ಭಗವತಿ ಇಸ್ತಾರು
ಸಕಲ ಸೃಷ್ಠಿಯ ಮಾತೃದೇವತೆ
ಸಮರದ ದೇವತೆ, ಕಾಮದ ದೇವತೆ.
ಜಗಭಂಡೆ.
ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿ
ಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ?
ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರ
ಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ ಪುರಾತನ ತಾಯಿ
ಸಲಹುವ ತಾಯಿ, ಕೊಲ್ಲುವ ತಾಯಿ
ಒಬ್ಬ ಗಂಡನನ್ನು ಕಪ್ಪೆ ಮಾಡಿದ ದೇವಿ;
ಇನ್ನೊಬ್ಬನನ್ನು ಅಮೃತ ಹುಡುಕಲು ಅಟ್ಟಿದ ತಾಯಿ;
ತಾನೊಲಿದ ಮಗದೊಬ್ಬನನ್ನು ಅಧೋಲೋಕದಲ್ಲಿ ಹುಡುಕಿ ಪಡೆದ ತಾಯಿ.
ಕಾಮಿಸಿ ಕೂಡಿದರೂ ಅಕ್ಷತ ಕನ್ಯೆ.
ನೆಬುಷೆಡ್ನಸಾರ್ ಎಂಬ ಮಹಾ ಸಾಮ್ರಾಟ ಇಸ್ತಾರಳ ಭಕ್ತಿಗಾಗಿ
ಇವಳಿಗೊಂದು ಮಹಾದ್ವಾರ ನಿರ್ಮಿಸಿದ
ಗ್ರೀಕ್ ಭಾಷೆಯಲ್ಲಿ ಇದು ಬಾಬಿಲು, ದೇವರ ಬಾಗಿಲು.
ಬ್ಯಾಬಿಲೋನಿನ ಅದ್ಭುತವಾದ ತೂಗು ತೋಟವನ್ನು ಇವನೇ ನಿರ್ಮಿಸಿದ
ಸಾಕುವ, ಸಲಹುವ, ಔಷಧ ಕ್ಷೇತ್ರದ ಅಧಿದೇವತೆಯಾಗಿ
ನರಳುವ ರೋಗಿಗಳ ದಣಿವಾರಿಸುವ
ಈ ದೇವಿಗಾಗಿ ನೆಬುಷೆಡ್ನಸಾರ್ ಕಾಲಾನುಕ್ರಮದಲ್ಲಿ ಮಾಡಿದ್ದೆಲ್ಲ ಮಣ್ಣಾಗಿದೆ.
ಮಣ್ಣಿನ ರಾಣಿಯೂ ಇಸ್ತಾರಳೆ!
ನೆಬುಷೆಡ್ನಸಾರ್ ಕೆತ್ತಿಸಿಕೊಂಡಿದ್ದ ಅವನ ಹೆಸರು ಮಾತ್ರ ಕಲ್ಲಿನ ಇಟ್ಟಿಗೆಗಳಲ್ಲಿ
ಬಾಗ್ದಾದ್ ಬಳಿ ಸಿಗುವ ಅವಶೇಷಗಳಾಗಿ ಉಳಿದಿವೆ.
ಅವನು ಆಳಿದ್ದಾಯಿತು ಅಳಿದದ್ದಾಯಿತು.
ಈ ಅವಶೇಷಗಳ ಮೇಲೆಯೇ
ಈಚೆಗೆ ಬಾಗ್ದಾದ್ ಆಳಿದ ಧಿಮಾಕಿನ ದೊರೆ ಸದ್ದಾಮ್ ಹುಸೇನ್
ತನ್ನ ಹೆಸರು ಕೆತ್ತಿಸಿಕೊಂಡಿದ್ದಾನೆ.
ಅವನು ಆಳಿದ್ದೂ ಆಯಿತು, ಆಳಿದದ್ದೂ ಆಯಿತು
ಅವಿತ ಬಿಲದಿಂದ ಈ ಸದ್ದಾಮನನ್ನು ಹೊರಗೆಳೆದು ತಂದು ಕೊಂದ
ಇನ್ನೊಬ್ಬ ಬುಷ್ ಎನ್ನುವ
ಹಣದ ಹುಂಬು ಗುಲಾಮರ ಮಹಾದೊರೆ
ಈ ಅವಶೇಷಗಳನ್ನು ರಕ್ಷಿಸುವ ಯಜಮಾನಿಕೆ ಹೊತ್ತಿದ್ದನಂತೆ.
ಅವನೂ ಆಳಿದ್ದಾಯಿತು. ಅಳಿದದ್ದೂ ಆಯಿತು.
ಪ್ರತಿ ಹುಣ್ಣಿಮೆ ರಜಸ್ವಲೆಯಾಗುವ ನಮ್ಮ ತಾಯಿ ಇಸ್ತಾರು
ಮಡಿವಂತರ ಶತ್ರು, ನಿತ್ಯ ಕನ್ಯೆ, ಸಿಂಹವನ್ನು ತನ್ನ ಚಿಹ್ನೆಮಾಡಿಕೊಂಡ
ಭೂಮ್ಯಾಕಾಶಗಳ ಮಹಾಕಾಮಿ,
ಬರೆದಿಟ್ಟದ್ದು ಹೀಗಿದೆ:
‘ಕಾಮ ವಿರೋಧಿಗಳು ಜೀವ ವಿರೋಧಿಗಳು ಸಾವನ್ನು ಒಲ್ಲದವರು ಜೀವ ಹೇಡಿಗಳು
ಇವರಿಗೆ ಜೀವನದಲ್ಲಿ ಸಂತೋಷವಿಲ್ಲ
ಸುಖ ಮರಣವೂ ಇಲ್ಲ’
*****