ನಾನ್ ಹ್ಯಣ ನನ್ ಸುಟ್ಟುಡಿ
ಬರೆ ಉಸುರ್‌ಕೊಟ್ ಓಡಾಡುಸ್ ಬ್ಯಾಡಿ
ಕೂಲೀಗ್ ಕರೀಬ್ಯಾಡಿ ದುಡಿಯಾಕ್ಯಳೀ ಬ್ಯಾಡಿ
ಕ್ವಳ್ಜೆ ಜಾಗ್ದೇಲ್ ಮಲುಗ್ಸಿ ಕಕ್ಕಸ್ ಪೈಪ್
ಇತ್ ಕಡೀಕ್ ತಿರುಗುಸ್ ಬ್ಯಾಡಿ
ಜೀತ ಸಾಲ ಬಡ್ಡಿ ಚಪ್ಪಡಿ ಏರಿ,
ಅಪ್ಪಚ್ಚಿ ಮಾಡಿ ಆಡ್ಕಂಡ್ ನಗಬ್ಯಾಡಿ
ದಯಾ ತುಂಬಿರೋ ನಿಮ್ ಕ್ವಲೆಗಡುಕ್ತನ
ನಯಾ ತುಂಬಿರೋ ನಿಮ್ ಮಾತ್‌ಗಾರ್ಕೆ
ವಳಗ್ಯಲ್ಲ ಕ್ವಳ್ತುಹುಳಾ ಬಿದ್ದಿರೋ ನೀವು
ಏನೂಬ್ಯಾಡ
ತೋಡಿರೊ ಗುಂಡೀಗ್ ನನ್ ಓಡಾಕ್‌ಬುಡಿ
ಇಕ್ಕಿರೋ ಬೆಂಕೀಗ್ ನನ್ ಬೀಳಾಕ್ ಬುಡಿ
ನನ್ ಮೈಯಾಗಿನ ಬಾಡ ಇಸ್ಟಿಸ್ಟೇಕಿತ್
ತಿನ್‌ಬ್ಯಾಡಿ,ನಾ ಜೀಮೂತವಾಹನ ಅಲ್ಲ
ಏ ಗಳ್ಡಗಳಾ
ನನ್ ಜುಟ್ ಕಚ್ಕಂಡ್ ಮ್ಯಾಲಾರಿ
ಎಲ್ಲಾನ ಕೆಂಪಟ್ಟೆ ಕೆಂಪ್ ನ್ಯಲ್ದಡೆ ನನ್ಯಸುದ್ಬುಡಿ
ನಾಬದ ಕತ್ತಿನಿ ಸರಿಯಾಗುಸ್ರಾಡ್ತೀನಿ
*****