ಒಂದು ರಾತ್ರಿಯ ಕನಸು

ಒಂದು ರಾತ್ರಿಯ ಕನಸು
ಹೇಳಲೇನು?
ಅಕ್ಕ ಮಲ್ಲಿಕಾರ್ಜುನ ದರುಶನವನ್ನು?

ಕಣ್ಣಿನ ಕದವಿಕ್ಕಿ ಇನ್ನೂ ಒರಗಿದ್ದೆನಷ್ಟೇ
ಅಕ್ಕ ಬಂದಳು
ಪಕ್ಕ ನಿಂತಳು
ಮಂಪರಿನ ಹೊದಿಕೆಯೊಳಗೆ ಜ್ಪುಳುಕಿದೆ ನಾನು
ದಿಕ್ಕುಕಿದ್ದು ಕರಿಯ ಧಡಿಯ ಮುಗಿಲ ಕಾನು
ಹೆಪ್ಪು ಬಾನು

‘ಮಳೆಯಾಗಸ ನಿನಗುಂಟು ಸುಖ ದುಃಖದ ಅರಿವು
ಸಭ್ಯ ನೀ ಸಜ್ಜನ ನೀ ಇಂದ್ರ ಚಂದ್ರ ಹೇಳು
ಮಲ್ಲಿಕಾರ್ಜುನನನ್ನು ಎಲ್ಲಿ ಅಡಗಿಸಿರುವೆ?
ಎಂದು ಹೊರಗೆ ಬಿಡುವೆ?
ಮಾತು ಇದೆ ಆಲೈಸು ಕೂಗಲಾರೆನೊ
ಆತನ ಕಾಣದೆ ನಾ ನಾನಾಗೆನೋ’
ಬಿಕ್ಕುತ್ತಿದ್ದಳು ಅಕ್ಕ ತನುವು ಕರಗಿದವಳು
ಅದು ಕಟ್ಟಾ ಇರುಳು

ಉತ್ತರಿಸಿತೆ ಮಳೆಯಾಗಸ ಒಂದಾದರು ಸೊಲ್ಲು?
ಹೊತ್ತಿತು ಧೋರಣೆಯ ಮೌನ
ಅಕ್ಕ ಅಲ್ಲೆ ಪದ್ಮಾಸನ
ನಿದ್ದೆ ಜೋಪಡಿಯೊಳಗೆ ಜಪಿಸಿದೆ ನಾನೂ
ಅರಳೊ ಮರುಳೊ ನಾನೊ
ಅದಲೂ ಬದಲೂ!

ಕಾಣದಂತೆ ಕಾಣೆಯಾಗುತ್ತಿತ್ತು ಕ್ಷಣಕ್ಷಣ
ಕೇಳದಂತೆ ನಟನೆ ಮಳೆ, ಏಕತಾನ
ಮ್೮ಗಿಲಲೆಯುವುದು
ರವಿಯ ಕವಿಯುವುದು
ಪ್ರಳಯ ರೌದ್ರ ಧೋಧೋಧೋ ಮೊರೆಯುವುದು
ಗಗನವಿಡೀ ಸಿಡಿಲು ಸುಡುವ ಕದಲೀ ವನ
ರಾತ್ರಿ ಕಾಂಡದಲ್ಲಿ ಹಗಲ ವಿದ್ಯಮಾನ

ಕನಲಿದಳು ಸರಲೆ ತರಳೆ
ಕುದಿದು ಎದ್ದಳು,
ಬಿಚ್ಚಿದ ಜಟೆ ತಲೆಯೆತ್ತಿ
ಪರ್ಜನ್ಯದ ಛಾತಿಗೆ ನೆತ್ತಿತೆರೆದಳು

ಬೆಕ್ಕಸ ಬೆರಗಾಗಿ ಎರಡೂ ಅಂಗೈಗಳ ಜೋಡಿಸಿ
ಮುಂದೆ ಬಾಗಿ ಮಳೆಯಾಗಸ ಮಂದ ನಕ್ಕಿತು

‘ಅಡಗಿಸಿದೆನೆ! ಆತನನ್ನೆ! ಎಲ್ಲಿ ಯಾರು-ನಾನೆ!
ಹೋ ಅಕ್ಕಾ, ಯಾಕೆ ನೀ ಹೀಗಾದೆಯ, ಜಾಣೆ
ನಿನ್ನ ಮರುಳು ಅಳೆಯಲೆಂದು ಕಳಿಸಿದ ಅವನೇ…!’

ದೂತವಾಕ್ಯ ಮುಗಿಸಿ ಚಕಿತೆ ಚಿಹ್ನೆಧರಿಸಿದಂತೆ
ಮಿಂಚು ಮಿಂಚಿನಂತೆ ಮಾಯ!
ಒಂದೊಂದೆ ಒಂದೊಂದೆ ಧಡಿಯ ಮೋಡ ಓಡಿತು

ಸ್ವಾಮಿ ರಥವೇರಿ ಬಂದ
ಮಲ್ಲಿಕಾರ್ಜುನ-ನಗುತ
ದಡ್ಡ ಚನ್ನ
ಅಕ್ಕ?
ಅಂತರ್ಧಾನ!

ನಿದ್ದೆಗೊಳದ ಕಮಲದಲ್ಲಿ ಬಾಷ್ಪಕಂಪನ

ಕಂಡೆ ನಾ ಕನಸ ಕಂಡೆ
ಉರಿವ ಲೋಕ ಕುಂಡದಲ್ಲಿ
ಬೂದಿಯಾಗದುಳಿವ ಭಸ್ಮದಂಥ ಕನಸನು
ಹೇಳ ಹೊರಟು ಮಾತು ಸೊರಗಿ ಹೋದ ಕನಸನು
ಹೇಳದೇ ಕಳೆಯಲಾರೆನೆಂಬ ಕನಸನು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.