ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ
ತೋರಿಕೊಳ್ಳದ
ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ;
ಅಧೋಮುಖಿಯಾದ
ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ;
ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ
ನಮ್ಮೆಲ್ಲ ನಿತ್ಯ ರಾಮಾಯಣಗಳ ಕವಿ
ಈ ತಿರುಳು ತೊಗಟೆ ಬೇರುಗಳ ಸಂಯುಕ್ತ ಕಾಯಕದಲ್ಲಿ
ಪಾಲಾಗಲು
ಆಕಾಶ ಉಣ್ಣುತ್ತ ಬಿಸಿಲು ಕಾಯುವ ಎಲೆಗಳು;
ಬಿರಿದ ದಳಗಳ ಸಡಗರ ಗರ್ಭಿಸುವಂತೆ
ದುಂಬಾಲು ಬೀಳುವ ದುಂಬಿಗಳ ಹಿತದ ಪೀಡೆಗೆ
ಗಂಧವತಿ ಕುಸುಮ ಕಳೆದು ಹಣ್ಣಾಗುವ ಹೂವುಗಳು;
ಫಲಿತದ್ದು ಕಾಲಾನುಸಾರ ಕೊಳೆತು ಒಣಗಿ
ಹುಟ್ಟಲೆಂದೇ ಬೀಳುವ ಬೀಜಗಳು
ಬೀಸುವ ಗಾಳಿಗೆ ತೊಟ್ಟಿಗಂಟಿ ನರ್‍ತಿಸುವ
ಎಲೆ ಎಲೆ ಎಲೆ ಎಲೆಗಳ ಹಸಿರಿನ ಐಸಿರಿಯಲ್ಲಿ
ನೆರಳು ಬೆಳಕಿನ ಕ್ಷಣ ಕ್ಷಣದ
ಈ ಸದ್ಯದ
ಆ ಸತತದ ಮಾಯಾಜಾಲ
*****