ಪುಟ್ಟ ಮಗ ಓಡಿ ಬಂದು
ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ;
“ಅಮ್ಮ ನನಗೊಂದು ಕಥೆ ಹೇಳು –
ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!”
‘ಅದು ಒಂದಾನೊಂದು ಕಾಲದ
ಒಂದಾನೊಂದು ಊರು.
ನನ್ನೂರು ಧರಣಿಮಂಡಲ ಮಧ್ಯದಲ್ಲಿ
ಹಾಲು ಬೆಲ್ಲ ಕುದಿಸಿದ ಗಿಣ್ಣ
ಅಂಗೈಲಿಟ್ಟು ನೆಕ್ಕಾಗ ಅಂಬಾ ಅಂದಿತ್ತು
ಕೊಟ್ಟಿಗೆಯ ಪುಣ್ಯಕೋಟಿ
ಹೊರಗೆ ಧಾರಾಕಾರ ಮಳೆ!’
ಮಿಂಚಿತ್ತು ಪುಟ್ಟ ಕಣ್ಣುಗಳಲ್ಲಿ –
ಕಥೆಗೂ ನೆನಪಿಗೂ ಹೆಚ್ಚು ಅಂತರವಿಲ್ಲ
ಕಥೆ ಸುಳ್ಳಿರಬಹುದು
ನೆನಪು ಸುಳ್ಳಾಗಬಹುದು.
‘ಆ ಊರ ಅವಳು
ಅಂಥಿಂಥವಳಲ್ಲ!….’
“ಅಂದರೆ?”
‘ಅಂಥವಳೂ ಅಲ್ಲ, ಇಂಥವಳೂ ಅಲ್ಲ’
ಎತ್ತಿ ಮುದ್ದಾಡುತ್ತಾಳೆ
ಹಣ್ಣು ಹಂಪಲು ಕೊಟ್ಟು
ಹೊಟ್ಟೆದುಂಬಿಸುತ್ತಾಳೆ.
ಚಿಮ್ಮುತ್ತದೆ ಜೀವಜಲ – ನಿರಾತಂಕ
ತುಂಬಿ ನದಿ ಹಳ್ಳ, ಕೊಳ್ಳ.
‘ಅವಳ ನದಿಗಳಲ್ಲಿ ಚಿನ್ನದಂಥಾ ಮೀನು,
ವಜ್ರ ವೈಢೂರ್ಯದ ಹೊಳಪು
ಕೆಂಪು, ಹಳದಿ, ನೀಲಿ ನೀರಲ್ಲಿ ಬೆರೆತು
ಆಡಿದ ಚಕ್ಕಂದ….’
ಕೂಸಿಗೀಗ ಕಣ್ಣ ತುಂಬಾ ನಿದ್ದೆ
ಕನಸು ಬೀಳುತ್ತಿರಬೆಕು.
ಕಥೆಗೂ ಕನಸಿಗೂ ಹೆಚ್ಚು ಅಂತರವಿಲ್ಲ,
ಎರಡಕ್ಕೂ ಸುಳ್ಳಿನ ಮೂಲ.
ಅವಳ ಗುಡ್ಡ ಕಾಡು ಕಡಿದು,
ಡಾಂಬರಿನ ಹಚ್ಚೆ ಹೊಯ್ದು ಸಿಂಗರಿಸಿದ್ದಾರೆ.
ಆ ಗುಡ್ಡಗಳ ನೆತ್ತಿಗಿಳಿದು
ಸೂರ್ಯ ಮುತ್ತಿಡುತ್ತಿದ್ದದ್ದು
ಈಗೊಂದು ಕಥೆ.
ಸುಡುವ ಬಿಸಿಲು ನೆತ್ತಿ ಸೀಳುತ್ತಿರುವಾಗ
ಅವಳ ಹಸಿರಿನ ಕಂಪು
ತಂಗಾಳಿಯ ತಂಪು
ನದಿಯ ನೀರಿನ ತೇವ….
– ಈಗೊಂದು ನೆನಪು.
ಪುಟ್ಟ ಮಗ ಮಗ್ಗುಲ ಬದಲಿಸುತ್ತಾನೆ,
ಒಂದಾನೊಂದು ಕಾಲದ ನೆನಪಿನ ಕಥೆಯನ್ನು
ಕೇಳದೆಯೇ ಮಲಗಿಬಿಡುತ್ತಾನೆ.
*****
ಕೀಲಿಕರಣ: ಕಿಶೋರ್ ಚಂದ್ರ