೇಕಿಲ್ಲ…”, ನಿನ್ನ ಮೇಲಿದ್ದರೆ ನಿನಗಿದ್ದರೆ ಸಾಕು ಅನ್ನುವ ಅರ್ಥದಲ್ಲಿ ಅವನಿಗೆ ಗದರುವ ಧ್ವನಿಯಲ್ಲಿ ಕಳೆದೆರಡು ಗಂಟೆಯಿಂದ ತಾಕೀತು ಮಾಡುತ್ತಿದ್ದಳು.
ಅದಕ್ಕೂ ಮೊದಲು ಶ್ರೀಧರ ಶೀಲಾಳಿಗೆ ಹೇಳುತ್ತಿದ್ದ, ಧ್ವನಿಯಾಗಿ.
*
*
*
ಪ್ರಮೇಯಗಳು…ಆಕ್ಸಿಯಮ್ಸ್
ಈ ಪ್ರಮೇಯಗಳ ಚೌಕಟ್ಟಿಲ್ಲದೇ ಇಲ್ಲಿ ಪಶ್ಚಿಮದಲ್ಲಿ, ಇವರದ್ದೇ ಬಗೆಯಲ್ಲಿ ತಣ್ಣಗೇ, ನನ್ನೊಳಗೆ ಕೊರೆಯದೇ, ಕುಳಿಯಿರುವ ನೆಲವನ್ನು ಗಟ್ಟಿಯಾಗಿ ಸಮತಟ್ಟಾಗಿಸಲಾರೆ ಅಂದುಕೊಂಡಿದ್ದೆ. ಇಲ್ಲ, ಈಗೀಗ ಅದೇಕೋ ಮುಚ್ಚಲಾರೆ, ಈ ಎಲ್ಲಾ ಕುಳಿಗಳನ್ನು ಮುಚ್ಚಲಾರೆ ಅನಿಸತೊಡಗಿದೆ. ಎಲ್ಲೋ ಮುಚ್ಚಹೋದರೆ ಇನ್ನೆಲ್ಲೋ, ಬೀಳುತ್ತದೆ, ಕುಸಿಯುತ್ತದೆ. ಇನ್ನೊಂದು, ಮಗದೊಂದು. ಹುಚ್ಚನಂತೆ ಮಣ್ಣು ಹೊತ್ತು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತೆ ಇನ್ನೆಲ್ಲಿಗೋ ಅಲೇಯುವುದು ಮಾತ್ರ ಆಗಿದೆ. ಈ ಪ್ರಮೇಯದ ಹುಚ್ಚಲ್ಲಿ ನಾನು ಹೀಗೆ ಹುಳಹಿಡಿದವನಂತಾಗಿರುವುದೇ?
ಇವುಗಳ ಹುಚ್ಚಲ್ಲಿ, ದೇವರು ದಿಂಡರು ಬಿಟ್ಟಾಯಿತು, ಆಪ್ತ ಗೆಳೆಯರಲ್ಲಿ ಎಲ್ಲರಿಗಿಂತ ಮೊದಲೇ ಕೋಳಿ ತಿಂದದ್ದಾಯಿತು, ಕಿಂಗ್‌ಫಿಶರ್ ಕುಡಿದಾಯ್ತು, ನಿತ್ಯ ಸಂಧ್ಯಾವಂದನೆ ಮಾಡಿ, ಸಂಜೆ, ಗುಡಿಗೆ ಬಂದ ಹುಡುಗಿಯರನ್ನೆಲ್ಲಾ ದಿಟ್ಟಿಸಿಯಾದ ನಂತರ ಪ್ರಾಣದೇವರೆದುರು ಮಂಡಿ ಊರುತ್ತಿದ್ದ ಕಿಟ್ಟ್ಯಾ,ದತ್ತೂರಂಥವರನ್ನು ಉಡಾಫೆ ಮಾಡಿದ್ದಾಯಿತು. ಅಲ್ಲಿರುವ ತನಕವೂ ನನ್ನನ್ನು ದಾರಿಗೆ ತರಲು ಪ್ರಯತ್ನಿಸುತ್ತಿದ್ದ ಅಪ್ಪನೊಂದಿಗೆ ಮುಸುಕಿನಲ್ಲಿ ಗುದ್ದಾಡಿದಾಯಿತು. ಆದರೆ ತನಗಿಂತ ಹೆಚ್ಚಿಗೆ ತಿಳಿದುಕೊಂಡವ ಈತ ಅಂತ ನನ್ನನ್ನು ಒಳಗೊಳಗೆ ಮೆಚ್ಚ್ತಾನೆ ಅಂತಲೂ ನನಗೆ ಗೊತ್ತಿತ್ತು. ಅದೇ ನನ್ನ ಈ ಪ್ರಮೇಯಗಳ ಹುಚ್ಚಿನ ಅಹಂಕಾರಾನ್ನ ಹೆಚ್ಚಿಸಿದ್ದು. ಹೀಗೆ ಜಾತಿ,ಕುಲ ನೋಡದೇ ನಿನ್ನ ಜೊತೆ ಸಖ್ಯ ಬೆಳೆಸಿದ್ದು. ದಿಲ್ಲಿಯ ಹುಡುಗಿ ಅನ್ನುವ ಗ್ಲಾಮರ್ ಕೂಡ ಕಾರಣವೋ ಏನೋ.
