ಆಗಿನ್ನೂ ರಸ್ತೆ ಬದಿಯಲ್ಲಿ ನಾಲ್ಕು ಗಾಜುಗಳಿಂದ ಕೂಡಿದ ಕೋನಾಕಾರದ ತಲೆಯುಳ್ಳ ದೀಪ ಹೊತ್ತ ಕಂಬವಿರುವ ಕಾಲ. ಸಂಜೆಯಾದೊಡನೆ ಒಬ್ಬಾತನಿಗೆ ಪ್ರತೀ ಕಂಬವನ್ನು ಹತ್ತಿ ದೀಪ ಹಚ್ಚುವ ಕೆಲಸ. ಅದು ಮುಸುಕಾಗಿ ಉರಿಯುತ್ತ ದಾರಿಯುಂಟೋ ಇಲ್ಲವೋ ಎಂಬಷ್ಟು ಮಾತ್ರ ತೋರಿಸುತ್ತಿತ್ತು. ಉಳಿದ ವಿವರಗಳನ್ನೆಲ್ಲ ನಾವೇ ಕಂಡುಕೊಳ್ಳುತ್ತ ನಡೆಯಬೇಕಾಗುತ್ತಿತ್ತು. ಊರೆಲ್ಲ ಎಷ್ಟು ತಣ್ಣಗಿತ್ತು ಎಂದರೆ ಫರ್ಲಾಂಗುಗಳ ದೂರದಲ್ಲಿ ಯಾರಾದರೂ ಸೀನಿದರೆ ಈಚೆ ಬದಿಯಿಂದ ಕೇಳುತ್ತಿತ್ತು. ಮೈಲಾಚೆಯಿಂದ ಬಯಲಾಟದ ಚಂಡೆ ಬಡಿತವೂ. ಬೆಂಡೆ ಎಲೆಯಡಿಯ ಕೋಶದೊಳಗಿನ ಜೀವಿ ಉಸಿರು ಬಿಡುವುದೂ ಕೇಳಿಸುತ್ತಿತ್ತೇ? ಬೆಂಕಿಪೊಟ್ಟಣದೊಳಗೆ ಅದನ್ನಿಟ್ಟು ಕಿವಿಗಪ್ಪಿಕೊಂಡು ‘ಅದು ಕೋಶ ಒಡೆದು ಹೊರಬಂತು’ ಎಂಬ ವಾಕ್ಯದಲ್ಲಿ ಬೇಕಾದರೆ ಕೋಶ ಒಡೆಯುವ ಸದ್ದನ್ನೂ ಆಲಿಸಲಿಲ್ಲವೇ!
……ಹಾಗೇ ದೇವಲೋಕದಿಂದ ಒಂದು ಹಕ್ಕಿ ಹಾರಿಬರುತ್ತಿತ್ತು. ಗ್ರೀಷ್ಮದ ಬಿಸಿ ಕೆರೆಕೊಳ್ಳ ತೊರೆ ನದಿಗಳನ್ನೆಲ್ಲ ಒಣಗಿಸಿ ಇನ್ನೇನು ಚರಾಚರಗಳೆಲ್ಲ ಹೊಟ್ಟಿ ರಟ್ಟುತ್ತವೆ ಎನ್ನುವಾಗ ಈ ಹಕ್ಕಿ ಬರುತ್ತಿತ್ತು. ಉದ್ದಕ್ಕೂ ಇಶಿಷ್ಟ ರಾಗದಲ್ಲಿ ತೇಲುತ್ತ. ಅದರ ಕೂಗಿಗೆ ಒಣಗಿ ನಿಂತ ಮನುಷ್ಯ – ಕೂಡ – ಒಮ್ಮೆ ರೋಮಾಂಚನಗೊಳ್ಳುತ್ತಿದ್ದ!
ಈ ಹಕ್ಕಿ, ಮಳೆಹಕ್ಕಿ, ಮಳೆ ಬರಲಿದೆ ಎಂಬ ಒಸಗೆ ನೀಡಿ ಮರೆಯಾಗುವ ಹಕ್ಕಿ ಏನನ್ನುತ್ತಿತ್ತು? ‘ಹೋರಿ ಸತ್ತೋಯ್ತೋ’ – ಗದ್ದೆ ಕೆಲಸಕ್ಕೆ ಅಗತ್ಯವಾದ ಹೋರಿಯೊಂದು ಸಮಯದಲ್ಲಿ ಸತ್ತ ಶೋಕ ಈ ಹಕ್ಕಿಯನ್ನು ಬಿಟ್ಟಿಲ್ಲ – ಎಂದು ನಮ್ಮೂರಲ್ಲಿ ಹೇಳುತ್ತಿದ್ದರು. ದ.ಕ.ಜಿಲ್ಲೆಯ ತೆಂಕಣಭಾಗದ ಕೆಲವರು ಅದರ ಕೂಗಿಗೆ “ಜೋಕುಲು ಪಾಪ” ಎಂದು ಶಬ್ದಹಚ್ಚಿದರು.
