ಉರಿದುರಿದು ಹಗಲು
ಆರಿ ಹೋಗಿಹ ಕೆಂಡವಾಯ್ತು ಮುಗಿಲು!
ನೇಸರನಿಗೂ ಬೇಸರಾಗುವದು ಸಹಜ
ನಿಜ- ,
ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?
ಅಂತೆಯೇ
ಅವನೆಂದಿನಂತೆಯೇ
ಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದು
ಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು !
ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆ
ಮಳೆಯು ಜಿಟಿ ಜಿಟಿ ಹತ್ತಿ ತೊಟ್ಟಿಕ್ಕಿದೆ;
ಮರದ ಎಲೆಗಳ ಸಂದಿಯಲ್ಲಿ ಮಾಸಿದ ಕಿರಣ
ಹರಿದು ಬರುತಿದೆ ಪಿಸಿಯ ನೂಲಿನಂತೆ.
ಆಗ ಕಣ್ಣಿಗೆ ಸ್ವಲ್ಪ ಬಣ್ಣವಾಗೆ
ಅಳುವ ಮಕ್ಕಳು ನಸುವೆ ನಕ್ಕಹಾಗೆ
ಬಳಿಯ ಹೊಂಡದ ದುಂಡುಮೇಜು ಪರಿಷತ್ತಿನಲಿ
ಕಪ್ಪೆಗಳು ಚಪ್ಪಾಳೆ ತಟ್ಟಿ ಜಿಗಿದಾಡುತಿವೆ
ತಮ್ಮ ಪಕ್ಷವೆ ಕೊನೆಗೆ ಗೆದ್ದ ಹಾಗೆ !
ಜ್ವರವಿಳಿದು ಮೈ ಬೆವರು ಬಿಟ್ಟ ರೋಗಿಯತೆರದಿ
ಕಾದ ತಿರೆ ತೊಯ್ದಿಹುದು ಮೇಲೆ ಕೆಳಗೆ-
ಇಂಥ ಇಳಿಹೊತ್ತಿನೊಳಗೆ!
ಕಣ್ಣು ತಪ್ಪಿಸಿ ಬರುವ ಕಳ್ಳ ಬೆಕ್ಕಿನ ತೆರದಿ
ಮಬ್ಬುಗತ್ತಲೆ ಇಳೆಯ ಮೂಸುತಿಹುದು;
ಗಾಳಿ ಮೈಸೋಕಿಸದೆ ಮಡಿಯ ಮಾಡುವರಂತೆ
ದೂರ ದೂರವೆ ಹಾರಿ ಬೀಸುತಿಹುದು.
ಮಂಜು ಹಬ್ಬಿತು
ಪೃಥ್ವಿಗೇ ನಂಜೇರಿದಂತೆ!
ಸೇದಿ ಬೀಸಾಡಿರುವ ಸಿಗರೇಟು ತುಂಡಿನೋಲು
ದೂರದಲಿ ಕಾಣಿಸಿತು ಮಂಕು ಚಿಕ್ಕೆ!
ವಿರಹಿಗಾಯಿತು ಸಂಜೆ
ಸೊರಗಿ ಹೋದಂತೆಯೆ ಬಾನಬಂಜೆ-
ರಾಗ ವಿರಹಿತವಾಯ್ತು ಅವಳ ಕೆನ್ನೆ
ನಿಶೆಯು ಬರೆಯಿತು ದೊಡ್ಡದೊಂದು ಸೊನ್ನೆ!
*****