ನೀನು, ಈ ಪ್ರಮೇಯಗಳ ಹುಚ್ಚಲ್ಲಿ ನನಗೇ ನಾನು ನಿರ್ಮಿಸಿಕೊಂಡಿದ್ದ, ಸುರತಿ,ಸ್ವರತಿ,ವಿರತಿಗಳ ಕತ್ತಲು ಕೋಣೆಯ ಬಾಗಿಲನ್ನು ಮೀಟಿ ಬಂದಿದ್ದಿ ಅಂದುಕೊಂಡಿದ್ದೆ. ನಿನ್ನ ಹೊಳೆಯುವ ಮೈ, ಸದಾ ಜೀನಿನಿಂದ ಮುಚ್ಚಿರುವ ನೀಳವಾದ ಕಾಲು, ಹರಡಿರುವ ಕಪ್ಪು ಕೂದಲು, ಉದ್ದ ಕತ್ತು, ಚಿಗರೆ ಕಣ್ಣು, ಮತ್ತೆ ಎಗ್ಗಿಲ್ಲದೇ ಪುಟಿವ ಮನಸ್ಸು, ಮಾತು ಮರುಳಾಗಿದ್ದೆ ನಾನು. ನಿನ್ನ ಆಟೋಟಿಕೆಗಳನ್ನು ಬಿಗುಮಾನದ ಬ್ರಾಹ್ಮಣಿಕೆಯಲ್ಲಿ ಕೈಕಟ್ಟಿ ನೋಡುತ್ತ ಮರುಳಾದದ್ದು. ಮೊದಲ ದಿನವೇ ನಾನು ನಿನ್ನ ಮೈಉಜ್ಜುತ್ತಿದ್ದುದು ನಿನ್ನ ಗಮನಕ್ಕೆ ಬಂದಿರ ಬೇಕು. ನೀನು ಬೇಡವೆಂದಿರಲಿಲ್ಲ. ಹೀಗೆ ಸ್ನೇಹ, ಕಾಮವಾದದ್ದು. ಬಿಗಿಯಾದ ಬಿಸಿಯಪ್ಪುಗೆ ಮುದ್ದಾಟ. ಆದರೆ ನನ್ನ ಪ್ರಮೇಯದಲ್ಲಿನ ಕುಳಿ ನನಗೆ ಕಾಣುತ್ತಿತ್ತು. ನಿನಗೂ ಕಂಡಿತೇನೋ, ಅಥವಾ ನಿನ್ನದೇ ಕುಳಿಯೋ, ಕಾಮ ಪೂರ್ತಿಯಾಗಲೇ ಇಲ್ಲ. ಇನ್ನು ಮೇಲೆ ಇದೆಲ್ಲಾ ಬೇಡವೆಂದೆ. ಪ್ರತಿಯೊಂದು ಹೆಣ್ಣಿಗೂ ಅವಳದ್ದೇ ಆಸೆಗಳಿರುತ್ತವೆ, ಅವಳದ್ದೇ ಒಂದು ಪರಿಧಿಯಿರುತ್ತದೆ, ಅಂತೆಲ್ಲಾ ನಾನು ನನ್ನ ಪ್ರಮೇಯಗಳನ್ನು ಹಿಡಿದುಕೊಂಡು ಬಾಯಿಮಾತಲ್ಲಿ ಲಿಬೆರಲ್ನಂತೆ ವಾದಿಸುವುದನ್ನು ಪಾಲಿಸಲಾರದೇ ಹೋದೆ. ನೀನು ನನಗೆ ಬರೀ ಹೆಣ್ಣು, ಮೊಲೆ ತುಂಬಿದ ಹೆಣ್ಣು, ಅಲ್ಲಿ ನನ್ನ ಮೋರೇ ಹುದುಗಿಸಲು, ನನ್ನ ಸಾಂತ್ವನಕ್ಕೆ, ಅಹಂಕಾರಕ್ಕೆ ಅಂಟಿಕೊಂಡೇ ಇರಬೇಕಾದವಳು ಎಂಬಂತೆ ನಾನು ವರ್ತಿಸುತ್ತಿದ್ದೆ. ನನ್ನ ಹಾಗೆ ಪ್ರಮೇಯಗಳ ಸುಳಿಯಲ್ಲೇ ಮುಳುಗಿ ಒದ್ದಾಡದೇ, ಹೊರಗೆ ಅದೆಷ್ಟು ಹಗುರವಾಗಿದ್ದರೂ, ನಿನ್ನ ರಿಸರ್ಚ್, ಓದುಗಳ ಕಷ್ಟದ ನಡುವೆಯೂ ಕರಿಹುಡುಗನಿಗೆ ಉಚಿತ ಪಾಠ ಹೇಳುವ ಮೂಲಕ ನನ್ನ ಪೊಳ್ಳುತನ ತೋರಿಸುತ್ತಿದ್ದೆ. ಆ ವೀಕೆಂಡಿನ ದಿನ ನಿನ್ನನ್ನು ಬೋಸನೊಂದಿಗೆ ಡೌನ್‌ಟೌನಿನಲ್ಲಿ ನೋಡಿ, ನಾನು ಕ್ಷಣ ಬೆಂಕಿಯಾದದ್ದು ನೋಡಿ, ತುಸುವೇ ಆದ ಓರೆ ನಗೆಯಿಂದ ನನ್ನ ನಿಜವನ್ನು ನನಗೆ ತೋರಿಸಿದ್ದೆ.
ಆ ಬೋಸನೆಂದರೆ ನನಗೆ ಮೊದಲಿನಿಂದ ಒಗರೊಗರು. ನಾನಾಗ ಬಯಸುವುದನ್ನು ಈತ ಆಗಿದ್ದನೆ ಅಂತ. ನೊಬೆಲ್ ಪಾರಿತೋಷಕ ಪಡೆದವರೊಡನೆ ಒಂದೇ ಕೊಳದಲ್ಲಿ ಈಜಿದಾತನಲ್ಲವೇ ಅವ. ಕತ್ತಿನ ವರೆಗೆ ಕೂದಲು ಇಳಿಬಿಟ್ಟು, ಸದಾ ಟಿಪ್‌ಟಾಪಾಗಿ ಬಟ್ಟೆ ಧರಿಸಿ, ಒವರ್‌ಕೋಟ್ ಹಾಕಿಕೊಂಡು ಹಾವಭಾವ ದಿಂದ ಕೈಯಾಡಿಸುತ್ತಾ, ತಾನೊಬ್ಬ ಕಲಾವಿದನೂ ಹೌದು, ವಿಜ್ನ್ಯಾನಿಯೂ ಹೌದು, ಒಟ್ಟಾರೆ ತಾನೊಬ್ಬ ಅಪರೂಪದ ರಸಿಕ ಮೇಧಾವಿ ಎಂದು ಸಾರಿಹೇಳುವಂತೆ ಇದ್ದ ಅವ. ಮೂವತ್ತೈದರ ಗಡಿಯಲ್ಲಿದ್ದ ನಿಯಮಿತವಾಗಿ ಜಿಮ್ ಮಾಡಿದ ದೇಹ ಅವನದು. ಹೇಗೆ ಅವನ ಹೆಂಡತಿ ದೂರ ದೇಶದ ಇನ್ನೊಂದು ತೀರದಲ್ಲಿದ್ದರೂ ಹೇಗೆ ಒಬ್ಬರೊಬ್ಬರ ಖಾಸಗೀ ವಿಷಯಗಳಲ್ಲಿ ತಲೆಹಾಕುವುದಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳುತ್ತಿದ್ದ ಬೇರೆ. ಕೈಲಾಗದ ಭಾರತೀಯ ಹುಡುಗರಿಗೆ ಗಾಸಿಪ್ ವಿಷಯವಾಗಿ ಇನ್ನಷ್ಟು ರಂಗು ಪಡೆದಿದ್ದ. ನೀನವನಿಗೆ ಮರುಳಾಗಿದ್ದಿ ಅಂತ ನನಗೆ ಮೊದಲೇ ಸಂಶಯ.
