ಕಂಬನಿಗೆ

ಕಂಬನಿಯೆ, ನೀನೀಸು ದಿನವಲ್ಲಿ ಹುದುಗಿದ್ದೆ
ಯಾವ ಹೃದಯದ ತಳವ ಸೋಸುತಿದ್ದೆ?
ನಾನು ನೀನೂ ಅವಳಿ-ಜವಳಿಯೆಂಬುದ ಮರೆತು
ಯಾರ ನಿಟ್ಟುಸಿರೊಡನೆ ಬೆರೆಯುತಿದ್ದೆ?

ಇಂದು ನಾನಾಗಿಯೇ ಕರೆವೆ ಕನಿಕರಿಸಿ ಬಾ
ಇಳಿಸು ನನ್ನೆದೆ ಭಾರ ದುಃಖಪೂರ!
ಮರಮಳೆಗೆ ಕೆರೆ ತುಂಬಿ ಕೋಡಿ ಬಿದ್ದಾಕ್ಷಣದಿ
ಕೊಚ್ಚಿಕೊಂಡೊಯ್ವತೆರ ಮಲೆತ ನೀರ!

ಕಂಬನಿಯೆ, ಅನುಭವದ ಖಣಿಯ ಮಣಿಯೆ!
ಬಾಳುದ್ದಕೂ ನಾನು ನಿನಗೆ ಋಣಿಯೆ?
ಕಂಡವರಿಗೆಲ್ಲ ನೀ ಸಿಕ್ಕಬಹುದೆ?
ನೀನಿರದ ಸುಖ ಜಗಕೆ ದಕ್ಕಬಹುದೆ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