ಹುಲ್ಲು ಗದ್ದೆಯ ಹೂವು ನೆಲದೆದೆಯನಪ್ಪಿದೊಲು
ಅನಿತು ನನ್ನೆದೆ ಸನಿಹಕಿರುವಳವಳು;
ದಣಿದ ಅವಯವಗಳಿಗೆ ನಿದ್ದೆ ಮುದ್ದಾದಂತೆ
ನನಗನಿತು ಸವಿಯಾಗಿ ತೋರಿದವಳು.
ತನಿ ಶರತ್ಕಾಲದಲ್ಲಿ ಅರ್‍ಪಣಾನಂದದಲಿ
ನದಿ ಮಹಾಪೂರದಿಂದೋಡುವಂತೆ
ತುಂಬಿ ಹರಿಯುವ ನನ್ನ ಬಾಳು; ಅವಳಲ್ಲಿರುವ
ಪ್ರೇಮಬಾಹುಳ್ಯವನೆ ಸಾರ್‍ವುದಂತೆ!
ತೊರೆಯ ಮರ್‍ಮರ ಝರಿಯ ತೆರೆಯ ಮೇಳಾಪದಲಿ
ಸಾಮರಸ್ಯದ ಸಾಮಗಾನದಲ್ಲಿ
ಹಾಡುವೊಲು ನನ್ನ ಹಾಡುಗಳೆಲ್ಲ ಏಕಲಯ-
ವಾಗಿಹವು ನನ್ನೊಲವಿನಾಳದಲ್ಲಿ.
“Lover’s Gift “-4.
-ಗೆ
೧
ಒಲವು ಬೆಸುಗೆಗೊಂಡ ಒಸಗೆ-
ಗಾವ ಹಾಡು ಹಾಡಲಿ?
ಹೇಳು ಕೆಳದಿ ನಿನ್ನ ಚೆಲುವಿ-
ಗಾವ ನುಡಿಯ ತೊಡಿಸಲಿ?
ನನ್ನ ಹೊನ್ನ ಕನಸು ನಿನ್ನ
ರೂಹುವಡೆದು ಬಳಿಯಲಿ
ಕುಳಿತು ನಲಿಯುತಿರಲು ಮುಗುದೆ
ಹೆಚ್ಚಿಗೇನು ಬೇಡಲಿ?
೨
ನಿನ್ನ ಕಂಡ ಚಣದೊಳೆನ್ನ
ಕಂಗಳ ಬರ ಹಿಂಗಿತು;
ನೂರು ನೋವನೆಲ್ಲ ಮರೆಸಿ
ಸ್ವರ್‍ಗ ಹೂವ ಸುರಿಸಿತು;
ಸುಳಿವ ಗಾಳಿ ಅಳಿಯದಂಥ
ಪ್ರೀತಿಗಂಧ ತಂದಿತು,
ಜೀವ ಬಯಸಿದಂಥ ಜೇನಿ-
ನಲ್ಲಿ ಆತ್ಮ ಮಿಂದಿತು.
೩
ನಾದಲಹರಿಯೊಡನೆ ಬಂದ
ನೀನು ಹಾಡಿನೊಡತಿಯು,
ಒಲಿದು ಒಲಿಸಿಕೊಂಬ ನಗೆಯೆ
ನಿನ್ನ ನಯದ ನಡತೆಯು.
ಮಾತು ಪಾರಿಜಾತ ಪುಷ್ಪ-
ದಂತೆ ಮೃದುಲ ಕೋಮಲ,
ಹದುಳದಿಂದ ಒಡಪಿನಿಂದ
ಪಡೆದ ಭಾವನೋಜ್ವಲ!
೪
ಒಲವು ಬಳ್ಳಿಯಾಗಿ ಕುಡಿಯ
ಚಾಚಿ ನಿನ್ನ ಬಳಸಿದೆ,
ನಡುವೆ ಬೆಂಗುಲಾಬಿಯಂತೆ
ನಿನ್ನ ಬಾಳು ಅರಳಿದೆ;
ಸುಪ್ರಭಾತದಲ್ಲಿ ನಭದಿ
ಉಷಾರೂಪದರ್‍ಶಿನಿ!