ಈ ಕತ್ತಿನ ಕೂದಲಿನವರ ಬಗ್ಗೆ ಒಗರು ಬಂದದ್ದೆಲ್ಲಿಂದ ಹೇಳುತ್ತೇನೆ ಕೇಳು. ಹೀಗೆಯೇ ಕತ್ತಿನವರೆಗೆ ಕೂದಲು ಇಳಿಬಿಟ್ಟು, ವೈನ್ ಗ್ಲಾಸು ಹಿಡಿದುಕೊಂಡು ಮೈತೂಗಿಸುತ್ತಾ, ಅಂಥದೇ ಸೊಶಿಯಲೈಟ್ಗಳೊಡನೆ ಹರಟಬೇಕೆನ್ನುವ ಕನಸಿತ್ತು. ಇಂಗ್ಲೀಷ್ ಮ್ಯಾಗ್ಜಿನ್ ಓದುವ ಸ್ವಲ್ಪ ಬುದ್ಧಿವಂತರಾದ ಬ್ರಾಹ್ಮಣ ಹುಡುಗರಿಗೆಲ್ಲ ಒಂದು ವಯಸ್ಸಿನಲ್ಲಿ ಇರುವ ಖಯಾಲಿ ಅದು. ಮುಂಬೈಯಲ್ಲಿ ಕೆಲಸ ಹುಡುಕುತ್ತಾ ಖೊಲಿಯಲ್ಲಿ ಕೊಳೆಯುತ್ತಿದ್ದೆ. ರಸ್ಸೆಲ್, ಹಕ್ಸ್ಲೆಯ್ ಓದಿಕೊಂಡು. ಅಪ್ಪನಿಂದ ಊರಿನಿಂದ ದುಡ್ಡು ಬರ್ತಿತ್ತಾದ್ದರಿಂದ, ಕೆಲಸಕ್ಕೆ ಗೆಳೆಯರೆಲ್ಲ ಎಷ್ಟು ಒದ್ದಾಡಿಕೊಂಡಿರುತ್ತಿದ್ದರೋ, ಅಷ್ಟು ಒದ್ದಾಡದೆ, ಮರಾಠಿ ನಾಟಕ, ಸಿನೆಮಾ ಅಂತ ಸುತ್ತಿಕೊಂಡಿದ್ದೆ. ಅದೊಂದು ದಿನ ಅದ್ಯಾವುದೋ ಖ್ಯಾತ ಯುರೊಪಿಯನ್ ಕಲಾವಿದನ ಚಿತ್ರ ಪ್ರದರ್ಶನಕ್ಕೆ ಅಂತ ಆರ್ಟ್ ಗ್ಯಾಲರಿಗೆ ಹೋದೆ. ಅಲ್ಲೆಲ್ಲಾ ಇಂಥವರೇ. ದುಬಾರಿ ಪೈಜಾಮು, ಜುಬ್ಬಾ ಧರಿಸಿ ಒವರ್‌ಕೋಟ್ ಹಾಕಿಕೊಂಡ ಉದ್ದ ಅರೆನೆರೆತ ಕೂದಲಿನವರು, ಬಿಗಿಯಾಗಿ ಉಡುಪು ಧರಿಸಿ, ಕೂದಲು ಹಾರಿಸುವ, ನಗರದ ಪ್ರತಿಷ್ಠಿತ ಅರ್ಟ್ಸ್ ಕಾಲೇಜಿನವರೆಂದು ಊಹಿಸಬಹುದಾದ ಹುಡುಗಿಯರು, ಬಾಬ್ ಮಾಡಿ ತುಟಿಗೆ ಬಣ್ಣ ಮೆತ್ತಿದ ಹೆಂಗಸರು. ನೀನು ದಿಲ್ಲಿಯಲ್ಲಿ ಬೆಳೆದವಲ್ಲವೆ? ಅಂಥವರನ್ನೆಲ್ಲಾ ನೀನು ಹೆಚ್ಚು ನೋಡಿರುತ್ತೀ. ನಾನು ಮಾತ್ರ ಆ ವೇಷದ ಅಷ್ಟೊಂದು ಜನರನ್ನು ಒಟ್ಟಿಗೆ ಮೊದಲ ಬಾರಿ ಅಲ್ಲಿ ನೋಡುತ್ತಿದ್ದೆನೋ ಏನೋ. ಬೆರಗಿನಲ್ಲಿದ್ದೆ. ಸುಮಾರು ನಲ್ವತ್ತೈದೆಂದು ಅಂದಾಜು ಮಾಡಬಹುದಾದ, ಗುಲಾಬಿ ಕುರ್ತಾ ಧರಿಸಿದ `ಆತ’ ಕಣ್ಣು ಕುಣಿಸುತ್ತಾ, ಪಿಸ್ತಾ ಬಣ್ಣದ ಸೆಲ್ವಾರ್ ಧರಿಸಿದ್ದ ಖಾಸಗಿ ಟಿ.ವಿ.ಚಾನೆಲ್‌ನ ಹುಡುಗಿಗೆ ಮೈಕಿನಲ್ಲಿ ತುಂಬಾ ಎಕ್ಸೈಟ್ ಆದವನಂತೆ ಏನೋ ವಿವರಿಸುತ್ತಿದ್ದ. ನಾನು ನೋಡಲು ಚೆನ್ನಾಗಿದ್ದಳು ಅಂತ ಅವಳನ್ನೇ ದಿಟ್ಟಿಸುತ್ತಿದ್ದೆ. ಆಗಲೇ ಯಾವಾಗಲೋ ಆತ ನನ್ನನ್ನು ಗಮನಿಸಿರಬೇಕು. ಇಂಟರ್‌ವ್ಯೂ ಮುಗಿಸಿದವನೇ ಸೀದ ನನ್ನಬಳಿ ನಡೆದು ಬಂದ. ಬೆನ್ನ ಮೇಲೆ ಸ್ನೇಹದಿಂದ ಎಡ ಗೈಇಟ್ಟು, ಬಲಗೈ ಮುಂದೆ ಚಾಚಿ, ತಾನು ಇಂಥವನು, ಇಂತಿಂಥ ಕಲಾವಿದ ಅಂತೆಲ್ಲಾ ಪರಿಚಯಿಸಿಕೊಂಡ. ನನಗೆ ಗಾಬರಿ, ತುಸು ಸಂಭ್ರಮ. ಟಿ.