ಜೋಕುಲು ಎಂದರೆ ತುಳುವಿನಲ್ಲಿ ಮಕ್ಕಳು ಎಂದು. ಮಳೆಯಿಂದ ತುಂಬಿ ಹರಿಯಲಿರುವ ತೊರೆ ಹಳ್ಳ ಸಂಕಗಳನ್ನು ದಾಟಿಕೊಂಡು ಶಾಲೆಗೆ ಹೋಗಬೇಕಾದ ಮಕ್ಕಳನ್ನು ನೆನೆದು ಈ ಹಕ್ಕಿ ಹೀಗೆ ಹೇಳುತ್ತದೆಯೆಂದು ಕತೆ ಕೂಡಿಸಿದ್ದರು. ಅದೇನೇ ಇರಲಿ. ಈ ಹಕ್ಕಿಯ ಕೂಗು ಮಾತ್ರ ಎದೆಗೆ ಬಂದು ತಾಕುತ್ತಿತ್ತು. ಹಕ್ಕಿ ಕೂಗಿದೊಡನೆ ಮಕ್ಕಳೂ ಅದೇ ರೀತಿ ಕೂಗುತ್ತಿದ್ದವು. ಮತ್ತೆ ಅದು ಕೂಗಿದರೆ ತಮಗೆ ಉತ್ತರ ಕೊಡುತ್ತಿದೆಯೆಂದು ಎಣಿಸಿ ಪುನಃ ಕೂಗುತ್ತಿದ್ದರು.
ಹಕ್ಕಿ – ಮಕ್ಕಳ ಸಂವಾದ ನಡೆಯುತ್ತಿದ್ದಂತೆಯೇ ಭೂಮಿ ಆಕಾಶಗಳು ಪರಸ್ಪರ ದಿಟ್ಟಿಸುತ್ತಿದ್ದವು. ಕರಿ ಹೊಳಪಿನ ಮೋಡ ಹುಬ್ಬೇರಿಸುತ್ತಿತ್ತು. ಟಪ್. ಭೂಮಿಯೊಡಲಿಗೆ ಬೀಳುವ ಪ್ರಥಮ ಮಳೆ ಬಿಂದುವನ್ನು ಪೊಟ್ಟಣದೊಳಗೆ ಮುಚ್ಚಿಟ್ಟುಕೊಂಡರೆ ಹೇಗೆ?
*
*
*
ಮಕ್ಕಳು ಪಾಪವೆನ್ನುವ ಹಕ್ಕಿ, ರೈತರ ಸುಖ ದುಃಖದ ಹಕ್ಕಿ, ಒಣಗಿ ಸುರುಟಿಕೊಳ್ಳುವ ಬೇಸಗೆಯ ಕೊನೆಯ ದಿನಗಳಿಗೆ ಜೀವನೋತ್ಸಾಹ ಪ್ರೋಕ್ಷಣೆ ಮಾಡುವ ಹಕ್ಕಿ ಹಾರಿಹೋಯಿತೆಲ್ಲಿಗೆ? ಪ್ರತಿ ಮಳೆಗಾಲದ ಆದಿಯೂ ಈ ಹಕ್ಕಿಯ ಕೂಗಿನ ಸಂಕೇತಕ್ಕಾಗಿ ಕಾದು ಸಿದ್ಧಗೊಂಡ್ಡಿದ್ದು ಸಂಕೇತ ಸಿಕ್ಕದೆ ದಣಿದು ಕೊನೆಗೆ ಅತ್ತಿತ್ತ ಕಾಣುತ್ತ ನಿಧಾನವಾಗಿ ಬಿರಿಯುತ್ತದೆ. ಹೇಳಿಕೆ ಇಲ್ಲದೆ ಬಂದ ಮುಜುಗರದ ನೆಂಟನಂತೆ. ಹಕ್ಕಿಯ ಕೂಗನ್ನು ಅನುಕರಿಸಬಹುದು. ಆದರೆ ಅದರ ಭಾಷೆಯಲ್ಲಿಯೇ ಮಳೆಯನ್ನು ಕರೆದು ಎಲ್ಲಿದ್ದರೂ ಬರುವಂತೆ ಮಾಡುವುದು? ಪ್ರಪಂಚದಲ್ಲಿ ಯಾರಿಲ್ಲದೆಯೂ ದಿನ ಎಂದಿನಂತೆ ನಡೆಯುತ್ತದೆ. ಯಾರಿಗೆ ಯಾರೂ ಕಾಯುವುದಿಲ್ಲ. ಹಕ್ಕಿ ಇಲ್ಲದೆ ಮಳೆ ಬರುತ್ತದೆ, ರೈತನ ಹೋರಿ ಗದ್ದೆಗಿಳಿಯುತ್ತದೆ. ಮಕ್ಕಳು ಶಾಲೆಗೆ ತೆರಳುತ್ತಾರೆ – ಆದರೆ ಹಕ್ಕಿಯಿಲ್ಲದ ಶೂನ್ಯತೆ ಅದರ ಕೂಗು ಕೇಳಿ ಬೆಳೆದವರೆಲ್ಲ ಒಡಲಿನಲ್ಲಿ ಮಾತ್ರ ಮಾಯುವುದೇ ಇಲ್ಲ.