ಇಂದು ನನ್ನ ಜೊತೆಗೆ ಬಂದೆ
ಶುಭದ ಪ್ರೇಮಕಾಂಕ್ಷಿಣಿ.
೫
ಗಾಳಿಸುಳಿಗೆ ತಿರ್ರನೆಂದು
ತಿರಿವ ಗರಿಯ ತೆರದಲಿ
ಹರಿದ ತಂತಿ ನುಡಿಸಿದಂತೆ
ತೀರ ನವದ ಸರದಲಿ
ತಿರುಗುತಿತ್ತು ಮರುಗುತಿತ್ತು
ನನ್ನ ಚಿತ್ತರಂಗವು;
ಇಂದು ನಾದದುನ್ಮಾದದಿ
ಝೇಂಕರಿಸುವ ಭೃಂಗವು.
೬
ಕೂರ್‍ಮೆ ಕುರುಹನರುಹುತಿಹುದು
ಚೊಕ್ಕ ಚಿನ್ನದುಂಗುರ
ಮಧುಮಾಸದ ಚಂದ್ರಹಾಸ
ಬೆಳಗಿತೆದೆಯ ಮಂದಿರ.
ಮುಗಿಲ ಮಾಡದಲ್ಲಿ ಮಿಗಿಲು
ಚಿಕ್ಕೆ ಎತ್ತಲಾರತಿ
ಒಲುಮೆಯೋರನೋಟದಲ್ಲಿ
ತಣಿಸುತಿಹಳು ಈ ರತಿ.
೭
ನಮ್ಮ ಕಂಡು ಸೂರ್‍ಯಚಂದ್ರ-
ರೆಂಥ ನಗೆಯ ನಕ್ಕರು!
ಹೊನ್ನ ಜೊನ್ನ ಕಿರಣದಲ್ಲಿ
ಶಾಂತಿ ಸವಿಯನಿತ್ತರು.
ಬಂದ ಮಾವು ಬಿಟ್ಟ ತಳಿರ
ತಳ್ಕೆಯಲ್ಲಿ ಕೋಗಿಲೆ
ಮಧುರ ಪ್ರೇಮಗೀತ ಪಾಡೆ
ಎದೆಗ ಇನಿಯಳುಯ್ಯಲೆ!
೮
ಅಚ್ಚ ಬಾಳಿನಚ್ಚುಮೆಚ್ಚು
ಪಡೆದು ಬಂದ ಚಂದಕೆ
ಅರಿತು ಬೆರೆತ ಸೌಧರ್‍ಮಿಕೆ
ಒಂದಕೊಂದು ಹೊಂದಿಕೆ.
ನಲ್ಲೆ ನಿನ್ನ ನೆಚ್ಚಿ ಮೆಚ್ಚಿ
ಹಾಡಿದಷ್ಟು ಸುಂದರ
ನಲ್ಮೆಗೈಯು ಹರಸುತಿರಲು
ಬಾಳು ಹಸುರ ಹಂದರ.
೯
ಒಲವು ಬೆಸುಗೆಗೊಂಡ ಒಸಗೆ-
ಗಾವ ಹಾಡು ಹಾಡಲಿ?
ಹೇಳು ಕೆಳದಿ, ಹೊಸತು ಬಾಳು
ಹರುಷದಿಂದ ಹಿಗ್ಗಲಿ.
ಮುಂದೆ ಬಹುದ ಕಂಡರಾರು
ಇಂದು ಜೀವ ಕುಣಿಯಲಿ
ಪ್ರೀತಿಯೊಂದೆ ನಮ್ಮ ನೀತಿ
ಅದರೊಳೆದಯು ತಣಿಯಲಿ.
*****