ವಿ. ಇಂಟರ್‌ವ್ಯೂ ಕೊಡುವಂಥಾ ದೊಡ್ಡ ಮನುಷ್ಯ ನನ್ನನ್ನು ಗುರುತಿಸಿದನಲ್ಲಾ ಅಂತ. ಬೆನ್ನಿನ ಮೇಲಿಟ್ಟ ಕೈಯನ್ನು ಹೆಗಲ ಮೇಲೆ ತಂದು, ‘ನಿನ್ನ ನೋಡಿದರೆ ನನಗೆ ಪ್ರೀತಿ ಉಕ್ಕಿ ಬರುತ್ತದೆ’ ಅಂತ ಮಾರ್ದವ ತುಂಬಿ ಹೇಳಿದ. ಕರೆದೊಯ್ದು ಗ್ಯಾಲರಿಯಲ್ಲಿದ್ದ ಚಿತ್ರಗಳನ್ನೆಲ್ಲಾ ತೋರಿಸಿದ. ಹೇಗೆ ಯಾವ ಕೋನದಿಂದ, ಯಾವ ಬಣ್ಣ, ಯಾವ ಗೆರೆ ನೋಡಿದರೆ ಏನು ಕಾಣಿಸುತ್ತದೆ ಅಂತೆಲ್ಲಾ. ನನಗೇನು ಅಷ್ಟೊಂದು ಅರ್ಥವಾಗಿರಲಿಲ್ಲ ಅನ್ನು. ನನಗೆ ಅವನ ಈ ಅನಿರೀಕ್ಶಿತ ಸಂಗವೇ ಕಕ್ಕಾಬಿಕ್ಕಿಯಾಗಿಸಿತ್ತು. ಇವನೊಡನೆ ಹೇಗೆ ಒಗ್ಗಿಕೊಳ್ಳುವುದೆಂದು ತಿಳಿಯದೇ ಇಂಗ್ಲೀಷ್ ಮ್ಯಾಗ್ಜಿನ್‌ನ ಪುಟಗಳನ್ನೆಲ್ಲಾ ತಿರುವಿ ತಿರುವಿ ಸೆರೆ ಹಿಡಿಯಲು ಹೆಣಗುತ್ತಿದ್ದೆ. ಸಾಹಿತ್ಯ,ಸಿನೆಮಾ, ಕಲೆಯಲ್ಲಿ ಆಸಕ್ತಿಯಿರುವವ ಅಂತಾ ನನ್ನನ್ನು ಕೇಳಿ ತಿಳಿದವನೇ, ಮನೆಗೆ ಹೋಗಿ ಆರಾಮವಾಗಿ ಹರಟೋಣ, ಅಂತ ನನ್ನ ಹಿಂಜರಿಕೆಗಳನ್ನೆಲ್ಲಾ ನಿವಾಳಿಸಿ ಬಾಂದ್ರಾದಲ್ಲಿನ ತನ್ನ ಅಪಾರ್ಟ್ಮೆಂಟ್‌ಗೆ ಕರೆದೊಯ್ದ.
ನನಗೆ ಡ್ರಾಯಿಂಗ್ ರೂಮಿನಲ್ಲಿರಲು ಹೇಳಿ, ಆತ ಕೋಣೆಯೊಳಗೆ ಹೋದ. ಆತ ಒಂಟಿಯಾಗಿ ಇರುತ್ತಾನೆಂದು ಸಾರಿ ಹೇಳುತ್ತಿದ್ದ ದ್ರಾಯಿಂಗ್ ರೂಮಿನ ಅವಸ್ಥೆಯನ್ನು ನೋಡುತ್ತಾ, ಅಳುಕುತ್ತಾ ಬರಲಿರುವ ಕ್ಷಣಗಳಿಗಾಗಿ ಮುಜುಗರದಿಂದ ಕುಳಿತಿದ್ದೆ. ಮೂಲೆಯಲ್ಲಿ ಬೆಲೆಬಾಳುವ ಮ್ಯೂಸಿಕ್ ಸಿಸ್ಟಂ, ಅರೆ ಬರೆ ಗೀಚಿ ಎಸೆದಿದ್ದ ಕ್ಯಾನ್ವಾಸ್, ಬ್ರಶ್‌ಗಳು, ಬಣ್ಣದ ಕುಡಿಕೆಗಳು, ಟೀಪಾಯ್ ಮೇಲೆ ತುಂಬಿದ ಆಷ್ ಟ್ರೇ, ಇತ್ಯಾದಿ. ಶೆಲ್ಫಿನ ಮೇಲೆ ನನಗೆ ತುರಿಕೆಯಾಗುವಂತೆ, ಅಸ್ತವ್ಯಸ್ತವಾಗಿದ್ದ ಇಂಗ್ಲೀಷು ಪುಸ್ತಕಗಳು, ಯಾವಯಾವುದೋ ವಿಡಿಯೋ ಕ್ಯಾಸೆಟ್‌ಗಳು. ಆತ ಬರ್ಮುಡಾ ಧರಿಸಿ, ಒಂದು ಕಾಲರಿಲ್ಲದ ಟೀಶರ್ಟು ಧರಿಸಿಬಂದ. ಅವನ ವಯಸ್ಸಿನವರು ಬರ್ಮುಡಾ ಧರಿದ್ದನ್ನು ನಾನು ನೋಡಿದ್ದು, ಅದೇ ಮೊದಲು. ಊರಲ್ಲಿ ಇಂಜಿನೀಯರಿಂಗ್ ಮೆಡಿಕಲ್ ಓದಲು ಬಂದ ಕೆಲವರು ಬರ್ಮುಡಾ ಧರಿಸಿ ಓಡಾಡುವುದನ್ನು ನೋಡಿದ್ದೆ. ನಾನು ಮಾತ್ರ, ಊರು ಬಿಟ್ಟು ಮುಂಬೈಗೆ ಬಂದ ಮೇಲೂ ಖೋಲಿಯಲ್ಲಿ ಲುಂಗಿಯನ್ನೇ ಸುತ್ತುವುದು.