ಎಲ್ಲೊ ಒಮ್ಮೆ ಒಂದು ದಿನ ದೂರದಲ್ಲಿ ಕೇಳಿ ಬಂದಂತಾಯಿತು – “ಹೋರಿ ಸತ್ತೋಯ್ತೋ” ನಾ ಇದ್ದಲ್ಲೇ ಕುಪ್ಪಳಿಸಿ “ಅದೋ, ಹೋರಿ ಸತ್ತೋಯ್ತೋ’ ಹಕ್ಕಿ! ಬಂತು ಬಂತು!” ಎಂದೆ. ಅಲ್ಲಿದ್ದ ಮಕಳು “ಅಂದರೆ?” ಎಂದರು. ಹಕ್ಕಿ, ಆಗಲೇ ಇವರಿಗೆ ಅಪರಿಚಿತವಾಗಿತ್ತು! ಮಕ್ಕಳು, ಪಾಪ!.
ಬೆಂಕಿಪೊಟ್ಟಣದೊಳಗೆ ಕೋಶ ಕೂಡಿ ಹಾಕಿದ್ದ ಹುಡುಗಿಯೊಡನೆ ಯಾರೋ ದೊಡ್ಡವರು ಹೇಳಿದ್ದರು – “ಇದು ಒಡೆಯುವಾಗ ಓಂಕಾರ ಕೇಳಿಸುತ್ತದೆ; ಸೃಷ್ಟಿಯ ಆದಿಯಲ್ಲಿ ಕೇಳಿಸಿದ ಸ್ಫೋಟದ ಶಬ್ದದಂತೆ.” ಹುಡುಗಿ ಬೆಳಗೆದ್ದು ರಾತ್ರಿ ಮಲಗುವವರೆಗೂ ಆಗಾಗ ಬೆಂಕಿಪೊಟ್ಟಣವನ್ನು ಕಿವಿಗೊತ್ತಿಕೊಂಡು ಆಲಿಸುತ್ತಿದ್ದಳು.
“ಶಬ್ದ ಕೇಳಿಸಿತೇ?” “ಹ್ಞಾ…… ಕೇಳಿಸುತ್ತಿದೆ.” – ಹುಡುಗಿ ಆಲಿಸುತ್ತಾ ಉತ್ತರವಿತ್ತಳು. ಪ್ರಶ್ನೆ ಕೇಳಿದ ದೊಡ್ಡವರಿಗೆ ದೊಡ್ಡ ನಗು. ಕುತೂಹಲದಿಂದ ಹುಡುಗಿ ಪೊಟ್ಟಣ ತೆರೆದಳು. ತಕ್ಷಣ ಅದರೊಳಗಿನ ಜೀವಿ ಹಾರಿಹೋಯಿತು. ಹುಡುಗಿ ನಾ ಬರುತ್ತೇನೆ ಎಂದರೆ ಒಯ್ಯದೆ, ಒಂದೇ. ಮತ್ತೆಂದೂ ಅದು ಕಾಣಲಿಲ್ಲ.
ಓಂಕಾರದಿಂದ ಆರಂಭವಾದ ಶಬ್ದದಲೆ ಧುತ್ತೆಂದು ಬಂದು ಮುಟ್ಟಿದ್ದಾದರೂ ಎಲ್ಲಿಗೆ? ‘ದುಡ್ಡು’ ಎಂಬಲ್ಲಿಗೇ?
