ಐಕ್ಯದ ಹಂಬಲ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ನನಗೀಗ ವೈನ್ ಬೇಡ, ಅಶುದ್ಧ ಮಧುವೂ ಬೇಡ, ಶುದ್ಧವೂ ಬೇಡ
ನನಗೀಗ ನನ್ನ ರಕ್ತವೇ ಬೇಕು
ಯುದ್ಧದ ಸಮಯ ಬಂದಿದೆ

ಚೂಪಾದ ಖಡ್ಗ ಎಳೆದಿಡು, ದೇಹ ಕತ್ತರಿಸು
ರುಂಡವಿಲ್ಲದ ಮುಂಡ ಹಾರಾಡಿಸು

ಮಾಡು ಸ್ವಂತ ರಕ್ತದ ಸಮುದ್ರ, ತಲೆ ಬುರುಡೆಗಳ ಬೆಟ್ಟ ಮಾಡು
ಈ ಮಣ್ಣು ಮರಳೆಲ್ಲ ರಕ್ತ ಕುಡಿಯಲಿ ಬಿಡು

ನನ್ನ ಹೃದಯ ಬಲ್ಲವ ನೀನು, ನನ್ನ ಬಾಯಿ ಕಟ್ಟಬೇಡ
ಹೃದಯ ಒಡೆದು ಚಿಮ್ಮಿಸು, ರಕ್ತನಾಳ ಹರಿದ ಚೂರಾದೀತು

ಈ ಬೊಬ್ಬೆಗೆ ಕಿವುಡಾಗು, ವಿಶೇಷ ಕೃಪೆಯ ಅಗತ್ಯವಿಲ್ಲ
ದೊರೆತನದ ದರ್‍ಪ ಕೈ ಕಸೂತಿಯಲ್ಲ

ನಾನು ಹೋಗುತ್ತೇನೆ ಅಗ್ನಿ ಹೃದಯಕ್ಕೆ, ಅಗ್ನಿಗಾಗುತ್ತೇನೆ ಸಮಿತ್ತು
ಗಂಧಕದ ಗರ್‍ಭವೇ ಸೀಳಿದೆ ಎಂಬ ಭವಿಷ್ಯ ಕೇಳಿ ಬಂತು

ಧಗಧಗನೆ ಉರಿವ ಬೆಂಕಿಯೆ ನಮ್ಮ ಕೂಸು, ನಮ್ಮ ಕರುಳ ಕುಡಿ
ಪ್ರಜ್ವಲಿಸಿದೆ, ನಾವೀಗ ಭೇದವಿರದ ಜೋಡಿ

ಬೆಂಕಿ ಏಕೆ ನಿಟಿನಿಟಿಲೆಂದು ಸಿಡಿಯುತ್ತಿದೆ, ಕಿಡಿ ಹಾರಿದೆ
ದ್ವಂದ್ವದ ಬಣ್ಣಗಳು ಉಳಿದಿವೆ, ಹೊತ್ತಿ ಉರಿದೂ ಭೇದ ತಲೆದೋರುವುದೆ?

ಅರೆಸುಟ್ಟು ಹಾರಿದರೆ ಕಲ್ಲಿದ್ದಲಾಗಿ
ಎದೆಯೊಡೆದು ಮುಖ ಸೀದು ಹಂಬಲಿಸಿ ಐಕ್ಯಕ್ಕಾಗಿ

ಬೆಂಕಿ ಹೇಳುತ್ತದೆ- “ಹೋಗು, ನೀನು ಕಪ್ಪು, ನಾನು ಶ್ವೇತ
ನನ್ನ ಮಾರ್‍ನುಡಿ- “ನೀನು ಉರಿದಿದ್ದಿ, ನಾನು ಜೀವಂತ”

ಇದಕ್ಕೆ ಈ ಕಡೆ ಮುಖವಿಲ್ಲ, ಅದೂ ಆ ಕಡೆ ಮುಖಹೀನ
ಸ್ನೇಹ ಜೋಡಿಯ ನಡುವೆ ಕಗ್ಗತ್ತಲ ಭಿನ್ನ

ಆ ಸ್ಥಿತಿಯಲ್ಲಿ ಪರದೇಶಿಯಾದ ಭಕ್ತ, ಒಳಗೆ
ಬಂದು ಬಳಿಗೆ ಸೇರಲಾರ, ಹೋಗಲಾರ ದೊರೆಯ ಸನ್ನಿಧಿಗೆ

ಆತ ಪಕ್ಷಿ ಸಂಕುಲದ ದೊರೆ, ಗರುಡನಂತೆ
ಆಕಾಶದ ದಾರಿ ಕಾಣದೆ, ಬೆಟ್ಟದ ಮೇಲಿನ ಬಂದಿ

ಹೋ, ತಲೆ ಹರಟೆಯೆ, ಅಪ್ಪಳಿಸು ಬಂಡೆಗೆ ಈ ಪಾತ್ರೆ
ನಾನು ನದಿಯ ನೀನು ಎಳೆಯೆ, ನೀರಿಗೆ ಕೈಯೊಡ್ಡೆ

ನೀರು ಹೊರುವುದೆ ಬಿಡುತ್ತೇನೆ, ಮುಳುಗಿ ಕಡಲೊಳಗೆ
ಸಮರ ಸಂಘರ್ಷಗಳಿಗೆ ಹೊರಗಿದ್ದು, ಎಲ್ಲ ವರ್‍ಣನೆಗಳಾಚೆಗೆ ಹಾರುತ್ತೇನೆ

ಭೂಮಿಯೊಳಗಿನ ಶುದ್ಧ ಚೈತನ್ಯದ ಹಾಗೆ
ನವ ಮಧುವಿನಂಥ ಆ ಶರೀರಕ್ಕೆ ಪೃಥ್ವಿಯೇ ಶಮನದ ಸಜ್ಜೆ
*****