ಆತ ಯುರೋಪ್ ಸುತ್ತಿ ತೆಗೆದು ಕೊಂಡು ಬಂದ ಫೋಟೊ ಅಲ್ಬಂ ತಂದ. ಖುಶಿಯಾಗಿ ಆ ಪುಸ್ತಕ, ಈ ಸಿನೆಮಾ, ಆ ನಾಟಕ ಅಂತೆಲ್ಲಾ ಹರಟುತ್ತಾ, ಹತ್ತಿರವೇ ಸೋಫಾದ ಮೇಲೆ ಕುಳಿತು ಕೊಂಡು, ಅಲ್ಬಂ ಬಿಚ್ಚಿದ. ಯುರೋಪಿನ ಪ್ರಖ್ಯಾತ ನಗರಗಳ ಕಲೆಯ ಬೀದಿಗಳಲ್ಲಿ ಖ್ಯಾತ ಕಲಾವಿದರೋಡನೆ, ನಾಟಕಕಾರರೊಡನೆ ಕುಳಿತು ಕಾಫಿ ಕುಡಿಯುತ್ತಾ ಹರಟುತ್ತಾ ತೆಗೆಸಿಕೊಂಡ ಚಿತ್ರಗಳು. ಅವನ ಬಗ್ಗೆ ಅಲ್ಲಿ ಇಲ್ಲಿ ಬಂದ ಆರ್ಟಿಕಲ್‌ಗಳು, ಒಂದೆರಡು ಪುಸ್ತಕಗಳ ಯವುದೋ ಮೂಲೆಯಲ್ಲಿ ಇವನ್ ಕಲೆಯ ಬಗ್ಗೆ ಚರ್ಚೆ ಒಂದೆರಡು ಪ್ಯಾರಾಗಳಲ್ಲಿ. ಇಷ್ಟೆಲ್ಲಾ ನಡೆಯುವಾಗ ಅವನ ಕೈ ನನ್ನ ತೊಡೆಯನ್ನು ನೀವುತ್ತಿತ್ತು. ನನಗೆ ತಡೆಯಲಾಗಲಿಲ್ಲ. ಎದ್ದು ಸೌಮ್ಯವಾಗಿ ಬಿಡಿಸಿಕೊಂಡು ನಿಂತು ಇನ್ನೇನೋ ಮಾತಾಡಿದೆ. ಫೊಟೋದಲ್ಲಿದ್ದ ನಗರವೊಂದರ ಇತಿಹಾಸದ ಬಗ್ಗೆ. ನನ್ನ ಪ್ರಮೇಯಗಳ ಈ ಇನ್ನೊಂದು ಮಗ್ಗಲು ಕಂಡು ಭಯವಾಗಿ ಇಲ್ಲೆಲ್ಲಾದರೂ ತುರ್ತು ಬಾಗಿಲಿದೆಯೋ ಅಂತ ಹುಡುಕುತ್ತಿದ್ದೆ. ಅವನೂ ಎದ್ದು ನಿಂತ, ಮಾತಾಡುತ್ತ, ಭುಜದ ಮೇಲೆ ಎರಡೂ ಕೈಟ್ಟು, ಮೈ ಮೂಸಿದ. ಕುಂಡೆಗೆ ಏನೋ ಬಿರುಸಾದದ್ದು ತಗಲುತ್ತಿದೆ ಅನಿಸಿತು. ನನ್ನ ಕಲ್ಪನೆ ಇರಬಹುದು. ಅದೆಲ್ಲಿಂದ ಯಾವ ಶಕ್ತಿ ಬಂತೋ, ತಿರುಗಿ ನಿಂತೆ, `ಭಾರತೀಯ ಸನಾತನ ಸಂಸ್ಕೃತಿ’ ಅಂತೆಲ್ಲಾ ಸಿಟ್ಟಿನಿಂದ ಏನೇನೋ ಬಾಯಿಗೆ ಬಂದದ್ದು ಬಡಬಡಿಸಿದೆ. ಆತ ಶಾಂತವಾಗಿಯೇ ಇದ್ದ. `ಪ್ರೀತಿ ದೈಹಿಕವಾದರೆ ತಪ್ಪಿಲ್ಲ’ ಅಂದ. ತಾನು ಮತ್ತು ಅದ್ಯಾವುದೋ ಯುರೋಪಿನ ಖ್ಯಾತ ನಟ, ರಾತ್ರಿಯೆಲ್ಲಾ, ನಾಟಕಶಾಲೆಯ ಡ್ರೆಸ್ಸಿಂಗ್ ರೂಮಿನಲ್ಲಿ ಕಲೆಯನ್ನು ಹರಟುತ್ತಾ, ಪ್ರೀತಿಮಾಡಿ ಬಿಡುಗಡೆ ಪಡೆದದ್ದನ್ನು ಮನಮುಟ್ಟುವ ಮಾತಲ್ಲಿ ವಿವರಿಸಿದ. `ನೀನು ಮೈಥುನ ಮಾಡುವುದಿಲ್ಲವೇ?’ ಅಂತ ಕೇಳಿದ. ಉಗುಳು ನುಂಗುತ್ತಾ ಇಲ್ಲವೆಂದೆ. ಉದಾತ್ತನಾಗಿ `ನೀನಿನ್ನು ಹೋಗಬಹುದು ಅಂದ’.
ಬಾಂದ್ರಾದಿಂದ ಖೋಲಿಗೆ ಮರಳುವಾಗ ಯಾರೋ ಏನನ್ನೋ ಹೊಡೆದು ಸಾಯಿಸಿದಂತೆ. ಅಪ್ಪನ ಕೈಹಿಡಿದು ಕೊಂಡು ವೀರೂಪಾಕ್ಷ ದೇವರ ಗುಡಿಯ ಹಜಾರ ಸುತ್ತುತ್ತಾ, ಗೋಡೆಯ ಮೇಲಿನ ಕಾರ್ಕೋಟಕ ಸುತ್ತು ಮುಗಿಸಿದರೆ ಯುಗ ಮುಗಿಯುತ್ತದೆ ಅಂದದ್ದನ್ನು ನಾನು ಬೆರಗಿನಿಂದ ನಂಬಿ ನೋಡುತ್ತಿದುದು ನೆನಪಾಯಿತು. ಕಾರ್ಕೋಟಕ ಸುತ್ತು ಮುಗಿಸಿತೇನೋ ಅಂದು ಕೊಂಡೆ. ಆದರೆ ಇದೆಲ್ಲ ಸಿಟ್ಟು, ದುಖ ಮುಗಿಯುವವರೆಗೆ ಮಾತ್ರ ಅನಿಸಿದ್ದು. ಆಮೇಲೆ ಅವನನ್ನು ಅಲ್ಲೇ ನನ್ನ ಪ್ರಮೇಯಗಳ ಪಟ್ಟಲ್ಲೇ ಸೋಲಿಸಬೇಕಿತ್ತು ಅಂತ ಅನಿಸಿತ್ತು. ಉದ್ದಕ್ಕೂ ಸವಿತಾಳ ನೆನಪಾಗುತ್ತಿತ್ತು.
ಈ ಬೋಸನನ್ನು ನೋಡಿದರೆ ಹಿಂದೆ ನಾನು ನೋಡಿದ `ಆತ’ನ ಭೂತ ಕಂಡಂತಾಗುತ್ತದೆ. ಆವೋತ್ತು ಈ ಬೋಸ “ನನಗೆ ಎದುರು ಬಂದರೆ ಮುದುರುವ ಹುಡುಗಿಯರನ್ನು ಕಂಡರೆ ಆಗೊಲ್ಲ” ಅಂತಿದ್ದ ನೋಡು. “ಥತ್” ಅಂತ ಅವನ ಮೇಲೆ ಜಿಗುಪ್ಸೆಯಾಗಿಬಿಟ್ಟಿತು.