ಹಕ್ಕಿಗಳನ್ನು ದುಡ್ಡುಕೊಟ್ಟು ಕೊಳ್ಳುತ್ತಾರೆ. ಕೂಗು ಎನ್ನುತ್ತಾರೆ. ದುಡ್ಡಿಗೆ ಬಲಿಬೀಳದೆ ಕೂಗುವ ಅಭ್ಯಾಸದ ಅದು ಮನುಷ್ಯಲೋಕದಲ್ಲಿ ಮಾಂಸವಾಗಬೇಕಾಗುತ್ತದೆ; ದುಡ್ಡನ್ನು ಧಿಕ್ಕರಿಸಿ ಬದುಕುತ್ತೇನೆ ಎಂದು ಹೊರಡುವ ಹೆಡ್ಡರಂತೆ ಸೋತು ಮಣ್ಣಾಗಬೇಕಾಗುತ್ತದೆ. ದುಡ್ಡಿನ ಹಂಗಿಲ್ಲದ ಪಕ್ಷಿಲೋಕ ಕಲರವಿಸುತ್ತಿದೆ. ಎಲ್ಲೋ ಮೌನ ಕಣಿವೆಯಲ್ಲಿ. ಹಿಮಾಲಯದ ಕಂದರಗಳಲ್ಲಿ. ಅಲ್ಲಿಯೂ ನಾಗರಿಕ ಝಣತ್ಕಾರ ಪಸರಿಸುವವರೆಗೆ ಮಾತ್ರ. ಮುಂದೆ ಅದು ಎಲ್ಲಿ ಹೋಗುತ್ತದೆ?
ಹಕ್ಕಿಗಳೆ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದರೆ ಅವು ಬಿಟ್ಟು ಹೋಗುವವೇ. ಯಾಕೆಂದರೆ ದುಡ್ಡಿನ ಪ್ರಭಾವದಿಂದ ಸ್ವಲ್ಪವೇ ಕಲುಷಿತವಾದರೂ ಆ ಜೀವ ಹಕ್ಕಿಯಂತೆ ಹಾರಲಾರದು. ಹಾರಲಾರದವರನ್ನು ಹಕ್ಕಿಯು ರೆಕ್ಕೆಯ ಮೇಲೆ ಕೂರಿಸಿಕೊಂಡು ಕರೆದೊಯ್ಯುವ ಕಾಲ ಮುಗಿದಿದೆ. ಅವು ತಮ್ಮ ದಾರಿ ಹಿಡಿಯುತ್ತವೆ. ಗುರಿ ತಿಳಿಸುವುದಿಲ್ಲ. ತಿಳಿಸಿದರೆ ಮನುಷ್ಯ ಅಲ್ಲಿಗೂ ಸಂಕ, ರಸ್ತೆ ಕಾಂಕ್ರೀಟು ಮಂತ್ರದೊಡನೆ ಪ್ರವೇಶಿಸುತ್ತಾನೆ. ಮಹಾನ್ ಹಿಮಾಲಯವನ್ನೂ ಚಪ್ಪಟೆ ಮಾಡಿ ಐಸ್ ಫ್ಯಾಕ್ಟರಿ ಇಡುತ್ತಾನೆ. ಅಂದಹಾಗೆ ಆಕಾಶದಲ್ಲಿ ಹಾರುವ ಹಕ್ಕಿಗೆ ಈ ಜಗತ್ತು ಗದ್ದಲ ಮಾಡುತ್ತಾ ಹೊಗೆಯುಗುಳುವ ಒಂದಿಡೀ ಬೃಹತ್ ಕಾರ್ಖಾನೆಯಂತೆ ಕಾಣಿಸೀತಲ್ಲವೆ?
ರಾತ್ರಿಯಲ್ಲೂ ರಸ್ತೆ ಬೆಳ್ಳಗಿದೆ. ಎಲ್ಲಿಗೆ ಹೋಗಿ ಮುಟ್ಟುತ್ತದೆಯೆಂದೂ ಬಾಯಿ ಪಾಟವಿದೆ. ಎಲ್ಲ ಸಿದ್ಧ, ನಿಚ್ಚಳ. ಹೀಗೇ ಎಂಬ ವಿವರ. ಆರಂಭದ ಮೊದಲೇ ಮುಕ್ತಾಯ ತೀರ್ಮಾನವಾಗಿರುತ್ತದೆ.
…… ಆ ಮನುಷ್ಯ, ಮುಸ್ಸಂಜೆ ಹೊತ್ತಿನಲ್ಲಿ ನಾಲ್ಕು ಗಾಜುಗಳಿಂದ ಕೂಡಿ ಕೋನಾಕಾರದ ತಲೆಯುಳ್ಳ ಕಂಬವನ್ನು ಹತ್ತಿ ದೀಪ ಹಚ್ಚಿ ಇಳಿದು ತನ್ನದೇ ದಾರಿಯಲ್ಲಿ ಮುಂದೆ ನಡೆಯುತ್ತಿದ್ದ ಆ ಮನುಷ್ಯ, ಎಲ್ಲಿ ಮಾಯವಾದ?
*****