*
*
*
ನಿನಗೆ ಸವಿತಾಳ ಬಗ್ಗೆ ಹೇಳಬೇಕು. ಊರಲ್ಲಿ ಮನೆಯ ಎದುರು ಸಾಲಲ್ಲಿ ಅವಳ ಮನೆ. ರಾತ್ರಿಯ ಮೈಥುನಕ್ಕೆ ಅಂತ ಬೇರೆ ಹುಡುಗಿಯರು ಇದ್ದರು ಅನ್ನು. ಇವಳು ಮಾತ್ರ ನನ್ನ ಪಾಲಿಗೆ ಏನೋ ಬೇರೆ. ಇವಳ ಪಾಲಿಗೆ ಅಂತ, ಪಡಬಾರದ ಕಷ್ಟ ಪಟ್ಟು, ಕೊಡಬೇಕಾದವರಿಗೆಲ್ಲಾ ಲಂಚ ಕೊಟ್ಟು, ಬೀಳಬೇಕಾದವರ ಕಾಲನ್ನೆಲ್ಲಾ ಬಿದ್ದಾದ ಮೇಲೆ ಗಿಟ್ಟಿಸಿಕೊಂಡ ತೀರಿಹೋದ ಅಪ್ಪನ ನೌಕರಿ ಮಾಡುತ್ತಿದ್ದ ಅಣ್ಣ ಅಂತ ಒಬ್ಬ ಇದ್ದ. ಇವಳ ಮೇಲೆ ಅಧಿಕಾರ ಚಲಾಯಿಸಲಿಕ್ಕೆ ಅಂತ. ಆಗಾಗ ಪಗಾರದಲ್ಲಿ ಬಂದ ದುಡ್ಡಿನಿಂದ ಅಚ್ಛೆ ಕೂಡ ಮಾಡ್ತಿದ್ದ ಅನ್ನು. ನಿತ್ಯ ಮುಂಜಾನೆ ಮೈ ಎರೆದುಕೊಂಡು ಟೊಂಕದವರೆಗೆ ಬೀಳುತ್ತಿದ್ದ ಜಡೆಯನ್ನು ಎತ್ತಿ ಕಟ್ಟಿ, ರಂಗೋಲಿಯಿಂದ ಪಣತಿ ಬಿಡಿಸುತ್ತಾ, ಅದರಲ್ಲಿ ಅರಿಷಿಣ ತುಂಬಿ ಹೊತ್ತಿಸುವ ಬೆಳಕಲ್ಲಿ ನಾನವಳನ್ನು ನೋಡುತ್ತಿದ್ದೇನೆ ಅಂದುಕೊಳ್ಳುತ್ತಿದ್ದೆ. ಈಗ ಯೋಚಿಸಿದರೆ ನಾನಿನ್ನೂ ಆಗ ಕ್ಲಾಸಿಕ್ ರೋಮ್ಯಾಂಟಿಕ್ ಸಾಹಿತ್ಯಗಳ ಹಂತದಲ್ಲೇ ಇದ್ದುದ್ದರಿಂದಲೋ, ಇಲ್ಲಾ ಆಗ ನಾನು ನೋಡತೊಡಗಿದ್ದ ಅದ್ದೂರಿ ಸಿನೆಮಾಟಗ್ರಫಿಯ ತಮಿಳು ಚಿತ್ರಗಳ ಪ್ರಭಾವದಿಂದಲೋ ಅಂತ ಅನಿಸುತ್ತದೆ. ನಮ್ಮ ಮನೆಯ ವಿಶೇಷ ಪೂಜೆ, ಪುನಸ್ಕಾರ, ವ್ರತ ಅಂತ ಬರೋಳು. ಯಾರ ಜೊತೆಯೂ ಹೆಚ್ಚು ಮಾತಾಡುವವಳೇ ಅಲ್ಲ. ಗಂಭೀರವಾಗಿ ಇರೋಳು. ನಾನು ಹೆಣ್ಣುಮಕ್ಕಳಿದ್ದಾಗ ಪಡಸಾಲೆಗೆ ಬರುತ್ತಿರಲಿಲ್ಲ. ಸೀರೆ ಉಟ್ಟುಬಂದು ಲಕ್ಷಣವಾಗಿರ್ತಾಳೆ ಅಂತ ನನಗೆ ನೋಡೋ ಸಂಭ್ರಮ. ಅಂತೂ ಯವುದೋ ನೆಪದಲ್ಲಿ ಪಡಸಾಲೆಯಲ್ಲಿ ನಾನು ಹಾದು ಹೋದರೆ ಇಬ್ಬರೂ ಒಬ್ಬರೊಬ್ಬರ ಸಂಭ್ರಮ ಗುರುತಿಸಿ ಗರಿಗೆದರೋದು. ನಿತ್ಯ ಮಧ್ಯಾಹ್ನ ನನ್ನ ಕಾಲೇಜಿಗೆ ಬಿಡುವಾದಾಗ ನಾನವಳ ಕಾಲೇಜಿಗೆ ಹೋಗೋದು. ಮೈನ್‌ಗೇಟಿನಲ್ಲಿ ನಾನು ಬರುತ್ತೇನೆ ಅಂತ ಅವಳು ಕಾದುಕೊಂಡಿರಬೇಕು. ಇಬ್ಬರೂ ಒಬ್ಬರನ್ನೊಬ್ಬರು ನೋಡುವುದು, ಅಷ್ಟೇ. ಮಾತಿಲ್ಲ, ಕತೆಯಿಲ್ಲ. ಇವತ್ತಾದರೂ ಇವಳಿಗೆ ಏನಾದರೂ ಹೇಳಬೇಕು ಅಂದುಕೊಳ್ಳುವವ ಹಾಗೆ ತಿರುಗಿ ಬಂದುಬಿಡೋನು. ನನ್ನ ಮೇಲೇ ಸಿಟ್ಟಿಗೇಳೋನು ಅನ್ನು. ಹಬ್ಬ, ಹರಿದಿನ, ಶ್ರಾದ್ಧ, ಸ್ವಾಮಿಗಳ ಪಾದಪೂಜೆ ಅಂತೆಲ್ಲಾ ಇದ್ದರಂತೂ ಮುಗಿಯಿತು ಆ ದಿನ ಅವಳು ಕಾಲೇಜಿಗೆ ಹೋಗುವ ಹಾಗೇ ಇರಲಿಲ್ಲ.
ನಮ್ಮ ಕಾಲೇಜಿನಲ್ಲಿ ಮಹಾಂತೇಶ ಅನ್ನೋ ರೌಡಿಯಿದ್ದ. ವತ್ಸಲಾ ಅನ್ನೋ ನಮ್ಮ ಓಣಿಯ ಹುಡುಗಿಯ ಹಿಂದೆ ಓಡಾಡುತ್ತಿದ್ದ. ವತ್ಸಲಾ ಸ್ವಲ್ಪ ಜೋರು ಹುಡುಗಿ. ಮನೆಯಿಂದಲೂ ಸ್ವಲ್ಪ ಉಳ್ಳವರು. ಎಲ್ಲರಿಗಿಂತ ಮೊದಲು ಅವರ ಮನೆಯಲ್ಲಿ ಕೇಬಲ್ ಟಿ.ವಿ. ಬಂದಿತ್ತು. ಕಾಲೇಜಿನಲ್ಲಿ ಹುಡುಗರೊಂದಿಗೆ `ಹೋಗು , ಬಾ’ ಅಂತ ಸಲಿಗೆ ಅವಳಿಗೆ. ಹಾಗಂತ ವಠಾರದ ಹಿರಿಯ ಹೆಂಗಸರಿಗೆ ಮೂಗು ತಿರುವಿ ಮಾತಾಡುವಷ್ಟು ಸಸಾರ. ಅವಳ ಅಪ್ಪನದು ಮಾತ್ರ ಶುದ್ಧ ರಾಜಕೀಯ ಬುದ್ಧಿ. ತೆರಿಗೆ ಇಲಾಖೆಯಲ್ಲಿ ನೌಕರಿ. ಅದಕ್ಕೂ ಅವರ ಶ್ರೀಮಂತಿಕೆಗೂ ಏನಾದರೂ ಸಂಬಂಧವೋ ಅಂತ ನನಗೆ ಗೊತ್ತಿಲ್ಲ. ಮೊದಲು ಮೊದಲು ಈ ಮಹಾಂತೇಶನಿಗೆ ಇವಳು ಸೊಪ್ಪುಹಾಕಿರಲಿಲ್ಲ. ಮಹಂತೇಶನ ರೌಡಿತನ ನನ್ನ, ಕಿಟ್ಟ್ಯಾ, ದತ್ತೂರ ನಡುವೆ ಚರ್ಚೆಗೆ ಬರ್ತಿತ್ತು. ಯಾವ ಗೆಳೆಯರಿಗಾಗಿ ಯಾವ `ಲಫಡಾ’ದಲ್ಲಿ ಚೈನು ಉಪಯೋಗಿಸಿದ, ಹಾಕಿ ಸ್ಟಿಕ್ ಉಪಯೋಗಿಸಿದ ಅಂತೆಲ್ಲ. ಮುಂದೆ ಒಂದು ದಿನ ಮಹಂತೇಶವತ್ಸಲಾ ಇಬ್ಬರೂ ಸೇರಿ ಸಿನೆಮಾಗೆ ಹೋಗಿದ್ದನ್ನು ಕಿಟ್ಟ್ಯಾ ವರದಿ ಮಾಡಿದ. ಎದುರಿಗೆ ಸಿಕ್ಕಾಗ ಮಹಾಂತೇಶ ನನ್ನನ್ನು ಮಾತ್ರ ತುಂಬಾ ಸ್ನೇಹ, ಗೌರವದಿಂದ ಮಾತಾಡಿಸುತ್ತಿದ್ದ. ಮುಂದೊಂದು ದಿನ ಮಹಾಂತೇಶ ವತ್ಸಲಾಳ ಮನೆಯ ಬಾವಿ ಹಾರಿದ ಅಂತ ಸುದ್ದಿ. ಯಾರೋ ದೂಡಿದರು ಅಂದರು ಇನ್ನು ಕೆಲವರು. ಮಹಾಂತೇಶ ಹಾಗೆಲ್ಲ ಹೊರಗೆ ರೌಡಿಯ ಹಾಗಿದ್ದರೂ, ಒಳಗೆ ಶುದ್ಧ ಹೆಣ್ಣು ಅಂತಾ ನಾನು ಕಿಟ್ಟ್ಯಾ,ದತ್ತೂ ಮಾತಾಡಿಕೊಂಡಿದ್ದು. ವಠಾರದಲ್ಲಿ ಮಾತ್ರ ಸುಮಾರು ದಿನ ಒಂದು ಬಗೆಯ ರಣಕಳೆ ಇತ್ತು. ನಾನು ಸವಿತ ನಾಲ್ಕುದಿನ ನಮ್ಮ ಕಣ್ಣಿನ ಮಾತು ಆಡಿರಲಿಲ್ಲ. ನನಗೆ ಈ ಊರಿನಿಂದ ಬಿಡುಗಡೆ ಸಿಕ್ಕರೆ ಇವಳನ್ನೂ ಬಿಡುಗಡೆ ಮಾಡುತ್ತೇನೆ ಅಂದುಕೊಳ್ತಿದ್ದೆ. ಮುಂದೆ ಮೇಲೇರುವ ಆಸೆ ಬೆಳೆದಂತೆಲ್ಲಾ ಆ ಯೋಚನೆ ಬಿಟ್ಟೆ ಅನ್ನು. ಅವಳ ಭವಿಷ್ಯದ ಕಾಳಜಿಯಿದ್ದ ವಠಾರದ ಮಂದಿಎಲ್ಲ ಅವಳ ಅಣ್ಣನ ಜೊತೆ ಸೇರಿ ಅವಳಿಗೊಂದು ಗಂಡು ನೋಡಿ ಮದುವೆ ಮಾಡಿದರು.
*
*
*
ಹೀಗೆ ನಾನು ಬೆಳೆದ ವಾತವರಣದಿಂದ ನೋಡಿದರೆ ಇದೆಲ್ಲಾ ಹೇಗೆ ಹೊರತು ಅಂತ ಮೈಕಿ ಜೊತೆ ಚರ್ಚೆ ಮಾಡಲಿಕ್ಕೆ ಹೋದರೆ ಅವನ ತಲೆಯಲ್ಲಿ ಇದೆಲ್ಲಾ ಹೋಗುವುದೇ ಇಲ್ಲ. ‘ಸ್ವೈರಿಣಿ’ಯರು ಅಂತ ತನ್ನದೇ ಆಕ್ಸೆಂಟಿನಲ್ಲಿ ನಾನು ಕೊಟ್ಟ ಅಲ್ಲನ್ ಡೆನಿಯಲ್‌ನ ಕಾಮಸೂತ್ರ ಕೋಟ್‌ಮಾಡ್ತಾನೆ. ಒಂದೊಂದು ಸಾರಿ ಇವನಲ್ಲೂ ಕುಳಿಯಿದೆ ಅನ್ಸುತ್ತೆ. ಈಗಾಗಲೇ ಇಬ್ಬರು ಗರ್ಲ್‌ಫ್ರೆಂಡ್‌ಗಳನ್ನು ಬದಲಾಯಿಸಿ ಮೂರನೆಯವಳ ಜೊತೆ ಸ್ಟಡಿ ಇದ್ದಾನೆ. ಗಂಡು ಹೆಣ್ಣಿನ ವಿಷಯದಲ್ಲಿ ನಮಗಿಂತ ಪಕ್ವ ಆಗಿದ್ದಾನೆ. ಇವನ ಅಜ್ಜಿ ತುಂಬಾ ಧಾರ್ಮಿಕಳಂತೆ. ಇವನನ್ನು ವಾರಕ್ಕೊಮ್ಮೆಯಾದರೂ ಚರ್ಚಿಗೆ ಹೋಗು ಅಂತ ಪೀಡಿಸ್ತಾಳೆ. ನನ್ನಂತೆ ಅವನದೇ ಆದ ಪ್ರಮೇಯಗಳ ಹುಚ್ಚು ಅವನಿಗೆ. ಅದು ಸಾಧ್ಯವಿಲ್ಲ ಅಂತಾನೆ. ತನಗಿಂತ ಎಂಟಹತ್ತು ವರ್ಷ ಕಿರಿಯ ಹುಡುಗ ಹುಡುಗಿಯರು ತೀರ ಸಡಿಲಾಗಿ ವರ್ತಿಸುವರೆಂದೂ, ಈ ಸೆಕ್ಸುವಲ್ ಲಿಬರಲೈಸೇಷನ್ ನಮ್ಮನ್ನೆತ್ತ ಕರೆದೊಯ್ತಿದೆ ಅಂತಲೂ ಗೊಣಗುತ್ತಾನೆ. ಮೈಕಿ ನಾನು ಕೊಟ್ಟ ರಾಜಾಜಿ ಮಾಹಭಾರತವನ್ನು ಓದಲಿಕ್ಕೆ ಅಂತ ಕಕ್ಕಸಿಗೆ ಒಯ್ತಾನಲ್ಲಾಂತ ನನಗೆ ಕಸಿವಿಸಿಯಾಗ್ತದೆ. ನನ್ನದೇ ಕುಳಿ ಕಾಣ್ತದೆ.
*
*
*
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ಆಗ ತಾನೆ ಬಾಣಂತಿತನ ಮುಗಿಸಿ ಗೌರೀ ದಾರ ಕಟ್ಟಿಕೊಂಡು ಬಂದ ಕನ್ನಡ ಟೀಚರ್ರು “ಪರಮಹಂಸರು ಶಾರದೆಯನ್ನು ಮಾತೆಯೆಂದೇ ಭಾವಿಸಿ ಪೂಜಿಸುತ್ತಿದ್ದರು” ಎಂಬುದನ್ನು ಕೇಳಿ `ಆಹಾ’ ಎಂಬ ಧನ್ಯತೆಯ ಭಾವ ಮೂಡುತ್ತಿತ್ತಲ್ಲ. ಅದನ್ನು ಯಾರು, ಯಾವಾಗ ಕಸಿದುಕೊಂಡರು? ಇಲ್ಲಾ ನಾನೇ ಒದ್ದೆನೋ? ಒದ್ದೆನಾದರೆ, ಗೆದ್ದೆನೋ? ಇಲ್ಲಾ ಗೆದ್ದಲು ಹಿಡಿದೆನೋ? ಪತ್ತೆಯೇ ಆಗುವುದಿಲ್ಲ.
ಇಲ್ಲಿಯವನೇ ಒಬ್ಬ ಪ್ರಮೇಯಗಳನ್ನು ಕೊಚ್ಚಿ, ಕತ್ತರಿಸಿ, ಪರಮಹಂಸರನ್ನು ಬಯಲು ಮಾಡಿದ್ದೇನೆ ಅನ್ನುವ ಪುಸ್ತಕ ಬರೆದಿದ್ದಾನಂತೆ. ಓದುವ ಧೈರ್ಯವಾಗುದಿಲ್ಲ.
*
*
*
ಶ್ಲೋಕದಲ್ಲಿ ಬರುವ ಶಿವ ಮತ್ತು ನನ್ನ ಪ್ರಮೇಯಗಳ ಅನುಗುಣವಾಗಿ ಬರುವ ಸೃಷ್ಟಿಶಕ್ತಿ ಇವುಗಳ ನಡುವೇನೂ ಕುಳಿಯಿಲ್ಲ ಎಂದುಕೊಂಡು ನಾನು ಮೆಚ್ಚುವ:
ಘಟೇಭಿನ್ನೇ ಘಟಾಕಾಶಂ ಸುಲೀನಂ ಭೇದವರ್ಜಿತಂ
ಶಿವೇನ ಮನಸಾ ಶುದ್ಧೋ ನ್ ಭೇದಃ ಪ್ರತಿಭಾತಿ ಮೇ|
ನ ಘಟೋ ನ ಘಟಾಕಾಶೋ ನ ಜೀವೋ ಜೀವವಿಗ್ರಹಃ
ಕೇವಲಂ ಬ್ರಹ್ಮ ಸಂವಿದ್ಧ ವೇದ್ಯವೇದಕವರ್ಜಿತಂ||
ಎಂಬ ಈ ಅವಧೂತಗೀತೆಯ ಸಾಲುಗಳು ಒಳಗೆ ಇಳಿದುಬಿಡುವುದು ನಿಜವೋ ಇಲ್ಲಾ ಬರೀ ಸಂಸ್ಕೃತದ ಸುಖವೋ ಎಂಬುದು ಗೊತ್ತೇ ಆಗುವುದಿಲ್ಲ.
*
*
*
…ನೀನು ಮಾತ್ರ ಹೀಗೆ ಪ್ರಮೇಯ, ವಿಜ್ನ್ಯಾನ, ನಿತ್ಯ ಜೀವನ, ಎಲ್ಲಾ ಸೇರಿ ಕಲಸುಮೇಲೋಗರ ಮಾಡಿಕೊಂಡು ಕೊರಗಬೇಡ. ನಡಿ ನನಗೆ ಈ ಗದ್ದಲ ತಡೀಲಿಕ್ಕೆ ಆಗ್ತಿಲ್ಲ” ಅಂತ ಶೀಲ ಹಗುರವಾಗಿ ನಕ್ಕು, ಶ್ರೀಧರನ ಕೈಹಿಡಿದುಕೊಂಡು ಮಬ್ಬುಗತ್ತಲಿನ ಪಬ್‌ನಿಂದ ಹೊರನಡೆಯುತ್ತಾಳೆ.
*****